Tuesday, June 16, 2020

ಲಾಕ್ಡೌನಾಯಣ


ಮುಸ್ಸಂಜೆ ಹೊತ್ತು.. ಅಲ್ಲಿ  ನಾಲ್ಕಾರು ಧ್ವನಿಗಳು ಕೇಳಿಬರುತ್ತಿದ್ದವು.. ಸಂಜೆ ಎಲ್ಲಾ ವಿಹಾರಕ್ಕೆ ಹೋಗುವ ಸಮಯವೇ, ಆದರೆ ಈಗ ಯಾರು ಹೋಗುತ್ತಾರೆ ಎಂಬುದೇ ಪ್ರಶ್ನೆ.. ! 
    ಅದು ಸುಂದರವಾದ ದೊಡ್ಡ ಪಾರ್ಕ್. ಇಡೀ ನಗರದ ಮಧ್ಯದಲ್ಲಿದೆ ಎಂದರೆ ತಪ್ಪಾಗಲಾರದು. ಅಲ್ಲಿ ಒಂದು ಸಣ್ಣ ಮೀಟಿಂಗ್ ನಡೆಯುತ್ತಿತ್ತು. ವಿಹಾರಕ್ಕೆ ಬರುವ ಎಲ್ಲಾ ಅಜ್ಜಂದಿರೂ ದಿನವೂ ಭೇಟಿಯಾಗುವ ಸ್ಥಳವದು. ಆದರೆ ಆ ಕಟ್ಟೆ ಮೇಲೆ ಈಗ ಕುಳಿತವರೇ ಬೇರೆ.. ಮೂರ್ನಾಲ್ಕು  ನಾಯಿಗಳು ಬೇರೆ ಬೇರೆ ವಾರ್ಡ್ ಗಳಲ್ಲಿ ತಮ್ಮ ಪಹರೆ ಮುಗಿಸಿ, ಸುಸ್ತಾಗಿ ಬಂದು ಕುಳಿತಿದ್ದವು. ಪಾಪ ಮನುಷ್ಯ ಓಡಾಡುತ್ತಿಲ್ಲ, ಹೋಟೆಲ್ ಹೊರಗಡೆ ತಿಂಡಿ ಚೆಲ್ಲುತ್ತಿಲ್ಲ, ಬೀದಿ ಬದಿಯ ಅಂಗಡಿಗಳೂ ತೆರೆದಿಲ್ಲ..  ಹೊಟ್ಟೆಗೆಲ್ಲಿಂದ ಸಿಗಬೇಕು ಅವಕ್ಕೆ?  ದಿನವಿಡೀ ನಡೆದ ವಿಷಯಗಳನ್ನ ಪರಸ್ಪರ ಹಂಚಿಕೊಳ್ಳುತ್ತಿದ್ದವು.  .
   .
" ಅಲ್ಲಾ ಮಾರಾಯ..ಈ ಮನುಷಪ್ಪಂಗೆ ಏನಾಗಿದೆ ಅಂತ.. ಮನೆ ಬಿಟ್ಟು ಹೊರಗೆ ಬರ್ತಾನೆ ಇಲ್ಲ.ಅದೆಷ್ಟು ದಿನ ಆಯ್ತು.. " ಎಂದಿತು ಕರಿನಾಯಿ. 
"ನಾನೂ ಇವತ್ತು ಊರಾಚೆ ಹೋಗಿದ್ದೆ, ಎಲ್ಲೂ ತಿನ್ನೋಕೆ ಏನೂ ಸಿಕ್ಕಿಲ್ಲ. ಏನ್ಮಾಡೋದು ಹೇಳು. ಮನೇಲಿ ಮರಿಗಳು ಕಾಯ್ತಾ ಇದಾವೆ ನಾನೇನಾದ್ರೂ ತರ್ತೀನಿ ಅಂತ..ಏನು ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ" ಎಂದಿತೊಂದು  ಬಡಕಲು ಬಿಳಿ ನಾಯಿ. 
