Showing posts with label ನಾ ಓದಿದ ಪುಸ್ತಕ. Show all posts
Showing posts with label ನಾ ಓದಿದ ಪುಸ್ತಕ. Show all posts

Saturday, February 19, 2022

ಸದ್ದಿಲ್ಲದೇ ಕಥೆ ಹೇಳುವ ಸೀತಾಳೆ ದಂಡೆಗಳು...!

ಸೀತಾಳೆ ಎಂದರೆ ಕಾಡು ಹೂವು. ಈ ಹೂವು, ದಂಡೆ ಎಂದರೆ ಮಾಲೆಯ ರೀತಿ ಪೋಣಿಸಿರುವಂತೆ ಕಾಣುತ್ತದೆ. ಮಳೆಗಾಲದಲ್ಲಿ ಯಾವುದೊ ಮರದ ಕಾಂಡದ ಮೇಲೆ ಅರಳಿ ನಿಂತು, ಗಾಳಿಗೆ ತಲೆದೂಗಿ, ಮಳೆಯಲ್ಲಿ ನೆಂದು, ಅಲ್ಲೇ ಬಾಡಿ ಒಣಗುವ ಈ ಹೂವು ನೋಡಲು ಸುಂದರ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ, ಘಮಿಸದೇ, ಸದ್ದಿಲ್ಲದೇ, ತನಗೂ ಲೋಕಕ್ಕೂ ಸಂಬಂಧವೇ ಇಲ್ಲವೆಂಬಂತೆ ಅರಳಿ, ಬಾಡುವ ಈ ಹೂವಿಗೆ ಲೋಕವೂ ಅಷ್ಟೊಂದು ಪ್ರಾಮುಖ್ಯತೆ ನೀಡಿದಂತೆ ತೋರುತ್ತಿಲ್ಲ!

ಹಾಗೆಯೇ ಭಾರತಿ ಹೆಗಡೆಯವರು ಬರೆದ "ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು" ಕಥಾ ಸಂಕಲನದಲ್ಲಿ ಬರುವ ಎಲ್ಲ ಕಥೆಗಳ ಪಾತ್ರಗಳೂ ಕೂಡ ಮಲೆನಾಡಿನ ಯಾವುದೊ ಮೂಲೆಯಲ್ಲಿ ಅರಳಿ ನಿಂತು, ಬದುಕಿ, ಬಳಲಿ, ಬಾಡಿದಂಥವು.. ಪ್ರತಿ ಕಥೆಯಲ್ಲಿಯೂ ಒಂದು ವಿಭಿನ್ನ ಪಾತ್ರವಿದೆ. ಸಮಾಜದ ಪ್ರಭಾವದಿಂದಲೋ, ಮಾನಸಿಕ ಒತ್ತಡದಿಂದಲೋ ವಿಚಿತ್ರವಾಗಿರುವ ಈ ಪಾತ್ರಗಳು ನಮ್ಮ ಸುತ್ತಲೂ ಇದ್ದಂಥವೇ.. ಗೋಡೆಯೊಂದಿಗೆ ಮಾತನಾಡುವ ಅಮ್ಮಮ್ಮ, ಸೀರೆ ಕದ್ದು ಉಟ್ಟುಕೊಳ್ಳುವ ಶಾಮಣ್ಣ, ಬದುಕಿದ್ದಾಗಲೇ ತನ್ನ ಶ್ರಾದ್ಧವನ್ನೇ ಕಂಡ ಪದ್ಮಾವತಿ, ಜಾತಿಯನ್ನು ಮೀರಿ ನಿಂತ ಪಾರ್ವತಿ- ಗಣಪಿಯರ ಸ್ನೇಹ ಎಲ್ಲವೂ ನನಗೆ ಬಹಳ ಪ್ರಿಯವಾದ ಕಥೆಗಳು.
ಪಾರ್ಲರ್ ಲಲಿತಕ್ಕ ಕೊನೆಗೂ ತನ್ನ ಗಂಡನಿಗೆ ಪ್ಯಾಂಟು ಹಾಕಿಸಿದ ಕಥೆಯನ್ನು ಓದಿಯೇ ತೀರಬೇಕು. ಹಲವು ಕಥೆಗಳಿಗೆ ತನ್ನದೇ ಆದ ಅಂತ್ಯವಿರದೆ, ಹೀಗಾಗಿರಬಹುದೇ ಎಂದು ಓದುಗರನ್ನು ಯೋಚನೆಗೊಳಪಡಿಸುವುದು ಇಲ್ಲಿನ ಕಥೆಗಳ ವಿಶೇಷ.
 ಮಲೆನಾಡಿನ ಹಲವು ಹಳ್ಳಿಗಳ, ಭಿನ್ನವಾದ ಒಟ್ಟು ಹದಿನೇಳು ಕಥೆಗಳನ್ನು ಒಂದೇ ಪುಸ್ತಕದಲ್ಲಿ ನಮಗೆ ನೀಡಿದ್ದಾರೆ ಭಾರತಿ ಹೆಗಡೆಯವರು.
ಓದಬೇಕಾದ, ಓದಿ ಯೋಚಿಸಬೇಕಾದ ಕಥೆಗಳಿವು.

