Sunday, January 30, 2022

ನೆನಪು

ಕನಸು ಮನಸಿನ ಕನ್ನಡಿಯಾಗಿರಲಿ
ಕನ್ನಡಿ ಎಂದೂ ಒಡೆಯದಿರಲಿ
ಒಡೆದ ಚೂರು ಚುಚ್ಚದಿರಲಿ
ಚುಚ್ಚಿದ ಗಾಯ ಎಂದಿಗೂ ಮಾಸದಿರಲಿ
ಸದಾ ನಿನ್ನ ಗುರುತಾಗಿರಲಿ....

Tuesday, January 18, 2022

ಮೈಲಿಗೆ


ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು, "ತಿಳಿ ಬಣ್ಣದ ಬಟ್ಟಿಲಿ ರಕ್ತ ಎದ್ದು ಕಾಣ್ತೈತೆ.. ಬುರ್ಖಾ ಹಾಕಿ ಉಸಿರು ಕಟ್ಟಿರು ಪರವಾನಿಲ್ಲ.. ನಮ್ಮ ರಕ್ತ ಕಾಣಕಿಲ್ಲ.. ಅಂದ್ಲು ನಮ್ಮ ಅಮ್ಮಿ.. ಕಂಡ್ರೆ ಏನು ತಪ್ಪು.. ಎಲ್ಲರ ರಕ್ತನೂ ಕೆಂಪೇ ಆಲ್ವಾ ಅಂತಾ ಕೇಳ್ದೆ.. ಅದ್ಕೆ ದೊಡ್ದ್ ಹುಡ್ಗಿ ಥರ ಮಾತಾಡ್ಬೇಡ ಅಂದ್ಲು.." ಎನ್ನುತ್ತಾ ಮುಖ ಬಾಡಿಸಿದಳು!!
ಇಂತಹ ಮೌಢ್ಯಗಳು ಜಾತಿ - ಧರ್ಮವನ್ನೂ ಮೀರಿ ನಿಂತಿವೆಯಲ್ಲ.. 
ದೇಹಕ್ಕೆ ಧರ್ಮವಿಲ್ಲ... ಪ್ರಾಣಿಯಾದರೂ ಸರಿಯೇ.. ಹೆಣ್ಣು ರಕ್ತ ಹರಿಸಲೇಬೇಕಲ್ಲ..

"ಹೆಣ್ಣಾಗೋದು ಸುಲಭ ಅಲ್ವೇ ಹುಡುಗಿ.." ಎಂದಿದ್ದರು ಒಬ್ಬಾಕೆ!
"ಅದೊಂದು ಬದಲಾವಣೆಗಳ ಆಗರ!! ಆ ಬದಲಾವಣೆಗಳೊಂದಿಗೆ ಹೋರಾಡುತ್ತ, ಹೊಂದಿಕೊಳ್ಳುತ್ತಾ, ದಿನ ಕಳೆಯುವುದಂತೂ ಅನುಭವಿಸಿದವರಿಗೆ ಗೊತ್ತು.. ಹೊಟ್ಟೆಯೊಳಗಿಂದ ಹಿಂಡಿದಂತೆ ಭಾವ, ನೋವು! ಹರಿವ ರಕ್ತ.. ಬಟ್ಟೆ ಹಿಂಡಿದಂತಲ್ಲ, ಕಬ್ಬು ಹಿಂಡಿ, ರಸ ತೆಗೆದಂತೆ... ಈ ಸಮಯವನ್ನು ಅರ್ಥ ಮಾಡಿಕೊಳ್ಳಿ ಎಂದು ನನ್ನ ಮಗನಿಗೆ ಹೇಳಿದೆ, ಅವ ನನಗೆಲ್ಲಾ ಗೊತ್ತಮ್ಮಾ.. ನೀನು ರೆಸ್ಟ್ ಮಾಡು ಎಂದ!! ಮಗಳಿಲ್ಲ ಎಂಬ ಕೊರಗು ಹೋಯ್ತು.." ಮಗನಿಗೂ ಬಿಡಿಸಿ ಹೇಳಿದ್ದಳಾಕೆ.. ಎಲ್ಲವನ್ನೂ ಅರಿತಿರಲಿ ಎಂದು..

