Thursday, July 9, 2020

ಕವಿತೆ ನಾನು..

ಕವಿತೆ ನಾನು.. 
ಒಟ್ಟಿಗೇ ಭಾವತುಂಬಿ ಹಾಡಾಗುವ ಬಾ.. 
ಅಕ್ಷರ ಮಾಸುವ ಮುನ್ನ.. 

ಇರುಳು ನಾನು.. 
ಒಟ್ಟಿಗೇ ಶಶಿ-ತಾರೆಯಾಗಿ ಮಿನುಗುವ ಬಾ.. 
ಬೆಳಕು ಆವರಿಸುವ ಮುನ್ನ.. 

ಹಣತೆ ನಾನು.. 
ಒಟ್ಟಿಗೇ ದೀಪವಾಗಿ ಬೆಳಕ ತೋರುವ ಬಾ... 
ಎಣ್ಣೆ ಖಾಲಿಯಾಗುವ ಮುನ್ನ.. 

ಮೊಗ್ಗು ನಾನು.. 
ಒಟ್ಟಿಗೇ ಅರಳಿ ಹೂವಾಗುವಾ ಬಾ.. 
ತೊಟ್ಟು ಕಳಚಿ ಬೀಳುವ ಮುನ್ನ.. 

ಮಂಜು ನಾನು.. 
ಒಟ್ಟಿಗೇ ಕೊರೆವ ಚಳಿಯೊಡನೆ ಹೆಪ್ಪುಗಟ್ಟುವ ಬಾ.. 
ಕಾವಿಗೆ ಕರಗುವ ಮುನ್ನ.. 

ನದಿ ನಾನು.. 
ಒಟ್ಟಿಗೇ ಧಾರೆಯಾಗಿ ಧುಮುಕುವ ಬಾ.. 
ಸಾಗರ ಸೇರುವ ಮುನ್ನ.. 

ಪ್ರಕೃತಿಯು ನಾನು.. 
ಒಟ್ಟಿಗೇ ಸೌಂದರ್ಯವ ಸವಿಯುವ ಬಾ.. 
ಉಸಿರು ನಿಲ್ಲುವ ಮುನ್ನ... 

-ಪಲ್ಲವಿ 


Wednesday, July 8, 2020

ಗೆಳೆಯಾ, ನೀ ಜೊತೆಗಿರದಿದ್ದರೆ...

ಸೀರೆ ಬೇಕೆಂದು ಹೋದೆ
ನೀಲಿ ಸೀರೆ, ಝರಿ ಸರಿ ಬರಲಿಲ್ಲ, 
ಕೆಂಪು ಸೀರೆಗೆ ಅಂಚು ದಪ್ಪ, 
ಹಸಿರು ಸೀರೆಗೆ ಚಿತ್ತಾರವೇ ಇಲ್ಲ... 
ಗೆಳೆಯಾ, ನೆರಿಗೆ ಸರಿಪಡಿಸಲು 
ನೀ ಜೊತೆಗಿರದಿದ್ದರೆ ಎಲ್ಲವೂ ಬಣ್ಣ ಮಾಸಿದಂತೆ.... 

ಹೂವು ಬೇಕೆಂದು ಹೋದೆ 
ಗುಲಾಬಿ  ದಳಗಳೆಲ್ಲ ಉದುರಿತ್ತು, 
ಸೇವಂತಿ ಮುದುಡಿ ಹೋಗಿತ್ತು, 
ಮಲ್ಲಿಗೆ ಅರಳಲೇ ಇಲ್ಲ...
ಗೆಳೆಯಾ, ಹೂ ಮುಡಿಸಲು  
ನೀ ಜೊತೆಗಿರದಿದ್ದರೆ ಎಲ್ಲೂ ಸುಗಂಧವೇ ಇರದಂತೆ.... 

ಒಡವೆ ಬೇಕೆಂದು ಹೋದೆ 
ಬಳೆಗೆ ಕಳೆಯೇ ಇಲ್ಲ, 
ಕಿವಿಯೋಲೆ ಹೊಂದಲಿಲ್ಲ, 
ಗೆಜ್ಜೆಗೆ ದನಿಯೇ ಇಲ್ಲ...
ಗೆಳೆಯಾ, ಒಡವೆ ತೊಡಿಸಲು 
ನೀ ಜೊತೆಗಿರದಿದ್ದರೆ ಎಲ್ಲವೂ ಹೊಳಪ ಕಳೆದುಕೊಂಡಂತೆ..... 

ಯಾವುದೂ ಬೇಡೆಂದು ಸುಮ್ಮನೆ ಕುಳಿತೆ 
ನೋಡು, ನನ್ನೊಳಗೂ-ಹೊರಗೂ ನೀನೇ ಇರುವೆ
ನೆನಪಿನ ಹೊತ್ತಿಗೆ ಎದುರೇ ಹರಡಿದೆ, 
ನೀ ಕೊಟ್ಟ ನವಿಲುಗರಿಯೂ ಮಾಸುತಿದೆ
ಗೆಳೆಯಾ, ಕಚಗುಳಿ ಇಡಲು 
ನೀ ಜೊತೆಗಿರದಿದ್ದರೆ ಚಂದದ ನೆನಪೂ ಸುಡುವ ಅಗ್ನಿಯಂತೆ.... 

-ಪಲ್ಲವಿ 

Tuesday, July 7, 2020

ಶಾಲಾದಿನದ ಹುಳಿ-ಸಿಹಿ ನೆನಪು..!

