Friday, November 5, 2021

ತ್ರಿಚಕ್ರ ಸಾರಥಿ...

ಸದಾ ಏನನ್ನೋ ಹುಡುಕುತ್ತ ತನ್ನಲ್ಲಿ ತಾನು ಗಲಿಬಿಲಿಗೊಂಡಂತೆ ಕಾಣುವ ಬೆಂಗಳೂರು ನನ್ನಲ್ಲಿ ಬಹಳಷ್ಟು ಬಾರಿ ಬೆರಗನ್ನು ಮೂಡಿಸಿದೆ. ಯಾವುದನ್ನು ಆಚೆ ಹಾಕದೆ ಮೌನವಾಗಿ ಎಲ್ಲವನ್ನೂ ತನ್ನೊಡಲೊಳಗೆ ಸೇರಿಸಿಕೊಳ್ಳುವ ಮಹಾನಗರಿ ಒಂದು ಮಾಯಾನಗರಿಯೇ ಸೈ!
ಹೊಸ ಜಾಗ, ಹೊಸ ಮುಖ, ನೋಟ, ಸ್ಪರ್ಶ, ಗದ್ದಲ, ಜಗಳ, ಪರಿಚಯವೇ ಇಲ್ಲದ ವ್ಯಕ್ತಿಗಳು, ಕ್ಷಣದಲ್ಲಿಯೇ ಭಯ ಹುಟ್ಟಿಸುವ ಘಟನೆಗಳು, ಎಲ್ಲದರ ನಡುವೆ ದಿನವೊಂದು ಲೆಕ್ಕಕ್ಕೇ ಸಿಗದೇ ಕಳೆವುದು ಆತುರಾತುರವಾಗಿ! ಇವೆಲ್ಲದರ ನಡುವೆ ನನ್ನ ನೆನಪಲ್ಲಿ ಹಸಿರಾಗುವುದು ಬೆಳಗನ್ನು ಸ್ವಾಗತಿಸುವ ಪಾರಿಜಾತ, ಘಮ್ಮೆನ್ನುವ ಸಂಪಿಗೆ, ಬಸ್ಸಿನಲ್ಲಿ ತುಂಟ ಮಗುವಿನ ಕೀಟಲೆ, ಕಾಲೇಜ್ ಹುಡುಗರ ಕಲರವ, ಅಪರಿಚಿತರ ಮೊಗದಲ್ಲಿ ಪರಿಚಿತ ಮುಗುಳುನಗೆ, ಟ್ರಾಫಿಕ್ ಅಲ್ಲಿ ಕೈ ಬೀಸಿದ ಪುಟ್ಟ ಪೋರಿ, ದೇವಾಲಯದಲ್ಲಿ ಕೈ ಕೈ ಹಿಡಿದು ಪ್ರದಕ್ಷಿಣೆ ಸುತ್ತುತ್ತಿದ್ದ ಅಜ್ಜ-ಅಜ್ಜಿ, ಸೇವಂತಿ ಹೂವಾ- ರೋಜಾ ಹೂವಾ ಎಂಬ ದನಿ, ಗೋಲಗಪ್ಪೆಯ ರುಚಿ, ಮಸಾಲೆ ದೋಸೆಯ ಘಮ, ಚಹಾದ ಗಾಜಿನ ಲೋಟ..
ಹೋ..ಅಲ್ಲೊಬ್ಬ ಗುಂಗುರು ಕೂದಲ ಧಡೂತಿ ಆಸಾಮಿ, ನಕ್ಕಾಗ ಕುಣಿಯುವ- ಎರಡು ಮಕ್ಕಳನ್ನು ಹೊತ್ತಂತಿರುವ ಅವನ ಹೊಟ್ಟೆ, ಚೂರು ಬಿಗಿಯಾದರೂ ಗುಂಡಿ ಹರಿದು ಬರುವ ಅವನ ಬಟ್ಟೆ!!
ಅಂಥಾ ನೆನಪಿನ ಬುಟ್ಟಿಯಲ್ಲಿ ಕೆಲವೊಮ್ಮೆ ಆಟೋ ಚಾಲಕರೂ ಇಣುಕುತ್ತಾರೆ. ಅಂಥದ್ದೊಂದು ಚಂದದ ಅನುಭವ ಇತ್ತೀಚಿನದು.
ಬಿಎಂಟಿಸಿ ಬಸ್ಸಿನಲ್ಲಿಯೇ ದಿನವೂ ಪ್ರಯಾಣಿಸುತ್ತಿದ್ದರೂ ಕೆಲವೊಮ್ಮೆ ಆಟೋದಲ್ಲಿ ಚಲಿಸುವ ಸಂದರ್ಭದವೂ ಇರುವುದಲ್ಲ! ಅಂತಹುದೇ ಒಂದು ದಿನ ಆಟೋ ಬುಕ್ ಮಾಡಿ ಕಾಯುತ್ತಾ ನಿಂತಿದ್ದೆ, ಮಾಸ್ಕಿನ ಹೊರೆಯಿಂದ ಬಸವಳಿದಿದ್ದ ಕಿವಿಗೆ ಇಯರ್ ಫೋನ್ ಅನ್ನು ನೇತು ಹಾಕಿಕೊಂಡು!  ಅದ್ಯಾವ ಮಾಯಕದಲ್ಲಿ ಬಂದು ನಿಂತನೂ ಆಟೋ ಡ್ರೈವರ್!

