Friday, July 31, 2020

ವ್ಯಾನಿಟಿ ಬ್ಯಾಗು..


( ವ್ಯಾನಿಟಿ ಬ್ಯಾಗ್, ಪರ್ಸ್ ಗಳ ಮೇಲೆ ಬಹಳ ಹುಚ್ಚು !! ಆ ಸಂಗ್ರಹ ನೋಡಿದರೆ ಈಗ ನನಗೇ ಆಶ್ಚರ್ಯ ! ಒಂದು ಲಗೇಜ್ ಬ್ಯಾಗ್ ಬೇಕಾಗಬಹುದೇನೋ.. ಈ ಪರ್ಸ್, ಬ್ಯಾಗ್ ಗಳನ್ನು ತುಂಬಲು....ಈ ಸಾಲುಗಳು ಆ ವ್ಯಾನಿಟಿ ಬ್ಯಾಗುಗಳಿಗೇ ಅರ್ಪಣೆ !! )

ಹೆಣ್ಣಿನ ಮನ ಗೆಲ್ಲಲು ಗಂಡು ಸೋಲಬಹುದು.. 
ವ್ಯಾನಿಟಿ ಬ್ಯಾಗಲ್ಲ.. 
ಅಂಗಡಿ ಅರಮನೆಯ ಹೊಕ್ಕರೆ ಸಾಕು.. 
ನನ್ನದೇ ಸ್ವಯಂವರವೆಂಬ ಭಾವ.. 
ಸುರಸುಂದರ, ಮನಮೋಹನ, ಅಸ್ಥಿ ಪಂಜರ, 
ದೈತ್ಯದೇಹಿ, ಸಿಕ್ಸ್ ಪ್ಯಾಕ್ ಶೂರ...
ಎಣ್ಣೆ ಹಚ್ಚಿ ಕ್ರಾಪ್ ತೆಗೆದು ಬಾಚಿದ ಫಸ್ಟ್ ಬೆಂಚ್ನವ.. 
ಎಷ್ಟು ಎಂದು ನೋಡಲಿ ನಾನೂ.. 
ಅಷ್ಟು ವೆರೈಟಿ ವ್ಯಾನಿಟಿ ಬ್ಯಾಗುಗಳು.. 

ಚೌಕ, ಅರ್ಧ ಚಂದ್ರ, ಶಂಕು, ದೋಣಿಯಾಕಾರ...
ಕಪ್ಪು, ಬಿಳಿ, ಕೆಂಪು, ನೀಲಿ.. ಝರಿ,ಚುಕ್ಕೆ,ಪಟ್ಟೆ..
ಅಬ್ಬಬ್ಬಾ.. ಯಾವುದ ಆರಿಸಲಿ.. 
ಎಲ್ಲವೂ ಮನ ಗೆದ್ದವೇ... 
ಅಂಗೈಲಿ ಹಿಡಿವುದೇ, ಹೆಗಲಿಗೆ ನೇತಾಡಿಸುವುದೇ.. 
ಮೊಣಕಾಲವರೆಗೆ ಜೋತಾಡುವುದೇ.. ಕಂಕುಳಲಿ  ಅಂಟುವುದೇ?.. 
ಸಣ್ಣ ದಾರವೇ, ದಪ್ಪದ್ದೇ?  ಜಿಪ್ ಇರಲೊ, ಬಟನ್ ಇರಲೊ?.. 
ನಾಯಿಯ ಚೈನ್ ಇರುವ ಬ್ಯಾಗ್ ಇರಲೋ?.. 
ಮೊಬೈಲ್ ಹಾಕುವಷ್ಟು ಸಣ್ಣದೂ ಸಾಕು, 
ಬಟ್ಟೆ ಹಿಡಿಯುವಷ್ಟು ದೊಡ್ಡದೂ ಬೇಕು.. 

ಅಮ್ಮನ ವ್ಯಾನಿಟಿ ಬ್ಯಾಗ್ ನೋಡಿ, ನನಗೊಂದು 
ಬೇಕೆಂದು ಜಾತ್ರೆಯಲಿ ರಚ್ಚೆ ಹಿಡಿದು,
ಅಪ್ಪನ ಕಾಸಿಗೆ ಕತ್ತರಿ ಹಾಕಿ, ನನ್ನ ಕಾಸು ತುಂಬಲು ತೆಗೆದುಕೊಂಡ ಪುಟ್ಟ ಹೂವಿನ ವ್ಯಾನಿಟಿ ಬ್ಯಾಗ್..
ನನ್ನ ಲವ್ ಎಟ್ ಫಸ್ಟ್ ಸೈಟು... 

ಏನಿದೆ ಏನಿಲ್ಲ..?? ಅದೊಂದು ಪುಟ್ಟ ಪ್ರಪಂಚ !
ಹೂವು-ಹೂವಿನ ಕರ್ಚಿಪು, ಹಣೆ ಬೊಟ್ಟು, ಬಾಚಣಿಗೆ  
ಕ್ಲಿಪ್ಪು, ಕಾಡಿಗೆ, ತುಟಿಯ ಕೆಂಪು, ಪೌಡರ್ ಡಬ್ಬಿ... 
ಜೊತೆಯಲ್ಲೊಂದು ಪೆನ್ನು, ಪೇಪರು, 
ನಾಲ್ಕು ವಾರ ಹಿಂದಿನ, ಮುದ್ದೆಯಾದ ಬಸ್ ಚೀಟಿ ! ಹರಿದ ಸರದ ಮಣಿಗಳು !
ಕಂಡೂ ಕಾಣದಂತೆ ಅಡಗಿ ಕುಳಿತ
 ಎಮರ್ಜೆನ್ಸಿ ಪ್ಯಾಡ್ !!
ಈಗೀಗ ಮೊಬೈಲು, ಅದರೊಡನೆ ಕಿವಿಗೆ ಹಾಕುವ ದಾರ.. ಬ್ಯಾಗಿನೊಳಗೊಂದು ಪರ್ಸು.. 
ಕೆಲವೊಮ್ಮೆ ತಿಂಡಿ ಡಬ್ಬಿಯೂ, ನೀರು ಬಾಟಲಿಯೂ ತೂರಿಕೊಂಡು ಕುಳಿತುಬಿಡುತ್ತವೆ... 

ಹೆಣ್ಮಕ್ಳ ವ್ಯಾನಿಟಿ ಬ್ಯಾಗ್ನಲ್ಲಿ ಏನಿದೆ 
ಎಂದು ಕದ್ದು ನೋಡಿದವನೊಬ್ಬ.. 
ಕೃಷ್ಣನ ಬಾಯಲ್ಲಿ ಬ್ರಹ್ಮಾಂಡ ಕಂಡ ಯಶೋದೆಯಂತೆ 
ದಿಗ್ಭ್ರಾಂತನಾದನಂತೆ !!

-ಪಲ್ಲವಿ 









ಮತ್ತೆ ಕಾಡಿದ ಮಳೆಯ ನೆನಪು - 4


ಸುಲೋಚನೆಯ ಮನಸ್ಸು ಆಲೋಚನೆಯಲ್ಲಿ ಮುಳುಗಿತ್ತು. 
ನೀಲಕೂಟ ಬಿಟ್ಟು ಬೇರೆ ಯಾವುದಾದರು ಊರನ್ನು ನೋಡಿದ್ದರೆ ಅದು ತನ್ನ ಅಜ್ಜಿಮನೆ ಮಾತ್ರ..! ವರುಷಕ್ಕೊಮ್ಮೆ ದೀಪಾವಳಿಗೆ ಮಾವ ಕರೆದಾಗ ಎಲ್ಲರೂ ಹೋಗುವುದು, ಬೀರನ ಗಾಡಿಯಲ್ಲಿಯೇ. ಒಂದು ದಿನ ಉಳಿದು, ಅಪ್ಪ ಮತ್ತು ಬೀರ ಹಿಂದಿರುಗುತ್ತಾರೆ. ನಾವೆಲ್ಲ ನಾಲ್ಕಾರು ದಿನ ಉಳಿದು ಕೇರಿಯ ಮಕ್ಕಳೊಡನೆ ಆಡಿ, ಕುಣಿದು, ಹೊಳೆ-ಬೆಟ್ಟ ಎಂದು ಸುತ್ತುತ್ತೇವೆ. ಕೊನೆಗೆ ಮಾವ ಎತ್ತಿನಗಾಡಿಯಲ್ಲಿ ನಮ್ಮನ್ನು ಊರಿಗೆ ಕಳುಹಿಸುತ್ತಾರೆ. ಮತ್ತೆ ಹೋಗೋದು ಮರುವರ್ಷವೇ !!
ಆದರೆ ಹಿಂದಿನ ದೀಪಾವಳಿಗೆ ಹೋಗಿಯೇ ಇಲ್ಲ, ಶಿವು ಚಿಕ್ಕವನು ಎಂದು. ಈ ಬಾರಿಯೂ ಏನು ಕತೆಯೋ..!!
"ಯೇ ಬೀರಾ, ಗುಂಡಿ ಹಾರಿಸ್ಬೇಡ.. ಶಿವೂ ಮೊದಲ್ನೇ ಸಲ ಗಾಡಿ ಹತ್ತಿರೋದು.. ವಾಂತಿ ಆದ್ರೆ ಕಷ್ಟ..!!"
ಯೋಚನೆಯಿಂದ ವಾಸ್ತವಕ್ಕೆ ಮರಳಿದಳು ಸುಲೋಚನಾ. ಅವಳ ಮಡಿಲ ಮೇಲಿದ್ದ ಶಿವೂ ತನ್ನ ಮುಂದಿರುವ ಚೀಲಗಳನ್ನೆಲ್ಲ ಎಳೆದಾಡಲು ಪ್ರಯತ್ನಿಸುತ್ತಿದ್ದ. 
"ಸುಮ್ನೆ ಕೂತ್ಕೋ ಶಿವೂ.." ಮೆಲ್ಲನೆ ಗದರಿದಳು. 
ಒಮ್ಮೆ ಅವಳ ಮುಖ ನೋಡಿ, ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.  
ಊರ ದಾಟಿ ಬಹಳ ಸಮಯವಾಗಿತ್ತು. ಇಷ್ಟರಲ್ಲಿಯೇ ನಯನಾ ನಾಲ್ಕು ಬಾರಿ ಕೇಳಿದ್ದಳು.. "ಪಟ್ನ ಇನ್ನೂ ಎಷ್ಟು ದೂರ?.. "
ಅಂತೂ ಬೀರ ಪಟ್ಟಣಕ್ಕೆ ಬರುತ್ತಿದ್ದಂತೆ "ಅಲ್ನೋಡು.. ಸೈಕಲ್ಲು... ಅಲ್ನೋಡು ದೊಡ್ಡ ಗಾಡಿ.." ಎನ್ನಲು ಪ್ರಾರಂಭಿಸಿದ್ದಳು. ನೀಲಕೂಟದಷ್ಟೇ ದೊಡ್ಡ ಊರಾದರೂ, ಬಸ್ಸು ಬರುತ್ತದೆ ಎಂಬ ಕಾರಣಕ್ಕೆ ಹತ್ತು ಅಂಗಡಿಗಳು ಜಾಸ್ತಿ ಇದ್ದವು. ಆ ಕಾರಣಕ್ಕಾಗಿ ಅದೊಂದು ಪಟ್ಟಣ ಎನಿಸಿಕೊಳ್ಳುತಿತ್ತು!
ಬೀರ ಗಾಡಿಯನ್ನು ಸೇಠು ಅಂಗಡಿಯ ಎದುರು ನಿಲ್ಲಿಸಿದ್ದೇ ದೊಡ್ಡ ತಪ್ಪಾಯ್ತು...!
"ಅಪ್ಪಾ, ಅಲ್ಲಿ ಶುಂಠಿ ಪೆಪ್ಪರ್ಮೆಂಟು, ಜೀರ್ಗೆ ಪೆಪ್ಪರ್ಮೆಂಟು ಎಲ್ಲ ಇದೆ. ನಡಿ, ಹೋಗೋಣ.. ನಂಗೆ ಕೊಡ್ಸು.." ಎಂದು ಒಂದೇ ಸಮನೆ ರಾಗ ಎಳೆದಳು. 
"ನಿನಗೆ ಮೊದ್ಲೇ ಹೇಳಿಲ್ವ.. ಏನೂ ಕೇಳ್ಬಾರ್ದು ಅಂತಾ.. ಹೀಗೇ ಹಠ ಮಾಡ್ತಿದ್ರೆ ನಾವಷ್ಟೇ ಹೋಗ್ತಿವಿ ನೋಡು, ನೀನು ಬೀರನ ಜೊತೆಗೆ ವಾಪಾಸ್ ಹೋಗ್ಬಿಡು.."
"ಅಪ್ಪಾ, ನೀ ಹೇಳಿದ್ದು ಜಾತ್ರೇಲಿ ಏನೂ ಕೇಳ್ಬೇಡ ಅಂತಾ.. ಇಲ್ಲಲ್ಲ.. ನಂಗೆ ಪೆಪ್ಪರ್ಮೆಂಟು ಬೇಕೇ ಬೇಕು.."
"ಲೋ ಬೀರ.. ನಿಂಗೆ ನಿಲ್ಸೋಕೆ ಬೇರೆ ಜಾಗಾನೇ ಸಿಕ್ಕಿಲ್ವೇನೋ.. ನೋಡಿಲ್ಲಿ ಹೆಂಗೆ ಹಠ ಮಾಡ್ತಾಳೆ ಅಂತ.."
"ಏನಪ್ಪೋರೆ.. ದಿನಾ ಕೇಳ್ತಯ್ತಾ.. ಒಂದಪ ಕೊಡ್ಸುಬುಡಿ.. ನಮ್ಮನೆ ಹುಡ್ರಿಗೂ ತಗ ಬತ್ತೀನಿ.." ಎನ್ನುತ್ತಾ ನಡೆದ. 
"ನೋಡಪ್ಪ.. ಬೀರನೂ ಅವ್ನ ಮಕ್ಳಿಗೆ ಕೊಡಿಸ್ತಾನೆ.."
"ಅವ್ನು ಈ ಬಾರ್ಕೋಲಲ್ಲಿ ಅವ್ನ ಮಕ್ಳು ಹಠ ಮಾಡ್ದಾಗೆಲ್ಲ ಹೊಡೀತಾನೆ...ನಿನಗೆ ಹೊಡ್ದಿದೀನಾ ನಾನು? "
"ಅಪ್ಪ ನಾ ಒಂದು ಹೇಳಿದ್ರೆ, ನೀ ಮತ್ತೊಂದು ಹೇಳ್ತೀಯಾ.."
"ಅಲ್ವೇ.. ಸಣ್ಣಕ್ಕಿ ತರೋಕೆ ಬಂದಾಗೆಲ್ಲ ತಂದು ಕೊಟ್ಟಿಲ್ವಾ.. ಈಗೇನು ಬೀದಿ ಬದಿ ರಂಪಾಟ ನಿಂದು.. ಸುಲೋಚ್ನ, ಶಿವು ಇಬ್ರೂ ಸುಮ್ನೆ ಇಲ್ವಾ.."
"ಅವ್ರಿಗೆಲ್ಲ ಕೊಡಿಸ್ಬೇಡ.. ನಂಗೆ ಮಾತ್ರ ಕೊಡ್ಸು.."
"ಎಷ್ಟು ಅಂತ ಹೇಳ್ತೀರಾ.. ನಾಲ್ಕು ಪೆಪ್ಪರ್ಮೆಂಟು ತರ್ಬಾರ್ದಾ.." ಮಧ್ಯ ಯಶೋದಮ್ಮ ಹೇಳಿದಳು. 
"ನೀನು ಅವರ ಪರವಾಗಿ ಇರ್ತೀಯಾ ಅಂತಾನೆ ಹಂಗೆ ಆಡೋದು ಅವ್ರು.. ದಾರೀಲಿ ಕೇಳಿದ್ದೆಲ್ಲ ಕೊಡ್ಸೋಕೆ ಆಗತ್ತಾ..ತರ್ತೀನಿ ಇರು ಮಾರಾಯ್ತಿ.."
ಗೊಣಗುತ್ತ ಹೋಗಿ ಒಂದಷ್ಟು ಪೆಪ್ಪರ್ಮೆಂಟ್ ತಂದ ದೇವಪ್ಪ. "ನೋಡು, ದಾರಿ ಮಧ್ಯ ಇನ್ನೆಲ್ಲೂ, ಏನೂ ಸಿಗಲ್ಲ. ಈಗ್ಲೇ ತಿಂದು ಖಾಲಿ ಮಾಡ್ಕೊಂಡು ಮತ್ತೆ ರಾಗ ಎಳ್ದ್ರೆ ನೋಡು..."
"ಹೂ.. ಸರಿ ಸರಿ.." ಎನ್ನುತ್ತಾ ಬಾಯಿಗಿಟ್ಟಳು. 
"ನಮ್ಮ ಅಂಗಡಿಲಿ ಯಾಕೆ ಏನೂ ಇಡಲ್ಲ ಅಂತ ಕೇಳ್ತಿದ್ಯಲ್ಲ.. ಇದಕ್ಕೆ.. ಏನಾದ್ರು ಪೆಪ್ಪರ್ಮೆಂಟ್ ಎಲ್ಲ ತಂದ್ರೆ, ಇವಳೇ ತಿಂದು ಖಾಲಿ ಮಾಡ್ತಾಳೆ ನೋಡು.."
"ನೋಡಿದ್ಯಾ ಅಕ್ಕಾ, ಅಪ್ಪಂಗೆ ನನ್ನ ಕಂಡ್ರೆ ಭಯ..!" ಪಿಸುಗುಟ್ಟಿದಳು ನಯನಾ. 
ಅರ್ಧಗಂಟೆಯೊಳಗೆ ಬಸ್ಸು ಬಂತು. ಮುದುಕಿಯೊಬ್ಬಳು ಕೋಲೂರುತ್ತಾ ಬಂದಂತೆ, ಹೆಜ್ಜೆಯ ಮೇಲೊಂದು ಹೆಜ್ಜೆಯಿಡುತ್ತ ಬರುತ್ತಿತ್ತು. ಡ್ರೈವರಪ್ಪ ಇಪ್ಪತ್ತು ಮಾರು ಹಿಂದೆಯೇ ಬ್ರೇಕ್ ಹಾಕಿದ ಕಾರಣ ಕೀಮ್ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಾ, ಇವರಿಗಿಂತ ಐದು ಮಾರು ಮುಂದೆ ಹೋಗಿ ನಿಂತಿತ್ತು..!!
ಬೀರ ಧಡಧಡನೆ ಎಲ್ಲ ಚೀಲಗಳನ್ನು ಹತ್ತಿಸಿದ. ಮಡಿ ಬಟ್ಟೆ, ತೆಂಗಿನ ಕಾಯಿ,  ದೀಪದ ಎಣ್ಣೆ ಎಲ್ಲ ತುಂಬಿದ್ದ ಹರಕೆಯ ಚೀಲ ಮಾತ್ರ ಯಶೋದಮ್ಮನ ಕೈಲಿತ್ತು. ಎಲ್ಲರೂ ಹತ್ತಿ ಕುಳಿತರು. ಅಕ್ಕ ತಂಗಿಯರು ಕಿಟಕಿಯ ಜಾಗ ನನಗೆ - ನನಗೆ ಎಂದು ಮೊದಲು ವಾದ ಮಾಡಿಕೊಂಡರೂ ನಂತರ ಅದು ಯಶೋದಮ್ಮನ ಪಾಲಾಯ್ತು..!
ನಿಧಾನವಾಗಿ ಬಸ್ಸು ಬುಸ್ ಎನ್ನುತ್ತಾ ಮುಂದೆ ಸಾಗಿತು. ಹೆಚ್ಚು ಕಡಿಮೆ ಎರಡು ತಾಸಿನ ಪ್ರಯಾಣ ! ರಸ್ತೆಯೋ.. ಆಹಾ.. ಶಿವನೇ ಮೆಚ್ಚಬೇಕು. ಶಿವಪುರಕ್ಕೆ ಹೋಗುತ್ತದೋ, ಸೀದಾ ಕೈಲಾಸಕ್ಕೆ ಕರೆದೊಯ್ಯುವ ಹಾದಿಯೋ..!!
ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಊರು ದಾಟಿ, ಕಾಡು ಪ್ರಾರಂಭವಾಗಿತ್ತು. ದಟ್ಟ ಕಾಡು..ಸೂರ್ಯ ಕಷ್ಟಪಟ್ಟು ನೆಲವ ನೋಡಬೇಕಷ್ಟೆ !
ಆ ದಟ್ಟಾರಣ್ಯದಲ್ಲಿ ಒಬ್ಬನೇ ಮನುಷ್ಯ ಸಂಚರಿಸುವುದು ಅತೀ ವಿರಳ. ಒಂದೋ ಎತ್ತಿನಗಾಡಿ ಹೋಗಬೇಕು, ಇಲ್ಲವೇ ಬಸ್ಸು! ಅಲ್ಲೊಂದು ಮಣ್ಣ ರಸ್ತೆ ಬಿಟ್ಟು ಇನ್ನೆಲ್ಲಿಯೂ ಹಾದಿ ಕಾಣುವುದೇ ಇಲ್ಲ. ಪಟ್ಟಣದಿಂದ ಶಿವಪುರಕ್ಕೆ ಹೋಗಲು ಇದೊಂದೇ ಮಾರ್ಗ. ಮಧ್ಯೆ ಮತ್ಯಾವುದೇ ಊರಿಲ್ಲ. ಮಳೆಗಾಲದಲ್ಲಂತೂ ಶಿವಪುರ ಬೇರೆಲ್ಲ ಊರುಗಳೊಡನೆ ತನ್ನ ಸಂಪರ್ಕ ಕಡಿದುಕೊಳ್ಳುತ್ತದೆ. ಕೇವಲ ಇದೊಂದೇ ಊರಿಗಾಗಿ ಬಸ್ಸು ಯಾಕೆ ಬರಬೇಕು?  ಅದರಲ್ಲೂ ಮಳೆಗಾಲದಲ್ಲಿ ಶ್ವೇತನದಿ ದಾಟುವ ಹುಂಬ ಧೈರ್ಯವನ್ನು ಪರವೂರಿನ ಯಾವೊಬ್ಬನೂ ಮಾಡುವುದಿಲ್ಲ. 
ಇನ್ನೂ ಮಧ್ಯಾಹ್ನವಾಗದಿದ್ದರೂ, ದಟ್ಟಕತ್ತಲು ಆವರಿಸಿತ್ತು. ದೇವಪ್ಪ, ಯಶೋದಮ್ಮ, ನಯನಾ ಎಲ್ಲರೂ ನಿದ್ದೆ ಮಾಡುತ್ತಿದ್ದರು. 
ಅವರನ್ನೆಲ್ಲ ನೋಡಿ ಸುಲೋಚನೆ ಮುಗುಳ್ನಕ್ಕಳು. 
"ಎಲ್ಲರಿಗೂ ಒಳ್ಳೆ ತೊಟ್ಲಲ್ಲಿ ಮಲಗ್ಸಿ ತೂಗ್ತಾ ಇರೋ ಹಂಗೆ ಅನ್ನಿಸ್ತಾ ಇದ್ಯೇನೋ.. ಎಲ್ಲರೂ ಮಲಗಿಬಿಟ್ರು.. ಈ ನಯ್ನಾ ದೊಡ್ಡದಾಗಿ ಹೇಳ್ತಿದ್ಲು.. ಮೊದಲ್ನೇ ಸಲ ಬಸ್ಸಿಗೆ ಹೋಗೋದು ಮಜವಾಗಿರತ್ತೆ ಅಂತ.. ಈಗ ನೋಡಿದ್ರೆ ಬಾಯಿ ಕಳ್ಕೊಂಡು ಜೊಲ್ಲು ಹರಿಸ್ತಾ ಮಲ್ಗಿದಾಳೆ.. ಅಮ್ಮ ಹೇಳೋದು ಸುಳ್ಳಲ್ಲ.. ಕುಂಭಕರ್ಣನ ತಂಗಿನೇ ಇವ್ಳು...!"
ಅವಳ ಯೋಚನೆಯಿಂದ ಹೊರತರಲು ಬಸ್ಸು ಎಡಕ್ಕೆ ವಾಲಿತು. "ಈ ಡೈವರಪ್ಪ ಏನು ಬಸ್ಸು ಬಿಡ್ತಾನಪ್ಪ.. ಸೊಂಟ ಎಲ್ಲ ನೋವು ಬಂತು..." ಎಂದು ಗೊಣಗುತ್ತ ಹೊರಗೆ ನೋಡಿದಳು. 
ದೈತ್ಯಾಕಾರದ ಮರಗಳನ್ನೆಲ್ಲ ಹಿಂದೆ ಹಾಕಿ, ಬಸ್ಸು ಕಾಡಿನ ಮೌನವನ್ನು ಸೀಳುತ್ತ ಮುಂದೆ ಸಾಗುತ್ತಿತ್ತು. ಕೆಲವು ಮರಗಳು ಬಸ್ಸಿನ ಒಳಗೆ ಇಣುಕಿ ಎಷ್ಟು ಜನರಿದ್ದಾರೆ ಎಂದು ತಪಾಸಣೆ ಮಾಡುತ್ತಿದ್ದವು! 
ಹಿಂದೆ ಸರಿಯುವ ಮರಗಳನ್ನು ನೋಡುತ್ತಾ ಕುಳಿತಳು ಸುಲೋಚನಾ.. 
"ಅಬ್ಬಾ.. ಎಂಥ ಮರಗಳು ಇಲ್ಲಿ.. ನಮ್ಮ ಊರಲ್ಲಿರೋ ಮರಗಳಿಗಿಂತ ಭಾಳ ದೊಡ್ಡದಾಗಿವೆ.ಒಂದೊಂದು ಎಲೆಯೂ ಅಪ್ಪನ ಎರಡೂ ಅಂಗೈ ಸೇರಿಸಿದಷ್ಟು ದೊಡ್ಡ ! ಎರಡು ಜನ ಸೇರಿ ಒಂದು ಮರ ತಬ್ಬಿದರೂ, ಕೈ ಜೋಡಿಸೋಕೆ ಅಗಲ್ವೇನೋ..ರಾತ್ರಿ ಎಲ್ಲ ನೋಡಿದ್ರೆ ರಾಕ್ಷಸ ಅಂತ ಹೆದ್ರೋದೇ ಮತ್ತೆ..."
ಬೆಳಿಗ್ಗೆ ಬೇಗ ಎದ್ದ ಕಾರಣವೋ ಏನೋ, ಅವಳೂ ತೂಕಡಿಸತೊಡಗಿದಳು. 
ಎಷ್ಟೋ ಹೊತ್ತಿನ ನಂತರ ಡ್ರೈವರಪ್ಪ ಬ್ರೇಕ್ ಹಾಕಿದ ಸದ್ದಿಗೆ ಎಲ್ಲರಿಗೂ ಎಚ್ಚರವಾಯಿತು. 
"ಇಳೀರಿ, ಇಳೀರಿ.. ಇದೇ ಕೊನೆ ಸ್ಟಾಪ್... ಮುಂದೆ ಹೋಗಲ್ಲ.. ಬೇಗ ಬೇಗ ಇಳೀರಿ.." ತಾರಕದಲ್ಲಿ ಕೂಗುತ್ತಿದ್ದ. 
ಬಸ್ಸಿನಲ್ಲಿದ್ದ ಎಂಟ್ಹತ್ತು ಮಂದಿ ಗಡಿಬಿಡಿಯಿಂದ ಇಳಿದರು. 
"ಅಪ್ಪಾ, ಬಸ್ಸು ಕಾಡು ದಾಟಿದಮೇಲೆ, ನದಿ ದಾಟಬೇಕು ಅಂದ್ಯಲ್ಲ.. ಇಲ್ಲಿ ನೋಡಿದ್ರೆ ಏನೂ ಇಲ್ಲ.."
"ನದಿ ದಾಟಬೇಕು ನಯ್ನಾ.. ಇಲ್ಲಿಂದ ಎರ್ಡು ಮೈಲಿ ನಡೀಬೇಕು.. ನೋಡು, ಕಾಲ್ದಾರಿ ಕಾಣ್ತಾ ಇದ್ಯಾ, ಹೀಗೇ ಹೋಗ್ಬೇಕು.."
"ಅಪ್ಪಾ... ಹಸಿವಾಯ್ತು..."
"ಇಲ್ಲೆಲ್ಲೂ ಊಟ ಮಾಡೋ ಹಾಗಿಲ್ಲ. ನದಿಬುಡದಲ್ಲಿ ಮಾಡೋಣ.. ಬೇಗ ಬೇಗ ಹೆಜ್ಜೆ ಹಾಕಿ.." ಎಂದ ದೇವಪ್ಪ. 
"ಇದೇನಪ್ಪಾ.. ಬರೀ ಬೇವಿನಮರವೇ ಇದೆ ಇಲ್ಲಿ..."
"ಅದ್ಕೆ ಇದನ್ನ ಬೇವಿನ ಕಾಡು ಅಂತಾರೆ."
"ನಮ್ಮನೆ ಏನಾದ್ರು ಇಲ್ಲೇ ಇದ್ದಿದ್ರೆ..  ಬೇವಿನಸೊಪ್ಪು ತಂದು ಅಮ್ಮ ಪಾಯ್ಸಕ್ಕೂ ಒಗ್ಗರಣೆ ಹಾಕ್ತಿದ್ಲು..!!"
ಎಲ್ಲರೂ ನಗುತ್ತಾ ಮುಂದೆ ಸಾಗಿದರು. 
"ಎಂಥಾ ಬೇವಿನ ಕಾಡಿದು..ವಯಸ್ಸಾದ ದಪ್ಪನೆ ಬೇವಿನಮರ.. ಅದ್ರ ಎಲೆ ಅಂತೂ ಎಷ್ಟು ಹಸಿರು.. ಇನ್ನು ಆ ಮರದ ಮಕ್ಕಳೆಲ್ಲ ಆಳೆತ್ತರಕ್ಕೆ ಹದವಾದ ಮರವಾಗಿವೆ, ಅವರ ಮಕ್ಳು ಇನ್ನೂ ಬೆಳಿತಾ ಇವೆ.  ಫಳ ಫಳನೆ ಹೊಳೆಯೋ ಚಿಗುರು ಎಲೆ ಅವ್ರದ್ದು... ನೆಲದ ಮೇಲೆ ಇನ್ನೂ ಒಂದೇ ಅಡಿ ಮೇಲೆದ್ದಿರೋ ಪುಟ್ಟ ಪುಟ್ಟ ಗಿಡಗಳು.. ಹೆಜ್ಜೆ ಹೆಜ್ಜೆಗೂ ಕಾಲಿಗೆ ಸಿಗ್ತವೆ.. ಬೇವಿನೆಲೆಯ ಘಮ ಬಿಟ್ರೆ.. ಇನ್ನೇನೂ ಇಲ್ಲ.." ಸುಲೋಚನೆ ಎಂದಿನಂತೆ ತನ್ನೊಳಗೆ ಮಾತನಾಡಿಕೊಳ್ಳುತ್ತಿದ್ದಳು. ಹೊಸದನ್ನು ನೋಡಿದ ತಕ್ಷಣ ತನ್ನನ್ನೇ ತಾನು ಮರೆತು, ಹೊಸದೇ ಆದ ಮಾತಿಗಿಳಿಯುತ್ತದೆ ಅವಳ ಮನಸ್ಸು!!
"ಇಲ್ಲಿ ಮಣ್ಣು ಎಷ್ಟು ಮೆತ್ತಗೆ ಇದೆ ನೋಡ್ರಿ.. ಈಗ ತಾನೇ ಮಳೆ ಬಂದು ಹೋಗಿರೋ ಥರಾ ಹಸಿಯಾಗಿದೆ..."
"ನದಿ ಹತ್ರಾನೇ ಇದ್ಯಲ್ಲೇ.. ಅದ್ಕೆ ಹಾಗೇ.."
"ಅಪ್ಪಾ ನದಿ ಎಷ್ಟು ದೊಡ್ಡ ಇರತ್ತೆ?  ಅಜ್ಜಿ ಮನೆ ಹೊಳೇಲೇ ನಾನು ಮುಳುಗಿ ಹೋಗ್ತೀನಿ.. ಇದು ಅದಕ್ಕಿಂತ ದೊಡ್ಡ ಇರತ್ತಾ? "
"ಅಲ್ಲೇ ಹೋಗ್ತಿದೀವಲ್ಲೇ..ನೀನೆ ನೋಡಬಹುದು..."
ಮಾತನಾಡುತ್ತ ದಾರಿ ಸಾಗಿದ್ದೇ ತಿಳಿಯಲಿಲ್ಲ. ಎಲ್ಲರೂ ನದಿಬುಡಕ್ಕೆ  ಬಂದಿದ್ದರು. 
ಹೊಟ್ಟೆ ಕಾದ ಕಾವಲಿಯಂತೆ ಚುರುಗುಡುತ್ತಿತ್ತು..!
"ಎಲ್ಲ ಕೈ ತೊಳ್ಕೊಂಡು ಬನ್ನಿ.. ನಾನು ಬುತ್ತಿ ಚೀಲ ಬಿಚ್ಚತೀನಿ" ಎಂದು ಯಶೋದಮ್ಮ ಹೇಳಿದಾಗ, ಅಕ್ಕ ತಂಗಿ ನದಿಯತ್ತ ಓಡಿದರು. 
"ಹುಷಾರು ಕಣ್ರೆ.. ಮುಂದೆ ಹೋಗ್ಬೇಡಿ.." ಹಿಂದಿನಿಂದ ದೇವಪ್ಪನ ಧ್ವನಿ ಬಂದಿತ್ತು. 
ಕೈ ತೊಳೆಯುವಾಗ ನದಿಯಲ್ಲಿ ಸಣ್ಣ ಅಲೆ ಕಂಡು, ತಲೆ ಎತ್ತಿದಳು ಸುಲೋಚನಾ. ದೋಣಿಯೊಂದು ಇವರಿದ್ದ ಕಡೆಗೇ ಬರುತ್ತಿತ್ತು. 
ಆಗ ಕಂಡವನು ಅವನು, ಎದೆಯೊಳಗೆ ಅಲೆ ಸೃಷ್ಟಿಸುವವನು...... 







