Monday, December 27, 2021

ಸಾನಿಧ್ಯ

ಬೆರಳ ಬಿಸುಪಿಗೆ ಬೆವರ ನೆನಪಿದೆ...
ಉಸಿರು ಉಸಿರಿಗೆ ಬಿಸಿಯ ತೇವವಿದೆ...
ನಿನ್ನ ಸಾನಿಧ್ಯ, ಸಾಂಗತ್ಯ ಮಾತ್ರವೇ ಬೇಕಿದೆ...

Sunday, December 26, 2021

ರಾಮೇಸ ಮತ್ತು ಅನಿವಾರ್ಯ..!

ನಮ್ಮೂರ ರಾಮೇಶ ಕೆಲಸ ಕೇಳಿಕೊಂಡು ಎಲ್ಲ ಮನೆಗಳಿಗೆ ಹೋದರೂ ಎಲ್ಲ ಕಡೆಯೂ ಕೆಲಸ ಸಿಗುತ್ತಿರಲಿಲ್ಲ. ಸ್ವಲ್ಪವೇ ಎತ್ತರವಿದ್ದರೂ ಆ ಮರವನ್ನೇರದ, ಚೂರು ಆಳದ ಗುಂಡಿ ತೋಡು ಎಂದರೂ ತಲೆಕೆರೆಯುವ, ಕೇಳಿದರೆ "ಜೀವ ಬಯಾ.." ಎನ್ನುವವನಿಗೆ ಕೆಲಸ ಕೊಡುವುದೂ ಸುಲಭವಾಗಿರಲಿಲ್ಲ. ಅದರಲ್ಲಿಯೂ ನಾಲ್ಕು ಕೆಲಸಗಳನ್ನು ಒಟ್ಟಾಗಿ ಹೇಳಿದರೆ, ಕೊನೆಯ ಕೆಲಸವೊಂದನ್ನು ಮುಗಿಸಿ, "ಅವಾಗೆಂತೋ ಹೇಳಿದ್ರಲಾ.. ಅದೆಂತ ಆತ್ರೋ.." ಎನ್ನುತ್ತಾ ಬೊಚ್ಚು ಬಾಯಲ್ಲಿ ಹಿಹಿಹ್ಹಿ ಎನ್ನುತ್ತಿದ್ದ.
ತರಕಾರಿಗೆ ಪಾತಿ ಮಾಡುವುದು, ಎಷ್ಟೇ ಭಾರವಿದ್ದರೂ ಲೀಲಾಜಾಲವಾಗಿ ಎತ್ತುವುದು ಅವನ ಕುಶಲತೆಗಳು. ಹಾಗಾಗಿ ಅಂಥ ಕೆಲಸಗಳಿದ್ದಾಗ ರಾಮೇಶನನ್ನು ಖಂಡಿತ ಕರೆಯುತ್ತಾರೆ. ಆದರೆ ಕರೆದ ಕಡೆಯೆಲ್ಲ ಅವನು ಹೋಗೇಬಿಡುತ್ತಾನೆಂಬುದೂ ಸುಳ್ಳು! ಅವನ ಸಮಯ, ಅನಿವಾರ್ಯತೆಗಳು ಅಂದಿನ ಕೆಲಸವನ್ನು, ಕೆಲಸದ ಮನೆಯನ್ನು ನಿರ್ಧರಿಸುತ್ತವೆ.ಯಾವ ಮನೆಯಲ್ಲಿ ಹೆಚ್ಚಿನ ಹಣ ಸಿಗುವುದೋ ಅಲ್ಲಿ ಮಾತ್ರವೇ ಅವನ ಕೆಲಸ.

ರಾಮೇಶ ಕೆಲಸಕ್ಕೆ ಬರುವುದೇ ಅಪರೂಪ. ಬಂದ ದಿನವೇ ಹೊರಡುವಾಗ, "ಹೆಗ್ಡೆ...ರು ಸಾ..ಲ" ಎಂಬ ರಾಗವಿರುತ್ತಿತ್ತು. ಆದರೆ ಪ್ರತಿಯೊಮ್ಮೆಯೂ ಅವನ ಹಣ ಕೇಳುವಾಗಿನ ಕಾರಣಗಳು ಬೇರೆಯೇ ಇರುತ್ತಿದ್ದವು.
"ಈಗಾ ಅನಿವಾರ್ಯ ಆತಲಾ..." ಎನ್ನುತ್ತಲೇ ಪ್ರಾರಂಭಿಸಿ, ಅವನ ಅನಿವಾರ್ಯತೆಗಳನ್ನು ವಿವರಿಸುತ್ತಿದ್ದ ಪರಿಗೆ ಹಲವು ಬಾರಿ ನಗು ಬಂದರೆ , ಕೆಲವು ಬಾರಿ ಸೋಜಿಗ ಉಂಟಾಗುತ್ತಿದ್ದುದು ಸುಳ್ಳಲ್ಲ.
ಮಗುವಿಗೆ, ಮಡದಿಗೆ ಅನಾರೋಗ್ಯ ಎಂಬುದನ್ನೇ ಅವ ವಿವರಿಸುವ ರೀತಿ ಭಿನ್ನವಾಗಿರುತ್ತಿತ್ತು.
ಊರಲ್ಲಿನ ಎಲ್ಲ ಮನೆಗಳಿಗೂ ಅವನು ಮತ್ತವನ ಅನಿವಾರ್ಯತೆಗಳು ಚಿರಪರಿಚಿತ.

ಮನೆಯಲ್ಲಿ ಯಾರಿಗೇ ಅರೋಗ್ಯ ಹದಗೆಟ್ಟರೂ ಮೊದಲು ಕಾಣುವುದು ಜ್ಯೋತಿಷಿಗಳ ಮನೆ! ಆಸ್ಪತ್ರೆ, ವೈದ್ಯರು, ಸೂಜಿ, ಮಾತ್ರೆ ಎಂದವರನ್ನು ಅನ್ಯಗ್ರಹ ಜೀವಿಗಳಂತೆ ನೋಡುತ್ತಿದ್ದ! ಮೊದಲ ಭೇಟಿ ಇರುತ್ತಿದ್ದುದು ಭಟ್ಟರ ಮನೆಗೆ! ಅದರಲ್ಲಿಯೂ ಹಲವು ಆಯ್ಕೆಗಳಿರುತ್ತಿದ್ದುವು...ಮೂಲೆ ಮನೆ ಭಟ್ಟರು, ಕಟ್ಮನೆ ಜ್ಯೋತಿಷಿಗಳು, ಕೊನೆ ಬೀದಿಯ ಜೋಯಿಸರು, ಕೆಳಗಿನ ಕೇರಿಯ ಶಾಸ್ತ್ರಿಗಳು.. ಇನ್ನೂ ಹಲವರು !
ಒಮ್ಮೆ ಮಗಳಿಗೆ ಜ್ವರ ಎಂದು 'ಅನಿವಾರ್ಯ' ಎಂದಿದ್ದ. ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಭಟ್ಟರು ಕೊಟ್ಟ ಭಸ್ಮವನ್ನು ಅವಳ ನಾಲಿಗೆಗೆ ತಿಕ್ಕಿದ್ದ. ಅದರಿಂದ ಆಕೆಯ ನಾಲಿಗೆ ರುಚಿ ಗುರುತಿಸುವುದನ್ನೇ ಮರೆತಿತ್ತು. ಊಟ ಎಂದರೆ ಅಳುತ್ತಿದ್ದಳಾಕೆ! "ಮೂಲೆ ಮನೆ ಬಟ್ರು ಪೇಟೆಂಟ್ ಇಲ್ಲಾ.. ನಮ್ ಕೆಳ್ಗಿನ ಕೇರಿಯೋರ್ ಅಡ್ಡಿಲ್ಲ..ಚೊಲೋ ಬೂದಿ ಕೊಡ್ತಾರೆ.." ಎನ್ನುತ್ತಿದ್ದ.