"ಮೇಡಂ, ಆ ಇಯರ್ ಫೋನ್ ಅನ್ನ ತೆಗೆದು ಬಿಸಾಡಿ" ಎಂದಾಗಲೇ ಬೆಚ್ಚಿ ಎಚ್ಚರವಾಗಿದ್ದೆನಗೆ! ಹಾಡುತ್ತಿದ್ದ ಸೋನು ನಿಗಮ್ ಗೆ ಒಂದು pause ಹೇಳಿ ಇಯರ್ ಫೋನ್ ಬದಿಗಿಟ್ಟು ಕುಳಿತೆ. ತಪ್ಪು ನನ್ನದೇ ಎಂದಾದಾಗ ಸುಮ್ಮನಿರಲೇಬೇಕಿತ್ತಲ್ಲ!!
ಆಟೋದಲ್ಲಿ ಅಣ್ಣಾವ್ರು ತನ್ಮಯತೆಯಿಂದ ಹಾಡುತ್ತಿದ್ದರು - " ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ..." ಆಲಿಸುತ್ತಾ ಕುಳಿತಿದ್ದೆ. "ಪ್ರಿಯತಮ...." ಹಾಡು ಮುಗಿದು, "ಜೀವ ಹೂವಾಗಿದೆ..." ಪ್ರಾರಂಭವಾಗುವುದಕ್ಕೂ ರಸ್ತೆಯಲ್ಲಿ ಕೆಂಪು ದೀಪ ಉರಿಯುವುದಕ್ಕೂ ಸರಿಹೋಗಿತ್ತು. ಅಣ್ಣಾವ್ರ ಹಾಡಿಗೆ ಆಟೋದಲ್ಲಿದ್ದ ನಾವಷ್ಟೇ ಅಲ್ಲದೇ, ಹೊರಗಿದ್ದ ಬೈಕ್ ಸವಾರನೂ ತಾಳ ಹಾಕುತ್ತಿದ್ದ.
"ನೋಡಿ ಮೇಡಂ, ಅಣ್ಣಾವ್ರ ಹಾಡಿಗಾದ್ರೆ ಎಲ್ಲ ತಾಳ ಹಾಕ್ತಾರೆ. ಅದೇ ಈಗಿನ ನನ್ ಮಗನ್, ನಿಮ್ಮಕ್ಕನ್ ಹಾಡು ಕೇಳಿದ್ರೆ ಟ್ರಾಫಿಕ್ ನಾಗೂ ಎಲ್ಲ ತಲೆಗೇ ಹಾಕ್ತಾರೆ!!" ಎಂದ. ಒಮ್ಮೆ ಜೋರಾಗಿ ನಕ್ಕಿದ್ದು ಬಿಟ್ಟರೆ ಮತ್ತದೇ ಮೌನ, ಅಣ್ಣಾವ್ರ ಹಾಡು.
ಅವನಿಗೆ ಅದೇನನ್ನಿಸಿತೋ, " ಸಾರಿ ಮೇಡಂ, ಸಾರಿ ಹಾ..."
"ಅರೆ.. ನೀವ್ಯಾಕೆ ಸಾರೀ ಕೇಳ್ತಿದೀರಾ ಸರ್"
"ಮನೆಗ್ ಮಾಲಕ್ಷ್ಮಿ ಬರೋ ಹೊತ್ತು...ಈ ಟೈಮ್  ನಾಗೇ ಬೈದ್ಬುಟ್ಟೆ..ಅದ್ಕೆ.."
"ಅಯ್ಯೋ.. ನೀವೇನು ಬೈದಿಲ್ಲ ಸರ್.. ನಂದೂ ತಪ್ಪೇ ಇತ್ತಲ್ಲ"
"ನೀವು ಬೇಜಾರ್ ಮಾಡ್ಕೊಂಡ್ರೆನೋ ಅಂತಾ.."
"ಬೇಜಾರೆಲ್ಲ ಏನಿಲ್ಲ ಸಾರ್"
ಒಂದು ಸಣ್ಣ ನಗುವಿನ ಜೊತೆಗೆ "ಹಂಗಾದ್ರೆ ಸರಿ.."
"ಮೇಡಂ ಇದೆ ಕಾಲೇಜಾ.."
"ಇಲ್ಲ ಸರ್.. ನಾ ಇಲ್ಲಿ ಲೊಕೇಶನ್ ಕೊಟ್ಟಿದ್ದಷ್ಟೇ. ನಾನು ಜಾಬ್ ಮಾಡ್ತಾ ಇದೀನಿ"
"ಓ.. ಹೌದಾ.. ಒಳ್ಳೇದ್ ಒಳ್ಳೇದು.."
ಮತ್ತೆ ತುಸುವೇ ನಿಮಿಷಗಳ ಮೌನ!
ಅಣ್ಣಾವ್ರು.."ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಅಂತಾ ಹಾಡ್ತಿದ್ರು.
