Saturday, July 31, 2021

ಸಾಗುವ ಬಲು ದೂರ


ಮಿಂದೆದ್ದು ನಳನಳಿಸುವ ಹಸಿರ
ನಡುವೆ ಸಾಗುವ ಬಲುದೂರ..
ಒದ್ದೆ ಮಣ್ಣಲಿ ಹೆಜ್ಜೆ ಮೂಡಿಸಿ,
ಎಲೆಯ ಮೇಲಣ ಹನಿಗೆ ದನಿಯಾಗಿ,
ಕಾಡ ಮೌನಕೆ ಶರಣಾಗಿ,
ಮತ್ತಷ್ಟು ಗಾಢವಾಗಿ...
ಬೇರುಗಳಂತೆ ಬಿಗಿಯಾಗಿ,
ಕೈ ಬೆರಳ ಬೆಸೆದು...
ಸಾಗುವ ಬಲುದೂರ...

-ಪಲ್ಲವಿ 

Thursday, July 29, 2021

ಹೊಸತನ

ಮುಸ್ಸಂಜೆ ಮರೆಯಾಗುವ ರವಿಗೂ
ನಾಳೆಯ ಹೊಸತನದ ಕೌತುಕ 
ಹೆಪ್ಪುಗಟ್ಟಿದ ಮೋಡಕೂ
ಧರೆಯ ತಣಿಸುವ ತವಕ
ಹೊಸತನದಿ ಹನಿಬೆರೆಸಿ
ಕರಗಿ ಹಗುರಾಗುವ ಬಾ ಸಖಾ...





Wednesday, July 14, 2021

ಪ್ರೀತಿ

ಮುಪ್ಪಡರಿದ ಮೊಗ
ಬೊಚ್ಚು ಬಾಯಿ
ನೆರೆತ ಕೂದಲು
ಸುಕ್ಕು ಚರ್ಮ.....
ಇಷ್ಟು ವಯಸ್ಸಾಯ್ತು ನೋಡು.. ನಮ್ಮ ಪ್ರೀತಿಗೆ....

-ಪಲ್ಲವಿ 



Friday, July 9, 2021

ಪುಟ್ಟ ದೈವ


ದೈವ ಒಂದು ಧರೆಗೆ ಬಂದು
ಕಪ್ಪು ಬಿಳುಪ ಚಿತ್ರಕೆ ರಂಗನೆರಚಿದೆ...
ಕಣ್ಣ ಹೊಳಪಲಿ...
ಮುಗ್ಧ ನಗುವಲಿ..
ಕಣ್ಣಳತೆಗೆ ಕಂಡಿದ್ದಷ್ಟೂ ಸೋಜಿಗವೇ..
ಪುಟ್ಟ ಅಂಗೈಗೆ ಸಿಕ್ಕಿದ್ದಷ್ಟೂ ಆಟಿಕೆಯೇ..
ಭಯವಿರದ ಮನವದು..
ಭಯವ ಹುಟ್ಟಿಸುವರಾರು?
ಭಿನ್ನತೆಯ ಅರಿಯದೆ ಗೆಳತನಕೆ ಕೈ ಚಾಚುವ ಬೆರಳುಗಳಿಗೆ ಅದರ ಪರಿಚಯಿಸುವವರಾರು?
ಕೆಟ್ಟದನು ಕಾಣದ ನಗುವಿಗೆ..
ಮುಖವಾಡವ ಪರಿಚಯಿಸುವವರಾರು...?!
ಈ ದೈವ... ದೇವತೆಯಾಗಿಯೇ ಇರಲಿ..
ಎಂದಿಗೂ ನಮ್ಮಂತೆ ಮಾನವನಾಗದಿರಲಿ...

-ಪಲ್ಲವಿ 

ಸಫಾರಿ..!

