Sunday, October 18, 2020

ಬಿಸಿಯಾದ ಅಮೃತ..

ಜೀವನದ ಬಹುಪಾಲು 
ಕ್ಷಣಗಳ ಸಾಕ್ಷಿ ನೀನು..

ಬೇಸರಕೆ ಬಿಸಿಯಾಗಿ, 
ನಲಿವಿಗೆ ಸಿಹಿಯಾಗಿ, 
ಆಯಾಸಕೆ ಮದ್ದಾಗಿ, 
ಮನವ ಶಾಂತಗೊಳಿಸುವ ಹನಿ ನೀನು!

ಮಳೆಗೂ ಚಳಿಗೂ ಹಿತವಾಗಿ 
ನೀನಿರಲು ಅಂಜಿಕೆಯೇಕೆ !
ಬೆಚ್ಚಗೆ ನೀ ನನ್ನಾವರಿಸುತಿರಲು 
ಕಣ್ಮುಚ್ಚಿದರೆ ಸ್ವರ್ಗದ ಕನವರಿಕೆ!!

ಹಲವು ಬಣ್ಣದ, ಹಲವು ಘಮದ 
ವಿವಿಧ ಹೆಸರುಗಳು ಎದುರು ಸುಳಿದರೂ 
ನಿನ್ನಂಥ ಆಕರ್ಷಣೆ ಎಲ್ಲಿಯೂ ಇಲ್ಲ ಒಲವೇ.. 
ಹತ್ತೂರಲ್ಲೂ ನಿನ್ನ ಅರಸುವೆ ಸೊಬಗೇ!!

ನೀನಿಲ್ಲದ ದಿನವೂ ಅಪೂರ್ಣವೇ!
ಕಾದು ನಿನ್ನ ಕೈಲಿ ಹಿಡಿದ ಕ್ಷಣವೂ ಅಪೂರ್ವವೇ!
ಓ ಅಮಲೇ, ನೀನೊಂದು ಅದ್ಭುತವೇ!
ಹೇ ಬಿಸಿಯಾದ ಅಮೃತವೇ,ನಿನ್ಹೆಸರು ಚಹಾವೇ.. !!

-ಪಲ್ಲವಿ 
ಚಹಾ ಎಂಬ ಅಮೃತಕ್ಕಾಗಿ 😍

Saturday, October 17, 2020

ಬಣ್ಣದ ಬೊಂಬೆ..


ರಟ್ಟೆಯ ಮೇಲಿನ ಬುಟ್ಟಿಯ ತುಂಬಾ 
ಬಣ್ಣಗಳ ಹೊತ್ತವನು.. 
ಯಾವ ಬಣ್ಣವೂ ಅವನದಲ್ಲ.. 

ಮೆತ್ತನೆಯ ಬೊಂಬೆಯಂತೆ ಇರದು 
ಬದುಕು, ಸವೆಸಲೇಬೇಕು ಪಾದವ.. 
ಕಾಲಿಗೆ ಕಟ್ಟಲೇಬೇಕು ಚಕ್ರವ.. 

ಬೊಂಬೆಯ ಕಂಡು ಮಗುವೊಂದು 
ನಕ್ಕರೆ ಮಾತ್ರವೇ ಸಕ್ಕರೆ.. 
ಬುಟ್ಟಿಯ ನೆರಳೇ ಬದುಕಿಗಾಸರೆ.. 

ಹುಲಿ ಕರಡಿ ಆಮೆ ಮೊಲವ 
ಹೊತ್ತು ತಿರುಗುವನವ.. 
ಸುಡುವ ಬಿಸಿಲ ಲೆಕ್ಕಿಸಿದೆ;
ಬಯಸಿ ಹೊತ್ತಿನೂಟವ.. 

-ಪಲ್ಲವಿ (ಚಿತ್ರಕ್ಕಾಗಿ ಸಾಲುಗಳು)
ಚಿತ್ರ : ತಾಯಿ ಲೋಕೇಶ್ 


Thursday, October 15, 2020

ಸಂಪತ್ತು..


