Friday, August 28, 2020

ನಾ ಓದಿದ ಪುಸ್ತಕ.. (ಬೆಂಗಾಲಿ ಬೆಡಗಿ)

'ಬೆಂಗಾಲಿ ಬೆಡಗಿ' ಎಷ್ಟು ಚಂದದ ಹೆಸರದು!! ಅಷ್ಟೇ ಚಂದದ ಕಥೆ. ಮುಖಪುಟದ ವಿನ್ಯಾಸದಲ್ಲಿಯೇ ಶ್ವೇತವರ್ಣದಲ್ಲಿ ಮೂಡಿದ ರೇಖೆಯ ಸುಂದರಿ ಜೊತೆಯಲ್ಲಿ ಕಬ್ಬಡ್ಡಿಯ ಛಾಯೆ ಕಾಣುತ್ತದೆ; ಜೊತೆಗೆ ಗಡಿಯ ಬೇಲಿಯೂ!! ಕದ ತೆರೆದಂತೆ ಒಳಪುಟಗಳಲ್ಲಿ ಸೊಗಸಾದ ಲೋಕವೇ ತೆರುದುಕೊಳ್ಳುತ್ತದೆ. ಬಾಂಗ್ಲಾವನ್ನು ಎಲ್ಲ ರೀತಿಯಿಂದಲೂ ತೋರಿಸುವ ಉತ್ತಮ ಪ್ರಯತ್ನವಿದು ಎಂದರೆ ತಪ್ಪಿಲ್ಲ..!

ನಾಯಕ ವಿನಯಚಂದ್ರನಿಗೆ ಕಬ್ಬಡ್ಡಿ ಕನಸು. ಅವನ ಕನಸಿನ ರಾಜಕುಮಾರಿ ಸಿಗಲೂ ಇದೇ ಕಬ್ಬಡ್ಡಿ ಕಾರಣ!! ಮಲೆನಾಡ ಹಳ್ಳಿಮನೆಯೊಂದರ ಕುಟುಂಬದಿಂದ  ಪ್ರಾರಂಭವಾಗುವ ಕಥೆ, ಸಂಭಾಷಣೆ ಆಪ್ತವೆನಿಸುವಂಥದ್ದು. ಒಂದು ಪುಟ್ಟ ಹಳ್ಳಿಯ ಕಬ್ಬಡ್ಡಿ ಆಟಗಾರ ದೇಶದ ಪ್ರತಿನಿಧಿಯಾಗಿ, ಬಾಂಗ್ಲಾದೇಶಕ್ಕೆ ಹೊರಡುವ ಸಮಯ ಅವನ ತಂದೆ-ತಾಯಿಯರ  ಅಳುಕು; ಊರ ಬಿಟ್ಟು ಭವಿಷ್ಯ ರೂಪಿಸಿಕೊಳ್ಳಲು ಹೊರಟು ನಿಂತ ಮಕ್ಕಳ ತಂದೆ-ತಾಯಿಯರ ಸ್ಥಿತಿಯನ್ನು ಎದುರಿಗಿಡುತ್ತದೆ. ಮಲೆನಾಡ 'ಮಾಣಿ'ಗೆ  ಬಾಂಗ್ಲಾ 'ಬೆಡಗಿ' ಸಿಗುವ ಸಂದರ್ಭವನ್ನು ವರ್ಣಿಸಿದ ರೀತಿಯೇ ಸುಂದರ! ಒಂದು ಪ್ರೇಮಕಥೆ ತನ್ನ ಜೊತೆಯಲ್ಲಿ ಬಾಂಗ್ಲಾ ಪರಿಸ್ಥಿತಿಯನ್ನು, ಜನ ಜೀವನವನ್ನು, ಅಲ್ಲಿನ (ಅ)ವ್ಯವಸ್ಥೆಯನ್ನು, ರಾಜಕೀಯ ಹಿಂಸಾಚಾರವನ್ನು  ಎದುರಿಸುತ್ತ ಮುನ್ನುಗ್ಗುತ್ತದೆ. ಭೂಗೋಳಿಕವಾಗಿಯೂ ಬಾಂಗ್ಲಾವನ್ನು ಬಲು ಸೊಗಸಾಗಿ ವರ್ಣಿಸಿದ್ದಾರೆ ಲೇಖಕರು. ಬಾಂಗ್ಲಾ ಇತಿಹಾಸವನ್ನು ಪ್ರಸ್ತುತಪಡಿಸುವಾಗ, ಒಂದು ಕಥೆಯನ್ನು  ಎಷ್ಟು ಆಸಕ್ತಿಯಿಂದ, ಆಪ್ತತೆಯಿಂದ, ಆಳವಾಗಿ ನಮ್ಮೆದುರು ಇಡುತ್ತಿದ್ದಾರೆ ಎಂದು ಅರಿವಾಗುತ್ತದೆ. 
 ತೊಂದರೆಗಳನ್ನೆಲ್ಲ ಎದುರಿಸಿ ಮುಂದೆಸಾಗುವಾಗ ಸಿಗುವ ಪ್ರತಿಯೊಂದು ಪಾತ್ರವೂ ಮುಖ್ಯವೇ! 
ಸಂಕಷ್ಟಗಳನ್ನೆಲ್ಲ ಎದುರಿಸಿ, ಪ್ರೀತಿ ಗೆಲ್ಲುವುದಾ?  ಬಾಂಗ್ಲಾ ಗಡಿ ದಾಟಿ ಬೆಡಗಿ ಭಾರತಕ್ಕೆ ಬಂದಳಾ?  ಎಂಬುದನ್ನು ಓದಿಯೇ ತಿಳಿಯಬೇಕು!!

ಪುಸ್ತಕ : ಬೆಂಗಾಲಿ ಬೆಡಗಿ (ಕಾದಂಬರಿ)
ಲೇಖಕರು : ವಿನಯ್ ದಂಟಕಲ್ 

Tuesday, August 25, 2020

ರಾಧೆಯೋ.. ಭಾಮೆಯೊ..

ಮುರಳಿಯ ಮಧುರಗಾನಕೆ ಮನಸೋತ ಮುಗುಳುನಗೆಯಿದು.. 
ನಂದನಂದನನ ಮುಕುಟದ ನವಿಲುಗರಿಯ ನವಿರು ಸ್ಪರ್ಶವ ಬಯಸುವ ಹಸ್ತ ರೇಖೆಯಿದು.. 
ಸುತ್ತ ಇಣುಕಿದರೂ ಕಾಣದ ಕೇಶವ ಮನದೊಳಗೆ ಕಾಡುವ.. 
ಜಗದ ಮೊದಲ ಚೋರ ಅವನು.. ನನ್ನ ಮನವನೂ ಬಿಡನು.. 
ನಾ ರಾಧೆಯೋ..ಭಾಮೆಯೊ.. ನನ್ನ ಕೃಷ್ಣನಲ್ಲಿ ಕಳೆದುಹೋದೆ.. 
-ಪಲ್ಲವಿ 

Monday, August 10, 2020

ಎಲ್ಲಾದರೂ ಇರು.. ಎಂತಾದರೂ ಇರು..

ಅಂದು ತಮ್ಮ ಇದ್ದಕ್ಕಿದ್ದಂತೆ ಕರೆ ಮಾಡಿದ, "ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಟಿಕೆಟ್ ಬುಕ್ ಮಾಡ್ಲಾ? " ಎಂದ. ನನಗೋ ಆಫೀಸ್ ಗಡಿಬಿಡಿ, ಈ ಟ್ರಾಫಿಕ್ಕಿನಲ್ಲಿ ಸಮಯಕ್ಕೆ ಸರಿಯಾಗಿ ಹೋಗಿ ತಲುಪುತ್ತೇನೋ ಇಲ್ಲವೋ ಎಂಬ ಅನುಮಾನ ! "ಇದು ಕೊನೆ ಪ್ರದರ್ಶನ ಮಾರಾಯ್ತಿ ! ನಮಗೆ ಆಮೇಲೆ ಸಿಗತ್ತೋ ಇಲ್ವೋ ಗೊತ್ತಿಲ್ಲ.." ಎಂದು ಕೊನೆಯಲ್ಲಿ ಬಾಂಬ್ ಬೇರೆ ಸಿಡಿಸಿದ್ದ ! ಜನವರಿ ಇಂದಲೇ ಹೋಗಬೇಕೆಂದುಕೊಂಡರೂ ಸಮಯ ಕೂಡಿಬರದೆ ಕಟ್ಟ ಕಡೆಯ ಪ್ರದರ್ಶನಕ್ಕೆ ಇದ್ದಕ್ಕಿದ್ದಂತೆ ಹೊರಟಿದ್ದೆವು! 

