Sunday, November 28, 2021

ಮನಸ್ಥಿತಿ...

ಕರ್ನಾಳ ಮಾಸ್ತರು ಸುಮಾರು ಮೂವತ್ತರ ಆಸು
ಪಾಸಿನವರು. ಕಿರಾಣಿ ವ್ಯಾಪಾರ ಅವರ ಕೆಲಸವಾದರೂ, ಮಾಸ್ತರರು ಎಂದೇಕೆ ಕರೆಯುವರೆಂದು ಯಾರಿಗೂ ತಿಳಿದಿಲ್ಲ. ಅವರ ಕುಟುಂಬದಲ್ಲಿ ಮೊದಲು ಯಾರೋ ಮಾಸ್ತರರಾಗಿದ್ದಿರಬಹುದು. ಅಲ್ಲಲ್ಲಿ ಇಣುಕುವ ಹತ್ತಾರು ನೆರೆತ ಕೂದಲು, ಕುರುಚಲು ಗಡ್ಡ, ಸಣ್ಣ ಹೊಟ್ಟೆ, ಉದ್ದ ತೋಳಿನ ಅಂಗಿ, ಬಿಳಿಯ ಲುಂಗಿ - ಎಂದಿಗೂ ಅವರನ್ನು ಹೀಗೆಯೇ ಕಾಣಬಹುದು. ಅವರೇನೋ ಹುಟ್ಟಿ ಬೆಳೆದುದು ಸಿದ್ದಾಪುರವೇ ಆದರೂ ಮೂಲತಃ ಅಲ್ಲಿಯವರಲ್ಲ. ಅವರ ತಂದೆ ಶೇಟಿ ಮಾಸ್ತರು ಚಿಕ್ಕಮಗಳೂರಿನ ಸಮೀಪದ ಯಾವುದೋ ಹಳ್ಳಿಯವರು. ತಮ್ಮ ಹಿರಿಯ ಮಗಳ ಖಾಯಿಲೆಗೆ ನಾಟಿ ಔಷಧಿ ಸಿಗುವುದೆಂಬ ಕಾರಣಕ್ಕೆ ಬಂದವರು, ನೆಲೆ ನಿಂತರು. ಮಗಳು ಹತ್ತೊಂಭತ್ತರ ಸುಮಾರಿಗೆ ಉಸಿರಾಟದ ತೊಂದರೆಯಿಂದ ಬಳಲಿ ಅಸುನೀಗಿದ್ದಳು. ಶೇಟಿ ಮಾಸ್ತರರು ಮತ್ತವರ ಮಡದಿ ತೀವ್ರ ಖಿನ್ನತೆಗೆ ಒಳಗಾದರೂ ಮಗ ಸಹದೇವ ಕರ್ನಾಳನ ಬೆಳವಣಿಗೆಯಲ್ಲಿ ದಿನ ದೂಡುತ್ತಿದ್ದರು. ಡಿಗ್ರಿ ಮುಗಿಯುತ್ತಿದ್ದಂತೆ ಕರ್ನಾಳ ಅಪ್ಪನ ದಿನಸಿ ಅಂಗಡಿಯ ಜವಾಬ್ದಾರಿ ವಹಿಸಿಕೊಂಡು ಅವರಿಗೆ ನಿವೃತ್ತಿ ನೀಡಿದರು.