ಅಲ್ಲಿ ಮೂರಿಂಚಿನ ಬಣ್ಣವಿಲ್ಲ  
ಸಾವಿರ ಕೊಟ್ಟು ತಂದ ಬಟ್ಟೆಗಳೂ ಅಲ್ಲ
ಮುಖವಾಡ ಧರಿಸುವ ವಯಸ್ಸಲ್ಲ, 
ಅವಶ್ಯವೂ ಅಲ್ಲ.. 

ಕೆದರಿದ ಕೂದಲು, ಕೊಳಕು ಬಟ್ಟೆ 
ಮಣ್ಣಿನ ಆಟ.. 
ಕಲ್ಮಶಕ್ಕೆ ಆಸ್ಪದವೇ ಇಲ್ಲ.. 
ಅದರರ್ಥವೂ ತಿಳಿದಿಲ್ಲ.. 

ಅಂತರಾಳದಿಂದ ಬಂದ 
ನಗುವೊಂದೇ ಆಭರಣ.. 
ಕೋಟಿ ಕೊಟ್ಟರೂ ಕೊಳ್ಳಲಾರದ
ಸಂಪತ್ತಿನ ರಾಯಭಾರಿ.. 

ಭೇಟಿನೀಡಬೇಕಿದೆ ಮುಚ್ಚಿದ ಕಣ್ಣೊಳಗಿನ 
ಸವಿಯಾದ ಲೋಕದೊಳಗೊಮ್ಮೆ ,
ಆ ನಗುವಿನೊಡನೆ ಕಳೆದುಹೋಗಬೇಕಿದೆ ಒಮ್ಮೆ... 
ಅಸೂಯೆಯಿಂದ ಹೇಳಿದನಂತೆ ಸಾಮ್ರಾಟನೊಬ್ಬ!!

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Tuesday, October 13, 2020

ಕಣ್ಕಡಲು..

ಮುಚ್ಚಿಡಲಾರದ ಕಥೆಯೊಂದು 
ಕಣ್ಣ ಕಡಲಲಿ ತೇಲಿ ಬಂದು 
ತೀರದ ತುದಿಯಲಿ ಹೆಪ್ಪುಗಟ್ಟಿತ್ತು 
ಮೌನವಾಗಿ... 

ಅರೆ ಕ್ಷಣದ ರೆಪ್ಪೆ ಬಡಿತಕೆ 
ಹಿಡಿತವಿರದೇ ಕರಗಿ ಕೆಳಜಾರಿತು 
ಕೆನ್ನೆಯ ಬಯಲ ಮೇಲೆ 
ನಯವಾಗಿ... 

ಬಯಲೇ ಆಲಯವಾಯ್ತೀಗ;
ಆರ್ದ್ರ ನೋಟಕೆ ಕರಗಿದ 
ಬೆರಳೊಂದು ಜಾರಿದ ಕಥೆಗೆ 
ಪೂರ್ಣವಿರಾಮವಿಟ್ಟಾಗ...

ಹೊಸ ಗೀತೆಯೊಂದರ 
ಮುನ್ನುಡಿಯದು 
ಮತ್ತದೇ ಕಣ್ಕಡಲಲಿ 
ನಗುತಲಿದೆ ಶರಣಾಗಿ... 
ತೂಗುತಲಿದೆ ಉಯ್ಯಾಲೆಯಾಗಿ... 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Sunday, October 11, 2020

ಕುಡುಕನ ಮಡದಿ..