" ಇವತ್ತು ಸುಮ್ನೆ ಮಲಗಿಸು ಅವರನ್ನ.. ನಾಳೆ ನಾನು ಹೋಗೋ ಏರಿಯಾಗೆ ನೀನು ಹೋಗು.. ಅಲ್ಲಿ ಎರಡು ಮನೇಲಿ ಹೆಂಗಸರು ಅನ್ನ ಹೊರಗಿಡ್ತಾರೆ ನಮಗೆ ಅಂತ.. ನಾನು ಬೇರೆ ಕಡೆ ಹುಡುಕೋಕೆ ಹೋಗ್ತೀನಿ ನಾಳೆ ಇಂದ.. ಇನ್ನೂ ಎಷ್ಟು ದಿನ ಇದೇ ಕತೇನೋ ಏನೋ ಗೊತ್ತಿಲ್ಲ" ಎಂದಿತು ಹಿರಿಯ. 

     ಇವರ ಮಾತುಗಳನ್ನು ಕೇಳುತ್ತ ಮರದ ಮೇಲೆ ಕುಳಿತಿದ್ದ ಪಾರಿವಾಳ "ಅಲ್ಲಾ, ಏನಾಗ್ತಾ ಇದೆ ಅಂತಾನೆ  ಅರ್ಥ ಆಗ್ತಿಲ್ಲ ನಂಗೆ. ನಿನ್ನೆ ಕಾಳು, ಹಣ್ಣು ಏನಾದ್ರೂ ಸಿಗಬಹುದು ಅಂತ ಹಾರ್ತಾ ಹಾರ್ತಾ ಗಡಿ ದಾಟಿ ಪಕ್ಕದ್ ರಾಜ್ಯಕ್ಕೆ ಹೋಗಿದ್ದೆ. ಅಲ್ಲೂ ಹಿಂಗೇ ಪರಿಸ್ಥಿತಿ. ಎಲ್ಲೋ ನಾಲ್ಕಾರು ಜನ ಮುಖ ಮುಚ್ಕೊಂಡು ಓಡಾಡ್ತಾರೆ ಅಷ್ಟೇ. ಯಾರೂ ಯಾರ್ ಜೊತೆನೂ ಮಾತಾಡಲ್ಲ. ಏನಾಗಿದ್ಯಂತೆ ಮನುಷ್ಯರಿಗೆಲ್ಲ? "

"ಅಯ್ಯೋ, ನೀನು ಅಷ್ಟೆಲ್ಲ ಹಾರಾಡ್ತಾ ಇರ್ತೀಯ. ಇಷ್ಟೆಲ್ಲಾ 
 ದಿನ ಆದ್ರೂ ನಿನಗೆ ಗೊತ್ತಾಗಿಲ್ವಾ?  ಅದೇನೋ ರೋಗ ಬಂದಿದ್ಯಂತೆ. ಬೇರೆ ದೇಶದಿಂದ ಬರ್ತಾ ಅದನ್ನೂ ತಗೊಂಡು ಬರ್ತಾರಂತೆ ಈ ಮನುಷ್ಯರು. ಇಲ್ಲಿ ಎಲ್ಲರ್ಗೂ ಹರಡ್ತಾ ಇದ್ಯಂತೆ ಆ ರೋಗ." ಊರೆಲ್ಲ ಓಡಾಡಿ ವಿಷಯ ತಿಳಿದುಕೊಂಡಿರೋ ಹಿರಿ ನಾಯಿ ಹೇಳಿತು. 

"ಅದೇನೋ ರೋಗ, ಮಾರಿ ಅಂತ ಎಲ್ಲಾ ಹೇಳೋದನ್ನ ಕೇಳಿದೀನಿ. ಆದರೆ ಈ ಪರಿ ಅದ್ಕೆ ಎಲ್ಲಾ ಹೆದರ್ಕೊಂಡಿದಾರೆ ಅಂತ ಗೊತ್ತಿರ್ಲಿಲ್ಲ. ಅದ್ಕೆ ಔಷಧಿನೇ ಇಲ್ವಾ? "

"ಔಷಧಿ ಇನ್ನೂ ಸಿಕ್ಕಿಲ್ಲ ಅನ್ಸುತ್ತೆ. ಸಿಕ್ಕಿದ್ರೆ ಹಿಂಗೇ ಕೂತಿರ್ತಿದದ್ವಾ ಆ ಮನುಷ್ಯರು? ಗಾಡಿ ಹತ್ತಿ ಬುರ್ರ್ ಅಂತ ತಿರಗ್ತಾ ಇರ್ತಿದ್ವು. ಔಷಧಿ ಇಲ್ಲಾ ಅನ್ನೋ ಭಯಕ್ಕೇ ಮನೇಲಿರ್ಬೇಕು. " ಹೀಗೆ ಹಿರಿನಾಯಿ ಹೇಳುತ್ತಿದ್ದಂತೆ ಕರಿನಾಯಿ ತನ್ನ ಧ್ವನಿಯನ್ನೂ ಸೇರಿಸಿತು.. 
