Wednesday, February 23, 2022

ಬದುಕು


ನಿಂತ ನೀರಾಗಲಾರೆ ನಾ..
ಉಸಿರುಕಟ್ಟಿಸದಿರೆನ್ನ..
ನನ್ನ ಗಮ್ಯ ಸಾಗರದತ್ತ..
ಕಟ್ಟಿಹಾಕದಿರೆನ್ನ..
ಹುಟ್ಟು ನನ್ನದು
ಬದುಕು ನನ್ನದು
ಉಸಿರು ನನ್ನದು
ಆಸೆ ನನ್ನದು
ಕನಸು ನನ್ನದು
ನಿರ್ಬಂಧಗಳು ಮಾತ್ರ ನಿಮ್ಮವೇಕೆ..
-ಪಲ್ಲವಿ 

Saturday, February 19, 2022

ಸದ್ದಿಲ್ಲದೇ ಕಥೆ ಹೇಳುವ ಸೀತಾಳೆ ದಂಡೆಗಳು...!

ಸೀತಾಳೆ ಎಂದರೆ ಕಾಡು ಹೂವು. ಈ ಹೂವು, ದಂಡೆ ಎಂದರೆ ಮಾಲೆಯ ರೀತಿ ಪೋಣಿಸಿರುವಂತೆ ಕಾಣುತ್ತದೆ. ಮಳೆಗಾಲದಲ್ಲಿ ಯಾವುದೊ ಮರದ ಕಾಂಡದ ಮೇಲೆ ಅರಳಿ ನಿಂತು, ಗಾಳಿಗೆ ತಲೆದೂಗಿ, ಮಳೆಯಲ್ಲಿ ನೆಂದು, ಅಲ್ಲೇ ಬಾಡಿ ಒಣಗುವ ಈ ಹೂವು ನೋಡಲು ಸುಂದರ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ, ಘಮಿಸದೇ, ಸದ್ದಿಲ್ಲದೇ, ತನಗೂ ಲೋಕಕ್ಕೂ ಸಂಬಂಧವೇ ಇಲ್ಲವೆಂಬಂತೆ ಅರಳಿ, ಬಾಡುವ ಈ ಹೂವಿಗೆ ಲೋಕವೂ ಅಷ್ಟೊಂದು ಪ್ರಾಮುಖ್ಯತೆ ನೀಡಿದಂತೆ ತೋರುತ್ತಿಲ್ಲ!

ಹಾಗೆಯೇ ಭಾರತಿ ಹೆಗಡೆಯವರು ಬರೆದ "ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು" ಕಥಾ ಸಂಕಲನದಲ್ಲಿ ಬರುವ ಎಲ್ಲ ಕಥೆಗಳ ಪಾತ್ರಗಳೂ ಕೂಡ ಮಲೆನಾಡಿನ ಯಾವುದೊ ಮೂಲೆಯಲ್ಲಿ ಅರಳಿ ನಿಂತು, ಬದುಕಿ, ಬಳಲಿ, ಬಾಡಿದಂಥವು.. ಪ್ರತಿ ಕಥೆಯಲ್ಲಿಯೂ ಒಂದು ವಿಭಿನ್ನ ಪಾತ್ರವಿದೆ. ಸಮಾಜದ ಪ್ರಭಾವದಿಂದಲೋ, ಮಾನಸಿಕ ಒತ್ತಡದಿಂದಲೋ ವಿಚಿತ್ರವಾಗಿರುವ ಈ ಪಾತ್ರಗಳು ನಮ್ಮ ಸುತ್ತಲೂ ಇದ್ದಂಥವೇ.. ಗೋಡೆಯೊಂದಿಗೆ ಮಾತನಾಡುವ ಅಮ್ಮಮ್ಮ, ಸೀರೆ ಕದ್ದು ಉಟ್ಟುಕೊಳ್ಳುವ ಶಾಮಣ್ಣ, ಬದುಕಿದ್ದಾಗಲೇ ತನ್ನ ಶ್ರಾದ್ಧವನ್ನೇ ಕಂಡ ಪದ್ಮಾವತಿ, ಜಾತಿಯನ್ನು ಮೀರಿ ನಿಂತ ಪಾರ್ವತಿ- ಗಣಪಿಯರ ಸ್ನೇಹ ಎಲ್ಲವೂ ನನಗೆ ಬಹಳ ಪ್ರಿಯವಾದ ಕಥೆಗಳು.
ಪಾರ್ಲರ್ ಲಲಿತಕ್ಕ ಕೊನೆಗೂ ತನ್ನ ಗಂಡನಿಗೆ ಪ್ಯಾಂಟು ಹಾಕಿಸಿದ ಕಥೆಯನ್ನು ಓದಿಯೇ ತೀರಬೇಕು. ಹಲವು ಕಥೆಗಳಿಗೆ ತನ್ನದೇ ಆದ ಅಂತ್ಯವಿರದೆ, ಹೀಗಾಗಿರಬಹುದೇ ಎಂದು ಓದುಗರನ್ನು ಯೋಚನೆಗೊಳಪಡಿಸುವುದು ಇಲ್ಲಿನ ಕಥೆಗಳ ವಿಶೇಷ.
 ಮಲೆನಾಡಿನ ಹಲವು ಹಳ್ಳಿಗಳ, ಭಿನ್ನವಾದ ಒಟ್ಟು ಹದಿನೇಳು ಕಥೆಗಳನ್ನು ಒಂದೇ ಪುಸ್ತಕದಲ್ಲಿ ನಮಗೆ ನೀಡಿದ್ದಾರೆ ಭಾರತಿ ಹೆಗಡೆಯವರು.
ಓದಬೇಕಾದ, ಓದಿ ಯೋಚಿಸಬೇಕಾದ ಕಥೆಗಳಿವು.

ಪುಸ್ತಕ: ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು
ಲೇಖಕರು: ಭಾರತಿ ಹೆಗಡೆ
ಪುಟಗಳು: 246
ಬೆಲೆ: 220

-ಪಲ್ಲವಿ 

Sunday, February 13, 2022

ಕಪ್ಪು ಕಾರು, ಕೆಂಪು ಸೀರೆ...!!