Thursday, July 30, 2020

ಅಘನಾಶಿನಿಯವಳು..


ಕಣ್ಣಿಗೆ ಕಾಣುವಷ್ಟು ದೂರವೂ
ಗಾಢ ಹಸಿರಹೊದ್ದು ಮಲಗಿದ ಧಾರುಣಿ.. 
ಕಣ್ಮುಚ್ಚಿ ತಂಗಾಳಿಗೆ ಮೈಯೊಡ್ಡಿ ಕುಳಿತರೆ.. 
ಆಗಾಗ ಬಂದು ತಲೆ ನೇವರಿಸುವ ಪವನ..
ನೀಲಾಕಾಶದಲಿ ನರ್ತಿಸುವ ಬೆಳ್ಳಿ ಮೋಡ, 
ಅಪ್ಸರೆಯರೂ ನಾಚುವಂತೆ ಮೋಹಕ ಭಂಗಿ ತೋರುವಳು.. 
ಪುಟ್ಟ ಮಗುವಾಗಿ ಧರೆಯ ಒಡಲಲ್ಲಿ ಕುಳಿತಾಗ, 
ನಿನ್ನೊಡನೆ ನಾನಿರುವೆ ಎಂದು ಘಮಿಸಿತು ಒದ್ದೆ ಮಣ್ಣು.. 

ದೂರದಲಿ ಅಂಕು ಡೊಂಕಾಗಿ ಮೌನವ ಭೇದಿಸುತ 
ಭೋರ್ಗರೆಯುವಳು... 
ಗುಡ್ಡ - ಕಣಿವೆಗಳ ಲೆಕ್ಕಿಸದೇ ಧುಮುಕುವ ಚಂಡಿ ಅವಳು.. 
ನಮ್ಮೆಲ್ಲರ ಪಾಪಗಳನು ಕ್ಷಮಿಸುವ
 ಕಾರುಣ್ಯದ ಮೂರ್ತಿಯವಳು.. 
 ಕೋಟಿ ಜೀವರಾಶಿಗಳಿಗೆ ತಂಪೆರೆದು, 
ತೃಪ್ತಿಯಾಗಿಸಿದ, ಮಮತೆಯ ಮಾತೆಯವಳು.. 
ಪಾಪನಾಶಿನಿಯವಳು.. 
ಅಘನಾಶಿನಿಯವಳು... 

-ಪಲ್ಲವಿ 

ಕುರುಹು..


ನೀ ಬಿಟ್ಟು ಹೋದ ಕುರುಹೊಂದು 
ನನ್ನಲ್ಲೇ ಉಳಿದಿದೆ ನಿನ್ನ ನೆನಪಾಗಿ.. 

ಆಗಾಗ ನೇವರಿಸಿ ಮುದ್ದಿಸಿ ಕಣ್ಣಿಗೊತ್ತಿ 
ಕಂಬನಿಯಲಿ ನೆನೆಸುವುದೇ ಕಾಯಕವಾಗಿದೆ ಎನಗೆ... 

ನೀನಿಲ್ಲದ ಮೇಲೆ ಬಾಳೊಂಥರಾ ನಿಂತ ನೀರು.
ಝುಳು ಝುಳು ನಾದವಿಲ್ಲದೆ ಮೌನವೊಂದು ಆವರಿಸಿದೆ.. 

ಕೈಹಿಡಿದು ಕೂರುತ್ತಿದ್ದ ಕಟ್ಟೆ ಒಣಗಿ ಸೊರಗಿದೆ ಒಂಟಿಯಾಗಿ.. 
ಹಸಿರುಗಟ್ಟಿದ ಪಾಚಿ ಚಿತ್ರವೊಂದ ಮೂಡಿಸಿದೆ ನೋಡು ಬಾ.. 

-ಪಲ್ಲವಿ 



Wednesday, July 29, 2020

ಯಾರು ನೀನು..??

ಹಾಯಿದೋಣಿಗೆ ಹುಟ್ಟು ಹಾಕುವ
ರಟ್ಟೆಗೆ ತುಂಬುವ ಬಲ ನೀನು.. 

ಕಣ್ಣ ಕೆಳಗೆ ದಟ್ಟವಾಗಿ ಆವರಿಸಿದ 
ಕಡುಗಪ್ಪು ಕಾಡಿಗೆಯ ಹೊಳಪು ನೀನು.. 

ನಿಶಬ್ದವಾಗಿ ಮಲಗಿದ ಧಾರುಣಿಯ 
ಆವರಿಸಿದ ಗಾಢ ಹಸಿರು ನೀನು..

ಏಕಾಂತವಾಗಿ ಹರಿಯುವ ನದಿಯ 
ಸಂಗಾತಿಯಾಗುವ ತರಂಗ ನೀನು.. 

ನೀನು ಎಂಬ ಎರಡಕ್ಷರ ನೆನಪಾದಾಗಲೆಲ್ಲ 
ತುಟಿಯಂಚಲ್ಲಿ ಅರಳುವ ಮಂದಹಾಸ ನೀನು.. 

ಆದರೂ ಕಾಡುವ ಪ್ರಶ್ನೆಯೊಂದಿದೆ ನನ್ನಲ್ಲಿ.. 
ಯಾರು ನೀನು...?? 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Monday, July 27, 2020

ನಿನ್ನ ಅರಸುತಿವೆ..


ಇತ್ತೀಚಿಗೆ ಮಾತಿಗಿಂತ ಮೌನವೇ ಪ್ರಿಯವಾಗಿದೆ.. 
ಗೆಳೆಯ, ನನ್ನ ಮೌನದಲ್ಲಿ ನಿನ್ನ ದನಿ ಕೇಳುವಾಸೆ.. 

ಬೆಳಕಿಗಿಂತ ಕತ್ತಲು ಆಪ್ತವೆನಿಸಿದೆ.. 
ಗಾಢಾಂಧಕಾರದೊಳು ನೀ ದೀಪ ಉರಿಸಬಹುದೆಂದು.. 

ಸುಡುವ ಸೂರ್ಯನಿಗಿಂತ ತಂಪೆರೆಯುವ ಚಂದ್ರನೇ ಆತ್ಮೀಯ.. 
ತಿಂಗಳ ಬೆಳಕ ರಾತ್ರಿಯಲಿ ಏಕಾಂತ ಸಿಗುವುದಲ್ಲ.. 

ಗೆಳೆಯ, ಸುತ್ತ ಜನ ಜಾತ್ರೆಯೇ ಇರಲಿ.. 
ನನ್ನೆರಡು ಕಂಗಳು ನಿನ್ನನೇ ಅರಸುತವೆ... 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

ನಿರೀಕ್ಷಿತ....

ನಿರೀಕ್ಷಿತ ಪತ್ರವೊಂದು... 
ಅನಿರೀಕ್ಷಿತ ದಿನದಂದು ಕೈ ಸೇರಿದಾಗ.. 
ಖುಷಿ, ಸಂಕಟ ಎಲ್ಲವೂ.. 

ಪ್ರತಿ ಅಕ್ಷರವೂ ನಿನ್ನ ಪ್ರತಿಧ್ವನಿ.. 
ಒಕ್ಕಣೆಯ ತುಂಬೆಲ್ಲ ಪ್ರೀತಿಯ ಜೇನು.. 
ಭಾವಗಳೇ ಅಲಂಕಾರ.. 

ಉಪಸಂಹಾರವಂತೂ ಬೆವರ ಘಮ.. 
ಮುಗುಳ್ನಗೆಯೊಡನೆ ಎರಡು ಹನಿ ಕಣ್ಣೀರು.. 
ಜೊತೆಯಾಗಿ ಘಮಿಸಿದವು.. 

ಮಬ್ಬು ಬೆಳಕೂ ಪ್ರಖರವಾಗಿತ್ತು.. 
ನಿನ್ನ ಸಾನ್ನಿಧ್ಯವ ಬಯಸಿ, ಕಂಡೂ ಕಾಣದಂತೆ, 
ಮಿಂಚುಳವೊಂದು ಮಾಯವಾಯ್ತು..ಮನದೊಳಗೆ.. 

ಮಂಜುಗಡ್ಡೆಯ ಮನಸೂ ಕೂಡ, 
ಪ್ರೀತಿಯ ಬೆಂಕಿಯಲ್ಲಿ ಕರಗಿ ಹರಿದು.. 
ಕಡಲ ಸೇರಲು ಬಯಸುತಿತ್ತು.. 

ಮಳೆಬಿಲ್ಲ ಬಣ್ಣಗಳ ಹೊತ್ತು
ಬಿಳಿಪರಿವಾಳ ಬಂದು ಪತ್ರ ಕೈಗಿಡುವಾಗ.... 
ಇವೆಲ್ಲವೂ ತಿಳಿದಿತ್ತು.. 

ಆದರೂ ಸಖ.. ನಿರೀಕ್ಷಿತ ಪತ್ರವೊಂದು... 
ಅನಿರೀಕ್ಷಿತ ದಿನದಂದು ಕೈ ಸೇರಿದಾಗ.. 
ಭಾವಗಳೆಲ್ಲ ಕಟ್ಟೆಯೊಡೆದವು.. 

-ಪಲ್ಲವಿ 








Sunday, July 26, 2020

ಹೇಗೆ ಸಂತೈಸಲಿ..

ರಚ್ಚೆ ಹಿಡಿದ ಮಗುವಂತಾಗಿದೆ ಮನಸು... 

ಜಾತ್ರೆಯಲಿ ಕಂಡ ಬಣ್ಣದ ಸಿಹಿಯನು, 
ರಾತ್ರಿಯೂ ಕನವರಿಸಿದಂತೆ.. ಸದಾ ನಿನ್ನ ಗುಂಗು.. 

ನಡುರಾತ್ರಿಯಲಿ ಒಂಟಿಯಾಗಿ ಬಿಟ್ಟುಹೋದಾಗ, 
ಭಯದಲ್ಲಿ ಬೆನ್ನಹುರಿಯಿಂದ ಬರುವ ನಡುಕ.. 

ಉತ್ತರ ಸಿಗದ ಪ್ರಶ್ನೆಗಳ ಹುಡುಕಾಟದಲ್ಲಿಯೂ, 
ಮನಸು ನಿನ್ನ ಅರಸಿದೆ... 

ಕಾಡಿದೆ, ಬೇಡಿದೆ, ಮುದ್ದಿಸಿದೆ, 
ಆಲಂಗಿಸಿದೆ.. ರೇಗಿಯೂ ಬಿಟ್ಟೆ.. 

ಉಹೂ.. ನನ್ನ ಮಾತನ್ನೇ ಕೇಳುತ್ತಿಲ್ಲ.. 
ಹಠವ ಹಿಡಿದು, ಬಿಕ್ಕಳಿಸುತ್ತ ಮೂಲೆ ಸೇರಿದೆ.. 

ಹೇಗೆ ಸಂತೈಸಲಿ ಅದನು.. 
ಮುರಿದುದು ಆಟಿಕೆಯಲ್ಲ, ಮನಸ್ಸೆಂದು 
ಹೇಗೆ ಅರ್ಥೈಸಲಿ.. 

-ಪಲ್ಲವಿ 

ವಸುಂಧರೆ ಪ್ರೇಮಿಸಿಹಳು..


ವಸುಂಧರೆ ಪ್ರೇಮಿಸಿಹಳು.. 
ನೀಲ ನಭವ.. 

ಅಚ್ಚಳಿಯದ ಹಸಿರ ಹೊದ್ದ ಧರಿತ್ರಿ, 
ತನ್ನೊಳಗೊಂದು ಆಗಸವ ರಚಿಸಿಹಳು.. 

ಸೃಷ್ಟಿ ಅವಳು.. ಪ್ರೇಮದ, ಕಾಮದ, ಜೀವದ, 
ಬಣ್ಣದ, ಭಾವದ ಸುಮಧುರ ಸೃಷ್ಟಿ ಅವಳು.. 

ಭೂಮಿಕೆಯ ಪ್ರೇಮವ ಬಯಸಿ ಬಂದಿಹನು ಬಾನು.. 
ಮಳೆಯಾಗಿ ಇಳೆಯಲ್ಲಿ ಮಿಲನವಾಗುವ ತವಕವದು.. 

ಪ್ರೇಮಕೆ ಭೂಮ್ಯಾಕಾಶದ ಅಂತರವೆಲ್ಲಿ.. 
ವಸುಂಧರೆ ಪ್ರೇಮಿಸಿಹಳು.. ನೀಲ ನಭವ.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

ಹೆಜ್ಜೆಗೆ ಹೆಜ್ಜೆ...


ನಿನ್ಹೆಜ್ಜೆಯೊಡನೆ ಹೆಜ್ಜೆಯಿಡುವ ಸಂಭ್ರಮವಿದೆಯಲ್ಲಾ.. 
ಮನದೊಳಗೆ ನೂರು ಗೆಜ್ಜೆಗಳು ಝಲ್ ಎಂದಂತೆ.. 

ಹತ್ತುವ ಮೆಟ್ಟಿಲು ಸಾವಿರವಿರಲಿ.. 
ಗೆಳೆಯಾ ನೀ ಜೊತೆಯಿದ್ದರೆ ಅದೇನೋ ಕಸು.. 

ಕಟ್ಟದ ಕೇಶ, ಹಣೆಯ ಮೇಲಿನ ಮುಂಗುರುಳು, 
ನಿನ್ನ ಸ್ಪರ್ಶವ ಬಿಟ್ಟು ಇನ್ನೇನನ್ನು ಬಯಸಲು ಸಾಧ್ಯ.. 

ಕಡುಕಪ್ಪಲ್ಲಿ ನೀನು ಶ್ವೇತಸುಂದರಿ... 
ಎಂದವನೆದುರಲ್ಲಿ ಅವನಿಷ್ಟದಂತೆ ಕಾಣುವಾಸೆ.. 

ಸೆರಗ ತುದಿ ಮುರುಟಿದೆ ಗೆಳೆಯಾ.. 
ನಾಚಿಕೆಯಿಂದ ಬೆರಳ ಸುತ್ತಿ... 

ಕೊನೆಯ ಮೆಟ್ಟಿಲವರೆಗೂ 
ಹೆಜ್ಜೆಗೆ ಹೆಜ್ಜೆಯಾಗುವೆಯಾ.. ಗೆಳೆಯಾ... 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

