Saturday, October 30, 2021

ಒಂದು ನಾಟಕದ ಸುತ್ತ...

ಅದು ಕಮಲಾಪುರದ ಪ್ರತಿಷ್ಠಿತ ಕಾಲೇಜು. ಪ್ರತಿವರ್ಷವೂ ಪಠ್ಯ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಜನಪ್ರಿಯವಾಗಿತ್ತು. ಎಲ್ಲ ವಿದ್ಯಾರ್ಥಿಗಳೂ ತಮ್ಮ ಪದವಿಯ ವಿದ್ಯಾಭ್ಯಾಸ ‘ಜ್ಞಾನಕಲಶ’ ಕಾಲೇಜಿನಲ್ಲೇ ಎಂದು ಬಯಸುವ, ಇತರೆಎಲ್ಲ ಕಾಲೇಜುಗಳಿಗಿಂತ ಭಿನ್ನ ಧ್ಯೇಯೋದ್ದೇಶಗಳ ದೇಗುಲವದು. ಎಲ್ಲ ಕಾಲೇಜುಗಳೂ ಪರೀಕ್ಷೆ, ಇಂಟರ್ ವ್ಯೂ ಎಂದು ಒಂದೇ ವೃತ್ತದಲ್ಲಿ ಗಿರಕಿ ಹೊಡೆಯುತ್ತಾ, ಪಾಲಕರನ್ನು ಸುಲಿಯುತ್ತಾ, ವರ್ಷಕ್ಕೆ ಸಾವಿರಗಟ್ಟಲೇ ಪದವೀಧರರನ್ನು ಯಂತ್ರದಂತೆ ಉತ್ಪಾದಿಸುತ್ತಿದ್ದರೆ, ಜ್ಞಾನಕಲಶ ಕಾಲೇಜಿನಲ್ಲಿ ಅಂಕಕ್ಕಿಂತ ಜ್ಞಾನಕ್ಕೆ ಮೌಲ್ಯ ನೀಡಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ತಮ್ಮಿಷ್ಟದ ಹವ್ಯಾಸಗಳಲ್ಲಿ ಪಾಲ್ಗೊಳ್ಳಲು ಹೇರಳವಾದ ಅವಕಾಶ ನೀಡಿ, ಸಮಾಜಕ್ಕೆ ಮಾದರಿಯಾಗಿತ್ತು. ಹಾಗಾಗಿ ಪಠ್ಯದ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ, ಕ್ರೀಡೆ ಎಂದು ಸದಾಕಾಲ ಕಾರ್ಯೋನ್ಮುಖರಾಗಿರುತ್ತಿದ್ದರು.
ವಿಶೇಷವೆಂದರೆ ಪ್ರತಿವರ್ಷವೂ ಒಂದು ನಾಟಕವನ್ನು ತಾಲೀಮು ಮಾಡಿ ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೇ, ಸುತ್ತಮುತ್ತಲಿನ ಶಾಲೆಗಳಲ್ಲಿ ನಾಟಕವಾಡಿ ಮಕ್ಕಳಲ್ಲಿ ಬಾಲ್ಯದಿಂದಲೇ ಅಭಿರುಚಿ ಮೂಡಿಸುತ್ತಿದ್ದರು. ಹಾಗೆಯೇ ಹತ್ತಿರದ ಹಳ್ಳಿಗಳಲ್ಲಿ ಮಧ್ಯರಾತ್ರಿ  ನಾಟಕ ಮಾಡಿ ಊರ ಜನರನ್ನು ರಂಜಿಸುತ್ತಿದ್ದರು. ಇವೆಲ್ಲದಕ್ಕೂ ಮೂಲ ಕಾರಣ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಯರಾಮ ಸರ್ ಎಂದರೆ ತಪ್ಪಾಗಲಾರದು. ನಾಟಕದ ಆಯ್ಕೆಯಂದ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ನಿರ್ದೇಶಸಿ, ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸುವ ಕಾರ್ಯವೂ ಅವರದ್ದೇ!
ಸದಾ ಹೊಸತನಕ್ಕಾಗಿ ತುಡಿಯುವ,ಮಕ್ಕಳೊಂದಿಗೆ ಮಗುವಾಗಿ ಬೆರೆಯುವ ಮನಸ್ಸಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮೆಚ್ಚಿನ ಅಧ್ಯಾಪಕರಾಗಿದ್ದರು ಜಯರಾಂ ಸರ್! ಕೇವಲ ಪಾಠ, ಪರೀಕ್ಷೆ ಎನ್ನದೇ ಮಕ್ಕಳ ವಯಕ್ತಿಕ ಸಮಸ್ಯೆಗಳಿಗೆ ಕಿವಿಯಾಗಿ, ಕೆಲವೊಮ್ಮೆ ದನಿಯಾಗಿ, ಯುವ ಮನಸ್ಸುಗಳಿಗೆ ಆಪ್ತವಾಗಿದ್ದರು.
ಕಾಲೇಜಿನಲ್ಲಿ ಈ ವರ್ಷದ ನಾಟಕವನ್ನು ಕೈಗೆತ್ತಿಕೊಳ್ಳುವ ಎಲ್ಲಾ ಸಿಧ್ಧತೆಗಳೂ ಭರದಿಂದ ಸಾಗಿತ್ತು. ಈಗಾಗಲೇ ರಾಜ್ಯಮಟ್ಟದ ಸ್ಪರ್ಧೆಯ ವೇಳಾಪಟ್ಟಿ ಸಿಧ್ಧವಾಗಿ, ಕೈ ಸೇರಿದ ಕಾರಣ ಸಮಯ ವ್ಯರ್ಥಮಾಡುವಂತಿರಲಿಲ್ಲ. ಆಸಕ್ತಿಯಿದ್ದ ಮಕ್ಕಳೆಲ್ಲರೂ ಸಭಾಂಗಣದಲ್ಲಿ ಹಾಜರಿದ್ದರು. ಈ ಮೊದಲು ಪಾಲ್ಗೊಂಡ ವಿದ್ಯಾರ್ಥಿಗಳೆಲ್ಲ ಒಂದೆಡೆಯಾದರೆ, ಹೊಸಬರು ಇನ್ನೊಂದೆಡೆ ಕುಳಿತಿದ್ದರು.