ಸಫಾರಿಯ ಗಾಡಿ ಮುಂದೆ ಸಾಗುತ್ತಿತ್ತು...
ಚಿಗರೆ ಜಿಂಕೆಗಳ ಕಂಡು ಗಾಡಿಯೊಳಗಿನ ನಗು, ಕೇಕೆ ಜೋರಾದಂತೆಲ್ಲ ಗಾಡಿಯೂ ತಲೆದೂಗಿಸುತಿತ್ತು.. ಒಳಗಿನ ಗಾರ್ಡ್ ಗಲಾಟೆ ಮಾಡಬೇಡಿ ಎಂದು ಎಚ್ಚರಿಸುತ್ತಿದ್ದ.


ಅಬ್ಬಾ! ದೈತ್ಯಾಕಾರದ ಕರಡಿಗಳು.. ಎಲ್ಲರೂ ಹೋ ಎಂದು ಕೂಗುತ್ತಿರುವಾಗಲೇ ಅವ ಅವಳ ಕಿವಿಯಲಿ ಪಿಸುನುಡಿದಿದ್ದ...
"ನೋಡು.. ಆ ಕರ್ಡಿಗೆ ಹಸ್ವಾಗಿದೆ.. ಆದ್ರೆ ಅಲ್ಲಿ ಏನೂ ಇಲ್ಲ.. ಈ ಕರ್ಡಿಗೂ ಹಸಿವಾಗಿದೆ.. ಜೇನಿಗಾಗಿ ಕಾಯ್ತಾ ಇದೆ.."
ಆ ಮಾತಿಗೆ ಮೈ ಬಿಸಿ ಏರಿತ್ತು.. ಉಸಿರೊಮ್ಮೆ ಕಂಪಿಸಿತ್ತು..
ಅವನ ಕೈಲಿದ್ದ ಸರದ ಮಣಿಗಳನ್ನ ಆಡಿಸುತ್ತಾ, ನಕ್ಕಿದ್ದಳು ಅವಳು.. ಅವನಿಗೆ ಮಾತ್ರ ಅರಿವಾಗುವಂತೆ!!

-ಹಸಿರೂರ ಹುಡುಗಿ 

ಮನಸು


ಮನಸಿಗೆ ಮಾತ್ರವೇ ಅರಿವಾಗುವ ಮಾತು
ನಾಲಿಗೆಯಿಂದ ಎಂದೂ ಹೊರಡಲಾರದು..
ತುಂಬಿದ ಕಣ್ಣು, ನಿಟ್ಟುಸಿರು, ನವಿರು ಸ್ಪರ್ಶ,
ಬೆಚ್ಚನೆಯ ಅಪ್ಪುಗೆ, ಸವಿ ಮುತ್ತು
ಹೇಳುವ ಸಾಂತ್ವನದ ಎದುರು 
ಸಹಸ್ರ ಶಬ್ದಗಳೂ ಸೋಲುವವು..
ಮೌನವೂ ಪ್ರಿಯವೆನಗೆ..
ಅಲ್ಲಿ ಲೋಕದ ಮಾತಿಲ್ಲ...
ಮೆದುಳು ಹೇಳುವ ಮಾತಿಗೆ ಆಸ್ಪದವಿಲ್ಲ..
ಕೊಂಕು,  ಚುಚ್ಚುಗಳಿಗೆ ಅವಕಾಶವೇ ಇಲ್ಲ..
ಮನಸು ಮಾತ್ರವೇ ಮಾತನಾಡುವುದು..
ಮೌನವಾಗಿ, ತನ್ನಿಚ್ಛೆಯಂತೆ..

-ಪಲ್ಲವಿ 

Thursday, July 1, 2021

ಹೊಂಬಿಸಿಲು


ನಿಶಬ್ದದ
ಮಿಡಿತಕೆ  ನಾದವಾಗು
ನಿನ್ನತ್ತ ಬಾಗಿದ
ಚಿಗುರಿಗೆ ಹೊಂಬಿಸಿಲಾಗು
-ಪಲ್ಲವಿ 😊

ಕರಗುವೆ...