Saturday, August 19, 2023

ಕರಗುವೆ...

ಕರಗುವೆ ನಾ ನಿನ್ನೊಲವ ಗೂಡಲ್ಲಿ
ಬೆರೆಯುವೆ ನಿನ್ನುಸಿರ ಶಾಖದಲಿ...
ಸದಾ ನಿನಗಂಟಿರುವೆ..
ನಟ್ಟಿರುಳಿನಲೂ, ನಡು ಹಗಲಿನಲೂ..
ಬರಲಾರೆಯ ಬೆಳಕಾಗಲು.....

ಚಿತ್ರ - ಸಾಲು :
ಪಲ್ಲವಿ

Sunday, August 13, 2023

ಶಿವ ಶಕ್ತಿ

ಸಖ,
ನಾ ನಿನ್ನ ಸಖಿಯಾಗುವೆ..
ನೀ ಹಸಿರಾಗು, ನಾ ಉಸಿರಾಗುವೆ..
ನೀ ಬೆಳಕಾಗು, ನಾ ಹೊಳಪಾಗುವೆ..
ನೀ ಹೆಜ್ಜೆಯಾಗು, ನಾ ಲಯವಾಗುವೆ..
ನೀ ಶಿವನೇ ಆಗು.....
ಸಖ, ನಾ ನಿನ್ನ ಶಕ್ತಿಯಾಗುವೆ...

-ಪಲ್ಲವಿ

Wednesday, July 19, 2023

ನಿನ್ನೊಲವು

ನೀನೆಂದೂ ಮುಗಿಯದ ಕವನ
ಆದಿ ನಿನ್ನಿಂದಲೇ..
ಅಸ್ತಿತ್ವವೂ ನಿನ್ನಲ್ಲೇ...
ಸಖ,
ನಿನ್ನ ಕಣ್ಣ್ಬಟ್ಟಲಲಿ ಕಾಣುವ
ಬಿಂಬವೇ ಸಾಕ್ಷಿ ಎನ್ನೊಲವಿಗೆ..
ನಿನ್ನೊಲವ ಮಳೆಯಲಿ ಕರಗಿ
ಮತ್ತೆ ಚಿಗುರಿ ಅರಳಿ ಘಮಿಸುವ
ಹೊಸದೊಂದು ಆಸೆ ಗರಿಗೆದರಿದೆ...
ಹಾ..
ಮುಗಿಯದೀ ಕವನ...
ನಿನ್ನಂತೆ, ನಿನ್ನೊಲವಂತೆ....

-ಪಲ್ಲವಿ 


Monday, March 6, 2023

ಚಂದಿರ

ಇರುಳನೆಲ್ಲ ಬೆಳಕಾಗಿಸಿ 
ಧಗೆಯ ತಣಿಸಿ, ತಂಪನುಣಿಸಿ
ಮೌನವನೂ ಮಾತನಾಡಿಸಿ
ಉಸಿರಿಗಿಷ್ಟು ಘಮವ ಬೆರೆಸಿ
ಪಯಣದಲಿ ಜೊತೆಯಾದ-ನಲ್ಲ..
ಹತ್ತಿ ಮುದ್ದೆಗಳ ನಡುವೆ ಇಣುಕಿದ ಕಳ್ಳ!!

-ಪಲ್ಲವಿ



Sunday, February 26, 2023

 ಇರುಳ ಮಡಿಲಿಗೆ ಸೇರುವ ತವಕ ಸೂರ್ಯನಿಗೆ, ಓಡುತ್ತಾನೆ ಒಂದರೆ ಘಳಿಗೆ ಕಾಯದೆಯೇ..
ನಮ್ಮ ನಿಮ್ಮಂತೆ ಟ್ರಾಫಿಕ್ ಸಿಗ್ನಲ್ ಇರುವುದೇ ಅವನಿಗೆ!!

 ಕತ್ತಲ ನಡುವೆ ಬೀದಿ ದೀಪವೊಂದು ಮರಗಳಿಗೆ ಭಾಷಣ ಮಾಡುತ್ತಿತ್ತು, ಈ ಬೀದಿಗೆ ನಾನೇ ಸೂರ್ಯ ಎಂದು..

ನಾಳೆ ಸೂರ್ಯ ಬರುವವರೆಗೂ ಎಲ್ಲರೂ ಅದರ ಮಾತನ್ನೇ ಕೇಳಬಹುದೇನೋ..

Wednesday, August 17, 2022

ಮೊದಲ ಮಾಸ...

ಆಗಸ್ಟ್ ಹದಿನೈದರ ಪರೇಡಿಗೆ
ಮುಂಜಾನೆ ಹೊರಡಬೇಕೆಂಬ ಆತುರ ಅವಳಿಗೆ..
ಬಿಳಿ ಸ್ಕರ್ಟು ತೊಟ್ಟು, ಕರಿ ಬೂಟು ಹಾಕಿ
ಹೊರಡೋಣ ಬಾರಪ್ಪಾ... ಎಂದು ಕೂಗುವಾಗ
ಅಮ್ಮ ಬಲಗಡೆ ಜಡೆ ಹಾಕುತ್ತಿದ್ದಳು..

