Thursday, July 16, 2020

ಮಳೆ..

(ಇವತ್ತಿನ ಮಳೆ ಇದನ್ನೆಲ್ಲಾ ಬರೆಸಿದೆ. ನನ್ನ ಮನೆಯ ಸುತ್ತ ಮುತ್ತ ಕಾಣುವುದು ಮಾತ್ರವೇ ಇದೆ ಇಲ್ಲಿ..)
ಎಂಥ ಮಳೆ ಮಾರಾಯ್ರೆ ಇದು.. 
ಅತ್ಲಾಗೆ ಕರೆಂಟು ಇರಾಕಿಲ್ಲ.. 
ಇತ್ಲಾಗೆ ನೆಟ್ವರ್ಕ್ ಬರಾಕಿಲ್ಲ.. 

ಆದ್ರೂ........ 
ಮಳೆ ಅಂದ್ರೆ ಮಳೆ..... ಗದ್ದೆಗಳೆಲ್ಲ ತುಂಬಿ ಹರೀತಾ ಇದೆ.. ಮೇಲಿನ ಗದ್ದೆಯಿಂದ ಕೆಳಗಿನ ಗದ್ದೆಗೆ ಬೀಳುವ ನೀರು ಉದ್ದದ ಜಲಪಾತದ ರೀತಿಯಲ್ಲಿ ಕಾಣ್ತಿದೆ.  ಹಳ್ಳದಲ್ಲಿ ತುಂಬಿದ ಕೆಂಪು ನೀರು ಕೊಡಲಲ್ಲಿ (ಗದ್ದೆಗಳ ಕೊನೆಯಲ್ಲಿ ನೀರು ಹರಿಯಲು ಸ್ವಲ್ಪ ಆಳಕ್ಕೆ ತೋಡಿರುವುದಕ್ಕೆ ನಮ್ಮ ಊರ ಕಡೆ ಕೊಡಲು ಎನ್ನುತ್ತೇವೆ!)  ಹರಿಯುತ್ತಾ ಮಧ್ಯೆ ಎತ್ತರಕ್ಕೆ ಸೊಕ್ಕಿನಿಂದ ಬೆಳೆದು ನಿಂತ ಅಚ್ಚ ಹಸಿರ ಹುಲ್ಲನ್ನು ತಲೆಬಾಗಿಸಿದೆ. ಹೊಳೆಯ ಸೇರುವ ಧಾವಂತದಲ್ಲಿ ತನ್ನ ವೇಗವನ್ನು ಹೆಚ್ಚಿಸಿ,  ಕಸವನ್ನೆಲ್ಲ ತನ್ನೊಳಗೆ ತುಂಬಿಕೊಳ್ಳುತ್ತ, ಬೇಸಿಗೆಯಲ್ಲಿ ಕೊಳ್ಳದ ಪಕ್ಕ ಉದುರಿದ ಮಾವಿನೆಲೆಗಳನ್ನೆಲ್ಲ ದೂಡುತ್ತಾ ಮುಂದೆ ಸಾಗುತ್ತದೆ.  ನಾವು ತಿಂದೂ,  ಮರದಲ್ಲಿ ಉಳಿದ ಹಲಸಿನ ಹಣ್ಣು, ಕೊನೆಗೆ ತೊಟ್ಟು ಕಳಚಿ ನೆಲಕ್ಕೆ ಪಚ್ಚ್ ಎಂದು ಬಿದ್ದು ರಾಡಿಯಾಗಿ ಸುತ್ತ ನಾಲ್ಕು ದಿಕ್ಕಿಗೂ ಘಮ (ಅತ್ತ ಗಳಿತ ಹಣ್ಣಿನ ಪರಿಮಳವೂ ಅಲ್ಲದ, ಇತ್ತ ಕೊಳೆತ ಹಣ್ಣಿನ ವಾಸನೆಯೂ ಅಲ್ಲದ) ತುಂಬಿಸುತ್ತದೆ. ಅಲ್ಲೆಲ್ಲೋ ನಾಲ್ಕಾರು ನಂಜುಳಗಳು ಸುತ್ತುತ್ತವೆ. ಉಂಬಳಗಳು ತಾವಿನ್ನೂ ಅಸ್ತಿತ್ವದಲ್ಲಿದ್ದೇವೆ ಎಂದು ರಕ್ತ ಹೀರುತ್ತವೆ. ಮನೆಯಲ್ಲಿರುವವರ ಸೌಖ್ಯ ವಿಚಾರಿಸಲು ಬಸವನಹುಳು, ಚೋರಟೆಗಳೆಲ್ಲ ಲಗ್ಗೆ ಇಡುತ್ತವೆ. ಹಳ್ಳದ ತುದಿಯಲ್ಲಿ ಕಪ್ಪೆಗಳ ಸಾಮ್ರಾಜ್ಯ ವಟರ್ ಗುಟರ್ ಎನ್ನುತ್ತಿರುತ್ತವೆ. ಸಂಜೆಯಾಗುವ ಮುನ್ನವೇ ಸೂರ್ಯ ಗುಡ್ ಬೈ ಹೇಳುತ್ತಾನೆ. ಬೆಳಗಿನಿಂದ ಸಣ್ಣದಾಗಿ ಹಾಡುತ್ತಿರುವ ಜೀರುಂಡೆಗಳು ತಮ್ಮ ಧ್ವನಿಯೇರಿಸುತ್ತವೆ. ಭತ್ತ ನಾಟಿ ಮಾಡುವವರು ಅಲ್ಲಲ್ಲಿ ಮೀನಿನ ಅಂಡೆ ಹಾಕಿದ್ದು, ಸಣ್ಣ ಮೀನು ಸಿಕ್ಕರೂ ರಾತ್ರಿಯ ಚಳಿಗೆ ಒಳ್ಳೆ ಊಟ ಎಂದು ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಅಲ್ಲಲ್ಲಿ ಕಾಣುವ ಕಂಬಳಿ ಕೊಪ್ಪೆ, ಬಣ್ಣ ಬಣ್ಣದ ಪ್ಲಾಸ್ಟಿಕ್ ಕೊಪ್ಪೆ, ಹರಿದ ರೈನ್ ಕೋಟು,ತೂತು ಬಿದ್ದ ಛತ್ರಿ...  ಇವೆಲ್ಲವನ್ನೂ ಮಾತಾಡಿಸಿ ಕೊಡಲಿನ ನೀರು ಹೊಳೆಗೆ ಸೇರುವಾಗ ಇಳಿಜಾರಿನಲ್ಲಿ ಧಾರೆಯಾಗುತ್ತದೆ. ಅಲ್ಲೇ ಪಕ್ಕದಲ್ಲಿದ್ದ ನೇರಳೆ ಮರದ ಮೇಲೆ ನೆಲದತ್ತ ಮುಖ ಮಾಡಿದ ಸೀತಾಳೆ ಹೂವು ಸಣ್ಣಗೆ ನಗುತ್ತದೆ. ಹೊಳೆಯಾಚೆ ಅರಳಿ ನಿಂತ ಅಣಬೆ ಮುದುಡಿ ನೆಲವನ್ನಪ್ಪುತ್ತದೆ.

ಬಚ್ಚಲ ಒಲೆ ಮಾತ್ರವೇ ಬೆಚ್ಚಗೆ !
ಆ ಜಾಗ ಎಂದಿಗೂ ನಮ್ಮನೆಯ ಬೆಕ್ಕಿಗೆ...!!

Tuesday, July 14, 2020

ಅಮ್ಮಾ..