ಬಾಲ್ಯ ಒಂದು ರೀತಿಯಲ್ಲಿ ಬಣ್ಣದ ಬದುಕು, ಕೌತುಕದ ಕಣ್ಣು..ಉತ್ಸಾಹದ ಹೆಬ್ಬಾಗಿಲು.. ಅದೆಷ್ಟೋ ನೆನಪುಗಳ ಬುತ್ತಿಯದು. ಒಮ್ಮೆ ಸಿಹಿ, ಮತ್ತೊಮ್ಮೆ ಹುಳಿ ಒಮ್ಮೊಮ್ಮೆ ಖಾರವಾಗಿದ್ದೂ ಇದೆ. ಕೆಲವು ನೆನಪುಗಳು ಕಹಿಯಾದರೂ, ಬಹಳ ದೊಡ್ಡ ಪಾಠವಾಗಿವೆ. 
ಇಂದು ಒಂದು ಹುಳಿ-ಸಿಹಿಯ ನೆನಪಿನೊಂದಿಗೆ ಬಂದಿದ್ದೇನೆ. 
ಮನೆಯಲ್ಲಿ ಹಬ್ಬ ಎಂದರೆ ಯಾವ ವಾತಾವರಣ ಇರುವುದೋ ಶಾಲೆಯಲ್ಲಿ 'ಸ್ವಾತಂತ್ರ್ಯ ದಿನ', 'ಶಿಕ್ಷಕರ ದಿನ','ಗಾಂಧಿ ಜಯಂತಿ', 'ಕನ್ನಡ ರಾಜ್ಯೋತ್ಸವ', 'ಮಕ್ಕಳ ದಿನ', 'ಗಣರಾಜ್ಯೋತ್ಸವ 'ಗಳಿಗೆ ಅದೇ ವಾತಾವರಣ ಇರುತ್ತದೆ. 
ನಮ್ಮ 'ಬಾಲಿಕೊಪ್ಪ' ಶಾಲೆಯಲ್ಲಿ ನಾಳೆ ಆಚರಣೆ ಎಂದರೆ ಇಂದು ತಯಾರಿ ಪ್ರಾರಂಭವಾಗುತ್ತದೆ. ಶಾಲೆಯ ಎಲ್ಲ ಬಾಗಿಲಿಗೂ ತೋರಣ ಕಟ್ಟುವುದು, ಮೈದಾನವನ್ನು (ನಾವು ಅಂಗಳ ಎಂದಿದ್ದೇ ಹೆಚ್ಚು.. ಯಾಕೆಂದರೆ ಶಾಲೆಗೂ ಮನೆಗೂ ವ್ಯತ್ಯಾಸವಿರಲಿಲ್ಲ..!) ಸ್ವಚ್ಛಗೊಳಿಸುವುದು, ಧ್ವಜದ ಕಟ್ಟೆಯ ಸುತ್ತ ರಂಗೋಲಿ ಬಿಡಿಸುವುದು.. ಈ ಮಧ್ಯೆ ತಂಟೆ -ತರಲೆಗಳು..
ಸೇವಾದಳದವರು ಅವರ ತಾಲೀಮಿನಲ್ಲಿ ಇರುತ್ತಿದ್ದರು. ಕೆಲವು ನೃತ್ಯ ಪ್ರದರ್ಶನ, ಸ್ತಬ್ದಚಿತ್ರ ಪ್ರದರ್ಶನಗಳ ಸಿದ್ಧತೆಯಲ್ಲಿ ಇರುತ್ತಿದ್ದರು. 
ಒಟ್ಟಿನಲ್ಲಿ ಅಂದು ಶಾಲೆಗೆ ರಜೆಯಿಲ್ಲ, ಆದರೂ ತರಗತಿಗಳಿಲ್ಲ..ಹಾಗಾಗಿ ಇಡೀ ಶಾಲೆಯೇ ಗಿಜಿಗಿಜಿ ಎನ್ನುತ್ತಿರುತ್ತಿತ್ತು. 
ಇನ್ನು ಮನೆಗೆ ಬಂದಮೇಲೆ ಮಾರನೇ ದಿನದ ತಯಾರಿ ಕಡಿಮೆ ಇರುತ್ತಿರಲಿಲ್ಲ. ಸಮವಸ್ತ್ರವನ್ನು ಒಪ್ಪವಾಗಿರಿಸಿಕೊಂಡು, ಹುಡುಗಿಯರೆಲ್ಲ ಮಾತನಾಡಿಕೊಂಡಂತೆ ಮ್ಯಾಚಿಂಗ್ ಬಳೆಗಳನ್ನು ಹಾಕಿಕೊಂಡು ಹೋಗುವುದು. ಬೆಳಿಗ್ಗೆ ಹೊರಡುವ ಹೊತ್ತಿನಲ್ಲಿ ಹೂ ಕೊಯ್ಯಲು ಓಡುವುದು. "ಮನೆಯಲ್ಲಿ ದೇವರಿಗೆ ನಾಲ್ಕು ಹೂವು ಕೊಯ್ದಿದ್ದು ಕಂಡಿಲ್ಲ. ಈಗ ಇದ್ದ ಹೂವನ್ನೆಲ್ಲ ತೆಗೆದುಕೊಂಡು ಹೋಗುತ್ತಾಳೆ.." ಮನೆಯೊಳಗಿನಿಂದ ಕೇಳುವ ಧ್ವನಿ ಅದು. 
ನಮ್ಮ ಕಷ್ಟ ನಮಗೆ...! ಹೇಳಿದ್ದಾರಲ್ಲ ಶಾಲೆಯಲ್ಲಿ,  "ಧ್ವಜಕ್ಕೆ ಅಥವಾ ಫೋಟೋಕ್ಕೆ ಹಾಕಲು ಹೂವು ಬೇಕು. ಎಲ್ಲರೂ ಸಾಧ್ಯವಾದಷ್ಟು ತನ್ನಿ.." 
ಯಾರೂ ಹೇಳಿಕೊಳ್ಳದಿದ್ದರೂ ನಮ್ಮೊಳಗೇ (ಹುಡುಗಿಯರು) ಒಂದು ರೀತಿಯ ಸ್ಪರ್ಧೆ. ಕೊನೆಯಲ್ಲಿ  ಹೆಚ್ಚು ಹೂವು ತಂದವರು ಎಲ್ಲರತ್ತ ಗೆಲುವ ನಗೆ ಬೀರುವುದು ಬೇರೆ..!!!
ಈ ಎಲ್ಲ ದಿನಗಳ ಆಕರ್ಷಣೆ ಏನೆಂದರೆ 'ಲಿಂಬು ಪೆಪ್ಪರಮೆಂಟು'.. ! ಆಗ ಇಪ್ಪತ್ತೈದು ಪೈಸೆಗೆ ಸಿಗುತ್ತಿತ್ತು. ಧ್ವಜಾರೋಹಣ ಕಾರ್ಯಕ್ರಮವಾದ ನಂತರ ಎಲ್ಲರಿಗೂ ಹಂಚುವ ಸಿಹಿ ಅದು. ಬಿಟ್ಟ ಕಣ್ಣು, ಬಿಟ್ಟ ಬಾಯಿಯಲ್ಲಿ ಎಲ್ಲರೂ ಹಂಚುವವರ ಕೈಲಿದ್ದ ಪೆಪ್ಪರಮೆಂಟಿನ ಬಟ್ಟಲನ್ನು ನೋಡುತ್ತ ಸಾಲಿನಲ್ಲಿ ನಿಂತಿರುತ್ತಿದ್ದೆವು. ನಿದ್ದೆಯ ಮಂಪರಿನಲ್ಲಿರುವ ನಮಗೆ  ಭಾಷಣ ಮಾಡಲು ಬಂದವರು ತಾವೊಬ್ಬರೇ ಏನನ್ನೋ ಮಾತನಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿತ್ತು.
ಮುಖ್ಯವಾಗಿ ಅಂದು ಹೋಗುವುದೇ ಪೆಪ್ಪರಮೆಂಟಿಗಾಗಿ..!! 
ಶಾಲೆಯ ಪಕ್ಕದ ಅಂಗಡಿಯಲ್ಲೇ ಶುಂಠಿ ಪೆಪ್ಪರಮೆಂಟು,ಲಿಂಬು  ಪೆಪ್ಪರಮೆಂಟು, ಕಟ್ಟಾ-ಮೀಠಾ ಎಲ್ಲ ದೊರೆಯುತ್ತಿದ್ದುದರಿಂದ  ಬಾಯಿ ಚಪಲಕ್ಕೆ ಕೊರತೆಯೇನೂ ಆಗಿರಲಿಲ್ಲ. ದುಡ್ಡು ಎಲ್ಲಿಂದ ಬರುತ್ತಿತ್ತು ಎಂದು ಹೊಸದಾಗಿ ಹೇಳಬೇಕಿಲ್ಲ; ಎಂದೂ ಬರಿದಾಗದ ಅಪ್ಪನ ಜೇಬು ಎಂಬ ಬ್ಯಾಂಕ್ ಖಾತೆಯಿದ್ದಾಗ..! 
ಮಧ್ಯಾಹ್ನ ಊಟವಾದ ನಂತರ ಅರ್ಧ ಗಂಟೆಯ ವಿಶ್ರಾಮದ ಸಮಯದಲ್ಲಿ ನಾಲ್ಕಾರು ಗೆಳತಿಯರು ಸೇರಿ ಸಂಗೀತದ ತರಗತಿಗೆ ಹೋಗುತ್ತಿದ್ದೆವು. ಶಾಲೆಯಿಂದ ಹೊರಟು, ಗುಡ್ಡವನ್ನೇರಿ, ಚರ್ಚಿನ ದಾರಿಯಲ್ಲಿ ಒಂದು ಸುತ್ತು ಹಾಕಿ, ಎಲ್ಲೋ ಬೇಲಿ ಹಾರಿ ನಂತರ ನಮಗೆ ಸಂಗೀತ ಪಾಠ ಹೇಳುವವರ ಮನೆ ಸಿಗುತ್ತಿತ್ತು. ಎಲ್ಲರಿಗೂ ಹೇಳುವುದು - ಇದು ಶಾರ್ಟ್ ಕಟ್ ರೂಟ್ ಎಂದು ! ಸತ್ಯ ನಮಗೆ ಮಾತ್ರ ಗೊತ್ತಿತ್ತು. ಚರ್ಚಿನ ಹಿಂಬದಿಯ ನೆಲ್ಲಿಮರ ಬೇಡವೆಂದರೂ ಅದೇ ದಾರಿಯಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿತ್ತು..!

