Friday, August 7, 2020

ಬಳೆಗಳ ಸರದಾರ...

ಊರಗಲಕ್ಕೂ ಗಲಗಲಗಲ ಸದ್ದು ಮಾಡುತ್ತಾ ಬಂದರೆ ಎಲ್ಲರೂ ಒಮ್ಮೆ ತಿರುಗಿ ನೋಡಬೇಕು ಯಾರಿದು ಎಂದು.. ಬೇರೆ ಯಾರಾಗಿರಲು ಸಾಧ್ಯ.. ಅವನೇ ನಮ್ಮ ಬಳೆಗಾರ !
ಸಾಲು ಸಾಲು ಹಬ್ಬಗಳನ್ನು ಹೊತ್ತು ತರುವ ಶ್ರಾವಣ, ಬಳೆಗಾರನ ಬಗಲಿಗೆ ಒಂದು ಜೋಳಿಗೆ, ಕಾಲಿಗೆರಡು ಚಕ್ರಗಳನ್ನೂ ಸಿಕ್ಕಿಸುತ್ತದೆ. ಫ್ರಾಕುಗಳು, ಸ್ಕರ್ಟ್ ಗಳು, ಗೆಜ್ಜೆ ಕಟ್ಟಿದ ಪಾದವನ್ನು ಮೇಲಕ್ಕೆತ್ತಿ ತುದಿಗಾಲಲ್ಲಿ ನಿಂತಿರುತ್ತವೆ, ಮಾಸಿದ ಜೋಳಿಗೆಯಲ್ಲಿ  ಬಣ್ಣದ ಕನಸುಗಳ ಹೊತ್ತು ತರುವ ಬಳೆಗಳ  ಸರದಾರನಿಗಾಗಿ.. 
ಅನಾದಿಕಾಲದಿಂದಲೂ ಕೃಷ್ಣನಿಗೆ ಹೆಂಗಳೆಯರ ಮನಗೆದ್ದವ ಎನ್ನುತ್ತಾರೆ. ಬಳೆಗಾರನೇನು ಕಡಿಮೆಯೇ? ಹಾಗಿಲ್ಲದಿದ್ದರೆ ಬಳೆಗಾರನ ಕೇಂದ್ರೀಕರಿಸಿ ಎಷ್ಟೆಲ್ಲಾ  ಹಾಡುಗಳು ಯಾಕಿರುತ್ತಿದ್ದವು? ಜಾನಪದ ಗೀತೆಗಳು ಎಂದಾಕ್ಷಣ ನೆನಪಾಗುವ ಸಾಲುಗಳವು.. 
"ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರಿಗೆ..."
"ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು..."
ಇಷ್ಟೇ ಅಲ್ಲದೇ ನನ್ನಜ್ಜಿಯೂ ಹಾಡುತ್ತಾಳೆ - "ಬಳೆಯು ಬಂದವು ನೋಡೇ.. ಪಾರ್ವತಿ ಬಳೆಯನಿಡುವೆನು ಬಾರೆ..."
ಎಲ್ಲ ಹಾಡುಗಳಲ್ಲಿಯೂ ಬಳೆಗಾರನೇ ನಾಯಕ !
ಹೊರ ಊರಿನ ಸಂಪರ್ಕವೆ ಇಲ್ಲದ ಕುಗ್ರಾಮವೊಂದರ
ಹೆಂಗಸರಿಗೆ ಅಪರೂಪಕ್ಕೆ ಬರುವ ಬಳೆಗಾರ ಒಂದು ರೀತಿಯ ಲೋಕಲ್ ನ್ಯೂಸ್ ಪೇಪರ್ !! ಎಲ್ಲರೂ ಒಟ್ಟಾಗಿ ಕುಳಿತು ಬಳೆಯಿಡಿಸಿಕೊಳ್ಳುತ್ತಿರುವಾಗ ಸುತ್ತ ಹತ್ತು ಹಳ್ಳಿಗಳ ಮುಖ್ಯಾಂಶ ಹೇಳುವ ಸುದ್ದಿ ನಿರೂಪಕ ಈ ಬಳೆಗಾರ!

ಅರೆ.. ಈಗ ಯಾಕೆ ಬಳೆಗಾರ ನೆನಪಾದ?! ಎಂದುಕೊಂಡಿರಾ.. 
