Sunday, July 12, 2020

ಮತ್ತೆ ಕಾಡಿದ ಮಳೆಯ ನೆನಪು - 1



(ಮಳೆ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧ. ಕೆಲವರಿಗೆ ಖುಷಿ, ಕೆಲವರಿಗೆ ನೋವು ಹತಾಶೆ, ಖಿನ್ನತೆಯ ಬಿಂಬವದು. ಅಂಥ ಒಂದು ವಿಭಿನ್ನ ಮನಸ್ಥಿತಿಯ ಕಥೆಯೊಂದಿಗೆ.. ಒಂದಿಡೀ ಊರಿನ ಕಥೆಯೂ ಸುತ್ತುವುದು ಇಲ್ಲಿ.  ಇದು 'ಮತ್ತೆ ಕಾಡಿದ ಮಳೆಯ ನೆನಪು..')
ಸುಲೋಚನಾ ಕುಳಿತಿದ್ದಳು ಜೋರು ಮಳೆಯನ್ನೇ ದಿಟ್ಟಿಸುತ್ತಾ. ಐವತ್ತರ ಆಸುಪಾಸಿನಲ್ಲಿದ್ದರೂ ಅರವತ್ತು ದಾಟಿದಂತೆ ಸುಕ್ಕುಗಟ್ಟಿತ್ತು ಮುಖ..!
"ನನ್ನೊಳಗನ್ನು ಅಣಕಿಸುವಂತಿದೆ ಈ ಮಳೆ.. ಒಂದು ನಿಮಿಷವಾದರೂ ಸುಮ್ಮನಾಗಬಾರದೇ.." ತನ್ನಲ್ಲೇ ಗೊಣಗಿಕೊಂಡಳು. 
ಅಷ್ಟರಲ್ಲಿ ಓಡುತ್ತಾ, ಏದುಸಿರು ಬಿಡುತ್ತಾ ಬಂದಳು ಕುಸುಮಾ. 
"ಅತ್ತೆ, ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಒಂದು ಮಾತು ಹೇಳಿ ಬರಬಾರ್ದಾ?  ಮನೆಯೆಲ್ಲ ಹುಡುಕಿದೆ. ಹಿತ್ತಲಲ್ಲಿ ಬಟ್ಟೇನೋ, ಪಾತ್ರೆನೋ ತೊಳೀತಾ ಇರ್ಬೋದು ಅಂತಾ ಅಲ್ಲೂ ನೋಡ್ದೆ. ಎಲ್ಲೆಲ್ಲಿ ಅಂತಾ ಹುಡ್ಕೋದು ನಿನ್ನಾ..."
ಒಂದೇ ಉಸಿರಲ್ಲಿ ಹೇಳಿ ಮುಗಿಸಿ, ಹುಸಿ ಮುನಿಸಿನಿಂದ ಮುಖ ಗಂಟಿಕ್ಕಿ, ಕಂಬಕ್ಕೊರಗಿ ನಿಂತಳು. 
"ಮನೇಲಿ ಇಲ್ಲಾ ಅಂದ್ಮೇಲೆ ಇಲ್ಲೇ ಇರ್ತೀನಿ ಅಂತಾ ನಿಂಗೂ ಗೊತ್ತು. ಸೀದಾ ಇಲ್ಲೇ ಬರ್ಬೇಕಿತ್ತು."
"ಹೊ, ಬಂದ್ಬಿಡ್ತೀನಿ. ನಿಂಗೊಂದು ಹಗಲು ರಾತ್ರಿ ಯಾವದೂ ಇಲ್ಲಾ, ಮನ್ಸಿಗೆ ಕಂಡಾಗೆಲ್ಲ ದೇವಸ್ಥಾನಕ್ಕೆ ಬಂದ್ಬಿಡ್ತೀಯಾ ಅಂತಾ, ನಾನೂ ಹಾಗೇ ಅಂದ್ಕೊಂಡಿದೀಯ? " ಎನ್ನುತ್ತಾ ಕೈ ಬೆರಳ ತುದಿಯಲ್ಲಿ ಲಂಗವನ್ನು ಹಿಡಿದು, ಮೆಟ್ಟಿಲು ಇಳಿಯುತ್ತಿದ್ದಳು. 
