Tuesday, June 16, 2020

ಮಲೆನಾಡಿನ ಮಳೆಗಾಲ

ಚಿಕ್ಕಮಗಳೂರಿನಿಂದ ಶುರುವಾಗಿ ಉತ್ತರ ಕನ್ನಡದ ತುದಿಯವರೆಗೂ... ಅದೇನು ದಟ್ಟ ಹಸಿರು. ಸೂರ್ಯನ ಕಿರಣ ತಾಕದಷ್ಟು ನೆರಳು. ದಾರಿಯುದ್ದಕ್ಕೂ ತೋರಣದಂತೆ ಬಾಗಿರುವ ಮರಗಳು. ಅವುಗಳಿಂದ ಉದುರಿದ ಎಲೆ-ಹೂಗಳ ಮೆತ್ತನೆಯ ಹಾಸಿಗೆ. ಪ್ರವಾಸಕ್ಕೆ ಬರುವ ಜನರೆಲ್ಲಾ ನಾಲ್ಕು ದಿನ ಉಳಿದು ಅರೆ ವ್ಹಾ ಇದು ಸ್ವರ್ಗ. ಇಲ್ಲಿಯೇ ಉಳಿಯಬೇಕು ಎಂದು ಒಮ್ಮೆಯಾದರೂ ಹೇಳಿಕೊಳ್ಳುತ್ತಾರೆ. ಅಂತಹ ಆಕರ್ಷಣೀಯತೆ. ಆದರೆ ಎಂದಾದರೂ ಹುಟ್ಟಿದರೆ ಮಲೆನಾಡಲ್ಲಿ ಹುಟ್ಟಬೇಕು ಎನಿಸಿತ್ತಾ?  ಮಳೆಗಾಲದಲ್ಲಿ ಬಂದು ನೋಡಿ, ಖಂಡಿತ ಹಾಗೇ ಅನಿಸುತ್ತದೆ. 
 ಮಳೆಗಾಲ ಬರಲಿ ಎಂದು ಇಲ್ಲಿಯ ಜನ ಕಾದುಕುಳಿತ ರೀತಿ, ಮಳೆಗಾಲದ ಕೆಲಸಗಳು, ಕಷ್ಟಗಳ ಜೊತೆಗೆ ಮಳೆಯನ್ನೂ ಸಂಭ್ರಮಿಸುವ ಪರಿ ಹೊರಗಿನವರನ್ನು ಬೆರಗಾಗಿಸುತ್ತದೆ. ಮಳೆ ಎಂಬುದು ಇಲ್ಲಿನ ಪ್ರಕೃತಿಯ ಜೀವಾಳ.

    'ಕವಳ ಮತ್ತು ಮಳೆ ನನ್ನ ಎರಡು ಕಣ್ಣುಗಳು' ಎಂದು ಹಿರಿಯರೊಬ್ಬರು ಹೇಳಿದ್ದರು.
ಕವಳ ಎಂದರೆ ಅಡಿಕೆ ತೋಟ ಹಾಗೆಯೇ ಮಳೆ ಮುಖ್ಯವಾಗಿ ಬೇಕಿರುವುದು ಭತ್ತ ಬೆಳೆಯಲು. ಇವೆರಡೇ ಇಲ್ಲಿನ ಮುಖ್ಯ ಬೆಳೆಗಳು. ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಸುರಿವ ಮೊದಲ ಮಳೆ ಸಾಕು,ಕೊಟ್ಟಿಗೆ ರಿಪೇರಿ ಇಂದ ಹಿಡಿದು ಗದ್ದೆ ಕೆಲಸಗಳೆಲ್ಲ ಪ್ರಾರಂಭವೇ..!

