Saturday, June 27, 2020

ಪ್ರತಿಜ್ಞೆ


ಮದುಮಗಳಂತೆ ಸುಂದರವಾಗಿ ಅಲಂಕೃತವಾಗಿತ್ತು ಆ ಕಟ್ಟಡ . ಆದರೆ ಒಳಗೆ ಅನಿರ್ವಚನೀಯ ಮೌನ , ಯಾರೆಂದರೆ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ . ಅದು ತ್ರಿಕಾಲಪುರಿಯ ಪ್ರೌಢಶಾಲೆ , ಅಂದು ಅಲ್ಲಿನ ಹತ್ತನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ . ( ವೇದಿಕೆ ಸಿದ್ಧವಾಗಿತ್ತು , ಎಲ್ಲರೂ ಆಸೀನರಾಗಿದ್ದರು . ಆದರೆ  ಕಣ್ತುಂಬುವ ಸಂದರ್ಭ . ಮದುವೆಯಾಗಿ  ತವರಿನಿಂದ ಗಂಡನಮನೆಗೆ ಹೊರಡುವ ವಧುವಿನ ಸ್ಥಿತಿಯಲ್ಲಿ ಮಕ್ಕಳು ! 
ಈ ನಂಟು ಕೇವಲ ಮೂರೇ ವರ್ಷದ್ದಿರಬಹುದು , ಆದರೆ ನೂರು ವರ್ಷವಾದರೂ ಮಾಸದ ಸ್ನೇಹದ ಬುತ್ತಿ ; ನೆನಪಿನಂಗಳ. ನೆಚ್ಚಿನ ಮಿತ್ರರ , ಶಿಕ್ಷಕರ ಹಸ್ತಾಕ್ಷರ ಹಾಳೆಯಲ್ಲಿ ಅಷ್ಟೊತ್ತಿದ್ದರೆ , ಅವರ ನಗುಮುಖ . ಎಂದೂ ಅಳಿಸದಂತೆ ಮನದಲ್ಲಿ ಮೂಡಿತ್ತು . ಪ್ರತಿ ವರ್ಷವೂ ಇದೇ ಸ್ಥಿತಿಯಾದರೂ , ಬೇಸರ ಮಾತ್ರ ತಪ್ಪದು . 
ಎಲ್ಲಾ ಮಕ್ಕಳಿಗೂ ಮೋಹನ್ ಸರ್ ಕಂಡರೆ ಗೌರವ , ಪ್ರೀತಿ . ಅವರ ಮಾತಿಗಾಗಿ ಕಾಯುತ್ತಿದ್ದವರೆಲ್ಲರಿಗೂ ಅವರ ಸುಳಿವೇ ಸಿಗಲಿಲ್ಲ . ಕೊನೆಯಲ್ಲಿ ತಮ್ಮೊಡನೆ ನಡೆಯಲೂ ಕಷ್ಟಪಡುತ್ತಿದ್ದ ಒಬ್ಬ ವೃದ್ಧನನ್ನು ಮೋಹನ್ ಸರ್  ಕರೆತಂದಾಗ ಎಲ್ಲರಿಗೂ ಆಶ್ಚರ್ಯ ! 
ಮೋಹನ್ ಸರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು . ಏಕೆಂದರೆ ಅವರು ಕೇವಲ ಶಿಕ್ಷಕನಾಗಿರಲಿಲ್ಲ , ಎಲ್ಲ ಮಕ್ಕಳಿಗೂ ಗೆಳೆಯನಾಗಿದ್ದರು . ಪ್ರತಿದಿನವೂ ಎಲ್ಲರೊಡನೆ ನಗುತ್ತ ,ನಗಿಸುತ್ತಿದ್ದರು . ಇಂದು ಅವರ ಮುಖದಲ್ಲಿ ಎಂದೂ ಕಾಣದ ಗಾಂಭೀರ್ಯ . ವೇದಿಕೆಗೆ ಬಂಧು ತಮ್ಮ ಮಾತನ್ನು ಪ್ರಾರಂಭಿಸಿದರು .
 “ ಪ್ರೀತಿಯ ಮಕ್ಕಳೆಲ್ಲರಿಗೂ ಶುಭದಿನ . ನೀವು ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಿ ಎಂಬ ನೋವಿಗಿಂತ , ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡುತ್ತಿದ್ದೀರಿ ಎಂಬ ಖುಷಿಯಿದೆ . ಎಷ್ಟೋ ಮಂದಿ ದೊಡ್ಡ ಕನಸುಗಳನ್ನು ಹೊತ್ತಿದ್ದೀರಿ . ಎಲ್ಲವೂ ಈಡೇರಲಿ ಎಂದು ನಾನು ಹಾರೈಸುತ್ತೇನೆ . ಮುಂದೊಂದು ದಿನ ಇವರು ನನ್ನ ಶಿಷ್ಯರು ಎಂದು ನಾನು ಎಲ್ಲರೆದುರು ಹೆಮ್ಮೆಯಿಂದ ಹೇಳುವ ಹಾಗೆ ನೀವೆಲ್ಲ ಗೌರವಯುತವಾಗಿ ಬಾಳಿರಿ , ಈ ದಿನ ನಾನು ನಿಮಗೆಲ್ಲ ಒಂದು ಕಥೆ ಹೇಳಬೇಕೆಂದು ಸಿದ್ಧನಾಗಿ ಬಂದಿದ್ದೇನೆ . ಪ್ರತಿ ದಿನವೂ ಪಾಠ , ಈ ದಿನವೂ ಬೇಕಾ ಎಂದು ಭಾವಿಸಬೇಡಿ . 
ಶೇಷಾಚಲವೆಂಬ ಒಂದು ಸಣ್ಣ ಹಳ್ಳಿ . ಅಲ್ಲಿ ಒಂದು ಶಾಲೆ , ಸುಮಾರು ಮೂವತ್ತು ವಿದ್ಯಾರ್ಥಿಗಳು . ಆಗೆಲ್ಲ ಶಾಲೆಗೆ ಬರುವ ಮಕ್ಕಳ ಸಂಖ್ಯೆ ವಿರಳ . ಅದರಲ್ಲೂ ಹಣ್ಣುಮಕ್ಕಳಿಗಂತೂ ಶಾಲೆ ಹೇಗಿರುತ್ತದೆಂದೇ ಗೊತ್ತಿರಲಿಲ್ಲ . ಇಡೀ ಶಾಲೆಗೆ ಒಬ್ಬರೇ ಶಿಕ್ಷಕ , ಶ್ಯಾಮಸುಂದರ ಎಂದು ಅವರ ಹೆಸರು . ಕೇವಲ ಐದನೇ ವರ್ಗದವರೆಗಿನ ಶಿಕ್ಷಣ ಸೌಲಭ್ಯವಿದ್ದ ಶಾಲೆಯಲ್ಲಿ , ಅದೂ ಕೇವಲ ಮೂವತ್ತು ಮಕ್ಕಳಿಗೆ ಪಾಠ ಮಾಡಲು ಒಬ್ಬ ಶಿಕ್ಷಕ ಸಾಕು . 
ಶ್ಯಾಮಸುಂದರರ ಪತ್ನಿ ಅನ್ನಪೂರ್ಣ , ಸಾಕ್ಷಾತ್ ಅನ್ನಪೂರ್ಣೆಯೇ ! ಇನ್ನೊಬ್ಬರಿಗೆ ಕೈಲಾದಷ್ಟು ಸಹಾಯ ಮಾಡುವುದು ಇಬ್ಬರ ಮನೋಭಾವ , ಅವರ ಮದುವೆಯಾಗಿ ಎಂಟು ವರ್ಷಗಳಾಗಿತ್ತು . ಮೂವರು ಗಂಡು ಮಕ್ಕಳು . ಸುಖೀಸಂಸಾರ ! ಶ್ಯಾಮಸುಂದರರಿಗೆ ಶಾಲೆಯೇ ಎಲ್ಲ.  ವಿದ್ಯಾರ್ಥಿಗಳೆಲ್ಲ ಸ್ವಂತಮಕ್ಕಳಿಗಿಂತ ಹೆಚ್ಚು . ತಾವು ಕಷ್ಟದಲ್ಲಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಬಳವನ್ನೆಲ್ಲ ಖರ್ಚು ಮಾಡುತ್ತಿದ್ದರು . ಹೆಣ್ಣುಮಕ್ಕಳಿಗೂ ವಿದ್ಯೆ ಕೊಡಿಸಬೇಕೆಂದು ಹಣವನ್ನೆಲ್ಲ ಖರ್ಚು ಮಾಡುತ್ತಿದ್ದ ಶ್ಯಾಮಸುಂದರರಿಗೆ ಯಾರೊಬ್ಬರ ಬೆಂಬಲವೂ ಸಿಗಲಿಲ್ಲ . ಆದರೂ ಅವರ ಹೋರಾಟ ಮುಂದುವರಿಯುತ್ತಿತ್ತು . ತಮ್ಮ ಹೆಂಡತಿಗೂ ತಾವೇ ಅಕ್ಷರಾಭ್ಯಾಸ ಮಾಡಿಸಿದರು . ಕಲಿಯುವಾಗ ಅನ್ನಪೂರ್ಣಳಿಗೆ ಮನಸ್ಸಿಲ್ಲದಿದ್ದರೂ ತನ್ನ ಮಕ್ಕಳಿಗೆ ಹೇಳಿಕೊಡುವಾಗ , ವಿದ್ಯೆಯ ಮಹತ್ವದ ಅರಿವಾಯಿತು . ಇಷ್ಟೆಲ್ಲ ಆದರೂ ತಿಂಗಳ ಕೊನೆಯಲ್ಲಿ ಮಕ್ಕಳಿಗೆ ಗಂಜಿ , ಹೆತ್ತವರಿಗೆ ಮಡಿಕೆಯಲ್ಲಿನ ತಂಪಾದ ನೀರು ಹೊಟ್ಟೆ ತುಂಬಿಸುತ್ತಿದ್ದವು . ಗಣೇಶ ಹಬ್ಬಕ್ಕೆ ಗೌರೀಶನಿಗೆ ಬಟ್ಟೆ ತಂದರೆ , ದೀಪಾವಳಿಯಲ್ಲಿ ಮಹೇಶನಿಗೆ ಯುಗಾದಿಯಲ್ಲಿ ಸುರೇಶನಿಗೆ . ಆದರೆ ಶ್ಯಾಮಸುಂದರರ ಬಳಿಯಿದ್ದದ್ದು ಎರಡು ಪಂಚೆ , ಎರಡು ಅಂಗಿ , ಒಂದು ಜೊತೆ ಚಪ್ಪಲಿ. ಅನ್ನಪೂರ್ಣಮ್ಮಳ ಬಳಿ ಒಂದು ಮದುವೆ ಸೀರೆ , ಎರಡು ನಿತ್ಯದ ಸೀರೆಗಳಷ್ಟೇ . ಅಂತೂ ಹೇಗೋ ಅಲ್ಲಲ್ಲಿ ತೂರಾಡುತ್ತಾ , ತೂತು ಬಿದ್ದಲ್ಲಿ ತೇಪೆ  ಹಾಕುತ್ತ ಸಂಸಾರನೌಕೆ ಸಾಗುತ್ತಿತ್ತು . 
ಮಕ್ಕಳು ಶಾಲೆಗೆ ಹೋಗುವಷ್ಟು ದೊಡ್ಡವರಾದಾಗ , ಮೊಟ್ಟಮೊದಲ ಬಾರಿ ಅನ್ನಪೂರ್ಣ ಗಂಡನ ಬಳಿ ಗಟ್ಟಿಯಾಗಿ ಮಾತನಾಡಿದಳು. "ನಿಮಗಾಗಿ ಅಲ್ಲದಿದ್ದರೂ ನಿಮ್ಮ ಮಕ್ಕಳಿಗೋಸ್ಕರವಾದರೂ  ಸಂಬಳವನ್ನು ಉಳಿಸಿ , ಮೂರು ಜನರ ವಿದ್ಯಾಭ್ಯಾಸಕ್ಕೆ ಎಷ್ಟು ಖರ್ಚಾಗಬಹುದೆಂದು ನಿಮಗೆ ನಾನು ಹೇಳಬೇಕಿಲ್ಲ . ಬೇರೆ ಮಕ್ಕಳಿಗೆ ನೀವು ಸಹಾಯ ಮಾಡಿದರೆ ನಿಮ್ಮ ಮಕ್ಕಳ ಭವಿಷ್ಯವೇನು ? ಅವರಿಗೆ ಇನ್ಯಾರಿದ್ದಾರೆ ? ” 
 “ ಹೌದಲ್ಲವೇ  , ಮೂವರು ಬೆಳೆಯುವ ಹುಡುಗರು . ಓದು , ಬಟ್ಟೆ ಎಂದು ಖರ್ಚು ಇರುತ್ತದೆ . ನನಗೇಕೆ ಹೊಳೆಯಲಿಲ್ಲ , ಇರಲಿ ಅನ್ನಪೂರ್ಣ ನೀನು ಹೇಳಿದ್ದು ಒಳ್ಳೆಯದೇ ಆಯಿತು . ಇನ್ನು ಮುಂದೆ ಈ ನೂರು ರೂಪಾಯಿ ಸಂಬಳದಲ್ಲಿ ಅರ್ಧ ನನ್ನ ಮಕ್ಕಳಿಗೂ ಇನ್ನರ್ಧ ನಮ್ಮ ಮಕ್ಕಳಿಗೂ ಎತ್ತಿಡುತ್ತೇನೆ ” ಎಂದು ಹೇಳಿ ಹೊರನಡೆದರು . ನನ್ನ ಮಕ್ಕಳಿಗೂ - ನಮ್ಮ ಮಕ್ಕಳಿಗೂ ಇರುವ ವ್ಯತ್ಯಾಸ ಹತ್ತು ವರ್ಷ ಸಂಸಾರ ತೂಗಿಸಿದವಳಿಗೆ ಅರ್ಥವಾಗದೇ ಇರದು !
 ಹುಡುಗು ಬುದ್ಧಿಯ ಮಕ್ಕಳು , ಕಷ್ಟವೆಂದರೆ ಏನೆಂದು ಅರಿಯದ ವಯಸ್ಸು . ಇನ್ನೊಬ್ಬರ ಬಳಿಯಿರುವ ಬಟ್ಟೆ , ಆಟದ ವಸ್ತುಗಳು ತನಗೂ ಬೇಕೆನ್ನುವ ಮನಸ್ಸು , ಆ ಮಕ್ಕಳಿಗೆ ತಂದೆಯೆಂದರೆ ಏನೋ ಭಯ , ಗೌರವ . ಶಾಲೆಯಿಂದ ಬಂದ ನಂತರ ಪ್ರತಿದಿನ ಗೌರೀಶ , ಮಹೇಶನದ್ದು ಒಂದೇ ಮಾತು , ' ಅಮ್ಮಾ ಅವರ ಬಳಿ ಒಳ್ಳೆಯ ಬಟ್ಟೆ , ಚೀಲ , ಪುಸ್ತಕಗಳಿವೆ . ನಮ್ಮ ಬಳಿ ಏಕಿಲ್ಲ ? ಅಪ್ಪನೂ ದುಡಿಯುತ್ತಾರಲ್ಲಮ್ಮ , ನಮಗೂ ಕೊಡಿಸಬಹುದಲ್ಲ .... ' ಆ ತಾಯಿಗೆ ಮಾತೇ ಹೊರಡದು . ಇವರಿಬ್ಬರೋ  ಸರಿ , ಆದರೆ ಸುರೇಶ?     ಹಿರಿಯರಿಬ್ಬರ ಬಟ್ಟೆ  ಅವನಿಗೆ. ಅವನ ಪ್ರಶ್ನೆಗಳೆಷ್ಟಿರಬೇಡ... ಅಬ್ಬಬ್ಬಾ...!   ಆದರೆ ಅಮ್ಮನ ಬಾಡಿದ ಮುಖ ಅವನ ಪ್ರಶ್ನೆಗಳಿಗೆ ಕಡಿವಾಣ ಹಾಕುತ್ತಿತ್ತು . ಅವಳಾದರೂ ಏನು ಮಾಡಿಯಾಳು.ತನ್ನ ಮಾತನ್ನು ಗಂಡ ಕೇಳುವುದಿಲ್ಲ ಎಂದು ಗೊತ್ತು. ಅವರೇನು ಬದಲಾಗಿರಲಿಲ್ಲ.  ಅದೇ ಸಹಾಯ , ಅದೇ ಹೋರಾಟ .. ಮದುವೆಯಾದಾಗಿನಿಂದ ನೋಡುತ್ತಿರುವ ಅದೇ ವ್ಯಕ್ತಿತ್ವ..!
 ಗೌರೀಶ ಐದನೇ ತರಗತಿ ಮುಗಿಸಿ, ಪಕ್ಕದೂರಿನ  ಪ್ರೌಢಶಾಲೆಗೆ ನಾಲ್ಕು ಕಿಲೋಮೀಟರ್ ನಡೆಯುತ್ತಿದ್ದ;  ಎರಡು ವರ್ಷಗಳ ನಂತರ ಮಹೇಶ , ಮತ್ತೆ ಮೂರು ವರ್ಷಗಳ ಸುರೇಶ ಅದೇ ದಾರಿ ಹಿಡಿದರು. ಅಷ್ಟರಲ್ಲಿ ಶ್ಯಾಮಸುಂದರರ ಕೂದಲು ನೆರೆದಿತ್ತು . ಗೌರೀಶನ ಪ್ರೌಢಶಾಲೆ ಮುಗಿದಿತ್ತು . 
ಒಳ್ಳೆಯ ಅಂಕಗಳೂ ಬಂದಿದ್ದವು. ಅವನಿಗೆ ವಿಜ್ಞಾನಿಯಾಗಬೇಕೆಂಬ ಹಂಬಲವಿತ್ತು . ಆದರೆ ಮುಂದಿನ ವಿದ್ಯೆ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ . ಬೆಂಗಳೂರು ಎಂದರೆ ಖರ್ಚಿಗೆ ಇನ್ನೊಂದು ಹೆಸರು . ಏನೇ ಆದರೂ ವಿದ್ಯೆ ಬೇಕಲ್ಲವೆ ? ಮಗನ ಆಸೆ ಈಡೇರಿಸಲಾಗದಿದ್ದರೆ ತಂದೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ? ... " ಸರಿಯಪ್ಪ , ನಿನ್ನ ಓದಿಗೆ ನೀನು ಸಿದ್ಧನಾಗು , ಹಣದ ಬಗ್ಗೆ ಏನೂ ಚಿಂತಿಸಬೇಡ , ನಾನಿದ್ದೇನೆ . ”  ಎಲ್ಲ ತಂದೆಯರೂ ತಮ್ಮ ಮಕ್ಕಳಿಗೆ ನೀಡುವ ಭರವಸೆಯಿದು . ನನ್ನ ಜೊತೆ ಅಪ್ಪನಿದ್ದಾನೆ ಎಂಬುದು ಮಕ್ಕಳ ಧೈರ್ಯ ಕೂಡ.  ಆದರೆ ಅನ್ನಪೂರ್ಣಳ ಮನದಲ್ಲಿರುವ ಪ್ರಶ್ನೆಗೆ ಉತ್ತರಿಸುವವರಾರು ? ಇನ್ನೊಬ್ಬರಿಂದ ಬಿಡಿಗಾಸನ್ನೂ ಪಡೆಯದ ಈ ಸ್ವಾಭಿಮಾನಿಗೆ ಇಂತಹ ಭರವಸೆ ನೀಡುವ ಧೈರ್ಯವಾದರೂ ಎಲ್ಲಿಂದ ಬಂತು ? ಇನ್ನೂ ಇಬ್ಬರು ಮಕ್ಕಳಿದ್ದಾರೆ . ಅವರೂ ಓದಬೇಡವೇ .... ಅವರಿಗೂ ಹಣ ಬೇಕು . ಹಾಗೆಂದು ಗೌರೀಶನ ಕನಸುಗಳಿಗೆ ಕೊಳ್ಳಿಯಿಡುವುದು ಸರಿಯಲ್ಲ . ಇವರೇನು ಮಾಡುತ್ತಾರೆ ? ಅಷ್ಟರಲ್ಲಿ ಶ್ಯಾಮಸುಂದರರ ಕೈಯಲ್ಲಿ ಪತ್ರಗಳಿದ್ದವು . ಎಷ್ಟೋ ವರ್ಷಗಳಿಂದ ಪೆಟ್ಟಿಗೆಯ ಮೂಲೆಯಲ್ಲಿದ್ದ ಮನೆಪತ್ರ ಬೆಳಕು ಕಂಡವು . 
 “ ನಿಮ್ಮ ಬಂದ ಒಂದು ತಂದೆಯವರಿಂದ ಮನೆಯನ್ನೂ ಮಾರಲು ಸಿದ್ಧರಿರುವಿರಾ ? ” 
“ ನನ್ನ ನಂತರ ಮಗನಿಗೇ ತಾನೇ ? ” 
“ ಮತ್ತೆ ಮಹೇಶ , ಸುರೇಶ ? ” 
“ ನಾನು ನೀನು ಇದ್ದೇವಲ್ಲ ... ?"
“ ಆದರೂ ಆಮೇಲೆ ಉಳಿಯುವುದೆಲ್ಲಿ ? " "ಚಿಂತಿಸಬೇಡ , ದೇವರಿದ್ದಾನೆ. ಅವನೆಲ್ಲ ನೋಡಿಕೊಳ್ಳುತ್ತಾನೆ . ”
 ಮಗ ಬೆಂಗಳೂರಿನ ಹಾದಿ ಹಿಡಿದದ್ದಾಯಿತು . ಹೋದವನು ಆರು ತಿಂಗಳಿಗೊಮ್ಮೆ ಬರುತ್ತಿದ್ದ ; ನಂತರ ಅದೂ ಇಲ್ಲ . ಆದರೆ ಅವರ ತಂದೆ ಮಾತ್ರ ಪ್ರತಿತಿಂಗಳೂ ಹಣ ಹೊಂದಿಸಿ ಕಳುಹಿಸುತ್ತಿದ್ದರು . ಆನಂತರ ಮಹೇಶ ಬೆಂಗಳೂರಿಗೆ ಹೊರಟು ನಿಂತಾಗ ಸೈಕಲ್ , ದನ ಕರುಗಳು ಮನೆ ಬಿಟ್ಟವು . 
ಖರ್ಚು ಹೆಚ್ಚಾಯಿತು , ಸಂಪಾದನೆ ಹೆಚ್ಚಾಗಲಿಲ್ಲ . ಹೇಗೋ ಸುರೇಶ ಸಮಯ ಸಿಕ್ಕಿದಾಗಲೆಲ್ಲ ಮನೆಗೆಲಸ ಮಾಡಿ , ಶಾಲೆಗೆ ಹೋಗುತ್ತಿದ್ದ . ಮತ್ತೆರಡು ವರ್ಷಗಳೂ ಚಕ್ರದಂತೆ ಕಳೆದವು , ಅನ್ನಪೂರ್ಣೆಯೂ ಮುಪ್ಪಾದಳು . ಮತ್ತೆ ಅದೇ ಹಾಡು , ಅದೇ ತಾಳ , ಮೂರನೆಯವನೂ ಬೆಂಗಳೂರಿನ ಹಾದಿ ಸವೆಸುವವನೇ ! 
ಈ ಬಾರಿ ಚಿಂತೆಯಾಗಿದ್ದು ಶಾಮ್ಯಸುಂದರರಿಗೆ ಹಣಕ್ಕೇನು ಮಾಡುವುದು ?
 ಅವರ ಕಳವಳ ಮುಖದಲ್ಲಿಯೇ ಗೋಚರವಾಗಿತ್ತು . ಅನ್ನಪೂರ್ಣ ನಗುತ್ತಲೇ ಕತ್ತಿನಿಂದ ಮಾಂಗಲ್ಯಸರ ತೆಗೆದರು . 
“ ನಿನ್ನ ತಂದೆಯವರು ಕೊಟ್ಟಿದ್ದು ಇದು .... ಬೇಡ ಅನ್ನಪೂರ್ಣ . "
“ ಸುಮ್ಮನಿರಿ ನೀವು . ಹಣ ಹೊಂದಿಸಲು ಇನ್ನೇನೂ ಉಳಿದಿಲ್ಲ." 
“ ಆದರೂ .." 
 “ ತೆಗೆದುಕೊಳ್ಳಿ ಇದನ್ನು."
 ಶ್ಯಾಮಸುಂದರರು ಮಾತನಾಡಲಿಲ್ಲ . ಆದರೆ ಕಣ್ಣುಗಳು ಒದ್ದೆಯಾಗಿದ್ದವು . ಮೊದಲ ಗಂಡನ ಅಸಹಾಯಸ್ಥಿತಿಯನ್ನು ನೋಡಿ , ಸೆರಗಂಚಲ್ಲಿ ಕಣ್ಣೊರೆಸಿಕೊಂಡರು ಅನ್ನಪೂರ್ಣಮ್ಮ.  ತುಟಿಯಂಚಲ್ಲಿ ನಗು ಬೀರಿದರು . ನಗುವಲ್ಲಿನ ನೋವು , ಶ್ಯಾಮಸುಂದರರನ್ನು ಹಿಂಡಿತು . ಈ ಇಪ್ಪತ್ತೈದು ವರ್ಷದಲ್ಲಿ ಒಂದು ಜೊತೆ ಬಳೆಯನ್ನೂ ತಂದುಕೊಡಲಾಗದವನ ಜತೆ ಸಂಸಾರ ನಡೆಸಿದವಳ ಮಾಂಗಲ್ಯಸರವನ್ನೂ ಉಳಿಸಿಕೊಳ್ಳಲಾಗದ ದುರ್ಗತಿ. "ನೀವೇಕೆ ಹಿಂಸೆ ಪಡುತ್ತಿದ್ದೀರಿ ? ಸರ ಹೋದರೇನಾಯಿತು ? ಚಿನ್ನದಂತಹ ಪತಿ , ರತ್ನದಂತಹ ಮೂವರು ಮಕ್ಕಳಿದ್ದಾರೆ . ಕಷ್ಟಕ್ಕಾಗದಿದ್ದರೆ ಬಂಗಾರಕ್ಕೂ ಬೆಲೆ ಇಲ್ಲ , ನೋಡುತ್ತಿರಿ , ಮುಂದೆ ನಿಮ್ಮನ್ನು ಮಹಾರಾಜರಂತೆ ನೋಡಿಕೊಳ್ಳುತ್ತಾರೆ . ನಮ್ಮ ಮನೆ , ಮಾಂಗಲ್ಯಸರ ಎಲ್ಲವೂ ಮತ್ತೆ ನಮ್ಮ ಕೈ ಸೇರುವಂತೆ ಮಾಡುತ್ತಾರೆ . ಈಗ ನಮ್ಮ ಕೈಲಾದಷ್ಟು ನಾವು ಸಹಾಯ ಮಾಡೋಣ . ಮುಂದಿನದು ಶಿವನಿಚ್ಛೆ ! " 
ಇಷ್ಟೊಂದು ಆತ್ಮಸ್ಥೈರ್ಯವುಳ್ಳವಳು , ಜೀವನದ ಮೇಲೆ ಭರವಸೆಯುಳ್ಳವಳು , ಪತ್ನಿಯಾಗಿದ್ದಕ್ಕೆ ಖುಷಿ ಪಡಬೇಕೋ , ಅವಳ ಕಣ್ಣೀರಿಗೆ ಸಾಂತ್ವನ ಹೇಳಲಾರದ ಸ್ಥಿತಿಯಲ್ಲಿದ್ದಿದ್ದಕ್ಕೆ ತನ್ನನ್ನು ತಾನು ಜರಿದುಕೊಳ್ಳಬೇಕೋ ಎಂದುಕೊಂಡರು ಶ್ಯಾಮಸುಂದರರು. ಅದೆಂತಹ  ನಂಬಿಕೆ ಅವಳಿಗೆ ! ಗೌರೀಶನ ಮುಖ ನೋಡದೇ ಸರಿ ಸುಮಾರು  ಮೂರುವರ್ಷಗಳೇ ಕಳೆದವು . ಮಹೇಶ ಪತ್ರಕ್ಕೆ ಉತ್ತರ ಬರೆಯುತ್ತಿಲ್ಲ . ಇನ್ನು ಈ ಸುರೇಶನ ಕಥೆ ಏನೋ ... ಹೋದವರು ಹೊರಟೇ ಹೋದರು . ಅವಳೆಂದಂತೆ ನನ್ನನ್ನು ಮಹಾರಾಜನಾಗಿ ನೋಡಿಕೊಳ್ಳದಿದ್ದರೂ ಪರವಾಗಿಲ್ಲ . ಈ ಮಕ್ಕಳಿಂದ, ನನ್ನಂತಹ ಗಂಡನಿಂದ ಭಿಕ್ಷುಕಿಯಾಗದಿದ್ದರೆ ಸಾಕು ದೇವರೇ ! 
ಇದ್ದ ಒಂದು ಮನೆ ಹೋಯಿತು. ಮೂರುಮಕ್ಕಳೂ ಹೊರನಡೆದರು . ನಗು ಎಂಬುದು ಮಾಯವಾಗಿ ಎಷ್ಟೋ ಕಾಲವಾಗಿತ್ತು . ಮಕ್ಕಳಿಗೆ ಮನೆಪಾಠ ಹೇಳಿಕೊಡುವುದರಿಂದ ಬರುವ ಆದಾಯ  ಒಂದೇ ಸಂಸಾರ ನಡೆಸಲು ದಾರಿ . ಇತ್ತೀಚೆಗೆ ಅನ್ನಪೂರ್ಣಮ್ಮಳ ಮುಂಚಿನ ಧೈರ್ಯ ಮಾಯವಾಗಿತ್ತು . ಆರೋಗ್ಯ ಹದಗೆಟ್ಟಿತ್ತು . ಮಕ್ಕಳನ್ನು ಕೊನೆಯ ಬಾರಿ ನೋಡಬೇಕೆಂಬ ಹಂಬಲ ಹೆಚ್ಚಾಗಿತ್ತು . ಶ್ಯಾಮಸುಂದರರೂ ಪತ್ರ ಬರೆದರು . ಟಪಾಲಿಗೆ ಹಣ ಖರ್ಚಾಯಿತೇ ಹೊರತಾಗಿ ಮಕ್ಕಳಾರೂ ಬರಲಿಲ್ಲ . ದಿನೇದಿನೇ ಆರೋಗ್ಯ ಹದಗೆಡುತ್ತಿತ್ತು . 
ಒಂದು ದಿನ ಗೌರೀಶನ ಪತ್ರ ಬಂತು . “ ಅಪ್ಪ ನನಗೆ ಬರಲು ಸಾಧ್ಯವಿಲ್ಲ . ಆಸ್ಟ್ರೇಲಿಯಾಗೆ ಹೋಗುವ ತಯಾರಿಯಲ್ಲಿದ್ದೇನೆ . ಅಮ್ಮನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸಿ. ಹೊರದೇಶಕ್ಕೆ ಹೋಗಬೇಕಾಗಿರುವುದರಿಂದ ಹಣದ ಅನಿವಾರ್ಯತೆಯಿದೆ . ಇಲ್ಲದಿದ್ದರೆ ಖಂಡಿತ  ಹಣ ಕಳುಹಿಸುತ್ತಿದ್ದೆ . ” 
ಅಯ್ಯೋ ದೇವರೆ , ಇವನ ಬಳಿ ಹಣ ಕೇಳಿದವರಾರು ? ಬಂದುಹೋಗು ಎಂದಷ್ಟೇ ಹೇಳಿದ್ದು .ಮಹೇಶನ ಚಕ್ರದಲ್ಲಿ ರಜದಿಲ್ಲ ಎಂದಿದೆ , ಸುರೇಶ ಪರೀಕ್ಷೆ ಎಂದು ಬರೆದಿದ್ದಾನೆ . ಒಬ್ಬರಿಗೂ ಕಾಯಿ ಬೇಡವೇ ? ತಮ್ಮದೇ ಲೋಕದಲ್ಲಿ ಶ್ಯಾಮಸುಂದರಳು ಮುಳುಗಿದ್ದರು.
ಗಂಡನ ಮುಖ ನೋಡಿಯ ತಿಳಿಯಿತು ಪತ್ನಿಗೆ. ಹೃದಯದಲ್ಲಿ ತೊಂದರೆಯಿದೆ ಎಂದು ತಿಳಿದರೂ ಸಹ , ಚಿಕಿತ್ಸೆಗೆ ಹಣವಿಲ್ಲ. ಬಂದು ಮಾತನಾಡಿಸಲು ಮಕ್ಕಳಿಗೂ ಬಿಡುವಿಲ್ಲ , " ಅನ್ನಪೂರ್ಣ , ಅವರಿಗೆ ಏನೇನೋ ಕೆಲಸವಂತೆ , ಪತ್ರದಲ್ಲಿ ಬರೆದಿದ್ದಾರೆ , ಅಲ್ಲಿಯೇ ಚಿಕಿತ್ಸೆ ಮಾಡಿಸೋಣ . " ಆಯಿತೆಂದು ಇಬ್ಬರೂ ಬೆಂಗಳೂರಿಗೆ ಬಂದರು , ಒಂದು ದೊಡ್ಡಾಸ್ಪತ್ರೆ ಏನೇ ಖಾಯಿಲೆಯಿದ್ದರೂ , ಎಲ್ಲದಕ್ಕೂ ಚಿಕಿತ್ಸೆಯಿದೆ . ಆದರೆ ಹಣ ಬೇಕಲ್ಲ , ಅನ್ನಪೂರ್ಣಮ್ಮನವರಿಗೆ ಶಸ್ತ್ರಚಿಕಿತ್ಸೆ ಆಯಿತು . ಆದರೆ ಶ್ಯಾಮಸುಂದರರಿಗೆ ಚಿಂತೆ . ಎರಡು ಲಕ್ಷ ! ಎಲ್ಲಿಂದ ನೀಡಲಿ ? ಜೇಬಿನಲ್ಲಿರುವುದು ಕೇವಲ ಮುನ್ನೂರು ರೂಪಾಯಿ .... ಕಣ್ಣು ಮುಚ್ಚಿಕೊಂಡು ಕುರ್ಚಿಗೆ ಒರಗಿ ಕುಳಿತರು . ಅಷ್ಟರಲ್ಲಿ ಯಾರೋ ತಟ್ಟಿಸಿ ಎಬ್ಬಿಸಿದಂತಾಯಿತು .
 “ ಸರ್ , ನಿಮ್ಮ ಕಡೆಯ ಪೇಷೆಂಟ್ನ ನೀವು ನೋಡಬಹುದು . " 
“ ಅಯ್ಯೋ ಎಲ್ಲ ಚಿಕಿತ್ಸೆ ಮುಗಿಯಿತಾ .... ? ನಾನಿನ್ನು ದುಡ್ಡು ಕೊಟ್ಟಿಲ್ಲ . "
“ Sir , ಹಣ ಕಟ್ಟದೇ ಇದ್ದಿದ್ದರೆ , ಇವರ ಟ್ರೀಟ್ಮೆಂಟ್ ಆಗ್ತಿರಲಿಲ್ಲ . ”
 “ ಹಾಗಾದರೆ ಯಾರು ಕೊಟ್ಟರು ? ” 
“ ಅದನ್ನು ನೀವು Counter ನಲ್ಲಿ ವಿಚಾರಿಸಿ . ” ಶ್ಯಾಮಸುಂದರರು ಆಶ್ಚರ್ಯದಿಂದ ಓಡಿ ಬಂದರು .
 “ ನನ್ನ ಹೆಂಡತಿ , ಅನ್ನಪೂರ್ಣ ಅಂತ . ಅವಳಿಗೆ ಹೃದಯ ಶಸ್ತ್ರಚಿಕಿತ್ಸೆ ಆಯಿತು . ಹಣ ನೀಡಿದ ದಾನಿ ಯಾರೆಂದು ತಿಳಿದುಕೊಳ್ಳಬಹುದೆ ? ”
 " Sir . ಅವರು ನಮ್ಮ ಆಸ್ಪತ್ರೆಯ ಡಾಕ್ಟರ್ ಮುರಳೀಧರನ್ . " 
ಈ ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ . ಅವರನ್ನು ಮಾತನಾಡಿಸೋಣ . ಒಳಬರುತ್ತಿದ್ದಂತೆ ಆ ವೈದ್ಯನೇ ಕಾಲಿಗೆರಗಿದ , ಆತ ಅವರ ಹಳೆಯ ಶಿಷ್ಯ . ಅವರ ಮನೆಯಲ್ಲಿ ಊಟ ಮಾಡಿ , ಮೂವರು ಮಕ್ಕಳೊಡನೆ ಆಡಿ ಬೆಳೆದಿದ್ದ . ತನ್ನ ಗುರುಗಳನ್ನು ನೋಡಿ ಖಷಿಯಾದರೂ , ಅವರ ಪರಿಸ್ಥಿತಿಯನ್ನು ನೋಡಿ ದುಃಖವಾಗಿತ್ತು . ಹಣಕ್ಕಾಗಿ ಪರದಾಡುವುದನ್ನು ನೋಡಿದ ಈತ , ತಾನೇ ಹಣ ತುಂಬಿ ಶಸ್ತ್ರ ಚಿಕಿತ್ಸೆ  ಮಾಡಿಸಿದ್ದ . ಶ್ಯಾಮಸುಂದರರ ಕಣ್ಣಾಲಿಗಳು ತುಂಬಿದ್ದವು.  ನಿಜವಾಗಿಯೂ ಮುರಳೀಧರನ್ ಶಿಷ್ಯನಾಗದೇ ದೇವರಾಗಿ ಕಂಡಿದ್ದ .
 “ ಗುರುಗಳೇ , ನೀವು ಈ ರೀತಿ ನಿಂತುಕೊಂಡರೆ ನನಗೆ ಮುಜುಗರವಾಗುತ್ತದೆ . ನಿಮ್ಮಿಂದಲೇ ನಾನು ಇಷ್ಟು ಬೆಳೆದಿದ್ದು , ನಿಮ್ಮ ಋಣ ತೀರಿಸಲು ಇದೊಂದು ಅಲ್ಪ ಮಾರ್ಗ , ಇನ್ನೇನು ತೊಂದರೆ ಆದರೂ ನನ್ನನ್ನು ನೆನಪಿಸಿಕೊಳ್ಳಿ , ತಕ್ಷಣ ಬರುತ್ತೇನೆ . ” 
ಜಗತ್ತಿನಲ್ಲಿ ಇನ್ನೂ ಮಾನವೀಯತೆ ಬದುಕಿದೆ ಎಂದು ಶ್ಯಾಮಸುಂದರರಿಗೆ ಖಚಿತವಾಯಿತು . ಅಂತೂ ಹೆಂಡತಿ ಗುಣವಾದಳು ಎಂದು ಖುಷಿಯಿಂದ ಊರಿಗೆ ಬಂದರು. ಆದರೆ ಆ ಖುಷಿಯನ್ನೂ ದೇವರು ಹೆಚ್ಚು ದಿನ ನೀಡಲಿಲ್ಲ . ಎರಡೇ ತಿಂಗಳಿಗೆ ಆ ಪುಟ್ಟಹೃದಯ ತನ್ನ ಕೆಲಸವನ್ನು ನಿಲ್ಲಿಸಿತ್ತು . ಈಗ , ಶ್ಯಾಮಸುಂದರರು ಒಂಟಿ . ಇಷ್ಟು ದಿನ ನೋವಿಗೆ ಹೆಗಲಾಗಿ ಇದ್ದವಳು ಒಮ್ಮೆಲೇ ಮರೆಯಾಗಿದ್ದಕ್ಕೋ ಏನೋ ಮನವೆಲ್ಲ ಭಾರ ... ಊರವರೆಲ್ಲ ಮಕ್ಕಳನ್ನು ಬರಹೇಳಿ ಎಂದರು . ಆದರೆ ಶ್ಯಾಮಸುಂದರರ ಮನಸ್ಸು ಸತ್ಯ ಹೇಳುತ್ತಿತ್ತು . ಬೇಡ , ಅವರು ಬರುತ್ತಾರೆಂಬ ನಂಬಿಕೆ ಕಿಂಚಿತ್ತಾದರೂ ಇದೆಯೇ ? ಖಂಡಿತ ಇಲ್ಲ . ಬದುಕಿದ್ದಾಗಲೇ ನೂರೆಂಟು ಕಾರಣ ಹೇಳಿ ಬರದವರು , ಈಗ ಬರುತ್ತಾರೆಯೇ ? ಕೊನೆಗೂ ಊರವರೇ ಪತ್ರ ಬರೆದರು . ಶ್ಯಾಮಸುಂದರರು ಅಂತ್ಯಕ್ರಿಯೆ ಮಾಡಿ , ಆಕಾಶ ನೋಡುತ್ತ ಕುಳಿತರು . ಹತ್ತು ದಿನಗಳಾದರೂ , ಮಕ್ಕಳಿರಲಿ , ಪತ್ರದ ಸುಳಿವೂ ಇರಲಿಲ್ಲ .
 ಗಾಯಕ್ಕೆ ಬಿಸಿತುಪ್ಪ ಸವರಿದಂತಿತ್ತು ಪರಿಸ್ಥಿತಿ . ಕಿತ್ತು ತಿನ್ನುವ ಬಡತನ . ಈಗಂತೂ ಅನ್ನ ಬೇಯಿಸಿ ಕೊಡಲೂ ಯಾರೂ ಗತಿಯಿಲ್ಲ , ನೆನಪಾದಾಗ ಊಟ , ನಿದ್ದೆ , ತುಂಬ ಕೃಶರಾಗಿದ್ದರು . ಊರವರ ಸಮಾಧಾನದ ಮಾತುಗಳು ಸಹ ಈಟಿಯಂತೆ ಇರಿಯುತ್ತಿದ್ದವು .
 “ ರಾಯರೇ , ತಾಯಿ ಕ್ರಿಯೆ ಮಾಡೋಕಾದ್ರು ಬರಬೇಡವೇ ಮಕ್ಕಳು ? "
 “ ಹಿರಿಯ ಮಗ ಮದುವೆ ಆದನಂತಲ್ಲ .... ನಿಮಗೆ ಗೊತ್ತಿಲ್ವಾ ? ”
"ಊರ ಮಕ್ಕಳಿಗೆ ಪಾಠ ಮಾಡೋ ನಿಮಗೆ ಹೀಗಾಗಬಾರದಿತ್ತು . " 
ಈ ಮಾತಿಗೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಅಂದೇ ತಿಳಿದರು ಶ್ಯಾಮಸುಂದರರು . ಅಂದಿನಿಂದ ಅವರ ಮಾತೇ ನಿಂತುಹೋಗಿತ್ತು . ಸುಮಾರು ವರ್ಷಗಳಾದವು , ಎಲ್ಲರಿಗೂ ಅವರು ಮಾತನಾಡುತ್ತಾರೆ ಎಂಬುದೇ ಮರೆತುಹೋಗಿತ್ತು . ಸ್ವತಃ ಅವರಿಗೆ ಕೂಡ ! ಎಂಟು ವರ್ಷಗಳಿಂದೀಚೆಗೆ ಮಕ್ಕಳ ಪತ್ರವೂ ಬಂದಿರಲಿಲ್ಲ,  ಅವರೆಲ್ಲಿದ್ದಾರೆಂದು ತಿಳಿದಿರಲಿಲ್ಲ . 
ಈ ಮಧ್ಯೆ ಅವರ ಹಳೆ ಶಿಷ್ಯರು ಊರಿಗೆ ಬಂದಾಗಲೆಲ್ಲ , ಅವರ ಭೇಟಿ ಮಾಡಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದರು . ಅವರೆಲ್ಲ ಸೇರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು . ಶ್ಯಾಮಸುಂದರರ ಶಿಕ್ಷಣಪ್ರೀತಿ , ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಕುರಿತು ಪತ್ರ ಬರೆದರು . ಇವರೆಲ್ಲರ ಪರಿಶ್ರಮದಿಂದಾಗಿ ರಾಜ್ಯ ಸರಕಾರ ಪ್ರಶಸ್ತಿ ನೀಡಿತು . ಅದರಿಂದ ಬಂದ ಹಣದಿಂದಲಾದರೂ ಗುರುಗಳ ಬಡತನ ದೂರವಾಗಲಿ ಎಂಬುದು ಶಿಷ್ಯರ ಆಸೆಯಾಗಿತ್ತು . ಆದರೆ ಶ್ಯಾಮಸುಂದರರು ಮತ್ತೆ ಆ ಎಲ್ಲ ಹಣವನ್ನೂ ತಮ್ಮೂರಿನ ಶಾಲೆಗೆ ನೀಡಿದರು . ಪ್ರಶಸ್ತಿ ಬಂಧ ಖುಷಿ,  ಮತ್ತೆ ಅವರು ಶಾಲೆಗೆ ದಾನ ಮಾಡಿದ ವಿಷಯವನ್ನು ಒಂದು ಲೇಖನವಾಗಿ ಸಿದ್ಧಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರು . ಒಂದು ಸಮಾರಂಭ ಏರ್ಪಡಿಸುವ ಸಲುವಾಗಿ ಹಳೆಯ ಶಿಷ್ಯರನ್ನು ಒಟ್ಟುಗೂಡಿಸೋಣ ಎಂದು ಅಂತರ್ಜಾಲದಲ್ಲೂ ವಿಷಯವನ್ನು ಬಿತ್ತರಿಸಲಾಯಿತು . ಇದೆಲ್ಲದರ ಪರಿಣಾಮವಾಗಿ ಆಸ್ಟ್ರೇಲಿಯಾದಲ್ಲಿದ್ದ ಗೌರೀಶನಿಗೂ , ಅಮೆರಿಕದಲ್ಲಿದ್ದ ಮಹೇಶನಿಗೂ , ದುಬೈನಲ್ಲಿದ್ದ ಸುರೇಶನಿಗೂ ಸುದ್ದಿ ತಲಪಿತು . ಅವರೆಲ್ಲ ತಮ್ಮ ಹೆಂಡತಿ ಮಕ್ಕಳಿಗೆ ತಂದೆಯ ಚಿತ್ರ ತೋರಿಸಿ ವಿಷಯ ಹೇಳಿದರು .
 " We are happy to hear the news . Congrats Dad " 
-ಎಂಬ ಎರಡು ವಾಕ್ಯಗಳನ್ನು facebook twitter ಗಳಲ್ಲಿ ಹಾಕಿದ್ದರು . ಅಷ್ಟೆ !! ನಮ್ಮ ಜನರು ಖುಷಿಯನ್ನಾಗಲೀ , ದುಃಖವನ್ನಾಗಲೀ , ಹಂಚಿಕೊಳ್ಳುವ ಪದ್ಧತಿ ಕೇವಲ ಮೊಬೈಲ್ ಮುಖಾಂತರವೇ ! 
ನೋಡಿ , ಇಲ್ಲಿ ಕುಳಿತಿರುವ ವೃದ್ಧರೇ ಶ್ಯಾಮಸುಂದರ . ಅವರ ಮನೆಯಲ್ಲಿ ಊಟ ಮಾಡಿ , ಅವರಿಂದ ಪಾಠ ಹೇಳಿಸಿಕೊಂಡ ಶಿಷ್ಯರಲ್ಲಿ ನಾನೂ ಒಬ್ಬ.  ಅಂದು ಅವರ ನಿಲವು , ಗತ್ತು ನೋಡಿದ ನನಗೆ ಇಂದು ಈ ಬಾಗಿದ ಶರೀರವನ್ನು ನೋಡಲು ಅಸಾಧ್ಯ. ಈ ದೇಹ ಜೀವನದುದ್ದಕ್ಕೂ ಅದೆಷ್ಟು ನೋವನ್ನುಂಡಿರಬಹುದು ... ಪ್ರತಿ ಆಘಾತವು ಇವರನ್ನು ಮೂಕರನ್ನಾಗಿ ಮಾಡಿತು , ನಮಗೆಲ್ಲ ದುಃಖವಾದ ವಿಷಯವೆಂದರೆ ಸಮಾರಂಭದ ದಿನ ಅವರ ಮಕ್ಕಳು ಬರುತ್ತಾರೆಂದುಕೊಂಡಿದ್ದೆವು . ಗುರುಗಳು ನಕ್ಕರು . ನಮ್ಮ ಉಚಿಕೆ ಸುಳ್ಳಾಯಿತು , ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ ಎಂದು ಗುರುಗಳಿಗೆ ತಿಳಿಸಿದೆವು . ಆಗಲೂ ನಕ್ಕರು . ಹಣವನ್ನು ದಾನ ಮಾಡಿ ಮತ್ತೆ ನಕ್ಕರು . ಅವರ ಪರಿಸ್ಥಿತಿ ಇವರಿಗೆ ನಗು ತರಿಸುತ್ತಿದೆ . ಆದರೆ ನಮಗೆ ಪಾಠವಾಗಬೇಕಿದೆ. 
ಹಕ್ಕಿ  ರೆಕ್ಕೆ ಬಲಿತ ಕೂಡಲೇ ಹಾರಿ ಹೋಗುವುದೆಂಬ ಪಾಠ  ನಿಮಗಿತ್ತು . ನೆನಪಿದೆಯೇ ? ಪಕ್ಷಿಗಳಿಗೂ ನಮಗೂ ಬಹಳ ವ್ಯತ್ಯಾಸವಿದೆ . ನಾವು ಬುದ್ಧಿಜೀವಿಗಳು . ನಮಗೆ ಭಾವನೆಗಳಿವೆ, ನಿರ್ಧಾರ ಮಾಡುವ ಸಾಮರ್ಥ್ಯವಿದೆ.  ಜೊತೆಯಲ್ಲಿ ಕರ್ತವ್ಯ , ಜವಾಬ್ದಾರಿಗಳೂ ಇರಬೇಕಲ್ಲವೇ ? ಕ್ರೂರಪ್ರಾಣಿಗಳ ಒಮ್ಮೊಮ್ಮೆ ಮಾನವೀಯತೆ ಮೆರೆಯುತ್ತವೆ . ಆದರೆ ನಮಗೆಲ್ಲಿದೆ ? ಅಕ್ಕ - ಪಕ್ಕದವರೊಡನೆ ಜಗಳ , ಚಾಡಿ ಮಾತು , ದೌರ್ಜನ್ಯ , ಲಂಚ , ಅರಾಜಕತೆ ಇವೆಲ್ಲ ಜೀವನದ ಭಾಗವಾಗಿವೆ .
 ನಿಮ್ಮಲ್ಲಿ ಎಷ್ಟೋ ಜನ ಪಟ್ಟಣಕ್ಕೆ ಹೋಗಿ , ದೊಡ್ಡ ಕೆಲಸ ಮಾಡಿ ಲಕ್ಷಾಂತರ ಸಂಪಾದಿಸುವ ಕನಸನ್ನು ಹೊತ್ತಿದ್ದೀರಿ . ಅವುಗಳಿಗೆ ನಿಮ್ಮ ತಂದೆ - ತಾಯಿ ಬೆನ್ನಲುಬಾಗಿರುತ್ತಾರೆ , ನಿಮ್ಮೆಲ್ಲರ ಕನಸುಗಳೂ ನನಸಾಗಲಿ ಎಂದು ನಾವೂ ಹಾರೈಸುತ್ತೇವೆ . ಆದರೆ ಶ್ಯಾಮಸುಂದರರ ಪರಿಸ್ಥಿತಿ ನಿಮ್ಮ ಹೆತ್ತವರಿಗೆ ಬರದಿರಲಿ , ನನ್ನ ಶಿಷ್ಯರು ಅಷ್ಟು ಕ್ರೂರಿಗಳಲ್ಲ ಎಂದು ನಾನು ನಂಬುತ್ತೇನೆ.
 ಸ್ವಾಮಿ ವಿವೇಕಾನಂದರು 'ಯುವಜನತೆ ಒಗ್ಗೂಡಿದರೆ ಇಡೀ ದೇಶವನ್ನೇ ಬದಲಾಯಿಸಬಹುದು ' ಎಂದು ಹೇಳಿದ್ದು ನೆನಪಿದೆಯೇ ? ಈ  ಸಂದರ್ಭ ಹೊಸ  ಸಮಾಜಕ್ಕೆ ನಾಂದಿಹಾಡಲಿ.  ಮೌಢ್ಯ  ಅಳಿಯಲಿ , ಪ್ರೀತಿ-ಮಾನವೀಯತೆಗೆ ಗೆಲುವಾಗಲಿ , ನೀವೆಲ್ಲರೂ ನನಗೊಂದು ಪ್ರತಿಜ್ಞೆ ಮಾಡಿ. "
ಎಲ್ಲ ಮಕ್ಕಳೂ ಎದ್ದು ನಿಂತರು . ಮೋಹನಸರ್ ಹೇಳಿಕೊಟ್ಟಂತೆ ಒಂದೇ ಧ್ವನಿಯಲ್ಲಿ ಪ್ರತಿಜ್ಞೆ ಮಾಡಿದರು “ ಯಾವುದೇ ಕಾರಣಕ್ಕೂ ನನ್ನ ಹೆತ್ತವರನ್ನು ನಾನು ತೊರೆಯುವುದಿಲ್ಲ . ಎಷ್ಟೇ ಓದಿರಲಿ , ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ , ಎಷ್ಟೇ ಸಂಪಾದನೆ ಮಾಡಲಿ , ನನ್ನ ತಂದೆ - ತಾಯಿಯರ ಕೊನೆಯ ಕ್ಷಣದವರೆಗೂ ನಾನು 
ಅವರನ್ನು ನೋಡಿಕೊಳ್ಳುತ್ತೇನೆ. "
ಇಡೀ ಸಭಾಂಗಣ ಈ ವಾಕ್ಯಗಳಿಂದ ಪ್ರತಿಧ್ವನಿಸಿತು. ಎಲ್ಲರ ಕಣ್ಣುಗಳೂ ಹನಿಗೂಡಿದ್ದವು. ಮೋಹನ್ ಸರ್ ಮುಂದುವರೆಸಿದರು - "ಮಗನಾಗಿರಲಿ, ಮಗಳಾಗಿರಲಿ -ಹೆತ್ತವರು, ಹೆತ್ತವರೇ. ಜವಾಬ್ದಾರಿ ಎಂದರೆ ಎಲ್ಲರಿಗೂ ಒಂದೇ. ನಿಮ್ಮ ಪ್ರೀತಿ ಕಾಳಜಿಯನ್ನಷ್ಟೇ ಅವರು ಬಯಸುವುದು. 
ಪ್ರತಿಯೊಂದು ಗೆಲುವಿನಲ್ಲೂ ತಂದೆ, ತಾಯಿ, ಶಿಕ್ಷಕರಿರುತ್ತಾರೆ. ಎಲ್ಲರನ್ನೂ ಗೌರವಿಸಿ. ನಿಮ್ಮ ಪ್ರತಿ ಗೆಲುವಿನಲ್ಲೂ ಅವರ ಪಾಲಿದೆ. ನಿಮ್ಮ ಏಳ್ಗೆಗೆ ನೀವು ಎಷ್ಟು ಕಷ್ಟ ಪಡುತ್ತಿರೋ, ಅದ್ಕಕಿಂತ ಜಾಸ್ತಿ ಅವರು ಅನುಭವಿಸಿರುತ್ತಾರೆ. ನಿಮ್ಮೆದುರು ಹೇಳುವುದಿಲ್ಲ,  ಅಷ್ಟೇ. ನಿಮ್ಮಿಂದ ನಮ್ಮ ಸಮಾಜ ಬದಲಾಗಲಿ ಎಂದು ನಾನು ಬಯಸುತ್ತೇನೆ. ನೀವೂ ಪ್ರಯತ್ನಿಸಿ. 
ಉಜ್ವಲ ಭವಿಷ್ಯ ನಿಮ್ಮದಾಗಲಿ. ನಗುತ್ತ ಬಾಳಿ. ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಧನ್ಯವಾದಗಳು... "