ವರುಷಕ್ಕೆ ನಾಲ್ಕು ಬಾರಿ ಬಂದರೂ, ನಮ್ಮೂರಿನಲ್ಲಿ ಅವನ ವ್ಯಾಪಾರ ಜೋರಾಗಿರುತ್ತಿದ್ದುದು ಆಗಸ್ಟ್ ತಿಂಗಳಿನಲ್ಲಿ ಹಾಗೂ ದೀಪಾವಳಿಯಲ್ಲಿ. ಗೇಟು ತೆರೆಯುವ ಸದ್ದಾದ ತಕ್ಷಣ ಇತ್ತ ನಾಯಿಗಳ ಆರ್ಭಟ ಬಲು ಜೋರು. ಯಾರು ಬಂದರಪ್ಪ ಈ ಮಧ್ಯಾಹ್ನ?  ಎಂದು ಬಾಗಿಲೆರಗಿ ನೋಡಿದರೆ... ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇಲ್ಲ. "ಅಮ್ಮಾ.. ಬಳೆಗಾರ ಬಂದಾ.. ಅಜ್ಜಿ ಬಳೆಗಾರ ಬತ್ತಾಇದ್ದಾ.." ಎಂದು ಕೂಗುತ್ತ ಅಡಿಗೆ ಮನೆಗೆ ಓಡುತ್ತಿದ್ದೆ. 
ಬಿಳಿ ಎಂದು ಹೇಳಬಹುದಾದಂಥ ಪಂಜೆಯೊಂದನ್ನು ಮೊಣಕಾಲವರೆಗೆ ಉಟ್ಟು, ಮೇಲೊಂದು ತಿಳಿ ಬಣ್ಣದ ನಿಲುವಂಗಿ ಹಾಕಿದ್ದ ಬಳೆಗಾರ, ತಲೆಗೊಂದು ಟವೆಲನ್ನು ರುಮಾಲಿನ ರೀತಿ ಸುತ್ತುತ್ತಿದ್ದಒಂದಷ್ಟು ಬಳೆಗಳನ್ನು ದಪ್ಪ ಹಗ್ಗದಲ್ಲಿ ಇಳಿಸಿ, ಹೆಗಲಿಗೇರಿಸಿಕೊಂಡರೆ, ಇನ್ನೊಂದಷ್ಟನ್ನು ಪೈಪಿನಾಕಾರದ ರಟ್ಟಿನಲ್ಲಿ ಜೋಡಿಸಿ, ಜೋಳಿಗೆಯೊಳಗೆ ಇಟ್ಟುಕೊಳ್ಳುತ್ತಿದ್ದ. ಮಳೆಗಾಲವಾದರೂ ಮಳೆಯಿಲ್ಲದ ಕಾರಣ ಉದ್ದನೆಯ ಕಪ್ಪು ಛತ್ರಿಯೇ ಊರುಗೋಲಾಗಿತ್ತು ! 
ನಿಧಾನವಾಗಿ ಬಂದು ಖಾಕಿ ಬಣ್ಣದ ಜೋಳಿಗೆಯನ್ನು ಕೆಳಗಿಸುವ ಸಮಯದಲ್ಲಿ ಎಲ್ಲರೂ ಹೊರಗೆ ಬಂದಿರುತ್ತಿದ್ದೆವು. "ಉಶ್ಶಪ್ಪಾ.. ಅಬಾಬಾಬಾ.. ಏನ್ ಸೆಕೇನ್ರವ್ವಾ.. ಈ ಮಳೆಗಾಲದಾಗೂ ಒಂದು ಮಳೆ ಇಲ್ಲ.. ಉಫ್.." ಎಂದು ಉಸಿರು ಬಿಡುತ್ತ, ತಲೆಗೆ ಕಟ್ಟಿದ್ದ ಟವೆಲ್ ತೆಗೆದು ಬೆವರೊರೆಸಿಕೊಂಡು, ಗಾಳಿ ಬೀಸಿಕೊಳ್ಳುತ್ತಿದ್ದ. "ಮಳೆ ಬಂದ್ರೆ ನೀ ಬರ್ತಿದ್ಯ ಬಳೆಗಾರ? " ಎಂದು ಆಗಲೇ ವಾದಕ್ಕಿಳಿದಿರುತ್ತಿದ್ದೆ. 