ಶಾಲೆಯಿಂದ ಹೊರಟರೆ ಅಂಗಡಿ ಇರುವುದೇ ಒಂದು ದಿಕ್ಕು, ಚರ್ಚಿನ ದಾರಿಯೇ ಒಂದು ದಿಕ್ಕು. ಆದರೂ ಒಂದು ಮಧ್ಯಾಹ್ನ ಒಂದಷ್ಟು ಪೆಪ್ಪರ್ಮೆಂಟ್ ಖರೀದಿಸಿಕೊಂಡು, ಚರ್ಚಿನ ಹಾದಿಯಲ್ಲಿ ಸಾಗಿದ್ದೆವು. 
ಚರ್ಚಿನ ಹಿಂಬದಿಗೆ ನಿಧಾನವಾಗಿ ಬಂದು ಶಬ್ದ ಮಾಡದೇ ನಿಂತು, ಯಾರಾದರೂ ನಮ್ಮನ್ನು ನೋಡುತ್ತಿದ್ದಾರೆಯೇ ಎಂದು ಸುತ್ತ ನೋಡಿದೆವು. ಯಾರೂ ಇಲ್ಲ ಎಂಬ ಧೈರ್ಯದಲ್ಲಿ ಒಬ್ಬಳು ನೆಲ್ಲಿಕಾಯಿಗಳು ತುಂಬಿತುಳುಕುತ್ತಿದ್ದ ಗೊಂಚಲೊಂದಕ್ಕೆ ಒಂದು ಕಲ್ಲನ್ನು ಸರಿಯಾಗಿ ಎಸೆದಳು. ಪಟಪಟನೆ ನಮ್ಮ ತಲೆ, ಭುಜ, ಬೆನ್ನಿನ ಮೇಲೆ ನೆಲ್ಲಿಕಾಯಿಗಳ ಸುರಿಮಳೆ...! ಹುಲ್ಲು ರಾಶಿಯ ಮಧ್ಯ ಹುಡುಕಿ, ಹೆಕ್ಕಿ ತೆಗೆದು ಒಂದೊಂದನ್ನು ಬಾಯಿಗೆ ಹಾಕಿ, ಉಳಿದದ್ದನ್ನು ಜೇಬಿಗಿಳಿಸತೊಡಗಿದೆವು. 
ಅಷ್ಟರಲ್ಲಿ ಗೆಳತಿ ಚೀರಿದಳು. ನೋಡಿದರೆ ಸಿಸ್ಟರ್ ಒಬ್ಬರು ಅವಳ ಕಿವಿ ಹಿಂಡುತ್ತಿದ್ದರು. 
"ಕಳ್ಳತನ ಮಾಡ್ತೀರಾ.. ಮನೇಲಿ ಹೇಳ್ಕೊಡ್ತೀನಿ ನೋಡಿ, ನಿಮ್ಮ ಶಾಲೆಗೆ ಕಂಪ್ಲೇಂಟ್ ಮಾಡ್ತೀನಿ." ಕೆಂಪು ಮುಖ ಮಾಡಿಕೊಂಡು ಹೇಳಿದರು. 
ಕಳ್ಳನ ಮುಖ ಹುಳ್ಳಹುಳ್ಳಗೆ..! ಸಿಕ್ಕಿಹಾಕಿಕೊಂಡಿದ್ದಕ್ಕೋ, ಬಾಯಲ್ಲಿ ನೆಲ್ಲಿಕಾಯಿ ಇದ್ದಿದ್ದಕ್ಕೋ.. ಒಟ್ಟಿನಲ್ಲಿ ನಮ್ಮೆಲ್ಲರ ಮುಖಗಳು ಹುಳ್ಳಗಾಗಿದ್ದವು. 
"ಸಿಸ್ಟರ್, ಪ್ಲೀಸ್ ಮನೆಗೆ, ಶಾಲೆಗೆ ಎಲ್ಲ ಹೇಳಿಕೊಡಬೇಡಿ. ಇನ್ನುಮುಂದೆ ಹೀಗೆ ಮಾಡಲ್ಲ. ಈ ದಾರೀಲಿ ಬರಲ್ಲ. ಪ್ಲೀಸ್..." ಅಂತ ಹೇಳುವಷ್ಟರಲ್ಲಿ ಎಲ್ಲರ ಕಣ್ಣು ತುಂಬಿತ್ತು. 
ಅವರಿಗೆ ಏನನ್ನಿಸಿತೋ, ನಕ್ಕರು. ನಾನು ಮುಂದೆ ಹೋಗಿ ಒಂದು ಕೈಲಿ ನೆಲ್ಲಿಕಾಯಿ ಇನ್ನೊಂದು ಕೈಲಿ ಪೆಪ್ಪರ್ಮೆಂಟು ಹಿಡಿದು ಚಿಕ್ಕ ಮುಖ ಮಾಡಿ, "ಸಿಸ್ಟರ್ ಇದನ್ನು ತೆಗೆದುಕೊಳ್ಳಿ. ಇನ್ನು ಮುಂದೆ ಹೀಗೆಲ್ಲ ಮಾಡಲ್ಲ. ಸಾರಿ.." ಎಂದೆ. 
ನಗುತ್ತಾ, ಒಂದು ಪೆಪ್ಪರಮೆಂಟ್, ಒಂದು ನೆಲ್ಲಿಕಾಯಿ ತೆಗೆದುಕೊಂಡು ನನ್ನ ಕೆನ್ನೆ ಚಿವುಟಿ, "ಉಳಿದದ್ದೆಲ್ಲ ನಿಮಗೇ. ಇಟ್ಟುಕೊಳ್ಳಿ. ಇನ್ನುಮುಂದೆ ಕೇಳಿ ತಗೋಳಿ.. ಸರೀನಾ" ಎಂದು ಮುದ್ದು ಮಾಡುತ್ತ ಹೇಳಿ ಹೊರಟುಹೋದರು. 
 ಆಮೇಲೆ ಆ ದಾರಿಯಲ್ಲಿ ಹೋಗುತ್ತಿರಲಿಲ್ಲ. ಒಮ್ಮೆ ದಾರಿಯಲ್ಲಿ ಕಂಡ ಸಿಸ್ಟರ್, "ಏನು ಪುಟ್ಟಾ , ನೆಲ್ಲಿಕಾಯಿ ತಿನ್ನೋದು ಬಿಟ್ಟುಬಿಟ್ಯ? " ಎಂದಿದ್ದರು ನಗುತ್ತಾ. 
"ಇಲ್ಲಾ ಸಿಸ್ಟರ್, ಈಗ ಆ ದಾರಿಯಲ್ಲಿ ಬರುತ್ತಿಲ್ಲ" ಎಂದೆ. 
"ನಾಳೆ ಬಾ, ತುಂಬಾ ನೆಲ್ಲಿಕಾಯಿ ಇದೆ. ತೆಗೆದುಕೊಂಡು ಹೋಗು. ನಿನ್ನ ಫ್ರೆಂಡ್ಸನ್ನೂ ಕರ್ಕೊಂಡು ಬಾ" ಎಂದು ಹೇಳಿ ನಡೆದರು. 
ಮಾರನೇ ದಿನ ಖುಷಿಯೋ ಖುಷಿ.. ಬೊಗಸೆ ತುಂಬಾ ನೆಲ್ಲಿಕಾಯಿ... ತಿಂದಿದ್ದೇ ತಿಂದಿದ್ದು..!!
ಈಗ ನೆಲ್ಲಿಕಾಯಿಯಾಗಲೀ, ಪೆಪ್ಪರ್ಮೆಂಟ್ ಆಗಲೀ ಅಂಗಡಿಯಲ್ಲಿ ಕಾಣುವುದೇ ವಿರಳ. ಕಂಡಾಗ ಬಿಡುವ ಮಾತೇ ಇಲ್ಲ. ಕಳ್ಳತನ ಮಾಡುವುದಿಲ್ಲ, ದುಡ್ಡು ಕೊಟ್ಟೇ ಖರೀದಿಸುವುದು. 
ಬಾಲ್ಯದ ಆ ಕ್ಷಣಗಳನ್ನು ಖರೀದಿಸಲು ಸಾಧ್ಯವಿಲ್ಲ, ಇವುಗಳನ್ನೆಲ್ಲ ಖರೀದಿಸಿ, ಬಾಯಿಯನ್ನು ಹುಳಿ -ಸಿಹಿ ಮಾಡಿಕೊಳ್ಳುತ್ತ, ಆ ಚಿನ್ನದ ದಿನಗಳನ್ನು ನೆನಪುಮಾಡಿಕೊಳ್ಳುವ ಪ್ರಯತ್ನವಷ್ಟೇ...!!!