ಕೆಲವು ದಿನಗಳ ಹಿಂದೆ, ಅಂದರೆ ನೈಟ್ ಕರ್ಫ್ಯೂ ಇದ್ದ ಸಂದರ್ಭದಲ್ಲಿ ಒಂದು ರಾತ್ರಿ ಆಫೀಸ್ ನಿಂದ ಹೊರಡುವುದು ತಡವಾಗಿತ್ತು. ಬೆಳಿಗ್ಗೆ ಕಾಣುವ ಬೆಂಗಳೂರೇ ಇದಲ್ಲ ಎನಿಸುವಷ್ಟು ಮೌನ ಕತ್ತಲಲ್ಲಿ ಬೆರೆತುಹೋಗಿತ್ತು. ಯಾವುದೇ ಅಂಗಡಿಯ ಬಾಗಿಲು ತೆರೆದಿರಲಿಲ್ಲ. ದೂರದಲ್ಲೆಲ್ಲೋ ನಾಯಿ ಊಳಿಡುವ ಸದ್ದು, ಯಾವುದೋ ವಾಹನದ ಸದ್ದು ಬಿಟ್ಟರೆ ಇನ್ಯಾವುದೇ ಗದ್ದಲವಿರಲಿಲ್ಲ. ಅದರಲ್ಲೂ ಸದಾ ವರ್ಣಮಯವಾಗಿ ಗಿಜಿಗುಟ್ಟುವ ತರಹೇವಾರಿ ಅಂಗಡಿಗಳಿಂದ ಝಗಮಗಿಸುವ ಜಯನಗರ ದೀಪವಾರಿಸಿ ನಿಶಬ್ದವಾಗಿ ಮಲಗಿರುವುದೇ ಪರಮಾಶ್ಚರ್ಯ!
ಕವನಾ ಮತ್ತು ಮಹೇಶ ಎಂಬ ಇಬ್ಬರು ಸಹೋದ್ಯೋಗಿಗಳೊಡನೆ ನಾನು ರಸ್ತೆಯ ಬದಿಯಲ್ಲಿ ಸಾಗುತ್ತಿರುವಾಗ ಬೀದಿ ದೀಪದ ಅಡಿಯಲ್ಲಿ ನಮ್ಮ ನೆರಳೇ ನಮಗೆ ಹೆದರಿಸುತ್ತಿತ್ತು!! ನಾವು ಮೂವರೂ ಅಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ ನಡೆಯುತ್ತಿರಬೇಕಾದರೆ, ಶರವೇಗದಲ್ಲಿ ಒಂದು ಕಪ್ಪು ಕಾರು ನಮ್ಮನ್ನು ದಾಟಿ ಹೋಯಿತು. ಕಾರಿನ ಮುಂದಿನ ಲೈಟ್ ಹಾಕಿರಲಿಲ್ಲ. ಕಪ್ಪು ಕಾರು ಬೀದಿ ದೀಪದಲ್ಲಿ ಮಾತ್ರವೇ ಕಾಣಿಸಿತ್ತು. ನಾವು ಮೂವರೂ ಬೆಚ್ಚಿ, ಕಾರು ಹೋದ ದಿಕ್ಕನ್ನೇ ದಿಟ್ಟಿಸುತ್ತಾ ಕಂಬದಂತೆ ನಿಂತಿದ್ದೆವು.
 ಅಪ್ರಯತ್ನವಾಗಿ ಮಹೇಶಣ್ಣ "ಕಾಂತಿಬಾಯಿ ಕಾರು" ಎಂದ. ನಾನು ಮತ್ತು ಕವನಾ ಹೆದರಿ ಎರಡು ಹೆಜ್ಜೆ ಹಿಂದೆ ಸರಿದೆವು. "ಸುಂಸುಮ್ನೆ ಹೇಳ್ಬೇಡ, ನಿಜವಾಗ್ಲೂ ಅದು ಕಾಂತಿಬಾಯಿ ಕಾರು ಹೌದ? ನಿಂಗೆ ಹೇಗೆ ಗೊತ್ತು? ಕಾರಲ್ಲಿ ಅವ್ಳು ಇದ್ಲಾ ? ಆದ್ರೂ ಅವ್ಳು ಯಾಕೆ ಇಲ್ಲಿ, ಹೀಗೆಲ್ಲ ಓಡಾಡ್ತಾಳೆ? ..." ಎಂದೆಲ್ಲ ಪ್ರಶ್ನೆಯೂ ಅಲ್ಲದ ಉತ್ತರವೂ ಇಲ್ಲದ ಮಾತುಗಳನ್ನಾಡಿದೆವು ನಾವಿಬ್ಬರೂ!! ಅದಕ್ಕವನು ಏನೂ ಹೇಳಲಿಲ್ಲ. ಹೇಳುವ ಸಂದರ್ಭ ಕೂಡಾ ಅದಾಗಿರಲಿಲ್ಲ. ಮೂವರ ತಲೆಯಲ್ಲೂ ನೂರಾರು ಪ್ರಶ್ನೆಗಳು ಆ ಕಾರಿನಷ್ಟೇ ವೇಗವಾಗಿ ಚಲಿಸುತ್ತಿದ್ದವು.
ನಿಧಾನವಾಗಿ ಮಹೇಶಣ್ಣನೇ ಮೌನ ಮುರಿದು, "ಕಾರು ಎಲ್ಲಿ ಹೋಗಿರಬಹುದು? ಎಲ್ಲರೂ ಹೇಳೋ ಪ್ರಕಾರ ಅವಳ ಮನೆ ಇರೋದು ಜಯನಗರದಲ್ಲೇ! ಒಂದಿಡೀ ಏರಿಯಾವನ್ನೇ ಖರೀದಿಸಿದ್ದಾಳಂತೆ. ಯಾವಾಗ ಯಾವ ಮನೇಲಿ ಇರ್ತಾಳೆ ಅಂತ ಯಾರಿಗೂ ಗೊತ್ತಾಗಲ್ವಂತೆ.." "ಇದೆಲ್ಲ ನಮಗೂ ಗೊತ್ತು. ಈ ಅಂತೆ ಕಂತೆಗಳು ನಮ್ಮ ಕಿವಿಗೂ ಬಿದ್ದಿವೆ. ಅದ್ರಲ್ಲಿ ಯಾವ್ದು ನಿಜ ಯಾವ್ದು ಸುಳ್ಳು ಅಂತ ಗೊತ್ತಿಲ್ಲ..ಈಗ ಅಕಸ್ಮಾತ್ ನಾವು ಅವಳ ಕಾರನ್ನು ಕಂಡ ಹಾಗೆ ಅವಳೂ ನಮ್ಮನ್ನ ನೋಡಿದ್ರೆ ಸುಮ್ನೆ ಬಿಡ್ತಾಳ .. ಮನೇಲಿ ಹುಡ್ಕಿದ್ರು ನಾವು ಏನಾದ್ವಿ ಅಂತ ಯಾರಿಗೂ ಸುಳಿವು ಕೂಡ ಸಿಗಲ್ವೇನೋ.. ದೇವ್ರೇ .." ಎಂದು ಬಡಬಡಿಸುತ್ತಿದ್ದಳು ಕವನಾ.
"ಮಾರಾಯ್ತಿ, ಇದ್ದಿದ್ದನ್ನ ಇದ್ದಂಗೆ ನೋಡು ಸಾಕು,
 ಮತ್ತೆ ಹೆದ್ರಿಸಬೇಡ.
ಮಹೇಶಣ್ಣ, ನೀನು ಹೇಳಿದ ಹಂಗೆ ಅವಳ ಮನೆ ಜಯನಗರ ಅಂತಾನೆ ಇಟ್ಕೋಳೋಣ. ಅಂದ್ರೆ ಅವ್ಳು ಎಲ್ಲೋ ಆಚೆ ಹೋಗಿ ಮನೆಗೆ ಬರ್ತಿರಬೇಕು. ಇಲ್ಲ ಅಂದ್ರೆ ಕರ್ಫ್ಯೂ ಶುರು ಆದ್ಮೇಲೆ ಎಲ್ಲೋ ಹೊರಟಿರಬೇಕು .." ಎಂದೆ ನಾನು.
"ನಿಜ. ನಂಗೂ ಅದೇ ಅನ್ನಿಸ್ತಾ ಇದೆ. ಆ ಕಾರು ಅವಳದ್ದೇ ಅನ್ನೋದು ಪಕ್ಕಾ. ಆದ್ರೆ ಅದರಲ್ಲಿ ಅವಳು ಇದ್ಲಾ ಇಲ್ವಾ ಅನ್ನೋದೇ ಅನುಮಾನ. ಇದ್ರೆ ಮಾತ್ರ..." "ಇದ್ರೆ ಮಾತ್ರ ಏನು ಮಹೇಶಣ್ಣ? ನೋಡು ನಮ್ಮ ಕೈಲಿ ಏನೂ ಮಾಡೋಕಾಗಲ್ಲ" ಮತ್ತೆ ಮೌನದಲ್ಲೇ ಹೆಜ್ಜೆ ಹಾಕಿದೆವು.
------
ಕಾಂತಿಬಾಯಿ ಇಡೀ ಕರ್ನಾಟಕವನ್ನೇ ಅಲುಗಾಡಿಸಿದವಳು! ಅವಳ ಮಾತಿಲ್ಲದೆ ಬೆಂಗಳೂರಿನಲ್ಲಂತೂ ಯಾವ ಕೆಲಸವೂ ಆಗುತ್ತಿರಲಿಲ್ಲ. ರಾಜಕೀಯ, ದೊಂಬಿ, ಜಾತ್ರೆ, ಕಟ್ಟಡ ಕಾಮಗಾರಿಗಳು, ಕೊಲೆ, ಸುಲಿಗೆ, ಹೆಂಡದಂಗಡಿ ಎಲ್ಲವಕ್ಕೂ ಕಾಂತಿಬಾಯಿಯ ಕೃಪಾಶೀರ್ವಾದ ಅತ್ಯವಶ್ಯಕ! ಅವಳ ಮೇಲೆ ಅದೆಷ್ಟು ಕೇಸುಗಳಿದ್ದವೋ ಬಲ್ಲವರಾರು! ಅಂತಹ ಕಾಂತಿಬಾಯಿ ಯಾರು, ಹಿನ್ನೆಲೆ ಏನು, ಹೇಗೆ ಬೆಳೆದಳು, ಇಷ್ಟೆಲ್ಲಾ ಮಾಡುವಾಗಲೂ ರಾಜಾರೋಷವಾಗಿ ಓಡಾಡುತ್ತಿದ್ದವಳು ಇದ್ದಕ್ಕಿದ್ದಂತೆ ಒಂದೂವರೆ ವರ್ಷದಿಂದ ಯಾಕೆ ಭೂಗತಳಾಗಿದ್ದಾಳೆ ಎಂಬುದಕ್ಕೆಲ್ಲ ಸ್ವತಃ ಅವಳೇ ಉತ್ತರಿಸಬೇಕು!
 ಆಕೆಗೆ ಸುಮಾರು ಐವತ್ತು ವರ್ಷವಾಗಿರಬಹುದು. ಜೊತೆಗೊಬ್ಬಳು ವಯಸ್ಸಾದ ಹೆಂಗಸಿರುತ್ತಾಳಂತೆ ಮನೆಯಲ್ಲಿ, ಕಾಂತಿಬಾಯಿಯ ತಾಯಿ ಎಂಬ ಸುದ್ದಿ! ಕಾರಿನ ಡ್ರೈವರ್ ಕೂಡ ಅವರ ಮನೆಯಲ್ಲೇ ಇರುತ್ತಾನಂತೆ. ಅವನನ್ನು ಡ್ರೈವರ್ ಥರ ಕಾಂತಿಬಾಯಿ ಎಂದೂ ಕಂಡಿಲ್ಲವಂತೆ. ಆತ ಅವಳ ಪ್ರಿಯಕರನಂತೆ ಎಂಬೆಲ್ಲ ಸುದ್ದಿಗಳು. ಹೌದು ಅಥವಾ ಇಲ್ಲ ಎನ್ನಲು ಕಾಂತಿಬಾಯಿ ಏನೂ ಕೇಳಿಸಿಕೊಳ್ಳುವುದಿಲ್ಲವಲ್ಲ. ಹಾಗಾಗಿ ಅಂತೆ ಕಂತೆಗಳ ರೆಂಬೆ ಕೊಂಬೆಗಳು ಬೆಳೆದು ಅವಳ ಕಥೆ ಹೆಮ್ಮರವಾಗಿತ್ತು!

