Wednesday, December 23, 2020

ನಿತ್ಯ ನೂತನ..


ಬಿಳಿ ಮುತ್ತುಗಳು ಅಣಿಯಾಗಿವೆ 
ಧರೆಯಲಿ ಬೆರೆಯಲು.. 
ನಸುಕಿನ ಮಂಜು ಭೂರಮೆಯ 
ಸೀರೆಯಂಚಲಿ ಚಿತ್ತಾರವಾಗಿರಲು.. 
ಹೊದ್ದು ಮಲಗಿದೆ ಜಗವು, 
ಜಂಜಡವ ಮರೆತು..
ಇಣುಕಿದನವ ಮೋಡಗಳ ಮರೆಯಿಂದ, 
ಧಾರುಣಿಯ ಚೆಲುವ ಕಂಡು ನಸುನಕ್ಕ..
ನಗುವಿಗೆ ಸೋತು ಕೆಂಪೇರುತಿಹುದು ಲೋಕ, 
ಜೊತೆಗೆ ಕಲರವದ ಸಿಹಿ ಪಾಕ... 
ತಲೆದೂಗಿದೆ ಹಸಿರು ಮೈಮರೆತು, 
ಜಾರಿದ ಹನಿಯೊಂದು ಧರೆಯ ಸೇರಿದೆ.. 
ನವದಿನದ ಪ್ರಾರಂಭ ಭುವಿಯೊಳು, 
ಚಳಿಗಾಲಕೆ,ಮೊದಲ ಗುಟುಕು ಚಹಾವಿರಲು!!
ನಿತ್ಯ ನೂತನ ಪ್ರಕೃತಿಯ ಮಡಿಲು... 

-ಪಲ್ಲವಿ 
(ಚಿತ್ರ: ಕೆ. ಪಿ. ಸತ್ಯನಾರಾಯಣ) 

Sunday, December 6, 2020

ಬಾಡದಿರಲಿ ಬದುಕು...

