Thursday, October 14, 2021

ಗುಲಾಬಿ ಬಣ್ಣದ ಸಿಹಿ ಹತ್ತಿಯ ಲೋಕ - ಬಾಂಬೆ ಮಿಠಾಯಿ!

ನಮ್ಮೂರ ಜಾತ್ರೆಯಲಿ ಮೊದಲ ಬಾರಿ ನಾನದನ್ನು ಕಂಡಿದ್ದು. ದೂರದಿಂದ ನೋಡಿದಾಗ ಗುಲಾಬಿ ಪುಗ್ಗಿ (ಬಲೂನ್) ಎಂದೇ ನಂಬಿದ್ದೆ. ನನಗದು ಬೇಕೆಂದು ಹೇಳಿದಾಗ ಕೊಡಿಸಲು ತಯಾರಿಲ್ಲದ ಅಮ್ಮ ಅದು ಪುಗ್ಗಿಯಲ್ಲ ಎಂದಷ್ಟೇ ಹೇಳಿದಳೇ ಹೊರತು, ಏನೆಂದು ಹೇಳಲೂ ಇಲ್ಲ. ಕೊನೆಗೂ ನನ್ನ ಹಠಕ್ಕೆ ಮಣಿದು ಅತ್ತ ಕರೆದುಕೊಂಡು ಹೋದಳು. ಅದೇನು ಸುಲಭದ ಕೆಲಸವೇ? ಅದೆಷ್ಟು ಅಡೆ ತಡೆಗಳನ್ನು ದಾಟಿ ಅತ್ತ ಸಾಗಬೇಕಿತ್ತು ಎಂದರೆ, ಅವುಗಳ ಯೋಚನೆಯಲ್ಲಿ ಅಮ್ಮ ಒಂದೇ ಒಂದು ಕ್ಷಣಕ್ಕೂ ನನ್ನ ಕೈ ಬಿಡಲು ಸಿದ್ಧಳಿರಲಿಲ್ಲ.  ಝಗಮಗಿಸುವ ಬಣ್ಣ ಬಣ್ಣದ ಬೆಳಕು, ಯಾವುದೋ ಅಂಗಡಿಯಿಂದ ಕೇಳುತ್ತಿದ್ದ ಅಣ್ಣಾವ್ರ "ಹೊಸಬೆಳಕು.. ಮೂಡುತಿದೆ.."ಹಾಡು! ಎಲ್ಲೋ ಬಾವಿಯಲ್ಲಿ ಬೈಕ್ ಓಡಿಸುತ್ತಿರುವ ಸವಾರ. ಎದುರೇ ದೈತ್ಯಕಾರದಲ್ಲಿ ನಿಂತ ತೊಟ್ಟಿಲು, ಬೈಕ್ ಇನ್ನಿತರ ಆಟಗಳು.
"ಬನ್ನಿ ಬನ್ನಿ, ಮಾಯಾ ಕನ್ನಡೀಲಿ ನಿಮ್ಮನ್ನ ನೀವೇ ನೋಡ್ಕೊಳಿ..ದಪ್ಪ ಇರೋರು ಸಣ್ಣ ಕಾಣೋ ಕನ್ನಡಿ, ಸಣ್ಣ ಇರೋರು ದಪ್ಪ ಕಾಣೋ ಕನ್ನಡಿ, ಕುಳ್ಳ ಇರೋರನ್ನ ಉದ್ದಕೆ ತೋರ್ಸೋ ಕನ್ನಡಿ, ಸುಂದರವಾಗಿರೋರನ್ನ ಸೂಪರ್ ಆಗಿ ತೋರ್ಸೋ ಕನ್ನಡಿ, ಆಂಟಿರನ್ನ ಹುಡ್ಗಿಯಾಗಿ ತೋರ್ಸೋ ಕನ್ನಡಿ.. ಬನ್ನಿ ಅಮ್ಮಾ, ಬನ್ನಿ ಅಕ್ಕಾ.. ಹತ್ತೇ ರೂಪಾಯಿ ಒಬ್ಬರಿಗೆ".. ಇವಾ ಏನು ಕನ್ನಡಿ ಒಳಗೇ ಕುಳಿತು ಮಾತಾಡ್ತಾ ಇದಾನ ಅನ್ನೋ ಅನುಮಾನ ಇತ್ತು ನನಗೆ! ಮುಂದೆ ಜಾದೂ ಆಟ, ಸರ್ಕಸ್ ಕಂಪನಿಗಳ ಟೆಂಟ್! ಎಲ್ಲಿಯೂ ನಿಲ್ಲದೆ, ನಿಲ್ಲಲೂ ಬಿಡದೆ ನನ್ನ ಕರೆದೊಯ್ದಳು ಅಮ್ಮ!!