 ಕೆಲವು ತಿಂಗಳುಗಳ ಹಿಂದಷ್ಟೇ ಪೊಲೀಸರಿಗೆ ದೊರಕಿದ ಮಾಹಿತಿಯ ಮೇರೆಗೆ ಜಯನಗರದ ಅವಳ ಮನೆಗೆ ರಾತ್ರೋ ರಾತ್ರಿ ನುಗ್ಗಿದ್ದರು. ಆದರೆ ಅಲ್ಲಿ ಯಾರೂ ಇರಲಿಲ್ಲ. ಆದರೆ ಮಾಹಿತಿಯೊಂದು ಲಭ್ಯವಾಗಿತ್ತು. ಅದೊಂದೇ ಬಡಾವಣೆಯಲ್ಲಿ ಎಂಟು ಮನೆಗಳು ಅವಳ ಹೆಸರಿನಲ್ಲಿದ್ದವಂತೆ! ಇಡೀ ಬೆಂಗಳೂರಿನಲ್ಲಿ ಎಷ್ಟಿರಬೇಡ? ಯಾವಾಗ ಯಾವ ಮನೆಯಲ್ಲಿರುತ್ತಾಳೋ ಹೇಗೆ ಕಂಡು ಹಿಡಿಯುವುದು? ಇತ್ತೀಚೆಗೆ ಅವಳನ್ನು ಕಂಡವರಿಲ್ಲ.
ಮೊದಲು ಕಂಡವರ ಪ್ರಕಾರ ಕಾಂತಿಬಾಯಿ ಎತ್ತರದ ಆಳು. ಸಾಮಾನ್ಯ ಮೈಕಟ್ಟು. ಕಪ್ಪಗಿದ್ದಾಳೆ, ಯಾವಾಗಲೂ ಕೆಂಪು ಸೀರೆ ಉಡುತ್ತಾಳೆ. ಕಾಲಿಗೆ ಧರಿಸಿದ ಬೂಟುಗಳು ಕಾಣುವಷ್ಟು ಗಿಡ್ಡದಾಗಿ ಸೀರೆ ಇರುತ್ತದೆ. ಕಾಲರಿನ ರವಿಕೆ ಧರಿಸುತ್ತಾಳೆ. ಕತ್ತಿನಲ್ಲಿ ಒಂದು ಹಾರವಿರುತ್ತದೆ. ಉದ್ದ ಕೂದಲನ್ನು ಮಡಚಿ ಮುಡಿ ಹಾಕಿರುತ್ತಾಳೆ. ಗಡಸು ಧ್ವನಿಯಲ್ಲಿ ಮಾತನಾಡುತ್ತಾಳೆ ಹಾಗೂ ಕಣ್ಣಲ್ಲಿ ಕಣ್ಣಿಟ್ಟು ಭೀತಿ ಹುಟ್ಟಿಸುತ್ತಾಳೆ. ಮುಖದ ಮೇಲೆ ಹಳೆಯ ಮೊಡವೆಯ ಕಲೆಗಳಿವೆ. ಬಲಗೈ ಮೇಲೆ ಗಾಯದ ಗುರುತಿದೆ. ಆರು ಕಾರುಗಳಿವೆ. ಎಲ್ಲವೂ ಒಂದೇ ರೀತಿಯ, ಕಪ್ಪು ಬಣ್ಣದ ಕಾರುಗಳು. ಇಷ್ಟು ಮಾತ್ರವೇ ಅವಳ ಬಗ್ಗೆ ಎಲ್ಲರಿಗೂ ತಿಳಿದಿದ್ದ ವಿಷಯಗಳು. ಯಾವುದೇ ಪತ್ರಿಕೆಯಲ್ಲಾಗಲೀ, ಸುದ್ದಿ ವಾಹಿನಿಯಲ್ಲಾಗಲೀ ಅವಳ ಚಿತ್ರವೂ ಬಂದಿರಲಿಲ್ಲ. ಪೊಲೀಸರ ಬಳಿ ಇತ್ತೋ ಇಲ್ಲವೋ ಅದೂ ತಿಳಿದಿರಲಿಲ್ಲ.