ಮಧ್ಯಾಹ್ನ ಎರಡು ಗಂಟೆಯ ಸಮಯ. ಸುಡುವ ಬಿಸಿಲಿಗೆ ಕಾವಲಿ ಕಾದಂತೆ ಕಾಯುತ್ತಿತ್ತು ತಲೆ. ನಾವು ಕಾಯುತ್ತಿದ್ದುದು ಮೈಸೂರಿನ ರೈಲಿಗೆ! 
ಬೇಸಿಗೆ ರಜೆಯಲ್ಲಿ ಮಕ್ಕಳೆಲ್ಲರ ಹಠಕ್ಕೆ ತರಾತುರಿಯಲ್ಲಿ ತಯಾರಿಯಾಗಿ ಎಲ್ಲರೂ ಹೊರಟಿದ್ದು! ನಮ್ಮದೇ ಗಾಡಿ ಬೇಡ, ರೈಲಿನಲ್ಲಿ ಹೋದರೆ ಮಜವಿರುತ್ತದೆ ಎಂಬುದೂ ನಮ್ಮ ಒತ್ತಾಯವಾಗಿತ್ತು.
ಅಮ್ಮಂದಿರ ಪಾಡನ್ನು ಹೇಳತೀರದು!
"ನಿಂಗವ್ವು ಗಂಡಸ್ರು ಬೇಲಿಗೂಟಕ್ಕೆ ಶಿಕಾಹಾಕ್ದಂಗೆ ಅಂಗಿ-ಪ್ಯಾಂಟು ಹಾಕ್ಯಂಡು ಹೊಂಟು ನಿತ್ಗತ್ತಿ.. ಎಲ್ಲಾರ್ದೂ ವಸ್ತ್ರ ತುಂಬಿಕ್ಯಂಡು, ಈ ಹುಡ್ರ ಕಟಕಟಿಗೆ ತಿಂಬಲೆ ಮಾಡ್ಕ್ಯಂಡು, ಯಂಗವ್ವು ತಯಾರಾಪವರಿಗೆ ಹೊತ್ತಾಗೇ ಹೋಗ್ತು ಹದಾ ನಿಂಗಕ್ಕೆ..!" ಎಂದು ಗೊಣಗುತ್ತ, ಬಾಗಿಲ ಬಳಿಗೆ ಬರುವಷ್ಟರಲ್ಲಿ ಗಾಡಿ ಸಿದ್ಧವಾಗಿತ್ತು. ಈ ಕಾದಾಟದ ನಡುವೆಯೂ ನಮಗೇನೂ ಸಂಬಂಧವೇ ಇಲ್ಲವೆಂಬಂತೆ, ಮೈಸೂರಿನಲ್ಲಿ ಎಲ್ಲೆಲ್ಲಿ ಸುತ್ತುವುದು, ಏನೇನು ಮಾಡುವುದು ಎಂಬ ಗಹನವಾದ ಚರ್ಚೆಯಲ್ಲಿ ಮುಳುಗಿದ್ದೆವು. 
ಅಂತೂ ಎಂಟೂ ಜನ ತಾಳಗುಪ್ಪ ತಲುಪುವಾಗ ಅಮ್ಮಂದಿರ ಮುನಿಸು ಶಾಂತವಾಗಿ ಪಕ್ಕದಮನೆಯ ಶಾಂತಕ್ಕನ ವಿಷಯ ಪ್ರಾರಂಭವಾಗಿತ್ತು!!