ಜಯರಾಂ ಸರ್ ಎಲ್ಲರನ್ನುದ್ದೇಶಿಸಿ ಮಾತನ್ನಾರಂಭಿಸಿದರು, “ನೋಡಿ ಮಕ್ಕಳೇ, ಸ್ಪರ್ಧೆ ಎಂಬುದು ಜೀವನದಲ್ಲಿ ಇದ್ದೇ ಇದೆ. ಅದರಿಂದ ಏನಾದರೂ ಪಾಠ ಕಲಿಯಬೇಕಷ್ಟೇ! ಅದುಬಿಟ್ಟು ಬಹುಮಾನ ನಮಗೇ ಬರಬೇಕೆಂಬ ಸ್ವಾರ್ಥವಾಗಲೀ, ಬಂದೇ ಬರುತ್ತದೆ ಎಂಬ ಅತಿಯಾದ ವಿಶ್ವಾಸವಾಗಲೀ ಇರಕೂಡದು.
ಈ ನಾಟಕ ಅನ್ನೋದು ಕೇವಲ ಬಣ್ಣ ಬಳಿದುಕೊಂಡು, ವೇದಿಕೆಯ ಮೇಲೆ ಹೋಗಿ ನಾಲ್ಕು ಮಾತನಾಡಿ ಬರುವುದಲ್ಲ. ಇದು ಒಂದು ‘ಟೀಮ್ ವರ್ಕ್’. ಒಗ್ಗಟ್ಟೇ ನಾಟಕದ ಮೂಲಮಂತ್ರ. ಅದರಿಂದ ಮನಸ್ಸಿಗೆ ಖುಷಿ ಸಿಗಬೇಕು. ಪಾತ್ರಕ್ಕೆ ನ್ಯಾಯ ಒದಗಿಸಿದ ತೃಪ್ತಿ ಇರಬೇಕು. ಜನರಿಗೆ ನಾಟಕದ ಸಂದೇಶ ತಲುಪಬೇಕು. ಮೊಟ್ಟಮೊದಲು ಬದಲಾವಣೆಯ ತಂಗಾಳಿ ನಮ್ಮಲ್ಲಿ ಅಂದರೆ ನಟರಲ್ಲಿ ಬೀಸಬೇಕು. ಅರ್ಥವಾಯ್ತಾ?” 
ಏನು ಅರ್ಥವಾಯ್ತೋ ಏನೋ, ಎಲ್ಲರೂ ತಲೆಯಾಡಿಸಿದರು! ಇವೆಲ್ಲದರ ಮಧ್ಯ ಜಯರಾಂ ಸರ್ ಗಮನಿಸಿದ ಅಂಶವೆಂದರೆ, ನಾಲ್ಕೈದು ಮಕ್ಕಳು ಆಸಕ್ತಿಯೇ ಇಲ್ಲದಂತೆ ನೀರಸವಾಗಿ ಕುಳಿತಿದ್ದರು. ಅವರರೆಲ್ಲರೂ ಹಿಂದಿನ ನಾಟಕದಲ್ಲಿ ಅಭಿನಯಿಸಿದವರೇ..!
ಏನಾಗಿದೆ ಇವರಿಗೆಲ್ಲ ಎಂದು ಯೋಚಿಸುತ್ತಲೇ ನಾಟಕದ ಒಂದೊಂದು ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿ,ಒಮ್ಮೆ ಓದಿ ಎಂದರು.
“ಗಿರಿ, ಪ್ರಭವ, ಆದರ್ಶ, ಸುಮಂತ, ಸೌರಭಾ ಎಲ್ಲರೂ ನನ್ನ ಜೊತೆ ಬನ್ನಿ” ಎಣದು ಹೊರನಡೆದರು. ಮನಸ್ಸಿರದಿದ್ದರೂ ಐವರೂ ಅವರ ಹಿಂದೆ ಹೆಜ್ಜೆ ಹಾಕಿದರು.
“ವಾರದ ಹಿಂದೆ ಹೊಸ ನಾಟಕ ಯಾವಾಗ ಸಾರ್ ಎಂದು ಪೀಡಿಸುತ್ತಿದ್ದವರಿಗೆ ಎನಾಯ್ತು? ಯಾಕೆ ಇಷ್ಟು ಗಂಭೀರವಾಗಿದ್ದೀರಾ?” ಎಂದೆಲ್ಲಾ ಎಷ್ಟೇ ವಿಧವಾಗಿ ಪ್ರಶ್ನಿಸಿದರೂ, ಯಾರೊಬ್ಬರೂ ಉತ್ತರಿಸಲಿಲ್ಲ.
ಊರಿಗೆ ಹೊಸದಾಗಿ ರಸ್ತೆ ಮಾಡಲು ಬರುತ್ತಿದ್ದಾರೆ, ಆದರೆ ಈ ಹುಡುಗರೆಲ್ಲ ಸೇರಿ ಅದನ್ನು ವಿರೋಧಿಸುತ್ತಿದ್ದಾರೆ. ಹಿರಿಯರೆಲ್ಲ ಒಂದಾಗಿ ಊರಿಗೊಂದು ರಸ್ತೆ ಬೇಕು ಎಂದರೆ, ಹುಡುಗರೆಲ್ಲ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ಹಾಗಾಗಿ ಊರಲ್ಲಿ ಎರಡು ಪಂಗಡಗಳಾಗಿವೆ ಎಂದು ಸೌರಭಾ ತಿಳಿಸಿದಳು.
ಎಲ್ಲ ಊರವರೂ ರಸ್ತೆ ಬೇಕೆಂದು ಸರಕಾರಕ್ಕೆ ಅರ್ಜಿ ಬರೆದರೂ, ಕೆಲಸವಾಗದೇ ಒದ್ದಾಡುತ್ತಿರುವಾಗ ಈ ಮಕ್ಕಳೇಕೆ ವಿರೋಧಿಸುತ್ತಿದ್ದಾರೆ, ರಸ್ತೆಯಾದರೆ ಊರೊಳಗೆ ಬಸ್ ಬರುತ್ತದೆ, ಎಲ್ಲಾ ವಾಹನಗಳೂ ಬರಲು ಅನುಕೂಲವಾಗುತ್ತದೆ, ಎಲ್ಲವೂ ಗೊತ್ತಿದ್ದೂ ಯಾಕೀ ವಿರೋಧ ಎಂದು ಪ್ರಶ್ನಿಸಿದರು.
