Tuesday, June 16, 2020

ಶಾಲೆಮನೆ

ಅಂದು ಹೆಗಲಿಗೆ ಚೀಲ ನೇತಾಡಿಸಿಕೊಂಡು ಹೊರಟರೂ, ಏನೋ ಖುಷಿ. ಬ್ಯಾಗಿನ ಒಳಗೆ ಪುಸ್ತಕವಲ್ಲ. ಇದ್ದಿದ್ದು ತಿಂಡಿಡಬ್ಬ. ಶಾಲೆಯಲ್ಲಿ ಮುಂಚಿನ ದಿನ ಹೇಳಿದ್ದರು. ನಮ್ಮನ್ನೆಲ್ಲ ಪಿಕ್ನಿಕ್ ಗೆ ಕರೆದುಕೊಂಡು ಹೋಗುತ್ತೇವೆ ಎಂದು. ಎಲ್ಲಿ ಎಂದು ಗೊತ್ತಿರಲಿಲ್ಲ. ಆದರೂ ಒಂದು ದಿನ ನಾಲ್ಕು ಗೋಡೆಗಳ ಮಧ್ಯವಿರದೆ ಹೊರಗಡೆ ಸುತ್ತುವ ಅವಕಾಶ ಸಿಕ್ಕಿತಲ್ಲ ಎಂಬ ಖುಷಿ ನಮಗೆ. 
ಎಲ್ಲರೂ ಬಂದ ನಂತರ ಅಕ್ಕೋರು (ಟೀಚರ್ ಎನ್ನುವುದಕ್ಕಿಂತ ಅಕ್ಕೋರು ಎಂದರೆ ಪ್ರೀತಿ ಜಾಸ್ತಿ !) ಎಲ್ಲರನ್ನೂ ಸಾಲಾಗಿ ನಿಲ್ಲಿಸಿದರು. ಹುಡುಗಿಯರು ಮುಂದೆ, ಹುಡುಗರೆಲ್ಲ ಹಿಂದೆ. 

ಕಪಿ ಸೈನ್ಯವನ್ನು ಅಷ್ಟು ಸುಲಭಕ್ಕೆ ಸುಧಾರಿಸಲು ಸಾಧ್ಯವಿಲ್ಲ. ಅದರಲ್ಲೂ ಏಳನೇ ತರಗತಿ. ನಾವೇ ಸೀನಿಯರ್ಸ್ ಎಂಬ ಅಹಂ ಬೇರೆ.. ! ಹಾಗಾಗಿ ಮೂವರು ಶಿಕ್ಷಕರು ಹೊರಟಿದ್ದರು.

ಹೊರಟ ನಂತರ ನಾನೂ ಯೋಚನೆ ಮಾಡಿದೆ.
"ಅಯ್ಯೋ ಇದೇನು?  ನಮ್ಮ ಮನೆಯ ಹಾದಿಯಲ್ಲಿ ಹೊರಟಿದ್ದಾರಲ್ಲ.. ಎಲ್ಲಿ ಕರೆದುಕೊಂಡು ಹೋಗಬಹುದು?"  ಕಾಲಿಗಿಂತ ವೇಗವಾಗಿ ತಲೆ ಓಡಿತ್ತು. 

