Tuesday, June 8, 2021

ಕರಿ ಕನ್ನಡಕ...

"ಪ್ರಿಯೆ,
ಮುಂಜಾನೆಯ ಮೊದಲ ನೋಟವದು..
ಸೋತುಹೋಗಿದ್ದೆ..
ಎನ್ನ ನೋಡಲಿ ಎಂದು ಕಣ್ಣ ಮಿಟುಕಿಸಿದೆ,
ನಿನಗದು ಕಾಣಲೇ ಇಲ್ಲ...
ನನ್ನ ದಾಟಿ ನೀ ದೂರಾದೆ..
'ಪ್ರೇಮ ಕುರುಡು'..."

"ಎರಡನೇ ಪ್ರಿಯೆ,
ಮುಸ್ಸಂಜೆಯ ಮೊದಲ ನೋಟವದು...
ನೀ ಎನ್ನ ನೋಡಲಿ ಎಂದು ಶಿಳ್ಳೆ ಹೊಡೆದು,
ಕಣ್ಣ ಮಿಟುಕಿಸಿದೆ..
ಈ ಬಾರಿ ಕರಿ ಕನ್ನಡಕವ ಬದಿಗಿಟ್ಟು..
ನಿನಗೂ ಅದು ಕಾಣಲೇ ಇಲ್ಲ..
ಕತ್ತಲಾವರಿಸಿತ್ತಲ್ಲ!!
'ಮತ್ತೆ ಪ್ರೇಮ ಕುರುಡು'..."

"ಆದರೂ ಈ
'ಪ್ರೇಮ ಕಿವುಡಲ್ಲ..!',
ನನ್ನ ಶಿಳ್ಳೆಗೆ ಬಾಬಣ್ಣನಂಗಡಿಯ ಬೆಡಗಿ
ಬಗ್ಗಿ ನೋಡಿ ಬಳುಕಿ ನಕ್ಕಳು...
ನಮಸ್ತೆ ಭಾಬಿ, ಬಾಬಣ್ಣ ಎಲ್ಲಿ...
ಎನ್ನುತ್ತಾ ನನ್ನ ಕರಿಕನ್ನಡಕವನೇರಿಸಿ ಬಾರಿನತ್ತ ನಡೆದೆ!!

ಮಧ್ಯರಾತ್ರಿಯ ಮತ್ತಿನಲಿ ತೂರಾಡುತ್ತಾ 
ಶಹರದ ಗೋಡೆಯ ಮೇಲೆ
ಆತ ಅಕ್ಷರಗಳ ಗೀಚುತಿದ್ದ...
ಕಾಲರಿಗೆ ಕರಿ ಕನ್ನಡಕವ ಸಿಕ್ಕಿಸಿಕೊಂಡು...😎

-ಪಲ್ಲವಿ 



Thursday, May 27, 2021

ನಾನದನು ಹೆಸರಿಸಲಾರೆ...!

ಕಂಡೆಯಾ ಗೆಳೆಯ, ಲೋಕದ ಕತ್ತಲ ಕಳೆದು ಹಾಲ್ದಿಂಗಳ ಚೆಲ್ಲಿದ ಚಂದ್ರಮನ...
ನಮ್ಮಿಬ್ಬರ ಮೌನವ ಕಂಡೂ ಕಾಣದಂತೆ
ಮಿನುಗುವ ಚುಕ್ಕಿಗಳ...
ಮಳೆಯೊಂದು ಜೊತೆಯಾಗಿದೆ,
ಅಳಿದುಳಿದ ಹನಿಗಳು ತೊಟ್ಟಿಕ್ಕುತ್ತಿವೆ,
ಚಿಗುರಂಚಲ್ಲೂ ಕಣ್ಣಂಚಲ್ಲೂ..
ಆದರೂ ನೀರವತೆ! ನೀನಿಲ್ಲದ ನೀರವತೆ..
 ನಾನದನು ಹೆಸರಿಸಲಾರೆ...!

ಕೇಳಿದೆಯಾ ಗೆಳೆಯ, ನಕ್ಕನವ ಚೋರ ಚಂದಿರ...
ಈ ದಿನಗಳೂ ಕಳೆಯುವವು ಹುಡುಗಿ, ಬಾಡದಿರು..
ಮಳೆಗೆ ಅರಳಲು ಘಮಿಸಲು ಸಜ್ಜಾಗು ಎನ್ನುತಿಹ...
ಅರಳುವುದು ಭುವಿ, ಮತ್ತದೇ ಲಜ್ಜೆಯೊಡನೆ ಏಕಾಂತವಾಗಿ....
ನಾನದನು ಹೆಸರಿಸಲಾರೆ...!

-ಪಲ್ಲವಿ




Saturday, May 1, 2021

ಕಾರ್ಮೋಡ ಕರಗಬೇಕಷ್ಟೆ..

