Saturday, June 13, 2020

ಒಮ್ಮೆ ಬಾರಮ್ಮಾ...

ಯಾಕಮ್ಮ ನನ್ನ ಮೇಲೆ ಅಷ್ಟು ಮುನಿಸು
ಹೇಳದೆ ಕೇಳದೆ ಹೊರಟೆಯಲ್ಲ 
ಅಷ್ಟು ಅವಸರವೇನಿತ್ತು? 
ಒಮ್ಮೆ ತಿರುಗಿ ಬಾರಮ್ಮಾ.... 

ಕಣ್ಣಿಗೆ ಪಟ್ಟಿ ಕಟ್ಟಿ ಕತ್ತಲ ಕೂಪದೊಳು 
ಬಿಟ್ಟಂತಾಗಿದೆ ನನ್ನ ಪರಿಸ್ಥಿತಿ 
ನಡೆಯಲಾರದೆ ಎಡವುತಿರುವೆ 
ಕೈ ಹಿಡಿದು ಕರೆತರಲು....
ಒಮ್ಮೆ ಬಾರಮ್ಮಾ... 

ಅಡುಗೆಮನೆಯಲ್ಲಿ ತೊಳೆಯದ ಪಾತ್ರೆಗಳು, 
ಕೋಣೆಯಲ್ಲಿ ಚೆಲ್ಲಾಪಿಲ್ಲಿಯಾದ ಬಟ್ಟೆಗಳು, 
ಜಗುಲಿಯ ಮೂಲೆಯಲ್ಲಿನ ಜೇಡರ ಬಲೆ 
ಎಲ್ಲವೂ ಹೇಳುತಿವೆ..
ಒಮ್ಮೆ ಬಾರಮ್ಮಾ... 

ಎಲ್ಲವೂ ಬದಲಾಗಿದೆ ಅಮ್ಮಾ 
ಹಸಿವೆಂದಾಗ ಊಟ ಬಡಿಸಲು, 
ನೋವೆಂದಾಗ ನೇವರಿಸಲು ಯಾರಮ್ಮಾ ಎನಗೆ? 
ಒಮ್ಮೆ ಬಾರಮ್ಮಾ........  

ಹೌದು, ಎಲ್ಲೋ ಒಮ್ಮೆ ಹೇಳಿದೆ  
'ನಿನಗೇನು ಗೊತ್ತು?'ಎಂದು..  
'ನನ್ನಷ್ಟು ನೀನು ಓದಿಲ್ಲ 'ಎಂದು..  
ಮರೆತೆನಮ್ಮ ಕೈ ಹಿಡಿದು ಅಕ್ಷರ ತಿದ್ದಿಸಿದವಳ...  
ನನ್ನ ಕ್ಷಮಿಸಿ ಒಮ್ಮೆ ಬಾರಮ್ಮಾ....

ನೀನು ಮಾತನಾಡುವ ಮುನ್ನವೇ
'ನನಗೆ ಕೆಲಸವಿದೆ, ಖಾಲಿ ಕುಳಿತಿಲ್ಲ'
-ರೇಗಿದ್ದೂ ತಪ್ಪೇ, ನೀ ನನ್ನ ಕಾಯುತಿರುವಾಗ 
ಈಗ ನಾನೂ ಕಾಯುತಿರುವೆ- ಒಮ್ಮೆ ಬಾರಮ್ಮಾ.... 

ಇಷ್ಟಕ್ಕೆಲ್ಲ ನನ್ನ ಬಿಟ್ಟು ಹೋಗುವವಳಲ್ಲ ನೀ 
ಏನಾಯಿತಮ್ಮ.. ಯಾಕೆ ಹೊರಟುಹೋದೆ? 
ಇನ್ನೆಂದಿಗೂ ಕಟುವಾಗಿ ನುಡಿಯಲಾರೆ 
ನನ್ನೊಡನೆ ಮಾತನಾಡಮ್ಮ... ಒಮ್ಮೆ ಬಾರಮ್ಮಾ... 

ಯಾಕಮ್ಮ ನನ್ನ ಮೇಲೆ ಅಷ್ಟೊಂದು ಮುನಿಸು
ಒಮ್ಮೆ ಬಾರಮ್ಮಾ...

ನನ್ನನ್ನೂ ನಿನ್ನೊಡನೆಯೇ ಕರೆದೊಯ್ಯಲು
ಒಮ್ಮೆ ತಿರುಗಿ ಬಾರಮ್ಮಾ.....

( ಒಬ್ಬಳು ತನ್ನೆಲ್ಲಾ ದೈಹಿಕ ನೋವನ್ನು ಕ್ಷಣಮಾತ್ರದಲ್ಲಿ ಮರೆತು ಆಗತಾನೆ ಹುಟ್ಟಿದ ಮಗುವನ್ನು ಎತ್ತಿ ಮುತ್ತನಿಡುತ್ತಿರುವ ಅಮ್ಮ , ಇನ್ನೊಬ್ಬಳು ಈಗ ತಾನೇ ಮಗುವಿಗೆ ಜನ್ಮನೀಡಿ ಬಲಹೀನಳಾದ ಮಗಳ ತಲೆ ನೇವರಿಸುತ್ತಿವ ಅಮ್ಮ - ಈ ಎರಡು ತಾಯಂದಿರನ್ನು ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು )

No comments:

Post a Comment

ಹೆಣ್ಣು