(ಸಾಂಧರ್ಬಿಕ ಚಿತ್ರ - ಕೃಪೆ:ಗೂಗಲ್)
ದೇವಾಲಯದ ಹೊರಾಂಗಣದಲ್ಲಿ  ಅವಳನ್ನು ನೋಡಿದಾಗಲೆಲ್ಲ ನೆನಪಾಗುತ್ತಿದ್ದುದು ಒಂದೇ ಹಾಡು - "ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು...!" 
ಅರಳಿದ ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಗುಲಾಬಿ ಹೂಗಳ ರಾಶಿಯ ನಡುವೆ ಬಾಡಿದ ಮೊರೆಯಲ್ಲಿ ಕುಳಿತಿರುತ್ತಿದ್ದಳು. ವಯಸ್ಸಿನಷ್ಟು ಬುದ್ಧಿ ಬೆಳೆದಿರದ ಹುಡುಗಿಯೊಬ್ಬಳನ್ನು ಪಕ್ಕದಲ್ಲೇ ಕೂರಿಸಿಕೊಂಡ ಹೆಂಗಸು ಆ ರಸ್ತೆಯಲ್ಲಿ ಓಡಾಡುವಾಗಲೆಲ್ಲ ನನ್ನನ್ನು ಕಾಡುತ್ತಿದ್ದಳು. 
ಕಡುಗಪ್ಪು ಬಣ್ಣದ ಧಡೂತಿ ದೇಹಕ್ಕೆ ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಹಸಿರು ಸೀರೆಯನ್ನು ಸುತ್ತಿಕೊಂಡು, ಒಂದು ಕೂದಲೂ ಹಣೆ ಮೇಲೆ ಬರದಂತೆ ಎಣ್ಣೆ ಹಾಕಿ ಬಾಚಿ ಬಿಗಿಯಾಗಿ ಮುಡಿ ಕಟ್ಟಿ, ತಳ್ಳುವ ಗಾಡಿಯ ಮೇಲೆ ರಾಶಿ ರಾಶಿ ಹೂಗಳ ನಡುವೆ ಕೆದರಿದ ಕೂದಲ ಹುಡುಗಿಯನ್ನು ಕೂರಿಸಿಕೊಂಡು "ಹೂವಮ್ಮಾ... ಹೂವಾ.... ಮಲ್ಗೆ, ಕನಕಾಂಬ್ರಾ, ಸ್ಯಾವಂತ್ಗೆ, ರೋಜಾ ಹೂವಾ.... ಹೂವಮ್ಮಾ.. ಹೂವಾ.." ಎಂದು ರಾಗವಾಗಿ ಹಾಡುತ್ತ ಬಂದರೆ, ಆ ರಸ್ತೆಯ ಸುಪ್ರಭಾತವೇ ಅವಳ ದನಿ ಎಂದರೂ ತಪ್ಪಿಲ್ಲ.
ಗಾಡಿಯಲ್ಲಿ ಕುಳಿತ ಹುಡುಗಿ, ಆ ಹೆಂಗಸಿನಂತೆ ಅನುಕರಿಸಲು ಪ್ರಯತ್ನಿಸಿ ಹಾಡಿದರೂ ಧ್ವನಿ ಸ್ಪಷ್ಟ, ಶಬ್ದಗಳೆಲ್ಲ ಅಸ್ಪಷ್ಟ!
"ಏನಮ್ಮಾ ಇವತ್ತು ತಗೊಂಡು ನಾಳೆ ಬಾಡಿ ಹೋಗೋ ಹೂವಿಗೆ ಇಷ್ಟ್ ರೇಟ್ ಹೇಳ್ತೀಯಾ?.. ಬೇಡ ಹೋಗು.. " ಎಂದು ಚೌಕಾಸಿ ಮಾಡುವ ಹೆಂಗಸರಿಗೆ, "ಇಲ್ಲಮ್ಮ, ಪ್ರೆಸ್ ಹೂವಾ.. ಘಮ್ ಅಂತೈತೆ ನೋಡ್ರಿ.. ದ್ಯಾವರ್ಗೆ ಆಕ ಊವಿಗೂ ಇಂಗಂತಿರಲ್ಲ.. ಅವ ಮೆಚ್ಚಾನೆ?!" ಎಂದು ಭಾವನಾತ್ಮಕವಾಗಿ ತಿರುಗಿ ಪ್ರಶ್ನಿಸಿ ಅವರ ಬಾಯಿ ಮುಚ್ಚಿಸಿ, ಕೊಟ್ಟ ಹೂವಿಗೆ ಕಾಸು ಪಡೆದು ಮುಂದೆ ಹೋಗುತ್ತಿದ್ದಳು. ಇವಳೆಲ್ಲಿ ಸೇಲ್ಸ್ ಮ್ಯಾನೇಜ್ಮೆಂಟ್ ಓದಿದ್ಲಪ್ಪ.. ಎಷ್ಟು ಚನ್ನಾಗಿ ಕಸ್ಟಮರ್ಸ್ ನಾ ಹಿಡೀತಾಳೆ ಎಂದು ನಕ್ಕಿದ್ದೆ!