ನನ್ನ ದೇಹಕೆ ರಕ್ತ ನೀಡಿದವಳೆನ್ನ ಅಮ್ಮ..
ಕಣ ಕಣಕೂ ಜೀವ ತುಂಬಿದವಳು..
ಮುಕ್ತವಾಗಿ ಹೇಳುತ್ತೇನೆ, ನಾ ಮೊದಲು ಋತುಮತಿಯಾದಾಗ ಅಮ್ಮನೂ ಆಚೆ ಕುಳಿತಿದ್ದಳು! 
ಅದೆಷ್ಟು ನಾಜೂಕು ಈ ಸಮಯ! ಹಾರಾಡುತ್ತ ಕುಣಿಯುತ್ತಲಿದ್ದವಳು, ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಲಿದ್ದೆ..

ಆದರೂ ನನ್ನ ಭಯ ಇಮ್ಮಡಿಸಿದ್ದು ನನ್ನಮ್ಮನ ಮುಟ್ಟು ನಿಲ್ಲುವ ಸಮಯದಲ್ಲಿ.. ವರ್ಷಗಟ್ಟಲೆ ಅನುಭವಿಸಿದ ಯಾತನೆಯ ಕಂಡು!! ಮಧ್ಯರಾತ್ರಿಯೂ ಅಪ್ಪ, ಅಮ್ಮನನ್ನು ಡಾಕ್ಟರ ಬಳಿ ಕರೆದೊಯುತ್ತಿದ್ದರು. ಕೊನೆಗೂ ಅವಳ ನೋವು ನಿಂತಿದ್ದು ಒಂದು ಶಸ್ತ್ರ ಚಿಕಿತ್ಸೆಯಿಂದ..
ಯಾರಾದರೂ ಹುಟ್ಟಿದ ಜಾಗವನ್ನು ನೋಡಿದ್ದೀಯಾ ಎಂದು ಕೇಳಿದರೆ ಹೌದೆನ್ನುತ್ತಾರೆ, ಜಾಗದ ಹೆಸರು ಹೇಳುತ್ತಾರೆ. ನಾನೂ ನೋಡಿದ್ದೇನೆ ನನ್ನಮ್ಮನ ಗರ್ಭಕೋಶವನ್ನು! ಒಂದು ಮುಷ್ಟಿಯ ಜಾಗದಲ್ಲಿ ನನ್ನ ಬೆಳೆಸಿದ್ದಾಳವಳು!
ಆ ನೋವನ್ನು ಪ್ರತಿ ಹೆಣ್ಣು ಅನುಭವಿಸುತ್ತಾಳೆ.ನಾ ನೋಡಿದಂತೆ ಕೆಲವರು ಅಸಹ್ಯಪಟ್ಟುಕೊಳ್ಳುತ್ತಾರೆ, ಇದರ ಬಗ್ಗೆ ಮಾತನಾಡಲು ಮುಜುಗರ ಎನ್ನುತ್ತಾರೆ!!
ಈ ಮೂರು ದಿನಗಳಾದರೂ ವಿಶ್ರಾಂತಿ ಸಿಗಲಿ, ದೇಹ ಆದಷ್ಟು ಶುಚಿಯಾಗಿರಲಿ ಎಂಬ ಕಾರಣಕ್ಕೆ ಹೊರಗೆ ಕೂರಿಸಿದರೆ, 'ಮೈಲಿಗೆ' ಎಂದು ಹೆಸರಿಸುತ್ತಾರೆ.

