Monday, June 15, 2020

ಬೆಂಗಳೂರಿನ ಆಟೋ ಚಾಲಕ

ಬೆಂಗಳೂರಿನ ಪ್ರಭಾವಶಾಲಿ ವ್ಯಕ್ತಿಗಳು ಯಾರೆಂದು ಕೇಳಿದರೆ ಎಲ್ಲ ಬೇರೆ ಬೇರೆ ಜನರನ್ನು ಹೇಳ್ತಾರೆ. ರಾಜಕಾರಣಿಗಳು, ಚಿತ್ರ ನಟ /ನಟಿಯರು, ಪತ್ರಕರ್ತರು, ಉದ್ಯಮಿಗಳು, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. 

ಆದರೆ ಒಮ್ಮೆ ಆಚೆ ಬಂದು ನೋಡಿ.. ನಿಜವಾದ ಪ್ರಭಾವಶಾಲಿ ವ್ಯಕ್ತಿಗಳು ಆಟೋ ಚಾಲಕರು. 
ತರಹೇವಾರಿ ಡ್ರೈವರ್ ಗಳು ಸಿಗುತ್ತಾರೆ. 

"ಮೀಟರ್ ಹಾಕಲ್ಲ ಬರೋ ಹಂಗಿದ್ರೆ ಬನ್ನಿ" ಅಂತ ಕಡ್ಡಿ ತುಂಡು ಮಾಡೋ ಹಾಗೆ ಮಾತಾಡೋರು;  ಕೆಲವೊಮ್ಮೆ "ಅಣ್ಣ ಮೀಟರ್ ಮೇಲೆ ಎಷ್ಟ್ ಕೊಡ್ಬೇಕು ಹೇಳಿ" ಅಂದ್ರು, ಎಷ್ಟೇ ಕೇಳಿದ್ರು "ಆಗಲ್ಲ ಹೋಗಮ್ಮ" ಅನ್ನೋರು; ಇಯರ್ ಫೋನ್ ಹಾಕ್ಕೊಂಡು ಮಾತಾಡ್ತಾ, ಸಿಗ್ನಲ್ ಕೆಂಪು ಲೈಟ್ ತೋರ್ಸ್ತಾ ಇದ್ರೂ ಜೋರಾಗಿ ಹಾರ್ನ್ ಮಾಡೋರು; ತಾವು ತಪ್ಪಾಗಿ ಗಾಡಿ ಓಡಿಸಿದ್ರು, ಪಕ್ಕದಲ್ಲಿದ್ದವನಿಗೋ,  ಎದುರುಗಡೆಯ ಗಾಡಿಯವನಿಗೋ ಜೋರಾಗಿ ಬೈಯುತ್ತಾ ಹೋಗುವವರು...ಅಬ್ಬಬ್ಬಾ !

ಒಬ್ಬರೇ ಇಬ್ಬರೇ.. ಅಂದಹಾಗೆ ಇವರ್ಯಾರೂ ಬೇಕೆಂದು ಕೂಗುವವರೋ, ಗಲಾಟೆ ಮಾಡುವವರೋ ಅಲ್ಲ. ಎಲ್ಲರ ರೀತಿಯಲ್ಲೇ ಇವರದೂ ಕೆಲಸ.  ಅವರ ದಿನಚರಿ, ದುಡಿಮೆ ಕೆಲವೊಮ್ಮೆ ಹಾಗೆ ಮಾಡಿಸುತ್ತದೆ. ಹಾಗಿದ್ದರೂ ಸಹ ರಾತ್ರಿ ತಡವಾದಾಗ "ಅಂಕಲ್ ಇಲ್ಲೇ  ಬಿಡಿ,  ಸಾಕು" ಎಂದರೂ, ಸ್ವಲ್ಪ ಜವಾಬ್ದಾರಿ, ಕಾಳಜಿಯಿಂದ ಸೇಫ್ ಆಗಿ ಕರೆದುಕೊಂಡು ಹೋದವರೂ ಇದ್ದಾರೆ. 

 ಆದರೆ ಇವರೆಲ್ಲರ ಮಧ್ಯೆ ಕೆಲಸವನ್ನು ಬಹಳ ಪ್ರೀತಿಸುವ ಚಾಲಕರು ಸಿಗುತ್ತಾರೆ. ಎಷ್ಟೋ ಜನರ ಆಟೋ ಹಿಂದಿನ ಸಾಲುಗಳು ಯಾವ ಮಹಾ ಕವಿಯ ರಚನೆಯೋ ಎನಿಸುವಂತಿರುತ್ತದೆ.

  ಇಂದಿಗೂ ನಾನು ಒಬ್ಬ ಆಟೋ ಡ್ರೈವರ್ ಅನ್ನು ಬಹಳ ನೆನಪಿಸಿಕೊಳ್ಳುತ್ತೇನೆ. ಒಮ್ಮೆ ನಾನು ನನ್ನಪ್ಪನ ಜೊತೆ ಆತನ ಆಟೋದಲ್ಲಿ ಹೋಗಿದ್ದೆ. ಅಪ್ಪ ಹೀಗೆಯೇ ಹಾಡನ್ನು ಗುನುಗುತ್ತಿದ್ದರು. ಆತ ಒಮ್ಮೆ ತಿರುಗಿ ನೋಡಿದ. 

"ಸಾರ್, ನಾನೂ ಚೆನ್ನಾಗಿ ಹಾಡ್ತೀನಿ ಸಾರ್ " ಎಂದ.
"ಹೌದಾ! ಹಾಡಪ್ಪ ಹಾಗಾದ್ರೆ ಕೇಳೋಣ " ಅಂದ್ರು ಅಪ್ಪ. 

ಅಯ್ಯೋ ಇದೆಲ್ಲ ಯಾಕೆ ಬೇಕಪ್ಪ ಅನ್ನೋ ತರ ಅಪ್ಪನ್ನ ಒಂದ್ಸಲ ನೋಡಿದೆ. 
ಅವನು ಹಾಡಲು ಪ್ರಾರಂಭಿಸಿದ. ನಮಗೆ ಆಶ್ಚರ್ಯ.. ಎಂಥ ಕಂಠ.. 

ಅಪ್ಪ ರೆಕಾರ್ಡ್ ಮಾಡ್ಕೊಳ್ಬೇಕು ಅನ್ನೋ ಅಷ್ಟರಲ್ಲಿ ಅವನ ಹಾಡು ಮುಗಿದೇ ಹೋಯ್ತು. ನನಗೆ ಆ ಹಾಡು ನೆನಪಿಲ್ಲ, ಆದರೆ ಒಂದು ಹುಡುಗಿಯ ಬಗ್ಗೆ ಎಂದು ಗೊತ್ತಿದೆ. 

"ಬಹಳ ಚನ್ನಾಗಿ ಹಾಡ್ತಿಯಪ್ಪ" ಅಂತ ಅಂದ್ರು ನನ್ನಪ್ಪ. 
"ಬಿಡಿ ಸಾರ್, ಈಗ ಬೆಳ್ಗೆ ಎದ್ದಾಗಿನಿಂದ ರಾತ್ರಿ ಡ್ಯೂಟಿ ಮುಗಿಯೋವರ್ಗು ಬರೀ ಈ ಗಾಡಿಗಳದ್ದೇ ಶಬ್ದ. ಹಾಡೋದನ್ನ ಮರೆತೇಬಿಟ್ಟಿದ್ದೆ ಸಾರ್. ನೀವು ಹಾಡಿದ್ರಲ್ಲಾ ನಂಗೂ ಹಾಡಬೇಕು ಅನ್ನಿಸ್ತು "ಅಂದ. 

ನಾನು ಇವರಿಬ್ಬರ ಮಾತುಕತೆ ಕೇಳ್ತಾ ರಸ್ತೆಯಲ್ಲಿ ಹೋಗೋ ಗಾಡಿಗಳನ್ನೆಲ್ಲ ನೋಡ್ತಾ ಕುಳಿತಿದ್ದೆ. 
 ಆಸಾಮಿ ಇನ್ನೊಂದು ಶಾಕ್ ಕೊಟ್ಬಿಡೋದ ! 

"ಸಾರ್, ಇದು ನಾನೇ ಬರ್ದಿದ್ದು. ಹೆಂಗಿದೆ ಸಾರ್ " ಎಂದ. 

ನಾನು ಒಂದು ಸಲ ದೊಡ್ಡ ಕಣ್ಣು ಬಿಟ್ಟು ಕನ್ನಡಿಯಲ್ಲಿ ಅವನ ಮುಖ ನೋಡಿದೆ. ಬಹಳ ಚೆನ್ನಾಗಿ ಬರೆದಿದ್ದಾನೆ, ಅವನೇ ಧಾಟಿಯಲ್ಲಿ ಹಾಡ್ತಾನೆ, ನಿಜವಾಗಿಯೂ ಆಶ್ಚರ್ಯ ಆಯ್ತು. 

"ಸಾರ್ ಆಗ ಎರಡು ವರ್ಷ ಕಾಲೇಜಿಗೆ ಹೋಗಿದ್ದೆ. ಅಲ್ಲಿ ಒಂದು ಹುಡುಗಿ ಭಾಳ ಇಷ್ಟ ಆಗಿದ್ಲು ಸಾರ್. ಈ ಹಾಡನ್ನ ಅವ್ಳಿಗೆ ಅಂತಾನೆ ಬರ್ದಿದ್ದೆ. ಅವ್ಳ ಮುಂದೆ ಹಡಿದಾಗ ಭಾಳ ಖುಷಿ ಪಟ್ಟಿದ್ಲು ಸಾರ್ "ಅಂದ. 

