Sunday, November 28, 2021

ಮನಸ್ಥಿತಿ...

ಕರ್ನಾಳ ಮಾಸ್ತರು ಸುಮಾರು ಮೂವತ್ತರ ಆಸು
ಪಾಸಿನವರು. ಕಿರಾಣಿ ವ್ಯಾಪಾರ ಅವರ ಕೆಲಸವಾದರೂ, ಮಾಸ್ತರರು ಎಂದೇಕೆ ಕರೆಯುವರೆಂದು ಯಾರಿಗೂ ತಿಳಿದಿಲ್ಲ. ಅವರ ಕುಟುಂಬದಲ್ಲಿ ಮೊದಲು ಯಾರೋ ಮಾಸ್ತರರಾಗಿದ್ದಿರಬಹುದು. ಅಲ್ಲಲ್ಲಿ ಇಣುಕುವ ಹತ್ತಾರು ನೆರೆತ ಕೂದಲು, ಕುರುಚಲು ಗಡ್ಡ, ಸಣ್ಣ ಹೊಟ್ಟೆ, ಉದ್ದ ತೋಳಿನ ಅಂಗಿ, ಬಿಳಿಯ ಲುಂಗಿ - ಎಂದಿಗೂ ಅವರನ್ನು ಹೀಗೆಯೇ ಕಾಣಬಹುದು. ಅವರೇನೋ ಹುಟ್ಟಿ ಬೆಳೆದುದು ಸಿದ್ದಾಪುರವೇ ಆದರೂ ಮೂಲತಃ ಅಲ್ಲಿಯವರಲ್ಲ. ಅವರ ತಂದೆ ಶೇಟಿ ಮಾಸ್ತರು ಚಿಕ್ಕಮಗಳೂರಿನ ಸಮೀಪದ ಯಾವುದೋ ಹಳ್ಳಿಯವರು. ತಮ್ಮ ಹಿರಿಯ ಮಗಳ ಖಾಯಿಲೆಗೆ ನಾಟಿ ಔಷಧಿ ಸಿಗುವುದೆಂಬ ಕಾರಣಕ್ಕೆ ಬಂದವರು, ನೆಲೆ ನಿಂತರು. ಮಗಳು ಹತ್ತೊಂಭತ್ತರ ಸುಮಾರಿಗೆ ಉಸಿರಾಟದ ತೊಂದರೆಯಿಂದ ಬಳಲಿ ಅಸುನೀಗಿದ್ದಳು. ಶೇಟಿ ಮಾಸ್ತರರು ಮತ್ತವರ ಮಡದಿ ತೀವ್ರ ಖಿನ್ನತೆಗೆ ಒಳಗಾದರೂ ಮಗ ಸಹದೇವ ಕರ್ನಾಳನ ಬೆಳವಣಿಗೆಯಲ್ಲಿ ದಿನ ದೂಡುತ್ತಿದ್ದರು. ಡಿಗ್ರಿ ಮುಗಿಯುತ್ತಿದ್ದಂತೆ ಕರ್ನಾಳ ಅಪ್ಪನ ದಿನಸಿ ಅಂಗಡಿಯ ಜವಾಬ್ದಾರಿ ವಹಿಸಿಕೊಂಡು ಅವರಿಗೆ ನಿವೃತ್ತಿ ನೀಡಿದರು.
ಪೇಟೆಯ ಮಧ್ಯದಲ್ಲೇ ಅವರ ಅಂಗಡಿ. ಎಡಕ್ಕೊಂಡು ಹಣ್ಣಿನ ಅಂಗಡಿ, ಬಲದಲ್ಲಿ ಒಂದು ಹೊಲಿಗೆ ಅಂಗಡಿ, ಮತ್ತದರ ಪಕ್ಕ ಒಂದು ಪುಟ್ಟ ಸ್ಟೇಷನರಿ ಅಂಗಡಿ. ಈ ನಾಲ್ಕು ಅಂಗಡಿಗಳ ಒಂದು ಸಾಲಿನ ನಂತರ ಕೆಲವು ಮನೆಗಳು. ಕರ್ನಾಳರ ಅಂಗಡಿಯ ಎದುರು ಒಂದು ದೊಡ್ಡ ಹುಣಿಸೆ ಮರ, ಪೇಟೆಯ ನಡುರಸ್ತೆ. ಎದುರಿಗೆ ಒಂದು ಪುಟ್ಟ ಟೀ ಸ್ಟಾಲ್.
ಪ್ರತಿ ಬುಧವಾರ ನಡೆಯುವ ಸಂತೆಯಲ್ಲಿ ಇವರ ಅಂಗಡಿಗಳ ಎದುರೇ ತರಕಾರಿ ಅಂಗಡಿಗಳು ಇರುತ್ತಿದ್ದವು. ರಸ್ತೆಯಲ್ಲಿ ವಾಹನಗಳು ಓಡಾಡಲು ಸಾಧ್ಯವಿರುತ್ತಿರಲಿಲ್ಲ. ವಾರಕ್ಕೊಮ್ಮೆ ನಡೆಯುವ ಸಂತೆಯಾದ್ದರಿಂದ ಜನನಿಬಿಡವಾಗಿರುತ್ತಿತ್ತು. ಅಂದು ಮಾತ್ರ ಕರ್ನಾಳರ ಟೀ ಅಂಗಡಿಯಲ್ಲಿನ ಜನಜಂಗುಳಿಯನ್ನು ನೋಡಲಸಾಧ್ಯ! ಎರಡು ಜನ ಕೆಲಸಕ್ಕಿದ್ದರೂ ಸಾಲದೇ ಅಂದು ಶೇಟಿ ಮಾಸ್ತರರೂ, ಸ್ವಾತಿಯೂ ಸಹಾಯಕ್ಕೆ ಹಾಜರಾಗುತ್ತಿದ್ದರು. ಇಷ್ಟಾದರೂ ಕೈ ತುರಿಸಿಕೊಳ್ಳಲೂ ಪುರಸೊತ್ತಿಲ್ಲದೆ ಕೆಲಸ ನಡೆಯುತ್ತಿತ್ತು. ಒಂದು ಬುಧವಾರ ಹಕ್ಕಲಕಣ್ಣಿಯ ಗೋವಿಂದ ಎಂಬ ಹಳೆಯ ಸ್ನೇಹಿತ ಕರ್ನಾಳ ಮಾಸ್ತರ ಭೇಟಿಯಾದ. ಉಭಯ ಕುಶಲೋಪರಿಗಳನ್ನು ಮಾತನಾಡುತ್ತ, ಕರ್ನಾಳ ಮಾಸ್ತರರು ತಮ್ಮ ಮನೆಯ ಪರಿಸ್ಥಿತಿಯನ್ನು ವಿವರಿಸಿದರು.