ಸ್ವಲ್ಪ ಬಿಡುವಿದೆ ಎಂದು ಸೂಪರ್ ಮಾರ್ಕೆಟ್ ಕಡೆ ಮುಖ ಮಾಡಿದ್ದೆ, ಪರಿಚಿತ ಮುಖವೊಂದು ಮುಗುಳ್ನಕ್ಕಿತು. ಆಗಾಗ ಅವನ ತಾಯಿಯೊಡನೆ ಕಾಣುವ ಪುಟ್ಟ ಪೋರ ಅಮ್ಮನ ಬಳಿ ಏನೋ ಹಠ ಹಿಡಿದಿದ್ದ, ನನ್ನ ನೋಡಿ ಸಣ್ಣ ಮುಖದಲ್ಲೂ ಮುಗುಳ್ನಕ್ಕಿದ್ದ. 
"Mommy, I want Golgappa.."
"No no...it's not healthy.. it's too spicy chinna..you can't eat that"
"Please mommy..."
"No means no" ಎನ್ನುತ್ತಾ ಅವನಮ್ಮ ಮುಂದೆ ಹೋದಳು. 
"ಪುಟ್ಟ, Don't you know ಕನ್ನಡ? " ಎಂದೆ. 
"My mother tongue is Kannada."
"ಹಾಗಾದ್ರೆ ನಿಂಗೆ ಕನ್ನಡ ಬರತ್ತೆ.."
ಅತ್ತ ಇತ್ತ ನೋಡಿ ಮೆಲ್ಲಗೆ, "ಹೊ, ಮನೇಲಿ ಅಜ್ಜಿ ಜೊತೆಗೆ ಕನ್ನಡದಲ್ಲೇ ಮಾತಾಡ್ತೀನಿ" ಎಂದ ಮುದ್ದಾಗಿ. 
"ಸ್ಕೂಲ್ ಅಲ್ಲಿ ಇಂಗ್ಲಿಷ್ ಅಲ್ಲೇ ಮಾತಾಡ್ಬೇಕು ಇಲ್ಲಾ ಅಂದ್ರೆ ಫೈನ್ ಹಾಕ್ತಾರೆ. ಅಲ್ಲಿ ಇಂಗ್ಲಿಷ್ ತಪ್ಪಬಾರದು ಅಂತಾ ಮಮ್ಮಿ ಮನೇಲಿ ಇಂಗ್ಲಿಷ್ ಮಾತಾಡೋಕೆ ಹೇಳ್ತಾಳೆ. ಕನ್ನಡ ಮಾತಾಡಿದ್ರೆ ಚಾಕಲೇಟ್ ಕೊಡಲ್ಲ ಅಂತಾಳೆ. ಅದಕ್ಕೆ ಅಜ್ಜಿ ಜೊತೆಗೆ ಮಾತ್ರ ಕನ್ನಡ ಮಾತಾಡ್ತೀನಿ..."
ಅಷ್ಟರಲ್ಲಿ "chinni, where are you? " ಎಂಬ ಧ್ವನಿ ಕೇಳಿ, "ಬೈ ಬೈ ಅಕ್ಕಾ..."ಎನ್ನುತ್ತಾ ಓಡಿದ. 
ಪಾಪ! ಅತ್ತ ಸ್ಕೂಲ್ ನಲ್ಲಿ ಫೈನ್ ಗೆ ಹೆದರಿ ಇಂಗ್ಲಿಷ್ ಮಾತನಾಡಬೇಕು. ಮನೇಲಿ ಅಮ್ಮನಿಗೆ ಹೆದರಿ ಕನ್ನಡ ಬಳಸಬಾರದು !! 
ಹೀಗೆ ಯೋಚಿಸುತ್ತ ನಿಂತಾಗಲೇ ಕ್ಯಾಬ್ ಡ್ರೈವರ್ ಬಂದಿದ್ದೇನೆ ಎಂದು ಕರೆ ಮಾಡಿದ, ಈ ವಿಷಯ ಅಲ್ಲೇ ಬಿಟ್ಟು ನಾನು ನಾಟಕಕ್ಕೆ ಹೊರಟೆ!!
ತಮ್ಮನಿಗಿಂತ ಮೊದಲು ನಾನು ಕಲಾಗ್ರಾಮಕ್ಕೆ ತಲುಪಿದ್ದೆ. ಅವನು ಬರುವವರೆಗೆ ಏನು ಮಾಡೋದು? ಸುಮ್ಮನೆ ಕಣ್ಣುಹಾಯಿಸಿದೆ. ಹಾ ! ಪುಸ್ತಕದಂಗಡಿ.. ಪುಸ್ತಕಗಳಿಗಿಂತ ಹೆಚ್ಚು ನನ್ನ ಸೆಳೆದದ್ದು ಅಲ್ಲಿ ನಿಂತ ವ್ಯಕ್ತಿ ! 
ಎತ್ತರದ ದೇಹ, ಮುಖದ ಗಾಂಭೀರ್ಯ ಒಂದು ರೀತಿಯ ಗೌರವ ಭಾವನೆ ಮೂಡಿಸಿತು. ಹತ್ತಿರ ಹೋಗಿನಿಂತು ಸುಮ್ಮನೆ ಪುಸ್ತಕಗಳ ಪುಟ ತಿರುವತೊಡಗಿದೆ. ಏಕೋ ಆ ಹಿರಿಯರೆಡೆಗೆ ಕುತೂಹಲ..ಬಿಳಿಯ ನಿಲುವಂಗಿ, ಪಂಜೆ ಧರಿಸಿದವರು ಪ್ರತಿ ಪುಸ್ತಕದ ಬಗ್ಗೆಯೂ ಹೇಳುತ್ತಿದ್ದರು.
 ಕೊನೆಗೆ ಪುಸ್ತಕ ಕೊಡುವಾಗ ಚಪ್ಪಲಿ ತೆಗೆದು ನಿಂತು, ಗ್ರಾಹಕನ ಕೈಗೆ ತಮ್ಮ ಎರಡೂ ಕೈಗಳಿಂದ ಪುಸ್ತಕ ಕೊಟ್ಟು, ಹಣ ಪಡೆದು ಕೈ ಮುಗಿದು ನಮಸ್ಕರಿಸುತ್ತಿದ್ದರು ಮತ್ತೆ ಬನ್ನಿ ಎನ್ನುತ್ತಾ.. ಹಸ್ತಲಾಘವ ಮಾಡಬಹುದಿತ್ತಲ್ಲ (ಆಗೇನು ಕೊರೊನ ಬಂದಿರಲಿಲ್ಲ ನಮ್ಮ ದೇಶಕ್ಕೆ!!) ಎಂದುಕೊಳ್ಳುತ್ತ ಮತ್ತೆ ಗಮನಿಸಿದೆ. ಹೌದು, ಪ್ರತಿಯೊಬ್ಬರಿಗೂ ಪುಸ್ತಕ ಕೊಡುವಾಗ ಹೀಗೆಯೇ ಮಾಡುತ್ತಾರೆ. ಅಲ್ಲಿ ಗ್ರಾಹಕರನ್ನು ಓಲೈಸುವ ಯಾವ ಭಾವನೆಯೂ ಇಲ್ಲ, ನಾಟಕೀಯತೆ ಇಲ್ಲ.. ನನ್ನ ಕುತೂಹಲ ಹೆಚ್ಚುತ್ತಲೇ ಹೋಯ್ತು. ಮೊದಲ ಬಾರಿ ನಾನು ಇಂತಹ ವ್ಯಕ್ತಿಯನ್ನು ನೋಡಿದ್ದು.. 