"ಅಲ್ವೇ, ಹೊಸ ಲಂಗ, ಹೊಸ ಗೆಜ್ಜೆ ಎಲ್ಲ ಹಾಕ್ಕೊಂಡು ಈಗೆಲ್ಲಿ ಹೊರಟಿದಿಯೇ? "
"ನಿಂಗೆ ತೋರ್ಸೋಣ ಅಂತಾ ಬಂದೆ. ನೀನು ಇಲ್ಲಿದೀಯ..ಈಗ ಊರಿಗೆಲ್ಲ ತೋರಿಸ್ಕೊಂಡು ಬಂದಂಗೆ ಆಯ್ತು."  ಲಂಗ ಮೇಲೆತ್ತಿಕೊಂಡು, ಕಾಲನ್ನು ಕಲ್ಯಾಣಿಯ ನೀರಲ್ಲಿ ಇಳಿಬಿಟ್ಟಳು. 
ಅವಳ ಕೋಪ ಇನ್ನೂ ತಣಿದಿಲ್ಲ ಎಂದು ಅರಿವಾಗಿ ಸುಲೋಚನಾ ಮುಗುಳ್ನಕ್ಕಳು. 
"ನಾನೆಲ್ಲೋ ನಿನ್ನ ನೋಡೋಕೆ ಗಂಡು ಬಂದಿತ್ತು ಅಂದ್ಕೊಂಡೆ ಕುಸುಮಬಾಲೆ..." 
ಕುಸುಮಳ ಕೋಪ ಪೂರ್ತಿ ಇಳಿದು, ಅತ್ತೆಯತ್ತ ತಿರುಗಿ ನಕ್ಕಳು. ಇಡೀ ಊರಲ್ಲಿ 'ಕುಸುಮಬಾಲೆ' ಎಂದು ಕರೆಯುವುದು ಅತ್ತೆ ಮಾತ್ರ..! ಅವಳು ಕರೆದಾಗಲೆಲ್ಲ ಇವಳ ಕೋಪ ಮಾಯವಾಗುತ್ತಿತ್ತು. 
'ಹುಚ್ಚು ಹುಡುಗಿ, ಎಷ್ಟು ಬೇಗ ಕೋಪ ಬರುತ್ತದೊ, ಅಷ್ಟೇ ಬೇಗ ಇಳಿಯುತ್ತದೆ' ಮನದಲ್ಲೇ ಹೇಳಿಕೊಂಡಳು. 
ಸುಲೋಚನಳಿಗೆ ಕುಸುಮಾ ಸಂಬಂಧವೇನಲ್ಲ. ಹಾಗೆ ನೋಡಿದರೆ ಅವಳಿಗೆ ಆ ಊರಿನಲ್ಲಿ ಸಂಬಂಧಿಕರೇ ಇರಲಿಲ್ಲ. 
ಆದರೂ ಅಲ್ಲಿ ಅನ್ಯೋನ್ಯತೆಗೇನು ಕೊರತೆಯಿರಲಿಲ್ಲ. ಪಕ್ಕದ ಮನೆ, ಹಿಂದಿನ ಮನೆ, ಮೇಲಿನ ಮನೆ.. ಎಲ್ಲರ ಮನೆಯ ಮಕ್ಕಳೂ ಸುಲೋಚನೆಗೆ ಅತ್ತೆ ಎಂದೇ ಕರೆಯುತ್ತಾರೆ. ಹಬ್ಬ-ಹರಿದಿನಗಳಿಗೆಲ್ಲ ಊರವರೆಲ್ಲ ಕರೆಯುತ್ತಾರೆ. ಎಲ್ಲರಿಗೂ ಅವಳ ಕೈರುಚಿ ಬಹಳ ಪ್ರಿಯ. 
ಚಕ್ಕುಲಿ, ಕೋಡುಬಳೆ, ಚುರುಮುರಿ,ಲಡ್ಡು, ಪಾಯಸ.. ಏನು ಮಾಡಿದರೂ ಎಲ್ಲ ಮಕ್ಕಳನ್ನು ಕರೆದುಕೊಡುತ್ತಾಳೆ. 
"ಏನು ಸುಲೋಚನಕ್ಕಾ, ನಮ್ಗೆಲ್ಲಾ ಇಲ್ವಾ? ಮಕ್ಳು ಮಾತ್ರ ಕಾಣ್ತಾರ ನಿಂಗೆ?" 
ಮಕ್ಕಳ ಅಪ್ಪ-ಅಮ್ಮಂದಿರು ಪ್ರೀತಿಯಿಂದ ದೂರುತ್ತಾರೆ. 
ಅವರೆಲ್ಲರಲ್ಲಿ ಕುಸುಮಾ ಎಂದರೆ ಅಚ್ಚುಮೆಚ್ಚು ಸುಲೋಚನಳಿಗೆ. ಪಕ್ಕದ ಮನೆಯವಳಾದರೂ, ಬುದ್ಧಿ ಬಂದಾಗಿನಿಂದ ಇಲ್ಲಿಯವರೆಗೂ ಖುಷಿಯಾಗಲಿ, ಬೇಸರವಾಗಲಿ, ಕೋಪಬರಲಿ, ಸೀದಾ ಸುಲೋಚನಳ ಮನೆಗೇ ಬಂದು ಕೂರುತ್ತಿದ್ದ ಹುಡುಗಿ ಅದು. 
ಇಪ್ಪತ್ತರ ಹರೆಯದ ಹುಡುಗಿ, ಹುಟ್ಟಿದಹಬ್ಬಕ್ಕೆ ಕೊಡಿಸಿದ ಹೊಸ ಲಂಗ,ಗೆಜ್ಜೆ ಹಾಕಿಕೊಂಡು ಅತ್ತೆಗೆ ತೋರಿಸಲೆಂದು ಊರೆಲ್ಲ ಸುತ್ತಿ ಬಂದಿದ್ದಳು. 
ಹಂಸ ಪಾದ, ಚಿಗುರು ಬೆರಳುಗಳು, ಉಗುರಿಗೆಲ್ಲ ಗೋರಂಟಿಯ ರಂಗು.. ಈಗ ಅವಳ ಪ್ರತಿ ಹೆಜ್ಜೆಗೂ ಝೇಂಕಾರವೆಂಬಂತೆ ಫಳ-ಫಳನೆ ಹೊಳೆಯುವ ಗೆಜ್ಜೆ.. 
ಅದರ ಮೇಲೆ ಝರಿ ಪಟ್ಟೆಯ ಕೆಂಪು ಲಂಗ , ಹಸಿರು ರವಿಕೆ, ಕೈಗೆ ಕೆಂಪು ಬಳೆಗಳು, ಹಣೆಗೆ ಕೆಂಪು ಬೊಟ್ಟು, ಕಂಡೂ ಕಾಣದಂತೆ, ಆಗಾಗ ಹೊಳೆಯುವ ಬಿಳಿಯ ಹರಳಿನ ಮೂಗುತಿ. 
ಇವೆಲ್ಲಕ್ಕೂ ಕಳಶವಿಟ್ಟಂತೆ ದಟ್ಟ ಕಪ್ಪಿನ ನೀಳ ಕೇಶ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಒಮ್ಮೊಮ್ಮೆ ತನ್ನ ಕೂದಲ ಮೇಲೂ ಕೋಪಿಸಿಕೊಳ್ಳುತ್ತ, "ಏನು ಕೂದ್ಲೋ ಇದು.. ಸರ್ಯಾಗಿ ಜಡೆ ಹಾಕೋಕು ಬರಲ್ಲ. ಕುತ್ತ್ಗೆ ಎಲ್ಲ ನೋವು ಬಂದ್ಬಿಡ್ತು." ಎಂದು ಗೊಣಗಿಕೊಳ್ಳುತ್ತಾಳೆ. ಅವಳ ಅಮ್ಮ ಕೂದಲು ಬಾಚುವಾಗ ಜಡೆಯ ಜಗಳ ತಾರಕಕ್ಕೇರಿ ಬಿಚ್ಚಿದ ಕೂದಲಲ್ಲಿ ಓಡಿ ಬರುತ್ತಿದ್ದಳು,ಬಾಗಿಲಲ್ಲೇ  "ಅತ್ತೆ, ಜಡೆ ಹಾಕ್ಕೊಡು..." ಎಂದು ಕೂಗುತ್ತಾ. 
ಜಡೆ ಹಾಕುತ್ತ ಕಥೆ ಹೇಳಬೇಕು. ಮಧ್ಯೆ ಮಧ್ಯೆ ಅತ್ತೆ.. ಎಂಬ ರಾಗ ಬೇರೆ. 