ವೇದಿಕೆಯಿಂದ ಕೆಳಗಿಳಿದು ಆ ವೃದ್ಧ ಶ್ಯಾಮಸುಂದರರ ಕೈ ಹಿಡಿದು ಹೊರನಡೆದರು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲ ನಿಂತು ನೋಡುತ್ತಿದ್ದರು. 
ಮೌನ !
ಸಂಪೂರ್ಣ ಮೌನ !!
ಒಂದು ಅರ್ಥಪೂರ್ಣ ಮೌನ ಎಲ್ಲೆಡೆ ಆವರಿಸಿತ್ತು... 
ಕಥೆಯನ್ನು ಕೇಳಿ ಕಣ್ಣೀರಿಟ್ಟ ಮಕ್ಕಳ ಮುಗ್ಧ ಕಂಗಳಲ್ಲಿ ಒಂದು ನಿರ್ಧಾರದ ಬೆಳಕಿತ್ತು. ಪ್ರತಿಜ್ಞೆ ಜೀವನದ ನೀತಿಪಾಠವಾಗಿತ್ತು. 

(ಉತ್ಥಾನ - ಮಾರ್ಚ್ 2018ರಲ್ಲಿ 'ಯುವಪ್ರತಿಭೆ' ಎಂದು ಗುರುತಿಸಲ್ಪಟ್ಟು  ಪ್ರಕಟವಾಗಿದ್ದು )

ಅಪ್ಪ ಎಂಬ ಶಕ್ತಿಗಾಗಿ...

ಈಗೆರಡು ತಿಂಗಳ ಹಿಂದೆ ಗೆಳೆಯರೆಲ್ಲ ಸೇರಿ ಊಟಕ್ಕೆ ಹೋಟೆಲ್ ಒಂದಕ್ಕೆ ಹೋಗುತ್ತಿದ್ದೆವು.ಮಧ್ಯಾಹ್ನ ಎರಡು ಗಂಟೆಯೇನೋ. ಸುಡುವ ಬಿಸಿಲಿತ್ತು. ಇನ್ನೇನು ರಸ್ತೆ ದಾಟಬೇಕು ಎನ್ನುವಾಗ ಕಣ್ಣಿಗೆ ಬಿದ್ದರು ಅವರು. 
ಅವನನ್ನು ನಾನು ಈ ಮೊದಲೇ ನೋಡಿದ್ದೆ. ಪಾನಿಪುರಿ ಅಂಗಡಿಯಾತ ಬೇಡ ಎಂದರೂ ಕಣ್ಣಿಗೆ ಬಿದ್ದೇ ಬೀಳುತ್ತಾನೆ. ಪಾನಿಪುರಿಯ ಆಕರ್ಷಣೆಯೇ ಅಂಥದ್ದು.. !
  ಆದರೆ ಅಂದು ಆತ ಪಾನಿಪುರಿ ಮಾರುವವನಾಗಿ ಕಾಣಲಿಲ್ಲ. ಕಣ್ಣಲ್ಲಿ ಅಗಾಧ ಕನಸನ್ನು ಹೊತ್ತ, ಹೆಗಲ ಮೇಲೆ ನೂರು ಜವಾಬ್ದಾರಿ ಹೊತ್ತ ಅಪ್ಪನಾಗಿ ಕಂಡ. 
  ಪಾನಿಪುರಿ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದ ಅವನು. 
  ನನಗೆ ಅಂದು  ಮಾತ್ರ ಪಾನಿಪುರಿ ಆಕರ್ಷಣೀಯ ವಾಗಿ ಕಾಣಲಿಲ್ಲ. ಪುರಿಯ ದೊಡ್ಡ ಪ್ಲಾಸ್ಟಿಕ್ ಚೀಲ, ಸಾಂಬಾರ್ ಬಿಸಿ ಮಾಡುವ ಒಲೆ, ಹೆಚ್ಚಿಟ್ಟ ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪು, ಪಾನಿಯ ಮಡಿಕೆ.. ಇವುಗಳ ಮಧ್ಯೆ ಗುಬ್ಬಚ್ಚಿಯಂತೆ ಮುದುರಿ ಕುಳಿತ ಪುಟ್ಟ ಹುಡುಗಿ ಕಂಡಳು. 
 ಸುತ್ತ ಇರುವ ಟ್ರಾಫಿಕ್, ಗಾಡಿಗಳ ಶಬ್ದ, ಅಲ್ಲೆಲ್ಲೋ ನಡೆಯುತ್ತಿರುವ ಜಗಳ, ಜನರ ಓಡಾಟ, ಇವುಗಳ ಪರಿವೆಯೇ ಅವಳಿಗಿಲ್ಲ. ತಲೆ ತಗ್ಗಿಸಿಕೊಂಡು ಜೋಡುಗೆರೆ ಪಟ್ಟಿಯಲ್ಲಿ ಬರೆಯುತ್ತಿದ್ದಾಳೆ. 
    ನಮಗೆ ಅದು ಸಂಜೆಯ ಕರಮ್ ಕುರುಮ್ ತಿಂಡಿ ಮಾತ್ರ.. !ಮಗಳಿಗೆ ಪಾನಿಪುರಿಯ ಗಾಡಿಯೇ ನೆರಳು. ಇಂದು ಮಾತ್ರವಲ್ಲ, ಪೂರ್ತಿ ಜೀವನಕ್ಕೆ.. ಅಪ್ಪನಿಗೆ ಅವಳ ಕನಸನ್ನು ಸಾಕಾರಗೊಳಿಸುವ ಆದಾಯ, ಬದುಕಿನ ಬಂಡಿಯದು. 

    ಅವನೊಬ್ಬನೇ ಅಲ್ಲ.. ನನ್ನಪ್ಪನಾಗಲಿ, ಅವನಪ್ಪನಾಗಲಿ, ಯಾರ ಅಪ್ಪನೇ ಆಗಲಿ.. ಎಲ್ಲಾ ಅಪ್ಪಂದಿರೂ ಅಷ್ಟೇ. ಮಕ್ಕಳ ಕನಸುಗಳನ್ನು ಉಪ್ಪರಿಗೆಯ ಮೇಲೇರಿಸಿ, ತಮ್ಮ ಖುಷಿಯನ್ನು ಅವರಲ್ಲಿ ಕಂಡು, ಬದುಕಿನ ಬಂಡಿಯನ್ನು ಭುಜಬಲದ ಮೂಲಕ ತಳ್ಳುತ್ತಿರುವ ಅಪ್ಪ ಎಂಬ ಶಕ್ತಿಗೆ.. ಅಪ್ಪ ಎಂಬ ಎರಡೇ ಅಕ್ಷರವಾದರೂ ಆಕಾಶಕ್ಕಿಂತ ಬೃಹತ್ ಗಾತ್ರದ ವ್ಯಕ್ತಿತ್ವಕ್ಕೆ..... ಜೀವನವಿಡೀ ಪ್ರೀತಿಯ ಬಿಟ್ಟು ಇನ್ನೇನನ್ನೂ ನೀಡಲು ಸಾಧ್ಯ? 
"ಅಪ್ಪಂದಿರ ದಿನದ ಶುಭಾಶಯಗಳು"

Friday, June 26, 2020

ಬಣ್ಣದ ಬಾಲ್ಯ

ಅದೆಷ್ಟು ಬಣ್ಣಗಳಿಂದ ಕೂಡಿತ್ತು ನಮ್ಮಬಾಲ್ಯ.. 
ಅಪ್ಪನ ಜೇಬಿನಿಂದ ಕದ್ದ ಎರಡು ರೂಪಾಯಿ, 
ಒಂದೇ ರೂಪಾಯಿಗೆ ಸಿಗುತ್ತಿದ್ದ ಜೀರಿಗೆ ಪೆಪ್ಪರಮೆಂಟು.. 
ಇಪ್ಪತ್ತೈದು ಪೈಸೆಯ ಕಟ್ಟಾ ಮೀಠಾ.. 
ಪೀಮ್ ಪೀಮ್ ಹಾರ್ನ್ ಮಾಡುತ್ತ, ಹಾಲೈಸ್ ಹಾಲೈಸ್ಎಂದು ಕೂಗುತ್ತ  ಬರುವ ಐಸ್ ಕ್ಯಾಂಡಿಯ ಗಾಡಿ.. 
ಅಬ್ಬಾ ಅದೆಷ್ಟು ಸಿಹಿಯಾಗಿ, ವರ್ಣಮಯವಾಗಿತ್ತು ನಮ್ಮ ಬಾಲ್ಯ..

Tuesday, June 16, 2020

ಮಳೆಯ ನೆನಪು - 4

ಅಪ್ಪನ ಮುಖ ನೋಡಿಯೇ ಅಮ್ಮ ಎಲ್ಲವನ್ನೂ ಅರಿತಿರಬೇಕು,ನಮ್ಮನ್ನು ನೋಡಿದವಳು ಒಳನಡೆದಿದ್ದಳು. ಅಕ್ಕ ನನ್ನ ಬಗ್ಗೆ ಚಾಡಿ ಹೇಳುವ ಕಾರ್ಯಕ್ರಮವನ್ನೇನೋ ಪ್ರಾರಂಭಿಸಿದ್ದಳು,ಆದರೆ ಪ್ರಾರಂಭಿಸಿದ್ದಳು, ಆದರೆ ಅಪ್ಪನ ಕಿವಿಗಳು ಸ್ಪಂದಿಸುತ್ತಿರಲಿಲ್ಲ. ಊಟದ ತಟ್ಟೆಯೆದುರು ಕುಳಿತಿದ್ದರೂ ಒಬ್ಬರಿಗೂ ಅನ್ನ ಮುಟ್ಟುವ ಮನವಿರಲಿಲ್ಲ. ನೀರವ ಮೌನ ನಮ್ಮನ್ನು ಕಿತ್ತು ತಿನ್ನುತ್ತಿತ್ತು.
ಮನೆಯೊಳಗೆ ಏನು ನಡೆಯುತ್ತಿದೆ ಎಂದು ನನಗೆ ತಿಳಿಯದಿದ್ದರೂ ಹೊಲದಲ್ಲಿ ನಡೆದ ಘಟನೆ ವಿಚಿತ್ರವೆನಿಸಿತ್ತು. "ಅಪ್ಪಾ,ಅವರು ಯಾರು? ನೀನ್ಯಾಕೆ ಅವರ ಕಾಲ ಬಳಿ ಕುಳಿತಿದ್ದೆ? " ಎರಡು ನಿಮಿಷದ
ನಂತರ ತಿಳಿಯಿತು, ನಾನು ಉತ್ತರವಿಲ್ಲದ ಪ್ರಶ್ನೆ ಕೇಳಿದ್ದೆನೆಂದು.
ಅಪ್ಪ ಎದ್ದು ಹೊರನಡೆದರು. ಅಕ್ಕ ಮತ್ತೆ ಗುಡುಗಿದಳು," ನಿನಗ್ಯಾಕೇ ಬೇಕು ಅವೆಲ್ಲ ವಿಚಾರ? ಅಪ್ಪ 
ಯಾರೊಡನೆ ಮಾತನಾಡಿದರೆ ನಿನಗೇನು?ಈಗ ನೋಡು,ಮಾತೂ ಆಡಲಿಲ್ಲ, ಊಟಾನೂ ಮಾಡಲಿಲ್ಲ." 
ಅಲ್ಲಿ ನಡೆದಿದ್ದು ಕೇವಲ ಮಾತುಕತೆಯಲ್ಲ ಎಂದು ನನ್ನ ಮನ ಚೀರುತ್ತಿತ್ತು. ಬಹುಶಃ ಅದನ್ನು ನೋಡಿದ್ದರೆ, ಅಕ್ಕನೂ ಇದೇ ಪ್ರಶ್ನೆ ಮಾಡುತ್ತಿದ್ದಳೇನೋ. ನಾನು ಕೇಳಿದ್ದರೂ, ಕೇಳದಿದ್ದರೂ ಅಪ್ಪ ಊಟ ಮಾಡುತ್ತಿರಲಿಲ್ಲ. ಅಮ್ಮ ಹೊರನಡೆದಳು. ಹೊರಗೆ ಮಣ್ಣಿನ ಕಟ್ಟೆಯ ಮೇಲೆ ಕುಳಿತು ಅಪ್ಪ ಆಕಾಶ ನೋಡುತ್ತಿದ್ದ. ತಲೆಯಲ್ಲಿ ನೂರೆಂಟು ಚಿಂತೆಗಳಿದ್ದಿರಬೇಕು." ಭುವನ ಹೇಳುತ್ತಿರುವುದು ನಿಜವೇನು? ಅವರು ಮತ್ತೆ ಬಂದಿದ್ದರೇ? ಈಗೇನು ಮಾಡುವುದು?" 
" ಮಾಡುವುದೇನು? ತಂಪಾದ ಗಾಳಿ ಬೀಸುತ್ತಿದೆ,ಮಳೆ ತನ್ನಾರ್ಭಟವನ್ನು ನಿಲ್ಲಿಸಿದೆ. ತಿಳಿಯಾದ ಆಗಸವನ್ನು ನೋಡುವುದಷ್ಟೇ ನನ್ನ ಕೆಲಸ" ಮಾತಿನ ನಂತರ ಹೊರಬಂದ ನಿಟ್ಟುಸಿರು ಅಮ್ಮನ ದುಃಖಕ್ಕೆ ಕಾರಣವಾಗಿತ್ತು. ಅಕ್ಕ,ನಾನು ಹೊರಬಂದೆವು. "ನಯನಾ,ತಂಗಿಗೆ ತಿಳುವಳಿಕೆ ಹೇಳು,ಯಾವಾಗಲೂ ಬೈಯುತ್ತಿರಬೇಡ. ಭುವನಾ,ನೀನೂ ಅಷ್ಟೇ,ಸ್ವಲ್ಪ ಅವರ ಮಾತನ್ನೂ ಕೇಳು." 
ನಾವಿಬ್ಬರೂ ತಲೆ ತಗ್ಗಿಸಿ ನಿಂತಿದ್ದೆವು. 
ಬಹಳ ತಡವಾಗಿತ್ತು. ಹೋಗಿ ಅಕ್ಕನ ಮಗ್ಗುಲಲ್ಲಿ ಮಲಗಿದ್ದೆ. ಯೋಚನೆಯ ಮಧ್ಯೆ ಯಾವಾಗ ನಿದ್ದೆ ಆವರಿಸಿತ್ತೋ ತಿಳಿಯದು. ಬೆಳಿಗ್ಗೆ ನಾನೇಳುವಷ್ಟರಲ್ಲಿ ಅಮ್ಮ ಅಕ್ಕ ಜೋರಾಗಿ ಅಳುತ್ತಿದ್ದರು. ಹೊರಬಂದು ನೋಡಿದರೆ,ಮಾವಿನಮರಕ್ಕೆ ಕಟ್ಟಿದ್ದ ನನ್ನ ಜೋಕಾಲಿಯ ಹಗ್ಗ ಅಪ್ಪನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಒಡಕು ಅಂಗಾಲುಗಳು ಅವನ ಸಾಲು ಸಾಲು ಸೋಲುಗಳ ಪ್ರತೀಕದಂತಿದ್ದವು. ಊರವರೆಲ್ಲ ಸೇರಿದ್ದರು. ಕಷ್ಟದಲ್ಲಿ ಬರದವರು ಈಗ ಸಾಂತ್ವನ ಹೇಳಲು ಬಂದಿದ್ದರು. ಒಂದು ತಾಸಿನೊಳಗೆ ಎಲ್ಲರೂ ಹೋದರು. ಮತ್ತೆ ನಾವು ಮೂವರೇ. ಕಣ್ಣೀರು ಯಾರ ಅನುಮತಿಗೂ ಕಾಯದೇ ಇಳಿಯುತ್ತಿತ್ತು. ನಿನ್ನೆ ಹೊಲದಲ್ಲಿದ್ದ ಮಹಾನುಭಾವ ಬಂದು ಮತ್ತೆ ಗಲಾಟೆ ಮಾಡಿ,ಇದ್ದ ಹೊಲವನ್ನೂ ಕಿತ್ತುಕೊಂಡುಹೋದ. ಈಗ ನಿಜವಾಗಿಯೂ ಬೀದಿಗೆ ಬಿದ್ದಿದ್ದೆವು. ಊರು ಬಿಟ್ಟಾಯಿತು,ಮನೆ ಮನೆಯ ಪಾತ್ರೆ ತೊಳೆದಾಯಿತು. ಅಮ್ಮ ಗಟ್ಟಿಗಿತ್ತಿ. ಕಷ್ಟ ಮೆಟ್ಟಿನಿಂತಳು.
ಓದಿಸಿದಳು,ಕೆಟ್ಟಮಾತಿಗೆಲ್ಲ ಕಿವುಡಿಯಾದಳು. ಅಕ್ಕನ ಮದುವೆ ಮಾಡಿ,ಈಗ ಮೊಮ್ಮಗನ ಆರೈಕೆ ಮಾಡುತ್ತಿದ್ದಾಳೆ. ವಿಕ್ರಮ್ ಬಂದು ಮಾತನಾಡಿದ ಮೇಲೆ,ನಮ್ಮ ಮದುವೆಗೂ ಒಪ್ಪಿದಳು. ಮುಂದಿನ ತಿಂಗಳು ಮದುವೆ! 