“ರಸ್ತೆ ಬೇಕೆಂಬ ಆಶಯ ನಮ್ಮಲ್ಲಿಯೂ ಇದೆ, ಆದರೆ ಆ ಕಾರಣಕ್ಕೆ ಊರ ಮುಂಭಾಗದ ಆಲದಮರವನ್ನು ಕಳೆದುಕೊಳ್ಳಲು ಸಿಧ್ದರಿಲ್ಲ. ಆ ಭಾಗದಲ್ಲಿ ಉಳಿದ ಮರ-ಗಿಡಗಳನ್ನೂ ಕಡಿಯುತ್ತಾರೆ. ನಾವು ಅದನ್ನು ವಿರೋಧಿಸಿಲ್ಲ. ಆದರೆ ಈ ಆಲದಮರ ಬಹಳ ಹಳೆಯದು. ನಮ್ಮ ತಾತಂದಿರು ಕೂಡಾ ಈ ಮರದ ಕೆಳಗೆ ಆಡಿದ್ದೆವು ಎನ್ನುತ್ತಾರೆ! ಊರ ಹಿರಿಯರು ಈ ಮರ ಉಳಿಸಲು ಪ್ರಯತ್ನಿಸಬಹುದು ಎಂದುಕೊಂಡರೆ, ಅವರಿಗೆಲ್ಲ ರಸ್ತೆಯೇ ಮುಖ್ಯವಾಯ್ತು. ನಾವು ಆಲದಮರಕ್ಕಾಗಿ ರಸ್ತೆಯನ್ನು ವಿರೋಧಿಸಿದ ಕಾರಣ ಕೆಟ್ಟವರಾಗಿದ್ದೀವಿ.
ರಸ್ತೆ ಕಾರ್ಮಿಕರು ತಮ್ಮ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಹೋಗಿದ್ದಾರೆ. ಊರ ಹುಡುಗರೆಲ್ಲ ತಮ್ಮ ಬಳಿ ಬಂದು ಕ್ಷಮೆ ಕೇಳಿದರೆ ಮಾತ್ರ ಕೆಲಸ ಮುಂದುವರೆಸ್ತೀವಿ ಎಂದು ತಿಳಿಸಿದ್ದಾರೆ. ನಮ್ಮಿಂದಲೇ ಕೆಲಸ ನಿಂತಿದ್ದು ಎಂದು ಮನೆಯಲ್ಲಿ ದಿನವೂ ಬೈತಾರೆ. ನಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. ನಾವ್ಯಾಕೆ ಕ್ಷಮೆ ಕೇಳಬೇಕು?..”
ಒಬ್ಬ ಧ್ವನಿ ಎತ್ತಿದ ತಕ್ಷಣ, ಎಲ್ಲರೂ ಒಟ್ಟಾಗಿ ಮಾತನಾಡುತ್ತಿದ್ದಾರಲ್ಲ ಎಂದು ಒಮ್ಮೆ ನಕ್ಕು ಜಯರಾಂ ಸರ್ ಹೇಳಿದರು – “ ನೋಡಿ, ನಿಮ್ಮ ಊರವರು ಹೇಳ್ತಿರೋದರಲ್ಲಿ ತಪ್ಪಿಲ್ಲ. ನೀವು ಮಾಡ್ತಿರೋದು ತಪ್ಪು ಎಂದೂ ನಾ ಹೇಳ್ತಿಲ್ಲ. ನಿಮ್ಮೂರಿಗೆ ರಸ್ತೆ ಬೇಕೇಬೇಕು. ಅದಕ್ಕಾಗಿ ಆ ಆಲದಮರ ಕಡಿಯಬೇಕು. ಮರವನ್ನು ಉಳಿಸುವ ನಿಮ್ಮ ಉದ್ದೇಶವೂ ಒಳ್ಳೆಯದೇ! ನಿಮ್ಮ ಮಧ್ಯ ಆ ಕೆಲಸದವರೇನು ತಪ್ಪು ಮಡಿದ್ದರೆಂದು ಜಗಳ ಮಾಡಿದ್ರಿ? ಅವರ ಮೇಲಿನ ಅಧಿಕಾರಿಗಳು ಏನು ಆದೇಶ ನೀಡಿದ್ರೋ, ಅವರು ಅದನ್ನು ಪಾಲಿಸ್ತಾರೆ. ನೀವು ಅವರ ಪರಿಸ್ಥಿತಿಯನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ..”
ಕ್ಷಮೆ ಕೇಳಲು ಯಾರೂ ಸಿಧ್ಧರಿಲ್ಲ ಎಂಬುದನ್ನು ಮಕ್ಕಳ ಮಾತಿನ ವೈಖರಿಯಿಂದಲೇ ಅರಿತ ಸರ್ ಮುಂದುವರೆಸಿದರು – “ಏನಾದ್ರೂ ಮಾಡ್ಕೊಳ್ಳಿ, ನಿಮಗೆ ಎಷ್ಟು ಹೇಳಿದರೂ ಅಷ್ಟೇ! ಎಲ್ಲರೂ ಬುಧ್ಧಿವಂತರೇ ಅಲ್ವಾ? ಇದಕ್ಕೊಂದು ಪರಿಹಾರ ನೀವೇ ಕಂಡುಹಿಡ್ಕೊಳ್ಳಿ. ನನಗನಿಸಿದ್ದನ್ನು ನಾನು ಹೇಳಿದ್ದೇನೆ. ಮುಂದಿನದು ನಿಮ್ಮ ಯೋಚನೆ..” ಎನ್ನುತ್ತಾ ಹೊರಟರು. “ಎಲ್ಲರೂ ಮನೆಗೆ ಹೋಗಿ ಈ ಸ್ಕ್ರಿಪ್ಟ್ ಓದಿ, ನಮ್ಮ ಬಳಿ ಜಾಸ್ತಿ ಸಮಯವಿಲ್ಲ” ಎಂದು ನೆನಪಿಸಿ, ಜಯರಾಂ ಸರ್ ಸಭಾಂಗಣದೊಳಗೆ ಹೋದರು.