ಒಮ್ಮೆ ಅವನಿಗೇ ವಿಪರೀತ ಜ್ವರವಾಗಿತ್ತು.ಕೊನೆಗೂ ಎಲ್ಲರ ಒತ್ತಾಯದ ಮೇರೆಗೆ ಸುಪ್ರಸಾದ ಡಾಕ್ಟರ್ ಬಳಿ ಹೋಗಿದ್ದ. ಮಾರನೆಯ ದಿನವೂ ಕೆಲಸಕ್ಕೆ ಬರದಿದ್ದಾಗ ಏನೆಂದು ವಿಚಾರಿಸಬೇಕಾಯ್ತು.
" ಗುಳ್ಗಿ ಕೊಟ್ಟಾರೆ... ಡಾಕ್ಟ್ರಿಗೇ ಗುಣಾ... " ಎಂದ.
ಬಿಡಿಸಿ ಕೇಳಿದರೆ, ಘಟನೆ ಹೀಗಿತ್ತು. ಇವನಿಗೆ ಜ್ವರ ಮೈಗೇರಿ ಇನ್ನು ಯಾವ ಬೂದಿ, ದಾರ, ಮಂತ್ರ-ತಂತ್ರ, ಕಷಾಯ, ನಾರು-ಬೇರಿನ ಪರಿಣಾಮವಾಗದಿದ್ದಾಗ ಡಾಕ್ಟರ ಬಳಿ ಹೋಗಿದ್ದ.
"ಒಂದ್ ದೊಡ್ದ್ ಇಂಗೆಶನ್ ಕೊಟ್ಟಾರೆ.. ಮ್ಯಾಲಿಂದ ನೂರೈವತ್ತ್ ರೂಪಾಯಿ ಗುಳ್ಗಿ ಕೊಟ್ಟಾರೆ.. ಇದು ದೊಡ್ಡ ಜರಾನೆಯ"ಎನ್ನುತ್ತಾ ಬಂದವನಿಗೆ ಜ್ವರವಿನ್ನೂ ಕಡಿಮೆಯಾಗಿರಲಿಲ್ಲ. ಮಾತಿಗೊಮ್ಮೆ "ಡಾಕ್ಟರಿಗೇ ಗುಣಾ" ಎನ್ನುತ್ತಿದ್ದ.
ಅಂತೂ ನಾಲ್ಕು ದಿನಗಳ ನಂತರ ಮತ್ತೊಬ್ಬ ಡಾಕ್ಟರ ಬಳಿ ಹೋಗಿ ಬಂದ. ಆಮೇಲೆಯೇ ಸ್ವಲ್ಪ ಆರೋಗ್ಯ ಸುಧಾರಿಸಿದ್ದು. "ಈ ಡಾಕ್ಟರು ಹತ್ತು ರೂಪಾಯಿ ಗುಳ್ಗಿ ಕೊಟ್ಟವ್ರೆ. ನೋಡ್ರಿ ಹ್ಯಾಂಗ್ ಜರಾ ಬಿಡ್ತು..ಆ ಸೂಪರ್ಸಾದ ಡಾಕ್ಟರು ಕೊಟ್ಟ ಗುಳ್ಗಿ ಎಲ್ಲೂ ಮುಟ್ಟಲಿಲ್ಲ. ನೂರೈವತ್ತು ರೂಪಾಯಿ ಹೋತು.." ಎಂದ.
"ನಿಂಗೆ ಡಾಕ್ಟರ್ ಕಂಡ್ರೆ ಆಗಲ್ಲ.. ಭಟ್ರು ಕೊಡೋ ಮಂತ್ರದ ದಾರನೆ ಸರಿ!" ಎಂದರೆ " ಹೌದ್ರಾ.. ಅದ್ಯೇನೋ ಮೈಮೆ ಐತೆ" ಎಂದು ರಾಗ ಎಳೆದ!!

ರಾಮೇಶನ ಗೆಳೆಯರೂ ಸೇರಿ ಹಲವರು ಅವನನ್ನು ಮಂದ ಬುದ್ಧಿಯವನು ಎನ್ನುತ್ತಿದ್ದರು. ಆದರೆ ಆತ ಅವರೆಲ್ಲರಿಗಿಂತಲೂ ಬುದ್ಧಿವಂತನೇ! ಆಗಿನ ಕಾಲದಲ್ಲೇ ಪಿ ಯು ಸಿ ಓದಿದವನು ಅವನು.
ಅವನ ಮಾತುಗಳೇ ಮಜವಾಗಿರುತ್ತಿದ್ದವು. ಪ್ರತಿ ಮಂಗಳವಾರ ಸಂಜೆ "ಹೆಗ್ಡೆರು...ಸಾಲ" ಎಂದು ಹಣ ಕೇಳುತ್ತಿದ್ದ. ನಾಳೆ ಕೊಡುತ್ತೇನೆ ಎಂದರೆ "ನಾಳೆ ಅನಿವಾರ್ಯ" ಎನ್ನುತ್ತಿದ್ದ.
ಎಂದರೆ ನಾಳೆ ಆತ ಕೆಲಸಕ್ಕೆ ಬರುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು! ನಾಳೆ ಎಂತಾ ಅನಿವಾರ್ಯ ಎಂದು ಕೇಳಿದರೆ, "ನಾಳೇನೇ ದೊಡ್ಡ ತಳಪತ್ರೆ" ಎನ್ನುತ್ತಿದ್ದ. 'ಬುಧವಾರ' ಎನ್ನುವುದೇ ಅವನ ದೊಡ್ಡ ಸಮಸ್ಯೆ ಹಾಗೂ ಅನಿವಾರ್ಯ! ಪ್ರತಿ ಬುಧವಾರವೂ ಸಂತೆಗೆ ಹೋಗಬೇಕಿತ್ತು. ಹೆಂಡತಿ ಕೊಡುವ ಚೀಟಿಯಲ್ಲಿನ ಎಲ್ಲಾ ಸಾಮಾನುಗಳನ್ನು ತರಬೇಕಿತ್ತು. ಅದು ಅವನ ಸಮಸ್ಯೆ. ಅದಕ್ಕಾಗಿ ದುಡ್ಡು ಬೇಕಿತ್ತು. ಅದು ಅವನ ಅನಿವಾರ್ಯ..

ಹಾ.. ಸಂತೆ ಎಂದ ತಕ್ಷಣ ನೆನಪಾಯ್ತು. ಪ್ರತಿ ಬುಧವಾರ ನಡೆಯುವ ಸಂತೆಗೆ ನಾಲ್ಕು ಕಿಲೋಮೀಟರ್ ಸೈಕಲ್ ನಲ್ಲಿ ಬಂದು, ಇಡೀ ಸಂತೆ ಪೇಟೆಯನ್ನು ಓಡಾಡುತ್ತಾನೆ ರಾಮೇಶ. ಪ್ರತಿ ಅಂಗಡಿಯ ಬಳಿಯೂ ಬೆಲೆಯನ್ನು ವಿಚಾರಿಸಿ, " ಓಹೋ.. ದುಬಾರಿ ಆತಲಾ.. " ಎನ್ನುತ್ತಾ ಬೊಚ್ಚ ಬಾಯಿಯನ್ನು ಓರೆ ಮಾಡಿ ತಲೆ ಕೆರೆದುಕೊಂಡು ಮುಂದೆ ಹೋಗುತ್ತಾನೆ. ಎಲ್ಲಾ ಅಂಗಡಿಗಳನ್ನೂ ಕೇಳಿ, ಕೊನೆಗೆ ಎಲ್ಲಿ ಕಡಿಮೆಗೆ ಹೇಳಿದ್ದರೋ ಅಲ್ಲೇ ಹಿಂದಿರುಗುತ್ತಾನೆ! ಅವನ ಜೊತೆಗೆ ಹತ್ರುಪಾಯಿ ದೋಸ್ತನೂ ಇರುತ್ತಾನೆ. ಅವನ ಹೆಸರು ಮಾದೇವ, ರಾಮೇಶ ಕರೆಯುವುದು 'ಹತ್ರುಪಾಯಿ ದೋಸ್ತ' ಎಂದು. ಆತ ಸಂತೆಯಲ್ಲಿ ಏನನ್ನೂ ಕೊಳ್ಳದೆ ರಾಮೇಶನ ಜೊತೆಗೆ ಸುತ್ತುತ್ತಾನೆ. ಒಂದು ಕ್ಷಣಕ್ಕೂ ತಲೆ ಎತ್ತುತ್ತಿರಲಿಲ್ಲ. ಹಾಗೆಂದ ಮಾತ್ರಕೆ ನಾಚಿಕೆ ಸ್ವಭಾವದವನು ಎಂದುಕೊಳ್ಳಬೇಡಿ! ಆತ ನೆಲ ನೋಡಿಕೊಂಡೇ ಓಡಾಡುತ್ತಾನೆ. ಅವನು ಸಂತೆಗೆ ಬರುವ ಮಹದೋದ್ದೇಶವೇ ಕಾಲ ಬುಡದಲ್ಲಿ ಚಿಲ್ಲರೆ ಹಣ ಬಿದ್ದಿದ್ದರೆ ಆಯ್ದುಕೊಳ್ಳುವುದು.. ಹೀಗೆ ಪ್ರತಿ ಸಂತೆಯಲ್ಲಿಯೂ ಕಡಿಮೆ ಎಂದರೂ ಹತ್ತು ರೂಪಾಯಿಯನ್ನಾದರೂ ಆರಿಸುತ್ತಿದ್ದ! ಹಾಗಾಗಿಯೇ ಆತ ರಾಮೇಶನಿಗೆ ಹತ್ರುಪಾಯಿ ದೋಸ್ತ!

