Monday, June 15, 2020

ಮಾಯದ ದೆವ್ವ

ಅಂದು ಮಂಗಳವಾರ. ಸಂಜೆ ಸುಮಾರು ಏಳು ಗಂಟೆ ಇರಬಹುದು. ಮಹಡಿಯ ಮೇಲೆ ಕುಳಿತು ಓದಬೇಕೆಂದು ಯೋಚಿಸುತ್ತಿದ್ದೆ . ಹೀಗೆ ಹೇಳುವುದಕ್ಕೂ ಕಾರಣವಿದೆ.

ನಾನು ಬಿ .ಕಾಂ.(b.com.) ಓದುತ್ತಿದ್ದೆ . ಸೆಮಿಸ್ಟರ್ ಪರೀಕ್ಷೆಗೆ ಓದಿಕೊಳ್ಳಲು ರಜಾ ಇತ್ತು . ಹಾಸ್ಟೆಲ್ನಲ್ಲಿದ್ದರೆ ಗೆಳತಿಯರೊಡನೆ ಹರಟುತ್ತೇನೆಂದು ಮನೆಗೆ ಬಂದೆ . ಬಂದು ಸುಮಾರು ನಾಲ್ಕು ದಿನಗಳಾದರೂ ಪುಸ್ತಕ ತೆರೆದು ನೋಡಲು ಮುಹೂರ್ತ ಬಂದಿರಲಿಲ್ಲ . ಆ ಹೆಸರೇ ಹೇಳುವಂತೆ ಬಿ .ಕಾಮ್ .(be-calm) ಆಗಿಯೇ ಇದ್ದೆ .

ಸರಿ, ಏನಾದರಾಗಲಿ , ಇವತ್ತು ಪಿ .ಎಮ್. (ಪ್ರಿನ್ಸಿಪಲ್ಸ್ ಆಫ್ ಮ್ಯಾನೇಜ್ಮೆಂಟ್ ) ಓದೋಣ ಎಂದು ಪುಸ್ತಕ ತೆರೆದೆ . ಏನೋ ಶಬ್ದ .. ಹೂಂ ..ಹೂಂ .. ಎಂದು ! ಹಿಂದೆಂದೂ ಕೇಳಿರಲಿಲ್ಲ . ಒಂದು ಕ್ಷಣ ಬೆಚ್ಚಿದೆ .

ಅಷ್ಟರಲ್ಲಾಗಲೇ ಅಜ್ಜಿ ಕೆಳಗೆ ಜಗುಲಿಯಲ್ಲಿ ಕುಳಿತು ಧಾರಾವಾಹಿ ನೋಡುತ್ತಿದ್ದಳು. ಟಿ .ವಿ . " ಇದು ಪುಟ್ಟ ಗೌರಿಯ ಮದುವೆ " ಎಂದು ಹಾಡಿತ್ತು ; ಕಿವಿಗಳೆರಡು ನೆಟ್ಟಗಾಗಿದ್ದವು . ಏನೋ ಸಾಧಿಸಿದಂತೆ ಮುಖವರಳಿತು . ಮತ್ತೇನೂ ಅಲ್ಲ , ಪಿ .ಎಮ್. ಎಂದರೆ 'ಪುಟ್ಟ ಗೌರಿ ಮದುವೆ' ಎಂದೂ ಆಗಬಹುದಲ್ಲಾ ..!!

ಕೆಳಗೆ ಗೌರಿ ಅಳುವುದು ಕೇಳುತ್ತಿತ್ತು . ಅಯ್ಯೋ ಪಾಪ ! ನಾನು ಧಾರಾವಾಹಿ ನೋಡುತ್ತಿಲ್ಲವೆಂದೇ ಅಳುತ್ತಿದ್ದಾಳೆ ಎನ್ನಿಸಿತು . ಪುಸ್ತಕವನ್ನಲ್ಲೇ ಬಿಟ್ಟು , ಹೋಗಿ ಟಿ.ವಿ .ಯ ಮುಂದೆ ಕುಳಿತುಕೊಂಡೆ . ಆಯ್ತು , ಅಂದಿನ ಓದು ಮುಗಿದಂತೆಯೇ ಲೆಕ್ಕ ..!