ಎಲ್ಲಿಂದ ಎಲ್ಲಿಯವರೆಗೆ ಬಂದೆ  ನಾನು? 
ಅಂದು ಹೊಲದಲ್ಲಿ ಅಪ್ಪನಿಗಾಗಿ ಕಾಯುತ್ತಿದ್ದವಳು ಇಂದು ಇವನಿಗಾಗಿ ರಸ್ತೆಯಂಚಲ್ಲಿ ಕಾಯುತ್ತಿದ್ದೇನೆ. ಒಳ್ಳೆಯ ದಿನಗಳ ಆರಂಭ,ಹೊಸ ಮುನ್ನುಡಿ....
ರಸ್ತೆಯಂಚಲ್ಲಿ ಬೈಕಿನ ಶಬ್ದ ಕೇಳುತ್ತಿದ್ದಂತೆ, ಭುವನಳ ಮುಖದಲ್ಲಿ ಮಂದಹಾಸ ಮೂಡಿತು.ಮಳೆ ನಿಂತು ಹಿತವಾದ ವಾತಾವರಣ ನಿರ್ಮಿತವಾಗಿತ್ತು...

ಮಳೆಯ ನೆನಪು - 3

ನಾನೇನೋ ಹೊಲದತ್ತ ಓಡಿದ್ದೆ.ಆದರೆ ಒಮ್ಮೆ ಅಕ್ಕನನ್ನು ನೋಡಬೇಕಿತ್ತು.
            ನಾನು ಹೊಲಕ್ಕೆ ಬರುವಷ್ಟರಲ್ಲಿ ಬಟ್ಟೆಯೆಲ್ಲ ನೆನೆದಿತ್ತು.ಟಪ್ ಟಪ್ ಎಂದು ನೀರು ಬಿದ್ದ ರಭಸಕ್ಕೆ ಮೈ -ಕೈ  ಎಲ್ಲ ನೋಯುತ್ತಿತ್ತು.ಅಪ್ಪ ಇದ್ದಲ್ಲಿಗೆ ಹೋಗಬೇಕೆಂದರೆ ಹೊಳೆ ದಾಟಬೇಕಿತ್ತು.ಆದರೆ ಗಾಳಿಗೆ ಇದ್ದ ಒಂದು ತೂಗು ಸೇತುವೆಯೂ ಮುರಿದಿದೆ.ಅಯ್ಯೋ ದೇವರೇ..ಈಗ ಮತ್ತೆ ಮನೆಗೆ ಹಿಂದಿರುಗಲೂ ಸಾಧ್ಯವಿಲ್ಲ.ಕತ್ತಲಾಗುತ್ತಿದೆ..ಎಂದು ಮನದೊಳಗೇ ನನ್ನನ್ನು ನಾನು ಶಪಿಸಿಕೊಂಡೆ.ಅಕ್ಕನ ಜೊತೆ ಹೋಗಬೇಕಿತ್ತು.ಈಗ ಇಲ್ಲಿ ಅಪ್ಪ ಕಾಣುತ್ತಿಲ್ಲ.ಕೂಗೋಣ ಎಂದರೂ,ನನಗಿಂತ ಹೊಳೆಯ ಧ್ವನಿಯೇ ಜೋರಾಗಿದೆ.
         ಮೊದಲ ಬಾರಿಗೆ ಝುಳು ಝುಳು ದನಿ ಕರ್ಕಶವಾಗಿ ಕೇಳುತ್ತಿತ್ತು. ಕಣ್ಣುಗಳನ್ನಗಲಿಸಿ,ಕಾಣುವಷ್ಟು ದೂರ ನೋಡಲು ಯತ್ನಸಿದೆ.ಮಂಜು ಮಂಜಾಗಿ ಯಾರನ್ನೋ ಕಂಡಂತಾಯಿತು.
ಹಾ! ಅಪ್ಪ..ಆ ಕ್ರಶವಾದ ದೇಹ ಮಾತ್ರದಿಂದ ಹೇಳಬಹುದು ಅಲ್ಲಿದ್ದವನು ನನ್ನ ಅಪ್ಪನೆಂದು.
             ಆದರೆ ಅಲ್ಲಿ ಇನ್ನಾರೋ ಇದ್ದಂತೆ ಅನಿಸುತಿದೆ.  ಬಿಳಿ ನಿಲುವಂಗಿ, ಕೈಯಲ್ಲಿ ಕೋಲು -ದರ್ಪವೇ ತಲೆಯೆತ್ತಿ ನಿಂತ ಭಂಗಿ.ಯಾರಿರಬಹುದು? ಅವನ ಬಳಿ ಕೊಡೆ ಇದೆ.ಆದರೆ ನನ್ನಪ್ಪ ಮಳೆಯಲ್ಲಿ ನೆನೆಯುತ್ತಿದ್ದಾನೆ. ನನಗೇನೂ ಸರಿಯಾಗಿ ಕಾಣುತ್ತಿಲ್ಲ,ಕೇಳುತ್ತಲೂ ಇಲ್ಲ.
                          ಸ್ವಲ್ಪ ಮುಂದೆ ಸರಿದೆ,ಕಾಲು ಜಾರುತ್ತಿತ್ತು.ಆದರೆ ಕಣ್ಣುಗಳು ಸ್ಪಷ್ಟವಾಗಿದ್ದವು.ಅಪ್ಪ ಬಗ್ಗಿ ಅವನ  ಕಾಲು ಹಿಡಿಯುತ್ತಿದ್ದಾನೆ. ಅವನು ಕೊಡವಿಕೊಳ್ಳುತ್ತಿದ್ದಾನೆ. ಏನು   ನಡೆಯುತ್ತಿದೆ ಅಲ್ಲಿ? ನನ್ನಪ್ಪ ಇನ್ಯಾರದೋ ಕಾಲಿಗೆ ಯಾಕೆ ಬೀಳಬೇಕು?
      ಅಮ್ಮ ಹೇಳುತ್ತಿದ್ದಳು,ನಮ್ಮನ್ನು ಯಜಮಾನರು ಸಾಕುತ್ತಿದ್ದಾರೆ ಎಂದು.ಇವರೇ ಇರಬಹುದೇ? ಆಗಿರಲಿ,ಆದರೂ ಅವರಿಗೆ ನಮಸ್ಕಾರ ಮಾಡಬೇಕೇ? ಅವರೇನು ದೇವರೇ?       
      ಈ ಪ್ರಶ್ನೆಗಳಿಗೆಲ್ಲ ಉತ್ತರ ಯಾರು ಕೊಡಬೇಕು?  ಅಪ್ಪಾ ಎಂದು ಕೂಗಲೇ? ಅಪ್ಪನ ಪರಿಸ್ಥಿತಿ ನೋಡಿ ನನ್ನಲ್ಲಿದ್ದ ಸ್ವಲ್ಪ ಧೈರ್ಯವೂ ಕಾಣೆಯಾಯಿತು.ತನ್ನ ಮುಂದೇ ತನ್ನಪ್ಪ ಅಸಹಾಯಕನಾಗಿ ಇನ್ನೊಬ್ಬರ ಮುಂದೆ ಮಂಡಿಯೂರಿ    ಕೂರುವುದನ್ನು ಯಾವ ಮಕ್ಕಳು ನೋಡಲಿಚ್ಛಿಸುತ್ತಾರೆ?ನಾನಂತೂ ಸಹಿಸಲಾರೆ.ಮಳೆ ಹನಿಯ ತಂಪು,ಕಣ್ಣ ಹನಿಯ ಬಿಸಿಯಲ್ಲಿ ಕರಗಿ ಹೋಯಿತು.    
   ಆತ ಹೋಗುತ್ತಿದ್ದಾನೆ.ಜೋರಾಗಿ ಕೈ ತೋರಿಸುತ್ತಿದ್ದಾನೆ.ಅಪ್ಪನನ್ನು ಬೈಯುತ್ತಿರಬೇಕು..ಅಪ್ಪ ಬೇಸರದ ಮುಖದಲ್ಲಿ ಇತ್ತ ಬರುತ್ತಿದ್ದಾನೆ. ಏನಾಯಿತೆಂದು ಕೇಳಬೇಕು.
    ನನ್ನಂತ ಪುಟ್ಟ ಹುಡುಗಿಗೆ ಇದು ದೊಡ್ಡ ಹೊಳೆ.ಅಪ್ಪ ಸಲೀಸಾಗಿ ಆ ಕಡೆ ಧುಮುಕಿ,ಎರಡು ನಿಮಿಷದಲ್ಲಿ ಈ ಕಡೆ ಬಂದಿದ್ದ.ಅವನ ಕೆಂಪಾದ ಕಣ್ಣುಗಳಿಗೆ ಬೆದರಿದೆ.ಆದರೆ ಅವು ಕೋಪದಿಂದ ಕೆಂಪಾಗಿರಲಿಲ್ಲ. ಪ್ರತಿದಿನದಂತೆ ಈ ದಿನ "ನೀನ್ಯಾಕೆ ಬಂದೆ ?" ಎಂದು ಕೇಳಲಿಲ್ಲ, "ಹೀಗೆಲ್ಲ ಬರಬಾರದು" ಎಂದು ಬೈಯಲೂ ಇಲ್ಲ.ನನ್ನ ಕೈ ಹಿಡಿದು ಕರೆದುಕೊಂಡು ಹೊರಟ.ಒಂದೂ ಮಾತಿಲ್ಲ!! 
            ಗದ್ದೆಗಳಲ್ಲಿ ನೀರು ತುಂಬಿದ್ದವು.ಅಪ್ಪ ನನ್ನನ್ನು ಭುಜದ ಮೇಲೆ ಕೂರಿಸಿಕೊಂಡು ಹೊರಟ - ನನ್ನ ಕಾಲಿಗೆ ಮಣ್ಣು ಮೆತ್ತಬಾರದೆಂದಲ್ಲ,ಅವನ ಕಣ್ಣೀರು ನನಗೆ ಕಾಣದಿರಲೆಂದು.ನನ್ನಪ್ಪ ಒಳ್ಳೆಯ ಹಾಡುಗಾರ. ಹಾಡುತ್ತಾ ಹೋಗುತ್ತಿದ್ದ.ಇಷ್ಟೂ ದಿನ ನಾನೆಂದುಕೊಂಡಿದ್ದೆ, ಅಪ್ಪ ಖುಷಿಯಾಗಿದ್ದಾಗ ಹಾಡುತ್ತಾನೆಂದು.    ಸುಳ್ಳು !! ಇಂದು ತಿಳಿಯಿತು.ತನ್ನ ನೋವು ಇನ್ನೊಬ್ಬರಿಗೆ ತಿಳಿಯಬಾರದೆಂದು ಹಾಡುತ್ತಾನೆ. 
              ಇಂದಿನ ಹಾಡು ಬಹಳ ಸೊಗಸಾಗಿತ್ತು.ತನ್ನ ಕಷ್ಟವನ್ನು ಮನದುಂಬಿ ಹಾಡಾಗಿಸಿದ್ದ. 
              ಮನೆಯ ದಾರಿ ಹತ್ತಿರವಾಗುತ್ತಿದ್ದಂತೆ ಹಾಡಿನ ದನಿ ಕಡಿಮೆಯಾಯಿತು,ಹೆಜ್ಜೆಯ ಲಯ ಮಂದವಾಯಿತು.....

ಮಳೆಯ ನೆನಪು - 2

ಆ ದಿನವೂ ಬಿಡದೆ ಮಳೆ ಸುರಿಯುತ್ತಿತ್ತು..ಯಾಕೋ ಮಳೆರಾಯ ಮುನಿಸಿಕೊಂಡಿದ್ದ. ಇನ್ನೂ ಚೆನ್ನಾಗಿ ನೆನಪಿದೆ. ಅಪ್ಪ ಹೊಲದಿಂದ ಬಂದಿರಲಿಲ್ಲ. ಅಮ್ಮ ದಿಗಿಲುಗೊಂಡಿದ್ದಳು. ಬಾಗಿಲ ಮೂಲೆಯಲ್ಲಿ ನಿಂತು, ಕಾಣುವಷ್ಟೂ ದೂರ ನೋಡುತ್ತಿದ್ದಳು. ನಾನು ಅಕ್ಕನ ಬಳಿ ಏನೋ ಜಗಳ ಮಾಡುತ್ತಿದ್ದೆ. ಅಮ್ಮನ ಸೆರಗೆಳೆದು ಚಾಡಿ ಹೇಳುತ್ತಿದ್ದೆ, ಗದರಿದಳು. 
ಸಾಲದೆಂಬಂತೆ ಗುಡುಗು ಬೇರೆ. ಅಮ್ಮ ಎಷ್ಟೇ ಹೇಳಿದರೂ ನಾನು ಹಠ ನಿಲ್ಲಿಸಲೇ ಇಲ್ಲ. ಮಳೆಯಲ್ಲಿ ಆಡುತ್ತೇನೆಂದು ಹೊರಬಿದ್ದೆ. ಅಕ್ಕ ಕೂಗುತ್ತಿದ್ದಳು. ನನಗೇನೂ ಕೇಳಿಸಲಿಲ್ಲ.ಈ ಮಳೆಯಲ್ಲಿ ಆಡುವುದನ್ನು ಬಿಟ್ಟು,ಅವರೇಕೆ ಹೆದರಿ ಕುಳಿತಿದ್ದಾರೆ? ಓಹೋ..ಗುಡುಗುಮ್ಮ ಎಂದರೆ ಭಯವಿರಬೇಕು. ನಮ್ಮ ಮನೆಯಲ್ಲಿ ನನಗೆ ಮಾತ್ರ ಧೈರ್ಯ. ಅಪ್ಪನಿಗೂ ಸಹ ಎಂದು ಬೀಗುತ್ತಾ, ಮಳೆ ಹನಿಯನ್ನು ಹಿಡಿಯಲು ಹಾರುತ್ತಿದ್ದೆ.
ಅಕ್ಕ ಓಡುತ್ತಾ ಬಂದಳು. ನನ್ನನ್ನು ಹಿಡಿದು ಹೊಡೆಯುತ್ತಾಳೇನೋ ಎಂದು ನಾನೂ ಓಡಿದೆ." ಏ ಭೂನಾ..ನಿಲ್ಲೇ.." ಎಂದು ಒಂದೇ ರಾಗದಲ್ಲಿ ಕೂಗುತ್ತಿದ್ದಳು. 
ಧಭಾರ್ ಎಂದು ಬಿದ್ದೆ. ಕೆಸರಿನಲ್ಲಿ ಬಿದ್ದೆನಲ್ಲ ಎನ್ನುವುದಕ್ಕಿಂತ ಅಕ್ಕ ಬೈಯುತ್ತಾಳಲ್ಲ ಎನ್ನುವ ಭಯವೇ ಕಾಡುತ್ತಿತ್ತು. ನೋವಾಗದಿದ್ದರೂ ಜೋರಾಗಿ ಅಳುವ ನಾಟಕವಾಡುತ್ತಿದ್ದೆ.
" ಕೂಗ್ತಿದ್ರೂ ಓಡ್ತೀಯಾ? ಈಗ ನೋವಾಗಿದ್ದು ಯಾರಿಗೆ?ಅಳಬೇಡ. ಏಳು ಮೇಲೆ" ಎಂದು ಕೈ ಹಿಡಿದು ಎಬ್ಬಿಸಿದಳು. ಎಷ್ಟೆಂದರೂ ಅಕ್ಕ ತಾನೇ,ಪಾಪ ನನಗೋಸ್ಕರ ಓಡಿ ಬಂದಿದ್ದಳು. ಆದರೆ ನನ್ನ ಹಠ ನಾನು ಬಿಡಬೇಕಲ್ಲ..
"ನಾನು ಮನೆಗೆ ಬರಲ್ಲ. ಅಪ್ಪ ಇದ್ದಲ್ಲಿ ಹೋಗ್ತೀನಿ. ನೀನೂ ಬರಬೇಡ. ಒಬ್ಬಳೇ ಹೋಗ್ತೀನಿ" ಎಂದು ಕೂಗಿದೆ.

"ಹಾಗೆಲ್ಲ ಹಠ ಮಾಡಬಾರದು ಭೂನಾ..ನೋಡು,ಮನೇಲಿ ಅಮ್ಮ ಒಬ್ಬಳೇ ಇದ್ದಾಳೆ. ಅವಳಿಗೆ ನಿನ್ನಷ್ಟು ಧೈರ್ಯ ಇಲ್ಲ ಅಲ್ವಾ ಪುಟ್ಟಾ..ಬಾ,ನಾವು ಹೋಗೋಣ"
" ಇಲ್ಲ. ನಾನು ಬರಲ್ಲ. ಅಲ್ಲಿ ಅಪ್ಪನೂ ಒಬ್ಬನೇ ಇದ್ದಾನೆ ಅಲ್ವಾ,ಅಮ್ಮ ಆದ್ರೂ ಮನೇಲಿದ್ದಾಳೆ. ಅಪ್ಪ ಪಾಪ,ಮಳೇಲಿ ನೆನೆದಿರ್ತಾನೆ.ನಾನು ಅಲ್ಲಿಗೇ ಹೋಗ್ತೀನಿ"
'" ನಿನ್ನ ಹಠ ಬಿಡೋದೇ ಇಲ್ಲ ಅಲ್ವಾ.ನೀನು ಹೇಳಿದ್ದೇ ಆಗಬೇಕು.ನೋಡು,ಈಗ ಮಾತಾಡದೇ ಮನೆಗೆ ಬಾ.." ರೇಗಿದಳು.
ನಾನೇನು ಕಡಿಮೆ?! " ನೋಡು ನಯನಾ,ಅಕ್ಕ ಅಂತಾನೂ ನೋಡಲ್ಲ. ನನಗೇ ಹೇಳ್ತೀಯಾ ನೀನು? ನೀನು ಬೇಕಾದರೆ ಹೋಗು ಮನೆಗೆ,ಅಮ್ಮನ ಜೊತೆ ಇರು. ನಾನಂತೂ ಹೊಲಕ್ಕೆ ಹೋಗ್ತೀನಿ" ಎನ್ನುತ್ತಾ ಹೊಲದ ಕಡೆ ಓಡಿದೆ. ಪ್ರಾಯಶಃ ಅಪ್ಪನನ್ನು ನೋಡಬೇಕು ಎನ್ನುವುದಕ್ಕಿಂತ,ಮಳೆಯಲ್ಲಿ ಆಡಬೇಕೆಂಬ ಹಂಬಲ ಜಾಸ್ತಿ ಇತ್ತು. ಅದೇ ಕಾರಣಕ್ಕೆ ಅಕ್ಕನೊಡನೆ ಜಗಳ ಮಾಡಿದ್ದು.
ಏಕೆ ಹಾಗೆ ಮಾಡಿದೆನೋ..ಗೊತ್ತಿಲ್ಲ. ಆದರೆ ಅನಾಹುತಕ್ಕೆ ನಾಂದಿ ಹಾಡಿದ್ದೆ ....

ಮಳೆಯ ನೆನಪು - 1

ಆಗಸದ ತುಂಬೆಲ್ಲ ಮೋಡಗಳ ಚಿತ್ತಾರ. ಭೂರಮೆಯ ಮೈ ತಣಿಸಲು ವರುಣ ದೇವ ಸನ್ನದ್ಧನಾಗಿದ್ದ ಎಂದು ತೋರುತ್ತದೆ. ಮಳೆ ತನ್ನ ಆಗಮನವನ್ನು ತಾನೇ ತಿಳಿಸಲು ಬಯಸಿದಂತಿತ್ತು. ಅದಕ್ಕೆ ಹವಾಮಾನ ವರದಿಯ ಅವಶ್ಯಕತೆ ಏನಿರಲಿಲ್ಲ.
ಮೋಡ ಕವಿದ ವಾತಾವರಣ. ಆದರೆ ಭುವನಳ ಮನದಲ್ಲಿ ಆಗಲೇ ನವಿಲುಗಳು ನರ್ತಿಸುತ್ತಿದ್ದವು. ಜಿಂಕೆಯ ಕಂಗಳು ಯಾರನ್ನೋ ಅರಸುತ್ತಿದ್ದವು. ಬಳ್ಳಿಯಂತೆ ಬಾಗಿದ ಹುಬ್ಬುಗಳು ನಿಮಿಷಕ್ಕೊಮ್ಮೆ ಮೇಲೇರಿ ಯಾರ ದಿಕ್ಕನ್ನೋ ನೋಡುತ್ತಿತ್ತು.
ಹಣೆಯ ಮೇಲೆ ಹಾರಾಡುತ್ತಿದ್ದ ಮುಂಗುರುಳಿಗೂ ಹುಸಿಗೋಪದ ಝಳ ತಾಗುತ್ತಿತ್ತು.ಆ ಮುನಿಸು ಇನ್ನಾರ ಮೇಲೋ..ಒಮ್ಮೆ ಕೈಗಡಿಯಾರ ನೋಡುತ್ತಾ,ಇನ್ನೊಮ್ಮೆ ರಸ್ತೆ ನೋಡುತ್ತಿದ್ದ ಕಣ್ಣುಗಳೂ ಆಯಾಸಗೊಂಡಿದ್ದವು. ಪ್ರೀತಿ ಇದ್ದಲ್ಲಿ ತಾನೇ ಕೋಪಕ್ಕೆ ಜಾಗ ಎಂದವಳ ಮನಸ್ಸು ನುಡಿಯಿತು. ತುಟಿಯಂಚಲ್ಲಿ ನಗು ಮೂಡಿತು.
"ಈಗ ಮಳೆ ಬಂದ್ರೆ ಛತ್ರಿನೂ ಇಲ್ಲ. ಇವ್ನಿಗಂತೂ ಟೈಮ್ ಸೆನ್ಸ್ ಅನ್ನೋದೇ ಇಲ್ಲ..ಕತ್ತಲಾಗ್ತಿದೆ. ನಾನೊಬ್ಳೇ ಇದೀನಿ ಅನ್ನೋ ಒಂದು ಸಣ್ಣ ಯೋಚನೆನೂ ಬರಬೇಡ್ವಾ?ದೇವ್ರೇ ನಾನೇನ್ಮಾಡ್ಲಿ ಈಗ?
ಬರಲಿ ಅವನು..ಎರಡು ಸಲ ಸಾರಿ ಕಣೇ ಅಂದ್ರೆ ಎಲ್ಲ ಸರಿ ಆಗ್ಬಿಡತ್ತಾ? ಮಧ್ಯದಲ್ಲಿ ಈ ಮಳೆ ಬೇರೆ...."
ಮಳೆ ಎನ್ನುವುದೇ ಹಾಗೆ..ಕೆಲವರ ಜೀವನದಲ್ಲಿ ಸುಂದರ ನೆನಪುಗಳ ಬುತ್ತಿಯಾದರೆ,ಹಲವರಿಗೆ ಸುಡುವ ಜ್ವಾಲೆ.
ತಂಪಾದ ಗಾಳಿಯೊಡನೆ ಭುವನಳ ಯೋಚನೆಯೂ ಹಾರಾಡತೊಡಗಿದವು..ವರುಣದೇವ ಅವಳ ಕೆನ್ನೆಯ ಮೇಲೆ ಮೊದಲ ಧಾರೆ ಹರಿಸಿದ; ಆಕೆಯ ಕಣ್ಣೀರೊರೆಸಲು.....

ಲಾಕ್ಡೌನಾಯಣ


ಮುಸ್ಸಂಜೆ ಹೊತ್ತು.. ಅಲ್ಲಿ  ನಾಲ್ಕಾರು ಧ್ವನಿಗಳು ಕೇಳಿಬರುತ್ತಿದ್ದವು.. ಸಂಜೆ ಎಲ್ಲಾ ವಿಹಾರಕ್ಕೆ ಹೋಗುವ ಸಮಯವೇ, ಆದರೆ ಈಗ ಯಾರು ಹೋಗುತ್ತಾರೆ ಎಂಬುದೇ ಪ್ರಶ್ನೆ.. ! 
    ಅದು ಸುಂದರವಾದ ದೊಡ್ಡ ಪಾರ್ಕ್. ಇಡೀ ನಗರದ ಮಧ್ಯದಲ್ಲಿದೆ ಎಂದರೆ ತಪ್ಪಾಗಲಾರದು. ಅಲ್ಲಿ ಒಂದು ಸಣ್ಣ ಮೀಟಿಂಗ್ ನಡೆಯುತ್ತಿತ್ತು. ವಿಹಾರಕ್ಕೆ ಬರುವ ಎಲ್ಲಾ ಅಜ್ಜಂದಿರೂ ದಿನವೂ ಭೇಟಿಯಾಗುವ ಸ್ಥಳವದು. ಆದರೆ ಆ ಕಟ್ಟೆ ಮೇಲೆ ಈಗ ಕುಳಿತವರೇ ಬೇರೆ.. ಮೂರ್ನಾಲ್ಕು  ನಾಯಿಗಳು ಬೇರೆ ಬೇರೆ ವಾರ್ಡ್ ಗಳಲ್ಲಿ ತಮ್ಮ ಪಹರೆ ಮುಗಿಸಿ, ಸುಸ್ತಾಗಿ ಬಂದು ಕುಳಿತಿದ್ದವು. ಪಾಪ ಮನುಷ್ಯ ಓಡಾಡುತ್ತಿಲ್ಲ, ಹೋಟೆಲ್ ಹೊರಗಡೆ ತಿಂಡಿ ಚೆಲ್ಲುತ್ತಿಲ್ಲ, ಬೀದಿ ಬದಿಯ ಅಂಗಡಿಗಳೂ ತೆರೆದಿಲ್ಲ..  ಹೊಟ್ಟೆಗೆಲ್ಲಿಂದ ಸಿಗಬೇಕು ಅವಕ್ಕೆ?  ದಿನವಿಡೀ ನಡೆದ ವಿಷಯಗಳನ್ನ ಪರಸ್ಪರ ಹಂಚಿಕೊಳ್ಳುತ್ತಿದ್ದವು.  .
   .
" ಅಲ್ಲಾ ಮಾರಾಯ..ಈ ಮನುಷಪ್ಪಂಗೆ ಏನಾಗಿದೆ ಅಂತ.. ಮನೆ ಬಿಟ್ಟು ಹೊರಗೆ ಬರ್ತಾನೆ ಇಲ್ಲ.ಅದೆಷ್ಟು ದಿನ ಆಯ್ತು.. " ಎಂದಿತು ಕರಿನಾಯಿ. 
"ನಾನೂ ಇವತ್ತು ಊರಾಚೆ ಹೋಗಿದ್ದೆ, ಎಲ್ಲೂ ತಿನ್ನೋಕೆ ಏನೂ ಸಿಕ್ಕಿಲ್ಲ. ಏನ್ಮಾಡೋದು ಹೇಳು. ಮನೇಲಿ ಮರಿಗಳು ಕಾಯ್ತಾ ಇದಾವೆ ನಾನೇನಾದ್ರೂ ತರ್ತೀನಿ ಅಂತ..ಏನು ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ" ಎಂದಿತೊಂದು  ಬಡಕಲು ಬಿಳಿ ನಾಯಿ. 
" ಇವತ್ತು ಸುಮ್ನೆ ಮಲಗಿಸು ಅವರನ್ನ.. ನಾಳೆ ನಾನು ಹೋಗೋ ಏರಿಯಾಗೆ ನೀನು ಹೋಗು.. ಅಲ್ಲಿ ಎರಡು ಮನೇಲಿ ಹೆಂಗಸರು ಅನ್ನ ಹೊರಗಿಡ್ತಾರೆ ನಮಗೆ ಅಂತ.. ನಾನು ಬೇರೆ ಕಡೆ ಹುಡುಕೋಕೆ ಹೋಗ್ತೀನಿ ನಾಳೆ ಇಂದ.. ಇನ್ನೂ ಎಷ್ಟು ದಿನ ಇದೇ ಕತೇನೋ ಏನೋ ಗೊತ್ತಿಲ್ಲ" ಎಂದಿತು ಹಿರಿಯ. 

     ಇವರ ಮಾತುಗಳನ್ನು ಕೇಳುತ್ತ ಮರದ ಮೇಲೆ ಕುಳಿತಿದ್ದ ಪಾರಿವಾಳ "ಅಲ್ಲಾ, ಏನಾಗ್ತಾ ಇದೆ ಅಂತಾನೆ  ಅರ್ಥ ಆಗ್ತಿಲ್ಲ ನಂಗೆ. ನಿನ್ನೆ ಕಾಳು, ಹಣ್ಣು ಏನಾದ್ರೂ ಸಿಗಬಹುದು ಅಂತ ಹಾರ್ತಾ ಹಾರ್ತಾ ಗಡಿ ದಾಟಿ ಪಕ್ಕದ್ ರಾಜ್ಯಕ್ಕೆ ಹೋಗಿದ್ದೆ. ಅಲ್ಲೂ ಹಿಂಗೇ ಪರಿಸ್ಥಿತಿ. ಎಲ್ಲೋ ನಾಲ್ಕಾರು ಜನ ಮುಖ ಮುಚ್ಕೊಂಡು ಓಡಾಡ್ತಾರೆ ಅಷ್ಟೇ. ಯಾರೂ ಯಾರ್ ಜೊತೆನೂ ಮಾತಾಡಲ್ಲ. ಏನಾಗಿದ್ಯಂತೆ ಮನುಷ್ಯರಿಗೆಲ್ಲ? "

"ಅಯ್ಯೋ, ನೀನು ಅಷ್ಟೆಲ್ಲ ಹಾರಾಡ್ತಾ ಇರ್ತೀಯ. ಇಷ್ಟೆಲ್ಲಾ 
 ದಿನ ಆದ್ರೂ ನಿನಗೆ ಗೊತ್ತಾಗಿಲ್ವಾ?  ಅದೇನೋ ರೋಗ ಬಂದಿದ್ಯಂತೆ. ಬೇರೆ ದೇಶದಿಂದ ಬರ್ತಾ ಅದನ್ನೂ ತಗೊಂಡು ಬರ್ತಾರಂತೆ ಈ ಮನುಷ್ಯರು. ಇಲ್ಲಿ ಎಲ್ಲರ್ಗೂ ಹರಡ್ತಾ ಇದ್ಯಂತೆ ಆ ರೋಗ." ಊರೆಲ್ಲ ಓಡಾಡಿ ವಿಷಯ ತಿಳಿದುಕೊಂಡಿರೋ ಹಿರಿ ನಾಯಿ ಹೇಳಿತು. 