ಅಜ್ಜಿ ತಂದುಕೊಟ್ಟ ಮಜ್ಜಿಗೆಯನ್ನು ಕುಡಿದು, ಅವನು ಲೋಟ ಕೆಳಗಿಳಿಸುವಷ್ಟರಲ್ಲಿ ಆ ಇಡೀ ಜೋಳಿಗೆಯನ್ನು ಜಾಲಾಡಿ ತನಿಖೆ ನಡಿಸಿರುತ್ತಿದ್ದೆ! ದಪ್ಪ ಮೀಸೆಗೆ ತಾಗಿದ ಮಜ್ಜಿಗೆ ಒರೆಸಿಕೊಳ್ಳುತ್ತ, ಮೂಗಿನ ತುದಿಗೆ ದಪ್ಪ ಕನ್ನಡಕ ಏರಿಸುತ್ತ, "ತಡಿಯವ್ವ.. ನಿನಗೆ ಅಂತಾನೆ ತಂದಿರೋದು.. ಸಾವಕಾಶ್ ತೆಗಿ" ಎನ್ನುತ್ತಿದ್ದ. ಕೊನೆಗೂ ನನ್ನ ಕಾಟ ತಾಳಲಾರದೆ ಎಲ್ಲ ಬಳೆಗಳನ್ನೂ ತೆಗೆದಿಡುತ್ತಿದ್ದ. ಅವನಿಗೋ ಬಳೆ ಒಡೆದರೆ ಎಂಬ ಚಿಂತೆ.. ನನಗೋ ಎಲ್ಲ ಬಣ್ಣದ ಬಳೆಗಳನ್ನೂ ನೋಡಬೇಕೆಂಬ ಆಸೆ. ಕೆಂಪು, ತಿಳಿ ಹಸಿರು, ಗಾಢ ಹಸಿರು, ನೀಲಿ, ಹಳದಿ, ಚಿಕ್ಕಿ ಬಳೆ, ಝರಿ ಬಳೆ, ದಪ್ಪ ಬಳೆ, ಸಣ್ಣ ಬಳೆ.. ಅದೆಷ್ಟು ವಿಧಗಳೋ..! ಜೊತೆಯಲ್ಲಿ ಕೆಂಪು, ಬಿಳಿ, ಕಪ್ಪು, ಹಸಿರು ಬಣ್ಣಗಳ ರಿಬ್ಬನ್, ರಬ್ಬರ್ ಬ್ಯಾಂಡ್, ಪ್ಲಾಸ್ಟಿಕ್ ಹೂವುಗಳು, ಅಜ್ಜಿಯಂದಿರಿಗೆ ಲಾಲ್ ಗಂಧ, ಜೊತೆಗೆ ಕಾಸಗಲದ ಬಿಂದಿ, ಕಪ್ಪು, ಕೆಂಪಿನ ಸಣ್ಣ ಬಿಂದಿ, ಭಾಗಿನದ ಕೆಂಪು ದಾರ, ಕರಿಮಣಿಯ ಸಣ್ಣ ಗುಚ್ಛ, ಮರದ ಸಣ್ಣ ಬಾಚಣಿಗೆ... ಆ ಜೋಳಿಗೆ ಒಂಥರಾ ಅಕ್ಷಯ ಪಾತ್ರೆ ! ಮೊಗೆದಷ್ಟೂ ಬೊಗಸೆಯಲ್ಲಿ ತುಂಬುತ್ತಿದ್ದವು.
ಅವನೊಡನೆ ನನ್ನ ಮಾತುಗಳೇ ಮುಗಿಯುತ್ತಿರಲಿಲ್ಲ.. 
"ಏನೋ ಬಳೆಗಾರ.. ಈ ಸಲಾನೂ ನಂಗೆ ಬಳೆ ತಂದಿಲ್ವಾ.."
"ಯಾಕ್ ತಾಯಿ.. ಇಷ್ಟೆಲ್ಲಾ ಐತಲ್ಲಾ.. ನೋಡು.. ಇದೆಲ್ಲ ನಿಂದೇ ಸೈಜು.."
"ಏಯ್, ಹೋಗೋ.. ಇದೆಲ್ಲ ಪ್ಲಾಸ್ಟಿಕ್ ಬಳೆ,  ಅಮ್ಮ ಅಜ್ಜಿಗೆ ಕೊಡ್ತಿಯಲ್ಲ, ನಂಗೂ ಹಾಗೇ ಗಾಜಿನ ಬಳೆನೇ ಬೇಕು..ಹಿಂದಿನ ಸಲನೆ ಹೇಳಿದ್ನಲ್ಲೋ.. ತಂದಿಲ್ವಾ"
"ವಯಸ್ಸಾಯ್ತಲ್ಲ.. ಮರ್ತುಬುಟ್ಟೆ ತಾಯಿ.. ಮುಂದಿನಸಲ ತರ್ತೀನಿ.." ಎನ್ನುತ್ತಾ ತಲೆ ನೇವರಿಸಿ, ಕೆನ್ನೆ ಚಿವುಟುತ್ತಿದ್ದ!