ನನಗೆ ನಗು ತಡೆಯೋಕೇ ಆಗ್ತಾ ಇರಲಿಲ್ಲ. ಇಂತಾ ಹಾಡಿನ ಹಿಂದೆ ಹೀಗೂ ಕತೆ ಇದ್ಯಲ್ಲ ಅಂತ ಯೋಚನೆ ಮಾಡ್ತಿದ್ದೆ. 
ಅಪ್ಪ ಮತ್ತೆ ಕೇಳಿದ್ರು "ಅವ್ಳು ಒಪ್ಕೊಂಡ್ಲಾ ಹಾಗಾದ್ರೆ? "
"ಹೂ ಸಾರ್ ಒಪ್ಪಿದ್ಲು. ಆಮೇಲೆ ನಾನು ಕಾಲೇಜ್ ಬಿಟ್ಟು ಆಟೋ ಓಡ್ಸೋಕೆ ಹಿಡಿದಮೇಲೆ ಅವಳು ಮದ್ವೆ ಆದ್ಲು, ನನ್ನನ್ನಲ್ಲ ಬೆರೆವರನ್ನ.. " 
" ಹಾಗಾದ್ರೆ ನೀನು? "
"ಸಾರ್ ನಂಗೂ ಮದ್ವೆ ಆಗಿ ಮಗ ಇದಾನೆ.

ಈ ಹಾಡನ್ನ ಒಂದ್ಸಲ ಹೇಳ್ಬೇಕಾದ್ರೆ ನನ್ ಹೆಂಡ್ತಿ ಕೇಳ್ಸ್ಕೊಂಡಬುಟ್ಲು ಸಾರ್ "
ಜಗಳ ಮಾಡ್ತಾಳೆ ಅಂದ್ಕೊಂಡಿದ್ದೆ ಸಾರ್. ಇವಳು ನೋಡಿದ್ರೆ ನನ್ ಮೇಲು ಹಿಂಗೇ ಹಾಡು ಬರ್ದು ಹಾಡಿ ಅಂತ ಜೀವ ತಿನ್ನೋಕೆ ಸ್ಟಾರ್ಟ್ ಮಾಡ್ಬುಟ್ಟವಳೇ "

"ಹಂಗಾದ್ರೆ ಹೆಂಡ್ತಿ ಮೇಲೂ ಹಾಡು ಬರೆದ್ಯಾ? "
"ಅಯ್ಯೋ.. ಟ್ರೈ ಮಾಡ್ದೆ ಸಾರ್.. ಎಲ್ಲ್ ಬತ್ತೈತೆ ? ಹೆಂಗ್ ಮಾಡಿದ್ರು ಬರ್ಯಾಕ್ ಬಂದಿಲ್ಲ ಸಾರ್. ಬೈತಾಳೆ ಅವ್ಳು ಏನ್ ಮಾಡದ್ ಹೇಳಿ ಸಾರ್... "

ಅಲ್ಲಿಗೆ ನಾವು ಇಳಿಯಬೇಕಾದ ಜಾಗ ಬಂತು. ಅವನು ಹೋದ. 
ನಾನು ಹೊಟ್ಟೆ ತುಂಬಾ ನಗಾಡಿದೆ, ಅದೂ ಅವನ ಕೊನೆಯ ಮಾತುಗಳಿಗೆ. 

"ಎಷ್ಟು ಚಂದ ಹಾಡ್ತಾನಾಲ್ವ ಅವ್ನು" ಅಂದ್ರು ಅಪ್ಪ. "ಹೌದಪ್ಪ ಅವನ ಕಷ್ಟನೂ ಕಾಮಿಡಿ ಮಾಡಿ ಹೇಳಿದ್ನಲ್ಲಾ, ನನಗೆ ಆಶ್ಚರ್ಯ ಆಯ್ತು. ಎಷ್ಟು ಚೆನ್ನಾಗಿ ಕತೆ ಹೇಳ್ತಾನಲ್ಲ...." ಅಂತ ನಾನೂ ಹೇಳಿದೆ. 

 ಅವನು ಹೇಗಿದ್ದಾನೆ ಎಂದು ನನಗೆ ನೆನಪಿಲ್ಲ. ಈ ಘಟನೆ ನಡೆದು ಎರಡು ವರ್ಷಗಳೇ ಆದವು. ಆದರೂ, ಇವತ್ತಿಗೂ ಅವನ ಮೇಲೆ ಗೌರವವಿದೆ.

       ಇಂತಹ ಎಷ್ಟೋ ಪ್ರತಿಭಾನ್ವಿತ ಆಟೋ ಚಾಲಕರು ಕುಟುಂಬಕ್ಕಾಗಿ ಕನಸುಗಳನ್ನು ಬದಿಗೊತ್ತಿ, ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾರಲ್ಲ, ಅವರಿಗೆಲ್ಲ ಒಂದು ಸಲಾಂ...

ಬಸ್ಸಿನಲ್ಲಿ ಸಿಕ್ಕನೊಬ್ಬ ಬುದ್ಧಿವಂತ

ನಿಮ್ಮ ಪ್ರಕಾರ ಬುದ್ದಿವಂತ ಎಂದರೆ ಯಾರು ಎಂದು ಪ್ರಶ್ನೆ ಮಾಡಿದರೆ, ವಿಧ ವಿಧ ಉತ್ತರಗಳು ದೊರೆತವು. 

ತರಗತಿಯಲ್ಲಿ ಮೊದಲ ಅಂಕ ಗಳಿಸಿದವ ಎಂದು ಒಬ್ಬ ಹೇಳಿದರೆ, ಪರೀಕ್ಷೆಯ ಹಿಂದಿನ ರಾತ್ರಿ ಓದಿ, ಅರವತ್ತು ಪರ್ಸೆಂಟ್ ನಲ್ಲಿ ಪಾಸ್ ಆಗುವವ ಬುದ್ಧಿವಂತ ಎಂದು ಮತ್ತೊಬ್ಬ ಹೇಳಿದ. ಅಂಗಡಿಯವ ಹೇಳಿದ ಬೆಲೆಗೆ ಒಪ್ಪದೇ ಚೌಕಾಶಿ ಮಾಡಿ ಕಡಿಮೆಗೆ ತರುವುದು ಬುದ್ಧಿವಂತಿಕೆ ಎಂದೊಬ್ಬಳು ಹೇಳಿದರೆ, ಅಷ್ಟು ವಾದಮಾಡಿದರು ನಮ್ಮ ಲಾಭಕ್ಕೆ ಕೊರತೆಯಾಗದಂತೆ ಮಾರುವುದು ಬುದ್ಧಿವಂತಿಕೆ ಎಂದ ಅಂಗಡಿಯವ. ರಾತ್ರೋ -ರಾತ್ರಿ ಸರಕಾರ ಕಟ್ಟಿ ನಿಲ್ಲಿಸುವವವ ಬುದ್ಧಿವಂತ ಎಂದನೊಬ್ಬ ವಿಚಾರವಂತ, ಒಂದು ದಿನದೊಳಗೆ ಸರ್ಕಾರವನ್ನು ಕೆಡವುವವ ಬುದ್ಧಿವಂತ ಎಂದನೊಬ್ಬ (ಸೊ ಕಾಲ್ಡ್ )ಪ್ರಜ್ಞಾವಂತ....!!

ಇಲ್ಲಿ ಎಲ್ಲರೂ ಬುದ್ಧಿವಂತರೇ....

ಒಂದು ಹಾಡು ನೆನಪಾಗುತ್ತಿದೆ ಆದರೆ ಒಂದು ಸಾಲನ್ನು ಮಾತ್ರ ಸ್ವಲ್ಪ ಬದಲಾಯಿಸಿದ್ದೇನೆ.  
ದೊಡ್ಡವರೆಲ್ಲ ಜಾಣರಲ್ಲ..  
ಚಿಕ್ಕವರೆಲ್ಲ ಕೋಣರಲ್ಲ...  
ಕುಡುಕರಿಗಿಂತ ಬುದ್ಧಿವಂತರು ಎಲ್ಲೂ ಸಿಗೋದಿಲ್ಲ..
ಗೆಳೆಯ ಎಲ್ಲೂ ಸಿಗೋದಿಲ್ಲ.. !!!

ಯಾಕೆ ಎಂದಿರಾ??- ಕಣ್ಣಾರೆ ಕಂಡಿದ್ದೇನೆ. 

   ಒಮ್ಮೆ ನಾನು, ನನ್ನ ಗೆಳತಿ ಹುಬ್ಬಳ್ಳಿಯಿಂದ ಶಿರಸಿಗೆ ಪ್ರಯಾಣಿಸುತ್ತಿದ್ದೆವು -ಕೆಂಪು ಬಸ್ಸಿನಲ್ಲಿ(ನಮ್ಮ ಕೆ. ಎಸ್ ಆರ್. ಟಿ. ಸಿ. ಯನ್ನು ಪ್ರೀತಿಯಿಂದ ಕರೆಯುವ ರೀತಿ...). ಕತ್ತಲಾಗಿತ್ತು ; ಸಣ್ಣದಾಗಿ ಮಳೆ ಬರುತ್ತಿತ್ತು. ಬಸ್ಸಿನಲ್ಲಿ ಬಹಳ ಜನರು ಇರದೇ ಇದ್ದರೂ, ಇನ್ನೊಬ್ಬ ಹತ್ತಿದರೂ ಅವನಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. 

 ಸರಿಯಾಗಿ ನೆನಪಿಲ್ಲ. ಹುಬ್ಬಳ್ಳಿ ಪೇಟೆಯನ್ನು ದಾಟಿ ಮುಂದೆ ಬಂದಿದ್ದೇವೆ. ಆಗ ಒಬ್ಬ ಬಸ್ ಹತ್ತಿದ. ಪಾಪ.. ಸರಿಯಾಗಿ ನಿಲ್ಲಲೂ ಆಗುತ್ತಿಲ್ಲ ಅವನಿಂದ. ದೇಹ ಕೃಶವಾಗಿದೆ. ಕಣ್ಣುಗಳು ಕೆಂಪಾಗಿವೆ;ನಿಲ್ಲಲು ಏನಾದರೊಂದು ಆಧಾರ ಬೇಕಿತ್ತು. ಸರಿಯಾಗಿಯೇ ತೀರ್ಥಸೇವನೆ ಆಗಿತ್ತು. ಕೈಯ್ಯಲ್ಲಿದ್ದ ಸಣ್ಣ ಬಾಟಲಿಯನ್ನು ಮಾತ್ರ ಬಂಗಾರವೇನೋ ಎಂಬಂತೆ ಭದ್ರವಾಗಿ ಹಿಡಿದುಕೊಂಡಿದ್ದ. 