Monday, July 6, 2020

ಹೇ ಅನಾಮಿಕ..


ಅಮ್ಮ ಕೂಗ್ತಿದ್ಲು..
"ಏನಾದ್ರೂ ಹುಚ್ಚು - ಗಿಚ್ಚು ಹಿಡಿದಿದ್ಯೇನೆ ನಿಂಗೆ?  ಈ ಮಳೇಲಿ ಎಲ್ಲಿ ಓಡ್ತಿಯಾ?"
ಇದು ಹೊಸತೇನಲ್ಲ. ಪ್ರತಿ ಮಳೆಗಾಲದ ಹೊಸ ಮಳೆಗೂ ಅಮ್ಮನದು ಇದೇ ರಾಗ... ನಾನು ಓಡುತ್ತೇನೆ.. ಅವಳ ಮಾತನ್ನು ಅಲಕ್ಷಿಸಿ,..
ಗದ್ದೆ ಬಯಲಿನಲ್ಲಿ ಕುಣಿಯುತ್ತಿದ್ದೆ ಒಬ್ಬಳೇ.. "ಮಾಯದಂಥ ಮಳೆ ಬಂತಣ್ಣಾ.." ಎಂದು ಹಾಡುತ್ತಾ..
ಸೀರೆ - ರವಿಕೆ ಎಲ್ಲ ಒದ್ದೆ.
ಒದ್ದೆ ಕೂದಲಿನಿಂದ ಬೆನ್ನ ಮೇಲೆ ಇಳಿಯುವ ನೀರು ಕಚಗುಳಿ ಇಡುತ್ತಿತ್ತು. ಮುಂಗುರುಳ ನೀರು ಹಣೆಯ ಮೇಲೆ ಜಾರಿ, ಕೆನ್ನೆಯ ಮೇಲೆ ಹರಿದು, ಗಲ್ಲದ ಮೂಲಕ ಕೆಳಗಿಳಿಯುತ್ತಿತ್ತು. ನನ್ನ ಕುಣಿತಕ್ಕೆ ಪೃಕೃತಿಯೂ ಸಾಥ್ ನೀಡಿತ್ತೇನೋ.. ಗಾಳಿಗೆ ಮರಗಳೂ ತಲೆದೂಗಿದ್ದವು.
ಮಳೆ ಕಡಿಮೆ ಆಯ್ತಲ್ಲ ಅಂತಾ ನಿಂತಿದ್ದೆ ಹಳೇ ಮಾವಿನ ಮರದ ಕೆಳಗೆ. ಸೆರಗನ್ನು ಹಿಂಡಿಕೊಳ್ಳುತ್ತಾ.. ಎಷ್ಟು ಪೆದ್ದಿ ನಾನು ಮರದ ಹನಿಗಳು ಮತ್ತೂ ಒದ್ದೆ ಮಾಡುತ್ತಿದ್ದವು. ಸೀರೆ ಒಣಗಿಸುವ ವ್ಯರ್ಥ ಪ್ರಯತ್ನ..!
   ನೀನದೆಲ್ಲಿಂದ ಬಂದೆಯೋ..ಈ ಸ್ಥಿತಿಯಲ್ಲಿ ನನ್ನ ನೋಡುತ್ತಿದ್ದೀಯಲ್ಲ.. ಸಂಕೋಚವಾಯ್ತು..
ಹತ್ತಿರ ಬರುವವರೆಗೆ ನಿನ್ನ ಮುಖ ನೋಡಿದ್ದೆನಷ್ಟೆ.. ಆಮೇಲೆ ನಿನ್ನ ಕೆಂಪು ಶರ್ಟು, ಕಪ್ಪು ಪ್ಯಾಂಟು, ಕರಿ ಬೂಟು, ಕುತ್ತಿಗೆಗೆ ನೇತು ಹಾಕಿದ ಕ್ಯಾಮರಾ.. ಛತ್ರಿ ಹಿಡಿದ ಎಡಗೈಲಿ ಕಂಡ ವಾಚು..
"ತಗೊಳ್ಳಿ ಇದನ್ನ.."
ನಿನ್ನ ಧ್ವನಿ ಕೇಳಿದ್ದೇ ಆಗ.. ನೀ ಕೊಟ್ಟಿದ್ದನ್ನು ತೆಗೆದುಕೊಳ್ಳುವಾಗ.. ನಿನ್ನ ಬಲಗೈ ಕಿರುಬೆರಳು ತಾಕಿತಲ್ಲ.. ನನ್ನ ಕಾಲು ಗಡ ಗಡ ನಡುಗಿತೊಮ್ಮೆ.. ಯಾಕೋ ಗೊತ್ತಿಲ್ಲ..!
ಮೊದಲೇ ಹೀಗೆ ನಿನ್ನೆದುರು ನಿಂತಿದ್ದಕ್ಕೆ ನಾಚುತ್ತಿದ್ದೆ. ನೀ ಕೊಟ್ಟ ಫೋಟೋದಲ್ಲಿ ನಾನೇ ಇದ್ದೇನೆ.
ಅರೆ.. ನಾನು ಗದ್ದೆಯಲ್ಲಿ ಕುಣಿಯುವಾಗ ನೀನು ನೋಡಿದ್ದೆ.. ನನ್ನ ಫೋಟೋ ತೆಗೆದಿದ್ದೆ ಎಂದು ತಿಳಿದಾಗ ನಿನ್ನ ಎದುರು ನಿಲ್ಲುವುದಿರಲಿ, ನೀರಾಗಿ ಕರಾಗಬಾರದೇ ಇಲ್ಲೇ ಒಮ್ಮೆ.. ಓಡಿ ಹೋಗಿಬಿಡಲೇ... ಎನಿಸಿತ್ತು.
"ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀರಾ..
ನೀವು ಹುಡ್ಗಿರೆಲ್ಲ ಹೀಗೆನಾ? ಮಳೆ ಅಂದ್ರೆ ಅಷ್ಟು ಹುಚ್ಚಾ?  ನಿಮ್ಮಂಥವರನ್ನ ನೋಡಿ ಸಿನೆಮಾ ಮಾಡ್ತಾರಾ ಅಥವಾ ಸಿನೆಮಾ ನೋಡಿ ನೀವು ಹೀಗಾಡ್ತೀರಾ..? "
ಬೇರೆ ಯಾರಾದ್ರೂ ಇಷ್ಟೆಲ್ಲಾ  ಮಾತಾಡಿದ್ರೆ ಸೀದಾ ನೆರಿಗೆನಾ ಸೊಂಟಕ್ಕೆ ಸಿಕ್ಕಿಸಿ, ಸೆರಗನ್ನ ಕಟ್ಟಿ ಗಯ್ಯಾಳಿಯ ರೂಪ ತಾಳುವ ನಾನು, ನಿನ್ನ ಮಾತಿಗೆ ತಲೆ ತಗ್ಗಿಸಿಯೇ ಮುಗುಳ್ನಕ್ಕಿದ್ದೆ.
"ಜಾಸ್ತಿ ಕುಣಿಬೇಡಿ, ಮನೆಗ್ಹೋಗಿ.."
ಎಂದು ಹೇಳಿ ಹೊರಟೆಬಿಟ್ಟೆಯಲ್ಲ... ಸರಿಯಾಗಿ ಮುಖವನ್ನೂ ತೋರಿಸದೆ..
ನೀನು ಯಾರು ಏನು ಎಂದೂ ತಿಳಿಯಲಿಲ್ಲ. ಆ ನಂತರ ಎರಡು ಮಳೆಗಾಲ ಕಳೆದವು. ನಿನ್ನ ಸುಳಿವಿಲ್ಲ.