ಪುಸ್ತಕ: ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು
ಲೇಖಕರು: ಭಾರತಿ ಹೆಗಡೆ
ಪುಟಗಳು: 246
ಬೆಲೆ: 220

-ಪಲ್ಲವಿ 

Sunday, January 9, 2022

ಮಧ್ಯ ಘಟ್ಟ

ಶಿವಾನಂದ ಕಳವೆ ಅವರ 'ಮಧ್ಯಘಟ್ಟ' ಕಾದಂಬರಿ, ಇತ್ತೀಚೆಗೆ ನಾ ಓದಿದ, ಮನಸ್ಸಿಗೆ ಹತ್ತಿರವಾದ ಪುಸ್ತಕ.
ನಮ್ಮೂರಿನ ಸೊಗಡನ್ನು ಹೊತ್ತು, ಮಣ್ಣಿನ ಘಮವನ್ನು ತನ್ನಲ್ಲಿ ಬೆರೆಸಿಕೊಂಡು ಹೊಳೆವ ಹಸಿರಾಗಿರುವ ಪುಸ್ತಕವಿದು.

ಅರವತ್ತರ ಗೋಪಯ್ಯ ಹೆಗಡೆಗೆ ಹದಿನನೆಂಟರ ಶ್ರೀದೇವಿಯೊಡನೆ ಲಗ್ನವಾಗಿ ಆಕೆ ಕೇರಳದಿಂದ ಮಧ್ಯಘಟ್ಟಕ್ಕೆ ಬಂದಳು. ಪರವೂರಿಗೆ ಬಂದವಳಿಗೆ ತಾಯಿಯದವಳು ಅದೇ ಕೇರಳ ಮೂಲದ ಸಾವಿತ್ರಮ್ಮ. ತನ್ನ ಮಗಳಂತೆಯೇ ನೋಡಿಕೊಂಡು ಸಮಯಕ್ಕೆ ಸರಿಯಾಗಿ ತಿಳುವಳಿಕೆ ನೀಡುತ್ತಾ, ಕನ್ನಡ ಕಲಿಸಿ, ಕೆಲಸ ಕಲಿಸಿ ದೊಡ್ಡ ಮನೆಗೆ ತಕ್ಕ ಸೊಸೆಯಾಗಿಸಿದಳು.