ಸ್ವಾತಿ ಕರ್ನಾಳರ ಮನೆ ಸೇರಿ ಐದು ವರ್ಷಗಳಾಗಿವೆ. ಮದುವೆಯಾದಾಗ ಅವಳ ವಯಸ್ಸು ಹದಿನೆಂಟು! ಸಣ್ಣಗೆ ಬೆಳ್ಳಗೆ ಇದ್ದ ಹುಡುಗಿ ಸೀರೆ ಸುತ್ತಿದ ಗೊಂಬೆಯಂತೆ ಕಾಣುತ್ತಿದ್ದಳು ಮದುವೆ ಮನೆಯಲ್ಲಿ. ಮೊದಲೆಲ್ಲ ಎಲ್ಲರೂ ಅತ್ತೆ ಮನೆಯಲ್ಲಿ ನೀ ಬೇಗ ಏಳಬೇಕು, ಬಹಳ ಕೆಲಸ ಇರುತ್ತವೆ, ಅವರು ಹೇಳಿದಂತೆ ನೀ ಕೇಳಬೇಕು, ದಿನವೂ ಅಡಿಗೆ ಮಾಡಬೇಕು, ಎಲ್ಲರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು ಎಂದೆಲ್ಲ ಹೇಳಿದಾಗ ದಿಗಿಲುಗೊಂಡಿದ್ದಳು. ಈ ಬೇಕುಗಳ ಪಟ್ಟಿಯನ್ನು ನೋಡಿ ಹೌಹಾರಿದ್ದಳು. ಹಾಗಾದರೆ ಇದು ಮದುವೆಯೇ ಅಲ್ಲ. ಮದುವೆಯಾದ ಮೇಲೆ ಹೀಗೆಲ್ಲ ಇರುತ್ತದೆಯಾದರೆ ಇಂತಹ ಮದುವೆ ಬೇಡವೇ ಬೇಡ ಎಂದು ನಿರ್ಧರಿಸಿದ್ದಳು. ಆ ನಿರ್ಧಾರಗಳನ್ನೆಲ್ಲ ಗಾಳಿಗೆ ತೂರಿ ಸಹದೇವನ ಸತಿಯಾಗಿ ಸ್ವಾತಿ ಕರ್ನಾಳರ ಕುಟುಂಬದ ಭಾಗವಾದಳು.
ಅವಳೆಣಿಸಿದಂತೆ ಯಾವುದೂ ಇರಲಿಲ್ಲ. ಮಗಳ ಕಳೆದುಕೊಂಡವರ ಮಡಿಲಿಗೆ ಮಗಳಾದಳವಳು. ಮನೆಯ ಮುದ್ದಿನ ಮಗಳಾಗಿ, ಸಹದೇವನ ಪ್ರೀತಿಯ ಪತ್ನಿಯಾಗಿ ಖುಷಿಯಲ್ಲಿರಬೇಕಾದರೆ ಬಂದ ಅತಿಥಿಗಳೆಲ್ಲ, "ಮದ್ವೆ ಆಗಿ ಎರಡು ವರ್ಷಾತು. ಆಡ್ಸಕೆ ಒಂದ್ ಕೂಸು ಬ್ಯಾಡ್ವೇನಾ.."
" ಅಪ್ಪ ಅಮ್ಮನ್ನ ಬ್ಯಾಗ ಅಜ್ಜ ಅಜ್ಜಿ ಮಾಡ್ರಿ.. "
"ವಯಸ್ಸು ನಿಲ್ಲದಿಲ್ಲ. ಮುದಿ ಆದ್ಮೇಲೆ ಮಕ್ಕಳಾಗದಿಲ್ಲ, ಯೋಚ್ನೆ ಮಾಡಿ.." ಎಂದೆಲ್ಲ ಹೇಳಲು ಪ್ರಾರಂಭಿಸಿದರು.
ಇಪ್ಪತ್ತರ ಹರೆಯದಲ್ಲೇ ಸ್ವಾತಿ ಗರ್ಭಿಣಿಯಾದಳು. ನೂರಾರು ಕನಸುಗಳು ಗಂಡ ಹೆಂಡತಿಯರಿಗೆ, ಹೆಣ್ಣುಮಗುವಾಗಲಿ, ಅವಳನ್ನು ಬಹಳ ಮುದ್ದಾಗಿ ಸಾಕೋಣ ಎಂದೆಲ್ಲ ಹಗಲು ರಾತ್ರಿ ಎನ್ನದೆ ಮಾತನಾಡತೊಡಗಿದರು. ಶೇಟಿ ಮಾಸ್ತರೂ ಅವರ ಪತ್ನಿಯೂ ಸೊಸೆಯನ್ನು ಆದಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು.
ಇವರ ಪ್ರೀತಿಯನ್ನು ಕಂಡು ಆ ಮಗುವಿಗೂ ಬೇಗ ಮಡಿಲು ಸೇರಬೇಕು ಎನಿಸಿತೋ ಏನೋ, ಮೂರೇ ತಿಂಗಳಿಗೇ ಜಾರಿ ಅದರಮ್ಮನ ಕೈ ಸೇರಿತ್ತು. ಅಘಾತದಿಂದ ಸ್ವಾತಿ ಎರಡು ದಿನ ಮಾತನ್ನೇ ನಿಲ್ಲಿಸಿದ್ದಳು. ಯಾರೇಷ್ಟೇ ಮಾತನಾಡಿಸಿದರೂ ಕಣ್ಣೀರು ಮಾತ್ರವೇ ಉತ್ತರವಾಗಿತ್ತು.ತನ್ನ ನೋವನ್ನು ನುಂಗಿ, ಸಹದೇವ ಹೆಂಡತಿಯ ಸಮಾಧಾನಕ್ಕೆ ನಿಂತಿದ್ದ.
ತಿಂಗಳುಗಳು ಕಳೆದು ವರುಷ ಉರುಳಿದರೂ ಸ್ವಾತಿ ಮೊದಲಿಗಿಂತ ಮೌನವಾಗಿರುತ್ತಿದ್ದಳು. ಮಗು ಎಂದರೆ ಹೆದರಿ ಮೂಲೆ ಸೇರುತ್ತಿದ್ದಳು. ಯಾರೇಷ್ಟೇ ಧೈರ್ಯ ಹೇಳಿದರೂ ಮತ್ತೆ ಮಗುವಿಗೆ ಮನಸೊಪ್ಪುತ್ತಿರಲಿಲ್ಲ.
ಮತ್ತೊಂದು ವರ್ಷದ ನಂತರ ಸ್ವಾತಿ ಮತ್ತೊಮ್ಮೆ ಬಸುರಿಯಾದಳು. ಮತ್ತದೇ ಖುಷಿ ನಗುವಿದ್ದರೂ ಎಲ್ಲರಲ್ಲೂ ಅವ್ಯಕ್ತ ಅಳುಕು ಮನೆಮಾಡಿತ್ತು. ಕೆಲವು ಹರಕೆಗಳಾದವು, ಹಲವು ಚಿಕಿತ್ಸೆಗಳಾದವು. ಮೊದಲಿಗಿಂತ ಹೆಚ್ಚಿನ ಪ್ರೀತಿಯಲ್ಲಿ ಸ್ವಾತಿ ಮುಳುಗಿದ್ದಳು.
ಅಂತೂ ಎಲ್ಲರ ಆಶಯದಂತೆ ಯಾವ ತೊಂದರೆಯೂ ಇಲ್ಲದೆ ಮಗು ಹುಟ್ಟಿತು. ಸ್ವಲ್ಪ ತಡವಾಗಿಯಾದರೂ, ಸಹದೇವನ ಕನಸಿನಂತೆ ಹೆಣ್ಣುಮಗುವೇ. ಬಲು ಮುದ್ದಾಗಿ ಗುಂಡಗೆ ಬೆಣ್ಣೆ ಮುಡ್ಡೆಯಂತಿದ್ದ ಆ ಮಗುವನ್ನು ಮನೆಗೆ ಬಂದವರೆಲ್ಲ ಮುದ್ದಾಡುತ್ತಿದ್ದರು. 'ಭೂಮಿ' ಎಂದು ಹೆಸರಿಟ್ಟ ಸಹದೇವ, ಅವನ ಭೂಮಿಯೇ ಅವಳು ಎಂದು! ಅಂಗಡಿಗಿಂತ ಹೆಚ್ಚು ಸಮಯ ಮನೆಯಲ್ಲೇ ಕಳೆಯತೊಡಗಿದ್ದ. ಅಂಗಡಿಗೆ ಹೋದರೂ ದಿನಕ್ಕೆ ಇಪ್ಪತ್ತು ಸಲ ಫೋನ್ ಮಾಡಿ ಮಗಳ ಬಗ್ಗೆ ವಿಚಾರಿಸುತ್ತಿದ್ದ.
ಸಮಸ್ಯೆ ಶುರುವಾಗಿದ್ದು ಮಗುವಿಗೆ ಎರಡು ತಿಂಗಳಿದ್ದಾಗ..
ಈಗ ತಾನೇ ಮಲಗಿದೆ ಎಂದರೆ ಕಿಟಾರನೆ ಕಿರುಚುತ್ತಿತ್ತು. ಉಸಿರು ಕಟ್ಟುವಂತೆ ಮುಖವ ಕೆಂಪಗೆ ಮಾಡಿಕೊಂಡು ಅಳುತ್ತಿತ್ತು. ನೋಡಿದವರ ಕಣ್ಣಲ್ಲೂ ನೀರು ತುಂಬುವಷ್ಟು ಜೋರಾಗಿರುತ್ತಿತ್ತು ಅದರ ಅಳು.
ಮೊದಲೆಲ್ಲ ಶಿಶುವ ಅಳು ಎಂದು ಅಷ್ಟು ಗಮನ ಕೊಡದಿದ್ದರೂ ಕೊನೆಕೊನೆಗೆ ತಾರಕಕ್ಕೇರುತ್ತಿದ್ದ ಅದರ ಅಳು ಭಯ ಹುಟ್ಟಿಸುತ್ತಿತ್ತು. ಮಗುವನ್ನೆತ್ತಿ ನೋಡಿದರೆ ಕೆಂಪಾಗಿ ಸೊಳ್ಳೆ ಕಚ್ಚಿದಂತೆ ಸಣ್ಣ ಗುಳ್ಳೆಯೋ, ಚುಚ್ಚಿದಂತೆ ಗಾಯವೋ ಕಾಣಿಸುತ್ತಿತ್ತು. ಹಾಸಿಗೆ ಬದಲಾಯಿಸಿದರೂ, ಬಟ್ಟೆ ಬದಲಾಯಿಸಿದರೂ, ಸಮಸ್ಯೆ ಬಗೆಹರಿಯಲಿಲ್ಲ. ಕೆಲವೊಮ್ಮೆ ಹಾಸಿಗೆಯಡಿಯಲ್ಲಿ ಸಣ್ಣ ಬಳೆಯ ಚೂರುಗಳು ಸಿಗುತ್ತಿದ್ದವು.
ಬಾಲಗೃಹ ಎಂದು ತಾಯತ ಕಟ್ಟಿದರೂ, ಹೋಮ ಮಾಡಿಸಿದರೂ ಮಗುವಿನ ಅಳು ನಿಲ್ಲುತ್ತಿಲ್ಲ. ಜ್ಯೋತಿಷಿ ಕಡಿಮೆಯಾಗುತ್ತದೆ ಎಂದರೂ ಹೇಗೆ ಯಾವಾಗ ಎಂದೇನೂ ಹೇಳಲಿಲ್ಲ.ಡಾಕ್ಟರ್ ಬಳಿ ಹೋದರೆ ಗಾಯಕ್ಕೆ ಔಷಧಿ ಕೊಟ್ಟರೇ ವಿನಃ ಸಮಸ್ಯೆಯ ಮೂಲ ಹುಡುಕಲಿಲ್ಲ. "ಮಕ್ಳು ಹಿಂಗೇ ಅಡ್ತವೆ. ಹೆದ್ರಕೋಬಾರ್ದು" ಎಂದರು.