ಪೇಟೆಯ ಮಧ್ಯದಲ್ಲೇ ಅವರ ಅಂಗಡಿ. ಎಡಕ್ಕೊಂಡು ಹಣ್ಣಿನ ಅಂಗಡಿ, ಬಲದಲ್ಲಿ ಒಂದು ಹೊಲಿಗೆ ಅಂಗಡಿ, ಮತ್ತದರ ಪಕ್ಕ ಒಂದು ಪುಟ್ಟ ಸ್ಟೇಷನರಿ ಅಂಗಡಿ. ಈ ನಾಲ್ಕು ಅಂಗಡಿಗಳ ಒಂದು ಸಾಲಿನ ನಂತರ ಕೆಲವು ಮನೆಗಳು. ಕರ್ನಾಳರ ಅಂಗಡಿಯ ಎದುರು ಒಂದು ದೊಡ್ಡ ಹುಣಿಸೆ ಮರ, ಪೇಟೆಯ ನಡುರಸ್ತೆ. ಎದುರಿಗೆ ಒಂದು ಪುಟ್ಟ ಟೀ ಸ್ಟಾಲ್.
ಪ್ರತಿ ಬುಧವಾರ ನಡೆಯುವ ಸಂತೆಯಲ್ಲಿ ಇವರ ಅಂಗಡಿಗಳ ಎದುರೇ ತರಕಾರಿ ಅಂಗಡಿಗಳು ಇರುತ್ತಿದ್ದವು. ರಸ್ತೆಯಲ್ಲಿ ವಾಹನಗಳು ಓಡಾಡಲು ಸಾಧ್ಯವಿರುತ್ತಿರಲಿಲ್ಲ. ವಾರಕ್ಕೊಮ್ಮೆ ನಡೆಯುವ ಸಂತೆಯಾದ್ದರಿಂದ ಜನನಿಬಿಡವಾಗಿರುತ್ತಿತ್ತು. ಅಂದು ಮಾತ್ರ ಕರ್ನಾಳರ ಟೀ ಅಂಗಡಿಯಲ್ಲಿನ ಜನಜಂಗುಳಿಯನ್ನು ನೋಡಲಸಾಧ್ಯ! ಎರಡು ಜನ ಕೆಲಸಕ್ಕಿದ್ದರೂ ಸಾಲದೇ ಅಂದು ಶೇಟಿ ಮಾಸ್ತರರೂ, ಸ್ವಾತಿಯೂ ಸಹಾಯಕ್ಕೆ ಹಾಜರಾಗುತ್ತಿದ್ದರು. ಇಷ್ಟಾದರೂ ಕೈ ತುರಿಸಿಕೊಳ್ಳಲೂ ಪುರಸೊತ್ತಿಲ್ಲದೆ ಕೆಲಸ ನಡೆಯುತ್ತಿತ್ತು. ಒಂದು ಬುಧವಾರ ಹಕ್ಕಲಕಣ್ಣಿಯ ಗೋವಿಂದ ಎಂಬ ಹಳೆಯ ಸ್ನೇಹಿತ ಕರ್ನಾಳ ಮಾಸ್ತರ ಭೇಟಿಯಾದ. ಉಭಯ ಕುಶಲೋಪರಿಗಳನ್ನು ಮಾತನಾಡುತ್ತ, ಕರ್ನಾಳ ಮಾಸ್ತರರು ತಮ್ಮ ಮನೆಯ ಪರಿಸ್ಥಿತಿಯನ್ನು ವಿವರಿಸಿದರು.