     ನಮ್ಮಲ್ಲಿನ ಅಪ್ಪಟ ಮಳೆಗಾಲ ಎಂದರೆ ಮಧ್ಯಾಹ್ನ ಮೂರಕ್ಕೆ ಏಳು ಗಂಟೆಯ ಕತ್ತಲು ಆವರಿಸುತ್ತದೆ. ಮಂದ್ರಕ್ಕಿಳಿಯದೆ , ತಾರಕಕ್ಕೇರದೆ ಒಂದೇ ಸ್ವರದಲ್ಲಿ ಹಾಡುವ ಮಳೆಯದು. ಮಧ್ಯೆ ಮಧ್ಯೆ ಗಾಳಿಯೂ ತನ್ನ ವೇಗವನ್ನು ಹೆಚ್ಚಿಸಿ ಮಳೆಯ ಹಾಡಿಗೆ ದನಿಗೂಡಿಸುತ್ತದೆ. ಹಂಚಿನ ಮೇಲೆ ಟಪ್ಟಪ್  ಸದ್ದು,  ಅಡಿಕೆ ದಬ್ಬೆಯ  ಹರಿಣಿಯಿಂದ ಹರಿದ ನೀರು ಹಂಡೆಗೆ ಬೀಳುವ ಸದ್ದು,  ಎಲ್ಲವೂ ಇದ್ದೇ ಇರುತ್ತದೆ.
  ಮಲೆನಾಡಿನ ಮಳೆಗಾಲ ಎಷ್ಟು ಪ್ರಸಿದ್ಧ ಎಂದರೆ, ಜೂನ್ ಇಂದ ಸಪ್ಟೆಂಬರ್ ವರೆಗೆ ಎಲ್ಲಾ ದಿನಪತ್ರಿಕೆಗಳಲ್ಲೂ ತನ್ನದೇ ಒಂದು ಕಾಲಂ ಪಡೆದಿರುತ್ತದೆ. 'ಮುಂಗಾರು ಚುರುಕು', 'ಮಳೆಯ ಅವಾಂತರ', 'ಸಿಡಿಲಿಗೆ ಬಲಿ',.. ಇನ್ನೂ ಹಲವು ರೂಪಗಳಲ್ಲಿ ಸುದ್ದಿ ತರುವ ಕೆಲಸವನ್ನು ಮಳೆ ಮಾಡುತ್ತದೆ. 
     ಪ್ರತಿ ಬಾರಿಯೂ ಮೋಡಗಳು ಮಳೆಹನಿಯೊಡನೆ ನೆನಪಿನ ಮೂಟೆಯನ್ನು ತಮ್ಮೊಡನೆ ಹೊತ್ತು ತರುತ್ತವೆ. ಆ ಎಲ್ಲಾ ನೆನಪುಗಳೂ ಮತ್ತೊಮ್ಮೆ ನಾನು ಹಾಗೇ ಇರಬಾರದಿತ್ತೇ.. ಮತ್ತೆ ಬಾಲ್ಯ ಬರಬಾರದೇ ಎಂದೇ ಹೇಳುತ್ತವೆ.. 

ಮಾನ್ಸೂನ್ ಅತಿಥಿಗಳು...
 ಮಾನ್ಸೂನ್ ನಲ್ಲಿ ಅತಿಥಿಗಳ ದಂಡೇ ಸೇರುತ್ತದೆ ಮಲೆನಾಡಿನ ಒದ್ದೆ ಮಣ್ಣಿನಲ್ಲಿ. ಮಳೆಗಾಲದ ಪ್ರಾರಂಭದಲ್ಲಿ ಹುಳಗಳನ್ನು ಹುಡುಕಿ ಬರುವ ನವಿಲುಗಳು ಆಗಾಗ ಗರಿಬಿಚ್ಚಿ ನರ್ತಿಸುತ್ತ ಮಳೆರಾಯನ ಸ್ವಾಗತ ಮಾಡುವವು. ಒಮ್ಮೆ ತೋಟಕ್ಕೆ ಹೋಗಿಬಂದರೆ ಮೊಣಕಾಲವರೆಗೂ ರಕ್ತ ಹೀರುವ ಉಂಬಳಗಳು, ಸಿಂಬಳದಂತೆ ಲೋಳೆ ಬಿಡುವ ಬಸವನಹುಳುಗಳು, ಗಿಡಗಳ ಎಲೆ ತಿನ್ನುವ ಕಂಬಳಿ ಹುಳುಗಳು, ಉಚಿತವಾಗಿ ಗೊಬ್ಬರ ಕೊಡುವ ನಂಜುಳ, ಚಕ್ಕುಲಿ ಚೋರಟೆ, ಗೊಬ್ಬರದ ಹುಳ, ಗದ್ದೆಗಳ ತುಂಬೆಲ್ಲ ಏಡಿಗಳು, ಹಳ್ಳದಲ್ಲಿ ಸಣ್ಣ ಮೀನು, ಸಂಜೆಯಾಯ್ತು ಎಂದರೆ ಕರ-ಕರ ಎನ್ನುವ ಕಪ್ಪೆಗಳು, ಜೀ ಎನ್ನುವ ಜೀರುಂಡೆಗಳು. 

