Sunday, November 29, 2020

ನನ್ನೊಳಗಿನ ಕವಿತೆ ನೀನು...

ನನ್ನೊಳಗಿನ ಕವಿತೆ ನೀನು..
ಕರೆದರೂ ಬಾರದೇ ಕಾಡಿಸುವ 
ನಿದ್ದೆಗೆಡಿಸುವ, ಕನಸನಾವರಿಸುವ 
ಕಚಗುಳಿ ಇಡುವ ನನ್ನೊಳಗಿನ ಕವಿತೆ ನೀನು... 

ತುಟಿಯಂಚಲ್ಲಿ ಮಿಂಚನಿಟ್ಟು 
ಕಣ್ಣಂಚನ್ನು ತೇವವಾಗಿಸಿ 
ಒಮ್ಮೆಲೇ ಕಣ್ಮರೆಯಾಗಿ, ಭಯ 
ಹುಟ್ಟಿಸುವ ನನ್ನೊಳಗಿನ ಕವಿತೆ ನೀನು... 

ಭಾವದ ಲಹರಿಯೊಳಗೆ ಬೆಸೆದು 
ಪಿಸು ನುಡಿಯ ಶಬ್ದಕೊಮ್ಮೆ ಹುಡುಕಾಡಿ 
ಎದೆಗೂಡ ಬಡಿತದ ತಾಳಕ್ಕೆ ತಂತಿ 
ಮೀಟುವ ನನ್ನೊಳಗಿನ ಕವಿತೆ ನೀನು... 

-ಪಲ್ಲವಿ 

Saturday, November 28, 2020

ಮರ್ಕಟ ಮನವೇ...

ಮರ್ಕಟ ಮನವೇ, 
ಆಲಿಸೊಮ್ಮೆ ಎನ್ನ ದನಿಯ... 

ಬಾನೆತ್ತರಕ್ಕೊಮ್ಮೆ ಜಿಗಿದು, 
ಪಾತಾಳದಾಳಕ್ಕೊಮ್ಮೆ ಧುಮುಕಿ, 
ತಾರೆಗಳತ್ತ ಕೈಚಾಚುವ ಮನವೇ, 
ನಿಲ್ಲು ಒಮ್ಮೆ, ದಣಿವಾಗದೇ ನಿನಗೆ? 

ನೀ ಹೂವಲ್ಲ ಅರಳಲು, 
ನೀ ಹಕ್ಕಿಯಲ್ಲ ಹಾರಲು, 
ನೀ ಮೀನಲ್ಲ ಈಜಲು, ಮನವೇ 
ತಿಳಿ, ನೀನೊಂದು ಮನವಷ್ಟೇ !

ಕುಗ್ಗದಿರು ಗೆಳತಿ ನಾನೊಂದು ಮನವಷ್ಟೇ !
ನಿನ್ನ ಸಂಕೋಲೆಗಳಿಂದ ಬಂಧಿಸದಿರೆನ್ನ.. 
ಬಾನೆತ್ತರವಿರಲಿ, ಪಾತಾಳದಾಳವೇ ಇರಲಿ 
ಗಡಿಯಿಲ್ಲ ಗೆಳತಿ ಎನಗೆ !
ಹೂವಲ್ಲದಿದ್ದರೂ ಅರಳಬಲ್ಲೆ ನಾ, 
ಹಕ್ಕಿಯಲ್ಲದಿದ್ದರೂ ಹಾರಬಲ್ಲೆ ನಾ, 
ಮೀನಲ್ಲದಿದ್ದರೂ ಈಜಬಲ್ಲೆ ನಾ... 
ಕೇಳಿಲ್ಲಿ.. ನಾನೊಂದು ಬಂಧವಿರದ ಮನವಷ್ಟೇ !!

-ಪಲ್ಲವಿ

Monday, November 23, 2020

ಕಟ್ಟಿದ ಕೈಗಳು..


ಕಟ್ಟಿದ ಕೈಗಳು ಚಿಟ್ಟೆಯಾಗುತಿವೆ.. 
ಮುಟ್ಟಿದರೆ ಮುದುಡುವ ಪತಂಗವಲ್ಲವದು.. 
ರೆಕ್ಕೆ ಬಲಿತು ಬಾನಂಗಳಕ್ಕೆ ಚಿಮ್ಮುವುದು.. 
ಕಟ್ಟಿರಬಹುದು ಕೈಯ.. 
ಕಣ್ರೆಪ್ಪೆಯೊಳಗೆ ಹಾರಾಡುತಿಹ ಕನಸನಲ್ಲ.. 

-ಪಲ್ಲವಿ 
 

Sunday, November 22, 2020

ಚಿಟ್ಟೆ

ಪಿಸುಗುಟ್ಟಿದೆ ಚಿಟ್ಟೆಯೊಂದು 
ಹೂವ ಕಿವಿಯಲಿ ... 
ಮಬ್ಬು ಬೆಳಕಿನ ಮುಂಜಾವಿನಲಿ 
ಅರಸಿದ ಮೊದಲ ಕಂಗಳವು... 