ಅಮ್ಮಾ.. 
ನೀನು ನಂಜೊತೆ ಇರ್ಬೇಕಿತ್ತಮ್ಮ.. 
ಅಥವಾ ನಾನು ನಿನ್ನೊಳಗೆ ಇರ್ಬೇಕಿತ್ತು.. 

ರಾತ್ರಿ ಭಯವಾಗುತ್ತಮ್ಮಾ.. 
ಬೆಳಕು ಬೇಕು ಅಂತಾ ದೀಪ ಹಚ್ತೀನಿ.. 
ಕಿಟಕೀಲಿ ಕೈಯ ನೆರಳು ಕಾಣುತ್ತಮ್ಮ.. 
ಯಾರೋ ಕಿಟಕಿನಾ ಪಟಪಟ ಅಂತಾ ಬಡಿದಾಗೆ ಆಗತ್ತಮ್ಮ... 
ಯಾರಮ್ಮ ಅದು ಗುಮ್ಮಾನಾ? 

ಮಳೆ ಜಡಿ ಸೀರುತ್ತಮ್ಮ.. 
ಚಳಿ ಆಗತ್ತೆ ಅಂತಾ ಬಟ್ಟೆ ಹೊದ್ಕೋತೀನಿ.. 
ಕಿಟಕಿ ಹಾಕೋಕೆ ಅಂತಾ ಮುಂದೆ ಹೋಗ್ತೀನಮ್ಮ.. 
ಗುಮ್ಮನ ಕೈ ಒಳಗೇ ಬಂದು ನನ್ನ ಹಿಡಿಯೋಕೆ ನೋಡ್ದಾಗ ಹೊಟ್ಟೆ ಒಳಗಿಂದ ನಡುಕ ಬರುತ್ತಮ್ಮ.. 
ಯಾಕಮ್ಮ ಅದು ಚಳಿಗಾ? 

ಅಮ್ಮ.. ಈಗ 
 ನೀನು ನಂಜೊತೆ ಇರ್ಬೇಕಿತ್ತಮ್ಮ.. 
ಅಥವಾ ನಾನು ನಿನ್ನೊಳಗೆ ಇರ್ಬೇಕಿತ್ತು.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು) 
(ಬಹಳ ಕಾಡಿದ ಚಿತ್ರವಿದು...)


ಎದುರು ನೀನೇ ಇರ್ಬೇಕು ಕಣೋ...


ಹೇ ಹುಡುಗ.. 
ಅದೇನು ಬರೆಯಲೋ?  ಅದೆಷ್ಟು ಕಾಡ್ತಿಯಾ ನೀನು ಗೊತ್ತಾ?  ಹೃದಯದ ಪಿಸುಮಾತು ಗಡಿಯಾರದ ಮುಳ್ಳಿನ ಶಬ್ದಕ್ಕೆ ಕಾಂಪಿಟೇಷನ್ ಕೊಡುವಂತಿದೆ.. ಅದೆಷ್ಟು ಸಾಲು ಗೀಚಿ,  ಸರಿ ಕಾಣದೇ, ಹಾಳೆ ಹರಿದು ಎಸೆದಿದ್ದೇನೆ ಗೊತ್ತಾ?  
ನೀನು ಗಿಫ್ಟ್ ಕೊಟ್ಟ ಪೆನ್ನಲ್ಲೇ ಬರೀತಾ ಇದ್ದೀನಿ ಕಣೋ.. ಮನಸೇ ಇರಲಿಲ್ಲಾ ಗಿಫ್ಟ್ ಪ್ಯಾಕ್ ತೆರೆಯೋಕೆ..ನಿನ್ನ ಬೆರಳಚ್ಚು ಹೋಗಿಬಿಟ್ಟರೆ ಎಂಬ ಭಯ.. ನಿನ್ನ ಘಮ ಅದರೊಳಗಿತ್ತಲ್ಲ.. ಆವರಿಸಿಬಿಟ್ಟಿದೆ ಈಗ ಕೋಣೆಯೊಳಗೆಲ್ಲ.. 
ಈ ಪೆನ್ನ ಶಾಯಿಯನ್ನ ಖರ್ಚು ಮಾಡೋಕೆ ಮನ್ಸಿಲ್ಲ ಕಣೋ.. ನಿನ್ನ ಪ್ರೀತಿ ಅದರೊಳಗಿದೆಯಲ್ಲ.. 
ಆದ್ರೆ ಮನಸಲ್ಲಿ ಇರೋ ಶಬ್ದಗಳಿಗೆ ಒಂದು ರೂಪ ಕೊಡ್ಬೇಕಲ್ಲ.. 
ಹೇ ಹುಡುಗ, ಈ ಮಂದ ಬೆಳಕಲ್ಲಿ ಸ್ಪಷ್ಟವಾಗಿ ಕಾಣಿಸ್ತಾ ಇದಿಯಾ ಕಣೋ.. 
ಲೋಲಾಕಿನ ಕೆಳಗಿನ ಮಣಿ ಇದೆ ನೋಡು.. ಬಹಳ ಇರ್ರಿಟೇಟ್ ಮಾಡುತ್ತೆ.. ಅದು ಅಲುಗಾಡುತ್ತಲ್ಲ.. ಕೆಲವೊಮ್ಮೆ ಹಿಂದಿನಿಂದ ನಿನ್ನ ಉಸಿರೇ ಸೋಕಿದ ಅನುಭವ ಕಣೋ.. 
ಇತ್ತೀಚಿಗೆ ಆರಾಮ ಅನ್ನೋದೇ ಇಲ್ಲಾ ಕಣೋ.. ಕುರ್ಚಿಯ ತುದಿಯಲ್ಲಿ ಕುಳಿತಿರ್ತೀನಿ..  ಬಕಪಕ್ಷಿಯಂತೆ ಕಾಯ್ತಾ... ಒಳಗೊಳಗೇ ಅದೇನೋ ಬಯಕೆ..
ಹೇ ಹೋಗೋ.. ಹೇಳೋಕಾಗಲ್ಲ.. 
ಅಕ್ಷರಗಳು ವಕ್ರವಾಗಿವೆ, ಒಳಗಿನ ಭಾವನೆ ಸ್ಪಷ್ಟವಾಗ್ತಿಲ್ಲ. 
ಇದಕ್ಕೆಲ್ಲ ನೀನೇ ಎದುರು ಇರ್ಬೇಕು ಕಣೋ... 
ಹೇ ಹುಡುಗ, 
ಎದುರು ನೀನೇ ಇರ್ಬೇಕು...

