Sunday, December 26, 2021

ರಾಮೇಸ ಮತ್ತು ಅನಿವಾರ್ಯ..!

ನಮ್ಮೂರ ರಾಮೇಶ ಕೆಲಸ ಕೇಳಿಕೊಂಡು ಎಲ್ಲ ಮನೆಗಳಿಗೆ ಹೋದರೂ ಎಲ್ಲ ಕಡೆಯೂ ಕೆಲಸ ಸಿಗುತ್ತಿರಲಿಲ್ಲ. ಸ್ವಲ್ಪವೇ ಎತ್ತರವಿದ್ದರೂ ಆ ಮರವನ್ನೇರದ, ಚೂರು ಆಳದ ಗುಂಡಿ ತೋಡು ಎಂದರೂ ತಲೆಕೆರೆಯುವ, ಕೇಳಿದರೆ "ಜೀವ ಬಯಾ.." ಎನ್ನುವವನಿಗೆ ಕೆಲಸ ಕೊಡುವುದೂ ಸುಲಭವಾಗಿರಲಿಲ್ಲ. ಅದರಲ್ಲಿಯೂ ನಾಲ್ಕು ಕೆಲಸಗಳನ್ನು ಒಟ್ಟಾಗಿ ಹೇಳಿದರೆ, ಕೊನೆಯ ಕೆಲಸವೊಂದನ್ನು ಮುಗಿಸಿ, "ಅವಾಗೆಂತೋ ಹೇಳಿದ್ರಲಾ.. ಅದೆಂತ ಆತ್ರೋ.." ಎನ್ನುತ್ತಾ ಬೊಚ್ಚು ಬಾಯಲ್ಲಿ ಹಿಹಿಹ್ಹಿ ಎನ್ನುತ್ತಿದ್ದ.
ತರಕಾರಿಗೆ ಪಾತಿ ಮಾಡುವುದು, ಎಷ್ಟೇ ಭಾರವಿದ್ದರೂ ಲೀಲಾಜಾಲವಾಗಿ ಎತ್ತುವುದು ಅವನ ಕುಶಲತೆಗಳು. ಹಾಗಾಗಿ ಅಂಥ ಕೆಲಸಗಳಿದ್ದಾಗ ರಾಮೇಶನನ್ನು ಖಂಡಿತ ಕರೆಯುತ್ತಾರೆ. ಆದರೆ ಕರೆದ ಕಡೆಯೆಲ್ಲ ಅವನು ಹೋಗೇಬಿಡುತ್ತಾನೆಂಬುದೂ ಸುಳ್ಳು! ಅವನ ಸಮಯ, ಅನಿವಾರ್ಯತೆಗಳು ಅಂದಿನ ಕೆಲಸವನ್ನು, ಕೆಲಸದ ಮನೆಯನ್ನು ನಿರ್ಧರಿಸುತ್ತವೆ.ಯಾವ ಮನೆಯಲ್ಲಿ ಹೆಚ್ಚಿನ ಹಣ ಸಿಗುವುದೋ ಅಲ್ಲಿ ಮಾತ್ರವೇ ಅವನ ಕೆಲಸ.