" ಯೋ ಕಂಡಕ್ಟರಪ್ಪ.. ಟಿಕೆಟ್ ಕೊಡಂಗಿಲ್ಲೇನ ನನಗ? " ಏರುದನಿಯಲ್ಲಿ ಕೂಗಿದ. 
"ನೀ ರೊಕ್ಕ ಕೊಟ್ರ ನಾ ನಿನಗ್ ಟಿಕೆಟ್ ಕೊಡ್ತನಿ "
"ತಗೋಳೋ ಯಪ್ಪಾ.. ನಾ ಏನ್ ಕೊಡಂಗಿಲ್ಲಾ ಅಂದೆಏನ್ ಈಗ ".. ದುಡ್ಡು ಕೊಟ್ಟ. ಕಂಡೆಕ್ಟರ್ ಟಿಕೆಟ್ ಹರಿದ. 

 ಆಯ್ತಲ್ಲ ಕೆಲಸ.. ಕಂಡೆಕ್ಟರ್ ತನ್ನ ಜಾಗದಲ್ಲಿ ಕುಳಿತು ಅಂದಿನ ಲೆಕ್ಕ ಬರೆಯುತ್ತಿದ್ದ. 

ಅಸಲಿ ಮಾತು ಪ್ರಾರಂಭವಾಗಿದ್ದೇ ಆಮೇಲೆ... 

"ಏನಯ್ಯ ಕಂಡಕ್ಟ್ರಪ್ಪ.. ನೀ ಏನಂತ ತಿಳ್ಕೊಂಡಿ ನನ್ನ.. ನಂಗು ಲೆಕ್ಕ ಬರತೈತಿ "
"ಏನಾತ್ಲೆ ನಿಂಗ.. "
"ಏನ್ ರೊಕ್ಕ ನೀನೇ ಹೊಡ್ಕೋಬೇಕ್ ಮಾಡಿಯೇನಲೇ.. "
"ಏನ.. ಏನ್ ಮಾತಾಡ್ತಿ ನೀನ? ಕುಡ್ದಿದ್ದು ಜಾಸ್ತಿ ಆಗೈತೇನ್? "
"ನೋಡ ನಾ ಎಷ್ಟರ ಕುಡೀತೇನಿ.. ನಿಂಗ್ಯಾಕ್ ಅದ.. ಮೊದ್ಲ ನನ್ ರೊಕ್ಕ ನಂಗ್ ಕೊಡ "
"ಏನ್ ರೊಕ್ಕ ಲೇ... "

ಇಲ್ಲಿಯವರೆಗೆ ನಾನು ನನ್ನ ಫ್ರೆಂಡ್ ಇಬ್ಬರೂ ಅರ್ಥ ಮಾಡಿಕೊಂಡ ರೀತಿಯೇ ಬೇರೆಯಿತ್ತು. ಬಹುಶಃ ಇವನು ಜಾಸ್ತಿ ಹಣ ಕೊಟ್ಟಿದ್ದಾನೆ. ಕಂಡೆಕ್ಟರ್ ಇನ್ನೂ ಚಿಲ್ಲರೆ ಕೊಟ್ಟಿರದ ಕಾರಣ ಇವನು ಗಲಾಟೆ ಮಾಡುತ್ತಿದ್ದಾನೆ. 

ಅಥವಾ ಕುಡಿದ ಮತ್ತಿನಲ್ಲಿ ಏನೇನೋ ಹೇಳುತ್ತಿದ್ದಾನೆ ಎಂದು ನಮ್ಮಲ್ಲೇ ಮಾತನಾಡಿಕೊಂಡೆವು. 

  ಆದರೆ ಕಂಡೆಕ್ಟರ್ ಕೋಪಿಸಿಕೊಂಡಿದ್ದ. ಎಷ್ಟು ಹಣವನ್ನು ವಾಪಾಸ್ ಕೊಡಬೇಕೋ, ಅದನ್ನು ಕೊಟ್ಟಿದ್ದೇನೆ ಎಂದು ಪದೇಪದೇ ಹೇಳುತ್ತಿದ್ದರೂ ಕುಡುಕ ಮಹಾಶಯ ಕೇಳಲು ತಯಾರಿರಲಿಲ್ಲ. 

  ಆಮೇಲೆ ನಿಜ ವಿಷಯ ಏನೆಂದು ಅರ್ಥವಾಗಿದ್ದು. 

"ನಾ ಐವತ್ತ ಕೊಟ್ಟೇನಿ. ನೀ ನಂಗ ಇಪ್ಪತ್ತ್ ಕೊಟ್ಟಿ.. ಹೌದೋ ಇಲ್ಲೋ... "ಎಂದ ಕುಡುಕಪ್ಪ. 
"ನೀ ಎಲ್ಲಿ ಹತ್ತಿದಿ ಬಸ್ ಹೇಳು.. ಅಲ್ಲಿಂದ ನೀ ಎಲ್ಲಿಗ್ ಕೇಳ್ದಿ... ಅದ್ಕ ಟಿಕೆಟ್ ಮೂವತ್ತ ಆಕೇತಿ ಅಷ್ಟ ತಗೋಂಡೀನಿ "
"ನಾ ಯಾಕ್ ಪೂರಾ ರೊಕ್ಕ ಕೊಡ್ಬೇಕ? "
"ಯಾಕ ಸೀನಿಯರ್ ಸಿಟಿಜನ್ ಇದ್ದಿ ನೀನ ? ಇದ್ರ ಕಾರ್ಡ್ ಕೊಡ.. "
"ಅಲ್ಲಲೇಪಾ... ನಾ ಮುದ್ಕ ಅಲ್ಲ "
ಎಂದು ಇನ್ನೂ ಏನೇನೋ ಬಡಬಡಾಯಿಸುತ್ತಿದ್ದ. 

ಕಂಡೆಕ್ಟರ್ ತಲೆ ಕೆಟ್ಟು, ಇನ್ನೊಬ್ಬರ ಬಳಿ ತನ್ನ ಅಳಲು ತೋಡಿಕೊಂಡ. ಈ ರಾತ್ರಿ ಬಸ್ ಗೆ ಮಾತ್ರ ಡ್ಯೂಟಿ ಮಾಡ್ಬಾರ್ದು. ಎಲ್ಲ ಕುಡುಕ ನನ್ನ ಮಕ್ಕಳೇ ಇರ್ತಾರೆ. ಜೀವ ತಿಂತಾರೆ. ಎಂದೆಲ್ಲ ಹೇಳುತ್ತಿದ್ದ.
 ನಾವೆಲ್ಲ ಮೂಕ ಪ್ರೇಕ್ಷಕರು.  
ಈಗ ವಾದ ಮಂಡಿಸುವುದು ಕುಡುಕನ ಸರದಿ.. 
"ಅಲ್ಲ ಸಾರ್, ನಾನ್ ಯಾಕ್ ಪೂರಾ ರೊಕ್ಕ ಕೊಡ್ಬೇಕ್ ನೀವೇ ಹೇಳಿ. ನಾ ಅರ್ಧ ಟಿಕೆಟ್ ರೊಕ್ಕ ಕೊಡ್ತೇನಿ "
ಒಬ್ಬ ಹಿರಿಯರು ಹೇಳಿದರು.. "ನೋಡಪಾ.. ನಿಂಗ ಒಂದ ಟಿಕೆಟ್- ಮೂವತ್ತೇ ರೂಪಾಯಿ..
ಕಡಿಮೆ ಆಗ್ಬೇಕಂದ್ರ ಒಂದ ನೀ ಸೀನಿಯರ್ ಸಿಟಿಜನ್ ಆಗಿರ್ಬೇಕ ಇಲ್ಲ ಅರ್ಧಕ್ಕೆ ಬೇಕಂದ್ರ ಹತ್ತ ವರ್ಷಕ್ಕಿಂತ ಸಣ್ಣಇರ್ಬೇಕಾ... "