ದಿನವೂ ಇದೇ ಕತೆ . ಪರೀಕ್ಷೆಗೆ ಇನ್ನು ಒಂದೇ ವಾರವಿದೆ , ಇಂದಿನಿಂದಾದರೂ ಸರಿಯಾಗಿ ಓದಬೇಕು ಎಂದು ನಿರ್ಧರಿಸುವುದು ; ಸಂಜೆ ಏಳು ಗಂಟೆಗೆ ಪುಟ್ಟ ಗೌರಿ ಎಂದು ಕೂಗಿದಾಕ್ಷಣ ಆ ನಿರ್ಧಾರಗಳಿಗೆಲ್ಲ ಗೆದ್ದಲು ಹಿಡಿಯುತ್ತಿದ್ದವು ಸರಿಯಾಗಿ ಪುಟ್ಟಗೌರಿಯಿಂದ ಪ್ರಾರಂಭವಾದರೆ, ಲಕ್ಷ್ಮಿ ನನ್ನನ್ನೇ ಬಾರಮ್ಮ ಎನ್ನುತ್ತಿದ್ದಳು .ಆಮೇಲೆ ಇದೊಂದು ಧಾರಾವಾಹಿ ನೋಡಿ ಅಗ್ನಿಸಾಕ್ಷಿಯಾಗಿಯೂ ಊಟವಾದ ಬಳಿಕ ಓದಿಕೊಳ್ಳುತ್ತೇನೆ ಎಂದು ನನಗೆ ನಾನೇ ಆಶ್ವಾಸನೆ ನೀಡುತ್ತಿದ್ದೆ, ದೊಡ್ಡ ರಾಜಕಾರಣಿಯಂತೆ ..! ಊಟವಾದ ನಂತರ ,ಪಾಪ ..ಉಳಿದ ಧಾರಾವಾಹಿಗಳು ಏನು ಮಾಡಿದ್ದವು ? ಎಂದು ನೋಡಿ ಹಾಸಿಗೆಯ ಮೇಲೆ ಅಡಿಯಿಂದ ಮುಡಿಯವರೆಗೂ ಹೊದ್ದು ಮಲಗಿದರೆ ಮುಗಿಯಿತು .ಪಾಪ, ನನ್ನ ಪುಸ್ತಕ ಮಹಡಿಯ ಮೇಲೆ ನನಗಾಗಿ ಕಾಯುತ್ತಿರುತ್ತಿತ್ತು ..!!!

ಮಾರನೇ ದಿನ ಗೆಳತಿಗೆ ಫೋನ್ ಮಾಡಿ , ಉಭಯ ಕುಶಲೋಪರಿ ವಿಚಾರಿಸುವಾಗ ಅವಳು ಓದುತ್ತಿದ್ದಾಳೆ ಎಂದು ತಿಳಿದು ಹೊಟ್ಟೆಯೊಳಗೆಲ್ಲೋ ಸಣ್ಣ ಉರಿಯಾಗಿದ್ದು ಸುಳ್ಳಲ್ಲ ! ಅಂದು ಗೌರಿಯೂ ಬೇಡ . ಲಕ್ಷ್ಮಿಯೂ ಬೇಡ ಎಂದು ಖಡಾಖಂಡಿತವಾಗಿ ಖಂಡಿಸಿ , ಪುಸ್ತಕದ ಹಾಳೆಗಳನ್ನು ತಿರುವುತ್ತಿದ್ದೆ .

ಮೇಲೆ ಕೋಣೆಗೆ ಬಂದು, ಲೈಟ್ ಹಾಕಿ , ಬರೆಯುತ್ತಾ ಕುಳಿತರೆ ..ಏನೋ ಶಬ್ದ ! ಏನಿರಬಹುದು ? ಸರಿಯಾಗಿ ಆಲಿಸಿದೆ..ಗೆಜ್ಜೆ ಶಬ್ದ ..!! ಬರೆಯುವುದನ್ನು ನಿಲ್ಲಿಸಿ ಮತ್ತೊಮ್ಮೆ ಆಲಿಸಿದೆ..ಹೌದು ಅದು ಗೆಜ್ಜೆ ಶಬ್ದವೇ ..ಅಂದಿನ ಬರವಣಿಗೆಗೆ ಪೂರ್ಣ ವಿರಾಮ ಹಾಕಿ ಕೆಳಗೆ ಓಡಿಯಾಗಿತ್ತು .