ರಾಮೇಶ ಕೆಲಸಕ್ಕೆ ಬರುವುದೇ ಅಪರೂಪ. ಬಂದ ದಿನವೇ ಹೊರಡುವಾಗ, "ಹೆಗ್ಡೆ...ರು ಸಾ..ಲ" ಎಂಬ ರಾಗವಿರುತ್ತಿತ್ತು. ಆದರೆ ಪ್ರತಿಯೊಮ್ಮೆಯೂ ಅವನ ಹಣ ಕೇಳುವಾಗಿನ ಕಾರಣಗಳು ಬೇರೆಯೇ ಇರುತ್ತಿದ್ದವು.
"ಈಗಾ ಅನಿವಾರ್ಯ ಆತಲಾ..." ಎನ್ನುತ್ತಲೇ ಪ್ರಾರಂಭಿಸಿ, ಅವನ ಅನಿವಾರ್ಯತೆಗಳನ್ನು ವಿವರಿಸುತ್ತಿದ್ದ ಪರಿಗೆ ಹಲವು ಬಾರಿ ನಗು ಬಂದರೆ , ಕೆಲವು ಬಾರಿ ಸೋಜಿಗ ಉಂಟಾಗುತ್ತಿದ್ದುದು ಸುಳ್ಳಲ್ಲ.
ಮಗುವಿಗೆ, ಮಡದಿಗೆ ಅನಾರೋಗ್ಯ ಎಂಬುದನ್ನೇ ಅವ ವಿವರಿಸುವ ರೀತಿ ಭಿನ್ನವಾಗಿರುತ್ತಿತ್ತು.
ಊರಲ್ಲಿನ ಎಲ್ಲ ಮನೆಗಳಿಗೂ ಅವನು ಮತ್ತವನ ಅನಿವಾರ್ಯತೆಗಳು ಚಿರಪರಿಚಿತ.

ಮನೆಯಲ್ಲಿ ಯಾರಿಗೇ ಅರೋಗ್ಯ ಹದಗೆಟ್ಟರೂ ಮೊದಲು ಕಾಣುವುದು ಜ್ಯೋತಿಷಿಗಳ ಮನೆ! ಆಸ್ಪತ್ರೆ, ವೈದ್ಯರು, ಸೂಜಿ, ಮಾತ್ರೆ ಎಂದವರನ್ನು ಅನ್ಯಗ್ರಹ ಜೀವಿಗಳಂತೆ ನೋಡುತ್ತಿದ್ದ! ಮೊದಲ ಭೇಟಿ ಇರುತ್ತಿದ್ದುದು ಭಟ್ಟರ ಮನೆಗೆ! ಅದರಲ್ಲಿಯೂ ಹಲವು ಆಯ್ಕೆಗಳಿರುತ್ತಿದ್ದುವು...ಮೂಲೆ ಮನೆ ಭಟ್ಟರು, ಕಟ್ಮನೆ ಜ್ಯೋತಿಷಿಗಳು, ಕೊನೆ ಬೀದಿಯ ಜೋಯಿಸರು, ಕೆಳಗಿನ ಕೇರಿಯ ಶಾಸ್ತ್ರಿಗಳು.. ಇನ್ನೂ ಹಲವರು !
ಒಮ್ಮೆ ಮಗಳಿಗೆ ಜ್ವರ ಎಂದು 'ಅನಿವಾರ್ಯ' ಎಂದಿದ್ದ. ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಭಟ್ಟರು ಕೊಟ್ಟ ಭಸ್ಮವನ್ನು ಅವಳ ನಾಲಿಗೆಗೆ ತಿಕ್ಕಿದ್ದ. ಅದರಿಂದ ಆಕೆಯ ನಾಲಿಗೆ ರುಚಿ ಗುರುತಿಸುವುದನ್ನೇ ಮರೆತಿತ್ತು. ಊಟ ಎಂದರೆ ಅಳುತ್ತಿದ್ದಳಾಕೆ! "ಮೂಲೆ ಮನೆ ಬಟ್ರು ಪೇಟೆಂಟ್ ಇಲ್ಲಾ.. ನಮ್ ಕೆಳ್ಗಿನ ಕೇರಿಯೋರ್ ಅಡ್ಡಿಲ್ಲ..ಚೊಲೋ ಬೂದಿ ಕೊಡ್ತಾರೆ.." ಎನ್ನುತ್ತಿದ್ದ.