ಈ ರೀತಿ ಇರುವ ಅವನ 'ಅನಿವಾರ್ಯ'ಗಳಲ್ಲಿ ತೀರಾ ವಿಚಿತ್ರವಾದುದು ಒಂದು ಇತ್ತು! ಒಂದು ದಿನ ಗಡಿಬಿಡಿಯಲ್ಲಿ ಓಡಿ ಬಂದ ರಾಮೇಶ " ಇವತ್ತು ಕೆಲಸಕ್ಕೆ ಬರಾಕೆ ಆಕ್ಕಲ್ಲ" ಎಂದ.
"ಬರೋದು ಬಂದಿದಿಯ, ಹುಲ್ಲನ್ನಾದ್ರೂ ಕೊಯ್ದು ಇಟ್ಟು ಹೋಗು" ಎಂದರೆ,
" ಪುರ್ಸೊತ್ತು ಇಲ್ಲಾ.. ಬಾಳ ಬಿಜಿ" ಎಂದ.
ಇದೇನಪ್ಪ ಇವನನ್ನು ಇಷ್ಟು ಬಿಜಿ ಮಾಡಿದ ಕೆಲಸ ಎಂದು ಕುತೂಹಲದಿಂದ ವಿಚಾರಿಸಿದೆವು.
" ಭಟ್ರು ಚಪ್ಪಾಳೆ ಹೊಡದುಬುಟ್ರು "
ವಿಷಯದ ತಲೆ-ಬಾಲವೇ ಗೊತ್ತಿಲ್ಲದ ನಮಗೆ ಏನೊಂದು ಅರ್ಥವಾಗಿಲ್ಲ.
"ಯಾವ ಭಟ್ರು? ಎಂತಾ ಚಪ್ಪಾಳೆ? ಎಲ್ಲಿ ಹೊಡದ್ರು? ಯಾಕೆ ಹೊಡದ್ರು?" ಅವನೆದುರು ಪ್ರಶ್ನೆಗಳ ಸುರಿಮಳೆಯಾಯ್ತು!
" ಅಯ್ಯೋ.. ಆ ಮೂಲೆ ಮನೆ ಭಟ್ರು ಇಲ್ಲನ್ರಾ.. ನಿಮ್ಗೆ ಗೊತ್ತಯಿತಲ್ಲ.. ನಮ್ಮೂರ ಗುಡಿಗೆ ಅವ್ರೇಯ ಭಟ್ರು"
" ಹಾ.. ಗೊತ್ತೈತೆ.. "
"ಅವರು ಇವತ್ತು ಚಪ್ಪಾಳೆ ಹೊಡದುಬುಟ್ರು"
" ಅಂದ್ರೆ..? ಹೋಗ್ಬುಟ್ರ?!"
"ಅಯ್ಯೋ ದ್ಯಾವ್ರೆ.. ಹಾಂಗಲ್ಲರಾ.. ಇವತ್ತು ದೊಡ್ಡಕೆ ಮಾತಾಡ್ತಾ ಇದ್ರಾ.. ಅವ್ರಿಗೆ ಸಮಾ ಕಾಸು ಕೊಡ್ತಾ ಇಲ್ಲಂತೆ. ದ್ಯಾಸ್ತಾನ ಬುಟ್ಟು ಹೋಗ್ತೀನಿ.. ನನ್ನ ಬುಟ್ಟು ಯಾವ ಮುಂಡೆಗಂಡ ಬತ್ತಾನೆ ಇಲ್ಲಿ ನೋಡ್ತೀನಿ.. ಅಂತೆಲ್ಲ ಚಪ್ಪಾಳೆ ತಟ್ಟಿ, ಚಿಟ್ಕಿ ಹೊಡ್ದು ಹೇಳ್ತ ಇದ್ರು.."
" ಅಷ್ಟೆಲ್ಲ ಗಲಾಟೆ ಅಯ್ತೆನೋ.. "
"ಇನ್ನು ಮುಗ್ದಿಲ್ಲ.. ನಡಿತಾ ಐತೆ.. ಅದ್ಕೇಯ ನಾ ಹೊಂಟೆ"
" ನೀ ಏನೋ ಮಾಡ್ತಿಯಾ.. "
"ಚಪ್ಪಾಳೆ ಭಟ್ರು ಏನು ಮಾಡ್ತಾರೆ ನೋಡ್ಬೋಕು"
ಎನ್ನುತ್ತಾ, ಉತ್ತರಕ್ಕೂ ಕಾಯದೆ ಹೊರಟೇ ಹೋದ. ಅಂದಿನಿಂದ ಅವರಿಗೆ 'ಚಪ್ಪಾಳೆ ಭಟ್ಟರು' ಎಂದು ನಾಮಕರಣ ಮಾಡಿದ್ದಾನೆ.ಇನ್ನೂ ಯಾರ್ಯಾರಿಗೆ ಏನೇನು ಹೆಸರಿಟ್ಟಿದ್ದಾನೋ ಅವನೇ ಬಲ್ಲ!!
ಅಂದು ಚಪ್ಪಾಳೆ ಭಟ್ಟರು ಜೋರಾಗಿ ಗಲಾಟೆ ಮಾಡಿದ್ದರಂತೆ.. ರಾಮೇಶ ಹೇಳಿದಂತೆಯೇ ಚಪ್ಪಾಳೆ ತಟ್ಟಿ, ನಾ ಈ ದೇವಾಲಯದ ಪೂಜೆ ಮಾಡಲಾರೆ ಎಂದರಂತೆ.ಅವರು ಅಷ್ಟೆಲ್ಲ ಹೇಳಿ ಹೋದ ನಂತರ ಅಲ್ಲಿಯೇ ನಿಂತ ರಾಮೇಶ, "ದುಡ್ಡಿಲ್ಲ ಅಂದ್ರೆ ದ್ಯಾವ್ರು ಇಲ್ಲಾ ದಿಂಡ್ರು ಇಲ್ಲಾ.. ಎಲ್ಲಾ ಚಪ್ಪಾಳೆನೆಯ.." ಎಂದು ನಕ್ಕನಂತೆ !!