ಸ್ವಾತಿ ಕರ್ನಾಳರ ಮನೆ ಸೇರಿ ಐದು ವರ್ಷಗಳಾಗಿವೆ. ಮದುವೆಯಾದಾಗ ಅವಳ ವಯಸ್ಸು ಹದಿನೆಂಟು! ಸಣ್ಣಗೆ ಬೆಳ್ಳಗೆ ಇದ್ದ ಹುಡುಗಿ ಸೀರೆ ಸುತ್ತಿದ ಗೊಂಬೆಯಂತೆ ಕಾಣುತ್ತಿದ್ದಳು ಮದುವೆ ಮನೆಯಲ್ಲಿ. ಮೊದಲೆಲ್ಲ ಎಲ್ಲರೂ ಅತ್ತೆ ಮನೆಯಲ್ಲಿ ನೀ ಬೇಗ ಏಳಬೇಕು, ಬಹಳ ಕೆಲಸ ಇರುತ್ತವೆ, ಅವರು ಹೇಳಿದಂತೆ ನೀ ಕೇಳಬೇಕು, ದಿನವೂ ಅಡಿಗೆ ಮಾಡಬೇಕು, ಎಲ್ಲರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು ಎಂದೆಲ್ಲ ಹೇಳಿದಾಗ ದಿಗಿಲುಗೊಂಡಿದ್ದಳು. ಈ ಬೇಕುಗಳ ಪಟ್ಟಿಯನ್ನು ನೋಡಿ ಹೌಹಾರಿದ್ದಳು. ಹಾಗಾದರೆ ಇದು ಮದುವೆಯೇ ಅಲ್ಲ. ಮದುವೆಯಾದ ಮೇಲೆ ಹೀಗೆಲ್ಲ ಇರುತ್ತದೆಯಾದರೆ ಇಂತಹ ಮದುವೆ ಬೇಡವೇ ಬೇಡ ಎಂದು ನಿರ್ಧರಿಸಿದ್ದಳು. ಆ ನಿರ್ಧಾರಗಳನ್ನೆಲ್ಲ ಗಾಳಿಗೆ ತೂರಿ ಸಹದೇವನ ಸತಿಯಾಗಿ ಸ್ವಾತಿ ಕರ್ನಾಳರ ಕುಟುಂಬದ ಭಾಗವಾದಳು.
ಅವಳೆಣಿಸಿದಂತೆ ಯಾವುದೂ ಇರಲಿಲ್ಲ. ಮಗಳ ಕಳೆದುಕೊಂಡವರ ಮಡಿಲಿಗೆ ಮಗಳಾದಳವಳು. ಮನೆಯ ಮುದ್ದಿನ ಮಗಳಾಗಿ, ಸಹದೇವನ ಪ್ರೀತಿಯ ಪತ್ನಿಯಾಗಿ ಖುಷಿಯಲ್ಲಿರಬೇಕಾದರೆ ಬಂದ ಅತಿಥಿಗಳೆಲ್ಲ, "ಮದ್ವೆ ಆಗಿ ಎರಡು ವರ್ಷಾತು. ಆಡ್ಸಕೆ ಒಂದ್ ಕೂಸು ಬ್ಯಾಡ್ವೇನಾ.."
" ಅಪ್ಪ ಅಮ್ಮನ್ನ ಬ್ಯಾಗ ಅಜ್ಜ ಅಜ್ಜಿ ಮಾಡ್ರಿ.. "
"ವಯಸ್ಸು ನಿಲ್ಲದಿಲ್ಲ. ಮುದಿ ಆದ್ಮೇಲೆ ಮಕ್ಕಳಾಗದಿಲ್ಲ, ಯೋಚ್ನೆ ಮಾಡಿ.." ಎಂದೆಲ್ಲ ಹೇಳಲು ಪ್ರಾರಂಭಿಸಿದರು.
ಇಪ್ಪತ್ತರ ಹರೆಯದಲ್ಲೇ ಸ್ವಾತಿ ಗರ್ಭಿಣಿಯಾದಳು. ನೂರಾರು ಕನಸುಗಳು ಗಂಡ ಹೆಂಡತಿಯರಿಗೆ, ಹೆಣ್ಣುಮಗುವಾಗಲಿ, ಅವಳನ್ನು ಬಹಳ ಮುದ್ದಾಗಿ ಸಾಕೋಣ ಎಂದೆಲ್ಲ ಹಗಲು ರಾತ್ರಿ ಎನ್ನದೆ ಮಾತನಾಡತೊಡಗಿದರು. ಶೇಟಿ ಮಾಸ್ತರೂ ಅವರ ಪತ್ನಿಯೂ ಸೊಸೆಯನ್ನು ಆದಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು.