ಈಗ ಕಂಡೆಕ್ಟರ್ ಮಧ್ಯೆ ಬಾಯಿ ಹಾಕಿದ.. "ಕೇಳ್ದ್ಯೋ ಇಲ್ಲೋ ಅವ್ರ ಹೇಳಿದ್ನ... ನಿಂಗ ಹ್ಯಾಂಗ್ ಅರ್ಧ ಕೊಡಕ್ ಬತ್ತದ?? "
"ಇಲ್ಲ ನಾ ಪೂರಾ ರೊಕ್ಕ ಕೊಡಂಗಿಲ್ಲಾ "
"ನೋಡಪಾ.. ನಾನೂ ಪೂರಾ ರೊಕ್ಕ ಕೊಟ್ಟ ಟಿಕೆಟ್ ತಗೊಂಡೀನಿ. ಒಬ್ಬ ಮನಿಷಾ ಒಂದ ಕಡಿಂದ ಮತ್ತೊಂದ ಕಡಿಕೆ ಬಸ್ನಾಗೆ ಹೋಗ್ಬೇಕಂದ್ರ ಒಂದ್ ಟಿಕೆಟ್ ತಗೋಬೇಕ.. ನೀ ಯಾಕ್ ಅರ್ಧ ಕೊಡ್ತಿ? "ಎಂದರು ಆ ಹಿರಿಯರು.
"ನೀವ್ ಕೊಡ್ತೀರಿ ಸಾರ್. ನಾ ಕೊಡಂಗಿಲ್ಲಾ.. "
"ಅದೇ ಯಾಕ್ ಕೊಡಂಗಿಲ್ಲಾ.. "
"ನೋಡ್ರಿ ಸರ... ನಿಮ್ಗ ಸೀಟ್ ಐತಿ.. ಇಲ್ಲಿ ಎಲ್ರಿಗೂ ಸೀಟ್ ಐತಿ.. ಅರಾಮ್ ಕುಂತಾರ.. ಅದ್ಕೆ ಫುಲ್ಲು ಟಿಕೆಟ್ ತಗೊಂಡಾರ.. ಆದ್ರ ನಾ ನಿಂತೀನಿ.. ಕಾಲ್ ನೋವಾಕೈತಿ. ಡ್ರೈವರ ಬ್ರೇಕ್ ಹಾಕ್ತಾನಾ.. ನಾ ಜೋತಾಡ್ತೇನಿ.. ನಾ ಯಾಕ್ರೀ ಪೂರಾ ರೊಕ್ಕ ಕೊಡ್ಬೇಕ ? ನೋಡ್ರಿ ನೀವ್ ಹೇಳಿದ್ದ ಖರೆ.. ಇಲ್ಲಿಂದ ಮತ್ತೊಂದ್ಕಡಿಕೆ ಹೋಗ್ಬೇಕಂದ್ರ ರೊಕ್ಕ ಕೊಟ್ಟ ಒಂದ್ ಟಿಕೆಟ್ ತಗೋಬೇಕ.. ಆದ್ರೆ ನೀವ್ ಅರಾಮ್ ಕುಂತಿರಿ, ನಾನ್ ತ್ರಾಸ್ ಪಟ್ಟ ನಿಂತೇನಿ..ನಂಗ ನಿಮ್ಗ ವ್ಯತ್ಯಾಸ ಇಲ್ಲೇನ್ರಿ?"

ಈಗ ಇವನಿಗೆ ಯಾರು ಉತ್ತರ ಕೊಡ್ತಾರೆ? ಎಲ್ಲರ ಬಾಯನ್ನು ಮುಚ್ಚಿಸಿದ. ಅವನು ಹೇಳಿದ್ದು ತಪ್ಪೇನಿರಲಿಲ್ಲ. ಕುಡುಕಪ್ಪ ಬುದ್ಧಿವಂತ ಅಂತ ಅನಿಸಿದ್ದು ಸುಳ್ಳಲ್ಲ. ಆದರೆ ಕುಡಿದಾಗ ಮಾತ್ರ ಬುದ್ಧಿವಂತನೇನೋ ಎಂಬ ಸಣ್ಣ ಅನುಮಾನವೂ ಇದೆ... !!

ಕಂಡೆಕ್ಟರ್ -ಇಂತಹ ಭಂಡರಿಗೆ ಯಾರು ಉತ್ತರ ಕೊಡ್ತಾರೆ. ಏನಾದ್ರೂ ಮಾಡ್ಕೊಳ್ಳಿ ಎಂದು ಗೊಣಗುತ್ತ ಕುಳಿತ.. 

"ಅಲ್ಲಪಾ.. ಕಾನೂನ್ ಹಾಂಗ್ ಹೇಳತೈತಿ.. ನೀ ಏನಾರ ಅನಕಂಡ್ರೆ ಯಾರ್ ಏನ್ ಮಾಡ್ಯಾರ? "
"ಯಾವದಪಾ ಕಾನೂನ? ಒಬ್ಬರಿಗೊಂದ ಇನ್ನೊಬ್ಬರಿಗೊಂದ ಹೇಳತೈತೇನ ನಿಮ್ಮ ಕಾನೂನ? ನಮ್ಗ ಬರಂಗಿಲ್ಲ ಅಂತ..ನಿಮ್ಗ ಬೇಕಾದಂಗ ನೀವ್ ಹೇಳ್ತಿರಿ.. ನನ್ ರೊಕ್ಕ ನಂಗ್ ಕೊಡಿಸ್ರಿ... "
"ಸಾರ್.. ಅವಂಗೆ ಎಷ್ಟ್ ಹೇಳಿದ್ರು ಅಷ್ಟೇ.. ಬುಟ್ಬುಡಿ "ಎಂದ ಕಂಡೆಕ್ಟರ್.. 

ಈಗ ಕುಡುಕ ಪೂರ್ತಿ ಕಂಡೆಕ್ಟರ್ ಮೇಲೆ ಹರಿಹಾಯ್ದ. "ನೀ ಮಾತಾಡ್ಬ್ಯಾಡ... ಹಿಂಗ ಕಾನೂನ, ಮೊತ್ತೊಂದ ಅಂತ ಎಲ್ಲ ರೊಕ್ಕ ನೀನ ಇಟ್ಕೋತಿ..
ನಿಮ್ಮ ಕಾನೂನ್ ಸರಿಗಿಲ್ಲ.. ಅದ್ನ ಮಾಡಿದೋನ ತಂದ ಒಂದ್ಸಲ ಬಸ್ಸಿನ್ಯಾಗ ನಿಲ್ಸಿ.. ಆಗ ಅವ್ನ ನೋಡಿ, ಚೇಂಜ್ ಮಾಡ್ತಾನ " ಎಂದೆಲ್ಲ ಕೂಗಿ ಮುಗಿಸುವ ಹೊತ್ತಿಗೆ ಅವನು ಇಳಿಯುವ ಜಾಗ ಬಂದಿತ್ತು.. ಹೇಗೋ ಕಷ್ಟ ಪಟ್ಟು ಅವನನ್ನು ಇಳಿಸಿ ಹೊರಟರೂ, ಬಸ್ಸು ಕಣ್ಣಿಗೆ ಕಾಣುವವರೆಗೂ ಕೂಗುತ್ತಿದ್ದ. 

ನಾವು ಊರಿಗೆ ಹಿಂತಿರುವವರೆಗೂ ಮನಸಿನಲ್ಲಿ ಉಳಿದುಹೋದ. 

ನಾವು ಮಾತನಾಡಿಕೊಂಡೆವು. ಸರಿ ಅಲ್ವಾ ಅವ್ನು ಹೇಳಿದ್ದು.. ಕುಡುಕ ಅಂತ ಅವ್ನು ಹೇಳಿದ್ದೆಲ್ಲ ತಪ್ಪು ಅನ್ನೋಕೆ ಆಗಲ್ಲ.. ಎಷ್ಟು ನಿಜ ಇತ್ತು.. ಎಲ್ಲೋ ಯಾರೋ ಕುತ್ಕೊಂಡು ಕಾನೂನು ಮಾಡ್ತಾರೆ.. ಅನುಭವಿಸೋರಿಗೆ ಗೊತ್ತು ಕಷ್ಟ... ಏನೇ ಇರಲಿ.. ಅವತ್ತು ಬಸ್ಸಿನಲ್ಲಿ ಒಬ್ಬ ಬುದ್ಧಿವಂತನನ್ನು ಕಂಡೆ.

ಆದರೆ ಬೆಂಗಳೂರಿಗೆ ಬಂದು, ಬಿ. ಎಂ. ಟಿ. ಸಿ. ಹತ್ತಿದಮೇಲೆ ಗೊತ್ತಾಗಿದ್ದು.. ಇಲ್ಲಿ ಸೀಟ್ ಮೇಲೆ ಕುಳಿತೋರಿಗಿಂತ ಜಾಸ್ತಿ, ನಿಂತು, ಜೋತಾಡಿಕೊಂಡು ಹೋಗುವವರೇ ಇರುತ್ತಾರೆ. ಹಾಗೇನಾದರೂ ನಿಂತುಕೊಂಡು ಹೋಗುವವರಿಗೆ ಅರ್ಧ ರೇಟ್ ನಲ್ಲಿ ಟಿಕೆಟ್ ಕೊಡಲು ಪ್ರಾರಂಭಿಸಿದರೆ, ಸರಕಾರ ಎಲ್ಲಿಗೆ ಹೋಗ್ಬೇಕು? 

ಮತ್ತೆ ನೀವ್ಯಾರು ಬಿ. ಎಂ. ಟಿ. ಸಿ. ಕಂಡೆಕ್ಟರ್ ಬಳಿ ಈ ವಿಷಯಕ್ಕೆ ಜಗಳ ತೆಗೆಯಬೇಡಿ.. ಈಗಲೇ ಒಂದು ಪ್ರಯಾಣದಲ್ಲಿ ಕಡಿಮೆ ಎಂದರೂ ನಾಲ್ಕು ಜಗಳಗಳು ಪ್ರತಿದಿನ ಕಾಣಸಿಗುತ್ತವೆ. ಮಧ್ಯೆ ಇದೊಂದು ಬೇಡ. 

ಇದು ಕೇವಲ ಕುಡುಕ ಬುದ್ಧಿವಂತರ ತರ್ಕ.. ಅದೂ ಕುಡಿದಾಗ ಮಾತ್ರ..........

Saturday, June 13, 2020

ನಮ್ಮೂರಿನಲ್ಲೊಬ್ಬ ಮುಖ್ಯಮಂತ್ರಿ

ನಾನು ಚಿಕ್ಕ ವಯಸ್ಸಿನಿಂದಲೂ ಆತನನ್ನು ನೋಡಿದ್ದೇನೆ. ಸಾಯಂಕಾಲ ಅಚ್ಚುಕಟ್ಟಾಗಿ ಬಿಳಿ ಅಂಗಿ, ಬಿಳಿ ಪಂಚೆ ಧರಿಸಿ ಆತ ಹೊರಟೆನೆಂದರೆ ಎಲ್ಲಾ ಒಮ್ಮೆ ತಿರುಗಿ ನೋಡಬೇಕು, "ಓಹ್ ಇನ್ನು ರಾತ್ರಿಯಿಡೀ ಮಧ್ಯರಸ್ತೆಯಲ್ಲಿ ಇವನದೇ ದರ್ಬಾರ್" ಎಂದು ಯೋಚಿಸುತ್ತಾ !!