ಮಾರನೇ ದಿನ ರಾತ್ರಿಯೂ ಮತ್ತದೇ ಅನುಭವ . ಮನೆಯ ಬಳಿ ಚೌಡಿಕಟ್ಟೆ ಇತ್ತು .ಎಲ್ಲರೂ ಹೇಳುವಂತೆ ಇದು ಚೌಡಿ ಕಾಟವಿರಬಹುದೇ ?ನೆನಪಿಗೆ ಬಂದ ದೇವರೆಲ್ಲರ ನಾಮಸ್ಮರಣೆ ಮಾಡುತ್ತ , ಕೋಣೆಯ ಲೈಟ್ ಆರಿಸಿದಾಗ ಶಬ್ದವೆಲ್ಲಾ ಸ್ತಬ್ದ ! ಅದೇನಿರಬಹುದೆಂದೇ ತಿಳಿಯಲಿಲ್ಲ .

ಹೀಗೆ ಎರಡು ದಿನಗಳು ಕಳೆದವು . ರಾತ್ರಿ ಓದಲು ಕುಳಿತಾಗ ಮತ್ತೆ ಅದೇ ಶಬ್ದ ಕೇಳಿಸಿತು . ಭಯಕ್ಕೆ ಬಿಟ್ಟ ಕಣ್ಣು ಬಿಟ್ಟಂತೆ ಇತ್ತು; ಪುಸ್ತಕ ಬಾಯ್ತೆರೆದಿತ್ತು ; ಮನಸ್ಸು ಮಾತ್ರ ಎಲ್ಲೆಲ್ಲೋ ತಿರುಗುತ್ತಿತ್ತು . ಇದು ದೆವ್ವವಿರಬಹುದೇ ? ಗೆಜ್ಜೆ ಇದೆ ಎಂದರೆ ಹೆಣ್ಣು ದೆವ್ವವೇ ಇರಬೇಕು .ಬಿಳಿ ಸೀರೆ ಉಟ್ಟಿರಬಹುದು; ಉದ್ದ ಕೂದಲಿರಬಹುದು ಎಂದೆಲ್ಲಾ ಯೋಚಿಸಿದೆ .
ಧೈರ್ಯ ಮಾಡಿ ಕೋಣೆಯಿಂದ ಹೊರಬಂದೆ .ಮತ್ತೆ ಗೆಜ್ಜೆ ಶಬ್ದ. ಜೊತೆಯಲ್ಲಿ ಈ ಬಾರಿ ಮತ್ತೊಂದು ಶಬ್ದವಿತ್ತು .ಅದು ಹೂಂ ..ಹೂಂ .. ಎನ್ನುತ್ತಿತ್ತು .ಭಯದಲ್ಲಿ ಬೆವರಿಳಿಯುತ್ತಿತ್ತು .ಒಮ್ಮೆ ಕಣ್ಣು ಮಿಟುಕಿಸುವುದರಲ್ಲಿ ಯಾವುದೋ ಆಕೃತಿ ಬಲದಿಂದ ಎಡಕ್ಕೆ ಬಹಳ ವೇಗವಾಗಿ ಚಲಿಸಿದಂತೆ ಭಾಸವಾಯಿತು. . ನಾನಲ್ಲಿರಲು ಹೇಗೆ ಸಾಧ್ಯ ? !! ಒಂದೇ ನೆಗೆತ ಒಂದೇ ಓಟ ...ಕ್ಷಣಾರ್ಧದಲ್ಲಿ ಜಗುಲಿಯಲ್ಲಿದ್ದೆ .

ಅಯ್ಯೋ ದೇವಾ ! ಇಂಥಾ ಅನುಭವ ಹಿಂದೆಂದೂ ಆಗಿರಲಿಲ್ಲ .ಎಂದೂ ಹೇಳಿರದ ಹನುಮಾನ ಚಾಲೀಸಾವನ್ನು ಪಟಪಟ ಹೇಳಿದ್ದೆ !! ನಾಳೆಯೂ ಹೀಗೆಯೇ ಆದರೆ ಎಲ್ಲರಿಗೂ ಹೇಳಿಬಿಡುತ್ತೇನೆಂದು ನಿರ್ಧರಿಸಿ, ಮಲಗಿದೆ .