ಒಮ್ಮೆ ಅವನಿಗೇ ವಿಪರೀತ ಜ್ವರವಾಗಿತ್ತು.ಕೊನೆಗೂ ಎಲ್ಲರ ಒತ್ತಾಯದ ಮೇರೆಗೆ ಸುಪ್ರಸಾದ ಡಾಕ್ಟರ್ ಬಳಿ ಹೋಗಿದ್ದ. ಮಾರನೆಯ ದಿನವೂ ಕೆಲಸಕ್ಕೆ ಬರದಿದ್ದಾಗ ಏನೆಂದು ವಿಚಾರಿಸಬೇಕಾಯ್ತು.
" ಗುಳ್ಗಿ ಕೊಟ್ಟಾರೆ... ಡಾಕ್ಟ್ರಿಗೇ ಗುಣಾ... " ಎಂದ.
ಬಿಡಿಸಿ ಕೇಳಿದರೆ, ಘಟನೆ ಹೀಗಿತ್ತು. ಇವನಿಗೆ ಜ್ವರ ಮೈಗೇರಿ ಇನ್ನು ಯಾವ ಬೂದಿ, ದಾರ, ಮಂತ್ರ-ತಂತ್ರ, ಕಷಾಯ, ನಾರು-ಬೇರಿನ ಪರಿಣಾಮವಾಗದಿದ್ದಾಗ ಡಾಕ್ಟರ ಬಳಿ ಹೋಗಿದ್ದ.
"ಒಂದ್ ದೊಡ್ದ್ ಇಂಗೆಶನ್ ಕೊಟ್ಟಾರೆ.. ಮ್ಯಾಲಿಂದ ನೂರೈವತ್ತ್ ರೂಪಾಯಿ ಗುಳ್ಗಿ ಕೊಟ್ಟಾರೆ.. ಇದು ದೊಡ್ಡ ಜರಾನೆಯ"ಎನ್ನುತ್ತಾ ಬಂದವನಿಗೆ ಜ್ವರವಿನ್ನೂ ಕಡಿಮೆಯಾಗಿರಲಿಲ್ಲ. ಮಾತಿಗೊಮ್ಮೆ "ಡಾಕ್ಟರಿಗೇ ಗುಣಾ" ಎನ್ನುತ್ತಿದ್ದ.
ಅಂತೂ ನಾಲ್ಕು ದಿನಗಳ ನಂತರ ಮತ್ತೊಬ್ಬ ಡಾಕ್ಟರ ಬಳಿ ಹೋಗಿ ಬಂದ. ಆಮೇಲೆಯೇ ಸ್ವಲ್ಪ ಆರೋಗ್ಯ ಸುಧಾರಿಸಿದ್ದು. "ಈ ಡಾಕ್ಟರು ಹತ್ತು ರೂಪಾಯಿ ಗುಳ್ಗಿ ಕೊಟ್ಟವ್ರೆ. ನೋಡ್ರಿ ಹ್ಯಾಂಗ್ ಜರಾ ಬಿಡ್ತು..ಆ ಸೂಪರ್ಸಾದ ಡಾಕ್ಟರು ಕೊಟ್ಟ ಗುಳ್ಗಿ ಎಲ್ಲೂ ಮುಟ್ಟಲಿಲ್ಲ. ನೂರೈವತ್ತು ರೂಪಾಯಿ ಹೋತು.." ಎಂದ.
"ನಿಂಗೆ ಡಾಕ್ಟರ್ ಕಂಡ್ರೆ ಆಗಲ್ಲ.. ಭಟ್ರು ಕೊಡೋ ಮಂತ್ರದ ದಾರನೆ ಸರಿ!" ಎಂದರೆ " ಹೌದ್ರಾ.. ಅದ್ಯೇನೋ ಮೈಮೆ ಐತೆ" ಎಂದು ರಾಗ ಎಳೆದ!!