ಎಲ್ಲ ರೈಲು ಹತ್ತಿ ಆರಾಮವಾಗಿ ಕುಳಿತರೆ, ಅಪ್ಪ ಮಾತ್ರ ಇನ್ನೂ ಕೆಳಗೆ ನಿಂತಿದ್ದರು. ಅವರ ಕನಸಿನಂತೆ ನಿಧಾನವಾಗಿ ರೈಲು ಹೊರಟನಂತರ, ಹಳೇ ನಾಯಕನಟನ ರೀತಿ ಓಡಿ ಬಂದು ಹತ್ತುವಾಗ, "ತುಝೇ ದೇಖಾ ತೋಯೇ ಜಾನಾ ಸನಂ...." ಎಂದು ನಾವೆಲ್ಲ ಛೇಡಿಸಿದೆವು!
ಭದ್ರಾವತಿಯವರೆಗೂ ನಮ್ಮನ್ನು ಬಿಟ್ಟರೆ ಮತ್ಯಾರಿಲ್ಲ ಬೋಗಿಯಲ್ಲಿ, ಹಾಗೆಂದು ಗಲಾಟೆಗೇನೂ ಕೊರತೆಯಿರಲಿಲ್ಲ. ಹರಟೆ ಅಂತ್ಯಾಕ್ಷರಿಗಳೆಲ್ಲ ಭರದಿಂದಲೇ ಸಾಗಿದ್ದವು. 
ಕೊನೆಗೆ ಕಾಲಿಡಲೂ ಜಾಗವಿರದಷ್ಟು ಜನಜಾತ್ರೆ! ಸಕ್ಕರೆ ಡಬ್ಬಕ್ಕೆ ಇರುವೆ ಮುತ್ತಿದಂತಿತ್ತು!!  
ಒಂದು ನಿಮಿಷವೂ ಕೂರದೇ ಒಂದೊಂದು ಬೋಗಿಯನ್ನು ದಾಟಿ ಕೊನೆಯವರೆಗೂ ಓಡಾಡುತ್ತಿದ್ದ ಅಪ್ಪನನ್ನು , "ಯಾಕಪ್ಪೋ ಬೆಕ್ಕಿನ ಥರಾ ಓಡಾಡ್ತಾ ಇದಿಯಾ? ಇಲ್ಲೇ ಕುತ್ಕೋ ಬಾ.." ಎಂದೆ. 
"ಏನ್ ಮೊಬೈಲ್ ನೋಡ್ತಾ ಇರ್ತೀಯಾ.. ಒಂದ್ಸಲ ನಂಜೊತೆ ಬಾ.. ಇಡೀ ರೈಲಲ್ಲಿ ಎಂಥಾ ಮಜವಾದ, ಬೇರೆ ಬೇರೆ ವ್ಯಕ್ತಿಗಳು ಕಾಣ್ತಾರೆ ಬಾ.." ಎನ್ನುತ್ತಾ ಕರೆದೊಯ್ದರು. 
ಕೈ ಕೈ ಹಿಡಿದು ಒರಗಿ ಕುಳಿತಿದ್ದ ಜೋಡಿಗಳು, ಸಣ್ಣ ಬಾಟಲಿಯನ್ನು ಟವೆಲ್ ಮರೆಯಲ್ಲಿ ಎತ್ತಿ ನಿಧಾನವಾಗಿ ಕಣ್ಣು ಮುಚ್ಚಿ ಕುಡಿಯುತ್ತಿದ್ದವರು, ಅಳುತ್ತಿದ್ದ ಪುಟ್ಟ ಮಗು..