ಮಾರನೇ ದಿನ ಮೇಲೆ ಕೋಣೆಗೆ ಬಂದು ನೋಡಿದರೆ, ಪಾಪ...ನನ್ನ ಪುಸ್ತಕ ಬಾಯಿತೆರೆದುಕೊಂಡು ನನ್ನನ್ನೇ ಕಾಯುತ್ತಿತ್ತು . ಈ ಪುಸ್ತಕವನ್ನು ಛಾವಣಿ ರಾತ್ರಿ ಪೂರ್ತಿ ಓದುತ್ತಿತ್ತು . ನನ್ನ ಬದಲು ಈ ಛಾವಣಿಯೇ ಪರೀಕ್ಷೆ ಬರೆದರೆ ಒಳ್ಳೆಯ ಅಂಕವಾದರೂ ಬರಬಹುದೇನೋ ಎಂದು ನಗು ಬಂತು . ಅಂದು ರಾತ್ರಿಯೂ ಮತ್ತದೇ ಅನುಭವ .ಇನ್ನೂ ಜೋರಾಗಿ ಗೆಜ್ಜೆ ಶಬ್ದ.. ಹೂಂ ..ಹೂಂ .. ಎನ್ನುವುದಂತೂ ಇನ್ನೂ ಹತ್ತಿರವೇ ಕೇಳುತ್ತಿತ್ತು .

ಇದು ಖಂಡಿತವಾಗಿಯೂ ಚೌಡಿಕಾಟವೋ ,ಪ್ರೇತಕಾಟವೋ ಇರಬೇಕು . ಎಲ್ಲರಿಗೂ ಹೇಳುತ್ತೇನೆ , ಯಾವುದಾದರೂ ಶಾಂತಿಹೋಮ ಮಾಡಿಸಲಿ ಎಂದು ಮನದಲ್ಲೇ ಹೇಳಿಕೊಳ್ಳುತ್ತಾ ಎಲ್ಲರೊಡನೆ ಊಟಕ್ಕೆ ಕುಳಿತೆ .ತಲೆಯಲ್ಲೊಂದು ಯೋಚನೆ ಬಂತು. ಓಹೋ ..ನಾನು ಕುಳಿತು ಓದುವ ಜಾಗ ಸರಿಯಿಲ್ಲವೇನೋ ..ವಾಸ್ತು ಹೊಂದುತ್ತಿಲ್ಲವೇನೋ ..ಹೇಗೆ ಹೇಳಲಿ ..ಇದನ್ನೆಲ್ಲ ಹೇಗೆ ಅರ್ಥ ಮಾಡಿಸಲಿ ..ಎಂದುಕೊಳ್ಳುತ್ತಿರುವಾಗಲೇ ಎಲ್ಲರೂ ಊಟ ಮುಗಿಸಿ , ಕೈ ತೊಳೆಯಲು ಹೋಗಿದ್ದರು .

ರಾತ್ರಿ ಮಲಗಿ ,ಬೆಳಿಗ್ಗೆ ಏಳುವ ಹೊತ್ತಿಗೆ ಎಲ್ಲವೂ ತಿಳಿಯಾಗಿತ್ತು . ಮನೆಯಲ್ಲಿ ಹೇಗೆ ಹೇಳಬೇಕೆಂಬ ಗೊಂದಲಕ್ಕೆಲ್ಲ ಪರಿಹಾರ ದೊರೆತಿತ್ತು .ಗೆಳತಿಗೆ ಫೋನ್ ಮಾಡಿ ಜೋರಾಗಿ ಕೂಗಾಡಿದೆ .i

" ನಿನ್ನೆ ಎಲ್ಲಾ ಸರಿಯಾಗೇ ಇದ್ಯಲ್ಲೇ ..ಇವತ್ತೇನಾಯ್ತೆ ನಿಂಗೆ ? ದೆವ್ವ- ಗಿವ್ವ ಮೆಟ್ಕೊಂಡಿದ್ಯಾ ?"