ರಾಮೇಶನ ಗೆಳೆಯರೂ ಸೇರಿ ಹಲವರು ಅವನನ್ನು ಮಂದ ಬುದ್ಧಿಯವನು ಎನ್ನುತ್ತಿದ್ದರು. ಆದರೆ ಆತ ಅವರೆಲ್ಲರಿಗಿಂತಲೂ ಬುದ್ಧಿವಂತನೇ! ಆಗಿನ ಕಾಲದಲ್ಲೇ ಪಿ ಯು ಸಿ ಓದಿದವನು ಅವನು.
ಅವನ ಮಾತುಗಳೇ ಮಜವಾಗಿರುತ್ತಿದ್ದವು. ಪ್ರತಿ ಮಂಗಳವಾರ ಸಂಜೆ "ಹೆಗ್ಡೆರು...ಸಾಲ" ಎಂದು ಹಣ ಕೇಳುತ್ತಿದ್ದ. ನಾಳೆ ಕೊಡುತ್ತೇನೆ ಎಂದರೆ "ನಾಳೆ ಅನಿವಾರ್ಯ" ಎನ್ನುತ್ತಿದ್ದ.
ಎಂದರೆ ನಾಳೆ ಆತ ಕೆಲಸಕ್ಕೆ ಬರುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು! ನಾಳೆ ಎಂತಾ ಅನಿವಾರ್ಯ ಎಂದು ಕೇಳಿದರೆ, "ನಾಳೇನೇ ದೊಡ್ಡ ತಳಪತ್ರೆ" ಎನ್ನುತ್ತಿದ್ದ. 'ಬುಧವಾರ' ಎನ್ನುವುದೇ ಅವನ ದೊಡ್ಡ ಸಮಸ್ಯೆ ಹಾಗೂ ಅನಿವಾರ್ಯ! ಪ್ರತಿ ಬುಧವಾರವೂ ಸಂತೆಗೆ ಹೋಗಬೇಕಿತ್ತು. ಹೆಂಡತಿ ಕೊಡುವ ಚೀಟಿಯಲ್ಲಿನ ಎಲ್ಲಾ ಸಾಮಾನುಗಳನ್ನು ತರಬೇಕಿತ್ತು. ಅದು ಅವನ ಸಮಸ್ಯೆ. ಅದಕ್ಕಾಗಿ ದುಡ್ಡು ಬೇಕಿತ್ತು. ಅದು ಅವನ ಅನಿವಾರ್ಯ..

ಹಾ.. ಸಂತೆ ಎಂದ ತಕ್ಷಣ ನೆನಪಾಯ್ತು. ಪ್ರತಿ ಬುಧವಾರ ನಡೆಯುವ ಸಂತೆಗೆ ನಾಲ್ಕು ಕಿಲೋಮೀಟರ್ ಸೈಕಲ್ ನಲ್ಲಿ ಬಂದು, ಇಡೀ ಸಂತೆ ಪೇಟೆಯನ್ನು ಓಡಾಡುತ್ತಾನೆ ರಾಮೇಶ. ಪ್ರತಿ ಅಂಗಡಿಯ ಬಳಿಯೂ ಬೆಲೆಯನ್ನು ವಿಚಾರಿಸಿ, " ಓಹೋ.. ದುಬಾರಿ ಆತಲಾ.. " ಎನ್ನುತ್ತಾ ಬೊಚ್ಚ ಬಾಯಿಯನ್ನು ಓರೆ ಮಾಡಿ ತಲೆ ಕೆರೆದುಕೊಂಡು ಮುಂದೆ ಹೋಗುತ್ತಾನೆ. ಎಲ್ಲಾ ಅಂಗಡಿಗಳನ್ನೂ ಕೇಳಿ, ಕೊನೆಗೆ ಎಲ್ಲಿ ಕಡಿಮೆಗೆ ಹೇಳಿದ್ದರೋ ಅಲ್ಲೇ ಹಿಂದಿರುಗುತ್ತಾನೆ! ಅವನ ಜೊತೆಗೆ ಹತ್ರುಪಾಯಿ ದೋಸ್ತನೂ ಇರುತ್ತಾನೆ. ಅವನ ಹೆಸರು ಮಾದೇವ, ರಾಮೇಶ ಕರೆಯುವುದು 'ಹತ್ರುಪಾಯಿ ದೋಸ್ತ' ಎಂದು. ಆತ ಸಂತೆಯಲ್ಲಿ ಏನನ್ನೂ ಕೊಳ್ಳದೆ ರಾಮೇಶನ ಜೊತೆಗೆ ಸುತ್ತುತ್ತಾನೆ. ಒಂದು ಕ್ಷಣಕ್ಕೂ ತಲೆ ಎತ್ತುತ್ತಿರಲಿಲ್ಲ. ಹಾಗೆಂದ ಮಾತ್ರಕೆ ನಾಚಿಕೆ ಸ್ವಭಾವದವನು ಎಂದುಕೊಳ್ಳಬೇಡಿ! ಆತ ನೆಲ ನೋಡಿಕೊಂಡೇ ಓಡಾಡುತ್ತಾನೆ. ಅವನು ಸಂತೆಗೆ ಬರುವ ಮಹದೋದ್ದೇಶವೇ ಕಾಲ ಬುಡದಲ್ಲಿ ಚಿಲ್ಲರೆ ಹಣ ಬಿದ್ದಿದ್ದರೆ ಆಯ್ದುಕೊಳ್ಳುವುದು.. ಹೀಗೆ ಪ್ರತಿ ಸಂತೆಯಲ್ಲಿಯೂ ಕಡಿಮೆ ಎಂದರೂ ಹತ್ತು ರೂಪಾಯಿಯನ್ನಾದರೂ ಆರಿಸುತ್ತಿದ್ದ! ಹಾಗಾಗಿಯೇ ಆತ ರಾಮೇಶನಿಗೆ ಹತ್ರುಪಾಯಿ ದೋಸ್ತ!