ಮತ್ತೊಮ್ಮೆ "ಏನೋ, ನಾ ಜಾಸ್ತಿ ರೇಟಿಗೆ ಹೂ ಮಾರ್ತೀನಿ ಅಂತಾ ಊರಿಡೀ ಯೇಳ್ಕಂಡ್ ಬತ್ತಿಯಾ.. ಇನ್ನೊಂದಪ ನನ್ನ ಅತ್ರ ಹೂ ತಗಳಾಕ್ ಬಾ.. ಮಾಡ್ತೀನಿ ನಿಂಗೆ.." ಎನ್ನುತ್ತಾ ಸೀರೆಯ ನೆರಿಗೆಯನ್ನು ಎತ್ತಿ ಕಟ್ಟುವ ಗಯ್ಯಾಳಿಯಾಗಿ ಕಾಣುತ್ತಿದ್ದಳು. 
ಏನೇ ಆದರೂ ಹತ್ತು ಗಂಟೆಯ ಸಮಯಕ್ಕೆಲ್ಲ ದೇವಸ್ಥಾನದ ಬದಿಯಲ್ಲಿ ಗಾಡಿ ತಂದು ನಿಲ್ಲಿಸಿ ಮತ್ತದೇ ಸಪ್ಪೆ ಮೊರೆಯಲ್ಲಿ ಕುಳಿತಿರುತ್ತಿದ್ದಳು. ಜೊತೆಯಲ್ಲಿದ್ದ ಹಠ ಮಾಡುವ ಹುಡುಗಿಗೆ ರಮಿಸುತ್ತ ತುತ್ತು ಕಲಸಿ ತಿನ್ನಿಸುವ ದೃಶ್ಯ ಮಾಮೂಲಾಗಿತ್ತು! 
ಹೂವಿನ ಅವಶ್ಯಕತೆ ಇರದಿದ್ದರೂ ಅವಳನ್ನು ಮಾತನಾಡಿಸುವ ಮನಸಾಗಿ ಹೆಜ್ಜೆ ಹಾಕಿದ್ದೆ ಅವಳ ಬಳಿ. 
ಹೂವಮ್ಮನ (ಇಂದಿಗೂ ಅವಳ ಹೆಸರು ತಿಳಿದಿಲ್ಲ!ಎಲ್ಲರಿಗೂ ಹೂವಮ್ಮನಾಗಿಯೇ ಉಳಿದಿದ್ದಾಳೆ.) ಬಳಿ ಮಾತನಾಡುತ್ತಾ, ಜೊತೆಯಲ್ಲಿರುವ ಹುಡುಗಿಯನ್ನು ಮಾತನಾಡಿಸಿದೆ. ಬೆಚ್ಚಿದಳು ಹುಡುಗಿ, ಗಾಡಿಯ ಕೆಳಗೆ ತೂರಿಕೊಂಡಳು. 
ಹದಿನೆಂಟೋ ಇಪ್ಪತ್ತೋ ವರ್ಷ ಅವಳಿಗೆ ಎಂದಳು ಹೂವಮ್ಮ.
"ಅವ್ಳಿಗೆ ನೀವು ಅಕ್ಕ ಅಯ್ತಿರೋ ನಿಮ್ಗೆ ಅವ್ಳು ಅಕ್ಕ ಆಯ್ತಾಳೋ ಗೊತ್ತಿಲ್ಲ ಕಣಮ್ಮಾ.. ದೊಡ್ದ್ ಉಡ್ಗಿನೇ ಅದು.. ಬುದ್ದಿ ಅಂಗೆ ಆಗೈತೆ.. ಏನೂ ತಿಳ್ಯಕಿಲ್ಲ..ಅಂಗಾಗೇ ನಾ ಎಲ್ಲೇ ಓಗದಾರು ಸೆರ್ಗಿಗೆ ಕಟ್ಕಂಡೇ ತಿರ್ಗಬೋಕು.. ಇಲ್ಲ ಅಂದ್ರೆ ಜೀವ ಓಗ ಅಂಗೇ ಅಳ್ತಾಳೆ.. ನೆಲಕ್ಕೆ ಬಿದ್ದು ಒಳ್ಳಾಡ್ತಾಳೆ.."
"ಏನಾಗಿದೆ.. ಡಾಕ್ಟರ್ ಗೆ ತೋರ್ಸಿಲ್ವ.."
"ಅಯ್ಯೋ.. ನಮ್ಮತ್ರ ಅಟೆಲ್ಲ ಕಾಸೆಲ್ಲಿ ಬರ್ಬೇಕಮ್ಮ.. ನೀವೂ ಒಳ್ಳೆ ತಮಾಸೆ ಮಾಡಿರಾ..!" ಏನು ಹೇಳಬೇಕೆಂದು ತೋಚದೆ ಅರೆ ಕ್ಷಣ ಮೌನಿಯಾದೆ. 