" ಹೌದೇ, ನಿಮ್ಮಂಥಾ ಗೆಳತಿಯರು ಇದ್ದುಬಿಟ್ರೆ ದೆವ್ವ ಮೆಟ್ಕೊಳ್ದೆ ಇನ್ನೆನೇ ಆಗತ್ತೆ ?" ಎಂದು ಹೇಳಿ ಫೋನ್ ಕುಕ್ಕಿದೆ . ರಾತ್ರಿ ದೆವ್ವದ ಮೂಲ ಹುಡುಕಲೇಬೇಕೆಂದು ಹೊರಟವಳಿಗೆ ಎಂತಹ ಆಘಾತ ...

ಮನೆಗೆ ಓದಲು ಬರುವ ಮುನ್ನ ಹಾಸ್ಟೆಲ್ನಲ್ಲಿ ರಾತ್ರಿ ಊಟವಾದ ನಂತರ ಗೆಳತಿಯರೆಲ್ಲ ಗುಂಪಾಗಿ ಕುಳಿತು ದೆವ್ವದ ಸಿನೆಮಾ ನೋಡಿದ್ದೆವು .ಅದರಲ್ಲೇನು ವಿಶೇಷ ಎನ್ನಬೇಡಿ ..

ಜಿರಲೆ ಕಂಡರೆ ಕಿಟಾರ್ ಎಂದು ಕಿರುಚಿ, ನೆಲದಿಂದ ನಾಲ್ಕಡಿ ಮೇಲೆ ಹಾರಿ , ಇಡೀ ಕೋಣೆಯ ರೂಪರೇಷೆಯನ್ನೇ ಬದಲಾಯಿಸಿಬಿಡುವ ಹುಡುಗಿಯರ ಗುಂಪೊಂದು ರಾತ್ರಿ ಸರಿಹೊತ್ತಿನಲ್ಲಿ ಕುಳಿತು ದೆವ್ವದ ಸಿನೆಮಾ ನೋಡುವಾಗ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಲೂ ಅಸಾಧ್ಯ !

ಒಬ್ಬಳು ಮುಖ ಮುಚ್ಚಿಕೊಂಡು ಬೆರಳುಗಳ ಮಧ್ಯದಿಂದ ಕಳ್ಳಿಯ ಹಾಗೆ ಇಣುಕಿ ನೋಡುತ್ತಿದ್ದಳು . ಇನ್ನೊಬ್ಬಳು ಪಕ್ಕದಲ್ಲಿದ್ದವಳ ಕೈಯನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದಳು .ಒಬ್ಬಳಂತೂ ಮೈತುಂಬಾ ಚಾದರ ಸುತ್ತಿಕೊಂಡು ಕುಳಿತಿದ್ದಳು .ದೆವ್ವ ಎದುರಿಗಿದೆಯೋ ಅಥವಾ ನನ್ನ ಪಕ್ಕದಲ್ಲೇ ಇದೆಯೋ ಎಂಬ ಅನುಮಾನ ನನಗೆ ..! ಇನ್ನೇನು ದೆವ್ವ ಬಂತು ಎನ್ನುವಾಗ ಒಬ್ಬಳು ಕಿರುಚಿದ್ದು ಹೇಗಿತ್ತೆಂದರೆ ನಿಜವಾದ ದೆವ್ವ ಬಂದಿದ್ದರೂ ಅದೂ ಓಡಿಹೋಗಬೇಕು ..! ಕರ್ಣ ಕಠೋರ !!

ಇಷ್ಟೆಲ್ಲಾ ಆದರೂ ಪೂರ್ತಿ ಸಿನೆಮಾ ನೋಡಲಿಲ್ಲ . ಹೆಸರು ತೋರಿಸುವಾಗ ನಮ್ಮಲ್ಲಿದ್ದ ಧೈರ್ಯ ಇಂಟರ್ವಲ್ನಲ್ಲಿ ಇರಬೇಕಲ್ಲ !!

" ಏಯ್ , ಸಾಕು ಬನ್ನಿ ಮಲ್ಕೋಳೊಣ .ಆಮೇಲೆ ನಿದ್ದೆ ಬರೋದಿಲ್ಲ ."

" ಇಲ್ವೇ ಏನೂ ಆಗಲ್ಲ . ಇನ್ನೊಂದು ತಾಸು ಅಷ್ಟೇ .ಸಿನೆಮಾ ಮುಗಿಯುತ್ತೆ ಕಣೇ ."