ಇವರ ಪ್ರೀತಿಯನ್ನು ಕಂಡು ಆ ಮಗುವಿಗೂ ಬೇಗ ಮಡಿಲು ಸೇರಬೇಕು ಎನಿಸಿತೋ ಏನೋ, ಮೂರೇ ತಿಂಗಳಿಗೇ ಜಾರಿ ಅದರಮ್ಮನ ಕೈ ಸೇರಿತ್ತು. ಅಘಾತದಿಂದ ಸ್ವಾತಿ ಎರಡು ದಿನ ಮಾತನ್ನೇ ನಿಲ್ಲಿಸಿದ್ದಳು. ಯಾರೇಷ್ಟೇ ಮಾತನಾಡಿಸಿದರೂ ಕಣ್ಣೀರು ಮಾತ್ರವೇ ಉತ್ತರವಾಗಿತ್ತು.ತನ್ನ ನೋವನ್ನು ನುಂಗಿ, ಸಹದೇವ ಹೆಂಡತಿಯ ಸಮಾಧಾನಕ್ಕೆ ನಿಂತಿದ್ದ.
ತಿಂಗಳುಗಳು ಕಳೆದು ವರುಷ ಉರುಳಿದರೂ ಸ್ವಾತಿ ಮೊದಲಿಗಿಂತ ಮೌನವಾಗಿರುತ್ತಿದ್ದಳು. ಮಗು ಎಂದರೆ ಹೆದರಿ ಮೂಲೆ ಸೇರುತ್ತಿದ್ದಳು. ಯಾರೇಷ್ಟೇ ಧೈರ್ಯ ಹೇಳಿದರೂ ಮತ್ತೆ ಮಗುವಿಗೆ ಮನಸೊಪ್ಪುತ್ತಿರಲಿಲ್ಲ.
ಮತ್ತೊಂದು ವರ್ಷದ ನಂತರ ಸ್ವಾತಿ ಮತ್ತೊಮ್ಮೆ ಬಸುರಿಯಾದಳು. ಮತ್ತದೇ ಖುಷಿ ನಗುವಿದ್ದರೂ ಎಲ್ಲರಲ್ಲೂ ಅವ್ಯಕ್ತ ಅಳುಕು ಮನೆಮಾಡಿತ್ತು. ಕೆಲವು ಹರಕೆಗಳಾದವು, ಹಲವು ಚಿಕಿತ್ಸೆಗಳಾದವು. ಮೊದಲಿಗಿಂತ ಹೆಚ್ಚಿನ ಪ್ರೀತಿಯಲ್ಲಿ ಸ್ವಾತಿ ಮುಳುಗಿದ್ದಳು.
ಅಂತೂ ಎಲ್ಲರ ಆಶಯದಂತೆ ಯಾವ ತೊಂದರೆಯೂ ಇಲ್ಲದೆ ಮಗು ಹುಟ್ಟಿತು. ಸ್ವಲ್ಪ ತಡವಾಗಿಯಾದರೂ, ಸಹದೇವನ ಕನಸಿನಂತೆ ಹೆಣ್ಣುಮಗುವೇ. ಬಲು ಮುದ್ದಾಗಿ ಗುಂಡಗೆ ಬೆಣ್ಣೆ ಮುಡ್ಡೆಯಂತಿದ್ದ ಆ ಮಗುವನ್ನು ಮನೆಗೆ ಬಂದವರೆಲ್ಲ ಮುದ್ದಾಡುತ್ತಿದ್ದರು. 'ಭೂಮಿ' ಎಂದು ಹೆಸರಿಟ್ಟ ಸಹದೇವ, ಅವನ ಭೂಮಿಯೇ ಅವಳು ಎಂದು! ಅಂಗಡಿಗಿಂತ ಹೆಚ್ಚು ಸಮಯ ಮನೆಯಲ್ಲೇ ಕಳೆಯತೊಡಗಿದ್ದ. ಅಂಗಡಿಗೆ ಹೋದರೂ ದಿನಕ್ಕೆ ಇಪ್ಪತ್ತು ಸಲ ಫೋನ್ ಮಾಡಿ ಮಗಳ ಬಗ್ಗೆ ವಿಚಾರಿಸುತ್ತಿದ್ದ.
