Sunday, May 29, 2022

ಬಾಲ್ಯದ ನೆನಪು...

ನಮ್ಮೂರ ಶಾಲೆ ಎಂದರೆ ಹಳ್ಳಿಗೂ ಪೇಟೆಗೂ ಸಮೀಪ. ನಾ ಕಲಿತ ಶಾಲೆ ಎನ್ನುವುದಕ್ಕಿಂತ ನನ್ನ ಅಪ್ಪ, ಅತ್ತೆಯರೂ ಅಲ್ಲಿಯೇ ಕಲಿತದ್ದು.

ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಶಾಲೆ ಸುವರ್ಣ ಮಹೋತ್ಸವವನ್ನಾಚರಿಸಿಕೊಂಡಿದೆ. ನೆನಪಿನ ಕೊಂಡಿಗಳನ್ನು ಸೇರಿಸುತ್ತ, ಹೊಸ ಚಿಗುರ ಹುಮ್ಮಸ್ಸಿನಲ್ಲಿ ಬೀಗುತ್ತಿರುವ ಶಾಲೆ "ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪ".

ಶಾಲೆಯ ಎದುರಲ್ಲಿಯೇ ಇರುವುದು "ಪ್ರಭು ಬೇಕರಿ". ಬ್ರೆಡ್ ತಯಾರಿಸುವ ಘಮ ವರ್ಷವಿಡೀ ಮೂಗಿಗೆ ಬಡಿಯುತ್ತಿತ್ತು. ಚಂದದ ಗಿಳಿಯೊಂದನ್ನು ಸಾಕಿದ್ದರು ಬೇಕರಿಯ ಆಂಟಿ. ಶಾಲೆಯ ಸಮಯ ಮುಗಿದ ನಂತರ ಅವರ ಮನೆಯ ಬಾಗಿಲಲ್ಲಿ ನಿಂತು, "ಆಂಟಿ, ಒಂದು ಮೆಣಸಿನಕಾಯಿ ಕೊಡಿ.. ಗಿಳಿಗೆ ಕೊಡ್ತೆ..." ಎಂದು ಕೇಳಿದಾಗ, ನಗುತ್ತಾ ಬಂದು ಎರಡು ಮೆಣಸಿನ ಕಾಯಿ ಕೊಡುತ್ತಿದ್ದರು. " ಆಂಟಿ, ಅದ್ಕೆ ಖಾರ ಆಗಲ್ವಾ.. ಸಕ್ರೆ ಕೊಡ್ಲಾ.. " ಎಂದು ಕೇಳಿದಾಗ ಅವರು ನಗುತ್ತಿದ್ದುದು ಇನ್ನೂ ನೆನಪಿದೆ!!
ಆ ಬೇಕರಿಯಲ್ಲಿ ಒಬ್ಬ ನನಗೆ ಎಷ್ಟು ಪರಿಚಿತನಾಗಿದ್ದನೆಂದರೆ, ಒಳ ಹೊಕ್ಕರೆ ಒಂದು ಬ್ರೆಡ್ ಪ್ಯಾಕ್ ಹಾಗೂ ಇನ್ನೊಂದು ಬಣ್ಣದ ಕೇಕನ್ನು ತಂದು ಕೊಡುತ್ತಿದ್ದ. ಬ್ರೆಡ್ ಪ್ಯಾಕ್ ಮನೆಯವರೆಗೂ ಹೋಗುತ್ತಿತ್ತು. ಬಣ್ಣದ ಬ್ರೆಡ್ ಅವನ ಎದುರಲ್ಲಿಯೇ ಹೊಟ್ಟೆಗಿಳಿಯುತ್ತಿತ್ತು!! ಬಿಳಿಯ ಬಣ್ಣದ ಬ್ರೆಡ್ ಮೇಲೆ ಬಣ್ಣ ಬಣ್ಣದ ಕೊಬ್ಬರಿ ತುರಿಯನ್ನು ಉದುರಿಸಿ, ಮೇಲಿನಿಂದ ಸಕ್ಕರೆ ಪುಡಿ ಹಾಕಿರುತ್ತಿದ್ದರು. ಬಾಯಲ್ಲಿಟ್ಟರೆ, ಆಹಾ! ಸ್ವರ್ಗ..