ಮತ್ತೆ ಕಾಡಿದ ಮಳೆಯ ನೆನಪು - 3

ದೇವಪ್ಪ ಸಿಡಿಮಿಡಿಗೊಂಡಿದ್ದ. ರಾತ್ರಿ ಎಲ್ಲರೂ ಊಟಕ್ಕೆ ಕುಳಿತಾಗ ತುತ್ತನ್ನು ಬಾಯಿಗಿಡುವ ಬದಲು ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡಿದ್ದ. 
"ನಿಂಗೇನು ಸ್ವಲ್ಪಾನೂ ಬುದ್ಧಿ ಇಲ್ವಾ.. ಹರಕೆ ಹೊತ್ತಿರೋಳು ನೀನು. ಈಗ ನೋಡಿದ್ರೆ ಇಡೀ ಸಂಸಾರನೇ ಕರ್ಕೊಂಡು ಹೋಗ್ಬೇಕು ಅಂತಿಯಲ್ಲ. ಅದೇನು ನಮ್ಮೂರ ದೇವಸ್ಥಾನ ಅಂದ್ಕೊಂಡ್ಯಾ? ಇಲ್ಲಿಂದ ಪಟ್ಣಕ್ಕೆ ಹೋಗೋಕೆ ಎಷ್ಟು ಹೊತ್ತು ಬೇಕು.. ಅದೂ ಎತ್ತಿನಗಾಡಿಯವ್ನು ಕಡಿಮೆ ತಗೊಳ್ತಾನಾ? ಅಲ್ಲಿ ಬಸ್ಸು ಇದ್ರೆ ಪುಣ್ಯ. ಇಲ್ಲಾ ಅಂದ್ರೆ ಮತ್ತೆ ಬಂಡಿಯವ್ನಿಗೆ ಹೇಳ್ಬೇಕು.. ನಲವತ್ತು ಮೈಲಿ ಅಂದ್ರೆ ಅವ್ನೂ ಒಪ್ತಾನೋ ಇಲ್ವೋ.. ಅಲ್ಲಿಂದ ಎರಡು ಮೈಲಿ ನಡೀಬೇಕು, ನದಿ ದಾಟಬೇಕು.ದೋಣಿಯವ್ನೇನು ನಿಮ್ಮ ಮಾವಾನಾ? ಈ ಹಬ್ಬದಲ್ಲಿ ಅವ್ರು ಹೇಳಿದ್ದೇ ಕಾಸು.. ನಾವೇ ನಾಲ್ಕು ಜನ, ಬಟ್ಟೆ, ಹರಕೆ ಸಾಮಾನು ಅಂದ್ರೆ ನಮ್ಗೆ ಒಂದು ದೋಣಿ ಬೇಕು.. 
ಅಲ್ಲಿ ಮತ್ತೆ ಮೂರು ದಿನ ಉಳಿಬೇಕು ಅಂತೀಯಾ. ದೊಡ್ಡ ಜಾತ್ರೆ ಆಗತ್ತೆ ಅಲ್ಲಿ. ಹರಕೆ ತೀರಿಸ್ಬೇಕಾ? ಅಥವಾ ಮಕ್ಕಳು ಎಲ್ಲಿ ಅಂತಾ ನೋಡ್ತಾ ಇರ್ಬೇಕಾ? 
ಇದೆಲ್ಲ ಆಗಲ್ಲ.. "
ಇಷ್ಟೆಲ್ಲಾ ಹೇಳುವ ಹೊತ್ತಿಗೆ ಅಕ್ಕ ತಂಗಿಯರಿಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡು ಅಮ್ಮನತ್ತ ನೋಡುತ್ತಿದ್ದರು. 
ಮಕ್ಕಳ ಮನಸ್ಸನ್ನು ಚೆನ್ನಾಗಿಯೇ ಅರಿತಿದ್ದಳು ಯಶೋದೆ. 
"ಹಾಗಲ್ಲ ರೀ, ಅವ್ರಾದ್ರೂ ಪಾಪ.. ಅಜ್ಜಿ ಮನೆಗೆ ಬಿಟ್ಟು ಇನ್ನೆಲ್ಲಿ ಹೋಗಿದಾರೆ? ಮೊದಲ್ನೇ ಸಲ ಆಸೆ ಪಟ್ಟು ಕೇಳ್ತಿದಾರೆ. ಬಸ್ಸು, ದೋಣಿ, ಜಾತ್ರೆ ಅದನ್ನೆಲ್ಲ ನೋಡ್ಬೇಕು ಅಂತಾ ಅವ್ರಿಗೂ ಆಸೆ ಇರಲ್ವಾ.. " ಮೃದುವಾಗಿ ಹೇಳಿದಳು. 
"ಇಷ್ಟು ಹೇಳಿದ್ರೂ ಅರ್ಥ ಆಗ್ತಿಲ್ವಾ ನಿಂಗೆ? ಅಲ್ಲಿ ಮೂರು ದಿನ ಉಳಿಬೇಕು. ವ್ಯವಸ್ಥೆ ಏನಿದ್ಯೋ ಏನೋ.."
"ನೋಡಿ ಎಷ್ಟು ಸಮಸ್ಯೆ ಇದೇ ಅಂತಾ. ನೀವೂ ಸ್ವಲ್ಪ ಯೋಚ್ನೆ ಮಾಡ್ರಿ.. ಬಟ್ಟೆ, ಹರಕೆ ಸಾಮಾನು ಎಲ್ಲಾ ಹಿಡ್ಕೊಂಡು, ಶಿವೂನೂ ಎತ್ಕೊಂಡು ಓಡಾಡೋಕೆ ನನ್ನಿಂದ ಆಗಲ್ಲ. ಎಷ್ಟು ತುಂಟ ಅವ್ನು. ಈಗಂತೂ ಕೈಗೆ ಸಿಗಲ್ಲ, ಓಡ್ತಾನೆ. ಪೂಜೆ ಮಾಡ್ಸೋವಾಗ ಅವನನ್ನ ನೋಡ್ಕೊಳೋಕೆ ಆಗತ್ತಾ?  ಅವನು ಜಾತ್ರೆ ಮಧ್ಯ  ಓಡ್ತಿದ್ರೆ ಹಿಡ್ಕೊಳೋಕೆ ನಮ್ಮಿಬ್ಬರಿಂದಾನೂ ಸಾಧ್ಯ ಇಲ್ಲ. ಅದೇ ಸುಲೋಚ್ನಾ ಇದ್ರೆ ಏನೂ ತೊಂದ್ರೇನೇ ಆಗಲ್ಲ. ಅವಳ ಜೊತೆಗೆ ಆರಾಮಾಗಿ ಇರ್ತಾನೆ. ನಯ್ನಾ ಚಿಕ್ಕ ಪುಟ್ಟ ಸಹಾಯ ಮಾಡ್ತಾಳೆ."
ಗಂಡನ ಕೋಪವನ್ನು ತನ್ನ ತರ್ಕಕ್ಕೆ ಬಳಸಿಕೊಂಡಳು!!
ಈಗ ಹೇಗೆ ತಾನೇ ಬೇಡವೆನ್ನಲು ಸಾಧ್ಯ !
ಮನಸ್ಸಿಲ್ಲದಿದ್ದರೂ ದೇವಪ್ಪ ಸುಲೋಚನೆಯತ್ತ ನೋಡಿ, "ಹೂ.. ಆಯ್ತಲ್ಲ.. ನಿಮ್ಮ ಬಟ್ಟೆಗಳನ್ನೂ ತುಂಬಿಕೊಳ್ಳಿ. ಮೊದ್ಲೇ ಹೇಳ್ತಿದೀನಿ. ನಾವು ಜಾತ್ರೆ ಸುತ್ತೋಕೆ ಹೋಗ್ತಿಲ್ಲ. ಹರಕೆ ತೀರ್ಸೋದು ಮಾತ್ರ. ಅಲ್ಲಿ ಅದು ಕೊಡ್ಸು, ಇದು ಕೊಡ್ಸು ಅಂತಾ ಹೇಳೋಹಾಗಿಲ್ಲ" ಎಂದ. 
ಇಷ್ಟೇ ಸಾಕಿತ್ತು ಅವರಿಬ್ಬರಿಗೆ. ಖುಷಿಯಿಂದ ಕುಣಿಯುತ್ತ ಒಳಗೋಡಿದರು. ಅಮ್ಮ ಬೆಳಿಗ್ಗೆ ನಾಲ್ಕಕ್ಕೆಲ್ಲ ಏಳಲು ಹೇಳಿದರೂ ರಾತ್ರಿಯಿಡೀ ಮಲಗಲೇ ಇಲ್ಲ. ಯಾವ ಲಂಗ ಹಾಕಿಕೊಳ್ಳಬೇಕು, ಎಷ್ಟು ಬಳೆಗಳನ್ನು ತೆಗೆದುಕೊಳ್ಳಬೇಕು, ದಾವಣಿಗೆ ಹೊಂದುವಂಥ ರಿಬ್ಬನ್ ಇಟ್ಕೊಳ್ಳಬೇಕು. ಮೂರು ದಿನ ಹೊಸದೊಂದು ಊರಲ್ಲಿ ಉಳಿಯಬೇಕು, ಜಾತ್ರೆ ಸುತ್ತಬೇಕು ಎಂದರೆ ಹೆಣ್ಣುಮಕ್ಕಳ ಸಮಸ್ಯೆ ಒಂದೇ.. ಎರಡೇ..!!
ಇಬ್ಬರೂ ಸೇರಿ ಒಂದು ಚೀಲಕ್ಕೆ ತಮ್ಮ ಬಟ್ಟೆಗಳನ್ನು ತುಂಬಿಕೊಂಡರು. ಆ ಊರು ಹಾಗಿರಬಹುದು, ಹೀಗಿರಬಹುದು ಎಂಬ ಮಾತುಕತೆ ನಡೆಯುತ್ತಿರುವಾಗಲೇ, ಇವರ ಮಾತನ್ನು ಕದ್ದು ಕೇಳುವಂತೆ, ಕಿಟಕಿಯೊಳಗೆ ಸೂರ್ಯ ಇಣುಕಿದ್ದ..!
ಯಶೋದಮ್ಮ ಗಡಿಬಿಡಿಯಲ್ಲಿ ಓಡಾಡುತ್ತಿದ್ದಳು. ನಯನಾ ಹರಕೆಗೆ ಬೇಕಾದಂತಹ ಸಾಮಗ್ರಿಗಳನ್ನೆಲ್ಲ ಜೋಡಿಸಿ, ಚೀಲಕ್ಕೆ ತುಂಬಿದಳು. ಸುಲೋಚನೆ ಬುತ್ತಿ ತುಂಬುತ್ತಿದ್ದಳು. 
ಮಧ್ಯೆ ತಿನ್ನಲು ಏನೂ ಸಿಗುವುದಿಲ್ಲ. ಪಟ್ಟಣದಲ್ಲಿ ಬಸ್ಸು ಸಿಕ್ಕಿದರೆ, ನದಿ ತೀರದಲ್ಲಿ ಮಧ್ಯಾಹ್ನ ಊಟ ಮಾಡಬಹುದು. ಎತ್ತಿನಗಾಡಿಯಾದರೆ ಕಾಡ ಮಧ್ಯದಲ್ಲಿ ಊಟ ಮಾಡಬೇಕು. ಸರಿಯಾಗಿ ಬುತ್ತಿ ಕಟ್ಟಿಕೊಳ್ಳಿ ಎಂದು ದೇವಪ್ಪ ಮೊದಲೇ ಹೇಳಿದ್ದ. 
ಶಿವೂನ ಎಬ್ಬಿಸಿ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದ್ದಳು ಯಶೋದಮ್ಮ. 
"ಸುಲೋಚ್ನಾ.. ಕೆಲ್ಸ ಎಲ್ಲಾ ಮುಗ್ದ್ರೆ ಸ್ನಾನಕ್ಕೆ ಹೋಗು.. ನೀರು ಬಿಸಿ ಇದೆ.." ಎಂದು ಅಮ್ಮ ಕೂಗಿದರೆ, ಅದೇ ರಾಗದಲ್ಲಿ ಮಗನೂ "ತುಲೋನಾ.. ತಾನ ಮಾದು.. ನೀಲು ಬಿಚಿ...." ಎಂದು ಮುದ್ದಾಗಿ ತೊದಲಿದ. 
ನಗುತ್ತಾ ಹೋದಳು ಸುಲೋಚನೆ. 
ದೇವಪ್ಪ ಮಾಧವನಿಗೆ ಅಂಗಡಿಯೆಡೆಗೂ ನೋಡಿಕೊಳ್ಳಲು ತಿಳಿಸುತ್ತಿದ್ದ. 
"ಲೇ, ಇವಳೇ.. ಎಷ್ಟು ಹೊತ್ತು ಮಾಡ್ತೀರೇ.. ಅದ್ಕೆ ಹೇಳ್ದೆ, ಈ ಅಕ್ಕ ತಂಗಿರಂತೂ ಕನ್ನಡಿ ಬಿಡೋ ಹಾಗೇ ಕಾಣ್ತಿಲ್ಲ. ನಿಮ್ಮನ್ನ ನೋಡೋಕೆ ಯಾರೂ ಬರಲ್ಲ ಅಲ್ಲಿ.. ಸಾಕು ಬನ್ನಿರೇ.. ಪಟ್ಟಣದಲ್ಲಿ ಬಸ್ಸು ತಪ್ಪಿಹೋದ್ರೆ ಮಾತ್ರ, ಶಿವಪುರಕ್ಕೆ ಹೋಗೋದು ಮಧ್ಯ ರಾತ್ರಿ ಆಗತ್ತೆ.. ಇವಳೇ.. ಕೇಳಿಸ್ತೋ ಇಲ್ವೋ.. ನನ್ನ ಪಂಚೆನೂ ಹಾಕಿದೀಯ ಚೀಲಕ್ಕೆ? "
"ನಿಮ್ಮಪ್ಪ ಆರು ತಿಂಗಳಿಗೇ ಹುಟ್ಟಿರಬೇಕು.. ಬಂದ್ವಿ ಅಂತಾ ಹೇಳು ಹೋಗು. ಅವ್ರ ಚೀಲಕ್ಕೇ ಬಟ್ಟೆ ತುಂಬುತ್ತ ಇರೋದು. ಒಂದು ಕೆಲಸ ಮಾಡ್ಕೊಳಲ್ಲ. ಅಂಗಳಕ್ಕೆ ಹೋಗಿ ನಿಂತು, ಇಡೀ ಊರಿಗೇ ಕೇಳೋ ಥರ ಕೂಗೋದು ನೋಡು.."
ಹೊರಡುವಾಗಲೂ ಇಬ್ಬರ ವಾದವನ್ನು ನೋಡುತ್ತಾ ಓಡಿದಳು ನಯನಾ. 
"ಅಂತೂ ಎಲ್ರೂ ಬಂದ್ರಾ.. ಇವತ್ತೇ ಹೊರಡ್ತೀವೋ ಇಲ್ವೋ ಅಂತಾ ಅನುಮಾನ ಆಗ್ಬಿಟ್ಟಿತ್ತು ನಂಗೆ. ಬನ್ನಿ ಬನ್ನಿ.. ಹೊತ್ತಾಯ್ತು...ಬೀರ ಆಗ್ಲೇ ಬಂದು ನಿಂತಿದಾನೆ. ನಿಮ್ಮಿಂದ್ಲೇ ತಡ ಆಗಿದ್ದು. ಹತ್ತಿ, ಹತ್ತಿ.. ಗಾಡಿ ಹತ್ತಿ.. "
ಬೀರ ತನ್ನ ದೈತ್ಯಾಕಾರದ ಎತ್ತುಗಳನ್ನು ಗಾಡಿಗೆ ಕಟ್ಟಿಕೊಂಡು ಬಂದು ನಿಂತಿದ್ದ. 
ಮೊದಲು ನಯನಾ ಹತ್ತಿಕುಳಿತಳು. ಮಾಧವ ಕೆಳಗಿನಿಂದ ಚೀಲಗಳನ್ನೆಲ್ಲ ಅವಳ ಕೈಗೆ ಕೊಟ್ಟ. 
"ಏನಪ್ಪೋರೆ, ಇನ್ನೊಂದು ಗಾಡಿ ಬೇಕಾಯ್ತದಾ? ಮೂರ್ದಿನಕ್ಕೆ ಊರ್ಬಿಟೊಗಹಂಗೆ ಚೀಲ ತಗಂಡಿರಿ..."
ಬೀರ ರಾಗ ಎಳೆದ. ದೇವಪ್ಪ ಯಶೋದಮ್ಮಳೆಡೆಗೆ ಕೋಪದಿಂದ ನೋಡಿದ. 
"ಸುಮ್ನಿರು ಬೀರಾ.. ಹರಕೆ ತೀರ್ಸಕೆ ಹೋಗದು..ಕಾಯಿ ಎಲ್ಲಾ ಇದೆ. ಜೊತೆಗೆ ಮಕ್ಳ ಬಟ್ಟೆ, ಬುತ್ತಿ.. ಎಲ್ಲಾ ಸೇರಿ ಇಷ್ಟಾಯ್ತು. ಏನು ನಿನ್ನ ಕಾಲ್ಮೇಲೆ ಇಟ್ವಾ? ಸುಮ್ನೆ ಇರೋಕಾಗೋದೇ ಇಲ್ಲ ಆಲ್ವಾ ನಿಂಗೆ? "
ಗಂಡನ ಮೇಲಿನ ಕೋಪಕ್ಕೆ ಬೀರ ಬಲಿಯಾದ..!
ಸುಲೋಚನಾ ಹತ್ತಿ ಕುಳಿತು, ಶಿವೂನ ಎತ್ತಿಕೊಂಡಳು. ಅವಳ ಹಿಂದೆ ಯಶೋದಮ್ಮ, ಕೊನೆಯಲ್ಲಿ ದೇವಪ್ಪ ಕಾಲು ಇಳಿಬಿಟ್ಟು ಕುಳಿತ. 
"ಅಣ್ಣಾ ನೀ ಇಲ್ಲಿದೇನು ಚಿಂತೆ ಮಾಡ್ಬೇಡ. ನಾ ಎಲ್ಲನೂ ನೋಡ್ಕೊಳ್ತೀನಿ. ಆರಾಮಾಗಿ ಹೋಗ್ಬನ್ನಿ." ಎನ್ನುವಷ್ಟರಲ್ಲಿ.. 
"ಮಾಧ್ವಾ.. ಎರ್ಡು ದಿನಕ್ಕೆ ಆಗೋ ಅಷ್ಟು ರೊಟ್ಟಿ ಮಾಡಿಟ್ಟಿದೀನಿ. ಆಚೆ ಮನೆ ಸರೋಜಕ್ಕ ನಿಂಗೆ ಅಡ್ಗೆ ಮಾಡ್ಕೊಡ್ತೀನಿ ಅಂದಿದಾಳೆ. ಮನೆ ಕಡೆ ಹುಷಾರು. ಮಧ್ಯರಾತ್ರಿವರೆಗೂ ಗದ್ದೆಲೇ ಇರ್ಬೇಡ. ಬೇಗ ಮನೆಗೆ ಬಂದ್ಬಿಡು.. ಗದ್ದೆಗೆ ಹೋಗುವಾಗ ಚಿಲ್ಕ ಹಾಕ್ಕೊಂಡು ಹೋಗು.."
"ಆಯ್ತು ಅತ್ಗೆ..."
"ನೀ ಸುಮ್ನಿರೇ.. ಮೂರ್ದಿನ ಗದ್ದೆಗೆ ಹೋಗ್ದೆ ಇದ್ರೆ ಅಲ್ಲೇನು ಕೊಳ್ತು ಹೋಗಲ್ಲ. ಅಂಗಡಿಗೆ ಹೋಗು ಮಾಧ್ವಾ.."
"ಹೂ.. ಆಯ್ತಣ್ಣ.."
"ಏನಪ್ಪೋರೆ... ಹೊರಡಲಾ.." 
"ಮುಹೂರ್ತ ಕೇಳ್ಬೇಕೆನೋ ಬೀರ, ಹೊರಡು ಹೊರಡು.."
ಮಾಧವ ಮುಂದೆ ಬಂದ. 
"ನಯನಾ, ಜಾತ್ರೇಲಿ ಹಠ ಮಾಡ್ಬೇಡ. ಅಮ್ಮನ ಜೊತೇನೆ ಇರು. ಸುಲೋಚ್ನಾ.. ಶಿವು ಜೋಪಾನ..."
"ಹೂ ಚಿಕ್ಕಪ್ಪ..."
"ಬೀರ ನಿಧಾನವಾಗಿ ಹೋಗು, ಬಸ್ಸಿಗೆ ಚೀಲನೆಲ್ಲ ಹತ್ತಿಸಿಕೊಡು..ಬಸ್ಸು ತಪ್ಪಿ ಹೋದ್ರೆ, ಅವರನ್ನೆಲ್ಲ ಬೇವಿನಕಾಡು ದಾಟಿಸಿ ಬಿಟ್ಟು ಬರೋದು ನಿನ್ನ ಜವಾಬ್ದಾರಿ.."
"ಏನಪ್ಪೋರೆ.. ನೀವಿದನ್ನ ನಂಗೆ ಹೇಳ್ಬೇಕಾ?  ಬಿಟ್ಟು ಬತ್ತಿನ್ರಾ.."
"ಹೊಯ್.. ಹೊಯ್.." ಗಾಡಿ ನಿಧಾನವಾಗಿ ಸಾಗಿತು.. 
ಕಾಣುವವರೆಗೂ ಮಾಧವ ನಿಂತು ನೋಡುತ್ತಿದ್ದ. 
ಇದೇ ಕೊನೆಯಬಾರಿಗೆ ಎಂಬಂತೆ ಸುಲೋಚನಾ ಮಾಧವನತ್ತ ಕೈ ಬೀಸಿದಳು.... 
ಗಾಡಿ ಕೊನೆಯ ಮನೆಯ ತಿರುವಿನಲ್ಲಿ ಮುಂದೆ ಸಾಗಿತು... 



Saturday, July 25, 2020

ನಿನ್ನ ನೆನಪಿಸಿದೆ..


ಈ ನವಿರಲಿ ನಿನ್ನ ಸ್ಪರ್ಶ.. 
ಈ ಕಣ್ಣಲಿ ನಿನ್ನ ನೋಟ.. 
ಬಣ್ಣಗಳಲಿ ನಿನ್ನ ಪ್ರೀತಿ... 

ಏನು ಹೇಳಲಿ ನಾನು.. 
ಗರಿಯ ಪ್ರತಿ ಎಳೆಯು, 
ನಿನ್ನ ನೆನಪಿಸಿದೆ.. 

ಗರಿಯಿದ್ದಲ್ಲಿ ನಿನ್ನ ಅಂಗೈ ಇರಲಿ...
ಬರುವೆಯಾ.. 
ಗರಿಯಾಗಿ.. ಒಲುಮೆಯ ಸಿರಿಯಾಗಿ.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Friday, July 24, 2020

ಯಾವುದೀ ಹಾದಿಯು...


ಯಾವುದೀ ಹಾದಿಯು.. 
ಓಡುವ ಚಂದಿರನತ್ತ ಸಾಗುತಿಹುದು.. 

ನಭಕೆ ನಕ್ಷೆಯ ಹಾಕಿ, 
ಚುಕ್ಕಿಯ ಕೈಲಿ ಹಿಡಿದು, 
ಶಶಿಯೊಡನೆ ಹರಟುವ ಕನಸು ಹೊತ್ತವಳಿಗೆ.. 
ಈ ಹಾದಿ ಕಾಣಲೇ ಇಲ್ಲ..!

ಜಗದ ಧ್ವನಿಯ ತೊರೆದು, 
ಜಂಜಡಗಳಿಂದ ದೂರ ಉಳಿದು, 
ತನ್ನದೇ ಲೋಕದಲ್ಲಿ ತೇಲುತಿರುವವಳಿಗೆ.. 
ಚುಕ್ಕಿ ಚಂದ್ರಮನೇ ಗೆಳೆಯರಲ್ಲ.. 

ಮೋಹದ ಶಶಿ, 
ಲೋಕಕೆ ತಂಪೆರೆದು;ಅವಳ ಬಿಸಿ ಹೆಚ್ಚಿಸಿ, 
ಮಾಯವಾಗುವಾಗ ಅವಳ ದುಗುಡಗಳಿಗೆ.. 
ಮಿತಿ ಎಂಬುದೇ ಇಲ್ಲ.. 

ಮತ್ತದೇ ತಳಮಳ, ಕಾತುರ, 
ಕಾಣದ ಹಾದಿಯಲಿ, ಮಬ್ಬು ತಿಂಗಳ ಬೆಳಕಲಿ, 
ಮೋಡಗಳ ಹಿಂದೆ ಮರೆಯಾದ ಚಂದಿರಗೆ.. 
ಅವಳಂತರಾಳ ಅರಿವಾಗಲೇ ಇಲ್ಲ..  

ಕಾಯುತಿಹಳು ಅವಳು, 
ಬಾಗಿಲ ಮರೆಯಲಿ ನಿಂತು.. 
ಹೇಳಬಲ್ಲಿರಾ? ಯಾವುದೀ ಹಾದಿಯು.. 
ಓಡುವ ಚಂದಿರನತ್ತ ಸಾಗುತಿಹುದು.. 


Thursday, July 23, 2020

ಹಬ್ಬಿದ ಲತೆಯ ನೋಡುತ್ತಾ..

ವೈಯಾರದಿಂದ ಲತೆ ಹಬ್ಬಿದೆ ನೋಡು.. 
ಅಗಲದೆದೆಯ ವೃಕ್ಷವ ತಬ್ಬಿಕೊಂಡು.. 

ಲತೆಗೆ ವೃಕ್ಷ ಆಧಾರವಾಗಿ, 
ವೃಕ್ಷಕೆ ಲತೆ ರಕ್ಷಣೆಯಾಗಿ... 
ಆವರಿಸುತಿದೆ ನೋಡು... 

ಗಗನದತ್ತ ಮುಖಮಾಡಿ ಮುನಿಸಿಕೊಂಡ ಸಖನ 
ಶಾಂತವಾಗಿಸಲು... 
ಲತೆಯೂ ಮೇಲೇರುತಿದೆ ನೋಡು.. 

ನಾಚಿ ತಲೆಕೆಳಗಾದ ಚಿಗುರ..
ಕೈ ಹಿಡಿದು ಮೇಲೆತ್ತಿದೆ ಕೊಂಬೆಯೊಂದು.. 

ಮೊಗ್ಗೊಂದು ಅರಳುತಿದೆ ಅಲ್ಲಿ.. 
ಕಂಡೂ ಕಾಣದಂತೆ ಎಲೆಯ ಮರೆಯಲ್ಲಿ.. 

ಅರ್ಧಕೇ ನಿಂತಿತಲ್ಲ ಕವನ... 
ಪೂರ್ಣವಾಗಲು ಅರಳಿದ ಹೂವು ಕಾಣಬೇಕು.. 
ಅದರ ಸುಗಂಧ ಹರಡಬೇಕು.. 
ಅಲ್ಲೊಂದು ಕಾಯಿ ಮಾಗಿ ಹಣ್ಣಾಗಬೇಕು.. 
ಅಲ್ಲಿಯವೆರೆಗೂ ಕಾಯಲೇಬೇಕು.. 
 ಹಬ್ಬಿದ ಲತೆಯ ನೋಡುತ್ತಾ... 
 

ನಿನಗಾಗಿ..


ಕೊಡುವುದಾದರೆ ಕೊಟ್ಟುಬಿಡು.. 
ಇನ್ನಷ್ಟು ಕಾಡಿಸಬೇಡ..
 
ಹುಚ್ಚೆಬ್ಬಿಸುವ ಗರಿಯದು.. 
ಮನವೂ ನವಿಲಂತೆ ನರ್ತಿಸುವುದು..

ಗರಿಯ ನವಿರೊಡನೆ ನಿನ್ನ 
ಒರಟು ಬೆರಳುಗಳೂ ಸೋಕಲಿ ಎನ್ನ.. 

ಕೈಚಾಚಿರುವೆ ನೋಡಿಲ್ಲಿ.. 
ಕೊಟ್ಟುಬಿಡು ಗೆಳೆಯ ಗರಿಯ.. 

ಇನ್ನಷ್ಟು ಕಾಡಿಸಬೇಡ.. 
ಆಸೆ ಕಂಗಳಲಿ ಕಾದಿರುವೆ.. 
ಗರಿಗಾಗಿ.. ನಿನಗಾಗಿ.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Wednesday, July 22, 2020

ಜೋಗ.. ಕನಸುಗಳ ಆಗರ..


ಜೋಗ.. ಕನಸುಗಳ ಆಗರ..
ಪ್ರತಿ ಮಳೆಗಾಲದಲ್ಲಿಯೂ ಜೋಗಕ್ಕೊಂದು ಭೇಟಿ ಇದ್ದೇ ಇರುತ್ತದೆ. ಪ್ರತಿ ಭೇಟಿಯೂ ಅವಿಸ್ಮರಣೀಯ.
ಒಮ್ಮೆ ಧಾರೆ ಕಾಣದು. ಮತ್ತೊಮ್ಮೆ ದಾರಿಯೇ ಕಾಣದು. ಒಮ್ಮೊಮ್ಮೆ ನೀರ ರಭಸಕ್ಕೆ ಮಾತು ಕೆಳದು...

ಹಸಿರು ಕಾನನಗಳ ಮಧ್ಯೆ ಅಂಕು ಡೊಂಕಾಗಿ ವೈಯಾರದಿಂದ ಹರಿದು ಬರುವ ಶರಾವತಿ ರೌದ್ರ ರೂಪ ತಾಳಿ ಅಷ್ಟೆತ್ತರದಿಂದ ಧುಮುಕುವಾಗ ಎದೆ ಝಲ್ ಎನ್ನದಿರದು.. ಅವಳು ಧ್ವನಿಯಲ್ಲಿ ಅದೆಷ್ಟು ಶಕ್ತಿಯಿದೆ..
ಕಿಲೋಮೀಟರ್ ದೂರದಿಂದಲೂ ಅವಳ ಧ್ವನಿಯನ್ನು ಕೇಳಬಹುದು.
ಅದೆಷ್ಟು ಹೊಳೆಗಳು ಅವಳಲ್ಲಿ ಲೀನವಾಗುವುದೋ,ಎಷ್ಟು   ಮಲಿನಗಳನ್ನು ಸಹಿಸಿಕೊಂಡು ಜೀವಜಲವಾಗಿದ್ದಳೋ...!!  ಅದೆಷ್ಟು ಕಾಡು ಮೇಡುಗಳನ್ನಲೆದು, ಗುಡ್ಡ ಬೆಟ್ಟವ ದಾಟಿ, ಬಂಡೆಗಳಿಗೆ ಧೈರ್ಯದಿಂದ ಎದೆಯೊಡ್ಡಿ ಮುನ್ನುಗ್ಗುತ್ತಿರುವಳು.. 
ಅಲ್ಲೆಲ್ಲೋ ಕಟ್ಟೆ ಕಟ್ಟಿ, ಮತ್ತೆಲ್ಲೋ ಶರಾವತಿ ತನ್ನನ್ನು ಮುಳುಗಿಸಿದಳು ಎಂಬ ಮನುಷ್ಯನಿಗೆ ಶರಾವತಿಯ ಅಂತರಾಳದ ದನಿ ಕೇಳಿಸಲೇ ಇಲ್ಲ..!

ಜೋರು ಮಳೆಗಾಲದಲ್ಲಿ ಶರಾವತಿ ತನ್ನ ಬಿಳುಪನ್ನು ಕಳೆದುಕೊಳ್ಳುತ್ತಾಳೆ. ಆದರೆ ಹೊಳಪನ್ನಲ್ಲ..
ಧಾರೆಗಳೆಲ್ಲ ರಣಗೆಂಪು...!
ರಾಜ, ರಾಣಿ, ರೋರರ್, ರಾಕೆಟ್ಗಳು ತಮ್ಮ ಮಕ್ಕಳು, ಮರಿಮಕ್ಕಳನ್ನು ಪರಿಚಯಿಸುತ್ತವೆ. ಆ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು..