ಈಗ ಮಗುವಿಗೆ ನಾಲ್ಕು ತಿಂಗಳು. ಇಷ್ಟು ದಿನಗಳಲ್ಲಿ ಒಂದು ದಿನವೂ ಈ ಸಮಸ್ಯೆ ಇಲ್ಲದಿಲ್ಲ. ಹಾಗಾಗಿಯೇ ದಿನದಿನಕ್ಕೂ ಮಗಳ ಪರಿಸ್ಥಿತಿ ನೋಡಿ ಸಹದೇವ ಕೊರಗಿದ್ದ. ಈ ಮಗುವೂ ಉಳಿಯದಿದ್ದರೆ ಎಂಬ ಭಯ ಅವನಲ್ಲಿ ಕಾಡುತ್ತಿತ್ತು. ಹಾಗಾಗಿ ಮೌನಕ್ಕೆ ಶರಣಾಗಿದ್ದ.
ಇವೆಲ್ಲವನ್ನೂ ಕರ್ನಾಳ ಮಾಸ್ತರಿಂದ ಕೇಳಿದ ಗೋವಿಂದ ಎರಡು ನಿಮಿಷ ಸುಮ್ಮನೆ ಕುಳಿತ. ನಂತರ "ನೀವೇನು ಬ್ಯಾಸರ ಮಾಡ್ಕಳದಿಲ್ಲ ಅಂದ್ರೆ ನಾ ಏನೋ ಹೇಳ್ತೆ ಕೇಳ್ತ್ರ.."
"ಹೇಳಿ ಗೋವಿಂದಣ್ಣ.. ಎಲ್ಲ ಮಾಡಿದ್ದಾಯ್ತು. ನೀವೂ ಹೇಳಿ ಕೇಳಾಣ."
"ಶಿಮೊಗ್ಗ ಹತ್ರೆ ಒಂದು ಡಾಕ್ಟ್ರು ಅವ್ರೆ. ಅವ್ರ್ನ ಒಂದ್ಸಲ ಭೇಟಿ ಮಾಡ್ರಿ. ಮಗಾ ಮಾತ್ರ ಅಲ್ಲಾ.ನೀವು ಸ್ವಾತಮ್ಮನೂ ಹೋಗ್ಬೇಕಾಯ್ತದೆ.ನೀವು ಹೂ ಅಂದ್ರೆ ನಾ ಎಲ್ಲ ವ್ಯವಸ್ಥೆ ಮಾಡ್ತೆ"
"ಸರಿ ಗೋವಿಂದಣ್ಣ.."
ಎರಡು ದಿನಗಳ ನಂತರ ಕರ್ನಾಳರು ಹೆಂಡತಿ ಮಗುವನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಬಂದಿಳಿದರು.
                                  ***
ಹಕ್ಕಲಕಣ್ಣಿಯ ಗೋವಿಂದ ಹೇಳಿದಂತೆ ಶಿವಮೊಗ್ಗದಲ್ಲಿ ದಂಪತಿಗಳು ಮಕ್ಕಳ ತಜ್ಞರನ್ನು ಭೇಟಿಯಾದರು. ಮಗುವಿನ ಸಮಸ್ಯೆ ಏನೆಂದು ತಿಳಿಯದಿದ್ದರೂ ಔಷಧಿ ಮಾತ್ರವೇ ಸಿಕ್ಕಿತು. ಅನ್ಯಮನಸ್ಕನಾಗಿದ್ದ ಕರ್ನಾಳರ ಬಳಿ ವೈದ್ಯರು ಮಾತನಾಡಿದರು.
"ನಿಮ್ಮ ಸಮಸ್ಯೆಯ ಮೂಲ ಮಗುವಿನಲ್ಲಿ ಇಲ್ಲವೇ ಇಲ್ಲ. ಒಮ್ಮೆ ನಾ ಹೇಳುವ ಡಾಕ್ಟರನ್ನ ಭೇಟಿಯಾಗಿ" ಎಂದು ವಿಳಾಸ ಕೊಟ್ಟರು.
ಹೇಗೂ ಬಂದಿದ್ದೇವೆ, ಅವರನ್ನೂ ಭೇಟಿಯಾಗಿಯೇ ಹೋಗೋಣ ಎಂದು ನಿರ್ಧರಿಸಿ ಹೋದಾಗ ಭೇಟಿಯಾಗಿದ್ದು ಮನೋವೈದ್ಯರು.
ಮೊದಲು ಕರ್ನಾಳರು ಅವರನ್ನು ಭೇಟಿಯಾಗಿ ಮಗುವಿನ ನಿರಂತರ ಅಳುವನ್ನೂ ಅದರ ಹಿಂದಿನ ತನ್ನ ಅನುಮಾನಗಳನ್ನೂ ಬಹಿರಂಗಪಡಿಸಿದರು.
ನಂತರ ಸ್ವಾತಿಯ ಬಳಿ ಆಪ್ತ ಸಮಾಲೋಚನೆ ನಡೆಸಿದಾಗ ವಿಷಯ ಖಚಿತವಾಗಿತ್ತು.
ಆ ನಂತರ ಗಂಡ - ಹೆಂಡತಿ ಇಬ್ಬರನ್ನೂ ಕೂರಿಸಿಕೊಂಡು ಡಾಕ್ಟರ್ ಮಾತನಾಡಿದರು.
"ನೋಡಿ ನೀವು ಮಗುವಿಗೆ ಏನೂ ಔಷಧಿ ಮಾಡುವ ಅವಶ್ಯಕತೆ ಇಲ್ಲ. ಸಮಸ್ಯೆಯ ಮೂಲವೇ ಸಿಕ್ಕಿದೆ. ನೀವು ಮಾಡಬೇಕಿರುವುದಿಷ್ಟೇ. ಸ್ವಾತಿಯವರನ್ನು ಮೊದಲು ಹೇಗೆ ಎಲ್ಲರೂ ಪ್ರೀತಿಸುತ್ತಿದ್ದಿರೋ, ಹಾಗೆಯೇ ಪ್ರೀತಿಸಿ."
"ನಾವೆಲ್ಲರೂ ಅವಳನ್ನ ಭಾಳ ಪ್ರೀತಿಸ್ತೇವೆ ಸಾರ್.."
"ಹಾಗಲ್ಲ.. ಸಂಪೂರ್ಣವಾಗಿ ನನ್ನ ಮಾತನ್ನು ಕೇಳಿ.."
ಸ್ವಾತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಡೆದಿದ್ದನ್ನೆಲ್ಲ ಡಾಕ್ಟರ್ ವಿವರಿಸುತ್ತಿದ್ದರು.
ಸ್ವಾತಿ ಅಪೂರ್ವ ಪ್ರೀತಿಯಲ್ಲಿ ಬೆಳೆದವಳು.ಗಂಡನ ಮನೆಯಲ್ಲೂ ಅದೇ ಪ್ರೀತಿಯನ್ನು ಪಡೆದಳು. ಮೊದಲ ಮಗುವಿನ ಗರ್ಭಪಾತದ ಸಮಯದಲ್ಲಿ ಅವಳು ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲಳಾಗಿದ್ದಳು. ಈ ಮಗು ಹುಟ್ಟುವ ಸಂದರ್ಭದಲ್ಲಿಯೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಳು. ಎಲ್ಲರ ಪ್ರೀತಿ ಅವಳ ನೋವನ್ನು ಮರೆಸಿತ್ತು.
ಮಗು ಹುಟ್ಟಿದ ಕೆಲವು ದಿನ ಎಲ್ಲವೂ ಸರಿಯಾಗಿಯೇ ಇದ್ದವು. ಆದರೆ ಸ್ವಾತಿ ಮಂಕಾಗಿರುತ್ತಿದ್ದಳು. ಊಟ ನಿದ್ದೆ ಎಲ್ಲವೂ ಕಡಿಮೆಯಾಗಿತ್ತು. ನಿಧಾನವಾಗಿ ಸರಿ ಹೋಗುತ್ತದೆ ಎಂದುಕೊಂಡಾಗ ಮಗುವ ಅಳು ಜೋರಾಗಿತ್ತು.
ಸ್ವಾತಿಯ ಪ್ರಕಾರ ಮಗು ಹುಟ್ಟಿದಮೇಲೆ ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಮಗುವನ್ನು ಎಲ್ಲರೂ ಬಹಳ ಪ್ರೀತಿಸುತ್ತಾರೆ. ಅವಳು ಬರುವ ಮೊದಲು ತಾನು ಮಾತ್ರವೇ ಈ ಮನೆಯ ಮಗಳಾಗಿದ್ದೆ. ಈಗ ತನಗೊಂದು ಪ್ರತಿಸ್ಪರ್ಧಿ! ಈ ಎಲ್ಲ ಯೋಚನೆಗಳಿಂದ ಮಗುವಿನ ಮೇಲೆ ಕುಪಿತಾಳಗಿ ಮಲಗಿದ್ದಾಗ ಚಿವುಟುತ್ತಿದ್ದಳು. ಅತ್ತರೆ ಜೋರಾಗಿಯೇ ಏಟು ಹಾಕುತ್ತಿದ್ದಳು. ಮಗುವಿನ ಹಾಸಿಗೆಯಡಿ ಒಡೆದ ಬಳೆ ಚೂರುಗಳನ್ನಿಡುತ್ತಿದ್ದಳು. ಮಗುವು ಮಲಗಿದಾಗಲೇ ಗಾಯಗೊಂಡು ಅಳುತ್ತಿತ್ತು. ಈ ಎಲ್ಲ ಕಾರಣಗಳು ತಾಯಿಯ ಮೇಲೆ ಪ್ರಭಾವ ಬೀರಲು ಮೂಲ ಕಾರಣ ಮಗು ಹುಟ್ಟಿದ ನಂತರ ಮನೆಯಲ್ಲಾದ ಬದಲಾವಣೆ! ಎಲ್ಲರ ಲಕ್ಷ್ಯವೂ ಒಮ್ಮೆಲೇ ಮಗುವಿನೆಡೆ ಕೇಂದ್ರೀಕೃತವಾಯ್ತು. ಸ್ವಾತಿ ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ, ಇದಕ್ಕೆ ಕಾರಣ ಮಗುವೇ ಎಂದುಕೊಂಡು ಇಷ್ಟೆಲ್ಲಾ ಮಾಡಿದ್ದಳು. ಮೊದಲಿನಂತೆ ಸ್ವಾತಿಯನ್ನೂ ನೋಡಿಕೊಳ್ಳಿ ಎಲ್ಲವೂ ಸರಿಹೋಗುತ್ತದೆ ಎಂದರು ವೈದ್ಯರು.
ಈಗ ಎರಡು ತಿಂಗಳಿಂದ ಮಗುವ ಅಳು ಕಡಿಮೆಯಾಗಿದೆ. ಯಾವುದೇ ತಾಯತ ಬೇಕಿಲ್ಲ, ಜ್ಯೋತಿಷಿ ಬೇಕಿಲ್ಲ, ಔಷಧಿಯ ಅವಶ್ಯಕತೆಯೂ ಇಲ್ಲ.