ಶಾಲೆಯ ಪಕ್ಕದಲ್ಲಿಯೇ ಇರುವ "ಪರಿಮಳ ಫ್ಯಾನ್ಸಿ ಸ್ಟೋರ್" ಮಧ್ಯಾಹ್ನ ಊಟದ ಬಿಡುವಿನಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಐವತ್ತು ಪೈಸೆಗೆ ಸಿಗುವ ಪುಟಾಣಿ ಪೆಪ್ಸಿ, ಹುಣಿಸೆ ಹಣ್ಣಿನ ಕಟ್ಟಾ ಮೀಠಾ, ಶುಂಠಿ ಪೆಪ್ಪರ್ಮೆಂಟ್, ಜೀರಿಗೆ ಪೆಪ್ಪರ್ಮೆಂಟ್ ಗಳು ಅಪ್ಪನ ಜೇಬಿನಿಂದ ಹಣ ತೆಗೆಯಲು ಪ್ರೋತ್ಸಾಹಿಸುತ್ತಿದ್ದವು!! ಹೀಗೆ ಹಣ ಕಿಸೆಯಿಂದ ಖಾಲಿಯಾಗುವುದು ತಿಳಿದಿದ್ದರೂ ಅಮ್ಮನ ವರೆಗೆ ವಿಷಯ ಹೋಗದಂತೆ ನೋಡಿಕೊಳ್ಳುತ್ತಿದ್ದರು ಅಪ್ಪ!!

ಅಂತೂ ಒಂದು ದಿನ ಸಿಕ್ಕಿಹಾಕಿಕೊಂಡೆ! ದುಡ್ಡು ಕದಿಯುವಾಗಲ್ಲ; ಪಾಟಿಚೀಲದಲ್ಲಿ ವಾಟರ್ಪೈಂಟ್ ನೋಡಿ ಅಮ್ಮ ಕಣ್ಣು ಕೆಂಪಗೆ ಮಾಡಿಕೊಂಡಿದ್ದಳು. ನಾನು ಯಾವಾಗಲೇ ಬಣ್ಣ ಕೊಡಿಸು ಎಂದಾಗಲೂ, ಸ್ಕೆಚ್ ಪೆನ್, ಕ್ರೆಯಾನ್ಸ್ ಕೊಡಿಸುತ್ತಾಳೆ, ಈ ನೀರಿನಲ್ಲಿ ಕರಡುವ ಬಣ್ಣ ಕೊಡಿಸುವುದಿಲ್ಲ ಎಂಬ ಸಿಟ್ಟಿತ್ತು ನನಗೆ! ಅಂದು ನನ್ನ ಪಕ್ಕದಲ್ಲಿಯೇ ಕುಳಿತವನ ಚೀಲದಲ್ಲಿ ನೀಲಿ ಮುಚ್ಚಳದ ಆಯತಾಕರಾದ ಈ ಬಣ್ಣದ ಡಬ್ಬ ಅದೆಷ್ಟು ಆಕರ್ಷಿಸಿತ್ತು ಎಂದರೆ, ಗಬಕ್ಕೆದು ಅವನ ಚೀಲದಿಂದ ನನ್ನ ಚೀಲಕ್ಕೆ ತುಂಬುವಷ್ಟು...