ರಸ್ತೆಯ ಎರಡೂ ಬದಿಯಲ್ಲಿ ದಟ್ಟ ಹಸಿರು ಸ್ವಾಗತಿಸುತ್ತದೆ.ಒದ್ದೆ ನೆಲ, ಟಪ್ ಟಪ್ ಎಂದು ಬೀಳುವ ಹನಿ, ಉಪ್ಪು ಖಾರದ ಸೌತೆಕಾಯಿ, ಬಿಸಿ ಬಿಸಿಯಾದ ಜೋಳದ ಘಮ...ಆಸೆಯ ಹುಟ್ಟಿಸಲು ಇಷ್ಟು ಸಾಕು !! ಪ್ಲಾಸ್ಟಿಕ್ ಸೂರಿನಡಿ ನಿಂತು, ಮಳೆಗೆ ಭುಜವೊಡ್ಡಿ ನಿಂತ ಅಜ್ಜಿ ಜೋಳಕ್ಕೆ ಖಾರ ಹಚ್ಚುವಾಗ, ಪ್ರೀತಿಯಿಂದ ಸಿಹಿಯಾಗಿ ಮಾತನಾಡಿದಾಗ ಆಪ್ತವೆನಿಸುತ್ತಾಳೆ.

ಮಳೆ ಜೋರಾಗಿ ಸುರಿಯುತ್ತಿದ್ದರೆ ಎಲ್ಲರೂ ಓಡಿ ಹೋಗಿ ಒಂದೇ ಸೂರಿನಡಿ ನಿಂತಾಗ.. ಪರಿಚಯವಿಲ್ಲದ ಮುದ್ದು ಮಗುವೊಂದು ಮುಗುಳ್ನಗುತ್ತದೆ. ಮತ್ತೊಬ್ಬರು ಅಲ್ಲೇ ಪರಿಚಯವಾಗಿ, 'ನಮ್ಮ ಊರಿಗೂ ಬನ್ನಿ' ಎಂದು ಆತ್ಮೀಯವಾಗಿ ಸ್ವಾಗತಿಸುತ್ತಾರೆ.
ಅಲ್ಲೊಬ್ಬ ಹುಡುಗ, ಮತ್ಯಾರೋ ಹುಡುಗಿ ಕಣ್ಣಲ್ಲೇ ಮಾತನಾಡುವುದ ಕಂಡು ಮನದಲ್ಲೇ ನಕ್ಕಿರುತ್ತೇವೆ..!

ಕ್ಯಾಮೆರಾ ಕಣ್ಣಿಗೆ ಕಾಣುವ ಜೋಗವೇ ಬೇರೆ.. ಚಿತ್ರ ಮಾತ್ರವೇ ಅಲ್ಲಿ !!
ಭೇಟಿ ಕೊಟ್ಟಾಗ ಆಗುವ ಅನುಭವವಿದೆಯಲ್ಲಾ.. ಮನದಲ್ಲಿ ಅಚ್ಚಳಿಯದೇ ಮೂಡುವ ಚಿತ್ರವದು.. ಎಂದಿಗೂ ಮಾಸದು.

ನನ್ನ ಪಾಲಿಗೆ ಜೋಗ ಕೇವಲ ಜಲಪಾತವಲ್ಲ, ಒಮ್ಮೆ ಭೇಟಿಯಾಗಿ 'ವಾವ್' ಎಂದು ಉದ್ಗರಿಸಿದಾಕ್ಷಣ ಮುಗಿಯುವಂಥದ್ದು ಅಲ್ಲ..!

ಜೋಗ..ಕಥೆಗಳ ಸಂತೆ.. ಕನಸುಗಳ ಆಗರ.. 



ನಿನಗೆ ಹುಚ್ಚೆನಿಸಬಹುದು...

ನಿನಗೆ ಹುಚ್ಚೆನಿಸಬಹುದು.. 
ಈ ಬಳೆಗಳೆಲ್ಲ ಮಾತನಾಡುತ್ತವೆ ನನ್ನ ಬಳಿ.. 
ಎಷ್ಟೆಂದರೂ ನೀನೇ ತೊಡಿಸಿದ್ದಲ್ಲವೇ.. 
ಮುಂಗುರುಳ ಕಿವಿಯ ಹಿಂದೆ ತಳ್ಳುವಾಗಲೆಲ್ಲ ಪಿಸುದನಿಯಲ್ಲಿ ನಿನ್ನ ಹೆಸರ ಹೇಳಿದಂತೆ ಅನುಭೂತಿ.. 
ನಿನ್ನ ಬಿಸಿಯುಸಿರಲ್ಲಿ ಪಿಸುದನಿಯ ಬೆರೆಸಿ ಬಳೆಯೊಡನೆ ಆಡಲು ಒಮ್ಮೆ ಬಾ ಇನಿಯಾ.. 

ನಿನಗೆ ಹುಚ್ಚೆನಿಸಬಹುದು.. 
ಈ ಗೆಜ್ಜೆ ಘಲ್ ಎಂದಾಗೆಲ್ಲ ನನ್ನೆದೆ ಝಲ್ ಎನ್ನುತ್ತದೆ.. 
ಎಷ್ಟೆಂದರೂ ನೀನೆ ಕಟ್ಟಿದ್ದು.. 
ಕಾಲ ಕೊರಳ ಸುತ್ತ ಬಿಗಿಯಾಗಿ ಅಪ್ಪಿಕೊಂಡು, ಹೆಜ್ಜೆ ಹೆಜ್ಜೆಗೂ ನನ್ನ ಸ್ಪರ್ಶಿಸಿ, ಮುದ್ದಿಸಿ, ಕಾಡುವ ಗೆಜ್ಜೆಯ ದನಿಯ ಕೇಳಲು ಒಮ್ಮೆ ಬಾ ಇನಿಯಾ.. 

ನಿನಗೆ ಹುಚ್ಚೆನಿಸಬಹುದು.. 
ನವಿಲುಗರಿ ಸವರಿದಾಗಲೆಲ್ಲ ಎದೆಬಡಿತ ಜೋರು.. 
ಎಷ್ಟೆಂದರೂ ನೀನೇ ಕೊಟ್ಟಿದ್ದು.. 
ಕಿರುಬೆರಳ ತುದಿಯ ಸವರಿದರೂ ಸಾಕು, ನೀನೆ ಸುಳಿದಂತೆ, ಗಾಳಿಯಲ್ಲಿಯೂ ನಿನ್ನ ಬೆವರ ಘಮ ಸೋಕಿದ ರೋಮಾಂಚನ.. 
ನವಿಲುಗರಿಯಂತೆ ನವಿರಾಗಿ ಸ್ಪರ್ಶಿಸಲು ಒಮ್ಮೆ ಬಾ ಇನಿಯಾ.. 

ನಿನಗೆ ಹುಚ್ಚೆನಿಸಬಹುದು.. 
ಒಂದೊಂದು ಮಳೆಯ ಹನಿ ತಾಕಿದಾಗಲೂ ಕಂಪನ.. 
ಎಷ್ಟೆಂದರೂ ಮಳೆಯೇ ನಮ್ಮಿಬ್ಬರ ಬೆಸುಗೆ.. 
ಪಾದದ ಮೇಲೆ ಬಿದ್ದು ಕಚಗುಳಿಯಿಟ್ಟು, ಪುಳಕಿತಕೊಂಡು, ಕೇಶವ ನೆನೆಸಿ, ಮುಖ ಮೇಲೆತ್ತಿ ಕಣ್ಮುಚ್ಚಿ ನಿಂತರೆ ಒಳಗೂ ಮಳೆಯೇ.. 
ಮುಚ್ಚಿದ ಕಣ್ಣ ಒಳಗಿನ ಬೆಳಕನು ಕಾಣಲು ಒಮ್ಮೆ ಬಾ ಇನಿಯಾ.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

ಗೋಡೆಯ ಮೇಲಿನ ಬಿರುಕು...

ಗೋಡೆಯ ಮೇಲಿನ ಬಿರುಕು 
ಎಂದೂ ನನ್ನ ಖುಷಿ ಪಡಿಸಲೇ ಇಲ್ಲಾ.. 

ನನ್ನ ಮುಪ್ಪನ್ನು, ಮುಖದ ಮೇಲಿನ ಸುಕ್ಕನ್ನು 
ಅಣಕಿಸಿದೆಯೇನೋ ಎನಿಸಿತ್ತು.. 

ಚರ್ಮದ ನೆರಿಗೆ ಹೆಚ್ಚಿದಂತೆಲ್ಲಾ 
ಬಿರುಕು ಉದ್ದವಾದಂತೆ ಕಂಡಿತ್ತು.. 

ನನಗೂ ಈ ಬಿರುಕಿಗೂ ಅದೆಂಥ ಸಾಮ್ಯತೆ? 
ಗೋಡೆಯೇ ಉತ್ತರಿಸಬೇಕು.. 

ಮೋಡವಾದೊಡನೆ ಒಳಸೇರುವ ನಾನೆಲ್ಲಿ? 
ಮಳೆಯ ಹಂಬಲಿಸಿ ಊರ್ಧ್ವಮುಖಿಯಾದ ಬಿರುಕು ಎಲ್ಲಿ? 

ಮುಪ್ಪಡರಿದ ದೇಹವ ಶಪಿಸುವ ನಾನೆಲ್ಲಿ.. 
ಬಿರುಕು ಕೂಡಾ ಚಿತ್ತಾರವೇ ಎಂದು ಪ್ರೀತಿಸುವ ಗೋಡೆಯೆಲ್ಲಿ.. 

ಗೋಡೆಯ ಮೇಲಿನ ಬಿರುಕು 
ಇಂದು ಬಹಳ ಪ್ರಿಯವಾಯಿತಲ್ಲ.... 

ಧೂಳೊರೆಸಿದಂತೆ...

ಧೂಳೊರೆಸಿದಂತೆ ನೆನಪುಗಳನ್ನೂ ಒರೆಸುವ 
ಶಕ್ತಿ ಇದ್ದರೆ ಎಷ್ಟು ಚೆನ್ನ..!!

ಡೈರಿ ಎದುರಲ್ಲೇ ಇತ್ತು..
ಕೈಲಿ ಹಿಡಿದೆ ನೋಡು, ಕೈತುಂಬಾ ಕೆಂಪು.. 
ಗೋರಂಟಿಯಲ್ಲ ಇದು ಧೂಳು ಎಂದರಿವಾಗಲು ಸ್ವಲ್ಪ ಸಮಯ ಬೇಕಿತ್ತು.. 

ಒಳ ಪುಟಗಳನ್ನು ತೆರೆದಂತೆಲ್ಲಾ 
ಕಾಡತೊಡಗಿತು ನೋಡು, ನಿನ್ನದೇ ನೆನಪು.. 
ಅಲ್ಲಲ್ಲಿ ಮಾಸಿದ ಅಕ್ಷರಗಳು ಮತ್ತೆ ಮತ್ತೆ ಅದೇನು ಎಂದು ನೆನಪಿಸಲು ಪ್ರಯತ್ನಿಸಿವೆ.. 

ನಕ್ಕಿದ್ದೆಯಲ್ಲ, ನವಿಲುಗರಿ ಮರಿ ಹಾಕುತ್ತಾ ಎಂದು.. 
ಅಣಕಿಸಿದೆ ನೋಡು, ಅದೇ ನವಿಲುಗರಿ.. 
ಪುಟಗಳ ನಡುವೆ ಬಚ್ಚಿಟ್ಟುಕೊಂಡು ನಿನ್ನ ನೋಡಿ ನಕ್ಕವ ಎಲ್ಲಿ ಹೋದನೆ ? ಎನ್ನುತ್ತಾ!!

ಗುಲಾಬಿ ದಳಗಳು ಸೊರಗಿ  ಒಣಗಿವೆ.. 
ಪತಂಗ ಮುಟ್ಟಿದಾಕ್ಷಣ ತನ್ನ ಬಣ್ಣ ನಮ್ಮ 
ಕೈಗಿಡುತ್ತದೆ ನೋಡು, ಹಾಗೆಯೇ ಗುಲಾಬಿ ಕಳೆಗುಂದಿದೆ; ನಗುವಿರದ ಮೊಗದಂತೆ.. 

ಕೊನೆಯ ಪುಟ ಬಹಳ ಕಾಡಿದೆ.. 
ನಿನ್ನ ಹಸ್ತಾಕ್ಷರ ನೋಡು.. ಅದೆಷ್ಟು ಪ್ರೀತಿ ತುಂಬಿದೆ.. 
ಕೊನೆಯ ಪುಟವೇ ಕೊನೆಯ ಭೇಟಿಯ ನೆನಪು ನೋಡು.. 

ಪ್ರತಿ ಬಾರಿಯೂ ಕೊನೆ ಪುಟ, ಕಣ್ಣ ಹನಿಗಳಿಂದ ಒದ್ದೆಯಾಗಿದೆ;
ಹಸ್ತಾಕ್ಷರವ ಇನ್ನೊಮ್ಮೆ ನೀಡಲು ಬರುವೆ ಎಂಬ ಹುಸಿ ನಂಬಿಕೆಯೊಂದು ಜೀವಂತವಾಗಿದೆ.. 

ಧೂಳೊರೆಸಿದಂತೆ ನೆನಪುಗಳನ್ನೂ ಒರೆಸುವ 
ಶಕ್ತಿ ಇದ್ದರೆ ಎಷ್ಟು ಚೆನ್ನ..!!

-ಪಲ್ಲವಿ 



Monday, July 20, 2020

ಗೆಳೆಯಾ, ಬಂದುಬಿಡು..


ಗೆಳೆಯಾ, 
ನೀ ಕೊಟ್ಟ ಮಲ್ಲಿಗೆ ಮಾಲೆಯಾಗಿದೆ ನೋಡು.. ಮುಡಿಗೇರುವ ತವಕ.. ಬಿರಿದು ನಿಂತು ಘಮ್ ಎನ್ನುತಿದೆ ನಿನ್ನರಸಿ.. ಬರುವೆಯಾ ಹೂ ಮುಡಿಸಲು? ಮುಡಿ ಕಟ್ಟಿ ನಿಂತಿದ್ದೇನೆ ಕನ್ನಡಿಯೆದುರು.. ಹೂ ಮಾತ್ರ ಕೈಲಿದೆ.. 

ಗೆಳೆಯಾ,
ಜಾತ್ರೆಯಲಿ ನೀ ಕೊಡಿಸಿದ ಬಳೆ, ನೋಡು ಇಂದು ಹಾಕಿದ್ದೇನೆ. ಸೊಕ್ಕು ನೋಡು ಅವಕ್ಕೆ.. ನೀ ಬಂದು ಒಮ್ಮೆ ನೇವರಿಸಬೇಕಂತೆ. ಅಲ್ಲಿಯವರೆಗೂ ಮೌನಾಚರಣೆ ! ಬರುವೆಯಲ್ಲ ಬಳೆಯ ಶಬ್ದ ಆಲಿಸಲು.. 

ಗೆಳೆಯಾ, 
ಬಂದುಬಿಡು.. ಹೂ ಬಾಡುವ ಮುನ್ನ,, ಬಳೆ ಒಡೆಯುವ ಮುನ್ನ.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Sunday, July 19, 2020

ಭರವಸೆ..

ಹಾದಿ ಸವೆದಿದೆ, ಗೆಳೆಯ.. 
ನಡೆಯುವ ಶಕ್ತಿಯಲ್ಲ.. 

ಹಾಡು ಮುಗಿದಿದೆ, ಗೆಳೆಯ.. 
ಕಾಡುವ ಭಾವವಲ್ಲ.. 

ಬಣ್ಣ ಮಾಸಿದೆ, ಗೆಳೆಯ..
ಚಂದದ ನೆನಪಲ್ಲ.. 

ಮೌನ ಕದಡಿದೆ, ಗೆಳೆಯ..
ಮೊಗದ ನಗುವಲ್ಲ.. 

ರವಿ ಮುಳುಗಿದ, ಗೆಳೆಯ..
ನಾಳೆಯ ಭರವಸೆಯಲ್ಲ.. 

-ಪಲ್ಲವಿ 


ಜಗದ ಮೊದಲ ಅಪರಾಧಿ..

ಹೇ ಹುಡುಗಿ, ಹುಷಾರು.. 
ಈಗ ತಾನೇ ಸುದ್ದಿ ಬಂದಿದೆ.. 
ನಭದ ಚುಕ್ಕಿಗಳೆಲ್ಲ ಧರೆಗಿಳಿದಿವೆಯಂತೆ.. 
ನಿನ್ನ ಕಣ್ಣ ಹೊಳಪ ಕಡ ಕೇಳಲು... 

ಹೇ ಹುಡುಗಿ,  ಹುಷಾರು.. 
ಯಾರೋ ಹೇಳಿದರಿಂದು.. 
ನಸುಗೆಂಪಿನ ಚಿಗುರುಗಳು ಮುನಿಸಿಕೊಂಡಿವೆಯಂತೆ.. 
ನಿನ್ನ ಚಿಗುರು ಬೆರಳುಗಳ ಕಂಡು.. 

ಹೇ ಹುಡುಗಿ,  ಹುಷಾರು..
ಪೊಲೀಸರಿಂದು ಹುಡುಕುತ್ತಿರುವರು..  
ಹೊಸ ಕಾನೂನಿದೆಯಂತೆ ಸೌಂದರ್ಯವೆಂಬುದು ಅಪರಾಧವೆಂದು.. 
ಸರಿಯಾಗಿ ಕೇಳಿಸಿಕೋ ಹುಡುಗಿ.. 
ಈ ಜಗದ ಮೊದಲ ಅಪರಾಧಿ ನೀನು.... 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು)

Thursday, July 16, 2020

ಮಳೆ..

(ಇವತ್ತಿನ ಮಳೆ ಇದನ್ನೆಲ್ಲಾ ಬರೆಸಿದೆ. ನನ್ನ ಮನೆಯ ಸುತ್ತ ಮುತ್ತ ಕಾಣುವುದು ಮಾತ್ರವೇ ಇದೆ ಇಲ್ಲಿ..)
ಎಂಥ ಮಳೆ ಮಾರಾಯ್ರೆ ಇದು.. 
ಅತ್ಲಾಗೆ ಕರೆಂಟು ಇರಾಕಿಲ್ಲ.. 
ಇತ್ಲಾಗೆ ನೆಟ್ವರ್ಕ್ ಬರಾಕಿಲ್ಲ.. 

ಆದ್ರೂ........ 
ಮಳೆ ಅಂದ್ರೆ ಮಳೆ..... ಗದ್ದೆಗಳೆಲ್ಲ ತುಂಬಿ ಹರೀತಾ ಇದೆ.. ಮೇಲಿನ ಗದ್ದೆಯಿಂದ ಕೆಳಗಿನ ಗದ್ದೆಗೆ ಬೀಳುವ ನೀರು ಉದ್ದದ ಜಲಪಾತದ ರೀತಿಯಲ್ಲಿ ಕಾಣ್ತಿದೆ.  ಹಳ್ಳದಲ್ಲಿ ತುಂಬಿದ ಕೆಂಪು ನೀರು ಕೊಡಲಲ್ಲಿ (ಗದ್ದೆಗಳ ಕೊನೆಯಲ್ಲಿ ನೀರು ಹರಿಯಲು ಸ್ವಲ್ಪ ಆಳಕ್ಕೆ ತೋಡಿರುವುದಕ್ಕೆ ನಮ್ಮ ಊರ ಕಡೆ ಕೊಡಲು ಎನ್ನುತ್ತೇವೆ!)  ಹರಿಯುತ್ತಾ ಮಧ್ಯೆ ಎತ್ತರಕ್ಕೆ ಸೊಕ್ಕಿನಿಂದ ಬೆಳೆದು ನಿಂತ ಅಚ್ಚ ಹಸಿರ ಹುಲ್ಲನ್ನು ತಲೆಬಾಗಿಸಿದೆ. ಹೊಳೆಯ ಸೇರುವ ಧಾವಂತದಲ್ಲಿ ತನ್ನ ವೇಗವನ್ನು ಹೆಚ್ಚಿಸಿ,  ಕಸವನ್ನೆಲ್ಲ ತನ್ನೊಳಗೆ ತುಂಬಿಕೊಳ್ಳುತ್ತ, ಬೇಸಿಗೆಯಲ್ಲಿ ಕೊಳ್ಳದ ಪಕ್ಕ ಉದುರಿದ ಮಾವಿನೆಲೆಗಳನ್ನೆಲ್ಲ ದೂಡುತ್ತಾ ಮುಂದೆ ಸಾಗುತ್ತದೆ.  ನಾವು ತಿಂದೂ,  ಮರದಲ್ಲಿ ಉಳಿದ ಹಲಸಿನ ಹಣ್ಣು, ಕೊನೆಗೆ ತೊಟ್ಟು ಕಳಚಿ ನೆಲಕ್ಕೆ ಪಚ್ಚ್ ಎಂದು ಬಿದ್ದು ರಾಡಿಯಾಗಿ ಸುತ್ತ ನಾಲ್ಕು ದಿಕ್ಕಿಗೂ ಘಮ (ಅತ್ತ ಗಳಿತ ಹಣ್ಣಿನ ಪರಿಮಳವೂ ಅಲ್ಲದ, ಇತ್ತ ಕೊಳೆತ ಹಣ್ಣಿನ ವಾಸನೆಯೂ ಅಲ್ಲದ) ತುಂಬಿಸುತ್ತದೆ. ಅಲ್ಲೆಲ್ಲೋ ನಾಲ್ಕಾರು ನಂಜುಳಗಳು ಸುತ್ತುತ್ತವೆ. ಉಂಬಳಗಳು ತಾವಿನ್ನೂ ಅಸ್ತಿತ್ವದಲ್ಲಿದ್ದೇವೆ ಎಂದು ರಕ್ತ ಹೀರುತ್ತವೆ. ಮನೆಯಲ್ಲಿರುವವರ ಸೌಖ್ಯ ವಿಚಾರಿಸಲು ಬಸವನಹುಳು, ಚೋರಟೆಗಳೆಲ್ಲ ಲಗ್ಗೆ ಇಡುತ್ತವೆ. ಹಳ್ಳದ ತುದಿಯಲ್ಲಿ ಕಪ್ಪೆಗಳ ಸಾಮ್ರಾಜ್ಯ ವಟರ್ ಗುಟರ್ ಎನ್ನುತ್ತಿರುತ್ತವೆ. ಸಂಜೆಯಾಗುವ ಮುನ್ನವೇ ಸೂರ್ಯ ಗುಡ್ ಬೈ ಹೇಳುತ್ತಾನೆ. ಬೆಳಗಿನಿಂದ ಸಣ್ಣದಾಗಿ ಹಾಡುತ್ತಿರುವ ಜೀರುಂಡೆಗಳು ತಮ್ಮ ಧ್ವನಿಯೇರಿಸುತ್ತವೆ. ಭತ್ತ ನಾಟಿ ಮಾಡುವವರು ಅಲ್ಲಲ್ಲಿ ಮೀನಿನ ಅಂಡೆ ಹಾಕಿದ್ದು, ಸಣ್ಣ ಮೀನು ಸಿಕ್ಕರೂ ರಾತ್ರಿಯ ಚಳಿಗೆ ಒಳ್ಳೆ ಊಟ ಎಂದು ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಅಲ್ಲಲ್ಲಿ ಕಾಣುವ ಕಂಬಳಿ ಕೊಪ್ಪೆ, ಬಣ್ಣ ಬಣ್ಣದ ಪ್ಲಾಸ್ಟಿಕ್ ಕೊಪ್ಪೆ, ಹರಿದ ರೈನ್ ಕೋಟು,ತೂತು ಬಿದ್ದ ಛತ್ರಿ...  ಇವೆಲ್ಲವನ್ನೂ ಮಾತಾಡಿಸಿ ಕೊಡಲಿನ ನೀರು ಹೊಳೆಗೆ ಸೇರುವಾಗ ಇಳಿಜಾರಿನಲ್ಲಿ ಧಾರೆಯಾಗುತ್ತದೆ. ಅಲ್ಲೇ ಪಕ್ಕದಲ್ಲಿದ್ದ ನೇರಳೆ ಮರದ ಮೇಲೆ ನೆಲದತ್ತ ಮುಖ ಮಾಡಿದ ಸೀತಾಳೆ ಹೂವು ಸಣ್ಣಗೆ ನಗುತ್ತದೆ. ಹೊಳೆಯಾಚೆ ಅರಳಿ ನಿಂತ ಅಣಬೆ ಮುದುಡಿ ನೆಲವನ್ನಪ್ಪುತ್ತದೆ.

ಬಚ್ಚಲ ಒಲೆ ಮಾತ್ರವೇ ಬೆಚ್ಚಗೆ !
ಆ ಜಾಗ ಎಂದಿಗೂ ನಮ್ಮನೆಯ ಬೆಕ್ಕಿಗೆ...!!

Tuesday, July 14, 2020

ಅಮ್ಮಾ..


ಅಮ್ಮಾ.. 
ನೀನು ನಂಜೊತೆ ಇರ್ಬೇಕಿತ್ತಮ್ಮ.. 
ಅಥವಾ ನಾನು ನಿನ್ನೊಳಗೆ ಇರ್ಬೇಕಿತ್ತು.. 

ರಾತ್ರಿ ಭಯವಾಗುತ್ತಮ್ಮಾ.. 
ಬೆಳಕು ಬೇಕು ಅಂತಾ ದೀಪ ಹಚ್ತೀನಿ.. 
ಕಿಟಕೀಲಿ ಕೈಯ ನೆರಳು ಕಾಣುತ್ತಮ್ಮ.. 
ಯಾರೋ ಕಿಟಕಿನಾ ಪಟಪಟ ಅಂತಾ ಬಡಿದಾಗೆ ಆಗತ್ತಮ್ಮ... 
ಯಾರಮ್ಮ ಅದು ಗುಮ್ಮಾನಾ? 

ಮಳೆ ಜಡಿ ಸೀರುತ್ತಮ್ಮ.. 
ಚಳಿ ಆಗತ್ತೆ ಅಂತಾ ಬಟ್ಟೆ ಹೊದ್ಕೋತೀನಿ.. 
ಕಿಟಕಿ ಹಾಕೋಕೆ ಅಂತಾ ಮುಂದೆ ಹೋಗ್ತೀನಮ್ಮ.. 
ಗುಮ್ಮನ ಕೈ ಒಳಗೇ ಬಂದು ನನ್ನ ಹಿಡಿಯೋಕೆ ನೋಡ್ದಾಗ ಹೊಟ್ಟೆ ಒಳಗಿಂದ ನಡುಕ ಬರುತ್ತಮ್ಮ.. 
ಯಾಕಮ್ಮ ಅದು ಚಳಿಗಾ? 