-ಪಲ್ಲವಿ




Saturday, December 18, 2021

ಯಾವ ಪ್ರೀತಿಯೂ ಅನೈತಿಕವಲ್ಲ

ಖುದ್ದು ಸಂತೋಷಕುಮಾರ ಮೆಹೆಂದಳೆ ಸರ್ ಬಳಿ ಇಂದ ಅವರ ಒಂದಷ್ಟು ಪುಸ್ತಕಗಳನ್ನು ತರಿಸಿಕೊಂಡು ಒಂದು ವರ್ಷವೇ ಆಗಿರಬಹುದು. ಒಂದೇ ಗುಕ್ಕಿನಲ್ಲಿ ತಡವಾಗಿ ಬಿದ್ದ ಮಳೆ ಓದಿದ ನಂತರ ಇನ್ನೊಂದು ಪುಸ್ತಕಕ್ಕೆ ಕೈ ಹಚ್ಚಲು ಸಾಧ್ಯವಾಗಿರಲಿಲ್ಲ.
ಅಂತೂ ಈಗ ಯಾವ ಪ್ರೀತಿಯೂ ಅನೈತಿಕವಲ್ಲ ಪುಸ್ತಕವನ್ನು ಓದಿದ್ದೇನೆ.
ಪುಸ್ತಕ ಸಮರ್ಪಣೆಯೇ ಹೆಣ್ಣಿಗಾಗಿ.. ಬಹಳ ಚಂದದ ಶಬ್ದಗಳೊಂದಿಗೆ...
ಹೆಣ್ಣು, ಗಂಡು.. ಒಂದು ಭೂಮಿ, ಇನ್ನೊಂದು ಆಕಾಶ. ಎರಡರ ಮಿಲನಕ್ಕೂ ಅದರದ್ದೇ ಕಾಲಾವಕಾಶ ಬೇಕು. ಅಲ್ಲಿ ಯಾವದೇ ಅಹಂಗೆ, ಗೊಂದಲಕ್ಕೆ ಅವಕಾಶವಿಲ್ಲ. ಕಾಮ ಪ್ರೇಮವಲ್ಲ. ದೇಹವೊಂದೇ ಪ್ರೀತಿಯಲ್ಲ.
ಯಾವ ಪ್ರೀತಿಯೂ ಅನೈತಿಕವಲ್ಲ. ಲೇಖಕರೇ ಹೇಳುವಂತೆ ಅದೊಂದು ಚೆಂದದ ಮುಂಜಾನೆಯ ಇಬ್ಬನಿಯಲ್ಲಿ ತೊಯ್ದ ಚೆಂಗುಲಾಬಿಯ ಪಕಳೆಯಂತದ್ದು.
ಗಂಡು ಹೆಣ್ಣಿನ ನಡುವಿನ ಮಾನಸಿಕ ಹಾಗೂ ದೈಹಿಕ ಸಾಮರಸ್ಯದ ಕುರಿತಾಗಿರುವ ಪುಸ್ತಕವಿದು.
ಪುಟ್ಟ ಪುಸ್ತಕ ಓದಲು ಬಹಳ ಕಾಲಾವಕಾಶ ಬೇಡ.
ಇನ್ನು ಹಲವು ಪುಸ್ತಕಗಳು ಬಾಕಿ ಇವೆ. 'ಅಘೋರಿಗಳ ಲೋಕದಲ್ಲಿ' ಮತ್ತು 'ನಾನು ಅಘೋರಿಯಲ್ಲ' ಪುಸ್ತಕಗಳು ನನ್ನ ಕೈಗೇ ಸಿಗುತ್ತಿಲ್ಲ. ಗೆಳತಿಯರ ಕೈಗಳಲ್ಲಿವೆ.. ಆದಷ್ಟು ಬೇಗ ಅವನ್ನೆಲ್ಲ ಓದಿ ಮತ್ತೆ ಬರುತ್ತೇನೆ...

ಪುಸ್ತಕ : ಯಾವ ಪ್ರೀತಿಯೂ ಅನೈತಿಕವಲ್ಲ
ಲೇಖಕರು : ಸಂತೋಷಕುಮಾರ ಮೆಹೆಂದಳೆ
ಪುಟಗಳು : 200
ಬೆಲೆ : 150/-