ಸಮಸ್ಯೆ ಶುರುವಾಗಿದ್ದು ಮಗುವಿಗೆ ಎರಡು ತಿಂಗಳಿದ್ದಾಗ..
ಈಗ ತಾನೇ ಮಲಗಿದೆ ಎಂದರೆ ಕಿಟಾರನೆ ಕಿರುಚುತ್ತಿತ್ತು. ಉಸಿರು ಕಟ್ಟುವಂತೆ ಮುಖವ ಕೆಂಪಗೆ ಮಾಡಿಕೊಂಡು ಅಳುತ್ತಿತ್ತು. ನೋಡಿದವರ ಕಣ್ಣಲ್ಲೂ ನೀರು ತುಂಬುವಷ್ಟು ಜೋರಾಗಿರುತ್ತಿತ್ತು ಅದರ ಅಳು.
ಮೊದಲೆಲ್ಲ ಶಿಶುವ ಅಳು ಎಂದು ಅಷ್ಟು ಗಮನ ಕೊಡದಿದ್ದರೂ ಕೊನೆಕೊನೆಗೆ ತಾರಕಕ್ಕೇರುತ್ತಿದ್ದ ಅದರ ಅಳು ಭಯ ಹುಟ್ಟಿಸುತ್ತಿತ್ತು. ಮಗುವನ್ನೆತ್ತಿ ನೋಡಿದರೆ ಕೆಂಪಾಗಿ ಸೊಳ್ಳೆ ಕಚ್ಚಿದಂತೆ ಸಣ್ಣ ಗುಳ್ಳೆಯೋ, ಚುಚ್ಚಿದಂತೆ ಗಾಯವೋ ಕಾಣಿಸುತ್ತಿತ್ತು. ಹಾಸಿಗೆ ಬದಲಾಯಿಸಿದರೂ, ಬಟ್ಟೆ ಬದಲಾಯಿಸಿದರೂ, ಸಮಸ್ಯೆ ಬಗೆಹರಿಯಲಿಲ್ಲ. ಕೆಲವೊಮ್ಮೆ ಹಾಸಿಗೆಯಡಿಯಲ್ಲಿ ಸಣ್ಣ ಬಳೆಯ ಚೂರುಗಳು ಸಿಗುತ್ತಿದ್ದವು.
ಬಾಲಗೃಹ ಎಂದು ತಾಯತ ಕಟ್ಟಿದರೂ, ಹೋಮ ಮಾಡಿಸಿದರೂ ಮಗುವಿನ ಅಳು ನಿಲ್ಲುತ್ತಿಲ್ಲ. ಜ್ಯೋತಿಷಿ ಕಡಿಮೆಯಾಗುತ್ತದೆ ಎಂದರೂ ಹೇಗೆ ಯಾವಾಗ ಎಂದೇನೂ ಹೇಳಲಿಲ್ಲ.ಡಾಕ್ಟರ್ ಬಳಿ ಹೋದರೆ ಗಾಯಕ್ಕೆ ಔಷಧಿ ಕೊಟ್ಟರೇ ವಿನಃ ಸಮಸ್ಯೆಯ ಮೂಲ ಹುಡುಕಲಿಲ್ಲ. "ಮಕ್ಳು ಹಿಂಗೇ ಅಡ್ತವೆ. ಹೆದ್ರಕೋಬಾರ್ದು" ಎಂದರು.