ಅಮ್ಮ.. ಈಗ 
 ನೀನು ನಂಜೊತೆ ಇರ್ಬೇಕಿತ್ತಮ್ಮ.. 
ಅಥವಾ ನಾನು ನಿನ್ನೊಳಗೆ ಇರ್ಬೇಕಿತ್ತು.. 

-ಪಲ್ಲವಿ 
(ಚಿತ್ರಕ್ಕಾಗಿ ಸಾಲುಗಳು) 
(ಬಹಳ ಕಾಡಿದ ಚಿತ್ರವಿದು...)


ಎದುರು ನೀನೇ ಇರ್ಬೇಕು ಕಣೋ...


ಹೇ ಹುಡುಗ.. 
ಅದೇನು ಬರೆಯಲೋ?  ಅದೆಷ್ಟು ಕಾಡ್ತಿಯಾ ನೀನು ಗೊತ್ತಾ?  ಹೃದಯದ ಪಿಸುಮಾತು ಗಡಿಯಾರದ ಮುಳ್ಳಿನ ಶಬ್ದಕ್ಕೆ ಕಾಂಪಿಟೇಷನ್ ಕೊಡುವಂತಿದೆ.. ಅದೆಷ್ಟು ಸಾಲು ಗೀಚಿ,  ಸರಿ ಕಾಣದೇ, ಹಾಳೆ ಹರಿದು ಎಸೆದಿದ್ದೇನೆ ಗೊತ್ತಾ?  
ನೀನು ಗಿಫ್ಟ್ ಕೊಟ್ಟ ಪೆನ್ನಲ್ಲೇ ಬರೀತಾ ಇದ್ದೀನಿ ಕಣೋ.. ಮನಸೇ ಇರಲಿಲ್ಲಾ ಗಿಫ್ಟ್ ಪ್ಯಾಕ್ ತೆರೆಯೋಕೆ..ನಿನ್ನ ಬೆರಳಚ್ಚು ಹೋಗಿಬಿಟ್ಟರೆ ಎಂಬ ಭಯ.. ನಿನ್ನ ಘಮ ಅದರೊಳಗಿತ್ತಲ್ಲ.. ಆವರಿಸಿಬಿಟ್ಟಿದೆ ಈಗ ಕೋಣೆಯೊಳಗೆಲ್ಲ.. 
ಈ ಪೆನ್ನ ಶಾಯಿಯನ್ನ ಖರ್ಚು ಮಾಡೋಕೆ ಮನ್ಸಿಲ್ಲ ಕಣೋ.. ನಿನ್ನ ಪ್ರೀತಿ ಅದರೊಳಗಿದೆಯಲ್ಲ.. 
ಆದ್ರೆ ಮನಸಲ್ಲಿ ಇರೋ ಶಬ್ದಗಳಿಗೆ ಒಂದು ರೂಪ ಕೊಡ್ಬೇಕಲ್ಲ.. 
ಹೇ ಹುಡುಗ, ಈ ಮಂದ ಬೆಳಕಲ್ಲಿ ಸ್ಪಷ್ಟವಾಗಿ ಕಾಣಿಸ್ತಾ ಇದಿಯಾ ಕಣೋ.. 
ಲೋಲಾಕಿನ ಕೆಳಗಿನ ಮಣಿ ಇದೆ ನೋಡು.. ಬಹಳ ಇರ್ರಿಟೇಟ್ ಮಾಡುತ್ತೆ.. ಅದು ಅಲುಗಾಡುತ್ತಲ್ಲ.. ಕೆಲವೊಮ್ಮೆ ಹಿಂದಿನಿಂದ ನಿನ್ನ ಉಸಿರೇ ಸೋಕಿದ ಅನುಭವ ಕಣೋ.. 
ಇತ್ತೀಚಿಗೆ ಆರಾಮ ಅನ್ನೋದೇ ಇಲ್ಲಾ ಕಣೋ.. ಕುರ್ಚಿಯ ತುದಿಯಲ್ಲಿ ಕುಳಿತಿರ್ತೀನಿ..  ಬಕಪಕ್ಷಿಯಂತೆ ಕಾಯ್ತಾ... ಒಳಗೊಳಗೇ ಅದೇನೋ ಬಯಕೆ..
ಹೇ ಹೋಗೋ.. ಹೇಳೋಕಾಗಲ್ಲ.. 
ಅಕ್ಷರಗಳು ವಕ್ರವಾಗಿವೆ, ಒಳಗಿನ ಭಾವನೆ ಸ್ಪಷ್ಟವಾಗ್ತಿಲ್ಲ. 
ಇದಕ್ಕೆಲ್ಲ ನೀನೇ ಎದುರು ಇರ್ಬೇಕು ಕಣೋ... 
ಹೇ ಹುಡುಗ, 
ಎದುರು ನೀನೇ ಇರ್ಬೇಕು...

(ಚಿತ್ರಕ್ಕೆ ಬರೆದ ಸಾಲುಗಳು)

ಮತ್ತೆ ಕಾಡಿದ ಮಳೆಯ ನೆನಪು -2

ನೀಲಕೂಟದ ಯಶೋದಮ್ಮ - ದೇವಪ್ಪನ ಮೊದಲ ಪುತ್ರಿ 'ಸುಲೋಚನಾ'. ಅವಳಿಗಿಂತ ನಾಲ್ಕು ವರ್ಷ ಕಿರಿಯವಳು ನಯನಾ. ಎರಡನೇ ತರಗತಿಗೇ ಅಕ್ಕ ತಂಗಿಯರು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹಾಡಿದ್ದರು!     ಈ ನಾಲ್ವರ ಜೊತೆಗೆ ದೇವಪ್ಪನ ತಮ್ಮ ಮಾಧವನೂ ಇದ್ದ. ಅಣ್ಣನ ಮಾತನ್ನು ಮೀರದ, ಅತ್ತಿಗೆಯನ್ನು ಬಹಳ ಗೌರವಿಸುವ ಮಾಧವನಿಗೆ, ಊಟ ತಿಂಡಿ ಎಲ್ಲದಕ್ಕೂ ಮಕ್ಕಳಿರಬೇಕಿತ್ತು. "ಸುಲೋಚ್ನಾ..ನ್ಯಾನಾ.." ಎನ್ನುತ್ತಲೇ ಇರುತ್ತಿದ್ದ. ಚಿಕ್ಕಪ್ಪನೆಂದರೆ ಮಕ್ಕಳಿಗೂ  ಬಲು ಪ್ರೀತಿ. ಅಪ್ಪನ ಗಂಟು ಮುಖವನ್ನು ಕಂಡು ಭಯಕ್ಕೋ, ತಮ್ಮನ್ನು ಚಿಕ್ಕಪ್ಪ ಅಕ್ಕರೆಯಿಂದ ಕಾಣುತ್ತಾನೆ ಎಂಬ ಕಾರಣಕ್ಕೋ ಮಾಧವನ ಬೆನ್ನಿಗೆ ಅಂಟಿಕೊಂಡೇ ಇರುತ್ತಿದ್ದರು.
 "ನೀನು ಹಿಂಗೇ ಮುದ್ದು ಮಾಡು ಅವ್ರಿಗೆ.. ಏನು ಹೇಳಿದ್ರೂ ಕೇಳ್ತಿಯಲ್ಲ.. ಮಧು ಸ್ವಲ್ಪ ಕೆಲ್ಸ-ಗಿಲ್ಸ ಕಲಿಲಿ ಅವ್ರು..ದಿನಾ ಗದ್ದೆಗೆ ಕರ್ಕೊಂಡು ಹೋಗ್ಬೇಡ. ಇಡೀ ದಿನ ಆಟ, ಊಟ ಅಂತಾನೆ ಕಳೀತಾರೆ..."
"ಅಣ್ಣಾ..ಮುಂದೆ ಮದ್ವೆ ಆಗಿ ಹೋದ್ಮೇಲೆ ಹೀಗೆ ಇರೋಕೆ ಆಗತ್ತಾ..ಪಾಪ ಖುಷಿಯಾಗಿರ್ಲಿ ಬಿಡು.."
ಏನೂ ಮಾತಾಡದೆ ಒಳಗೆ  ಹೋಗುತ್ತಿದ್ದ ದೇವಪ್ಪ. ದಿನವೂ ಇದೇ ಕಥೆ ! ಚಿಕ್ಕಪ್ಪ ತನ್ನ ಪರವಾಗಿದ್ದಾನೆ ಎಂದಾಗ ಇವರಿಬ್ಬರ ಹಾರಾಟ ಇನ್ನೂ ಜಾಸ್ತಿಯಾಗುತ್ತಿತ್ತು...!!

ನೀಲಕೂಟ ಅತ್ತ ಗ್ರಾಮವೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಸುಮಾರು ಎಪ್ಪತ್ತು ಮನೆಗಳು ಇರಬಹುದಾದ ಊರು. ಭತ್ತ ಮುಖ್ಯ ಬೇಸಾಯ. ಅಂದರೆ ಮಳೆಯ ಬೆಳೆ..! ಇಡೀ ಊರಲ್ಲಿ ಐದಾರು ಮನೆಗಳಲ್ಲಿ ಮಾತ್ರ ನಾಲ್ಕು ಎಕರೆಗೂ ಜಾಸ್ತಿ ಗದ್ದೆ ಇತ್ತು. ಅಣ್ಣ ತಮ್ಮಂದಿರ ಜಮೀನು ಇನ್ನೂ ಭಾಗವಾಗದ ಕಾರಣ ದೇವಪ್ಪನ ಮನೆಯೂ ಆ ಐದಾರು ಮನೆಗಳ ಸಾಲಿನಲ್ಲಿ ಸೇರಿತ್ತು!
ಮಾಧವ ಗದ್ದೆಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದ. ದೇವಪ್ಪನಿಗೆ ಅತ್ತ ಸುಳಿಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. 
ಊರ ನಡುವೆ ನಾಲ್ಕಾರು ಅಂಗಡಿಗಳಿದ್ದವು. ಅವುಗಳ ಮಧ್ಯೆ ದೇವಪ್ಪನದೂ ಒಂದು ಕಿರಾಣಿ ಅಂಗಡಿ ಇತ್ತು. ಊರಲ್ಲಿ ಸಣ್ಣಕ್ಕಿಯ ದಲ್ಲಾಳಿ ಅವನೊಬ್ಬನೇ ಆದ ಕಾರಣ 'ಸಣ್ಣಕ್ಕಿ ಪಟೇಲ್ರು..' ಎಂದೇ ಎಲ್ಲರೂ ಕರೆಯುತ್ತಿದ್ದರು. 
"ಪಟೇಲ್ರೆ..ಒಂದು ಗಂಡು ಬೇಕ್ರಲಾ.. ಎಷ್ಟೆಲ್ಲಾ ಮಾಡಿಟ್ಟಿರಿ.. ನಿಮ್ಮ ನಂತ್ರ ಇದ್ಕೆಲ್ಲ ದಿಕ್ಕು ಅಂತಾ ಬೇಡ್ವೆನ್ರ? " ಎಂಬ ಮಾತನ್ನು ಕೇಳುವವರೆಗೆ ಮನೆಯಲ್ಲಿ ಕೊರತೆ ಎಂದು ಏನೂ ಇರಲಿಲ್ಲ... !
ರಾತ್ರಿ ಕೋಣೆಯಲ್ಲಿ ಅಪ್ಪನ ತಾರಕದ ಸ್ವರ, ಅಮ್ಮನ ಬಿಕ್ಕಳಿಕೆ ಎರಡೂ ಕೇಳಿತ್ತು. 
"ಕೆಲಸದವರ ಮಾತನ್ನೂ ಕೇಳುವಂತಾಯಿತಲ್ಲ" ಎಂದು ಗೊಣಗಿಕೊಂಡ ದೇವಪ್ಪ..! ಅಂಗಡಿಗೆ ಬಂದವರೆಲ್ಲ ನಾರು, ಬೇರು, ಸೊಪ್ಪು, ಕಷಾಯ, ಪಾನಕ ಹೇಳುವ ವೈದ್ಯರಾದರು. ಎಲ್ಲದರ ಪ್ರಯೋಗವೂ ನಡೆದಿತ್ತು. 
  ಇಷ್ಟೆಲ್ಲಾ ನಡೆಯುವಾಗ ಸುಲೋಚನೆಗೆ ಹದಿನಾರು ತುಂಬಿತ್ತು..! ಪಾಪ,  ಸಮಯವೆಲ್ಲಿ ಅವಳಿಗೆ? ತಿಂಗಳಲ್ಲಿ ಮೂರು ದಿನ ಹೊರಗೆ ಕೂರಬೇಕು, ಉಳಿದ ದಿನ ಅಡುಗೆ,  ಮನೆಯ ಕೆಲಸ, ಕೊಟ್ಟಿಗೆಯ ಕೆಲಸ, ಯಾರೋ ಹೇಳಿದ ಔಷಧಿಯನ್ನು ಅಮ್ಮನಿಗೆ ಮಾಡಿಕೊಡುವುದರಲ್ಲಿಯೇ ಸಮಯ ಹೋಗುತ್ತಿತ್ತು. ನಯನಳೂ ಮೊದಲಿನಂತೆ ಅಕ್ಕನೊಡನೆ ಜಗಳವಾಡುವುದನ್ನು ಬಿಟ್ಟು, ಅವಳ ಕೆಲಸಗಳಿಗೆ ನೆರವಾಗುತ್ತಿದ್ದಳು. 
ಚಿಕ್ಕಪ್ಪನೊಡನೆ ಗದ್ದೆಗೆ ಹೋಗುವುದು ಹಾಗಿರಲಿ, ಮನೆಯಿಂದಾಚೆ ಕಾಲಿಡುತ್ತಿರಲಿಲ್ಲ. ಅಮ್ಮನೊಡನೆ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಮಾತ್ರ ತಪ್ಪದೇ ಹೋಗುತ್ತಿದ್ದರು. 
ಹೀಗೆ ಒಮ್ಮೆ ಹೋದಾಗ ಯಾರೋ ಹೇಳಿದರು - " ಶಿವಪುರದ ಶಿವ ಭಾಳ ಶಕ್ತಿದೇವ್ರು.. ಏನಾದ್ರು ಹೇಳ್ಕೊಂಡ್ರೆ ಖಂಡಿತಾ ಈಡೇರುತ್ತೆ.ಒಂದು ಹರಕೆ ಹೇಳ್ಕೊಬಿಡಿ..." ಅಲ್ಲೇ ಹರಕೆ ಹೇಳಿಕೊಂಡಳು ಯಶೋದಮ್ಮ. 
ಔಷಧಿ ಎಲ್ಲಾ ಆಯ್ತು.. ಇನ್ನು ಹರಕೆ ಶುರುವಾಯ್ತು.. ಎಂದು ಅಕ್ಕ ತಂಗಿ ಮುಖ ನೋಡಿಕೊಂಡರು..!
ಕಾಕತಾಳಿಯವೋ ಎಂಬಂತೆ ಮರುವರ್ಷ ಯಶೋದಮ್ಮ ಗರ್ಭಿಣಿ ! ಅಮ್ಮ ಒಂದೇ ಒಂದು ಕೆಲಸವನ್ನೂ ಮಾಡಲು ಬಿಡಲಿಲ್ಲ ಯಶೋದಮ್ಮ. ಅವಳಿಗೆ ಮಾಡಲು ಸಾಧ್ಯವಾಗುತ್ತಲೂ ಇರಲಿಲ್ಲ ! 
ಜೋರು ಮಳೆಗಾಲದ ಒಂದು ಸಂಜೆ ಯಶೋದಮ್ಮನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಆಗಿನ್ನೂ ಎಂಟು ತಿಂಗಳ ಬಸುರಿ ಅವಳು. ಅಪ್ಪ ಅಂಗಡಿಯಲ್ಲಿದ್ದಾನೆ, ಚಿಕ್ಕಪ್ಪ ಗದ್ದೆಯಿಂದ ಇನ್ನೂ ಬಂದಿಲ್ಲ. ಅಮ್ಮ ನೆಲದ ಮೇಲೆ ಒದ್ದಾಡುತ್ತಿದ್ದಾಳೆ. ಅವಳನ್ನು ನೋಡಿ ನಯನಾ ಬಿಕ್ಕುತ್ತಿದ್ದಾಳೆ. 
ಸುಲೋಚನೆ ಒಂದು ನಿಮಿಷ ಏನೂ ತೋಚದಂತೆ ನಿಂತುಬಿಟ್ಟಳು. ಊರ ಕೊನೆ ಮನೆಯ ಸೂಲಗಿತ್ತಿ ಶಾಂತಾಳನ್ನು ಕರೆತರಲು ನಯನಾಳನ್ನು ಓಡಿಸಿದಳು. 

ಧೋ ಎಂದು ಸುರಿಯುವ ಮಳೆ. ಏನೂ ಮಾಡುವಂತೆ ಇರಲಿಲ್ಲ. ಹೋಗಿ ಅಮ್ಮನ ಕೈ ಹಿಡಿದು ಕಣ್ಮುಚ್ಚಿ ಕುಳಿತಳಷ್ಟೇ..! ಧಾರಾಕಾರವಾಗಿ ನೀರು ಕೆನ್ನೆಯ ಮೇಲೆ ಇಳಿಯುತ್ತಿತ್ತು. 
ನಯನಾ ಶಾಂತಾಳನ್ನು ಕರೆದುಕೊಂಡು ಬಂದಳು. 
"ಪಟೇಲಮ್ಮ.. ಏನೂ ಆಗಲ್ಲ.. ನಾ ಬಂದೀನಿ.." ಎನ್ನುತ್ತಾ ಒಳಹೊಕ್ಕಳು. ನಯನಾ ಮತ್ತೆ ಓಡಿದಳು, ಅಪ್ಪ ಚಿಕ್ಕಪ್ಪರನ್ನು ಕರೆತರಲು..
ಸುಲೋಚನೆಗೆ ಅಮ್ಮನ ಕೈಹಿಡಿದು ಅವಳ ಜೊತೆಯಲ್ಲೇ ಇರುವ ಆಸೆ. ಆದರೆ 'ಅದು ತಗೊಂಡ್ಬಾ, ಇದು ತಗೊಂಡ್ಬಾ..' ಎಂದು ಓಡಿಸುತ್ತಿದ್ದಳು ಶಾಂತ.  ದೇವಪ್ಪ, ಮಾಧವ, ನಯನಾ ಬರುವ ಹೊತ್ತಿಗೆ ಅಕ್ಕ ಪಕ್ಕದ ಮನೆಯವರೆಲ್ಲ ಸೇರಿದ್ದರು. ಅರ್ಧ ಗಂಟೆಯ ನಂತರ ಶಾಂತ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಹೊರಬಂದಳು. 
ದೇವಪ್ಪನ ಕೈಗೆ ಕೊಡುತ್ತ, "ಗಂಡು ಮಗು" ಎಂದಳು. ಅವನ ಖುಷಿಗೆ ಪಾರವೇ ಇರಲಿಲ್ಲ. "ಗಂಡು ಬೇಕು ಸರಿ.. ಆದ್ರೆ ಈ ವಯಸ್ನಾಗೇ ಯಸೊದಮ್ಮಂಗೆ ಬ್ಯಾಡಾಗಿತ್ತು. ಉಳಿತದ್ಯೋ ಇಲ್ಲೋ ಅಂದ್ಕಂಡೆ.." ಶಾಂತ ಹೇಳುತ್ತಿದ್ದ ಮಾತನ್ನು ಕೇಳುವ ಸ್ಥಿತಿಯಲ್ಲಿ ದೇವಪ್ಪನಿರಲಿಲ್ಲ.
ಮೊದಲ ಬಾರಿಗೆ ಸುಲೋಚನೆಯ ಕಣ್ಣಲ್ಲಿ ಅವಳಪ್ಪನೆಡೆಗೆ ತಾತ್ಸಾರದ ನೋಟವನ್ನು ಗಮನಿಸಿದ ಮಾಧವ !
ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಳು ಯಶೋದಮ್ಮ. ಬಾಳಂತಿಯ ಸಂಪೂರ್ಣ ಆರೈಕೆಯನ್ನು ಅವಳ ಮಗಳು ಮಾಡಿದಳು ! ಮಗುವಿನ ಉಚ್ಚೆ ಬಟ್ಟೆ ತೊಳೆಯುವುದರಿಂದ, ಬಾಳಂತಿಗೆ ಸ್ನಾನ ಮಾಡಿಸುವವರೆಗೆ ಪ್ರತಿ ಕೆಲಸವೂ ಸುಲೋಚನೆಯದೇ. " ನೀ ಯಾವ ಜನ್ಮದಾಗೆ ನನ್ನವ್ವ  ಆಗಿದ್ಯೇ? " ಎನ್ನುತ್ತಿದ್ದಳು ತಾಯಿ. ಪೂರ್ತಿ ಬೆಳವಣಿಗೆಯಾಗದೆ ಎಂಟೇ ತಿಂಗಳಿಗೆ ಹುಟ್ಟಿದ್ದ ಪುಟ್ಟ ಕಂದನನ್ನು ಸುಲೋಚನೆ ಅದೆಷ್ಟು ಜೋಪಾನ ಮಾಡಿದಳೆಂದರೇ ಮೂರೇ ತಿಂಗಳಲ್ಲಿ ಸುಧಾರಿಸಿದ್ದ. 
ಮಗುವಿಗೆ ಏನು ಹೆಸರಿಡುವುದು ಎಂದು ಎಲ್ಲರೂ ಚರ್ಚಿಸುವಾಗ, "ಶಿವನ ಪ್ರಸಾದ ಇವ್ನು.." ಎಂದಳು ಯಶೋದಮ್ಮ. ಶಿವಪ್ರಸಾದ ಎಂದೇ ಹೆಸರಿಟ್ಟರು. 
ಒಂದು ರೂಪಾಯಿ ದಾನ ಮಾಡು ಎಂದರೂ ಅದರಿಂದೇನು ಪ್ರಯೋಜನ ಎನ್ನುವ ದೇವಪ್ಪ ಮಗ ಹುಟ್ಟಿದ ಖುಷಿಗೆ ಊರಿಡೀ ಸಿಹಿ ಹಂಚಿದ್ದ. 
ಬದುಕಲ್ಲಿ ಮಗನ ಆಗಮನದಿಂದ ದೇವಪ್ಪ ಬಹಳ ಬದಲಾಗಿದ್ದ. ಅಂಗಡಿಯಿಂದ ಬೇಗ ಮನೆಗೆ ಬಂದು ಮೂರು ಮಕ್ಕಳ ಜೊತೆ ಸಮಯ ಕಳೆಯುತ್ತಿದ. 
ಒಮ್ಮೆ ಇದ್ದಕ್ಕಿದ್ದಂತೆ ಮಗನ ಅರೋಗ್ಯ ಹದಗೆಟ್ಟಿದ್ದನ್ನು ಕಂಡು ಯಶೋದಮ್ಮ ಬಹಳ ಕೊರಗಿದಳು. ಊರಲ್ಲಿರುವ ಎಲ್ಲಾ ನಾಟಿವೈದ್ಯರಿಗೆ ಮಗುವನ್ನು ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಯಶೋದಮ್ಮ ಮಗು ಉಳಿಯುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದಳು. 
ಒಮ್ಮೊಮ್ಮೆ ಏನೇನೋ ಬಡಬಡಿಸುತ್ತಿದ್ದಳು. ಹೆಂಡತಿ ಎಲ್ಲಿ ಹುಚ್ಚಿಯಾಗಿಬಿಡುತ್ತಾಳೋ ಎಂಬ ಭಯ ದೇವಪ್ಪನಿಗೆ..!
"ಶಿವ ಸೂಚ್ನೆ ಕೊಡ್ತಿದಾನೆ. ನಾವಿನ್ನೂ ಹರಕೆ ತೀರಿಸಿಲ್ಲ. ಶಿವಪುರಕ್ಕೆ ಹೋಗ್ಬೇಕು .." ನಿಂತಲ್ಲಿ ಕುಂತಲ್ಲಿ,  ಇದೇ ಜಪ. 
ಕೊನೆಗೊಂದು ದಿನ ದೇವಪ್ಪ, "ಆಯ್ತು ಮಾರಾಯ್ತಿ.. ಹೋಗೋಣ..ಅದೇನು ಹರಕೆ ಕಟ್ಕೊಂಡಿದೀಯೋ  ಹೋಗಿ ತೀರಿಸಿ ಬರೋಣ" ಎಂದಿದ್ದ. 
ಅಪ್ಪನ ಮಾತನ್ನು ಕೇಳಿಸಿಕೊಂಡ ಸುಲೋಚನೆ ಆಗಲೇ ಶಿವಪುರಕ್ಕೆ ತಾನೂ ಹೋಗುವ ಬಗ್ಗೆ ಕನಸು ಕಂಡಳು.  
ಅರವತ್ತು ಮೈಲಿ ದೂರ ಪ್ರಯಾಣಿಸುವ ಆಸೆಯೋ, ದೋಣಿಯ ಪ್ರಯಾಣದ ಕುತೂಹಲವೊ, ಮುಂದಿನ ಘಟನೆಗಳ ಸೂಚನೆಯೋ... 
ಅಂದು ರಾತ್ರಿ ಎಷ್ಟೇ ಪ್ರಯತ್ನಿಸಿದರೂ ನಿದ್ರಾದೇವಿಯ ಕೃಪಾಕಟಾಕ್ಷವೇ ದೊರೆಯಲಿಲ್ಲ ಅವಳಿಗೆ..!!