Thursday, December 16, 2021

ಕಂಬಳಿಹುಳು v/s ಬಸವನಹುಳು

ಕೊಪ್ಪೆ ಮತ್ತು ಕಂಬಯ್ಯ ಇಬ್ಬರೂ ಕೆಲಸಕ್ಕಾಗಿ ಊರೂರು ಅಲೆಯುತ್ತ ನಮ್ಮೂರಿಗೆ ಬಂದವರು. ಇಬ್ಬರದೂ ನಿಜವಾದ ಹೆಸರು ತಿಳಿದಿಲ್ಲ.
ಕೊಪ್ಪೆ ಎತ್ತರದ ಆಸಾಮಿ, ಕರಿಯ ಹೊಳೆವ ಮೈ ಬಣ್ಣ. ಯಾವುದಕ್ಕೂ ಭಯ ಪಡದೆ ಮುನ್ನುಗ್ಗುವವನು. ಹಾವೆಂದರೆ ಹಾವು, ಉಡ ಎಂದರೆ ಉಡ... ರಪ್ಪನೇ ಕೈ ಬೀಸಿ ಹಿಡಿಯುವವನು. ಊರಲ್ಲಿ ಯಾವುದೇ ಮನೆಯ ಆಕಳು ಕರು ಹಾಕಬೇಕೆಂದರೂ ಅಲ್ಲಿ ಒಂದು ಹಾಜರಿ ಹಾಕಿ ಆಕಳಿಗೆ ಏನಾದರೂ ಸಮಸ್ಯೆಯಾದಲ್ಲಿ ಕೈ ಹಾಕಿ ಜಗ್ಗಿ ಎಳೆದು ಕರುವನ್ನು ತೆಗೆಯುತ್ತಿದ್ದ.
ಇಂತಹ ಕೊಪ್ಪೆಯ ಭಾವನೇ ಕಂಬಯ್ಯ. ಈತನೂ ಕೊಪ್ಪೆಯಷ್ಟೇ ಬಲಶಾಲಿ ಮನುಷ್ಯನಾದರೂ ಸ್ವಲ್ಪ ಆಲಸಿ. ಎಲ್ಲ ಕೆಲಸಕ್ಕೂ ಕೊಪ್ಪೆ ಮುನ್ನುಗ್ಗುವಾಗ, ಕಂಬಯ್ಯ ಸುಮ್ಮನೆ ನಿಂತಿರುತ್ತಿದ್ದ.
ಒಮ್ಮೆ ಹೀಗೆಯೇ ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ  ಮಂಗನ ಬಾಲವನ್ನು ಎತ್ತಿ ಹಿಡಿಯುತ್ತಿದ್ದ ಕೊಪ್ಪೆ. ಸತ್ತಿದೆ ಎಂದುಕೊಂಡ ಮಂಗ ರಪ್ಪನೆ ತಿರುಗಿ ಕೊಪ್ಪೆಯ ಮುಖವನ್ನು ಪರಚಿಬಿಟ್ಟಿತು. ಅಂದಿನಿಂದ ಅಳಿಲಿನ ಬೆನ್ನ ಮೇಲೆ ಮೂರು ಗೆರೆ ಇದ್ದಂತೆ ಕೊಪ್ಪೆಯ ಕೆನ್ನೆಯ ಮೇಲೂ ಮೂರು ಗೆರೆ. ಅಳಿಲಿಗೆ ರಾಮನ ಕೃಪಾಕಟಾಕ್ಷವಾದರೆ ಕೊಪ್ಪೆಗೆ ಹನುಮನದು!
"ನಿಂಗೆ ಯೋಳ್ದೆ ತಾನೇ.. ಮುಂದ್ ಮುಂದೆ ಹೋಗಿ ಕೈ ಆಕ್ಬೇಡ ಅಂತಾ.."
"ಲೇಯ್ ಕಂಬಯ್ಯಾ ನೀ ಏಳ್ದೆ ಅಂತಾನೆಯ ಹಿಂದಿಂದ ಬಾಲಕ್ಕೆ ಕೈ ಇಕ್ಕಿದ್ದು.. ಈಗ ನೋಡು.. ನನ್ ಮುಂದಿಂದ ತೆಗ್ದ್ ಬುಡ್ತು... ಮಂಗ್ಯಾ ನನ್ ಮಗಂದು..."
"ಥೋ... ನಾ ಯೋಳಿದ್ದು ರಪ ರಪನೆ ಎಲ್ಲಾದ್ಕೂ ಮುಂದೆ ಓಡ್ತಿಯಲ್ಲ.. ಹಂಗ್ ಹೋಗಬ್ಯಾಡ ಅಂತಾ "
"ಇದ್ನ ಮೊದ್ಲೇ ಯೋಳಕೆ ನಿಂಗೇನ್ಲಾ ಧಾಡಿ "
ಇಷ್ಟು ಮಾತಿದ್ದರೂ ಒಬ್ಬರ ಮೇಲೊಬ್ಬರಿಗೆ ಕಾಳಜಿಯೂ ಹಾಗೆಯೇ ಇತ್ತು. ಇಂತಹ ಭಾವ ನೆಂಟರ ನಡುವೆ ಒಂದು ಭೂತ ಹೊಕ್ಕಿತ್ತು. ಮೂರು ವರ್ಷದ ಹಿಂದೆ ತೀರಿ ಹೋಗಿದ್ದ ಕೊಪ್ಪೆಯ ಹೆಂಡತಿ ಎಂದರೆ ಕಂಬಯ್ಯನ ತಂಗಿಯ ವಿಷಯಕ್ಕೆ ಒಮ್ಮೆ ಇಬ್ಬರಲ್ಲಿಯೂ ಜಗಳ ಶುರುವಾಗಿತ್ತು. ಜಗಳ ತಾರಕಕ್ಕೇರಿ, ಇಬ್ಬರೂ ಕೈ-ಕೈ ಮಿಲಾಯಿಸಿ, ಕತ್ತಿ ಕುಡುಗೋಲು ಹಿಡಿಯುವ ಮಟ್ಟಿಗೆ ಏರಿತ್ತು. ಊರವರೆಲ್ಲ ನಡುವೆ ಹೋಗದಿದ್ದರೆ ಅಂದು ಯಾರದ್ದಾದರೂ ರಕ್ತ ಚೆಲ್ಲುವುದು ಖಚಿತವಾಗಿತ್ತು. ಅಂದಿನಿಂದ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಕೊಪ್ಪೆ ಕೆಲಸಕ್ಕೆ ಒಂದು ಮನೆಗೆ ಹೋದರೆ ಕಂಬಯ್ಯ ಅಲ್ಲಿ ಹೋಗುತ್ತಿರಲಿಲ್ಲ. ಇಬ್ಬರೂ ಬೇಕಾದ ಕೆಲಸಗಳಿದ್ದರೆ ಮನೆಯ ಯಜಮಾನ ಇಬ್ಬರನ್ನೂ ಓಲೈಸಿಯೇ ಸುಸ್ತಾಗುತ್ತಿದ್ದ.
 ಕೊಪ್ಪೆ ತನ್ನ ಬಳಿ ಯಾವಾಗಲೂ ತನ್ನಷ್ಟೇ ಕರಿಯ ಕಂಬಳಿಯನ್ನು ಇಟ್ಟುಕೊಂಡಿರುತ್ತಿದ್ದ. ಬಹುಷಃ ಕಂಬಳಿ ಕೊಪ್ಪೆ (ಮಳೆಗಾಲದಲ್ಲಿ ಚಳಿ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ತಲೆಯ ಮೇಲೆ ಕಂಬಳಿಯನ್ನು ಮಡಚಿ ಹಾಕಿಕೊಳ್ಳುವುದನ್ನು ಕೊಪ್ಪೆ ಎನ್ನುತ್ತಾರೆ) ಇಟ್ಟುಕೊಳ್ಳುವ ಕಾರಣದಿಂದಲೇ ಅವನಿಗೆ 'ಕೊಪ್ಪೆ' ಎಂಬ ಹೆಸರು ಬಂದಿರಬೇಕು.ಉರಿ ಬಿಸಿಲಲ್ಲೂ ಆ ಕಂಬಳಿಯನ್ನು ಹಾಸಿ ಅದರ ಮೇಲೆಯೇ ಮಲುಗುವುದನ್ನು ನೋಡಿದರೆ, ನೋಡಿದವನೇ ಬೆವರಬೇಕು! ಮೊದಲೆಲ್ಲ ಕಂಬಯ್ಯ ಕೊಪ್ಪೆಗೆ ಕಂಬಳಿಹುಳು ಎಂದು ರೇಗಿಸಿದಾಗ ಸುಮ್ಮನೆ ನಗುತ್ತಿದ್ದ. "ಮುಟ್ನೋಡು ಕಂಬ್ಳಿ ಹುಳಾನ ಉರಿ ಹೆಂಗಾಗತೈತೆ.." ಎಂದು ಕೊಪ್ಪೆಯೂ ನಗುತ್ತಿದ್ದ. ಈಗ ಕೊಪ್ಪೆಗೆ ಬೈಯಬೇಕೆಂದರೆ ಕಂಬ್ಳಿಹುಳ ಎನ್ನುತ್ತಿದ್ದ ಕಂಬಯ್ಯ. ಹಾಗಾಗಿ ಕೊಪ್ಪೆಯೂ ಕಂಬಯ್ಯನಿಗೆ ಹಿಸ್ಕು ಎಂದು ನಾಮಕರಣ ಮಾಡಿದ್ದ. ಹಿಸಕು ಎಂದರೆ ಕತ್ತು ಹಿಸುಕುವುದಲ್ಲ, ನಮ್ಮೂರ ಕಡೆ ಹಿಸುಕು ಎಂದರೆ ಬಸವನ ಹುಳು!
"ಆ ನನ್ ಮಗಾ ಏನ್ ಕಮ್ಮಿ ಇಲ್ಲ.. ನನ್ ಎದ್ರಿಗೆ ಬರ್ಲಿ.. ಅವತ್ತೇನೋ ನೀವ್ ಕಾಪಾಡುದ್ರಿ.. ಇಲ್ಲ ಅಂದಿದ್ರೆ ಹುಟ್ಟಲಿಲ್ಲ ಅನ್ನಿಸಬುಡ್ತಿದ್ದೆ.. ನಂಗೆ ಕಂಬ್ಳಿ ಹುಳಾ ಅಂತಾನಲ್ಲ ಅವ... ಅವನೊಬ್ಬ ಹಿಸಕ್ಪೇರಿ..."
ಊರವರಿಗೆಲ್ಲ ಆ ಹೆಸರೇ ಹೊಸದು..'ಹಿಸಕುಪೇರಿ'ಯ ಬಗ್ಗೆಯೇ ಚರ್ಚೆ. ಕೆಲವೇ ಗಂಟೆಗಳಲ್ಲಿ ಅದು ಕಂಬಯ್ಯನ ಕಿವಿಗೂ ಬಿದ್ದಿತ್ತು. ಅವನೂ ತಲೆ ಕೆಡಿಸಿಕೊಂಡ. 
ನಂತರ ಕೊಪ್ಪಯೇ ಹೇಳಿದ, ಹಿಸಕಿನ ಹಾಗೇ ನಿಧಾನವಾಗಿ ನಡೆದರೆ ಅದು ಹಿಸಕುಪೇರಿ ಎಂದು!
"ಕನ್ನಡ ಸಾಲ್ಯಾಗೆಲ್ಲ ಪೇರಿ ಹೋಗದಿಲ್ಲನ.. ಅವೇ ಹಿಸ್ಕು ಹೋದ್ರೆ ಹೆಂಗಿರತೈತಿ ಹೇಳು.. ಹಂಗೆಯ.. ಹೆಸರಿಗೆ ಮಾತ್ರ ಕಂಬಯ್ಯ ಅವ.. ಇರದು ಮಾತ್ರ ಕಂಬದ ಮೇಲೆ ಹರಿಯೋ ಹಿಸಕಿನ ಹಂಗೆ.." ಎಂದೆಲ್ಲ ಹೀಯಾಳಿಸಿದ್ದ. ಇಬ್ಬರ ಹಗೆ ಜಾಸ್ತಿಯಾಗಲು ಇದೂ ಒಂದು ಕಾರಣವಾಯ್ತು. ಊರವರೆಲ್ಲ ಕೊಪ್ಪೆ,  ಕಂಬಯ್ಯ ಎನ್ನುವುದನ್ನು ಬಿಟ್ಟು ಕಂಬ್ಳಿಹುಳ, ಹಿಸ್ಕು ಎಂದು ಬೆನ್ನ ಹಿಂದೆ ಕರೆಯಲು ಪ್ರಾರಂಭಿಸಿದರು.