(ಚಿತ್ರಕ್ಕೆ ಬರೆದ ಸಾಲುಗಳು)

ಮತ್ತೆ ಕಾಡಿದ ಮಳೆಯ ನೆನಪು -2

ನೀಲಕೂಟದ ಯಶೋದಮ್ಮ - ದೇವಪ್ಪನ ಮೊದಲ ಪುತ್ರಿ 'ಸುಲೋಚನಾ'. ಅವಳಿಗಿಂತ ನಾಲ್ಕು ವರ್ಷ ಕಿರಿಯವಳು ನಯನಾ. ಎರಡನೇ ತರಗತಿಗೇ ಅಕ್ಕ ತಂಗಿಯರು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹಾಡಿದ್ದರು!     ಈ ನಾಲ್ವರ ಜೊತೆಗೆ ದೇವಪ್ಪನ ತಮ್ಮ ಮಾಧವನೂ ಇದ್ದ. ಅಣ್ಣನ ಮಾತನ್ನು ಮೀರದ, ಅತ್ತಿಗೆಯನ್ನು ಬಹಳ ಗೌರವಿಸುವ ಮಾಧವನಿಗೆ, ಊಟ ತಿಂಡಿ ಎಲ್ಲದಕ್ಕೂ ಮಕ್ಕಳಿರಬೇಕಿತ್ತು. "ಸುಲೋಚ್ನಾ..ನ್ಯಾನಾ.." ಎನ್ನುತ್ತಲೇ ಇರುತ್ತಿದ್ದ. ಚಿಕ್ಕಪ್ಪನೆಂದರೆ ಮಕ್ಕಳಿಗೂ  ಬಲು ಪ್ರೀತಿ. ಅಪ್ಪನ ಗಂಟು ಮುಖವನ್ನು ಕಂಡು ಭಯಕ್ಕೋ, ತಮ್ಮನ್ನು ಚಿಕ್ಕಪ್ಪ ಅಕ್ಕರೆಯಿಂದ ಕಾಣುತ್ತಾನೆ ಎಂಬ ಕಾರಣಕ್ಕೋ ಮಾಧವನ ಬೆನ್ನಿಗೆ ಅಂಟಿಕೊಂಡೇ ಇರುತ್ತಿದ್ದರು.
 "ನೀನು ಹಿಂಗೇ ಮುದ್ದು ಮಾಡು ಅವ್ರಿಗೆ.. ಏನು ಹೇಳಿದ್ರೂ ಕೇಳ್ತಿಯಲ್ಲ.. ಮಧು ಸ್ವಲ್ಪ ಕೆಲ್ಸ-ಗಿಲ್ಸ ಕಲಿಲಿ ಅವ್ರು..ದಿನಾ ಗದ್ದೆಗೆ ಕರ್ಕೊಂಡು ಹೋಗ್ಬೇಡ. ಇಡೀ ದಿನ ಆಟ, ಊಟ ಅಂತಾನೆ ಕಳೀತಾರೆ..."
"ಅಣ್ಣಾ..ಮುಂದೆ ಮದ್ವೆ ಆಗಿ ಹೋದ್ಮೇಲೆ ಹೀಗೆ ಇರೋಕೆ ಆಗತ್ತಾ..ಪಾಪ ಖುಷಿಯಾಗಿರ್ಲಿ ಬಿಡು.."
ಏನೂ ಮಾತಾಡದೆ ಒಳಗೆ  ಹೋಗುತ್ತಿದ್ದ ದೇವಪ್ಪ. ದಿನವೂ ಇದೇ ಕಥೆ ! ಚಿಕ್ಕಪ್ಪ ತನ್ನ ಪರವಾಗಿದ್ದಾನೆ ಎಂದಾಗ ಇವರಿಬ್ಬರ ಹಾರಾಟ ಇನ್ನೂ ಜಾಸ್ತಿಯಾಗುತ್ತಿತ್ತು...!!

ನೀಲಕೂಟ ಅತ್ತ ಗ್ರಾಮವೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಸುಮಾರು ಎಪ್ಪತ್ತು ಮನೆಗಳು ಇರಬಹುದಾದ ಊರು. ಭತ್ತ ಮುಖ್ಯ ಬೇಸಾಯ. ಅಂದರೆ ಮಳೆಯ ಬೆಳೆ..! ಇಡೀ ಊರಲ್ಲಿ ಐದಾರು ಮನೆಗಳಲ್ಲಿ ಮಾತ್ರ ನಾಲ್ಕು ಎಕರೆಗೂ ಜಾಸ್ತಿ ಗದ್ದೆ ಇತ್ತು. ಅಣ್ಣ ತಮ್ಮಂದಿರ ಜಮೀನು ಇನ್ನೂ ಭಾಗವಾಗದ ಕಾರಣ ದೇವಪ್ಪನ ಮನೆಯೂ ಆ ಐದಾರು ಮನೆಗಳ ಸಾಲಿನಲ್ಲಿ ಸೇರಿತ್ತು!
ಮಾಧವ ಗದ್ದೆಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದ. ದೇವಪ್ಪನಿಗೆ ಅತ್ತ ಸುಳಿಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. 
ಊರ ನಡುವೆ ನಾಲ್ಕಾರು ಅಂಗಡಿಗಳಿದ್ದವು. ಅವುಗಳ ಮಧ್ಯೆ ದೇವಪ್ಪನದೂ ಒಂದು ಕಿರಾಣಿ ಅಂಗಡಿ ಇತ್ತು. ಊರಲ್ಲಿ ಸಣ್ಣಕ್ಕಿಯ ದಲ್ಲಾಳಿ ಅವನೊಬ್ಬನೇ ಆದ ಕಾರಣ 'ಸಣ್ಣಕ್ಕಿ ಪಟೇಲ್ರು..' ಎಂದೇ ಎಲ್ಲರೂ ಕರೆಯುತ್ತಿದ್ದರು. 
"ಪಟೇಲ್ರೆ..ಒಂದು ಗಂಡು ಬೇಕ್ರಲಾ.. ಎಷ್ಟೆಲ್ಲಾ ಮಾಡಿಟ್ಟಿರಿ.. ನಿಮ್ಮ ನಂತ್ರ ಇದ್ಕೆಲ್ಲ ದಿಕ್ಕು ಅಂತಾ ಬೇಡ್ವೆನ್ರ? " ಎಂಬ ಮಾತನ್ನು ಕೇಳುವವರೆಗೆ ಮನೆಯಲ್ಲಿ ಕೊರತೆ ಎಂದು ಏನೂ ಇರಲಿಲ್ಲ... !
ರಾತ್ರಿ ಕೋಣೆಯಲ್ಲಿ ಅಪ್ಪನ ತಾರಕದ ಸ್ವರ, ಅಮ್ಮನ ಬಿಕ್ಕಳಿಕೆ ಎರಡೂ ಕೇಳಿತ್ತು. 
"ಕೆಲಸದವರ ಮಾತನ್ನೂ ಕೇಳುವಂತಾಯಿತಲ್ಲ" ಎಂದು ಗೊಣಗಿಕೊಂಡ ದೇವಪ್ಪ..! ಅಂಗಡಿಗೆ ಬಂದವರೆಲ್ಲ ನಾರು, ಬೇರು, ಸೊಪ್ಪು, ಕಷಾಯ, ಪಾನಕ ಹೇಳುವ ವೈದ್ಯರಾದರು. ಎಲ್ಲದರ ಪ್ರಯೋಗವೂ ನಡೆದಿತ್ತು. 
  ಇಷ್ಟೆಲ್ಲಾ ನಡೆಯುವಾಗ ಸುಲೋಚನೆಗೆ ಹದಿನಾರು ತುಂಬಿತ್ತು..! ಪಾಪ,  ಸಮಯವೆಲ್ಲಿ ಅವಳಿಗೆ? ತಿಂಗಳಲ್ಲಿ ಮೂರು ದಿನ ಹೊರಗೆ ಕೂರಬೇಕು, ಉಳಿದ ದಿನ ಅಡುಗೆ,  ಮನೆಯ ಕೆಲಸ, ಕೊಟ್ಟಿಗೆಯ ಕೆಲಸ, ಯಾರೋ ಹೇಳಿದ ಔಷಧಿಯನ್ನು ಅಮ್ಮನಿಗೆ ಮಾಡಿಕೊಡುವುದರಲ್ಲಿಯೇ ಸಮಯ ಹೋಗುತ್ತಿತ್ತು. ನಯನಳೂ ಮೊದಲಿನಂತೆ ಅಕ್ಕನೊಡನೆ ಜಗಳವಾಡುವುದನ್ನು ಬಿಟ್ಟು, ಅವಳ ಕೆಲಸಗಳಿಗೆ ನೆರವಾಗುತ್ತಿದ್ದಳು. 
ಚಿಕ್ಕಪ್ಪನೊಡನೆ ಗದ್ದೆಗೆ ಹೋಗುವುದು ಹಾಗಿರಲಿ, ಮನೆಯಿಂದಾಚೆ ಕಾಲಿಡುತ್ತಿರಲಿಲ್ಲ. ಅಮ್ಮನೊಡನೆ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಮಾತ್ರ ತಪ್ಪದೇ ಹೋಗುತ್ತಿದ್ದರು. 
ಹೀಗೆ ಒಮ್ಮೆ ಹೋದಾಗ ಯಾರೋ ಹೇಳಿದರು - " ಶಿವಪುರದ ಶಿವ ಭಾಳ ಶಕ್ತಿದೇವ್ರು.. ಏನಾದ್ರು ಹೇಳ್ಕೊಂಡ್ರೆ ಖಂಡಿತಾ ಈಡೇರುತ್ತೆ.ಒಂದು ಹರಕೆ ಹೇಳ್ಕೊಬಿಡಿ..." ಅಲ್ಲೇ ಹರಕೆ ಹೇಳಿಕೊಂಡಳು ಯಶೋದಮ್ಮ. 
ಔಷಧಿ ಎಲ್ಲಾ ಆಯ್ತು.. ಇನ್ನು ಹರಕೆ ಶುರುವಾಯ್ತು.. ಎಂದು ಅಕ್ಕ ತಂಗಿ ಮುಖ ನೋಡಿಕೊಂಡರು..!
ಕಾಕತಾಳಿಯವೋ ಎಂಬಂತೆ ಮರುವರ್ಷ ಯಶೋದಮ್ಮ ಗರ್ಭಿಣಿ ! ಅಮ್ಮ ಒಂದೇ ಒಂದು ಕೆಲಸವನ್ನೂ ಮಾಡಲು ಬಿಡಲಿಲ್ಲ ಯಶೋದಮ್ಮ. ಅವಳಿಗೆ ಮಾಡಲು ಸಾಧ್ಯವಾಗುತ್ತಲೂ ಇರಲಿಲ್ಲ ! 
ಜೋರು ಮಳೆಗಾಲದ ಒಂದು ಸಂಜೆ ಯಶೋದಮ್ಮನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಆಗಿನ್ನೂ ಎಂಟು ತಿಂಗಳ ಬಸುರಿ ಅವಳು. ಅಪ್ಪ ಅಂಗಡಿಯಲ್ಲಿದ್ದಾನೆ, ಚಿಕ್ಕಪ್ಪ ಗದ್ದೆಯಿಂದ ಇನ್ನೂ ಬಂದಿಲ್ಲ. ಅಮ್ಮ ನೆಲದ ಮೇಲೆ ಒದ್ದಾಡುತ್ತಿದ್ದಾಳೆ. ಅವಳನ್ನು ನೋಡಿ ನಯನಾ ಬಿಕ್ಕುತ್ತಿದ್ದಾಳೆ. 
ಸುಲೋಚನೆ ಒಂದು ನಿಮಿಷ ಏನೂ ತೋಚದಂತೆ ನಿಂತುಬಿಟ್ಟಳು. ಊರ ಕೊನೆ ಮನೆಯ ಸೂಲಗಿತ್ತಿ ಶಾಂತಾಳನ್ನು ಕರೆತರಲು ನಯನಾಳನ್ನು ಓಡಿಸಿದಳು. 