Sunday, July 12, 2020

ಮತ್ತೆ ಕಾಡಿದ ಮಳೆಯ ನೆನಪು - 1



(ಮಳೆ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧ. ಕೆಲವರಿಗೆ ಖುಷಿ, ಕೆಲವರಿಗೆ ನೋವು ಹತಾಶೆ, ಖಿನ್ನತೆಯ ಬಿಂಬವದು. ಅಂಥ ಒಂದು ವಿಭಿನ್ನ ಮನಸ್ಥಿತಿಯ ಕಥೆಯೊಂದಿಗೆ.. ಒಂದಿಡೀ ಊರಿನ ಕಥೆಯೂ ಸುತ್ತುವುದು ಇಲ್ಲಿ.  ಇದು 'ಮತ್ತೆ ಕಾಡಿದ ಮಳೆಯ ನೆನಪು..')
ಸುಲೋಚನಾ ಕುಳಿತಿದ್ದಳು ಜೋರು ಮಳೆಯನ್ನೇ ದಿಟ್ಟಿಸುತ್ತಾ. ಐವತ್ತರ ಆಸುಪಾಸಿನಲ್ಲಿದ್ದರೂ ಅರವತ್ತು ದಾಟಿದಂತೆ ಸುಕ್ಕುಗಟ್ಟಿತ್ತು ಮುಖ..!
"ನನ್ನೊಳಗನ್ನು ಅಣಕಿಸುವಂತಿದೆ ಈ ಮಳೆ.. ಒಂದು ನಿಮಿಷವಾದರೂ ಸುಮ್ಮನಾಗಬಾರದೇ.." ತನ್ನಲ್ಲೇ ಗೊಣಗಿಕೊಂಡಳು. 
ಅಷ್ಟರಲ್ಲಿ ಓಡುತ್ತಾ, ಏದುಸಿರು ಬಿಡುತ್ತಾ ಬಂದಳು ಕುಸುಮಾ. 
"ಅತ್ತೆ, ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಒಂದು ಮಾತು ಹೇಳಿ ಬರಬಾರ್ದಾ?  ಮನೆಯೆಲ್ಲ ಹುಡುಕಿದೆ. ಹಿತ್ತಲಲ್ಲಿ ಬಟ್ಟೇನೋ, ಪಾತ್ರೆನೋ ತೊಳೀತಾ ಇರ್ಬೋದು ಅಂತಾ ಅಲ್ಲೂ ನೋಡ್ದೆ. ಎಲ್ಲೆಲ್ಲಿ ಅಂತಾ ಹುಡ್ಕೋದು ನಿನ್ನಾ..."
ಒಂದೇ ಉಸಿರಲ್ಲಿ ಹೇಳಿ ಮುಗಿಸಿ, ಹುಸಿ ಮುನಿಸಿನಿಂದ ಮುಖ ಗಂಟಿಕ್ಕಿ, ಕಂಬಕ್ಕೊರಗಿ ನಿಂತಳು. 
"ಮನೇಲಿ ಇಲ್ಲಾ ಅಂದ್ಮೇಲೆ ಇಲ್ಲೇ ಇರ್ತೀನಿ ಅಂತಾ ನಿಂಗೂ ಗೊತ್ತು. ಸೀದಾ ಇಲ್ಲೇ ಬರ್ಬೇಕಿತ್ತು."
"ಹೊ, ಬಂದ್ಬಿಡ್ತೀನಿ. ನಿಂಗೊಂದು ಹಗಲು ರಾತ್ರಿ ಯಾವದೂ ಇಲ್ಲಾ, ಮನ್ಸಿಗೆ ಕಂಡಾಗೆಲ್ಲ ದೇವಸ್ಥಾನಕ್ಕೆ ಬಂದ್ಬಿಡ್ತೀಯಾ ಅಂತಾ, ನಾನೂ ಹಾಗೇ ಅಂದ್ಕೊಂಡಿದೀಯ? " ಎನ್ನುತ್ತಾ ಕೈ ಬೆರಳ ತುದಿಯಲ್ಲಿ ಲಂಗವನ್ನು ಹಿಡಿದು, ಮೆಟ್ಟಿಲು ಇಳಿಯುತ್ತಿದ್ದಳು. 
"ಅಲ್ವೇ, ಹೊಸ ಲಂಗ, ಹೊಸ ಗೆಜ್ಜೆ ಎಲ್ಲ ಹಾಕ್ಕೊಂಡು ಈಗೆಲ್ಲಿ ಹೊರಟಿದಿಯೇ? "
"ನಿಂಗೆ ತೋರ್ಸೋಣ ಅಂತಾ ಬಂದೆ. ನೀನು ಇಲ್ಲಿದೀಯ..ಈಗ ಊರಿಗೆಲ್ಲ ತೋರಿಸ್ಕೊಂಡು ಬಂದಂಗೆ ಆಯ್ತು."  ಲಂಗ ಮೇಲೆತ್ತಿಕೊಂಡು, ಕಾಲನ್ನು ಕಲ್ಯಾಣಿಯ ನೀರಲ್ಲಿ ಇಳಿಬಿಟ್ಟಳು. 
ಅವಳ ಕೋಪ ಇನ್ನೂ ತಣಿದಿಲ್ಲ ಎಂದು ಅರಿವಾಗಿ ಸುಲೋಚನಾ ಮುಗುಳ್ನಕ್ಕಳು. 
"ನಾನೆಲ್ಲೋ ನಿನ್ನ ನೋಡೋಕೆ ಗಂಡು ಬಂದಿತ್ತು ಅಂದ್ಕೊಂಡೆ ಕುಸುಮಬಾಲೆ..." 
ಕುಸುಮಳ ಕೋಪ ಪೂರ್ತಿ ಇಳಿದು, ಅತ್ತೆಯತ್ತ ತಿರುಗಿ ನಕ್ಕಳು. ಇಡೀ ಊರಲ್ಲಿ 'ಕುಸುಮಬಾಲೆ' ಎಂದು ಕರೆಯುವುದು ಅತ್ತೆ ಮಾತ್ರ..! ಅವಳು ಕರೆದಾಗಲೆಲ್ಲ ಇವಳ ಕೋಪ ಮಾಯವಾಗುತ್ತಿತ್ತು. 
'ಹುಚ್ಚು ಹುಡುಗಿ, ಎಷ್ಟು ಬೇಗ ಕೋಪ ಬರುತ್ತದೊ, ಅಷ್ಟೇ ಬೇಗ ಇಳಿಯುತ್ತದೆ' ಮನದಲ್ಲೇ ಹೇಳಿಕೊಂಡಳು. 
ಸುಲೋಚನಳಿಗೆ ಕುಸುಮಾ ಸಂಬಂಧವೇನಲ್ಲ. ಹಾಗೆ ನೋಡಿದರೆ ಅವಳಿಗೆ ಆ ಊರಿನಲ್ಲಿ ಸಂಬಂಧಿಕರೇ ಇರಲಿಲ್ಲ. 
ಆದರೂ ಅಲ್ಲಿ ಅನ್ಯೋನ್ಯತೆಗೇನು ಕೊರತೆಯಿರಲಿಲ್ಲ. ಪಕ್ಕದ ಮನೆ, ಹಿಂದಿನ ಮನೆ, ಮೇಲಿನ ಮನೆ.. ಎಲ್ಲರ ಮನೆಯ ಮಕ್ಕಳೂ ಸುಲೋಚನೆಗೆ ಅತ್ತೆ ಎಂದೇ ಕರೆಯುತ್ತಾರೆ. ಹಬ್ಬ-ಹರಿದಿನಗಳಿಗೆಲ್ಲ ಊರವರೆಲ್ಲ ಕರೆಯುತ್ತಾರೆ. ಎಲ್ಲರಿಗೂ ಅವಳ ಕೈರುಚಿ ಬಹಳ ಪ್ರಿಯ. 
ಚಕ್ಕುಲಿ, ಕೋಡುಬಳೆ, ಚುರುಮುರಿ,ಲಡ್ಡು, ಪಾಯಸ.. ಏನು ಮಾಡಿದರೂ ಎಲ್ಲ ಮಕ್ಕಳನ್ನು ಕರೆದುಕೊಡುತ್ತಾಳೆ. 
"ಏನು ಸುಲೋಚನಕ್ಕಾ, ನಮ್ಗೆಲ್ಲಾ ಇಲ್ವಾ? ಮಕ್ಳು ಮಾತ್ರ ಕಾಣ್ತಾರ ನಿಂಗೆ?" 
ಮಕ್ಕಳ ಅಪ್ಪ-ಅಮ್ಮಂದಿರು ಪ್ರೀತಿಯಿಂದ ದೂರುತ್ತಾರೆ. 
ಅವರೆಲ್ಲರಲ್ಲಿ ಕುಸುಮಾ ಎಂದರೆ ಅಚ್ಚುಮೆಚ್ಚು ಸುಲೋಚನಳಿಗೆ. ಪಕ್ಕದ ಮನೆಯವಳಾದರೂ, ಬುದ್ಧಿ ಬಂದಾಗಿನಿಂದ ಇಲ್ಲಿಯವರೆಗೂ ಖುಷಿಯಾಗಲಿ, ಬೇಸರವಾಗಲಿ, ಕೋಪಬರಲಿ, ಸೀದಾ ಸುಲೋಚನಳ ಮನೆಗೇ ಬಂದು ಕೂರುತ್ತಿದ್ದ ಹುಡುಗಿ ಅದು. 
ಇಪ್ಪತ್ತರ ಹರೆಯದ ಹುಡುಗಿ, ಹುಟ್ಟಿದಹಬ್ಬಕ್ಕೆ ಕೊಡಿಸಿದ ಹೊಸ ಲಂಗ,ಗೆಜ್ಜೆ ಹಾಕಿಕೊಂಡು ಅತ್ತೆಗೆ ತೋರಿಸಲೆಂದು ಊರೆಲ್ಲ ಸುತ್ತಿ ಬಂದಿದ್ದಳು. 
ಹಂಸ ಪಾದ, ಚಿಗುರು ಬೆರಳುಗಳು, ಉಗುರಿಗೆಲ್ಲ ಗೋರಂಟಿಯ ರಂಗು.. ಈಗ ಅವಳ ಪ್ರತಿ ಹೆಜ್ಜೆಗೂ ಝೇಂಕಾರವೆಂಬಂತೆ ಫಳ-ಫಳನೆ ಹೊಳೆಯುವ ಗೆಜ್ಜೆ.. 
ಅದರ ಮೇಲೆ ಝರಿ ಪಟ್ಟೆಯ ಕೆಂಪು ಲಂಗ , ಹಸಿರು ರವಿಕೆ, ಕೈಗೆ ಕೆಂಪು ಬಳೆಗಳು, ಹಣೆಗೆ ಕೆಂಪು ಬೊಟ್ಟು, ಕಂಡೂ ಕಾಣದಂತೆ, ಆಗಾಗ ಹೊಳೆಯುವ ಬಿಳಿಯ ಹರಳಿನ ಮೂಗುತಿ. 
ಇವೆಲ್ಲಕ್ಕೂ ಕಳಶವಿಟ್ಟಂತೆ ದಟ್ಟ ಕಪ್ಪಿನ ನೀಳ ಕೇಶ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಒಮ್ಮೊಮ್ಮೆ ತನ್ನ ಕೂದಲ ಮೇಲೂ ಕೋಪಿಸಿಕೊಳ್ಳುತ್ತ, "ಏನು ಕೂದ್ಲೋ ಇದು.. ಸರ್ಯಾಗಿ ಜಡೆ ಹಾಕೋಕು ಬರಲ್ಲ. ಕುತ್ತ್ಗೆ ಎಲ್ಲ ನೋವು ಬಂದ್ಬಿಡ್ತು." ಎಂದು ಗೊಣಗಿಕೊಳ್ಳುತ್ತಾಳೆ. ಅವಳ ಅಮ್ಮ ಕೂದಲು ಬಾಚುವಾಗ ಜಡೆಯ ಜಗಳ ತಾರಕಕ್ಕೇರಿ ಬಿಚ್ಚಿದ ಕೂದಲಲ್ಲಿ ಓಡಿ ಬರುತ್ತಿದ್ದಳು,ಬಾಗಿಲಲ್ಲೇ  "ಅತ್ತೆ, ಜಡೆ ಹಾಕ್ಕೊಡು..." ಎಂದು ಕೂಗುತ್ತಾ. 
ಜಡೆ ಹಾಕುತ್ತ ಕಥೆ ಹೇಳಬೇಕು. ಮಧ್ಯೆ ಮಧ್ಯೆ ಅತ್ತೆ.. ಎಂಬ ರಾಗ ಬೇರೆ. 
ಒಮ್ಮೆ ಸುಲೋಚನ ಹೇಳಿದ್ದಳು - "ನೀನು ಹೀಗೇ ಅತ್ತೆ ಅತ್ತೆ ಎನ್ನುತ್ತಿರು, ನಿನ್ನನ್ನೇ ಸೊಸೆ ಮಾಡಿಕೊಳ್ತೀನಿ."
"ಏನಂದೆ ಅತ್ತೆ? "
"ನನ್ನ ಮಗನಿಗೆ ನಿನ್ನಾ ಕೊಡೋಕೆ ಹೇಳ್ತಿನಿ ನೋಡು ನಿಮ್ಮಪ್ಪನ ಹತ್ರಾ.."
"ಅದ್ನಾದ್ರೂ ಮಾಡು ಅತ್ತೆ..ಆದ್ರೆ ನಿನ್ಮಗ ಪೇಟೆಲಿ ಉಳಿತಾನೆ ಅಂದ್ರೆ ನಾ ಹೋಗಲ್ಲ. ಇಲ್ಲೇ ನಿಂಜೊತೆ ಇದ್ದುಬಿಡ್ತೀನಿ."
"ಯೇ ಹುಡುಗಿ, ಒಂಚೂರು ನಾಚ್ಕೆ ಇಲ್ವಲ್ಲೇ ನಿಂಗೇ.."
ತಲೆಗೆ ತಿವಿದಳು. 
"ಆಹ್.. ಅತ್ತೆ..!! 
ಯಾಕತ್ತೆ ನಾಚ್ಕೆ? ನಂಗೆ ಹೆಂಗೂ ಬೇರೆ ಊರಿಗೆ ಹೋಗೋ ಮನ್ಸಿಲ್ಲ. ನಿನ್ಮಗನ್ನೇ ಮದ್ವೆ ಆದ್ರೆ ಅಪ್ಪನ ಮನೆ - ಗಂಡನ ಮನೆ ಅಕ್ಕ-ಪಕ್ಕ ಇರತ್ತೆ. ಅತ್ತೆ -ಸೊಸೆ ಜಗಳ ಅಂತೂ ಇರೋದೇ ಇಲ್ಲ. ಅಪ್ಪಿ-ತಪ್ಪಿ ಮನು ಜೊತೆಗೆ ಜಗಳ ಮಾಡ್ತಿನೇನೋ.. ನಿಂಜೊತೆ ಅಂತೂ ಮಾಡಲ್ಲ.. ಯೋಚ್ನೆ ಮಾಡು, ಗಂಡನ ಜೊತೆ ಹೋಗಲ್ಲ ಅತ್ತೆ ಜೊತೇನೆ ಇರ್ತೀನಿ ಅನ್ನೋ ಅಂಥಾ ಒಳ್ಳೆ ಸೊಸೆ ಬೇರೆಲ್ಲಿ ಸಿಗ್ತಾಳೆ ನಿಂಗೆ? "
"ಹೌದಮ್ಮ ಹೌದು..ನಾನು ನಿಂಗೆ ಜಡೆ ಹಾಕ್ತಿನಿ, ನೀನು ನಿನ್ನ ಮಗಳಿಗೆ ಹಾಕು.."
ಅವಳ ಜಡೆಯನ್ನು ನೋಡುತ್ತಾ, ಈ ಯೋಚನೆಯಲ್ಲಿ ಮುಳುಗಿದ್ದ ಸುಲೋಚನಾ ಕುಸುಮಾಳನ್ನು ನೋಡಿ, "ಯೇ ಹುಡುಗಿ, ಮಳೇಲಿ ನೆನಿಬೇಡ್ವೆ. ಶೀತ ಆದ್ರೆ ಏನು ಮಾಡ್ಬೇಕು? ಈ ಕಡೆ ಬಾ.."
"ಏನತ್ತೆ ನೀನು?  ನಮ್ಮಮ್ಮನ ಹಾಗೇ ಆಡ್ಬೇಡ. ನಿಂಗೆ ಈ ಕಲ್ಯಾಣಿ ಕಟ್ಟೆ ಎಷ್ಟು ಇಷ್ಟಾನೋ, ನಂಗೂ ಮಳೆ ಅಂದ್ರೆ ಅಷ್ಟೇ ಇಷ್ಟ.." ಮತ್ತೆ ನೀರಲ್ಲಿ ಕಾಲಾಡಿಸಿದಳು. 
"ಕಾಲನ್ನ ನೀರಲ್ಲಿ ಬಿಡಬೇಡವೆ.. ಕಲ್ಯಾಣಿ ನೀರನ್ನೇ ಶಿವನ ಅಭಿಷೇಕಕ್ಕೆ ಬಳ್ಸೋದು ಆಲ್ವಾ.."
"ಅಯ್ಯೋ.. ನಿನ್ನ ಪುರಾಣ ಮುಗ್ಯೋದೆ ಇಲ್ಲಾ.. ನಾನು ಮನೆಗೆ ಹೋಗ್ತೀನಿ, ಬರೋದಿದ್ರೆ ಬಾ.."
ಎದ್ದು ಕಾಲಪ್ಪಳಿಸುತ್ತ ನಡೆದಳು.
 "ಹೊಸ ಗೆಜ್ಜೆ ಅಂತ ಗೊತ್ತಿದೆ.. ನಿಧಾನ ಹೋಗೇ ಕುಸ್ಮಾ.." ಎಂದು ನಕ್ಕಳು ಸುಲೋಚನೆ.
ಕುಸುಮಳನ್ನು ನೋಡಿದಾಗಲೆಲ್ಲ ತನ್ನ ಬಾಲ್ಯವೇ ನೆನಪಾಗುತ್ತಿತ್ತು ಅವಳಿಗೆ. 
ಇಲ್ಲಿಯ ಹಾಗೆಯೇ ನಮ್ಮೂರಲ್ಲೂ ಅದೆಂಥ ಮಳೆ. ಅಬ್ಬಾ..ಗದ್ದೆಗಳೆಲ್ಲ ತುಂಬಿ, ಒಂದು ಹೊಳೆಯಾಗಿಬಿಡುತ್ತಿತ್ತು. ಇಡೀ ದಿನವೂ ಧೋ ಎಂಬ ಮಳೆಯೇ.. ಹಿತ್ತಲಲ್ಲಿ ಕಲ್ಲಿನ ಒಲೆಗೆ ಬೆಂಕಿ ಒಟ್ಟಬೇಕು. ಅಪ್ಪ, ಚಿಕ್ಕಪ್ಪ ಎಲ್ಲ ಗದ್ದೆಯಿಂದ ಬಂದ ತಕ್ಷಣ ಒದ್ದೆಯಾದ ಕಂಬಳಿ ಕೊಪ್ಪೆಯನ್ನು ಒಣಗಿಸುತ್ತಿದ್ದರು. ಅವರ ಸ್ನಾನಕ್ಕೆ ನೀರು ಬಿಸಿ ಮಾಡಬೇಕಿತ್ತು. ಒಮ್ಮೊಮ್ಮೆ ಜೋರು ಗಾಳಿಗೆ ದೊಡ್ಡ ಮರವೊಂದು ಧರೆಗುರುಳಿದರೆ ಊರ ಗಂಡಸರೆಲ್ಲ ಓಡಬೇಕಿತ್ತು. ಕುಸುಮ ಹೇಳಿದಂತೆ ಮಳೆ ಎಂದಿಗೂ ಇಷ್ಟವಾಗಲಿಲ್ಲ ನನಗೆ. 
ಸುಲೋಚನೆ ನಿಧಾನವಾಗಿ ಕಂಬಕ್ಕೆ ಬೆನ್ನೊರಗಿಸಿ ಕುಳಿತು, ಕಲ್ಯಾಣಿಗೆ ಬಿದ್ದ ಹನಿಯನ್ನು ದಿಟ್ಟಿಸತೊಡಗಿದಳು.  ತನ್ನ ಹಳೆಯ ನೆನಪುಗಳಿಗೆ ಜಾರಿದಳು. ಕಣ್ಣಂಚಿಂದ ಕೆನ್ನೆಯ ಮೇಲೆ ಎರಡು ಹನಿಗಳು ಇಳಿದವು. 
ಮಳೆಗಾಲ ಅದೆಷ್ಟು ಸಂಕಷ್ಟಗಳ ಜಾಲ...

ಬದುಕು ದಾಳದಾಟ..

ಬದುಕು ದಾಳದಾಟ 
ಒಮ್ಮೆ ಆರು.. ಮತ್ತೊಮ್ಮೆ ಮೂರು.. 
ಒಮ್ಮೆ ಜಿಗಿತ.. ಮತ್ತೊಮ್ಮೆ ಹೊಡೆತ.. 

ಏರಿದಾಗ ಹಿಗ್ಗದೇ, ಬಿದ್ದಾಗ ಕುಗ್ಗದೇ.. 
ನಿಶ್ಚಲವಾಗಿರುವುದು ಬಲು ಕಷ್ಟವೇ.. 

ಒಮ್ಮೊಮ್ಮೆ ಓಡಿ ಅಡಗುವುದು.. 
ಮತ್ತೊಮ್ಮೆ ಬೆನ್ನಟ್ಟಿ ಬಡಿಯುವುದು.. 

ಅಡಗಿದವ ಹೇಡಿಯಲ್ಲ.. 
ಹೊಡೆದವ ಶಕ್ತಿವಂತನಲ್ಲ.. 
ಆದರೂ ಹೋರಾಟಕ್ಕೇನೂ ಕಡಿಮೆಯಲ್ಲ.. 

ಬದುಕು ಒಂದು ದಾಳದಾಟ.. 
ಗೆದ್ದವ ಪಡೆದು ಸೋತ.. 
ಸೋತವ ಕೊಟ್ಟು ಗೆದ್ದ.. 

-ಪಲ್ಲವಿ 

ಮಾತು ಮರೆತೇಬಿಡುತ್ತೀನಷ್ಟೇ...

ಝುಮುಕಿ ಬೆಳಕಿಗೆ ಹೊಳೆಯುತಿದೆ.. 
ಎಂದುಕೊಂಡೆಯಾ? 
ನೀ ಬಂದ ಸೂಚನೆ ನೀಡುತಿದೆಯಷ್ಟೇ.. 

ತಂಗಾಳಿಗೆ ಹಾರಾಡುತ್ತಿದೆ ಮುಂಗುರುಳು.. 
ಎಂದುಕೊಂಡೆಯಾ
ನೀ ಸವರಲಿ ಎಂದು ಬಯಸಿದೆಯಷ್ಟೇ.. 

ಚಿಗುರು ಬೆರಳು ಗೋರಂಟಿಯಿಂದ ಕೆಂಪಾಗಿದೆ.. 
ಎಂದುಕೊಂಡೆಯಾ..? 
ನಾಚಿಕೆಯಿಂದ ಬೆರಳ ತುದಿ ಕೆಂಪೇರಿದೆಯಷ್ಟೇ.. 

ಹೂವರಳಿ ಸುಗಂಧ ಬೀರಿದೆ... 
ಎಂದುಕೊಂಡೆಯಾ? 
ನಿನ್ನ ಕೈಯಿಂದ ನನ್ನ ಮುಡಿಗೇರಲಿ ಎಂದರಳಿದೆಯಷ್ಟೇ..

ಇವಳ್ಯಾಕೆ ಮಾತನಾಡುತ್ತಿಲ್ಲ.. 
ಎಂದುಕೊಂಡೆಯಾ? 
ಹೇ ಹುಡುಗ, ನಿನ್ನ ನೋಡಿ ಮಾತು ಮರೆತೇಬಿಡುತ್ತೀನಷ್ಟೇ.. 

-ಪಲ್ಲವಿ 

Thursday, July 9, 2020

ಕವಿತೆ ನಾನು..

ಕವಿತೆ ನಾನು.. 
ಒಟ್ಟಿಗೇ ಭಾವತುಂಬಿ ಹಾಡಾಗುವ ಬಾ.. 
ಅಕ್ಷರ ಮಾಸುವ ಮುನ್ನ.. 

ಇರುಳು ನಾನು.. 
ಒಟ್ಟಿಗೇ ಶಶಿ-ತಾರೆಯಾಗಿ ಮಿನುಗುವ ಬಾ.. 
ಬೆಳಕು ಆವರಿಸುವ ಮುನ್ನ.. 

ಹಣತೆ ನಾನು.. 
ಒಟ್ಟಿಗೇ ದೀಪವಾಗಿ ಬೆಳಕ ತೋರುವ ಬಾ... 
ಎಣ್ಣೆ ಖಾಲಿಯಾಗುವ ಮುನ್ನ.. 

ಮೊಗ್ಗು ನಾನು.. 
ಒಟ್ಟಿಗೇ ಅರಳಿ ಹೂವಾಗುವಾ ಬಾ.. 
ತೊಟ್ಟು ಕಳಚಿ ಬೀಳುವ ಮುನ್ನ.. 

ಮಂಜು ನಾನು.. 
ಒಟ್ಟಿಗೇ ಕೊರೆವ ಚಳಿಯೊಡನೆ ಹೆಪ್ಪುಗಟ್ಟುವ ಬಾ.. 
ಕಾವಿಗೆ ಕರಗುವ ಮುನ್ನ.. 

ನದಿ ನಾನು.. 
ಒಟ್ಟಿಗೇ ಧಾರೆಯಾಗಿ ಧುಮುಕುವ ಬಾ.. 
ಸಾಗರ ಸೇರುವ ಮುನ್ನ.. 

ಪ್ರಕೃತಿಯು ನಾನು.. 
ಒಟ್ಟಿಗೇ ಸೌಂದರ್ಯವ ಸವಿಯುವ ಬಾ.. 
ಉಸಿರು ನಿಲ್ಲುವ ಮುನ್ನ... 

-ಪಲ್ಲವಿ 


Wednesday, July 8, 2020

ಗೆಳೆಯಾ, ನೀ ಜೊತೆಗಿರದಿದ್ದರೆ...

ಸೀರೆ ಬೇಕೆಂದು ಹೋದೆ
ನೀಲಿ ಸೀರೆ, ಝರಿ ಸರಿ ಬರಲಿಲ್ಲ, 
ಕೆಂಪು ಸೀರೆಗೆ ಅಂಚು ದಪ್ಪ, 
ಹಸಿರು ಸೀರೆಗೆ ಚಿತ್ತಾರವೇ ಇಲ್ಲ... 
ಗೆಳೆಯಾ, ನೆರಿಗೆ ಸರಿಪಡಿಸಲು 
ನೀ ಜೊತೆಗಿರದಿದ್ದರೆ ಎಲ್ಲವೂ ಬಣ್ಣ ಮಾಸಿದಂತೆ.... 

ಹೂವು ಬೇಕೆಂದು ಹೋದೆ 
ಗುಲಾಬಿ  ದಳಗಳೆಲ್ಲ ಉದುರಿತ್ತು, 
ಸೇವಂತಿ ಮುದುಡಿ ಹೋಗಿತ್ತು, 
ಮಲ್ಲಿಗೆ ಅರಳಲೇ ಇಲ್ಲ...
ಗೆಳೆಯಾ, ಹೂ ಮುಡಿಸಲು  
ನೀ ಜೊತೆಗಿರದಿದ್ದರೆ ಎಲ್ಲೂ ಸುಗಂಧವೇ ಇರದಂತೆ.... 

ಒಡವೆ ಬೇಕೆಂದು ಹೋದೆ 
ಬಳೆಗೆ ಕಳೆಯೇ ಇಲ್ಲ, 
ಕಿವಿಯೋಲೆ ಹೊಂದಲಿಲ್ಲ, 
ಗೆಜ್ಜೆಗೆ ದನಿಯೇ ಇಲ್ಲ...
ಗೆಳೆಯಾ, ಒಡವೆ ತೊಡಿಸಲು 
ನೀ ಜೊತೆಗಿರದಿದ್ದರೆ ಎಲ್ಲವೂ ಹೊಳಪ ಕಳೆದುಕೊಂಡಂತೆ..... 