"ಅದೇನೋ ರೋಗ, ಮಾರಿ ಅಂತ ಎಲ್ಲಾ ಹೇಳೋದನ್ನ ಕೇಳಿದೀನಿ. ಆದರೆ ಈ ಪರಿ ಅದ್ಕೆ ಎಲ್ಲಾ ಹೆದರ್ಕೊಂಡಿದಾರೆ ಅಂತ ಗೊತ್ತಿರ್ಲಿಲ್ಲ. ಅದ್ಕೆ ಔಷಧಿನೇ ಇಲ್ವಾ? "

"ಔಷಧಿ ಇನ್ನೂ ಸಿಕ್ಕಿಲ್ಲ ಅನ್ಸುತ್ತೆ. ಸಿಕ್ಕಿದ್ರೆ ಹಿಂಗೇ ಕೂತಿರ್ತಿದದ್ವಾ ಆ ಮನುಷ್ಯರು? ಗಾಡಿ ಹತ್ತಿ ಬುರ್ರ್ ಅಂತ ತಿರಗ್ತಾ ಇರ್ತಿದ್ವು. ಔಷಧಿ ಇಲ್ಲಾ ಅನ್ನೋ ಭಯಕ್ಕೇ ಮನೇಲಿರ್ಬೇಕು. " ಹೀಗೆ ಹಿರಿನಾಯಿ ಹೇಳುತ್ತಿದ್ದಂತೆ ಕರಿನಾಯಿ ತನ್ನ ಧ್ವನಿಯನ್ನೂ ಸೇರಿಸಿತು.. 
"ನಾನೂ ಅದೇ ಅಂತೀನಿ. ಇಷ್ಟ್ ದಿನಾ ನಾವ್ ಕಂಡಕಂಡಲ್ಲಿ ಕಲ್ಲು ಓಗೀತಿದ್ರು. ಎಲ್ಲಿ ನೋಡಿದ್ರು ಕಸ ತುಂಬ್ಸಿ ಇಡ್ತಿದ್ರು. ಕಾರು, ಬೈಕು, ಬಸ್ಸು, ವಿಮಾನು, ರೈಲು... ಒಂದಾ ಎರಡಾ... ಒಂದೊಂದ್ಸಲ ಬೆನ್ನಟ್ಟಿ ಹೋಗಿ ಕಚ್ಚಬೇಕು ಅನಿಸುತ್ತೆ. ಆದರೆ ಯಾರಿಗ್ಬೇಕು ಆಮೇಲೆ ಅವರ ರೋಗ ನಮಗೂ ಅಂಟಿದ್ರೆ ಕಷ್ಟ ಅಂತ ಸುಮ್ನೆ ಇದೀನಿ..! "
"ಲೋ ಕರಿಯ, ಹಾಗೆಲ್ಲ ಮಾಡ್ಬಿಟ್ಟಿಯ ಮತ್ತೆ.. ಸ್ವಲ್ಪ ಸುಮ್ನೆ ಇರಪ್ಪ " 
"ನೀನು ದೊಡ್ಡವನು. ಬುದ್ಧಿ ಮಾತು ಹೇಳ್ತೀಯಾ. ಆದ್ರೆ ಈ ವಿಚಾರದಲ್ಲಿ ನಾನೂ ಕರಿಯಂಗೆ ಸಪೋರ್ಟ್ ಮಾಡ್ತೀನಿ. ಅಲ್ಲಾ ನಮಗೆ ಉಳಿಯೋಕೆ, ಹಾರೋಕೆ ಎಲ್ಲಾದ್ರೂ ಜಾಗ ಉಳ್ಸಿದಾನ ಈ ಮನುಷ್ಯ?  ಹಾರ್ತಾ ಹೋದಂಗೆ ಕಣ್ಣು ಮಂಜಾಗತ್ತೆ ಈ ಗಾಡಿಗಳ ಹೊಗೇಲಿ. ಸುಸ್ತಾಗಿ ಕೂರೋಣ ಅಂದ್ರೆ ಮರಗಳೇ ಇರಲ್ಲ. ಎಲ್ಲಾ ಕೆಂಡದಂಗೆ ಕಾದಿರೋ ಬಿಲ್ಡಿಂಗು. ನಮ್ಮಕ್ಕನ್ನ, ತಮ್ಮನ್ನ ಎಲ್ಲಾ ತಗೊಂಡ್ ಹೋಗಿ ಬಣ್ಣ ಬಣ್ಣದ ಪಂಜರದಲ್ಲಿಟ್ಟು ದುಡ್ಡಿಗೆ ಮಾರ್ತಾನಲ್ಲ.. ಈಗ ಅವ್ನೂ ಹೊರಗ್ ಬರೋಕಾಗದೆ ಕೂತಿದಾನೆ ನೋಡು." ಎಂದಿತು ಗಿಳಿ ಕೋಪದಿಂದ ಮೂತಿಯನ್ನು ಮತ್ತೂ ಕೆಂಪಗೆ ಮಾಡಿ.. 
"ಹೌದಪ್ಪಾ.. ನೀವು ಹೇಳ್ತಿರೋದು ನಿಜ. ಇಷ್ಟು ದಿನಾ ಬರಿ ಪ್ಲಾಸ್ಟಿಕ್, ಪೇಪರ್ ತಿಂದು ತಿಂದು ಬಾಯೆಲ್ಲ ಜಡ್ಡುಗಟ್ಟಿತ್ತು. ಈಗ ಈ ಮನುಷ್ಯರು ಓಡಾಡ್ತಾ ಇಲ್ವಲ್ಲ.. ಸ್ವಲ್ಪ ಹುಲ್ಲು ಚಿಗುರುತ್ತಿದ್ಯಲ್ಲ.. ಅದ್ಕೆ ತಿನ್ನೋಣ ಅಂತ ಬಂದೆ " ಎಂದಿತು ಪ್ಲಾಸ್ಟಿಕ್ ತಿಂದು ಹೊಟ್ಟೆಯುಬ್ಬಿಸಿಕೊಂಡ ಹಸು. 
           ಇಷ್ಟು ಹೊತ್ತಿನ ತನಕ ಇವರೆಲ್ಲರ ಮಾತುಗಳನ್ನು ಕೇಳುತ್ತಿದ್ದ ಮೀನು ಕೆರೆಯಿಂದ ಇಣುಕಿ, "ಗೋವಮ್ಮ, ನೀನು ಹೇಳಿದ್ದು ಹೌದು ನೋಡು.. ಈ ಮನುಷ್ಯಪ್ಪ ತನ್ನ ಹೊಟ್ಟೆಗೆ  ಏನು ತಿಂತಾನೋ ಗೊತ್ತಿಲ್ಲ. ಅವನಿಂದ ನಾವು ಪ್ಲಾಸ್ಟಿಕ್ ತಿಂತಿದೀವಿ. ಈ ಪಾರ್ಕ್ ಗೆ ಬರೋವರೆಲ್ಲ ಅದೇನೇನೋ ಕುರುಕ್ ತಿಂಡಿ, ಬಿಸ್ಕೆಟ್ ಪೊಟ್ಟಣ ಎಲ್ಲಾ ತಂದು, ತಿಂದು ಎಸೀತಿದ್ರು.. ನನ್ನ ಹೊಟ್ಟೇಲಿ ಅದೆಷ್ಟು ಪ್ಲಾಸ್ಟಿಕ್ ಇದ್ಯೋ ಏನೋ.. ಮತ್ತೆ ನನ್ನ ತಗೊಂಡು ಹೋಗಿ ಅಡ್ಡ ಉದ್ದ ಸೀಳ್ತಾನಲ್ಲ ಆವಾಗ್ಲೇ ಗೊತ್ತಾಗತ್ತೆ ಅವ್ನಿಗೆ ಅದೆಷ್ಟು ಪ್ಲಾಸ್ಟಿಕ್ ಇರತ್ತೆ ಅಂತ..ಇಷ್ಟು ದೊಡ್ಡ ಕೆರೇಲಿ, ನದೀಲಿ ಇರೋ ನಮ್ಮನ್ನೆಲ್ಲ ಆ ಗ್ಲಾಸಿನ ಪೆಟ್ಟಿಗೆಲಿಟ್ಟು ಚಂದ ನೋಡ್ತಾನಲ್ಲ.. ಅನುಭವಿಸ್ತಾ ಇದಾನೆ ಈಗ.. "
"ಹೌದು ಮೀನಕ್ಕ, ನೀನು ಹೇಳ್ತಿರೋದು ಸರಿ, ಈ ಮನುಷ್ಯನ ಉಪಟಳ ತಡ್ಕೊಳಕೆ ಆಗ್ತಾ ಇಲ್ಲಾ.. ನಮ್ಮೆಲ್ರ ನೋವು ಕೇಳ್ಸಿರ್ಬೇಕು ದೇವ್ರಿಗೆ. ಅದ್ಕೆ ಈ ರೋಗ ಕಳ್ಸಿದಾನೆ. " ಎಂದಿತು ಗಿಳಿ. 
"ಇದ್ಯಾವ ದೇವರೂ ಕಳ್ಸಿದ್ದಲ್ಲ. ಎಲ್ಲಾನೂ ಕಂಡುಹಿಡಿತಾನಲ್ಲ ಮನುಷ್ಯ, ಇದನ್ನೂ ಅವನೇ ಕಂಡುಹಿಡಿದಿದ್ದು. ಈಗ ಅನುಭವಿಸ್ತಾ ಇದಾನೆ ಅಷ್ಟೇ. " ಎಂತು ತನ್ನದೇ ಗತ್ತಿನಲ್ಲಿ ಹಿರಿನಾಯಿ. 
    ಇಷ್ಟೂ ಹೊತ್ತಿನ ತನಕ ಸುಮ್ಮನೆ ಕುಳಿತ ಬಿಳಿನಾಯಿ, "ಹಾ.. ನಾನು ತಿಂಡಿ ಹುಡ್ಕೊಂಡು ಹೋಗಿದ್ನಲ್ಲ, ಆ ಮನೆ ಪಮ್ಮಿ ನಾಯಿ ಹೇಳ್ತಿದ್ಲು.. ಇದೇನೋ ಕರಾಳ ರಹಸ್ಯ ಅಂತೆ.. ಮಹಾಮಾರಿ ಅಂತೆ.. ಭಯಾನಕ ಅಂತೆ..ವಿಲವಿಲ ಅಂತೆ.. ಇಡೀ ಪ್ರಪಂಚಕ್ಕೆ ರೋಗ ಬಂದಿದೆ.. ಯಾರೂ ಬದುಕೋಕೆ ಆಗಲ್ಲ ಅಂತ ಅದೇನೋ ವಿಚಿತ್ರ ಧ್ವನಿಲಿ ಹೇಳಿದ್ಲು.. ಏನೇ ಇದು ಹೀಗೆಲ್ಲಾ ಮಾತಾಡೋಕೆ ಕಲಿತುಬಿಟ್ಟೆ ಅಂದ್ರೆ, ನಮ್ಮೆಜಮಾನ ನಿಮಿಷಕ್ಕೆ ಒಂದರಂತೆ ಚಾನೆಲ್ ಹಾಕ್ತಾನೆ ಟೀವಿಲಿ.. ಎಲ್ಲರೂ ಇದ್ನೇ ಹೇಳ್ತಾರೆ, ನಿಂಗೂ ಗೊತ್ತಿರ್ಲಿ ಅಂತ ಹೇಳ್ದೆ ಅಂದ್ಲು.. ಭಯ ಆಗೋಯ್ತಪ್ಪ ನಂಗೆ ಅವಳು ಹೇಳೋ ಧಾಟಿ ಕೇಳಿ.. " 
 "ಹೌದು.. ಆ ಬೀದಿ ಕೊನೆ ಮನೆ ಡಾಬರಣ್ಣನೂ ಇದ್ನೇ ಹೇಳ್ತಿದ್ದ.. ಈಗೊಂದು ಹದಿನೈದು ದಿನದ ಹಿಂದೆ, ಆಕಾಶದಿಂದ ಔಷಧಿ ಬೀಳತ್ತೆ ಕೆಳಗೆ, ಎಲ್ಲಾ ಒಳಗೆ ಇರಿ ಅಂದ.. ಮೊನ್ನೆ ಆಕಾಶದಿಂದ ದುಡ್ಡು ಬರತ್ತಂತೆ ಕಣೋ, ನಮ್ಮನೆ ಯಜಮಾನಪ್ಪ ಟಿವಿ ನೋಡಿ ಅದನ್ನೇ ದೊಡ್ಡದಾಗಿ ಹೇಳ್ತಿದ್ದ..ನಾನೇನೋ ನೀರಿನ ಮಳೆ ಬದಲು, ಪೇಪರ್ ಮಳೆ ಬರತ್ತೆ ಅಂದ್ಕೊಂಡೆ.. ಏನೂ ಆಗಿಲ್ಲ.. ಬರಿ ಸುಳ್ಳು ಹೇಳ್ತಾನೆ ಅವನು.. " ಎಂದಿತು ಕರಿ ನಾಯಿ. 
  ಅಷ್ಟು ಹೊತ್ತಿಗಾಗಲೇ ಎದುರುಗಡೆಯ ಪ್ರತಿಷ್ಠಿತ ಬಹುಮಹಡಿ ಕಟ್ಟಡದಿಂದ ಹೊರಬಂದು, ಕಿವಿಗೆ ಮೊಬೈಲ್ ಫೋನ್ ಹಿಡಿದುಕೊಂಡು ವ್ಯಕ್ತಿಯೊಬ್ಬ ಕೂಗುತ್ತಿದ್ದ.. ಶಾಂತವಾಗಿ ಅದನ್ನೆಲ್ಲ ಕೇಳಿ ನಂತರ ಗಿಳಿ ಹೇಳಿತು, "ಅಲ್ಲಾ, ಇಷ್ಟೆಲ್ಲಾ ಆದರೂ ಇವರಿಗೆ ಬುದ್ಧಿ ಬರಲ್ವಾ ಅಂತ..? ಅದೇನೋ ಎಕಾನಾಮಿ ಅಂತೆ, ಜಿಡಿಪಿ ಅಂತೆ, ಗ್ಲೋಬಲ್ ಎಫೆಕ್ಟ್ ಅಂತೆ, ಏನು ಕೂಗ್ತಿದಾನೆ ಅವನು.. ಜೀವ ಉಳ್ದ್ರೆ ತಾನೇ ಅದೆಲ್ಲಾ.. ತಾನು ಹುಟ್ಟಿರೋ ಲೋಕದಲ್ಲಿ ತನ್ನದೇ ಒಂದು ಲೋಕ ಮಾಡ್ಕೊಂಡು ಯಾವಾಗ್ಲೂ ಒದ್ದಾಡ್ತಾ ಇರ್ತಾನಪ್ಪ.. ಬುದ್ಧಿ ಹೇಳೋರು ಯಾರು.. ಮಾತೆತ್ತಿದರೆ ತಾನೇ ಬುದ್ಧಿಜೀವಿ, ಪ್ರಜ್ಞಾವಂತ ಅಂತಾನೆ.. !"
" ಬಿಡು ಅವರನ್ನ...ಇಷ್ಟೆಲ್ಲಾ ಆದ್ರೂ ನಮ್ಮ ಆಲಮ್ಮ ಏನೂ ಮಾತಾಡ್ತಾ ಇಲ್ವಲ್ಲ.. ಅಮ್ಮಾ ಏನಾಯ್ತು?  ಏನು ಯೋಚ್ನೆ ಮಾಡ್ತಾ ಇದ್ದೀರಾ ಇಷ್ಟು ಹೊತ್ತು? " ಎಂದಿತು ಹಿರಿನಾಯಿ. 


ಇಷ್ಟೂ ಹೊತ್ತು ಮೌನವಾಗಿ ಇವರೆಲ್ಲರ ಮಾತನ್ನು ಕೇಳುತ್ತಿದ್ದ ಆಲದ ಮರ ಮಾತನಾಡಲು ಪ್ರಾರಂಭಿಸಿತು.. "ಆ ಮನೆಯ ಹೊರಗೆ ಕುಳಿತ ತಾತಪ್ಪನನ್ನು ನೋಡಿ, ಅವನು ಹುಡುಗನಿದ್ದಾಗಿನಿಂದ ಇಲ್ಲಿಯವರೆಗೂ ನೋಡಿದ್ದೇನೆ ಅವನನ್ನು. ಎರಡು ತಿಂಗಳ ಹಿಂದೆ ಬಂದಾಗ, ಇದೇ ಕಟ್ಟೆಯ ಮೇಲೆ ಕುಳಿತಿದ್ದ. ಬಹಳ ನೊಂದು ದುಃಖ ಹಂಚಿಕೊಂಡ.

ಮಗ -ಸೊಸೆ ಕೆಲಸಕ್ಕೆ ಹೋಗುತ್ತಾರೆ. ಮೊಮ್ಮಕ್ಕಳು ಬೆಳಿಗ್ಗೆ ಶಾಲೆ, ಸಂಜೆ ಟ್ಯೂಷನ್, ರಾತ್ರಿ ಹೋಮ್ ವರ್ಕ್ ಎನ್ನುತ್ತಿರುತ್ತಾರೆ. ಕೆಲವೊಮ್ಮೆ ನಾನೇ ಅವರಿಗೆ ಭಾರವೇನೋ ಎನಿಸುತ್ತದೆ. ಒಬ್ಬರಿಗೂ ನನ್ನೊಡನೆ ಮಾತನಾಡಲು ಸಮಯವೇ ಇರುವುದಿಲ್ಲ ಎನ್ನುತ್ತಿದ್ದ. ಅಂದು ಅವನ ಬೇಸರಕ್ಕೆ ಹೆಗಲಾಗಿದ್ದೆ. 
           ಇಂದು ನೋಡಿ, ಆ ಮನೆಯ ಹಿರಿಜೀವದ ಕಣ್ಣಲ್ಲಿ ನೋವಿಲ್ಲ. ಆಡುತ್ತಿದ್ದಾನೆ ಮೊಮ್ಮಕ್ಕಳೊಡನೆ ಪುಟ್ಟ ಹುಡುಗನಂತೆ,  ತನ್ನ ಕೀಲು ನೋವುಗಳನ್ನೆಲ್ಲ ಮರೆತು.. 
ಅಪ್ಪನಿಗೆ ಮಾತ್ರೆಗಳನ್ನು ಕೊಡಲು ಮಗನ ಬಳಿ ಸಮಯವಿದೆ, ಮಾವನಿಗೆ ಚಹಾ ಮಾಡಿಕೊಡಲು ಸೊಸೆಯ ಬಳಿ ಸಮಯವಿದೆ..ಇಷ್ಟು ಪ್ರೀತಿಯಲ್ಲದೆ  ಇನ್ನೇನು ಬೇಕವನಿಗೆ? 
    ಮೊದಲೆಲ್ಲ ಕಾರ್ಟೂನ್ ನೋಡಬೇಕು ಎಂದು ಮೊಮ್ಮಕ್ಕಳು ಹಠ ಮಾಡುತ್ತಿದ್ದರು, ಸಂಜೆಯಾದರೂ ಧಾರವಾಹಿ ನೋಡುತ್ತೇನೆ ಎಂದು ಸೊಸೆ ಹೇಳಿದರೆ ಮಗ ದಿನದ ವಾರ್ತೆ ನೋಡಬೇಕು ಎಂದು ವಾದಿಸುತ್ತಿದ್ದ. ಇದ್ಯಾವುದೂ ಬೇಡವೆಂದು ತಾತ ಹೋಗಿ ಮಲಗುತ್ತಿದ್ದ.. ಆದರೆ ಈಗ ಈ ಲಾಕ್ಡೌನಾಯಣದ  ಮಧ್ಯೆ ಎಲ್ಲ ಒಟ್ಟಾಗಿ ಕುಳಿತು ರಾಮಾಯಣ ನೋಡುತ್ತಾರೆ... !
      ನಾನಂತೂ ಇಲ್ಲಿ ಯಾವಾಗಲೂ ಒಂಟಿಯೇ. ನಿಮ್ಮಂತೆ ಓಡಾಡಲಾರದೆ, ಹಾರಲಾಗದೆ, ಇದ್ದಲ್ಲಿಯೇ ಇರುವವಳು. ಆದರೆ ನೀವೆಲ್ಲ ಎಲ್ಲೇ ಹೋದರೂ ತಿರುಗಿ ನನ್ನ ಬಳಿ ಬರುತ್ತೀರಿ.. ಕತೆ ಹೇಳುತ್ತೀರಿ..ಹಾಗೆಯೇ  ನನ್ನ ಒಂಟಿತನವನ್ನು ದೂರ ಮಾಡುವಲ್ಲಿ ಮನುಷ್ಯನ ಪಾತ್ರವೂ ದೊಡ್ಡದು. ಎಷ್ಟೊಂದು ಜನರು ಬಂದು ಈ ಕಟ್ಟೆಯ ಮೇಲೆ ಕೂತು ಕತೆ ಹೇಳುತ್ತಾರೆ.. ಸುಸ್ತಾಗಿ ನನ್ನ ಬೆನ್ನಿಗೆ ಒರಗುತ್ತಾರೆ, ನನ್ನ ನೆರಳಿನ ತಂಪಿನಿಂದ ಹಾಯಾಗಿ ಕಣ್ಮುಚ್ಚಿ ಕುಳಿತುಕೊಳ್ಳುತ್ತಾರೆ. ಎಷ್ಟು ಮಕ್ಕಳು ಇಲ್ಲಿಯ ಜೋಕಾಲಿ, ಜಾರುಬಂಡಿಗಳನ್ನು ಆಡುತ್ತಾರೆ.. ಕಣ್ಣಾಮುಚ್ಚಾಲೆ ಆಡುವಾಗ ಅದೆಷ್ಟು ಮಕ್ಕಳು ನನ್ನನ್ನು ತಬ್ಬಿ ಅಡಗಿದ್ದರು.. 
   ನೀವೆಲ್ಲ ಹೇಳಿದಿರಲ್ಲ ಕಲ್ಲು ಹೊಡೆಯುತ್ತಾರೆ, ಕಸ ಹಾಕುತ್ತಾರೆ, ಮಲಿನ ಮಾಡುತ್ತಾರೆ.. ಎಲ್ಲವೂ ಸತ್ಯ. ಆದರೆ ನಿಮಗೆ ಅನ್ನ, ಬಿಸ್ಕೆಟ್ ಕೊಡುವವರು ಯಾರು?  ಪಕ್ಷಿಗಳಿಗೆಂದು ಮಹಡಿಯ ಮೇಲೆ ಕಾಳು -ನೀರು ಇಡುವವರು ಯಾರು? ಹಸುಗಳಿಗೆ ಸೊಪ್ಪು ಕೊಡುವವರು ಯಾರು?  ಬೇಸಿಗೆಯಲ್ಲಿ ಅದೆಷ್ಟು ಮೀನುಗಳ ರಕ್ಷಣೆ ಮಾಡಿಲ್ಲ?

ತಪ್ಪನ್ನು ಹುಡುಕಿದರೆ ಕೇವಲ ತಪ್ಪು ಮಾತ್ರವೇ ಕಾಣಿಸುವುದು. 
       ನಾವೆಲ್ಲ ಜೀವಸಂಕುಲಗಳು ಇದ್ದರೆ ಮಾತ್ರ ಸೃಷ್ಟಿಗೆ ಅರ್ಥ. ನೋಡಿ, ಅವರಿಗೆ ಬಂದ ರೋಗದಿಂದ ಉಳಿದ ಜೀವಿಗಳೂ ಸಂಕಟ ಅನುಭವಿಸುತ್ತಿದ್ದೇವೆ. 
     ಅವರು ಮೊದಲಿನಂತಾದಲ್ಲಿ ಮಾತ್ರ ಮತ್ತೆ ಎಲ್ಲವೂ ಸುಗಮ, ಸುಂದರ.. 
    ಹೌದು, ಅವರು ತಪ್ಪು ಮಾಡುತ್ತಾರೆ. ಆದರೆ ತಿದ್ದಿಕೊಳ್ಳುವ ಬುದ್ಧಿಯೂ ಅವರಲ್ಲಿದೆ. ಇದಕ್ಕೂ ಮುಂಚೆಯೂ ಅದೆಷ್ಟೋ ರೋಗಗಳನ್ನು ಎದುರಿಸಿದ್ದಾರೆ, ಗೆದ್ದಿದ್ದಾರೆ. ಈಗಲೂ ಅಷ್ಟೇ..
    ಇದು ಶಿಕ್ಷೆಯಲ್ಲ, ಅವಕಾಶ...ಯಾವಾಗ ಅವರ ನಡುವಿನ ಭಿನ್ನಾಭಿಪ್ರಾಯ, ಕಲಹಗಳನ್ನು ಬಿಟ್ಟು, ಅವರಿಗೊದಗಿದ ಈ ಸಂಕಟದ ವಿರುದ್ಧ ಎಲ್ಲರೂ ಒಂದಾಗಿ  ನಿಲ್ಲುತ್ತಾರೋ ಅಂದು ಮಾತ್ರವೇ ಪರಿಹಾರ... 
ಎಲ್ಲವೂ ಸುಧಾರಿಸಲಿ..ಈ ರೋಗ, ನಮ್ಮ ಪ್ರಕೃತಿ, ಮನಸ್ಥಿತಿ, ಎಲ್ಲವೂ ಸುಧಾರಿಸಲಿ.. ಅವರ ತಪ್ಪುಗಳನ್ನೆಲ್ಲ ಸರಿಪಡಿಸಿಕೊಳ್ಳಲಿ.. ಮತ್ತೆ ಅವರೆಲ್ಲ ಮೊದಲಿನಂತೆ ನಮ್ಮ ಬಳಿ ಬರಲಿ.. ಎಂದು ಹಾರೈಸೋಣ.. "
 ತಾಯಿಯಾದ ಆಲದಮರವೇ ಈ ಮಾತನ್ನು ಹೇಳಿದಾಗ ಉಳಿದೆಲ್ಲ ಜೀವಿಗಳೂ ತಲೆಯಾಡಿಸಿದವು. ನೀರು ತನ್ನ  ನವಿರಾದ ಅಲೆಗಳ ಮೂಲಕ ಹರ್ಷ ವ್ಯಕ್ತಪಡಿಸಿದರೆ, ತಂಗಾಳಿಗೆ ತಲೆದೂಗಿ ಗಿಡಗಳೆಲ್ಲ ನಕ್ಕವು... 
  ಅವರೆಲ್ಲರ ಆಶಯದಂತೆ ಆದಷ್ಟು ಬೇಗ ಇದನ್ನೆಲ್ಲಾ ಮುಗಿಸಿ ಭೇಟಿಯಾಗೋಣ. ನಮ್ಮ ನಮ್ಮ ಲಾಕ್ಡೌನಾಯಣದ ಕಥೆಯನ್ನು ಕಟ್ಟೆಯ ಮೇಲೆ ಕುಳಿತು ಹರಟೋಣ..

ಮಲೆನಾಡಿನ ಮಳೆಗಾಲ

ಚಿಕ್ಕಮಗಳೂರಿನಿಂದ ಶುರುವಾಗಿ ಉತ್ತರ ಕನ್ನಡದ ತುದಿಯವರೆಗೂ... ಅದೇನು ದಟ್ಟ ಹಸಿರು. ಸೂರ್ಯನ ಕಿರಣ ತಾಕದಷ್ಟು ನೆರಳು. ದಾರಿಯುದ್ದಕ್ಕೂ ತೋರಣದಂತೆ ಬಾಗಿರುವ ಮರಗಳು. ಅವುಗಳಿಂದ ಉದುರಿದ ಎಲೆ-ಹೂಗಳ ಮೆತ್ತನೆಯ ಹಾಸಿಗೆ. ಪ್ರವಾಸಕ್ಕೆ ಬರುವ ಜನರೆಲ್ಲಾ ನಾಲ್ಕು ದಿನ ಉಳಿದು ಅರೆ ವ್ಹಾ ಇದು ಸ್ವರ್ಗ. ಇಲ್ಲಿಯೇ ಉಳಿಯಬೇಕು ಎಂದು ಒಮ್ಮೆಯಾದರೂ ಹೇಳಿಕೊಳ್ಳುತ್ತಾರೆ. ಅಂತಹ ಆಕರ್ಷಣೀಯತೆ. ಆದರೆ ಎಂದಾದರೂ ಹುಟ್ಟಿದರೆ ಮಲೆನಾಡಲ್ಲಿ ಹುಟ್ಟಬೇಕು ಎನಿಸಿತ್ತಾ?  ಮಳೆಗಾಲದಲ್ಲಿ ಬಂದು ನೋಡಿ, ಖಂಡಿತ ಹಾಗೇ ಅನಿಸುತ್ತದೆ. 
 ಮಳೆಗಾಲ ಬರಲಿ ಎಂದು ಇಲ್ಲಿಯ ಜನ ಕಾದುಕುಳಿತ ರೀತಿ, ಮಳೆಗಾಲದ ಕೆಲಸಗಳು, ಕಷ್ಟಗಳ ಜೊತೆಗೆ ಮಳೆಯನ್ನೂ ಸಂಭ್ರಮಿಸುವ ಪರಿ ಹೊರಗಿನವರನ್ನು ಬೆರಗಾಗಿಸುತ್ತದೆ. ಮಳೆ ಎಂಬುದು ಇಲ್ಲಿನ ಪ್ರಕೃತಿಯ ಜೀವಾಳ.

    'ಕವಳ ಮತ್ತು ಮಳೆ ನನ್ನ ಎರಡು ಕಣ್ಣುಗಳು' ಎಂದು ಹಿರಿಯರೊಬ್ಬರು ಹೇಳಿದ್ದರು.
ಕವಳ ಎಂದರೆ ಅಡಿಕೆ ತೋಟ ಹಾಗೆಯೇ ಮಳೆ ಮುಖ್ಯವಾಗಿ ಬೇಕಿರುವುದು ಭತ್ತ ಬೆಳೆಯಲು. ಇವೆರಡೇ ಇಲ್ಲಿನ ಮುಖ್ಯ ಬೆಳೆಗಳು. ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಸುರಿವ ಮೊದಲ ಮಳೆ ಸಾಕು,ಕೊಟ್ಟಿಗೆ ರಿಪೇರಿ ಇಂದ ಹಿಡಿದು ಗದ್ದೆ ಕೆಲಸಗಳೆಲ್ಲ ಪ್ರಾರಂಭವೇ..!

     ನಮ್ಮಲ್ಲಿನ ಅಪ್ಪಟ ಮಳೆಗಾಲ ಎಂದರೆ ಮಧ್ಯಾಹ್ನ ಮೂರಕ್ಕೆ ಏಳು ಗಂಟೆಯ ಕತ್ತಲು ಆವರಿಸುತ್ತದೆ. ಮಂದ್ರಕ್ಕಿಳಿಯದೆ , ತಾರಕಕ್ಕೇರದೆ ಒಂದೇ ಸ್ವರದಲ್ಲಿ ಹಾಡುವ ಮಳೆಯದು. ಮಧ್ಯೆ ಮಧ್ಯೆ ಗಾಳಿಯೂ ತನ್ನ ವೇಗವನ್ನು ಹೆಚ್ಚಿಸಿ ಮಳೆಯ ಹಾಡಿಗೆ ದನಿಗೂಡಿಸುತ್ತದೆ. ಹಂಚಿನ ಮೇಲೆ ಟಪ್ಟಪ್  ಸದ್ದು,  ಅಡಿಕೆ ದಬ್ಬೆಯ  ಹರಿಣಿಯಿಂದ ಹರಿದ ನೀರು ಹಂಡೆಗೆ ಬೀಳುವ ಸದ್ದು,  ಎಲ್ಲವೂ ಇದ್ದೇ ಇರುತ್ತದೆ.
  ಮಲೆನಾಡಿನ ಮಳೆಗಾಲ ಎಷ್ಟು ಪ್ರಸಿದ್ಧ ಎಂದರೆ, ಜೂನ್ ಇಂದ ಸಪ್ಟೆಂಬರ್ ವರೆಗೆ ಎಲ್ಲಾ ದಿನಪತ್ರಿಕೆಗಳಲ್ಲೂ ತನ್ನದೇ ಒಂದು ಕಾಲಂ ಪಡೆದಿರುತ್ತದೆ. 'ಮುಂಗಾರು ಚುರುಕು', 'ಮಳೆಯ ಅವಾಂತರ', 'ಸಿಡಿಲಿಗೆ ಬಲಿ',.. ಇನ್ನೂ ಹಲವು ರೂಪಗಳಲ್ಲಿ ಸುದ್ದಿ ತರುವ ಕೆಲಸವನ್ನು ಮಳೆ ಮಾಡುತ್ತದೆ. 
     ಪ್ರತಿ ಬಾರಿಯೂ ಮೋಡಗಳು ಮಳೆಹನಿಯೊಡನೆ ನೆನಪಿನ ಮೂಟೆಯನ್ನು ತಮ್ಮೊಡನೆ ಹೊತ್ತು ತರುತ್ತವೆ. ಆ ಎಲ್ಲಾ ನೆನಪುಗಳೂ ಮತ್ತೊಮ್ಮೆ ನಾನು ಹಾಗೇ ಇರಬಾರದಿತ್ತೇ.. ಮತ್ತೆ ಬಾಲ್ಯ ಬರಬಾರದೇ ಎಂದೇ ಹೇಳುತ್ತವೆ.. 

ಮಾನ್ಸೂನ್ ಅತಿಥಿಗಳು...
 ಮಾನ್ಸೂನ್ ನಲ್ಲಿ ಅತಿಥಿಗಳ ದಂಡೇ ಸೇರುತ್ತದೆ ಮಲೆನಾಡಿನ ಒದ್ದೆ ಮಣ್ಣಿನಲ್ಲಿ. ಮಳೆಗಾಲದ ಪ್ರಾರಂಭದಲ್ಲಿ ಹುಳಗಳನ್ನು ಹುಡುಕಿ ಬರುವ ನವಿಲುಗಳು ಆಗಾಗ ಗರಿಬಿಚ್ಚಿ ನರ್ತಿಸುತ್ತ ಮಳೆರಾಯನ ಸ್ವಾಗತ ಮಾಡುವವು. ಒಮ್ಮೆ ತೋಟಕ್ಕೆ ಹೋಗಿಬಂದರೆ ಮೊಣಕಾಲವರೆಗೂ ರಕ್ತ ಹೀರುವ ಉಂಬಳಗಳು, ಸಿಂಬಳದಂತೆ ಲೋಳೆ ಬಿಡುವ ಬಸವನಹುಳುಗಳು, ಗಿಡಗಳ ಎಲೆ ತಿನ್ನುವ ಕಂಬಳಿ ಹುಳುಗಳು, ಉಚಿತವಾಗಿ ಗೊಬ್ಬರ ಕೊಡುವ ನಂಜುಳ, ಚಕ್ಕುಲಿ ಚೋರಟೆ, ಗೊಬ್ಬರದ ಹುಳ, ಗದ್ದೆಗಳ ತುಂಬೆಲ್ಲ ಏಡಿಗಳು, ಹಳ್ಳದಲ್ಲಿ ಸಣ್ಣ ಮೀನು, ಸಂಜೆಯಾಯ್ತು ಎಂದರೆ ಕರ-ಕರ ಎನ್ನುವ ಕಪ್ಪೆಗಳು, ಜೀ ಎನ್ನುವ ಜೀರುಂಡೆಗಳು. 

ಅಮ್ಮನ ಕೈತೋಟದಲ್ಲಿ ತಲೆ ಎತ್ತಿ ನಿಂತ ನಾಗದಾಳಿ ಗಿಡಗಳು, ಅರಳಿ ನಿಂತ ಡೇರೆ ಹೂಗಳು, ಒಣಕಾಯಿಯೊಂದಿಗೆ ಹೊಸ ಸಿಂಗಾರಗಳಿಗೂ ಜಾಗ ಮಾಡಿಕೊಡುತ್ತಿರುವ ತೆಂಗಿನಮರಗಳು, ಮೊದಲ ಮಳೆಗೆ  ಮರದ ಟೊಂಗೆಯಲ್ಲಿ ಬೀಡುಬಿಟ್ಟ ಸೀತಾಳೆ ದಂಡೆಯೂ ಅರಳಿ, ಭಾರಕ್ಕೆ ಭೂಮಿಯತ್ತ ತಲೆಬಾಗುವುದು. ಇವೆಲ್ಲದರ ಜೊತೆಗೆ ಬೇಸಿಗೆಯ ಬಿಸಿಲಿಗೆ ಒಣಗಿದ ಗಿಡಗಳೆಲ್ಲ ನಿಧಾನವಾಗಿ ಹಸಿರಾಗುತ್ತಾ, ಮರಳಿ ತನ್ನ ಒನಪು ವಯ್ಯಾರಗಳಿಂದ ಬೀಗುವುದು. 
       ಇನ್ನು ವರ್ಷವಿಡೀ ಮಲೆನಾಡಲ್ಲಿ ಇದ್ದು ಮಳೆಗಾಲದಲ್ಲಿ ಮಾತ್ರ ನೆಂಟ ಎನಿಸಿಕೊಳ್ಳುವವರು ಇಬ್ಬರೇ.. ಸೂರ್ಯ ಮತ್ತು ಕರೆಂಟು..! 
     ಹಪ್ಪಳ ಹಚ್ಚಬೇಕು ಎಂದು ಹಲಸಿನಕಾಯಿ ಕೆಡಗಿಟ್ಟರೂ ಸೂರ್ಯದೇವನ ಅನುಮತಿ ದೊರೆಯದೆ, ಇಟ್ಟಲ್ಲಿಯೆ ಅದು ಹಣ್ಣಾಯ್ತೆ ವಿನಃ ಹಪ್ಪಳದ ಭಾಗ್ಯ ದೊರೆಯಲಿಲ್ಲ. "ಒಂದಿನ ಆದ್ರುವ ಸೂರ್ಯ ಕಣ್ಣ್ ಬಿಡ್ತ್ನ ನೋಡು.. ಬಿಸ್ಲೆ ಇಲ್ಯಪ.. ಬರಿ ಮೋಡ.." ಎಂದು ಸೂರ್ಯನನ್ನು ಬೈಯುವ ಹೆಂಗಸರ ಗೊಣಗಾಟ ತಪ್ಪಲಿಲ್ಲ. 
      ಈ ಕರೆಂಟು ಎಂಬುದಂತೂ ನೆಂಟನೂ ಅಲ್ಲದ ಅಪರಿಚಿತನೂ ಅಲ್ಲದ, ದಿನಾ ದಾರಿಯಲ್ಲಿ ಸಿಗುವ ಪರಿಚಿತ ಮುಖವಾಗಿ ಉಳಿದುಬಿಡುತ್ತದೆ. ಆದರೆ ಜೋರು ಮಳೆಯನ್ನೂ ಲೆಕ್ಕಿಸದೆ ಕೆಲಸಮಾಡುವ ಲೈನ್ಮ್ಯಾನ್ ಗೆಳೆಯನಾಗಿ ಕಾಣುತ್ತಾನೆ. ಕರೆಂಟ್ ಇಲ್ಲ ಎಂದರೆ, ಇಂಟರ್ನೆಟ್ ಇರದು, ಮೊಬೈಲ್ ಅನ್ನು ಮಾತನಾಡಿಸುವವರೇ ಇಲ್ಲ. ಮಿಕ್ಸರ್ ಜಾಗದಲ್ಲಿ ಒರಳುಕಲ್ಲು ಬರುತ್ತದೆ. ಪಂಪ್ಸೆಟ್ ನಂಬಿಕೊಂಡವ, ಮತ್ತದೇ ತುಕ್ಕು ಹಿಡಿದ ರಾಟೆಗೆ ಎಣ್ಣೆ ಬಿಟ್ಟು, ಕೀ ಕೀ ಎಂದು ಸದ್ದು ಮಾಡುತ್ತ ಬಾವಿಯಿಂದ ನೀರೆತ್ತಬೇಕು.   History repeats ಎನ್ನುವ ಮಾತು ಅಕ್ಷರಶಃ ಸತ್ಯವಾಗುವುದು ಮಲೆನಾಡಿನ  ಪ್ರತಿ  ಮಳೆಗಾಲದಲ್ಲಿ.. 