ದೇಹ ನನ್ನದು...
ರಕ್ತ ನನ್ನದು...
ಮಾಂಸ ನನ್ನದು...
ಕ್ಷಣ ಕ್ಷಣಕ್ಕೂ ಬದಲಾಗುವ ಭಾವ ನನ್ನದು...
ಅನುಭವಿಸುವ ನೋವು ನನ್ನದು...
ಮೈಲಿಗೆ ಮಾತ್ರ ಆಡುವವರ ಬಾಯಿಯದು!!
ದಶಕಗಳಿಂದ ಇಂತಹುದನ್ನು ಪಾಲಿಸಿಕೊಂಡು ಬಂದಿದ್ದ ನನ್ನಜ್ಜಿಗೆ ಇವಿಷ್ಟನ್ನು ಹೇಳಿದ ನಂತರ ಒಂದೇ ಕ್ಷಣಕ್ಕೆ "ನೀ ಇನ್ನೂ ಆಚೆ ಕೂರುವುದು ಬೇಡ.. ಆರಾಮವಾಗಿ ಒಳಗೇ ಇರು" ಎಂದಳಲ್ಲ, ಆ ಗಟ್ಟಿತನ ಇನ್ನೂ ಹಲವರಿಗೆ ಬರಬೇಕಿದೆ!!

-ಪಲ್ಲವಿ ಹೆಗಡೆ 



Sunday, January 16, 2022

ಕೊಂಡಿಯಾಗಿ..


ಎಲ್ಲಿಂದಲೋ ಬಂದು ಇಲ್ಲಿ ಬಿದ್ದು,
ಬೇರೂರಿದೆ ಆಳವಾಗಿ..
ಕೇಳಿದವರಿಲ್ಲ ನೀನಾರೆಂದು..
ಆಡಿದವರೇ ಎಲ್ಲ ಹೀಗೇಕೆಂದು..

ಊರಿಲ್ಲವೆನಗೆ, ಭದ್ರ ಬೇರಿದೆ..
ನನ್ನೊಡಲ ಬಸಿರು ಊರಗಲ ಉಸಿರಾದಂತೆ
ನಾ ನಕ್ಕು ಹಗುರಾದೆ...
ಜೀವದೊಳಗೆ ಜೀವವಾಗಿ,
ಚಿಗುರಾಗಿ ಹಸಿರಾಗಿ, ಕಾಯಾಗಿ
ಹಣ್ಣಾಗಿ, ನೆರಳಾಗಿ ನಿಧಿಯಾಗಿ
ಬಾನೆತ್ತರಕೆ ಬೆಳೆದೆ...
ಮುದಿಯಾಗಿ ಮುಪ್ಪಾಗಿ
ಸೊರಗಿ ಒಣಗಿದರೂ
ಸೋಲದೇ ನಿಂತಿರುವೆ
ಭೂಮ್ಯಾಕಾಶಕೆ ಕೊಂಡಿಯಾಗಿ..

-ಚಿತ್ರ ಮತ್ತು ಸಾಲು
ಪಲ್ಲವಿ 







Thursday, January 13, 2022

ನೆನಪು

"ಪರೀಕ್ಷೆ ಎಂಬ ಯುದ್ಧದಲ್ಲಿ
ಪೆನ್ನು ಎಂಬ ಖಡ್ಗ ಹಿಡಿದು
ಶಾಯಿ ಎಂಬ ರಕ್ತ ಚೆಲ್ಲಿ
ಪಾಸು ಎನ್ನುತ್ತಾ ಗೆದ್ದು ಬಾ.."
ಹೊಸವರ್ಷದ ಹಾಗೂ ಮಕರ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಾಂತಿಯ ದಿನ ಹೊಸ ಬಟ್ಟೆ ಹಾಕಿಕೊಂಡು, ಗೆಳೆಯರಿಗೆ ಹಾಗೂ ಶಿಕ್ಷಕರಿಗೆ ಸಂಕ್ರಾಂತಿ ಕಾಳನ್ನು ಹಂಚುತ್ತ, "ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡು" ಎನ್ನುತ್ತಾ ಹತ್ತಿರದ ಶಾಲೆಗಳಿಗೆಲ್ಲ ಸುತ್ತಿ ಬರುತ್ತಿದ್ದೆವು.
ಸಂಜೆ ಹೊತ್ತಿಗೆ ಯಾರ ಡಬ್ಬಿಯಲ್ಲಿ ಜಾಸ್ತಿ ಸಂಕ್ರಾಂತಿ ಕಾಳಿದೆ, ಯಾರ ಬಳಿ ಹೆಚ್ಚು ಬಣ್ಣದ ಕಾಳಿದೆ ಎಂದು ಹುಡುಕುತ್ತಿದ್ದೆವು..
ಹುಡುಗರೆಲ್ಲ ಆಕಾಶಕ್ಕೆ ಕಾಳನ್ನು ಹಾರಿಸಿ ಬಾಯಗಲಿಸಿ ನಿಲ್ಲುತ್ತಿದ್ದರು! ಹೆಣ್ಣುಮಕ್ಕಳಿಗೆ ಹೊಸ ಬಟ್ಟೆಯತ್ತ ಗಮನ!! ಯಾರಾದರೂ "ನಿನ್ನ ಅಂಗಿ ಚಂದ" ಎಂದರೆ ಸಾಕಿತ್ತು.. ಮನಸ್ಸು ಸಂಕ್ರಾಂತಿ ಕಾಳು ತಿಂದಾಗ ಆಗುವಷ್ಟೇ ಸಿಹಿ ಆಗುತ್ತಿತ್ತು.
ನಾನಂತೂ ಗೆಳೆಯರ ಡಬ್ಬಿಯಲ್ಲಿ ಪೆಂಟೆ ಬೆಲ್ಲದ ಸಣ್ಣ ತುಣುಕುಗಳನ್ನೂ, ಪುಟಾಣಿ ಕಾಳುಗಳನ್ನು ಆರಿಸಿಕೊಳ್ಳುತ್ತಿದ್ದೆ!!