ವರ್ಷಗಳ ನಂತರ ಮಗಳನ್ನು ಕಾಣುವ ಹಂಬಲದಲ್ಲಿ ಕೇರಳದಿಂದ ಬಂದ ಭೂದೇವಿಯ ಮಹಾಯಾನವೇ ಅದೆಷ್ಟು ಕಷ್ಟಗಳನ್ನು ಒಳಗೊಂಡಿತ್ತು..!ಕೊನೆಗೆ ಆಕೆಯೂ ಅನಿವಾರ್ಯವಾಗಿ ಇದೇ ಊರಿನಲ್ಲಿ ನೆಲೆ ನಿಲ್ಲಬೇಕಾಯ್ತು. ಮಗಳಿಗೆ ಮಕ್ಕಳಿಲ್ಲ ಎಂಬ ಚಿಂತೆ ಕಾಡುತ್ತಿರಬೇಕಾದರೆ ಕೇಮು ಎಂಬ ಕೆಲಸದಾಳು ಕೊಟ್ಟ ಔಷಧಿಯ ಪರಿಣಾಮವಾಗಿ ಶ್ರೀದೇವಿಗೆ ಮಕ್ಕಳಾಗುತ್ತವೆ!

ನಾಲ್ಕು ಘಟ್ಟದಲ್ಲಿ ನನಗೆ ಈ 'ಮಧ್ಯಘಟ್ಟ' ಪುಸ್ತಕ ಬಹಳ ಇಷ್ಟವಾಗಿದೆ.
*ಮಳೆಗಾಲದ ಪ್ರಾರಂಭದಲ್ಲಿ ಮನೆಗೆ ಮೇಲು ಹೊದಿಕೆ ಹೊದಿಸುತ್ತಾರೆ. ಈಗಿಂನಂತೆ ಹೆಂಚು, ಸಿಮೆಂಟ್ ನ ಬಳಸುವ ಕಾಲವಲ್ಲವದು. ಸೋಗೆಯ ಹೊದಿಕೆಯಾದರೆ ಶ್ರೀಮಂತರು, ಹುಲ್ಲಿನ ಹೊದಿಕೆಯಾದರೆ ಬಡವರು ಎಂಬ ಕಾಲ! ಅದೆಷ್ಟು ಬಡತನವೆಂದರೆ ಕಾಡಿನ ಕಣಗಿಲೆ ಎಲೆಯಲ್ಲಿ ಗಂಜಿ ಬಡಿಸಿ ನಾಲಿಗೆಯಲ್ಲಿ ನಾಯಿ ನೆಕ್ಕುವಂತೆ ತಿನ್ನುತ್ತಿದ್ದರಂತೆ.. ಉಗುರು ತಾಗಿದರೆ ಎಲ್ಲಿ ಎಲೆ ಹರಿಯುವುದೋ ಎಂಬ ಭಯದಲ್ಲಿ ಕೈಯನ್ನೇ ತಾಗಿಸುತ್ತಿರಲಿಲ್ಲವಂತೆ! ಓದಿ ಸುಮ್ಮನೆ ಕಣ್ಣುಮುಚ್ಚಿ ಕುಳಿತಿದ್ದೆ. ಅದೆಂತಹ ಬಡತನವನ್ನೂ ಅದೆಷ್ಟು ನಿರ್ಲಿಪ್ತವಾಗಿ ತಿಳಿಸಿದ್ದಾರೆ ಎನಿಸಿದ್ದು ಸುಳ್ಳಲ್ಲ. ಓದಿಯೇ ಒಮ್ಮೆ ಕೈ ನಡುಗಿತ್ತೆನಗೆ!

*ಮಾಡಿಗೆ ಸೋಗೆ ಹೊದಿಸುವ ಕೆಲಸ ಮುಗಿದ ರಾತ್ರಿ ಕಂಬಳದ ಮದ್ದನ್ನು (ಹೆಂಡ) ಎಲ್ಲಾ ಕುಡಿದು, ಇಸ್ಪೀಟ್ ಆಡುವಾಗ ಶುರುವಾಗುವುದೇ ಭಂಗಿ ಸೊಪ್ಪಿನ ಭಯಂಕರ ಪ್ರಭಾವ!! ಇದನ್ನು ಓದಿ ಬಹಳ ನಕ್ಕಿದ್ದೇನೆ. "ಅರೆ.. ಅತ್ತೆರೆ ಮತ್ತೇನು ಸುದ್ದಿ!!" ಎಂದು ಸುಮಾರು ಜನರ ಬಳಿ ಕೇಳಿದ್ದೇನೆ!! ಊರಲ್ಲಿ ಹಲವರು ಹೇಳಿದ ಭಂಗಿ ಸೊಪ್ಪಿನ ಅವಾಂತರಗಳನ್ನು ನೆನಪಿಸಿಕೊಂಡಿದ್ದೇನೆ!