ಒಂದು ಚಪ್ಪಲಿ, ಎರಡು ಜೀವ.. !
  ಮಳೆಗಾಲ ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ಅದೇ ಘಟನೆ. 
ಆ ಮಳೆಗಾಲದಲ್ಲಿ ಹೊಳೆ ತುಂಬಿ ತೋಟಕ್ಕೆಲ್ಲ ನೀರು ಬಂದಿತ್ತು.ಅಷ್ಟು ಜೋರು ಮಳೆಗಾಲ. ಹೊಳೆಯಾಚೆಗಿನ ಮನೆಯಲ್ಲಿ ಏನೋ ಪೂಜೆ ಎಂದು ಅಜ್ಜ ಅಜ್ಜಿ ಕರೆದುಕೊಂಡು ಹೋಗಿದ್ದರು. ನಾನಾಗ ಒಂದನೇ ತರಗತಿ! 
ಮಕ್ಕಳಿಗೆಲ್ಲ ಊಟವಾಗಿತ್ತು. ಹೊಳೆಯಲ್ಲಿ ದೋಣಿ ಬಿಡುವ ಹುಚ್ಚು ನಮಗೆಲ್ಲ. ಎಲ್ಲ ಬೈಯುತ್ತಾರೆ ಎಂದು ಹೇಳದೆ ಕೇಳದೆ ಹೋಗಿದ್ದೆವು ನಾವು ಮೂವರು. 
ಹೊಳೆಯ ನೀರಿನಲ್ಲಿ ಕಾಲು ಇಳಿಸಿ ಕುಳಿತು ಏನೋ ಆಡುತ್ತಿದ್ದ ನೆನಪು..! ನನ್ನ ಚಪ್ಪಲಿಯೊಂದು ತೇಲಿ ಹೋಯಿತು. ಆಗ ತಾನೇ ಮಳೆಗಾಲಕ್ಕೆ ಎಂದು ಕೊಡಿಸಿದ್ದು ಹೋಯ್ತಲ್ಲ.. ಜೋರಾಗಿ ಅಳತೊಡಗಿದೆ.. "ಯನ್ನ ಚಪ್ಪಲ್ಲು..." ಭಾರ್ಗವ ಮತ್ತು ರಾಮ ಇಬ್ಬರೂ ನೀರಿಗೆ ಹಾರಿಯೇ ಬಿಟ್ಟರು. ಪುಣ್ಯಾತ್ಮರಿಗೆ ಈಜು ಬರಬೇಕಲ್ಲ..ಚಪ್ಪಲಿ ಹಿಡಿಯುವುದು ಹಾಗಿರಲಿ, ಅವರೇ ಮುಳುಗತೊಡಗಿದ್ದರು. 
    ಅದ್ಯಾವ ವೇಗದಲ್ಲಿ ಮನೆಗೆ ಓಡಿದ್ದೆನೋ.. ಒಂದೇ ಕಾಲಲ್ಲಿ ಚಪ್ಪಲಿ, ಜೋರು ಮಳೆ, ಜಾರುವ ಮಣ್ಣು,.. ಹೇಗೋ ಓಡಿ ಹೋಗಿ ಎಲ್ಲರೆದುರು ನಿಂತಿದ್ದೆ. ಪಾಪ ಅವರೆಲ್ಲ ಆಗಷ್ಟೇ ಊಟಕ್ಕೆ ಕುಳಿತಿದ್ದರು. ಹೊಳೆಯತ್ತ ಕೈ ಮಾಡಿ, "ನನ್ ಚಪ್ಪಲ್ಲು.., ಅವ್ವಿಬ್ರು.., ಹೊಳೆ..," ಎಂದು ಏನೇನೋ ಬಡಬಡಿಸುತ್ತಿದ್ದೆ ನಾನು. ಅವರಿಗೆಲ್ಲ ಅರ್ಥವಾಗಿ ಓಡಿದ್ದರು ಹೊಳೆಯತ್ತ. 
     ಕೊನೆಗೂ ನನ್ನ ಚಪ್ಪಲಿ ಸಿಗಲಿಲ್ಲ. ಆದರೆ ಅವರಿಬ್ಬರ ಜೀವ ಉಳಿಯಿತು. 

ಶಾಲೆಗೆ ಈ ದಿನ ರಜಾ..!
      ಎಂದು ಜೋರಾಗಿ ಗಾಳಿ ಮಳೆ ಏಳುವುದೋ ಅಂದು ಶಾಲೆಗೆ ರಜಾ.. ಒಂದೋ ನಾವೇ ಮಾಡುತ್ತೇವೆ, ಇಲ್ಲಾ ಎಂದರೆ ಅವರಾಗಿಯೇ ರಜಾ ಎನ್ನುತ್ತಾರೆ. ಒಟ್ಟಿನಲ್ಲಿ ತಿನ್ನುವ ಬಾಯಿ ಹೊದೆಯುವ ಕಂಬಳಿ ಎರಡಕ್ಕೂ ಬಿಡುವಿಲ್ಲ. ಹೈಸ್ಕೂಲ್ ದಿನಗಳ ಮಳೆಗಾಲವಂತೂ ಪೂರ್ತಿ ಹೀಗೆಯೇ. ಚಳಿಗೆ ಹೊದ್ದು ಮಲಗಿದವಳನ್ನು ಅಮ್ಮ ಕಷ್ಟ ಪಟ್ಟು ಏಳಿಸಿ, ಸಿದ್ಧ ಪಡಿಸಿ ಕಳಿಸಿದರೆ, ಇಂದು ರಜಾ ಎಂದು ವಾಪಾಸು ಕಳಿಸುತ್ತಿದ್ದರು..!

ಬೆಚ್ಚಗಿನ ಬಚ್ಚಲು ಒಲೆ..! 
 ಬಚ್ಚಲ ಒಲೆ ಎಂದಿಗೂ ಆರುವುದಿಲ್ಲ. ಅಥವಾ ಆರದಂತೆ ಅಜ್ಜಿ ನೋಡಿಕೊಳ್ಳುತ್ತಾಳೆ. ಬೆಳಗಿನ ಜಾವ ನಾಲ್ಕುಗಂಟೆಯಿಂದ ಪ್ರಾರಂಭವಾದರೆ, ರಾತ್ರಿಯೂ ಬಿಸಿನೀರು ಲಭ್ಯವಿರುತ್ತದೆ. ಬೆಳಿಗ್ಗೆ ಎದ್ದ ಆಲಸ್ಯದಲ್ಲಿ,  ಚಳಿ ಎಂದು  ಒಲೆಯ ಮುಂದೆ ಕೂರುವುದು, ಅಲ್ಲಿಯೇ ತೂಕಡಿಸುವುದು ಎಲ್ಲಾ ಮಾಮೂಲಿ..!

ಮಾವೋ, ಹಲಸೋ..?!
    ಮಳೆಗಾಲದ ಪ್ರಾರಂಭ ಎಂದರೆ ಮಾವು, ಹಲಸುಗಳ ಕಾಲದ ಅಂತ್ಯ. ಹಾಗಾಗಿ ಕೊನೆಯಲ್ಲಿ ಆಹಾರ ಪದಾರ್ಥಗಳಲ್ಲಿ ಅವುಗಳ ಬಳಕೆ ಅತೀ ಹೆಚ್ಚು. ಬೆಳಿಗ್ಗೆ ತಿಂಡಿಗೂ ಮಾವಿನ ರಸಾಯನ, ಮಧ್ಯಾಹ್ನ ಉಪ್ಪಿನಕಾಯಿ, ಹುಳಿಗೊಜ್ಜು, ಅಪ್ಪೆಹುಳಿ, ಹಲಸಿನಕಾಯಿಯ ಸಾರು, ಹಪ್ಪಳ...ಮಳೆ ಇನ್ನೂ ಹೆಚ್ಚಾಗಲು ಕುಡಿಯಲು ಬಿಸಿ ಬಿಸಿಯಾಗಿ ಮೆಣಸಿನ ಕಾಳಿನ ಸಾರು..! ಸಂಜೆ ಮತ್ತೆ ಹಲಸಿನಹಣ್ಣಿನ ದೋಸೆ... 
  ಇಷ್ಟೆಲ್ಲಾ ಸಾಲದು ಎಂದು ಪೂರ್ತಿ ಮಳೆಗಾಲಕ್ಕೆ ಸಾಲುವಂತೆ ಮಲೆನಾಡಿನ ಎಲ್ಲಾ ಮನೆಗಳಲ್ಲೂ ಮಾವಿನ ಹುಳಿಯನ್ನು, ಉಪ್ಪಿನಕಾಯಿಯನ್ನು, ಹಲಸಿನಕಾಯಿಯ ಸೊಳೆ, ಚಿಪ್ಸ್, ಹಪ್ಪಳಗಳನ್ನು ಶೇಖರಿಸಿಕೊಟ್ಟುಕೊಳ್ಳುತ್ತಾರೆ. ವರ್ಷವಿಡೀ ಬಂಗಾರಕ್ಕಿಂತ ಹೆಚ್ಚಾಗಿ ಇವುಗಳನ್ನು  ಜೋಪಾನ ಮಾಡುವುದು ಒಂದು ಜವಾಬ್ದಾರಿ...!

ಬಸ್ಸಿನೊಳಗೆ ಛತ್ರಿ..!
ಒಮ್ಮೆ ಗೆಳತಿಯ ಮನೆಗೆ ಹೋಗಿದ್ದೆ. ಅದೆಂತಹ ಮಳೆ ಎಂದರೆ ರಸ್ತೆಗಳೆಲ್ಲ ತುಂಬಿ ಹರಿಯುತ್ತಿತ್ತು. ಅವರದ್ದು ಕೂಡು ಕುಟುಂಬ. ಹೊಲಕ್ಕೆ ಹೋಗಿಬಂದವರು ಕಂಬಳಿ ಕೊಪ್ಪೆ ಒಣಗಿಸಲು ಒಂದು ಕೋಣೆ ಇತ್ತು. ರಾತ್ರಿ ಎಲ್ಲರೂ  ಅಲ್ಲಿ ಕುಳಿತು ಹರಟುತ್ತಿದ್ದೆವು. ಹಲಸಿನಬೀಜ ಸುಟ್ಟು ತಿನ್ನುವಾಗ 'ಠುಸ್ ಅಂತು.. ಡಬ್ ಅಂತು' ಎಂಬ ಕಾಗಕ್ಕ ಗುಬ್ಬಕ್ಕನ ಕಥೆ ನೆನಪಾಗುತ್ತಿತ್ತು. ಜೊತೆಗೆ ಕಳವಾರ, ಚೌಕಗಳು ಇದ್ದವು..! 
 ಮಾರನೇ ದಿನ ಮನೆಗೆ ಹೊರಡಲು ಬಸ್ ಇರಬೇಕಲ್ಲ.. ನಮ್ಮ ಮನೆಯಲ್ಲೇ ಉಳಿದುಕೊ ಎಂದಳು. ಸರಿ.. ಮನೆಗೆ ತಿಳಿಸೋಣ ಎಂದರೆ ಮೊಬೈಲ್ ನೆಟ್ವರ್ಕ್ ಇಲ್ಲ. ಅವರ ಮನೆಯ ಲ್ಯಾಂಡ್ಲೈನ್ ಆಗಲೇ ಜೀವ ಬಿಟ್ಟಿತ್ತು..! 
ಅಂತೂ ಎರಡು ದಿನಗಳ ನಂತರ ಹಸಿರು ತೋರಣದ ಬೀದಿಯಲ್ಲಿ ಕೆಂಪು ಬಸ್ಸು ನಾಚುತ್ತ, ಓಲಾಡುತ್ತಾ ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಬಂತು. ಒಳ್ಳೆ ಮದುವಣಗಿತ್ತಿಯ ಥರ ಬರ್ತಾ ಇದೆ ಎಂದೆ ನಾನು. ಒಮ್ಮೆ ಹತ್ತಿ ನೋಡು ಆಮೇಲೆ ಮದುವಣಗಿತ್ತಿ ಹೇಗಿದ್ದಾಳೆ ಅಂತಾ ಗೊತ್ತಾಗತ್ತೆ ಎಂದು ನಕ್ಕಿದ್ದಳು ಅವಳು. 
ಆಮೇಲೆ ಗೊತ್ತಾಗಿದ್ದು ಇದು ಕೊನೆಯ ಉಸಿರು ಎಳೆಯಲಿರುವ ಮುದುಕಿಯ ಸ್ಥಿತಿಯಲ್ಲಿದೆ ಎಂದು..! 
ಬಸ್ಸಿನೊಳಗೂ ಛತ್ರಿ ಬಿಚ್ಚುವ ಪರಿಸ್ಥಿತಿ. ಅವಳು ದಿನವೂ ಅದೇ ಬಸ್ಸಿನಲ್ಲಿ ಓಡಾಡುವವಳು.ಬಸ್ಸಿನಲ್ಲಿ ಶಾಲೆಗೆ ಬಂದರೂ ಇವಳ್ಯಾಕೆ ಒದ್ದೆಯಾಗಿರುತ್ತಾಳೆ ಎಂದು ಅವತ್ತು ಗೊತ್ತಾಗಿದ್ದು ನನಗೆ..!

ಡ್ಯಾಮೆಜ್ಡ್ ಗಣಪ.. ಡ್ಯಾಮೇಜ್ಡ್ ಸೊಂಟ..!
 ಸಾಮಾನ್ಯವಾಗಿ ನಾಗರ ಪಂಚಮಿ, ಗಣೇಶ ಚತುರ್ಥಿಗೆಲ್ಲ ಮಳೆಗಾಲವೇ. ಪ್ರತಿವರ್ಷ ಗಣಪನ ಮುಳುಗಿಸಲು ಅಜ್ಜಿಮನೆಗೆ ಹೋಗುವ ರೂಢಿ. ಎಲ್ಲಾ ಮಕ್ಕಳೂ ಒಟ್ಟಿಗೆ ಸೇರಿದರೆ ಯಾವ ಪಟಾಕಿಯ ಅವಶ್ಯಕತೆಯೂ ಇರುತ್ತಿರಲಿಲ್ಲ. 
   ಗಂಡಸರೆಲ್ಲ ಜಗುಲಿಯಲ್ಲಿ ಹಾಸಿದ ಕಂಬಳಿಯ ಮೇಲೆ ಕುಳಿತು, ಬಿಸಿ ಬಿಸಿ ಚಹಾ ಹೀರುತ್ತಾ, ಹೊರಗೆ ಸುರಿಯುತ್ತಿರುವ ಮಳೆಯನ್ನು ದಿಟ್ಟಿಸುತ್ತಾ, "ಭಾವ, ಈ ಸಲಿ ಮಳೆ ಎಂತೋ ಮಾಡ್ತಕೋ.. ಕೊಳೆ ಔಷಧಿ ಹೊಡ್ಸಕಾಯ್ತು ಮಾರಾಯ.. ಈ ಮಳೆ ಕೊಡ್ತಿಲ್ಯಕೋ.. ಮಳೆ ಬಿಟ್ರುವಾ ಕೊನೆಗೌಡ ಬರಕಾತಲಾ ಭಾವಾ.." ಎನ್ನುತ್ತಿದ್ದರೆ, ಹಿತ್ತಲಲ್ಲಿ ಹೆಂಗಸರು, "ಅತ್ಗೆ ಯಮ್ಮನೇಲಿ ಈ ಬಣ್ಣದ್ ಡೇರೆ ಇಲ್ಯೆ.. ಒಂದು ಹಿಳ್ಳು ಕೊಡು ಅಕಾ.." ಎನ್ನುತ್ತಿರುತ್ತಾರೆ. 
  ನಾವು ಮಾತ್ರ.. ಗಣಪನ ಮುಳುಗಿಸಿದ ನಂತರ ಹಾವು ನಂಗೆ, ಇಲಿ ನಂಗೆ ಎಂದು ಹಿಸೆ ಪಂಚಾಯ್ತಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುತ್ತಿದ್ದೆವು..!
ಹೀಗೇ ಒಂದು ಜೋರು ಮಳೆಗಾಲದಲ್ಲಿ ತೋಟದ ಬಾವಿಯಲ್ಲಿ ಗಣಪನನ್ನು ಮುಳುಗಿಸಲು ಹೋದಾಗ ಮಾವ ಜಾರಿ ಬಿದ್ದರು. ರಾತ್ರಿ, ಧಾರಾಕಾರವಾಗಿ ಸುರಿಯುವ ಮಳೆ,  ಜಾರುವ ಮಣ್ಣು..  ಗಣಪನಿಗೆ ಜಾಸ್ತಿ ಏಟಾಗಲಿಲ್ಲ. ಹೊಟ್ಟೆಗೆ ಬಿಗಿದ ಹಾವು ಮಾತ್ರ ಪುಡಿಯಾಗಿತ್ತು. ಪಾಪ ಮಾವ, ಸೊಂಟಕ್ಕೆ ಪೆಟ್ಟಾಗಿತ್ತು. ಮಾವನ ಸೊಂಟ ಡ್ಯಾಮೇಜ್ ಆಯಿತಲ್ಲ ಎಂಬುದಕ್ಕಿಂತ ನಮ್ಮ ಹಿಸೆಯ ಪ್ರಕಾರ ಬರಬೇಕಿದ್ದ ಹಾವು ತಪ್ಪಿತಲ್ಲ ಎಂಬ ಸಮಸ್ಯೆ ನಮ್ಮದು..!


ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..
ಈ ಹಾಡನ್ನು ಕೇಳದವರಿಲ್ಲ. ಕೇಳಿದ ನಂತರ ಜೋಗಕ್ಕೆ ಬರದವರಿಲ್ಲ. ಅಪ್ಪಿ ತಪ್ಪಿ ಯಾರಾದರೂ ಬರದಿದ್ದರೆ, ಭಟ್ಟರ ಮುಂಗಾರುಮಳೆಯಲ್ಲಿ ಜೋಗದ ಸೌಂದರ್ಯವ ಕಂಡು ಬೆರಗಾಗಿರುತ್ತಾರೆ. 
   ನಮ್ಮದು ಹಾಗಲ್ಲ. ಪ್ರತಿ ಮಳೆಗಾಲಕ್ಕೆ ಜೋಗಕ್ಕೊಮ್ಮೆ ಭೇಟಿ ನೀಡಲೇಬೇಕು. ಒಮ್ಮೊಮ್ಮೆ ಹೊಗೆಯಿಂದ ಎಲ್ಲಾ ಕವಿದಿರುತ್ತದೆ. ಕೊನೆಪಕ್ಷ ಬಿಸಿ ಬಿಸಿ ಜೋಳವನ್ನಾದರೂ ಅಲ್ಲಿ ನಿಂತು ಮಳೆಯ ಚಳಿಯಲ್ಲಿ ನಿಂತು ಸವಿಯದಿದ್ದರೆ.. ಜೀವನದಲ್ಲಿ ಮಹತ್ವದ ಕ್ಷಣಗಳನ್ನು ಕಳೆದುಕೊಂಡಿದ್ದೇ ಸತ್ಯ. ಮಳೆಗಾಲದಲ್ಲಂತೂ ನಾಲ್ಕು ಮುಖ್ಯ ಧಾರೆಗಳಾದ ರಾಜ, ರಾಣಿ, ರೋರರ್, ರಾಕೆಟ್ ಗೆ ಮಕ್ಕಳು, ಮೊಮ್ಮಕ್ಕಳು ಮರಿಮಕ್ಕಳು ಎಲ್ಲಾ ಬಂದು ಹಬ್ಬವೋ ಹಬ್ಬ..!
  ಹಾಗಂತ ಅದೊಂದೇ ಜಲಪಾತವಲ್ಲ. ಉತ್ತರ ಕನ್ನಡ ಒಂದು ರೀತಿಯಲ್ಲಿ ಜಲಪಾತಗಳ ಬೀಡು. ಸಣ್ಣ ಹೊಳೆಯೂ ತನ್ನ ತಿರುವಲ್ಲಿ ಒಂದು ಪುಟ್ಟ ಧಾರೆಯನ್ನು ಸೃಷ್ಟಿಸುತ್ತದೆ. ಉಂಚಳ್ಳಿ, ಬುರುಡೆ, ವಿಭೂತಿ, ನಿಪ್ಲಿ, ಮಾಗೋಡು, ಸಾತೋಡಿ,ಶಿವಗಂಗಾ, ಬೆಣ್ಣೆಹೊಳೆ, ಅಪ್ಸರಕೊಂಡ, ಮತ್ತಿಘಟ್ಟ...ಇವುಗಳೆಲ್ಲ ಭೇಟಿ ಮಾಡಲೇ ಬೇಕಾದ ತಾಣಗಳು. ಸುತ್ತ ಹಸಿರು, ಅಲ್ಲಲ್ಲಿ ಬಳುಕುತ್ತ   ಕಡಲ ಸೇರುವ ಬಯಕೆಯಲ್ಲಿ ಹರಿಯುವ ಕಾಳಿ, ಅಘನಾಶಿನಿ, ಶರಾವತಿಯರು, ಅವರನ್ನು ಭೇಟಿಯಾಗಲು ಓಡುತ್ತಿರುವ ಹೊಳೆ, ತೊರೆಗಳು ಆಗಾಗ ಧುಮುಕಿ ಸೃಷ್ಟಿಸಿದ,ಹೆಸರೇ ಕೇಳರಿಯದ ಜಲಪಾತಗಳಿಗೆ ಲೆಕ್ಕವೇ ಇಲ್ಲವೇನೋ..

ಈ ನೀರನ್ನು,  ಬೆಟ್ಟಗಳನ್ನು,  ಹಸಿರನ್ನು, ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ.. 
ಮಳೆಗಾಲದ ಸಾವಿರ ನೆನಪುಗಳಲ್ಲಿ ನೆನೆದು ತಂಪಾಗೋಣ..!

ಶಾಲೆಮನೆ

ಅಂದು ಹೆಗಲಿಗೆ ಚೀಲ ನೇತಾಡಿಸಿಕೊಂಡು ಹೊರಟರೂ, ಏನೋ ಖುಷಿ. ಬ್ಯಾಗಿನ ಒಳಗೆ ಪುಸ್ತಕವಲ್ಲ. ಇದ್ದಿದ್ದು ತಿಂಡಿಡಬ್ಬ. ಶಾಲೆಯಲ್ಲಿ ಮುಂಚಿನ ದಿನ ಹೇಳಿದ್ದರು. ನಮ್ಮನ್ನೆಲ್ಲ ಪಿಕ್ನಿಕ್ ಗೆ ಕರೆದುಕೊಂಡು ಹೋಗುತ್ತೇವೆ ಎಂದು. ಎಲ್ಲಿ ಎಂದು ಗೊತ್ತಿರಲಿಲ್ಲ. ಆದರೂ ಒಂದು ದಿನ ನಾಲ್ಕು ಗೋಡೆಗಳ ಮಧ್ಯವಿರದೆ ಹೊರಗಡೆ ಸುತ್ತುವ ಅವಕಾಶ ಸಿಕ್ಕಿತಲ್ಲ ಎಂಬ ಖುಷಿ ನಮಗೆ. 
ಎಲ್ಲರೂ ಬಂದ ನಂತರ ಅಕ್ಕೋರು (ಟೀಚರ್ ಎನ್ನುವುದಕ್ಕಿಂತ ಅಕ್ಕೋರು ಎಂದರೆ ಪ್ರೀತಿ ಜಾಸ್ತಿ !) ಎಲ್ಲರನ್ನೂ ಸಾಲಾಗಿ ನಿಲ್ಲಿಸಿದರು. ಹುಡುಗಿಯರು ಮುಂದೆ, ಹುಡುಗರೆಲ್ಲ ಹಿಂದೆ. 

ಕಪಿ ಸೈನ್ಯವನ್ನು ಅಷ್ಟು ಸುಲಭಕ್ಕೆ ಸುಧಾರಿಸಲು ಸಾಧ್ಯವಿಲ್ಲ. ಅದರಲ್ಲೂ ಏಳನೇ ತರಗತಿ. ನಾವೇ ಸೀನಿಯರ್ಸ್ ಎಂಬ ಅಹಂ ಬೇರೆ.. ! ಹಾಗಾಗಿ ಮೂವರು ಶಿಕ್ಷಕರು ಹೊರಟಿದ್ದರು.

ಹೊರಟ ನಂತರ ನಾನೂ ಯೋಚನೆ ಮಾಡಿದೆ.
"ಅಯ್ಯೋ ಇದೇನು?  ನಮ್ಮ ಮನೆಯ ಹಾದಿಯಲ್ಲಿ ಹೊರಟಿದ್ದಾರಲ್ಲ.. ಎಲ್ಲಿ ಕರೆದುಕೊಂಡು ಹೋಗಬಹುದು?"  ಕಾಲಿಗಿಂತ ವೇಗವಾಗಿ ತಲೆ ಓಡಿತ್ತು. 

ಓಹೋ.. ಇವರು ಕಾಳಮ್ಮನ ಗುಡಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹೇಗಾದರೂ ದಾರಿ ತಿರುಗಿಸಬೇಕಲ್ಲ.. 
ಕಾಳಮ್ಮನ ಗುಡಿಗಿಂತ ಮೊದಲು ನಮ್ಮ ಮನೆಗೆ ಹೋಗುವ ದಾರಿ ಸಿಗುತ್ತದೆ. ಆಗ ಟಾರ್ ರಸ್ತೆಯೂ ಆಗಿರಲಿಲ್ಲ. ಮಳೆಗಾಲದಲ್ಲಿ ಕೊರೆದು ಹೋದ ಮಣ್ಣಿಗೆ ಮತ್ತೊಂದಷ್ಟು ಗೊಚ್ಚು  ಮಣ್ಣು ಹಾಕಿದ್ದರು. ಆ ಕೆಂಪನೆಯ ರಸ್ತೆ ಕಾಣಿಸುತ್ತಿತ್ತು ನನಗೆ. ಆದರೆ ಆ ಕಡೆ ಎಲ್ಲರನ್ನೂ ತಿರುಗಿಸುವುದು ಹೇಗೆ? 
 ಸೀದಾ ಹೋಗಿ, "ಅಕ್ಕೋರೆ ನಮ್ಮನೆಗೆ ಹೋಗೋಣ"ಎಂದು ದುಂಬಾಲು ಬಿದ್ದೆ. "ಇಲ್ಲಾ, ದೇವಸ್ಥಾನಕ್ಕೆ ಹೋಗೋಣ" ಎಂದಾಗ "ನಮ್ಮ ಮನೆ ಇನ್ನೂ ಹತ್ತಿರ. ಎಲ್ಲರೂ ಆಡಬಹುದು. ಎಲ್ಲರಿಗೂ ಜಾಗ ಇದೆ.." ಇನ್ನೂ ಏನೇನು ಹೇಳಿದೆನೋ.. ಒಟ್ಟಿನಲ್ಲಿ ಕೊನೆಗೂ ನನ್ನ ಹಠಕ್ಕೆ ಮಣಿದರು. 

ಅರೆ.. ಇದೇನು ಇಷ್ಟೊಂದು ಗದ್ದಲ.. ಎಂದು ಮನೆಯವರೆಲ್ಲ ಹೊರಬಂದು ನಿಂತರು. ಆಕಾಶ ನೀಲಿ ಬಣ್ಣದ ಅಂಗಿ, ಕಪ್ಪು ನೀಲಿ ಬಣ್ಣದ ಚಡ್ಡಿ, ಲಂಗಗಳನ್ನು ಧರಿಸಿದ ಮಕ್ಕಳ ರೂಪದಲ್ಲಿದ್ದ ವಾನರ ಸೈನ್ಯ..ನಗುತ್ತಾ  ಎಲ್ಲರ ಮುಂದೆ ಬರುತ್ತಿದ್ದ ನನ್ನ ಕಂಡಾಕ್ಷಣ ಎಲ್ಲರಿಗೂ ಅರ್ಥವಾಗಿತ್ತು.. ಇದು ನನ್ನದೇ ಕಿತಾಪತಿ ಎಂದು.. !

ನನಗೆ ಮೊದಲಿನಿಂದಲೂ ಗೆಳೆಯರೊಡನೆ ಸುತ್ತುವುದು, ಅವರನ್ನು ನನ್ನ ಮನೆಗೆ ಕರೆತರುವುದು ಬಹಳ ಇಷ್ಟ. ಎರಡು -ಮೂರು ಜನ ಹಾಗಿರಲಿ, ಒಂದೇ ಬಾರಿಗೆ ಎಪ್ಪತ್ತು ಜನರನ್ನು ಕರೆತಂದಿದ್ದೆ..  

ಐದೇ ನಿಮಿಷದಲ್ಲಿ ಆಕ್ರಮಣವಾಗಿತ್ತು.. ಒಂದಷ್ಟು ಮಕ್ಕಳು ಚಿಕ್ಕು ಮರ, ಮಾವಿನ ಮರ ಹತ್ತಿದರೆ, ಸ್ವಲ್ಪ ಜನ ಕಣ್ಣಾಮುಚ್ಚಾಲೆ, ಮುಟ್ಟಾಟ ಆಡುತ್ತಿದ್ದರು. ಹುಡುಗರು ಗದ್ದೆಯಲ್ಲಿ  ಹೆಡೆಪೆಂಟೆ ಹಿಡಿದು ಕ್ರಿಕೆಟ್ ಆಡುತ್ತಿದ್ದರು. 

ಇದನ್ನೆಲ್ಲಾ ನಮ್ಮ ಶಿಕ್ಷಕರು ಅಪ್ಪ ಅಮ್ಮ, ಅಜ್ಜ ಅಜ್ಜಿಯೊಡನೆ ನಿಂತು ಮೂಕರಾಗಿ ನೋಡುತ್ತಿದ್ದರು. "ಇವರನ್ನು ಇತ್ತ ಕರೆದುಕೊಂಡು ಬರುತ್ತಲೇ ಇರಲಿಲ್ಲ" ಎಂದು ನನ್ನ ಸರ್ ಹೇಳಿದರೆ, "ಏನೂ ಪರವಾಗಿಲ್ಲ ಎಲ್ಲಾ ಖುಷಿಯಾಗಿ ಆಡಲಿ" ಎಂದು ಹೇಳಿ ಅಪ್ಪ ತಾವೂ ನಮ್ಮ ಮಧ್ಯ ಆಟಕ್ಕೆ ಸೇರಿಕೊಂಡರು. ಬಿಸಿಲೇರುತ್ತಿದ್ದಂತೆ, ತಂಪಾದ ಮಸಾಲಾ  ಮಜ್ಜಿಗೆ ಎಲ್ಲರಿಗೂ ಒಂದೊಂದು ಲೋಟ ಸರಬರಾಜಾಯಿತು. ಇಂದಿಗೂ ನನ್ನ ಗೆಳೆಯರು "ಅವತ್ತು ನಿಮ್ಮಮ್ಮ ಮಾಡಿಕೊಟ್ಟ ಖಾರ ಮಜ್ಜಿಗೆ ಸೂಪರಾಗಿತ್ತು ಕಣೇ.." ಎಂದಾಗ "ಮತ್ತೊಮ್ಮೆ ಬನ್ನಿ  ಮಜ್ಜಿಗೆ ಕುಡಿಯಲು.." ಎನ್ನುತ್ತೇನೆ. 

ಕನ್ನಡ ಶಾಲೆಯ ಅದೆಷ್ಟು ನೆನಪುಗಳು ಇನ್ನೂ ಹಸಿರಾಗಿಯೇ ಇವೆ. ನಾವಾಡಿದ ನಾಟಕಗಳು, ಪ್ರತಿಭಾ ಕಾರಂಜಿಯಲ್ಲಿ ಹಾಡು, ನೃತ್ಯ, ಶಾಲೆಯ ಸುವರ್ಣ ಮಹೋತ್ಸವದ ನೆನಪುಗಳ ಬಣ್ಣ ಇನ್ನೂ ಮಾಸಿಲ್ಲ. 


ನಾಲ್ಕುನೂರು ಮಕ್ಕಳಿರುವ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಗೆ ಮುಂದೆನಿಂತು ಹಾಡುವವರು ಐದೇ ಮಂದಿ. ಆ ಐದರಲ್ಲಿ ನಾನೂ ಒಬ್ಬಳಾದಾಗ ಆದ ಖುಷಿ, ಶಾಲೆಯ ಮಂತ್ರಿ ಮಂಡಲದಲ್ಲಿದ್ದಾಗ ಜವಾಬ್ದಾರಿ!, ತರಗತಿಯ ಮುಖ್ಯಸ್ಥೆ ಆದಾಗಿನ ಸೊಕ್ಕು..! ಇವೆಲ್ಲವುಗಳ ಮಿಶ್ರಣದ ಏಳು ವರ್ಷ - ಜೀವನದ ಅದ್ಭುತ ಕ್ಷಣಗಳು. 

ಅಪ್ಪನ ಜೇಬಿನಿಂದ ಎರಡು ದಿನಕ್ಕೊಮ್ಮೆ ಕಳ್ಳತನವಾಗುವ ಐದು ರೂಪಾಯಿ, ಶಾಲೆಯ ಪಕ್ಕದ ಅಂಗಡಿಯಿಂದ ಪೆಪ್ಸಿಯಾಗಿ ಕೈ ಸೇರುತ್ತಿತ್ತು. ಮಾರನೇ ದಿನ ಪೆಪ್ಸಿ ಮೂಗಿನಲ್ಲಿ ಕರಗಿ ಅಮ್ಮನ ಕೈಲಿ ಸಿಕ್ಕಿಹಾಕಿಕೊಂಡು ಮಂಗಳಾರತಿಯೂ ಆಗುತ್ತಿತ್ತು.
 

ಶಾಲೆಯ ಹಿಂದಿನ ಮರದ  ಬಿಂಬಲಕಾಯಿ ಕೊಯ್ಯುವುದರಿಂದ ಹಿಡಿದು, ಚರ್ಚಿನ ಆವರಣದಲ್ಲಿ ನೆಲ್ಲಿಕಾಯಿಗೆ ಕನ್ನ ಹಾಕುವಾಗ ಸಿಸ್ಟರ್ ಬಳಿ ಸಿಕ್ಕಿಬೀಳುವ ವರೆಗೆ;  ಅಕ್ಕೋರ ಬಳಿ ಮರದ ಸ್ಕೇಲ್ ಇಂದ ಹೊಡೆತ ತಿಂದರೂ ಮನೆಯಲ್ಲಿ ಬೆಳೆದ ಗುಲಾಬಿ ಹೂವನ್ನು ಪ್ರೀತಿಯಿಂದ ಕೊಡುವವರೆಗೆ;  ಗೆಳೆಯರೊಂದಿಗೆ ಜಗಳ ಮಾಡಿ ವಾರಗಳ ಕಾಲ ಮಾತು ಬಿಟ್ಟರೂ, ಕೊನೆಗೆ ಅವರ ಮನೆಗೇ ಹೋಗಿ ಊಟ ಮಾಡುವವರೆಗೆ;  ಸುಳ್ಳು-ಸುಳ್ಳೇ ಬರುವ ಹೊಟ್ಟೆ ನೋವಿನಿಂದ ಹಿಡಿದು, ಆಡುವಾಗ ಬಿದ್ದು ಮೊಣಕಾಲು ಕೆತ್ತಿದ ಕಲೆಯವರೆಗೆ ಎಲ್ಲವೂ ಕನ್ನಡ ಶಾಲೆಯ ಕತೆಯನ್ನೇ ಹೇಳುತ್ತವೆ..!

ಪಾಳಿಯ ಮೇಲೆ ದಿನವೂ ಬೆಳಿಗ್ಗೆ ಪಂಚಾಂಗ,ನುಡಿಮುತ್ತು, ದಿನಪತ್ರಿಕೆಯ ಮುಖ್ಯಾಂಶ ಓದುವುದು, ಮೈದಾನದ ಕಸ ಆರಿಸುವುದು,ಗಿಡಗಳಿಗೆ ಪಾತಿ ಮಾಡುವುದು,ನೀರು ಹಾಕುವುದು,  ಶೌಚಾಲಯ ತೊಳೆಯುವುದು, ಬಾವಿಯಿಂದ ನೀರೆತ್ತುವುದು, ಮಧ್ಯಾಹ್ನದ ಊಟಕ್ಕೆ ಬಡಿಸುವುದು.. ಎಲ್ಲವೂ ನಮ್ಮ ಕಲಿಕೆಯ ಭಾಗವಾಗಿತ್ತು. 