"ನಾನೂ ಅದೇ ಅಂತೀನಿ. ಇಷ್ಟ್ ದಿನಾ ನಾವ್ ಕಂಡಕಂಡಲ್ಲಿ ಕಲ್ಲು ಓಗೀತಿದ್ರು. ಎಲ್ಲಿ ನೋಡಿದ್ರು ಕಸ ತುಂಬ್ಸಿ ಇಡ್ತಿದ್ರು. ಕಾರು, ಬೈಕು, ಬಸ್ಸು, ವಿಮಾನು, ರೈಲು... ಒಂದಾ ಎರಡಾ... ಒಂದೊಂದ್ಸಲ ಬೆನ್ನಟ್ಟಿ ಹೋಗಿ ಕಚ್ಚಬೇಕು ಅನಿಸುತ್ತೆ. ಆದರೆ ಯಾರಿಗ್ಬೇಕು ಆಮೇಲೆ ಅವರ ರೋಗ ನಮಗೂ ಅಂಟಿದ್ರೆ ಕಷ್ಟ ಅಂತ ಸುಮ್ನೆ ಇದೀನಿ..! "
"ಲೋ ಕರಿಯ, ಹಾಗೆಲ್ಲ ಮಾಡ್ಬಿಟ್ಟಿಯ ಮತ್ತೆ.. ಸ್ವಲ್ಪ ಸುಮ್ನೆ ಇರಪ್ಪ " 
"ನೀನು ದೊಡ್ಡವನು. ಬುದ್ಧಿ ಮಾತು ಹೇಳ್ತೀಯಾ. ಆದ್ರೆ ಈ ವಿಚಾರದಲ್ಲಿ ನಾನೂ ಕರಿಯಂಗೆ ಸಪೋರ್ಟ್ ಮಾಡ್ತೀನಿ. ಅಲ್ಲಾ ನಮಗೆ ಉಳಿಯೋಕೆ, ಹಾರೋಕೆ ಎಲ್ಲಾದ್ರೂ ಜಾಗ ಉಳ್ಸಿದಾನ ಈ ಮನುಷ್ಯ?  ಹಾರ್ತಾ ಹೋದಂಗೆ ಕಣ್ಣು ಮಂಜಾಗತ್ತೆ ಈ ಗಾಡಿಗಳ ಹೊಗೇಲಿ. ಸುಸ್ತಾಗಿ ಕೂರೋಣ ಅಂದ್ರೆ ಮರಗಳೇ ಇರಲ್ಲ. ಎಲ್ಲಾ ಕೆಂಡದಂಗೆ ಕಾದಿರೋ ಬಿಲ್ಡಿಂಗು. ನಮ್ಮಕ್ಕನ್ನ, ತಮ್ಮನ್ನ ಎಲ್ಲಾ ತಗೊಂಡ್ ಹೋಗಿ ಬಣ್ಣ ಬಣ್ಣದ ಪಂಜರದಲ್ಲಿಟ್ಟು ದುಡ್ಡಿಗೆ ಮಾರ್ತಾನಲ್ಲ.. ಈಗ ಅವ್ನೂ ಹೊರಗ್ ಬರೋಕಾಗದೆ ಕೂತಿದಾನೆ ನೋಡು." ಎಂದಿತು ಗಿಳಿ ಕೋಪದಿಂದ ಮೂತಿಯನ್ನು ಮತ್ತೂ ಕೆಂಪಗೆ ಮಾಡಿ.. 
"ಹೌದಪ್ಪಾ.. ನೀವು ಹೇಳ್ತಿರೋದು ನಿಜ. ಇಷ್ಟು ದಿನಾ ಬರಿ ಪ್ಲಾಸ್ಟಿಕ್, ಪೇಪರ್ ತಿಂದು ತಿಂದು ಬಾಯೆಲ್ಲ ಜಡ್ಡುಗಟ್ಟಿತ್ತು. ಈಗ ಈ ಮನುಷ್ಯರು ಓಡಾಡ್ತಾ ಇಲ್ವಲ್ಲ.. ಸ್ವಲ್ಪ ಹುಲ್ಲು ಚಿಗುರುತ್ತಿದ್ಯಲ್ಲ.. ಅದ್ಕೆ ತಿನ್ನೋಣ ಅಂತ ಬಂದೆ " ಎಂದಿತು ಪ್ಲಾಸ್ಟಿಕ್ ತಿಂದು ಹೊಟ್ಟೆಯುಬ್ಬಿಸಿಕೊಂಡ ಹಸು. 