*ಹುಲಿ ಬೇಟೆಯ ಅಧ್ಯಾಯದಿಂದ ಹೊಸದೇ ಆಯಾಮ ಪ್ರಾರಂಭವಾಗುತ್ತದೆ. ಕೌತುಕ ಘಟ್ಟಗಳು, ಅನಿರೀಕ್ಷಿತ ತಿರುವುಗಳು ಇಲ್ಲಿ ಘಟ್ಟದ ರಸ್ತೆಯತೆಯೇ ಇವೆ!! ಹುಲಿಯ ಉಪಟಳ, ಅದರ ಬೇಟೆಯ ಸಿದ್ಧತೆ, ಹುಲಿಯ ಜೊತೆಗೆ ಬೇತೆಯಲ್ಲಿ ಓರ್ವನ ಆಕಸ್ಮಿಕ ಸಾವು, ಅದಕ್ಕೆ ಗಂಟು ಹಾಕಿಕೊಂಡ ಕಾರಣಗಳು-ಮೌಢ್ಯಗಳು, ಮತ್ತೊಂದು ಪ್ರಾಯಶ್ಚಿತ್ತದ ಸಾವು... ಎಲ್ಲವೂ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತವೆ.

*ಗೋಪಯ್ಯ ಹೆಗಡೆಗೆ ಅರೋಗ್ಯ ಹದೆಗೆಟ್ಟಾಗ, ಅವರ ಭಾವ ಮೈದುನ ವಾಸುದೇವ, ವರದಪ್ಪ ಹೆಗಡೆ ಎಂಬುವವರೊಂದಿಗೆ ಔಷಧಿ ಬೇರು ತರಲು ಕಾಡಿಗೆ ಹೋಗುತ್ತಾನೆ. ಆಗ ವರದಪ್ಪ ಹೆಗಡೆ ವರ್ಣಿಸುವ ಇತಿಹಾಸ ನಿಜಕ್ಕೂ ರೋಮಾಂಚನವೆನಿಸುತ್ತದೆ. ಪ್ರತಿ ಮರ ಗಿಡದಲ್ಲಿಯೂ ಒಂದೊಂದು ಕಥೆ ಅಡಗಿದೆಯೇನೋ ಎನಿಸುತ್ತದೆ.

"ದಕ್ಕರ ಧರ್ಮಂಗೆ ಇಕ್ರ ಈ ವರ್ಷ ಸಕ್ರ ಸರಿಯಾಗಿ ಪಕ್ರ ಪಾಠ ಮಧ್ಯ ಗಕ್ರ ಘಟ್ಟದವು ಕಕ್ಕರೆ ಕಲಿಸಿದಂಗೆ ಅಕ್ರ ಆತು" ಇದನ್ನ ಮಾತ್ರ ಬಾಯಿಪಾಠ ಮಾಡಲು ನಾ ಸೋತಿದ್ದೇನೆ!!

ಈಗಾಗಲೇ ಮತ್ತಿಘಟ್ಟವನ್ನೊಮ್ಮೆ ನೋಡಿದ್ದರೂ, ಈ ಪುಸ್ತಕ ಓದಿದ ಮೇಲೆ ಮತ್ತೆ ಹೋಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ!!  ಊರ ಪರಿಸರ, ಕಲ್ಲು,ಮಣ್ಣು, ತಲೆ ಕೆಳಗಾದ ಮಾವಿನ ಮರ, ಜಲಪಾತ, ಕೆಂಪು ತೆಂಗಿನ ಕಾಯಿ ಎಲ್ಲವೂ ಮತ್ತೊಮ್ಮೆ ನನ್ನನ್ನು ಕೈ ಬೀಸಿ ಕರೆಯುತ್ತಿವೆ!
ಎಲ್ಲಕ್ಕಿಂತಲೂ ಮಿಗಿಲಾಗಿ ಇದೊಂದು ನೈಜ ಕಥೆ! ಇದನ್ನು ಇಷ್ಟು ಸುಂದರವಾಗಿ ನಮ್ಮೆದುರಿಗೆ ಇಟ್ಟ ಶಿವಾನಂದ ಕಳವೆ ಅವರಿಗೆ ಧನ್ಯವಾದಗಳು.

