Tuesday, April 26, 2022

ನಾವು

ಪುಸ್ತಕದ ಹಾಳೆಗಳ ನಡುವೆ
ಅವಿತಿದ್ದ ನವಿಲುಗರಿ
ಮಾಸಿದ ದಿನಗಳಿಗೆ ಬಣ್ಣ ತುಂಬಿತ್ತು...

ಪ್ರತಿ ಸಾಲೂ ನಿನ್ನದೇ ಕತೆ ಹೇಳುವಾಗ
ಬಣ್ಣ ತುಂಬಿದ ಚಿತ್ರಕೆ ಜೀವ ಬಂದಿತ್ತು...

ಈ ಜೀವಕೆ ಹೆಸರಿಡಲಾ...
'ನೀನು' ಇಲ್ಲವೇ 'ನಾನು' ಎಂದು?
ಬೇಡ...
'ನಾವು' ಎಂದೇ ಕರೆಯುತ್ತೇನೆ...

-ಪಲ್ಲವಿ 

Thursday, April 14, 2022

ಮಳೆ

ಧರೆಯ ವಿರಹಾಗ್ನಿಗೆ
ಕರಗಿ ಸುರಿಯುತಿದೆ
ಮಳೆ ಧೋ ಎಂದು..
ನಾನೂ ಸುಡುತಿರುವೆ...
ಮಳೆಯಾಗಲಾರೆಯಾ??

Friday, April 1, 2022

ವರ್ಣಮಯ ಜಯನಗರ


ಬೆಳಗಿನಿಂದ ಸುಡುವ ಬಿಸಿಲಿನಲ್ಲಿ ಕಾದ ಕಾವಲಿಯಂತಿರುವ ನೆಲ ಹನಿ ನೀರ ಬಯಸಿರಲು, ಆಗಸದ ತುಂಬೆಲ್ಲ ಮೋಡಗಳ ಚಿತ್ತಾರ! ಸೂರ್ಯನೂ ಮೋಡಗಳ ಮರೆಯಲ್ಲಿ ಅವಿತು ಆಗಲೇ ಸಂಜೆ ಆರರ ಭಾವ ತುಂಬಿರಲು, ಮಳೆ ಬರುವ ಮೊದಲು ಗೂಡು ಸೇರುವ ತವಕದಲಿ ಜನಸಾಗರ!!

 ವಾಹನಗಳ ಹಾರ್ನು ಬ್ರೇಕಿನ ಶಬ್ದಗಳ ನಡುವೆಯೂ,  ಸಿಗ್ನಲ್ಲಿನಲ್ಲಿ "ಬನ್ನಿ, ಮಾವಿನೆಲೆ, ಬೇವಿನೆಲೆ ತಗೋಳಿ" ಎನ್ನುವ ಧ್ವನಿ.. ಹಣ್ಣುಗಳ ಅಂಗಡಿಯಲ್ಲಿ ಅನಭಿಶಿಕ್ತ ದೊರೆಯಾಗಿ ರಾರಾಜಿಸುತ್ತಿರುವ ಮಾವು! ಎಂದೂ ಝಗಮಗಿಸುವ ಜಯನಗರಕ್ಕೆ ಯುಗಾದಿಯ ಕಳೆಯೂ ಸೇರಿ ಇನ್ನಷ್ಟು ಹೊಳಪು ಬಂದಿದೆ ಎನಿಸಿದ್ದು ಸುಳ್ಳಲ್ಲ..

ಇವೆಲ್ಲದರ ನಡುವೆ ಬಸ್ಸಿಗೆ ತಡವಾಯ್ತಲ್ಲ ಎಂದು ಗೊಣಗುತ್ತ, ಲೋಕದ ಪರಿವೆಯೇ ಇಲ್ಲದೆ ಒಂದು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, "ಬಾನಿಗೊಂದು ಎಲ್ಲೆ ಎಲ್ಲಿದೆ" ಎಂದು ಗುನುಗುತ್ತ ಹೋಗುತ್ತಿರುವ ನನ್ನನ್ನು ತಡೆದು ನಿಲ್ಲಿಸಿದ್ದು ಬಿಡಿಎ ಕಾಂಪ್ಲೆಕ್ಸಿನ ಬದಿಯಲ್ಲಿ ಹಸಿರೇ ಕಾಣದಂತೆ ಅರಳಿ ನಿಂತ ಗುಲಾಬಿ ಬಣ್ಣದ ಹೂಗಳು!

ಆಗಲೇ ಬಿಸಿಯಾದ ರಸ್ತೆಗೆ ತಂಪೆರೆಯುತ್ತಿರುವ ಸಣ್ಣ ಹನಿಗಳಿಗೆ, ತಂಪಾದ ಗಾಳಿಗೆ ಹೂಗಳು ತಲೆದೂಗುತ್ತಿದ್ದವು. ದಳಗಳೆಲ್ಲ ಹಾದಿಗೆ ಹಾಸಿ, ವಸಂತನ ಸ್ವಾಗತಕ್ಕೆ ಸಜ್ಜಾಗಿದ್ದವು.
ಹಾಯೆನಿಸಿ ಒಂದರೆ ಕ್ಷಣ ಅವುಗಳನ್ನೇ ಕಣ್ತುಂಬಿಕೊಳ್ಳುತ್ತಾ ನಿಂತೆ.. ಕಣ್ಣಿನ ಕ್ಯಾಮೆರಾ ಚಿತ್ರವ ಸೆರೆಹಿಡಿಯುತ್ತಿತ್ತು. ಮೊಬೈಲಿನ ಕ್ಯಾಮೆರಾ ನಾನೇನು ಕಡಿಮೆ ಎಂದಿತು!!
ಜಯನಗರದ ಸೊಬಗನ್ನು ಸವಿಯುತ್ತ ಮೈಮರೆತಾಗಲೇ, "ಜುಮ್ಕಾ ಲೆಲೋ ದೀದಿ" ಎಂದಿತು ಒಂದು ಪುಟ್ಟ ಮಗು... ಬೇಡವೆಂದರೂ ಕೇಳದೆ, "ಆಪ್ಕೆ ಕಾನೋ ಮೇ ಯೇ ಅಚ್ಚಾ ಲಗೇಗಾ" ಎನ್ನುತ್ತಾ ಕೈಗಿಟ್ಟು ನಕ್ಕಿತು. ದಿನವೂ ಇದೇ ರಸ್ತೆಯಲ್ಲೇ ಓಡಾಡುವ ನನಗೆ ಈ ಪೋರಿ ಎಂದೂ ಕಾಣಲಿಲ್ಲವಲ್ಲ ಎಂದುಕೊಳ್ಳುತ್ತ, ಹಣ ಕೊಟ್ಟು ಬರುವ ಹೊತ್ತಿಗೆ ಬಸ್ಸು ಹೊರಡಲು ಸಜ್ಜಾಗಿತ್ತು, ಮಳೆ ಜೋರಾಗಿತ್ತು.. ಮನಸಿನ ತುಂಬಾ ಗುಲಾಬಿ ಗುಲ್ಮೊಹರಿನ ಜಯನಗರ ತುಂಬಿತ್ತು!!

(ಚಿತ್ರ, ಬರಹ)
-ಪಲ್ಲವಿ 

ಕರಗುವೆ...