ಒಮ್ಮೆ ಸುಲೋಚನ ಹೇಳಿದ್ದಳು - "ನೀನು ಹೀಗೇ ಅತ್ತೆ ಅತ್ತೆ ಎನ್ನುತ್ತಿರು, ನಿನ್ನನ್ನೇ ಸೊಸೆ ಮಾಡಿಕೊಳ್ತೀನಿ."
"ಏನಂದೆ ಅತ್ತೆ? "
"ನನ್ನ ಮಗನಿಗೆ ನಿನ್ನಾ ಕೊಡೋಕೆ ಹೇಳ್ತಿನಿ ನೋಡು ನಿಮ್ಮಪ್ಪನ ಹತ್ರಾ.."
"ಅದ್ನಾದ್ರೂ ಮಾಡು ಅತ್ತೆ..ಆದ್ರೆ ನಿನ್ಮಗ ಪೇಟೆಲಿ ಉಳಿತಾನೆ ಅಂದ್ರೆ ನಾ ಹೋಗಲ್ಲ. ಇಲ್ಲೇ ನಿಂಜೊತೆ ಇದ್ದುಬಿಡ್ತೀನಿ."
"ಯೇ ಹುಡುಗಿ, ಒಂಚೂರು ನಾಚ್ಕೆ ಇಲ್ವಲ್ಲೇ ನಿಂಗೇ.."
ತಲೆಗೆ ತಿವಿದಳು. 
"ಆಹ್.. ಅತ್ತೆ..!! 
ಯಾಕತ್ತೆ ನಾಚ್ಕೆ? ನಂಗೆ ಹೆಂಗೂ ಬೇರೆ ಊರಿಗೆ ಹೋಗೋ ಮನ್ಸಿಲ್ಲ. ನಿನ್ಮಗನ್ನೇ ಮದ್ವೆ ಆದ್ರೆ ಅಪ್ಪನ ಮನೆ - ಗಂಡನ ಮನೆ ಅಕ್ಕ-ಪಕ್ಕ ಇರತ್ತೆ. ಅತ್ತೆ -ಸೊಸೆ ಜಗಳ ಅಂತೂ ಇರೋದೇ ಇಲ್ಲ. ಅಪ್ಪಿ-ತಪ್ಪಿ ಮನು ಜೊತೆಗೆ ಜಗಳ ಮಾಡ್ತಿನೇನೋ.. ನಿಂಜೊತೆ ಅಂತೂ ಮಾಡಲ್ಲ.. ಯೋಚ್ನೆ ಮಾಡು, ಗಂಡನ ಜೊತೆ ಹೋಗಲ್ಲ ಅತ್ತೆ ಜೊತೇನೆ ಇರ್ತೀನಿ ಅನ್ನೋ ಅಂಥಾ ಒಳ್ಳೆ ಸೊಸೆ ಬೇರೆಲ್ಲಿ ಸಿಗ್ತಾಳೆ ನಿಂಗೆ? "
"ಹೌದಮ್ಮ ಹೌದು..ನಾನು ನಿಂಗೆ ಜಡೆ ಹಾಕ್ತಿನಿ, ನೀನು ನಿನ್ನ ಮಗಳಿಗೆ ಹಾಕು.."
ಅವಳ ಜಡೆಯನ್ನು ನೋಡುತ್ತಾ, ಈ ಯೋಚನೆಯಲ್ಲಿ ಮುಳುಗಿದ್ದ ಸುಲೋಚನಾ ಕುಸುಮಾಳನ್ನು ನೋಡಿ, "ಯೇ ಹುಡುಗಿ, ಮಳೇಲಿ ನೆನಿಬೇಡ್ವೆ. ಶೀತ ಆದ್ರೆ ಏನು ಮಾಡ್ಬೇಕು? ಈ ಕಡೆ ಬಾ.."
"ಏನತ್ತೆ ನೀನು?  ನಮ್ಮಮ್ಮನ ಹಾಗೇ ಆಡ್ಬೇಡ. ನಿಂಗೆ ಈ ಕಲ್ಯಾಣಿ ಕಟ್ಟೆ ಎಷ್ಟು ಇಷ್ಟಾನೋ, ನಂಗೂ ಮಳೆ ಅಂದ್ರೆ ಅಷ್ಟೇ ಇಷ್ಟ.." ಮತ್ತೆ ನೀರಲ್ಲಿ ಕಾಲಾಡಿಸಿದಳು. 