ಹೇ ಅನಾಮಿಕ,
ಕ್ರೂರಿ ನೀನು..
ನನ್ನೊಳಗಿನ ನನ್ನನ್ನು ಅಪಹರಿಸಿದವನೇ..
ಈಗೀಗಂತೂ ಪ್ರತಿ ಹನಿ ಮೈ ಮೇಲೆ ಬಿದ್ದಾಗಲೂ ತಂಪಾಗುವ ಬದಲು, ನಿನ್ನ ನೆನಪ ತರಿಸಿ ಉರಿಸುತ್ತಿವೆ...
ಫೋಟೋ ಕೊಟ್ಟು ಮನಸ್ಸು ಕದಿಯೋದು ಎಂಥ ಸುಲಭದ exchange ಅಂದುಕೊಂಡೆಯಾ?.....

-ಪಲ್ಲವಿ
(ಚಿತ್ರ ನೋಡಿ ಕಲ್ಪಿಸಿದ್ದು... 😉😅)

Friday, July 3, 2020

ಭೋರ್ಗರೆತ

ಒದ್ದೆ ಮಣ್ಣಿನ ಘಮ..
ಒಮ್ಮೆ ಪೂರ್ತಿ ಒದ್ದೆಯಾಗಿ ನಡುಗಿ ನಿಲ್ಲುವುದೆಂಥ ಸೋಜಿಗ.. 
ಈಗ ಒಣಗಿಸಿಕೊಳ್ಳಲು ಮೈಯೊಡ್ಡಿದ ಧಾರುಣಿಗೆ  ತುಸುವೇ ಇಣುಕಿದ ರವಿಕಂಡ.. 
 ನಾಚಿ ಹಸಿರ ಹೊದ್ದಳು.. ಆದರೆ ಅದೂ ಒದ್ದೆಯೇ.. 

ಪರ್ವತ -ಪ್ರಪಾತಗಳ ನಡುವಣ ಇಳಿಜಾರಲ್ಲಿ 
ಒಂದೊಂದೇ ಹನಿ ತೊಟ್ಟಿಕ್ಕುತ್ತಿದ್ದರೆ... 
ಸಾಗರದ ಭೋರ್ಗರೆತ ಕಿವಿಗಡಚಿಕ್ಕುವಂತೆ.. 
ಅಯ್ಯೋ ಒಣಗುವುದರೊಳಗೆ ಮತ್ತೆ ಬರುತ್ತಿದ್ದಾನೆ ಮೋಡಗಳ ಮೇಲೆ ರಾಯಭಾರಿಯಂತೆ.. 

ಈಗೇಕೆ ವೈಯ್ಯಾರ.. 
ತಂಗಾಳಿಯೊಡನೆ ಗಂಧದ ಘಮವನ್ನೂ ಸೇರಿಸಿ 
ರವಾನಿಸುವಾ.. ನನ್ನೊಪ್ಪಿಗೆಯ ಅಪ್ಪುಗೆಯ ಸೂಚ್ಯವಾಗಿ.. 
ಭೋರ್ಗರೆಯಲಿ ಮತ್ತೊಮ್ಮೆ.. ರವಿ ಕರಗಿ ಶಶಿ ಕಾಣುವ ಈ ಹೊತ್ತಲ್ಲಿ.. 

-ಪಲ್ಲವಿ 

Thursday, July 2, 2020

ಸ್ವಚ್ಛತೆಯ ನೆಪದಲ್ಲಿ ಪುಗಸಟ್ಟೆ ಉಪದೇಶ !!