“ನಮ್ಮ ಸಮಸ್ಯೆ ನಮಗಾದ್ರೆ ಈ ಸರ್ ಗೆ ನಾಟಕದ್ದೇ ಚಿಂತೆ!” ಎನ್ನುತ್ತಾ ಹುಡುಗರು ಬಸ್ ನಿಲ್ದಾಣದತ್ತ ನಡೆದರು.
-----
ಎಲ್ಲರೂ ಸಂಜೆ ಆಲದಮರದ ಕೆಳಗೆ ಕುಳಿತು ಮುಂದೇನು ಮಾಡುವುದೆಂದು ಯೋಚಿಸುತ್ತಿದ್ದರು. ಅಷ್ಟರಲ್ಲಿ ಪ್ರಭವ ನಾಟಕದ ಪ್ರತಿಯನ್ನು ತೆರೆದು ಓದತೊಡಗಿದ. ಆಲದಮರದ ಸಮಸ್ಯೆ ಏನೆಂದರೂ ಬಗೆಹರಿಯುತ್ತಿಲ್ಲ, ಎಷ್ಟೇ ಯೋಚಿಸಿದರೂ ಸಮಯ ವ್ಯರ್ಥವೇ! ಸರ್ ಹೇಗೂ ಎಲ್ಲರಿಗೂ ನಾಟಕವನ್ನು ಓದಲು ಹೇಳಿದ್ದಾರಲ್ಲ, ಅದನ್ನಾದರೂ ಮಾಡೋಣ ಎಂದು ಎಲ್ಲರೂ ಕುಳಿತು ಓದಲು ಪ್ರಾರಂಭಿಸಿದರು.
ಅರ್ಧಗಂಟೆ ಕಳೆಯುವಷ್ಟರಲ್ಲಿ ಸೌರಭಳ ತಂದೆ “ಏನ್ರೋ, ಕಾಲೇಜಿಂದ ಬಂದವರೇ ಮರದ ಬುಡದಲ್ಲಿ ಕುಳಿತುಬುಟ್ಟೀರಿ..ಮನೆಗಾದ್ರೂ ಹೋಗ್ಬಂದ್ರಾ?ಕತ್ತಲಾಗ್ತಾ ಬಂತು, ಮರದ ಬುಡದಾಗೇ ಮಲಗೋ ಪಿಲಾನ್ ಐತಾ?”
“ಹಾಗೇನಿಲ್ಲಪ್ಪಾ, ಬರ್ತೀವಿ ಈಗ್ಲೇ..”
“ಶಂಕ್ರುಮಾಮಾ, ನಾಳೆ ಕಾಲೇಜಿಗೆ ಹೋಗ್ತಾ, ಆ ರಸ್ತೆ ಕೆಲಸದವರ ಹತ್ರ ಕ್ಷಮೆ ಕೇಳ್ಬೇಕು ಅಂತಾ ಇದೀವಿ..”
“ಏನಂದೇ?..ಇನ್ನೊಂದ್ಸಲ ಯೋಳು ಗಿರಿ..”
“ಹೌದು ಮಾಮಾ, ನಮ್ಮಿಂದ ತಪ್ಪಾಗಿದೆ.ಹಾಗಾಗಿ ಕ್ಷಮೆ ಕೇಳ್ಬೇಕು ಅಂತ ಸರ್ ಕೂಡಾ ಹೇಳವ್ರೇ..”
“ಏನಾರಾ ಆಗ್ಲಿ, ಒಳ್ಳೆ ಬುಧ್ಧಿ ಬಂತಲ್ಲಾ, ನಿಮಗೆಲ್ಲಾ ಹಿಡಿದಿರೋ ಆ ಮರದ ಭೂತ ಬುಡ್ತಲ್ಲಾ..ನಡೀರಿ,ನಡೀರಿ ಮನೆಗೆ..”
ಎಲ್ಲರೂ ನಗುತ್ತಾ ಅವನ ಹಿಂದೆ ನಡೆದರು.
----
ಮಾರನೇದಿನ ಕಾಲೇಜಿನ ಸಭಾಂಗಣದಲ್ಲಿ ಗದ್ದಲವನ್ನು ಕೇಳಿ ಜಯರಾಂ ಸರ್ ಒಮ್ಮೆ ಚಕಿತರಾದರು. ವಿಷಯವೇನೆಂದರೆ ಗಿರಿ ಹಾಗೂ ಅವನ ಗೆಳೆಯರು ಸೇರಿ ರಸ್ತೆ ಕೆಲಸದವರ ಬಳಿ ಹೋಗಿ ಕ್ಷಮೆ ಕೋರಿದ್ದರು. ಮೊದಲು ರೇಗಿದರೂ, ನಂತರದಲ್ಲಿ ಆ ಕಾರ್ಮಿಕರೆಲ್ಲ ಅವರನ್ನು ಕ್ಷಮಿಸಿ ಶನಿವಾರದಿಂದ ಕೆಲಸಕ್ಕೆ ಬರುವುದಾಗಿ ತಿಳಿಸಿದ್ದರು. ಇದ್ದ ಸಮಸ್ಯೆ ಕಳೆಯಿತಲ್ಲಾ ಎಂದು ಸೂರುಕಿತ್ತುಹೋಗುವ ರೀತಿಯಲ್ಲಿ ಎಲ್ಲರೂ ಖುಷಿಯಿಂದ ಅರಚುತ್ತಿದ್ದರು.
ಇವರ ಮಾತನ್ನು ಕೇಳಿ ಜಯರಾಂ ಸರ್ ಒಮ್ಮೆ ನಿಟ್ಟುಸಿರಿಟ್ಟು, ಜಿಲ್ಲಾಮಟ್ಟದ ನಾಟಕ ಸ್ಪರ್ಧೆ ಇರುವುದು ಕೂಡಾ ಶನಿವಾರವೇ ಎಂದು ತಿಳಿಸಿದರು.