     ಸಂತೆಯ ದಿನವಂತೂ ಸಮಯದ ಪರಿವೆಯೇ ಇರುತ್ತಿರಲಿಲ್ಲ. ರಸ್ತೆಯನ್ನು ಅಳತೆ ಮಾಡುತ್ತಾ ಬರುತ್ತಿರುವನೇನೋ ಎಂಬ ಅನುಮಾನ ಕಾಡುತ್ತಿತ್ತು! ಒಮ್ಮೊಮ್ಮೆ ವಾಹನಗಳು ಬಂದಾಗ ಅವನು ದಾರಿ ಬಿಡುವುದಿರಲಿ, ವಾಹನಗಳೇ ಅವನಿಗೆ ದಾರಿ ಬಿಟ್ಟುಕೊಟ್ಟು ರಸ್ತೆಯಂಚಲ್ಲಿ ಸಾಗುತ್ತಿದ್ದವು. ಹಾಗೆ ಗಾಡಿಗಳು ತಮ್ಮ ಪಾಡಿಗೆ ತಾವು ಹೋದರೂ ಸುಮ್ಮನಿರುವ ಜಾಯಮಾನ ಇವನದಲ್ಲ ಅಥವಾ ಇವನ ಹೊಟ್ಟೆಯಲ್ಲಿದ್ದ ದೇವರು ಹಾಗೆ ಸುಮ್ಮನೆ ನಿಲ್ಲಲು ಬಿಡುತ್ತಿರಲಿಲ್ಲವೋ ಏನೋ! ಜೋರಾಗಿ "ನಮಸ್ಕಾರ ಸಾರ್" ಎಂದು ಕೂಗುತ್ತಾ ಎರಡೂ ಕೈಗಳನ್ನೂ ಮೇಲಕ್ಕೆತ್ತಿ ತೂರಾಡುತ್ತ ನಮಸ್ಕಾರಾಸನ ಮಾಡುತ್ತಿದ್ದ.  .

      ಇನ್ನೇನು ರಾತ್ರಿ ಊರವರೆಲ್ಲ ದೀಪ ಆರಿಸಿ ಮಲಗಬೇಕು, ಅಷ್ಟರಲ್ಲಿ ಹಾಜರಾಗುತ್ತಿದ್ದ.ಮಜವೇನೆಂದರೆ ಹಗಲು "ನಾ ಬರಕಲ್ಲ, ನಾಳೆ ಸ್ಯಾನೆ ಕೆಲ್ಸ ಐತೆ. ಬ್ರೇಸ್ತಾರ (ಗುರುವಾರ ) ಟೆಮ್ (ಟೈಮ್ ) ಆದ್ರೆ ಬತ್ತುನಿ" ಎಂದು ಹೇಳುವವನು, ರಾತ್ರಿ ಸರಿಯಾಗಿ ಹೊಟ್ಟೆಗೆ ತೀರ್ಥ ಬಿದ್ದರೆ, ಶುದ್ಧ ಕನ್ನಡದಲ್ಲಿ ಸ್ಫುಟವಾಗಿ ಯಕ್ಷಗಾನದ ಪದ್ಯಗಳನ್ನು ಹೇಳುತ್ತಿದ್ದ. 

   ಒಂದು ಕಲೆಯ ಮೇಲೆ ಅವನಿಗೆ ಎಷ್ಟು ಪ್ರೀತಿಯಿತ್ತೆಂದು ರಾಗವಾಗಿ ಹಾಡುವಾಗಲೇ ಅರ್ಥವಾಗುತ್ತಿತ್ತು. ಒಂದು ದಿನ ' ನವಿಲು ಕುಣಿಯುತಿದೆ ನೋಡ' ಎಂದು ಹಾಡಿದರೆ, ಮತ್ತೊಂದು ದಿನ 'ರಂಗನಾಯಕ ರಾಜೀವ ಲೋಚನ ' ಎಂದು ಹಾಡುತ್ತಿದ್ದ. 

  ಒಂದು ಮನೆಯ ಮುಂದೆ ಎಷ್ಟು ಹೊತ್ತು ನಿಂತು, ಒಂದೇ ಸಾಲನ್ನು ಎಷ್ಟು ಬಾರಿ ಹಾಡುತ್ತಾನೆ ಎನ್ನುವುದರ ಮೇಲೆ ಅಂದು ಅವನು ಎಷ್ಟು ಕುಡಿದಿದ್ದ ಎಂದು ಅಂದಾಜಿಸಬಹುದಿತ್ತು. ಹಾಗಾಗಿಯೇ ಸಂಜೆ ಏಳಕ್ಕೆ ಆತ ಸಂತೆಯಿಂದ ಹೊರಟರೂ ರಾತ್ರಿ ಮನೆ ಸೇರುವುದು ಮಾತ್ರ ಹನ್ನೆರಡರ ಆಸುಪಾಸಿನಲ್ಲಿ!!
ಮೊದಲೆಲ್ಲ ನನಗೆ ಆತನನ್ನು ಕಂಡರೆ ಭಯವಿತ್ತು, ಆದರೆ ಒಮ್ಮೆ ಹುಚ್ಚು ಆಸೆ ಮೊಳೆತಿತ್ತು. ಅವನು ಹೀಗೆ ಕುಡಿದು ಹಾಡುತ್ತ ರಸ್ತೆಯಲ್ಲಿ ಬರುವಾಗ, ಅವನೆದುರು ಹೋಗಿ ನಿಂತು ಮಾತನಾಡಿಸಬೇಕು, ಏನು ಹೇಳುತ್ತಾನೆಂದು ನೋಡಬೇಕು..

ಆ ಸಂದರ್ಭ ಕೂಡ ಬಂತು. ಅಂದು ಅಪ್ಪ ಅವನೆದುರು ನಿಂತು ಮಾತನಾಡಿಸಿದರೆ, ಆ ವ್ಯಕ್ತಿ ಪ್ರತಿಕ್ರಿಯಿಸುವುದಿರಲಿ, ತಲೆ ಎತ್ತಿ ನೋಡಲೂ ಇಲ್ಲ. ನಡು ರಸ್ತೆಯಲ್ಲಿ ಧಡ್ ಎಂದು ಅವರ ಕಾಲಿಗೆ ಬಿದ್ದ. ಬಿಡೋ ಎಂದರೆ ಬಿಡುತ್ತಲೂ ಇಲ್ಲ. ಎಲ್ಲಿ ಕಾಲು ಎಳೆದು ಅಪ್ಪನನ್ನು ಕೆಳಗೆ ಬೀಳಿಸುತ್ತಾನೋ ಎಂಬ ಭಯ ನನಗೆ!

  "ಹೆಗಡೇರು ನಿಮ್ಮ ಆಸೀರಾದ(ಆಶೀರ್ವಾದ) ಬೇಕು ನಂಗೆ. ಬುಡಕಿಲ್ಲಾ ಅಂದ್ರೆ ಬುಡಕಿಲ್ಲ " ಎನ್ನುತ್ತಿದ್ದ. ನಂತರ ಎದ್ದು ನಿಂತು ನನಗೊಮ್ಮೆ, ಅವರಿಗೊಮ್ಮೆ ನಮಸ್ಕರಿಸಿ ಕಷ್ಟಪಟ್ಟು ನಡೆದು ಹೊರಟ. 

    ಒಂದು ಸಂಜೆ ತಮ್ಮನೊಡನೆ ರಸ್ತೆಯಂಚಲ್ಲಿ ವಾಯುವಿಹಾರಕ್ಕೆಂದು ಹೋದಾಗ ಈತ ಪೇಟೆ ಕಡೆಯಿಂದ ಬರುತ್ತಿದ್ದ. ಇನ್ನು ಕೇವಲ ಏಳು ಗಂಟೆ, ಇಷ್ಟು ಬೇಗ ಕುಡಿದಿರಲಾರ ಎಂದುಕೊಳ್ಳುವಷ್ಟರಲ್ಲಿಯೇ, ನನ್ನ ಊಹೆ ತಪ್ಪೆಂದು ತಿಳಿಯಿತು. ಒಮ್ಮೆ ರಸ್ತೆಯ ಬಲಕ್ಕೂ, ಮತ್ತೊಮ್ಮೆ ಎಡಕ್ಕೂ ಸುಳಿದಾಡುತ್ತ, ಆಕಾಶ ನೋಡುತ್ತಾ ಬರುವವನನ್ನು ನೋಡಿದರೆ ಯಾರು ಬೇಕಾದರೂ ಹೇಳುತ್ತಿದ್ದರು, ಚೆನ್ನಾಗಿಯೇ ಸುರಾಪಾನವಾಗಿದೆ ಎಂದು.. !

   ಅದು ಕರ್ನಾಟಕ ಲೋಕಸಭಾ ಚುನಾವಣೆಯ ಸಂದರ್ಭ ಬೇರೆ. ದೂರದರ್ಶನ, ದಿನಪತ್ರಿಕೆ ಅಷ್ಟೇ ಏಕೆ, ಪ್ರತಿ ಮನೆಯ ಜಗುಲಿಯಲ್ಲೂ, ಪ್ರತಿ ಅಂಗಡಿಯ ಎದುರಲ್ಲೂ ಚುನಾವಣೆಯ ಮಾತುಕತೆಯೇ ನಡೆಯುತ್ತಿತ್ತು.  