ಈಗ ಮಗುವಿಗೆ ನಾಲ್ಕು ತಿಂಗಳು. ಇಷ್ಟು ದಿನಗಳಲ್ಲಿ ಒಂದು ದಿನವೂ ಈ ಸಮಸ್ಯೆ ಇಲ್ಲದಿಲ್ಲ. ಹಾಗಾಗಿಯೇ ದಿನದಿನಕ್ಕೂ ಮಗಳ ಪರಿಸ್ಥಿತಿ ನೋಡಿ ಸಹದೇವ ಕೊರಗಿದ್ದ. ಈ ಮಗುವೂ ಉಳಿಯದಿದ್ದರೆ ಎಂಬ ಭಯ ಅವನಲ್ಲಿ ಕಾಡುತ್ತಿತ್ತು. ಹಾಗಾಗಿ ಮೌನಕ್ಕೆ ಶರಣಾಗಿದ್ದ.
ಇವೆಲ್ಲವನ್ನೂ ಕರ್ನಾಳ ಮಾಸ್ತರಿಂದ ಕೇಳಿದ ಗೋವಿಂದ ಎರಡು ನಿಮಿಷ ಸುಮ್ಮನೆ ಕುಳಿತ. ನಂತರ "ನೀವೇನು ಬ್ಯಾಸರ ಮಾಡ್ಕಳದಿಲ್ಲ ಅಂದ್ರೆ ನಾ ಏನೋ ಹೇಳ್ತೆ ಕೇಳ್ತ್ರ.."
"ಹೇಳಿ ಗೋವಿಂದಣ್ಣ.. ಎಲ್ಲ ಮಾಡಿದ್ದಾಯ್ತು. ನೀವೂ ಹೇಳಿ ಕೇಳಾಣ."
"ಶಿಮೊಗ್ಗ ಹತ್ರೆ ಒಂದು ಡಾಕ್ಟ್ರು ಅವ್ರೆ. ಅವ್ರ್ನ ಒಂದ್ಸಲ ಭೇಟಿ ಮಾಡ್ರಿ. ಮಗಾ ಮಾತ್ರ ಅಲ್ಲಾ.ನೀವು ಸ್ವಾತಮ್ಮನೂ ಹೋಗ್ಬೇಕಾಯ್ತದೆ.ನೀವು ಹೂ ಅಂದ್ರೆ ನಾ ಎಲ್ಲ ವ್ಯವಸ್ಥೆ ಮಾಡ್ತೆ"
"ಸರಿ ಗೋವಿಂದಣ್ಣ.."
ಎರಡು ದಿನಗಳ ನಂತರ ಕರ್ನಾಳರು ಹೆಂಡತಿ ಮಗುವನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಬಂದಿಳಿದರು.
                                  ***
ಹಕ್ಕಲಕಣ್ಣಿಯ ಗೋವಿಂದ ಹೇಳಿದಂತೆ ಶಿವಮೊಗ್ಗದಲ್ಲಿ ದಂಪತಿಗಳು ಮಕ್ಕಳ ತಜ್ಞರನ್ನು ಭೇಟಿಯಾದರು. ಮಗುವಿನ ಸಮಸ್ಯೆ ಏನೆಂದು ತಿಳಿಯದಿದ್ದರೂ ಔಷಧಿ ಮಾತ್ರವೇ ಸಿಕ್ಕಿತು. ಅನ್ಯಮನಸ್ಕನಾಗಿದ್ದ ಕರ್ನಾಳರ ಬಳಿ ವೈದ್ಯರು ಮಾತನಾಡಿದರು.
"ನಿಮ್ಮ ಸಮಸ್ಯೆಯ ಮೂಲ ಮಗುವಿನಲ್ಲಿ ಇಲ್ಲವೇ ಇಲ್ಲ. ಒಮ್ಮೆ ನಾ ಹೇಳುವ ಡಾಕ್ಟರನ್ನ ಭೇಟಿಯಾಗಿ" ಎಂದು ವಿಳಾಸ ಕೊಟ್ಟರು.