ಅಷ್ಟರಲ್ಲಿ ಚುಕುಬುಕು ಶಬ್ದ ನಿಧಾನವಾಗಿ, ಕೂ..ಎನ್ನುತ್ತಾ ನಿಂತಿತ್ತು ರೈಲು. ಅರಸೀಕೆರೆ ಎಂದು ಕೂಗಿದನೊಬ್ಬ.
"ಬಿಸ್ಸಿ ಬಿಸಿ ಪಕೋಡಾ.. ಗರಮಾ ಗರಮ್ ಚಾ....ಯ್" ಎಂದು ರಾಗವಾಗಿ ಹಾಡುತ್ತ ತನಗಿಂತ ಭಾರದ ಡಬ್ಬಿಗಳನ್ನು ಹಿಡಿದುಕೊಂಡು ಹತ್ತಿದನೊಬ್ಬ. ಪಕೋಡ ತಿಂದು, ಚಹಾ ಕುಡಿದು ಮುಂದಿನ ಬೋಗಿಗೆ ದಾಟುವಷ್ಟರಲ್ಲಿ, ಕರ್ಣ ಕಠೋರವಾದ ಗಾಯನ ಜನರ ಗೌಜಿನ ನಡುವೆ ತೂರಿಬಂತು. 
ಪುಣ್ಯಾತ್ಮನೊಬ್ಬ ಇಯರ್ ಫೋನ್ ನಲ್ಲಿ  ಹಾಡು ಹಾಕಿಕೊಂಡು ಹೊಟ್ಟೆಗೆ ಎಣ್ಣೆ ಹಾಕಿಕೊಳ್ಳುತ್ತಾ, ಜಗದ ಜಂಜಾಟವನ್ನೆಲ್ಲ ಮರೆತು ಕಣ್ಮುಚ್ಚಿ ಹಾಡುತ್ತಿದ್ದ.. "ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು.. ಆಚೆಗ್ ಹಾಕವ್ಳೆ ವೈಫು.."
ವಿಜಯ್ ಪ್ರಕಾಶ್ ಇನ್ನೂ ಕೇಳಿಲ್ಲ ಅನ್ಸತ್ತಪ್ಪಾ ಇವನ ಹಾಡನ್ನ... ಎನ್ನುತ್ತಾ ತಿರುಗಿ ಹೊರಟೆವು. 
ಮುಂದೆ ಅಪ್ಪ - ಹಿಂದೆ ಮಗಳು, ಲೆಫ್ಟ್-ರೈಟ್ ಎನ್ನುತ್ತಾ ನಮ್ಮ ಬೋಗಿಗೆ ಬಂದರೆ ಜಾಗವೆಲ್ಲಿದೆ ನಮಗೆ? 
ಬೋಗಿಯ ಮೆಟ್ಟಿಲ ಮೇಲೂ ಕುಳಿತಿದ್ದಾರೆ ಜನರು. ಎಲ್ಲ ದಿನದ ಕೂಲಿ ಮುಗಿಸಿ, ರಾತ್ರಿ ಹೊರಟವರು ಮಣ್ಣು, ಸಿಮೆಂಟ್ ಮೆತ್ತಿಕೊಂಡ ಬಟ್ಟೆಯಲ್ಲಿ. 