ಓಹೋ.. ಇವರು ಕಾಳಮ್ಮನ ಗುಡಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹೇಗಾದರೂ ದಾರಿ ತಿರುಗಿಸಬೇಕಲ್ಲ.. 
ಕಾಳಮ್ಮನ ಗುಡಿಗಿಂತ ಮೊದಲು ನಮ್ಮ ಮನೆಗೆ ಹೋಗುವ ದಾರಿ ಸಿಗುತ್ತದೆ. ಆಗ ಟಾರ್ ರಸ್ತೆಯೂ ಆಗಿರಲಿಲ್ಲ. ಮಳೆಗಾಲದಲ್ಲಿ ಕೊರೆದು ಹೋದ ಮಣ್ಣಿಗೆ ಮತ್ತೊಂದಷ್ಟು ಗೊಚ್ಚು  ಮಣ್ಣು ಹಾಕಿದ್ದರು. ಆ ಕೆಂಪನೆಯ ರಸ್ತೆ ಕಾಣಿಸುತ್ತಿತ್ತು ನನಗೆ. ಆದರೆ ಆ ಕಡೆ ಎಲ್ಲರನ್ನೂ ತಿರುಗಿಸುವುದು ಹೇಗೆ? 
 ಸೀದಾ ಹೋಗಿ, "ಅಕ್ಕೋರೆ ನಮ್ಮನೆಗೆ ಹೋಗೋಣ"ಎಂದು ದುಂಬಾಲು ಬಿದ್ದೆ. "ಇಲ್ಲಾ, ದೇವಸ್ಥಾನಕ್ಕೆ ಹೋಗೋಣ" ಎಂದಾಗ "ನಮ್ಮ ಮನೆ ಇನ್ನೂ ಹತ್ತಿರ. ಎಲ್ಲರೂ ಆಡಬಹುದು. ಎಲ್ಲರಿಗೂ ಜಾಗ ಇದೆ.." ಇನ್ನೂ ಏನೇನು ಹೇಳಿದೆನೋ.. ಒಟ್ಟಿನಲ್ಲಿ ಕೊನೆಗೂ ನನ್ನ ಹಠಕ್ಕೆ ಮಣಿದರು. 

ಅರೆ.. ಇದೇನು ಇಷ್ಟೊಂದು ಗದ್ದಲ.. ಎಂದು ಮನೆಯವರೆಲ್ಲ ಹೊರಬಂದು ನಿಂತರು. ಆಕಾಶ ನೀಲಿ ಬಣ್ಣದ ಅಂಗಿ, ಕಪ್ಪು ನೀಲಿ ಬಣ್ಣದ ಚಡ್ಡಿ, ಲಂಗಗಳನ್ನು ಧರಿಸಿದ ಮಕ್ಕಳ ರೂಪದಲ್ಲಿದ್ದ ವಾನರ ಸೈನ್ಯ..ನಗುತ್ತಾ  ಎಲ್ಲರ ಮುಂದೆ ಬರುತ್ತಿದ್ದ ನನ್ನ ಕಂಡಾಕ್ಷಣ ಎಲ್ಲರಿಗೂ ಅರ್ಥವಾಗಿತ್ತು.. ಇದು ನನ್ನದೇ ಕಿತಾಪತಿ ಎಂದು.. !

ನನಗೆ ಮೊದಲಿನಿಂದಲೂ ಗೆಳೆಯರೊಡನೆ ಸುತ್ತುವುದು, ಅವರನ್ನು ನನ್ನ ಮನೆಗೆ ಕರೆತರುವುದು ಬಹಳ ಇಷ್ಟ. ಎರಡು -ಮೂರು ಜನ ಹಾಗಿರಲಿ, ಒಂದೇ ಬಾರಿಗೆ ಎಪ್ಪತ್ತು ಜನರನ್ನು ಕರೆತಂದಿದ್ದೆ..  

ಐದೇ ನಿಮಿಷದಲ್ಲಿ ಆಕ್ರಮಣವಾಗಿತ್ತು.. ಒಂದಷ್ಟು ಮಕ್ಕಳು ಚಿಕ್ಕು ಮರ, ಮಾವಿನ ಮರ ಹತ್ತಿದರೆ, ಸ್ವಲ್ಪ ಜನ ಕಣ್ಣಾಮುಚ್ಚಾಲೆ, ಮುಟ್ಟಾಟ ಆಡುತ್ತಿದ್ದರು. ಹುಡುಗರು ಗದ್ದೆಯಲ್ಲಿ  ಹೆಡೆಪೆಂಟೆ ಹಿಡಿದು ಕ್ರಿಕೆಟ್ ಆಡುತ್ತಿದ್ದರು. 