ಗೆಳೆಯರು ಎಷ್ಟು ಆಪ್ತರು ಎಂಬುದಕ್ಕೆ ಹಂಚುವ ಗ್ರೀಟಿಂಗ್ ಉತ್ತರವಾಗಿತ್ತು! ಅವರವರ ನೆಚ್ಚಿನ ಹೀರೋ, ಹೀರೋಯಿನ್ ಗಳ ಗ್ರೀಟಿಂಗ್ card ಗಳು, ಹೂವು, ಪರಿಸರದ ಚಿತ್ರದ ಕಾರ್ಡ್ ಗಳು, ಹತ್ತಿರದ ಗೆಳೆಯರಿಗೆ ಐದು ರೂಪಾಯಿ ಕಾರ್ಡ್ ಆದರೆ, ಹಾಯ್ -ಬೈ ಗೆಳೆಯರಿಗೆ ಒಂದು ರೂಪಾಯಿ ಕಾರ್ಡ್ಗಳು..
ಅದರಲ್ಲಿಯೂ ಅಸೂಯೆ ಅಡಗಿರುತ್ತಿದ್ದುದು ಸುಳ್ಳಲ್ಲ!!

ಪ್ರತಿ ವರ್ಷವೂ ಹಬ್ಬದ ಮಾರನೆಯ ದಿನ ನನ್ನ ಸ್ಥಿತಿ ಗಂಭೀರವಾಗಿರುತ್ತಿತ್ತು! ಇಡೀ ದಿನ ಕಾಳನ್ನು ತಿಂದು, ಹಲ್ಲು ನೋವು ಶುರುವಾಗಿರುತ್ತಿತ್ತು.. ಇಲ್ಲವೇ ಬಾಯಿ ತುಂಬಾ ಗುಳ್ಳೆಗಳು ಕಾಳಿನಂತೆ ಎದ್ದಿರುತ್ತಿದ್ದವು!! ಮನೆಯಲ್ಲಿ ಮಂಗಳಾರತಿ ಮಾಡಿಸಿಕೊಂಡು, ಶಾಲೆಗೆ ಬಂದರೆ ಹಬ್ಬದ ದಿನದ ಅವಾಂತರಗಳೆಲ್ಲ ಕಾಣುತ್ತಿದ್ದವು. ಚಪ್ಪಲಿ ಇಲ್ಲದ ಅಂಗಾಲಿಗೆ ಕಾಲಿಟ್ಟಲ್ಲೆಲ್ಲ ಕಾಳುಗಳು ಚುಚ್ಚುತ್ತಿದ್ದವು!! ಅವೆಲ್ಲವನ್ನೂ ಗುಡಿಸಿ ಒಪ್ಪವಾಗಿಸಬೇಕಿತ್ತು!

