Monday, June 3, 2024

ಬದುಕು


ಅಪ್ಪನ ಸೈಕಲ್ಲಿನ ಸೀಟನ್ನು ಬಿಗಿಯಾಗಿ ಹಿಡಿದ ಕೈಗಳಿಗೆ ಅದೇನು ಬೇಕಿರಬಹುದು..
ಬಣ್ಣ ಬಣ್ಣದ ಬಲೂನು..?
ಊಹುಂ..
ವಿವಿಧಾಕಾರದ ತರಹೇವಾರಿ ಬಣ್ಣದ ಪುಗ್ಗಿಗಳೆಲ್ಲ ತನ್ನ ಹಿಂದೆಯೇ ಬರುತ್ತಿವೆ.. ತನ್ನವಲ್ಲದಿದ್ದರೂ!!
ಪುಟ್ಟ ಕಂಗಳಲ್ಲಿ ತುಂಬಿರುವುದು ಹಸಿವು, ಆಸೆಯಲ್ಲ! 

ಅಪ್ಪ ಕೊಡಿಸುವ ಐಸ್ ಕ್ಯಾಂಡಿಗಿಂತ ಇನ್ನಾವುದು ಮನಕೆ ತಂಪನೆರೆದೀತು?!!

(ಮಹಾನಗರಿಯ ಮನಸುಗಳು)
-ಚಿತ್ರ & ಸಾಲು 
ಪಲ್ಲವಿ

Saturday, August 19, 2023

ಕರಗುವೆ...

ಕರಗುವೆ ನಾ ನಿನ್ನೊಲವ ಗೂಡಲ್ಲಿ
ಬೆರೆಯುವೆ ನಿನ್ನುಸಿರ ಶಾಖದಲಿ...
ಸದಾ ನಿನಗಂಟಿರುವೆ..
ನಟ್ಟಿರುಳಿನಲೂ, ನಡು ಹಗಲಿನಲೂ..
ಬರಲಾರೆಯ ಬೆಳಕಾಗಲು.....

ಚಿತ್ರ - ಸಾಲು :
ಪಲ್ಲವಿ

Sunday, August 13, 2023

ಶಿವ ಶಕ್ತಿ

ಸಖ,
ನಾ ನಿನ್ನ ಸಖಿಯಾಗುವೆ..
ನೀ ಹಸಿರಾಗು, ನಾ ಉಸಿರಾಗುವೆ..
ನೀ ಬೆಳಕಾಗು, ನಾ ಹೊಳಪಾಗುವೆ..
ನೀ ಹೆಜ್ಜೆಯಾಗು, ನಾ ಲಯವಾಗುವೆ..
ನೀ ಶಿವನೇ ಆಗು.....
ಸಖ, ನಾ ನಿನ್ನ ಶಕ್ತಿಯಾಗುವೆ...

-ಪಲ್ಲವಿ

Wednesday, July 19, 2023

ನಿನ್ನೊಲವು

ನೀನೆಂದೂ ಮುಗಿಯದ ಕವನ
ಆದಿ ನಿನ್ನಿಂದಲೇ..
ಅಸ್ತಿತ್ವವೂ ನಿನ್ನಲ್ಲೇ...
ಸಖ,
ನಿನ್ನ ಕಣ್ಣ್ಬಟ್ಟಲಲಿ ಕಾಣುವ
ಬಿಂಬವೇ ಸಾಕ್ಷಿ ಎನ್ನೊಲವಿಗೆ..
ನಿನ್ನೊಲವ ಮಳೆಯಲಿ ಕರಗಿ
ಮತ್ತೆ ಚಿಗುರಿ ಅರಳಿ ಘಮಿಸುವ
ಹೊಸದೊಂದು ಆಸೆ ಗರಿಗೆದರಿದೆ...
ಹಾ..
ಮುಗಿಯದೀ ಕವನ...
ನಿನ್ನಂತೆ, ನಿನ್ನೊಲವಂತೆ....

-ಪಲ್ಲವಿ 


Monday, March 6, 2023

ಚಂದಿರ

ಇರುಳನೆಲ್ಲ ಬೆಳಕಾಗಿಸಿ 
ಧಗೆಯ ತಣಿಸಿ, ತಂಪನುಣಿಸಿ
ಮೌನವನೂ ಮಾತನಾಡಿಸಿ
ಉಸಿರಿಗಿಷ್ಟು ಘಮವ ಬೆರೆಸಿ
ಪಯಣದಲಿ ಜೊತೆಯಾದ-ನಲ್ಲ..
ಹತ್ತಿ ಮುದ್ದೆಗಳ ನಡುವೆ ಇಣುಕಿದ ಕಳ್ಳ!!

-ಪಲ್ಲವಿ



Sunday, February 26, 2023

 ಇರುಳ ಮಡಿಲಿಗೆ ಸೇರುವ ತವಕ ಸೂರ್ಯನಿಗೆ, ಓಡುತ್ತಾನೆ ಒಂದರೆ ಘಳಿಗೆ ಕಾಯದೆಯೇ..
ನಮ್ಮ ನಿಮ್ಮಂತೆ ಟ್ರಾಫಿಕ್ ಸಿಗ್ನಲ್ ಇರುವುದೇ ಅವನಿಗೆ!!

 ಕತ್ತಲ ನಡುವೆ ಬೀದಿ ದೀಪವೊಂದು ಮರಗಳಿಗೆ ಭಾಷಣ ಮಾಡುತ್ತಿತ್ತು, ಈ ಬೀದಿಗೆ ನಾನೇ ಸೂರ್ಯ ಎಂದು..

ನಾಳೆ ಸೂರ್ಯ ಬರುವವರೆಗೂ ಎಲ್ಲರೂ ಅದರ ಮಾತನ್ನೇ ಕೇಳಬಹುದೇನೋ..

ಹೆಣ್ಣು