"ಅವಳ ತಮ್ಮನ್ ಜೊತಿ ಮಾಡ್ಬಿಟ್ರೆ ಸೊಲ್ಪ ಆಡ್ಕೊಂಡ್ ಇರ್ತಾಳೆ. ಆದ್ರೂ ನನ್ ನೆನಪಾದ್ರೆ ಮತ್ತೆ ಅಳ್ತಾಳೆ. ಅದ್ಕೆ ಬುಟ್ಟೋಗಾಕಿಲ್ಲ."
ಹೀಗೇ ಮೂರ್ನಾಲ್ಕು ದಿನದ ಪರಿಚಯದ ನಂತರ ಆ ಹುಡುಗಿ ಸ್ವಲ್ಪ ಮುಗುಳ್ನಗಲು ಪ್ರಾರಂಭಿಸಿದಳು. ತೋರು ಬೆರಳಲ್ಲಿ ಅಮ್ಮನ ಭುಜ ಕೆರೆಯುತ್ತಾ, ಇಣುಕಿ ಏನೋ ಹೇಳಲು ಪ್ರಯತ್ನಿಸಿದಳು. ಕೊನೆಗೂ ಎರಡು ಗುಲಾಬಿ ಹೂವನ್ನು ನಸುನಗುತ್ತಾ ನನ್ನ ಕೈಗಿಡುವಲ್ಲಿ ಯಶಸ್ವಿಯಾದಳು! 
ಅಂದು ಹೂವಮ್ಮನ ಕಣ್ಣಲ್ಲಿ ನೀರಿತ್ತು. ವಿಚಾರಿಸಲೋ ಬೇಡವೋ ಎಂಬ ಗೊಂದಲದಲ್ಲಿದ್ದಾಗಲೇ ಹೇಳಿದಳು, "ಮಗ ಮಾಬೈಲು ಕೇಳ್ತವ್ನೆ. ದೊಡ್ಡದ್ ಬೇಕಂತೆ. ಇಟ್ಕಂಡ್ ಏನ್ ಮಾಡಿಯ ಅಂದ್ರೆ ಕೂಗ್ತಾನೆ. ಸಾಲಿಗೆ ಓಗಾದು ಇಲ್ಲ. ಎಲ್ಡು ದಿನ ಆತು, ಮಾಬೈಲು ಕೊಡ್ಸಗಂಟ ಊಟ ಮಾಡಾಕಿಲ್ಲ ಅಂತಾನೆ. ಎಲ್ಲಿಂದ ಕಾಸ್ ತರ್ಲಿ.."
ಮೊಬೈಲ್ ಎಂಬ ಬ್ರಹ್ಮಾಸ್ತ್ರ ಪುಟ್ಟ ಅಂಗೈಲಿ ಅದೆಷ್ಟು ವರ್ಣಮಯವಾದ ಜಗತ್ತನ್ನು ಸೃಷ್ಟಿಸಿದೆ! ಕೈಯಲ್ಲಿ ಕಾಸೊಂದಿದ್ದರೆ ಬೇಕಿದ್ದನ್ನು ಬೇಕಾದಲ್ಲಿ ಪಡೆಯುವ ಸ್ವಾತಂತ್ರ್ಯ! ಸಂಗಾತಿಯೂ ಮೊಬೈಲ್ ನಲ್ಲಿ ಸಿಗುವುದು ವಿಪರ್ಯಾಸ!!
ಆನ್ಲೈನ್ -ಮಯವಾದ ಯಾಂತ್ರಿಕ ಜೀವನದ ನಡುವೆ ರಸ್ತೆಯ ಮಧ್ಯೆ ಸಿಗುವವರನ್ನು ಮಾತನಾಡಿಸುವುದು ಹಾಗಿರಲಿ, ತಲೆ ಎತ್ತಿ ನೋಡಲೂ ಬಿಡುವಿರದು! 
ಈ ಹೈ ಸ್ಕೂಲು ಹುಡುಗನಿಗೆ ಇಷ್ಟೊಂದು ಮೊಬೈಲ್ ಹುಚ್ಚಾ !! ಶಾಲೆ ಬಿಟ್ಟಿದ್ದಾನೆ, ಸಣ್ಣ-ಪುಟ್ಟ ಕೆಲಸ ಮಾಡುತ್ತಾನೆ. ಆದರೆ ಅವನಮ್ಮನ ಪರಿಸ್ಥಿತಿಯ ಅರಿವೂ ಇಲ್ಲವಾ? ಅದೇನು ಮಾಡ್ತಳೋ ಈ ತಾಯಿ ಎಂದುಕೊಳ್ಳುತ್ತಿದ್ದೆ. ಕೊನೆಗೆ ಅವರ ಭೇಟಿಯೇ ಇರಲಿಲ್ಲ. 