ಆದರೆ ಆ ಬಣ್ಣವನ್ನು ಉಪಯೋಗಿಸಲೂ ಸಾಧ್ಯವಾಗಲಿಲ್ಲ. ಅಮ್ಮನ ಕೈ ಇಂದ ಏಟು ಸರಿಯಾಗಿಯೇ ಬಿತ್ತು ಎನಿಸುತ್ತದೆ.. "ನಾಳೆ ಇದ್ನ ಅವಂಗೆ ವಾಪಾಸ್ ಕೊಟ್ಟಿದ್ದಿಲ್ಲೆ ಅಂದ್ರೆ...." ಎಂದು ಹೆದರಿಸಿದ್ದಳು. ಮಾರನೇ ದಿನ ಅವನೂ ಬಣ್ಣ ಕಳೆದುಕೊಂಡ ದುಃಖದಲ್ಲಿ ಇದ್ದ ಎನಿಸುತ್ತದೆ, ಬೆಳಿಗ್ಗೆ ಸರಿಯಾಗಿ ಮಾತನಾಡಲೂ ಇಲ್ಲ. ಮಧ್ಯಾಹ್ನ ಊಟದ ಸಮಯದಲ್ಲಿ ಮತ್ತೆ ಅವನ ಚೀಲಕ್ಕೆ (ಬೇಸರದಿಂದ!) ಆ ಬಣ್ಣದ ಡಬ್ಬಿಯನ್ನು ಸೇರಿಸಿ ಸುಮ್ಮನೆ ಕುಳಿತೆ!
ನಂತರ ಕಲಿತದ್ದು ಒಂದೇ ಪಾಠ - "ಶಾಲೆಯಲ್ಲಿ ಏನೇ ಕದ್ದರೂ ಅಮ್ಮನ ಕೈಗೆ ಸಿಗದಂತೆ ನೋಡಿಕೊಳ್ಳಬೇಕು!!"
ಅಂತೂ ಎಲ್ಲವೂ ಸರಿಯಾಗಿತ್ತು, ಶಾಲೆಯಲ್ಲಿ ನಡೆಯುವ ನನ್ನ ಚಟುವಟಿಕೆಗಳೆಲ್ಲ ಅಮ್ಮನವರೆಗೂ ಹೋಗದೆ, ಮಗಳು ಸುಧಾರಿಸಿದ್ದಾಳೆ ಎಂದು ಅಮ್ಮನೂ ಸಮಾಧಾನದಲ್ಲಿ ಇರುವಂತೆ ತೋರುತ್ತಿತ್ತು.
ದಿನವೂ ಸಂಜೆ 4.45 ಗೆಲ್ಲ ಅಪ್ಪ ಬಂದು ಕರೆದುಕೊಂಡು ಹೋಗುತ್ತಿದ್ದರು. ಅವರ ಕೆಲಸದ ನಿಮಿತ್ತ ಊರಾಚೆ ಹೋಗಿದ್ದಾಗ, ರಾತ್ರಿಯವರೆಗೂ ಅಪ್ಪನ ಸ್ನೇಹಿತರ ಮನೆಯಲ್ಲೋ, ಅನ್ನಪೂರ್ಣ ಅಕ್ಕೊರ (ಟೀಚರ್) ಮನೆಯಲ್ಲೋ ಇರಬೇಕಿತ್ತು. ನನಗೆ ಅಪ್ಪನ ಸ್ನೇಹಿತರ ಮನೆಗಿಂತ ಅಕ್ಕೊರ ಮನೆಯಲ್ಲಿರುವುದು ಬಹಳ ಖುಷಿ. ನನ್ನ ನೆಚ್ಚಿನ ಟೀಚರ್ ಅವರು. ಅವರಿಗೂ ನಾನೆಂದರೆ ಬಲು ಪ್ರೀತಿ. ಈಗಲೂ ಸಂತೆಯ ನಡುವೆ ಅಮ್ಮ ಸಿಕ್ಕಾಗ ನಿಲ್ಲಿಸಿ, "ಮಗಳು ಎಲ್ಲಿದಾಳೆ.. ಏನು ಮಾಡ್ತಿದಾಳೆ" ಎಂದು ವಿಚಾರಿಸುತ್ತಾರಂತೆ. ಸಾವಿರಾರು ಮಕ್ಕಳಿಗೆ ಪಾಠ ಹೇಳಿದ ಟೀಚರ್, ನನ್ನನ್ನು ನೆನಪಿಟ್ಟುಕೊಂಡು ಕೇಳುತ್ತಾರಲ್ಲ ಎಂಬ ಯೋಚನೆಯೇ ನನ್ನನ್ನು ಖುಷಿಗೊಳಿಸುತ್ತದೆ!