ಅದೆಲ್ಲಿಂದ ಶುರುವಾಯಿತೋ.. "ಲೇ ಬೇವರ್ಸಿ.. ನಂಗೆ ಮಾತಾಡೀಯಾ.. " ಎಂದು ಕೂಗಿದನವ. ಅವಳು ಅಷ್ಟೇ ಗೌರವಯುತವಾದ ಶಬ್ದ ಬಳಸಿ ಕಿರುಚಲು ಪ್ರಾರಂಭಿಸಿದಳು! ದಿನವೂ ಇದೇ ರಾಗ ಇದೇ ಹಾಡು ಎಂಬಂತಿತ್ತು ಸುತ್ತ ಇದ್ದವರೆಲ್ಲರ ಮುಖದ ಭಾವ! 
ಏನು ನಡೆಯುತ್ತಿದೆ ಎಂಬ ಕುತೂಹಲದಿಂದ ನಾವು ಇಣುಕಿದೆವು. ಆತ ಕಂಠಪೂರ್ತಿ ಕುಡಿದು, ಏನೇನೋ ಹೇಳುತ್ತಿದ್ದ. ಕೊನೆಗೆ ಅವಳ ಕೂದಲು ಹಿಡಿದೆಳೆದು ಹೊಡೆಯತೊಡಗಿದ. ಆಕೆ ಬೈಯುತ್ತಲೇ ಇದ್ದಳು. 
ಅತಿರೇಕವಾಗುತ್ತಿದೆ ಎನ್ನಿಸಿ ಮಧ್ಯೆ ಕೆಲವರು ಹೋಗಿ ಜಗಳ ಬಿಡಿಸಿದರು.
ಆಕೆ ನಮ್ಮೆದುರು ಬಂದು ನಿಂತು ಅಸಹಾಯಕಳಾಗಿ ಹೇಳತೊಡಗಿದಳು.. "ನೋಡಿ ಸಾಮಿ, ದಿನಾ ಇದೇ ಆಗೋಯ್ತು ಇವಂದು. ಕುಡಿಯದು, ಬಡಿಯದು. ಮನೇಲಿ ಮಗಿ ಐತೆ. ಇವ ಹಿಂಗ್ ಬತ್ತಾನೆ.. ಏನ್ ಯೋಳಿದ್ರು ಕೈ ಎತ್ಕಂಡೇ ಬತ್ತಾನೆ.." ಎಂದು ಹೇಳುತ್ತಾ ಕುಳಿತಳು. ಆತ ಬೋಗಿಯ ಮೆಟ್ಟಿಲಲ್ಲಿ ಕುಳಿತು ಇನ್ನೂ ಬೈಯುತ್ತಲೇ ಇದ್ದ. 
ಅರೆ ಕ್ಷಣ ಅವರಿಬ್ಬರ ಧ್ವನಿ ಬಿಟ್ಟು ಇಡೀ ಬೋಗಿ ಶಾಂತವಾಗಿತ್ತು. ಮೈಸೂರು ತಲುಪುವವರೆಗೂ ಮೆಟ್ಟಿಲ ಮೇಲಿಂದ ಅವನು, ಈ ಕಡೆಯಿಂದ ಅವನ ಹೆಂಡತಿ ಕೂಗುತ್ತಲೇ ಇದ್ದರು. ರೈಲ್ವೆ ನಿಲ್ದಾಣದಲ್ಲಿ ಎಷ್ಟು ಬೇಗ ಮಾಯವಾದರೋ ತಿಳಿಯದಾಯಿತು. 