 ಕಾಣದ ಜಂತುವಿನಿಂದ ಇಡೀ ದೇಶವೇ ಒಮ್ಮೆ ಸ್ತಬ್ಧವಾಯಿತು. ಹೂವಮ್ಮನಂಥ ಅದೆಷ್ಟೋ ಧ್ವನಿಗಳು ಹೇಳ ಹೆಸರಿಲ್ಲದಂತೆ ಮಾಯವಾದವು. ಗಂಟಲ ಪಸೆ ಆರುವಷ್ಟು ಕಠೋರ, ನಿಷ್ಠುರ ದಿನಗಳಲ್ಲಿ ಬಹಳ ನೆನಪಾಗುತ್ತಿದ್ದಳು ಆಕೆ. ನಾವೇನೋ ಆರಾಮಾಗಿ ತಿಂದು ಉಂಡು ಹಾಯಾಗಿದ್ದೇವೆ; ಅವರೆಲ್ಲ ಹೇಗಿರಬಹುದು, ಏನಾಗಿರಬಹುದು.. ದುಡಿಮೆಯೇ ಇರದೇ ಬದುಕು ಹೇಗಿರಬಹುದೆಂಬ ನೂರೆಂಟು ಪ್ರಶ್ನೆಗಳಿಗೆ ನಾಲ್ಕು ತಿಂಗಳ ನಂತರ ಉತ್ತರ ದೊರಕಿತ್ತು!
ಮತ್ತೆ ಅದೇ ರಸ್ತೆಯಲ್ಲಿ, ಮಗಳಿಗೆ ತುತ್ತು ತಿನಿಸುವ ಹೂವಮ್ಮ ಕಂಡಾಗ ಓಡಿದೆ ಅವಳ ಬಳಿ..ಉಭಯ ಕುಶಲೋಪರಿಗಳ ನಡುವೆಯೇ ಅವಳ ಮಗನೂ ಬಂದ.
ಎಂಟು - ಒಂಭತ್ತನೇ ತರಗತಿಗೆ ಹೋಗಬೇಕಾದ ಹುಡುಗ. ಸಣ್ಣ ವಯಸ್ಸಿಗೆ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವನ ಕಣ್ಣಲ್ಲಿ ವಯಸ್ಸಿನ ತುಂಟತನದ ಬದಲು ಗಾಂಭೀರ್ಯತೆ! ಕೈಲಿದ್ದ ಫೋನ್ ಬಿಡುವಿಲ್ಲದೆ ರಿಂಗಣಿಸಿದರೂ ಅಕ್ಕನ ಹಠಕ್ಕೆ ಮಣಿದು ಕುಳಿತ. 
"ಇವ್ನೆಯ ನನ್ ಮಗ. ಅವತ್ತು ಏಳ್ತಿದ್ನಲ.. ಫೋನ್ ಕೇಳ್ತವ್ನೆ ಅಂತಾ.. ಕಡೀಕೆ ಕೊಡೂಸ್ದೆ. ಈ ಲಾಕ್ಡೌನ್ ಆತಲ, ಹೂವು ಬತ್ತಾ ಇರ್ಲಿಲ್ಲ, ನಾವೂ ಎಲ್ಲೂ ಓಗಂಗೆ ಇರ್ನಿಲ್ಲ. ಮೇ ದಾಗೆ ಬುಟ್ರಲ್ಲ, ಆಗ ಹೂವು ಬಂತು. ಆದ್ರೆ ಜನ ತಕತ್ತಾ ಇರ್ನಿಲ್ಲ. ಮಾಬೈಲ್ ನಾಗೇ ಕಾಸು ಬರ ಅಂಗೇ ಮಾಡವ್ನೆ. ಎಲ್ಲ ನಮ್ ಅತ್ರನೇ ತಕಂಡ್ರು. ಈ ಸಲ ಜಾಸ್ತಿ ಹೂವ ಹೋಗೈತಿ. ಇದ್ರಾಗೆ ಏನೇನೋ ಮಾಡಿ ಈಗ ತರ್ಕಾರಿ ಅಂಗ್ಡಿ ಸುರು ಮಾಡವ್ನೆ. ಪ್ರೆಸ್ ಬತೈತೆ. ನೀವು ತಕಳಿ.." ಎಂದಳು ಹೆಮ್ಮೆಯಿಂದ ಮಗನತ್ತ ನೋಡುತ್ತಾ. 
ಮತ್ತೊಮ್ಮೆ ಬರುತ್ತೇನೆ ಎಂದು ತಿರುಗಿ ಹೊರಟವಳಿಗೆ ಕೈಲಿರುವ ಗುಲಾಬಿ ಘಮದೊಡನೆ ಮುಖದಲ್ಲೊಂದು ಮುಗುಳ್ನಗೆ ಇತ್ತು, ಮನದಲ್ಲಿ ಎರಡು ಸಾಲು ಮೂಡಿತ್ತು !!
ಹೂವಿನಂತೆ ನಾಜೂಕು... 
ಬಾಡದಿರಲಿ ಈ ಬದುಕು... 