ಆಕೆ ಪೂರ್ತಿ ನೆನೆಯಲು ಸಿದ್ಧಳಾಗಿದ್ದಾಳೆ
ಅವ ಹನಿಯಬೇಕಷ್ಟೆ..

ಕಾದು ಕೆಂಡವಾದವಳು ಉಸಿರ ಬಿಸಿಯಾಗಲು ಸಿದ್ಧಳಾಗಿದ್ದಾಳೆ
ಅವನ ಸ್ಪರ್ಶ ಬೇಕಷ್ಟೆ..

ಆಕೆ ಬೆವರ ಘಮವಾಗಲು ಸಿದ್ಧಳಾಗಿದ್ದಾಳೆ
ಅವನ ತೆಕ್ಕೆಬೇಕಷ್ಟೆ..

ಗರಿಬಿಚ್ಚಿ ನರ್ತಿಸಲು ಸಿದ್ಧಳಿದ್ದಾಳೆ
ಅವನ ಲಯಬೇಕಷ್ಟೆ..

ಅವಳು ಮತ್ತೆ ಹಸಿರಾಗಬಯಸಿದ್ದಾಳೆ
ಕಾರ್ಮೋಡ ಕರಗಬೇಕಷ್ಟೆ..

-ಪಲ್ಲವಿ

ನಗು ದಿನ

ಈ ದಿನವೊಂದಕ್ಕೇ ನಗು ಸೀಮಿತವಾಗದಿರಲಿ..
ಮಗುವಂತೆ ನಗುವು ಶುಭ್ರವಾಗಿರಲಿ..
ನಗುವಿಗಾವುದೇ ಸೋಂಕು ಸೋಕದಿರಲಿ..
ನಗುವಿಗೆ ಕಾರಣವ ಹುಡುಕುವಂತಾಗದಿರಲಿ..
ನೋವ ತುಂಬಿದ ಮೊಗದಲಿ ನಗುವೊಂದು ಅರಳಲಿ..
ವಿಶ್ವದಲಿ ನಗುವ ಅಲೆ ತೇಲಿ ಬರಲಿ..
ವಿಶ್ವ ನಗು ದಿನದ ಶುಭಾಶಯಗಳು..

-ಪಲ್ಲವಿ 

Monday, April 26, 2021

ಭಾವ ಬೆರೆತು ಜಗವ ಮರೆತು...


ನಿಟ್ಟುಸಿರೊಂದು ಪಿಸುನುಡಿದಿದೆ ನಿನ್ಹೆಸರ ಮುಗುಳ್ನಗೆಯಲಿ....
ಮೌನದಾಸರೆಯಲಿ ಹಾಡಿದೆ ಎದೆಯರಾಗ  ಬಿಸಿಯುಸಿರ ಹಿಮ್ಮೇಳದಲಿ ..
ಉಸಿರ ಲಯಕೆ ನರ್ತಿಸಿದೆ ಮನ ಎರಡೊಂದಾಗಿ..
ಭಾವ ಬೆರೆತು ಜಗವ ಮರೆತು ಘಮವೆಲ್ಲಾ ಹರಡಿದೆ ಹೂವಾಗಿ🌼🌼🌼

Saturday, April 24, 2021

ಚಹಾ ಗುಟುಕಿಸಿ..


ಆವಿಯಾಗುವ ಮುನ್ನ
ಹೆಸರ ಚಿತ್ತಾರ ಬರೆಯುವ ಬಾ
ಹನಿಚುಕ್ಕಿಗಳ ಜೋಡಿಸಿ..
ಖಾರ ಮಿರ್ಚಿಯ ಜೊತೆಗೆ
ಚಹಾ ಗುಟುಕಿಸಿ...
-ಪಲ್ಲವಿ 

Friday, April 23, 2021

ಬಾರದಿರುವೆಯಾ...

ಗೆಳೆಯಾ,
ಇಂದಿನಿರುಳ ಗರ್ಭವು ಆರ್ಭಟಿಸುತಿರೆ,ತಲ್ಲಣವು ಒಳಗೊಳಗೆ..
ಕೋಲ್ಮಿಂಚು ಕಣ್ಣ ಸೀಳುವಾಗ ಕೋಲಾಹಲ ಎಲ್ಲೆಲ್ಲೂ..
ಬಾರದಿರುವೆಯಾ ಕರೆದರೆ..
ಜೋಡಿ ಮೋಡಗಳೊಡನೆ ಧರೆಗಿಳಿದು,
ಮಳೆಯೊಡನೆ ಮಳೆಯಾಗಿ,
ಮಣ್ಣ ಘಮವಾಗಿ,
ಚಿಗುರಂಚಲಿ ನಾಚಿ ನಗುವ ಹನಿಯಾಗುವ ಬಾ...
-ಪಲ್ಲವಿ 

ಹೆಣ್ಣು