ಊರಲ್ಲಿ ಮೊನ್ನೆ ದೊಡ್ಡ ಗಲಾಟೆ. ಯಾವುದೊ ಛತ್ರದಲ್ಲಿ ಮದುವೆ ಮುಂತಾದ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮದ ನಂತರ ಊಟದ ಬಾಳೆ, ಪ್ಲಾಸ್ಟಿಕ್ ಬಟ್ಟಲು, ಲೋಟ, ಕಾಗದ ಎಲ್ಲ ರೀತಿಯ ತ್ಯಾಜ್ಯಗಳೂ ನಮ್ಮೂರಿನ ರಸ್ತೆಯ ಪಕ್ಕದಲ್ಲಿ ವಿಲೇವಾರಿಯಾಗುತ್ತಿತ್ತು. ಇದರ ಬಗ್ಗೆ ದೂರು ಸಲ್ಲಿಸಿದ್ದರು ಊರಿನ ಹಿರಿಯರು.
 ಇನ್ನು ಸಂಜೆಯಾಯಿತೆಂದರೆ ಗುಂಪುಗೂಡಿ ಬಂದು ನಮ್ಮೂರಿನ ಕಟ್ಟೆಯ ಮೇಲೆ ಕುಳಿತು ತಮ್ತಮ್ಮ ಸುಖ-ದುಃಖಗಳನ್ನೂ ಹೇಳಿಕೊಳ್ಳುತ್ತ ಮೂರ್ನಾಲ್ಕು ಬಾಟಲಿಗಳ ಜೊತೆ ದುಂಡು ಕಟ್ಟೆಯ ಸಭೆ ನಡೆಸುವವರಿಗೂ ಪೊಲೀಸರು ಸ್ವಚ್ಛತಾ ಅಭಿಯಾನದ ಪಾಠ ಮಾಡಿದರು. 
ಹೀಗೇ ಐದುನೂರು -ಸಾವಿರ ಜನರಿರುವ ಪುಟ್ಟ ಪಟ್ಟಣವನ್ನು ಪೊಲೀಸರೊ, ಮತ್ಯಾವುದೋ ಅಧಿಕಾರಿಯೋ ತಮ್ಮ ಮಾತುಗಳಲ್ಲಿ, ಸಾಧ್ಯವಾಗದಿದ್ದಲ್ಲಿ ಅಧಿಕಾರ ಚಲಾಯಿಸಿಯಾದರೂ ಕೆಲವು ನಿಯಮಗಳನ್ನು ಪಾಲಿಸುವಂತೆ ಮಾಡುತ್ತಾರೆ. 

ಆದರೆ ಲಕ್ಷಗಟ್ಟಲೆ ಜನರಿರುವ ಮಹಾನಗರಗಳ ಪರಿಸ್ಥಿತಿ ಹಾಗಿಲ್ಲ..! ಅಧಿಕಾರಿಗಳ ಎದುರು  "ನಿಮ್ಮ ಹೈಯರ್ ಆಫೀಸರ್ ಗೊತ್ತು ನನಗೆ..", " ನನಗೂ ಕಾನೂನು ಗೊತ್ತಿದೆ ರೀ.." ಎಂದು ಧ್ವನಿ ಏರಿಸಿ ಮಾತನಾಡುವವ ಅಕ್ಷರಸ್ಥ ನಾಗರೀಕ ಎಂದಿಗೂ ತನ್ನ ತಪ್ಪನ್ನು ಒಪ್ಪಿಕೊಳ್ಳಲಾರ. ಎಷ್ಟೆಂದರೂ ಅವನ ಪ್ರತಿಷ್ಠೆಯ ಪ್ರಶ್ನೆಯಲ್ಲವೇ..!!

'ಬೆಂಗಳೂರು' ಎಂಬ ಮಹಾನಗರಿಯಂತೂ ಬಂದವರನ್ನೆಲ್ಲ ಸ್ವಾಗತಿಸಿ, ಕೋಟಿ ಜನರ ಕನಸುಗಳನ್ನು ತನ್ನೊಡಲೊಳಗೆ ಇರಿಸಿಕೊಂಡು, ಯಾವ ಟ್ರಾಫಿಕ್ ಸಿಗ್ನಲ್ ಅನ್ನೂ ಲೆಕ್ಕಿಸದೇ ಕಾಲದೊಂದಿಗೆ ನುಗ್ಗಿ ಓಡುತ್ತಲೇ ಇದೆ.  
ಸೂಕ್ಷ್ಮವಾಗಿ ಗಮನಿಸಿದರೆ ದಿನವೂ ಓಡಾಡುವ ರಸ್ತೆಯಲ್ಲಿ, ಕ್ಯಾಂಟೀನ್ ಅಲ್ಲಿ, ಬಸ್ ಸ್ಟ್ಯಾಂಡಿನಲ್ಲಿ, ಟ್ರಾಫಿಕ್ ಅಲ್ಲಿ ಲೆಕ್ಕಕ್ಕೆ ಸಿಗದಷ್ಟು ಅನುಭವಗಳು. 
ಕೆಲವೇ ತಿಂಗಳುಗಳ ಹಿಂದೆ ನಡೆದ ಎರಡು ಪುಟ್ಟ ಘಟನೆಗಳು, ಒಂದಕ್ಕೊಂದು ಸಂಬಂಧವಿರದಿದ್ದರೂ ಎಲ್ಲವೂ ಒಂದೇ ರೀತಿ ಎನ್ನುವಂತೆ ಭಾಸವಾಗುತ್ತವೆ. 

1. ಲಲಿತಾ ಆಂಟಿಯ ಉಪದೇಶ 
ಪಕ್ಕದ ಮನೆಯ ಲಲಿತಾ ಆಂಟಿ ಬಾಗಿಲಲ್ಲಿ ನಿಂತು ಮಾತನಾಡಲು ಪ್ರಾರಂಭಿಸಿದರೆ, ಅಂದು ನಮ್ಮ ಬಸ್ ತಪ್ಪಿ ಹೋಗುವುದು ಖಂಡಿತ. ತಮ್ಮ ಮನೆಯ ತಿಂಡಿಯಿಂದ ಪ್ರಾರಂಭವಾಗಿ, ಮೋದಿಯವರ ಭಾಷಣದವರೆಗೂ ಹೋಗುತ್ತಿತ್ತು ಅವರ ಮಾತು. ಆದರೆ ನಾವು ಅವರನ್ನು ಮೆಚ್ಚಲು ಕಾರಣವಿತ್ತು. ಆಂಟಿಯ ಮನೆ ತುಂಬಾ ಕ್ಲೀನ್. ಸ್ವಚ್ಛತೆಯ ವಿಷಯದಲ್ಲಿ ಎಂದಿಗೂ ನೋ ಕಾಂಪ್ರಮೈಸ್ ಎನ್ನುತ್ತಾರೆ ಆಂಟಿ. ಹಾಗಾಗಿ ಅಪ್ಪಿ ತಪ್ಪಿ ಅವರು ನಮ್ಮ ಮನೆಗೆ ಬರುತ್ತಾರೆಂದರೆ ಎಲ್ಲವನ್ನೂ ಒಪ್ಪವಾಗಿರಿಸುತ್ತಿದ್ದೆವು. 
ಎಂದೂ ಬೇಗ ಹೊರಡದ ನಾವು ಅವತ್ತು ಮಾತ್ರ ಆರು ಗಂಟೆಗೆ ಮನೆಯಿಂದ ಹೊರಬಂದೆವು.  ಪಕ್ಕದ ಮನೆಯ ಹಿತ್ತಲಿನ ಕಾಂಪೌಂಡ್ ಒಳಗೆ ತಮ್ಮ ಮೊಮ್ಮಗನ ಡೈಪರ್, ಮತ್ತೊಂದಿಷ್ಟು ಕಸಗಳನ್ನು ಎಸೆದು ತಿರುಗಿದ ಆಂಟಿಗೆ ಎದುರು ಕಂಡಿದ್ದು ನಾವು. ಪಾಪ ಅವರ ಮುಖವೆಲ್ಲ ಹುಳ್ಳಹುಳ್ಳಗೆ.. ಇಷ್ಟು ಬೇಗ ಎದ್ದುಬಿಟ್ರೆನಮ್ಮ.. ಎನ್ನುತ್ತಾ ನಮ್ಮ ಉತ್ತರಕ್ಕೂ ಕಾಯದೆ ಮನೆಯೊಳಗೆ ನಡೆದರು. 
ಸ್ವಚ್ಛವಾಗಿರದಿದ್ದರೆ ಆ ಖಾಯಿಲೆ ಬರುತ್ತದೆ, ಸೋಮಾರಿಯಾಗುತ್ತಾರೆ ಎಂದೆಲ್ಲ ಬಿಟ್ಟಿ ಉಪದೇಶ ಕೊಡುತ್ತಿದ್ದ ಆಂಟಿ ಈಗ ನಮ್ಮನ್ನು ಮಾತನಾಡಿಸಲೂ ಬರುವುದಿಲ್ಲ...!!

