Wednesday, August 17, 2022

ಮೊದಲ ಮಾಸ...

ಆಗಸ್ಟ್ ಹದಿನೈದರ ಪರೇಡಿಗೆ
ಮುಂಜಾನೆ ಹೊರಡಬೇಕೆಂಬ ಆತುರ ಅವಳಿಗೆ..
ಬಿಳಿ ಸ್ಕರ್ಟು ತೊಟ್ಟು, ಕರಿ ಬೂಟು ಹಾಕಿ
ಹೊರಡೋಣ ಬಾರಪ್ಪಾ... ಎಂದು ಕೂಗುವಾಗ
ಅಮ್ಮ ಬಲಗಡೆ ಜಡೆ ಹಾಕುತ್ತಿದ್ದಳು..

ಅದೆಲ್ಲಿಂದ ಶುರುವಾಯಿತೋ..
ದಟ್ಟ ಮೋಡ, ಬಡಿದಪ್ಪಳಿಸುವ ಗುಡುಗು..
ಧೋ ಎಂದು ಶುರುವಾಯಿತಲ್ಲ ಮಳೆ..

ಹೊಟ್ಟೆಯೊಳಗೆಲ್ಲ ಸಂಕಟ, ಹೇಳಲಾರದ ನೋವು..
ಬೆನ್ನ ಹುರಿಯಾಳದಿಂದ ಹೊರಟ ಮಿಂಚು!

ಎಲ್ಲವನ್ನೂ  ಅಲಕ್ಷಿಸಿ, ಅಪ್ಪನ ಕೈ ಹಿಡಿದು ಎದ್ದಳು..
ಅಮ್ಮನ ಕಣ್ತುಂಬ ಜಿನುಗಿದ ನೀರು!

ಬಿಳಿಯ ಲಂಗಕ್ಕೆ ರಂಗೇರಿದೆ..
ಕೆಂಪು ಮಳೆಯಲ್ಲಿ ತೊಯ್ದ ಮಗಳು ಹಸಿರಾಗಿದ್ದಾಳೆ..
ಹೆಣ್ಣಾಗಿದ್ದಾಳೆ!!!

ಸ್ಕರ್ಟಿನ ಜಾಗಕ್ಕೆ, ಉದ್ದ ಲಂಗ ಬಂತು,
ಜಡೆಯ ರಿಬ್ಬನ್ನಿಗೆ ಹೂವು ಬಂದು ಕುಳಿತಿತ್ತು..
ಸುರಿವ ಮಳೆಯ ನೋಡುತ್ತಾ ಅಳುವ ಅವಳಿಗೆ..
ಅದೇನೆಂದು ಅರಿವಾಯಿತೋ ಇಲ್ಲವೋ..
ಅಂಜಿಕೆಯೊಂದೆ ಆಗುತ್ತಿತ್ತು..

ಇದೆಲ್ಲ ಹೀಗೆಯೇ ರೂಢಿಯಾಗುವ ತನಕ..
ಹೆದರಬೇಡ.. ಎನ್ನುತ್ತಾ
ಅಮ್ಮ ಗಡಿಬಿಡಿಯಿಂದ ಓಡಾಡುತ್ತಿದ್ದಳು..
ಆದರೆ ಅಪ್ಪ??
ದಿನವೂ ಕರೆದು ಮಡಿಲಮೇಲೆ ಮುದ್ದುಗರೆಯುತ್ತಿದ್ದವ..
ಇಂದು ಮಾರು ದೂರದಲ್ಲಿ ನಿಂತಿದ್ದಾನೆ..

ನನಗಿದು ಬೇಡವೇ ಬೇಡ..
ನನ್ನನ್ನು ನನ್ನಿಂದ ದೂರ ಮಾಡುವ ಇದು...
ನೋವು ಕೊಡುವ ಇದು..
ಇದೇನಿದು..!
ಬೇಡ ನನಗಿದು...

ಒಳಗಿಂದ ಅಳು ನುಗ್ಗಿಬಂತು..
ಮತ್ತೊಮ್ಮೆ ಲಂಗ ಬಿಸಿಯಾಯಿತು...

-ಪಲ್ಲವಿ 

ಕರಗುವೆ...