ಅದರ ನಂತರ ಮಕ್ಕಳಿಗಾಗಲೀ, ಜಯರಾಂ ಸರ್ ಗಾಗಲೀ ಬಿಡುವೇ ಇರಲಿಲ್ಲ. ಕೇವಲ ಒಂದುವಾರದಲ್ಲಿ ಇಡೀ ನಾಟಕವನ್ನು ತಯಾರು ಮಾಡಬೇಕಿತ್ತು. ಅದೇನು ಸುಲಭದ ಮಾತಲ್ಲ! ಪಾತ್ರಹಂಚಿಕೆ, ರಂಗ ವಿನ್ಯಾಸ, ಪರಿಕರಗಳು, ಸಂಗೀತ ಎಲ್ಲವನ್ನೂ ನಿಭಾಯಿಸಬೇಕು.
ಮಕ್ಕಳೆಲ್ಲ ಬೆಳಗಿನ ಮೊದಲ ಬಸ್ಸಿಗೆ ಬಂದರೆ, ತಿರುಗಿ ಮನೆಗೆ ಹೋಗುವುದು ರಾತ್ರಿ ಎಂಟರ ಕೊನೆಯ ಬಸ್ಸಿಗೆ. ಹಾಗೆಂದು ಸಭಾಂಗಣವ ಬಿಟ್ಟು ಆಚೆ ಹೋಗುತ್ತಿರಲಿಲ್ಲ.
ಪರೀಕ್ಷೆಗೂ ಓದಿದ್ದನ್ನು  ಕಂಡಿರದ ಪಾಲಕರು, ಈಗ ಸರಿರಾತ್ರಿಯವರೆಗೆ ಎಲ್ಲ ಮಕ್ಕಳೂ ಕುಳಿತು ಮಾತು ಉರುಹೊಡೆಯುವುದನ್ನು ಕಂಡಿದ್ದರು! “ನಾಟಕದಲ್ಲಿರುವ ಆಸಕ್ತಿಯ ಕಾಲುಭಾಗ ಓದೋದ್ರಲ್ಲಿ ಇದ್ದಿದ್ರೆ ನೀವೆಲ್ಲಾ ರಾಜ್ಯಕ್ಕೇ ರ್ಯಾಂಕ್ ಬರ್ತಿದ್ರಿ” ಎಂದು ಮನೆಯಲ್ಲಿ ಛೇಡಿಸಿದಾಗ, “ಈಗಲೂ ನಾವೇನೂ ಕಡಿಮೆಯಿಲ್ಲ. ರ್ಯಾಂಕ್ ತರ್ತೀವಿ; ಪರೀಕ್ಷೆಯಲ್ಲಲ್ಲ, ನಾಟಕದಲ್ಲಿ..” ಎನ್ನುತ್ತಾ ಓಡುತ್ತಿದ್ದರು.
----
ಶನಿವಾರ ಬೆಳಿಗ್ಗೆ ಕಾಲೇಜಿಗೆ ಹೊರಟವರಿಗೆ ರಸ್ತೆ ಕಾರ್ಮಿಕರು ಎದುರಾದರು. ಇಂದು ಮರಕಡಿಯುತ್ತೇವೆಂದೂ, ಮತ್ತೆ ಗಲಾಟೆ ಮಾಡಬಾರದೆಂದೂ, ತಮ್ಮ ಕೆಲಸ ಮುಗಿಯುವವರೆಗೆ ನಿಲ್ಲಬೇಕೆಂದೂ ಹೇಳಿದರು.
“ಬಸ್ಸಿನ ಸಮಯವಾಗಿದೆ. ಇಂದು ನಾಟಕದ ಸ್ಪರ್ಧೆಯಿದೆ. ಅದು ನಮ್ಮ ಕಾಲೇಜಿನಲ್ಲೂ ಅಲ್ಲ. ಬಹಳ ದೂರ ಹೋಗಬೇಕು. ನಿಲ್ಲುವಷ್ಟು ಸಮಯವಿಲ್ಲ. ನಿಮ್ಮ ಕೆಲಸ ನೀವು ಮಾಡಿ, ನಾವು ಹೊರಡುತ್ತೇವೆ” ಎಂದು ನಯವಾಗಿ ತಿಳಿಸಿದರು.
ಜಿಲ್ಲೆಯ ನಾನಾ ಕಡೆಯ ಇಪ್ಪತ್ತು ಕಾಲೇಜುಗಳಿಂದ ನಾಟಕದ ತಂಡಗಳು ಬಂದಿದ್ದವು. ಬಟ್ಟೆ-ಬಣ್ಣ ಎಂದು ಸಿಧ್ಧತೆಯಲ್ಲಿದ್ದ ಕಾಲೇಜು ಮಕ್ಕಳ ಗಲಿಬಿಲಿಗೆ ಕಾಲೇಜಿನ ಪ್ರಾಂಗಣಕ್ಕೆ ಯಾವೊಂದು ಹಕ್ಕಿಯೂ ಸುಳಿಯಲಿಲ್ಲ!
‘ಜ್ಞಾನಕಲಶ’ ಕಾಲೇಜಿನ ವಿದ್ಯಾರ್ಥಿಗಳು ನಾಟಕವನ್ನು ಪ್ರಾರಂಭಿಸಿದರು.
ನಾಟಕದ ಹೆಸರು – ‘ಬೇವಿನಮರದಮ್ಮ’.
ಊರಿನ ದೊಡ್ಡ ಬೇವಿನಮರವನ್ನು ಕಡಿಯಲು ಊರ ಹಿರಿಯರು ಯೋಚಿಸುತ್ತಾರೆ. ಇದನ್ನರಿತ ಊರ ಮಕ್ಕಳು ತಮ್ಮಲ್ಲೇ ಒಂದು ಯೋಜನೆ ರೂಪಿಸುತ್ತಾರೆ. ರಾತ್ರೋರಾತ್ರಿ ಒಂದು ದೊಡ್ಡ ಕಲ್ಲನ್ನು ತಂದು ಬೇವಿನಮರದ ಬುಡದಲ್ಲಿಟ್ಟು, ಅರಿಶಿನ-ಕುಂಕುಮ ಹಚ್ಚುತ್ತಾರೆ. ಬೆಳಿಗ್ಗೆ ಊರವರು ನೋಡಿ, ದಿಗ್ಭ್ರಾಂತರಾಗುತ್ತಾರೆ.
ಸುತ್ತಲಿನ ಹಳ್ಳಿಗಳಿಗೆ ವಾಯುವೇಗದಲ್ಲಿ ಸುದ್ದಿ ತಲುಪುತ್ತದೆ - ಬೇವಿನಮರದಲ್ಲಿ ದೇವರು ಪ್ರತ್ಯಕ್ಷ ಎಂದು!