ಮಾರನೇ ದಿನ ಬೆಳಿಗ್ಗೆ ಚಾಮುಂಡೇಶ್ವರಿಯ ದರ್ಶನ ಮಾಡಿ ಮುಂದಿನದನ್ನು ನಿರ್ಧರಿಸೋಣವೆಂದು ಎಲ್ಲರೂ ಅತ್ತ ಹೊರಟೆವು. ದಾರಿಯುದ್ದಕ್ಕೂ ಕುಡುಕ ಅವನ ಮಡದಿಯ ವಿಚಾರವೇ ಇತ್ತು. ಅಷ್ಟು ಜನರ ಮಧ್ಯೆಯೇ ಹಾಗೆ ಹೊಡೆದವನು ಮನೆಯಲ್ಲಿ ಇನ್ನೇನು ಮಾಡುತ್ತಾನೋ ಎಂದೆಲ್ಲ ಹೇಳುತ್ತಾ ದೇವಾಲಯದೊಳಕ್ಕೆ ಹೋದೆವು.  ಹೊರಬರುವಾಗ ಅಪ್ಪ ಯಾರತ್ತಲೋ ಕೈ ಮಾಡಿ ತೋರಿಸಿದರೆ ನನಗೆ ಪರಿಚಯವೇ ಸಿಗಲಿಲ್ಲ. ಕೊನೆಗೆ ಅವರ ಬಳಿಯೇ ಹೋದೆವು. ನಿನ್ನೆ ರಾತ್ರಿ ಕಂಡ ಹರಿದ ಅಂಗಿ, ಕೆಂಪು ಕಣ್ಣಿನ ಕುಡುಕ ಅವ, ಜೊತೆಯಲ್ಲಿ ರವಿಕೆ ಹರಿದ, ಮಣ್ಣು ಮೆತ್ತಿಕೊಂಡ ಸೀರೆಯಲ್ಲಿದ್ದ ಅವನ ಹೆಂಡತಿ!!
ಇಂದು ಕೆಂಪನೆಯ ಅಂಗಿ ಹಾಕಿ, ಎಣ್ಣೆ ಹಾಕಿ ತಲೆ ಬಾಚಿ, ಹಣೆಗೆ ಕುಂಕುಮವಿಟ್ಟು ನಿಂತಿದ್ದ. ಹೊಳೆವ ಬಂಗಾರದಂಚಿನ ಕಡು ಹಸಿರು ಸೀರೆಯುಟ್ಟು ಕಾಸಗಲದ ಬೊಟ್ಟಿಟ್ಟು, ಮುಖಕ್ಕೆ ಪೌಡರ್ ಬಳಿದು,  ತಲೆ ತುಂಬ ಕನಕಾಂಬರದ ಮಾಲೆ ಮುಡಿದು ನಿಂತಿದ್ದಳು ಅವಳು. ಇಬ್ಬರ ಕೈ ಹಿಡಿದು ಗುಲಾಬಿ ಫ್ರಾಕಿನಲ್ಲಿ ಅವರ ನಡುವೆ ನಿಂತಿತ್ತು ಪುಟ್ಟ ಮಗು..! 
"ಏನ್ರಪ್ಪ ನಿನ್ನೇ ನೋಡಿದ್ರೆ ಹಂಗೆ ಇದ್ರಿ.. ಇವತ್ತು ಇಲ್ಲಿ ಹಿಂಗೇ.." ಎಂದು ಮಾತನಾಡಿಸಿದೆವು ನಾವೆಲ್ಲ. ಒಮ್ಮೆ ಅವರಿಗೆ ಪರಿಚಯ ಸಿಗಲಿಲ್ಲ. ನಂತರ ಆತ ತಪ್ಪಿನ ಅರಿವಾಗಿಯೋ, ನಾಚಿಕೆಯಾಗಿಯೋ ತಲೆ ಕೆಳಗೆ ಮಾಡಿದ. 
ಆಕೆಯೇ ಮಾತನಾಡಿದಳು.. " ಎಲ್ಲ ಇರದೆಯಾ  ಸಾಮಿ..ಒಂದು ಮಾತು ಬತ್ತದೆ, ಹೋಯ್ತದೆ..  ನಂದೆಯ ತಪ್ಪು.. ಅವಂದೆಂತ ಇಲ್ರ.." ಎಂದು ಮುಗುಳ್ನಕ್ಕಳು. 
"ಸಾಮಿ ನಮ್ಮ ಮಗಿದು ಹುಟ್ಟಬ್ಬ.. ಅದ್ಕೇಯ ಬಂದಿವಿ.." ಎಂದನವ. 
ಪುಟ್ಟ ಮಗುವಿನ ಕೈಗೆ ಹಣವಿತ್ತು, ನಮ್ಮ ಕೈಲಿದ್ದ ಪ್ರಸಾದದ ಪೊಟ್ಟಣವನ್ನು ಅವರಿಬ್ಬರ ಕೈಗಿಟ್ಟೆವು. 
ಮುಂದೆ ಹೋಗುತ್ತಿದ್ದವಳು ತಿರುಗಿ ನೋಡಿದೆನೊಮ್ಮೆ.. 
ಒಂದು ತುತ್ತು ಪ್ರಸಾದವನ್ನು ಮಗಳ ಬಾಯಿಗೆ, ಮತ್ತೊಂದನ್ನು ಮಡದಿಯ ಬಾಯಿಗಿಟ್ಟು ನಂತರ ತಾನು ತಿಂದನವ... 