ಎಲೆಯ ಮೇಲೆ ಎಳೆ ಬಿಸಿಲಿಗೆ 
ಹೊಳೆಯುತಿಹ ಹನಿ ಇಬ್ಬನಿಯ 
ಹೀರಿ ಮಿಟುಕಿಸಿತು ಕಣ್ಣೊಂದ 
ತುಟಿಯಂಚಲ್ಲಿ ನಕ್ಕಿತು ಇಬ್ಬನಿ... 

-ಪಲ್ಲವಿ 

Tuesday, November 10, 2020

ಬಂದುಬಿಡು ನೀನೊಮ್ಮೆ...

ಹಠವ ಹೊತ್ತವಳು ನಾನು.. 
ತಾಳ್ಮೆಯ ಪ್ರತಿರೂಪ ನೀನು...
ಮಾತಿಗೊಮ್ಮೆ ಮುನಿವವಳು ನಾನು.. 
ಮುನಿಸ ಕರಗಿಸಿ ನಗಿಸುವವ ನೀನು.. 

ಕನಸ ಕಣ್ತುಂಬಿಕೊಂಡವಳು ನಾನು.. 
ಜೋಗುಳದೊಡನೆ ಕನಸಲೋಕಕೆ 
ಕರೆದೊಯ್ಯುವ ಜೊತೆಗಾರ ನೀನು..
ಎಲ್ಲಿಯ ಬಂಧವಿದು... 

ನಿನ್ನೆದೆ ಗೂಡಲ್ಲಿ ಮಗುವಾಗುವಾಸೆ... 
ತಲೆದಿಂಬಾಗುವೆ.. ನಿನ್ನ ನಗುವಾಗಿರುವೆ.. 
ಲೆಕ್ಕವಿರದಷ್ಟಿದೆ ನನ್ನೊಳಗೆ ಬಯಕೆ.. 
ಕರೆದೊಯ್ಯುವೆಯಾ ನನ್ನಾ ಎನ್ನಲಂಜಿಕೆ.. 

ಹಾಡು ಬಾ ಇಂಪಾಗಿ ಎಂದಿದ್ದೆ.. 
ನನ್ನೊಳಗಿನ ಹಾಡಾದೆ.. 
ಕೊನೆಯವರೆಗೂ ನಿನ್ನ ಪದಗಳಿಗೆ 
ನಾ ಪಲ್ಲವಿಯಾಗುವಾಸೆ... 

ಮಗು,ಮಾತೆ,ಮಡದಿ, ಸಖಿ.. 
ನಾನಾರಾಗಲಿ ನಿನಗೆ.... 
ಉಸಿರಾಗು ಎನ್ನುವೆಯಲ್ಲ ನಗುತ್ತಾ... 

ನಿನ್ನಿಷ್ಟದ ಹೂ ಮುಡಿಸಿ, 
ಹಣೆಗೊಂದು ಚುಕ್ಕೆಯಿಟ್ಟು, 
ಮೇಲೊಂದು ಮುತ್ತನಿಡು... 
ಬಂದುಬಿಡು ನೀನೊಮ್ಮೆ... 

ಬಾ ಚಿಟ್ಟೆಯೇ, ಮೊಗ್ಗರಳುತಿದೆ... 
ಬಿಳಿ ಮಲ್ಲಿಗೆ ಬಾಡುವ ಮುನ್ನ 
ಘಮಿಸು, ಮುದ್ದಿಸು, ಆಲಂಗಿಸು, ಸಂತೈಸು... 
ಬಂದುಬಿಡು ನೀನೊಮ್ಮೆ... 

Monday, November 2, 2020

ಹೊಸ ದಿನದ ಮುನ್ನುಡಿಯಾಗಿ


ಬಾನಂಚಲ್ಲಿ ಇಣುಕಿದ ದಿನಕರ 
ಧರೆಗೆ ಕತ್ತಲಾವರಿಸುವ ಮುನ್ನ.. 
ಹಸಿರ ಹೊದ್ದ ಧರಿತ್ರಿ ನಸು ನಾಚಿ, 
ಕೆಂಪಾಗಿ, ನುಲಿಯುತಿರಲು.. 
ಎಲ್ಲೆಲ್ಲೂ ಹರಿವು ನಲಿವು... 
ಮೌನವ ಭೇದಿಸಿದೆ ತಂಗಾಳಿ, 
ಸಪ್ತ ಸ್ವರಗಳ ಜೊತೆಯಾಗಿ.. 
ಹೊಸ ಪದ್ಯವ ರಚಿಸುತ್ತ ನವೋಲ್ಲಾಸದಿ, 
ಹೊಸ ದಿನದ ಮುನ್ನುಡಿಯಾಗಿ... 

-ಪಲ್ಲವಿ 

ಕರಗುವೆ...