"ಇವರು ಚಪ್ಪಲಿ ತೆಗೆದು ಬರಿಗಾಲಲ್ಲಿ ನಿಂತು ಯಾಕೆ ಪುಸ್ತಕ ಕೊಡುತ್ತಾರೆ? ಅದೂ ಎರಡೂ ಕೈಗಳಿಂದ ಪುಸ್ತಕ ಹಸ್ತಾಂತರಿಸುವಾಗ ಸ್ವಲ್ಪ ಬೆನ್ನು ಬಾಗಿರುತ್ತದೆ. ಪ್ರೀತಿಯಿಂದಲೋ..? ಪುಸ್ತಕ ಸರಸ್ವತಿ ಎಂದಿರಬಹುದೇ? ಹಣ ಲಕ್ಷ್ಮಿ ಎಂದೇ? Customer is god ಎಂಬುದನ್ನು ಹೀಗೆ ಪಾಲಿಸುತ್ತಿರಬಹುದೇ?! ಯಾಕೆ ಹೀಗೆ ಮಾಡುತ್ತಿರಬಹುದು?.. " ನನ್ನೊಳಗೆ ಅದೆಷ್ಟು ಪ್ರಶ್ನೆಗಳು!!
ಕೊನೆಗೆ ಎರಡು ಪುಸ್ತಕಗಳನ್ನಾರಿಸಿ ದುಡ್ಡು ಕೊಡಲೆಂದು ಹೋದೆ. ಎರಡೂ ಚಪ್ಪಲಿ ತೆಗೆದುನಿಂತರು. ಕತ್ತಲಲ್ಲಿ ಕಿರುಗಣ್ಣಿನಿಂದ ಪುಸ್ತಕದ ಬೆಲೆಯೆಷ್ಟು ಎಂದು ನೋಡುತ್ತಿದ್ದರು. ಕುತೂಹಲವನ್ನು ತಡೆಯಲಾರದೇ, "ಸರ್ ನೀವು ಯಾವ ಊರಿನವರು?" ಎಂದೆ. 
"ನಾನು ಮೈಸೂರಿನವನು ಕಣಮ್ಮ. ನೀನು ಎಲ್ಲಿಯವಳು?  ನಿನ್ನ ಕನ್ನಡ ನೋಡಿದ್ರೆ ಬೆಂಗಳೂರಿನವಳಂತೂ ಅಲ್ಲಾ ಎನಿಸುತ್ತದೆ.."
ಅಯ್ಯೋ.. ಒಂದೇ ಪ್ರಶ್ನೆಗೆ ಇದನ್ನೆಲ್ಲಾ ಕಂಡುಹಿಡಿದುಬಿಟ್ರ..? 
"ಹೌದು ಸರ್, ನಾನು ಬೆಂಗಳೂರಿನವಳಲ್ಲ, ಉತ್ತರ ಕನ್ನಡದವಳು.."
"ಓಹೋ.. ಅದಕ್ಕಾಗೇ ಈ ಪುಸ್ತಕ ತಗೊಂಡಿದ್ದೋ.." ಎಂದರು ನಗುತ್ತಾ.. 
ನನಗೇನೂ ಅರ್ಥವಾಗಲಿಲ್ಲ. ಅನಂತನಾಗ್ ಅವರ 'ನನ್ನ ತಮ್ಮ ಶಂಕರ' ಪುಸ್ತಕ ತೋರಿಸುತ್ತ, "ನಿಮ್ಮೂರಿನೋರು ಅಂತಾ ತಗೊಂಡ್ಯಾ? "
"ಹಾಗೇನಿಲ್ಲ ಸರ್, ಬಹಳ ದಿನಗಳಿಂದ ಹುಡುಕ್ತಿದ್ದೆ. ಇವತ್ತು ಇಲ್ಲಿ ಸಿಗ್ತು.." 
"ಉತ್ತರ ಕನ್ನಡದಲ್ಲಿ ಎಲ್ಲಿ? ಶಿರಸಿನಾ?"
"ಓಹ್ ನಮ್ಮೂರು ಗೊತ್ತಾ ಸಾರ್ ನಿಮಗೆ? ಅಲ್ಲೇ ಶಿರಸಿ ಪಕ್ಕ.."
"ನಾನೂ ಅಲ್ಲೆಲ್ಲ ಓಡಾಡಿದಿನಿ ಕಣಮ್ಮ.. ಶಿರಸಿ, ಸಿದ್ದಾಪುರ, ಸಾಗರ, ಹುಬ್ಬಳ್ಳಿ, ಧಾರವಾಡ...."
ನಮ್ಮೂರಿನ ಪರಿಚಯವಿದ್ದವರು ಇದ್ದಾರಲ್ಲ ಎನ್ನುತ್ತಾ ಖುಷಿಯಲ್ಲಿ ಹಣ ಕೊಟ್ಟು, ಪುಸ್ತಕ ಪಡೆದು ನಗುತ್ತಾ ಹೊರಟೆ. 
"ಏನಮ್ಮ, ಊರಿಂದ ಬೆಂಗ್ಳೂರಿಗೆ ಬಂದಿದಿಯ.. ಕನ್ನಡ ಚನ್ನಾಗಿದೆ. ಕೊನೆವರೆಗೂ ಇದೇ ಕನ್ನಡ ಇರಲಿ.." ಎಂದರು ನಗುತ್ತಾ ಎರಡೂ ಕೈ ಜೋಡಿಸಿದರು. 
ನಾನೂ ನಗುತ್ತಾ ನಮಸ್ಕರಿಸಿದೆ !!
ಕೊನೆಗೂ ಕುತೂಹಲದಿಂದ ಬಲ್ಲವರಲ್ಲಿ  ವಿಚಾರಿಸಿದಾಗ, ಅವರು ಸಾಕ್ಷ್ಯಚಿತ್ರಗಳ ನಿರ್ದೇಶಕರೆಂದೂ, ಬಿಡುವಿನ ನಡುವೆ ಪುಸ್ತಕ ಮಾರಾಟ ಮಾಡುತ್ತಾರೆಂದೂ ತಿಳಿಸಿದರು. ಅವರ ಕನ್ನಡ ಪ್ರೀತಿಯದು, ಸೇವೆಯದು.  
ಕೇವಲ ನಾವು 'ಓರಾಟಗಾರರು' ಎನ್ನುತ್ತಾ, ಹೊಟ್ಟೆಯುಬ್ಬಿಸಿಕೊಂಡು ಸುತ್ತುವವರ ನಡುವೆ, ಸದ್ದೇ ಇಲ್ಲದೆ ಇಂತಹ ಸತ್ಕಾರ್ಯ ಮಾಡುವವರ ಕಂಡ ತಕ್ಷಣ ನಮಸ್ಕರಿಸಬೇಕೆನಿಸುವುದು ಸಹಜ !

ಒಂದೇ ದಿನ ನಡೆದ ಈ ಎರಡೂ ಘಟನೆಗಳು ಬಹಳ ಸಣ್ಣದಿರಬಹುದು, ಅಷ್ಟೇ ಸೂಕ್ಷ್ಮ ಕೂಡ.. ಎರಡೂ ಎಷ್ಟು ತದ್ವಿರುದ್ಧ! 
"ಇಲ್ಲಿ ಯಾವುದೂ ಯಃಕಶ್ಚಿತವಲ್ಲ" ಎಂದೆನಿಸಿದ್ದು ಸುಳ್ಳಲ್ಲ !
ಮಗುವಿಗೆ ಇಂಗ್ಲಿಷ್ ಹೇರುತ್ತಿರುವ ಮನೆಯವರೊಂದುಕಡೆ.. ಬಿಡುವಾದಾಗ ಕನ್ನಡ ಪುಸ್ತಕಗಳನ್ನು ಮಾರಿ, ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡುವ ಹಿರಿಯ ಇನ್ನೊಂದು ಕಡೆ!! ಒಂದೇ ನಗರದ ಎರಡು ಮುಖಗಳು.. 

ಎಲ್ಲಾದರೂ ಇರು.. ಎಂತಾದರೂ ಇರು.. 
ಎಂದೆಂದಿಗೂ ನೀ ಕನ್ನಡವಾಗಿರು.... 
ಸಾಲುಗಳನ್ನು ಗುನುಗುತ್ತಾ ಮುನ್ನಡೆದೆ... 

ಕೃಷ್ಣ

ತುಂಟ ಕೃಷ್ಣ, ಕಳ್ಳ ಕೃಷ್ಣ, ಮುದ್ದು ಕೃಷ್ಣ, ಬಾಲ ಕೃಷ್ಣ, ಯಶೋದಾ ಕೃಷ್ಣ, ಕಪಟಿ ಕೃಷ್ಣ, ಕುಟಿಲ ಕೃಷ್ಣ, 
ಮಾತು ಕೃಷ್ಣ, ಮೊಗ ಕೃಷ್ಣ, ನಗು ಕೃಷ್ಣ, ಕಣ್ಣಿನಾಳ ಕೃಷ್ಣ, ಮನದ ನೆರಳು ಕೃಷ್ಣ, ಹಣ್ಣಿನ ಸಿಹಿ ಕೃಷ್ಣ, ಪ್ರೀತಿಯ ತುಂತುರು ಕೃಷ್ಣ, ಗುರು ಕೃಷ್ಣ, ಗುರಿ ಕೃಷ್ಣ, ಸಖ ಕೃಷ್ಣ, ಸುಖಿ ಕೃಷ್ಣ, ಗರಿಯ ನವಿರು ಕೃಷ್ಣ, ಕೊಳಲ ನಾದ ಕೃಷ್ಣ, ಗೆಜ್ಜೆಯ ಹೆಜ್ಜೆ ಕೃಷ್ಣ, ಸರಳ ರೇಖೆಯೂ ಕೃಷ್ಣ ........ ಹೇಳಲು ಹೋದರೆ ನಿಲ್ಲದು... 
ಗೆಳೆಯನೊಬ್ಬ ಹೇಳಿದಂತೆ, "ನವನೀತಚೋರನಿಗಿಂತ ಜಗದಲ್ಲಿ ಅತೀ ದೊಡ್ದ ಕಳ್ಳ ಎಲ್ಲಿಯೂ ಇರಲಾರ..."
ನನಗಿನ್ನೂ ಚೆನ್ನಾಗಿ ನೆನಪಿದೆ. ಹಾಸ್ಟೆಲ್ ದಿನಗಳ ಕೃಷ್ ಆಗಿದ್ದ ಕೃಷ್ಣ.. ನನಗೊಬ್ಬಳಿಗೆ ಅಲ್ಲಾ !! ಏನೋ ಮಾತನಾಡುತ್ತ "ಕೃಷ್ಣನೊಬ್ಬ ಹುಚ್ಚ..." ಎಂದುಬಿಟ್ಟೆ.. ಎಲ್ಲರೂ ರೇಗಿದರು.. ದೇವರಿಗೆ ಹಾಗೆಲ್ಲ ಹೇಳಬಾರದೆಂದು.. ಒಬ್ಬಳು ಮಾತ್ರ ಮುಗುಳ್ನಕ್ಕಳು.. "ಅವನು ಸಖ..ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸ್ತಾನೆ ಅಷ್ಟೇ.. ಒಬ್ಬರಿಗೆ ದೇವರು, ಒಬ್ಬರಿಗೆ ಗೆಳೆಯ, ಒಬ್ಬರ ಮಗ,.. ಹಾಗೇ ಇವಳ ಕಣ್ಣಿಗೆ ಹುಚ್ಚ..!!"
ಕಲಿಯುಗದ ಮೀರಾಬಾಯಿ.. ನನ್ನ ಗೆಳತಿ, ಕೃಷ್ಣನ ಬಹುದೊಡ್ಡ ಆರಾಧಕಿ...!! ದಿನಕ್ಕೆ ಮಾತಿಗೊಮ್ಮೆ ಕೃಷ್ಣ ಕೃಷ್ಣ ಎನ್ನುವವಳು...ಕೊನೆಕೊನೆಗೆ ಅವನ ಬಗ್ಗೆ ಹೇಳಿ ಹೇಳಿ ನಮ್ಮೊಳಗೂ ಕೃಷ್ಣನನ್ನು ಇಳಿಸಿಬಿಟ್ಟಳು... 