ಹೇಗೂ ಬಂದಿದ್ದೇವೆ, ಅವರನ್ನೂ ಭೇಟಿಯಾಗಿಯೇ ಹೋಗೋಣ ಎಂದು ನಿರ್ಧರಿಸಿ ಹೋದಾಗ ಭೇಟಿಯಾಗಿದ್ದು ಮನೋವೈದ್ಯರು.
ಮೊದಲು ಕರ್ನಾಳರು ಅವರನ್ನು ಭೇಟಿಯಾಗಿ ಮಗುವಿನ ನಿರಂತರ ಅಳುವನ್ನೂ ಅದರ ಹಿಂದಿನ ತನ್ನ ಅನುಮಾನಗಳನ್ನೂ ಬಹಿರಂಗಪಡಿಸಿದರು.
ನಂತರ ಸ್ವಾತಿಯ ಬಳಿ ಆಪ್ತ ಸಮಾಲೋಚನೆ ನಡೆಸಿದಾಗ ವಿಷಯ ಖಚಿತವಾಗಿತ್ತು.
ಆ ನಂತರ ಗಂಡ - ಹೆಂಡತಿ ಇಬ್ಬರನ್ನೂ ಕೂರಿಸಿಕೊಂಡು ಡಾಕ್ಟರ್ ಮಾತನಾಡಿದರು.
"ನೋಡಿ ನೀವು ಮಗುವಿಗೆ ಏನೂ ಔಷಧಿ ಮಾಡುವ ಅವಶ್ಯಕತೆ ಇಲ್ಲ. ಸಮಸ್ಯೆಯ ಮೂಲವೇ ಸಿಕ್ಕಿದೆ. ನೀವು ಮಾಡಬೇಕಿರುವುದಿಷ್ಟೇ. ಸ್ವಾತಿಯವರನ್ನು ಮೊದಲು ಹೇಗೆ ಎಲ್ಲರೂ ಪ್ರೀತಿಸುತ್ತಿದ್ದಿರೋ, ಹಾಗೆಯೇ ಪ್ರೀತಿಸಿ."
"ನಾವೆಲ್ಲರೂ ಅವಳನ್ನ ಭಾಳ ಪ್ರೀತಿಸ್ತೇವೆ ಸಾರ್.."
"ಹಾಗಲ್ಲ.. ಸಂಪೂರ್ಣವಾಗಿ ನನ್ನ ಮಾತನ್ನು ಕೇಳಿ.."
ಸ್ವಾತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಡೆದಿದ್ದನ್ನೆಲ್ಲ ಡಾಕ್ಟರ್ ವಿವರಿಸುತ್ತಿದ್ದರು.
ಸ್ವಾತಿ ಅಪೂರ್ವ ಪ್ರೀತಿಯಲ್ಲಿ ಬೆಳೆದವಳು.ಗಂಡನ ಮನೆಯಲ್ಲೂ ಅದೇ ಪ್ರೀತಿಯನ್ನು ಪಡೆದಳು. ಮೊದಲ ಮಗುವಿನ ಗರ್ಭಪಾತದ ಸಮಯದಲ್ಲಿ ಅವಳು ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲಳಾಗಿದ್ದಳು. ಈ ಮಗು ಹುಟ್ಟುವ ಸಂದರ್ಭದಲ್ಲಿಯೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಳು. ಎಲ್ಲರ ಪ್ರೀತಿ ಅವಳ ನೋವನ್ನು ಮರೆಸಿತ್ತು.
ಮಗು ಹುಟ್ಟಿದ ಕೆಲವು ದಿನ ಎಲ್ಲವೂ ಸರಿಯಾಗಿಯೇ ಇದ್ದವು. ಆದರೆ ಸ್ವಾತಿ ಮಂಕಾಗಿರುತ್ತಿದ್ದಳು. ಊಟ ನಿದ್ದೆ ಎಲ್ಲವೂ ಕಡಿಮೆಯಾಗಿತ್ತು. ನಿಧಾನವಾಗಿ ಸರಿ ಹೋಗುತ್ತದೆ ಎಂದುಕೊಂಡಾಗ ಮಗುವ ಅಳು ಜೋರಾಗಿತ್ತು.