ಯಾವುದೂ ಬೇಡೆಂದು ಸುಮ್ಮನೆ ಕುಳಿತೆ 
ನೋಡು, ನನ್ನೊಳಗೂ-ಹೊರಗೂ ನೀನೇ ಇರುವೆ
ನೆನಪಿನ ಹೊತ್ತಿಗೆ ಎದುರೇ ಹರಡಿದೆ, 
ನೀ ಕೊಟ್ಟ ನವಿಲುಗರಿಯೂ ಮಾಸುತಿದೆ
ಗೆಳೆಯಾ, ಕಚಗುಳಿ ಇಡಲು 
ನೀ ಜೊತೆಗಿರದಿದ್ದರೆ ಚಂದದ ನೆನಪೂ ಸುಡುವ ಅಗ್ನಿಯಂತೆ.... 

-ಪಲ್ಲವಿ 

Tuesday, July 7, 2020

ಶಾಲಾದಿನದ ಹುಳಿ-ಸಿಹಿ ನೆನಪು..!

ಬಾಲ್ಯ ಒಂದು ರೀತಿಯಲ್ಲಿ ಬಣ್ಣದ ಬದುಕು, ಕೌತುಕದ ಕಣ್ಣು..ಉತ್ಸಾಹದ ಹೆಬ್ಬಾಗಿಲು.. ಅದೆಷ್ಟೋ ನೆನಪುಗಳ ಬುತ್ತಿಯದು. ಒಮ್ಮೆ ಸಿಹಿ, ಮತ್ತೊಮ್ಮೆ ಹುಳಿ ಒಮ್ಮೊಮ್ಮೆ ಖಾರವಾಗಿದ್ದೂ ಇದೆ. ಕೆಲವು ನೆನಪುಗಳು ಕಹಿಯಾದರೂ, ಬಹಳ ದೊಡ್ಡ ಪಾಠವಾಗಿವೆ. 
ಇಂದು ಒಂದು ಹುಳಿ-ಸಿಹಿಯ ನೆನಪಿನೊಂದಿಗೆ ಬಂದಿದ್ದೇನೆ. 
ಮನೆಯಲ್ಲಿ ಹಬ್ಬ ಎಂದರೆ ಯಾವ ವಾತಾವರಣ ಇರುವುದೋ ಶಾಲೆಯಲ್ಲಿ 'ಸ್ವಾತಂತ್ರ್ಯ ದಿನ', 'ಶಿಕ್ಷಕರ ದಿನ','ಗಾಂಧಿ ಜಯಂತಿ', 'ಕನ್ನಡ ರಾಜ್ಯೋತ್ಸವ', 'ಮಕ್ಕಳ ದಿನ', 'ಗಣರಾಜ್ಯೋತ್ಸವ 'ಗಳಿಗೆ ಅದೇ ವಾತಾವರಣ ಇರುತ್ತದೆ. 
ನಮ್ಮ 'ಬಾಲಿಕೊಪ್ಪ' ಶಾಲೆಯಲ್ಲಿ ನಾಳೆ ಆಚರಣೆ ಎಂದರೆ ಇಂದು ತಯಾರಿ ಪ್ರಾರಂಭವಾಗುತ್ತದೆ. ಶಾಲೆಯ ಎಲ್ಲ ಬಾಗಿಲಿಗೂ ತೋರಣ ಕಟ್ಟುವುದು, ಮೈದಾನವನ್ನು (ನಾವು ಅಂಗಳ ಎಂದಿದ್ದೇ ಹೆಚ್ಚು.. ಯಾಕೆಂದರೆ ಶಾಲೆಗೂ ಮನೆಗೂ ವ್ಯತ್ಯಾಸವಿರಲಿಲ್ಲ..!) ಸ್ವಚ್ಛಗೊಳಿಸುವುದು, ಧ್ವಜದ ಕಟ್ಟೆಯ ಸುತ್ತ ರಂಗೋಲಿ ಬಿಡಿಸುವುದು.. ಈ ಮಧ್ಯೆ ತಂಟೆ -ತರಲೆಗಳು..
ಸೇವಾದಳದವರು ಅವರ ತಾಲೀಮಿನಲ್ಲಿ ಇರುತ್ತಿದ್ದರು. ಕೆಲವು ನೃತ್ಯ ಪ್ರದರ್ಶನ, ಸ್ತಬ್ದಚಿತ್ರ ಪ್ರದರ್ಶನಗಳ ಸಿದ್ಧತೆಯಲ್ಲಿ ಇರುತ್ತಿದ್ದರು. 
ಒಟ್ಟಿನಲ್ಲಿ ಅಂದು ಶಾಲೆಗೆ ರಜೆಯಿಲ್ಲ, ಆದರೂ ತರಗತಿಗಳಿಲ್ಲ..ಹಾಗಾಗಿ ಇಡೀ ಶಾಲೆಯೇ ಗಿಜಿಗಿಜಿ ಎನ್ನುತ್ತಿರುತ್ತಿತ್ತು. 
ಇನ್ನು ಮನೆಗೆ ಬಂದಮೇಲೆ ಮಾರನೇ ದಿನದ ತಯಾರಿ ಕಡಿಮೆ ಇರುತ್ತಿರಲಿಲ್ಲ. ಸಮವಸ್ತ್ರವನ್ನು ಒಪ್ಪವಾಗಿರಿಸಿಕೊಂಡು, ಹುಡುಗಿಯರೆಲ್ಲ ಮಾತನಾಡಿಕೊಂಡಂತೆ ಮ್ಯಾಚಿಂಗ್ ಬಳೆಗಳನ್ನು ಹಾಕಿಕೊಂಡು ಹೋಗುವುದು. ಬೆಳಿಗ್ಗೆ ಹೊರಡುವ ಹೊತ್ತಿನಲ್ಲಿ ಹೂ ಕೊಯ್ಯಲು ಓಡುವುದು. "ಮನೆಯಲ್ಲಿ ದೇವರಿಗೆ ನಾಲ್ಕು ಹೂವು ಕೊಯ್ದಿದ್ದು ಕಂಡಿಲ್ಲ. ಈಗ ಇದ್ದ ಹೂವನ್ನೆಲ್ಲ ತೆಗೆದುಕೊಂಡು ಹೋಗುತ್ತಾಳೆ.." ಮನೆಯೊಳಗಿನಿಂದ ಕೇಳುವ ಧ್ವನಿ ಅದು. 
ನಮ್ಮ ಕಷ್ಟ ನಮಗೆ...! ಹೇಳಿದ್ದಾರಲ್ಲ ಶಾಲೆಯಲ್ಲಿ,  "ಧ್ವಜಕ್ಕೆ ಅಥವಾ ಫೋಟೋಕ್ಕೆ ಹಾಕಲು ಹೂವು ಬೇಕು. ಎಲ್ಲರೂ ಸಾಧ್ಯವಾದಷ್ಟು ತನ್ನಿ.." 
ಯಾರೂ ಹೇಳಿಕೊಳ್ಳದಿದ್ದರೂ ನಮ್ಮೊಳಗೇ (ಹುಡುಗಿಯರು) ಒಂದು ರೀತಿಯ ಸ್ಪರ್ಧೆ. ಕೊನೆಯಲ್ಲಿ  ಹೆಚ್ಚು ಹೂವು ತಂದವರು ಎಲ್ಲರತ್ತ ಗೆಲುವ ನಗೆ ಬೀರುವುದು ಬೇರೆ..!!!
ಈ ಎಲ್ಲ ದಿನಗಳ ಆಕರ್ಷಣೆ ಏನೆಂದರೆ 'ಲಿಂಬು ಪೆಪ್ಪರಮೆಂಟು'.. ! ಆಗ ಇಪ್ಪತ್ತೈದು ಪೈಸೆಗೆ ಸಿಗುತ್ತಿತ್ತು. ಧ್ವಜಾರೋಹಣ ಕಾರ್ಯಕ್ರಮವಾದ ನಂತರ ಎಲ್ಲರಿಗೂ ಹಂಚುವ ಸಿಹಿ ಅದು. ಬಿಟ್ಟ ಕಣ್ಣು, ಬಿಟ್ಟ ಬಾಯಿಯಲ್ಲಿ ಎಲ್ಲರೂ ಹಂಚುವವರ ಕೈಲಿದ್ದ ಪೆಪ್ಪರಮೆಂಟಿನ ಬಟ್ಟಲನ್ನು ನೋಡುತ್ತ ಸಾಲಿನಲ್ಲಿ ನಿಂತಿರುತ್ತಿದ್ದೆವು. ನಿದ್ದೆಯ ಮಂಪರಿನಲ್ಲಿರುವ ನಮಗೆ  ಭಾಷಣ ಮಾಡಲು ಬಂದವರು ತಾವೊಬ್ಬರೇ ಏನನ್ನೋ ಮಾತನಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿತ್ತು.
ಮುಖ್ಯವಾಗಿ ಅಂದು ಹೋಗುವುದೇ ಪೆಪ್ಪರಮೆಂಟಿಗಾಗಿ..!! 
ಶಾಲೆಯ ಪಕ್ಕದ ಅಂಗಡಿಯಲ್ಲೇ ಶುಂಠಿ ಪೆಪ್ಪರಮೆಂಟು,ಲಿಂಬು  ಪೆಪ್ಪರಮೆಂಟು, ಕಟ್ಟಾ-ಮೀಠಾ ಎಲ್ಲ ದೊರೆಯುತ್ತಿದ್ದುದರಿಂದ  ಬಾಯಿ ಚಪಲಕ್ಕೆ ಕೊರತೆಯೇನೂ ಆಗಿರಲಿಲ್ಲ. ದುಡ್ಡು ಎಲ್ಲಿಂದ ಬರುತ್ತಿತ್ತು ಎಂದು ಹೊಸದಾಗಿ ಹೇಳಬೇಕಿಲ್ಲ; ಎಂದೂ ಬರಿದಾಗದ ಅಪ್ಪನ ಜೇಬು ಎಂಬ ಬ್ಯಾಂಕ್ ಖಾತೆಯಿದ್ದಾಗ..! 
ಮಧ್ಯಾಹ್ನ ಊಟವಾದ ನಂತರ ಅರ್ಧ ಗಂಟೆಯ ವಿಶ್ರಾಮದ ಸಮಯದಲ್ಲಿ ನಾಲ್ಕಾರು ಗೆಳತಿಯರು ಸೇರಿ ಸಂಗೀತದ ತರಗತಿಗೆ ಹೋಗುತ್ತಿದ್ದೆವು. ಶಾಲೆಯಿಂದ ಹೊರಟು, ಗುಡ್ಡವನ್ನೇರಿ, ಚರ್ಚಿನ ದಾರಿಯಲ್ಲಿ ಒಂದು ಸುತ್ತು ಹಾಕಿ, ಎಲ್ಲೋ ಬೇಲಿ ಹಾರಿ ನಂತರ ನಮಗೆ ಸಂಗೀತ ಪಾಠ ಹೇಳುವವರ ಮನೆ ಸಿಗುತ್ತಿತ್ತು. ಎಲ್ಲರಿಗೂ ಹೇಳುವುದು - ಇದು ಶಾರ್ಟ್ ಕಟ್ ರೂಟ್ ಎಂದು ! ಸತ್ಯ ನಮಗೆ ಮಾತ್ರ ಗೊತ್ತಿತ್ತು. ಚರ್ಚಿನ ಹಿಂಬದಿಯ ನೆಲ್ಲಿಮರ ಬೇಡವೆಂದರೂ ಅದೇ ದಾರಿಯಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿತ್ತು..!

ಶಾಲೆಯಿಂದ ಹೊರಟರೆ ಅಂಗಡಿ ಇರುವುದೇ ಒಂದು ದಿಕ್ಕು, ಚರ್ಚಿನ ದಾರಿಯೇ ಒಂದು ದಿಕ್ಕು. ಆದರೂ ಒಂದು ಮಧ್ಯಾಹ್ನ ಒಂದಷ್ಟು ಪೆಪ್ಪರ್ಮೆಂಟ್ ಖರೀದಿಸಿಕೊಂಡು, ಚರ್ಚಿನ ಹಾದಿಯಲ್ಲಿ ಸಾಗಿದ್ದೆವು. 
ಚರ್ಚಿನ ಹಿಂಬದಿಗೆ ನಿಧಾನವಾಗಿ ಬಂದು ಶಬ್ದ ಮಾಡದೇ ನಿಂತು, ಯಾರಾದರೂ ನಮ್ಮನ್ನು ನೋಡುತ್ತಿದ್ದಾರೆಯೇ ಎಂದು ಸುತ್ತ ನೋಡಿದೆವು. ಯಾರೂ ಇಲ್ಲ ಎಂಬ ಧೈರ್ಯದಲ್ಲಿ ಒಬ್ಬಳು ನೆಲ್ಲಿಕಾಯಿಗಳು ತುಂಬಿತುಳುಕುತ್ತಿದ್ದ ಗೊಂಚಲೊಂದಕ್ಕೆ ಒಂದು ಕಲ್ಲನ್ನು ಸರಿಯಾಗಿ ಎಸೆದಳು. ಪಟಪಟನೆ ನಮ್ಮ ತಲೆ, ಭುಜ, ಬೆನ್ನಿನ ಮೇಲೆ ನೆಲ್ಲಿಕಾಯಿಗಳ ಸುರಿಮಳೆ...! ಹುಲ್ಲು ರಾಶಿಯ ಮಧ್ಯ ಹುಡುಕಿ, ಹೆಕ್ಕಿ ತೆಗೆದು ಒಂದೊಂದನ್ನು ಬಾಯಿಗೆ ಹಾಕಿ, ಉಳಿದದ್ದನ್ನು ಜೇಬಿಗಿಳಿಸತೊಡಗಿದೆವು. 
ಅಷ್ಟರಲ್ಲಿ ಗೆಳತಿ ಚೀರಿದಳು. ನೋಡಿದರೆ ಸಿಸ್ಟರ್ ಒಬ್ಬರು ಅವಳ ಕಿವಿ ಹಿಂಡುತ್ತಿದ್ದರು. 
"ಕಳ್ಳತನ ಮಾಡ್ತೀರಾ.. ಮನೇಲಿ ಹೇಳ್ಕೊಡ್ತೀನಿ ನೋಡಿ, ನಿಮ್ಮ ಶಾಲೆಗೆ ಕಂಪ್ಲೇಂಟ್ ಮಾಡ್ತೀನಿ." ಕೆಂಪು ಮುಖ ಮಾಡಿಕೊಂಡು ಹೇಳಿದರು. 
ಕಳ್ಳನ ಮುಖ ಹುಳ್ಳಹುಳ್ಳಗೆ..! ಸಿಕ್ಕಿಹಾಕಿಕೊಂಡಿದ್ದಕ್ಕೋ, ಬಾಯಲ್ಲಿ ನೆಲ್ಲಿಕಾಯಿ ಇದ್ದಿದ್ದಕ್ಕೋ.. ಒಟ್ಟಿನಲ್ಲಿ ನಮ್ಮೆಲ್ಲರ ಮುಖಗಳು ಹುಳ್ಳಗಾಗಿದ್ದವು. 
"ಸಿಸ್ಟರ್, ಪ್ಲೀಸ್ ಮನೆಗೆ, ಶಾಲೆಗೆ ಎಲ್ಲ ಹೇಳಿಕೊಡಬೇಡಿ. ಇನ್ನುಮುಂದೆ ಹೀಗೆ ಮಾಡಲ್ಲ. ಈ ದಾರೀಲಿ ಬರಲ್ಲ. ಪ್ಲೀಸ್..." ಅಂತ ಹೇಳುವಷ್ಟರಲ್ಲಿ ಎಲ್ಲರ ಕಣ್ಣು ತುಂಬಿತ್ತು. 
ಅವರಿಗೆ ಏನನ್ನಿಸಿತೋ, ನಕ್ಕರು. ನಾನು ಮುಂದೆ ಹೋಗಿ ಒಂದು ಕೈಲಿ ನೆಲ್ಲಿಕಾಯಿ ಇನ್ನೊಂದು ಕೈಲಿ ಪೆಪ್ಪರ್ಮೆಂಟು ಹಿಡಿದು ಚಿಕ್ಕ ಮುಖ ಮಾಡಿ, "ಸಿಸ್ಟರ್ ಇದನ್ನು ತೆಗೆದುಕೊಳ್ಳಿ. ಇನ್ನು ಮುಂದೆ ಹೀಗೆಲ್ಲ ಮಾಡಲ್ಲ. ಸಾರಿ.." ಎಂದೆ. 
ನಗುತ್ತಾ, ಒಂದು ಪೆಪ್ಪರಮೆಂಟ್, ಒಂದು ನೆಲ್ಲಿಕಾಯಿ ತೆಗೆದುಕೊಂಡು ನನ್ನ ಕೆನ್ನೆ ಚಿವುಟಿ, "ಉಳಿದದ್ದೆಲ್ಲ ನಿಮಗೇ. ಇಟ್ಟುಕೊಳ್ಳಿ. ಇನ್ನುಮುಂದೆ ಕೇಳಿ ತಗೋಳಿ.. ಸರೀನಾ" ಎಂದು ಮುದ್ದು ಮಾಡುತ್ತ ಹೇಳಿ ಹೊರಟುಹೋದರು. 
 ಆಮೇಲೆ ಆ ದಾರಿಯಲ್ಲಿ ಹೋಗುತ್ತಿರಲಿಲ್ಲ. ಒಮ್ಮೆ ದಾರಿಯಲ್ಲಿ ಕಂಡ ಸಿಸ್ಟರ್, "ಏನು ಪುಟ್ಟಾ , ನೆಲ್ಲಿಕಾಯಿ ತಿನ್ನೋದು ಬಿಟ್ಟುಬಿಟ್ಯ? " ಎಂದಿದ್ದರು ನಗುತ್ತಾ. 
"ಇಲ್ಲಾ ಸಿಸ್ಟರ್, ಈಗ ಆ ದಾರಿಯಲ್ಲಿ ಬರುತ್ತಿಲ್ಲ" ಎಂದೆ. 
"ನಾಳೆ ಬಾ, ತುಂಬಾ ನೆಲ್ಲಿಕಾಯಿ ಇದೆ. ತೆಗೆದುಕೊಂಡು ಹೋಗು. ನಿನ್ನ ಫ್ರೆಂಡ್ಸನ್ನೂ ಕರ್ಕೊಂಡು ಬಾ" ಎಂದು ಹೇಳಿ ನಡೆದರು. 
ಮಾರನೇ ದಿನ ಖುಷಿಯೋ ಖುಷಿ.. ಬೊಗಸೆ ತುಂಬಾ ನೆಲ್ಲಿಕಾಯಿ... ತಿಂದಿದ್ದೇ ತಿಂದಿದ್ದು..!!
ಈಗ ನೆಲ್ಲಿಕಾಯಿಯಾಗಲೀ, ಪೆಪ್ಪರ್ಮೆಂಟ್ ಆಗಲೀ ಅಂಗಡಿಯಲ್ಲಿ ಕಾಣುವುದೇ ವಿರಳ. ಕಂಡಾಗ ಬಿಡುವ ಮಾತೇ ಇಲ್ಲ. ಕಳ್ಳತನ ಮಾಡುವುದಿಲ್ಲ, ದುಡ್ಡು ಕೊಟ್ಟೇ ಖರೀದಿಸುವುದು. 
ಬಾಲ್ಯದ ಆ ಕ್ಷಣಗಳನ್ನು ಖರೀದಿಸಲು ಸಾಧ್ಯವಿಲ್ಲ, ಇವುಗಳನ್ನೆಲ್ಲ ಖರೀದಿಸಿ, ಬಾಯಿಯನ್ನು ಹುಳಿ -ಸಿಹಿ ಮಾಡಿಕೊಳ್ಳುತ್ತ, ಆ ಚಿನ್ನದ ದಿನಗಳನ್ನು ನೆನಪುಮಾಡಿಕೊಳ್ಳುವ ಪ್ರಯತ್ನವಷ್ಟೇ...!!!

Monday, July 6, 2020

ಹೇ ಅನಾಮಿಕ..


ಅಮ್ಮ ಕೂಗ್ತಿದ್ಲು..
"ಏನಾದ್ರೂ ಹುಚ್ಚು - ಗಿಚ್ಚು ಹಿಡಿದಿದ್ಯೇನೆ ನಿಂಗೆ?  ಈ ಮಳೇಲಿ ಎಲ್ಲಿ ಓಡ್ತಿಯಾ?"
ಇದು ಹೊಸತೇನಲ್ಲ. ಪ್ರತಿ ಮಳೆಗಾಲದ ಹೊಸ ಮಳೆಗೂ ಅಮ್ಮನದು ಇದೇ ರಾಗ... ನಾನು ಓಡುತ್ತೇನೆ.. ಅವಳ ಮಾತನ್ನು ಅಲಕ್ಷಿಸಿ,..
ಗದ್ದೆ ಬಯಲಿನಲ್ಲಿ ಕುಣಿಯುತ್ತಿದ್ದೆ ಒಬ್ಬಳೇ.. "ಮಾಯದಂಥ ಮಳೆ ಬಂತಣ್ಣಾ.." ಎಂದು ಹಾಡುತ್ತಾ..
ಸೀರೆ - ರವಿಕೆ ಎಲ್ಲ ಒದ್ದೆ.
ಒದ್ದೆ ಕೂದಲಿನಿಂದ ಬೆನ್ನ ಮೇಲೆ ಇಳಿಯುವ ನೀರು ಕಚಗುಳಿ ಇಡುತ್ತಿತ್ತು. ಮುಂಗುರುಳ ನೀರು ಹಣೆಯ ಮೇಲೆ ಜಾರಿ, ಕೆನ್ನೆಯ ಮೇಲೆ ಹರಿದು, ಗಲ್ಲದ ಮೂಲಕ ಕೆಳಗಿಳಿಯುತ್ತಿತ್ತು. ನನ್ನ ಕುಣಿತಕ್ಕೆ ಪೃಕೃತಿಯೂ ಸಾಥ್ ನೀಡಿತ್ತೇನೋ.. ಗಾಳಿಗೆ ಮರಗಳೂ ತಲೆದೂಗಿದ್ದವು.
ಮಳೆ ಕಡಿಮೆ ಆಯ್ತಲ್ಲ ಅಂತಾ ನಿಂತಿದ್ದೆ ಹಳೇ ಮಾವಿನ ಮರದ ಕೆಳಗೆ. ಸೆರಗನ್ನು ಹಿಂಡಿಕೊಳ್ಳುತ್ತಾ.. ಎಷ್ಟು ಪೆದ್ದಿ ನಾನು ಮರದ ಹನಿಗಳು ಮತ್ತೂ ಒದ್ದೆ ಮಾಡುತ್ತಿದ್ದವು. ಸೀರೆ ಒಣಗಿಸುವ ವ್ಯರ್ಥ ಪ್ರಯತ್ನ..!
   ನೀನದೆಲ್ಲಿಂದ ಬಂದೆಯೋ..ಈ ಸ್ಥಿತಿಯಲ್ಲಿ ನನ್ನ ನೋಡುತ್ತಿದ್ದೀಯಲ್ಲ.. ಸಂಕೋಚವಾಯ್ತು..
ಹತ್ತಿರ ಬರುವವರೆಗೆ ನಿನ್ನ ಮುಖ ನೋಡಿದ್ದೆನಷ್ಟೆ.. ಆಮೇಲೆ ನಿನ್ನ ಕೆಂಪು ಶರ್ಟು, ಕಪ್ಪು ಪ್ಯಾಂಟು, ಕರಿ ಬೂಟು, ಕುತ್ತಿಗೆಗೆ ನೇತು ಹಾಕಿದ ಕ್ಯಾಮರಾ.. ಛತ್ರಿ ಹಿಡಿದ ಎಡಗೈಲಿ ಕಂಡ ವಾಚು..
"ತಗೊಳ್ಳಿ ಇದನ್ನ.."
ನಿನ್ನ ಧ್ವನಿ ಕೇಳಿದ್ದೇ ಆಗ.. ನೀ ಕೊಟ್ಟಿದ್ದನ್ನು ತೆಗೆದುಕೊಳ್ಳುವಾಗ.. ನಿನ್ನ ಬಲಗೈ ಕಿರುಬೆರಳು ತಾಕಿತಲ್ಲ.. ನನ್ನ ಕಾಲು ಗಡ ಗಡ ನಡುಗಿತೊಮ್ಮೆ.. ಯಾಕೋ ಗೊತ್ತಿಲ್ಲ..!
ಮೊದಲೇ ಹೀಗೆ ನಿನ್ನೆದುರು ನಿಂತಿದ್ದಕ್ಕೆ ನಾಚುತ್ತಿದ್ದೆ. ನೀ ಕೊಟ್ಟ ಫೋಟೋದಲ್ಲಿ ನಾನೇ ಇದ್ದೇನೆ.
ಅರೆ.. ನಾನು ಗದ್ದೆಯಲ್ಲಿ ಕುಣಿಯುವಾಗ ನೀನು ನೋಡಿದ್ದೆ.. ನನ್ನ ಫೋಟೋ ತೆಗೆದಿದ್ದೆ ಎಂದು ತಿಳಿದಾಗ ನಿನ್ನ ಎದುರು ನಿಲ್ಲುವುದಿರಲಿ, ನೀರಾಗಿ ಕರಾಗಬಾರದೇ ಇಲ್ಲೇ ಒಮ್ಮೆ.. ಓಡಿ ಹೋಗಿಬಿಡಲೇ... ಎನಿಸಿತ್ತು.
"ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀರಾ..
ನೀವು ಹುಡ್ಗಿರೆಲ್ಲ ಹೀಗೆನಾ? ಮಳೆ ಅಂದ್ರೆ ಅಷ್ಟು ಹುಚ್ಚಾ?  ನಿಮ್ಮಂಥವರನ್ನ ನೋಡಿ ಸಿನೆಮಾ ಮಾಡ್ತಾರಾ ಅಥವಾ ಸಿನೆಮಾ ನೋಡಿ ನೀವು ಹೀಗಾಡ್ತೀರಾ..? "
ಬೇರೆ ಯಾರಾದ್ರೂ ಇಷ್ಟೆಲ್ಲಾ  ಮಾತಾಡಿದ್ರೆ ಸೀದಾ ನೆರಿಗೆನಾ ಸೊಂಟಕ್ಕೆ ಸಿಕ್ಕಿಸಿ, ಸೆರಗನ್ನ ಕಟ್ಟಿ ಗಯ್ಯಾಳಿಯ ರೂಪ ತಾಳುವ ನಾನು, ನಿನ್ನ ಮಾತಿಗೆ ತಲೆ ತಗ್ಗಿಸಿಯೇ ಮುಗುಳ್ನಕ್ಕಿದ್ದೆ.
"ಜಾಸ್ತಿ ಕುಣಿಬೇಡಿ, ಮನೆಗ್ಹೋಗಿ.."
ಎಂದು ಹೇಳಿ ಹೊರಟೆಬಿಟ್ಟೆಯಲ್ಲ... ಸರಿಯಾಗಿ ಮುಖವನ್ನೂ ತೋರಿಸದೆ..
ನೀನು ಯಾರು ಏನು ಎಂದೂ ತಿಳಿಯಲಿಲ್ಲ. ಆ ನಂತರ ಎರಡು ಮಳೆಗಾಲ ಕಳೆದವು. ನಿನ್ನ ಸುಳಿವಿಲ್ಲ.