ಮತ್ತೆ ಕಾಡಿದ ಮಳೆಯ ನೆನಪು - 5

ಹಾಗೇ ಶಿಲೆಯಂತೆ ಸ್ತಬ್ಧವಾದಳು ಸುಲೋಚನೆ. "ನಯ್ನಾ ಅಲ್ನೋಡು.. ದೋಣಿ ಬಂತು.. "
"ಒಂದಲ್ಲ ಅಕ್ಕಾ.. ಎರಡಿದೆ. ನೋಡಲ್ಲಿ.."
ಹೌದು ! ಅವಳು ಗಮನಿಸಿರಲೇ ಇಲ್ಲ. ಎರಡು ದೋಣಿಗಳು ಇವರು ನಿಂತಲ್ಲಿಯೇ ಬಂದವು.ಇಬ್ಬರೂ ಇಳಿದು ತಮ್ಮ ದೋಣಿಗಳನ್ನು ಹತ್ತಿರದ ಮರಗಳಿಗೆ ಕಟ್ಟಿನಿಲ್ಲಿಸಿದರು. ಇಷ್ಟು ಬೇಗ ಇವರು ಬರುತ್ತಾರೆಂದು ಅರಿವಿರದೇ, ಯಶೋದಮ್ಮ ಬುತ್ತಿ ಬಿಚ್ಚಿದ್ದಳು.ಗಂಡನತ್ತ ಪ್ರಶ್ನಾರ್ಥಕವಾಗಿ ನೋಡಿದಳು. 
"ಅಲ್ರಪ್ಪಾ.. ಈಗ್ಲೇ ಹೊರಟುಬಿಡ್ತೀರಾ ಹೇಗೆ?.. ಬಸ್ಸು ಸ್ವಲ್ಪ ತಡ ಆಯ್ತು.. ಹಾಗಾಗಿ ಇಲ್ಲಿ ಬರೋತನ್ಕಾ ಇಷ್ಟೊತ್ತು.."
"ಯೇ.. ಏನೂ ತೊಂದ್ರೆ ಇಲ್ಲ ಒಡೆರೇ.. ನೀವು ಊಟ ಮಾಡ್ಕಳಿ.." ಎಂದ ಒಬ್ಬ. 
"ಅಲ್ಲಾ, ಇನ್ನೂ ಸ್ವಲ್ಪ ಜನ ಇದಾರೆ ಆ ಕಡೆ... ನಮ್ಮಿಂದ ತಡ ಆಗತ್ತೆನೋ.."
ಅಷ್ಟರಲ್ಲಿ ಇನ್ನೊಬ್ಬ ಬಂದು, "ಹಂಗೇನಿಲ್ಲ ಸಾರ್, ನೀವು ಅರಾಮ್ ಉಂಡ್ಕಳ್ರಿ.. ಇವ ನಿಮ್ಮನ್ನ ಕರ್ಕಂಡ್ ಬತ್ತಾನೆ. ನಾ ಉಳ್ದೋರನ್ನ ಕರ್ಕೊಂಡು ಬತ್ತೀನಿ..ಒಂದು ಹತ್ತ್ ಮಿನಿಟು ನಾವಿಲ್ಲೇ ಮರದ್ ಕೆಳೆಗೆ ಕುಂತಿರ್ತೀವಿ. ನಿಮ್ಮ ಊಟ ಆದ್ಮ್ಯಾಕೆ ಕರೀರಿ, ಬತ್ತೀವಿ.. " ಎಂದ. 
"ಆಯ್ತಪ್ಪ ಹಾಗಿದ್ರೆ, ನಾವು ಬೇಗ ಊಟ ಮುಗಿಸ್ತೀವಿ.."
ಎನ್ನುತ್ತಾ ದೇವಪ್ಪ ತಮ್ಮ ಮನೆಯವರೊಡನೆ ಊಟಕ್ಕೆ ಕುಳಿತ. ಅವರಿಬ್ಬರೂ ಮರದಡಿಯಲ್ಲಿ ಹರಟುತ್ತ ಕುಳಿತರು. ಇನ್ನೊಂದೆಡೆ ನಾಲ್ಕು ಪ್ರಯಾಣಿಕರು ತಮ್ಮ ಬುತ್ತಿಯನ್ನು ಬಿಚ್ಚಿದರು. 
"ಸುಲೋಚನಾ, ರೊಟ್ಟಿ ಮೇಲೆ ಚಟ್ನಿ ಹಾಕು.." ಮೂರು ಬಾರಿ ಹೇಳಿರಬೇಕು ಯಶೋದಮ್ಮ, ಪಾಪ ಅವರಿಗೇನು ಗೊತ್ತು, ಮಗಳ ದೇಹ ಇಲ್ಲಿದೆ ಮನಸ್ಸು ಮರದ ಸುತ್ತ ಸುತ್ತುತ್ತಿದೆ ಎಂದು !!
ನಯನಾ ಎರಡು ಬಾರಿ ಎಚ್ಚರಿಸಿದಳು, "ಅಕ್ಕಾ, ಊಟ ಮಾಡ್ತಿದಿವಿ ನಾವು.."  ಉಹ್ಞೂ !ಏನೂ ಪ್ರಯೋಜನವಿಲ್ಲ. 
ಕೊನೆಗೆ ದೇವಪ್ಪನ ಧ್ವನಿಯೇ ಬೇಕಾಯ್ತು, "ಲೇಯ್ ಸುಲೋಚ್ನ, ಎಷ್ಟು ಹೊತ್ತು ಒಂದೇ ರೊಟ್ಟಿ ಎಳೀತಾ ಇರ್ತೀಯಾ? ಮೊಸರನ್ನ ತಿಂತೀಯೋ ಇಲ್ವೋ? ಆಮೇಲೆ ದೋಣಿಯವರು ಬಿಟ್ಟು ಹೋಗ್ತಾರೆ ನೋಡು.."
ಗಬಗಬನೆ ತಿಂದಳು ಹುಡುಗಿ, ಎಲ್ಲಾದರೂ ತನ್ನ ಬಿಟ್ಟು ಹೊರಟರೆ ಎಂದು !
ಕೊನೆಗೆ ಡಬ್ಬಿ ತೊಳೆದು ಬರುತ್ತೇವೆಂದು ನದಿಯತ್ತ ಹೊರಟರು. 
"ಅಕ್ಕಾ, ಏನು ಕತೆ? ನಾನು ನೋಡ್ದೆ.." ರಾಗ ಎಳೆದಳು ನಯನೆ. 
"ಏನೇ ನಿಂದು.. ಸುಮ್ನೆ ಬಾರೆ.."
"ಹುಷಾರಕ್ಕ.. ಅಪ್ಪ ನೋಡಿದ್ರೆ ಕಷ್ಟ.."
"ನಿಂದೊಳ್ಳೆ ರಾಗ ಆಯ್ತಲ್ಲೇ.. ಏನೂ ಇಲ್ಲ ಅಂತಿದೀನಿ ನಾನು.."
"ನಾನು ಶಿವೂ ಅಲ್ಲಾ, ನಂಗೂ ಎಲ್ಲ ಅರ್ಥ ಆಗತ್ತಕ್ಕೋ.. " ಎನ್ನುತ್ತಾ ಕಣ್ಣು ಮಿಟುಕಿಸಿದಳು. 
ಸುಲೋಚನಾ ಏನೂ ಮಾತಾಡದೆ ಡಬ್ಬ ತೊಳೆಯತೊಡಗಿದಳು. 
ಅಷ್ಟರಲ್ಲಿ ಕುಯ್ ಕುಯ್ ಎನ್ನುತ್ತಾ ನಾಯಿ ಮರಿಯೊಂದು ಅವಳ ಕಾಲನ್ನು ನೆಕ್ಕುತ್ತ, ಲಂಗವನ್ನು ಎಳೆಯೊಡಗಿತು. 
"ಇದೆಲ್ಲಿಂದ ಬಂತೆ.. ಪಾಪ,  ಹಸಿವಾಗಿರ್ಬೇಕು. ನಮ್ಮ ಡಬ್ಬೀನೂ ಖಾಲಿ ಆಯ್ತಲ್ಲೇ.."
"ಸುಮ್ನಿರಕ್ಕ, ಬೀದಿನಾಯಿಗೆಲ್ಲ ಅನ್ನ ಹಾಕ್ಕೊಂಡು... ಮಾಡೋಕೆ ಬೇರೆ ಕೆಲ್ಸ ಇಲ್ವಾ ನಿಂಗೆ?  ನೋಡು ಸಾಯೋಕೆ ಬಿದ್ದಿದೆ ಅದು.."
"ನಾವಿಲ್ಲೆ ಬಿಟ್ರೆ ಸತ್ತೇ ಹೋಗತ್ತೆ ಕಣೇ.."
"ಸಾಯ್ಲಿ ಬಿಡೇ.."
"ನಮ್ ಜೊತೇನೆ ಕರ್ಕೊಂಡು ಹೋಗೋಣ್ವಾ? "
"ಸುಮ್ನಿರಕ್ಕ.. ಮಾತೆತ್ತಿದ್ರೆ ಅಪ್ಪ ಬಿಟ್ಟುಹೋಗ್ತೀನಿ ಅಂತಾರೆ. ಇದು ಬೇರೆ ಬೇಕಾ.."
ಇವರ ವಾದ ನಡೆಯುತ್ತಿದ್ದಂತೆಯೇ ಎಲ್ಲರೂ ಅಲ್ಲೇ ಬಂದರು. ನಾವೇ ಸಾಕೋಣ ಎಂದು ಹಠ ಹಿಡಿದಳು ಸುಲೋಚನಾ. 
"ನೋಡು, ಇಲ್ಲಿಂದ ತಗೊಂಡು ಹೋಗ್ತಾ ನದೀಲಿ ಬಿದ್ದೋದ್ರೆ ಅಲ್ಲೇ ಸಾಯತ್ತೆ ಅದು. ಇನ್ನು ಅದನ್ನ ದಾಟಿ ನಮ್ಮ ಜೊತೇಲಿ ಬಂದ್ರೂ, ಜಾತ್ರೆ ಜನರ ಮಧ್ಯ ಎಲ್ಲಿ ಬಿಡ್ತಿ ಅದನ್ನ? ಹರಕೆ ತೀರಿಸಬೇಕೋ, ನಾಯಿಮರಿ ನೋಡ್ಕೊಳ್ಳಬೇಕೋ? ಅದನ್ನ ತಗೊಂಡ್ ಹೋದ್ರೆ ಆಗಿಲ್ಲ. ಮೂರುಹೊತ್ತೂ ಹೊಟ್ಟೆಗ್ ಹಾಕಬೇಕು. ಅಲ್ಲಿ ಯಾರು ಹಾಕ್ತಾರೆ? ಬೇಡವೆ ಬೇಡ.. ಇಲ್ಲೇ ಬಿಟ್ಬಿಡು.."
ಕಡ್ಡಿ ತುಂಡು ಮಾಡಿದಂತೆ ಹೇಳಿದ ದೇವಪ್ಪ. ಅಷ್ಟರಲ್ಲಾಗಲೇ ಅವಳ ಕಣ್ಣಲ್ಲಿ ನೀರು ತುಂಬಿತ್ತು. ಈ ಮಧ್ಯ ಅವನು ಯಾವಾಗ ಪ್ರವೇಶಿಸಿದನೋ ಅರಿವಾಗಲೇ ಇಲ್ಲ. 
"ಒಡೆರೆ, ನಿಮ್ಗೆ ಏನೂ ತೊಂದ್ರೆ ಆಗಕಿಲ್ಲ ಅಂದ್ರೆ, ನಾ ತಗತ್ತೀನಿ ಇದ್ನ.. ನಾನೇ ಸಾಕ್ತಿನಿ..." ಎಂದ. 
ನಸುನಕ್ಕಳು ಸುಲೋಚನೆ ತಲೆ ಎತ್ತದೆಯೇ ! ಎಲ್ಲ ಒಪ್ಪಿದ ನಂತರ ಅವನು ಆ ನಾಯಿಮರಿ ಎತ್ತಿಕೊಂಡು ಮರದ ಕೆಳಗೆ ನಡೆದ. ದೇವಪ್ಪ ಯಶೋದಮ್ಮ ಬುತ್ತಿ ಚೀಲ ತುಂಬಲು ಹೋದಳು. 
"ಏನಕ್ಕ, ಏನು ನಡೀತಾ ಇದೆ ಇಲ್ಲಿ.. " ಎನ್ನುತ್ತಾ ತಿವಿದ ನಯನಾಳನ್ನು ದೂಡುತ್ತಾ, "ಏನೂ ಇಲ್ಲ ಹೋಗೆ.." ಎಂದು ಲಂಗ ಹಿಡಿದು ಓಡಿದಳು..... 