-ಪಲ್ಲವಿ ಹೆಗಡೆ 




Saturday, December 18, 2021

ಯಾವ ಪ್ರೀತಿಯೂ ಅನೈತಿಕವಲ್ಲ

ಖುದ್ದು ಸಂತೋಷಕುಮಾರ ಮೆಹೆಂದಳೆ ಸರ್ ಬಳಿ ಇಂದ ಅವರ ಒಂದಷ್ಟು ಪುಸ್ತಕಗಳನ್ನು ತರಿಸಿಕೊಂಡು ಒಂದು ವರ್ಷವೇ ಆಗಿರಬಹುದು. ಒಂದೇ ಗುಕ್ಕಿನಲ್ಲಿ ತಡವಾಗಿ ಬಿದ್ದ ಮಳೆ ಓದಿದ ನಂತರ ಇನ್ನೊಂದು ಪುಸ್ತಕಕ್ಕೆ ಕೈ ಹಚ್ಚಲು ಸಾಧ್ಯವಾಗಿರಲಿಲ್ಲ.
ಅಂತೂ ಈಗ ಯಾವ ಪ್ರೀತಿಯೂ ಅನೈತಿಕವಲ್ಲ ಪುಸ್ತಕವನ್ನು ಓದಿದ್ದೇನೆ.
ಪುಸ್ತಕ ಸಮರ್ಪಣೆಯೇ ಹೆಣ್ಣಿಗಾಗಿ.. ಬಹಳ ಚಂದದ ಶಬ್ದಗಳೊಂದಿಗೆ...
ಹೆಣ್ಣು, ಗಂಡು.. ಒಂದು ಭೂಮಿ, ಇನ್ನೊಂದು ಆಕಾಶ. ಎರಡರ ಮಿಲನಕ್ಕೂ ಅದರದ್ದೇ ಕಾಲಾವಕಾಶ ಬೇಕು. ಅಲ್ಲಿ ಯಾವದೇ ಅಹಂಗೆ, ಗೊಂದಲಕ್ಕೆ ಅವಕಾಶವಿಲ್ಲ. ಕಾಮ ಪ್ರೇಮವಲ್ಲ. ದೇಹವೊಂದೇ ಪ್ರೀತಿಯಲ್ಲ.
ಯಾವ ಪ್ರೀತಿಯೂ ಅನೈತಿಕವಲ್ಲ. ಲೇಖಕರೇ ಹೇಳುವಂತೆ ಅದೊಂದು ಚೆಂದದ ಮುಂಜಾನೆಯ ಇಬ್ಬನಿಯಲ್ಲಿ ತೊಯ್ದ ಚೆಂಗುಲಾಬಿಯ ಪಕಳೆಯಂತದ್ದು.
ಗಂಡು ಹೆಣ್ಣಿನ ನಡುವಿನ ಮಾನಸಿಕ ಹಾಗೂ ದೈಹಿಕ ಸಾಮರಸ್ಯದ ಕುರಿತಾಗಿರುವ ಪುಸ್ತಕವಿದು.
ಪುಟ್ಟ ಪುಸ್ತಕ ಓದಲು ಬಹಳ ಕಾಲಾವಕಾಶ ಬೇಡ.
ಇನ್ನು ಹಲವು ಪುಸ್ತಕಗಳು ಬಾಕಿ ಇವೆ. 'ಅಘೋರಿಗಳ ಲೋಕದಲ್ಲಿ' ಮತ್ತು 'ನಾನು ಅಘೋರಿಯಲ್ಲ' ಪುಸ್ತಕಗಳು ನನ್ನ ಕೈಗೇ ಸಿಗುತ್ತಿಲ್ಲ. ಗೆಳತಿಯರ ಕೈಗಳಲ್ಲಿವೆ.. ಆದಷ್ಟು ಬೇಗ ಅವನ್ನೆಲ್ಲ ಓದಿ ಮತ್ತೆ ಬರುತ್ತೇನೆ...