ಈ ರೀತಿ ಇರುವ ಅವನ 'ಅನಿವಾರ್ಯ'ಗಳಲ್ಲಿ ತೀರಾ ವಿಚಿತ್ರವಾದುದು ಒಂದು ಇತ್ತು! ಒಂದು ದಿನ ಗಡಿಬಿಡಿಯಲ್ಲಿ ಓಡಿ ಬಂದ ರಾಮೇಶ " ಇವತ್ತು ಕೆಲಸಕ್ಕೆ ಬರಾಕೆ ಆಕ್ಕಲ್ಲ" ಎಂದ.
"ಬರೋದು ಬಂದಿದಿಯ, ಹುಲ್ಲನ್ನಾದ್ರೂ ಕೊಯ್ದು ಇಟ್ಟು ಹೋಗು" ಎಂದರೆ,
" ಪುರ್ಸೊತ್ತು ಇಲ್ಲಾ.. ಬಾಳ ಬಿಜಿ" ಎಂದ.
ಇದೇನಪ್ಪ ಇವನನ್ನು ಇಷ್ಟು ಬಿಜಿ ಮಾಡಿದ ಕೆಲಸ ಎಂದು ಕುತೂಹಲದಿಂದ ವಿಚಾರಿಸಿದೆವು.
" ಭಟ್ರು ಚಪ್ಪಾಳೆ ಹೊಡದುಬುಟ್ರು "
ವಿಷಯದ ತಲೆ-ಬಾಲವೇ ಗೊತ್ತಿಲ್ಲದ ನಮಗೆ ಏನೊಂದು ಅರ್ಥವಾಗಿಲ್ಲ.
"ಯಾವ ಭಟ್ರು? ಎಂತಾ ಚಪ್ಪಾಳೆ? ಎಲ್ಲಿ ಹೊಡದ್ರು? ಯಾಕೆ ಹೊಡದ್ರು?" ಅವನೆದುರು ಪ್ರಶ್ನೆಗಳ ಸುರಿಮಳೆಯಾಯ್ತು!
" ಅಯ್ಯೋ.. ಆ ಮೂಲೆ ಮನೆ ಭಟ್ರು ಇಲ್ಲನ್ರಾ.. ನಿಮ್ಗೆ ಗೊತ್ತಯಿತಲ್ಲ.. ನಮ್ಮೂರ ಗುಡಿಗೆ ಅವ್ರೇಯ ಭಟ್ರು"
" ಹಾ.. ಗೊತ್ತೈತೆ.. "
"ಅವರು ಇವತ್ತು ಚಪ್ಪಾಳೆ ಹೊಡದುಬುಟ್ರು"
" ಅಂದ್ರೆ..? ಹೋಗ್ಬುಟ್ರ?!"