ಅಮ್ಮನ ಕೈತೋಟದಲ್ಲಿ ತಲೆ ಎತ್ತಿ ನಿಂತ ನಾಗದಾಳಿ ಗಿಡಗಳು, ಅರಳಿ ನಿಂತ ಡೇರೆ ಹೂಗಳು, ಒಣಕಾಯಿಯೊಂದಿಗೆ ಹೊಸ ಸಿಂಗಾರಗಳಿಗೂ ಜಾಗ ಮಾಡಿಕೊಡುತ್ತಿರುವ ತೆಂಗಿನಮರಗಳು, ಮೊದಲ ಮಳೆಗೆ  ಮರದ ಟೊಂಗೆಯಲ್ಲಿ ಬೀಡುಬಿಟ್ಟ ಸೀತಾಳೆ ದಂಡೆಯೂ ಅರಳಿ, ಭಾರಕ್ಕೆ ಭೂಮಿಯತ್ತ ತಲೆಬಾಗುವುದು. ಇವೆಲ್ಲದರ ಜೊತೆಗೆ ಬೇಸಿಗೆಯ ಬಿಸಿಲಿಗೆ ಒಣಗಿದ ಗಿಡಗಳೆಲ್ಲ ನಿಧಾನವಾಗಿ ಹಸಿರಾಗುತ್ತಾ, ಮರಳಿ ತನ್ನ ಒನಪು ವಯ್ಯಾರಗಳಿಂದ ಬೀಗುವುದು. 
       ಇನ್ನು ವರ್ಷವಿಡೀ ಮಲೆನಾಡಲ್ಲಿ ಇದ್ದು ಮಳೆಗಾಲದಲ್ಲಿ ಮಾತ್ರ ನೆಂಟ ಎನಿಸಿಕೊಳ್ಳುವವರು ಇಬ್ಬರೇ.. ಸೂರ್ಯ ಮತ್ತು ಕರೆಂಟು..! 
     ಹಪ್ಪಳ ಹಚ್ಚಬೇಕು ಎಂದು ಹಲಸಿನಕಾಯಿ ಕೆಡಗಿಟ್ಟರೂ ಸೂರ್ಯದೇವನ ಅನುಮತಿ ದೊರೆಯದೆ, ಇಟ್ಟಲ್ಲಿಯೆ ಅದು ಹಣ್ಣಾಯ್ತೆ ವಿನಃ ಹಪ್ಪಳದ ಭಾಗ್ಯ ದೊರೆಯಲಿಲ್ಲ. "ಒಂದಿನ ಆದ್ರುವ ಸೂರ್ಯ ಕಣ್ಣ್ ಬಿಡ್ತ್ನ ನೋಡು.. ಬಿಸ್ಲೆ ಇಲ್ಯಪ.. ಬರಿ ಮೋಡ.." ಎಂದು ಸೂರ್ಯನನ್ನು ಬೈಯುವ ಹೆಂಗಸರ ಗೊಣಗಾಟ ತಪ್ಪಲಿಲ್ಲ. 
      ಈ ಕರೆಂಟು ಎಂಬುದಂತೂ ನೆಂಟನೂ ಅಲ್ಲದ ಅಪರಿಚಿತನೂ ಅಲ್ಲದ, ದಿನಾ ದಾರಿಯಲ್ಲಿ ಸಿಗುವ ಪರಿಚಿತ ಮುಖವಾಗಿ ಉಳಿದುಬಿಡುತ್ತದೆ. ಆದರೆ ಜೋರು ಮಳೆಯನ್ನೂ ಲೆಕ್ಕಿಸದೆ ಕೆಲಸಮಾಡುವ ಲೈನ್ಮ್ಯಾನ್ ಗೆಳೆಯನಾಗಿ ಕಾಣುತ್ತಾನೆ. ಕರೆಂಟ್ ಇಲ್ಲ ಎಂದರೆ, ಇಂಟರ್ನೆಟ್ ಇರದು, ಮೊಬೈಲ್ ಅನ್ನು ಮಾತನಾಡಿಸುವವರೇ ಇಲ್ಲ. ಮಿಕ್ಸರ್ ಜಾಗದಲ್ಲಿ ಒರಳುಕಲ್ಲು ಬರುತ್ತದೆ. ಪಂಪ್ಸೆಟ್ ನಂಬಿಕೊಂಡವ, ಮತ್ತದೇ ತುಕ್ಕು ಹಿಡಿದ ರಾಟೆಗೆ ಎಣ್ಣೆ ಬಿಟ್ಟು, ಕೀ ಕೀ ಎಂದು ಸದ್ದು ಮಾಡುತ್ತ ಬಾವಿಯಿಂದ ನೀರೆತ್ತಬೇಕು.   History repeats ಎನ್ನುವ ಮಾತು ಅಕ್ಷರಶಃ ಸತ್ಯವಾಗುವುದು ಮಲೆನಾಡಿನ  ಪ್ರತಿ  ಮಳೆಗಾಲದಲ್ಲಿ.. 