                            ***
-ಪಲ್ಲವಿ

Thursday, November 25, 2021

ಜೋಕಾಲಿ ಎಂಬ ತೂಗುವ ಪರಪಂಚ!!!

ಜೋಕಾಲಿ ನಾನೆಂದಿಗೂ ಇಷ್ಟಪಡುವಂಥ ಆಟ.
ಎರಡೂ ಪಾದದ ಎಲ್ಲ ಬೆರಳುಗಳನ್ನೂ ಊರಿ, ಹಿಂದೆ ಜೀಕಿ, ಕಾಲನ್ನು ಮುಂದೆ ಬಿಟ್ಟರೆ ಗಾಳಿಯಲ್ಲಿ ಮೇಲಕ್ಕೆರಿದಷ್ಟೂ ಖುಷಿಯೇ!
ಮೊದಲೆಲ್ಲ ಜಿದ್ದಿಗೆ ಬಿದ್ದು ಜೋಕಾಲಿಯನ್ನು ಜೀಕುತ್ತಿದ್ದೆವು, ನಾ ಮುಂದು, ತಾ ಮುಂದು ಎಂದು..
ಶಾಲೆಯ ಜೋಕಾಲಿಯಲ್ಲಿ ಆಡುವ ಖುಷಿಗಿಂತ ಅಸೂಯೆಯೇ ಜಾಸ್ತಿಯಿತ್ತೇನೋ..!
 ಮೂರು ಗಾಲಿಯ ಸೈಕಲ್ಲಿನ ಸೀಟಿಗೆ ಹಗ್ಗ ಜೋಡಿಸಿ ತೂಗುಬಿಟ್ಟ ದಿನ ಮನೆಯಲ್ಲಿ ಹಬ್ಬ. ಅಂತೂ ಮನೆಯಲ್ಲಿ ಹಠ ಮಾಡಿ ಜೋಕಾಲಿ ಒಂದನ್ನು ಕಟ್ಟಿಸಿಯಾಯ್ತು. ಅಕ್ಕ -ತಮ್ಮನ ಜಗಳಕ್ಕದುವೆ ನಾಂದಿಯಾಯ್ತು!
"ನಾ ಆಡ್ಬೇಕಿತ್ತು, ಅವ ದೂಡ್ಬೇಕಿತ್ತು..."
"ಇಲ್ಲ, ಇಷ್ಟೊತ್ತನಕ ನೀ ಆಡಿದ್ದಿ, ಈಗ ನಂದೇ ಆಟ.. ನೀ ಏಳು..."
ಅಂತೂ ನಮ್ಮ ಜಗಳ ನೋಡಲಾರದೆ ಜೋಕಾಲಿ ಅಟ್ಟಕ್ಕೇರಿತು.
ಕೊನೆಗೆ ಮಣೆಯ ನಾಲ್ಕೂ ಮೂಲೆಗೆ ಫಳ ಫಳನೆ ಹೊಳೆವ ಸ್ಟೀಲಿನ ಸರಪಳಿ ಹಾಕಿಕೊಂಡು ಬಂತೊಂದು ಜೋಕಾಲಿ. ಮಣೆ ಮುರಿವ ವರೆಗೂ ಜೀಕಿದ್ದಾಯ್ತು. ಆಮೇಲೆ ಬಂತೊಂದು ಜೀಕಲೂ ಬಾರದ, ಆಡಲೂ ಬಾರದ ಮೂರು ಸೀಟಿನ ದೈತ್ಯಾಕಾರದ ಜೋಕಾಲಿ. ಮೂರೇ ವರ್ಷಕ್ಕೆ ತುಕ್ಕು ಹಿಡಿದು, ಮೂಲೆ ಸೇರಿ, ಮನೆಯಲ್ಲಿ ಬೇಡದ ವಸ್ತುಗಳನ್ನೆಲ್ಲ ತನ್ನಲ್ಲಿ ತುಂಬಿಸಿಕೊಳ್ಳುವ ಸ್ಟೋರ್ ಜೋಕಾಲಿ ಆಗಿಹೋಯ್ತು!ಇಷ್ಟಾದರೂ ಜೋಕಾಲಿಯ ಪ್ರೀತಿ ಎಂದಿಗೂ ಕಡಿಮೆಯಾಗಲಾರದು!
ಬಹಳಷ್ಟು ಹೆಣ್ಣುಮಕ್ಕಳಿಗೆ ಜೋಕಾಲಿ ಎಂದರೆ ವಿಶೇಷ ಪ್ರೀತಿ! ಅದರಲ್ಲೂ ನಾ ಕಂಡಂತೆ ಉತ್ತರ ಕರ್ನಾಟಕದ ಹೆಣ್ಣುಮಕ್ಕಳಿಗೆ ಹಬ್ಬಕ್ಕೂ, ತವರಿಗೂ,ಜೋಕಾಲಿಗೂ ಬಿಡದ ನಂಟು. ನಾಗರ ಪಂಚಮಿಯಲ್ಲಿ ಜೋಕಾಲಿ ಕಟ್ಟಿ ಆಡುವುದು ಅವರ ಹಬ್ಬದ ಆಚರಣೆಗಳಲ್ಲಿ ಒಂದು.
ಇಷ್ಟಲ್ಲದೆ ಆರ್. ಎನ್. ಜಯಗೋಪಾಲ್ ಅವರು ಸುಮ್ಮನೆ ಹೇಳುತ್ತಾರೆಯೇ... "ಉಯ್ಯಾಲೆಯ ಆಡಿ ನಲಿವಾ ರೂಪಸಿ..." ಎಂದು!!

