Monday, August 10, 2020

ಮತ್ತೆ ಕಾಡಿದ ಮಳೆಯ ನೆನಪು - 5

ಹಾಗೇ ಶಿಲೆಯಂತೆ ಸ್ತಬ್ಧವಾದಳು ಸುಲೋಚನೆ. "ನಯ್ನಾ ಅಲ್ನೋಡು.. ದೋಣಿ ಬಂತು.. "
"ಒಂದಲ್ಲ ಅಕ್ಕಾ.. ಎರಡಿದೆ. ನೋಡಲ್ಲಿ.."
ಹೌದು ! ಅವಳು ಗಮನಿಸಿರಲೇ ಇಲ್ಲ. ಎರಡು ದೋಣಿಗಳು ಇವರು ನಿಂತಲ್ಲಿಯೇ ಬಂದವು.ಇಬ್ಬರೂ ಇಳಿದು ತಮ್ಮ ದೋಣಿಗಳನ್ನು ಹತ್ತಿರದ ಮರಗಳಿಗೆ ಕಟ್ಟಿನಿಲ್ಲಿಸಿದರು. ಇಷ್ಟು ಬೇಗ ಇವರು ಬರುತ್ತಾರೆಂದು ಅರಿವಿರದೇ, ಯಶೋದಮ್ಮ ಬುತ್ತಿ ಬಿಚ್ಚಿದ್ದಳು.ಗಂಡನತ್ತ ಪ್ರಶ್ನಾರ್ಥಕವಾಗಿ ನೋಡಿದಳು. 
"ಅಲ್ರಪ್ಪಾ.. ಈಗ್ಲೇ ಹೊರಟುಬಿಡ್ತೀರಾ ಹೇಗೆ?.. ಬಸ್ಸು ಸ್ವಲ್ಪ ತಡ ಆಯ್ತು.. ಹಾಗಾಗಿ ಇಲ್ಲಿ ಬರೋತನ್ಕಾ ಇಷ್ಟೊತ್ತು.."
"ಯೇ.. ಏನೂ ತೊಂದ್ರೆ ಇಲ್ಲ ಒಡೆರೇ.. ನೀವು ಊಟ ಮಾಡ್ಕಳಿ.." ಎಂದ ಒಬ್ಬ. 
"ಅಲ್ಲಾ, ಇನ್ನೂ ಸ್ವಲ್ಪ ಜನ ಇದಾರೆ ಆ ಕಡೆ... ನಮ್ಮಿಂದ ತಡ ಆಗತ್ತೆನೋ.."
ಅಷ್ಟರಲ್ಲಿ ಇನ್ನೊಬ್ಬ ಬಂದು, "ಹಂಗೇನಿಲ್ಲ ಸಾರ್, ನೀವು ಅರಾಮ್ ಉಂಡ್ಕಳ್ರಿ.. ಇವ ನಿಮ್ಮನ್ನ ಕರ್ಕಂಡ್ ಬತ್ತಾನೆ. ನಾ ಉಳ್ದೋರನ್ನ ಕರ್ಕೊಂಡು ಬತ್ತೀನಿ..ಒಂದು ಹತ್ತ್ ಮಿನಿಟು ನಾವಿಲ್ಲೇ ಮರದ್ ಕೆಳೆಗೆ ಕುಂತಿರ್ತೀವಿ. ನಿಮ್ಮ ಊಟ ಆದ್ಮ್ಯಾಕೆ ಕರೀರಿ, ಬತ್ತೀವಿ.. " ಎಂದ. 
"ಆಯ್ತಪ್ಪ ಹಾಗಿದ್ರೆ, ನಾವು ಬೇಗ ಊಟ ಮುಗಿಸ್ತೀವಿ.."
ಎನ್ನುತ್ತಾ ದೇವಪ್ಪ ತಮ್ಮ ಮನೆಯವರೊಡನೆ ಊಟಕ್ಕೆ ಕುಳಿತ. ಅವರಿಬ್ಬರೂ ಮರದಡಿಯಲ್ಲಿ ಹರಟುತ್ತ ಕುಳಿತರು. ಇನ್ನೊಂದೆಡೆ ನಾಲ್ಕು ಪ್ರಯಾಣಿಕರು ತಮ್ಮ ಬುತ್ತಿಯನ್ನು ಬಿಚ್ಚಿದರು. 
"ಸುಲೋಚನಾ, ರೊಟ್ಟಿ ಮೇಲೆ ಚಟ್ನಿ ಹಾಕು.." ಮೂರು ಬಾರಿ ಹೇಳಿರಬೇಕು ಯಶೋದಮ್ಮ, ಪಾಪ ಅವರಿಗೇನು ಗೊತ್ತು, ಮಗಳ ದೇಹ ಇಲ್ಲಿದೆ ಮನಸ್ಸು ಮರದ ಸುತ್ತ ಸುತ್ತುತ್ತಿದೆ ಎಂದು !!