      ಇವನೂ ಕುಡಿದ ಅಮಲಿನಲ್ಲಿದ್ದ. ನೇರವಾಗಿ ನಮ್ಮ ಬಳಿ ಬಂದ. " ತಂಗಿ, ಅರಾಮೈದಿಯೇ? ಓಹೋಹೋ.. ಸಣ್ಣ ಹೆಗಡೇರು ಇಲ್ಲೇ ಐದಾರೆ..ಇಲ್ಲೆಂತ ಮಾಡ್ತಾ ಐದಿರಿ? " ನಾವು ಮಾತನಾಡದೆ ಸುಮ್ಮನೆ ನಿಂತಿದ್ದೆವು. 

" ತಂಗಿ ಮತ್ತೆ ಈ ಸಲ ಎಲೆಕ್ಸನ್ನಿಗೆ ನಿಂತಿವ್ನಿ. ನಂಗೆ ವೋಟ್ ಹಾಕ್ಬೊಕು. ಬ್ಯಾರೆ ಯಾರ್ಗೂ ಹಾಕಂಗಿಲ್ಲ"

" ಯಾವದಕ್ಕೆ ನಿಂತಿದಿಯೊ ನೀನು? ಎಮ್.ಎಲ್.ಎ. ಆಗ್ಬೇಕು ಅಂತ ಅಂದ್ಕೊಂಡಿದ್ದೀಯಾ?" ಎಂದು ಕೇಳಿದೆವು. 

"ಅದ್ನೆಲ್ಲ ನಂಗ್ ಯಾರ್ ಕೊಡ್ತಾರ್ರಾ? ನಾ ಮುಕ್ಮಂತ್ರಿ ಶೀಟಿಗೆ (seat) ನಿಂತೀನಿ "

"ಅಲ್ಲೋ ಅದನ್ನಾದ್ರೂ ಸರಿ ಹೇಳು.. ಮುಕ್ಮಂತ್ರಿ ಅಲ್ಲ, ಮುಖ್ಯಮಂತ್ರಿ. "

- ಎನ್ನುವಷ್ಟರಲ್ಲಿ ಊರವರು ಯಾರೋ ಬಂದರು, "ಅವನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಬಿಡು, ಮುಖ್ಯಮಂತ್ರಿ, ಮುಕ್ಕೋಮಂತ್ರಿ ಎಲ್ಲಾ ಒಂದೇ " 

-ಎಂದು ಹೇಳಿ ನಗುತ್ತಾ ಹೋದರು. 

  ಅವನಿಗೆ ಏನು ಅರ್ಥವಾಯಿತೋ ಏನೋ, "ಎಲ್ಲಾ ಅಂಗೇ ಬುಡಿ, ನಾ ಹಮಾ (ಸಮ) ಮಾಡ್ತುನಿ. " ಎನ್ನುತ್ತಾ ಹೋದ.  

  ಮುಂದೆಯೂ ಮಾತು ಕೇಳುತ್ತಿತ್ತು, "ನಾ ಏನಾರ ಮುಕ್ಮಂತ್ರಿ ಆರೆ (ಆದ್ರೆ ) ಊರ್ ಹಿಂಗಿರಾಕಿಲ್ಲ, ಬ್ಯಾರೇನೇ ಐತಿ"...... 

  ಅದೇನು ಮಾಡುತ್ತಾನೋ ಏನೋ ನಾಕಾಣೆ, ಆದರೆ ನಮ್ಮೂರಲ್ಲೊಬ್ಬ ಮುಕ್ಮಂತ್ರಿ ಅಲ್ಲಲ್ಲ, ಮುಖ್ಯಮಂತ್ರಿ ಇದಾನೆ ಅನ್ನೋದಂತೂ ಸತ್ಯ..!!!

ಹಾಸ್ಟೆಲ್ ದಿನಗಳು

ಅಂದು ಮನದಲ್ಲೊಂದು ಆತಂಕ, ಸಣ್ಣ ಖುಷಿ, ಹಾಸ್ಟೆಲ್ ಜೀವನ ಹೇಗಿರಬಹುದೆಂಬ ಕುತೂಹಲ..! ರೂಮ್-ಮೇಟ್,ವಾರ್ಡನ್ ಎಲ್ಲ ಹೇಗಿರಬಹುದು ಎಂಬ ಪ್ರಶ್ನೆಗಳಿಗೆ ಎರಡೇ ದಿನದಲ್ಲಿ ಉತ್ತರ ದೊರೆತಿತ್ತು .

     ಅಲ್ಲೊಂದು ಬಾಂಧವ್ಯ ರೂಪುಗೊಂಡಿತು. ಒಡಹುಟ್ಟಿದವರಲ್ಲದಿದ್ದರೂ ಅಕ್ಕ-ತಂಗಿಯರಾಗಿ ಅಪರೂಪದ, ಅನಿರೀಕ್ಷಿತ ಸಂಬಂಧಗಳು ಬೆಸೆದವು.

      "ಎರಡು ಜಡೆಗಳು ಒಂದೆಡೆ ಸೇರಲಾರವು" ಎಂಬ ಮಾತಿದೆ.ಆದರೆ ಅಲ್ಲಿ ಸುಮಾರು ಹದಿನೈದು ಜಡೆಗಳು ಒಟ್ಟಾಗಿರುತ್ತಿದ್ದವು..! ಅವುಗಳಿಗೆ ಜಾತಿಭೇದವಿರಲಿಲ್ಲ,ಭಾಷಾಭೇದವಿರಲಿಲ್ಲ,ಧರ್ಮಭೇದವೂ ಇರಲಿಲ್ಲ.

    ಕಾಲೇಜಿನಲ್ಲಿಯೂ 'ಹಾಸ್ಟೆಲ್ ಗ್ಯಾಂಗ್' ಎಂದೇ ಪ್ರಖ್ಯಾತಿಯಾದ ದಿನಗಳು! ತಡರಾತ್ರಿಯ ತರಲೆ, ಹರಟೆ ,ಗಾಸಿಪ್-ಗಳು!ಶಾಪಿಂಗ್ ಎಂದು ಹೋಗಿ ಅಂಗಡಿಯವನ ಜೊತೆ ಜಗಳವಾಡಿ ಖಾಲಿ ಕೈಲಿ ಬರುತ್ತಿದ್ದ ಕ್ಷಣಗಳು!

ಯಾರ ಮನೆಯಿಂದ ತಿಂಡಿ ಬಂದರೂ ಹದಿನೈದು ಮಕ್ಕಳಿಗೆ ಬರುತ್ತಿತ್ತು.. ಒಂದೇ ತಟ್ಟೆಯಲ್ಲಿ ಎಲ್ಲರೂ ಊಟಮಾಡಿದ ಕ್ಷಣಗಳು. ವರ್ಷವಿಡೀ ಬರ್ತ್-ಡೇ ಆಚರಣೆಗಳು! ಎಲ್ಲೋ ಸಣ್ಣ ಮನಸ್ತಾಪವಿದ್ದರೂ ಎಲ್ಲ ಸೇರಿ ಸರಿಪಡಿಸಲು ಬಳಸುತ್ತಿದ್ದ ಉಪಾಯಗಳು... 

  ಒಬ್ಬಳ ಅರೋಗ್ಯ ಹದಗೆಟ್ಟರೂ ಆರೈಕೆ ಮಾಡುವ ಮನಗಳು... ಒಬ್ಬಳ ಕಣ್ಣೀರಿಗೆ ಸಮಾಧಾನಪಡಿಸುವ ಹದಿನೈದು ಕೈಗಳು...ಪ್ರೀತಿಗೆ ಕೊನೆಯಿರಲಿಲ್ಲ... 

       ಪರೀಕ್ಷೆಯ ದಿನವೊಂದರಲ್ಲಿ ಗೆಳತಿಯೊಬ್ಬಳ ಬ್ಯಾಗ್ ಕದ್ದು, ಅಡಗಿಸಿಟ್ಟಾಗ, ಆಕೆ ಎಲ್ಲಾ ರೂಮುಗಳಲ್ಲೂ ಹುಡುಕಿ ಸುಸ್ತಾಗಿದ್ದಳು. ಅಳುವುದೊಂದೇ ಬಾಕಿ ಎಂದಾಗ ಆಕೆಯ ಬ್ಯಾಗನ್ನು ಹಿಂದಿರುಗಿಸಿದ್ದೆ. ಹೀಗೆ ದಿನಕ್ಕೊಂದು ಚೇಷ್ಟೆಯಿರುತ್ತಿತ್ತು!!

ನಮ್ಮೆಲ್ಲರೊಡನೆ ಗೆಳತಿಯಾಗಿದ್ದವರು ನಮ್ಮ ವಾರ್ಡನ್. ಇಂದಿಗೂ ನಾವು ಹೋದಾಕ್ಷಣ ತಮ್ಮ ಮನೆಗೇ ಹೆಣ್ಣುಮಕ್ಕಳು ಬಂದರೆಂದು ಸಂಭ್ರಮಿಸಿ, ಊಟಹಾಕುತ್ತಾರೆಂದರೆ ಅದು ಅವರ ಹಿರಿಮೆ.

      ಐದು ವರ್ಷಗಳ ನೆನಪಿನ ಮೂಟೆಯೊಂದಿಗೆ ಹಾಸ್ಟೆಲ್ ಬಿಟ್ಟು ಹೊರಟ ದಿನ ಮನದಲ್ಲೊಂದು ಶೂನ್ಯಭಾವ, ವಾರ್ಡನ್ ಅವರ ಕಣ್ಣಂಚಲ್ಲಿ ನೀರು..!

    ಇಂದು 'ಶಾಲ್ಮಲಾ ಹಾಸ್ಟೆಲ್' ಎಂದಾಕ್ಷಣ ಅಲ್ಲಿನ ಗೆಳತಿಯರು,ವಾರ್ಡನ್, ಹಾಗೆಯೇ ಹಾಸ್ಟೆಲ್ ಮಕ್ಕಳು ಸಮಸ್ಯೆ ಎಂದಾಗ ತಕ್ಷಣ ಸ್ಪಂದಿಸುವ ನಮ್ಮ ಪ್ರಿನ್ಸಿಪಾಲರು ಮನದಲ್ಲಿ ಹೀಗೊಮ್ಮೆ ಹಾದುಹೋಗುತ್ತಾರೆ.