-ಪಲ್ಲವಿ 

Sunday, November 21, 2021

ರಾಮೇಸನ ಸಾಲ..!

ನಾನು ನನ್ನ ಮೂರು-ನಾಲ್ಕು ವರ್ಷದಿಂದಲೇ ಅವನನ್ನು ನೋಡಿದ್ದು.ಇಂದಿಗೂ ಅವನ ಬಟ್ಟೆ ಅಂದು ಏನಿತ್ತೋ ಅದೇ! ಭುಜದ ಬಳಿ ಹರಿದ ಕೆಂಪಂಗಿ, ಮೊಣಕಾಲುದ್ದದ ಮಣ್ಣಿನ ಬಣ್ಣದ ಚಡ್ಡಿ. ಬೀಳಬಾರದೆಂದು ಚಡ್ಡಿಗೆ ಸುತ್ತಿದ ಸೊಣಬೆ ದಾರ! ಮಳೆಗಾಲದಲ್ಲಿ ಮೂರು ಗೊಬ್ಬರ ಚೀಲಗಳಿಂದ ಮಾಡಿದ ಹಳದಿ ಬಣ್ಣದ ಕೊಪ್ಪೆ! ಅದೇನು ಅವನ ಕೆಲಸದ ಸಮವಸ್ತ್ರವೋ ಅಥವಾ ಇರುವುದೇ ಅದೊಂದು ಬಟ್ಟೆಯೋ ನಾನರಿಯೆ. ಹಬ್ಬದ ಮಾರನೆಯ ದಿನ ಬರುವಾಗ ಮಾತ್ರ ಮಿರಿ ಮಿರಿ ಮಿಂಚುವ ಹೊಸ ಅಂಗಿ!
ನಿಂತಲ್ಲಿಂದಲೇ ಕೊಟ್ಟಿಗೆಯ ಅಟ್ಟದ ತುದಿಗಿಟ್ಟ ವಸ್ತುಗಳನ್ನು ಕೈ ಹಾಕಿ ತೆಗೆಯುವಷ್ಟು ಎತ್ತರದವನು. ಧಡೂತಿಯೂ ಅಲ್ಲದ, ಸಪೂರವೂ ಅಲ್ಲದ ಆಳು; ಗೋಧಿ ಬಣ್ಣವೇ, ಆದರೆ ಸಾಧಾರಣ ಮೈಕಟ್ಟಲ್ಲ ಎನ್ನಬಹುದು! ನಾನು ನೋಡಿದಂತೆ ಎಂದಿಗೂ ಕೂದಲನ್ನು ಬಾಚಬೇಕಾದಷ್ಟು ಉದ್ದ ಬಿಡದೇ ತನ್ನ ತಲೆಗೂ ಕೂದಲಿದೆ ಎಂಬುದನ್ನು ಸಾಬೀತು ಪಡಿಸಲಷ್ಟೇ ಉಳಿಸಿರುತ್ತಾನೆ.
 ಅದೆಷ್ಟೇ ಬಿಸಿಯಾದ ಚಹಾ ಕೊಟ್ಟರೂ ಒಂದೇ ಗುಟುಕಿಗೆ ಕುಡಿದು ಮುಗಿಸುವವನ ರಹಸ್ಯ ಬಹಳ ತಡವಾಗಿ ತಿಳಿಯಿತೆನಗೆ! ನಕ್ಕರೆ ಅಮಾವಾಸ್ಯೆಯ ಕತ್ತಲೊಂದೇ ಕಾಣುವುದು ಆ ಬಾಯಿಯಲ್ಲಿ, ಹೆಸರಿಗೂ ಒಂದು ಹಲ್ಲಿರಲಿಲ್ಲ. ಅವನ ಮದುವೆಯ ಸಂದರ್ಭದಲ್ಲಿಯೇ ಸೈಕಲ್ನಿಂದ ಬಿದ್ದು ಹಲ್ಲುಗಳೆಲ್ಲ ಮುರಿದಿದ್ದವು. ಹಲ್ಲು ಸೆಟ್ ನ ಖರ್ಚುನ್ನು ನೋಡಿ ಅದರ ಸಹವಾಸವನ್ನೇ ಬಿಟ್ಟಿದ್ದವ 'ರಾಮೇಶ'! ಆ ಬೊಚ್ಚುಬಾಯಿಗೆ ಅದೆಷ್ಟು ಬಿಸಿ ಇದ್ದರೂ ತಟ್ಟುತ್ತಿರಲಿಲ್ಲ.
ನನಗೋ ಮೊದಲಿನಿಂದಲೇ ಅವನ ಕಂಡರೆ ಸ್ವಲ್ಪ ಸಿಟ್ಟು. ನನ್ನ ಆಟಿಕೆಗಳನ್ನೆಲ್ಲ ಅವನ ಮಕ್ಕಳಿಗೆ ಎಂದು ಒಯ್ಯುತ್ತಾನಲ್ಲ ಎಂದು.. ಅದನ್ನೆಲ್ಲ ಹೊಸತಾಗಿ ಖರೀದಿಸುವ ಶಕ್ತಿ ಅವನಲ್ಲಿರಲಿಲ್ಲ ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಾನು ಆಡದ ಆಟಿಕೆಗಳ ಮೇಲೂ ಮೋಹ ತುಸು ಜಾಸ್ತಿಯೇ ಇತ್ತು. ಹಾಗಾಗಿ ಅವ ಕೆಲಸಕ್ಕೆ ಬಂದ ದಿನಗಳಲ್ಲೆಲ್ಲ ಎಚ್ಚರಿಕೆಯಿಂದ ಅವನನ್ನೇ ಗಮನಿಸುತ್ತಿದ್ದೆ. ಸಂಜೆ ಹೊರಡುವ ಸಮಯದಲ್ಲಿ ಅವನ ಸೈಕಲ್ ತುದಿಗೆ ಬುತ್ತಿಡಬ್ಬಿ ಬಿಟ್ಟು ಹೊಸದೇನಾದರೂ ಇದೆಯೋ ಎಂದು ತಪ್ಪದೇ ನೋಡುತ್ತಿದ್ದೆ.
ಒಂದಷ್ಟು ವರ್ಷಗಳು ಕಳೆಯುತ್ತಿದ್ದಂತೆ ಅವನನ್ನು ಗಮನಿಸುವ ಕೆಲಸ ಹಾಗೆಯೇ ಉಳಿದಿದ್ದರೂ ಸಿಟ್ಟಿನ ಬದಲು ಕುತೂಹಲ ಶುರುವಾಗಿತ್ತು. ಅವನ ಮಾತುಗಳಿಗೆ ಉಳಿದ ಕೆಲಸಗಾರರು ನಗುವಾಗ, ಗೇಲಿ ಮಾಡುವಾಗ, ಅವರೊಡನೆ ರಾಮೇಶನೂ ಬೊಚ್ಚುಬಾಯಿಯಲಿ ನಗುವಾಗ ಮತ್ತಷ್ಟೂ ಕುತೂಹಲ!
ಬಂದ ತಕ್ಷಣ ಉಳಿದವರಿಗೆ, " ಯೇ.. ಇವತ್ ದೋಸ್ತಾ ಬಂದಾನೆ... ಏನಾ ದೋಸ್ತಾ... " ಎಂದು ಮಾತನಾಡಿಸಿಯೇ ಮುಂದಿನ ಹೆಜ್ಜೆ. ಒಂದು ಲೀಟರ್ ನೀರನ್ನು ಗಟ ಗಟ ಕುಡಿದು, ಮತ್ತೆ ನೀರನ್ನು ತುಂಬಿಸುವಷ್ಟರಲ್ಲಿ, " ಥತ್, ಇದ್ಯೆಲ್ಲಿ ಮಾರಾಯ.. ಒಳಕ್ ಹಾಕ್ದಂಗೆ ಹೊರಕ್ ಬತ್ತೈತಿ.. " ಎನ್ನುತ್ತಾ ಜಾಗ ಹುಡುಕುತ್ತ ಓಡುವುದು ದಿನಕ್ಕೆ ಮೂರು ಬಾರಿಯಾದರೂ ಕಾಣುತ್ತಿತ್ತು.