ನಯನಾ ಎರಡು ಬಾರಿ ಎಚ್ಚರಿಸಿದಳು, "ಅಕ್ಕಾ, ಊಟ ಮಾಡ್ತಿದಿವಿ ನಾವು.."  ಉಹ್ಞೂ !ಏನೂ ಪ್ರಯೋಜನವಿಲ್ಲ. 
ಕೊನೆಗೆ ದೇವಪ್ಪನ ಧ್ವನಿಯೇ ಬೇಕಾಯ್ತು, "ಲೇಯ್ ಸುಲೋಚ್ನ, ಎಷ್ಟು ಹೊತ್ತು ಒಂದೇ ರೊಟ್ಟಿ ಎಳೀತಾ ಇರ್ತೀಯಾ? ಮೊಸರನ್ನ ತಿಂತೀಯೋ ಇಲ್ವೋ? ಆಮೇಲೆ ದೋಣಿಯವರು ಬಿಟ್ಟು ಹೋಗ್ತಾರೆ ನೋಡು.."
ಗಬಗಬನೆ ತಿಂದಳು ಹುಡುಗಿ, ಎಲ್ಲಾದರೂ ತನ್ನ ಬಿಟ್ಟು ಹೊರಟರೆ ಎಂದು !
ಕೊನೆಗೆ ಡಬ್ಬಿ ತೊಳೆದು ಬರುತ್ತೇವೆಂದು ನದಿಯತ್ತ ಹೊರಟರು. 
"ಅಕ್ಕಾ, ಏನು ಕತೆ? ನಾನು ನೋಡ್ದೆ.." ರಾಗ ಎಳೆದಳು ನಯನೆ. 
"ಏನೇ ನಿಂದು.. ಸುಮ್ನೆ ಬಾರೆ.."
"ಹುಷಾರಕ್ಕ.. ಅಪ್ಪ ನೋಡಿದ್ರೆ ಕಷ್ಟ.."
"ನಿಂದೊಳ್ಳೆ ರಾಗ ಆಯ್ತಲ್ಲೇ.. ಏನೂ ಇಲ್ಲ ಅಂತಿದೀನಿ ನಾನು.."
"ನಾನು ಶಿವೂ ಅಲ್ಲಾ, ನಂಗೂ ಎಲ್ಲ ಅರ್ಥ ಆಗತ್ತಕ್ಕೋ.. " ಎನ್ನುತ್ತಾ ಕಣ್ಣು ಮಿಟುಕಿಸಿದಳು. 
ಸುಲೋಚನಾ ಏನೂ ಮಾತಾಡದೆ ಡಬ್ಬ ತೊಳೆಯತೊಡಗಿದಳು. 
ಅಷ್ಟರಲ್ಲಿ ಕುಯ್ ಕುಯ್ ಎನ್ನುತ್ತಾ ನಾಯಿ ಮರಿಯೊಂದು ಅವಳ ಕಾಲನ್ನು ನೆಕ್ಕುತ್ತ, ಲಂಗವನ್ನು ಎಳೆಯೊಡಗಿತು. 
"ಇದೆಲ್ಲಿಂದ ಬಂತೆ.. ಪಾಪ,  ಹಸಿವಾಗಿರ್ಬೇಕು. ನಮ್ಮ ಡಬ್ಬೀನೂ ಖಾಲಿ ಆಯ್ತಲ್ಲೇ.."
"ಸುಮ್ನಿರಕ್ಕ, ಬೀದಿನಾಯಿಗೆಲ್ಲ ಅನ್ನ ಹಾಕ್ಕೊಂಡು... ಮಾಡೋಕೆ ಬೇರೆ ಕೆಲ್ಸ ಇಲ್ವಾ ನಿಂಗೆ?  ನೋಡು ಸಾಯೋಕೆ ಬಿದ್ದಿದೆ ಅದು.."
"ನಾವಿಲ್ಲೆ ಬಿಟ್ರೆ ಸತ್ತೇ ಹೋಗತ್ತೆ ಕಣೇ.."
"ಸಾಯ್ಲಿ ಬಿಡೇ.."
"ನಮ್ ಜೊತೇನೆ ಕರ್ಕೊಂಡು ಹೋಗೋಣ್ವಾ? "
"ಸುಮ್ನಿರಕ್ಕ.. ಮಾತೆತ್ತಿದ್ರೆ ಅಪ್ಪ ಬಿಟ್ಟುಹೋಗ್ತೀನಿ ಅಂತಾರೆ. ಇದು ಬೇರೆ ಬೇಕಾ.."