ಇದನ್ನೆಲ್ಲಾ ನಮ್ಮ ಶಿಕ್ಷಕರು ಅಪ್ಪ ಅಮ್ಮ, ಅಜ್ಜ ಅಜ್ಜಿಯೊಡನೆ ನಿಂತು ಮೂಕರಾಗಿ ನೋಡುತ್ತಿದ್ದರು. "ಇವರನ್ನು ಇತ್ತ ಕರೆದುಕೊಂಡು ಬರುತ್ತಲೇ ಇರಲಿಲ್ಲ" ಎಂದು ನನ್ನ ಸರ್ ಹೇಳಿದರೆ, "ಏನೂ ಪರವಾಗಿಲ್ಲ ಎಲ್ಲಾ ಖುಷಿಯಾಗಿ ಆಡಲಿ" ಎಂದು ಹೇಳಿ ಅಪ್ಪ ತಾವೂ ನಮ್ಮ ಮಧ್ಯ ಆಟಕ್ಕೆ ಸೇರಿಕೊಂಡರು. ಬಿಸಿಲೇರುತ್ತಿದ್ದಂತೆ, ತಂಪಾದ ಮಸಾಲಾ  ಮಜ್ಜಿಗೆ ಎಲ್ಲರಿಗೂ ಒಂದೊಂದು ಲೋಟ ಸರಬರಾಜಾಯಿತು. ಇಂದಿಗೂ ನನ್ನ ಗೆಳೆಯರು "ಅವತ್ತು ನಿಮ್ಮಮ್ಮ ಮಾಡಿಕೊಟ್ಟ ಖಾರ ಮಜ್ಜಿಗೆ ಸೂಪರಾಗಿತ್ತು ಕಣೇ.." ಎಂದಾಗ "ಮತ್ತೊಮ್ಮೆ ಬನ್ನಿ  ಮಜ್ಜಿಗೆ ಕುಡಿಯಲು.." ಎನ್ನುತ್ತೇನೆ. 

ಕನ್ನಡ ಶಾಲೆಯ ಅದೆಷ್ಟು ನೆನಪುಗಳು ಇನ್ನೂ ಹಸಿರಾಗಿಯೇ ಇವೆ. ನಾವಾಡಿದ ನಾಟಕಗಳು, ಪ್ರತಿಭಾ ಕಾರಂಜಿಯಲ್ಲಿ ಹಾಡು, ನೃತ್ಯ, ಶಾಲೆಯ ಸುವರ್ಣ ಮಹೋತ್ಸವದ ನೆನಪುಗಳ ಬಣ್ಣ ಇನ್ನೂ ಮಾಸಿಲ್ಲ. 


ನಾಲ್ಕುನೂರು ಮಕ್ಕಳಿರುವ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಗೆ ಮುಂದೆನಿಂತು ಹಾಡುವವರು ಐದೇ ಮಂದಿ. ಆ ಐದರಲ್ಲಿ ನಾನೂ ಒಬ್ಬಳಾದಾಗ ಆದ ಖುಷಿ, ಶಾಲೆಯ ಮಂತ್ರಿ ಮಂಡಲದಲ್ಲಿದ್ದಾಗ ಜವಾಬ್ದಾರಿ!, ತರಗತಿಯ ಮುಖ್ಯಸ್ಥೆ ಆದಾಗಿನ ಸೊಕ್ಕು..! ಇವೆಲ್ಲವುಗಳ ಮಿಶ್ರಣದ ಏಳು ವರ್ಷ - ಜೀವನದ ಅದ್ಭುತ ಕ್ಷಣಗಳು. 