 ------
 ಇಂತಹ ಕಾಂತಿಬಾಯಿಯ ಕಾರು ನಮ್ಮೆದುರು ಹೋಗುವುದು ಎಂದರೇನು, ನಾವದನ್ನು ನಂಬುವುದು ಎಂದರೇನು, ಅದರ ಬಗ್ಗೆ ಮಾತನಾಡುವುದು ಎಂದರೇನು..? ಈಗ ಯಾರೂ ಇಲ್ಲ. ಆದರೆ ನಾಳೆ ಬೆಳಿಗ್ಗೆ ಎಲ್ಲರೆದುರು ನಾವು ಕಾಂತಿಬಾಯಿಯ ಕಾರನ್ನು ಕಂಡಿದ್ದೆವು ಎಂದರೆ ಎಲ್ಲರೂ ನಮ್ಮನ್ನು ನೋಡಿ ನಗುವುದಿಲ್ಲವೇ .. ಹುಚ್ಚು , ಭ್ರಮೆ, ಕಲ್ಪನೆ ಎಂದು ಆಡಿಕೊಳ್ಳುವುದಿಲ್ಲವೇ?! ನಾವು ಹೋಗುತ್ತಿದ್ದ ರಸ್ತೆಯ ತಿರುವಿನಲ್ಲಿ ಒಂದು ಕಾರು ನಿಂತಿತ್ತು. ಹಿಂದಿನಿಂದ ಕೆಂಪು ಬೆಳಕು ಕಾಣುತ್ತಿತ್ತು. ನಾವು ಮುಂದೆ ಹೆಜ್ಜೆ ಇಟ್ಟಂತೆಲ್ಲ ಕಾರಿನ ಬಣ್ಣ ಕಪ್ಪು ಎಂಬ ಅರಿವು ನಮಗಾಗಿತ್ತು. ಅಂದರೆ ಕಾರು ಇಲ್ಲೇ ನಿಂತಿದೆ. ನಮಗಾಗಿಯೇ ನಿಂತಿರಬಹುದೇ? ಇವರ ಕೈಲಿ ನಾವು ಸಿಲುಕಿಕೊಂಡರೆ ಏನು ಮಾಡಬೇಕು? ಎಂದೆಲ್ಲಾ ಯೋಚಿಸುತ್ತ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡೆವು. ಆದರೆ ಕಾರಿನಲ್ಲಿ ಯಾರೂ ಇರಲಿಲ್ಲ ಎನಿಸುತ್ತದೆ. ನಿಧಾನವಾಗಿ ಮಹೇಶಣ್ಣ ಪಿಸುಗುಟ್ಟಿದ " ಇದು ಕ್ಯಾಪಿಟಲ್ ಆಸ್ಪತ್ರೆಯ ಹಿಂಭಾಗ. ಅಂದರೆ ಕಾಂತಿಬಾಯಿಗೋ ಅವರ ಕಡೆಯವರ್ಯಾರಿಗೋ ಅರೋಗ್ಯ ಸರಿ ಇಲ್ಲ. ಹಾಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಸ್ವಲ್ಪ ಮರೆಯಲ್ಲಿ ನಿಂತು ಕಾಯೋಣ, ಯಾರಾದರೂ ಕಾಣಬಹುದು..."
"ಅಣ್ಣ, ಇಲ್ಲದ ಉಸಾಬರಿ ನಮಗ್ಯಾಗೆ.. ಯಾರೂ ಇಲ್ಲ ಎಂದಾದರೆ ಓಡಿ ಪರಾರಿಯಾಗೋಣ, ಅದು ಬಿಟ್ಟು ನಿಲ್ಲೋದು, ನೋಡೋದು ಎಲ್ಲ ನಮಗೆ ಬೇಡ. ನಾವೇನು ಸಿ ಐ ಡಿ ಗಳಲ್ಲ" ಎಂದೆ.
 "ಹಾಗಲ್ವೆ .. ಇಡೀ ಬೆಂಗಳೂರು ಪೊಲೀಸರು ಹಗಲು ರಾತ್ರಿ ಊಟ ನಿದ್ದೆ ಬಿಟ್ಟು ಕಷ್ಟ ಪಟ್ಟು ಹುಡ್ಕ್ತಾ ಇರೋ ಲೇಡಿ ಡಾನ್ ಇಷ್ಟು ಸುಲಭವಾಗಿ ಸಿಕ್ಕಿ ಬಿಳ್ತಾಳೆ ಅಂತ ಅಂದ್ರೆ ಈ ಅವಕಾಶನ ಯಾಕೆ ಬಿಡ್ಬೇಕು"
"ನೋಡು ಮಹೇಶಣ್ಣ, ಒಂದೇ ರಾತ್ರಿಗೆ ಹೀರೋ ಆಗ್ಬೇಕು ಅನ್ನೋ ಹುಚ್ಚು ಅಸೆ ಇದ್ರೆ ಬಿಟ್ಟಬಿಡು. ಇರೋದು ಒಂದೇ ಜೀವ, ಅದನ್ನ ಉಳಿಸಿಕೊಳ್ಳೋದ್ರ ಬಗ್ಗೆ ಯೋಚ್ನೆ ಮಾಡು" ಎಂದಳು ಕವನಾ.
"ಕವನಾ, ಹೀರೋ ಆಗೋ ಆಸೆ ನಂಗಿಲ್ಲ. ನೀನೇ ಯೋಚ್ನೆ ಮಾಡು.. ಇವ್ಳು ಒಬ್ಬಳು ಸಿಕ್ಕಾಕೊಂಡ್ರೆ ಎಂಥೆಂಥವರು ಇವಳ ಬುಟ್ಟೀಲಿ ಇರೋವ್ರು ಸಿಗ್ತಾರೇನೋ.."
"ಅದೆಲ್ಲ ನಮಗ್ಯಾಕೆ ಅಣ್ಣ, ಯಾರೇ ಸಿಕ್ಕಾಕೊಂಡ್ರು ಎಲ್ಲೂ ಏನೂ ಬದಲಾಗಲ್ಲ. ಇಷ್ಟಕ್ಕೂ ಕಾಂತಿಬಾಯಿನೂ ಕಾರಲ್ಲಿದಾಳೆ ಅಂತ ನಮಗೇನು ಗೊತ್ತಿಲ್ವಲ್ಲ" ಎಂದೆ.
"ನಿಜ, ನಮಗೆ ಗೊತ್ತಿಲ್ಲ. ಆದರೆ ಪೊಲೀಸರಿಗೆ ತಿಳಿಸಿದ್ರೆ ಅವ್ರು ಪತ್ತೆ ಮಾಡ್ತಾರಲ್ಲ. ಈಗ್ಲೇ ತಿಳಿಸ್ತೀನಿ ಇರು" ಎನ್ನುತ್ತಾ ತನ್ನ ಮೊಬೈಲ್ ನಿಂದ ಕರೆ ಮಾಡಿಯೇಬಿಟ್ಟ. ಒಂದು ಸೆಕೆಂಡ್ ತಡವಾದರೂ ನಾವು ಅವನನ್ನು ತಡೆಯುತ್ತೇವೆ ಎಂಬ ಕಾರಣಕ್ಕೆ ತಕ್ಷಣವೇ ಫೋನಾಯಿಸಿದ್ದ.
"ಹೆಲೋ ಸರ್, ನಾನು ಮಹೇಶ್ ಅಂತ ಮಾತಾಡ್ತಿರೋದು, ಜಯನಗರದ ಕ್ಯಾಪಿಟಲ್ ಹಾಸ್ಪಿಟಲ್ ನ ಹಿಂಭಾಗದ ರಸ್ತೆಯಲ್ಲಿ ಕಾಂತಿಬಾಯಿಯ ಕಾರು ನಿಂತಿದೆ. ಕಾರಿನಲ್ಲಿ ಯಾರೂ ಇದ್ದಂತೆ ಕಾಣುತ್ತಿಲ್ಲ. ಆಸ್ಪತ್ರೆಯ ಹಿಂದಿನ ಬಾಗಿಲು ತೆರೆದಿದೆ" ಎಂದ ಮಹೇಶಣ್ಣ. ಅತ್ತ ಕಡೆಯಿಂದ ಕಾರಿನ ನಂಬರ್ ಕೇಳಿರಬೇಕು. "ಕಾರಿನ ನಂಬರ್ ಕಾಣಿಸುತ್ತಿಲ್ಲ ಸರ್. ನಾನು ಅಷ್ಟು ಹತ್ತಿರದಲ್ಲಿಲ್ಲ." ಮತ್ತೇನೋ ಹೇಳಿದರಿರಬೇಕು. ಸರಿ ಸರಿ ಎನ್ನುತ್ತಾ ತಲೆಯಾಡಿಸಿದ. "ನಾವು ಕಾರನ್ನು ನೋಡುತ್ತಾ ನಿಲ್ಲಬೇಕು. ಅದು ಹೊರಟ ಕೂಡಲೇ, ಎತ್ತ ಹೊರಟಿತು ಎಂದು ನೋಡಿಕೊಳ್ಳಬೇಕು. ನಂಬರ್ ಕಂಡರೆ ನೋಟ್ ಮಾಡಿಕೊಳ್ಳಬೇಕು" ಎಂದು ಆಜ್ಞಾಧಾರಕ ದನಿಯಲ್ಲಿ ಹೇಳಿದ. ಭಯವಿದ್ದರೂ, ಒಪ್ಪಿಗೆ ಇರದಿದ್ದರೂ ನಾವಿಬ್ಬರೂ ಹೂಂ ಎಂದೆವು. ರಸ್ತೆಯ ತಿರುವಾಗಿದ್ದರಿಂದ ನಾವು ಅವರಿಗೆ ಕಾಣಿಸುತ್ತಿಲಿಲ್ಲ ಎಂಬ ನಂಬಿಕೆಯಲ್ಲಿ ಬದಿಯಲ್ಲಿ ನಿಂತಿದ್ದೆವು.
 --------