ಧೋ ಎಂದು ಸುರಿಯುವ ಮಳೆ. ಏನೂ ಮಾಡುವಂತೆ ಇರಲಿಲ್ಲ. ಹೋಗಿ ಅಮ್ಮನ ಕೈ ಹಿಡಿದು ಕಣ್ಮುಚ್ಚಿ ಕುಳಿತಳಷ್ಟೇ..! ಧಾರಾಕಾರವಾಗಿ ನೀರು ಕೆನ್ನೆಯ ಮೇಲೆ ಇಳಿಯುತ್ತಿತ್ತು. 
ನಯನಾ ಶಾಂತಾಳನ್ನು ಕರೆದುಕೊಂಡು ಬಂದಳು. 
"ಪಟೇಲಮ್ಮ.. ಏನೂ ಆಗಲ್ಲ.. ನಾ ಬಂದೀನಿ.." ಎನ್ನುತ್ತಾ ಒಳಹೊಕ್ಕಳು. ನಯನಾ ಮತ್ತೆ ಓಡಿದಳು, ಅಪ್ಪ ಚಿಕ್ಕಪ್ಪರನ್ನು ಕರೆತರಲು..
ಸುಲೋಚನೆಗೆ ಅಮ್ಮನ ಕೈಹಿಡಿದು ಅವಳ ಜೊತೆಯಲ್ಲೇ ಇರುವ ಆಸೆ. ಆದರೆ 'ಅದು ತಗೊಂಡ್ಬಾ, ಇದು ತಗೊಂಡ್ಬಾ..' ಎಂದು ಓಡಿಸುತ್ತಿದ್ದಳು ಶಾಂತ.  ದೇವಪ್ಪ, ಮಾಧವ, ನಯನಾ ಬರುವ ಹೊತ್ತಿಗೆ ಅಕ್ಕ ಪಕ್ಕದ ಮನೆಯವರೆಲ್ಲ ಸೇರಿದ್ದರು. ಅರ್ಧ ಗಂಟೆಯ ನಂತರ ಶಾಂತ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಹೊರಬಂದಳು. 
ದೇವಪ್ಪನ ಕೈಗೆ ಕೊಡುತ್ತ, "ಗಂಡು ಮಗು" ಎಂದಳು. ಅವನ ಖುಷಿಗೆ ಪಾರವೇ ಇರಲಿಲ್ಲ. "ಗಂಡು ಬೇಕು ಸರಿ.. ಆದ್ರೆ ಈ ವಯಸ್ನಾಗೇ ಯಸೊದಮ್ಮಂಗೆ ಬ್ಯಾಡಾಗಿತ್ತು. ಉಳಿತದ್ಯೋ ಇಲ್ಲೋ ಅಂದ್ಕಂಡೆ.." ಶಾಂತ ಹೇಳುತ್ತಿದ್ದ ಮಾತನ್ನು ಕೇಳುವ ಸ್ಥಿತಿಯಲ್ಲಿ ದೇವಪ್ಪನಿರಲಿಲ್ಲ.
ಮೊದಲ ಬಾರಿಗೆ ಸುಲೋಚನೆಯ ಕಣ್ಣಲ್ಲಿ ಅವಳಪ್ಪನೆಡೆಗೆ ತಾತ್ಸಾರದ ನೋಟವನ್ನು ಗಮನಿಸಿದ ಮಾಧವ !
ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಳು ಯಶೋದಮ್ಮ. ಬಾಳಂತಿಯ ಸಂಪೂರ್ಣ ಆರೈಕೆಯನ್ನು ಅವಳ ಮಗಳು ಮಾಡಿದಳು ! ಮಗುವಿನ ಉಚ್ಚೆ ಬಟ್ಟೆ ತೊಳೆಯುವುದರಿಂದ, ಬಾಳಂತಿಗೆ ಸ್ನಾನ ಮಾಡಿಸುವವರೆಗೆ ಪ್ರತಿ ಕೆಲಸವೂ ಸುಲೋಚನೆಯದೇ. " ನೀ ಯಾವ ಜನ್ಮದಾಗೆ ನನ್ನವ್ವ  ಆಗಿದ್ಯೇ? " ಎನ್ನುತ್ತಿದ್ದಳು ತಾಯಿ. ಪೂರ್ತಿ ಬೆಳವಣಿಗೆಯಾಗದೆ ಎಂಟೇ ತಿಂಗಳಿಗೆ ಹುಟ್ಟಿದ್ದ ಪುಟ್ಟ ಕಂದನನ್ನು ಸುಲೋಚನೆ ಅದೆಷ್ಟು ಜೋಪಾನ ಮಾಡಿದಳೆಂದರೇ ಮೂರೇ ತಿಂಗಳಲ್ಲಿ ಸುಧಾರಿಸಿದ್ದ. 
ಮಗುವಿಗೆ ಏನು ಹೆಸರಿಡುವುದು ಎಂದು ಎಲ್ಲರೂ ಚರ್ಚಿಸುವಾಗ, "ಶಿವನ ಪ್ರಸಾದ ಇವ್ನು.." ಎಂದಳು ಯಶೋದಮ್ಮ. ಶಿವಪ್ರಸಾದ ಎಂದೇ ಹೆಸರಿಟ್ಟರು. 
ಒಂದು ರೂಪಾಯಿ ದಾನ ಮಾಡು ಎಂದರೂ ಅದರಿಂದೇನು ಪ್ರಯೋಜನ ಎನ್ನುವ ದೇವಪ್ಪ ಮಗ ಹುಟ್ಟಿದ ಖುಷಿಗೆ ಊರಿಡೀ ಸಿಹಿ ಹಂಚಿದ್ದ. 
ಬದುಕಲ್ಲಿ ಮಗನ ಆಗಮನದಿಂದ ದೇವಪ್ಪ ಬಹಳ ಬದಲಾಗಿದ್ದ. ಅಂಗಡಿಯಿಂದ ಬೇಗ ಮನೆಗೆ ಬಂದು ಮೂರು ಮಕ್ಕಳ ಜೊತೆ ಸಮಯ ಕಳೆಯುತ್ತಿದ. 
ಒಮ್ಮೆ ಇದ್ದಕ್ಕಿದ್ದಂತೆ ಮಗನ ಅರೋಗ್ಯ ಹದಗೆಟ್ಟಿದ್ದನ್ನು ಕಂಡು ಯಶೋದಮ್ಮ ಬಹಳ ಕೊರಗಿದಳು. ಊರಲ್ಲಿರುವ ಎಲ್ಲಾ ನಾಟಿವೈದ್ಯರಿಗೆ ಮಗುವನ್ನು ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಯಶೋದಮ್ಮ ಮಗು ಉಳಿಯುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದಳು. 
ಒಮ್ಮೊಮ್ಮೆ ಏನೇನೋ ಬಡಬಡಿಸುತ್ತಿದ್ದಳು. ಹೆಂಡತಿ ಎಲ್ಲಿ ಹುಚ್ಚಿಯಾಗಿಬಿಡುತ್ತಾಳೋ ಎಂಬ ಭಯ ದೇವಪ್ಪನಿಗೆ..!
"ಶಿವ ಸೂಚ್ನೆ ಕೊಡ್ತಿದಾನೆ. ನಾವಿನ್ನೂ ಹರಕೆ ತೀರಿಸಿಲ್ಲ. ಶಿವಪುರಕ್ಕೆ ಹೋಗ್ಬೇಕು .." ನಿಂತಲ್ಲಿ ಕುಂತಲ್ಲಿ,  ಇದೇ ಜಪ. 
ಕೊನೆಗೊಂದು ದಿನ ದೇವಪ್ಪ, "ಆಯ್ತು ಮಾರಾಯ್ತಿ.. ಹೋಗೋಣ..ಅದೇನು ಹರಕೆ ಕಟ್ಕೊಂಡಿದೀಯೋ  ಹೋಗಿ ತೀರಿಸಿ ಬರೋಣ" ಎಂದಿದ್ದ. 
ಅಪ್ಪನ ಮಾತನ್ನು ಕೇಳಿಸಿಕೊಂಡ ಸುಲೋಚನೆ ಆಗಲೇ ಶಿವಪುರಕ್ಕೆ ತಾನೂ ಹೋಗುವ ಬಗ್ಗೆ ಕನಸು ಕಂಡಳು.  
ಅರವತ್ತು ಮೈಲಿ ದೂರ ಪ್ರಯಾಣಿಸುವ ಆಸೆಯೋ, ದೋಣಿಯ ಪ್ರಯಾಣದ ಕುತೂಹಲವೊ, ಮುಂದಿನ ಘಟನೆಗಳ ಸೂಚನೆಯೋ... 
ಅಂದು ರಾತ್ರಿ ಎಷ್ಟೇ ಪ್ರಯತ್ನಿಸಿದರೂ ನಿದ್ರಾದೇವಿಯ ಕೃಪಾಕಟಾಕ್ಷವೇ ದೊರೆಯಲಿಲ್ಲ ಅವಳಿಗೆ..!!