2.ನಿಮ್ಮಂಥ ಯುವಕರು ಮನಸ್ಸು ಮಾಡ್ಬೇಕು... 
ಗೆಳೆಯನೊಬ್ಬ ತನ್ನ ಸಾಮಾಜಿಕ ಜಾಲತಾಣದ ಗೋಡೆಯ ಮೇಲೆ ಬರೆದುಕೊಂಡಿದ್ದ. ಆಫೀಸಿನ ಕ್ಯಾಬ್ ಗಾಗಿ ಕಾಯುತ್ತ ನಿಂತಿರುವಾಗ ತನ್ನ ಎಂದಿನ ರೂಢಿಯಂತೆ ಬಬ್ಬಲ್ಗಮ್ ಒಂದನ್ನು ಬಾಯಿಗೆ ಹಾಕಿಕೊಂಡು ಅದರ ಪ್ಲಾಸ್ಟಿಕ್ ಸಿಪ್ಪೆಯನ್ನು ಅಲ್ಲೇ ಇದ್ದ ಕಸದ ಬುಟ್ಟಿಗೆ ಹಾಕಿದ. ಅದು ಬುಟ್ಟಿಯ ಪಕ್ಕದಲ್ಲಿ ಬಿದ್ದಿದ್ದನ್ನು ಅವನು ಗಮನಿಸಲಿಲ್ಲ. ಅಲ್ಲೇ ವಾಕಿಂಗ್ ಮಾಡುತ್ತಿದ್ದ ಹಿರಿಯರೊಬ್ಬರು ತಮ್ಮ ಬಾಯಲ್ಲಿದ್ದ ಪಾನ್ ಮಸಾಲವನ್ನು ರಸ್ತೆಯಲ್ಲೇ ಪಿಚಕಾಯಿಸಿ ಇವನ ಬಳಿ ಬಂದು, "ನಿಮಗೆ ಅಂತಾನೆ ಸ್ವಚ್ಛತೆ ಬಗ್ಗೆ ಇಷ್ಟು ಜಾಗೃತಿ ಮೂಡಿಸ್ತಾ ಇರೋದು. ನಿಮ್ಮಂಥ ಯುವಕರು ಮನಸ್ಸು ಮಾಡ್ಬೇಕು..ರೋಡಿನಲ್ಲಿ ಕಸ ಎಸೀತೀರಾ.. ನಮ್ಮ ಮನೆಗೇ ಬರತ್ತೆ. ನಿಮಗೆಲ್ಲ ಯಾವಾಗ ಬುದ್ಧಿ ಬರುತ್ತೋ ಏನೋ.." ಎಂದು ಧ್ವನಿ ಏರಿಸಿದರು. 
ಅವನು ಹೇಳಿದ್ದು -"ಪ್ಲಾಸ್ಟಿಕ್ ಸಿಪ್ಪೆ, ಅದೂ ಕಸದ ಬುಟ್ಟಿಗೇ ಎಸೆದಿದ್ದು.  ಸ್ವಚ್ಛತೆಯ ಪಾಠ ಮಾಡಲು ಮಹಾನುಭಾವರೊಬ್ಬರು ಪಾನ್ ಮಸಾಲಾವನ್ನು ರಸ್ತೆಯ ಮಧ್ಯ ಉಗುಳಿದರು. ಪಾಪ, ಅದು ಅವರ ಪಾಠದಲ್ಲಿರಲಿಲ್ಲವೇನೋ...!"

ಹೀಗೇ ಉಪದೇಶ ಕೊಡುವವರು ಬೀದಿಯಲ್ಲೊಬ್ಬರು ಸಿಗುತ್ತಾರೆ. ಹಿರಿಯರ ಮಾತನ್ನು ನಾವು ನಿರ್ಲಕ್ಷಿಸುತ್ತೇವೆ ಎಂದಲ್ಲ, ಅವರೇ ತಮ್ಮ ಮಾತಿನಂತೆ ನಡೆಯುವುದಿಲ್ಲ ಎಂದಾದಲ್ಲಿ ಇನ್ಯಾರು ಕೇಳುತ್ತಾರೆ? 
ಕೆಲವು ದಿನಗಳ ಹಿಂದೆ ಬಿ.ಎಂ.ಟಿ.ಸಿ. ಬಸ್ಸಿನಲ್ಲಿ ಆಂಟಿಯೊಬ್ಬರು ಬ್ಯಾಗಿನಲ್ಲಿದ್ದ ಕಾಗದ ಕಸಗಳನ್ನೆಲ್ಲ ಹೆಕ್ಕಿ ತೆಗೆಯುತ್ತಿದ್ದರು. ಪಾಪ ಅವರ ವ್ಯಾನಿಟಿ ಬ್ಯಾಗ್ ಸ್ವಚ್ಛ ಮಾಡಲು ಮನೆಯಲ್ಲಿ ಸಮಯವಿರಲಿಲ್ಲವೇನೋ..! ಕಿಟಕಿಯ ಪಕ್ಕ ಕುಳಿತ ನಮಗೆ ಕೊಟ್ಟು ಹೊರಗೆ ಎಸೆಯಿರಿ ಎಂದರು. ಏನೂ ಮಾತನಾಡದೆ ನನ್ನ ಬ್ಯಾಗಿನಲ್ಲಿ ಹಾಕಿಕೊಂಡೆ. "ಓಹ್ಹೋ ಸ್ವಚ್ಛ ಭಾರತಾನಾ.. ಈಗ ಇದೊಂದು ಜೋರಾಗಿಬಿಟ್ಟಿದೆ. ಪರವಾಗಿಲ್ಲ. ನಿಮ್ಮಂಥವರು ಮನಸು ಮಾಡಿದರೆ ಬೆಂಗಳೂರನ್ನು ಸ್ವಚ್ಛಗೊಳಿಸಬಹುದು" ಎಂದು ಹೇಳಿ ಬಸ್ ಇಳಿದುಬಿಟ್ಟರು ಆಂಟಿ. ಹಾಗಾದರೆ ನಾವು ಬೆಂಗಳೂರಲ್ಲಿ ಇರೋವ್ರ ಎಲ್ಲರ ಬ್ಯಾಗಿನಿಂದ ಕಸ ತಗೊಂಡು ನಮ್ಮ ಬ್ಯಾಗಲ್ಲಿ ಇಟ್ಕೋಳೋದ?  ಅದ್ರಿಂದ ಬೆಂಗಳೂರು ಸ್ವಚ್ಛ ಆಗತ್ತಾ ಈ ಆಂಟಿ ಪ್ರಕಾರ?  ಅಂತಾ ನಾವೂ ಮಾತನಾಡಿಕೊಂಡೆವು...!
ನಮ್ಮ ಏರಿಯಾದ ಕೆಲವು ಮನೆಗಳ ಮುಂದೆ ಬಣ್ಣ ಬಣ್ಣಗಳ ಬೋರ್ಡ್ ಇದೆ. 'ಇಲ್ಲಿ ಕಸ ಹಾಕುವಂತಿಲ್ಲ', 
'ಗಾಡಿ ನಿಲ್ಲಿಸುವಂತಿಲ್ಲ',..ಇವೆಲ್ಲ ಸರಿ. 