ಆದರೆ ಅವನೆಂದೂ ಪುಟ್ಟ ಮಕ್ಕಳಿಗೆ ಗಾಜಿನ ಬಳೆ ತರುತ್ತಿರಲಿಲ್ಲ, ಮಣ್ಣು-ಕಲ್ಲಲ್ಲಿ ಆಡುವಾಗ ಬಳೆ ಒಡೆದು ಗಾಜು ಎಳೆ ಚರ್ಮಕ್ಕೆ ಹೊಕ್ಕಿಬಿಟ್ಟರೆ ಎಂದು.. 
ನನಗೋ ಪ್ಲಾಸ್ಟಿಕ್ ಬಳೆಗಳು ಚುಚ್ಚುತ್ತಿದ್ದವು, ತಿಂಗಳೊಳಗೆ ಬಣ್ಣ ಕಳೆದು ಬಿಳಿಚಿಕೊಳ್ಳುವ, ಕೈಯಾಡಿಸಿದರೆ ಶಬ್ದವೇ ಬಾರದ ಪ್ಲಾಸ್ಟಿಕ್ ಬಳೆ ಇಷ್ಟವೇ ಆಗುತ್ತಿರಲಿಲ್ಲ..! ಆದರೂ ಕೊನೆಗೆ ಅವನೇ ನನ್ನ ಪುಟ್ಟ ಮುಂಗೈ ಮುದ್ದೆ ಮಾಡಿ ಬಳೆಯಿಡುತ್ತಿದ್ದ. 
"ಬಳೆಗಾರ,  ಹಿಂದಿನ ಸಲ ಆ ಮನೆ ಹುಡುಗಿಗೆ ಕೆಂಪು ಬಣ್ಣದ ಬಳೆ ಇಟ್ಟಿದ್ದಿ. ನಂಗೆ ಕೆಂಪು ತರ್ಲಿಲ್ಲ ನೀನು.." ಎಂದು ದೂರಿದರೆ ನಸುನಗುತ್ತಾ, 
 "ಇಲ್ನೋಡು, ಆಗಸ್ಟ್ ಹದಿನೈದಕ್ಕೆ ಅಂತಾ ಕೇಸರಿ, ಬಿಳಿ, ಹಸಿರಿನ ಬಳೆ ತಂದೀನಿ.. ಎಷ್ಟು ಚಂದ ಐತಿ ನೋಡು, ನಿನ್ನ ಕೈಗೆ ಹೇಳಿ ಮಾಡಿಸಿದ ಹಂಗೆ ಐತಿ.." ಎನ್ನುತ್ತಾ ಕೊಡುತ್ತಿದ್ದ.
ಅಷ್ಟರಲ್ಲಿ ಅಪ್ಪ ತೋಟದಿಂದ ಬಂದು, "ಏನೋ, ಬಳೆಗಾರ ಈ ದಾರೀಲಿ ಬಂದಿದಾನೆ.. ಈಗ ಯಾವ್ದಾದ್ರು ಹಬ್ಬ ಬಂತಾ?"
"ಅಯ್ಯೋ ಮರ್ತುಬುಟ್ರ ಹೆಗ್ಡೆರೇ.. ಗೌರಿ ಹಬ್ಬ ಬಂತಲ್ರ.."
"ಅಂದ್ರೆ ಈ ಸಲ ಒಂದು ದೊಡ್ಡ ನೋಟು ಕೊಡದೆಯಾ ನಿಂಗೆ.." ಎಂದು ನಗುತ್ತಿದ್ದರು. 
ಹಾಗೆನ್ನಲು ಕಾರಣವೂ ಇತ್ತು. ಅಮ್ಮ, ಅಜ್ಜಿ ತಮ್ಮ ಕೈಗೆಬಳೆಯಿಡಿಸಿಕೊಂಡು ನಂತರ ಹಬ್ಬದ ಭಾಗಿನಕ್ಕೆ ಸಾಮಗ್ರಿಗಳು, ಅವರಮ್ಮನಿಗೆ ಅತ್ತಿಗೆಗೆ ಬಳೆಗಳು ಎಂದು ಖರೀದಿಸುವಷ್ಟರಲ್ಲಿ ಗಂಟೆ ಎರಡಾಗಿರುತ್ತಿತ್ತು. 
ಹೀಗೆ ನಡೆದಾಡುವ ಅಂಗಡಿ ಎಂದೇ ಕರೆಯಬಹುದಾದ ಬಳೆಗಾರ, ಎಪ್ಪತ್ತು ದಾಟಿದ ನಂತರ ದೂರದ ಊರುಗಳಿಗೆ ನಡೆಯಲಾರದೆ ಪೇಟೆಯಲ್ಲಿಯೇ ಅಂಗಡಿಯೊಂದ ಇಟ್ಟುಕೊಂಡಿದ್ದಾನೆ.