ಆದರೂ ಆ ಹೊಸ ಅಂಗಿಯ, ಬಣ್ಣದ ಡಬ್ಬದ, ಸಂಕ್ರಾಂತಿ ಕಾಳಿನ ಹಬ್ಬವನ್ನು ನಾನಂತೂ ಈಗಲೂ ಕಳೆದುಕೊಳ್ಳುತ್ತಿದ್ದೇನೆ! ಈಗಿನ ಮಕ್ಕಳು ಕರೊನ ಕಾಲದಲ್ಲಿ ಕಳೆದುಕೊಳ್ಳುದ್ದಾರೆ ಎಂಬ ದುಃಖದಲ್ಲಿಯೇ..
ಎಲ್ಲವೂ ಸರಿಹೋಗಲಿ.. ಮುಂದಿನ ವರ್ಷವಾದರೂ ಪುಟಾಣಿಗಳು ಚಂದವಾಗಿ ಹಬ್ಬವನ್ನಾಚರಿಸಲಿ ಎನ್ನುತ್ತಾ..
ಎಲ್ಲರಿಗೂ "ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು"..

Sunday, January 9, 2022

ಮಧ್ಯ ಘಟ್ಟ

ಶಿವಾನಂದ ಕಳವೆ ಅವರ 'ಮಧ್ಯಘಟ್ಟ' ಕಾದಂಬರಿ, ಇತ್ತೀಚೆಗೆ ನಾ ಓದಿದ, ಮನಸ್ಸಿಗೆ ಹತ್ತಿರವಾದ ಪುಸ್ತಕ.
ನಮ್ಮೂರಿನ ಸೊಗಡನ್ನು ಹೊತ್ತು, ಮಣ್ಣಿನ ಘಮವನ್ನು ತನ್ನಲ್ಲಿ ಬೆರೆಸಿಕೊಂಡು ಹೊಳೆವ ಹಸಿರಾಗಿರುವ ಪುಸ್ತಕವಿದು.

ಅರವತ್ತರ ಗೋಪಯ್ಯ ಹೆಗಡೆಗೆ ಹದಿನನೆಂಟರ ಶ್ರೀದೇವಿಯೊಡನೆ ಲಗ್ನವಾಗಿ ಆಕೆ ಕೇರಳದಿಂದ ಮಧ್ಯಘಟ್ಟಕ್ಕೆ ಬಂದಳು. ಪರವೂರಿಗೆ ಬಂದವಳಿಗೆ ತಾಯಿಯದವಳು ಅದೇ ಕೇರಳ ಮೂಲದ ಸಾವಿತ್ರಮ್ಮ. ತನ್ನ ಮಗಳಂತೆಯೇ ನೋಡಿಕೊಂಡು ಸಮಯಕ್ಕೆ ಸರಿಯಾಗಿ ತಿಳುವಳಿಕೆ ನೀಡುತ್ತಾ, ಕನ್ನಡ ಕಲಿಸಿ, ಕೆಲಸ ಕಲಿಸಿ ದೊಡ್ಡ ಮನೆಗೆ ತಕ್ಕ ಸೊಸೆಯಾಗಿಸಿದಳು.

ವರ್ಷಗಳ ನಂತರ ಮಗಳನ್ನು ಕಾಣುವ ಹಂಬಲದಲ್ಲಿ ಕೇರಳದಿಂದ ಬಂದ ಭೂದೇವಿಯ ಮಹಾಯಾನವೇ ಅದೆಷ್ಟು ಕಷ್ಟಗಳನ್ನು ಒಳಗೊಂಡಿತ್ತು..!ಕೊನೆಗೆ ಆಕೆಯೂ ಅನಿವಾರ್ಯವಾಗಿ ಇದೇ ಊರಿನಲ್ಲಿ ನೆಲೆ ನಿಲ್ಲಬೇಕಾಯ್ತು. ಮಗಳಿಗೆ ಮಕ್ಕಳಿಲ್ಲ ಎಂಬ ಚಿಂತೆ ಕಾಡುತ್ತಿರಬೇಕಾದರೆ ಕೇಮು ಎಂಬ ಕೆಲಸದಾಳು ಕೊಟ್ಟ ಔಷಧಿಯ ಪರಿಣಾಮವಾಗಿ ಶ್ರೀದೇವಿಗೆ ಮಕ್ಕಳಾಗುತ್ತವೆ!