Sunday, July 12, 2020

ಮತ್ತೆ ಕಾಡಿದ ಮಳೆಯ ನೆನಪು - 1



(ಮಳೆ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧ. ಕೆಲವರಿಗೆ ಖುಷಿ, ಕೆಲವರಿಗೆ ನೋವು ಹತಾಶೆ, ಖಿನ್ನತೆಯ ಬಿಂಬವದು. ಅಂಥ ಒಂದು ವಿಭಿನ್ನ ಮನಸ್ಥಿತಿಯ ಕಥೆಯೊಂದಿಗೆ.. ಒಂದಿಡೀ ಊರಿನ ಕಥೆಯೂ ಸುತ್ತುವುದು ಇಲ್ಲಿ.  ಇದು 'ಮತ್ತೆ ಕಾಡಿದ ಮಳೆಯ ನೆನಪು..')
ಸುಲೋಚನಾ ಕುಳಿತಿದ್ದಳು ಜೋರು ಮಳೆಯನ್ನೇ ದಿಟ್ಟಿಸುತ್ತಾ. ಐವತ್ತರ ಆಸುಪಾಸಿನಲ್ಲಿದ್ದರೂ ಅರವತ್ತು ದಾಟಿದಂತೆ ಸುಕ್ಕುಗಟ್ಟಿತ್ತು ಮುಖ..!
"ನನ್ನೊಳಗನ್ನು ಅಣಕಿಸುವಂತಿದೆ ಈ ಮಳೆ.. ಒಂದು ನಿಮಿಷವಾದರೂ ಸುಮ್ಮನಾಗಬಾರದೇ.." ತನ್ನಲ್ಲೇ ಗೊಣಗಿಕೊಂಡಳು. 
ಅಷ್ಟರಲ್ಲಿ ಓಡುತ್ತಾ, ಏದುಸಿರು ಬಿಡುತ್ತಾ ಬಂದಳು ಕುಸುಮಾ. 
"ಅತ್ತೆ, ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಒಂದು ಮಾತು ಹೇಳಿ ಬರಬಾರ್ದಾ?  ಮನೆಯೆಲ್ಲ ಹುಡುಕಿದೆ. ಹಿತ್ತಲಲ್ಲಿ ಬಟ್ಟೇನೋ, ಪಾತ್ರೆನೋ ತೊಳೀತಾ ಇರ್ಬೋದು ಅಂತಾ ಅಲ್ಲೂ ನೋಡ್ದೆ. ಎಲ್ಲೆಲ್ಲಿ ಅಂತಾ ಹುಡ್ಕೋದು ನಿನ್ನಾ..."
ಒಂದೇ ಉಸಿರಲ್ಲಿ ಹೇಳಿ ಮುಗಿಸಿ, ಹುಸಿ ಮುನಿಸಿನಿಂದ ಮುಖ ಗಂಟಿಕ್ಕಿ, ಕಂಬಕ್ಕೊರಗಿ ನಿಂತಳು. 
"ಮನೇಲಿ ಇಲ್ಲಾ ಅಂದ್ಮೇಲೆ ಇಲ್ಲೇ ಇರ್ತೀನಿ ಅಂತಾ ನಿಂಗೂ ಗೊತ್ತು. ಸೀದಾ ಇಲ್ಲೇ ಬರ್ಬೇಕಿತ್ತು."
"ಹೊ, ಬಂದ್ಬಿಡ್ತೀನಿ. ನಿಂಗೊಂದು ಹಗಲು ರಾತ್ರಿ ಯಾವದೂ ಇಲ್ಲಾ, ಮನ್ಸಿಗೆ ಕಂಡಾಗೆಲ್ಲ ದೇವಸ್ಥಾನಕ್ಕೆ ಬಂದ್ಬಿಡ್ತೀಯಾ ಅಂತಾ, ನಾನೂ ಹಾಗೇ ಅಂದ್ಕೊಂಡಿದೀಯ? " ಎನ್ನುತ್ತಾ ಕೈ ಬೆರಳ ತುದಿಯಲ್ಲಿ ಲಂಗವನ್ನು ಹಿಡಿದು, ಮೆಟ್ಟಿಲು ಇಳಿಯುತ್ತಿದ್ದಳು. 
"ಅಲ್ವೇ, ಹೊಸ ಲಂಗ, ಹೊಸ ಗೆಜ್ಜೆ ಎಲ್ಲ ಹಾಕ್ಕೊಂಡು ಈಗೆಲ್ಲಿ ಹೊರಟಿದಿಯೇ? "
"ನಿಂಗೆ ತೋರ್ಸೋಣ ಅಂತಾ ಬಂದೆ. ನೀನು ಇಲ್ಲಿದೀಯ..ಈಗ ಊರಿಗೆಲ್ಲ ತೋರಿಸ್ಕೊಂಡು ಬಂದಂಗೆ ಆಯ್ತು."  ಲಂಗ ಮೇಲೆತ್ತಿಕೊಂಡು, ಕಾಲನ್ನು ಕಲ್ಯಾಣಿಯ ನೀರಲ್ಲಿ ಇಳಿಬಿಟ್ಟಳು. 
ಅವಳ ಕೋಪ ಇನ್ನೂ ತಣಿದಿಲ್ಲ ಎಂದು ಅರಿವಾಗಿ ಸುಲೋಚನಾ ಮುಗುಳ್ನಕ್ಕಳು. 
"ನಾನೆಲ್ಲೋ ನಿನ್ನ ನೋಡೋಕೆ ಗಂಡು ಬಂದಿತ್ತು ಅಂದ್ಕೊಂಡೆ ಕುಸುಮಬಾಲೆ..." 
ಕುಸುಮಳ ಕೋಪ ಪೂರ್ತಿ ಇಳಿದು, ಅತ್ತೆಯತ್ತ ತಿರುಗಿ ನಕ್ಕಳು. ಇಡೀ ಊರಲ್ಲಿ 'ಕುಸುಮಬಾಲೆ' ಎಂದು ಕರೆಯುವುದು ಅತ್ತೆ ಮಾತ್ರ..! ಅವಳು ಕರೆದಾಗಲೆಲ್ಲ ಇವಳ ಕೋಪ ಮಾಯವಾಗುತ್ತಿತ್ತು. 
'ಹುಚ್ಚು ಹುಡುಗಿ, ಎಷ್ಟು ಬೇಗ ಕೋಪ ಬರುತ್ತದೊ, ಅಷ್ಟೇ ಬೇಗ ಇಳಿಯುತ್ತದೆ' ಮನದಲ್ಲೇ ಹೇಳಿಕೊಂಡಳು. 