ಏಳೆಂಟು ವರ್ಷಗಳೇ ಆಗಿರಬಹುದು.. ನಮ್ಮೂರ ಕಡೆ ಅವನು ಬರದೇ.. 
ಝಗಮಗಿಸುವ ದೊಡ್ಡ ದೊಡ್ಡ ಅಂಗಡಿಗಳ ಮೆಟಲ್ ಬಳೆ, ರೇಷ್ಮೆ ದಾರದ ಬಳೆ, ಬಂಗಾರದ ಬಣ್ಣಗಳ ಬಳೆಗಳ ನಡುವೆ, ಗಾಜಿನ ಬಳೆಗಳು, ಬಳೆಗಾರ ತಮ್ಮ ಹೊಳಪನ್ನು, ಛಾಪನ್ನು ಕಳೆದುಕೊಂಡಿರಬಹುದು. ಆದರೆ ಇಂದಿಗೂ ಕೆಲವರು ಹೇಳುವುದನ್ನು ಕೇಳಿದ್ದೇನೆ, "ಅದೆಷ್ಟೇ ದೊಡ್ಡ ಜಾತ್ರೆಯಾಗಿರಲಿ, ಪೇಟೆಯಲ್ಲಿ ದೊಡ್ಡ ಅಂಗಡಿಯಾಗಿರಲಿ.. ಆರಕ್ಕೇರದ ನಾವು, ಮೂರಕ್ಕಿಳಿಯದ ಅವರೊಡನೆ ಚೌಕಾಸಿ ಮಾಡಿ ಬಳೆ ತೆಗೆದುಕೊಂಡರೂ, ಮನೆಯ ಜಗುಲಿಯಲ್ಲಿ ಬಳೆಗಾರ ಬಳೆ ತೊಡಿಸಿದಾಗಿನ ಖುಷಿ ಸಿಗೋದಿಲ್ಲ.."

ಮೊನ್ನೆ ಅಂಗಡಿಯಲ್ಲೊಬ್ಬ ತೋರು ಬೆರಳನ್ನು ಮಡಚಿ, ಹೆಬ್ಬೆರಳು ಮಧ್ಯದ ಬೆರಳುಗಳ ಮೂಲಕ ಬಳೆ ಹಿಡಿದು ಟಕ್ ಟಕ್ ಎನ್ನಿಸುತ್ತ ಒಡಕು ಬಳೆ ಹುಡುಕುತ್ತಿದ್ದಾಗ ಬಳೆಗಾರ ನೆನಪಾದ. 
ಆ ಸುಕ್ಕುಗಟ್ಟಿದ್ದ ಕೈಬೆರಳುಗಳು ಇನ್ನೂ ವೇಗವಾಗಿ ಈ ಕೆಲಸ ಮಾಡುತ್ತಿದ್ದವು. ಅವುಗಳ ಅನುಭವವೇನು.. ಈ ಹುಡುಗನ ವಯಸ್ಸೇನು ಎಂದು ನಸುನಗುತ್ತಾ ಹೊರಬಂದೆ. 

ಆ ನೆರಿಗೆಬಿದ್ದ ಚರ್ಮದ ಹಿಂದೆ ಅದೆಷ್ಟು ಬಣ್ಣ ಮಾಸಿದ,ಒಡಕು ಬಳೆಯಂತೆ ಕಥೆಗಳಿತ್ತೋ.. ಆದರೂ ಫಳ ಫಳನೆ ಹೊಳೆಯುವ ಹೊಸ ಚಿಕ್ಕಿ ಬಳೆಯಂತೆ ನಗುತ್ತಿದ್ದ ಬಳೆಗಳ ಸರದಾರ ಎಂದಿತು ಮನಸ್ಸು. 
ಈಗಲೂ ಪೇಟೆಯಲ್ಲಿ ಕಾಣುತ್ತಾನೆ ಅಪರೂಪಕ್ಕೆ ! ಕಾಟ ಕೊಡುವ ಪುಟ್ಟ ಹುಡುಗಿಯನ್ನು ಅವನು ಮರೆತಿರಬಹುದು, ಜೋಳಿಗೆಯಲ್ಲಿ ಬಣ್ಣದ ಲೋಕದ ಕನಸನ್ನು ಹೊತ್ತು ತರುವ ಸರದಾರನನ್ನು ನಾನು ಮರೆತಿಲ್ಲ.. ಮರೆಯಲು ಸಾಧ್ಯವೂ ಇಲ್ಲ.. 




No comments:

Post a Comment

ಕರಗುವೆ...