ನಾಲ್ಕು ಘಟ್ಟದಲ್ಲಿ ನನಗೆ ಈ 'ಮಧ್ಯಘಟ್ಟ' ಪುಸ್ತಕ ಬಹಳ ಇಷ್ಟವಾಗಿದೆ.
*ಮಳೆಗಾಲದ ಪ್ರಾರಂಭದಲ್ಲಿ ಮನೆಗೆ ಮೇಲು ಹೊದಿಕೆ ಹೊದಿಸುತ್ತಾರೆ. ಈಗಿಂನಂತೆ ಹೆಂಚು, ಸಿಮೆಂಟ್ ನ ಬಳಸುವ ಕಾಲವಲ್ಲವದು. ಸೋಗೆಯ ಹೊದಿಕೆಯಾದರೆ ಶ್ರೀಮಂತರು, ಹುಲ್ಲಿನ ಹೊದಿಕೆಯಾದರೆ ಬಡವರು ಎಂಬ ಕಾಲ! ಅದೆಷ್ಟು ಬಡತನವೆಂದರೆ ಕಾಡಿನ ಕಣಗಿಲೆ ಎಲೆಯಲ್ಲಿ ಗಂಜಿ ಬಡಿಸಿ ನಾಲಿಗೆಯಲ್ಲಿ ನಾಯಿ ನೆಕ್ಕುವಂತೆ ತಿನ್ನುತ್ತಿದ್ದರಂತೆ.. ಉಗುರು ತಾಗಿದರೆ ಎಲ್ಲಿ ಎಲೆ ಹರಿಯುವುದೋ ಎಂಬ ಭಯದಲ್ಲಿ ಕೈಯನ್ನೇ ತಾಗಿಸುತ್ತಿರಲಿಲ್ಲವಂತೆ! ಓದಿ ಸುಮ್ಮನೆ ಕಣ್ಣುಮುಚ್ಚಿ ಕುಳಿತಿದ್ದೆ. ಅದೆಂತಹ ಬಡತನವನ್ನೂ ಅದೆಷ್ಟು ನಿರ್ಲಿಪ್ತವಾಗಿ ತಿಳಿಸಿದ್ದಾರೆ ಎನಿಸಿದ್ದು ಸುಳ್ಳಲ್ಲ. ಓದಿಯೇ ಒಮ್ಮೆ ಕೈ ನಡುಗಿತ್ತೆನಗೆ!

*ಮಾಡಿಗೆ ಸೋಗೆ ಹೊದಿಸುವ ಕೆಲಸ ಮುಗಿದ ರಾತ್ರಿ ಕಂಬಳದ ಮದ್ದನ್ನು (ಹೆಂಡ) ಎಲ್ಲಾ ಕುಡಿದು, ಇಸ್ಪೀಟ್ ಆಡುವಾಗ ಶುರುವಾಗುವುದೇ ಭಂಗಿ ಸೊಪ್ಪಿನ ಭಯಂಕರ ಪ್ರಭಾವ!! ಇದನ್ನು ಓದಿ ಬಹಳ ನಕ್ಕಿದ್ದೇನೆ. "ಅರೆ.. ಅತ್ತೆರೆ ಮತ್ತೇನು ಸುದ್ದಿ!!" ಎಂದು ಸುಮಾರು ಜನರ ಬಳಿ ಕೇಳಿದ್ದೇನೆ!! ಊರಲ್ಲಿ ಹಲವರು ಹೇಳಿದ ಭಂಗಿ ಸೊಪ್ಪಿನ ಅವಾಂತರಗಳನ್ನು ನೆನಪಿಸಿಕೊಂಡಿದ್ದೇನೆ!