"ಅಯ್ಯೋ ದ್ಯಾವ್ರೆ.. ಹಾಂಗಲ್ಲರಾ.. ಇವತ್ತು ದೊಡ್ಡಕೆ ಮಾತಾಡ್ತಾ ಇದ್ರಾ.. ಅವ್ರಿಗೆ ಸಮಾ ಕಾಸು ಕೊಡ್ತಾ ಇಲ್ಲಂತೆ. ದ್ಯಾಸ್ತಾನ ಬುಟ್ಟು ಹೋಗ್ತೀನಿ.. ನನ್ನ ಬುಟ್ಟು ಯಾವ ಮುಂಡೆಗಂಡ ಬತ್ತಾನೆ ಇಲ್ಲಿ ನೋಡ್ತೀನಿ.. ಅಂತೆಲ್ಲ ಚಪ್ಪಾಳೆ ತಟ್ಟಿ, ಚಿಟ್ಕಿ ಹೊಡ್ದು ಹೇಳ್ತ ಇದ್ರು.."
" ಅಷ್ಟೆಲ್ಲ ಗಲಾಟೆ ಅಯ್ತೆನೋ.. "
"ಇನ್ನು ಮುಗ್ದಿಲ್ಲ.. ನಡಿತಾ ಐತೆ.. ಅದ್ಕೇಯ ನಾ ಹೊಂಟೆ"
" ನೀ ಏನೋ ಮಾಡ್ತಿಯಾ.. "
"ಚಪ್ಪಾಳೆ ಭಟ್ರು ಏನು ಮಾಡ್ತಾರೆ ನೋಡ್ಬೋಕು"
ಎನ್ನುತ್ತಾ, ಉತ್ತರಕ್ಕೂ ಕಾಯದೆ ಹೊರಟೇ ಹೋದ. ಅಂದಿನಿಂದ ಅವರಿಗೆ 'ಚಪ್ಪಾಳೆ ಭಟ್ಟರು' ಎಂದು ನಾಮಕರಣ ಮಾಡಿದ್ದಾನೆ.ಇನ್ನೂ ಯಾರ್ಯಾರಿಗೆ ಏನೇನು ಹೆಸರಿಟ್ಟಿದ್ದಾನೋ ಅವನೇ ಬಲ್ಲ!!
ಅಂದು ಚಪ್ಪಾಳೆ ಭಟ್ಟರು ಜೋರಾಗಿ ಗಲಾಟೆ ಮಾಡಿದ್ದರಂತೆ.. ರಾಮೇಶ ಹೇಳಿದಂತೆಯೇ ಚಪ್ಪಾಳೆ ತಟ್ಟಿ, ನಾ ಈ ದೇವಾಲಯದ ಪೂಜೆ ಮಾಡಲಾರೆ ಎಂದರಂತೆ.ಅವರು ಅಷ್ಟೆಲ್ಲ ಹೇಳಿ ಹೋದ ನಂತರ ಅಲ್ಲಿಯೇ ನಿಂತ ರಾಮೇಶ, "ದುಡ್ಡಿಲ್ಲ ಅಂದ್ರೆ ದ್ಯಾವ್ರು ಇಲ್ಲಾ ದಿಂಡ್ರು ಇಲ್ಲಾ.. ಎಲ್ಲಾ ಚಪ್ಪಾಳೆನೆಯ.." ಎಂದು ನಕ್ಕನಂತೆ !!

-ಪಲ್ಲವಿ




No comments:

Post a Comment

ಕರಗುವೆ...