Sunday, November 21, 2021

ರಾಮೇಸನ ಸಾಲ..!

ನಾನು ನನ್ನ ಮೂರು-ನಾಲ್ಕು ವರ್ಷದಿಂದಲೇ ಅವನನ್ನು ನೋಡಿದ್ದು.ಇಂದಿಗೂ ಅವನ ಬಟ್ಟೆ ಅಂದು ಏನಿತ್ತೋ ಅದೇ! ಭುಜದ ಬಳಿ ಹರಿದ ಕೆಂಪಂಗಿ, ಮೊಣಕಾಲುದ್ದದ ಮಣ್ಣಿನ ಬಣ್ಣದ ಚಡ್ಡಿ. ಬೀಳಬಾರದೆಂದು ಚಡ್ಡಿಗೆ ಸುತ್ತಿದ ಸೊಣಬೆ ದಾರ! ಮಳೆಗಾಲದಲ್ಲಿ ಮೂರು ಗೊಬ್ಬರ ಚೀಲಗಳಿಂದ ಮಾಡಿದ ಹಳದಿ ಬಣ್ಣದ ಕೊಪ್ಪೆ! ಅದೇನು ಅವನ ಕೆಲಸದ ಸಮವಸ್ತ್ರವೋ ಅಥವಾ ಇರುವುದೇ ಅದೊಂದು ಬಟ್ಟೆಯೋ ನಾನರಿಯೆ. ಹಬ್ಬದ ಮಾರನೆಯ ದಿನ ಬರುವಾಗ ಮಾತ್ರ ಮಿರಿ ಮಿರಿ ಮಿಂಚುವ ಹೊಸ ಅಂಗಿ!
ನಿಂತಲ್ಲಿಂದಲೇ ಕೊಟ್ಟಿಗೆಯ ಅಟ್ಟದ ತುದಿಗಿಟ್ಟ ವಸ್ತುಗಳನ್ನು ಕೈ ಹಾಕಿ ತೆಗೆಯುವಷ್ಟು ಎತ್ತರದವನು. ಧಡೂತಿಯೂ ಅಲ್ಲದ, ಸಪೂರವೂ ಅಲ್ಲದ ಆಳು; ಗೋಧಿ ಬಣ್ಣವೇ, ಆದರೆ ಸಾಧಾರಣ ಮೈಕಟ್ಟಲ್ಲ ಎನ್ನಬಹುದು! ನಾನು ನೋಡಿದಂತೆ ಎಂದಿಗೂ ಕೂದಲನ್ನು ಬಾಚಬೇಕಾದಷ್ಟು ಉದ್ದ ಬಿಡದೇ ತನ್ನ ತಲೆಗೂ ಕೂದಲಿದೆ ಎಂಬುದನ್ನು ಸಾಬೀತು ಪಡಿಸಲಷ್ಟೇ ಉಳಿಸಿರುತ್ತಾನೆ.
 ಅದೆಷ್ಟೇ ಬಿಸಿಯಾದ ಚಹಾ ಕೊಟ್ಟರೂ ಒಂದೇ ಗುಟುಕಿಗೆ ಕುಡಿದು ಮುಗಿಸುವವನ ರಹಸ್ಯ ಬಹಳ ತಡವಾಗಿ ತಿಳಿಯಿತೆನಗೆ! ನಕ್ಕರೆ ಅಮಾವಾಸ್ಯೆಯ ಕತ್ತಲೊಂದೇ ಕಾಣುವುದು ಆ ಬಾಯಿಯಲ್ಲಿ, ಹೆಸರಿಗೂ ಒಂದು ಹಲ್ಲಿರಲಿಲ್ಲ. ಅವನ ಮದುವೆಯ ಸಂದರ್ಭದಲ್ಲಿಯೇ ಸೈಕಲ್ನಿಂದ ಬಿದ್ದು ಹಲ್ಲುಗಳೆಲ್ಲ ಮುರಿದಿದ್ದವು. ಹಲ್ಲು ಸೆಟ್ ನ ಖರ್ಚುನ್ನು ನೋಡಿ ಅದರ ಸಹವಾಸವನ್ನೇ ಬಿಟ್ಟಿದ್ದವ 'ರಾಮೇಶ'! ಆ ಬೊಚ್ಚುಬಾಯಿಗೆ ಅದೆಷ್ಟು ಬಿಸಿ ಇದ್ದರೂ ತಟ್ಟುತ್ತಿರಲಿಲ್ಲ.