*ಹುಲಿ ಬೇಟೆಯ ಅಧ್ಯಾಯದಿಂದ ಹೊಸದೇ ಆಯಾಮ ಪ್ರಾರಂಭವಾಗುತ್ತದೆ. ಕೌತುಕ ಘಟ್ಟಗಳು, ಅನಿರೀಕ್ಷಿತ ತಿರುವುಗಳು ಇಲ್ಲಿ ಘಟ್ಟದ ರಸ್ತೆಯತೆಯೇ ಇವೆ!! ಹುಲಿಯ ಉಪಟಳ, ಅದರ ಬೇಟೆಯ ಸಿದ್ಧತೆ, ಹುಲಿಯ ಜೊತೆಗೆ ಬೇತೆಯಲ್ಲಿ ಓರ್ವನ ಆಕಸ್ಮಿಕ ಸಾವು, ಅದಕ್ಕೆ ಗಂಟು ಹಾಕಿಕೊಂಡ ಕಾರಣಗಳು-ಮೌಢ್ಯಗಳು, ಮತ್ತೊಂದು ಪ್ರಾಯಶ್ಚಿತ್ತದ ಸಾವು... ಎಲ್ಲವೂ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತವೆ.

*ಗೋಪಯ್ಯ ಹೆಗಡೆಗೆ ಅರೋಗ್ಯ ಹದೆಗೆಟ್ಟಾಗ, ಅವರ ಭಾವ ಮೈದುನ ವಾಸುದೇವ, ವರದಪ್ಪ ಹೆಗಡೆ ಎಂಬುವವರೊಂದಿಗೆ ಔಷಧಿ ಬೇರು ತರಲು ಕಾಡಿಗೆ ಹೋಗುತ್ತಾನೆ. ಆಗ ವರದಪ್ಪ ಹೆಗಡೆ ವರ್ಣಿಸುವ ಇತಿಹಾಸ ನಿಜಕ್ಕೂ ರೋಮಾಂಚನವೆನಿಸುತ್ತದೆ. ಪ್ರತಿ ಮರ ಗಿಡದಲ್ಲಿಯೂ ಒಂದೊಂದು ಕಥೆ ಅಡಗಿದೆಯೇನೋ ಎನಿಸುತ್ತದೆ.

"ದಕ್ಕರ ಧರ್ಮಂಗೆ ಇಕ್ರ ಈ ವರ್ಷ ಸಕ್ರ ಸರಿಯಾಗಿ ಪಕ್ರ ಪಾಠ ಮಧ್ಯ ಗಕ್ರ ಘಟ್ಟದವು ಕಕ್ಕರೆ ಕಲಿಸಿದಂಗೆ ಅಕ್ರ ಆತು" ಇದನ್ನ ಮಾತ್ರ ಬಾಯಿಪಾಠ ಮಾಡಲು ನಾ ಸೋತಿದ್ದೇನೆ!!

ಈಗಾಗಲೇ ಮತ್ತಿಘಟ್ಟವನ್ನೊಮ್ಮೆ ನೋಡಿದ್ದರೂ, ಈ ಪುಸ್ತಕ ಓದಿದ ಮೇಲೆ ಮತ್ತೆ ಹೋಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ!!  ಊರ ಪರಿಸರ, ಕಲ್ಲು,ಮಣ್ಣು, ತಲೆ ಕೆಳಗಾದ ಮಾವಿನ ಮರ, ಜಲಪಾತ, ಕೆಂಪು ತೆಂಗಿನ ಕಾಯಿ ಎಲ್ಲವೂ ಮತ್ತೊಮ್ಮೆ ನನ್ನನ್ನು ಕೈ ಬೀಸಿ ಕರೆಯುತ್ತಿವೆ!
ಎಲ್ಲಕ್ಕಿಂತಲೂ ಮಿಗಿಲಾಗಿ ಇದೊಂದು ನೈಜ ಕಥೆ! ಇದನ್ನು ಇಷ್ಟು ಸುಂದರವಾಗಿ ನಮ್ಮೆದುರಿಗೆ ಇಟ್ಟ ಶಿವಾನಂದ ಕಳವೆ ಅವರಿಗೆ ಧನ್ಯವಾದಗಳು.

-ಪಲ್ಲವಿ ಹೆಗಡೆ 




ಕರಗುವೆ...