"ನಾನು ಮಂಡ್ಯದವನಮ್ಮ.. ದುಡಿಯೋಕೆ ಅಂತಾ ಬಂದೆ. ಆಗ ಈಗ ಊರಿಗೆ ಹೋಗ್ಬರ್ತೀನಿ."
"ಓಹ್. ಹೌದಾ.."
"ಮತ್ತೆ.. ಏನ್ ಮೇಡಂ..ಆಂಧ್ರದವ್ರ ನೀವು?"
"ಯಾಕೆ ಸರ್.. ಇಷ್ಟ್ ಚಂದ ಕನ್ನಡ ಮಾತಾಡ್ತಾ ಇದೀನಿ. ಹುಟ್ಟಿದ್ರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತಿದೀನಿ.."
"ಹಹಹ.. ಬೆಳ್ಗೆ ಇಂದ ಒಬ್ಬರು ಸಿಕ್ಕಿಲ್ಲ ಕನ್ನಡದೋರು ಮೇಡಂ. ನಂಗೆ ನಮ್ಮ ಅಣ್ಣಾವ್ರು ಮಾತ್ರ ಜೊತೆಗಿದ್ರು. ಅದ್ಕೆ ಹಾಗೆ ಹೇಳ್ದೆ. ಮತ್ತೇನಿಲ್ಲ.ನಿಮ್ಮೂರು ಯಾವ್ದು ಮೇಡಂ?"
"ನನ್ನೂರು ಶಿರಸಿ ಸರ್."
"ಓಹ್. ಮಾರಿಕಾಂಬೆ ಜಾತ್ರೆ ಊರು. ಇಲ್ಲೇ ನಮ್ಮ್ ರೋಡ್ ಪಕ್ಕದಾಗೆ ಹೊಳ್ಳಿ ನೋಡಿದ್ರೆ ನಿಮ್ಮೂರ್ ಕಾಣ್ತದೆ."
ಅಷ್ಟರಲ್ಲಿ ನನ್ನ ಜಾಗ ಬಂದಿದ್ದರಿಂದ ಮಾತು-ನಗು ಎರಡೂ ನಿಂತಿತ್ತು.
"ಅಲ್ಲ ಮೇಡಂ.. ನಿಮ್ಮ ಮದ್ವೆ ಯಾವಾಗ?"
"ಹಾಂ.. ಯಾಕೆ ಸರ್" ಎಂದೆ ಆಶ್ಚರ್ಯದಿಂದ.
"ಏನಿಲ್ಲ ಮೇಡಂ. ನನ್ ಮಗಳೂ ಸುಮಾರು ನಿಮ್ಮ ವಯಸ್ಸಿನೋಳೆ ಇರ್ಬೋದು. ಅವಳ ಮದ್ವೆ ಹಿಂದಿನ ವರ್ಷನೇ ಆಯ್ತು. ಅದ್ಕೆ ನಿಮ್ಮನ್ನೂ ಕೇಳ್ದೆ."
"ಅಯ್ಯೋ.. ಅದ್ಕೇನು ಅರ್ಜೆಂಟ್ ಸರ್.. ಬಿಡಿ, ಟೈಮ್ ಬಂದಾಗ ಎಲ್ಲ ಆಗತ್ತೆ."
"ಏನಮ್ಮಾ, ಇಪ್ಪತ್ತರಲ್ಲೇ ಎಪ್ಪತ್ತರ ಥರಾ ಮಾತಾಡ್ತಿರ.." ಎನ್ನುತ್ತಾ ನಕ್ಕರು.ನಗುತ್ತಾ ಹಣ ಕೊಟ್ಟು ನಾನೂ ಹೊರಟೆ.
ಅಂತೂ ಗಡಿಬಿಡಿಯ ದಿನದ ಒಂದು ಸಂಜೆ, ಸುಂದರ ನೆನಪಿಗೆ ಕಾರಣವಾಯ್ತು.
ಆದರೂ ಒಂದು ಮಾತು!
ಗಂಟು ಹಾಕಿದ ಮೋರೆಯ ಹಿಂದಿನ ಮುಗುಳ್ನಗುವನ್ನು ಮುಚ್ಚಿಡದೇ, ಮನಸಾರೆ ನಗುವುದರಿಂದ , ಹಾಯ್, ಹಲ್ಲೋ, ನಮಸ್ತೆ ಎನ್ನುವುದರಿಂದ, ಹಲವು ಸುಂದರ ನೆನಪುಗಳಿಗೆ ನಾಂದಿಯಾಗಬಹುದು!
ಪ್ರಪಂಚ ಕಣ್ಣಿಗೆ ಕಾಣುವಷ್ಟು ಒಳ್ಳೆಯದಲ್ಲದಿದ್ದರೂ ನಮ್ಮ ಬುದ್ಧಿ ಎಚ್ಚರಿಸುವಷ್ಟು ಕೆಟ್ಟದಂತೂ ಅಲ್ಲ..!