Thursday, December 3, 2020

ಕತ್ತಲ ಲೋಕದೊಳು ಹೊಳೆವ ಕಳ್ಳ


ಕಾರ್ಗತ್ತಲ ಇರುಳಿಗೆ ತಿಂಗಳ ಬೆಳಕ ತಂಗಾಳಿ ಸೂಸಿ 
ಬಾನಂಗಳದಲಿ ತಾರೆಗಳೊಡನೆ ಚಿತ್ತಾರ ಮೂಡಿಸಿದವನ ಮೋರೆಯಲ್ಲೂ ಕಲೆಗಳಿವೆ!
ಆದರೂ ಲೋಕಕೆ ಸುಂದರನವ, 
ಕಲೆಯನ್ನೂ ಮರೆಸುವ ಹೊಳಪು ಅವನಲ್ಲಿ.. 
ಮುದ್ದು ಮೊಗದ ಗಾಢ ಮೌನಿಯ 
ಜೊತೆಯಿರೆ ಲೋಕವೇ ಇಂಪು-ತಂಪು.. 
ಉಸಿರ ಹೆಪ್ಪುಗಟ್ಟಿಸುವ ಶೀತಲತೆಯ ನಡುವೆ
 ಇಣುಕಿ ಮನದ ಮೂಲೆಯಲಿ ಚಂಚಲತೆಯ ಉದಯಿಸುವ ಶಶಿಗೆ ಲೋಕವೇ ಮರುಳಾದಾಗ
ಮೋಡದ ಮರೆಯಲ್ಲಿ ನಸು ನಕ್ಕು ಅವಿತಿರುವನವ 
ಕತ್ತಲ ಲೋಕದೊಳು ಹೊಳೆವ ಕಳ್ಳ !!

-ಪಲ್ಲವಿ 




ಕರಗುವೆ...