ನನಗೋ ಮೊದಲಿನಿಂದಲೇ ಅವನ ಕಂಡರೆ ಸ್ವಲ್ಪ ಸಿಟ್ಟು. ನನ್ನ ಆಟಿಕೆಗಳನ್ನೆಲ್ಲ ಅವನ ಮಕ್ಕಳಿಗೆ ಎಂದು ಒಯ್ಯುತ್ತಾನಲ್ಲ ಎಂದು.. ಅದನ್ನೆಲ್ಲ ಹೊಸತಾಗಿ ಖರೀದಿಸುವ ಶಕ್ತಿ ಅವನಲ್ಲಿರಲಿಲ್ಲ ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಾನು ಆಡದ ಆಟಿಕೆಗಳ ಮೇಲೂ ಮೋಹ ತುಸು ಜಾಸ್ತಿಯೇ ಇತ್ತು. ಹಾಗಾಗಿ ಅವ ಕೆಲಸಕ್ಕೆ ಬಂದ ದಿನಗಳಲ್ಲೆಲ್ಲ ಎಚ್ಚರಿಕೆಯಿಂದ ಅವನನ್ನೇ ಗಮನಿಸುತ್ತಿದ್ದೆ. ಸಂಜೆ ಹೊರಡುವ ಸಮಯದಲ್ಲಿ ಅವನ ಸೈಕಲ್ ತುದಿಗೆ ಬುತ್ತಿಡಬ್ಬಿ ಬಿಟ್ಟು ಹೊಸದೇನಾದರೂ ಇದೆಯೋ ಎಂದು ತಪ್ಪದೇ ನೋಡುತ್ತಿದ್ದೆ.
ಒಂದಷ್ಟು ವರ್ಷಗಳು ಕಳೆಯುತ್ತಿದ್ದಂತೆ ಅವನನ್ನು ಗಮನಿಸುವ ಕೆಲಸ ಹಾಗೆಯೇ ಉಳಿದಿದ್ದರೂ ಸಿಟ್ಟಿನ ಬದಲು ಕುತೂಹಲ ಶುರುವಾಗಿತ್ತು. ಅವನ ಮಾತುಗಳಿಗೆ ಉಳಿದ ಕೆಲಸಗಾರರು ನಗುವಾಗ, ಗೇಲಿ ಮಾಡುವಾಗ, ಅವರೊಡನೆ ರಾಮೇಶನೂ ಬೊಚ್ಚುಬಾಯಿಯಲಿ ನಗುವಾಗ ಮತ್ತಷ್ಟೂ ಕುತೂಹಲ!
ಬಂದ ತಕ್ಷಣ ಉಳಿದವರಿಗೆ, " ಯೇ.. ಇವತ್ ದೋಸ್ತಾ ಬಂದಾನೆ... ಏನಾ ದೋಸ್ತಾ... " ಎಂದು ಮಾತನಾಡಿಸಿಯೇ ಮುಂದಿನ ಹೆಜ್ಜೆ. ಒಂದು ಲೀಟರ್ ನೀರನ್ನು ಗಟ ಗಟ ಕುಡಿದು, ಮತ್ತೆ ನೀರನ್ನು ತುಂಬಿಸುವಷ್ಟರಲ್ಲಿ, " ಥತ್, ಇದ್ಯೆಲ್ಲಿ ಮಾರಾಯ.. ಒಳಕ್ ಹಾಕ್ದಂಗೆ ಹೊರಕ್ ಬತ್ತೈತಿ.. " ಎನ್ನುತ್ತಾ ಜಾಗ ಹುಡುಕುತ್ತ ಓಡುವುದು ದಿನಕ್ಕೆ ಮೂರು ಬಾರಿಯಾದರೂ ಕಾಣುತ್ತಿತ್ತು.
ಕರೆಂಟ್ ಬೇಲಿಯ ಬಳಿ ಹೋಗೋಕೆ "ಜೀವ್ಬಯಾ.." ಎನ್ನುತ್ತಾ ನಗುತ್ತಾ ನಿಲ್ಲುತ್ತಿದ್ದ. " ಇದ್ರಲ್ಲಿ ಕರೆಂಟ್ ಹರಿತಾ ಇಲ್ವೋ.. " ಎಂದರೆ " ಮತ್ಯಾಕೆ ಕರೆಂಟ್ ಬೇಲಿ ಅಂತಾರೆ?" ಎನ್ನುತ್ತಾನೆ. ಕಂಬದಂತೆ ನಿಂತವನನ್ನು ನಂಬಿಸಲು ಮೊದಲಿದ್ದವನೆ ದಾಟಿ ತೋರಿಸಬೇಕಿತ್ತು.!
ಎರಡು ದಿನಕ್ಕೊಮ್ಮೆ "ಹೆಗ್ಡೆ...ರು ಸಾಲ..." ಎನ್ನುತ್ತಾ ನಿಂತವನಿಗೆ ಹಣ ಕೊಡಲೇಬೇಕಿತ್ತು, ಇಲ್ಲದಿದ್ದರೆ ಹೆಜ್ಜೆ ಹಂದಾಡುತ್ತಿರಲಿಲ್ಲ. ಹಾ! ಅವನ ದುಡಿಮೆಗೇ ಅವನು ಸಾಲ ಎನ್ನುತ್ತಿದ್ದುದು.ಈಗಲೇ ಹಣ ಯಾಕೆ ಬೇಕೆಂದರೆ ಅವನು ಕೊಡುವ ಕಾರಣ ಒಂದೇ.. "ತಳಪತ್ರೆ ಬಾಳ..!"