Tuesday, October 6, 2020

ಗರಿಯೊಂದು ಮಾತಾಡಿದೆ..


ಗರಿಯೊಂದು ಮಾತಾಡಿದೆ
ಮನಬಿಚ್ಚಿ.... 
ಹಾಡಿದೆ ಎದೆಯ ಭಾವಗಳ 
ರಾಗವಾಗಿ... 

ನೂರು ಎಳೆಗಳಲಿ ಬಣ್ಣವ 
ಸೂಸಿ, ನಸು ನಾಚಿ... 
ಅಂಗೈ ನೇವರಿಸಿ ಪಿಸುಗುಟ್ಟಿದೆ 
ಕೇಳದಂತೆ.. 

ಕಣ್ಣಂಚಲಿ ನಗುತಲಿದೆ 
ತುಟಿಯಂಚಲಿ ಹುಸಿಮುನಿಸು.. 
ಬೆರಳ ನಡುವೆ ಬೆಸೆದು ಹೇಳಿತು 
ಬಿಡಲಾರೆನೆಂದಿಗೂ.. 

-ಪಲ್ಲವಿ 

Saturday, October 3, 2020

ದೀಪ...

ಕತ್ತಲ ಲೋಕದಿ ಪ್ರಜ್ವಲಿಸುತಿಹ ಹಣತೆ 
ಕಟುಕರ ಸ್ವಾರ್ಥಕೆ ಬಲಿಯಾಯ್ತೆ !

ಮಂದ ಬೆಳಕಿರಬಹುದು 
ನಂದಾದೀಪವೇ ಅದು.. 
ಕಿಡಿಯೊಂದು ಜ್ವಾಲೆಯಾಗಿ 
ಸುಡದೆಂಬ ಭ್ರಮೆಗೆ ಏನೆನ್ನಲಿ.. 

ಒಡೆದಿತ್ತು ಹಣತೆ,ಎಣ್ಣೆ ಸೋರಿತ್ತು 
ಮುರಿದಿತ್ತು ಎಲುಬು, ನೆತ್ತರು ಹರಿದಿತ್ತು 
ಬತ್ತಿಯ ಎಳೆದ ರಭಸಕೆ, ಜಿಹ್ವೆ ಇಬ್ಭಾಗವಾಗಿತ್ತು 
ನೋವ ನಿಟ್ಟುಸಿರಿಗೆ ಪ್ರಾಣಜ್ಯೋತಿ ಆರಿತ್ತು!

ದೀಪ ಇಂದಿಗೂ ಪವಿತ್ರವೇ !
ದುಷ್ಟ ಕಂಗಳು, ರಕ್ಕಸ ಕೈಗಳು 
ಮೃಗ ಮನಗಳು ಪೂಜನೀಯವೇ? 
ಅಂಧಕಾರವಿರಬಹುದು, ದೇದೀಪ್ಯಮಾನ 
ಬೆಳಕೊಂದು ಸುಡದಿರದು ಕೆನ್ನಾಲಿಗೆಯ ಚಾಚಿ... 

-ಪಲ್ಲವಿ 

Friday, October 2, 2020

ಹೊರಟನವ..


ಜಗದ ಗದ್ದಲವ ಮೌನದೊಳಡಗಿಸಿ 
ಚಿಂತೆಗಳನೆಲ್ಲ ಸುಟ್ಟು ಕರಗಿಸಿ 
ಧರೆಯ ಪ್ರೇಮವ ಜಲಧಾರೆಯಲೊಂದಾಗಿಸಿ 
ಹೊರಟನವ.... 

ಕಪ್ಪು ಬಿಳುಪಿನ ನಡುವೆಯೊಂದು 
ಚಿತ್ತಾರವ ಮೂಡಿಸಿ 
ಬಾನೆತ್ತರಕ್ಕೂ ರಂಗ ಚೆಲ್ಲಿ 
ಹೊರಟನವ....

ಹೂವಿಗೊಂದು ನಗುವ ಚೆಲ್ಲಿ 
ಚಿಗುರೆಲೆಗೊಂದು ಶಕ್ತಿ ತುಂಬಿ 
ಹಣ್ಣೆಲೆಗೊಂದು ಭರವಸೆ ನೀಡಿ 
ಹೊರಟನವ.. 

ನಾಳೆಯ ನಂಬಿಕೆಗೆ ಜೀವವಿತ್ತು  
ಕತ್ತಲ ಲೋಕಕೆ ಬೆಳಕ ಕೊಟ್ಟು 
ಮೌನದಲೊಂದು ಮಾತನಿಟ್ಟು 
ಹೊರಟನವ.. 

-ಪಲ್ಲವಿ 
(ಚಿತ್ರ ಹಾಗೂ ಸಾಲುಗಳು)




ಕರಗುವೆ...