ಪುಸ್ತಕ : ಯಾವ ಪ್ರೀತಿಯೂ ಅನೈತಿಕವಲ್ಲ
ಲೇಖಕರು : ಸಂತೋಷಕುಮಾರ ಮೆಹೆಂದಳೆ
ಪುಟಗಳು : 200
ಬೆಲೆ : 150/-

Thursday, December 2, 2021

ದೊಡ್ಡವರೂ ಓದಬೇಕಾದ ಪುಸ್ತಕ - "ಮಕ್ಕಳು ಓದಿದ ಟೀಚರ್ ಡೈರಿ"

ವೈ. ಜಿ. ಭಗವತಿಯವರ ಇತ್ತೀಚಿನ ಪುಸ್ತಕ "ಮಕ್ಕಳು ಓದಿದ ಟೀಚರ್ ಡೈರಿ". 
ನಾನು ಈ ಮೊದಲು ಮಕ್ಕಳ ಕಥೆಗಳನ್ನು ಓದಿದ್ದೆನಾದರೂ ಮಕ್ಕಳ ಕಾದಂಬರಿಯೊಂದನ್ನು ಓದಿದ್ದು ಇದೇ ಮೊದಲು. ಶಾಲಿನಿ ಎಂಬ ಟೀಚರ್ ಡೈರಿಯ ಸುತ್ತಲಿನ ಕಥೆಗಳಿವು. ಶಿಕ್ಷಕಿ ಊರಲ್ಲಿ ಇರದಿದ್ದಾಗ ಅವರ ವಿದ್ಯಾರ್ಥಿನಿಯರು ಕುತೂಹಲದಿಂದ ಡೈರಿಯನ್ನು ಕದ್ದು ಓದುತ್ತಾರೆ. ಕೆಲವು ಕೌತುಕ ಘಟನೆಗಳು, ಶಿಕ್ಷಕಿಯ ಮನೆಯ ಸ್ಥಿತಿ, ಆಟ ಪಾಠಗಳಲ್ಲಿ ಅವರ ಆಸಕ್ತಿ ಮಕ್ಕಳಲ್ಲಿ ತಮ್ಮ ಟೀಚರ್ ಬಗ್ಗೆ ಹೆಮ್ಮೆ ಮೂಡಿಸುತ್ತವೆ. ಮಕ್ಕಳಿಗೆ ತಮ್ಮ ಟೀಚರ್ ಮೇಲಿದ್ದ ಅಭಿಮಾನ-ಪ್ರೀತಿ, ಪ್ರತಿ ಹಂತದಲ್ಲಿಯೂ ಕಾಣುತ್ತವೆ. ಟೀಚರಿನ ಕಥೆಯನ್ನು ಓದುತ್ತಾ ಮಕ್ಕಳಲ್ಲಿಯೂ ಬದಲಾವಣೆಯಾಗುತ್ತದೆ. ಕೊನೆಯಲ್ಲಿ ಮಕ್ಕಳ ಅನುಭವ ಕಥನಗಳೂ ತೆರೆದುಕೊಳ್ಳುತ್ತವೆ.
ಪ್ರತಿ ಹಂತವೂ ಕೊನೆಯಲ್ಲಿ ಕುತೂಹಲಕಾರಿ ಘಟ್ಟದಲ್ಲಿ ಕೊನೆಗೊಂಡು ಇನ್ಯಾವುದೋ ತಿರುವಿನಲ್ಲಿ ಪ್ರಾರಂಭವಾಗುವುದು ವಿಶೇಷ. ಕಥೆಯ ಜೊತೆಗೆ ಪುಟಗಳ ವಿನ್ಯಾಸ, ಡಾ.ಆನಂದ್ ಪಾಟೀಲರ ರೇಖಾಚಿತ್ರಗಳು,ಪುಸ್ತಕದ ಬಹುಮುಖ್ಯ ಆಕರ್ಷಣೆ..!
ನಮ್ಮ ಮಲೆನಾಡನ್ನೂ ಉತ್ತರ ಕರ್ನಾಟಕವನ್ನೂ ಈ ಕಥೆಗಳಲ್ಲಿ ಟೀಚರ್ ಮೂಲಕ ಬೆಸೆದಿದ್ದಾರೆ ಲೇಖಕರು.
ಈ ಮಕ್ಕಳ ಕಾದಂಬರಿಯನ್ನು ಓದುತ್ತಾ ನಾನು ನನ್ನ ಶಾಲಾ ದಿನಗಳನ್ನು ಒಮ್ಮೆ ಮೆಲುಕು ಹಾಕಿದೆ.