ಸುಲೋಚನಳಿಗೆ ಕುಸುಮಾ ಸಂಬಂಧವೇನಲ್ಲ. ಹಾಗೆ ನೋಡಿದರೆ ಅವಳಿಗೆ ಆ ಊರಿನಲ್ಲಿ ಸಂಬಂಧಿಕರೇ ಇರಲಿಲ್ಲ. 
ಆದರೂ ಅಲ್ಲಿ ಅನ್ಯೋನ್ಯತೆಗೇನು ಕೊರತೆಯಿರಲಿಲ್ಲ. ಪಕ್ಕದ ಮನೆ, ಹಿಂದಿನ ಮನೆ, ಮೇಲಿನ ಮನೆ.. ಎಲ್ಲರ ಮನೆಯ ಮಕ್ಕಳೂ ಸುಲೋಚನೆಗೆ ಅತ್ತೆ ಎಂದೇ ಕರೆಯುತ್ತಾರೆ. ಹಬ್ಬ-ಹರಿದಿನಗಳಿಗೆಲ್ಲ ಊರವರೆಲ್ಲ ಕರೆಯುತ್ತಾರೆ. ಎಲ್ಲರಿಗೂ ಅವಳ ಕೈರುಚಿ ಬಹಳ ಪ್ರಿಯ. 
ಚಕ್ಕುಲಿ, ಕೋಡುಬಳೆ, ಚುರುಮುರಿ,ಲಡ್ಡು, ಪಾಯಸ.. ಏನು ಮಾಡಿದರೂ ಎಲ್ಲ ಮಕ್ಕಳನ್ನು ಕರೆದುಕೊಡುತ್ತಾಳೆ. 
"ಏನು ಸುಲೋಚನಕ್ಕಾ, ನಮ್ಗೆಲ್ಲಾ ಇಲ್ವಾ? ಮಕ್ಳು ಮಾತ್ರ ಕಾಣ್ತಾರ ನಿಂಗೆ?" 
ಮಕ್ಕಳ ಅಪ್ಪ-ಅಮ್ಮಂದಿರು ಪ್ರೀತಿಯಿಂದ ದೂರುತ್ತಾರೆ. 
ಅವರೆಲ್ಲರಲ್ಲಿ ಕುಸುಮಾ ಎಂದರೆ ಅಚ್ಚುಮೆಚ್ಚು ಸುಲೋಚನಳಿಗೆ. ಪಕ್ಕದ ಮನೆಯವಳಾದರೂ, ಬುದ್ಧಿ ಬಂದಾಗಿನಿಂದ ಇಲ್ಲಿಯವರೆಗೂ ಖುಷಿಯಾಗಲಿ, ಬೇಸರವಾಗಲಿ, ಕೋಪಬರಲಿ, ಸೀದಾ ಸುಲೋಚನಳ ಮನೆಗೇ ಬಂದು ಕೂರುತ್ತಿದ್ದ ಹುಡುಗಿ ಅದು. 
ಇಪ್ಪತ್ತರ ಹರೆಯದ ಹುಡುಗಿ, ಹುಟ್ಟಿದಹಬ್ಬಕ್ಕೆ ಕೊಡಿಸಿದ ಹೊಸ ಲಂಗ,ಗೆಜ್ಜೆ ಹಾಕಿಕೊಂಡು ಅತ್ತೆಗೆ ತೋರಿಸಲೆಂದು ಊರೆಲ್ಲ ಸುತ್ತಿ ಬಂದಿದ್ದಳು. 
ಹಂಸ ಪಾದ, ಚಿಗುರು ಬೆರಳುಗಳು, ಉಗುರಿಗೆಲ್ಲ ಗೋರಂಟಿಯ ರಂಗು.. ಈಗ ಅವಳ ಪ್ರತಿ ಹೆಜ್ಜೆಗೂ ಝೇಂಕಾರವೆಂಬಂತೆ ಫಳ-ಫಳನೆ ಹೊಳೆಯುವ ಗೆಜ್ಜೆ.. 
ಅದರ ಮೇಲೆ ಝರಿ ಪಟ್ಟೆಯ ಕೆಂಪು ಲಂಗ , ಹಸಿರು ರವಿಕೆ, ಕೈಗೆ ಕೆಂಪು ಬಳೆಗಳು, ಹಣೆಗೆ ಕೆಂಪು ಬೊಟ್ಟು, ಕಂಡೂ ಕಾಣದಂತೆ, ಆಗಾಗ ಹೊಳೆಯುವ ಬಿಳಿಯ ಹರಳಿನ ಮೂಗುತಿ. 
ಇವೆಲ್ಲಕ್ಕೂ ಕಳಶವಿಟ್ಟಂತೆ ದಟ್ಟ ಕಪ್ಪಿನ ನೀಳ ಕೇಶ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಒಮ್ಮೊಮ್ಮೆ ತನ್ನ ಕೂದಲ ಮೇಲೂ ಕೋಪಿಸಿಕೊಳ್ಳುತ್ತ, "ಏನು ಕೂದ್ಲೋ ಇದು.. ಸರ್ಯಾಗಿ ಜಡೆ ಹಾಕೋಕು ಬರಲ್ಲ. ಕುತ್ತ್ಗೆ ಎಲ್ಲ ನೋವು ಬಂದ್ಬಿಡ್ತು." ಎಂದು ಗೊಣಗಿಕೊಳ್ಳುತ್ತಾಳೆ. ಅವಳ ಅಮ್ಮ ಕೂದಲು ಬಾಚುವಾಗ ಜಡೆಯ ಜಗಳ ತಾರಕಕ್ಕೇರಿ ಬಿಚ್ಚಿದ ಕೂದಲಲ್ಲಿ ಓಡಿ ಬರುತ್ತಿದ್ದಳು,ಬಾಗಿಲಲ್ಲೇ  "ಅತ್ತೆ, ಜಡೆ ಹಾಕ್ಕೊಡು..." ಎಂದು ಕೂಗುತ್ತಾ. 
ಜಡೆ ಹಾಕುತ್ತ ಕಥೆ ಹೇಳಬೇಕು. ಮಧ್ಯೆ ಮಧ್ಯೆ ಅತ್ತೆ.. ಎಂಬ ರಾಗ ಬೇರೆ. 
ಒಮ್ಮೆ ಸುಲೋಚನ ಹೇಳಿದ್ದಳು - "ನೀನು ಹೀಗೇ ಅತ್ತೆ ಅತ್ತೆ ಎನ್ನುತ್ತಿರು, ನಿನ್ನನ್ನೇ ಸೊಸೆ ಮಾಡಿಕೊಳ್ತೀನಿ."
"ಏನಂದೆ ಅತ್ತೆ? "
"ನನ್ನ ಮಗನಿಗೆ ನಿನ್ನಾ ಕೊಡೋಕೆ ಹೇಳ್ತಿನಿ ನೋಡು ನಿಮ್ಮಪ್ಪನ ಹತ್ರಾ.."
"ಅದ್ನಾದ್ರೂ ಮಾಡು ಅತ್ತೆ..ಆದ್ರೆ ನಿನ್ಮಗ ಪೇಟೆಲಿ ಉಳಿತಾನೆ ಅಂದ್ರೆ ನಾ ಹೋಗಲ್ಲ. ಇಲ್ಲೇ ನಿಂಜೊತೆ ಇದ್ದುಬಿಡ್ತೀನಿ."