"ಕಾಲನ್ನ ನೀರಲ್ಲಿ ಬಿಡಬೇಡವೆ.. ಕಲ್ಯಾಣಿ ನೀರನ್ನೇ ಶಿವನ ಅಭಿಷೇಕಕ್ಕೆ ಬಳ್ಸೋದು ಆಲ್ವಾ.."
"ಅಯ್ಯೋ.. ನಿನ್ನ ಪುರಾಣ ಮುಗ್ಯೋದೆ ಇಲ್ಲಾ.. ನಾನು ಮನೆಗೆ ಹೋಗ್ತೀನಿ, ಬರೋದಿದ್ರೆ ಬಾ.."
ಎದ್ದು ಕಾಲಪ್ಪಳಿಸುತ್ತ ನಡೆದಳು.
 "ಹೊಸ ಗೆಜ್ಜೆ ಅಂತ ಗೊತ್ತಿದೆ.. ನಿಧಾನ ಹೋಗೇ ಕುಸ್ಮಾ.." ಎಂದು ನಕ್ಕಳು ಸುಲೋಚನೆ.
ಕುಸುಮಳನ್ನು ನೋಡಿದಾಗಲೆಲ್ಲ ತನ್ನ ಬಾಲ್ಯವೇ ನೆನಪಾಗುತ್ತಿತ್ತು ಅವಳಿಗೆ. 
ಇಲ್ಲಿಯ ಹಾಗೆಯೇ ನಮ್ಮೂರಲ್ಲೂ ಅದೆಂಥ ಮಳೆ. ಅಬ್ಬಾ..ಗದ್ದೆಗಳೆಲ್ಲ ತುಂಬಿ, ಒಂದು ಹೊಳೆಯಾಗಿಬಿಡುತ್ತಿತ್ತು. ಇಡೀ ದಿನವೂ ಧೋ ಎಂಬ ಮಳೆಯೇ.. ಹಿತ್ತಲಲ್ಲಿ ಕಲ್ಲಿನ ಒಲೆಗೆ ಬೆಂಕಿ ಒಟ್ಟಬೇಕು. ಅಪ್ಪ, ಚಿಕ್ಕಪ್ಪ ಎಲ್ಲ ಗದ್ದೆಯಿಂದ ಬಂದ ತಕ್ಷಣ ಒದ್ದೆಯಾದ ಕಂಬಳಿ ಕೊಪ್ಪೆಯನ್ನು ಒಣಗಿಸುತ್ತಿದ್ದರು. ಅವರ ಸ್ನಾನಕ್ಕೆ ನೀರು ಬಿಸಿ ಮಾಡಬೇಕಿತ್ತು. ಒಮ್ಮೊಮ್ಮೆ ಜೋರು ಗಾಳಿಗೆ ದೊಡ್ಡ ಮರವೊಂದು ಧರೆಗುರುಳಿದರೆ ಊರ ಗಂಡಸರೆಲ್ಲ ಓಡಬೇಕಿತ್ತು. ಕುಸುಮ ಹೇಳಿದಂತೆ ಮಳೆ ಎಂದಿಗೂ ಇಷ್ಟವಾಗಲಿಲ್ಲ ನನಗೆ. 
ಸುಲೋಚನೆ ನಿಧಾನವಾಗಿ ಕಂಬಕ್ಕೆ ಬೆನ್ನೊರಗಿಸಿ ಕುಳಿತು, ಕಲ್ಯಾಣಿಗೆ ಬಿದ್ದ ಹನಿಯನ್ನು ದಿಟ್ಟಿಸತೊಡಗಿದಳು.  ತನ್ನ ಹಳೆಯ ನೆನಪುಗಳಿಗೆ ಜಾರಿದಳು. ಕಣ್ಣಂಚಿಂದ ಕೆನ್ನೆಯ ಮೇಲೆ ಎರಡು ಹನಿಗಳು ಇಳಿದವು. 
ಮಳೆಗಾಲ ಅದೆಷ್ಟು ಸಂಕಷ್ಟಗಳ ಜಾಲ...

No comments:

Post a Comment

ಕರಗುವೆ...