ನಾವು ಕಾಯುತ್ತಾ ನಿಂತಿರುವಾಗಲೇ ಆಸ್ಪತ್ರೆಯ ಹಿಂಬಾಗಿಲಿನಿಂದ ಒಂದು ಆಕೃತಿ ಆಚೆ ಬಂತು. ಅದರ ನಡಿಗೆಯ ಮೇಲೆ, ವೇಷದ ಆಧಾರದ ಮೇಲೆ ಆ ಆಕೃತಿ ಒಬ್ಬ ಗಂಡಸು ಎಂಬ ಅರಿವಾಯಿತು. ಆತ ಕಾರಿನ ಬಾಗಿಲನ್ನು ಹಾಕಿದ ಸದ್ದು ಧಢಾರ್ ಎಂದು ನಮ್ಮ ಕಿವಿಯವರೆಗೂ ಅಪ್ಪಳಿಸಿತು. ಮತ್ತೆ ಯಾರೂ ಕಂಡಿರದಿದ್ದರಿಂದ, ಒಂದೇ ಬಾರಿ ಬಾಗಿಲ ಸಪ್ಪಳವಾದ್ದರಿಂದ ಆತ ಒಬ್ಬನೇ ಇದ್ದಾನೆ. ಕಾಂತಿಬಾಯಿ ಜೊತೆಯಲ್ಲಿಲ್ಲ ಎಂದು ನಿರ್ಧರಿಸಿದೆವು. ನಿಧಾನಕ್ಕೆ ಕಾರನ್ನು ತಿರುಗಿಸಿ, ಮತ್ತದೇ ಸುಂಟರಗಾಳಿಯ ವೇಗದಲ್ಲಿ ಎದುರಿನ ರಸ್ತೆಗೆ ಓಡಿಸಿದ. ಮಹೇಶಣ್ಣ ಪೊಲೀಸರಿಗೆ ಮತ್ತೆ ಕರೆ ಮಾಡಿ ವರದಿ ಒಪ್ಪಿಸಿದ.
ಎರಡೇ ನಿಮಿಷದಲ್ಲಿ ನಮ್ಮೆದುರು ಪೊಲೀಸರ ಜೀಪು ಬಂದು ನಿಂತಿತು. ಆ ರಾತ್ರಿಯಲ್ಲೂ ಕೂಲಿಂಗ್ ಗ್ಲಾಸ್ ಹಾಕಿದ್ದ ಪೊಲೀಸ್ ಒಬ್ಬ "ಬನ್ನಿ ಜೀಪ್ನಲ್ಲಿ ಕೂತ್ಕೊಳ್ಳಿ " ಎಂದ. ಆತ ಇನ್ಸ್ಪೆಕ್ಟರ್ ಇರಬಹುದೆಂದು ನನ್ನ ಊಹೆ!! "ನಾವು ಹೇಳೊದನೆಲ್ಲ ಹೇಳಿದ್ದೇವೆ . ನಾವ್ಯಾಕೆ ಬರಬೇಕು ಸರ್" ಎಂದ ಮಹೇಶಣ್ಣ.
 "ನೀವು ಮಾತ್ರವೇ ಕಾರನ್ನು ಕಂಡಿದ್ದು. ಹಾಗಾಗಿ ನೀವೆಲ್ಲ ಬರಲೇಬೇಕು" ಎಂದ ಆತ. ಅನಿವಾರ್ಯವಾಗಿ ಜೀಪನ್ನು ಹತ್ತಿ ಕುಳಿತು, ಮಹೇಶಣ್ಣನ್ನು ಗುರಾಯಿಸಿದೆವು. ಆತ ನೋಟ ಬದಲಿಸುತ್ತಾ, ಆಚೆ ನೋಡಿದ.
 ನಿಧಾನವಾಗಿ ಆಚೆ ಈಚೆ ನೋಡುತ್ತಾ ಸಾಗುತ್ತಿದ್ದ ನಮಗೆ ಯಾವ ಕಾರೂ ಕಾಣಿಸಲಿಲ್ಲ. "ದೇವ್ರೇ ಪೊಲೀಸರ ಟೈಮ್ ಹಾಳು ಮಾಡಿದ್ದಕ್ಕೆ ಬೈಸ್ಕೊಂಡ್ರು ಪರ್ವಾಗಿಲ್ಲ, ಆ ಕಾರು ಮಾತ್ರ ಸಿಗದೇ ಇರ್ಲಪ್ಪ " ಎಂದು ಬೇಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಔಷಧಿಯ ಅಂಗಡಿಯೊಂದು ತೆರೆದಿರುವುದು ಕಾಣಿಸಿತು. ಅದರ ಎದುರಿನಲ್ಲೇ ಕಾರೊಂದು ನಿಂತಿತ್ತು. ಮಹೇಶಣ್ಣ ಸ್ವಲ್ಪವೇ ಮುಂದೆ ಬಾಗಿ "ಸರ್ ಇದೇ ಕಾರು" ಎಂದ. ಔಷಧಿಯ ಅಂಗಡಿಯಿಂದ ಬಂದವ, ಕಾರಿನ ಹಿಂಬದಿಯ ಕಿಟಕಿಯಲ್ಲಿ ಒಂದು ಪೊಟ್ಟಣವನ್ನು ಕೊಟ್ಟ. ಯಾರೋ ಅದನ್ನು ತೆಗೆದುಕೊಂಡಂತೆ ನನಗೆ ಭಾಸವಾಯಿತು. ಆಶ್ಚರ್ಯದಿಂದ ನೋಡುತ್ತಿರುವಂತೆಯೇ, "ಏನ್ರಿ ಮಹೇಶ್, ಅವ ಒಬ್ನೇ ಇದಾನೆ ಅಂದಿದ್ರಿ, ಈಗ ನೋಡಿದ್ರೆ ಹಿಂದಿನ ಸೀಟ್ ಅಲ್ಲಿ ಯಾರೋ ಇದಾರಲ್ರಿ.." ಎಂದರು ಪೊಲೀಸ್ ಆಫೀಸರ್.
"ನಾವು ನೋಡಿದಾಗ ಯಾರೂ ಕಂಡಿರಲಿಲ್ಲ ಸರ್" ಎಂದ.
"ಬಹುಶಃ ಆ ವ್ಯಕ್ತಿ ಕಾರಿಂದ ಇಳಿಯಲೇ ಇಲ್ಲ ಅನ್ನಿಸತ್ತೆ" ಎಂದೆ ನಾನು. ಆ ವ್ಯಕ್ತಿ ಮುಂದೆ ಕುಳಿತು ಕಾರನ್ನೋಡಿಸಿಕೊಂಡು ಹೊರಟ. ನಾವೂ ಅವರ ಹಿಂದೆಯೇ ಜೀಪಿನ ಲೈಟ್ ಆರಿಸಿಕೊಂಡು ಹೊರಟೆವು. ಮುಖ್ಯ ರಸ್ತೆಯನ್ನು ದಾಟಿ, ಒಂದು ಗಲ್ಲಿಯನ್ನು ಸುತ್ತುಹಾಕಿ ಮತ್ತೊಂದು ರಸ್ತೆಯಲ್ಲಿ ಹೊರಟ.
"ಇದು ನಮ್ಮ ಆಫೀಸ್ನ ಹಿಂದಿನ ರೋಡ್ ಅಲ್ವಾ?" ಎಂದಳು ಕವನಾ.
"ಹೌದು . ಅವ ಬಂದ ದಾರಿಯಲ್ಲೇ ವಾಪಾಸ್ ಹೋಗ್ತಾ ಇಲ್ಲ, ಸುತ್ತುಹಾಕಿ ಹೋಗ್ತಿದಾನೆ." ಎಂದ ಮಹೇಶಣ್ಣ. ಕಾರಿನ ವೇಗ ಕಡಿಮೆಯಾಗಿತ್ತು. ನಿಧಾನವಾಗಿ ಆ ರಸ್ತೆಯ ಬಲ ಮಗ್ಗುಲಿಗೆ ಹೊರಳಿ ತೆರೆದ ದೊಡ್ಡ ಗೇಟಿನ ಒಳಗೆ ಕಾರು ಹೋಯಿತು. ಅಂದರೆ ಇಲ್ಲಿ ಕಾಂತಿಬಾಯಿ ಇದ್ದಾಳೆ!! ನಮಗೆ ಇಷ್ಟು ಹತ್ತಿರದಲ್ಲಿ ಇದ್ದಾಳೆ ಎಂಬುದು ನಮಗೆಲ್ಲರಿಗೂ ಊಹೆಗೂ ನಿಲುಕದ್ದು.
ಸ್ವತಃ ಇನ್ಸ್ಪೆಕ್ಟರ್ ಮುಂದೇನು ಮಾಡಬೇಕು ಎಂದು ಯೋಚಿಸುತ್ತಿದ್ದರು. ಒಳಗೆ ಎಷ್ಟು ಜನರಿದ್ದಾರೆ, ಅವರ ಬಳಿ ಏನೇನು ಆಯುಧಗಳಿವೆ ಎಂಬ ಯಾವ ಕಲ್ಪನೆಯೂ ನಮ್ಮಲ್ಲಿರಲಿಲ್ಲ. ಇದ್ಯಾವುದಕ್ಕೂ ಸಂಬಂಧವಿರದ ನಾವು ಮೂವರೂ ಸುಳಿಯಲ್ಲಿ ಸಿಲುಕಿದ್ದೆವು. ಅಷ್ಟರಲ್ಲಿ ಪೊಲೀಸರು ತಿಳಿಸಿದ್ದರು ಎನಿಸುತ್ತದೆ, ಮತ್ತೆ ನಾಲ್ವರು ಬಂದು ಅವರಿಗೆ ಸೆಲ್ಯೂಟ್ ಮಾಡಿ ನಿಂತರು. ನಾವೇನು ಮಾಡಬೇಕು ಎಂದು ಯೋಚಿಸುತ್ತಿರುವಾಗಲೇ, "ಗಿರಿ, ನೀವು ಈ ಮೂರು ಜನರನ್ನೂ ಕರ್ಕೊಂಡು ಮರೆಲಿರಿ. ಆದರೆ ಕಾಂಪೌಂಡ್ ಒಳಗೆ ಇರಿ. ಯಾವಾಗ ಸಹಾಯಕ್ಕೆ ಕರೆದ್ರೂ ಬರಬೇಕು"