ಸಂಜೆ ಶಾಲೆ ಮುಗಿದ ನಂತರ ಟೀಚರ್ ಕೈ ಹಿಡಿದು ರಸ್ತೆ ದಾಟಿಸಿ ಅವರ ಮನೆಗೆ ಕರೆದೊಯ್ದು, ಹಣ್ಣುಗಳನ್ನು ತಿನ್ನಲು ಕೊಡುತ್ತಿದ್ದರು. ಅಲ್ಲಿಯೇ ಕುಳಿತು, ಹೋಂ ವರ್ಕ್ ಮುಗಿಸಿ, ಟಿವಿಯಲ್ಲಿ ಬರುವ ಧಾರವಾಹಿಗಳನ್ನು ಅವರ ಜೊತೆಗೆ ನೋಡುತ್ತಿದ್ದೆ. ನಂತರ ಊಟ ಮಾಡಿ, ಜೋಕಾಲಿಯಲ್ಲಿ ಮಲಗಿದೆನೆಂದರೆ, ಜೋರು ನಿದ್ದೆ! ಯಾವಾಗ ಅಪ್ಪ ಬಂದು ನನ್ನನ್ನು ಎತ್ತಿಕೊಂಡು ಹೋದರು ಎಂದೂ ತಿಳಿಯುತ್ತಿರಲಿಲ್ಲ.
ಹೀಗೆ ಒಂದು ದಿನ ಅಪ್ಪ ಊರಲ್ಲಿರಲಿಲ್ಲ. ಎರಡು ದಿನ ಅವರು ಇರದ ಕಾರಣ, ಬೇರೆ ಯಾರ ಮನೆಯಲ್ಲಿಯೂ ಉಳಿಯಕೂಡದು, ಸಂಜೆ ಶಾಲೆ ಬಿಟ್ಟ ತಕ್ಷಣ ಊರ ಮಕ್ಕಳೊಂದಿಗೆ ನಡೆದುಕೊಂಡು ಬರಬೇಕೆಂದು ಅಮ್ಮ ತಾಕೀತು ಮಾಡಿದ್ದಳು.
ಅಂದು ಸಂಜೆ ಮಾತ್ರ, ನಾನು ಅಮ್ಮನ ಮಾತನ್ನು ಕೇಳಲಿಲ್ಲ. ಶಾಲೆಯ ಪಕ್ಕದಲ್ಲಿಯೇ ಇದ್ದ ಗೆಳತಿಯ ಮನೆಯಲ್ಲಿ ಚಹಾ ಕುಡಿದು, ಸಿಹಿ ತಿಂದು, ಪಾಟಿಚೀಲವನ್ನು ಬಿಸಾಡಿ ಸಿದ್ಧಿವಿನಾಯಕ ಶಾಲೆಯ ಅಂಗಳಕ್ಕೆ ಓಡಿದ್ದೆ ಎಲ್ಲ ಗೆಳೆಯರೊಡನೆ. ನನ್ನ ತಲೆಯಲ್ಲಿ ಬೆಳಗಿನಿಂದಲೇ ಉಪಾಯ ಓಡುತ್ತಿತ್ತು. "ಹೇಗೂ ಅಪ್ಪ ಊರಲ್ಲಿ ಇರಲ್ಲ. ದಿನಾಲೂ ನಾಲ್ಕೂವರೆಗೆ ಮನೆಗೆ ಕರ್ಕೊಂಡು ಹೋಗ್ತಾರೆ. ಉಳಿದ ಗೆಳೆಯರೆಲ್ಲ ಸಂಜೆ ಏಳರ ತನಕ ಆಡ್ತಾರೆ. ನಂಗೆ ಆಗಲ್ಲ. ಇವತ್ತು ಇವರ ಜೊತೇನೆ ಇದ್ದು, ಆಟ ಆಡಿ, ಸಂಜೆ ಮನೆಗೆ ಹೋಗೋಣ..!" ಎಂದೆಲ್ಲ ಯೋಚಿಸಿದ್ದೆ. ಬೇಕರಿಯಲ್ಲಿ ಬ್ರೆಡ್ ತಿಂದು, ಶಾಲೆಯ ಅಂಗಳದಲ್ಲಿ ಆಡುತ್ತ ಸಮಯ ಸರಿದದ್ದೇ ತಿಳಿಯಲಿಲ್ಲ. ಸುಮಾರು ಆರು ಗಂಟೆ ಆಗಿರಬಹುದು. ಕತ್ತಲಾಗುತ್ತಿತ್ತು. ನೋಡುತ್ತೇನೆ - ಎದುರಲ್ಲಿ ಅಮ್ಮ ನಿಂತಿದ್ದಾಳೆ! ಅವರೆಲ್ಲರೆದುರು ನನ್ನ ಎಳೆದುಕೊಂಡು ಹೊರಟಳು. ಜೋರಾಗಿ ಅಳುತ್ತಿದ್ದೆ. ಮನೆಗೆ ಬರುವವರೆಗೂ ಮಾತನಾಡಲಿಲ್ಲ.
 "ಈ ಅಮ್ಮಂಗೆ ಎಲ್ಲಾ ಹೆಂಗೆ ಗೊತ್ತಾಗತ್ತೆ!? ನಾ ಇಲ್ಲಿದಿನಿ ಅಂತಾ ಅಮ್ಮಂಗೆ ಹ್ಯಾಗೆ ಗೊತ್ತಾಯ್ತು.." ಅಂತೆಲ್ಲ ಯೋಚನೆ ನನಗೆ. ಮಾರನೇ ದಿನ ಸಿಟ್ಟೆಲ್ಲ ಇಳಿದಿತ್ತು. ಅಮ್ಮನ ನೋಡಿ ಪಾಪ ಎನಿಸಿತ್ತು.
ಸಂಜೆ ಐದಕ್ಕೆ ಮನೆಯಲ್ಲಿರಬೇಕಾದ ಮಗಳು ಕತ್ತಲಾದರೂ ಇನ್ನೂ ಬಂದಿಲ್ಲ ಎಂದು ಎಷ್ಟು ಹೆದರಿದ್ದಳೋ.. ನನ್ನನ್ನು ಹುಡುಕಲು ಎರಡು ಕಿಲೋಮೀಟರ್ ನಡೆದು ಬಂದಳು, ಅದೂ ಸೊಂಟದಮೇಲೆ ತಮ್ಮನನ್ನು ಹೊತ್ತುಕೊಂಡು!!