2021ನೇ ಸಾಲಿನ "ಜಿ. ಬಿ. ಹೊಂಬಳ" ರಾಜ್ಯ ಮಟ್ಟದ ಮಕ್ಕಳ ಪುಸ್ತಕ ಪುರಸ್ಕಾರ ಪಡೆದ ಕೃತಿ ಇದು.
ದೊಡ್ಡವರೂ,ಪುಟಾಣಿಗಳೂ ಓದಬೇಕಾದ ಪುಸ್ತಕವಿದು.

ಪುಸ್ತಕ : ಮಕ್ಕಳು ಓದಿದ ಟೀಚರ್ ಡೈರಿ (ಮಕ್ಕಳ ಕಾದಂಬರಿ)
ಲೇಖಕರು : ವೈ. ಜಿ. ಭಗವತಿ
ಒಟ್ಟು ಪುಟಗಳು : 114
ಬೆಲೆ : 110/-

Friday, August 28, 2020

ನಾ ಓದಿದ ಪುಸ್ತಕ.. (ಬೆಂಗಾಲಿ ಬೆಡಗಿ)

'ಬೆಂಗಾಲಿ ಬೆಡಗಿ' ಎಷ್ಟು ಚಂದದ ಹೆಸರದು!! ಅಷ್ಟೇ ಚಂದದ ಕಥೆ. ಮುಖಪುಟದ ವಿನ್ಯಾಸದಲ್ಲಿಯೇ ಶ್ವೇತವರ್ಣದಲ್ಲಿ ಮೂಡಿದ ರೇಖೆಯ ಸುಂದರಿ ಜೊತೆಯಲ್ಲಿ ಕಬ್ಬಡ್ಡಿಯ ಛಾಯೆ ಕಾಣುತ್ತದೆ; ಜೊತೆಗೆ ಗಡಿಯ ಬೇಲಿಯೂ!! ಕದ ತೆರೆದಂತೆ ಒಳಪುಟಗಳಲ್ಲಿ ಸೊಗಸಾದ ಲೋಕವೇ ತೆರುದುಕೊಳ್ಳುತ್ತದೆ. ಬಾಂಗ್ಲಾವನ್ನು ಎಲ್ಲ ರೀತಿಯಿಂದಲೂ ತೋರಿಸುವ ಉತ್ತಮ ಪ್ರಯತ್ನವಿದು ಎಂದರೆ ತಪ್ಪಿಲ್ಲ..!