ಒಂದು ಚಪ್ಪಲಿ, ಎರಡು ಜೀವ.. !
  ಮಳೆಗಾಲ ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ಅದೇ ಘಟನೆ. 
ಆ ಮಳೆಗಾಲದಲ್ಲಿ ಹೊಳೆ ತುಂಬಿ ತೋಟಕ್ಕೆಲ್ಲ ನೀರು ಬಂದಿತ್ತು.ಅಷ್ಟು ಜೋರು ಮಳೆಗಾಲ. ಹೊಳೆಯಾಚೆಗಿನ ಮನೆಯಲ್ಲಿ ಏನೋ ಪೂಜೆ ಎಂದು ಅಜ್ಜ ಅಜ್ಜಿ ಕರೆದುಕೊಂಡು ಹೋಗಿದ್ದರು. ನಾನಾಗ ಒಂದನೇ ತರಗತಿ! 
ಮಕ್ಕಳಿಗೆಲ್ಲ ಊಟವಾಗಿತ್ತು. ಹೊಳೆಯಲ್ಲಿ ದೋಣಿ ಬಿಡುವ ಹುಚ್ಚು ನಮಗೆಲ್ಲ. ಎಲ್ಲ ಬೈಯುತ್ತಾರೆ ಎಂದು ಹೇಳದೆ ಕೇಳದೆ ಹೋಗಿದ್ದೆವು ನಾವು ಮೂವರು. 
ಹೊಳೆಯ ನೀರಿನಲ್ಲಿ ಕಾಲು ಇಳಿಸಿ ಕುಳಿತು ಏನೋ ಆಡುತ್ತಿದ್ದ ನೆನಪು..! ನನ್ನ ಚಪ್ಪಲಿಯೊಂದು ತೇಲಿ ಹೋಯಿತು. ಆಗ ತಾನೇ ಮಳೆಗಾಲಕ್ಕೆ ಎಂದು ಕೊಡಿಸಿದ್ದು ಹೋಯ್ತಲ್ಲ.. ಜೋರಾಗಿ ಅಳತೊಡಗಿದೆ.. "ಯನ್ನ ಚಪ್ಪಲ್ಲು..." ಭಾರ್ಗವ ಮತ್ತು ರಾಮ ಇಬ್ಬರೂ ನೀರಿಗೆ ಹಾರಿಯೇ ಬಿಟ್ಟರು. ಪುಣ್ಯಾತ್ಮರಿಗೆ ಈಜು ಬರಬೇಕಲ್ಲ..ಚಪ್ಪಲಿ ಹಿಡಿಯುವುದು ಹಾಗಿರಲಿ, ಅವರೇ ಮುಳುಗತೊಡಗಿದ್ದರು. 
    ಅದ್ಯಾವ ವೇಗದಲ್ಲಿ ಮನೆಗೆ ಓಡಿದ್ದೆನೋ.. ಒಂದೇ ಕಾಲಲ್ಲಿ ಚಪ್ಪಲಿ, ಜೋರು ಮಳೆ, ಜಾರುವ ಮಣ್ಣು,.. ಹೇಗೋ ಓಡಿ ಹೋಗಿ ಎಲ್ಲರೆದುರು ನಿಂತಿದ್ದೆ. ಪಾಪ ಅವರೆಲ್ಲ ಆಗಷ್ಟೇ ಊಟಕ್ಕೆ ಕುಳಿತಿದ್ದರು. ಹೊಳೆಯತ್ತ ಕೈ ಮಾಡಿ, "ನನ್ ಚಪ್ಪಲ್ಲು.., ಅವ್ವಿಬ್ರು.., ಹೊಳೆ..," ಎಂದು ಏನೇನೋ ಬಡಬಡಿಸುತ್ತಿದ್ದೆ ನಾನು. ಅವರಿಗೆಲ್ಲ ಅರ್ಥವಾಗಿ ಓಡಿದ್ದರು ಹೊಳೆಯತ್ತ. 
     ಕೊನೆಗೂ ನನ್ನ ಚಪ್ಪಲಿ ಸಿಗಲಿಲ್ಲ. ಆದರೆ ಅವರಿಬ್ಬರ ಜೀವ ಉಳಿಯಿತು. 