"ಯೇ ಹುಡುಗಿ, ಒಂಚೂರು ನಾಚ್ಕೆ ಇಲ್ವಲ್ಲೇ ನಿಂಗೇ.."
ತಲೆಗೆ ತಿವಿದಳು. 
"ಆಹ್.. ಅತ್ತೆ..!! 
ಯಾಕತ್ತೆ ನಾಚ್ಕೆ? ನಂಗೆ ಹೆಂಗೂ ಬೇರೆ ಊರಿಗೆ ಹೋಗೋ ಮನ್ಸಿಲ್ಲ. ನಿನ್ಮಗನ್ನೇ ಮದ್ವೆ ಆದ್ರೆ ಅಪ್ಪನ ಮನೆ - ಗಂಡನ ಮನೆ ಅಕ್ಕ-ಪಕ್ಕ ಇರತ್ತೆ. ಅತ್ತೆ -ಸೊಸೆ ಜಗಳ ಅಂತೂ ಇರೋದೇ ಇಲ್ಲ. ಅಪ್ಪಿ-ತಪ್ಪಿ ಮನು ಜೊತೆಗೆ ಜಗಳ ಮಾಡ್ತಿನೇನೋ.. ನಿಂಜೊತೆ ಅಂತೂ ಮಾಡಲ್ಲ.. ಯೋಚ್ನೆ ಮಾಡು, ಗಂಡನ ಜೊತೆ ಹೋಗಲ್ಲ ಅತ್ತೆ ಜೊತೇನೆ ಇರ್ತೀನಿ ಅನ್ನೋ ಅಂಥಾ ಒಳ್ಳೆ ಸೊಸೆ ಬೇರೆಲ್ಲಿ ಸಿಗ್ತಾಳೆ ನಿಂಗೆ? "
"ಹೌದಮ್ಮ ಹೌದು..ನಾನು ನಿಂಗೆ ಜಡೆ ಹಾಕ್ತಿನಿ, ನೀನು ನಿನ್ನ ಮಗಳಿಗೆ ಹಾಕು.."
ಅವಳ ಜಡೆಯನ್ನು ನೋಡುತ್ತಾ, ಈ ಯೋಚನೆಯಲ್ಲಿ ಮುಳುಗಿದ್ದ ಸುಲೋಚನಾ ಕುಸುಮಾಳನ್ನು ನೋಡಿ, "ಯೇ ಹುಡುಗಿ, ಮಳೇಲಿ ನೆನಿಬೇಡ್ವೆ. ಶೀತ ಆದ್ರೆ ಏನು ಮಾಡ್ಬೇಕು? ಈ ಕಡೆ ಬಾ.."
"ಏನತ್ತೆ ನೀನು?  ನಮ್ಮಮ್ಮನ ಹಾಗೇ ಆಡ್ಬೇಡ. ನಿಂಗೆ ಈ ಕಲ್ಯಾಣಿ ಕಟ್ಟೆ ಎಷ್ಟು ಇಷ್ಟಾನೋ, ನಂಗೂ ಮಳೆ ಅಂದ್ರೆ ಅಷ್ಟೇ ಇಷ್ಟ.." ಮತ್ತೆ ನೀರಲ್ಲಿ ಕಾಲಾಡಿಸಿದಳು. 
"ಕಾಲನ್ನ ನೀರಲ್ಲಿ ಬಿಡಬೇಡವೆ.. ಕಲ್ಯಾಣಿ ನೀರನ್ನೇ ಶಿವನ ಅಭಿಷೇಕಕ್ಕೆ ಬಳ್ಸೋದು ಆಲ್ವಾ.."
"ಅಯ್ಯೋ.. ನಿನ್ನ ಪುರಾಣ ಮುಗ್ಯೋದೆ ಇಲ್ಲಾ.. ನಾನು ಮನೆಗೆ ಹೋಗ್ತೀನಿ, ಬರೋದಿದ್ರೆ ಬಾ.."
ಎದ್ದು ಕಾಲಪ್ಪಳಿಸುತ್ತ ನಡೆದಳು.
 "ಹೊಸ ಗೆಜ್ಜೆ ಅಂತ ಗೊತ್ತಿದೆ.. ನಿಧಾನ ಹೋಗೇ ಕುಸ್ಮಾ.." ಎಂದು ನಕ್ಕಳು ಸುಲೋಚನೆ.
ಕುಸುಮಳನ್ನು ನೋಡಿದಾಗಲೆಲ್ಲ ತನ್ನ ಬಾಲ್ಯವೇ ನೆನಪಾಗುತ್ತಿತ್ತು ಅವಳಿಗೆ. 
ಇಲ್ಲಿಯ ಹಾಗೆಯೇ ನಮ್ಮೂರಲ್ಲೂ ಅದೆಂಥ ಮಳೆ. ಅಬ್ಬಾ..ಗದ್ದೆಗಳೆಲ್ಲ ತುಂಬಿ, ಒಂದು ಹೊಳೆಯಾಗಿಬಿಡುತ್ತಿತ್ತು. ಇಡೀ ದಿನವೂ ಧೋ ಎಂಬ ಮಳೆಯೇ.. ಹಿತ್ತಲಲ್ಲಿ ಕಲ್ಲಿನ ಒಲೆಗೆ ಬೆಂಕಿ ಒಟ್ಟಬೇಕು. ಅಪ್ಪ, ಚಿಕ್ಕಪ್ಪ ಎಲ್ಲ ಗದ್ದೆಯಿಂದ ಬಂದ ತಕ್ಷಣ ಒದ್ದೆಯಾದ ಕಂಬಳಿ ಕೊಪ್ಪೆಯನ್ನು ಒಣಗಿಸುತ್ತಿದ್ದರು. ಅವರ ಸ್ನಾನಕ್ಕೆ ನೀರು ಬಿಸಿ ಮಾಡಬೇಕಿತ್ತು. ಒಮ್ಮೊಮ್ಮೆ ಜೋರು ಗಾಳಿಗೆ ದೊಡ್ಡ ಮರವೊಂದು ಧರೆಗುರುಳಿದರೆ ಊರ ಗಂಡಸರೆಲ್ಲ ಓಡಬೇಕಿತ್ತು. ಕುಸುಮ ಹೇಳಿದಂತೆ ಮಳೆ ಎಂದಿಗೂ ಇಷ್ಟವಾಗಲಿಲ್ಲ ನನಗೆ. 
ಸುಲೋಚನೆ ನಿಧಾನವಾಗಿ ಕಂಬಕ್ಕೆ ಬೆನ್ನೊರಗಿಸಿ ಕುಳಿತು, ಕಲ್ಯಾಣಿಗೆ ಬಿದ್ದ ಹನಿಯನ್ನು ದಿಟ್ಟಿಸತೊಡಗಿದಳು.  ತನ್ನ ಹಳೆಯ ನೆನಪುಗಳಿಗೆ ಜಾರಿದಳು. ಕಣ್ಣಂಚಿಂದ ಕೆನ್ನೆಯ ಮೇಲೆ ಎರಡು ಹನಿಗಳು ಇಳಿದವು. 
ಮಳೆಗಾಲ ಅದೆಷ್ಟು ಸಂಕಷ್ಟಗಳ ಜಾಲ...