ಅಪ್ಪನ ಜೇಬಿನಿಂದ ಎರಡು ದಿನಕ್ಕೊಮ್ಮೆ ಕಳ್ಳತನವಾಗುವ ಐದು ರೂಪಾಯಿ, ಶಾಲೆಯ ಪಕ್ಕದ ಅಂಗಡಿಯಿಂದ ಪೆಪ್ಸಿಯಾಗಿ ಕೈ ಸೇರುತ್ತಿತ್ತು. ಮಾರನೇ ದಿನ ಪೆಪ್ಸಿ ಮೂಗಿನಲ್ಲಿ ಕರಗಿ ಅಮ್ಮನ ಕೈಲಿ ಸಿಕ್ಕಿಹಾಕಿಕೊಂಡು ಮಂಗಳಾರತಿಯೂ ಆಗುತ್ತಿತ್ತು.
 

ಶಾಲೆಯ ಹಿಂದಿನ ಮರದ  ಬಿಂಬಲಕಾಯಿ ಕೊಯ್ಯುವುದರಿಂದ ಹಿಡಿದು, ಚರ್ಚಿನ ಆವರಣದಲ್ಲಿ ನೆಲ್ಲಿಕಾಯಿಗೆ ಕನ್ನ ಹಾಕುವಾಗ ಸಿಸ್ಟರ್ ಬಳಿ ಸಿಕ್ಕಿಬೀಳುವ ವರೆಗೆ;  ಅಕ್ಕೋರ ಬಳಿ ಮರದ ಸ್ಕೇಲ್ ಇಂದ ಹೊಡೆತ ತಿಂದರೂ ಮನೆಯಲ್ಲಿ ಬೆಳೆದ ಗುಲಾಬಿ ಹೂವನ್ನು ಪ್ರೀತಿಯಿಂದ ಕೊಡುವವರೆಗೆ;  ಗೆಳೆಯರೊಂದಿಗೆ ಜಗಳ ಮಾಡಿ ವಾರಗಳ ಕಾಲ ಮಾತು ಬಿಟ್ಟರೂ, ಕೊನೆಗೆ ಅವರ ಮನೆಗೇ ಹೋಗಿ ಊಟ ಮಾಡುವವರೆಗೆ;  ಸುಳ್ಳು-ಸುಳ್ಳೇ ಬರುವ ಹೊಟ್ಟೆ ನೋವಿನಿಂದ ಹಿಡಿದು, ಆಡುವಾಗ ಬಿದ್ದು ಮೊಣಕಾಲು ಕೆತ್ತಿದ ಕಲೆಯವರೆಗೆ ಎಲ್ಲವೂ ಕನ್ನಡ ಶಾಲೆಯ ಕತೆಯನ್ನೇ ಹೇಳುತ್ತವೆ..!

ಪಾಳಿಯ ಮೇಲೆ ದಿನವೂ ಬೆಳಿಗ್ಗೆ ಪಂಚಾಂಗ,ನುಡಿಮುತ್ತು, ದಿನಪತ್ರಿಕೆಯ ಮುಖ್ಯಾಂಶ ಓದುವುದು, ಮೈದಾನದ ಕಸ ಆರಿಸುವುದು,ಗಿಡಗಳಿಗೆ ಪಾತಿ ಮಾಡುವುದು,ನೀರು ಹಾಕುವುದು,  ಶೌಚಾಲಯ ತೊಳೆಯುವುದು, ಬಾವಿಯಿಂದ ನೀರೆತ್ತುವುದು, ಮಧ್ಯಾಹ್ನದ ಊಟಕ್ಕೆ ಬಡಿಸುವುದು.. ಎಲ್ಲವೂ ನಮ್ಮ ಕಲಿಕೆಯ ಭಾಗವಾಗಿತ್ತು. 