ಕರೆಂಟ್ ಬೇಲಿಯ ಬಳಿ ಹೋಗೋಕೆ "ಜೀವ್ಬಯಾ.." ಎನ್ನುತ್ತಾ ನಗುತ್ತಾ ನಿಲ್ಲುತ್ತಿದ್ದ. " ಇದ್ರಲ್ಲಿ ಕರೆಂಟ್ ಹರಿತಾ ಇಲ್ವೋ.. " ಎಂದರೆ " ಮತ್ಯಾಕೆ ಕರೆಂಟ್ ಬೇಲಿ ಅಂತಾರೆ?" ಎನ್ನುತ್ತಾನೆ. ಕಂಬದಂತೆ ನಿಂತವನನ್ನು ನಂಬಿಸಲು ಮೊದಲಿದ್ದವನೆ ದಾಟಿ ತೋರಿಸಬೇಕಿತ್ತು.!
ಎರಡು ದಿನಕ್ಕೊಮ್ಮೆ "ಹೆಗ್ಡೆ...ರು ಸಾಲ..." ಎನ್ನುತ್ತಾ ನಿಂತವನಿಗೆ ಹಣ ಕೊಡಲೇಬೇಕಿತ್ತು, ಇಲ್ಲದಿದ್ದರೆ ಹೆಜ್ಜೆ ಹಂದಾಡುತ್ತಿರಲಿಲ್ಲ. ಹಾ! ಅವನ ದುಡಿಮೆಗೇ ಅವನು ಸಾಲ ಎನ್ನುತ್ತಿದ್ದುದು.ಈಗಲೇ ಹಣ ಯಾಕೆ ಬೇಕೆಂದರೆ ಅವನು ಕೊಡುವ ಕಾರಣ ಒಂದೇ.. "ತಳಪತ್ರೆ ಬಾಳ..!"
ಅಂದರೆ ತಾಪತ್ರಯ (ಕಷ್ಟ) ಬಹಳ! ಕೊಡಲೇಬೇಕಿತ್ತು.
"ನಾಳೆ ಬಂದವ ಈ ಕೆಲಸ ಮಾಡ್ತ್ನಿ " ಎಂದೇನಾದರೂ ಹೇಳಿದರೆ, ಅವನ ನಾಳೆ ನಮ್ಮ ನಾಳೆಯಲ್ಲ ಎಂದೇ ತಿಳಿಯಬೇಕು! ಮತ್ತೆ ಅವನಿಗೆ ತಳಪತ್ರೆ ಬಂದಾಗಲೇ ಅವನ ಹಾಜರಿ ಇರುತ್ತಿದ್ದುದು!
ಕೋವಿಡ್ ಅವಾಂತರಗಳಿಂದ ಕೆಲಸಕ್ಕೆಲ್ಲೂ ಹೋಗಲಾರದೆ ಇದ್ದ ಸಮಯದಲ್ಲಿ ಹೇಳಿದ್ದನವ.. "ಅಲ್ಲೋ.. ಜನಾ ಏನೋ ಕಂಟ್ರೋಲ್ ಮಾಡಿರು.. ಕಾಯ್ಲೆ ಕಂಟ್ರೋಲ್ ಮಾಡಕ್ ಅಕ್ಕಲ ಅಲಾ..."
ಉಳಿದವರೆಲ್ಲ ನಕ್ಕಿದ್ದರೂ ಅವತ್ತು ಅವನು ನಗಲಿಲ್ಲ. ಅಸಹಾಯಕತೆಯೊ, ಕೋಪವೋ, ಭಯವೋ ಅರ್ಥವಾಗಲಿಲ್ಲ.
ಆತ ಎಲ್ಲರೂ ಗೇಲಿ ಮಾಡುವಂತೆ ಬೆಪ್ಪನಲ್ಲ, ಮುಗ್ಧ ಎಂಬುದು ಹಲವು ಬಾರಿ ಅನುಭವಕ್ಕೆ ಬಂದಿದೆ.
ಇತ್ತೀಚಿಗೆ ಡಾಬರ್ಮನ್ ತಳಿಯ ಪುಟ್ಟ ಮರಿ ಬಂದಾಗ, ದಂಗಾಗಿ ನಿಂತಿದ್ದ ರಾಮೇಶ. ಇದೇ ಮೊದಲ ಬಾರಿ ಬಾಲವಿಲ್ಲದ ನಾಯಿಯೊಂದನ್ನು ನೋಡಿದ್ದನವನು. ಅವನ ಊಹೆಗೂ ನಿಲುಕದ ವಿಷಯವದು.
"ಅಲ್ಲಾ... ಈಗ ಯಡಬಟ್ಟಾತಲಾ..."
"ಯಾಕೋ ರಾಮೇಸ... ಏನಾತೋ.."
"ಅಲ್ಲಾ.. ಗಾದೆ ಮಾತೆಲ್ಲ ಸುಳ್ಳೇ ಅಲ್ಲನ ದೋಸ್ತಾ..."
"ಏನಾತೋ ನಿಂಗೆ ರಾಮೇಸ?"
"ಸಾಲ್ಯಾಗೆ ಮಾಸ್ತ್ರು ಈ ನಾಯಿ ನೋಡ್ಲಿಲ್ಲ ಕಾಣ್ತೈತೆ.. ನಳಿಗೆ ಹಾಕಿ ನೆಟ್ಟಗೆ ಮಾಡದ್ ಎಂಗು ಇರ್ಲಿ... ನಳಿಗೆ ಹಾಕಕಾರು ಒಂದು ಬಾಲ ಬ್ಯಾಡನ.."
"ಥೋ ಮಾರಾಯ..ಅದ್ಕೆ ಹುಟ್ಟತ ಬಾಲ ಇರತೈತ.. ಕಡಿಗೆ ತುಂಡು ಮಾಡ್ತಾರೆ."
"ಅದೇ.. ನಾಯಿ ಅಂದಮ್ಯಾಲೆ ಒಂದ್ ಬಾಲ ಬ್ಯಾಡನ ಪಾಪ...!"
ಅಂದು ಆ ಪುಟ್ಟ ಮರಿಯನ್ನು ಕಂಡು ಅದೆಷ್ಟು ಬಾರಿ ಪಾಪ ಅಂದನೋ ಅವನು!
ಬಾಲವಿಲ್ಲದ ಮೇಲೆ ಅದು ನಾಯಿಯೇ ಅಲ್ಲ ಎಂಬ ತೀರ್ಮಾನದ ಹಂತದಲ್ಲಿರುವವನಿಗೆ, ಅದು ನಾಯಿಯದೆ ಒಂದು ತಳಿ ಎಂದು ಅರ್ಥ ಮಾಡಿಸಲು ಎರಡು ದಿನಗಳೇ ಬೇಕಾದವು.!

-ಪಲ್ಲವಿ 

Tuesday, November 16, 2021

ನಗುವ ಮಾರುವವಳು

ಅವಳು...
ಕಣ್ಣೀರ ಕರಗಿಸಿ ನಗುವ ಮಾರುವವಳು..
ಕಣ್ಣ ಬಿಂಬದಲ್ಲೂ ಬಣ್ಣ ತುಂಬುವವಳು..
ಮಾಸಿದ ವಸ್ತ್ರದ ನಡುವೆ ವರ್ಣಮಯ ನಗುವ ನೀಡುವವಳು..