ಇತ್ತೀಚೆಗೆ ಎಮ್ಮೆ ಮಾರಾಟಗಾರ ಹುಲಿಗೆಪ್ಪನ ಹೊಲದಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿ ಕಾಯಲು ಕಂಬಯ್ಯನನ್ನು ನೇಮಿಸಿದ್ದ. ಹೊತ್ತೇರುವ ಮುಂಚೆ ಹೋಗಿ ಬಿಳೆಹುಲ್ಲಿನ ಗೊಣಬೆಯ ಪಕ್ಕ ಮಲಗಿಬಿಟ್ಟರೆ ಕಂಬಯ್ಯನಿಗೆ ಹಂದಿ ಇರಲಿ, ಹುಲಿಗೆಪ್ಪನೇ ಬಂದರೂ ಎಚ್ಚರವಾಗುತ್ತಿರಲಿಲ್ಲ. ಅಂತೂ ಸಂಬಳ ತೆಗೆದುಕೊಳ್ಳಲು ಎರಡು ದಿನ ಇರುವಾಗ ಮಾತ್ರ ಕರಾರುವಾಕ್ಕಾಗಿ ಹಾಜರಾಗುತ್ತಾ ನಿಯತ್ತನ್ನು ಪ್ರದರ್ಶಿಸುತ್ತಿದ್ದ.