ಕ್ಲಾಸು, ಟ್ಯೂಷನ್ಸ್, ಹೋಮ್ವರ್ಕ್, ಎಕ್ಸಾಮ್, ಮಾರ್ಕ್ಸ್ ಎಲ್ಲವೂ ನಮಗೂ ಇತ್ತು. ಆದರೆ ಇಷ್ಟು ನಾಗಾಲೋಟ ಇರಲಿಲ್ಲ. ಅಂಕ ಮಾತ್ರ ಜೀವನವಲ್ಲ ಎಂಬುದನ್ನು ಪಾಠ ಕಲಿಸುವ ಗುರುಗಳೇ ಹೇಳುತ್ತಿದ್ದರು. ಒಂದು ಹೊಡೆತ ಬಿದ್ದರೆ, "ಇನ್ನೊಂದ್ ಹಾಕಿ ಬುದ್ಧಿ ಹೇಳಿ ಸಾರ್.." ಎನ್ನುವವರಿದ್ದರೆ ಹೊರತು, "ನನ್ಮಗನಿಗೆ ಹೊಡೆಯೋಕೆ ನೀವ್ಯಾರು? " ಎನ್ನುವ ಪಾಲಕನಿರಲಿಲ್ಲ. 

ಅಪ್ಪ-ಅಮ್ಮ ನಾಟಕವೆಂದು ಬೇರೆ ಊರಿಗೆ ಹೋದಾಗ, ಅಕ್ಕೊರ ಮನೆಯಲ್ಲೇ ರಾತ್ರಿ ಊಟ ಮಾಡಿ, 
ನಾನು ಮನೆಗೆ ಹೋಗಬೇಕೆಂದು ಹಠ ಮಾಡಿದಾಗ ಜೋಕಾಲಿಯ ಮೇಲೆ ತೂಗಿ ಮಲಗಿಸಿದ ಅಕ್ಕೋರು ಆ ಕ್ಷಣಕ್ಕೆ ಅಕ್ಕರೆ ತೋರುವ ಅಮ್ಮನೂ ಆದರು. 
ಪೇಟೆಯಲ್ಲಿ ಸಿಕ್ಕಾಗ, " ಅರೆ ಪಲ್ಲವಿ, ಇಷ್ಟೆಲ್ಲಾ ದೊಡ್ಡಕಾಗೋದ್ಯನೇ? ಇನ್ನೂ ಎರ್ಡು ಜುಟ್ಟವೇ ಕಾಣಿಸ್ತು.." ಎಂದಾಗಿನ ಪ್ರೀತಿಗೆ ಬೆಲೆಕಟ್ಟಲಾದೀತೇ?
 ಒಮ್ಮೊಮ್ಮೆ ಗೆಳೆಯರ ಹೆಸರನ್ನು ನೆನಪಿಸಿಕೊಂಡು ಅವನೆಲ್ಲಿದ್ದಾನೆ ಈಗ?  ಅವಳೇನು ಮಾಡುತ್ತಿದ್ದಾಳೆ?  ಎಂದಾಗ ನಾನೂ ಹಳೆಯ ನೆನಪುಗಳಲ್ಲಿ ಕಳೆದು ಹೋಗುತ್ತೇನೆ.. ಅವರಿಗೆ ನಾವೆಲ್ಲ ಸೇರಿ ಕೊಟ್ಟ ಕಾಟಗಳನ್ನು ನೆನೆದು ಬೇಸರಿಸಿಕೊಳ್ಳುತ್ತೇನೆ. 

ನನ್ನಂತಹ ಅದೆಷ್ಟು ಸಹಸ್ರ ಮಕ್ಕಳ ನೆನಪುಗಳು ಈ ಶಾಲೆಯ ಸೂರಿನಡಿಯಲ್ಲಿವೆಯೋ..?!
ಶಾಲೆ ಎಂದರೆ ಕೇವಲ 'ಸ್ಕೂಲ್' ಎಂಬ ನಾಮಫಲಕವನ್ನು ಹೊತ್ತ ಕಟ್ಟಡವಲ್ಲ. 
ಮನೆಗೂ ಶಾಲೆಗೂ ವ್ಯತ್ಯಾಸವೇ ಇರದಷ್ಟು ಆಪ್ತವಾದ 'ಶಾಲೆಮನೆ'.

No comments:

Post a Comment

ಕರಗುವೆ...