           ಇಷ್ಟು ಹೊತ್ತಿನ ತನಕ ಇವರೆಲ್ಲರ ಮಾತುಗಳನ್ನು ಕೇಳುತ್ತಿದ್ದ ಮೀನು ಕೆರೆಯಿಂದ ಇಣುಕಿ, "ಗೋವಮ್ಮ, ನೀನು ಹೇಳಿದ್ದು ಹೌದು ನೋಡು.. ಈ ಮನುಷ್ಯಪ್ಪ ತನ್ನ ಹೊಟ್ಟೆಗೆ  ಏನು ತಿಂತಾನೋ ಗೊತ್ತಿಲ್ಲ. ಅವನಿಂದ ನಾವು ಪ್ಲಾಸ್ಟಿಕ್ ತಿಂತಿದೀವಿ. ಈ ಪಾರ್ಕ್ ಗೆ ಬರೋವರೆಲ್ಲ ಅದೇನೇನೋ ಕುರುಕ್ ತಿಂಡಿ, ಬಿಸ್ಕೆಟ್ ಪೊಟ್ಟಣ ಎಲ್ಲಾ ತಂದು, ತಿಂದು ಎಸೀತಿದ್ರು.. ನನ್ನ ಹೊಟ್ಟೇಲಿ ಅದೆಷ್ಟು ಪ್ಲಾಸ್ಟಿಕ್ ಇದ್ಯೋ ಏನೋ.. ಮತ್ತೆ ನನ್ನ ತಗೊಂಡು ಹೋಗಿ ಅಡ್ಡ ಉದ್ದ ಸೀಳ್ತಾನಲ್ಲ ಆವಾಗ್ಲೇ ಗೊತ್ತಾಗತ್ತೆ ಅವ್ನಿಗೆ ಅದೆಷ್ಟು ಪ್ಲಾಸ್ಟಿಕ್ ಇರತ್ತೆ ಅಂತ..ಇಷ್ಟು ದೊಡ್ಡ ಕೆರೇಲಿ, ನದೀಲಿ ಇರೋ ನಮ್ಮನ್ನೆಲ್ಲ ಆ ಗ್ಲಾಸಿನ ಪೆಟ್ಟಿಗೆಲಿಟ್ಟು ಚಂದ ನೋಡ್ತಾನಲ್ಲ.. ಅನುಭವಿಸ್ತಾ ಇದಾನೆ ಈಗ.. "
"ಹೌದು ಮೀನಕ್ಕ, ನೀನು ಹೇಳ್ತಿರೋದು ಸರಿ, ಈ ಮನುಷ್ಯನ ಉಪಟಳ ತಡ್ಕೊಳಕೆ ಆಗ್ತಾ ಇಲ್ಲಾ.. ನಮ್ಮೆಲ್ರ ನೋವು ಕೇಳ್ಸಿರ್ಬೇಕು ದೇವ್ರಿಗೆ. ಅದ್ಕೆ ಈ ರೋಗ ಕಳ್ಸಿದಾನೆ. " ಎಂದಿತು ಗಿಳಿ. 
"ಇದ್ಯಾವ ದೇವರೂ ಕಳ್ಸಿದ್ದಲ್ಲ. ಎಲ್ಲಾನೂ ಕಂಡುಹಿಡಿತಾನಲ್ಲ ಮನುಷ್ಯ, ಇದನ್ನೂ ಅವನೇ ಕಂಡುಹಿಡಿದಿದ್ದು. ಈಗ ಅನುಭವಿಸ್ತಾ ಇದಾನೆ ಅಷ್ಟೇ. " ಎಂತು ತನ್ನದೇ ಗತ್ತಿನಲ್ಲಿ ಹಿರಿನಾಯಿ. 