" ಲೇ, ಅಷ್ಟರಲ್ಲಿ ನನ್ನ ಕತೇನೂ ಮುಗಿದಿರುತ್ತೆ."

" ಯಾಕೇ ..ಅಷ್ಟೊಂದು ಭಯ ಆಗತ್ತೇನೇ ?"

" ಹೋಗೆಲೇ, ಹೊತ್ತು-ಗೊತ್ತು ಇಲ್ವಾ ನಿಮಗೆ ? ಆಮೇಲೆ ಮಧ್ಯರಾತ್ರಿ ಬಾತ್ರೂಮ್ಗೆ ನೀನು ಬರ್ತೀಯಾ ನಂಜೊತೆ ?"

" ಅಯ್ಯಯ್ಯೋ ಅದು ಸಿನಿಮಾಗಿಂತ ಹಾರಿಬಲ್ ..!"

" ಹಾಗಾದ್ರೆ ನಾಳೆ ಬೆಳಿಗ್ಗೆ ಸಿನೆಮಾ ನೋಡೋಣ. ಈಗ ಎಲ್ಲರೂ ಬಿದ್ಕೊಳಿ ."

ಅಂತೂ ಮಲಗಿದ್ವಿ .ತಾಸಿಗೆ ಒಮ್ಮೆ " ನಿದ್ದೆ ಬಂತಾ ?" ಎಂದು ಕೇಳೋದು ; " ಇಲ್ಲಾ ಕಣೇ .." ಎಂಬ ಉತ್ತರ . ರಾತ್ರಿ ಹೀಗೇ ಕಳೆದಿತ್ತು .ಅಂತೂ ಮಾರನೇ ದಿನ ಆ ಸಿನೆಮಾ ಮುಗಿಯಿತು .

ಹಾಗಂತ ಹುಡುಗಿಯರನ್ನೆಲ್ಲಾ ಹೆದರುಪುಕ್ಕಲರು ಎಂದುಕೊಳ್ಳಬೇಡಿ .ನಾವು ಕತೆ ಹೇಳಲು ಕುಳಿತರೆ ಮುಗಿಯಿತು ; ಯಾವ ದೆವ್ವವೇ ಆದರೂ ಸಹ ಹೂಂ ..ಎನ್ನಲೇಬೇಕು . ಈ ಸಿನೆಮಾ ನೋಡಿದಮೇಲೆ ಅದರ ಬಗ್ಗೆಯೂ ಮಾತನಾಡಬೇಕಲ್ಲ ..ಹಾಂ ! ದೆವ್ವ ನೋಡೋಕೆ ಚೆನ್ನಾಗಿರಲಿಲ್ಲ ಎಂಬ ವಿಮರ್ಶೆ ಬೇರೆ !! ಯಾರು ಕಣ್ಣು ಬಿಟ್ಟು ದೆವ್ವ ನೋಡಿದ್ದರೋ ಏನೋ ..!!

ಆಮೇಲೆ ಅದು-ಇದು ಮಾತನಾಡುತ್ತ ಊರೊಟ್ಟಿನ ಕತೆಗಳೆಲ್ಲ ಬಂದವು .

" ನಿಮ್ಗೆಲ್ಲಾ ಗೊತ್ತಾ ..ನಮ್ಮೂರಲ್ಲಿ ಚೌಡಿಕಾಟ ಇದೆ ."

" ಹಾಗಂದ್ರೆ ಏನೇ ?"

" ಹರಕೆ ತೀರಿಸಿಲ್ಲ ಎಂದರೆ ಚೌಡಮ್ಮ ಎಲ್ಲವನ್ನೂ ಅಡಗಿಸುತ್ತಾಳೆ ಕಣೇ ."

" ಹೌದಾ ..ಹಾಗಾದ್ರೆ ನೀವು ದೇವರ ಜೊತೆನೂ ಕಣ್ಣಾಮುಚ್ಚಾಲೆ ಆಡ್ತೀರಾ ?"

" ಲೇ ನಾನು ತಮಾಷೆ ಮಾಡ್ತಿಲ್ವೇ .."

" ಆಯ್ತು ಬಿಡು, ನಿಮ್ಮ ಕಾಟ ನನಗೂ ಶುರುವಾದರೆ ಕಷ್ಟ ."