ಅಂದರೆ ತಾಪತ್ರಯ (ಕಷ್ಟ) ಬಹಳ! ಕೊಡಲೇಬೇಕಿತ್ತು.
"ನಾಳೆ ಬಂದವ ಈ ಕೆಲಸ ಮಾಡ್ತ್ನಿ " ಎಂದೇನಾದರೂ ಹೇಳಿದರೆ, ಅವನ ನಾಳೆ ನಮ್ಮ ನಾಳೆಯಲ್ಲ ಎಂದೇ ತಿಳಿಯಬೇಕು! ಮತ್ತೆ ಅವನಿಗೆ ತಳಪತ್ರೆ ಬಂದಾಗಲೇ ಅವನ ಹಾಜರಿ ಇರುತ್ತಿದ್ದುದು!
ಕೋವಿಡ್ ಅವಾಂತರಗಳಿಂದ ಕೆಲಸಕ್ಕೆಲ್ಲೂ ಹೋಗಲಾರದೆ ಇದ್ದ ಸಮಯದಲ್ಲಿ ಹೇಳಿದ್ದನವ.. "ಅಲ್ಲೋ.. ಜನಾ ಏನೋ ಕಂಟ್ರೋಲ್ ಮಾಡಿರು.. ಕಾಯ್ಲೆ ಕಂಟ್ರೋಲ್ ಮಾಡಕ್ ಅಕ್ಕಲ ಅಲಾ..."
ಉಳಿದವರೆಲ್ಲ ನಕ್ಕಿದ್ದರೂ ಅವತ್ತು ಅವನು ನಗಲಿಲ್ಲ. ಅಸಹಾಯಕತೆಯೊ, ಕೋಪವೋ, ಭಯವೋ ಅರ್ಥವಾಗಲಿಲ್ಲ.
ಆತ ಎಲ್ಲರೂ ಗೇಲಿ ಮಾಡುವಂತೆ ಬೆಪ್ಪನಲ್ಲ, ಮುಗ್ಧ ಎಂಬುದು ಹಲವು ಬಾರಿ ಅನುಭವಕ್ಕೆ ಬಂದಿದೆ.
ಇತ್ತೀಚಿಗೆ ಡಾಬರ್ಮನ್ ತಳಿಯ ಪುಟ್ಟ ಮರಿ ಬಂದಾಗ, ದಂಗಾಗಿ ನಿಂತಿದ್ದ ರಾಮೇಶ. ಇದೇ ಮೊದಲ ಬಾರಿ ಬಾಲವಿಲ್ಲದ ನಾಯಿಯೊಂದನ್ನು ನೋಡಿದ್ದನವನು. ಅವನ ಊಹೆಗೂ ನಿಲುಕದ ವಿಷಯವದು.
"ಅಲ್ಲಾ... ಈಗ ಯಡಬಟ್ಟಾತಲಾ..."
"ಯಾಕೋ ರಾಮೇಸ... ಏನಾತೋ.."
"ಅಲ್ಲಾ.. ಗಾದೆ ಮಾತೆಲ್ಲ ಸುಳ್ಳೇ ಅಲ್ಲನ ದೋಸ್ತಾ..."
"ಏನಾತೋ ನಿಂಗೆ ರಾಮೇಸ?"
"ಸಾಲ್ಯಾಗೆ ಮಾಸ್ತ್ರು ಈ ನಾಯಿ ನೋಡ್ಲಿಲ್ಲ ಕಾಣ್ತೈತೆ.. ನಳಿಗೆ ಹಾಕಿ ನೆಟ್ಟಗೆ ಮಾಡದ್ ಎಂಗು ಇರ್ಲಿ... ನಳಿಗೆ ಹಾಕಕಾರು ಒಂದು ಬಾಲ ಬ್ಯಾಡನ.."
"ಥೋ ಮಾರಾಯ..ಅದ್ಕೆ ಹುಟ್ಟತ ಬಾಲ ಇರತೈತ.. ಕಡಿಗೆ ತುಂಡು ಮಾಡ್ತಾರೆ."
"ಅದೇ.. ನಾಯಿ ಅಂದಮ್ಯಾಲೆ ಒಂದ್ ಬಾಲ ಬ್ಯಾಡನ ಪಾಪ...!"
ಅಂದು ಆ ಪುಟ್ಟ ಮರಿಯನ್ನು ಕಂಡು ಅದೆಷ್ಟು ಬಾರಿ ಪಾಪ ಅಂದನೋ ಅವನು!
ಬಾಲವಿಲ್ಲದ ಮೇಲೆ ಅದು ನಾಯಿಯೇ ಅಲ್ಲ ಎಂಬ ತೀರ್ಮಾನದ ಹಂತದಲ್ಲಿರುವವನಿಗೆ, ಅದು ನಾಯಿಯದೆ ಒಂದು ತಳಿ ಎಂದು ಅರ್ಥ ಮಾಡಿಸಲು ಎರಡು ದಿನಗಳೇ ಬೇಕಾದವು.!

-ಪಲ್ಲವಿ 

No comments:

Post a Comment

ಕರಗುವೆ...