ಊರ ಮುಖಂಡರೆಲ್ಲ ಒಂದೆಡೆ ಸೇರುತ್ತಾರೆ. ಇದ್ದಕ್ಕಿದ್ದಂತೆ ಒಬ್ಬ ಅರ್ಚಕನ ಮೈ ಮೇಲೆ ದೇವರು ಬಂದು, ಆತ ಕೆದರಿದ ಕೂದಲಿನ ತಲೆ ಆಡಿಸುತ್ತಾ, ಹಿಂದೆ-ಮುಂದೆ ಓಲಾಡುತ್ತಾ, ಅಂಗೈಲಿ ಕರ್ಪೂರದಾರತಿ ಎತ್ತುವಾಗ ಊರ ಜನರಷ್ಟೇ ಏಕೆ, ನೋಡುವ ಪ್ರೇಕ್ಷಕನೂ ಭಯಭೀತನಾಗುತ್ತಾನೆ!
“ನಾನು ನಿಮ್ಮಮ್ಮ; ಬೇವಿನಮರದಮ್ಮ! ನನ್ನನ್ನೇ ಕಡಿಯಲು ಪ್ರಯತ್ನಿಸ್ತೀರಾ? ಹಾಗಾಗಿಯೇ ನಾನು ಪ್ರತ್ಯಕ್ಷಳಾಗಿದ್ದು..” ಎಂದು ಉಗ್ರರೂಪದಲ್ಲಿ, ತಾರಕದಲ್ಲಿ ಅರ್ಚಕ ಅರಚುತ್ತಾನೆ! ಊರ ಹೆಂಗಸರೆಲ್ಲ ಬೇವಿನಮರದಮ್ಮ ಮೈಮೇಲೆ ಬಂದ ಅರ್ಚಕನಿಗೆ ಆರತಿ ಎತ್ತುತ್ತಾರೆ, ಅವನೆದುರು ಕಾಯಿ ಒಡೆಯುತ್ತಾರೆ.
ಕಡಿಯುವುದು ಹಾಗಿರಲಿ; ಊರವರೆಲ್ಲ ಆ ಬೇವಿನಮರಕ್ಕೆ ಒಂದು ದೇಗುಲ ನಿರ್ಮಿಸಲು ನಿರ್ಧರಿಸುತ್ತಾರೆ.
ಇದನ್ನೆಲ್ಲ ಮಕ್ಕಳು ಮರೆಯಿಂದಲೇ ನೋಡುತ್ತಾರೆ. ಎಲ್ಲೋ ಮೂಲೆಯಲ್ಲಿದ್ದ ಕಲ್ಲಿಗೆ ದೇಗುಲವೇ ನಿರ್ಮಾಣವಾಗುತ್ತದೆ ಎಂದು ನಗುತ್ತಾರೆ! ಏನಾದರಾಗಲಿ, ಬೇವಿನಮರ ಉಳಿಯಿತಲ್ಲಾ ಎಂದು ಖುಷಿಯಿಂದ ‘ಬೇವಿನಮರದಮ್ಮ’ನ ಪೂಜೆಯಲ್ಲಿ ತಾವೂ ಪಾಲ್ಗೊಳ್ಳುತ್ತಾರೆ.
ಗಂಭೀರ ವಿಷಯವೊಂದನ್ನು ತಿಳಿ ಹಾಸ್ಯದ ಮೂಲಕ ವಿಡಂಬನಾತ್ಮಕವಾಗಿ ಪ್ರಸ್ತುತಪಡಿಸಿದ್ದಕ್ಕೆ ತೀರ್ಪುಗಾರರೆಲ್ಲ ಮನಸೋತಿದ್ದರು. ಪ್ರಥಮ ಸ್ಥಾನ ಗಳಿಸುವ ಮೂಲಕ ‘ಬೇವಿನಮರದಮ್ಮ’ ನಾಟಕ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಅರ್ಚಕನ ಪಾತ್ರ ನಿಭಾಯಿಸಿದ ಆದರ್ಶನಿಗೆ ಅತ್ಯುತ್ತಮ ಅಭಿನಯ ಎಂಬು ಪ್ರಶಸ್ತಿಯೂ ದೊರೆಯಿತು.
ಎಲ್ಲ ಸಾಮಗ್ರಿಗಳನ್ನೂ ಗಾಡಿಗೇರಿಸಿಕೊಂಡು ಹೊರಡುವಷ್ಟರಲ್ಲಿ, ಸಂಜೆಯ ಸೂರ್ಯನೂ ಮರಗಳ ಮರೆಯಲ್ಲಿ ಕರಗುತ್ತಿದ್ದ. ಹೊರಗಿನ ತಂಗಾಳಿ ಗಾಡಿಯೊಳಗಿನವರ ಗೆಲುವಿನ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಹಾರಾಟ, ಚೀರಾಟ ಎಲ್ಲವೂ ಜೋರಾಗಿಯೇ ಇತ್ತು! ಅತ್ತ ಗಿರಿ ಮತ್ತವನ ಗೆಳೆಯರಿಗೆ ಊರಿಗೆ ಹೋಗಬೇಕಿದ್ದ ಕೊನೆಯ ಬಸ್ ಕೂಡಾ ತಪ್ಪಿಹೋಯ್ತು. ಕಾಲೇಜಿನ ವಾಹನದಲ್ಲೇ ಅವರನ್ನು ಊರಿಗೆ ತಲುಪಿಸುವುದಾಗಿ ತಿಳಿಸಿದರು ಜಯರಾಂ ಸರ್!
ಗುಂಪಿನಲ್ಲಿ ಗೆಳೆಯರೇ ಆಗಿದ್ದ ಸರ್ ಮಾತಿಗಾರಂಭಿಸಿದರು-
“ಅಂತೂ ಈ ಬಾರಿಯೂ ಗೆದ್ದೇ ಬಿಟ್ರಲ್ಲೋ..”
“ಎಲ್ಲಾ ನಿಮ್ಮಿಂದಾನೇ ಸಾರ್..”