ಅದೆಲ್ಲಿಂದ ಶುರುವಾಯಿತೋ..
ದಟ್ಟ ಮೋಡ, ಬಡಿದಪ್ಪಳಿಸುವ ಗುಡುಗು..
ಧೋ ಎಂದು ಶುರುವಾಯಿತಲ್ಲ ಮಳೆ..

ಹೊಟ್ಟೆಯೊಳಗೆಲ್ಲ ಸಂಕಟ, ಹೇಳಲಾರದ ನೋವು..
ಬೆನ್ನ ಹುರಿಯಾಳದಿಂದ ಹೊರಟ ಮಿಂಚು!

ಎಲ್ಲವನ್ನೂ  ಅಲಕ್ಷಿಸಿ, ಅಪ್ಪನ ಕೈ ಹಿಡಿದು ಎದ್ದಳು..
ಅಮ್ಮನ ಕಣ್ತುಂಬ ಜಿನುಗಿದ ನೀರು!

ಬಿಳಿಯ ಲಂಗಕ್ಕೆ ರಂಗೇರಿದೆ..
ಕೆಂಪು ಮಳೆಯಲ್ಲಿ ತೊಯ್ದ ಮಗಳು ಹಸಿರಾಗಿದ್ದಾಳೆ..
ಹೆಣ್ಣಾಗಿದ್ದಾಳೆ!!!

ಸ್ಕರ್ಟಿನ ಜಾಗಕ್ಕೆ, ಉದ್ದ ಲಂಗ ಬಂತು,
ಜಡೆಯ ರಿಬ್ಬನ್ನಿಗೆ ಹೂವು ಬಂದು ಕುಳಿತಿತ್ತು..
ಸುರಿವ ಮಳೆಯ ನೋಡುತ್ತಾ ಅಳುವ ಅವಳಿಗೆ..
ಅದೇನೆಂದು ಅರಿವಾಯಿತೋ ಇಲ್ಲವೋ..
ಅಂಜಿಕೆಯೊಂದೆ ಆಗುತ್ತಿತ್ತು..

ಇದೆಲ್ಲ ಹೀಗೆಯೇ ರೂಢಿಯಾಗುವ ತನಕ..
ಹೆದರಬೇಡ.. ಎನ್ನುತ್ತಾ
ಅಮ್ಮ ಗಡಿಬಿಡಿಯಿಂದ ಓಡಾಡುತ್ತಿದ್ದಳು..
ಆದರೆ ಅಪ್ಪ??
ದಿನವೂ ಕರೆದು ಮಡಿಲಮೇಲೆ ಮುದ್ದುಗರೆಯುತ್ತಿದ್ದವ..
ಇಂದು ಮಾರು ದೂರದಲ್ಲಿ ನಿಂತಿದ್ದಾನೆ..

ನನಗಿದು ಬೇಡವೇ ಬೇಡ..
ನನ್ನನ್ನು ನನ್ನಿಂದ ದೂರ ಮಾಡುವ ಇದು...
ನೋವು ಕೊಡುವ ಇದು..
ಇದೇನಿದು..!
ಬೇಡ ನನಗಿದು...

ಒಳಗಿಂದ ಅಳು ನುಗ್ಗಿಬಂತು..
ಮತ್ತೊಮ್ಮೆ ಲಂಗ ಬಿಸಿಯಾಯಿತು...

-ಪಲ್ಲವಿ 

Monday, June 6, 2022

ನಿಜ ಹೇಳು...

ನಿಜ ಹೇಳು..
ನಾ ಕಂಡಿದ್ದು ನಿನ್ನನೇ ಅಲ್ಲವೇ?

ಬೆಳಗಿನ ಹಾದಿಯಲಿ
ಅರಳಿನಿಂತ ಸಂಪಿಗೆಯ ಘಮವಲ್ಲವೇ ನೀನು?

ಸುಡುವ ಮಧ್ಯಾಹ್ನ,
ಎನ್ನ ತಂಪಾಗಿಸಿದ ಮಳೆಯಲ್ಲವೇ ನೀನು?

ಆ ಮುಸ್ಸಂಜೆಯ ತಿಳಿಗಾಳಿಯಾಗಿ
ಮುಂಗುರುಳ ನೇವರಿಸಿದ್ದು...
ನೀನೇ ಅಲ್ಲವೇ?

ನಡು ರಾತ್ರಿಯಲಿ ಕಿಟಕಿಯ ನಡುವೆ
ಇಣುಕಿದ ಚಂದಿರನಲ್ಲವೇ ನೀನು??

ನಿಜ ಹೇಳು ಸಖ,
ದಿನವಿಡೀ ಕಾಡಿ
ಮರೆಯಾಗುವವನಲ್ಲವೇ ನೀನು...

-ಪಲ್ಲವಿ 



ಕರಗುವೆ...