Wednesday, September 30, 2020

ಗೂಡು


ಕಂಡ ಕನಸ ನೂಲನರಸಿ 
ದೂರದೂರಿಗೆ ಹಾರಿದ್ದೆ 
ಬಾನೆತ್ತರವೂ ಜಗದಗಲವೂ 
ಕುಬ್ಜವೇ ರೆಕ್ಕೆಯ ಬಲವಿರಲು.. 

ಮನದ ಗೂಡೊಳಗೆ ಬಿಗಿದಪ್ಪಿದ 
ಕನಸಿನೆಳೆ ಬೆಚ್ಚನೆಯ ಆಸರೆಯಿಂದು.. 
ಪುಟ್ಟ ಗೂಡೂ ಪ್ರೇಮದರಮನೆ 
ಎಂಬ ಭಾವವೊಂದು.. 

ಒಲವ ತಂಗಾಳಿಗೆ ತಲೆದೂಗಿ
ಮಳೆ ಹನಿಯಲೊಂದಾಗಿ 
ಗೂಡೊಳಗಿನ ಗಾಢಾಂಧಕಾರಕೆ 
ಕರಗುವ ಮುನ್ನ ಇಣುಕಿತೊಂದು ಮಿಂಚುಳ !!..
ವಸಂತದ ನವೋಲ್ಲಾಸವ ಹೊತ್ತು ತಂದಿತು.. 

-ಪಲ್ಲವಿ 
ಚಿತ್ರ : ಕೆ.ಪಿ. ಸತ್ಯನಾರಾಯಣ 

Friday, September 18, 2020

ಸೂರ್ಯ

ಸಂಜೆಯ ಸೂರ್ಯ ತನ್ನ ಕಾಯಕವ ಸಂಪೂರ್ಣಗೊಳಿಸಿ ಹೊರಟಿಹ.. ದಿಗಂತದಾಚೆಗಿನ ಕತ್ತಲ ಸೀಳಿ,, ಬಣ್ಣಗಳ ಚಿತ್ತಾರವ ಮೂಡಿಸುತ್ತಾ..ಊರ  ಗದ್ದಲವ ದಾಟಿ ಮೌನಕ್ಕೆ ಶರಣಾಗುವ ಹಂಬಲದಿ... 
ಹೊರಟಿಹನವ,, ನಾಳೆಯ ನಂಬಿಕೆಯ ಇಂದು ಚಿಗುರಿಸುತ್ತ...
-ಪಲ್ಲವಿ 

Sunday, September 6, 2020

ಹೆಸರ ಹಂಗಿಲ್ಲ..

ಕಾಡ ತೊರೆ ನಾನು, ಹೆಸರ ಹಂಗಿಲ್ಲ.. 
ಹರಿವ ದಾರಿಗೆ ದಿಕ್ಕಿಲ್ಲ, ಮುನ್ನುಗ್ಗುವ ತವಕವೊಂದೇ.. 
ಹೆಸರಿಟ್ಟು, ಕಟ್ಟೆಯ ಕಟ್ಟಿ ನಿಲ್ಲಿಸದಿರೆನ್ನ.. 
ಬಲುದೂರದ ಸಾಗರದತ್ತ ಸಾಗಬೇಕಿದೆ.. 

ಜೀವಜಲವಾಗಿ, ಭೂರಮೆಯ ತಂಪಾಗಿ, 
ಕಾಡ ನಡುವೆ ಧುಮ್ಮಿಕ್ಕಿ ಧಾರೆಯಾಗಿ, 
ಕ್ಷಣಕ್ಕೊಂದು ರೂಪಾಂತರವಾಗುವ 
ಎನಗೆ ಹೆಸರ ಹಂಗಿಲ್ಲ.. 

ಹಸಿರ ತಬ್ಬಿದ ಪ್ರೀತಿಯ ಸ್ಪರ್ಶಕೆ, 
ಧರೆಯ ಸವರುವ ನವಿರಿಗೆ, 
ನಿನ್ನೊಡಲ ಸೇರುವ ಧಾವಂತಕ್ಕೆ ಹೆಸರ ಹಂಗಿಲ್ಲ!

ಕಾಡ ತೊರೆ ಮಾತ್ರವೇ ನಾನು.. 
ಎಂದಿಗೂ ಹೆಸರ ಹಂಗಿಲ್ಲ!!

-ಪಲ್ಲವಿ 

ಕರಗುವೆ...