ಇವರ ವಾದ ನಡೆಯುತ್ತಿದ್ದಂತೆಯೇ ಎಲ್ಲರೂ ಅಲ್ಲೇ ಬಂದರು. ನಾವೇ ಸಾಕೋಣ ಎಂದು ಹಠ ಹಿಡಿದಳು ಸುಲೋಚನಾ. 
"ನೋಡು, ಇಲ್ಲಿಂದ ತಗೊಂಡು ಹೋಗ್ತಾ ನದೀಲಿ ಬಿದ್ದೋದ್ರೆ ಅಲ್ಲೇ ಸಾಯತ್ತೆ ಅದು. ಇನ್ನು ಅದನ್ನ ದಾಟಿ ನಮ್ಮ ಜೊತೇಲಿ ಬಂದ್ರೂ, ಜಾತ್ರೆ ಜನರ ಮಧ್ಯ ಎಲ್ಲಿ ಬಿಡ್ತಿ ಅದನ್ನ? ಹರಕೆ ತೀರಿಸಬೇಕೋ, ನಾಯಿಮರಿ ನೋಡ್ಕೊಳ್ಳಬೇಕೋ? ಅದನ್ನ ತಗೊಂಡ್ ಹೋದ್ರೆ ಆಗಿಲ್ಲ. ಮೂರುಹೊತ್ತೂ ಹೊಟ್ಟೆಗ್ ಹಾಕಬೇಕು. ಅಲ್ಲಿ ಯಾರು ಹಾಕ್ತಾರೆ? ಬೇಡವೆ ಬೇಡ.. ಇಲ್ಲೇ ಬಿಟ್ಬಿಡು.."
ಕಡ್ಡಿ ತುಂಡು ಮಾಡಿದಂತೆ ಹೇಳಿದ ದೇವಪ್ಪ. ಅಷ್ಟರಲ್ಲಾಗಲೇ ಅವಳ ಕಣ್ಣಲ್ಲಿ ನೀರು ತುಂಬಿತ್ತು. ಈ ಮಧ್ಯ ಅವನು ಯಾವಾಗ ಪ್ರವೇಶಿಸಿದನೋ ಅರಿವಾಗಲೇ ಇಲ್ಲ. 
"ಒಡೆರೆ, ನಿಮ್ಗೆ ಏನೂ ತೊಂದ್ರೆ ಆಗಕಿಲ್ಲ ಅಂದ್ರೆ, ನಾ ತಗತ್ತೀನಿ ಇದ್ನ.. ನಾನೇ ಸಾಕ್ತಿನಿ..." ಎಂದ. 
ನಸುನಕ್ಕಳು ಸುಲೋಚನೆ ತಲೆ ಎತ್ತದೆಯೇ ! ಎಲ್ಲ ಒಪ್ಪಿದ ನಂತರ ಅವನು ಆ ನಾಯಿಮರಿ ಎತ್ತಿಕೊಂಡು ಮರದ ಕೆಳಗೆ ನಡೆದ. ದೇವಪ್ಪ ಯಶೋದಮ್ಮ ಬುತ್ತಿ ಚೀಲ ತುಂಬಲು ಹೋದಳು. 
"ಏನಕ್ಕ, ಏನು ನಡೀತಾ ಇದೆ ಇಲ್ಲಿ.. " ಎನ್ನುತ್ತಾ ತಿವಿದ ನಯನಾಳನ್ನು ದೂಡುತ್ತಾ, "ಏನೂ ಇಲ್ಲ ಹೋಗೆ.." ಎಂದು ಲಂಗ ಹಿಡಿದು ಓಡಿದಳು..... 

ಇತ್ತ ಮರದ ಕೆಳಗೂ ಮಾತುಕತೆ ಜೋರಾಗಿಯೇ ಸಾಗಿತ್ತು.
"ಏನಪ್ಪಾ ದೋಸ್ತಾ ಭಾಳ ಪಿರೂತಿ ಬಂದಂಗ್ ಐತೆ.."
"ಹಾಂಗೇನಿಲ್ಲ ಕಲಾ.. ಪಾಪ ಮರಿ.." ಎನ್ನುತ್ತಾ ಮರಿಯ ತಲೆ ನೇವರಿಸಿದ. 
"ಹೌದೌದು.. ಪಾಪ ಮರಿ.."
"ಒಂದೋ ಹಸ್ವಾಗಿ ಸಾಯ್ತದೆ, ಇಲ್ಲ ಮುಳುಗಿ ಸಾಯ್ತದೆ.. ನಂದೊಂದು ತುತ್ತು ಕೊಟ್ರೆ ಜೀವ ಇರಗಂಟ ಬದಿಕತ್ತದೇ.."
