Friday, August 16, 2024

ಹೆಣ್ಣು


ತುಂಬಿ ತುಳುಕುತ್ತಿರುವ ಮುಂಬೈ ಲೋಕಲ್ ರೈಲಿನ, ಮಹಿಳೆಯರ ಬೋಗಿಯಲ್ಲಿ ಸಿಕ್ಕ ಪುಟ್ಟ ಪಟಾಕಿ ಇವಳು..
ಅರ್ಧ ಗಂಟೆಯ ಪ್ರಯಾಣದಲ್ಲಿ ಮೊಬೈಲ್ ಲೋಕದಲ್ಲಿ ಮುಳುಗದೇ, ಜನರ ಒತ್ತಡವ ಲೆಕ್ಕಿಸದೆ ತಾನೊಬ್ಬಳೇ ಕಂಬಿಯಾಚೆಗಿನ, ನಾಗಲೋಟದ ಜಗವ ನೋಡುತ್ತಾ ತನ್ನದೇ ಮಾತಲ್ಲಿ ಕಳೆದುಹೋದ ಮುಗ್ಧ ಜೀವವದು..
ಅವೆಳೆದುರು ಕುಳಿತ ಅಮ್ಮನ ಬಳಿ ಅಲ್ಲಿ ನೋಡು ಇಲ್ಲಿ ನೋಡು ಎನ್ನುತ್ತಾ ಅಮ್ಮನನ್ನೂ ತನ್ನ ಲೋಕಕ್ಕೆ ಎಳೆದೊಯ್ಯುವ ಚತುರೆ..

ನನಗೂ ಅವಳ ಜಗಕ್ಕೆ ಸೇರುವ ಆಸೆ.. ಹೆಸರೇನೇ ಸುಂದರಿ ಎಂದರೆ ನಾ ಕೋಮಲೆ ಎಂಬ ಉತ್ತರ..
ನಾ ಎರಡನೇ ತರಗತಿ ಎಂದವಳೆ, ಅಕ್ಕಾ, ನನ್ನಂತಯೇ ಮೂಗಿಗೆ ರಿಂಗ್ ಹಾಕಿಕೊಂಡಿದ್ದೀರಾ ಎಂದು ನಕ್ಕಳು ಕರಿಗಪ್ಪು ಕಂಗಳ ಹೊಳಪಿಸುತ್ತಾ..
ಹೌದಲ್ಲಾ.. ಬರ್ತಿಯಾ ನನ್ ಜೊತೆ ಎಂದು ಕೇಳಿದರೆ, ಇವತ್ತು ಅಜ್ಜಿ ಮನೆಗೆ ಹೋಗ್ತಾ ಇದೀನಿ.. ನಂಗೆ ಅಡುಗೆ ಮಾಡಿ ಕಾಯ್ತಾ ಇದಾರೆ ಎಂಬ ಸರಳ ನಿರಾಕರಣೆ!

ಆಹ್! ಅಮ್ಮ, ಇಷ್ಟುದ್ದ ರೈಲಿನಲ್ಲಿ ನಾವ್ಯಾಕೆ ಓಡಿಬಂದು ಇಲ್ಲೇ ಹತ್ತಿದ್ವಿ?
ಅವಳಮ್ಮ ನನ್ನ ಮುಖ ನೋಡಿದಳು..ಅರ್ಥಗರ್ಭಿತವಾಗಿ!
ಇಲ್ಲಿ ಗಂಡಸರು ಇರಲ್ಲ ಮಗಾ.. ಎಂದಳು.
ಏನರ್ಥವಾಯಿತೋ ಏನೋ, ಒಂದು ಕ್ಷಣ ಯೋಚಿಸಿ ಮತ್ತೆ ಬೋಗಿಯಾಚೆಗಿನ ಲೋಕಕ್ಕೆ ಓಡಿದಳು.