“ಸಾರ್, ಮೊದ್ಲು ಬದಲಾವಣೆ ನಮ್ಮಲ್ಲಿ ಆಗ್ಬೇಕು ಅಂತಾ ಅವತ್ತೇ ಹೇಳಿದ್ರಲ್ಲಾ..ನಾವು ಅದನ್ನಾ ಪಾಲಿಸಿದ್ವಿ..ಹಾಗಾಗಿಯೇ ಗೆಲುವು ನಮ್ಮದಾಯ್ತು.”
“ಏನೋ ಅದು ಆದರ್ಶ, ನಾನೇನು ಹೇಳಿದ್ದೆ? ಏನು ಪಾಲಿಸಿದ್ರಿ? ಒಂದೂ ಅರ್ಥ ಆಗ್ತಿಲ್ಲ ನಂಗೆ..”
ಎಲ್ಲ ಮಕ್ಕಳೂ ಜೋರಾಗಿ ನಗಲಾರಂಭಿಸಿದರು.
“ಅಂದರೆ ಎಲ್ಲರೂ ಸೇರಿ ಏನೋ ಮಾಡಿದ್ದೀರಿ..ಏನಾಯ್ತು ಅಂತಾ ಹೇಳ್ರೋ..ನಿಮ್ಜೊತೆ ನಾನೂ ನಗ್ತೀನಿ..”
“ಯಾಕೆ ಅಷ್ಟು ಗಡಿಬಿಡಿ ಮಾಡ್ತೀರಾ ಸಾರ್? ಹೇಗೂ ನಮ್ಮೂರಿಗೆ ಬರ್ತಿದೀರಲ್ಲಾ, ನೀವೇ ನೋಡಬಹುದು..” ಎಂದ ಗಿರಿ!
ಎಲ್ಲರೂ ಸೇರಿ ಏನೋ ಚೇಷ್ಟೆ ಮಾಡಿದ್ದಾರೆ. ಏನಿರಬಹುದು ಎಂದು ಯೋಚಿಸುತ್ತಾ ಕುಳಿತರು ಜಯರಾಂ!
----
ಊರಿನ ಬಳಿ ಬರುತ್ತಿದ್ದಂತೆಯೇ, “ಅಯ್ಯೋ ಇದೇನ್ರೋ..ಇಷ್ಟೊಂದು ಜನ ಸೇರಿದಾರೆ ಇಲ್ಲಿ?” ಎಂದು ಚಕಿತರಾದರು ಜಯರಾಂ ಸರ್!
“ಸಾರ್,ನಾವೂ ನಿಮ್ಮ ಜೊತೇನೇ ಇದೀವಿ. ನಮ್ಗೂ ಏನೂ ಗೊತ್ತಾಗ್ತಿಲ್ಲ. ಬನ್ನಿ ನೋಡೋಣ” ಎನ್ನುತ್ತಾ ಎಲ್ಲರೂ ಗಾಡಿಯಿಂದ ಕೆಳಗಿಳಿದರು.
ಜನರ ನಡುವೆ ದಾರಿ ಮಾಡಿಕೊಂಡು, ಎಲ್ಲರೂ ಮಧ್ಯ ಬಂದರೆ ಜಯರಾಂ ಸರ್ ಸ್ತಂಭೀಭೂತರಾದರು. ಊರವರೆಲ್ಲ ಮಡಿಯುಟ್ಟು ಓಡಾಡುತ್ತಿದ್ದಾರೆ, ಮಹಿಳೆಯರೆಲ್ಲ ರೇಷ್ಮೆ ಸೀರೆಯುಟ್ಟು ಕೈಲಿ ಹೂವು, ಅರಿಶಿನ-ಕುಂಕುಮದ ಬಟ್ಟಲುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ರಸ್ತೆ ಕೆಲಸದವರೆಲ್ಲ ಒಂದು ಮೂಲೆಯಲ್ಲಿ ಕೈ ಮುಗಿದು ನಿಂತಿದ್ದಾರೆ. ಒಂದಷ್ಟು ಜನ ಕುಳಿತು ಭಜನೆ ಹಾಡುತ್ತಿದ್ದರೆ ಮತ್ತೊಂದಷ್ಟು ಜನ ಮರದ ಸುತ್ತ ಸುತ್ತುತ್ತಿದ್ದಾರೆ. ನಾಲ್ಕೂ ದಿಕ್ಕುಗಳಿಂದ ಜನರೆಲ್ಲ ಅಲೆ ಅಲೆಯಾಗಿ ಬರುತ್ತಲೇ ಇದ್ದಾರೆ! 
ಅಷ್ಟರಲ್ಲಿ ಯಾರೋ ಗಮನಿಸಿ ಈ ಮಕ್ಕಳ ಗುಂಪಿನತ್ತ ಬಂದು ಮಾತನಾಡಿಸಿದರು. ಗಿರಿ ತಮ್ಮ ನಾಟಕ ಮೊದಲ ಸ್ಥಾನ ಗಳಿಸಿರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುರಿತು ತಿಳಿಸಿದ.
“ಇದೆಲ್ಲ ಹನುಮಪ್ಪಂದೇ ಆಸೀರಾದ!” ಎಂದ ಗಿರಿಯ ತಂದೆ.
“ಇಲ್ಲಿ ನೋಡಿ” ಎಂದು ಆಲದಮರದತ್ತ ಕೈ ಮಾಡಿ ತೋರಿಸಿದ. ಆಗಸದೆತ್ತರದ ಆಲದಮರದ ಬುಡದಲ್ಲಿ ಮಣ್ಣಾದ ಒಂದು ಮೊಳದೆತ್ತರದ ಹನುಮನ ಮೂರ್ತಿ!
ಬೆಳಿಗ್ಗೆ ಕೆಲಸದವರು ಮರದ ಬುಡಕ್ಕೆ ಕೊಡಲಿ ಹಾಕಿದಾಗ, ಏನೋ ಎಡವಿತು. ಆ ಜಾಗದಲ್ಲಿ ಸ್ವಲ್ಪ ಆಳವಾಗಿ ನೋಡಿದಾಗ ಕಂಡಿದ್ದು ಹನುಮ!