 ಅಂಗಡಿಗಳ ಮುಂದೆ ಚೌಕಾಶಿ ಮಾಡುತ್ತಿದ್ದ ಹೆಂಗಸರು; ಅವರ ಸೆರಗನ್ನು ಹಿಡಿದೆಳೆದು "ಅಮ್ಮಾ ನಂಗೆ ಈ ಬಳೆ ಕೊಡ್ಸು, ಹೇರ್ಬ್ಯಾಂಡ್ ಕೊಡ್ಸು, ಗೊಂಬೆ ಕೊಡ್ಸು ಎನ್ನುತ್ತಿದ್ದ ಹೆಣ್ಣುಮಕ್ಕಳು; ಸೊಂಟದ ಮೇಲೆ ಕುಳಿತು ಸಿಂಬಳ ಸುರಿಸುತ್ತ ಸವಾರಿ ಮಾಡುತ್ತಾ, ಅಮ್ಮಾ ನಂಗೆ ಕಾರ್ ಕೊಡ್ಸು ಎಂದು ಎಲ್ಲರ ಮಧ್ಯ ದೊಡ್ಡ ರಾಗ ಎತ್ತಿದ್ದ ಪುಟ್ಟ ಪೋರ! ತರಹೇವಾರಿ ಬ್ಯಾಗ್, ಬಟ್ಟೆ ಅಂಗಡಿಗಳು. ದೊಡ್ಡ ದೊಡ್ಡ ಕರಡಿ ಗೊಂಬೆಗಳ ಅಂಗಡಿ..ಸಾಲು ಸಾಲಾಗಿರುವ ಮಸಾಲಾಪುರಿ, ಗೋಬಿ ಮಂಚೂರಿ, ಜೋಳ, ಪಾಪ್ ಕಾರ್ನ್ ಅಂಗಡಿಗಳಂತೂ ತಮ್ಮ ಘಮದ ಮೂಲಕವೇ ಮುಂದೆ ಹೆಜ್ಜೆ ಇಡಲಾರದಂತೆ ಅಡ್ಡ ಬಂದು ನಿಲ್ಲುತ್ತಿದ್ದವು. ಪೈಪೋಟಿಯಂತೆ ಪೊಂ ಪೊಂ ಎನ್ನುತ್ತಾ, ಗಂಟೆ ಬಡಿಯುತ್ತಾ, ಮಕ್ಕಳನ್ನೇ ನೋಡುತ್ತಾ ಸುತ್ತುವ ಐಸ್ಕ್ರೀಂ, ಕುಲ್ಫಿಯ ತಳ್ಳುಗಾಡಿಗಳು!
ಇವರೆಲ್ಲರ ಮಧ್ಯೆ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಕರೆದುಕೊಂಡು ಹೋಗುತ್ತಿರುವ ಅಮ್ಮನಿಗೆ ಮುಂದಿನ ಸಮಸ್ಯೆ ಗುಲಾಬಿ ಬಣ್ಣದಲ್ಲಿ ಎದುರು ನೋಡುತ್ತಿತ್ತು!!