'ಇಲ್ಲಿ ನಿಮ್ಮ ನಾಯಿಯ ಹೊಲಸು ಮಾಡಿಸಿದರೆ ಐದುನೂರು ರೂಪಾಯಿ ಕೊಡಬೇಕಾಗುವುದು. ಎಚ್ಚರಿಕೆ!!'.. ಈ ಬೋರ್ಡ್ ನೋಡಿ ಸಣ್ಣ ಅನುಮಾನವಿತ್ತು. ಈ ಮನೆಯ ಯಜಮಾನ ನಾಯಿಯ ಮಲಕ್ಕೆ ದಂಡ ವಿಧಿಸುತ್ತಿದ್ದಾನೆಯೇ ಅಥವಾ ಶುಲ್ಕ ಪಡೆಯುತ್ತಿದ್ದಾನೆಯೇ..?!!
ಏನು ಮಾಡಿದರೂ ಲಾಭವೇ. ವಿಶೇಷ ತಳಿಯ ನಾಯಿಗಳನ್ನು ಸಾಕಿ,  ಅವುಗಳನ್ನು ವಾಕಿಂಗ್ ನೆಪದಲ್ಲಿ ಹೊರಗೆ ಕರೆತಂದು ಇನ್ನೊಬ್ಬರ ಮನೆಯ ಜಾಗದಲ್ಲಿ ಬಹಿರ್ದೆಸೆ ಮಾಡಿಸುವ ಜನರ ನಡುವೆ ಒಬ್ಬ ಹೀಗೂ ಹಣ ಮಾಡಲು ಯೋಚಿಸಿರಬಹುದು. ಹೇಳಿ ಕೇಳಿ ಮನುಷ್ಯ ಬುದ್ಧಿ ಜೀವಿಯಲ್ಲವೇ..? !!

ನನ್ನ ಮನೆ ಸ್ವಚ್ಛವಿರಬೇಕು ಎಂದು ಪಕ್ಕದ ಮನೆಗೆ ಕಸ ಎಸೆದರೆ, ಮನೆ ಸುಂದರವಾಗಿ ಕಾಣಬಹುದು..ಮನಸ್ಸಲ್ಲ..!
ಮೊದಲು ಮನಸ್ಸು ಸ್ವಚ್ಛವಾಗಬೇಕು-  ನಂತರ  ಮನೆ, ಊರು, ರಾಜ್ಯ ದೇಶ ಎಲ್ಲವೂ ಸ್ವಚ್ಛವಾಗುತ್ತದೆ. 




Wednesday, July 1, 2020

ಬಿಂಬದ ಲೋಕ

ಹೇಳೆ ಪುಟ್ಟ ಹಕ್ಕಿ , 
ಕಾಡ ಬಿಟ್ಟು ನಾಡಿಗೆ ಬಂದೆಯೇಕೆ.. 
ಕಾಳು -ಹುಳುಗನ್ನರಸುತ್ತ, ಊರೂರುಗಳ ಸುತ್ತುತ್ತಿದ್ದೆ 
ನಿನ್ನ ಕಂಡು ಬಂದೆ ಗೆಳತಿ.. 

ಹೌದೇನು ಪುಟ್ಟ ಹಕ್ಕಿ, 
ಎಷ್ಟು ಕಾಳು ದೊರೆತವು? 
ಏನಿಲ್ಲವೇ ಗೆಳತಿ, ನಿಮಗೇ ಇಲ್ಲದ್ದು 
ನನಗೆಲ್ಲಿಂದ ಸಿಗಬೇಕು? 

ಅಯ್ಯೋ ಪುಟ್ಟ ಹಕ್ಕಿ, 
ಕನ್ನಡಿಯಲೇನು ಇಣುಕುತಿದ್ದೆ? ನೀನಂತೂ ಸುಂದರಿಯೇ.. 
ಒಳಗೊಂದು ಆಹಾರದ ಲೋಕ ಇರಬಹುದೆಂಬ ಆಶೆ ಇಂದ ನೋಡಿದೆ ಗೆಳತಿ.. 

ಪಾಪದ ಪುಟ್ಟ ಹಕ್ಕಿಯೇ, 
ಈ ಲೋಕದ ಬಿಂಬವದು.. ನೀನೆ ಇರುವೆ ನೋಡಲ್ಲಿ.. 
ಹೌದಲ್ಲ ಗೆಳತಿ, ಅಲ್ಲಿಯೂ ನಾನೇ ಇರುವೆ.. 

ಅದೇ ಹಸಿವು, ಅದೇ ಕನಸು, ಎಲ್ಲ ಅದೇ ಕಾಣುತಿದೆ 
ಗೆಳತಿ.. ಒಂದು ಲೋಕದ ಹಸಿವೆಯೇ ಇಷ್ಟು..
 ಮತ್ತೆ ಬಿಂಬದ ಲೋಕವೇಕೆ? 
ಪುಟ್ಟ ಹಕ್ಕಿ, ನಮ್ಮ ಹಸಿವನ್ನು ನಮಗೆ ಕಾಣಿಸಲು ಬಿಂಬ ಬೇಕು.. 
ಬೆನ್ನ ಹಿಂದಿನ ಬೇಟೆಗಾರ ಎದುರು  ಕಾಣಲು  ಬಿಂಬ ಬೇಕು..   

ನಾಡಿಗೆ ಬಂದು ತಪ್ಪು ಮಾಡಿದೆನಾ ಗೆಳತಿ? 
ಈ ಲೋಕ, ಬಿಂಬದ ಲೋಕ ಎರಡರಲ್ಲೂ ಬೇಟೆಗಾರ... 
 ಪುಟ್ಟ ಹಕ್ಕಿಯ ತಲೆ ಸವರುತ್ತ, 
ಹೌದು ಬಡಪಾಯಿ, ನೀನೆ ಇಲ್ಲಿ ಆಹಾರವಾಗುವ ಮೊದಲು, ಹೊರಟುಬಿಡು ಕಾಡಿನತ್ತ.. 

ಮತ್ತೆ ನೋಡಿತು ಪುಟ್ಟ ಹಕ್ಕಿ ಬಿಂಬದ ಲೋಕವ, 
ಬೇಡವೆನಗೆ ಈ ಬಿಂಬದ ಮೋಹ.. 
ಕಾಡಿಗೆಯ ಕಣ್ಣು, ಕೆಂಪನೆಯ ತುಟಿ, 
ಮೂರಿಂಚಿನ ಬಣ್ಣಗಳೆಲ್ಲ ಇವರಿಗೇ ಸರಿ.. 
ಬಿಂಬದ ಮಾಯೆ ಮನುಜನಿಗೆ ಮಾತ್ರ.. 
ಎನ್ನುತ್ತಾ ಹಾರಿತು ಗಗನಕ್ಕೆ...

(ಗಾಡಿಯ ಕನ್ನಡಿ ಬಳಿ ಕುಳಿತ ಹಕ್ಕಿಯೊಡನೆ ಮಾತುಕತೆ ಹೀಗಿರಬಹುದೆಂಬ ಕಲ್ಪನೆ)

(ಚಿತ್ರ : ಪೂರ್ಣಚಂದ್ರ ಹೆಗಡೆ)
 
 

ಹೆಣ್ಣು