ಮತ್ತೊಬ್ಬಳು ಪ್ರಾರಂಭಿಸಿದಳು ..

" ಹೂಂ ಕಣೇ .ನಮ್ಮೂರಲ್ಲೂ ಸಮಸ್ಯೆ ಇತ್ತಂತೆ . ಅಮಾವಾಸ್ಯೆಯ ರಾತ್ರಿಯಂತೂ ಚಿತ್ರ -ವಿಚಿತ್ರ ಶಬ್ದಗಳಂತೆ .ಆಮೇಲೆ ಪ್ರೇತಕಾಟ ಅಂತ ತಿಳಿದು ಪೂಜೆ ಎಲ್ಲ ಮಾಡಿಸಿದ್ರು ."

" ಸುಮ್ನಿರೇ ಸಾಕು ನೀನು ಈ ಪ್ರೇತನೆಲ್ಲ ನೋಡಿದೀಯಾ ?"

" ನಾನು ನೋಡಿಲ್ಲ.ಆದರೆ ಮನೆಯವರೆಲ್ಲ ಸುಳ್ಳು ಹೇಳ್ತಾರಾ ?"

ಅಬ್ಬಬ್ಬಾ ! ದೆವ್ವದ ಸಿನೆಮಾ ನೋಡುವಾಗ ಇಲ್ಲದಿರೋ ಧೈರ್ಯ ಕತೆ ಹೇಳುವಾಗ -ಕೇಳುವಾಗ ಬಂದಿತ್ತು ..! ಒಬ್ಬಳು ಕತೆ ಹೇಳುವಾಗ ಇನ್ನೊಬ್ಬಳೇನಾದರೂ ' ಹೌದಾ..' ಎಂದು ಬಾಯಿತೆರೆದರಂತೂ ಮುಗಿದೇಹೋಯಿತು .ಆ ದೆವ್ವವನ್ನು ಕಣ್ಣಾರೆ ಕಂಡಂತೆ ಕತೆ ರೂಪುಗೊಳ್ಳುತ್ತದೆ . ಆದರೂ ಕತೆಯನ್ನು ರೋಚಕವಾಗಿ ಹೇಳುವ ರೀತಿ ಎಲ್ಲರಿಗೂ ಬರುವುದಿಲ್ಲ ಬಿಡಿ ..!

ಅಂದು ಅವರು ಕತೆ ಹೇಳುವಾಗ ನಾನು ಹೇಗೆ ಕಣ್ಣು ಬಿಟ್ಟು ಕುಳಿತಿದ್ದೆನೆಂದರೆ ಪ್ರಾಧ್ಯಾಪಕರು ಮಾಡಿದ ಪಾಠಗಳೆಲ್ಲ ಒಮ್ಮೆಲೇ ಮಾಯವಾಗಿ , ಈ ಕತೆಗಳಷ್ಟೇ ತಲೆಯಲ್ಲಿ ಉಳಿದಿದ್ದವು .ಅವರ ಕತೆಗಳ ಆ ಚೌಡಿ ಪ್ರೇತಗಳು ನನ್ನ ತಲೆಯೊಳಗೆ ಹೊಕ್ಕಿದ್ದಂತೂ ನಿಜ .

ಆದರೂ ನನ್ನ ದೆವ್ವವನ್ನು ಕಂಡುಹಿಡಿಯಬೇಕಿತ್ತು.! ಎಲ್ಲರೂ ಕುಳಿತು ಊಟ ಮಾಡುವಾಗ ರಾತ್ರಿ ಗೂಬೆ ಕೂಗುವ ಶಬ್ದದ ಬಗ್ಗೆ ಅಜ್ಜ ಹೇಳಿದರು . ಆಗ ಅರಿವಾಗಿದ್ದು..ರಾತ್ರಿ ಹೂಂ.. ಹೂಂ. ಎನ್ನುವುದು 'ಗೂಬೆ' ಎಂದು .


ಅಲ್ಲೇ ಹತ್ತಿರದ ಯಾವುದೋ ಮರದಲ್ಲಿರಬೇಕು, ಗೂಬೆ ಮುಂಡೇದು.., ಕಾಣೊದೂ ಇಲ್ಲ ..!!ಥೂ ..ಯಾರೋ ಹೂಂಗುಡುತ್ತಿದ್ದಾರೆ ಎಂದುಕೊಂಡೆನಲ್ಲಾ ನಾನು ಗೂಬೇನೆ !!