ಇತ್ತ ಮರದ ಕೆಳಗೂ ಮಾತುಕತೆ ಜೋರಾಗಿಯೇ ಸಾಗಿತ್ತು.
"ಏನಪ್ಪಾ ದೋಸ್ತಾ ಭಾಳ ಪಿರೂತಿ ಬಂದಂಗ್ ಐತೆ.."
"ಹಾಂಗೇನಿಲ್ಲ ಕಲಾ.. ಪಾಪ ಮರಿ.." ಎನ್ನುತ್ತಾ ಮರಿಯ ತಲೆ ನೇವರಿಸಿದ. 
"ಹೌದೌದು.. ಪಾಪ ಮರಿ.."
"ಒಂದೋ ಹಸ್ವಾಗಿ ಸಾಯ್ತದೆ, ಇಲ್ಲ ಮುಳುಗಿ ಸಾಯ್ತದೆ.. ನಂದೊಂದು ತುತ್ತು ಕೊಟ್ರೆ ಜೀವ ಇರಗಂಟ ಬದಿಕತ್ತದೇ.."
"ಓಹೋ ನೀ ನಾಯಿಮರಿಗೆ ಪಾಪ ಯೋಳಿದ್ದೋ.. ನಾ ಏನೋ ಲಂಗದಾವಣಿ ಮರಿ ಬಗ್ಗೆ ಅಂದ್ಕಂಡೆ.."
"ಯೇ.. ಥುತ್... ನಿಂದ್ ಬರೀ ಇದೆ ಆಯ್ತು ಕಲಾ.."
" ಮತ್ತೇನ್ಲಾ.. ದಿನ ಏಟ್ ಕರ, ಮರಿ ಎಲ್ಲ ಕಾಣ್ತಾವೆ ತಟದಾಗೆ.. ಎಲ್ಲ ತಂದು ತುತ್ತು ಕೊಟ್ಟಿಯೇನ್ಲ.. ದೊಡ್ಡ ಬಂದ್ಬುಟ ಇವತ್ತು.."
"ಯೇನೇನೋ ಯೋಳ್ಬ್ಯಾಡಾ.. ಸುಮ್ಕಿರ್ಲಾ.."
"ದಿಟವೆಯ ನಾ ಯೋಳಿದ್ದು.."
"ಹೌದಪ್ಪಾ.. ಆ ವುಡ್ಗಿ ಪಾಪ ಅಳು ಮಕ ಮಾಡ್ಕಂಡಿತ್ತು.."
"ಆಂ.. ಅಲ್ಲೆಯ ಆಗಿದ್ದು ಯಡವಟ್ಟು.."
"ಏನ್ ಯಡವಟ್ಟು..? ಏನಾತ್ಲ.."
"ನಂಗೇನ್ ಆಗ್ನಿಲ್ಲ.. ನಿಂಗೆಯ.. ಲೋವ್ ಆಗೈತೆ.."
"ಎಂತದು... ಲೋವಾ.."
"ಹುಂ ಕಲಾ.. ಅದಿಲ್ದೆ ವೋಗಿರೆ ನೀ ಯಾಕ್ಲಾ ಅಲ್ಲೋಗಿ ಈ ನಾಯಿಮರಿ ತಕ ಬತ್ತಿದ್ದೆ? "
"ಯೇ ಸುಮ್ಕಿರ್ಲಾ.. ಅವ್ರು ನಮ್ಮ ದೋಣಿ ಹತ್ತದೆ ವೊದ್ರೆ ಕಷ್ಟ.."
"ಇಲ್ಲಿ ಎಲ್ಡೆ ದೋಣಿ ಇರಾದು.. ನಾ ಹತ್ತಿಸ್ಕಳಕಿಲ್ಲ.. ನಿನ್ ವುಡ್ಗಿನ ನೀನೇ ತಾಕಬಾ..." 
"ಏನೇನೋ ಯೋಳ್ಬ್ಯಾಡ ಸೀನ.. ಬಾ ವೋಗುಮ.."
"ಏನಿಲ್ಲಾ.. ಇದು ಲೋವ್ವೆಯ.. ನಂಗೇಟ್ ಕಿತಾ  ಆಗೈತೆ.. ನಿಂಗೆ ಮೊದಲ್ನೇ ಕಿತಾ.. ಅದ್ಕೆ ಗೊತ್ತಾಯ್ತ ಇಲ್ಲ.. ನೀ ಏನ್ ಟೇನ್ಸನ್ ತಕಬ್ಯಾಡ.. ನಾ ಎಲ್ಲ ನೋಡ್ಕತಿನಿ.."
"ನೀ ಏನ್ಲ ನೋಡ್ಕಳದು.."
"ದೋಣಿಯ ದಿಡಾ ಹಚ್ಚದು... ನಾ ನಿಂಗೆ ಎಲ್ಲ ಯೋಳಿಕೊಡ್ತಿನ್ಲಾ.."
"ಅದೇನ್ ಯೋಳ್ತಿಯೋ.. ಅದೇನ್ ಮಾಡ್ತೀಯೋ.. ನಡಿ ನಡಿ.." ಎನ್ನುತ್ತಾ, ನಾಯಿಮರಿಯನ್ನು ಕೈಲಿ ಹಿಡಿದುಕೊಂಡ. 
ಅಷ್ಟರಲ್ಲಿ ದೇವಪ್ಪ ಕೂಗಿದ..."ನಮ್ಮ ಊಟ ಆಯ್ತು.. ಹೊರಡೋಣ್ವ.. ತಡ ಇದ್ಯಾ?.. "
"ನೋಡು, ನಿಮ್ಮ ಮಾವ ಕರೀತವ್ನೆ..." ಎನ್ನುತ್ತಾ, ಚಿವುಟಿದ. 
ಇಬ್ಬರೂ ನಗುತ್ತಾ ದೋಣಿಯೆಡೆಗೆ ಬಂದರು. 