ಕೆಂಪು ಅಂಗಿ, ಕರಿ ಪ್ಯಾಂಟು, ಕುತ್ತಿಗೆ ಮೇಲೊಂದು ಟವೆಲ್! ಬಿದಿರಿನಂಥ ಉದ್ದ ಕೋಲಿನ ಸುತ್ತಲೂ ಸಣ್ಣ ಕಡ್ಡಿಗಳು, ಆ ಕಡ್ಡಿಯ ತುದಿಗೆ ಪ್ಲಾಸ್ಟಿಕ್ ನಲ್ಲಿರುವ ಗುಲಾಬಿ ಪುಗ್ಗಿ!
ಅರೆರೆ!! ಪುಗ್ಗಿ ಯಾಕೆ ಪ್ಲಾಸ್ಟಿಕ್ ಒಳಗಿದೆ? ಹೋ.. ಇದು ಪುಗ್ಗಿಯಲ್ಲ.. ಹತ್ತಿ! ಗುಲಾಬಿ ಬಣ್ಣದಲ್ಲೂ ಹತ್ತಿ ಸಿಗತ್ತಾ? ನಮ್ಮನೇಲಿ ಯಾಕೆ ಬಿಳಿ ಬಣ್ಣದ್ದು ಮಾತ್ರ ತರ್ತಾರೆ?ಅವ ಅದ್ನ ಯಾಕೆ ಕೋಲಲ್ಲಿ ಕಟ್ಕೊಂಡು ತಿರಗ್ತಾ ಇದಾನಮ್ಮ? ಅಬ್ಬಬ್ಬಾ..ಇಷ್ಟೆಲ್ಲಾ ಪ್ರಶ್ನೆ ಕೇಳುತ್ತಿದ್ದರೂ ಒಮ್ಮೆಯೂ ಅದು ಏನೆಂದು ಹೇಳಲೆ ಇಲ್ಲ ನನ್ನಮ್ಮ!
ಅವನ ಸುತ್ತಲೂ ಅಷ್ಟೆಲ್ಲ ಮಕ್ಕಳಿದ್ದಾರೆ.. ಎಲ್ಲರೂ ನಂಗೊಂದು.. ನಂಗೆ ಎರ್ಡು ಅಂತಿದಾರೆ.. ಏನಿರ್ಬೋದು??
ಅಂತೂ ಒಬ್ಬ ಹುಡುಗ ಪ್ಲಾಸ್ಟಿಕ್ ಕವರ್ ಹರಿದು, ನಿಧಾನವಾಗಿ ಗುಲಾಬಿ ಹತ್ತಿ ಬಿಡಿಸಿ ಬಾಯಿಗಿಟ್ಟಿದ್ದು ಕಂಡಾಗ, ಅಮ್ಮನ ಮೇಲೆ ಬಂದ ಸಿಟ್ಟು ಅಷ್ಟಿಷ್ಟಲ್ಲ. ಅದು ಪುಗ್ಗಿಯಲ್ಲ, ಹತ್ತಿಯೂ ಅಲ್ಲ.. ತಿನ್ನುವಂಥದ್ದು ಎಂಬ ಒಂದು ಮಾತನ್ನೂ ಹೇಳಲಿಲ್ಲವಲ್ಲ!
ಈಗ ಶುರುವಾಗುವ ಹಠ ಸಣ್ಣದಲ್ಲ ಎಂಬ ಅಂದಾಜು ಅಮ್ಮನಿಗೂ ಇತ್ತು. ಗುಲಾಬಿ ಪುಗ್ಗಿ ಬೇಕೆಂದು ಮಾಡಿದ ಹಠವೇ ಇಲ್ಲಿವರೆಗೂ ಕರೆತಂದಿತ್ತು, ಈ ಗುಲಾಬಿ ಬಣ್ಣದ ಹೊಸ ರೀತಿಯ ತಿನ್ನುವ ವಸ್ತುವನ್ನು ಕೊಡಿಸದಿದ್ದರೆ ರಂಪಾಟವೇನು ಕಡಿಮೆ ಇರುವುದೇ?!