ಇಂತಹ ಸಂದರ್ಭದಲ್ಲಿಯೇ ಹುಲಿಗೆಪ್ಪನ ಮನೆಯ ದೊಡ್ಡೆಮ್ಮೆಗೆ ಕರು ಹಾಕುವ ದಿನ ಬಂದಿತ್ತು. ಅವನ ಹೆಂಡತಿಗೆ ಹುಲ್ಲು - ಹಿಂಡಿಯ ಚಿಂತೆಯಾದರೆ ಮಕ್ಕಳಿಗೆ ಗಿಣ್ಣ ಯಾವಾಗ ಸಿಗುವುದೋ ಎಂಬ ಚಿಂತೆ. ಹುಲಿಗೆಪ್ಪನ ಸಮಸ್ಯೆಯೇ ಬೇರೆ..
ಎಮ್ಮೆಗೆ ನೆನೆ ಬರುವ ಖಾಯಿಲೆಯಿದೆ. ಎಂದರೆ ಪ್ರತಿ ಬಾರಿಯೂ ಕರು ಹಾಕುವಾಗ, ಮಾಂಸದ ಜೊತೆಗೆ ಕರುಳೂ ಆಚೆ ಬರುತ್ತದೆ. ಹಸು ಅಥವಾ ಎಮ್ಮೆಯನ್ನು ಬಿಗಿಯಾಗಿ ಹಿಡಿದು ಕಾಲುಗಳನ್ನು ಅಗಲಿಸಿ ಬಾಲವನ್ನೆತ್ತಿ ಬಲವಾಗಿ ಒಳದಬ್ಬುತ್ತಾರೆ. ಒಂದೆರಡು ಆಳಿಂದ ಸಾಧ್ಯವಾಗದ ಕೆಲಸವದು. ಕಡಿಮೆ ಎಂದರೂ ನಾಲ್ಕು ಜನರಂತೂ ಇರಲೇ ಬೇಕು. ಅಲ್ಲಿ ಹರಿವ ರಕ್ತವನ್ನು ನೋಡಿಯೇ ಅದೆಷ್ಟೋ ಜನರಿಗೆ ತಲೆ ಸುತ್ತುವುದೂ ಇದೆ.
ಅಂತಹುದರಲ್ಲಿ ಇದು ದೈತ್ಯಾಕಾರದ ಎಮ್ಮೆ. ತನ್ನಂಥ ಕೃಶ ದೇಹದ ಆಸಾಮಿ ಹಾಲು ಕರೆಯಲೂ ಸಾಧ್ಯವಿಲ್ಲದಷ್ಟು ದೊಡ್ಡ ಕೆಚ್ಚಲಿನ ಎಮ್ಮೆ! ಹಿಂದಿನ ಬಾರಿ ಕೊಪ್ಪೆ ಇರದಿದ್ದರೆ ಕರುವಿಗೆ ಕರುಳು ಸುತ್ತುವುದರ ಜೊತೆ ಎಮ್ಮೆಯೂ ನೋವಿನಿಂದ ಸಾಯುತ್ತಿತ್ತು. ಒಂದು ಕಾಲನ್ನು ದೊಣಪೆಗೆ (ಕೊಟ್ಟಿಗೆಯಲ್ಲಿ ಎಮ್ಮೆ ಕುತ್ತಿಗೆಯವರೆಗೆ ಮಾತ್ರ ಒಳಹಾಕಿ ಹುಲ್ಲು ಮೇಯಲು ಮಾಡಿರುವ ಜಾಗ) ಒತ್ತಿ ಹಿಡಿದು, ಶಕ್ತಿ ಹಾಕಿ ಕರುಳನ್ನು ಒಳಗೆ ತಳ್ಳಿದ್ದಕ್ಕೇ ಅಲ್ಲವೇ ಎಮ್ಮೆ ಬದುಕುಳಿದುದು. ಈ ಬಾರಿಯೂ ಹಾಗೇ ಆಗುವುದು. ಆದರೆ ಕೊಪ್ಪೆ ಬರುವುದೇ ಅನುಮಾನ.
ಕಂಬಯ್ಯನಿರುವ ಮನೆಗೆ ಕೊಪ್ಪೆ ಕಾಲಿಡಲೂ ಒಪ್ಪಲಾರ. ಕಂಬಯ್ಯನಿಗೆ ಬರಬೇಡ ಎಂದರೆ ಆ ಕೆಲಸಕ್ಕೆ ಮತ್ಯಾರೂ ಸಿಗಲಾರರು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹುಲಿಗೆಪ್ಪನಿದ್ದ.
ಅಂತೂ ಅವನ ಭಯ ನಿಜವಾಗುವ ದಿನ ಬಂದೇ ಬಿಟ್ಟಿತು. ಎಮ್ಮೆ ನೋವಿನಿಂದ ಕಾಲನ್ನು ಅಗಲಿಸಿ ಹೊಟ್ಟೆ ಮೇಲೆ ಮಾಡಿಕೊಂಡು ಬುಸುಗುಡುತ್ತ ಮಲಗಿತ್ತು. ಎಷ್ಟೇ ಹೊತ್ತಾದರೂ ಕರು ಹೊರಬರುವ ಸೂಚನೆಯೇ ಇರಲಿಲ್ಲ.
"ಕ್ವಾಣಗರನಾ ಹೆಣ್ಣ್ ಗರನಾ.. ಯಾವ್ದೋ ಒಂದು.. ಹುಸಾರಿಂದ ಆಗ್ಲವ್ವ ತಾಯೆ" ಎಂದು ಮೂರು ಬಾರಿ ಚೌಡಿಗೆ ಹೇಳಿಕೊಂಡಿದ್ದ. ಆದರೂ ಅವನ ಮನಸ್ಸು ಹೇಳುತ್ತಿತ್ತು - ಚೌಡಿಯ ಸಹಾಯಕ್ಕೂ ಮಿಗಿಲಾಗಿ ಕೊಪ್ಪೆಯ ಸಹಾಯ ಅತ್ಯಾವಶ್ಯಕ ಎಂದು.
ಯಾವುದಕ್ಕೂ ಒಮ್ಮೆ ಕೇಳಿಯೇ ಬರೋಣ ಎಂದು ಕೊಪ್ಪೆಯನ್ನು ಹುಡುಕಿ ಹೊರಟ ಹುಲಿಗೆಪ್ಪ. ಊರ ಹೊರಗಿನ ಕಟ್ಟೆಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತು ಹಲ್ಲಿನ ತೂತಿಗೆ ಕಡ್ಡಿ ಹಾಕಿ ಕೆರೆಯುತ್ತಿದ್ದ ಕೊಪ್ಪೆ. ಬೆವರಿ ಹೊಳೆವ ಕಪ್ಪು ದೇಹ, ಗುಂಗುರು ಕೂದಲು, ಬಲ ಬದಿಯ ಹೆಗಲ ಮೇಲೊಂದು ಟವೆಲ್,  ತೊಡೆಯ ವರೆಗೆ ಬಿಗಿಯಾಗಿ ಕಚ್ಚೆ ಹಾಕಿದ ಮಣ್ಣಾದ ಪಂಚೆ, ಪಕ್ಕದಲ್ಲೊಂದು ಕಂಬಳಿ. ನಾಲ್ಕು ಮಾರು ದೂರದಿಂದಲೇ ವೇಷವನ್ನು, ಕಂಬಳಿಯನ್ನು, ಕುಳಿತ ಭಂಗಿಯನ್ನು ಕಂಡು ಕೊಪ್ಪೆ... ಎಂದು ಕೂಗಿದ ಹುಲಿಗೆಪ್ಪ.
"ಹೇಳ್ರಿ ಹುಲಿಯಪ್ಪಾ..ಏನು ನನ್ನಾ ಹುಡಿಕಂಡು ಬಂದಿರಿ.."
"ನಿನ್ನ ಹತ್ರ ಕೆಲ್ಸ ಐತೆ.."
"ಆ ಹಿಸಕಪೇರಿ ಏನಾರು ಮಾಡೈತಾ..ನಂಗೂ ಅದ್ಕೂ ಸಂಬಂದ ಇಲ್ರಾ ಒಡಿಯ"
"ಲೋ ಈಗಾ ಕತಿ ಹೊಡಿಯಕ್ ಟೇಮ್ ಇಲ್ಲ.. ಎಮ್ಮಿಗೆ ಬ್ಯಾನಿ ಶುರುವಾಗೈತಿ..ಕರ ಹಾಕಕೆ ಒದ್ದಾಡ್ತಾ ಐತಿ.. ಬಾ ಹೋಗನ"
ಎಮ್ಮೆಯ ಪರಿಸ್ಥಿತಿ ಅರ್ಥವಾಗಿದ್ದೆ ಕಡ್ಡಿಯನ್ನೆಸೆದು ಟವೆಲನ್ನು ಸೊಂಟಕ್ಕೆ ಕಟ್ಟಿ ಹೊರಟ.
ಇಷ್ಟು ಸುಲಭವಾಗಿ ಇವನನ್ನು ಒಪ್ಪಿಸಬಹುದೆಂದು ಊಹಿಸಿರದ ಹುಲಿಗೆಪ್ಪ ಆಶ್ಚರ್ಯಚಕಿತನಾದ.
ಧಡ ಧಡನೇ ಬಂದವನೇ ಹುಲಿಗೆಪ್ಪನ ಹೆಂಡತಿಯ ಬಳಿ ನೀರು ಕಾಯಿಸಲು ಹೇಳಿ ಕೊಟ್ಟಿಗೆಗೆ ಓಡಿದ.
ಹುಲಿಗೆಪ್ಪ ಹೇಳಿದ್ದಕ್ಕಿಂತ ಎಮ್ಮೆಯ ಪರಿಸ್ಥಿತಿ ಹದಗೆಟ್ಟಿತ್ತು. "ಒಡಿಯ ಇದು ನನ್ನೊಬ್ಬನಿಂದ್ಲೇ ಆಗಕಿಲ್ಲ. ಇನ್ನೊಂದು ಆಳು ಬೇಕಲ್ರ.."
"ಈ ಮೂರ್ಸಂಜೆ ಹೊತ್ತಾಗೆ ಯಾರ್ ಬತ್ತಾರೆ?"
"ಎಮ್ಮಿ ಬೇಕು ಅಂದ್ರೆ ನೀವು ಯಾರ್ನರ ಕರ್ಕಂಡ್ ಬರ್ಲೆ ಬೇಕು.."
ಕೊನೆಗೆ ಹೊಲದಲ್ಲಿದ್ದ ಕಂಬಯ್ಯನ ನೆನಪಾಗಿ ಓಡಿದ ಹುಲಿಗೆಪ್ಪ. ಆ ಎಮ್ಮೆಯ ಕಥೆ ಅವನಿಗೂ ಗೊತ್ತಿದ್ದರಿಂದ ಮರುಮಾತಾಡದೆ ಓಡಿ ಬಂದ.
ಕಂಬಯ್ಯನನ್ನು ಕಂಡರೂ ಒಂದೂ ಮಾತನಾಡಲಿಲ್ಲ ಕೊಪ್ಪೆ. ಇವರಿಬ್ಬರ ಹಗೆಯಲ್ಲಿ ತನ್ನ ಎಮ್ಮೆ ಸಾಯುತ್ತದೆ ಎಂದುಕೊಂಡ ಹುಲಿಗೆಪ್ಪ.
" ಬಾವ ನೀ ಎಮ್ಮಿ ಕಾಲ ಹಿಡ್ಕ, ನಾ ಕರ ಉಗಿತಿನಿ(ಎಳಿತೀನಿ) " ಎಂದ ಕೊಪ್ಪೆ.
"ನಾ ಯಾಕ್ಲಾ ಕಾಲ್ ಹಿಡಿಲಿ.. ಒದ್ರೆ ನನ್ ಸೊಂಟ ಮುರೀಲಿ ಅಂತಾನಾ.."
"ಬ್ಯಾಡ ಬುಡು.. ನಾನೇ ಹಿಡ್ಕತೀನಿ.. ನೀ ಕರ ಉಗಿತಿಯಾ"
"ಬ್ಯಾಡ ಬ್ಯಾಡ.. ನೀನೇ ಉಗಿ ಮಾರಾಯ" ಎಂದು ಕಂಬಯ್ಯ ಎಮ್ಮೆಯ ಕಾಲುಗಳನ್ನು ಹಿಡಿದ.
ಒದ್ದಾಡಿ ಗುದ್ದಾಡಿ ಕೊಪ್ಪೆ ಕರುವನ್ನು ಹೊರಗೆಳೆದ. ಹತ್ತೇ ನಿಮಿಷದಲ್ಲಿ ಕರುಳು ಆಚೆ ಬರತೊಡಗಿತ್ತು. ಮತ್ತದೇ ಹೋರಾಟ ನಡೆಸಿ ಕರುಳನ್ನು ಒಳದಬ್ಬುವಷ್ಟರಲ್ಲಿ ಇಬ್ಬರೂ ಒದ್ದೆಯಾಗಿದ್ದರು, ಕೊಪ್ಪೆಯ ಮೈ ಕೈ ಎಲ್ಲಾ ಕೆಂಪಾಗಿತ್ತು.
"ಉಸ್ಸಬ್ಬ.. ಮುದ್ಕಿ ಮೈ ನೆರ್ದ ಹಂಗಾತು..." ಎನ್ನುತ್ತಾ ಅಲ್ಲೇ ಕುಸಿದ ಕಂಬಯ್ಯ.
"ಹುಲಿಯಪ್ಪ ಇನ್ನಮ್ಯಾಗೆ ಈ ಎಮ್ಮೆ ಕಟ್ಟಿಸ್ಬ್ಯಾಡ್ರಿ" ಎನ್ನುತ್ತಾ ಕೈ ಕಾಲು ತೊಳೆದುಕೊಂಡ ಕೊಪ್ಪೆ.
" ಬಾವ ಎಮ್ಮಿ ಕಾಲ್ ಮೆಟ್ಟಿತ್ತಲ.. ಪೆಟ್ಟಾತೇನ.. "
" ಇಲ್ಲ ಕೊಪ್ಪೆ ನಂಗೇನ್ ಆಗಿಲ್ಲ.. ನಿಂಗೆಂತರು ಆಗೈತ." "ಇಲ್ಲ ಇಲ್ಲ.. ನಾ ಅರಾಮ್ ಅದೀನಿ "
ಹುಲಿಗೆಪ್ಪನ ಹೆಂಡತಿ ತಂದುಕೊಟ್ಟ ಬಿಸಿ ಬಿಸಿ ಚಹಾ ಕುಡಿಯುತ್ತ ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಹುಲಿಗೆಪ್ಪ, " ಎಲಾ ಇವ್ರ.. ವರ್ಸಾನ್ ಗಟ್ಲೆ ಮಾತು ಬಿಟ್ಟಕಂಡು ಈಗೇನು ಆಗ್ದೇ ಇರ ಹಂಗೆ ಕಥೆ ಕೊಚ್ಚತಾ ಅವ್ರಲ್ಲ.. " ಎಂದುಕೊಂಡ.
ಈಗ ಕೊಪ್ಪೆ ಕಂಬಯ್ಯ ಇಬ್ಬರೂ ಒಟ್ಟಾಗಿ ಕೆಲಸಕ್ಕೆ ಹೋಗುತ್ತಾರೆ.
ಹುಲಿಗೆಪ್ಪ " ಈ ಕಂಬ್ಳಿ ಹುಳಾ - ಹಿಸ್ಕು ಎರ್ಡನ್ನುವೆ ನಮ್ಮನೆ ಎಮ್ಮಿ ಒಂದು ಮಾಡ್ತು... " ಎನ್ನುತ್ತಾ ಸುತ್ತುತ್ತಾನೆ.

