Tuesday, August 31, 2021

ಮಾಯೆ


ಅವಳು....

ಬಣ್ಣದೊಂದಿಗೆ ಭಾವವ ಬೆರೆಸಿ...
ನಾದದೊಂದಿಗೆ ಚುಕ್ಕಿಯ ಧರೆಗಿಳಿಸಿ...
ಕಣ್ಣಂಚಿನ ಕನಸ ಕೈಯಲಿ ಬೆಸೆಯುವ ಮಾಯೆ..

-ಪಲ್ಲವಿ 

Sunday, August 22, 2021

ಸಹಿಸಿಕೋ...

ನಿನ್ನನ್ನು....
ಇಡಿಯಾಗಿ ನಿನ್ನನ್ನು...
ಒಪ್ಪಿರುವೆ, ಅಪ್ಪಿರುವೆ..
ಕಾಡಿಸಿರುವೆ.. ಕನವರಿಸಿರುವೆ...
ಮುದ್ದಿಸಿರುವೆ.. ಮೂದಲಿಸಿರುವೆ..
ಎಲ್ಲವ ಸಹಿಸಿದವ ನೀನು...
ನನ್ನನ್ನೂ ಕೂಡ..
ಮತ್ತೆ ಮತ್ತೆ ಸಹಿಸಿಕೋ..
ಮುಪ್ಪಡರಿ ಮುದಿಯಾಗಿ ಮಂಜಾದರೂ ಸರಿಯೇ...
ನಿನ್ನೊಂದಿಗೆ ನಾನೆಂದೂ ಹೀಗೆಯೇ....

-ಪಲ್ಲವಿ 

Saturday, July 31, 2021

ಸಾಗುವ ಬಲು ದೂರ


ಮಿಂದೆದ್ದು ನಳನಳಿಸುವ ಹಸಿರ
ನಡುವೆ ಸಾಗುವ ಬಲುದೂರ..
ಒದ್ದೆ ಮಣ್ಣಲಿ ಹೆಜ್ಜೆ ಮೂಡಿಸಿ,
ಎಲೆಯ ಮೇಲಣ ಹನಿಗೆ ದನಿಯಾಗಿ,
ಕಾಡ ಮೌನಕೆ ಶರಣಾಗಿ,
ಮತ್ತಷ್ಟು ಗಾಢವಾಗಿ...
ಬೇರುಗಳಂತೆ ಬಿಗಿಯಾಗಿ,
ಕೈ ಬೆರಳ ಬೆಸೆದು...
ಸಾಗುವ ಬಲುದೂರ...

-ಪಲ್ಲವಿ 

Thursday, July 29, 2021

ಹೊಸತನ

ಮುಸ್ಸಂಜೆ ಮರೆಯಾಗುವ ರವಿಗೂ
ನಾಳೆಯ ಹೊಸತನದ ಕೌತುಕ 
ಹೆಪ್ಪುಗಟ್ಟಿದ ಮೋಡಕೂ
ಧರೆಯ ತಣಿಸುವ ತವಕ
ಹೊಸತನದಿ ಹನಿಬೆರೆಸಿ
ಕರಗಿ ಹಗುರಾಗುವ ಬಾ ಸಖಾ...





Wednesday, July 14, 2021

ಪ್ರೀತಿ

ಮುಪ್ಪಡರಿದ ಮೊಗ
ಬೊಚ್ಚು ಬಾಯಿ
ನೆರೆತ ಕೂದಲು
ಸುಕ್ಕು ಚರ್ಮ.....
ಇಷ್ಟು ವಯಸ್ಸಾಯ್ತು ನೋಡು.. ನಮ್ಮ ಪ್ರೀತಿಗೆ....

-ಪಲ್ಲವಿ 



Friday, July 9, 2021

ಸಫಾರಿ..!

ಸಫಾರಿಯ ಗಾಡಿ ಮುಂದೆ ಸಾಗುತ್ತಿತ್ತು...
ಚಿಗರೆ ಜಿಂಕೆಗಳ ಕಂಡು ಗಾಡಿಯೊಳಗಿನ ನಗು, ಕೇಕೆ ಜೋರಾದಂತೆಲ್ಲ ಗಾಡಿಯೂ ತಲೆದೂಗಿಸುತಿತ್ತು.. ಒಳಗಿನ ಗಾರ್ಡ್ ಗಲಾಟೆ ಮಾಡಬೇಡಿ ಎಂದು ಎಚ್ಚರಿಸುತ್ತಿದ್ದ.


ಅಬ್ಬಾ! ದೈತ್ಯಾಕಾರದ ಕರಡಿಗಳು.. ಎಲ್ಲರೂ ಹೋ ಎಂದು ಕೂಗುತ್ತಿರುವಾಗಲೇ ಅವ ಅವಳ ಕಿವಿಯಲಿ ಪಿಸುನುಡಿದಿದ್ದ...
"ನೋಡು.. ಆ ಕರ್ಡಿಗೆ ಹಸ್ವಾಗಿದೆ.. ಆದ್ರೆ ಅಲ್ಲಿ ಏನೂ ಇಲ್ಲ.. ಈ ಕರ್ಡಿಗೂ ಹಸಿವಾಗಿದೆ.. ಜೇನಿಗಾಗಿ ಕಾಯ್ತಾ ಇದೆ.."
ಆ ಮಾತಿಗೆ ಮೈ ಬಿಸಿ ಏರಿತ್ತು.. ಉಸಿರೊಮ್ಮೆ ಕಂಪಿಸಿತ್ತು..
ಅವನ ಕೈಲಿದ್ದ ಸರದ ಮಣಿಗಳನ್ನ ಆಡಿಸುತ್ತಾ, ನಕ್ಕಿದ್ದಳು ಅವಳು.. ಅವನಿಗೆ ಮಾತ್ರ ಅರಿವಾಗುವಂತೆ!!

-ಹಸಿರೂರ ಹುಡುಗಿ 

ಹೆಣ್ಣು