"ಅದು ಎಲ್ಲರೂ ತಿನ್ನೋದಲ್ಲ.. ಅದ್ರಲ್ಲಿ ಹುಳ ಎಲ್ಲ ಇರತ್ತೆ.. ಚೆನ್ನಾಗಿರಲ್ಲ.."
" ನೀ ತಿಂದು ನೋಡಿದೀಯ.. ಹುಳ ಇದ್ರು ಅವ್ರೆಲ್ಲ ಯಾಕೆ ತಿಂತಾರೆ? ನಂಗೆ ಬೇಕು ಅದು.. "
"ಅದು ಗಂಟ್ಲಲ್ಲಿ ಸಿಕ್ಕಾಕೋಳತ್ತೆ"
" ನಿಂಗೆ ಸಿಕ್ಕಾಕೊಂಡಿತ್ತಾ? "
" ನಿಂಗೆ ಸೇರಲ್ವೇ ಅದು.. ಚೆನ್ನಾಗಿರಲ್ಲ"
"ನೀ ಹ್ಯಾಗೆ ಹೇಳ್ತೀಯಾ?" ಎನ್ನುವಷ್ಟರಲ್ಲಿ ಕಣ್ಣು ತುಂಬಿ ಅಳುವ ಮೊದಲ ಹಂತದಲ್ಲಿದ್ದೆ. ಕೈಗೆ ಹತ್ತು ರೂಪಾಯಿ ಇತ್ತ ಅಮ್ಮ, "ಅಳಬೇಡ ಈಗ..ಹೋಗಿ ತಗೋ" ಅಂದ್ಲು.
ಅಂತೂ ನಾನು ಗೆದ್ದೆನಲ್ಲ ಅನ್ನೋ ಗತ್ತಿನಲ್ಲಿ ಹೋಗಿ " ಅಣ್ಣ ಇದೊಂದ್ ಕೊಡಿ ನಂಗೆ" ಅಂದೆ.
"ಹತ್ತು ರುಪಾಯಿಗೆ ಎರ್ಡು ಬರತ್ತೆ ಪುಟ್ಟಿ" ಅಂದನವ ನಗುತ್ತಾ.
ಅರೆ ವಾ! ಎರಡೂ ಕೈಲೂ ಒಂದೊಂದು ಹಿಡ್ಕೊಂಡು ದುಪ್ಪಟ್ಟು ಖುಷಿಲಿ ಕುಣೀತಾ ನಗ್ತಾ ಬಂದೆ. ಅಮ್ಮನ ಕೈಲಿ ಒಂದು ಇಟ್ಟು, ನಾನೊಂದು ಪ್ಯಾಕ್ ಹರಿದೆ.
ಏನದು ಎಂಬ ಕುತೂಹಲ; ಸಿಹಿ ಇರತ್ತೋ.. ಖಾರನೋ.. ಮುಟ್ಟಿದರೆ ಹತ್ತೀನೇ!! ಅಂತೂ ಸ್ವಲ್ಪ ತೆಗೆದು ಬಾಯಲ್ಲಿಟ್ಟೆ.. ಆಹಾ! ಆ ಸಿಹಿಗೆ ಒಂದು ಕ್ಷಣ ಕಣ್ಣು ಮುಚ್ಚಿದ್ದಷ್ಟೇ, ಕರಗಿ ಹೊಟ್ಟೆಗೆ ಇಳಿದೇ ಹೋಯ್ತು.
"ಅಮ್ಮ ಇದನ್ನ ಜಗಿಯೋದೇ ಬೇಡ.. ನೋಡು ನೀ ಮಾಡೋ ಅಡ್ಗೆ ಎಲ್ಲ ಜಗಿದು ತಿನ್ನಬೇಕು.. ಇದನ್ನ ಕುಡಿಯೋದಲ್ಲ.. ತಿನ್ನೋದೇ.. ಆದ್ರೂ ಜಗಿಯೋದು ಬೇಡ ನೋಡು.. ಇನ್ಮೇಲೆ ಊಟನೂ ಹಿಂಗಿದ್ದೆ ಮಾಡೋಣ.."