“ನೋಡ್ರಲಾ..ಹನುಮಪ್ಪ ನಮ್ಗೆಲ್ಲ ಆಸೀರ್ವಾದ ಮಾಡಕೆ ಬಂದವ್ನೆ..ಇವತ್ತು ಸನಿವಾರ, ಅಂದ್ರೆ ನಮ್ಮ ದ್ಯಾವ್ರದ್ದೇ ದಿವ್ಸ ನೋಡಿ. ದ್ಯಾವ್ರ ಮರ ಇದು. ನೀವೆಲ್ಲ ಈ ಮರ ಕಡಿಬಾರ್ದು ಅಂತಾ ಹಠ ಮಾಡಿದ್ರಲ್ಲ, ಹನುಮಪ್ಪ ಅವ್ನ ಮನೆ ಉಳ್ಸಿದ್ದಕ್ಕೆ ನಿಮಗೆಲ್ಲ ಆಸೀರ್ವಾದ ಮಾಡವ್ನೆ. ಅದ್ಕೆಯಾ ನಿಮ್ಗೆಲ್ಲ ಪ್ರೈಜ್ ಬಂದಿದ್ದು..” ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿದ ಸೌರಭಳ ತಂದೆ.
“ಹೂಂ..ಅಷ್ಟೇ ಅಲ್ಲ, ಈಗ ನಿಮ್ಮ ಮರಾನೂ ಉಳೀತು, ಅದ್ರ ಪಕ್ಕದಲ್ಲಿ ಊರಿಗೆ ರಸ್ತೆನೂ ಆಯ್ತು!” ಎಂದ ಮತ್ತೊಬ್ಬ.
ಎಲ್ಲರೂ ಉದ್ಭವಮೂರ್ತಿ ಹನುಮನ ಗುಣಗಾನ ಮಾಡುತ್ತಿದ್ದಾಗ, ಊರ ಹಿರಿಯರು ಬಂದು ಮಕ್ಕಳಿಗೆಲ್ಲ ಮನೆಗೆ ಹೋಗಿ ಶುಭ್ರವಾಗಿ ಬರಲು ತಿಳಿಸಿದರು.
ಎಲ್ಲರೂ ಆ ಜನಜಾತ್ರೆಯಿಂದ ಹೊರಬರುವಷ್ಟರಲ್ಲಿ ನುಜ್ಜುಗುಜ್ಜಾಗಿದ್ದರು! ಅಷ್ಟರಲ್ಲಿ ಜಯರಾಂ ಸರ್ ಗೆ ಎಲ್ಲವೂ ಅರ್ಥವಾಗಿತ್ತು.
“ಏನ್ರಪ್ಪಾ, ಹನುಮನಿಗೆ ದೊಡ್ಡ ಗುಡಿಯೇ ಆಗೋ ಥರ ಇದೆ ನಿಮ್ಮ ಊರಿನಲ್ಲಿ..”
“ಹೂ ಸಾರ್, ದುರ್ಗಪ್ಪನ ಅಂಗಡಿಲಿ ಧೂಳು ತಿಂತಾ ಇದ್ದ ಹನುಮನಿಗೆ ಗುಡೀಲಿ ಬೆಚ್ಚಗೆ ಇರೋ ಯೋಗ ಬಂದಿದೆ ನೋಡಿ..” ಎಂದಳು ಸೌರಭ.
“ನೋಡಿದ್ರಾ ಸಾರ್, ನೀವೇ ಹೇಳಿದಂತೆ ನಮ್ಮಲ್ಲಿಯ ಬದಲಾವಣೆನಾ? ಈ ಉಪಾಯ ಹೊಳೆಯಲು ಮೂಲ ಕಾರಣವೇ ನೀವು! ಒಂದು ನಾಟಕದಿಂದ ಒಂದು ಮರದ ಜೀವ, ಅದರಲ್ಲಿಯ ಅದೆಷ್ಟೋ ಜೀವಿಗಳ ಜೀವನ ಎಲ್ಲವೂ ಉಳೀತು” ಎಂದ ಪ್ರಭವ.
“ನಮ್ಮೆಲ್ಲರ ಈ ತಿಂಗಳ ಪಾಕೆಟ್ ಮನಿ ದುರ್ಗಪ್ಪನ ಪಾಕೆಟ್ ಸೇರಿತು. ಪರ್ವಾಗಿಲ್ಲ ಸಾರ್, ಹನುಮನಿಗೆ ಕಾಣ್ಕೆ ಹಾಕಿದಂಗೆ ಆಯ್ತು” ಎಂದ ಆದರ್ಶ.
“ಅಂತೂ ಆಲದಮರ ಉಳಿಸ್ಕೊಂಡ್ರಿ...” 
“ ಎಲ್ಲಾ ನಮ್ಮ ‘ಬೇವಿನಮರದಮ್ಮ’ನ ಆಶೀರ್ವಾದ ಸಾರ್..”
ಎಲ್ಲರೂ ನಗುತ್ತಾ ಮನೆಯ ಹಾದಿ ಹಿಡಿದರು.
----
ಒಂದು ತಿಂಗಳಲ್ಲಿ ಆಲದಮರದ ಪಕ್ಕದಿಂದ ಊರಿನತ್ತ ಕಪ್ಪಾಗಿ ಫಳಫಳನೆ ಹೊಳೆಯುತ್ತಿದ್ದ ರಸ್ತೆಯಾಗಿತ್ತು. ಊರಿನಲ್ಲಿ ಹನುಮನಿಗೆ ಒಂದು ಗುಡಿಯಾಗಿತ್ತು. ಅಲ್ಲೊಬ್ಬ ಪೂಜಾರಿ! ಪ್ರತಿ ಶನಿವಾರ ಪ್ರಸಾದ ಸ್ವೀಕರಿಸಲು ಜನವೋ ಜನ! 
ಮರದ ಮೇಲೆ ಗುಬ್ಬಿ, ಪಾರಿವಾಳ ಗಿಳಿಗಳು ತಮ್ಮ ಪರಿವಾರದೊಂದಿಗೆ ಸದಾ ಚಿಲಿಪಿಲಿ ಎನ್ನುತ್ತಾ ನಲಿಯುತ್ತಿದ್ದವು.
ಇತ್ತ ರಾಜ್ಯಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ‘ಬೇವಿನಮರದಮ್ಮ’ ಜಯಭೇರಿ ಬಾರಿಸಿದಳು.
____

No comments:

Post a Comment

ಕರಗುವೆ...