    ಇಷ್ಟೂ ಹೊತ್ತಿನ ತನಕ ಸುಮ್ಮನೆ ಕುಳಿತ ಬಿಳಿನಾಯಿ, "ಹಾ.. ನಾನು ತಿಂಡಿ ಹುಡ್ಕೊಂಡು ಹೋಗಿದ್ನಲ್ಲ, ಆ ಮನೆ ಪಮ್ಮಿ ನಾಯಿ ಹೇಳ್ತಿದ್ಲು.. ಇದೇನೋ ಕರಾಳ ರಹಸ್ಯ ಅಂತೆ.. ಮಹಾಮಾರಿ ಅಂತೆ.. ಭಯಾನಕ ಅಂತೆ..ವಿಲವಿಲ ಅಂತೆ.. ಇಡೀ ಪ್ರಪಂಚಕ್ಕೆ ರೋಗ ಬಂದಿದೆ.. ಯಾರೂ ಬದುಕೋಕೆ ಆಗಲ್ಲ ಅಂತ ಅದೇನೋ ವಿಚಿತ್ರ ಧ್ವನಿಲಿ ಹೇಳಿದ್ಲು.. ಏನೇ ಇದು ಹೀಗೆಲ್ಲಾ ಮಾತಾಡೋಕೆ ಕಲಿತುಬಿಟ್ಟೆ ಅಂದ್ರೆ, ನಮ್ಮೆಜಮಾನ ನಿಮಿಷಕ್ಕೆ ಒಂದರಂತೆ ಚಾನೆಲ್ ಹಾಕ್ತಾನೆ ಟೀವಿಲಿ.. ಎಲ್ಲರೂ ಇದ್ನೇ ಹೇಳ್ತಾರೆ, ನಿಂಗೂ ಗೊತ್ತಿರ್ಲಿ ಅಂತ ಹೇಳ್ದೆ ಅಂದ್ಲು.. ಭಯ ಆಗೋಯ್ತಪ್ಪ ನಂಗೆ ಅವಳು ಹೇಳೋ ಧಾಟಿ ಕೇಳಿ.. " 
 "ಹೌದು.. ಆ ಬೀದಿ ಕೊನೆ ಮನೆ ಡಾಬರಣ್ಣನೂ ಇದ್ನೇ ಹೇಳ್ತಿದ್ದ.. ಈಗೊಂದು ಹದಿನೈದು ದಿನದ ಹಿಂದೆ, ಆಕಾಶದಿಂದ ಔಷಧಿ ಬೀಳತ್ತೆ ಕೆಳಗೆ, ಎಲ್ಲಾ ಒಳಗೆ ಇರಿ ಅಂದ.. ಮೊನ್ನೆ ಆಕಾಶದಿಂದ ದುಡ್ಡು ಬರತ್ತಂತೆ ಕಣೋ, ನಮ್ಮನೆ ಯಜಮಾನಪ್ಪ ಟಿವಿ ನೋಡಿ ಅದನ್ನೇ ದೊಡ್ಡದಾಗಿ ಹೇಳ್ತಿದ್ದ..ನಾನೇನೋ ನೀರಿನ ಮಳೆ ಬದಲು, ಪೇಪರ್ ಮಳೆ ಬರತ್ತೆ ಅಂದ್ಕೊಂಡೆ.. ಏನೂ ಆಗಿಲ್ಲ.. ಬರಿ ಸುಳ್ಳು ಹೇಳ್ತಾನೆ ಅವನು.. " ಎಂದಿತು ಕರಿ ನಾಯಿ. 
  ಅಷ್ಟು ಹೊತ್ತಿಗಾಗಲೇ ಎದುರುಗಡೆಯ ಪ್ರತಿಷ್ಠಿತ ಬಹುಮಹಡಿ ಕಟ್ಟಡದಿಂದ ಹೊರಬಂದು, ಕಿವಿಗೆ ಮೊಬೈಲ್ ಫೋನ್ ಹಿಡಿದುಕೊಂಡು ವ್ಯಕ್ತಿಯೊಬ್ಬ ಕೂಗುತ್ತಿದ್ದ.. ಶಾಂತವಾಗಿ ಅದನ್ನೆಲ್ಲ ಕೇಳಿ ನಂತರ ಗಿಳಿ ಹೇಳಿತು, "ಅಲ್ಲಾ, ಇಷ್ಟೆಲ್ಲಾ ಆದರೂ ಇವರಿಗೆ ಬುದ್ಧಿ ಬರಲ್ವಾ ಅಂತ..? ಅದೇನೋ ಎಕಾನಾಮಿ ಅಂತೆ, ಜಿಡಿಪಿ ಅಂತೆ, ಗ್ಲೋಬಲ್ ಎಫೆಕ್ಟ್ ಅಂತೆ, ಏನು ಕೂಗ್ತಿದಾನೆ ಅವನು.. ಜೀವ ಉಳ್ದ್ರೆ ತಾನೇ ಅದೆಲ್ಲಾ.. ತಾನು ಹುಟ್ಟಿರೋ ಲೋಕದಲ್ಲಿ ತನ್ನದೇ ಒಂದು ಲೋಕ ಮಾಡ್ಕೊಂಡು ಯಾವಾಗ್ಲೂ ಒದ್ದಾಡ್ತಾ ಇರ್ತಾನಪ್ಪ.. ಬುದ್ಧಿ ಹೇಳೋರು ಯಾರು.. ಮಾತೆತ್ತಿದರೆ ತಾನೇ ಬುದ್ಧಿಜೀವಿ, ಪ್ರಜ್ಞಾವಂತ ಅಂತಾನೆ.. !"
" ಬಿಡು ಅವರನ್ನ...ಇಷ್ಟೆಲ್ಲಾ ಆದ್ರೂ ನಮ್ಮ ಆಲಮ್ಮ ಏನೂ ಮಾತಾಡ್ತಾ ಇಲ್ವಲ್ಲ.. ಅಮ್ಮಾ ಏನಾಯ್ತು?  ಏನು ಯೋಚ್ನೆ ಮಾಡ್ತಾ ಇದ್ದೀರಾ ಇಷ್ಟು ಹೊತ್ತು? " ಎಂದಿತು ಹಿರಿನಾಯಿ. 


ಇಷ್ಟೂ ಹೊತ್ತು ಮೌನವಾಗಿ ಇವರೆಲ್ಲರ ಮಾತನ್ನು ಕೇಳುತ್ತಿದ್ದ ಆಲದ ಮರ ಮಾತನಾಡಲು ಪ್ರಾರಂಭಿಸಿತು.. "ಆ ಮನೆಯ ಹೊರಗೆ ಕುಳಿತ ತಾತಪ್ಪನನ್ನು ನೋಡಿ, ಅವನು ಹುಡುಗನಿದ್ದಾಗಿನಿಂದ ಇಲ್ಲಿಯವರೆಗೂ ನೋಡಿದ್ದೇನೆ ಅವನನ್ನು. ಎರಡು ತಿಂಗಳ ಹಿಂದೆ ಬಂದಾಗ, ಇದೇ ಕಟ್ಟೆಯ ಮೇಲೆ ಕುಳಿತಿದ್ದ. ಬಹಳ ನೊಂದು ದುಃಖ ಹಂಚಿಕೊಂಡ.

ಮಗ -ಸೊಸೆ ಕೆಲಸಕ್ಕೆ ಹೋಗುತ್ತಾರೆ. ಮೊಮ್ಮಕ್ಕಳು ಬೆಳಿಗ್ಗೆ ಶಾಲೆ, ಸಂಜೆ ಟ್ಯೂಷನ್, ರಾತ್ರಿ ಹೋಮ್ ವರ್ಕ್ ಎನ್ನುತ್ತಿರುತ್ತಾರೆ. ಕೆಲವೊಮ್ಮೆ ನಾನೇ ಅವರಿಗೆ ಭಾರವೇನೋ ಎನಿಸುತ್ತದೆ. ಒಬ್ಬರಿಗೂ ನನ್ನೊಡನೆ ಮಾತನಾಡಲು ಸಮಯವೇ ಇರುವುದಿಲ್ಲ ಎನ್ನುತ್ತಿದ್ದ. ಅಂದು ಅವನ ಬೇಸರಕ್ಕೆ ಹೆಗಲಾಗಿದ್ದೆ. 
           ಇಂದು ನೋಡಿ, ಆ ಮನೆಯ ಹಿರಿಜೀವದ ಕಣ್ಣಲ್ಲಿ ನೋವಿಲ್ಲ. ಆಡುತ್ತಿದ್ದಾನೆ ಮೊಮ್ಮಕ್ಕಳೊಡನೆ ಪುಟ್ಟ ಹುಡುಗನಂತೆ,  ತನ್ನ ಕೀಲು ನೋವುಗಳನ್ನೆಲ್ಲ ಮರೆತು.. 
ಅಪ್ಪನಿಗೆ ಮಾತ್ರೆಗಳನ್ನು ಕೊಡಲು ಮಗನ ಬಳಿ ಸಮಯವಿದೆ, ಮಾವನಿಗೆ ಚಹಾ ಮಾಡಿಕೊಡಲು ಸೊಸೆಯ ಬಳಿ ಸಮಯವಿದೆ..ಇಷ್ಟು ಪ್ರೀತಿಯಲ್ಲದೆ  ಇನ್ನೇನು ಬೇಕವನಿಗೆ? 