"ಓಹೋ ನೀ ನಾಯಿಮರಿಗೆ ಪಾಪ ಯೋಳಿದ್ದೋ.. ನಾ ಏನೋ ಲಂಗದಾವಣಿ ಮರಿ ಬಗ್ಗೆ ಅಂದ್ಕಂಡೆ.."
"ಯೇ.. ಥುತ್... ನಿಂದ್ ಬರೀ ಇದೆ ಆಯ್ತು ಕಲಾ.."
" ಮತ್ತೇನ್ಲಾ.. ದಿನ ಏಟ್ ಕರ, ಮರಿ ಎಲ್ಲ ಕಾಣ್ತಾವೆ ತಟದಾಗೆ.. ಎಲ್ಲ ತಂದು ತುತ್ತು ಕೊಟ್ಟಿಯೇನ್ಲ.. ದೊಡ್ಡ ಬಂದ್ಬುಟ ಇವತ್ತು.."
"ಯೇನೇನೋ ಯೋಳ್ಬ್ಯಾಡಾ.. ಸುಮ್ಕಿರ್ಲಾ.."
"ದಿಟವೆಯ ನಾ ಯೋಳಿದ್ದು.."
"ಹೌದಪ್ಪಾ.. ಆ ವುಡ್ಗಿ ಪಾಪ ಅಳು ಮಕ ಮಾಡ್ಕಂಡಿತ್ತು.."
"ಆಂ.. ಅಲ್ಲೆಯ ಆಗಿದ್ದು ಯಡವಟ್ಟು.."
"ಏನ್ ಯಡವಟ್ಟು..? ಏನಾತ್ಲ.."
"ನಂಗೇನ್ ಆಗ್ನಿಲ್ಲ.. ನಿಂಗೆಯ.. ಲೋವ್ ಆಗೈತೆ.."
"ಎಂತದು... ಲೋವಾ.."
"ಹುಂ ಕಲಾ.. ಅದಿಲ್ದೆ ವೋಗಿರೆ ನೀ ಯಾಕ್ಲಾ ಅಲ್ಲೋಗಿ ಈ ನಾಯಿಮರಿ ತಕ ಬತ್ತಿದ್ದೆ? "
"ಯೇ ಸುಮ್ಕಿರ್ಲಾ.. ಅವ್ರು ನಮ್ಮ ದೋಣಿ ಹತ್ತದೆ ವೊದ್ರೆ ಕಷ್ಟ.."
"ಇಲ್ಲಿ ಎಲ್ಡೆ ದೋಣಿ ಇರಾದು.. ನಾ ಹತ್ತಿಸ್ಕಳಕಿಲ್ಲ.. ನಿನ್ ವುಡ್ಗಿನ ನೀನೇ ತಾಕಬಾ..." 
"ಏನೇನೋ ಯೋಳ್ಬ್ಯಾಡ ಸೀನ.. ಬಾ ವೋಗುಮ.."
"ಏನಿಲ್ಲಾ.. ಇದು ಲೋವ್ವೆಯ.. ನಂಗೇಟ್ ಕಿತಾ  ಆಗೈತೆ.. ನಿಂಗೆ ಮೊದಲ್ನೇ ಕಿತಾ.. ಅದ್ಕೆ ಗೊತ್ತಾಯ್ತ ಇಲ್ಲ.. ನೀ ಏನ್ ಟೇನ್ಸನ್ ತಕಬ್ಯಾಡ.. ನಾ ಎಲ್ಲ ನೋಡ್ಕತಿನಿ.."
"ನೀ ಏನ್ಲ ನೋಡ್ಕಳದು.."
"ದೋಣಿಯ ದಿಡಾ ಹಚ್ಚದು... ನಾ ನಿಂಗೆ ಎಲ್ಲ ಯೋಳಿಕೊಡ್ತಿನ್ಲಾ.."
"ಅದೇನ್ ಯೋಳ್ತಿಯೋ.. ಅದೇನ್ ಮಾಡ್ತೀಯೋ.. ನಡಿ ನಡಿ.." ಎನ್ನುತ್ತಾ, ನಾಯಿಮರಿಯನ್ನು ಕೈಲಿ ಹಿಡಿದುಕೊಂಡ. 
ಅಷ್ಟರಲ್ಲಿ ದೇವಪ್ಪ ಕೂಗಿದ..."ನಮ್ಮ ಊಟ ಆಯ್ತು.. ಹೊರಡೋಣ್ವ.. ತಡ ಇದ್ಯಾ?.. "
"ನೋಡು, ನಿಮ್ಮ ಮಾವ ಕರೀತವ್ನೆ..." ಎನ್ನುತ್ತಾ, ಚಿವುಟಿದ. 
ಇಬ್ಬರೂ ನಗುತ್ತಾ ದೋಣಿಯೆಡೆಗೆ ಬಂದರು. 

No comments:

Post a Comment

ಕರಗುವೆ...