ಗಡಿಬಿಡಿಯ ದಿನಗಳ ನಡುವೆ ಇವೆಲ್ಲವೂ ನೆನಪಾಗುತ್ತಿರಲಿಲ್ಲವೇನೋ.. ಅವನನ್ನು ಭೇಟಿಯಾಗುವವರೆಗೆ! ಮೊನ್ನೆ ಅಪ್ಪ ಒಬ್ಬರ ಮನೆಗೆ ಹೋಗೋಣ ಬಾ ಎಂದು ಕರೆದೊಯ್ದರು. ಒಬ್ಬ ವ್ಯಕ್ತಿ ಹಾಸಿಗೆಯ ಮೇಲೆಯೇ ಇದ್ದ. ಕೆಲವು ವರುಷಗಳ ಹಿಂದೆ ಅಪಘಾತಕ್ಕೀಡಾಗಿ ಸೊಂಟದ ಕೆಳಗಿನ ಎಲ್ಲ ಭಾಗವೂ ಸ್ವಾಧೀನ ಕಳೆದುಕೊಂಡವಂತೆ. ನಾವು ಬಂದಿದ್ದೇವೆಂದು ಆತನ ಮನೆಯವರು ಅವನನ್ನು ಎತ್ತಿ ಕುರ್ಚಿಯ ಮೇಲೆ ಕುಳಿಸಿದರು. ಅವರೆಲ್ಲ ನನ್ನಪ್ಪನೊಟ್ಟಿಗೆ ಮಾತನಾಡುತ್ತಿದ್ದರೂ ಈ ವ್ಯಕ್ತಿ ಮಾತ್ರ ನನ್ನನ್ನೇ ನೋಡುತ್ತಿದ್ದ. ಅಪರಿಚಿತನೊಬ್ಬ ಹೀಗೆ ನೋಡುತ್ತಿದ್ದಾನಲ್ಲ ಎಂದು ನನಗೆ ಇರುಸುಮುರುಸಾಗಿತ್ತು! ಅಪ್ಪ ನನ್ನನ್ನು ಪರಿಚಯಿಸುವ ಮೊದಲೇ, "ಪಲ್ಲವಿ ಅಲ್ವೇನಮ್ಮ ನೀನು.. ಬಾಲಿಕೊಪ್ಪ ಶಾಲೆಗೆ ಹೋಗ್ತಿದ್ದೆ ಆಲ್ವಾ.." ಎಂದ. ನಮ್ಮಿಬ್ಬರಿಗೂ ಆಶ್ಚರ್ಯ..
ನಿಮಗೆ ನನ್ನ ಪರಿಚಯ ಹೇಗಿದೆ ಎಂದು ಕೇಳಿದ್ದಕ್ಕೆ, "ನಾ ಅಲ್ಲಿ ಬ್ರೆಡ್ ಮಾಡೋಕೆ ಇರ್ತಿದ್ದೆ, ನೀ ಪುಟ್ಟ ಹುಡ್ಗಿ ಆಗಿದ್ದಾಗ ಆ ನೀಲಿ ಯುನಿಫಾರ್ಮ್, ಎರ್ಡು ಜುಟ್ಟು ಹಾಕ್ಕೊಂಡು, ಬೇಕರಿಗೆ ಬಂದು ಅಂಕಲ್ ಬ್ರೆಡ್ ಅಂತಾ ಕೇಳ್ತಿದ್ದಿ.. ನೆನಪು ಇದ್ಯಾ.. ನಾ ಬ್ರೆಡ್ ಕೊಡ್ತಿದ್ದೆ ನಿಂಗೆ.." ನನಗೆ ಯಾವುದೂ ಪೂರ್ತಿಯಾಗಿ ನೆನಪಾಗಲಿಲ್ಲ.
"ನೀನು ಕೆಲಸಕ್ಕೆ ಹೋಗೋ ಅಷ್ಟು ದೊಡ್ಡ ಆಗ್ಬಿಟ್ಟೆ ನೋಡು.. ನಾನು ಹೀಗಿದೀನಿ.."ಎಂದು ಕಣ್ಣು ತುಂಬಿಕೊಂಡ.
 ಅವರ ಮನೆಯಿಂದ ಆಚೆ ಬರುತ್ತಾ ಮನಸ್ಸು ಏನೋ ಒಂದು ರೀತಿ ಭಾರವಾಗಿತ್ತು..ಬಹುಶಃ ನೆನಪುಗಳನ್ನು ತುಂಬಿಕೊಂಡಿರಬಹುದು!!

-ಪಲ್ಲವಿ 







ಕರಗುವೆ...