ಕ್ಲಾಸು, ಟ್ಯೂಷನ್ಸ್, ಹೋಮ್ವರ್ಕ್, ಎಕ್ಸಾಮ್, ಮಾರ್ಕ್ಸ್ ಎಲ್ಲವೂ ನಮಗೂ ಇತ್ತು. ಆದರೆ ಇಷ್ಟು ನಾಗಾಲೋಟ ಇರಲಿಲ್ಲ. ಅಂಕ ಮಾತ್ರ ಜೀವನವಲ್ಲ ಎಂಬುದನ್ನು ಪಾಠ ಕಲಿಸುವ ಗುರುಗಳೇ ಹೇಳುತ್ತಿದ್ದರು. ಒಂದು ಹೊಡೆತ ಬಿದ್ದರೆ, "ಇನ್ನೊಂದ್ ಹಾಕಿ ಬುದ್ಧಿ ಹೇಳಿ ಸಾರ್.." ಎನ್ನುವವರಿದ್ದರೆ ಹೊರತು, "ನನ್ಮಗನಿಗೆ ಹೊಡೆಯೋಕೆ ನೀವ್ಯಾರು? " ಎನ್ನುವ ಪಾಲಕನಿರಲಿಲ್ಲ. 

ಅಪ್ಪ-ಅಮ್ಮ ನಾಟಕವೆಂದು ಬೇರೆ ಊರಿಗೆ ಹೋದಾಗ, ಅಕ್ಕೊರ ಮನೆಯಲ್ಲೇ ರಾತ್ರಿ ಊಟ ಮಾಡಿ, 
ನಾನು ಮನೆಗೆ ಹೋಗಬೇಕೆಂದು ಹಠ ಮಾಡಿದಾಗ ಜೋಕಾಲಿಯ ಮೇಲೆ ತೂಗಿ ಮಲಗಿಸಿದ ಅಕ್ಕೋರು ಆ ಕ್ಷಣಕ್ಕೆ ಅಕ್ಕರೆ ತೋರುವ ಅಮ್ಮನೂ ಆದರು. 
ಪೇಟೆಯಲ್ಲಿ ಸಿಕ್ಕಾಗ, " ಅರೆ ಪಲ್ಲವಿ, ಇಷ್ಟೆಲ್ಲಾ ದೊಡ್ಡಕಾಗೋದ್ಯನೇ? ಇನ್ನೂ ಎರ್ಡು ಜುಟ್ಟವೇ ಕಾಣಿಸ್ತು.." ಎಂದಾಗಿನ ಪ್ರೀತಿಗೆ ಬೆಲೆಕಟ್ಟಲಾದೀತೇ?
 ಒಮ್ಮೊಮ್ಮೆ ಗೆಳೆಯರ ಹೆಸರನ್ನು ನೆನಪಿಸಿಕೊಂಡು ಅವನೆಲ್ಲಿದ್ದಾನೆ ಈಗ?  ಅವಳೇನು ಮಾಡುತ್ತಿದ್ದಾಳೆ?  ಎಂದಾಗ ನಾನೂ ಹಳೆಯ ನೆನಪುಗಳಲ್ಲಿ ಕಳೆದು ಹೋಗುತ್ತೇನೆ.. ಅವರಿಗೆ ನಾವೆಲ್ಲ ಸೇರಿ ಕೊಟ್ಟ ಕಾಟಗಳನ್ನು ನೆನೆದು ಬೇಸರಿಸಿಕೊಳ್ಳುತ್ತೇನೆ. 

ನನ್ನಂತಹ ಅದೆಷ್ಟು ಸಹಸ್ರ ಮಕ್ಕಳ ನೆನಪುಗಳು ಈ ಶಾಲೆಯ ಸೂರಿನಡಿಯಲ್ಲಿವೆಯೋ..?!
ಶಾಲೆ ಎಂದರೆ ಕೇವಲ 'ಸ್ಕೂಲ್' ಎಂಬ ನಾಮಫಲಕವನ್ನು ಹೊತ್ತ ಕಟ್ಟಡವಲ್ಲ. 
ಮನೆಗೂ ಶಾಲೆಗೂ ವ್ಯತ್ಯಾಸವೇ ಇರದಷ್ಟು ಆಪ್ತವಾದ 'ಶಾಲೆಮನೆ'.

ವ್ಯಾಪ್ತಿ ಪ್ರದೇಶದಿಂದ ಹೊರಗೆ...

ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಈಗಿನಷ್ಟು ಸುಲಲಿತವಾಗಿ ಆಗ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿ ಅಷ್ಟೊಂದು ನೆಟ್ವರ್ಕ್ ಸಿಗುತ್ತಿರಲಿಲ್ಲ.  ಯಾವುದೊ ಮೆಟ್ಟಿಲು ಹತ್ತಿ, ಕಾಲು ಎತ್ತರಿಸಿ ನಿಂತರೆ ಬಿಎಸ್ಸೆನ್ನೆಲ್ ಎರಡು ಕಡ್ಡಿ ಸಿಗ್ನಲ್ ತೋರಿಸುತ್ತಿತ್ತು. ಬಲಬದಿಯ ಮೂರನೇ ಗದ್ದೆಯ ಎರಡನೇ ಹಾಳಿಯ ಮೇಲೆ ನಿಂತರೆ ಏರ್ಟೆಲ್ ಸಿಗ್ನಲ್ ಬರುತ್ತಿತ್ತು.'ನೆಟವರ್ಕ್' ಬೆಟ್ಟ ಹತ್ತಿ 'ಟವರ್' ಮರದ ಕೆಳಗೆ ಬಂದರೆ, ಯಾವುದಾದರೊಂದು ಸಿಗ್ನಲ್ ಹಿಡಿಯಬಹುದಿತ್ತು! ಇಂಟರ್ನೆಟ್ ಬೇಕೆಂದರೆ ರಸ್ತೆಯ ಮೋರಿ ಕಟ್ಟೆಯ ಬಳಿಯೇ ಹೋಗಬೇಕಿತ್ತು. ಜಿಯೋ ಜಾಯಮಾನ ಇನ್ನೂ ಪ್ರಾರಂಭವಾಗಿರಲಿಲ್ಲವಲ್ಲ... !   

          ಮನೆಯಲ್ಲಿ ಆರಾಮವಾಗಿ ಕುಳಿತು ಹರಟುತ್ತಿದ್ದೆ. ಹಾಗೇ ಸಂಜೆ ಮೊಬೈಲ್ ಹಿಡಿದು ಗದ್ದೆಯ ಬಳಿ ನಡೆಯುತ್ತಿದ್ದಂತೆ ಒಂದರ ಹಿಂದೊಂದು ಮೆಸೇಜ್ ಬರುತ್ತಿದ್ದವು.

ಎಂದೂ ಮಾತನಾಡದವರೂ ಸಹ ಕಾಲ್ ಮಾಡಿದ್ದು ಆಶ್ಚರ್ಯವೆನಿಸಿತ್ತು ನನಗೆ !   
  "ಗೀತಾಳಿಗೆ ಏನಾಯ್ತು?", 
"ಅಯ್ಯೋ  ಪಾಪ ! ಇಷ್ಟು ಬೇಗ ಅವಳಿಗೆ ಹೀಗಾಗಬಾರದಿತ್ತು", 
"ಅವಳ ತಂದೆ - ತಾಯಿಯ ಪರಿಸ್ಥಿತಿಯನ್ನ ನೆನೆಸಿಕೊಳ್ಳೋಕೂ ಸಾಧ್ಯವಿಲ್ಲ ".......   
 ಇಂತಹ ಮೆಸೇಜ್ ಗಳನ್ನು ಓದಿ ತಲೆ ಕೆಟ್ಟು ಹೋಗಿತ್ತು ನನಗೆ.  'ಗೀತಾ' ನನ್ನ ಗೆಳತಿ. ಅವಳಿಗೇನಾಗಿದೆ?  ಮನೆಯಲ್ಲಿ ಆರಾಮವಾಗಿ ತಿಂದು -ಉಂಡು, ಓಡಾಡಿಕೊಂಡಿದ್ದಾಳೆ. ಯಾಕೆ ನನಗೆ ಇಂತಹ ಸಂದೇಶಗಳನ್ನು ಕಳಿಸುತ್ತಿದ್ದಾರೆ?  ಫೂಲ್ ಮಾಡಲು ಇದು ಏಪ್ರಿಲ್ ತಿಂಗಳೂ ಅಲ್ಲ..!

ಅದೂ ಇಷ್ಟೊಂದು ಜನ..ಸಾಧ್ಯವೇ ಇಲ್ಲ ?!!  ಅದೇನೇ ಇರಲಿ. ಅವಳ ಬಳಿ ಒಮ್ಮೆ ಮಾತನಾಡೋಣ ಎಂದು ಕರೆ ಮಾಡಿದರೆ, "ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ" ಎಂದಿತು ಹೆಣ್ಣು ದನಿ ! ಅಂತೂ ಅವರ ಮನೆಯ ದೂರವಾಣಿಗೆ ಕರೆ ಮಾಡಿ, ಎಲ್ಲಾ ಹೀಗೆ ಹೇಳುತ್ತಿದ್ದಾರೆ. ನನಗೆ ಏನಾಗುತ್ತಿದ್ದೆ ಎಂದೇ ತಿಳಿಯುತ್ತಿಲ್ಲ.

ಸ್ವಲ್ಪ ವಿಚಾರಿಸು ಎಂದು ಹೇಳಿದ್ದಾಯ್ತು.     ಹತ್ತು ನಿಮಿಷಗಳ ನಂತರ ಅವಳೇ ಮೊಬೈಲ್ನಿಂದ ವಾಪಸ್ ಕರೆ ಮಾಡಿದಳು.  " ಅಲ್ವೇ, ಕಾಲ್ ಮಾಡಿದಾಗ ನೆಟವರ್ಕ್ ಸಿಕ್ಕಲಿಲ್ಲ ಅಂದ್ರೆ, ಸತ್ತೇ ಹೋಗಿದೀನಿ ಅಂತ ಅಂದ್ಕೊಳೋದಾ? " ಎಂದು  ಜೋರಾಗಿ ನಗುತ್ತಿದ್ದಾಳೆ.ವಿಷಯ ಏನೆಂದರೆ, ನಮ್ಮ ತರಗತಿಯಲ್ಲಿ ಮೂರು ಸೆಕ್ಷನ್ ಗಳಿದ್ದವು. 'ಗೀತಾ' ಎಂಬ ಹೆಸರಿನವರು ನಾಲ್ಕು ಜನರಿದ್ದರು. ಅಂದು ಒಬ್ಬಳು ತೀರಿಹೋದಳು.ದುಃಖದ ಸಂಗತಿಯೇ ಅದು.

"ಗೀತಾ  ಹೊಗಿಬಿಟ್ಟಳಂತೆ,  ಪಾಪ !" ಎಂದು ಗಾಳಿಯಂತೆ ಸುದ್ದಿ ಹರಡಿತ್ತೇ ವಿನಃ ಯಾವ ಗೀತಾ ಎಂದು ಯಾರೂ ಹೇಳಲಿಲ್ಲ. ಮೇಲಾಗಿ ಎಷ್ಟೇ ಕರೆ ಮಾಡಿದರೂ, "ವ್ಯಾಪ್ತಿ ಪ್ರದೇಶದಿಂದ  ಹೊರಗೆ" ಎನ್ನುವುದನ್ನು ಬಿಟ್ಟು ಇನ್ನಾವುದೇ ಮಾಹಿತಿ ಲಭ್ಯವಾಗಲಿಲ್ಲ. ಹಾಗಾಗಿ ಎಲ್ಲರೂ ಹೋಗಿದ್ದು ಇದೇ ಗೀತಾ ಎಂಬ ತೀರ್ಮಾನಕ್ಕೆ ಬಂದಿದ್ದರು.. !  ಇಲ್ಲಿ ಗೊಂದಲಕ್ಕೆ ಕಾರಣವಾಗಿದ್ದು ನಾಲ್ಕು 'ಗೀತಾ'ಗಳಲ್ಲ,  ಒಂದು 'ವ್ಯಾಪ್ತಿ ಪ್ರದೇಶದಿಂದ ಹೊರಗೆ' ಎಂಬ ವಾಕ್ಯ !    ಈ ಘಟನೆ ಒಂದು ಸಣ್ಣ ಉದಾಹರಣೆಯಷ್ಟೇ.   ಯಾರಿಗಾದರೂ ಅಷ್ಟೇ!

ನಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿದಾಗ, ಎರಡು ಸಲ ಸಹಿಸಬಹುದು. ಮೂರನೇ ಬಾರಿಯೂ 'ವ್ಯಾಪ್ತಿ ಪ್ರದೇಶದಿಂದ ಹೊರಗೆ' ಎಂದರೆ ಮನದಲ್ಲಿ ಸಣ್ಣ ಕಸಿವಿಸಿ...    ಎಲ್ಲಾ ಕಡೆಯೂ ನೆಟವರ್ಕ್ ಸಿಗುವುದರಿಂದ ಸಮಸ್ಯೆ ಇರದ್ದಿದ್ದರೂ,'ವ್ಯಾಪ್ತಿ ಪ್ರದೇಶದಿಂದ ಹೊರಗೆ' ಎಂಬ ಕಿರಿಕಿರಿ ಮುಗಿದಿಲ್ಲ.       ಅನ್ನ, ಮುದ್ದೆಯನ್ನು ಪಿಜ್ಜಾ -ಬರ್ಗರ್ ಆವರಿಸಿತು. ಗಡಿಯಾರ, ದೂರವಾಣಿ, ದಿನಪತ್ರಿಕೆಗಳನ್ನೆಲ್ಲ ಮೊಬೈಲ್ ಎಂಬ ಐದಿಂಚಿನ ಪರದೆ ಆವರಿಸಿತು.  ಎಲ್ಲರೂ ಒಟ್ಟಿಗೆ ಇದ್ದರೂ ಮೊಬೈಲ್ ನಲ್ಲಿ ಬೇರೆಯೇ ಪ್ರಪಂಚ ಸೃಷ್ಟಿಯಾಗಿರುತ್ತದೆ. ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ನೆಟ್ ಫ್ಲಿಕ್ಸ್..
ಎಷ್ಟು ಲೋಕಗಳು ! ಇವೆಲ್ಲ ಒಂದೆಡೆಯಾದರೆ, ಇನ್ನೊಂದು ಕಡೆ ಜನ ಠಾಕು-ಠೀಕಾಗಿ ತಯಾರಾಗಿ, ಇನ್ನೊಬ್ಬರ ಮಾತಿಗೆ ತುಟಿ ಕುಣಿಸುತ್ತಾ, ಟಿಕ್ ಟಾಕ್ ಲೋಕದಲ್ಲಿ ಮುಳುಗಿರುತ್ತಾರೆ. ಮನೆಯಲ್ಲಿ ಅಮ್ಮ ಊಟಕ್ಕೆ ಕರೆದರೂ, ಅಪ್ಪ ಕೂಗಿದರೂ...ಈ ವ್ಯಕ್ತಿ 'ವ್ಯಾಪ್ತಿ ಪ್ರದೇಶದಿಂದ  ಹೊರಗೆ'!ಯಾರ ಬಳಿಯೋ, ಏನೋ ಹೇಳುತ್ತಿರಬೇಕಾದರೆ, ಅವರು ಮೊಬೈಲ್ ಲೋಕದಲ್ಲಿ ಮುಳುಗಿದ್ದು, ನಂತರ, "ಸಾರಿ, ಏನೋ ಹೇಳ್ತಿದ್ಯಲ್ಲ.. ಇನ್ನೊಂದ್ಸಲ ಹೇಳು..ಕೇಳಿಸ್ಲಿಲ" ಎಂದಾಗ ಬರುವ ಕೋಪಕ್ಕೆ ಮಿತಿಯಿಲ್ಲ. ಕೇಳಿಸಿಲ್ಲ ಎಂದರೆ ತಪ್ಪು; ನೀನು ಲಕ್ಷ್ಯ ಕೊಟ್ಟಿಲ್ಲ, ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದೀಯ ಎಂಬುದು ಸತ್ಯ ..! ನೆಟವರ್ಕ್ ನ ಸಮಸ್ಯೆ ಆಗಿದ್ದರೆ ಸರಿ ಪಡಿಸಬಹುದಿತ್ತು. ಅದಲ್ಲವಲ್ಲ..!   
 "ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ" ಎಂದು ಮೊಬೈಲ್ ನಲ್ಲಿ  ಬರುವ ದನಿ ಹೇಳಿದ್ದರೆ ಮತ್ತೊಮ್ಮೆ ಪ್ರಯತ್ನಿಸಬಹುದು.. ಆದರೆ ಹೇಳುತ್ತಿರುವುದು ಮನಸ್ಸು...ಏನು ಮಾಡೋಣ???

Monday, June 15, 2020

ಮಲೆನಾಡಿನ ಹಿರಿಜೀವ

ಲೇಯ್ ಸಾವಿತ್ರಮ್ಮಾ,
ಇದು ನಾನು ಅವಳನ್ನು ಪ್ರೀತಿ ಹೆಚ್ಚಾದಾಗ ಕರೆಯೋ ರೀತಿ.  ಬಾಗಿದ ಬೆನ್ನು, ಸುಕ್ಕುಬಿದ್ದಿರುವ ಮುಖ, ವಯಸ್ಸಾಗಿದೆ ಎನ್ನಲು ಇಷ್ಟು ಸಾಕು. ಜೀವನದಲ್ಲಿಯ ಜವಾಬ್ದಾರಿಗಳ ಭಾರ ಅವಳನ್ನು ಬಾಗಿಸಿರಬಹುದು. ಅವಳ ಮುಖದಲ್ಲಿನ ಸುಕ್ಕುಗಳು ಅವಿರತ ಕೆಲಸಗಳ ಪ್ರತಿಫಲವಾಗಿರಬಹುದು.
'ಅವಳ ಹಲ್ಲುಗಳು ಕೃತಕವಿರಬಹುದು ಆದರೆ ನಗುವಲ್ಲ. '
          
       ಆ ಕಣ್ಣುಗಳಲ್ಲಿ ಹೊಳಪು ಇನ್ನೂ ಮಾಸಿಲ್ಲ. ಕೆಲವೊಮ್ಮೆ 'ಆಯಾಸ ಪದದ ವಿರುದ್ಧಾರ್ಥಕ ಶಬ್ದವೇ  ಜೀವ ತಳೆದು ಓಡಾಡುತ್ತಿದೆಯೇನೋ' ಎನಿಸುವಷ್ಟು ಚಟುವಟಿಕೆಯಿಂದಿರುತ್ತಾಳೆ.

       ಮುಂಜಾನೆ ಐದು ಗಂಟೆಗೆ ಅವಳ ಸುಪ್ರಭಾತ ಗೀತೆಗಳೊಂದಿಗೆ ದಿನ ಪ್ರಾರಂಭವಾದರೆ, ರಾತ್ರಿ ಕಣ್ಣು  ಆಯಾಸದಿಂದ  ನೆನಪಿಸಬೇಕು ಇದು ಮಲಗುವ ಸಮಯ ಎಂದು, ಆದರೂ  ಅವಳ ಕೆಲಸಗಳು ಮುಗಿದಿರುವುದಿಲ್ಲ. ಅದರಲ್ಲೂ  ಹಬ್ಬ ಬಂದರಂತೂ  ಮುಗಿದೇ ಹೋಯಿತು.! ಯಾವಾಗ ಮಲಗುತ್ತಾಳೆ, ಎಷ್ಟು  ಗಂಟೆಗೆ  ಏಳುತ್ತಾಳೆ ಎಂದು ಯಾರಿಗೂ ತಿಳಿಯುವುದಿಲ್ಲ.ಆದರೂ ನನಗೆ ಅವಳ ಮೈಂಡ್ -ಸೆಟ್  ಎಷ್ಟೋ ಬಾರಿ ಆಶ್ಚರ್ಯ ತರಿಸಿದೆ. ಯಾವುದೇ ಅಲಾರ್ಮ್  ಇಡದೇ,  ನಾಳೆ  ಬೇಗ  ಏಳಬೇಕು ಎಂದುಕೊಂಡರೆ,  ಎದ್ದೇ ಏಳುತ್ತಾಳಲ್ಲ ಹೇಗೆ  ಸಾಧ್ಯ?  ಇದು ಇಂದೂ ಅವಳು  ಲವಲವಿಕೆಯಿಂದಿರುವ  ಗುಟ್ಟಾಗಿರಬಹುದು...
   ಇಂದಿಗೂ  ತರಕಾರಿಗಳನ್ನು  ಬೆಳೆಯುತ್ತಾಳೆ, ಮನೆಗೆ ಬಂದವರಿಗೆಲ್ಲ  ಕೊಟ್ಟು ಕಳುಹಿಸುತ್ತಾಳೆ, ಅದರಲ್ಲೇ ಖುಷಿ ಪಡುತ್ತಾಳೆ. ಎಪ್ಪತ್ತರ ಹರೆಯದಲ್ಲೇ ಇಷ್ಟು ದುಡಿಯುವವಳು,  ಇಪ್ಪತ್ತರಲ್ಲಿ  ಹೇಗಿರಬಹುದು ಎಂದೂ  ನಾನು ಊಹಿಸಲಾರೆ..!
ಇನ್ನೂ  ನೆನಪಿದೆ ನನಗೆ,  ಅಜ್ಜಿ  ನೀನು ಕಷ್ಟ ಪಟ್ಟು  ಬೆಳೆಸಿ  ಊರವರಿಗೆಲ್ಲ  ಹಂಚುತ್ತೀಯಲ್ಲ  ಯಾಕೆ ಎಂದರೆ,  "ನಮ್ಮಲ್ಲಿ  ಇದ್ದಾಗ  ಮಾತ್ರ ನಾವು  ಕೊಡೋದು  ತಾನೇ,  ಇಲ್ದೆ ಇದ್ರೆ ಕೊಡೋಕೆ ಆಗತ್ತಾ?"  ಅಂತಾಳೆ...ಅದನ್ನು  ಅವಳು  ಹೊಸತಾಗಿ  ಹೇಳಬೇಕೆಂದೇನಿಲ್ಲ. ನಾನಾಗಲೇ ಕೇಳಿದ್ದೆ,  ಕೆಲವರು  ಮನೆಗೆ  ಬಂದಾಗ  ಹೇಳುತ್ತಿದ್ದರು- ನಾವು  ಶಾಲೆಗೆ  ಹೋಗುವಾಗ  ನಿಮ್ಮ ಮನೆಯಲ್ಲಿ  ಊಟ  ಮಾಡ್ಕೊಂಡು  ಹೋಗ್ತಿದ್ವಿ.  ನಿಮ್ಮ  ಅಜ್ಜಿ ತುಂಬಾ  ರುಚಿಯಾಗಿ  ಅಡಿಗೆ  ಮಾಡ್ತಾಳೆ  ಅಂತ. ಇಷ್ಟು ವರ್ಷಗಳಲ್ಲಿ ಆ ಕೈಗಳು ಎಷ್ಟು ಜನರಿಗೆ ಊಟ ಹಾಕಿರಬಹುದು!!
ಅವಳು ಮೂರನೇ ತರಗತಿಯವರೆಗೆ ಮಾತ್ರ ಕಲಿತಿದ್ದರೂ,  ಓದುವ ಮಕ್ಕಳಿಗೆ ಊಟ ಹಾಕಿ,  ಪರೀಕ್ಷೆ ಇದ್ದಾಗ ಮನೆಯಲ್ಲಿ  ಉಳಿಸಿಕೊಳ್ಳುತ್ತಿದ್ದಳಂತೆ. ಇದು ಅವಳು ವಿದ್ಯೆಗೆ ಕೊಡುವ ಗೌರವ..

       ಅವಳು  ತುಂಬಾ ಪ್ರಾಕ್ಟಿಕಲ್. ಶಾಸ್ತ್ರಗಳನ್ನು  ಪಾಲಿಸುತ್ತಾಳೆ. ಆದರೆ  ಕೆಲವೊಮ್ಮೆ  "ಅಜ್ಜಿ  ಇದು ಬರಿ ಮೂಢ ನಂಬಿಕೆ  ಈಗಿನ  ಕಾಲದಲ್ಲೂ  ಇದನ್ನೆಲ್ಲಾ ಮಾಡೋಕಾಗಲ್ಲ"  ಅಂತ ಕಾರಣ ಸಹಿತ ವಿವರಿಸಿದ್ರೆ,  ಅದೆಷ್ಟು  ಬೇಗ ಈಗಿನ ಕಾಲಕ್ಕೆ ಅಂದರೆ  ಮೊಮ್ಮಕ್ಕಳ  ಕಾಲಕ್ಕೆ ಹೊಂದಿಕೊಂಡುಬಿಟ್ಟಳು.
ಹಿಂದಿನ ಕಾಲದವರಂತೆ  ಜಾತಿಗಳನ್ನೆಲ್ಲ ನೋಡುವುದಿಲ್ಲ  ಅವಳು.  ಕೆಲಸದವರಿಗೂ  ತಾನು ಬೆಳೆದಿದ್ದರಲ್ಲಿ,  ಮಾಡಿದ  ಅಡಿಗೆಯಲ್ಲಿ  ಒಂದು ಪಾಲು ಕೊಡುತ್ತಾಳೆ.ಅವಳ ನಿಷ್ಕಲ್ಮಶ ಮನಸು ಅದು.. 
     ಆದರೂ  ಅವಳ  ನೆನಪಿನ ಶಕ್ತಿ  ನೋಡಿದರೆ ನನಗೂ,  ನನ್ನಮ್ಮನಿಗೂ ಇವತ್ತಿಗೂ ಆಶ್ಚರ್ಯ. ಯಾರೋ ಹಳೆಯ ಬಂಧುಗಳು ಬಂದರೂ  ಸಾಕು,  ಅವರಿಗೆ ಯಾವ ತಿಂಡಿ ಇಷ್ಟ ಎಂದು ನೆನಪಿಂದ ಮಾಡಿ ಬಡಿಸುತ್ತಾಳೆ.
ಎಲ್ಲೋ ಒಮ್ಮೊಮ್ಮೆ ನಾನು ಅವಳ  ಬಳಿ ಹಳೆಯ ಕತೆಗಳನ್ನು ಕೇಳುತ್ತೇನೆ.. ಅವಳ ಮಕ್ಕಳ ಮದುವೆಗೆ ಯಾವ ಸ್ವೀಟ್  ಮಾಡಿದ್ರು   ಅಂದ್ರೆ ಹೇಳ್ತಾಳೆ.. ಅದೆಲ್ಲ ಹೋಗಲಿ,   ಅವಳ ಮದುವೆಯ ಕತೆಯನ್ನು ನಿನ್ನೆ -ಮೊನ್ನೆ ನಡೆದ ತರಹ ವಿವರಿಸುತ್ತಾಳೆ. ಅಬ್ಬಬ್ಬಾ,  ಅಜ್ಜಿಯ ಮೆಮೊರಿ ಪವರ್ ಸ್ವಲ್ಪ ಆದ್ರೂ ನಂಗಿರ್ಬಾರ್ದ ಅಂತ ಅನ್ನಿಸಿದ್ದು ಸುಳ್ಳಲ್ಲ !!
 
       ಕೇವಲ ನನ್ನ ಅಜ್ಜಿ ಮಾತ್ರವಲ್ಲ, ಪ್ರತಿ  ಹಳ್ಳಿಯಲ್ಲಿಯೂ ಇಂತಹ ಹೆಂಗಸರು ಕಾಣಸಿಗುತ್ತಾರೆ. ಇವರೆಲ್ಲ ಮಲೆನಾಡಿನ  ಹಿರಿಜೀವಗಳು. ಇಡೀ  ದಿನ ಕೆಲಸ ಮಾಡುತ್ತಲೇ ಇರುತ್ತಾರೆ. ಯಾರೇ ಬಂದರೂ, ಎಂತಹ ಕಷ್ಟವೇ ಇದ್ದರೂ ಊಟ ಬಡಿಸಿ,  ಪ್ರೀತಿಯಿಂದ ಮಾತನಾಡುತ್ತಾರೆ. 
      ಆದರೆ ನಾವೆಲ್ಲ ಅವರನ್ನು ಕಳೆದುಕೊಳ್ಳುತ್ತಿದ್ದೇವೆ. ನಾವಾಗಿಯೇ ಅವರಿಂದ ದೂರಾಗಿಯೋ,  ಓದು -ಕೆಲಸ ಎಂದು ದೊಡ್ಡ ನಗರಕ್ಕೆ ಹೋಗಿಯೋ ಅವರನ್ನು ನಿರ್ಲಕ್ಷಿಸುತ್ತೇವೆ.....
ಪುಟ್ಟ ಮಕ್ಕಳು ತಮ್ಮ ಅಜ್ಜ -ಅಜ್ಜಿಯರ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ.  
        ಅವರೊಡನೆ  ಆಡುವ ಆಟ,
ಅವರಿಗೆ  ಕೊಡುವ ಕಾಟ, 
ರಾತ್ರಿ ಮಲಗುವಾಗ  ಕೇಳುವ  ಕತೆಗಳು, 
ಅಪ್ಪ ಬೈದಾಗ  ಅಜ್ಜ -ಅಜ್ಜಿಗೆ  ಕೊಡುವ ದೂರುಗಳು....... ಆಹಾ  ಎಷ್ಟೊಂದು  ನೆನಪುಗಳು ಇವೆ ನನ್ನ ಬಳಿ.... !!

    ಮೊನ್ನೆ ಮೊನ್ನೆ ತಾನೇ ಮನೆಗೆ ಹೋಗಿ ಬಂದರೂ, ಫೋನ್ ಮಾಡಿದಾಗ ಅಜ್ಜಿ ಕೇಳುವುದು ಮೂರೇ ಪ್ರಶ್ನೆಗಳು -
" ಆರಾಮಾವಾಗಿದ್ದೀಯಾ? ", 
" ಊಟ  ಮಾಡಿದ್ಯಾ? ",
"ಮನೆಗೆ  ಯಾವಾಗ ಬರ್ತೀಯಾ? "
ಮೊದಲೆರಡು  ಪ್ರಶ್ನೆಗಳಿಗೆ  ಉತ್ತರ ಇದೆ.  ಮೂರನೆಯದಕ್ಕೆ  ಮಾತೇ  ಹೊರಡುವುದಿಲ್ಲ.

"ಬರ್ತೀನಿ  ಅಜ್ಜಿ... ಬೇಗ ಬರ್ತೀನಿ. "
                                
 -ಚಿತ್ರ  ಹಾಗೂ  ಬರಹ
  ಪಲ್ಲವಿ

ಮಾಯದ ದೆವ್ವ

ಅಂದು ಮಂಗಳವಾರ. ಸಂಜೆ ಸುಮಾರು ಏಳು ಗಂಟೆ ಇರಬಹುದು. ಮಹಡಿಯ ಮೇಲೆ ಕುಳಿತು ಓದಬೇಕೆಂದು ಯೋಚಿಸುತ್ತಿದ್ದೆ . ಹೀಗೆ ಹೇಳುವುದಕ್ಕೂ ಕಾರಣವಿದೆ.

ನಾನು ಬಿ .ಕಾಂ.(b.com.) ಓದುತ್ತಿದ್ದೆ . ಸೆಮಿಸ್ಟರ್ ಪರೀಕ್ಷೆಗೆ ಓದಿಕೊಳ್ಳಲು ರಜಾ ಇತ್ತು . ಹಾಸ್ಟೆಲ್ನಲ್ಲಿದ್ದರೆ ಗೆಳತಿಯರೊಡನೆ ಹರಟುತ್ತೇನೆಂದು ಮನೆಗೆ ಬಂದೆ . ಬಂದು ಸುಮಾರು ನಾಲ್ಕು ದಿನಗಳಾದರೂ ಪುಸ್ತಕ ತೆರೆದು ನೋಡಲು ಮುಹೂರ್ತ ಬಂದಿರಲಿಲ್ಲ . ಆ ಹೆಸರೇ ಹೇಳುವಂತೆ ಬಿ .ಕಾಮ್ .(be-calm) ಆಗಿಯೇ ಇದ್ದೆ .

ಸರಿ, ಏನಾದರಾಗಲಿ , ಇವತ್ತು ಪಿ .ಎಮ್. (ಪ್ರಿನ್ಸಿಪಲ್ಸ್ ಆಫ್ ಮ್ಯಾನೇಜ್ಮೆಂಟ್ ) ಓದೋಣ ಎಂದು ಪುಸ್ತಕ ತೆರೆದೆ . ಏನೋ ಶಬ್ದ .. ಹೂಂ ..ಹೂಂ .. ಎಂದು ! ಹಿಂದೆಂದೂ ಕೇಳಿರಲಿಲ್ಲ . ಒಂದು ಕ್ಷಣ ಬೆಚ್ಚಿದೆ .

ಅಷ್ಟರಲ್ಲಾಗಲೇ ಅಜ್ಜಿ ಕೆಳಗೆ ಜಗುಲಿಯಲ್ಲಿ ಕುಳಿತು ಧಾರಾವಾಹಿ ನೋಡುತ್ತಿದ್ದಳು. ಟಿ .ವಿ . " ಇದು ಪುಟ್ಟ ಗೌರಿಯ ಮದುವೆ " ಎಂದು ಹಾಡಿತ್ತು ; ಕಿವಿಗಳೆರಡು ನೆಟ್ಟಗಾಗಿದ್ದವು . ಏನೋ ಸಾಧಿಸಿದಂತೆ ಮುಖವರಳಿತು . ಮತ್ತೇನೂ ಅಲ್ಲ , ಪಿ .ಎಮ್. ಎಂದರೆ 'ಪುಟ್ಟ ಗೌರಿ ಮದುವೆ' ಎಂದೂ ಆಗಬಹುದಲ್ಲಾ ..!!

ಕೆಳಗೆ ಗೌರಿ ಅಳುವುದು ಕೇಳುತ್ತಿತ್ತು . ಅಯ್ಯೋ ಪಾಪ ! ನಾನು ಧಾರಾವಾಹಿ ನೋಡುತ್ತಿಲ್ಲವೆಂದೇ ಅಳುತ್ತಿದ್ದಾಳೆ ಎನ್ನಿಸಿತು . ಪುಸ್ತಕವನ್ನಲ್ಲೇ ಬಿಟ್ಟು , ಹೋಗಿ ಟಿ.ವಿ .ಯ ಮುಂದೆ ಕುಳಿತುಕೊಂಡೆ . ಆಯ್ತು , ಅಂದಿನ ಓದು ಮುಗಿದಂತೆಯೇ ಲೆಕ್ಕ ..!

ದಿನವೂ ಇದೇ ಕತೆ . ಪರೀಕ್ಷೆಗೆ ಇನ್ನು ಒಂದೇ ವಾರವಿದೆ , ಇಂದಿನಿಂದಾದರೂ ಸರಿಯಾಗಿ ಓದಬೇಕು ಎಂದು ನಿರ್ಧರಿಸುವುದು ; ಸಂಜೆ ಏಳು ಗಂಟೆಗೆ ಪುಟ್ಟ ಗೌರಿ ಎಂದು ಕೂಗಿದಾಕ್ಷಣ ಆ ನಿರ್ಧಾರಗಳಿಗೆಲ್ಲ ಗೆದ್ದಲು ಹಿಡಿಯುತ್ತಿದ್ದವು ಸರಿಯಾಗಿ ಪುಟ್ಟಗೌರಿಯಿಂದ ಪ್ರಾರಂಭವಾದರೆ, ಲಕ್ಷ್ಮಿ ನನ್ನನ್ನೇ ಬಾರಮ್ಮ ಎನ್ನುತ್ತಿದ್ದಳು .ಆಮೇಲೆ ಇದೊಂದು ಧಾರಾವಾಹಿ ನೋಡಿ ಅಗ್ನಿಸಾಕ್ಷಿಯಾಗಿಯೂ ಊಟವಾದ ಬಳಿಕ ಓದಿಕೊಳ್ಳುತ್ತೇನೆ ಎಂದು ನನಗೆ ನಾನೇ ಆಶ್ವಾಸನೆ ನೀಡುತ್ತಿದ್ದೆ, ದೊಡ್ಡ ರಾಜಕಾರಣಿಯಂತೆ ..! ಊಟವಾದ ನಂತರ ,ಪಾಪ ..ಉಳಿದ ಧಾರಾವಾಹಿಗಳು ಏನು ಮಾಡಿದ್ದವು ? ಎಂದು ನೋಡಿ ಹಾಸಿಗೆಯ ಮೇಲೆ ಅಡಿಯಿಂದ ಮುಡಿಯವರೆಗೂ ಹೊದ್ದು ಮಲಗಿದರೆ ಮುಗಿಯಿತು .ಪಾಪ, ನನ್ನ ಪುಸ್ತಕ ಮಹಡಿಯ ಮೇಲೆ ನನಗಾಗಿ ಕಾಯುತ್ತಿರುತ್ತಿತ್ತು ..!!!