ಹಾಗಾದರೆ ಆ ಗೆಜ್ಜೆ ಶಬ್ದ ಎಲ್ಲಿಂದ ಬರುತ್ತಿದೆ ? ಮಹಡಿಗೆ ಹೋಗಿ, ಕೋಣೆಯ ಲೈಟ್ ಹಾಕಿದಾಗ , ಮತ್ತೆ ಶಬ್ದ ಕೇಳಿಸಿತು . ಪಕ್ಕದ ಕೋಣೆಗೆ ಹೋಗಿ ತಡಕಾಡಿದೆ. ಹಳೆಯ ಟ್ರಂಕುಗಳ ಮಧ್ಯದಲ್ಲಿ ಒಂದು ರೀತಿಯ 'ಹುಳ' ! ಅದು ಕೂಗಿದಾಗ ಗೆಜ್ಜೆಯದೇ ಸಪ್ಪಳ !!

ಬೆಳಕು ಕಂಡಾಗ ಮಾತ್ರ ಆ ರೀತಿ ಕೂಗುತ್ತಿತ್ತು ; ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರಬಹುದು .

ಹಾಂ ! ಅಂದು ಕಂಡ ಆಕೃತಿಯೂ ಕಂಡಿತು . ಬಲಗಡೆಯಿದ್ದ ವಿದ್ಯುತ್-ತಂತಿಯಿಂದ ಎಡಗಡೆಯ ಮರದತ್ತ ಹಾರಿದ 'ಬಾವಲಿ'..!! ಭಯದ ಕಣ್ಣಲ್ಲಿ ಅಂದು ಅದು ಏನೆಂದೇ ತಿಳಿದಿರಲಿಲ್ಲ .

ಸಾಗರದ ನೀರಿಗೆ ಆಣೆಕಟ್ಟು ಕಟ್ಟುವ ಕಾಯಕದಂತೆ , ನನ್ನ ನಗುವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ .ನನ್ನ ಪುಣ್ಯ ! ಮನೆಯಲ್ಲಿ ಹೇಳಿ ನಗೆಪಾಟಲಾಗಲಿಲ್ಲವಲ್ಲ .. ಆದರೂ ನಡೆದಿದ್ದೆಲ್ಲಾ ನೆನಪಾಗಿ, ನನ್ನೊಳಗಿನ ನಗು ನಿಲ್ಲಲಿಲ್ಲ .

ಮನೆಯಲ್ಲಂತೂ ಓದಲಿಲ್ಲ, ಹಾಸ್ಟೆಲ್ಗೆ ಹೋಗುವುದೇ ಒಳ್ಳೆಯದು. ಇನ್ನು ಈ ಗೆಳತಿಯರೊಡನೆ ದೆವ್ವದ ಸಿನೆಮಾ ನೋಡುವುದಿಲ್ಲ ; ಪ್ರೇತದ ಕತೆಯನ್ನೂ ಕೇಳುವುದಿಲ್ಲ .

ಮನದೊಳಗೆ ದೆವ್ವವನ್ನು ಸೃಷ್ಟಿಸಿಕೊಂಡು ವಾರವಿಡೀ ಸಂಕಟಪಟ್ಟೆನಲ್ಲಾ ...

ಅಮ್ಮ ಯಾವಾಗಲೂ ಹೇಳುತ್ತಿದ್ದಳು - " ದೇವರು ಮನುಷ್ಯನನ್ನು ಸೃಷ್ಟಿಸಿದರೆ, ಮನುಷ್ಯ ದೆವ್ವವನ್ನು ಸೃಷ್ಟಿಸುತ್ತಾನೆ ."

" ದೆವ್ವಕ್ಕೂ , ದೈವಕ್ಕೂ ನಮ್ಮೊಳಗಿನ ನಾವೇ ಜವಾಬ್ದಾರರು ."

ಅದು ನಿಜ ಎಂದೂ ಅರ್ಥವಾಯಿತು .

No comments:

Post a Comment

ಕರಗುವೆ...