ಈ ದಿನ ಎಲ್ಲರೂ ಹೇಳುವ ಮಾತು ಒಂದೇ.. ಆ ದಿನಗಳು ಮತ್ತೆ ಬರಲಾರವು.. ಅಂತಹ ಗೆಳೆತನ ಮತ್ತೆ ಸಿಗಲಾರದು.. ಆ ಚೇಷ್ಟೆಗಳನ್ನು ಮತ್ತೆ ಮಾಡಲಾಗದು.. ಜೀವನದ ಅತ್ತ್ಯುತ್ತಮ ದಿನಗಳನ್ನು ಪಟ್ಟಿ ಮಾಡಿದಲ್ಲಿ, ಮೊದಲು ನೆನಪಾಗುವುದೇ ಹಾಸ್ಟೆಲ್ ದಿನಗಳು.........

ಕಡಿಯಬೇಡಿರಣ್ಣಾ.. ಮರವಿದು ತಂದೆ-ತಾಯಿಯಣ್ಣಾ..

ಕಾಡನ್ನು ವನದೇವಿ ಎಂದೂ, ನೆಲವನ್ನು ಭೂಮಿತಾಯಿ ಎಂದೂ, ನದಿಯನ್ನು ಗಂಗಾಮಾತೆ ಎಂದೂ, ಹಸುವನ್ನು  ಗೋಮಾತೆ ಎಂದೂ  ಕರೆದು ಪೂಜಿಸುವ ದೇಶ ನಮ್ಮದು. ವರುಷಕ್ಕೊಮ್ಮೆ ಮಾತ್ರ   ಪರಿಸರ ದಿನ, ವನ್ಯಜೀವಿ ಸಂರಕ್ಷಣಾ ದಿನ, ಭೂಮಿ ಹುಣ್ಣಿಮೆ, ಗಂಗಾಷ್ಟಮಿ, ದೀಪಾವಳಿಗಳನ್ನು  ಆಚರಿಸುವವರು(ವಾಟ್ಸಪ್ಪ್, ಫೇಸ್ಬುಕ್ ಗಳಲ್ಲಿ !!) ನಾವು.  ನಂತರದ ದಿನಗಳಲ್ಲಿ  ಮರಗಳು ಕೊಡಲಿ ಏಟಿಗೆ ಉರುಳಿ ಬೀಳುತ್ತವೆ. ನೆಲವನ್ನು ಅಗೆದು, ಬೆಟ್ಟಗಳನ್ನು ಕಡಿದ ಹಾಗೆ ಭೂಮಿತಾಯಿ ಘಾಸಿಗೊಳ್ಳುತ್ತಾಳೆ. ಪೂಜನೀಯವಾದ ನದಿಗಳು ತ್ಯಾಜ್ಯಗಳಿಂದ ಅಪವಿತ್ರವಾಗುತ್ತವೆ. ಹಸುಗಳು ಕಸಾಯಿಖಾನೆ ಸೇರುತ್ತವೆ.  
      ಹಬ್ಬಗಳ, ಅಥವಾ ಈ ರೀತಿಯ ದಿನಗಳ ಆಚರಣೆಗಳ ಅರ್ಥ ಇಷ್ಟೇನಾ?  ಖಂಡಿತ ಇಲ್ಲ. ಆ ಒಂದು ದಿನ, ವರ್ಷವಿಡೀ ದಾರಿದೀಪವಾಗಬೇಕು. ಹಾಗೆ ನಾವು ಆಚರಿಸುತ್ತಿದ್ದೇವೆಯೇ ಎಂದು ನನ್ನ ಪ್ರಶ್ನೆ..ಉತ್ತರ ಎಲ್ಲರಿಗೂ ಗೊತ್ತಿದೆ. ನಾವು ನಿಂತಿರುವ ನೆಲ ಕುಸಿದು ಬೀಳಲು ನಾವೇ ಕಾರಣೀಕರ್ತರು ಎಂಬುದು ಒಪ್ಪಿಕೊಳ್ಳಲು ಕಷ್ಟವಾದರೂ, ಸತ್ಯವೇ.. 
     ರವೀಂದ್ರ ಭಟ್ ಐನಕೈ ಅವರ  'ಒಂದು ಮರದ ಕತೆ' ನಾಟಕದಲ್ಲಿ ಮರವೊಂದು ಮನುಷ್ಯನನ್ನು ಬೇಡಿಕೊಳ್ಳುತ್ತದೆ. 
"ಕಡಿಯಬೇಡಿರಣ್ಣಾ ಮರವಾ ಕಡಿಯಬೇಡಿರಣ್ಣಾ 
ಹೊಸಕಿ ಹಾಕಬೇಡಿ ಭೂತಾಯಿಯ ಚೆಲುವಾ 
ಕಡಿದು ಚೆಲ್ಲಬೇಡಿ ನಮ್ಮ ತಾಯಿಯ ಒಲವಾ
ಕಡಿಯಬೇಡಿರಣ್ಣಾ ಮರವಿದು ತಂದೆ -ತಾಯಿಯಣ್ಣಾ.."
  ಆದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಡೀ ಕಾಡನ್ನೇ ನಾಶಮಾಡುತ್ತಾನೆ. ಅದೊಂದು ಮರದಲ್ಲಿ ದೇವರಿದೆ ಎಂಬ ನಂಬಿಕೆಯಿಂದ ಕಡಿಯದೇ ಉಳಿಸಿರುತ್ತಾನೆ. 
ಆ ಮರವು ತನ್ನೆಲ್ಲಾ ಬಾಂಧವರನ್ನು ಕಳೆದುಕೊಂಡ ದುಃಖದಲ್ಲಿ  ಹಾಡುತ್ತದೆ -
"ಕಡಿದು ಕೊಂದರು ಗೆಳೆಯರ ನನ್ನ ಗೆಳೆಯರ.. 
ಗೆಳೆಯರ ಕೊಂದವರ ಚಂಡಿಯು ತಿರುಪಲಿ, 
ಕೊಲೆಯಾದ ನನ್ನ ಗೆಳೆಯಾ.. ಬಂಗಾರದಂಥವಾ... 
ಕತ್ತಿಲಿ ಕಡಿದಿರಿ, ಕೊಡಲೀಲಿ ಬಡಿದಿರಿ.. 
ಎಲ್ಲಾ ಮಂದಿಯು ನೀವಾ.. ಹೋಕೀರಿ ನರಕಕ್ಕ " 
  ಎಷ್ಟು ಸತ್ಯ..  ಆದರೆ ಇಂದು ಪ್ರಕೃತಿ ಮನುಷ್ಯನಲ್ಲಿ ಬೇಡಿಕೊಳ್ಳುವ ಹಂತವನ್ನು ದಾಟಿದೆ. ಉದಾಹರಣೆ ನೀಡಲು ಆಸ್ಟ್ರೇಲಿಯಾದಷ್ಟು ದೂರ ಹೋಗಬೇಕಿಲ್ಲ, ಸುಟ್ಟು ಕರಕಲಾದ ನಮ್ಮ ಬಂಡೀಪುರವೇ ಸಾಕು. ಎಂತಹ ದೊಡ್ಡ ವ್ಯಕ್ತಿಯಾದರೂ ಸರಿಯೇ, ದೆಹಲಿಯ ಮಾಲಿನ್ಯಕ್ಕೆ  ಹೆದರಿ ಎಲ್ಲರೂ ಮನೆಯೊಳಗೆ ಮುದುರಿ ಕುಳಿತಿದ್ದನ್ನು ನೋಡಿದರೆ ಅರ್ಥವಾದೀತು ಪ್ರಕೃತಿಯ ಮುಂದೆ ಯಾವ ದೊಡ್ಡಸ್ತಿಕೆಯೂ ಪ್ರಯೋಜನಕ್ಕೆ ಬಾರದು ಎಂದು.
  ಈ ವರ್ಷದ ಮಳೆಗಾಲದ ಹಾನಿಯಿಂದ ಯಾವ ಕುಟುಂಬವೂ ಇನ್ನೂ  ಚೇತರಿಸಿಕೊಂಡಿಲ್ಲ. ನೆಲವಿನ್ನೂ ಹಸಿಯಾಗಿಯೇ ಇದೆ. 
      ಅದಕ್ಕೆ ಹೇಳಿದ್ದು -ಪ್ರಕೃತಿ ಮಾತೆ ಇನ್ನೆಂದೂ ಬೇಡಿಕೊಳ್ಳಲಾರಳು, ಕೇವಲ ದಂಡಿಸುತ್ತಾಳೆ. ನಾವು ಸಿದ್ಧರಿರಬೇಕು. ಯಾಕೆಂದರೆ ಎಲ್ಲದಕ್ಕೂ ಕಾರಣ ನಾವೇ ತಾನೇ..  
       ಏನೇ ಮಾಡಿದರೂ ಪರಿಸರ ಸಹಿಸಿಕೊಳ್ಳುತ್ತದೆ ಎಂಬ ಹುಚ್ಚು ಭ್ರಮೆಯಲ್ಲಿ ಮನುಷ್ಯ ಕ್ರೂರನಾದ, ವಿಷಜಂತುವಾದ. ಇಂದು ಪ್ರಪಂಚದಲ್ಲಿ ಮನುಷ್ಯ ಎಂಬ ಪ್ರಾಣಿಯನ್ನು ಬಿಟ್ಟು ಉಳಿದೆಲ್ಲ ಜೀವಿಗಳು ಅಳಿವಿನಂಚಿನಲ್ಲಿವೆ ಎಂದರೆ ತಪ್ಪಾಗಲಾರದು. 
     ಸ್ವಾರ್ಥದಿಂದ ಅಂಧನಾದ ಮಾನವನಿಗೆ ತನ್ನ ವಿನಾಶದ ಹಾದಿಯನ್ನು ತಾನೇ ರಚಿಸುತ್ತಿದ್ದೇನೆ ಎಂಬುದೂ ಕಾಣದಾಯಿತೇ? 
      ಮಕ್ಕಳು ತಪ್ಪು ಮಾಡಿದಾಗ, ತಾಯಿ ಒಂದು ಪೆಟ್ಟು ಕೊಡುತ್ತಾಳೆ -ಮತ್ತೆ  ಆ ತಪ್ಪು ಮಾಡದಿರಲಿ ಎಂದು. ಈಗ ಆಗಿರುವುದೂ ಅಷ್ಟೇ. ಇನ್ನೂ ಅನಾಹುತವಾಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದಲ್ಲಿ, ಭೀಕರ ಪರಿಣಾಮವನ್ನು ಎದುರಿಸಬೇಕಾದೀತು.
      ಹಾಂ! ಪ್ರಪಂಚವಿಡೀ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ಮಹಾನಗರಿಗಳ ದಿಕ್ಕೇ ಇನ್ನೊಂದು ಕಡೆ..! ವಿದ್ಯಾವಂತರೆನ್ನಬೇಕೋ, ಬುದ್ಧಿವಂತರೆನ್ನಬೇಕೋ, ಹಣವಂತರೆನ್ನಬೇಕೋ...ತಿಳಿಯದಾಗಿದೆ.  
    ಸುಂದರವಾಗಿ ಮಣ್ಣಿನಲ್ಲಿ ಬೆಳೆದು,  ಆಕಾಶದತ್ತ ಮುಖಮಾಡಿ ನಗು ಬೀರಬೇಕಿದ್ದ ಗಿಡಗಳನ್ನು ತಂದು, ಬೇರುಗಳನ್ನು ಕತ್ತರಿಸಿ , ಚಿಗುರನ್ನು ಚಿವುಟಿ, ಬಣ್ಣ-ಬಣ್ಣದ  ಕುಂಡದಲ್ಲಿ ನೆಟ್ಟು (ಇಟ್ಟು),  ಸೆಲ್ಫಿ ತೆಗೆದು, ಗೋ ಗ್ರೀನ್ಎಂದು ಬರೆದು  ಜಾಲತಾಣಗಲ್ಲಿ ಹಾಕುವವರನ್ನು ನೋಡಿದರೆ ನಗಬೇಕೋ ಅಳಬೇಕೊ ನಾನರಿಯೆ.. !! 
   ಪಾಪ ಅವರಾದರೂ ಏನು ಮಾಡಿಯಾರು?  ಮನೆಯೆದುರು ಅಂಗಳವಿಲ್ಲ, ತಲೆಯೆತ್ತಿ ನೋಡಲು ಆಕಾಶವಿಲ್ಲ ( ಎಲ್ಲವೂ ಮುಗಿಲೆತ್ತರದ, ದೈತ್ಯಾಕಾರದ ಕಟ್ಟಡಗಳೇ,  ಅಲ್ಲೊಂದು ಮಹಡಿಯಲ್ಲಿ ವಾಸ..!), ಇನ್ನು ಗಿಡಗಳಿಗೆಲ್ಲಿಂದ ಜಾಗ ತರಬೇಕು?   
      ಕೆಲವರು ಹೀಗೆ ಬೆಳೆಸುವುದು ಮನಸ್ಸಿಗೆ ನೆಮ್ಮದಿ ಕೊಡುತ್ತದೆ ಎನ್ನುತ್ತಾರೆ. ಕೆಲವರು ಅನಿವಾರ್ಯ ಎಂದರೆ ಬಹಳಷ್ಟು ಜನರಿಗೆ ಆಡಂಬರದ ಸಂಕೇತ! ವಿಷಾದವೇನೆಂದರೆ  ಇದು ( ಬೇರುಗಳನ್ನು ಕಡಿದ ಗಿಡಗಳನ್ನು ಮಾರುವುದು ) ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. 
       ಏನಾದರಾಗಲಿ, ಒಟ್ಟಿನಲ್ಲಿ ಹಸಿರಿದೆಯಲ್ಲಾ ಎಂದು ನಿಟ್ಟುಸಿರಿಡಬೇಕಷ್ಟೆ !
            ದೇಶ ಎಷ್ಟೇ ಪ್ರಗತಿ ಸಾಧಿಸಲಿ, ತಂತ್ರಜ್ಞಾನ ಎಷ್ಟೇ ಮುಂದುವರೆಯಲಿ, ಉಸಿರಾಡಲು ಆಮ್ಲಜನಕವೇ ಇರದಿದ್ದಲ್ಲಿ ಏನು ಮಾಡಲು ಸಾಧ್ಯ?
    ಇನ್ನಾದರೂ ಎಚ್ಚೆತ್ತುಕೊಳ್ಳೋಣ. ವಿಷಪೂರಿತ ನಗರಗಳನ್ನು ಕಟ್ಟಿ ಬೆಳೆಸಿದ ನಮಗೆ ಕಾಡನ್ನು ಬೆಳೆಸುವುದು ಕಷ್ಟವೇನಲ್ಲ... 