ಬದುಕು ದಾಳದಾಟ..

ಬದುಕು ದಾಳದಾಟ 
ಒಮ್ಮೆ ಆರು.. ಮತ್ತೊಮ್ಮೆ ಮೂರು.. 
ಒಮ್ಮೆ ಜಿಗಿತ.. ಮತ್ತೊಮ್ಮೆ ಹೊಡೆತ.. 

ಏರಿದಾಗ ಹಿಗ್ಗದೇ, ಬಿದ್ದಾಗ ಕುಗ್ಗದೇ.. 
ನಿಶ್ಚಲವಾಗಿರುವುದು ಬಲು ಕಷ್ಟವೇ.. 

ಒಮ್ಮೊಮ್ಮೆ ಓಡಿ ಅಡಗುವುದು.. 
ಮತ್ತೊಮ್ಮೆ ಬೆನ್ನಟ್ಟಿ ಬಡಿಯುವುದು.. 

ಅಡಗಿದವ ಹೇಡಿಯಲ್ಲ.. 
ಹೊಡೆದವ ಶಕ್ತಿವಂತನಲ್ಲ.. 
ಆದರೂ ಹೋರಾಟಕ್ಕೇನೂ ಕಡಿಮೆಯಲ್ಲ.. 

ಬದುಕು ಒಂದು ದಾಳದಾಟ.. 
ಗೆದ್ದವ ಪಡೆದು ಸೋತ.. 
ಸೋತವ ಕೊಟ್ಟು ಗೆದ್ದ.. 

-ಪಲ್ಲವಿ 

ಮಾತು ಮರೆತೇಬಿಡುತ್ತೀನಷ್ಟೇ...

ಝುಮುಕಿ ಬೆಳಕಿಗೆ ಹೊಳೆಯುತಿದೆ.. 
ಎಂದುಕೊಂಡೆಯಾ? 
ನೀ ಬಂದ ಸೂಚನೆ ನೀಡುತಿದೆಯಷ್ಟೇ.. 

ತಂಗಾಳಿಗೆ ಹಾರಾಡುತ್ತಿದೆ ಮುಂಗುರುಳು.. 
ಎಂದುಕೊಂಡೆಯಾ
ನೀ ಸವರಲಿ ಎಂದು ಬಯಸಿದೆಯಷ್ಟೇ.. 

ಚಿಗುರು ಬೆರಳು ಗೋರಂಟಿಯಿಂದ ಕೆಂಪಾಗಿದೆ.. 
ಎಂದುಕೊಂಡೆಯಾ..? 
ನಾಚಿಕೆಯಿಂದ ಬೆರಳ ತುದಿ ಕೆಂಪೇರಿದೆಯಷ್ಟೇ.. 

ಹೂವರಳಿ ಸುಗಂಧ ಬೀರಿದೆ... 
ಎಂದುಕೊಂಡೆಯಾ? 
ನಿನ್ನ ಕೈಯಿಂದ ನನ್ನ ಮುಡಿಗೇರಲಿ ಎಂದರಳಿದೆಯಷ್ಟೇ..

ಇವಳ್ಯಾಕೆ ಮಾತನಾಡುತ್ತಿಲ್ಲ.. 
ಎಂದುಕೊಂಡೆಯಾ? 
ಹೇ ಹುಡುಗ, ನಿನ್ನ ನೋಡಿ ಮಾತು ಮರೆತೇಬಿಡುತ್ತೀನಷ್ಟೇ.. 

-ಪಲ್ಲವಿ 

ಹೆಣ್ಣು