Friday, August 7, 2020

ಬಳೆಗಳ ಸರದಾರ...

ಊರಗಲಕ್ಕೂ ಗಲಗಲಗಲ ಸದ್ದು ಮಾಡುತ್ತಾ ಬಂದರೆ ಎಲ್ಲರೂ ಒಮ್ಮೆ ತಿರುಗಿ ನೋಡಬೇಕು ಯಾರಿದು ಎಂದು.. ಬೇರೆ ಯಾರಾಗಿರಲು ಸಾಧ್ಯ.. ಅವನೇ ನಮ್ಮ ಬಳೆಗಾರ !
ಸಾಲು ಸಾಲು ಹಬ್ಬಗಳನ್ನು ಹೊತ್ತು ತರುವ ಶ್ರಾವಣ, ಬಳೆಗಾರನ ಬಗಲಿಗೆ ಒಂದು ಜೋಳಿಗೆ, ಕಾಲಿಗೆರಡು ಚಕ್ರಗಳನ್ನೂ ಸಿಕ್ಕಿಸುತ್ತದೆ. ಫ್ರಾಕುಗಳು, ಸ್ಕರ್ಟ್ ಗಳು, ಗೆಜ್ಜೆ ಕಟ್ಟಿದ ಪಾದವನ್ನು ಮೇಲಕ್ಕೆತ್ತಿ ತುದಿಗಾಲಲ್ಲಿ ನಿಂತಿರುತ್ತವೆ, ಮಾಸಿದ ಜೋಳಿಗೆಯಲ್ಲಿ  ಬಣ್ಣದ ಕನಸುಗಳ ಹೊತ್ತು ತರುವ ಬಳೆಗಳ  ಸರದಾರನಿಗಾಗಿ.. 
ಅನಾದಿಕಾಲದಿಂದಲೂ ಕೃಷ್ಣನಿಗೆ ಹೆಂಗಳೆಯರ ಮನಗೆದ್ದವ ಎನ್ನುತ್ತಾರೆ. ಬಳೆಗಾರನೇನು ಕಡಿಮೆಯೇ? ಹಾಗಿಲ್ಲದಿದ್ದರೆ ಬಳೆಗಾರನ ಕೇಂದ್ರೀಕರಿಸಿ ಎಷ್ಟೆಲ್ಲಾ  ಹಾಡುಗಳು ಯಾಕಿರುತ್ತಿದ್ದವು? ಜಾನಪದ ಗೀತೆಗಳು ಎಂದಾಕ್ಷಣ ನೆನಪಾಗುವ ಸಾಲುಗಳವು.. 
"ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರಿಗೆ..."
"ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು..."
ಇಷ್ಟೇ ಅಲ್ಲದೇ ನನ್ನಜ್ಜಿಯೂ ಹಾಡುತ್ತಾಳೆ - "ಬಳೆಯು ಬಂದವು ನೋಡೇ.. ಪಾರ್ವತಿ ಬಳೆಯನಿಡುವೆನು ಬಾರೆ..."
ಎಲ್ಲ ಹಾಡುಗಳಲ್ಲಿಯೂ ಬಳೆಗಾರನೇ ನಾಯಕ !
ಹೊರ ಊರಿನ ಸಂಪರ್ಕವೆ ಇಲ್ಲದ ಕುಗ್ರಾಮವೊಂದರ
ಹೆಂಗಸರಿಗೆ ಅಪರೂಪಕ್ಕೆ ಬರುವ ಬಳೆಗಾರ ಒಂದು ರೀತಿಯ ಲೋಕಲ್ ನ್ಯೂಸ್ ಪೇಪರ್ !! ಎಲ್ಲರೂ ಒಟ್ಟಾಗಿ ಕುಳಿತು ಬಳೆಯಿಡಿಸಿಕೊಳ್ಳುತ್ತಿರುವಾಗ ಸುತ್ತ ಹತ್ತು ಹಳ್ಳಿಗಳ ಮುಖ್ಯಾಂಶ ಹೇಳುವ ಸುದ್ದಿ ನಿರೂಪಕ ಈ ಬಳೆಗಾರ!