ಪುಟ್ಟ ಪಾದವೂ ಬಿರಿದು, ನೆಲಡೊಡನೆ ಮಾತಿಗಿಳಿದಿದೆ..
ಚಿತ್ತಾರ ಬಿಡಿಸುವ ಪುಟ್ಟ ಕೈಗಳಿಗೆ ಬದುಕ ಭಾರವಿದೆ..
ಹಾಳೆ ತಿರುವುವ ವಯಸ್ಸಿಗೆ ಹೊಟ್ಟೆಗಾಗಿ ಹಾಳೆ ಎಣಿಸಬೇಕಿದೆ..
ಬದುಕಿಗೆ ಬಿಸಿಲ ತಾಪ ಸೋಕಿದೆ..
ಬಿರಿದ ಪಾದದ ನಡುವೆ ಹಂಬಲದ ಹಸಿರು ಚಿಗುರಲಿದೆ...

ಏಕೆಂದರೆ ಅವಳು ...
ಕಣ್ಣೀರ ಕರಗಿಸಿ ನಗುವ ಮಾರುವವಳು..
ಕಣ್ಣ ಬಿಂಬದಲ್ಲೂ ಬಣ್ಣ ತುಂಬುವವಳು..

-ಪಲ್ಲವಿ 




Sunday, November 7, 2021

ಹೋಗುವ ಬಾ


ಮಿಂದೆದ್ದು ನಳನಳಿಸುವ ಹಸಿರ
ನಡುವೆ ಸಾಗುವ ಬಲುದೂರ..

ಒದ್ದೆ ಮಣ್ಣಲಿ ಹೆಜ್ಜೆ ಮೂಡಿಸಿ,
ಲಜ್ಜೆಯಲಿ ಬೆರಳ ಸೋಕಿ,
ಕೈ ಬೆಸೆದು ಸಾಗುವ ಬಲುದೂರ..

ನಿನ್ನುಸಿರಷ್ಟೇ ಆಪ್ತವು ಈ ಹಸಿರು
ನಿನ್ನೊಲವಷ್ಟೇ ಗಾಢವು ಈ ನೆರಳು
ನಮ್ಮಷ್ಟೇ ಬೆಸೆವ ಹಸಿರು-ನೆರಳ
ನಡುವೆ ಸಾಗುವ ಬಲುದೂರ...

-ಪಲ್ಲವಿ 


Friday, November 5, 2021

ತ್ರಿಚಕ್ರ ಸಾರಥಿ...

ಸದಾ ಏನನ್ನೋ ಹುಡುಕುತ್ತ ತನ್ನಲ್ಲಿ ತಾನು ಗಲಿಬಿಲಿಗೊಂಡಂತೆ ಕಾಣುವ ಬೆಂಗಳೂರು ನನ್ನಲ್ಲಿ ಬಹಳಷ್ಟು ಬಾರಿ ಬೆರಗನ್ನು ಮೂಡಿಸಿದೆ. ಯಾವುದನ್ನು ಆಚೆ ಹಾಕದೆ ಮೌನವಾಗಿ ಎಲ್ಲವನ್ನೂ ತನ್ನೊಡಲೊಳಗೆ ಸೇರಿಸಿಕೊಳ್ಳುವ ಮಹಾನಗರಿ ಒಂದು ಮಾಯಾನಗರಿಯೇ ಸೈ!
ಹೊಸ ಜಾಗ, ಹೊಸ ಮುಖ, ನೋಟ, ಸ್ಪರ್ಶ, ಗದ್ದಲ, ಜಗಳ, ಪರಿಚಯವೇ ಇಲ್ಲದ ವ್ಯಕ್ತಿಗಳು, ಕ್ಷಣದಲ್ಲಿಯೇ ಭಯ ಹುಟ್ಟಿಸುವ ಘಟನೆಗಳು, ಎಲ್ಲದರ ನಡುವೆ ದಿನವೊಂದು ಲೆಕ್ಕಕ್ಕೇ ಸಿಗದೇ ಕಳೆವುದು ಆತುರಾತುರವಾಗಿ! ಇವೆಲ್ಲದರ ನಡುವೆ ನನ್ನ ನೆನಪಲ್ಲಿ ಹಸಿರಾಗುವುದು ಬೆಳಗನ್ನು ಸ್ವಾಗತಿಸುವ ಪಾರಿಜಾತ, ಘಮ್ಮೆನ್ನುವ ಸಂಪಿಗೆ, ಬಸ್ಸಿನಲ್ಲಿ ತುಂಟ ಮಗುವಿನ ಕೀಟಲೆ, ಕಾಲೇಜ್ ಹುಡುಗರ ಕಲರವ, ಅಪರಿಚಿತರ ಮೊಗದಲ್ಲಿ ಪರಿಚಿತ ಮುಗುಳುನಗೆ, ಟ್ರಾಫಿಕ್ ಅಲ್ಲಿ ಕೈ ಬೀಸಿದ ಪುಟ್ಟ ಪೋರಿ, ದೇವಾಲಯದಲ್ಲಿ ಕೈ ಕೈ ಹಿಡಿದು ಪ್ರದಕ್ಷಿಣೆ ಸುತ್ತುತ್ತಿದ್ದ ಅಜ್ಜ-ಅಜ್ಜಿ, ಸೇವಂತಿ ಹೂವಾ- ರೋಜಾ ಹೂವಾ ಎಂಬ ದನಿ, ಗೋಲಗಪ್ಪೆಯ ರುಚಿ, ಮಸಾಲೆ ದೋಸೆಯ ಘಮ, ಚಹಾದ ಗಾಜಿನ ಲೋಟ..
ಹೋ..ಅಲ್ಲೊಬ್ಬ ಗುಂಗುರು ಕೂದಲ ಧಡೂತಿ ಆಸಾಮಿ, ನಕ್ಕಾಗ ಕುಣಿಯುವ- ಎರಡು ಮಕ್ಕಳನ್ನು ಹೊತ್ತಂತಿರುವ ಅವನ ಹೊಟ್ಟೆ, ಚೂರು ಬಿಗಿಯಾದರೂ ಗುಂಡಿ ಹರಿದು ಬರುವ ಅವನ ಬಟ್ಟೆ!!
ಅಂಥಾ ನೆನಪಿನ ಬುಟ್ಟಿಯಲ್ಲಿ ಕೆಲವೊಮ್ಮೆ ಆಟೋ ಚಾಲಕರೂ ಇಣುಕುತ್ತಾರೆ. ಅಂಥದ್ದೊಂದು ಚಂದದ ಅನುಭವ ಇತ್ತೀಚಿನದು.
ಬಿಎಂಟಿಸಿ ಬಸ್ಸಿನಲ್ಲಿಯೇ ದಿನವೂ ಪ್ರಯಾಣಿಸುತ್ತಿದ್ದರೂ ಕೆಲವೊಮ್ಮೆ ಆಟೋದಲ್ಲಿ ಚಲಿಸುವ ಸಂದರ್ಭದವೂ ಇರುವುದಲ್ಲ! ಅಂತಹುದೇ ಒಂದು ದಿನ ಆಟೋ ಬುಕ್ ಮಾಡಿ ಕಾಯುತ್ತಾ ನಿಂತಿದ್ದೆ, ಮಾಸ್ಕಿನ ಹೊರೆಯಿಂದ ಬಸವಳಿದಿದ್ದ ಕಿವಿಗೆ ಇಯರ್ ಫೋನ್ ಅನ್ನು ನೇತು ಹಾಕಿಕೊಂಡು!  ಅದ್ಯಾವ ಮಾಯಕದಲ್ಲಿ ಬಂದು ನಿಂತನೂ ಆಟೋ ಡ್ರೈವರ್!