    ಮೊದಲೆಲ್ಲ ಕಾರ್ಟೂನ್ ನೋಡಬೇಕು ಎಂದು ಮೊಮ್ಮಕ್ಕಳು ಹಠ ಮಾಡುತ್ತಿದ್ದರು, ಸಂಜೆಯಾದರೂ ಧಾರವಾಹಿ ನೋಡುತ್ತೇನೆ ಎಂದು ಸೊಸೆ ಹೇಳಿದರೆ ಮಗ ದಿನದ ವಾರ್ತೆ ನೋಡಬೇಕು ಎಂದು ವಾದಿಸುತ್ತಿದ್ದ. ಇದ್ಯಾವುದೂ ಬೇಡವೆಂದು ತಾತ ಹೋಗಿ ಮಲಗುತ್ತಿದ್ದ.. ಆದರೆ ಈಗ ಈ ಲಾಕ್ಡೌನಾಯಣದ  ಮಧ್ಯೆ ಎಲ್ಲ ಒಟ್ಟಾಗಿ ಕುಳಿತು ರಾಮಾಯಣ ನೋಡುತ್ತಾರೆ... !
      ನಾನಂತೂ ಇಲ್ಲಿ ಯಾವಾಗಲೂ ಒಂಟಿಯೇ. ನಿಮ್ಮಂತೆ ಓಡಾಡಲಾರದೆ, ಹಾರಲಾಗದೆ, ಇದ್ದಲ್ಲಿಯೇ ಇರುವವಳು. ಆದರೆ ನೀವೆಲ್ಲ ಎಲ್ಲೇ ಹೋದರೂ ತಿರುಗಿ ನನ್ನ ಬಳಿ ಬರುತ್ತೀರಿ.. ಕತೆ ಹೇಳುತ್ತೀರಿ..ಹಾಗೆಯೇ  ನನ್ನ ಒಂಟಿತನವನ್ನು ದೂರ ಮಾಡುವಲ್ಲಿ ಮನುಷ್ಯನ ಪಾತ್ರವೂ ದೊಡ್ಡದು. ಎಷ್ಟೊಂದು ಜನರು ಬಂದು ಈ ಕಟ್ಟೆಯ ಮೇಲೆ ಕೂತು ಕತೆ ಹೇಳುತ್ತಾರೆ.. ಸುಸ್ತಾಗಿ ನನ್ನ ಬೆನ್ನಿಗೆ ಒರಗುತ್ತಾರೆ, ನನ್ನ ನೆರಳಿನ ತಂಪಿನಿಂದ ಹಾಯಾಗಿ ಕಣ್ಮುಚ್ಚಿ ಕುಳಿತುಕೊಳ್ಳುತ್ತಾರೆ. ಎಷ್ಟು ಮಕ್ಕಳು ಇಲ್ಲಿಯ ಜೋಕಾಲಿ, ಜಾರುಬಂಡಿಗಳನ್ನು ಆಡುತ್ತಾರೆ.. ಕಣ್ಣಾಮುಚ್ಚಾಲೆ ಆಡುವಾಗ ಅದೆಷ್ಟು ಮಕ್ಕಳು ನನ್ನನ್ನು ತಬ್ಬಿ ಅಡಗಿದ್ದರು.. 
   ನೀವೆಲ್ಲ ಹೇಳಿದಿರಲ್ಲ ಕಲ್ಲು ಹೊಡೆಯುತ್ತಾರೆ, ಕಸ ಹಾಕುತ್ತಾರೆ, ಮಲಿನ ಮಾಡುತ್ತಾರೆ.. ಎಲ್ಲವೂ ಸತ್ಯ. ಆದರೆ ನಿಮಗೆ ಅನ್ನ, ಬಿಸ್ಕೆಟ್ ಕೊಡುವವರು ಯಾರು?  ಪಕ್ಷಿಗಳಿಗೆಂದು ಮಹಡಿಯ ಮೇಲೆ ಕಾಳು -ನೀರು ಇಡುವವರು ಯಾರು? ಹಸುಗಳಿಗೆ ಸೊಪ್ಪು ಕೊಡುವವರು ಯಾರು?  ಬೇಸಿಗೆಯಲ್ಲಿ ಅದೆಷ್ಟು ಮೀನುಗಳ ರಕ್ಷಣೆ ಮಾಡಿಲ್ಲ?