ಅರೆ.. ಈಗ ಯಾಕೆ ಬಳೆಗಾರ ನೆನಪಾದ?! ಎಂದುಕೊಂಡಿರಾ.. 
ವರುಷಕ್ಕೆ ನಾಲ್ಕು ಬಾರಿ ಬಂದರೂ, ನಮ್ಮೂರಿನಲ್ಲಿ ಅವನ ವ್ಯಾಪಾರ ಜೋರಾಗಿರುತ್ತಿದ್ದುದು ಆಗಸ್ಟ್ ತಿಂಗಳಿನಲ್ಲಿ ಹಾಗೂ ದೀಪಾವಳಿಯಲ್ಲಿ. ಗೇಟು ತೆರೆಯುವ ಸದ್ದಾದ ತಕ್ಷಣ ಇತ್ತ ನಾಯಿಗಳ ಆರ್ಭಟ ಬಲು ಜೋರು. ಯಾರು ಬಂದರಪ್ಪ ಈ ಮಧ್ಯಾಹ್ನ?  ಎಂದು ಬಾಗಿಲೆರಗಿ ನೋಡಿದರೆ... ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇಲ್ಲ. "ಅಮ್ಮಾ.. ಬಳೆಗಾರ ಬಂದಾ.. ಅಜ್ಜಿ ಬಳೆಗಾರ ಬತ್ತಾಇದ್ದಾ.." ಎಂದು ಕೂಗುತ್ತ ಅಡಿಗೆ ಮನೆಗೆ ಓಡುತ್ತಿದ್ದೆ. 
ಬಿಳಿ ಎಂದು ಹೇಳಬಹುದಾದಂಥ ಪಂಜೆಯೊಂದನ್ನು ಮೊಣಕಾಲವರೆಗೆ ಉಟ್ಟು, ಮೇಲೊಂದು ತಿಳಿ ಬಣ್ಣದ ನಿಲುವಂಗಿ ಹಾಕಿದ್ದ ಬಳೆಗಾರ, ತಲೆಗೊಂದು ಟವೆಲನ್ನು ರುಮಾಲಿನ ರೀತಿ ಸುತ್ತುತ್ತಿದ್ದಒಂದಷ್ಟು ಬಳೆಗಳನ್ನು ದಪ್ಪ ಹಗ್ಗದಲ್ಲಿ ಇಳಿಸಿ, ಹೆಗಲಿಗೇರಿಸಿಕೊಂಡರೆ, ಇನ್ನೊಂದಷ್ಟನ್ನು ಪೈಪಿನಾಕಾರದ ರಟ್ಟಿನಲ್ಲಿ ಜೋಡಿಸಿ, ಜೋಳಿಗೆಯೊಳಗೆ ಇಟ್ಟುಕೊಳ್ಳುತ್ತಿದ್ದ. ಮಳೆಗಾಲವಾದರೂ ಮಳೆಯಿಲ್ಲದ ಕಾರಣ ಉದ್ದನೆಯ ಕಪ್ಪು ಛತ್ರಿಯೇ ಊರುಗೋಲಾಗಿತ್ತು ! 
ನಿಧಾನವಾಗಿ ಬಂದು ಖಾಕಿ ಬಣ್ಣದ ಜೋಳಿಗೆಯನ್ನು ಕೆಳಗಿಸುವ ಸಮಯದಲ್ಲಿ ಎಲ್ಲರೂ ಹೊರಗೆ ಬಂದಿರುತ್ತಿದ್ದೆವು. "ಉಶ್ಶಪ್ಪಾ.. ಅಬಾಬಾಬಾ.. ಏನ್ ಸೆಕೇನ್ರವ್ವಾ.. ಈ ಮಳೆಗಾಲದಾಗೂ ಒಂದು ಮಳೆ ಇಲ್ಲ.. ಉಫ್.." ಎಂದು ಉಸಿರು ಬಿಡುತ್ತ, ತಲೆಗೆ ಕಟ್ಟಿದ್ದ ಟವೆಲ್ ತೆಗೆದು ಬೆವರೊರೆಸಿಕೊಂಡು, ಗಾಳಿ ಬೀಸಿಕೊಳ್ಳುತ್ತಿದ್ದ. "ಮಳೆ ಬಂದ್ರೆ ನೀ ಬರ್ತಿದ್ಯ ಬಳೆಗಾರ? " ಎಂದು ಆಗಲೇ ವಾದಕ್ಕಿಳಿದಿರುತ್ತಿದ್ದೆ. 
ಅಜ್ಜಿ ತಂದುಕೊಟ್ಟ ಮಜ್ಜಿಗೆಯನ್ನು ಕುಡಿದು, ಅವನು ಲೋಟ ಕೆಳಗಿಳಿಸುವಷ್ಟರಲ್ಲಿ ಆ ಇಡೀ ಜೋಳಿಗೆಯನ್ನು ಜಾಲಾಡಿ ತನಿಖೆ ನಡಿಸಿರುತ್ತಿದ್ದೆ! ದಪ್ಪ ಮೀಸೆಗೆ ತಾಗಿದ ಮಜ್ಜಿಗೆ ಒರೆಸಿಕೊಳ್ಳುತ್ತ, ಮೂಗಿನ ತುದಿಗೆ ದಪ್ಪ ಕನ್ನಡಕ ಏರಿಸುತ್ತ, "ತಡಿಯವ್ವ.. ನಿನಗೆ ಅಂತಾನೆ ತಂದಿರೋದು.. ಸಾವಕಾಶ್ ತೆಗಿ" ಎನ್ನುತ್ತಿದ್ದ. ಕೊನೆಗೂ ನನ್ನ ಕಾಟ ತಾಳಲಾರದೆ ಎಲ್ಲ ಬಳೆಗಳನ್ನೂ ತೆಗೆದಿಡುತ್ತಿದ್ದ. ಅವನಿಗೋ ಬಳೆ ಒಡೆದರೆ ಎಂಬ ಚಿಂತೆ.. ನನಗೋ ಎಲ್ಲ ಬಣ್ಣದ ಬಳೆಗಳನ್ನೂ ನೋಡಬೇಕೆಂಬ ಆಸೆ. ಕೆಂಪು, ತಿಳಿ ಹಸಿರು, ಗಾಢ ಹಸಿರು, ನೀಲಿ, ಹಳದಿ, ಚಿಕ್ಕಿ ಬಳೆ, ಝರಿ ಬಳೆ, ದಪ್ಪ ಬಳೆ, ಸಣ್ಣ ಬಳೆ.. ಅದೆಷ್ಟು ವಿಧಗಳೋ..! ಜೊತೆಯಲ್ಲಿ ಕೆಂಪು, ಬಿಳಿ, ಕಪ್ಪು, ಹಸಿರು ಬಣ್ಣಗಳ ರಿಬ್ಬನ್, ರಬ್ಬರ್ ಬ್ಯಾಂಡ್, ಪ್ಲಾಸ್ಟಿಕ್ ಹೂವುಗಳು, ಅಜ್ಜಿಯಂದಿರಿಗೆ ಲಾಲ್ ಗಂಧ, ಜೊತೆಗೆ ಕಾಸಗಲದ ಬಿಂದಿ, ಕಪ್ಪು, ಕೆಂಪಿನ ಸಣ್ಣ ಬಿಂದಿ, ಭಾಗಿನದ ಕೆಂಪು ದಾರ, ಕರಿಮಣಿಯ ಸಣ್ಣ ಗುಚ್ಛ, ಮರದ ಸಣ್ಣ ಬಾಚಣಿಗೆ... ಆ ಜೋಳಿಗೆ ಒಂಥರಾ ಅಕ್ಷಯ ಪಾತ್ರೆ ! ಮೊಗೆದಷ್ಟೂ ಬೊಗಸೆಯಲ್ಲಿ ತುಂಬುತ್ತಿದ್ದವು.
ಅವನೊಡನೆ ನನ್ನ ಮಾತುಗಳೇ ಮುಗಿಯುತ್ತಿರಲಿಲ್ಲ.. 
"ಏನೋ ಬಳೆಗಾರ.. ಈ ಸಲಾನೂ ನಂಗೆ ಬಳೆ ತಂದಿಲ್ವಾ.."
"ಯಾಕ್ ತಾಯಿ.. ಇಷ್ಟೆಲ್ಲಾ ಐತಲ್ಲಾ.. ನೋಡು.. ಇದೆಲ್ಲ ನಿಂದೇ ಸೈಜು.."
"ಏಯ್, ಹೋಗೋ.. ಇದೆಲ್ಲ ಪ್ಲಾಸ್ಟಿಕ್ ಬಳೆ,  ಅಮ್ಮ ಅಜ್ಜಿಗೆ ಕೊಡ್ತಿಯಲ್ಲ, ನಂಗೂ ಹಾಗೇ ಗಾಜಿನ ಬಳೆನೇ ಬೇಕು..ಹಿಂದಿನ ಸಲನೆ ಹೇಳಿದ್ನಲ್ಲೋ.. ತಂದಿಲ್ವಾ"
"ವಯಸ್ಸಾಯ್ತಲ್ಲ.. ಮರ್ತುಬುಟ್ಟೆ ತಾಯಿ.. ಮುಂದಿನಸಲ ತರ್ತೀನಿ.." ಎನ್ನುತ್ತಾ ತಲೆ ನೇವರಿಸಿ, ಕೆನ್ನೆ ಚಿವುಟುತ್ತಿದ್ದ!
ಆದರೆ ಅವನೆಂದೂ ಪುಟ್ಟ ಮಕ್ಕಳಿಗೆ ಗಾಜಿನ ಬಳೆ ತರುತ್ತಿರಲಿಲ್ಲ, ಮಣ್ಣು-ಕಲ್ಲಲ್ಲಿ ಆಡುವಾಗ ಬಳೆ ಒಡೆದು ಗಾಜು ಎಳೆ ಚರ್ಮಕ್ಕೆ ಹೊಕ್ಕಿಬಿಟ್ಟರೆ ಎಂದು.. 
ನನಗೋ ಪ್ಲಾಸ್ಟಿಕ್ ಬಳೆಗಳು ಚುಚ್ಚುತ್ತಿದ್ದವು, ತಿಂಗಳೊಳಗೆ ಬಣ್ಣ ಕಳೆದು ಬಿಳಿಚಿಕೊಳ್ಳುವ, ಕೈಯಾಡಿಸಿದರೆ ಶಬ್ದವೇ ಬಾರದ ಪ್ಲಾಸ್ಟಿಕ್ ಬಳೆ ಇಷ್ಟವೇ ಆಗುತ್ತಿರಲಿಲ್ಲ..! ಆದರೂ ಕೊನೆಗೆ ಅವನೇ ನನ್ನ ಪುಟ್ಟ ಮುಂಗೈ ಮುದ್ದೆ ಮಾಡಿ ಬಳೆಯಿಡುತ್ತಿದ್ದ. 
"ಬಳೆಗಾರ,  ಹಿಂದಿನ ಸಲ ಆ ಮನೆ ಹುಡುಗಿಗೆ ಕೆಂಪು ಬಣ್ಣದ ಬಳೆ ಇಟ್ಟಿದ್ದಿ. ನಂಗೆ ಕೆಂಪು ತರ್ಲಿಲ್ಲ ನೀನು.." ಎಂದು ದೂರಿದರೆ ನಸುನಗುತ್ತಾ, 
 "ಇಲ್ನೋಡು, ಆಗಸ್ಟ್ ಹದಿನೈದಕ್ಕೆ ಅಂತಾ ಕೇಸರಿ, ಬಿಳಿ, ಹಸಿರಿನ ಬಳೆ ತಂದೀನಿ.. ಎಷ್ಟು ಚಂದ ಐತಿ ನೋಡು, ನಿನ್ನ ಕೈಗೆ ಹೇಳಿ ಮಾಡಿಸಿದ ಹಂಗೆ ಐತಿ.." ಎನ್ನುತ್ತಾ ಕೊಡುತ್ತಿದ್ದ.
ಅಷ್ಟರಲ್ಲಿ ಅಪ್ಪ ತೋಟದಿಂದ ಬಂದು, "ಏನೋ, ಬಳೆಗಾರ ಈ ದಾರೀಲಿ ಬಂದಿದಾನೆ.. ಈಗ ಯಾವ್ದಾದ್ರು ಹಬ್ಬ ಬಂತಾ?"
"ಅಯ್ಯೋ ಮರ್ತುಬುಟ್ರ ಹೆಗ್ಡೆರೇ.. ಗೌರಿ ಹಬ್ಬ ಬಂತಲ್ರ.."
"ಅಂದ್ರೆ ಈ ಸಲ ಒಂದು ದೊಡ್ಡ ನೋಟು ಕೊಡದೆಯಾ ನಿಂಗೆ.." ಎಂದು ನಗುತ್ತಿದ್ದರು. 
ಹಾಗೆನ್ನಲು ಕಾರಣವೂ ಇತ್ತು. ಅಮ್ಮ, ಅಜ್ಜಿ ತಮ್ಮ ಕೈಗೆಬಳೆಯಿಡಿಸಿಕೊಂಡು ನಂತರ ಹಬ್ಬದ ಭಾಗಿನಕ್ಕೆ ಸಾಮಗ್ರಿಗಳು, ಅವರಮ್ಮನಿಗೆ ಅತ್ತಿಗೆಗೆ ಬಳೆಗಳು ಎಂದು ಖರೀದಿಸುವಷ್ಟರಲ್ಲಿ ಗಂಟೆ ಎರಡಾಗಿರುತ್ತಿತ್ತು. 
ಹೀಗೆ ನಡೆದಾಡುವ ಅಂಗಡಿ ಎಂದೇ ಕರೆಯಬಹುದಾದ ಬಳೆಗಾರ, ಎಪ್ಪತ್ತು ದಾಟಿದ ನಂತರ ದೂರದ ಊರುಗಳಿಗೆ ನಡೆಯಲಾರದೆ ಪೇಟೆಯಲ್ಲಿಯೇ ಅಂಗಡಿಯೊಂದ ಇಟ್ಟುಕೊಂಡಿದ್ದಾನೆ.
ಏಳೆಂಟು ವರ್ಷಗಳೇ ಆಗಿರಬಹುದು.. ನಮ್ಮೂರ ಕಡೆ ಅವನು ಬರದೇ.. 
ಝಗಮಗಿಸುವ ದೊಡ್ಡ ದೊಡ್ಡ ಅಂಗಡಿಗಳ ಮೆಟಲ್ ಬಳೆ, ರೇಷ್ಮೆ ದಾರದ ಬಳೆ, ಬಂಗಾರದ ಬಣ್ಣಗಳ ಬಳೆಗಳ ನಡುವೆ, ಗಾಜಿನ ಬಳೆಗಳು, ಬಳೆಗಾರ ತಮ್ಮ ಹೊಳಪನ್ನು, ಛಾಪನ್ನು ಕಳೆದುಕೊಂಡಿರಬಹುದು. ಆದರೆ ಇಂದಿಗೂ ಕೆಲವರು ಹೇಳುವುದನ್ನು ಕೇಳಿದ್ದೇನೆ, "ಅದೆಷ್ಟೇ ದೊಡ್ಡ ಜಾತ್ರೆಯಾಗಿರಲಿ, ಪೇಟೆಯಲ್ಲಿ ದೊಡ್ಡ ಅಂಗಡಿಯಾಗಿರಲಿ.. ಆರಕ್ಕೇರದ ನಾವು, ಮೂರಕ್ಕಿಳಿಯದ ಅವರೊಡನೆ ಚೌಕಾಸಿ ಮಾಡಿ ಬಳೆ ತೆಗೆದುಕೊಂಡರೂ, ಮನೆಯ ಜಗುಲಿಯಲ್ಲಿ ಬಳೆಗಾರ ಬಳೆ ತೊಡಿಸಿದಾಗಿನ ಖುಷಿ ಸಿಗೋದಿಲ್ಲ.."