ಹೇ ಅನಾಮಿಕ,
ಕ್ರೂರಿ ನೀನು..
ನನ್ನೊಳಗಿನ ನನ್ನನ್ನು ಅಪಹರಿಸಿದವನೇ..
ಈಗೀಗಂತೂ ಪ್ರತಿ ಹನಿ ಮೈ ಮೇಲೆ ಬಿದ್ದಾಗಲೂ ತಂಪಾಗುವ ಬದಲು, ನಿನ್ನ ನೆನಪ ತರಿಸಿ ಉರಿಸುತ್ತಿವೆ...
ಫೋಟೋ ಕೊಟ್ಟು ಮನಸ್ಸು ಕದಿಯೋದು ಎಂಥ ಸುಲಭದ exchange ಅಂದುಕೊಂಡೆಯಾ?.....

-ಪಲ್ಲವಿ
(ಚಿತ್ರ ನೋಡಿ ಕಲ್ಪಿಸಿದ್ದು... 😉😅)

Friday, July 3, 2020

ಭೋರ್ಗರೆತ

ಒದ್ದೆ ಮಣ್ಣಿನ ಘಮ..
ಒಮ್ಮೆ ಪೂರ್ತಿ ಒದ್ದೆಯಾಗಿ ನಡುಗಿ ನಿಲ್ಲುವುದೆಂಥ ಸೋಜಿಗ.. 
ಈಗ ಒಣಗಿಸಿಕೊಳ್ಳಲು ಮೈಯೊಡ್ಡಿದ ಧಾರುಣಿಗೆ  ತುಸುವೇ ಇಣುಕಿದ ರವಿಕಂಡ.. 
 ನಾಚಿ ಹಸಿರ ಹೊದ್ದಳು.. ಆದರೆ ಅದೂ ಒದ್ದೆಯೇ.. 

ಪರ್ವತ -ಪ್ರಪಾತಗಳ ನಡುವಣ ಇಳಿಜಾರಲ್ಲಿ 
ಒಂದೊಂದೇ ಹನಿ ತೊಟ್ಟಿಕ್ಕುತ್ತಿದ್ದರೆ... 
ಸಾಗರದ ಭೋರ್ಗರೆತ ಕಿವಿಗಡಚಿಕ್ಕುವಂತೆ.. 
ಅಯ್ಯೋ ಒಣಗುವುದರೊಳಗೆ ಮತ್ತೆ ಬರುತ್ತಿದ್ದಾನೆ ಮೋಡಗಳ ಮೇಲೆ ರಾಯಭಾರಿಯಂತೆ.. 

ಈಗೇಕೆ ವೈಯ್ಯಾರ.. 
ತಂಗಾಳಿಯೊಡನೆ ಗಂಧದ ಘಮವನ್ನೂ ಸೇರಿಸಿ 
ರವಾನಿಸುವಾ.. ನನ್ನೊಪ್ಪಿಗೆಯ ಅಪ್ಪುಗೆಯ ಸೂಚ್ಯವಾಗಿ.. 
ಭೋರ್ಗರೆಯಲಿ ಮತ್ತೊಮ್ಮೆ.. ರವಿ ಕರಗಿ ಶಶಿ ಕಾಣುವ ಈ ಹೊತ್ತಲ್ಲಿ.. 

-ಪಲ್ಲವಿ 

Thursday, July 2, 2020

ಸ್ವಚ್ಛತೆಯ ನೆಪದಲ್ಲಿ ಪುಗಸಟ್ಟೆ ಉಪದೇಶ !!

ಊರಲ್ಲಿ ಮೊನ್ನೆ ದೊಡ್ಡ ಗಲಾಟೆ. ಯಾವುದೊ ಛತ್ರದಲ್ಲಿ ಮದುವೆ ಮುಂತಾದ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮದ ನಂತರ ಊಟದ ಬಾಳೆ, ಪ್ಲಾಸ್ಟಿಕ್ ಬಟ್ಟಲು, ಲೋಟ, ಕಾಗದ ಎಲ್ಲ ರೀತಿಯ ತ್ಯಾಜ್ಯಗಳೂ ನಮ್ಮೂರಿನ ರಸ್ತೆಯ ಪಕ್ಕದಲ್ಲಿ ವಿಲೇವಾರಿಯಾಗುತ್ತಿತ್ತು. ಇದರ ಬಗ್ಗೆ ದೂರು ಸಲ್ಲಿಸಿದ್ದರು ಊರಿನ ಹಿರಿಯರು.
 ಇನ್ನು ಸಂಜೆಯಾಯಿತೆಂದರೆ ಗುಂಪುಗೂಡಿ ಬಂದು ನಮ್ಮೂರಿನ ಕಟ್ಟೆಯ ಮೇಲೆ ಕುಳಿತು ತಮ್ತಮ್ಮ ಸುಖ-ದುಃಖಗಳನ್ನೂ ಹೇಳಿಕೊಳ್ಳುತ್ತ ಮೂರ್ನಾಲ್ಕು ಬಾಟಲಿಗಳ ಜೊತೆ ದುಂಡು ಕಟ್ಟೆಯ ಸಭೆ ನಡೆಸುವವರಿಗೂ ಪೊಲೀಸರು ಸ್ವಚ್ಛತಾ ಅಭಿಯಾನದ ಪಾಠ ಮಾಡಿದರು. 
ಹೀಗೇ ಐದುನೂರು -ಸಾವಿರ ಜನರಿರುವ ಪುಟ್ಟ ಪಟ್ಟಣವನ್ನು ಪೊಲೀಸರೊ, ಮತ್ಯಾವುದೋ ಅಧಿಕಾರಿಯೋ ತಮ್ಮ ಮಾತುಗಳಲ್ಲಿ, ಸಾಧ್ಯವಾಗದಿದ್ದಲ್ಲಿ ಅಧಿಕಾರ ಚಲಾಯಿಸಿಯಾದರೂ ಕೆಲವು ನಿಯಮಗಳನ್ನು ಪಾಲಿಸುವಂತೆ ಮಾಡುತ್ತಾರೆ. 

ಆದರೆ ಲಕ್ಷಗಟ್ಟಲೆ ಜನರಿರುವ ಮಹಾನಗರಗಳ ಪರಿಸ್ಥಿತಿ ಹಾಗಿಲ್ಲ..! ಅಧಿಕಾರಿಗಳ ಎದುರು  "ನಿಮ್ಮ ಹೈಯರ್ ಆಫೀಸರ್ ಗೊತ್ತು ನನಗೆ..", " ನನಗೂ ಕಾನೂನು ಗೊತ್ತಿದೆ ರೀ.." ಎಂದು ಧ್ವನಿ ಏರಿಸಿ ಮಾತನಾಡುವವ ಅಕ್ಷರಸ್ಥ ನಾಗರೀಕ ಎಂದಿಗೂ ತನ್ನ ತಪ್ಪನ್ನು ಒಪ್ಪಿಕೊಳ್ಳಲಾರ. ಎಷ್ಟೆಂದರೂ ಅವನ ಪ್ರತಿಷ್ಠೆಯ ಪ್ರಶ್ನೆಯಲ್ಲವೇ..!!

'ಬೆಂಗಳೂರು' ಎಂಬ ಮಹಾನಗರಿಯಂತೂ ಬಂದವರನ್ನೆಲ್ಲ ಸ್ವಾಗತಿಸಿ, ಕೋಟಿ ಜನರ ಕನಸುಗಳನ್ನು ತನ್ನೊಡಲೊಳಗೆ ಇರಿಸಿಕೊಂಡು, ಯಾವ ಟ್ರಾಫಿಕ್ ಸಿಗ್ನಲ್ ಅನ್ನೂ ಲೆಕ್ಕಿಸದೇ ಕಾಲದೊಂದಿಗೆ ನುಗ್ಗಿ ಓಡುತ್ತಲೇ ಇದೆ.  
ಸೂಕ್ಷ್ಮವಾಗಿ ಗಮನಿಸಿದರೆ ದಿನವೂ ಓಡಾಡುವ ರಸ್ತೆಯಲ್ಲಿ, ಕ್ಯಾಂಟೀನ್ ಅಲ್ಲಿ, ಬಸ್ ಸ್ಟ್ಯಾಂಡಿನಲ್ಲಿ, ಟ್ರಾಫಿಕ್ ಅಲ್ಲಿ ಲೆಕ್ಕಕ್ಕೆ ಸಿಗದಷ್ಟು ಅನುಭವಗಳು. 
ಕೆಲವೇ ತಿಂಗಳುಗಳ ಹಿಂದೆ ನಡೆದ ಎರಡು ಪುಟ್ಟ ಘಟನೆಗಳು, ಒಂದಕ್ಕೊಂದು ಸಂಬಂಧವಿರದಿದ್ದರೂ ಎಲ್ಲವೂ ಒಂದೇ ರೀತಿ ಎನ್ನುವಂತೆ ಭಾಸವಾಗುತ್ತವೆ. 

1. ಲಲಿತಾ ಆಂಟಿಯ ಉಪದೇಶ 
ಪಕ್ಕದ ಮನೆಯ ಲಲಿತಾ ಆಂಟಿ ಬಾಗಿಲಲ್ಲಿ ನಿಂತು ಮಾತನಾಡಲು ಪ್ರಾರಂಭಿಸಿದರೆ, ಅಂದು ನಮ್ಮ ಬಸ್ ತಪ್ಪಿ ಹೋಗುವುದು ಖಂಡಿತ. ತಮ್ಮ ಮನೆಯ ತಿಂಡಿಯಿಂದ ಪ್ರಾರಂಭವಾಗಿ, ಮೋದಿಯವರ ಭಾಷಣದವರೆಗೂ ಹೋಗುತ್ತಿತ್ತು ಅವರ ಮಾತು. ಆದರೆ ನಾವು ಅವರನ್ನು ಮೆಚ್ಚಲು ಕಾರಣವಿತ್ತು. ಆಂಟಿಯ ಮನೆ ತುಂಬಾ ಕ್ಲೀನ್. ಸ್ವಚ್ಛತೆಯ ವಿಷಯದಲ್ಲಿ ಎಂದಿಗೂ ನೋ ಕಾಂಪ್ರಮೈಸ್ ಎನ್ನುತ್ತಾರೆ ಆಂಟಿ. ಹಾಗಾಗಿ ಅಪ್ಪಿ ತಪ್ಪಿ ಅವರು ನಮ್ಮ ಮನೆಗೆ ಬರುತ್ತಾರೆಂದರೆ ಎಲ್ಲವನ್ನೂ ಒಪ್ಪವಾಗಿರಿಸುತ್ತಿದ್ದೆವು. 
ಎಂದೂ ಬೇಗ ಹೊರಡದ ನಾವು ಅವತ್ತು ಮಾತ್ರ ಆರು ಗಂಟೆಗೆ ಮನೆಯಿಂದ ಹೊರಬಂದೆವು.  ಪಕ್ಕದ ಮನೆಯ ಹಿತ್ತಲಿನ ಕಾಂಪೌಂಡ್ ಒಳಗೆ ತಮ್ಮ ಮೊಮ್ಮಗನ ಡೈಪರ್, ಮತ್ತೊಂದಿಷ್ಟು ಕಸಗಳನ್ನು ಎಸೆದು ತಿರುಗಿದ ಆಂಟಿಗೆ ಎದುರು ಕಂಡಿದ್ದು ನಾವು. ಪಾಪ ಅವರ ಮುಖವೆಲ್ಲ ಹುಳ್ಳಹುಳ್ಳಗೆ.. ಇಷ್ಟು ಬೇಗ ಎದ್ದುಬಿಟ್ರೆನಮ್ಮ.. ಎನ್ನುತ್ತಾ ನಮ್ಮ ಉತ್ತರಕ್ಕೂ ಕಾಯದೆ ಮನೆಯೊಳಗೆ ನಡೆದರು. 
ಸ್ವಚ್ಛವಾಗಿರದಿದ್ದರೆ ಆ ಖಾಯಿಲೆ ಬರುತ್ತದೆ, ಸೋಮಾರಿಯಾಗುತ್ತಾರೆ ಎಂದೆಲ್ಲ ಬಿಟ್ಟಿ ಉಪದೇಶ ಕೊಡುತ್ತಿದ್ದ ಆಂಟಿ ಈಗ ನಮ್ಮನ್ನು ಮಾತನಾಡಿಸಲೂ ಬರುವುದಿಲ್ಲ...!!

2.ನಿಮ್ಮಂಥ ಯುವಕರು ಮನಸ್ಸು ಮಾಡ್ಬೇಕು... 
ಗೆಳೆಯನೊಬ್ಬ ತನ್ನ ಸಾಮಾಜಿಕ ಜಾಲತಾಣದ ಗೋಡೆಯ ಮೇಲೆ ಬರೆದುಕೊಂಡಿದ್ದ. ಆಫೀಸಿನ ಕ್ಯಾಬ್ ಗಾಗಿ ಕಾಯುತ್ತ ನಿಂತಿರುವಾಗ ತನ್ನ ಎಂದಿನ ರೂಢಿಯಂತೆ ಬಬ್ಬಲ್ಗಮ್ ಒಂದನ್ನು ಬಾಯಿಗೆ ಹಾಕಿಕೊಂಡು ಅದರ ಪ್ಲಾಸ್ಟಿಕ್ ಸಿಪ್ಪೆಯನ್ನು ಅಲ್ಲೇ ಇದ್ದ ಕಸದ ಬುಟ್ಟಿಗೆ ಹಾಕಿದ. ಅದು ಬುಟ್ಟಿಯ ಪಕ್ಕದಲ್ಲಿ ಬಿದ್ದಿದ್ದನ್ನು ಅವನು ಗಮನಿಸಲಿಲ್ಲ. ಅಲ್ಲೇ ವಾಕಿಂಗ್ ಮಾಡುತ್ತಿದ್ದ ಹಿರಿಯರೊಬ್ಬರು ತಮ್ಮ ಬಾಯಲ್ಲಿದ್ದ ಪಾನ್ ಮಸಾಲವನ್ನು ರಸ್ತೆಯಲ್ಲೇ ಪಿಚಕಾಯಿಸಿ ಇವನ ಬಳಿ ಬಂದು, "ನಿಮಗೆ ಅಂತಾನೆ ಸ್ವಚ್ಛತೆ ಬಗ್ಗೆ ಇಷ್ಟು ಜಾಗೃತಿ ಮೂಡಿಸ್ತಾ ಇರೋದು. ನಿಮ್ಮಂಥ ಯುವಕರು ಮನಸ್ಸು ಮಾಡ್ಬೇಕು..ರೋಡಿನಲ್ಲಿ ಕಸ ಎಸೀತೀರಾ.. ನಮ್ಮ ಮನೆಗೇ ಬರತ್ತೆ. ನಿಮಗೆಲ್ಲ ಯಾವಾಗ ಬುದ್ಧಿ ಬರುತ್ತೋ ಏನೋ.." ಎಂದು ಧ್ವನಿ ಏರಿಸಿದರು. 
ಅವನು ಹೇಳಿದ್ದು -"ಪ್ಲಾಸ್ಟಿಕ್ ಸಿಪ್ಪೆ, ಅದೂ ಕಸದ ಬುಟ್ಟಿಗೇ ಎಸೆದಿದ್ದು.  ಸ್ವಚ್ಛತೆಯ ಪಾಠ ಮಾಡಲು ಮಹಾನುಭಾವರೊಬ್ಬರು ಪಾನ್ ಮಸಾಲಾವನ್ನು ರಸ್ತೆಯ ಮಧ್ಯ ಉಗುಳಿದರು. ಪಾಪ, ಅದು ಅವರ ಪಾಠದಲ್ಲಿರಲಿಲ್ಲವೇನೋ...!"

ಹೀಗೇ ಉಪದೇಶ ಕೊಡುವವರು ಬೀದಿಯಲ್ಲೊಬ್ಬರು ಸಿಗುತ್ತಾರೆ. ಹಿರಿಯರ ಮಾತನ್ನು ನಾವು ನಿರ್ಲಕ್ಷಿಸುತ್ತೇವೆ ಎಂದಲ್ಲ, ಅವರೇ ತಮ್ಮ ಮಾತಿನಂತೆ ನಡೆಯುವುದಿಲ್ಲ ಎಂದಾದಲ್ಲಿ ಇನ್ಯಾರು ಕೇಳುತ್ತಾರೆ? 
ಕೆಲವು ದಿನಗಳ ಹಿಂದೆ ಬಿ.ಎಂ.ಟಿ.ಸಿ. ಬಸ್ಸಿನಲ್ಲಿ ಆಂಟಿಯೊಬ್ಬರು ಬ್ಯಾಗಿನಲ್ಲಿದ್ದ ಕಾಗದ ಕಸಗಳನ್ನೆಲ್ಲ ಹೆಕ್ಕಿ ತೆಗೆಯುತ್ತಿದ್ದರು. ಪಾಪ ಅವರ ವ್ಯಾನಿಟಿ ಬ್ಯಾಗ್ ಸ್ವಚ್ಛ ಮಾಡಲು ಮನೆಯಲ್ಲಿ ಸಮಯವಿರಲಿಲ್ಲವೇನೋ..! ಕಿಟಕಿಯ ಪಕ್ಕ ಕುಳಿತ ನಮಗೆ ಕೊಟ್ಟು ಹೊರಗೆ ಎಸೆಯಿರಿ ಎಂದರು. ಏನೂ ಮಾತನಾಡದೆ ನನ್ನ ಬ್ಯಾಗಿನಲ್ಲಿ ಹಾಕಿಕೊಂಡೆ. "ಓಹ್ಹೋ ಸ್ವಚ್ಛ ಭಾರತಾನಾ.. ಈಗ ಇದೊಂದು ಜೋರಾಗಿಬಿಟ್ಟಿದೆ. ಪರವಾಗಿಲ್ಲ. ನಿಮ್ಮಂಥವರು ಮನಸು ಮಾಡಿದರೆ ಬೆಂಗಳೂರನ್ನು ಸ್ವಚ್ಛಗೊಳಿಸಬಹುದು" ಎಂದು ಹೇಳಿ ಬಸ್ ಇಳಿದುಬಿಟ್ಟರು ಆಂಟಿ. ಹಾಗಾದರೆ ನಾವು ಬೆಂಗಳೂರಲ್ಲಿ ಇರೋವ್ರ ಎಲ್ಲರ ಬ್ಯಾಗಿನಿಂದ ಕಸ ತಗೊಂಡು ನಮ್ಮ ಬ್ಯಾಗಲ್ಲಿ ಇಟ್ಕೋಳೋದ?  ಅದ್ರಿಂದ ಬೆಂಗಳೂರು ಸ್ವಚ್ಛ ಆಗತ್ತಾ ಈ ಆಂಟಿ ಪ್ರಕಾರ?  ಅಂತಾ ನಾವೂ ಮಾತನಾಡಿಕೊಂಡೆವು...!
ನಮ್ಮ ಏರಿಯಾದ ಕೆಲವು ಮನೆಗಳ ಮುಂದೆ ಬಣ್ಣ ಬಣ್ಣಗಳ ಬೋರ್ಡ್ ಇದೆ. 'ಇಲ್ಲಿ ಕಸ ಹಾಕುವಂತಿಲ್ಲ', 
'ಗಾಡಿ ನಿಲ್ಲಿಸುವಂತಿಲ್ಲ',..ಇವೆಲ್ಲ ಸರಿ. 


'ಇಲ್ಲಿ ನಿಮ್ಮ ನಾಯಿಯ ಹೊಲಸು ಮಾಡಿಸಿದರೆ ಐದುನೂರು ರೂಪಾಯಿ ಕೊಡಬೇಕಾಗುವುದು. ಎಚ್ಚರಿಕೆ!!'.. ಈ ಬೋರ್ಡ್ ನೋಡಿ ಸಣ್ಣ ಅನುಮಾನವಿತ್ತು. ಈ ಮನೆಯ ಯಜಮಾನ ನಾಯಿಯ ಮಲಕ್ಕೆ ದಂಡ ವಿಧಿಸುತ್ತಿದ್ದಾನೆಯೇ ಅಥವಾ ಶುಲ್ಕ ಪಡೆಯುತ್ತಿದ್ದಾನೆಯೇ..?!!
ಏನು ಮಾಡಿದರೂ ಲಾಭವೇ. ವಿಶೇಷ ತಳಿಯ ನಾಯಿಗಳನ್ನು ಸಾಕಿ,  ಅವುಗಳನ್ನು ವಾಕಿಂಗ್ ನೆಪದಲ್ಲಿ ಹೊರಗೆ ಕರೆತಂದು ಇನ್ನೊಬ್ಬರ ಮನೆಯ ಜಾಗದಲ್ಲಿ ಬಹಿರ್ದೆಸೆ ಮಾಡಿಸುವ ಜನರ ನಡುವೆ ಒಬ್ಬ ಹೀಗೂ ಹಣ ಮಾಡಲು ಯೋಚಿಸಿರಬಹುದು. ಹೇಳಿ ಕೇಳಿ ಮನುಷ್ಯ ಬುದ್ಧಿ ಜೀವಿಯಲ್ಲವೇ..? !!

ನನ್ನ ಮನೆ ಸ್ವಚ್ಛವಿರಬೇಕು ಎಂದು ಪಕ್ಕದ ಮನೆಗೆ ಕಸ ಎಸೆದರೆ, ಮನೆ ಸುಂದರವಾಗಿ ಕಾಣಬಹುದು..ಮನಸ್ಸಲ್ಲ..!
ಮೊದಲು ಮನಸ್ಸು ಸ್ವಚ್ಛವಾಗಬೇಕು-  ನಂತರ  ಮನೆ, ಊರು, ರಾಜ್ಯ ದೇಶ ಎಲ್ಲವೂ ಸ್ವಚ್ಛವಾಗುತ್ತದೆ. 




Wednesday, July 1, 2020

ಬಿಂಬದ ಲೋಕ

ಹೇಳೆ ಪುಟ್ಟ ಹಕ್ಕಿ , 
ಕಾಡ ಬಿಟ್ಟು ನಾಡಿಗೆ ಬಂದೆಯೇಕೆ.. 
ಕಾಳು -ಹುಳುಗನ್ನರಸುತ್ತ, ಊರೂರುಗಳ ಸುತ್ತುತ್ತಿದ್ದೆ 
ನಿನ್ನ ಕಂಡು ಬಂದೆ ಗೆಳತಿ.. 

ಹೌದೇನು ಪುಟ್ಟ ಹಕ್ಕಿ, 
ಎಷ್ಟು ಕಾಳು ದೊರೆತವು? 
ಏನಿಲ್ಲವೇ ಗೆಳತಿ, ನಿಮಗೇ ಇಲ್ಲದ್ದು 
ನನಗೆಲ್ಲಿಂದ ಸಿಗಬೇಕು? 

ಅಯ್ಯೋ ಪುಟ್ಟ ಹಕ್ಕಿ, 
ಕನ್ನಡಿಯಲೇನು ಇಣುಕುತಿದ್ದೆ? ನೀನಂತೂ ಸುಂದರಿಯೇ.. 
ಒಳಗೊಂದು ಆಹಾರದ ಲೋಕ ಇರಬಹುದೆಂಬ ಆಶೆ ಇಂದ ನೋಡಿದೆ ಗೆಳತಿ.. 

ಪಾಪದ ಪುಟ್ಟ ಹಕ್ಕಿಯೇ, 
ಈ ಲೋಕದ ಬಿಂಬವದು.. ನೀನೆ ಇರುವೆ ನೋಡಲ್ಲಿ.. 
ಹೌದಲ್ಲ ಗೆಳತಿ, ಅಲ್ಲಿಯೂ ನಾನೇ ಇರುವೆ.. 

ಅದೇ ಹಸಿವು, ಅದೇ ಕನಸು, ಎಲ್ಲ ಅದೇ ಕಾಣುತಿದೆ 
ಗೆಳತಿ.. ಒಂದು ಲೋಕದ ಹಸಿವೆಯೇ ಇಷ್ಟು..
 ಮತ್ತೆ ಬಿಂಬದ ಲೋಕವೇಕೆ? 
ಪುಟ್ಟ ಹಕ್ಕಿ, ನಮ್ಮ ಹಸಿವನ್ನು ನಮಗೆ ಕಾಣಿಸಲು ಬಿಂಬ ಬೇಕು.. 
ಬೆನ್ನ ಹಿಂದಿನ ಬೇಟೆಗಾರ ಎದುರು  ಕಾಣಲು  ಬಿಂಬ ಬೇಕು..   

ನಾಡಿಗೆ ಬಂದು ತಪ್ಪು ಮಾಡಿದೆನಾ ಗೆಳತಿ? 
ಈ ಲೋಕ, ಬಿಂಬದ ಲೋಕ ಎರಡರಲ್ಲೂ ಬೇಟೆಗಾರ... 
 ಪುಟ್ಟ ಹಕ್ಕಿಯ ತಲೆ ಸವರುತ್ತ, 
ಹೌದು ಬಡಪಾಯಿ, ನೀನೆ ಇಲ್ಲಿ ಆಹಾರವಾಗುವ ಮೊದಲು, ಹೊರಟುಬಿಡು ಕಾಡಿನತ್ತ.. 

ಮತ್ತೆ ನೋಡಿತು ಪುಟ್ಟ ಹಕ್ಕಿ ಬಿಂಬದ ಲೋಕವ, 
ಬೇಡವೆನಗೆ ಈ ಬಿಂಬದ ಮೋಹ.. 
ಕಾಡಿಗೆಯ ಕಣ್ಣು, ಕೆಂಪನೆಯ ತುಟಿ, 
ಮೂರಿಂಚಿನ ಬಣ್ಣಗಳೆಲ್ಲ ಇವರಿಗೇ ಸರಿ.. 
ಬಿಂಬದ ಮಾಯೆ ಮನುಜನಿಗೆ ಮಾತ್ರ.. 
ಎನ್ನುತ್ತಾ ಹಾರಿತು ಗಗನಕ್ಕೆ...

(ಗಾಡಿಯ ಕನ್ನಡಿ ಬಳಿ ಕುಳಿತ ಹಕ್ಕಿಯೊಡನೆ ಮಾತುಕತೆ ಹೀಗಿರಬಹುದೆಂಬ ಕಲ್ಪನೆ)

(ಚಿತ್ರ : ಪೂರ್ಣಚಂದ್ರ ಹೆಗಡೆ)
 
 

ಕರಗುವೆ...