 "ಎಸ್ ಸರ್" ಎಂದಾತ ಗಿರಿ ಎಂದು ಗೊತ್ತಾಯ್ತು. "ಮಿಸ್ಟರ್ ಮಹೇಶ್, ಮತ್ತೆ ನೀವಿಬ್ರು.. ತುಂಬಾ ಒಳ್ಳೆ ಕೆಲಸ ಮಾಡಿದಿರಾ. ಆದ್ರೆ ನಾವು ಇಲ್ಲಿ ಮಾತಾಡ್ತಾ ಟೈಮ್ ವೇಸ್ಟ್ ಮಾಡೋ ಹಾಗಿಲ್ಲ. ಅವರಿಗೆ ಸುಳಿವು ಕೊಡೊ ಹಾಗಿಲ್ಲ. ನೀವು ಗಿರಿ ಜೊತೆಯಲ್ಲಿರಿ" ಎನ್ನುತ್ತಾ ಮುನ್ನಡೆದರು. ನಾವು ಮೂವರೂ ಗಿರಿ ಎನ್ನುವಾತನ ಹಿಂದೆ ಕಳ್ಳ ಹೆಜ್ಜೆ ಇಡುತ್ತ ನಡೆದೆವು. ನನಗೋ ಕೈ ಕಾಲೆಲ್ಲಾ ಥರ ಥರ ನಡುಗುತ್ತಿತ್ತು.
"ನಮಗೆ ಸಂಬಂಧವೇ ಇಲ್ದೆ ಇರೋ ವಿಷಯಕ್ಕೆ ನಾವು ತಲೆ ಹಾಕಿದೀವಿ. ತಲೆ ಉರಳೋದು ಗ್ಯಾರಂಟಿ. ಸಿನಿಮಾದಲ್ಲೆಲ್ಲ ಇರೋ ಹಾಗೆ ದೊಡ್ಡ ದೊಡ್ಡ ನಾಯಿ ಈ ಮನೇಲಿದ್ದು, ಅದು ನಮ್ಮನ್ನ ನೋಡಿ ಕೂಗಿದ್ರೆ ಏನು ಮಾಡಬೇಕು ? ಸಿಸಿಟಿವಿ ಇದ್ಯೋ ಏನೋ.. ಯಾರಾದ್ರೂ ಅದನ್ನ ನೋಡಿ ನಮ್ಮ ಮೇಲೆ ಅಟ್ಯಾಕ್ ಮಾಡಿದ್ರೆ ... ಮುಂದೇನು ?" ಭಯಕ್ಕೆ ಕುಸಿದು ಬೀಳುತ್ತೀನೇನೋ ಎನಿಸಿತ್ತು.
 ಮನೆಯಲ್ಲ ಅದು ಅರಮನೆ. ಎದುರು ದೊಡ್ಡ ಹಸಿರು ಕೋಟೆ. ಎಂದರೆ ಯಾವುದೊ ಬಳ್ಳಿಯನ್ನು ಮೊದಲ ಮಹಡಿಯಷ್ಟು ಎತ್ತರಕ್ಕೆ ಬೆಳೆಸಿದ್ದರು. ನಮಗೂ ಆ ಮನೆಗೂ ನಡುವೆ ಅದೊಂದು ಪರದೆಯಾಗಿತ್ತು. ಅತ್ತ ಯಾರಿದ್ದಾರೆ ಎಂಬುದೂ ನಮಗೆ ಕಾಣುತ್ತಿರಲಿಲ್ಲ. ಆದರೆ ನಾವು ಅವರಿಗೆ ಕಾಣುವ ಸಂಭವ ಜಾಸ್ತಿ ಇತ್ತು. ಹಾಗಾಗಿ ಆದಷ್ಟು ನಿಧಾನವಾಗಿ ಗಿಡಗಳ ಮರೆಯಲ್ಲಿ ಬಗ್ಗಿ ನಡೆಯುತ್ತಿದ್ದೆವು.
ಕಾರಿನಿಂದ ಇಳಿದು ಬಂದವ ನಿಧಾನವಾಗಿ ಹಿಂಬದಿಯ ಬಾಗಿಲನ್ನು ತೆರೆದು ನಿಂತ. ಮೊದಲಬಾರಿಗೆ ಕಾಂತಿಬಾಯಿಯನ್ನು ಕಾಣಬಹುದೆಂದು ನಾವೆಲ್ಲ ಇಣುಕಿ ನೋಡುತ್ತಿದೆವು. ಉಳಿದ ಪೊಲೀಸರು ಎಲ್ಲಿ ಅಡಗಿದ್ದಾರೆ ಎಂಬ ಕೊಂಚ ವಿಷಯವೂ ನಮಗೆ ತಿಳಿದಿರಲಿಲ್ಲ. ನಿಧಾನವಾಗಿ ಕಾರಿನಿಂದ ಒಂದು ವ್ಯಕ್ತಿ ಇಳಿಯಿತು. ಸೀರೆ ಉಟ್ಟಿದೆ !! ಅಂದರೆ ಹೆಂಗಸು !! ಓಹ್... ಕಾಂತಿಬಾಯಿ!! ಪ್ರಪಂಚದಿಂದ ತಲೆಮರೆಸಿಕೊಂಡ ಕಾಂತಿಬಾಯಿ ನಮ್ಮ ಕಣ್ಣೆದುರಲ್ಲಿ...
ಶುದ್ಧ ಸುಳ್ಳು ! ಕಾಂತಿಬಾಯಿಗೆ ಬೆನ್ನು ಗೂನಾಗಿಲ್ಲ. ಈ ಹೆಂಗಸು ಬಾಗಿದ ಬೆನ್ನಿನವಳು. ಯಾರಿರಬಹುದು ? ಎಲ್ಲರೂ ಹೇಳುವಂತೆ ಕಾಂತಿ ಬಾಯಿಯ ತಾಯಿಯೇ ?? ನಮ್ಮಲ್ಲಿ ಯಾರೂ ಬಲ್ಲವರಿಲ್ಲ. ಸುಮ್ಮನೆ ನೋಡುತ್ತಿದ್ದೇವಷ್ಟೆ. ಆ ಹೆಂಗಸು ನಿಧಾನವಾಗಿ ನಡೆಯುತ್ತಾ ಹಸಿರು ಪರದೆಯ ಬಲದಿಂದ ನಡೆದು, ಮನೆಯತ್ತ ಸಾಗಿದಳು. ಡ್ರೈವರ್ ಅವಳ ಹಿಂದೆಯೇ ನಡೆದ.
 "ಅಲ್ಲಿ ನೋಡು" ಎಂದು ಪಿಸುಗುಟ್ಟಿದಳು ಕವನಾ. ಪೊಲೀಸಪ್ಪ ಶ್ ಎಂದು ಸನ್ನೆ ಮಾಡಿ ಅವಳನ್ನು ಸುಮ್ಮನಾಗಿಸಿದ. ಅವಳು ಹೇಳಿದತ್ತ ನೋಡಿದರೆ ಮೇಲಿನಿಂದ ಒಬ್ಬೊಬ್ಬರೇ ಪೊಲೀಸರು ಮೊದಲ ಮಹಡಿಗೆ ಇಳಿಯುತ್ತಿದ್ದಾರೆ . ಅವರೆಲ್ಲ ಅಲ್ಲಿ ಹೇಗೆ ಬಂದರು ಎಂದು ಯೋಚಿಸಿದರೂ, ಪೊಲೀಸರಲ್ಲವಾ ಎಲ್ಲಿಂದಲಾದರೂ ಬರುತ್ತಾರೆ ಎಂದು ಸುಮ್ಮನೆ ನೋಡುತ್ತಾ ಕುಳಿತೆವು. ಅವರೆಲ್ಲ ಒಳಹೊಕ್ಕಿದ ಐದೇ ನಿಮಿಷಕ್ಕೆ "ಹಲ್ಕಟ್..." ಎಂದು ಹೆಂಗಸೊಬ್ಬಳು ಚೀರಿದಳು. ಮತ್ತೊಬ್ಬ "ಯಾವನೋ ಅವ್ನು" ಎಂದು ಕೂಗಿದ. ಎದುರಿನ ಬಾಗಿಲು ತೆರೆದ ಸದ್ದಾಯಿತು. "ಗಿರಿ ಅಂಡ್ ಟೀಮ್ ಕಮ್ ಇನ್ " ಎಂದು ಒಬ್ಬ ಕೂಗಿದ. ಬನ್ನಿ ಬನ್ನಿ ಎನ್ನುತ್ತಾ ಗಿರಿ ಮುನ್ನಡೆದ.
"ನಾವ್ಯಾವಾಗ ಇವರ ಟೀಮ್ ಆದ್ವಿ" ಎಂದಳು ಕವನಾ. ಸುಮ್ನಿರೇ ಎಂದು ಅವಳನ್ನು ಬೆದರಿಸಿ ಗಿರಿಯ ಹಿಂದೆಯೇ ನಡೆದ ಮಹೇಶಣ್ಣ. ನಾವೂ ಅವರನ್ನು ಹಿಂಬಾಲಿಸಿದೆವು. ಒಳಗೆ ಹೋಗುತ್ತಿರುವಂತೆಯೇ ಕಣ್ಣು ಕೋರೈಸುವ ಬೆಳಕು. ಕತ್ತಲಿಗೆ ಹೊಂದಿಕೊಂಡಿದ್ದ ಕಣ್ಣುಗಳು ಬೆಚ್ಚಿ ಬಿದ್ದಂತೆ ಅರೆ ಕ್ಷಣ ರೆಪ್ಪೆಯೊಳಗೆ ಅಡಗಿಕೊಂಡವು. ಮುಂದಿದ್ದ ಪೊಲೀಸ್ ಹೇಗೆ ಹೋಗುತ್ತಿದ್ದನೋ, ನಾವು ನಾಲ್ವರೂ ಅವನನ್ನು ಹಿಂಬಾಲಿಸುತ್ತಿದ್ದೆವು. ಡೈನಿಂಗ್ ಟೇಬಲ್ ನ ತುದಿಯಲ್ಲಿ ಇನ್ಸ್ಪೆಕ್ಟರ್ ನಿಂತಿದ್ದರು. ಅವರ ಕಣ್ಣ ನೋಟ, ಗನ್ ಪಾಯಿಂಟ್ ಎರಡೂ ಡೈನಿಂಗ್ ಟೇಬಲ್ ಬಳಿ ನೆಲದ ಮೇಲಿತ್ತು. ಇನ್ನೊಂದು ಬದಿಯಲ್ಲಿ ಉಳಿದೆಲ್ಲ ಪೊಲೀಸರು ನಿಂತಿದ್ದರು. ಮುದಿ ಹೆಂಗಸನ್ನು ಒಬ್ಬ ಪೊಲೀಸ್ ಹಿಡಿದು ನಿಂತಿದ್ದ. ನಾವು ನಿಧಾನವಾಗಿ ಏನೋ ನಡೆಯಬಾರದ್ದು ನಡೆದಿದೆ ಎಂದುಕೊಳ್ಳುತ್ತ ಹೋದೆವು. ಆದರೆ ಪೊಲೀಸರು ಬಯಸಿದ ಬೇಟೆ ಎದುರಲ್ಲಿಯೇ ಇತ್ತು. ನಿಧಾನವಾಗಿ ಡೈನಿಂಗ್ ಟೇಬಲ್ ನ ಬದಿಯಲ್ಲಿ ಹೋದಂತೆ, ಕಂಡಿತು.. ಡ್ರೈವರ್ ಅಲ್ಲಿಯೇ ಎಚ್ಚರ ತಪ್ಪಿ ಬಿದ್ದಿದ್ದ. ಅವನ ಧಡೂತಿ ದೇಹ ಬಲ ಪಾರ್ಶ್ವದಲ್ಲಿ ಮಗುಚಿ ಬಿದ್ದಿತ್ತು. ಕಿವಿಯಿಂದ ರಕ್ತ ಸೋರುತ್ತಿತ್ತು. ಹೊಕ್ಕುಳ ಕೆಳಗೆ ಧರಿಸಿದ ಜೀನ್ಸ್ ಪ್ಯಾಂಟ್, ಮೇಲೆ ಸರಿದ ಕಪ್ಪು ಟಿ ಶರ್ಟ್ ನಡುವೆ ಹೊಟ್ಟೆ ಆಚೆ ಬಂದಿತ್ತು. ಅವನ ಪಕ್ಕದಲ್ಲಿಯೇ ಕುಳಿತಿದ್ದಳು ಅವಳು. ಅಸಹಾಯಕಳಾಗಿ, ಅವನನ್ನೇ ದಿಟ್ಟಿಸುತ್ತಾ. ಕೆಂಪು ಕಣ್ಣ ತುಂಬಾ ನೀರನ್ನು ತುಂಬಿಕೊಂಡು. ಅದೇ ಕೆಂಪು ಸೀರೆ, ಕತ್ತಿನಲ್ಲಿ ಹಾರ, ಕೈಲಿ ಗಾಯದ ಗುರುತು, ಮುಖದಲ್ಲಿ ಮೊಡವೆಯ ಕಲೆಗಳು, ಎದ್ದು ಕಾಣುವಂತಿಟ್ಟ ಕೆಂಪು ಕುಂಕುಮ... ಆದರೆ ಮೂಡಿ ಕಟ್ಟಲು ಮೊದಲ ಕೇಶರಾಶಿಯಿಲ್ಲ. ಬಾಯ್ ಕಟ್ ಕೂದಲು, ಎಡದಿಂದ ಬಲಕ್ಕೆ ತಿರುಗಿಸಿದ ಕ್ರಾಪ್ ಅಷ್ಟೇ!! ವಯಸ್ಸಿನಿಂದಲೊ, ಇನ್ಯಾವ ಕಾರಣಕ್ಕೋ ದೇಹ ಬಾಡಿತ್ತು. ಕುಸಿದು ಕುಳಿತ ಭಂಗಿಯಿಂದ ಮತ್ತೂ ವಯಸ್ಸಾದವಳಂತೆ ಕಾಣುತ್ತಿದ್ದಳು.
ನಾವೆಲ್ಲ ಇಡೀ ಬೆಂಗಳೂರನ್ನೇ ಆಳಿದ 'ಕಾಂತಿಬಾಯಿ' ಇವಳೇನಾ ಎಂಬಂತೆ ನಿಂತಿದ್ದೆವು. ಅದುವರೆಗೂ ಅವಳನ್ನು ನೋಡಬೇಕೆಂಬ ಕುತೂಹಲ ಆ ಕ್ಷಣಕ್ಕೆ ಅಂತ್ಯಗೊಂಡಿತ್ತು.
ಇವರನ್ನು ಬಿಟ್ಟು ಆ ಮನೆಯಲ್ಲಿ ಇನ್ನಾರೂ ಇದ್ದಂತೆ ಕಾಣಲಿಲ್ಲ. ಆ ನಿಶಬ್ದದ ನಡುವೆ ಆಕೆ ಕಣ್ಣೊರೆಸಿಕೊಳ್ಳುತ್ತ ಎದ್ದು ಇನ್ಸ್ಪೆಕ್ಟರ್ ನನ್ನು ದಾಟಿ ಅಡುಗೆ ಮನೆಯತ್ತ ನಡೆದಳು. ಒಂದು ಲೋಟ ನೀರು ಕುಡಿದು, ನಿಧಾನವಾಗಿ ನಡೆಯುತ್ತಾ ಮೆಟ್ಟಿಲ ಬಳಿ ಹೋದಳು.
" ಕಾಂತಿಬಾಯಿ ನಿಲ್ಲು.. ನೀ ಏನೂ ಮಾಡೋಕಾಗಲ್ಲ. ನಿಲ್ಲು ಕಾಂತಿಬಾಯಿ" ಎಂದು ಇನ್ಸ್ಪೆಕ್ಟರ್ ಕಿರುಚಿದ. "ಇಷ್ಟು ಹೇಳ್ತ ಇದ್ರೂ ಮೇಲೆ ಹೋಗ್ತಿಯ ನಿಲ್ಲು ಕಾಂತಿಬಾಯಿ " ಎನ್ನುತ್ತಾ ಮೆಟ್ಟಿಲ ಬಳಿ ಇನ್ಸ್ಪೆಕ್ಟರ್ ಹೋಗಿ ನಿಂತ.
 "ಈ ಕಾಂತಿಬಾಯಿನ ಇದುವರೆಗೂ ಹೆಸರು ಹಿಡಿದು ಯಾರೂ ಕರ್ದಿಲ್ಲ ನೆನಪು ಇಟ್ಕೋ" ಹಿಂದೆ ತಿರುಗಿಯೂ ನೋಡದೆ ಆಕೆ ಮೆಟ್ಟಿಲು ಹತ್ತುತ್ತಿದ್ದಳು. ಇದ್ದಕ್ಕಿದ್ದಂತೆ ಸ್ಫೋಟಕ ಸದ್ದಿಗೆ ನಾವೆಲ್ಲ ಬೆಚ್ಚಿದೆವು. ಇಸ್ಪೇಕ್ಟರ್ ಗನ್ ಇಂದ ಬುಲೆಟ್ ಆಚೆ ಬಂದು ಕಾಂತಿ ಬಾಯಿಯ ಎಡ ಕಾಲಿನ ಮೀನಖಂಡಕ್ಕೆ ಹೊಕ್ಕಿತು. "ಅವ್ವ.. " ಎಂದು ಚೀರಿ ಗೋಡೆ ಹಿಡಿದುಕೊಂಡಳು. ಮುದಿ ಹೆಂಗಸು ಜೋರಾಗಿ ಅಳುತ್ತಿದ್ದಳು. ಆ ಶಬ್ದಕ್ಕೆ ಬೆಚ್ಚಿದ ಮಗುವೊಂದು ಅಳುತ್ತಿರುವ ಸದ್ದು ಮೇಲಿನಿಂದ ಕೇಳಿಸಿತು. ಈ ಮನೆಯಲ್ಲೊಂದು ಮಗುವಿದೆ ಎಂಬ ಅರಿವು ಯಾರಿಗೂ ಇರಲಿಲ್ಲ. ಇನ್ಸ್ಪೆಕ್ಟರ್ ಕೂಡ ಸ್ತಬ್ಧವಾಗಿ ನಿಂತಿದ್ದರು. ಅಷ್ಟರಲ್ಲಿ ಕಾಂತಿಬಾಯಿ ಆ ಕೋಣೆಯ ಒಳಹೊಕ್ಕಳು. ಎರಡೇ ಕ್ಷಣಕ್ಕೆ ಮಗುವಿನ ಅಳು ನಿಂತಿತ್ತು. ಮೇಲೆ ನಿಂತಿದ್ದ ಒಬ್ಬ ಪೊಲೀಸನಿಗೆ ಇನ್ಸ್ಪೆಕ್ಟರ್ ಸಂಜ್ಞೆ ಮಡಿದ. ಆತ ಬಾಗಿಲ ಬಳಿ ನಿಂತು ಶೂಟ್ ಮಡಿದ ಸದ್ದಿಗೆ ಮತ್ತೊಮ್ಮೆ ಅವ್ವಾ ಎಂದಿದ್ದು ಕೇಳಿಸಿತು. ಎಲ್ಲರೂ ಮೇಲೆ ಓಡಿದೆವು. ಕೋಣೆಯ ಬಾಗಿಲಲ್ಲಿ ನಿಂತು ನೋಡಿದ ದೃಶ್ಯ ಭಯಾನಕವಾಗಿತ್ತು. ತೊಟ್ಟಿಲ ಪಕ್ಕ ನೆಲಕ್ಕೆ ಗೋಡೆಗೊರಗಿ ಕುಳಿತು, ಬಲಗಾಲನ್ನು ಮಡಚಿ, ಎಡಗೈಯಲ್ಲಿ ಮಗುವನ್ನು ತಬ್ಬಿ, ಮೊಲೆಯುಣಿಸುತ್ತಿದ್ದಳು ಕಾಂತಿಬಾಯಿ. ಮಗುವಿನ ಬಾಯಿಯಲ್ಲಿ ಬಿಳಿ ನೊರೆ ಹಾಲು, ಅದರ ಕಾಲು ಕೆಂಪು. ಕಾಂತಿಬಾಯಿಯ ಸೊಂಟಕ್ಕೆ ಗುಂಡಿನ ಏಟು ಬಿದ್ದು ರಕ್ತ ಧಾರಾಕಾರವಾಗಿ ಸುರಿಯುತ್ತಿತ್ತು. ಮಗು ಅವಳ ಕತ್ತಿನ ಹಾರವನ್ನು ಹಿಡಿದು, ಸೊಂಟಕ್ಕೆ ಒದೆಯುತ್ತಾ ಹಾಲು ಕುಡಿಯುವುದಲ್ಲಿ ತಲ್ಲೀನವಾಗಿತ್ತು. ಕಾಂತಿಬಾಯಿ ನೇರ ದೃಷ್ಟಿಯಲ್ಲಿ ಬಾಗಿಲತ್ತ ನೋಡುತ್ತಿದ್ದಳು. ನಾವೆಲ್ಲಿ ಅವಳ ದೃಷ್ಟಿಯಿಂದ ಸುಟ್ಟು ಭಸ್ಮವಾಗುತ್ತೀವೋ ಎಂದು ನಡುಗುತ್ತ ಬೆವರಿ ನಿಂತಿದ್ದೆವು. ಇಂದಿಗೂ ಆ ಚಿತ್ರ ನನ್ನನ್ನು ಕಾಡುತ್ತದೆ. ಕೆಂಪು ಸೀರೆಯಲ್ಲಿ, ಕೆಂಪು ರಕ್ತದ ಮಡುವಿನಲ್ಲಿ ಕಾಂತಿಬಾಯಿ, ನೋವಿನಲ್ಲೂ ಬಿಗಿದಪ್ಪಿದ ಮಗು. ಆ ಮಗುವಿನ ಆಟ, ಕಾಂತಿಬಾಯಿಯ ನೋಟ !!