ಶಾಲೆಗೆ ಈ ದಿನ ರಜಾ..!
      ಎಂದು ಜೋರಾಗಿ ಗಾಳಿ ಮಳೆ ಏಳುವುದೋ ಅಂದು ಶಾಲೆಗೆ ರಜಾ.. ಒಂದೋ ನಾವೇ ಮಾಡುತ್ತೇವೆ, ಇಲ್ಲಾ ಎಂದರೆ ಅವರಾಗಿಯೇ ರಜಾ ಎನ್ನುತ್ತಾರೆ. ಒಟ್ಟಿನಲ್ಲಿ ತಿನ್ನುವ ಬಾಯಿ ಹೊದೆಯುವ ಕಂಬಳಿ ಎರಡಕ್ಕೂ ಬಿಡುವಿಲ್ಲ. ಹೈಸ್ಕೂಲ್ ದಿನಗಳ ಮಳೆಗಾಲವಂತೂ ಪೂರ್ತಿ ಹೀಗೆಯೇ. ಚಳಿಗೆ ಹೊದ್ದು ಮಲಗಿದವಳನ್ನು ಅಮ್ಮ ಕಷ್ಟ ಪಟ್ಟು ಏಳಿಸಿ, ಸಿದ್ಧ ಪಡಿಸಿ ಕಳಿಸಿದರೆ, ಇಂದು ರಜಾ ಎಂದು ವಾಪಾಸು ಕಳಿಸುತ್ತಿದ್ದರು..!

ಬೆಚ್ಚಗಿನ ಬಚ್ಚಲು ಒಲೆ..! 
 ಬಚ್ಚಲ ಒಲೆ ಎಂದಿಗೂ ಆರುವುದಿಲ್ಲ. ಅಥವಾ ಆರದಂತೆ ಅಜ್ಜಿ ನೋಡಿಕೊಳ್ಳುತ್ತಾಳೆ. ಬೆಳಗಿನ ಜಾವ ನಾಲ್ಕುಗಂಟೆಯಿಂದ ಪ್ರಾರಂಭವಾದರೆ, ರಾತ್ರಿಯೂ ಬಿಸಿನೀರು ಲಭ್ಯವಿರುತ್ತದೆ. ಬೆಳಿಗ್ಗೆ ಎದ್ದ ಆಲಸ್ಯದಲ್ಲಿ,  ಚಳಿ ಎಂದು  ಒಲೆಯ ಮುಂದೆ ಕೂರುವುದು, ಅಲ್ಲಿಯೇ ತೂಕಡಿಸುವುದು ಎಲ್ಲಾ ಮಾಮೂಲಿ..!

ಮಾವೋ, ಹಲಸೋ..?!
    ಮಳೆಗಾಲದ ಪ್ರಾರಂಭ ಎಂದರೆ ಮಾವು, ಹಲಸುಗಳ ಕಾಲದ ಅಂತ್ಯ. ಹಾಗಾಗಿ ಕೊನೆಯಲ್ಲಿ ಆಹಾರ ಪದಾರ್ಥಗಳಲ್ಲಿ ಅವುಗಳ ಬಳಕೆ ಅತೀ ಹೆಚ್ಚು. ಬೆಳಿಗ್ಗೆ ತಿಂಡಿಗೂ ಮಾವಿನ ರಸಾಯನ, ಮಧ್ಯಾಹ್ನ ಉಪ್ಪಿನಕಾಯಿ, ಹುಳಿಗೊಜ್ಜು, ಅಪ್ಪೆಹುಳಿ, ಹಲಸಿನಕಾಯಿಯ ಸಾರು, ಹಪ್ಪಳ...ಮಳೆ ಇನ್ನೂ ಹೆಚ್ಚಾಗಲು ಕುಡಿಯಲು ಬಿಸಿ ಬಿಸಿಯಾಗಿ ಮೆಣಸಿನ ಕಾಳಿನ ಸಾರು..! ಸಂಜೆ ಮತ್ತೆ ಹಲಸಿನಹಣ್ಣಿನ ದೋಸೆ... 
  ಇಷ್ಟೆಲ್ಲಾ ಸಾಲದು ಎಂದು ಪೂರ್ತಿ ಮಳೆಗಾಲಕ್ಕೆ ಸಾಲುವಂತೆ ಮಲೆನಾಡಿನ ಎಲ್ಲಾ ಮನೆಗಳಲ್ಲೂ ಮಾವಿನ ಹುಳಿಯನ್ನು, ಉಪ್ಪಿನಕಾಯಿಯನ್ನು, ಹಲಸಿನಕಾಯಿಯ ಸೊಳೆ, ಚಿಪ್ಸ್, ಹಪ್ಪಳಗಳನ್ನು ಶೇಖರಿಸಿಕೊಟ್ಟುಕೊಳ್ಳುತ್ತಾರೆ. ವರ್ಷವಿಡೀ ಬಂಗಾರಕ್ಕಿಂತ ಹೆಚ್ಚಾಗಿ ಇವುಗಳನ್ನು  ಜೋಪಾನ ಮಾಡುವುದು ಒಂದು ಜವಾಬ್ದಾರಿ...!