-ಪಲ್ಲವಿ 

4 comments:

  1. ಪಯಣ ಸುಂದರವಾಗಿರದಿದ್ದರೆ,ತಲುಪುವ ಗಮ್ಯಕ್ಕೆ ಅರ್ಥವೇ ಇರುವುದಿಲ್ಲ.ಬಂಧು ಬಾಂಧವರಲ್ಲ,ಸ್ನೇಹಿತರಲ್ಲ,ಹಿಂದೆ ಸಿಕ್ಕವರಲ್ಲ,ಮುಂದೆ ಸಿಗುವರೋ ಗೊತ್ತಿಲ್ಲ ಆದರೂ ನೇರಾನೇರ deep conversationsಗೆ ಇಳಿಯುವ ಇಂಥ ಆಗಂತುಕರನ್ನು ಕಂಡರೆ ಮನದ ಮೂಲೆಯಲ್ಲೆಲ್ಲೋ ಮೆಚ್ಚುಗೆಯ ಸಿಹಿಗಾಳಿ ಬೀಸುತ್ತದೆ..

    ತ್ರಿಚಕ್ರ ವಾಹನದ ಸಾರಥಿಯೊಂದಿಗಿನ ಮಾತುಗಳನ್ನು ಆಪ್ತವಾಗಿ ಬರಹರೂಪಕ್ಕಿಳಿಸಿದ ರೀತಿ ಆಪ್ಯಾಯಮಾನವಾಯಿತು. ಬರೆಯುತ್ತಿರಿ.. ಬರೆಯುತ್ತಲೇ ಇರಿ..

    ಶುಭ ಹಾರೈಕೆಗಳು..
    -Dr.ಲಕ್ಷ್ಮೀಶ ಜೆ.ಹೆಗಡೆ

    ಬಿಡುವಾದಾಗ ನನ್ನ ಬ್ಲಾಗ್ ಕಡೆಗೂ ಒಮ್ಮೆ ಕಣ್ಣು ಹಾಯಿಸಿ..
    www.mijarchitra.wordpress.com

    ReplyDelete
    Replies
    1. ಧನ್ಯವಾದಗಳು.
      ಖಂಡಿತ ಓದುವೆ 😍

      Delete
  2. ಚೆನ್ನಾಗಿ ಬಂದಿದೆ.

    ReplyDelete

ಕರಗುವೆ...