ಮೊನ್ನೆ ಅಂಗಡಿಯಲ್ಲೊಬ್ಬ ತೋರು ಬೆರಳನ್ನು ಮಡಚಿ, ಹೆಬ್ಬೆರಳು ಮಧ್ಯದ ಬೆರಳುಗಳ ಮೂಲಕ ಬಳೆ ಹಿಡಿದು ಟಕ್ ಟಕ್ ಎನ್ನಿಸುತ್ತ ಒಡಕು ಬಳೆ ಹುಡುಕುತ್ತಿದ್ದಾಗ ಬಳೆಗಾರ ನೆನಪಾದ. 
ಆ ಸುಕ್ಕುಗಟ್ಟಿದ್ದ ಕೈಬೆರಳುಗಳು ಇನ್ನೂ ವೇಗವಾಗಿ ಈ ಕೆಲಸ ಮಾಡುತ್ತಿದ್ದವು. ಅವುಗಳ ಅನುಭವವೇನು.. ಈ ಹುಡುಗನ ವಯಸ್ಸೇನು ಎಂದು ನಸುನಗುತ್ತಾ ಹೊರಬಂದೆ. 

ಆ ನೆರಿಗೆಬಿದ್ದ ಚರ್ಮದ ಹಿಂದೆ ಅದೆಷ್ಟು ಬಣ್ಣ ಮಾಸಿದ,ಒಡಕು ಬಳೆಯಂತೆ ಕಥೆಗಳಿತ್ತೋ.. ಆದರೂ ಫಳ ಫಳನೆ ಹೊಳೆಯುವ ಹೊಸ ಚಿಕ್ಕಿ ಬಳೆಯಂತೆ ನಗುತ್ತಿದ್ದ ಬಳೆಗಳ ಸರದಾರ ಎಂದಿತು ಮನಸ್ಸು. 
ಈಗಲೂ ಪೇಟೆಯಲ್ಲಿ ಕಾಣುತ್ತಾನೆ ಅಪರೂಪಕ್ಕೆ ! ಕಾಟ ಕೊಡುವ ಪುಟ್ಟ ಹುಡುಗಿಯನ್ನು ಅವನು ಮರೆತಿರಬಹುದು, ಜೋಳಿಗೆಯಲ್ಲಿ ಬಣ್ಣದ ಲೋಕದ ಕನಸನ್ನು ಹೊತ್ತು ತರುವ ಸರದಾರನನ್ನು ನಾನು ಮರೆತಿಲ್ಲ.. ಮರೆಯಲು ಸಾಧ್ಯವೂ ಇಲ್ಲ.. 




Thursday, August 6, 2020

ಮೌನಿ ನಾನು..

ನಿನ್ನ ಕಡುಗಪ್ಪು ಕಣ್ಣುಗಳಲ್ಲಿ 
ಅಗಾಧ ಕನಸಿನ ಹೊಳಪು ಕಂಡ 
ಮೌನಿ ನಾನು... 

ತುಟಿಯಂಚಿಂದ ಜಾರಿದ ಮುಗುಳ್ನಗು, 
ತುಂಬಿದ ಕೆನ್ನೆಯ ಕುಳಿಯಲ್ಲಿ 
ಉಯ್ಯಾಲೆಯಾಡುವುದ ಕಂಡ 
ಮೌನಿ ನಾನು... 

ಕೆದರಿದ ಕೂದಲಲ್ಲಿ ಕೈಯಾಡಿಸುವ
ನೆಪದಲ್ಲಿ ನನ್ನತ್ತ ಬೀರಿದ ಕಳ್ಳ ನೋಟವ ಕಂಡು, 
ಮನದಲ್ಲೇ ನಸುನಕ್ಕ ಮೌನಿ ನಾನು... 

ಸದಾ ನಿನ್ನ ಅರಸುತ, ನಿನ್ನ ಸಾನ್ನಿಧ್ಯವ 
ಬಯಸುತ, ಕಲ್ಪನಾ ಲೋಕದಲಿ ವಿಹರಿಸುತಿಹ
ನನ್ನೊಳಗಿನ ನಿನ್ನನ್ನು ಕಣ್ರೆಪ್ಪೆಯೊಳಗೆ ಅಡಗಿಸಿ,
ಮೌನದಲೇ ಮಾತಾಡುವ 
ಮೌನಿ ನಾನು... 

-ಪಲ್ಲವಿ

Sunday, August 2, 2020

ಮರುಳ

ಬಾಹ್ಯದ ಗಟ್ಟಿತನವ ನೋಡಿ, 
ನೀನೆಂದರೆ ದೂರ ಓಡುವ ಮರುಳರಿಗೆ 
ನಾನೇನು ಹೇಳಲಿ..? 

ಪುಸ್ತಕದ ಎದೆಭಾಗವ ತೆರೆದಾಗಲೇ, 
ಮೃದು ಹಾಳೆಯಲಿ ಹುದುಗಿದ ಪಿಸುಮಾತು, 
ಮೆತ್ತನೆಯ ಸ್ಪರ್ಶ, ಬಿಸಿಯುಸಿರು,
ಆರ್ದ್ರ ನೋಟ, ಎರಡು ಹನಿ ಕಣ್ಣೀರು.. 
ಎಲ್ಲವೂ ಸಿಗುವುದು.... 
ಅದನರಿಯದ  ಮರುಳರಿಗೆ ನಾನೇನು ಹೇಳಲಿ..? 

-ಪಲ್ಲವಿ 


ಥೇಟ್... ನಿನ್ನಂತೆಯೇ....

ನೀರೆಂದರೆ ಅದೊಂಥರಾ ಸೋಜಿಗ..  
ನೋಡಲು ಕುಳಿತರೆ ಏಳಲು ಮನವೇ ಬಾರದು.. 
ತುದಿಗಾಲಲ್ಲಿ ಸ್ಪರ್ಶಿಸುವ ತವಕ..  
ಮುಳುಗೇ ಬಿಡುತ್ತೀನಿ ಅನ್ನುವ ಭಯ.. 
ನೋಡು, ಈ ನೀರು ಥೇಟ್ ನಿನ್ನಂತೆಯೇ.. 

ಹೆಜ್ಜೆಗುರುತೇ ಸಿಗದ ಮೀನಾಗುವ ಆಸೆ..
ಕಮಲೆಯಾಗಿ ನಗುವ ಆಸೆ.. 
ನನ್ನೊಳಗನ್ನು ನೀರ ಬಿಂಬದಲಿ ಕಾಣುವಾಸೆ .. 
ಆದರೆ ಆಸೆಗಳಿಗೆ ಆಸರೆಯಾಗದ ಗಾಢ ಮೌನಿ, 
ನೋಡು, ಈ ನೀರು ಥೇಟ್ ನಿನ್ನಂತೆಯೇ..  

-ಪಲ್ಲವಿ 

ಕರಗುವೆ...