ಮಾರನೇ ದಿನ ಗೆಳತಿಗೆ ಫೋನ್ ಮಾಡಿ , ಉಭಯ ಕುಶಲೋಪರಿ ವಿಚಾರಿಸುವಾಗ ಅವಳು ಓದುತ್ತಿದ್ದಾಳೆ ಎಂದು ತಿಳಿದು ಹೊಟ್ಟೆಯೊಳಗೆಲ್ಲೋ ಸಣ್ಣ ಉರಿಯಾಗಿದ್ದು ಸುಳ್ಳಲ್ಲ ! ಅಂದು ಗೌರಿಯೂ ಬೇಡ . ಲಕ್ಷ್ಮಿಯೂ ಬೇಡ ಎಂದು ಖಡಾಖಂಡಿತವಾಗಿ ಖಂಡಿಸಿ , ಪುಸ್ತಕದ ಹಾಳೆಗಳನ್ನು ತಿರುವುತ್ತಿದ್ದೆ .

ಮೇಲೆ ಕೋಣೆಗೆ ಬಂದು, ಲೈಟ್ ಹಾಕಿ , ಬರೆಯುತ್ತಾ ಕುಳಿತರೆ ..ಏನೋ ಶಬ್ದ ! ಏನಿರಬಹುದು ? ಸರಿಯಾಗಿ ಆಲಿಸಿದೆ..ಗೆಜ್ಜೆ ಶಬ್ದ ..!! ಬರೆಯುವುದನ್ನು ನಿಲ್ಲಿಸಿ ಮತ್ತೊಮ್ಮೆ ಆಲಿಸಿದೆ..ಹೌದು ಅದು ಗೆಜ್ಜೆ ಶಬ್ದವೇ ..ಅಂದಿನ ಬರವಣಿಗೆಗೆ ಪೂರ್ಣ ವಿರಾಮ ಹಾಕಿ ಕೆಳಗೆ ಓಡಿಯಾಗಿತ್ತು .

ಮಾರನೇ ದಿನ ರಾತ್ರಿಯೂ ಮತ್ತದೇ ಅನುಭವ . ಮನೆಯ ಬಳಿ ಚೌಡಿಕಟ್ಟೆ ಇತ್ತು .ಎಲ್ಲರೂ ಹೇಳುವಂತೆ ಇದು ಚೌಡಿ ಕಾಟವಿರಬಹುದೇ ?ನೆನಪಿಗೆ ಬಂದ ದೇವರೆಲ್ಲರ ನಾಮಸ್ಮರಣೆ ಮಾಡುತ್ತ , ಕೋಣೆಯ ಲೈಟ್ ಆರಿಸಿದಾಗ ಶಬ್ದವೆಲ್ಲಾ ಸ್ತಬ್ದ ! ಅದೇನಿರಬಹುದೆಂದೇ ತಿಳಿಯಲಿಲ್ಲ .

ಹೀಗೆ ಎರಡು ದಿನಗಳು ಕಳೆದವು . ರಾತ್ರಿ ಓದಲು ಕುಳಿತಾಗ ಮತ್ತೆ ಅದೇ ಶಬ್ದ ಕೇಳಿಸಿತು . ಭಯಕ್ಕೆ ಬಿಟ್ಟ ಕಣ್ಣು ಬಿಟ್ಟಂತೆ ಇತ್ತು; ಪುಸ್ತಕ ಬಾಯ್ತೆರೆದಿತ್ತು ; ಮನಸ್ಸು ಮಾತ್ರ ಎಲ್ಲೆಲ್ಲೋ ತಿರುಗುತ್ತಿತ್ತು . ಇದು ದೆವ್ವವಿರಬಹುದೇ ? ಗೆಜ್ಜೆ ಇದೆ ಎಂದರೆ ಹೆಣ್ಣು ದೆವ್ವವೇ ಇರಬೇಕು .ಬಿಳಿ ಸೀರೆ ಉಟ್ಟಿರಬಹುದು; ಉದ್ದ ಕೂದಲಿರಬಹುದು ಎಂದೆಲ್ಲಾ ಯೋಚಿಸಿದೆ .
ಧೈರ್ಯ ಮಾಡಿ ಕೋಣೆಯಿಂದ ಹೊರಬಂದೆ .ಮತ್ತೆ ಗೆಜ್ಜೆ ಶಬ್ದ. ಜೊತೆಯಲ್ಲಿ ಈ ಬಾರಿ ಮತ್ತೊಂದು ಶಬ್ದವಿತ್ತು .ಅದು ಹೂಂ ..ಹೂಂ .. ಎನ್ನುತ್ತಿತ್ತು .ಭಯದಲ್ಲಿ ಬೆವರಿಳಿಯುತ್ತಿತ್ತು .ಒಮ್ಮೆ ಕಣ್ಣು ಮಿಟುಕಿಸುವುದರಲ್ಲಿ ಯಾವುದೋ ಆಕೃತಿ ಬಲದಿಂದ ಎಡಕ್ಕೆ ಬಹಳ ವೇಗವಾಗಿ ಚಲಿಸಿದಂತೆ ಭಾಸವಾಯಿತು. . ನಾನಲ್ಲಿರಲು ಹೇಗೆ ಸಾಧ್ಯ ? !! ಒಂದೇ ನೆಗೆತ ಒಂದೇ ಓಟ ...ಕ್ಷಣಾರ್ಧದಲ್ಲಿ ಜಗುಲಿಯಲ್ಲಿದ್ದೆ .

ಅಯ್ಯೋ ದೇವಾ ! ಇಂಥಾ ಅನುಭವ ಹಿಂದೆಂದೂ ಆಗಿರಲಿಲ್ಲ .ಎಂದೂ ಹೇಳಿರದ ಹನುಮಾನ ಚಾಲೀಸಾವನ್ನು ಪಟಪಟ ಹೇಳಿದ್ದೆ !! ನಾಳೆಯೂ ಹೀಗೆಯೇ ಆದರೆ ಎಲ್ಲರಿಗೂ ಹೇಳಿಬಿಡುತ್ತೇನೆಂದು ನಿರ್ಧರಿಸಿ, ಮಲಗಿದೆ .

ಮಾರನೇ ದಿನ ಮೇಲೆ ಕೋಣೆಗೆ ಬಂದು ನೋಡಿದರೆ, ಪಾಪ...ನನ್ನ ಪುಸ್ತಕ ಬಾಯಿತೆರೆದುಕೊಂಡು ನನ್ನನ್ನೇ ಕಾಯುತ್ತಿತ್ತು . ಈ ಪುಸ್ತಕವನ್ನು ಛಾವಣಿ ರಾತ್ರಿ ಪೂರ್ತಿ ಓದುತ್ತಿತ್ತು . ನನ್ನ ಬದಲು ಈ ಛಾವಣಿಯೇ ಪರೀಕ್ಷೆ ಬರೆದರೆ ಒಳ್ಳೆಯ ಅಂಕವಾದರೂ ಬರಬಹುದೇನೋ ಎಂದು ನಗು ಬಂತು . ಅಂದು ರಾತ್ರಿಯೂ ಮತ್ತದೇ ಅನುಭವ .ಇನ್ನೂ ಜೋರಾಗಿ ಗೆಜ್ಜೆ ಶಬ್ದ.. ಹೂಂ ..ಹೂಂ .. ಎನ್ನುವುದಂತೂ ಇನ್ನೂ ಹತ್ತಿರವೇ ಕೇಳುತ್ತಿತ್ತು .

ಇದು ಖಂಡಿತವಾಗಿಯೂ ಚೌಡಿಕಾಟವೋ ,ಪ್ರೇತಕಾಟವೋ ಇರಬೇಕು . ಎಲ್ಲರಿಗೂ ಹೇಳುತ್ತೇನೆ , ಯಾವುದಾದರೂ ಶಾಂತಿಹೋಮ ಮಾಡಿಸಲಿ ಎಂದು ಮನದಲ್ಲೇ ಹೇಳಿಕೊಳ್ಳುತ್ತಾ ಎಲ್ಲರೊಡನೆ ಊಟಕ್ಕೆ ಕುಳಿತೆ .ತಲೆಯಲ್ಲೊಂದು ಯೋಚನೆ ಬಂತು. ಓಹೋ ..ನಾನು ಕುಳಿತು ಓದುವ ಜಾಗ ಸರಿಯಿಲ್ಲವೇನೋ ..ವಾಸ್ತು ಹೊಂದುತ್ತಿಲ್ಲವೇನೋ ..ಹೇಗೆ ಹೇಳಲಿ ..ಇದನ್ನೆಲ್ಲ ಹೇಗೆ ಅರ್ಥ ಮಾಡಿಸಲಿ ..ಎಂದುಕೊಳ್ಳುತ್ತಿರುವಾಗಲೇ ಎಲ್ಲರೂ ಊಟ ಮುಗಿಸಿ , ಕೈ ತೊಳೆಯಲು ಹೋಗಿದ್ದರು .

ರಾತ್ರಿ ಮಲಗಿ ,ಬೆಳಿಗ್ಗೆ ಏಳುವ ಹೊತ್ತಿಗೆ ಎಲ್ಲವೂ ತಿಳಿಯಾಗಿತ್ತು . ಮನೆಯಲ್ಲಿ ಹೇಗೆ ಹೇಳಬೇಕೆಂಬ ಗೊಂದಲಕ್ಕೆಲ್ಲ ಪರಿಹಾರ ದೊರೆತಿತ್ತು .ಗೆಳತಿಗೆ ಫೋನ್ ಮಾಡಿ ಜೋರಾಗಿ ಕೂಗಾಡಿದೆ .i

" ನಿನ್ನೆ ಎಲ್ಲಾ ಸರಿಯಾಗೇ ಇದ್ಯಲ್ಲೇ ..ಇವತ್ತೇನಾಯ್ತೆ ನಿಂಗೆ ? ದೆವ್ವ- ಗಿವ್ವ ಮೆಟ್ಕೊಂಡಿದ್ಯಾ ?"

" ಹೌದೇ, ನಿಮ್ಮಂಥಾ ಗೆಳತಿಯರು ಇದ್ದುಬಿಟ್ರೆ ದೆವ್ವ ಮೆಟ್ಕೊಳ್ದೆ ಇನ್ನೆನೇ ಆಗತ್ತೆ ?" ಎಂದು ಹೇಳಿ ಫೋನ್ ಕುಕ್ಕಿದೆ . ರಾತ್ರಿ ದೆವ್ವದ ಮೂಲ ಹುಡುಕಲೇಬೇಕೆಂದು ಹೊರಟವಳಿಗೆ ಎಂತಹ ಆಘಾತ ...

ಮನೆಗೆ ಓದಲು ಬರುವ ಮುನ್ನ ಹಾಸ್ಟೆಲ್ನಲ್ಲಿ ರಾತ್ರಿ ಊಟವಾದ ನಂತರ ಗೆಳತಿಯರೆಲ್ಲ ಗುಂಪಾಗಿ ಕುಳಿತು ದೆವ್ವದ ಸಿನೆಮಾ ನೋಡಿದ್ದೆವು .ಅದರಲ್ಲೇನು ವಿಶೇಷ ಎನ್ನಬೇಡಿ ..

ಜಿರಲೆ ಕಂಡರೆ ಕಿಟಾರ್ ಎಂದು ಕಿರುಚಿ, ನೆಲದಿಂದ ನಾಲ್ಕಡಿ ಮೇಲೆ ಹಾರಿ , ಇಡೀ ಕೋಣೆಯ ರೂಪರೇಷೆಯನ್ನೇ ಬದಲಾಯಿಸಿಬಿಡುವ ಹುಡುಗಿಯರ ಗುಂಪೊಂದು ರಾತ್ರಿ ಸರಿಹೊತ್ತಿನಲ್ಲಿ ಕುಳಿತು ದೆವ್ವದ ಸಿನೆಮಾ ನೋಡುವಾಗ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಲೂ ಅಸಾಧ್ಯ !

ಒಬ್ಬಳು ಮುಖ ಮುಚ್ಚಿಕೊಂಡು ಬೆರಳುಗಳ ಮಧ್ಯದಿಂದ ಕಳ್ಳಿಯ ಹಾಗೆ ಇಣುಕಿ ನೋಡುತ್ತಿದ್ದಳು . ಇನ್ನೊಬ್ಬಳು ಪಕ್ಕದಲ್ಲಿದ್ದವಳ ಕೈಯನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದಳು .ಒಬ್ಬಳಂತೂ ಮೈತುಂಬಾ ಚಾದರ ಸುತ್ತಿಕೊಂಡು ಕುಳಿತಿದ್ದಳು .ದೆವ್ವ ಎದುರಿಗಿದೆಯೋ ಅಥವಾ ನನ್ನ ಪಕ್ಕದಲ್ಲೇ ಇದೆಯೋ ಎಂಬ ಅನುಮಾನ ನನಗೆ ..! ಇನ್ನೇನು ದೆವ್ವ ಬಂತು ಎನ್ನುವಾಗ ಒಬ್ಬಳು ಕಿರುಚಿದ್ದು ಹೇಗಿತ್ತೆಂದರೆ ನಿಜವಾದ ದೆವ್ವ ಬಂದಿದ್ದರೂ ಅದೂ ಓಡಿಹೋಗಬೇಕು ..! ಕರ್ಣ ಕಠೋರ !!

ಇಷ್ಟೆಲ್ಲಾ ಆದರೂ ಪೂರ್ತಿ ಸಿನೆಮಾ ನೋಡಲಿಲ್ಲ . ಹೆಸರು ತೋರಿಸುವಾಗ ನಮ್ಮಲ್ಲಿದ್ದ ಧೈರ್ಯ ಇಂಟರ್ವಲ್ನಲ್ಲಿ ಇರಬೇಕಲ್ಲ !!

" ಏಯ್ , ಸಾಕು ಬನ್ನಿ ಮಲ್ಕೋಳೊಣ .ಆಮೇಲೆ ನಿದ್ದೆ ಬರೋದಿಲ್ಲ ."

" ಇಲ್ವೇ ಏನೂ ಆಗಲ್ಲ . ಇನ್ನೊಂದು ತಾಸು ಅಷ್ಟೇ .ಸಿನೆಮಾ ಮುಗಿಯುತ್ತೆ ಕಣೇ ."

" ಲೇ, ಅಷ್ಟರಲ್ಲಿ ನನ್ನ ಕತೇನೂ ಮುಗಿದಿರುತ್ತೆ."

" ಯಾಕೇ ..ಅಷ್ಟೊಂದು ಭಯ ಆಗತ್ತೇನೇ ?"

" ಹೋಗೆಲೇ, ಹೊತ್ತು-ಗೊತ್ತು ಇಲ್ವಾ ನಿಮಗೆ ? ಆಮೇಲೆ ಮಧ್ಯರಾತ್ರಿ ಬಾತ್ರೂಮ್ಗೆ ನೀನು ಬರ್ತೀಯಾ ನಂಜೊತೆ ?"

" ಅಯ್ಯಯ್ಯೋ ಅದು ಸಿನಿಮಾಗಿಂತ ಹಾರಿಬಲ್ ..!"

" ಹಾಗಾದ್ರೆ ನಾಳೆ ಬೆಳಿಗ್ಗೆ ಸಿನೆಮಾ ನೋಡೋಣ. ಈಗ ಎಲ್ಲರೂ ಬಿದ್ಕೊಳಿ ."

ಅಂತೂ ಮಲಗಿದ್ವಿ .ತಾಸಿಗೆ ಒಮ್ಮೆ " ನಿದ್ದೆ ಬಂತಾ ?" ಎಂದು ಕೇಳೋದು ; " ಇಲ್ಲಾ ಕಣೇ .." ಎಂಬ ಉತ್ತರ . ರಾತ್ರಿ ಹೀಗೇ ಕಳೆದಿತ್ತು .ಅಂತೂ ಮಾರನೇ ದಿನ ಆ ಸಿನೆಮಾ ಮುಗಿಯಿತು .

ಹಾಗಂತ ಹುಡುಗಿಯರನ್ನೆಲ್ಲಾ ಹೆದರುಪುಕ್ಕಲರು ಎಂದುಕೊಳ್ಳಬೇಡಿ .ನಾವು ಕತೆ ಹೇಳಲು ಕುಳಿತರೆ ಮುಗಿಯಿತು ; ಯಾವ ದೆವ್ವವೇ ಆದರೂ ಸಹ ಹೂಂ ..ಎನ್ನಲೇಬೇಕು . ಈ ಸಿನೆಮಾ ನೋಡಿದಮೇಲೆ ಅದರ ಬಗ್ಗೆಯೂ ಮಾತನಾಡಬೇಕಲ್ಲ ..ಹಾಂ ! ದೆವ್ವ ನೋಡೋಕೆ ಚೆನ್ನಾಗಿರಲಿಲ್ಲ ಎಂಬ ವಿಮರ್ಶೆ ಬೇರೆ !! ಯಾರು ಕಣ್ಣು ಬಿಟ್ಟು ದೆವ್ವ ನೋಡಿದ್ದರೋ ಏನೋ ..!!

ಆಮೇಲೆ ಅದು-ಇದು ಮಾತನಾಡುತ್ತ ಊರೊಟ್ಟಿನ ಕತೆಗಳೆಲ್ಲ ಬಂದವು .

" ನಿಮ್ಗೆಲ್ಲಾ ಗೊತ್ತಾ ..ನಮ್ಮೂರಲ್ಲಿ ಚೌಡಿಕಾಟ ಇದೆ ."

" ಹಾಗಂದ್ರೆ ಏನೇ ?"

" ಹರಕೆ ತೀರಿಸಿಲ್ಲ ಎಂದರೆ ಚೌಡಮ್ಮ ಎಲ್ಲವನ್ನೂ ಅಡಗಿಸುತ್ತಾಳೆ ಕಣೇ ."

" ಹೌದಾ ..ಹಾಗಾದ್ರೆ ನೀವು ದೇವರ ಜೊತೆನೂ ಕಣ್ಣಾಮುಚ್ಚಾಲೆ ಆಡ್ತೀರಾ ?"

" ಲೇ ನಾನು ತಮಾಷೆ ಮಾಡ್ತಿಲ್ವೇ .."

" ಆಯ್ತು ಬಿಡು, ನಿಮ್ಮ ಕಾಟ ನನಗೂ ಶುರುವಾದರೆ ಕಷ್ಟ ."

ಮತ್ತೊಬ್ಬಳು ಪ್ರಾರಂಭಿಸಿದಳು ..

" ಹೂಂ ಕಣೇ .ನಮ್ಮೂರಲ್ಲೂ ಸಮಸ್ಯೆ ಇತ್ತಂತೆ . ಅಮಾವಾಸ್ಯೆಯ ರಾತ್ರಿಯಂತೂ ಚಿತ್ರ -ವಿಚಿತ್ರ ಶಬ್ದಗಳಂತೆ .ಆಮೇಲೆ ಪ್ರೇತಕಾಟ ಅಂತ ತಿಳಿದು ಪೂಜೆ ಎಲ್ಲ ಮಾಡಿಸಿದ್ರು ."

" ಸುಮ್ನಿರೇ ಸಾಕು ನೀನು ಈ ಪ್ರೇತನೆಲ್ಲ ನೋಡಿದೀಯಾ ?"

" ನಾನು ನೋಡಿಲ್ಲ.ಆದರೆ ಮನೆಯವರೆಲ್ಲ ಸುಳ್ಳು ಹೇಳ್ತಾರಾ ?"

ಅಬ್ಬಬ್ಬಾ ! ದೆವ್ವದ ಸಿನೆಮಾ ನೋಡುವಾಗ ಇಲ್ಲದಿರೋ ಧೈರ್ಯ ಕತೆ ಹೇಳುವಾಗ -ಕೇಳುವಾಗ ಬಂದಿತ್ತು ..! ಒಬ್ಬಳು ಕತೆ ಹೇಳುವಾಗ ಇನ್ನೊಬ್ಬಳೇನಾದರೂ ' ಹೌದಾ..' ಎಂದು ಬಾಯಿತೆರೆದರಂತೂ ಮುಗಿದೇಹೋಯಿತು .ಆ ದೆವ್ವವನ್ನು ಕಣ್ಣಾರೆ ಕಂಡಂತೆ ಕತೆ ರೂಪುಗೊಳ್ಳುತ್ತದೆ . ಆದರೂ ಕತೆಯನ್ನು ರೋಚಕವಾಗಿ ಹೇಳುವ ರೀತಿ ಎಲ್ಲರಿಗೂ ಬರುವುದಿಲ್ಲ ಬಿಡಿ ..!

ಅಂದು ಅವರು ಕತೆ ಹೇಳುವಾಗ ನಾನು ಹೇಗೆ ಕಣ್ಣು ಬಿಟ್ಟು ಕುಳಿತಿದ್ದೆನೆಂದರೆ ಪ್ರಾಧ್ಯಾಪಕರು ಮಾಡಿದ ಪಾಠಗಳೆಲ್ಲ ಒಮ್ಮೆಲೇ ಮಾಯವಾಗಿ , ಈ ಕತೆಗಳಷ್ಟೇ ತಲೆಯಲ್ಲಿ ಉಳಿದಿದ್ದವು .ಅವರ ಕತೆಗಳ ಆ ಚೌಡಿ ಪ್ರೇತಗಳು ನನ್ನ ತಲೆಯೊಳಗೆ ಹೊಕ್ಕಿದ್ದಂತೂ ನಿಜ .

ಆದರೂ ನನ್ನ ದೆವ್ವವನ್ನು ಕಂಡುಹಿಡಿಯಬೇಕಿತ್ತು.! ಎಲ್ಲರೂ ಕುಳಿತು ಊಟ ಮಾಡುವಾಗ ರಾತ್ರಿ ಗೂಬೆ ಕೂಗುವ ಶಬ್ದದ ಬಗ್ಗೆ ಅಜ್ಜ ಹೇಳಿದರು . ಆಗ ಅರಿವಾಗಿದ್ದು..ರಾತ್ರಿ ಹೂಂ.. ಹೂಂ. ಎನ್ನುವುದು 'ಗೂಬೆ' ಎಂದು .


ಅಲ್ಲೇ ಹತ್ತಿರದ ಯಾವುದೋ ಮರದಲ್ಲಿರಬೇಕು, ಗೂಬೆ ಮುಂಡೇದು.., ಕಾಣೊದೂ ಇಲ್ಲ ..!!ಥೂ ..ಯಾರೋ ಹೂಂಗುಡುತ್ತಿದ್ದಾರೆ ಎಂದುಕೊಂಡೆನಲ್ಲಾ ನಾನು ಗೂಬೇನೆ !!

ಹಾಗಾದರೆ ಆ ಗೆಜ್ಜೆ ಶಬ್ದ ಎಲ್ಲಿಂದ ಬರುತ್ತಿದೆ ? ಮಹಡಿಗೆ ಹೋಗಿ, ಕೋಣೆಯ ಲೈಟ್ ಹಾಕಿದಾಗ , ಮತ್ತೆ ಶಬ್ದ ಕೇಳಿಸಿತು . ಪಕ್ಕದ ಕೋಣೆಗೆ ಹೋಗಿ ತಡಕಾಡಿದೆ. ಹಳೆಯ ಟ್ರಂಕುಗಳ ಮಧ್ಯದಲ್ಲಿ ಒಂದು ರೀತಿಯ 'ಹುಳ' ! ಅದು ಕೂಗಿದಾಗ ಗೆಜ್ಜೆಯದೇ ಸಪ್ಪಳ !!

ಬೆಳಕು ಕಂಡಾಗ ಮಾತ್ರ ಆ ರೀತಿ ಕೂಗುತ್ತಿತ್ತು ; ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರಬಹುದು .

ಹಾಂ ! ಅಂದು ಕಂಡ ಆಕೃತಿಯೂ ಕಂಡಿತು . ಬಲಗಡೆಯಿದ್ದ ವಿದ್ಯುತ್-ತಂತಿಯಿಂದ ಎಡಗಡೆಯ ಮರದತ್ತ ಹಾರಿದ 'ಬಾವಲಿ'..!! ಭಯದ ಕಣ್ಣಲ್ಲಿ ಅಂದು ಅದು ಏನೆಂದೇ ತಿಳಿದಿರಲಿಲ್ಲ .

ಸಾಗರದ ನೀರಿಗೆ ಆಣೆಕಟ್ಟು ಕಟ್ಟುವ ಕಾಯಕದಂತೆ , ನನ್ನ ನಗುವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ .ನನ್ನ ಪುಣ್ಯ ! ಮನೆಯಲ್ಲಿ ಹೇಳಿ ನಗೆಪಾಟಲಾಗಲಿಲ್ಲವಲ್ಲ .. ಆದರೂ ನಡೆದಿದ್ದೆಲ್ಲಾ ನೆನಪಾಗಿ, ನನ್ನೊಳಗಿನ ನಗು ನಿಲ್ಲಲಿಲ್ಲ .

ಮನೆಯಲ್ಲಂತೂ ಓದಲಿಲ್ಲ, ಹಾಸ್ಟೆಲ್ಗೆ ಹೋಗುವುದೇ ಒಳ್ಳೆಯದು. ಇನ್ನು ಈ ಗೆಳತಿಯರೊಡನೆ ದೆವ್ವದ ಸಿನೆಮಾ ನೋಡುವುದಿಲ್ಲ ; ಪ್ರೇತದ ಕತೆಯನ್ನೂ ಕೇಳುವುದಿಲ್ಲ .

ಮನದೊಳಗೆ ದೆವ್ವವನ್ನು ಸೃಷ್ಟಿಸಿಕೊಂಡು ವಾರವಿಡೀ ಸಂಕಟಪಟ್ಟೆನಲ್ಲಾ ...

ಅಮ್ಮ ಯಾವಾಗಲೂ ಹೇಳುತ್ತಿದ್ದಳು - " ದೇವರು ಮನುಷ್ಯನನ್ನು ಸೃಷ್ಟಿಸಿದರೆ, ಮನುಷ್ಯ ದೆವ್ವವನ್ನು ಸೃಷ್ಟಿಸುತ್ತಾನೆ ."

" ದೆವ್ವಕ್ಕೂ , ದೈವಕ್ಕೂ ನಮ್ಮೊಳಗಿನ ನಾವೇ ಜವಾಬ್ದಾರರು ."

ಅದು ನಿಜ ಎಂದೂ ಅರ್ಥವಾಯಿತು .

ಸರಕಾರಿ ಆಸ್ಪತ್ರೆಯಲ್ಲಿ ಧರ್ಮ ಸಮಾಗಮ

ಆಸ್ಪತ್ರೆ ಎಂದಾಕ್ಷಣ ರೋಗಿಗಳ ನರಳಾಟ, ದಾದಿಯರ  ಓಡಾಟ, ವೈದ್ಯರು, ಔಷಧದ ವಾಸನೆ.. ಏನೇನೆಲ್ಲ ಒಮ್ಮೆ ತಲೆಯಲ್ಲಿ ಹೀಗೆ ಸುಳಿದು ಹಾಗೆ ಮಾಯವಾಗಿ ಬಿಡುತ್ತವೆ..ಇನ್ನು ಸರ್ಕಾರಿ ಆಸ್ಪತ್ರೆ - ಮಹಿಳಾ ಮತ್ತು ಮಕ್ಕಳ ವಿಭಾಗ ಎಂದರಂತೂ ಮುಗಿದೇ ಹೋಯಿತು..ನವಜಾತ ಶಿಶುಗಳ ಅಳು, ಬಾಣಂತಿಯರು,  ಅವರನ್ನು ನೋಡಲು ಬರುವವರು, ದಿನವಿಡೀ ಈ ತಾಯಿ ಮಕ್ಕಳ ಆರೈಕೆ ಮಾಡುತ್ತಾ ಸುಸ್ತಾದ ಹಿರಿಯರು, ಬೆಳಗ್ಗೆಯಿಂದ ಕೆಲಸ ಮಾಡಿ ತಾಳ್ಮೆ ಕಳೆದುಕೊಂಡು ಅವರಿವರ ಮೇಲೆ ರೇಗಾಡುತ್ತಾ ಓಡಾಡುವ ದಾದಿಯರು... ಅಬ್ಬಬ್ಬಾ !!!
       ಕೆಲವು ತಿಂಗಳುಗಳ ಹಿಂದೆ ಒಂದು ಆಸ್ಪತ್ರೆಗೆ ಒಬ್ಬರನ್ನು ನೋಡಲು ಹೋಗಿದ್ದೆ. ನನ್ನಮ್ಮನೊಡನೆ ವಾರ್ಡ್ ಒಳಗಡೆ ಹೋದಾಗ ಆಶ್ಚರ್ಯದ ಜೊತೆ ಖುಷಿಯೂ ಆಗಿತ್ತು. ಹೊರಗಡೆ ಪ್ರಪಂಚದಲ್ಲಿ  ಧರ್ಮ, ಜಾತಿ ಎಂದು ಕಚ್ಚಾಡುವವರು ಒಮ್ಮೆ ನೋಡಲೇಬೇಕಾದಂತಹ ಸನ್ನಿವೇಶವದು.
ಒಂದು ಕೋಣೆಯಲ್ಲಿ ಮೂರು ಮಂಚ - ಎಂದರೆ ಮೂರು ತಾಯಂದಿರು. ಮೊದಲ ಹಾಸಿಗೆಯಲ್ಲಿದ್ದಾಕೆ ಕ್ರೈಸ್ತಳು, ಮಧ್ಯದಲ್ಲಿ ಮುಸಲ್ಮಾನಳು, ಮತ್ತೊಂದು ಹಾಸಿಗೆಯಲ್ಲಿದ್ದಾಕೆ ಹಿಂದೂ.
    ಅಲ್ಲಿ ಯಾವುದೇ ರೀತಿಯ ಮಡಿ - ಮೈಲಿಗೆ ಇರಲಿಲ್ಲ. ಎಲ್ಲರೂ ನಗುನಗುತ್ತಾ ಮಾತನಾಡಿಕೊಳ್ಳುತ್ತಿದ್ದರು. 
 ಮುಸಲ್ಮಾನ್ ಅಜ್ಜಿಯೊಬ್ಬಳು ಹಿಂದೂ ಆಂಟಿಯ ಬಳಿ "ಏನಮ್ಮ, ಸ್ವಲ್ಪ ಬಿಸಿನೀರು ಇದ್ರೆ ಕೊಡ್ತೀರಾ.. ಈ ನರ್ಸಮ್ಮ ಕೊಡೋದು ಮಗು ಮೈ ತೋಳ್ಸೋಕೆ ಸಾಲೋದೆ ಇಲ್ಲಾ " ಎಂದಾಗ ಈ ಆಂಟಿ ನಗುತ್ತಾ "ತಗೋಳಿ ಅಮ್ಮ ಎಷ್ಟು ಬೇಕಿದ್ರೂ ತಗೊಳ್ಳಿ" ಅಂದ್ರು. 
ಮಧ್ಯಾಹ್ನ ತಡವಾಗಿತ್ತು, ಹಿಂದೂ ಆಂಟಿ ಊಟಕ್ಕೆ ಹೋಗಲು ಪೇಚಾಡುತ್ತಿದ್ದಾಗ, ಕ್ರೈಸ್ತ ಬಾಣಂತಿಯ ಕಡೆಯವಳೊಬ್ಬಳು, "ಆಂಟಿ ನೀವು ಊಟಕ್ಕೆ ಹೋಗಿ, ನಾನು ಇಲ್ಲೇ ಇರ್ತೀನಿ. ಮಗುವಿಗೆ ಎಚ್ಚರವಾದ್ರೆ  ಮಲಗಿಸ್ತೀನಿ ಬಿಡಿ "ಎಂದಾಗ ನಿಟ್ಟುಸಿರು ಬಿಡುತ್ತ ಆಂಟಿ ಊಟಕ್ಕೆ ಹೋದರು. 

        ಇನ್ನು ಬಾಣಂತಿಯನ್ನು ಮಾತನಾಡಿಸಲು ಬರುವವರಾದರೂ ಅಷ್ಟೇ.. ಪಕ್ಕದ ಮಂಚದಲ್ಲಿಯೂ ಒಂದು ಮಗುವನ್ನು ನೋಡಿ ಪ್ರಶ್ನಿಸಲು ಪ್ರಾರಂಭಿಸುತ್ತಿದ್ದರು - "ಯಾವ ಮಗು?" ಆರೋಗ್ಯವಾಗಿದ್ಯಾ?" "ಎಷ್ಟು ತೂಕವಿದೆ? "
        ಬಾಣಂತಿಯರೂ ಕುಳಿತು ತಮ್ಮ ಒಂಭತ್ತು ತಿಂಗಳ ಅನುಭವ, ಕಷ್ಟ - ಸುಖಗಳನ್ನು ಮಾತನಾಡುತ್ತಿದ್ದರು.  ಆ ಬಾಣಂತಿಯರ ತಾಯಿಯಂದಿರ ಮಾತುಕತೆ ಇನ್ನೂ ಮಜವಾಗಿತ್ತು. 
"ನಿಮ್ಮಲ್ಲಿ ಬಾಣಂತಿಗೆ ಪಥ್ಯವಿದೆಯೇ?" 
"ಮಗುವಿಗೆ ಗಟ್ಟಿ ಪದಾರ್ಥವನ್ನು ಎಷ್ಟು ತಿಂಗಳ ನಂತರ ತಿನ್ನಿಸುತ್ತೀರಿ?"
   ಎಂಬ ಪ್ರಶ್ನೆಗಳೆಲ್ಲ ಅವರ ಕುತೂಹಲಗಳ ಪ್ರತೀಕವಾಗಿದ್ದವು. 
          ಮಕ್ಕಳನ್ನು ದೇವರೆನ್ನುತ್ತಾರೆ. ಬಹುಶಃ ಆ ಮೂವರು ಮಕ್ಕಳಿರಬಹುದು ಅಂತಹ ಒಂದು ಸನ್ನಿವೇಶದ ಸೃಷ್ಟಿಕರ್ತರು. ಇಲ್ಲವಾದಲ್ಲಿ ಇದು ಹೇಗೆ ಸಾಧ್ಯವಾಗುತ್ತಿತ್ತು?  
     ಕ್ರೈಸ್ತ ಮಗುವಿನ ಎದುರು ಅವರ ಕುಟುಂಬದವರೆಲ್ಲ ಕುಳಿತು ಪ್ರಾರ್ಥಿಸುತ್ತಿದ್ದುದನ್ನು  ನಾನು ಮೊದಲ ಬಾರಿ ನೋಡಿದ್ದು.  ಅದೂ ಕನ್ನಡದಲ್ಲಿ. ಅವರನ್ನು ನೋಡಲು ಬಂದವರ ಬಳಿಯೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು.  ಅವರನ್ನು ಮಾತನಾಡಿಸಿ, ನಿಮ್ಮ ಮನೆಯಲ್ಲಿಯೂ ನೀವು ಕನ್ನಡದಲ್ಲಿಯೇ ಮಾತನಾಡುತ್ತೀರಾ ಎಂದು ಕೇಳಿದ್ದೆ ನಾನು. 
        ಉತ್ತರ ಮಾತ್ರ ಬಹಳ ಸುಂದರವಾಗಿತ್ತು - "ನಾವು ಪೂರ್ತಿ ಕನ್ನಡದವರೇ ಕಣಮ್ಮಾ, ಹುಟ್ಟಿ ಬೆಳೆದಿದ್ದು ಇಲ್ಲಿಯೇ. ಮೂಲ ಊರು ಬೇರೆ ಕಡೆ ಆದ್ರೂ ಇನ್ನೂ ನೋಡಿಲ್ಲ. ನಮ್ಮ  ಭಾಷೆಯಲ್ಲಿ ಅಷ್ಟೊಂದು ಮಾತನಾಡಲ್ಲ. ಅದರಲ್ಲೂ ಮಕ್ಕಳ ಎದುರಿಗಂತೂ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಲ್ಲ. "
      ನಾವೆಲ್ಲರೂ ಒಂದೇ ಅಲ್ವಾ.. ಎಲ್ಲರೂ ಕನ್ನಡವನ್ನು ಪ್ರೀತಿಸುತ್ತೇವೆ.... 
     ಆಸ್ಪತ್ರೆಯಲ್ಲಿ ನನಗೆ ಕಂಡ ಸತ್ಯವೇನೆಂದರೆ ಇನ್ನೂ ಬಹಳಷ್ಟು ವಿಚಾರಗಳಲ್ಲಿ ನಮ್ಮೆಲ್ಲರಲ್ಲಿಯೂ ಸಾಮ್ಯತೆ ಇದೆ.  ಬಾಣಂತಿಗೆ ಕೊಡುವ ಆಹಾರ, ಮಗುವನ್ನು ಮಲಗಿಸುವ ರೀತಿ, ದೇವರು ಯಾರೇ ಆಗಿರಲಿ ಆದರೆ ತಾಯಿ -ಮಗು ಆರೋಗ್ಯವಾಗಿರಲಿ ಎಂಬ ಪ್ರಾರ್ಥನೆ  ಎಲ್ಲವೂ ಸರಿ ಸುಮಾರು ಒಂದೇ ರೀತಿಯಲ್ಲಿ ಇತ್ತು. 