-ಪಲ್ಲವಿ 

Thursday, December 2, 2021

ದೊಡ್ಡವರೂ ಓದಬೇಕಾದ ಪುಸ್ತಕ - "ಮಕ್ಕಳು ಓದಿದ ಟೀಚರ್ ಡೈರಿ"

ವೈ. ಜಿ. ಭಗವತಿಯವರ ಇತ್ತೀಚಿನ ಪುಸ್ತಕ "ಮಕ್ಕಳು ಓದಿದ ಟೀಚರ್ ಡೈರಿ". 
ನಾನು ಈ ಮೊದಲು ಮಕ್ಕಳ ಕಥೆಗಳನ್ನು ಓದಿದ್ದೆನಾದರೂ ಮಕ್ಕಳ ಕಾದಂಬರಿಯೊಂದನ್ನು ಓದಿದ್ದು ಇದೇ ಮೊದಲು. ಶಾಲಿನಿ ಎಂಬ ಟೀಚರ್ ಡೈರಿಯ ಸುತ್ತಲಿನ ಕಥೆಗಳಿವು. ಶಿಕ್ಷಕಿ ಊರಲ್ಲಿ ಇರದಿದ್ದಾಗ ಅವರ ವಿದ್ಯಾರ್ಥಿನಿಯರು ಕುತೂಹಲದಿಂದ ಡೈರಿಯನ್ನು ಕದ್ದು ಓದುತ್ತಾರೆ. ಕೆಲವು ಕೌತುಕ ಘಟನೆಗಳು, ಶಿಕ್ಷಕಿಯ ಮನೆಯ ಸ್ಥಿತಿ, ಆಟ ಪಾಠಗಳಲ್ಲಿ ಅವರ ಆಸಕ್ತಿ ಮಕ್ಕಳಲ್ಲಿ ತಮ್ಮ ಟೀಚರ್ ಬಗ್ಗೆ ಹೆಮ್ಮೆ ಮೂಡಿಸುತ್ತವೆ. ಮಕ್ಕಳಿಗೆ ತಮ್ಮ ಟೀಚರ್ ಮೇಲಿದ್ದ ಅಭಿಮಾನ-ಪ್ರೀತಿ, ಪ್ರತಿ ಹಂತದಲ್ಲಿಯೂ ಕಾಣುತ್ತವೆ. ಟೀಚರಿನ ಕಥೆಯನ್ನು ಓದುತ್ತಾ ಮಕ್ಕಳಲ್ಲಿಯೂ ಬದಲಾವಣೆಯಾಗುತ್ತದೆ. ಕೊನೆಯಲ್ಲಿ ಮಕ್ಕಳ ಅನುಭವ ಕಥನಗಳೂ ತೆರೆದುಕೊಳ್ಳುತ್ತವೆ.
ಪ್ರತಿ ಹಂತವೂ ಕೊನೆಯಲ್ಲಿ ಕುತೂಹಲಕಾರಿ ಘಟ್ಟದಲ್ಲಿ ಕೊನೆಗೊಂಡು ಇನ್ಯಾವುದೋ ತಿರುವಿನಲ್ಲಿ ಪ್ರಾರಂಭವಾಗುವುದು ವಿಶೇಷ. ಕಥೆಯ ಜೊತೆಗೆ ಪುಟಗಳ ವಿನ್ಯಾಸ, ಡಾ.ಆನಂದ್ ಪಾಟೀಲರ ರೇಖಾಚಿತ್ರಗಳು,ಪುಸ್ತಕದ ಬಹುಮುಖ್ಯ ಆಕರ್ಷಣೆ..!
ನಮ್ಮ ಮಲೆನಾಡನ್ನೂ ಉತ್ತರ ಕರ್ನಾಟಕವನ್ನೂ ಈ ಕಥೆಗಳಲ್ಲಿ ಟೀಚರ್ ಮೂಲಕ ಬೆಸೆದಿದ್ದಾರೆ ಲೇಖಕರು.
ಈ ಮಕ್ಕಳ ಕಾದಂಬರಿಯನ್ನು ಓದುತ್ತಾ ನಾನು ನನ್ನ ಶಾಲಾ ದಿನಗಳನ್ನು ಒಮ್ಮೆ ಮೆಲುಕು ಹಾಕಿದೆ.

2021ನೇ ಸಾಲಿನ "ಜಿ. ಬಿ. ಹೊಂಬಳ" ರಾಜ್ಯ ಮಟ್ಟದ ಮಕ್ಕಳ ಪುಸ್ತಕ ಪುರಸ್ಕಾರ ಪಡೆದ ಕೃತಿ ಇದು.
ದೊಡ್ಡವರೂ,ಪುಟಾಣಿಗಳೂ ಓದಬೇಕಾದ ಪುಸ್ತಕವಿದು.

ಪುಸ್ತಕ : ಮಕ್ಕಳು ಓದಿದ ಟೀಚರ್ ಡೈರಿ (ಮಕ್ಕಳ ಕಾದಂಬರಿ)
ಲೇಖಕರು : ವೈ. ಜಿ. ಭಗವತಿ
ಒಟ್ಟು ಪುಟಗಳು : 114
ಬೆಲೆ : 110/-

ಲಿಪ್ಸ್ಟಿಕ್

ಮಾಸ್ಕಿನ ಹಿಂದಿನ ಬಣ್ಣವು ನಾನು
ಕೆಂಪು ಕಂದು ಗುಲಾಬಿಯೂ
ಮಾಸಿದ ಕಥೆಯನು ಹೇಳುವೆ ನಾನು
ಮೌನಿ ನನ್ನೊಲವ ರೂಪಸಿಯೂ

ಒಂದಾನೊಂದು ಕಾಲದಲಿ
ನನಗದೆಷ್ಟು ಬೆಲೆಯಿತ್ತು
ಅಭಿಮಾನಿ ಬಳಗವಿತ್ತು
ತುಟಿ ಮೇಲೆ ಜಾಗವಿತ್ತು
ಎಲ್ಲೆಲ್ಲಿಯೂ ನನ್ನದೇ ಕಾರುಬಾರು
ವ್ಯಾನಿಟಿ ಬ್ಯಾಗ್, ಮೇಕ್ಅಪ್ ಕಿಟ್,
ಕನ್ನಡಿ ಎದಿರೂ, ಪರ್ಸಿನ ಬದಿಗೂ
ಬಟ್ಟೆಗೆ ಮ್ಯಾಚಿಂಗ್ ನಾನಿದ್ದೇನೆ
ಹಮ್ಮು ಇರದಿದ್ದೀತೆ..

ಬಂತೊಂದು ಹೆಮ್ಮಾರಿ
ನನ್ನ ಬಲವನಡಗಿಸಲು
ನನ್ನ ಹೊಳಪನಳಿಸಲು

ನಾ ಅನಂತ ರೂಪಗಳ ಪಡೆದೆ
ಕೆಂಪಾಗಿ, ಗುಲಾಬಿಯಾಗಿ, ನೇರಳೆಯಾಗಿ..
ಹೊಳಪಾಗಿ, ಘಮವಾಗಿ..
ಚಾಕ್ ಪೀಸ್,ಪೆನ್ಸಿಲ್, ಬ್ರಷ್ ಗಳ ರೂಪವಾಗಿ..
ಬೆವರಿಗೂ ನೀರಿಗೂ ಕರಗದಿರುವ ಬಲಶಾಲಿಯಾಗಿ...
ಆದರೂ ಸೋತೆ ನಾ..
ನನ್ನ ಮೇಲೆರಗಿದ ಮಾಸ್ಕಿನ ಎದುರು
ಸೋತು ಶರಣಾದೆ ನಾ...

-ಪಲ್ಲವಿ 

ಕರಗುವೆ...