ತಪ್ಪನ್ನು ಹುಡುಕಿದರೆ ಕೇವಲ ತಪ್ಪು ಮಾತ್ರವೇ ಕಾಣಿಸುವುದು. 
       ನಾವೆಲ್ಲ ಜೀವಸಂಕುಲಗಳು ಇದ್ದರೆ ಮಾತ್ರ ಸೃಷ್ಟಿಗೆ ಅರ್ಥ. ನೋಡಿ, ಅವರಿಗೆ ಬಂದ ರೋಗದಿಂದ ಉಳಿದ ಜೀವಿಗಳೂ ಸಂಕಟ ಅನುಭವಿಸುತ್ತಿದ್ದೇವೆ. 
     ಅವರು ಮೊದಲಿನಂತಾದಲ್ಲಿ ಮಾತ್ರ ಮತ್ತೆ ಎಲ್ಲವೂ ಸುಗಮ, ಸುಂದರ.. 
    ಹೌದು, ಅವರು ತಪ್ಪು ಮಾಡುತ್ತಾರೆ. ಆದರೆ ತಿದ್ದಿಕೊಳ್ಳುವ ಬುದ್ಧಿಯೂ ಅವರಲ್ಲಿದೆ. ಇದಕ್ಕೂ ಮುಂಚೆಯೂ ಅದೆಷ್ಟೋ ರೋಗಗಳನ್ನು ಎದುರಿಸಿದ್ದಾರೆ, ಗೆದ್ದಿದ್ದಾರೆ. ಈಗಲೂ ಅಷ್ಟೇ..
    ಇದು ಶಿಕ್ಷೆಯಲ್ಲ, ಅವಕಾಶ...ಯಾವಾಗ ಅವರ ನಡುವಿನ ಭಿನ್ನಾಭಿಪ್ರಾಯ, ಕಲಹಗಳನ್ನು ಬಿಟ್ಟು, ಅವರಿಗೊದಗಿದ ಈ ಸಂಕಟದ ವಿರುದ್ಧ ಎಲ್ಲರೂ ಒಂದಾಗಿ  ನಿಲ್ಲುತ್ತಾರೋ ಅಂದು ಮಾತ್ರವೇ ಪರಿಹಾರ... 
ಎಲ್ಲವೂ ಸುಧಾರಿಸಲಿ..ಈ ರೋಗ, ನಮ್ಮ ಪ್ರಕೃತಿ, ಮನಸ್ಥಿತಿ, ಎಲ್ಲವೂ ಸುಧಾರಿಸಲಿ.. ಅವರ ತಪ್ಪುಗಳನ್ನೆಲ್ಲ ಸರಿಪಡಿಸಿಕೊಳ್ಳಲಿ.. ಮತ್ತೆ ಅವರೆಲ್ಲ ಮೊದಲಿನಂತೆ ನಮ್ಮ ಬಳಿ ಬರಲಿ.. ಎಂದು ಹಾರೈಸೋಣ.. "
 ತಾಯಿಯಾದ ಆಲದಮರವೇ ಈ ಮಾತನ್ನು ಹೇಳಿದಾಗ ಉಳಿದೆಲ್ಲ ಜೀವಿಗಳೂ ತಲೆಯಾಡಿಸಿದವು. ನೀರು ತನ್ನ  ನವಿರಾದ ಅಲೆಗಳ ಮೂಲಕ ಹರ್ಷ ವ್ಯಕ್ತಪಡಿಸಿದರೆ, ತಂಗಾಳಿಗೆ ತಲೆದೂಗಿ ಗಿಡಗಳೆಲ್ಲ ನಕ್ಕವು... 
  ಅವರೆಲ್ಲರ ಆಶಯದಂತೆ ಆದಷ್ಟು ಬೇಗ ಇದನ್ನೆಲ್ಲಾ ಮುಗಿಸಿ ಭೇಟಿಯಾಗೋಣ. ನಮ್ಮ ನಮ್ಮ ಲಾಕ್ಡೌನಾಯಣದ ಕಥೆಯನ್ನು ಕಟ್ಟೆಯ ಮೇಲೆ ಕುಳಿತು ಹರಟೋಣ..

No comments:

Post a Comment

ಕರಗುವೆ...