ಬಸ್ಸಿನೊಳಗೆ ಛತ್ರಿ..!
ಒಮ್ಮೆ ಗೆಳತಿಯ ಮನೆಗೆ ಹೋಗಿದ್ದೆ. ಅದೆಂತಹ ಮಳೆ ಎಂದರೆ ರಸ್ತೆಗಳೆಲ್ಲ ತುಂಬಿ ಹರಿಯುತ್ತಿತ್ತು. ಅವರದ್ದು ಕೂಡು ಕುಟುಂಬ. ಹೊಲಕ್ಕೆ ಹೋಗಿಬಂದವರು ಕಂಬಳಿ ಕೊಪ್ಪೆ ಒಣಗಿಸಲು ಒಂದು ಕೋಣೆ ಇತ್ತು. ರಾತ್ರಿ ಎಲ್ಲರೂ  ಅಲ್ಲಿ ಕುಳಿತು ಹರಟುತ್ತಿದ್ದೆವು. ಹಲಸಿನಬೀಜ ಸುಟ್ಟು ತಿನ್ನುವಾಗ 'ಠುಸ್ ಅಂತು.. ಡಬ್ ಅಂತು' ಎಂಬ ಕಾಗಕ್ಕ ಗುಬ್ಬಕ್ಕನ ಕಥೆ ನೆನಪಾಗುತ್ತಿತ್ತು. ಜೊತೆಗೆ ಕಳವಾರ, ಚೌಕಗಳು ಇದ್ದವು..! 
 ಮಾರನೇ ದಿನ ಮನೆಗೆ ಹೊರಡಲು ಬಸ್ ಇರಬೇಕಲ್ಲ.. ನಮ್ಮ ಮನೆಯಲ್ಲೇ ಉಳಿದುಕೊ ಎಂದಳು. ಸರಿ.. ಮನೆಗೆ ತಿಳಿಸೋಣ ಎಂದರೆ ಮೊಬೈಲ್ ನೆಟ್ವರ್ಕ್ ಇಲ್ಲ. ಅವರ ಮನೆಯ ಲ್ಯಾಂಡ್ಲೈನ್ ಆಗಲೇ ಜೀವ ಬಿಟ್ಟಿತ್ತು..! 
ಅಂತೂ ಎರಡು ದಿನಗಳ ನಂತರ ಹಸಿರು ತೋರಣದ ಬೀದಿಯಲ್ಲಿ ಕೆಂಪು ಬಸ್ಸು ನಾಚುತ್ತ, ಓಲಾಡುತ್ತಾ ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಬಂತು. ಒಳ್ಳೆ ಮದುವಣಗಿತ್ತಿಯ ಥರ ಬರ್ತಾ ಇದೆ ಎಂದೆ ನಾನು. ಒಮ್ಮೆ ಹತ್ತಿ ನೋಡು ಆಮೇಲೆ ಮದುವಣಗಿತ್ತಿ ಹೇಗಿದ್ದಾಳೆ ಅಂತಾ ಗೊತ್ತಾಗತ್ತೆ ಎಂದು ನಕ್ಕಿದ್ದಳು ಅವಳು. 
ಆಮೇಲೆ ಗೊತ್ತಾಗಿದ್ದು ಇದು ಕೊನೆಯ ಉಸಿರು ಎಳೆಯಲಿರುವ ಮುದುಕಿಯ ಸ್ಥಿತಿಯಲ್ಲಿದೆ ಎಂದು..! 
ಬಸ್ಸಿನೊಳಗೂ ಛತ್ರಿ ಬಿಚ್ಚುವ ಪರಿಸ್ಥಿತಿ. ಅವಳು ದಿನವೂ ಅದೇ ಬಸ್ಸಿನಲ್ಲಿ ಓಡಾಡುವವಳು.ಬಸ್ಸಿನಲ್ಲಿ ಶಾಲೆಗೆ ಬಂದರೂ ಇವಳ್ಯಾಕೆ ಒದ್ದೆಯಾಗಿರುತ್ತಾಳೆ ಎಂದು ಅವತ್ತು ಗೊತ್ತಾಗಿದ್ದು ನನಗೆ..!