ನಾಯಕ ವಿನಯಚಂದ್ರನಿಗೆ ಕಬ್ಬಡ್ಡಿ ಕನಸು. ಅವನ ಕನಸಿನ ರಾಜಕುಮಾರಿ ಸಿಗಲೂ ಇದೇ ಕಬ್ಬಡ್ಡಿ ಕಾರಣ!! ಮಲೆನಾಡ ಹಳ್ಳಿಮನೆಯೊಂದರ ಕುಟುಂಬದಿಂದ  ಪ್ರಾರಂಭವಾಗುವ ಕಥೆ, ಸಂಭಾಷಣೆ ಆಪ್ತವೆನಿಸುವಂಥದ್ದು. ಒಂದು ಪುಟ್ಟ ಹಳ್ಳಿಯ ಕಬ್ಬಡ್ಡಿ ಆಟಗಾರ ದೇಶದ ಪ್ರತಿನಿಧಿಯಾಗಿ, ಬಾಂಗ್ಲಾದೇಶಕ್ಕೆ ಹೊರಡುವ ಸಮಯ ಅವನ ತಂದೆ-ತಾಯಿಯರ  ಅಳುಕು; ಊರ ಬಿಟ್ಟು ಭವಿಷ್ಯ ರೂಪಿಸಿಕೊಳ್ಳಲು ಹೊರಟು ನಿಂತ ಮಕ್ಕಳ ತಂದೆ-ತಾಯಿಯರ ಸ್ಥಿತಿಯನ್ನು ಎದುರಿಗಿಡುತ್ತದೆ. ಮಲೆನಾಡ 'ಮಾಣಿ'ಗೆ  ಬಾಂಗ್ಲಾ 'ಬೆಡಗಿ' ಸಿಗುವ ಸಂದರ್ಭವನ್ನು ವರ್ಣಿಸಿದ ರೀತಿಯೇ ಸುಂದರ! ಒಂದು ಪ್ರೇಮಕಥೆ ತನ್ನ ಜೊತೆಯಲ್ಲಿ ಬಾಂಗ್ಲಾ ಪರಿಸ್ಥಿತಿಯನ್ನು, ಜನ ಜೀವನವನ್ನು, ಅಲ್ಲಿನ (ಅ)ವ್ಯವಸ್ಥೆಯನ್ನು, ರಾಜಕೀಯ ಹಿಂಸಾಚಾರವನ್ನು  ಎದುರಿಸುತ್ತ ಮುನ್ನುಗ್ಗುತ್ತದೆ. ಭೂಗೋಳಿಕವಾಗಿಯೂ ಬಾಂಗ್ಲಾವನ್ನು ಬಲು ಸೊಗಸಾಗಿ ವರ್ಣಿಸಿದ್ದಾರೆ ಲೇಖಕರು. ಬಾಂಗ್ಲಾ ಇತಿಹಾಸವನ್ನು ಪ್ರಸ್ತುತಪಡಿಸುವಾಗ, ಒಂದು ಕಥೆಯನ್ನು  ಎಷ್ಟು ಆಸಕ್ತಿಯಿಂದ, ಆಪ್ತತೆಯಿಂದ, ಆಳವಾಗಿ ನಮ್ಮೆದುರು ಇಡುತ್ತಿದ್ದಾರೆ ಎಂದು ಅರಿವಾಗುತ್ತದೆ. 
 ತೊಂದರೆಗಳನ್ನೆಲ್ಲ ಎದುರಿಸಿ ಮುಂದೆಸಾಗುವಾಗ ಸಿಗುವ ಪ್ರತಿಯೊಂದು ಪಾತ್ರವೂ ಮುಖ್ಯವೇ! 
ಸಂಕಷ್ಟಗಳನ್ನೆಲ್ಲ ಎದುರಿಸಿ, ಪ್ರೀತಿ ಗೆಲ್ಲುವುದಾ?  ಬಾಂಗ್ಲಾ ಗಡಿ ದಾಟಿ ಬೆಡಗಿ ಭಾರತಕ್ಕೆ ಬಂದಳಾ?  ಎಂಬುದನ್ನು ಓದಿಯೇ ತಿಳಿಯಬೇಕು!!

ಪುಸ್ತಕ : ಬೆಂಗಾಲಿ ಬೆಡಗಿ (ಕಾದಂಬರಿ)
ಲೇಖಕರು : ವಿನಯ್ ದಂಟಕಲ್ 

ಹೆಣ್ಣು