"ಏಯ್ ಸೋಮಾರಿ.. ಸುಮ್ನೆ ಬಾರೆ.. ಹಿಂಗೇ ಮಾತಾಡ್ತಾ ಇದ್ರೆ, ಕೈಲಿರೋದು ಗಾಳಿಲಿ ಕರಗಿ ಹೋಗತ್ತೆ ನೋಡು" ಎಂದು ಸಣ್ಣಗೆ ಗದರಿಸುತ್ತ ಕೈ ಹಿಡಿದುಕೊಂಡಳು.
ಕರಗಿ ಹೋದರೆ ಎಂಬ ಭಯಕ್ಕೆ ಎರಡೇ ಗುಕ್ಕಿಗೆ ತಿಂದು ಮುಗಿಸಿ, ಬರೀ ಕಡ್ಡಿ ನೋಡಿ, ಖಾಲಿ ಆಯ್ತಲ್ಲ ಎಂದು ಬೇಸರಿಸಿಕೊಂಡೆ. ಮತ್ತೊಂದನ್ನು ಅಮ್ಮ ಕೊಡಲಾರಳು ಎಂಬುದಂತೂ ಗೊತ್ತಿದ್ದ ಸಂಗತಿ! ಹಾಗಾಗಿ ಖಾಲಿ ಕಡ್ಡಿಯಲ್ಲಿ ಆಡುತ್ತ ಬರುತ್ತಿರುವಾಗ ಇದ್ದಕ್ಕಿದ್ದಂತೆ ಪ್ರಶ್ನೆಯೊಂದು ಆಚೆ ಬಂತು.. " ಅಮ್ಮ ಈ ಗುಲಾಬಿ ಹತ್ತಿಗೆ ಏನಂತ ಹೇಳ್ತಾರೆ?"
"ಬಾಂಬೆ ಮಿಠಾಯಿ!"
ಬಾಂಬೆ ಮಿಠಾಯಿ ಎಂಬ ಗುಲಾಬಿ ಬಣ್ಣದ ಸಿಹಿ ಹತ್ತಿಯ ಲೋಕದ ಆಕರ್ಷಣೆ ಪುಟಾಣಿ ಕಣ್ಣುಗಳಿಗೆ ಹೊಸತೇನಲ್ಲ!! ಆದರೆ ನನಗೆ ಈಗಲೂ ನೆನಪನ್ನು ಹೊತ್ತು ತರುವ ಬಾಂಬೆ ಮಿಠಾಯಿ ಮೇಲಿನ ಮೋಹ ಕಡಿಮೆಯಾಗಿಲ್ಲ..
ಸದಾ ಗಡಿಬಿಡಿಯ ಬೆಂಗಳೂರಿನಲ್ಲಿ, ರಸ್ತೆಯ ನಡುವಿನ 'ಟ್ರಾಫಿಕ್' ಎಂಬ ನಿಲುಗಡೆಯಲ್ಲಿ, ಯಾರಾದರೂ ಹೆಗಲ ಮೇಲೆ ಬಾಂಬೆ ಮಿಠಾಯಿ ಹೊತ್ತು ಸಾಗುವಾಗ, ಕಣ್ಣ ಮುಂದೆ ಬರುವುದು ಒಂದೇ ಚಿತ್ರ.. ಝಗಮಗಿಸುವ ಜಾತ್ರೆಯ ನಡುವಲಿ ಕೆಂಪಂಗಿಯವನ ಭುಜದ ಮೇಲೆ ಗುಲಾಬಿ ಬಣ್ಣದಲ್ಲಿ ಸಿಹಿಯಾಗಿ ರಾರಾಜಿಸುತ್ತಿರುವ ಹತ್ತಿಯಂಥ "ಬಾಂಬೆ ಮಿಠಾಯಿ!"

-ಪಲ್ಲವಿ ಹೆಗಡೆ 

No comments:

Post a Comment

ಕರಗುವೆ...