          ಹಸಿರನ್ನು ಬೆಳೆಸೋಣ, ಹಸನಾಗಿ ಬಾಳೋಣ...

ಸಂಜೆ ಕಳೆದುಹೋಗಿತ್ತು...

ಸುರಿವ ಮಳೆ ಧರೆಯ ತಂಪಾಗಿಸಿರಲು.. 
ತಂಗಾಳಿಯೊಡನೆ ಮಲ್ಲಿಗೆಯ ಕಂಪೂ ಕಿಟಕಿಯೊಳಗೆ ತೂರಿ ಬರಲು, 
ಜೀರುಂಡೆಗಳ ಹಾಡಿಗೆ, ಕಪ್ಪೆ ತಾಳ ಹಾಕುತಿರೆ, 
ಬಿಸಿ ಬಿಸಿ ಚಹಾ, ಹಲಸಿನಕಾಯಿ ಹಪ್ಪಳ ಜೊತೆಯಾಗಲು,.. 
ಇಷ್ಟದ ಪದ್ಯವ ಗುನುಗುತ್ತ, ಖಾಲಿ ಹಾಳೆಯ ಮೇಲೆ ಗೀಚುತ್ತಿರಲು.. 
ಲೋಕವೇ ಮರೆತಿತ್ತು... 
ಮಳೆಹನಿ ಸೋಕಿ ತಂಪಾದಾಗಲೇ ಅರಿವಾಗಿದ್ದು, 
ಈ ಸಂಜೆ ಕಳೆದೇ ಹೋಗಿತ್ತು..... 

ಅವಳು


ಹುಟ್ಟಿದಳು ಅವಳು
ನನ್ನ ಮುದ್ದು ಮಗಳು
ಅವಳೊಡನೆ ಹುಟ್ಟಿದಳು ಅಮ್ಮ
ಅದೇ ಮಗಳ ಅಮ್ಮ...
 
ಅವಳು ನನ್ನ ಕೀರುತಿ
ಒಮ್ಮೊಮ್ಮೆ ನನ್ನ ಗೆಳತಿ
ನನ್ನ ಬಾಳಿನ ಜ್ಯೋತಿ
ಮನೆ- ಮನದ ಶಾಂತಿ...

ಅವಳಿಗೂ ಆಯ್ತು ಲಗ್ನ
ಸಂಸಾರದಲಿ ಅವಳು ಮಗ್ನ !!
ಅವಳೀಗ ಅವನ ಹೆಂಡತಿ
ಕೊಡುವಳು ಬೊಗಸೆ ತುಂಬ ಪ್ರೀತಿ...

 ಅವಳು ಈಗ ಅಮ್ಮ 
ನನ್ನ ಪ್ರೀತಿಯ ಅಮ್ಮ
ನನ್ನ ದಾರಿದೀಪ ಅವಳು 
ಎಂದಿಗೂ ಪ್ರಾಣ ಸ್ನೇಹಿತೆ ಅವಳು...
 
ನೋವಿರಲಿ- ನಲಿವಿರಲಿ
ನೆನಪಾಗುವುದು 'ಅಮ್ಮಾ' ಎಂದೇ..
ಅವಳುತ್ತರ ನಗುಮೊಗದಿಂದಲಿ -
  " ಓ...ಬಂದೇ...."

ಅವಳೀಗ ಅಜ್ಜಿ
ನನ್ನ ಮುದ್ದು ಅಜ್ಜಿ
ಕತೆಯ ಹೇಳುತಾ ಮಲಗಿಸುವಳು
ತಾನೇ ಒಂದು ಕತೆಯಾಗುವಳು...!

ಅವಳೇ  ಮುದ್ದು ಮಗಳು
ಅವಳೇ  ಪ್ರಾಣ ಗೆಳತಿ
ಅವಳೇ  ಪ್ರೀತಿಯ ಹೆಂಡತಿ
ಅವಳೇ ಜೀವದ ಜೀವ -ಅಮ್ಮ
ಅವಳೇ ಕತೆ ಹೇಳುವ ಅಜ್ಜಿ
ಅವಳೇ ಸಹನೆಯ ಮೂರುತಿ
ಅವಳೇ ಮನೆಯ ನಗು
ಅವಳೇ ಬಾಳಿನ ಬೆಳಕು
ಬದುಕಿನ ಪಥ ಮುಗಿದರೂ-
ಅವಳೆಂದಿಗೂ ಅವಳಲ್ಲ
ಆದರೂ ಅವಳಿಗೆ ಸಾಟಿಯಿಲ್ಲ
"ಅವಳು ಅವಳೇ".................

ಹೆಣ್ಣು