       ಪ್ರಸೂತಿ ಕೋಣೆಯಿಂದ ದಾದಿ ಹೊರಬಂದು 'ಗಂಡು ಮಗು' ಎಂದಾಗ ಎಲ್ಲರೂ ಸಂಭ್ರಮಿಸುವ ಪರಿ, 'ಹೆಣ್ಣು ಮಗು' ಎಂದಾಗ 'ಅಯ್ಯೋ ಹೆಣ್ಣಾ' ಎಂಬ ಬೇಸರದ ಮಾತು, ಎಲ್ಲರ ಮೌನ - ಒಂದು ರೀತಿಯ ಸೂತಕದ ಛಾಯೆ.... ಈ ವಿಷಯದಲ್ಲಿ ಮಾತ್ರ ಅಂದಿಗೂ-ಇಂದಿಗೂ,  ಎಲ್ಲರೂ ಒಂದೇ ಎಂಬುದರಲ್ಲಿ ಎರಡು ಮಾತಿಲ್ಲ...!
      ಎರಡನೇ ದಿನ ಹೋದಾಗ, ಆಸ್ಪತ್ರೆಯಲ್ಲಿ ಜನಿಸಿದ ಒಂಭತ್ತು ಶಿಶುಗಳಲ್ಲಿ  ಎಂಟು ಗಂಡು ಮಕ್ಕಳು ಎಂದು ದಾದಿಯರು ಪಟ್ಟಿಯಲ್ಲಿ ದಾಖಲಿಸಿಕೊಳ್ಳುತ್ತ ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ಒಬ್ಬ ತಂದೆ ಮಾತ್ರ ಆಗ ತಾನೇ ಹುಟ್ಟಿದ ಶಿಶುವನ್ನು ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ. ಎಲ್ಲರಿಗೂ ಕರೆ ಮಾಡಿ ಹೆಣ್ಣು ಮಗು, ನನ್ನಾಸೆಯಂತೆ ನವರಾತ್ರಿಯಲ್ಲಿ ಪುಟ್ಟಲಕ್ಷ್ಮಿ  ಮನೆಗೆ ಬಂದಳು ಎಂದು ಸಂಭ್ರಮಿಸುತ್ತಿದ್ದ. ಅಲ್ಲಿದ್ದ ನರ್ಸ್ ಕೂಡ ಅವನ ಖುಷಿಯನ್ನು ನೋಡಿ,  "ನಿಮ್ಮ ಮಗಳು ನಿಜವಾಗಲೂ ಲಕ್ಷ್ಮಿಯೇ. ಇವತ್ತು ಹುಟ್ಟಿದ ಮಕ್ಕಳಲ್ಲಿ ಇದೊಂದೇ ಹೆಣ್ಣು ಮಗು" ಎಂದಾಗ ಅವನು ಏನು ಉತ್ತರಿಸಬೇಕೆಂದು ತೋಚದೆ ಆ ಮಗುವಿಗೆ ಒಂದು ಮುತ್ತಿಟ್ಟ. ಅವನ ಪ್ರೀತಿಯನ್ನು ಸುತ್ತಲಿದ್ದ ಎಲ್ಲರೂ ನೋಡುತ್ತಾ ನಿಂತಿದ್ದರು. 

          ಇಲ್ಲಿ ನಾನು ಹಿಂದೂ, ಮುಸಲ್ಮಾನ್, ಕ್ರೈಸ್ತ  ಎಂದು ಸ್ಪಷ್ಟಪಡಿಸಲು ಕಾರಣವಿದೆ. ಧರ್ಮಬೇಧ ನಮ್ಮಲ್ಲಿಲ್ಲ. ಕೇವಲ ಆಸ್ಪತ್ರೆಯಲ್ಲಷ್ಟೇ ಅಲ್ಲ, ಹಲವು ಊರುಗಳಲ್ಲಿ ಎಲ್ಲರೂ ಒಟ್ಟಾಗಿಯೇ ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ, ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೆ. ಆಸ್ಪತ್ರೆಯ ಒಂದು ಕೋಣೆ ಚಿಕ್ಕ ಉದಾಹರಣೆಯಷ್ಟೇ. 
      ಎಲ್ಲೋ ಒಂದು ಕಡೆ ಹೊತ್ತಿ ಉರಿಯುತ್ತಿದ್ದರೆ, ಅಲ್ಲಿಯ ಬೆಂಕಿಯನ್ನು ಆರಿಸಬೇಕೇ ಹೊರತು ಇನ್ನೊಂದು ಕಡೆ ಬೆಂಕಿ ಹಚ್ಚುವುದಲ್ಲ. 

       ಆ ಕೋಣೆಯಲ್ಲಿದ್ದ ಮೂವರು ಮಕ್ಕಳಿಗೆ ತಾವು ಯಾವ ಧರ್ಮದವರೆಂದು ಗೊತ್ತಿಲ್ಲ. ಸುತ್ತಲಿನ ಪರಿಸರ, ಮನೆಯ ಸಂಸ್ಕೃತಿ ಅವರನ್ನು ಬೆಳೆಸುತ್ತದೆ. 
    ಮನೆಯಲ್ಲಿ ಕನ್ನಡ ಮಾತನಾಡಿದರೆ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಹಿರಿಯರು ಇತರ ಧರ್ಮಗಳನ್ನು ಗೌರವಿಸಿ, ಅವರೊಡನೆ ಮಾತನಾಡಿದರೆ ಮಕ್ಕಳೂ ಅದನ್ನೇ ಪಾಲಿಸುತ್ತಾರೆ.  
      ನಿಮ್ಮ ಧರ್ಮವನ್ನು ಪ್ರೀತಿಸಿ, ಪೂಜಿಸಿ. - ಇತರ ಧರ್ಮಗಳನ್ನು ಗೌರವಿಸಿ...

ಮಾಯವಾದ ವೆಂಕಟೇಶ

ಅವನನ್ನು ನಾನು ಮೊದಲ ಬಾರಿ ಭೇಟಿಯಾಗಿದ್ದು ಎರಡು ಸಾವಿರದ ಹದಿನೆಂಟರ ಜುಲೈನಲ್ಲಿ.. ಇನ್ನೂ ಅಂದಿನ ದಿನ ಚೆನ್ನಾಗಿ ನೆನಪಿದೆ. 
 'ಮಾಯದ ಕೊಡಲಿ' ಎಂಬ ನಾಟಕವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ನಿರ್ದೇಶಿಸುತ್ತಿದ್ದರು ಅಪ್ಪ. 
ಅದು ಐ. ಕೆ. ಬೊಳುವಾರ್ ಅವರ ಕಿರು ನಾಟಕ ಆಧಾರಿತ ಪರಿಸರ ಸ್ನೇಹೀ ನಾಟಕ. 

ಬಹಳ ಸುಂದರವಾದ ಸಂದೇಶವುಳ್ಳ ಮಕ್ಕಳ ನಾಟಕವದು. ಅದರ ನೀತಿ ಎಲ್ಲರಿಗೂ ಅನ್ವಯಿಸುವಂತದ್ದು. "ನಿಮ್ಮ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡಬೇಡಿ, ನದಿಗಳನ್ನು ಕಲುಷಿತಗೊಳಿಸಬೇಡಿ. ಭೂಮಾತೆಯನ್ನು ಕಾಪಾಡಿ -ಆಕೆ ನಿಮ್ಮನ್ನು ಎಂದಿಗೂ ರಕ್ಷಿಸುತ್ತಾಳೆ" ಎಂಬುದು ಸಂದೇಶ. 
ಅನಿವಾರ್ಯ ಕಾರಣಗಳಿಂದ ಆ ನಾಟಕದ 'ಕತೆ ಹೇಳುವ ಅಜ್ಜಿ 'ಯ ಪಾತ್ರವನ್ನು ನಾನು ನಿರ್ವಹಿಸಬೇಕಾಗಿ ಬಂತು.  

  ಆಗ ಮೊದಲಬಾರಿ ಅವನನ್ನು ನೋಡಿದ್ದು. ಎಲ್ಲರೂ ನನಗೆ ಮೊದಲಿನಿಂದಲೂ ಪರಿಚಿತರು.
ನನ್ನ ತಮ್ಮನ ಮೂವರು ಗೆಳೆಯರು ಮಾತ್ರ ಹೊಸತಾಗಿ ಪರಿಚಯವಾದವರು.ಮೊದಲ ದಿನ ಈ ಮೂವರು ಹುಡುಗರು ಸರಿಯಾಗಿ ಮಾತನಾಡದಿದ್ದರೂ, ಒಂದು ವಾರದಲ್ಲಿ ಪ್ರೀತಿಪಾತ್ರರಾಗಿಬಿಟ್ಟರು. ಅವರ ಮುಗ್ಧತೆ, ಮಾತುಗಳು(ಚೇಷ್ಟೆಗಳು ಕೂಡ) ನನಗೆ ಬಹಳ ಇಷ್ಟವಾದವು.  

     ಅಲ್ಲಿದ್ದವರೆಲ್ಲರಿಗೂ ಹಿರಿಯಕ್ಕ ನಾನು...ಹೋದಲ್ಲಿ, ಬಂದಲ್ಲಿ, ಕುಂತಲ್ಲಿ,ನಿಂತಲ್ಲಿ, ನಿಮಿಷಕ್ಕೊಮ್ಮೆಯಾದರೂ ಅಕ್ಕಾ ಎಂದು ಯಾರಾದರೊಬ್ಬರು ಕರೆಯದೇ ಇರುತ್ತಿರಲಿಲ್ಲ. 

    ಅವರಲ್ಲಿ ಇವನೂ ಒಬ್ಬ. ಹೆಸರು -'ವೆಂಕಟೇಶ'. ದೊಡ್ಡ ಕಣ್ಣಿನ, ಮುದ್ದು ನಗುವಿನ, ಚಿಗುರು ಮೀಸೆಯ ಹುಡುಗ. ಅದು ಅವನ ಮೊದಲ ನಾಟಕ. ಇಷ್ಟವಿರದಿದ್ದರೂ, ತಮ್ಮನ ಒತ್ತಾಯಕ್ಕೆ ಮಣಿದು ಬಂದಿದ್ದವನು, ಬಹಳ ಬೇಗ ಆಸಕ್ತಿ ಬೆಳೆಸಿಕೊಂಡ.
ರಂಗಭೂಮಿಯೇ ಹಾಗೆ. ಒಮ್ಮೆ ಸೆಳೆತಕ್ಕೆ ಸಿಲುಕಿದರೆ ಆಚೆ ಬರಲು ಅಸಾಧ್ಯ !!

   ನಾಟಕದ ಮಾತುಗಳು, ಧ್ವನಿಯ ಏರಿಳಿತಗಳು, ರಂಗದ ಮೇಲಿನ ಹೆಜ್ಜೆ, ಪ್ರತಿಯೊಂದನ್ನು ಬಹಳ ಶ್ರದ್ಧೆಯಿಂದ ಕಲಿಯುತ್ತಿದ್ದವನು, ಒಮ್ಮೆ ನಮ್ಮ ಸಂಗೀತದ ಮಾಸ್ತರರ ಬಳಿ ಹೋಗಿ ನನಗೂ ಹೇಳಿಕೊಡಿ ಎಂದು ಹಠ ಮಾಡಿ 'ಸರಿಗಮಪದನಿಸ' ನುಡಿಸುವುದನ್ನೂ ಕಲಿತ. ನಿಧಾನವಾಗಿ ಯಕ್ಷಗಾನದ ಹೆಜ್ಜೆಗಳನ್ನು ಕಲಿಯಲು ಪ್ರಾರಂಭಿಸಿದ್ದ. 

      ಈ ಮಧ್ಯೆ ಒಬ್ಬೊಬ್ಬರಿಗೆ ಒಂದೊಂದು ನಾಮಕರಣವಾಗಿತ್ತು. 'ವೆಂಕಟೇಶ' ಎನ್ನುವಲ್ಲಿಂದ 'ಯಂಕ್ಟೇಸಾ.. ' ಎನ್ನುವವರೆಗೆ ಸಲುಗೆ ಬೆಳೆದಿತ್ತು . 

    ಇದೆಲ್ಲದರ ನಡುವೆ ಮೊದಲ ಪ್ರದರ್ಶನ ಸಿದ್ದಾಪುರದ ಪ್ರಶಾಂತಿ ಶಾಲೆಯಲ್ಲಿ ನಡೆಯಿತು. ಮಾರನೇ ದಿನ ಬೆಳಿಗ್ಗೆಯೇ ಎರಡನೇ ಪ್ರದರ್ಶನ -ಆ ಶಾಲೆಯ ಮಕ್ಕಳಿಗಾಗಿ. 

   ಈಗಾಗಲೇ ಹೇಳಿರುವಂತೆ ಅದು "ಚಿಕ್ಕವರಿಗಾಗಿ ದೊಡ್ಡವರು ಬರೆದ, ದೊಡ್ಡವರಿಗಾಗಿ ಚಿಕ್ಕವರು ಮಾಡುವ ನಾಟಕ". 

   ಎಲ್ಲ ದಿನವೂ ಸರಿಯಾಗಿಯೇ ಇದ್ದ ವೆಂಕಟೇಶ ಅಂದು ಬಹಳ ಹೆದರಿದ್ದ. ಮೊದಲ ಬಾರಿ ರಂಗದ ಮೇಲೆ ನಿಂತಾಗ ಆಗುವ ಭಯ ಸಹಜ. ಮುಖದ ಮೇಲಿನ ಬಣ್ಣ ಬೆವರಲ್ಲಿ ಕರಗಿ ಇಳಿಯತೊಡಗಿತ್ತು. ಆತನ ಅಪ್ಪ ಅಮ್ಮ ಶಿರಸಿಯಿಂದ ನಾಟಕ ನೋಡಲು ಬಂದಿದ್ದರು. ಧೈರ್ಯ ಹೇಳಿದ್ದರು ಕೂಡ. ನಾವೆಲ್ಲ ಮೊದಲ ಬಾರಿ ರಂಗದ ಮೇಲೆ ಹೋಗುವವರಿಗೆ ಧೈರ್ಯ ತುಂಬಿದೆವು. 

  ನಾಟಕ "ಆಂಗಿಕಂ ಭುವನಂ ಯಸ್ಯ... "ಶ್ಲೋಕ ದೊಂದಿಗೆ ಪ್ರಾರಂಭವಾಯಿತು. ಎಲ್ಲವೂ ಸರಾಗವಾಗಿಯೇ ಸಾಗುತ್ತಿತ್ತು.
ಮಧ್ಯದಲ್ಲಿ ವೆಂಕಟೇಶ ಒಂದು ಎಡವಟ್ಟು ಮಾಡಿದ್ದ. ಅವನದು ಡಂಗುರದವನ ಪಾತ್ರ. ನಾಟಕದಲ್ಲಿ ಮೂರು ಬಾರಿ ರಂಗದ ಮೇಲೆ ಬರುತ್ತಾನೆ. ಚಿಕ್ಕ ಪಾತ್ರವಾದರೂ, ಅವನ ಪ್ರತಿ ಮಾತು ಒಂದೊಂದು ಅಂಕ (scene)ವನ್ನು ಪ್ರಾರಂಭಿಸುತ್ತದೆ. ಅವನು ಎಷ್ಟು ಭಯಭೀತನಾಗಿದ್ದನೆಂದರೆ ಎರಡನೇ ಸೀನ್ -ನ ಪ್ರಾರಂಭಕ್ಕೆ ಹೇಳಬೇಕಿದ್ದ ಮಾತನ್ನು ಮೊದಲ ಸೀನ್ -ನಲ್ಲೇ ಹೇಳುತ್ತಾ ರಂಗದ ಎಡದಿಂದ ಬಲಕ್ಕೆ ಹೋಗಿಬಿಟ್ಟ. 

ನಾವೆಲ್ಲ ಇದೇನು ಮಾಡಿಬಿಟ್ಟ ಇವನು ಎಂದು ಬಾಯಿ ಬಿಟ್ಟು ನೋಡುತ್ತಿದ್ದೆವು.ರಂಗದ ಮೇಲಿದ್ದವರಿಂಗಂತೂ
ಒಂದು ಕ್ಷಣ ಏನಾಯಿತೆಂದೇ ತಿಳಿಯಲಿಲ್ಲ. 

  ಇಡೀ ಸೀನ್ (scene) ಹಾರಿ ಹೋಗುವುದಿತ್ತು. ಅಷ್ಟರಲ್ಲಿ ಅವನಿಗೆ ತಪ್ಪಿನ ಅರಿವಾಗಿತ್ತು. ಇನ್ನೇನು ಆ ಸೀನ್ -ನ ಲೈಟ್ಸ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಮತ್ತೊಮ್ಮೆ ಡಂಗುರದ ಧ್ವನಿ ಮೊಳಗಿತು. "ಕೇಳ್ರಪ್ಪೋ ಕೇಳಿ..." ಎನ್ನುತ್ತಾ ನಮ್ಮ ಡಂಗುರದವ ಮತ್ತೊಮ್ಮೆ ಬಂದ. ತನ್ನ ತಪ್ಪನ್ನು ಸರಿಪಡಿಸಿ, ಸರಿಯಾದ ಡೈಲಾಗ್ ಹೇಳಿ ಹೋದ. ರಂಗದ ಹಿಂದೆ ಬಂದು, "ಅಕ್ಕಾ, ನಾನು ತಪ್ಪು ಮಾಡ್ಬಿಟ್ಟೆ. ನನ್ನಿಂದ ಎಲ್ಲಾ ಹಾಳಾಯ್ತು. ಇಷ್ಟೊತ್ತನಕ ಎಲ್ಲಾ ಸರಿ ಇತ್ತು, ನಾನೇ ಎಲ್ಲದನ್ನು ಹಾಳು ಮಾಡ್ಬಿಟ್ಟೆ.. ಮಾವ ಬೈತಾರೆ ಈಗ. ಏನ್ಮಾಡ್ಲಿ?  ನಾನು ಬೇಕು ಅಂತ ಮಾಡಿಲ್ಲ ಅಕ್ಕಾ " ಎಂದ. ಇನ್ನೊಂದು ಕ್ಷಣದಲ್ಲಿ ನೀರು ಕಣ್ಣಿಂದ ಕೆಳಗೆ ಜಾರುವುದಿತ್ತು. 

 "ನೋಡು ಆಗಿದ್ದು ಆಗಿ ಹೋಯ್ತು. ಹೀಗಾದಾಗಲೇ ನಾವು ಕಲಿಯೋದು. ನಿಂಗೆ ಯಾರೂ ಬೈಯ್ಯೋದಿಲ್ಲ. ನೆಕ್ಸ್ಟ್ ಸೀನ್ ಚೆನ್ನಾಗಿ ಮಾಡು " ಎಂದೆಲ್ಲ ಧೈರ್ಯ ಹೇಳಿ ಕಳಿಸಿದ್ದಾಯ್ತು. 

 ಆದರೂ ಅವನಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ನಾಟಕ ಮುಗಿದ ನಂತರ ಅಪ್ಪನ ಬಳಿ ಬಂದು ಕ್ಷಮೆ ಕೇಳಿದ. ಎಷ್ಟು ಚೆನ್ನಾಗಿ ನಾಟಕ ಮುಗಿದಿತ್ತೆಂದರೆ ಏನು ತಪ್ಪಾಗಿತ್ತು ಎಂದೂ ಅಪ್ಪನಿಗೆ ನೆನಪಿರಲಿಲ್ಲ. 

" ನೋಡು, ತಪ್ಪು ಯಾರು ಮಾಡುವುದಿಲ್ಲ ಹೇಳು.. ನಾನೂ ಇದನ್ನೆಲ್ಲಾ ಮಾಡಿದ್ದೀನಿ. ಆದ್ರೆ ನೀನು ತಕ್ಷಣಕ್ಕೆ ಹಿಂತಿರುಗಿ ಬಂದು ತಪ್ಪನ್ನು ಸರಿ ಪಡಿಸಿದೆಯಲ್ಲ , ಅದು ನಿಜವಾದ ಕಲಾವಿದನ ಲಕ್ಷಣ.ಇಲ್ಲಿ ಸೇರಿದ ನೂರು -ನೂರೈವತ್ತು ಪ್ರೇಕ್ಷಕ ಪ್ರಭುಗಳಲ್ಲಿ ಎಲ್ಲರೂ ನಾಟಕವನ್ನು ಆಸ್ವಾದಿಸಿದ್ದಾರೆ. ಯಾರೂ ನಿನ್ನ ತಪ್ಪನ್ನು ಗಮನಿಸಿ ದೂರಲಿಲ್ಲ. ಇದೆಲ್ಲ ಮೊದಮೊದಲು ಸಹಜ ಬಿಡು... "ಎಂದು ತಣ್ಣಗಿನ ದನಿಯಲ್ಲಿ ಅಪ್ಪ ಹೇಳಿದಾಗ ಅವನು ಸ್ವಲ್ಪ ಸಾವರಿಸಿಕೊಂಡ. 

 " ಮಾವ, ಇನ್ಯಾವತ್ತೂ ಈ ತಪ್ಪು ಆಗಲ್ಲ. ಇನ್ನು ಎಲ್ಲಾ ನಾಟಕಕ್ಕೂ ಬರ್ತೀನಿ.ರಂಗಭೂಮಿಲಿ ಯಾವತ್ತೂ ನಿಮ್ಮ ಜೊತೆ ಇರ್ತೀನಿ. ನೋಡ್ತಾ ಇರಿ, ಇನ್ನೂ ಕಲಿತೀನಿ, ಚಪ್ಪಾಳೆ ಪಡೀತೀನಿ " ಅಂತ ಅವತ್ತು ಅವನು ಹೇಳಿದಾಗ ಆ ಕಣ್ಣುಗಳಲ್ಲಿ ಎಷ್ಟು ಹೊಳಪಿತ್ತು !!

    ಮೂರನೇ ಪ್ರದರ್ಶನ ಸಾಗರದಲ್ಲಿತ್ತು. ಎಲ್ಲಾ ಒಂದು ವಾಹನದಲ್ಲಿ ಹೋಗುತ್ತಿದ್ದೆವು. ತಾಳಗುಪ್ಪದಲ್ಲಿ ರೈಲು ಬರುವ ಸಮಯ ಎಂದು ಗೇಟ್ ಹಾಕಿದ್ದರಿಂದ ವಾಹನಗಳೆಲ್ಲ ಹನುಮಂತನ ಬಾಲದಂತೆ ಸಾಲಾಗಿ ನಿಂತಿದ್ದವು. ಅಂತೂ ರೈಲು ಬಂತು. 

  ಅಚಾನಕ್ಕಾಗಿ ಈ ವೆಂಟಕೇಶ "ಹಾಂ.... ರೈಲು ಇಷ್ಟೆಲ್ಲಾ ಉದ್ದ ಇರುತ್ತಾ... ನನಗೆ ಗೊತ್ತೇ ಇರಲಿಲ್ಲ " ಎಂದು ರಾಗ ಎಳೆದ. ಎಲ್ಲರೂ ಗೊಳ್ಳೆಂದು ನಕ್ಕರು. ಇದ್ದವರೆಲ್ಲ ಅವನದೇ ತರಗತಿಯವರಾದ್ದರಿಂದ ಕಿಚಾಯಿಸಲು ಪ್ರಾರಂಭಿಸಿದರು.. "ಅದ್ಕೆ ಹೇಳೋದು ವೆಂಕ್ಟೇಶಾ, ಪುಸ್ತಕದ ಹುಳ ಆಗ್ಬಾರ್ದು ಅಂತಾ, ನೋಡು ಈ ಪುಸ್ತಕದ ಬದ್ನೇಕಾಯಿ ಸುಟ್ಟ್ಕೊಂಡು ತಿನ್ನೋಕೂ ಬರೊಲ್ಲ, ಇನ್ನೂ ರೈಲ್ ನೋಡಿಲ್ವಾ ನೀನು " ಎಂದೆಲ್ಲ ಹೇಳುತ್ತಿದ್ದರು.   ಕಾರಣ ಇಷ್ಟೇ, ಅವನು ತರಗತಿಯಲ್ಲಿ ಮುಂದಿನ ಸಾಲಿನ ಹುಡುಗ, ಯಾವ ಕ್ಲಾಸುಗಳಿಗೂ ಬಂಕ್ ಮಾಡುವವನಲ್ಲ, ಓದಿನಲ್ಲಿ ಮುಂದೆ.. 

 ಆದರೆ ಅವನು ಇವರ್ಯಾರಿಗೂ ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ದೊಡ್ಡ ಕಣ್ಣುಗಳನ್ನು ಇನ್ನೂ ಅರಳಿಸಿ, ರೈಲು ಹೋಗುವುದನ್ನೇ ನೋಡುತ್ತಿದ್ದ. ನನಗೆ ಅಂದು ಅವನ ಕಾಲೆಳೆಯಲು ಮನಸ್ಸೇ ಬರಲಿಲ್ಲ. ಪುಟ್ಟ ಮಗುವಿನ ರೀತಿಯ ಅವನ ಮುಗ್ಧತೆ ಅವತ್ತು ಏಕೋ ಬಹಳ ಇಷ್ಟವಾಯಿತು.

   ಆವತ್ತಿನ ಪ್ರದರ್ಶನದಲ್ಲಿ ಆತ ಹೇಳಿದ ಮಾತನ್ನು ಮಾಡಿ ತೋರಿಸಿದ.ಎಲ್ಲೂ ಎಡವದೇ, ಮಾತು ತಪ್ಪದೇ, ಹೆದರದೇ, ಕೊನೆಯಲ್ಲಿ ಭೇಷ್ ಎನ್ನಿಸಿಕೊಂಡ. 

    ನಾಲ್ಕು ಪ್ರದರ್ಶನಗಳಾದ ಮೇಲೆ ಎಲ್ಲರಿಗೂ ಪರೀಕ್ಷೆ ಎಂಬ ಕಾರಣಕ್ಕೆಆ ನಾಟಕವನ್ನು ನಿಲ್ಲಿಸಿದೆವು. ಅದಾದ ನಂತರವೂ ಆತ ಎಷ್ಟೋ ಬಾರಿ ನನ್ನ ಬಳಿ ಮಾತನಾಡಿದ, ಅವನ ದ್ವಿತೀಯ ಪಿ. ಯು. ಪರೀಕ್ಷೆಯ ಕೆಲವು ವಿಷಯಗಳ ಕುರಿತು ಕೇಳಿದ. ಪರೀಕ್ಷೆ ಮುಗಿಯಿತು. ಅದರ ಫಲಿತಾಂಶ ಕೂಡ ಬಂತು. 

 ಒಳ್ಳೆಯ ಅಂಕಗಳನ್ನು ಗಳಿಸಿದ್ದ,ತಕ್ಷಣ ನನಗೆ ತಿಳಿಸಿದ್ದ.  
ಕೇವಲ ಎರಡೇ ದಿನ, ಒಂದು ಭೀಕರ ಸುದ್ದಿ ಹೇಳಿದ ನನ್ನ ತಮ್ಮ.. ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿಯೇ ಕಣ್ಣುಗಳು ತುಂಬಿ ಬಂದಿದ್ದವು.

"ವೆಂಕಟೇಶ ಇನ್ನಿಲ್ಲ. "

ಏನು? ಎಂದೆ. 
ನನಗೆ ಕೇಳಿಲ್ಲವೆಂದಲ್ಲ. ಹೇಳಿದ್ದು ತಪ್ಪಿರಬಹುದೇನೋ ಎಂದು. 
ಇಲ್ಲ.. ತಪ್ಪಿಲ್ಲ.. ಮತ್ತೊಮ್ಮೆ ಅದನ್ನೇ ಹೇಳಿದ. 

ಏನು ಮಾತನಾಡಲಿ ಎಂದು ತಿಳಿಯದೆ, ಒಮ್ಮೆಗೇ ಏನಾಯಿತು, ಯಾಕಾಯಿತು, ಹೇಗಾಯಿತು ಎಂದು ಪ್ರಶ್ನೆಗಳ ಮಳೆ ಸುರಿಸಿದೆ. ಯಾವುದೂ ಸರಿಯಾಗಿ ಗೊತ್ತಿರಲಿಲ್ಲ ಆಗ. ಅಷ್ಟರಲ್ಲಿ ಅಪ್ಪ ಕೂಡ ಬಂದರು. ಅವರೂ ನಂಬಲು ತಯಾರಿರಲಿಲ್ಲ. 

  ಕೊನೆಗೂ ಫೋಟೋ ಬಂತು, ಹಂಚಳ್ಳಿಯ ಹೊಳೆಯ ನೀರಿಗೆ ಇಬ್ಬರು ಹುಡುಗರು ಬಲಿಯಾಗಿದ್ದರು.ಅವರಲ್ಲಿ ಇವನೂ ಒಬ್ಬ . 

 ದೇವರೇ.. ಹೀಗಾಗಿರಲು ಸಾಧ್ಯವಿಲ್ಲ. ಇದು ಅವನ ಫೋಟೋ ಆಗಿರದಿರಲಿ ಎಂದೆಲ್ಲ ಮನಸ್ಸು ಹೇಳಿದರೂ, ಸತ್ಯ ಸುಳ್ಳಾಗಲು ಸಾಧ್ಯವೇ?  

ಒಂದು ವರುಷದ ಹಳೆಯ ನೆನಪೆಲ್ಲ ಗಾಳಿಯಲ್ಲಿ ಹಾರುವ ಹಾಳೆಗಳಂತೆ ಕಣ್ಣ ಮುಂದೆ ಹಾಯ್ದವು. 

  ತಮ್ಮನ ಬಳಿ "ನೀನು ಅವನ ದೇಹವನ್ನು ನೋಡಲು ಹೋಗುವೆಯಾ? " ಎಂದೆ. 

"ನನ್ನಲ್ಲಿ ಅಷ್ಟು ಧೈರ್ಯವಿಲ್ಲ. ಯಾವಾಗ್ಲೂ ನಗ್ತಾ ಇರೋ ವೆಂಕಟೇಶನನ್ನ ನೋಡಿದ್ದೆ. ಈಗ ಹೀಗೆ ನೋಡೋಕೆ ನನ್ನಿಂದ ಸಾಧ್ಯನೇ ಇಲ್ಲ.ಫೋಟೋದಲ್ಲೇ ದೇಹವನ್ನ ನೋಡೋಕಾಗಲ್ಲ, ಇನ್ನು ಎದುರಲ್ಲಿ ಹೇಗೆ ನೋಡ್ಲಿ? ನಾನು ಹೋಗೋದಿಲ್ಲಾ "ಎಂದ. 

ಎಲ್ಲರ ಸ್ಥಿತಿಯೂ ಹಾಗೆ ಇತ್ತು. ಹಾಗಾಗಿ ನಾವ್ಯಾರೂ ಹೋಗಿಲ್ಲ. ಇವತ್ತಿಗೂ 'ವೆಂಕಟೇಶ ' ಎಂದರೆ ಆ ಮಾತುಗಳು, ನಗು, ಸಣ್ಣ ಚೇಷ್ಟೆಗಳು ನೆನಪಾಗುತ್ತವೆ, ಆ ದೇಹದ ಅವಸ್ಥೆಯಲ್ಲ. 

    ಪಿ. ಯು. ಸಿ. ಯಲ್ಲಿ ಒಳ್ಳೆಯ ಅಂಕ ಬಂದ ಖುಷಿಯಲ್ಲಿ ಆತ ನನಗೆ ಹೇಳಿದ್ದ.. 

ಮುಂದೆ ಓದಲು ಬೇರೆಡೆ ಹೋಗಬೇಕು, ಇನ್ನೂ ಚೆನ್ನಾಗಿ ಓದಬೇಕು, ನಾಟಕವನ್ನೂ ಮಾಡಬೇಕು.. ಎಷ್ಟೊಂದು ಕನಸುಗಳಿತ್ತು.. !!

ಆ ಪುಟ್ಟ ಹೃದಯದಲ್ಲಿ ಅಡಗಿದ್ದ ಕನಸುಗಳು, ಅದಮ್ಯ ಉತ್ಸಾಹ, ರಂಗಪ್ರೀತಿ ಎಲ್ಲವೂ ಆ ಮುಗ್ಧತೆಯೊಡನೆ ನೀರಲ್ಲಿ ಮುಳುಗಿ ಹೋಯಿತು.

    ಈ ಸಂದರ್ಭದಲ್ಲಿ ಎಲ್ಲರಿಗೂ ಒಂದು ಮಾತು ಹೇಳಬಯಸುತ್ತೇನೆ - ಎಚ್ಚರ !! ಈಜು ಬರದೇ ನೀರಿಗಿಳಿಯಬೇಡಿ.. ಈಜು ಬರುತ್ತದೆ ಎಂದು ನಿಮಗರಿಯದ ಜಾಗದಲ್ಲಿ ನೀರಿಗಿಳಿಯಬೇಡಿ. ಜಾಗರೂಕರಾಗಿರಿ. ಯಾರ ಬದುಕೂ ಇಷ್ಟು ದುರಂತಮಯವಾಗದಿರಲಿ. 

    'ಮಾಯದ ಕೊಡಲಿ'ಯ 'ವೆಂಕಟೇಶ' ಮಾಯವಾದ... 

ಮತ್ತೆಂದೂ ಆತ ಬರಲಾರ. ಡಂಗುರ ಬಾರಿಸಲಾರ. ಆದರೆ ಯಾವುದೇ ರೈಲನ್ನು ನೋಡಿದರೂ, ತಾಳಗುಪ್ಪ ರೈಲ್ವೆ -ಗೇಟ್ (railway -gate ) ಬಳಿ ಹೋದರೂ, ಮೊದಲು ನಮ್ಮ ವೆಂಕಟೇಶ ನೆನಪಾಗುತ್ತಾನೆ. 

  ರಕ್ತ ಸಂಬಂಧವಲ್ಲದಿದ್ದರೂ, ಅವನು ನನ್ನ ತಮ್ಮನೇ. ಪುಟ್ಟ ತಮ್ಮನೊಬ್ಬನನ್ನು ಕಳೆದುಕೊಂಡ ಭಾವ ಬಹಳ ಕಾಡುತ್ತದೆ. 

    "ಇಂದು ಅವನು ಹುಟ್ಟಿದ ದಿನ." 

ನೂರು ಕಾಲ ಬಾಳು ಎಂದು ಹಾರೈಸಲೂ ಸಾಧ್ಯವಿಲ್ಲ.
ಅವನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದಷ್ಟೇ ಹೇಳಬಹುದು...........

ಕರಗುವೆ...