ಆದರೂ ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಕಾಂತಿಬಾಯಿಯನ್ನು ಪೊಲೀಸರ ಕೈಗೊಪ್ಪಿಸಿದ್ದಕ್ಕಲ್ಲ; ಯಾವ ಕನಸೂ ನೆನಪಿರದ ನನಗೆ, ನಡುರಾತ್ರಿ ಕಂಡ ಕನಸೊಂದು, ನೆನಪಿದ್ದೂ, ಮೂರು ದಿನಗಳವರೆಗೆ ಚಿತ್ರ ಸಮೇತ ಕಾಡಿದ್ದು ಇದೆ ಮೊದಲು. ಅದನ್ನು ನೆನಪಿಟ್ಟು ಮರುಸೃಷ್ಟಿಸಿದ್ದಕ್ಕೆ ಹೆಮ್ಮೆ! ಆ ಕಾಂತಿಬಾಯಿ ಹಾಗೂ ಅವಳ ಮಗುವನ್ನು ಸಧ್ಯದಲ್ಲಿ ನಾನು ಮರೆಯಲಾರೆ... -ಪಲ್ಲವಿ

Wednesday, February 9, 2022

ಸ್ನೇಹ


ನನ್ನ ಡಿಗ್ರಿ ಸಮಯದಲ್ಲಿ, ಹಾಸ್ಟೆಲ್ ನಲ್ಲಿ ನನ್ನ ಪಕ್ಕದ ರೂಮಿನವಳು ಮುಸಲ್ಮಾನ್ ಹುಡುಗಿ.ನಮಗಿಂತ ಎರಡು ವರ್ಷ ದೊಡ್ಡವಳು. ಆಕೆಯನ್ನು ನಾವೆಲ್ಲ 'ಅಕ್ಕ' ಎಂಬ ಭಾವನೆಯಿಂದ ಕಾಣುತ್ತಿದ್ದೆವು. ಇಂದಿಗೂ ಕೂಡ ನೆನಪಾದಾಗಲೆಲ್ಲ ಮಾತನಾಡುತ್ತಾಳೆ.
ನಮ್ಮ ನಡುವೆ ಕಪ್ಪು - ಕೇಸರಿಯ ಬೇಧವಿಲ್ಲ!

ನನ್ನ ಅನಾರೋಗ್ಯದಲ್ಲಿ ಉಳಿದ ಗೆಳತಿಯರೊಡನೆ ನಿಂತು ನನ್ನ ಕಾಳಜಿವಹಿಸಿದ್ದಾಳೆ. ಪ್ರೀತಿಯಿಂದ ತನ್ನೆಲ್ಲ ಗೆಳತಿಯರನ್ನು 'ಸ್ವಾಮಿ' ಎಂದು ಕರೆಯುತ್ತಾಳೆ.
ನಮ್ಮ ನಡುವೆ ದೇವಾಲಯ - ಮಸೀದಿಯ ಚರ್ಚೆ ಬಂದಿಲ್ಲ!

ಆಕೆ ಹಾಸ್ಟೆಲ್ ಬಿಟ್ಟು ಹೋದಮೇಲೆಯೂ ನಮಗಾಗಿ ಮನೆಯಿಂದ ರೊಟ್ಟಿ ಮಾಡಿ ತಂದು ತಿನ್ನಿಸಿದ್ದಾಳೆ. ನನಗೆ ಪ್ರಿಯವಾದ ಮಾವಿನ ಹಣ್ಣುಗಳನ್ನು ಅವಳ ತೋಟದಿಂದ ತಂದು ನನ್ನೆದುರು ಸುರಿದಿದ್ದಾಳೆ. ನಮ್ಮ ಮನೆಯ ಊಟವನ್ನು, ಸಿಹಿಯನ್ನು ಉಳಿದೆಲ್ಲರಿಗಿಂತ ಮುಂಚೆ ಸವಿದು, ಅಮ್ಮನ ಕೈರುಚಿಯನ್ನು ಮನಸಾರೆ ಹೊಗಳಿದ್ದಾಳೆ. ವಾರ್ಡನ್ ಬಳಿ ಕೇಳಿ ಭೂತಗೊಜ್ಜು, ಅಪ್ಪೆಹುಳಿ ಮಾಡುವುದನ್ನು ಕಲಿತಿದ್ದಾಳೆ! ಅವಳ ರಂಜಾನ್ ಉಪವಾಸದಲ್ಲಿ ಬೆಳಗಿನ ಜಾವದ ತಿಂಡಿಗಾಗಿ ನಾವೆಲ್ಲ ರಾತ್ರಿಯೇ ವ್ಯವಸ್ಥೆ ಮಾಡಿದ್ದೇವೆ.
ನಮ್ಮ ನಡುವೆ ಅನ್ನ, ಹಸಿವು ಮತ್ತು ಒಗ್ಗಟ್ಟು ಮಾತ್ರವೇ ಇತ್ತು.. ಧರ್ಮದ ವಿವಾದವಲ್ಲ!

ಬಿಕಾಂ ನಲ್ಲಿ 'ಕನ್ನಡ' ಭಾಷೆಯನ್ನು ಆಯ್ಕೆ ಮಾಡಿಕೊಂಡವಳು ಒತ್ತಕ್ಷರ, ಕಾಗುಣಿತಗಳನ್ನು ಕೇಳಿ ಕೇಳಿ ಬರೆದಿದ್ದಾಳೆ. ಕೋಣೆಯಲ್ಲಿ ಪುಟ್ಟ ಮಕ್ಕಳು ಬರೆಯುವಂತೆ 'ಅ ಆ ಇ ಈ' ಬರೆದಿದ್ದಳು!! ನಾವೂ ಕೆಲವು ಉರ್ದು ಪದಗಳನ್ನು ಅವಳಲ್ಲಿ ಕೇಳುತ್ತಿದ್ದೆವು.
ನಮ್ಮ ಮಧ್ಯೆ ಕಲಿಯುವ ಮನಸ್ಸುಗಳಿದ್ದವು. ಅಕ್ಷರ ಪ್ರೀತಿಯಿತ್ತು.
ನಮ್ಮ ಪುಣ್ಯ...ಒಡಕು ಮೂಡಿಸುವ ಕೆಟ್ಟ ಮನಸ್ಸುಗಳು ನಮ್ಮ ನಡುವೆ ಇರಲಿಲ್ಲ!
ಇನ್ನೂ ಆ ನಜೂಕಾದ ಗೆಳೆತನ ನಮ್ಮಲ್ಲಿದೆ. ಅದಕ್ಕೆ ಯಾವುದೇ ಬಣ್ಣವಿಲ್ಲ, ನಮ್ಮ ಸ್ನೇಹವೇ ಧರ್ಮ..

-ಪಲ್ಲವಿ 

ಕರಗುವೆ...