"ಮೇಡಂ, ಆ ಇಯರ್ ಫೋನ್ ಅನ್ನ ತೆಗೆದು ಬಿಸಾಡಿ" ಎಂದಾಗಲೇ ಬೆಚ್ಚಿ ಎಚ್ಚರವಾಗಿದ್ದೆನಗೆ! ಹಾಡುತ್ತಿದ್ದ ಸೋನು ನಿಗಮ್ ಗೆ ಒಂದು pause ಹೇಳಿ ಇಯರ್ ಫೋನ್ ಬದಿಗಿಟ್ಟು ಕುಳಿತೆ. ತಪ್ಪು ನನ್ನದೇ ಎಂದಾದಾಗ ಸುಮ್ಮನಿರಲೇಬೇಕಿತ್ತಲ್ಲ!!
ಆಟೋದಲ್ಲಿ ಅಣ್ಣಾವ್ರು ತನ್ಮಯತೆಯಿಂದ ಹಾಡುತ್ತಿದ್ದರು - " ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ..." ಆಲಿಸುತ್ತಾ ಕುಳಿತಿದ್ದೆ. "ಪ್ರಿಯತಮ...." ಹಾಡು ಮುಗಿದು, "ಜೀವ ಹೂವಾಗಿದೆ..." ಪ್ರಾರಂಭವಾಗುವುದಕ್ಕೂ ರಸ್ತೆಯಲ್ಲಿ ಕೆಂಪು ದೀಪ ಉರಿಯುವುದಕ್ಕೂ ಸರಿಹೋಗಿತ್ತು. ಅಣ್ಣಾವ್ರ ಹಾಡಿಗೆ ಆಟೋದಲ್ಲಿದ್ದ ನಾವಷ್ಟೇ ಅಲ್ಲದೇ, ಹೊರಗಿದ್ದ ಬೈಕ್ ಸವಾರನೂ ತಾಳ ಹಾಕುತ್ತಿದ್ದ.
"ನೋಡಿ ಮೇಡಂ, ಅಣ್ಣಾವ್ರ ಹಾಡಿಗಾದ್ರೆ ಎಲ್ಲ ತಾಳ ಹಾಕ್ತಾರೆ. ಅದೇ ಈಗಿನ ನನ್ ಮಗನ್, ನಿಮ್ಮಕ್ಕನ್ ಹಾಡು ಕೇಳಿದ್ರೆ ಟ್ರಾಫಿಕ್ ನಾಗೂ ಎಲ್ಲ ತಲೆಗೇ ಹಾಕ್ತಾರೆ!!" ಎಂದ. ಒಮ್ಮೆ ಜೋರಾಗಿ ನಕ್ಕಿದ್ದು ಬಿಟ್ಟರೆ ಮತ್ತದೇ ಮೌನ, ಅಣ್ಣಾವ್ರ ಹಾಡು.
ಅವನಿಗೆ ಅದೇನನ್ನಿಸಿತೋ, " ಸಾರಿ ಮೇಡಂ, ಸಾರಿ ಹಾ..."
"ಅರೆ.. ನೀವ್ಯಾಕೆ ಸಾರೀ ಕೇಳ್ತಿದೀರಾ ಸರ್"
"ಮನೆಗ್ ಮಾಲಕ್ಷ್ಮಿ ಬರೋ ಹೊತ್ತು...ಈ ಟೈಮ್  ನಾಗೇ ಬೈದ್ಬುಟ್ಟೆ..ಅದ್ಕೆ.."
"ಅಯ್ಯೋ.. ನೀವೇನು ಬೈದಿಲ್ಲ ಸರ್.. ನಂದೂ ತಪ್ಪೇ ಇತ್ತಲ್ಲ"
"ನೀವು ಬೇಜಾರ್ ಮಾಡ್ಕೊಂಡ್ರೆನೋ ಅಂತಾ.."
"ಬೇಜಾರೆಲ್ಲ ಏನಿಲ್ಲ ಸಾರ್"
ಒಂದು ಸಣ್ಣ ನಗುವಿನ ಜೊತೆಗೆ "ಹಂಗಾದ್ರೆ ಸರಿ.."
"ಮೇಡಂ ಇದೆ ಕಾಲೇಜಾ.."
"ಇಲ್ಲ ಸರ್.. ನಾ ಇಲ್ಲಿ ಲೊಕೇಶನ್ ಕೊಟ್ಟಿದ್ದಷ್ಟೇ. ನಾನು ಜಾಬ್ ಮಾಡ್ತಾ ಇದೀನಿ"
"ಓ.. ಹೌದಾ.. ಒಳ್ಳೇದ್ ಒಳ್ಳೇದು.."
ಮತ್ತೆ ತುಸುವೇ ನಿಮಿಷಗಳ ಮೌನ!
ಅಣ್ಣಾವ್ರು.."ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಅಂತಾ ಹಾಡ್ತಿದ್ರು.
"ನಾನು ಮಂಡ್ಯದವನಮ್ಮ.. ದುಡಿಯೋಕೆ ಅಂತಾ ಬಂದೆ. ಆಗ ಈಗ ಊರಿಗೆ ಹೋಗ್ಬರ್ತೀನಿ."
"ಓಹ್. ಹೌದಾ.."
"ಮತ್ತೆ.. ಏನ್ ಮೇಡಂ..ಆಂಧ್ರದವ್ರ ನೀವು?"
"ಯಾಕೆ ಸರ್.. ಇಷ್ಟ್ ಚಂದ ಕನ್ನಡ ಮಾತಾಡ್ತಾ ಇದೀನಿ. ಹುಟ್ಟಿದ್ರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತಿದೀನಿ.."
"ಹಹಹ.. ಬೆಳ್ಗೆ ಇಂದ ಒಬ್ಬರು ಸಿಕ್ಕಿಲ್ಲ ಕನ್ನಡದೋರು ಮೇಡಂ. ನಂಗೆ ನಮ್ಮ ಅಣ್ಣಾವ್ರು ಮಾತ್ರ ಜೊತೆಗಿದ್ರು. ಅದ್ಕೆ ಹಾಗೆ ಹೇಳ್ದೆ. ಮತ್ತೇನಿಲ್ಲ.ನಿಮ್ಮೂರು ಯಾವ್ದು ಮೇಡಂ?"
"ನನ್ನೂರು ಶಿರಸಿ ಸರ್."
"ಓಹ್. ಮಾರಿಕಾಂಬೆ ಜಾತ್ರೆ ಊರು. ಇಲ್ಲೇ ನಮ್ಮ್ ರೋಡ್ ಪಕ್ಕದಾಗೆ ಹೊಳ್ಳಿ ನೋಡಿದ್ರೆ ನಿಮ್ಮೂರ್ ಕಾಣ್ತದೆ."
ಅಷ್ಟರಲ್ಲಿ ನನ್ನ ಜಾಗ ಬಂದಿದ್ದರಿಂದ ಮಾತು-ನಗು ಎರಡೂ ನಿಂತಿತ್ತು.
"ಅಲ್ಲ ಮೇಡಂ.. ನಿಮ್ಮ ಮದ್ವೆ ಯಾವಾಗ?"
"ಹಾಂ.. ಯಾಕೆ ಸರ್" ಎಂದೆ ಆಶ್ಚರ್ಯದಿಂದ.
"ಏನಿಲ್ಲ ಮೇಡಂ. ನನ್ ಮಗಳೂ ಸುಮಾರು ನಿಮ್ಮ ವಯಸ್ಸಿನೋಳೆ ಇರ್ಬೋದು. ಅವಳ ಮದ್ವೆ ಹಿಂದಿನ ವರ್ಷನೇ ಆಯ್ತು. ಅದ್ಕೆ ನಿಮ್ಮನ್ನೂ ಕೇಳ್ದೆ."
"ಅಯ್ಯೋ.. ಅದ್ಕೇನು ಅರ್ಜೆಂಟ್ ಸರ್.. ಬಿಡಿ, ಟೈಮ್ ಬಂದಾಗ ಎಲ್ಲ ಆಗತ್ತೆ."
"ಏನಮ್ಮಾ, ಇಪ್ಪತ್ತರಲ್ಲೇ ಎಪ್ಪತ್ತರ ಥರಾ ಮಾತಾಡ್ತಿರ.." ಎನ್ನುತ್ತಾ ನಕ್ಕರು.ನಗುತ್ತಾ ಹಣ ಕೊಟ್ಟು ನಾನೂ ಹೊರಟೆ.
ಅಂತೂ ಗಡಿಬಿಡಿಯ ದಿನದ ಒಂದು ಸಂಜೆ, ಸುಂದರ ನೆನಪಿಗೆ ಕಾರಣವಾಯ್ತು.
ಆದರೂ ಒಂದು ಮಾತು!
ಗಂಟು ಹಾಕಿದ ಮೋರೆಯ ಹಿಂದಿನ ಮುಗುಳ್ನಗುವನ್ನು ಮುಚ್ಚಿಡದೇ, ಮನಸಾರೆ ನಗುವುದರಿಂದ , ಹಾಯ್, ಹಲ್ಲೋ, ನಮಸ್ತೆ ಎನ್ನುವುದರಿಂದ, ಹಲವು ಸುಂದರ ನೆನಪುಗಳಿಗೆ ನಾಂದಿಯಾಗಬಹುದು!
ಪ್ರಪಂಚ ಕಣ್ಣಿಗೆ ಕಾಣುವಷ್ಟು ಒಳ್ಳೆಯದಲ್ಲದಿದ್ದರೂ ನಮ್ಮ ಬುದ್ಧಿ ಎಚ್ಚರಿಸುವಷ್ಟು ಕೆಟ್ಟದಂತೂ ಅಲ್ಲ..!

-ಪಲ್ಲವಿ 

ಕರಗುವೆ...