ಡ್ಯಾಮೆಜ್ಡ್ ಗಣಪ.. ಡ್ಯಾಮೇಜ್ಡ್ ಸೊಂಟ..!
 ಸಾಮಾನ್ಯವಾಗಿ ನಾಗರ ಪಂಚಮಿ, ಗಣೇಶ ಚತುರ್ಥಿಗೆಲ್ಲ ಮಳೆಗಾಲವೇ. ಪ್ರತಿವರ್ಷ ಗಣಪನ ಮುಳುಗಿಸಲು ಅಜ್ಜಿಮನೆಗೆ ಹೋಗುವ ರೂಢಿ. ಎಲ್ಲಾ ಮಕ್ಕಳೂ ಒಟ್ಟಿಗೆ ಸೇರಿದರೆ ಯಾವ ಪಟಾಕಿಯ ಅವಶ್ಯಕತೆಯೂ ಇರುತ್ತಿರಲಿಲ್ಲ. 
   ಗಂಡಸರೆಲ್ಲ ಜಗುಲಿಯಲ್ಲಿ ಹಾಸಿದ ಕಂಬಳಿಯ ಮೇಲೆ ಕುಳಿತು, ಬಿಸಿ ಬಿಸಿ ಚಹಾ ಹೀರುತ್ತಾ, ಹೊರಗೆ ಸುರಿಯುತ್ತಿರುವ ಮಳೆಯನ್ನು ದಿಟ್ಟಿಸುತ್ತಾ, "ಭಾವ, ಈ ಸಲಿ ಮಳೆ ಎಂತೋ ಮಾಡ್ತಕೋ.. ಕೊಳೆ ಔಷಧಿ ಹೊಡ್ಸಕಾಯ್ತು ಮಾರಾಯ.. ಈ ಮಳೆ ಕೊಡ್ತಿಲ್ಯಕೋ.. ಮಳೆ ಬಿಟ್ರುವಾ ಕೊನೆಗೌಡ ಬರಕಾತಲಾ ಭಾವಾ.." ಎನ್ನುತ್ತಿದ್ದರೆ, ಹಿತ್ತಲಲ್ಲಿ ಹೆಂಗಸರು, "ಅತ್ಗೆ ಯಮ್ಮನೇಲಿ ಈ ಬಣ್ಣದ್ ಡೇರೆ ಇಲ್ಯೆ.. ಒಂದು ಹಿಳ್ಳು ಕೊಡು ಅಕಾ.." ಎನ್ನುತ್ತಿರುತ್ತಾರೆ. 
  ನಾವು ಮಾತ್ರ.. ಗಣಪನ ಮುಳುಗಿಸಿದ ನಂತರ ಹಾವು ನಂಗೆ, ಇಲಿ ನಂಗೆ ಎಂದು ಹಿಸೆ ಪಂಚಾಯ್ತಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುತ್ತಿದ್ದೆವು..!
ಹೀಗೇ ಒಂದು ಜೋರು ಮಳೆಗಾಲದಲ್ಲಿ ತೋಟದ ಬಾವಿಯಲ್ಲಿ ಗಣಪನನ್ನು ಮುಳುಗಿಸಲು ಹೋದಾಗ ಮಾವ ಜಾರಿ ಬಿದ್ದರು. ರಾತ್ರಿ, ಧಾರಾಕಾರವಾಗಿ ಸುರಿಯುವ ಮಳೆ,  ಜಾರುವ ಮಣ್ಣು..  ಗಣಪನಿಗೆ ಜಾಸ್ತಿ ಏಟಾಗಲಿಲ್ಲ. ಹೊಟ್ಟೆಗೆ ಬಿಗಿದ ಹಾವು ಮಾತ್ರ ಪುಡಿಯಾಗಿತ್ತು. ಪಾಪ ಮಾವ, ಸೊಂಟಕ್ಕೆ ಪೆಟ್ಟಾಗಿತ್ತು. ಮಾವನ ಸೊಂಟ ಡ್ಯಾಮೇಜ್ ಆಯಿತಲ್ಲ ಎಂಬುದಕ್ಕಿಂತ ನಮ್ಮ ಹಿಸೆಯ ಪ್ರಕಾರ ಬರಬೇಕಿದ್ದ ಹಾವು ತಪ್ಪಿತಲ್ಲ ಎಂಬ ಸಮಸ್ಯೆ ನಮ್ಮದು..!


ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..
ಈ ಹಾಡನ್ನು ಕೇಳದವರಿಲ್ಲ. ಕೇಳಿದ ನಂತರ ಜೋಗಕ್ಕೆ ಬರದವರಿಲ್ಲ. ಅಪ್ಪಿ ತಪ್ಪಿ ಯಾರಾದರೂ ಬರದಿದ್ದರೆ, ಭಟ್ಟರ ಮುಂಗಾರುಮಳೆಯಲ್ಲಿ ಜೋಗದ ಸೌಂದರ್ಯವ ಕಂಡು ಬೆರಗಾಗಿರುತ್ತಾರೆ. 
   ನಮ್ಮದು ಹಾಗಲ್ಲ. ಪ್ರತಿ ಮಳೆಗಾಲಕ್ಕೆ ಜೋಗಕ್ಕೊಮ್ಮೆ ಭೇಟಿ ನೀಡಲೇಬೇಕು. ಒಮ್ಮೊಮ್ಮೆ ಹೊಗೆಯಿಂದ ಎಲ್ಲಾ ಕವಿದಿರುತ್ತದೆ. ಕೊನೆಪಕ್ಷ ಬಿಸಿ ಬಿಸಿ ಜೋಳವನ್ನಾದರೂ ಅಲ್ಲಿ ನಿಂತು ಮಳೆಯ ಚಳಿಯಲ್ಲಿ ನಿಂತು ಸವಿಯದಿದ್ದರೆ.. ಜೀವನದಲ್ಲಿ ಮಹತ್ವದ ಕ್ಷಣಗಳನ್ನು ಕಳೆದುಕೊಂಡಿದ್ದೇ ಸತ್ಯ. ಮಳೆಗಾಲದಲ್ಲಂತೂ ನಾಲ್ಕು ಮುಖ್ಯ ಧಾರೆಗಳಾದ ರಾಜ, ರಾಣಿ, ರೋರರ್, ರಾಕೆಟ್ ಗೆ ಮಕ್ಕಳು, ಮೊಮ್ಮಕ್ಕಳು ಮರಿಮಕ್ಕಳು ಎಲ್ಲಾ ಬಂದು ಹಬ್ಬವೋ ಹಬ್ಬ..!
  ಹಾಗಂತ ಅದೊಂದೇ ಜಲಪಾತವಲ್ಲ. ಉತ್ತರ ಕನ್ನಡ ಒಂದು ರೀತಿಯಲ್ಲಿ ಜಲಪಾತಗಳ ಬೀಡು. ಸಣ್ಣ ಹೊಳೆಯೂ ತನ್ನ ತಿರುವಲ್ಲಿ ಒಂದು ಪುಟ್ಟ ಧಾರೆಯನ್ನು ಸೃಷ್ಟಿಸುತ್ತದೆ. ಉಂಚಳ್ಳಿ, ಬುರುಡೆ, ವಿಭೂತಿ, ನಿಪ್ಲಿ, ಮಾಗೋಡು, ಸಾತೋಡಿ,ಶಿವಗಂಗಾ, ಬೆಣ್ಣೆಹೊಳೆ, ಅಪ್ಸರಕೊಂಡ, ಮತ್ತಿಘಟ್ಟ...ಇವುಗಳೆಲ್ಲ ಭೇಟಿ ಮಾಡಲೇ ಬೇಕಾದ ತಾಣಗಳು. ಸುತ್ತ ಹಸಿರು, ಅಲ್ಲಲ್ಲಿ ಬಳುಕುತ್ತ   ಕಡಲ ಸೇರುವ ಬಯಕೆಯಲ್ಲಿ ಹರಿಯುವ ಕಾಳಿ, ಅಘನಾಶಿನಿ, ಶರಾವತಿಯರು, ಅವರನ್ನು ಭೇಟಿಯಾಗಲು ಓಡುತ್ತಿರುವ ಹೊಳೆ, ತೊರೆಗಳು ಆಗಾಗ ಧುಮುಕಿ ಸೃಷ್ಟಿಸಿದ,ಹೆಸರೇ ಕೇಳರಿಯದ ಜಲಪಾತಗಳಿಗೆ ಲೆಕ್ಕವೇ ಇಲ್ಲವೇನೋ..

ಈ ನೀರನ್ನು,  ಬೆಟ್ಟಗಳನ್ನು,  ಹಸಿರನ್ನು, ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ.. 
ಮಳೆಗಾಲದ ಸಾವಿರ ನೆನಪುಗಳಲ್ಲಿ ನೆನೆದು ತಂಪಾಗೋಣ..!

No comments:

Post a Comment

ಕರಗುವೆ...