ನಾ ಅವಳ ಅಮ್ಮನ ನೋಡುತ್ತಾ ನನ್ನೊಳಗಿನ ಲೋಕದಲ್ಲಿ ಕಳೆದೆ..
ಮಗಳೇ ಮುಂದೆ ನೀನೇನಾಗುವೆ ಎಂದು ಕೇಳುವ, ಕನಸ ಬೀಜವ ಬಿತ್ತುವ, ಮನದಾಸೆಯ ಬೆಳೆಸುವ ಶಕ್ತಿಯೇ ಇಲ್ಲದಂತೆನಿಸಿತು..
ಎಲ್ಲಿ ಮಗಳು ಅಮ್ಮಾ ನಾನು ಡಾಕ್ಟರ್ ಆಗುತ್ತೇನೆ ಎಂದರೆ? ನರ್ಸ್ ಆಗುತ್ತೇನೆ ಎಂದರೆ? ಮತ್ತೇನೋ ಆಗುತ್ತೇನೆ ಎಂದರೆ....?
ಕನಸು ಕಾಣುವುದು ತಪ್ಪೇ? ಆ ಕನಸಿಗಾಗಿ ಜೀವಿಸುವುದು ತಪ್ಪೇ? ಕಂಡ ಕನಸಿನ ಬದುಕ, ಬದುಕಲು ಹೊರಟರೆ ತಪ್ಪೇ?
ಇಲ್ಲ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಿರಬೇಕು!

ನನ್ನ, ಆ ಹೆಂಗಸಿನ ಕಂಗಳು ಒಂದರೆ ಕ್ಷಣಕ್ಕೆ ಬೆರೆತಿದ್ದವು, ಉತ್ತರವಿರಲಿಲ್ಲ..

-ಚಿತ್ರ, ಸಾಲು 
ಪಲ್ಲವಿ 


Friday, July 19, 2024

ಅಜ್ಜಿ


ಬೆನ್ನು ಬಾಗಿದರೂ, ದೇಹ ಕೃಶವಾದರೂ 
ಅವಳಿಗೆ ದಣಿವಾಗದೇ?
ಮೈಗೆ ಮುಪ್ಪು, ಮನಕಲ್ಲ!!

ಅವಳು ಪ್ರಕೃತಿಯ ಮಡಿಲಲಿ ಸದಾ
ನಲಿದಾಡುವ ಕೂಸು..
ಸಹಸ್ರಾರು ಹಸಿರು ಶಿಶುಗಳ ಮಾತೆ..
ಅವಳು ನಳನಳಿಸುವ ನವಯೌವ್ವನೆ..
ನವೋಲ್ಲಾಸದ ಚಿಲುಮೆ!
ನೂರಾರು ಬೀಜಗಳ ಸೆರಗಿನಲಿ ಹೊತ್ತೊಯ್ಯುವ ಸಿರಿವಂತೆ..

ಸುತ್ತಲಿನ ಹಸಿರು ಹೊಳೆವುದು
ಅವಳ ಸಾನಿಧ್ಯದಲಿ..
ಪುಟ್ಟ ತೆನೆಗಳು ತಲೆದೂಗುವವು
ಅವಳ ದನಿಯ ಇಂಪಿನಲಿ..
ಹೆಮ್ಮರವೊಂದು ತಲೆಬಾಗಿ ಪಿಸುಗುಡುವುದು 
ಅವಳ ಕಿವಿಯಲಿ...
ಹೂವೊಂದು ಅರಳಿ ನಗುವುದು
ಅವಳ ಸ್ಪರ್ಶದಲಿ..

ಇಷ್ಟೇ ಏನು?!
ಅವಳು...
ಅದೆಷ್ಟೋ ಬಾರಿ ಕಡಿದರೂ ಚಿಗುರುವ ರೆಂಬೆಯಂತೆ..
ಸಣ್ಣ ಬಳ್ಳಿ ಹಬ್ಬಲು ಆಸರೆಯಾದ ಕಂಬದಂತೆ..
ಅನೇಕ ಗೂಡುಗಳಿಗೆ ಆಧಾರವಾದ ದೈತ್ಯ ಮರದಂತೆ..
ಸುತ್ತ ನೂರು ಕಟ್ಟಡಗಳ ನಡುವೆ, ಬೆಳೆದು ನಿಂತು ಬೀಗುವ ವೃಕ್ಷದಂತೆ..