ಸ್ವಾತಿಯ ಪ್ರಕಾರ ಮಗು ಹುಟ್ಟಿದಮೇಲೆ ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಮಗುವನ್ನು ಎಲ್ಲರೂ ಬಹಳ ಪ್ರೀತಿಸುತ್ತಾರೆ. ಅವಳು ಬರುವ ಮೊದಲು ತಾನು ಮಾತ್ರವೇ ಈ ಮನೆಯ ಮಗಳಾಗಿದ್ದೆ. ಈಗ ತನಗೊಂದು ಪ್ರತಿಸ್ಪರ್ಧಿ! ಈ ಎಲ್ಲ ಯೋಚನೆಗಳಿಂದ ಮಗುವಿನ ಮೇಲೆ ಕುಪಿತಾಳಗಿ ಮಲಗಿದ್ದಾಗ ಚಿವುಟುತ್ತಿದ್ದಳು. ಅತ್ತರೆ ಜೋರಾಗಿಯೇ ಏಟು ಹಾಕುತ್ತಿದ್ದಳು. ಮಗುವಿನ ಹಾಸಿಗೆಯಡಿ ಒಡೆದ ಬಳೆ ಚೂರುಗಳನ್ನಿಡುತ್ತಿದ್ದಳು. ಮಗುವು ಮಲಗಿದಾಗಲೇ ಗಾಯಗೊಂಡು ಅಳುತ್ತಿತ್ತು. ಈ ಎಲ್ಲ ಕಾರಣಗಳು ತಾಯಿಯ ಮೇಲೆ ಪ್ರಭಾವ ಬೀರಲು ಮೂಲ ಕಾರಣ ಮಗು ಹುಟ್ಟಿದ ನಂತರ ಮನೆಯಲ್ಲಾದ ಬದಲಾವಣೆ! ಎಲ್ಲರ ಲಕ್ಷ್ಯವೂ ಒಮ್ಮೆಲೇ ಮಗುವಿನೆಡೆ ಕೇಂದ್ರೀಕೃತವಾಯ್ತು. ಸ್ವಾತಿ ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ, ಇದಕ್ಕೆ ಕಾರಣ ಮಗುವೇ ಎಂದುಕೊಂಡು ಇಷ್ಟೆಲ್ಲಾ ಮಾಡಿದ್ದಳು. ಮೊದಲಿನಂತೆ ಸ್ವಾತಿಯನ್ನೂ ನೋಡಿಕೊಳ್ಳಿ ಎಲ್ಲವೂ ಸರಿಹೋಗುತ್ತದೆ ಎಂದರು ವೈದ್ಯರು.
ಈಗ ಎರಡು ತಿಂಗಳಿಂದ ಮಗುವ ಅಳು ಕಡಿಮೆಯಾಗಿದೆ. ಯಾವುದೇ ತಾಯತ ಬೇಕಿಲ್ಲ, ಜ್ಯೋತಿಷಿ ಬೇಕಿಲ್ಲ, ಔಷಧಿಯ ಅವಶ್ಯಕತೆಯೂ ಇಲ್ಲ.

                            ***
-ಪಲ್ಲವಿ

2 comments:

  1. ವೈದ್ಯಕೀಯ ಭಾಷೆಯಲ್ಲಿ Late Onset Postpartum psychosis ಎಂದು ಕರೆಯುವ ವಿಷಯದ ಹಂದರವನ್ನಿಟ್ಟುಕೊಂಡು ಬರೆದ ಕಥೆ ಆಪ್ತವಾಗಿದೆ.

    ReplyDelete

ಕರಗುವೆ...