ಹಾಗಾಗಿಯೇ,
ಬೆನ್ನು ಬಾಗಿದರೂ, ದೇಹ ಕೃಶವಾದರೂ 
ಅವಳಿಗೆಂದೂ ದಣಿವಾಗದು...

-ಪಲ್ಲವಿ









Friday, July 12, 2024

ಮಲ್ಲಿಗೆ

ಜೀವವೇ.. ಕೇಳು ನೀ 
ಪುಟ್ಟದೊಂದು ಆಸೆ ಎನಗೆ 

ಮನೆಯಂಗಳದ ತುದಿಯಲಿ 
ಬೆಳೆದು ನಿಂತ ಅಚ್ಚಹಸಿರ ಗಿಡದಲಿ
ಅರಳಿ ನಿಂತಿವೆ ಮಲ್ಲಿಗೆ..
ಚಳಿಗಾಲದ ಇರುಳಿನಲಿ ಹೊಳೆವ ತಾರೆಗಳಂತೆ!

ಮೃದು ಮಲ್ಲಿಗೆಯ ಸೌಗಂಧಕೆ ಮಾಗಿ ಬಾಗಿ ವಯ್ಯಾರದಲಿ ಬಳುಕುತಿದೆ ಸೊಕ್ಕಿ ನಿಂತ ಗಿಡ
ನಿನ್ನೊಲವಿಗೆ ಸೋತು ಬಳುಕುವಂತೆ!
ಸೋತರೂ ಗೆದ್ದುನಿಂತು ಸೊಕ್ಕುವಂತೆ!!

ವಿಕಸಿತ ಕುಸುಮಕೆ ಅದಾವ ಅಪೇಕ್ಷೆಯೂ ಕಾಣುತಿಲ್ಲ;
ತನ್ನ ಜಗಕೆ ಘಮವ ಪಸರಿಸಿ ತನ್ನಸ್ತಿತ್ವವ ಸ್ಥಾಪಿಸಿ
ಸಂತಸವ ಮೆಲ್ಲಗೆ ಹಂಚುವ ಮಲ್ಲಿಗೆಯಂತೆ 
ನಾನಾಗಬೇಕು ನಿನ್ನ ಬಾಳಿಗೆ..
 

Monday, June 3, 2024

ಬದುಕು


ಅಪ್ಪನ ಸೈಕಲ್ಲಿನ ಸೀಟನ್ನು ಬಿಗಿಯಾಗಿ ಹಿಡಿದ ಕೈಗಳಿಗೆ ಅದೇನು ಬೇಕಿರಬಹುದು..
ಬಣ್ಣ ಬಣ್ಣದ ಬಲೂನು..?
ಊಹುಂ..
ವಿವಿಧಾಕಾರದ ತರಹೇವಾರಿ ಬಣ್ಣದ ಪುಗ್ಗಿಗಳೆಲ್ಲ ತನ್ನ ಹಿಂದೆಯೇ ಬರುತ್ತಿವೆ.. ತನ್ನವಲ್ಲದಿದ್ದರೂ!!
ಪುಟ್ಟ ಕಂಗಳಲ್ಲಿ ತುಂಬಿರುವುದು ಹಸಿವು, ಆಸೆಯಲ್ಲ! 

ಅಪ್ಪ ಕೊಡಿಸುವ ಐಸ್ ಕ್ಯಾಂಡಿಗಿಂತ ಇನ್ನಾವುದು ಮನಕೆ ತಂಪನೆರೆದೀತು?!!

(ಮಹಾನಗರಿಯ ಮನಸುಗಳು)
-ಚಿತ್ರ & ಸಾಲು 
ಪಲ್ಲವಿ

ಹೆಣ್ಣು