Tuesday, July 14, 2020

ಮತ್ತೆ ಕಾಡಿದ ಮಳೆಯ ನೆನಪು -2

ನೀಲಕೂಟದ ಯಶೋದಮ್ಮ - ದೇವಪ್ಪನ ಮೊದಲ ಪುತ್ರಿ 'ಸುಲೋಚನಾ'. ಅವಳಿಗಿಂತ ನಾಲ್ಕು ವರ್ಷ ಕಿರಿಯವಳು ನಯನಾ. ಎರಡನೇ ತರಗತಿಗೇ ಅಕ್ಕ ತಂಗಿಯರು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹಾಡಿದ್ದರು!     ಈ ನಾಲ್ವರ ಜೊತೆಗೆ ದೇವಪ್ಪನ ತಮ್ಮ ಮಾಧವನೂ ಇದ್ದ. ಅಣ್ಣನ ಮಾತನ್ನು ಮೀರದ, ಅತ್ತಿಗೆಯನ್ನು ಬಹಳ ಗೌರವಿಸುವ ಮಾಧವನಿಗೆ, ಊಟ ತಿಂಡಿ ಎಲ್ಲದಕ್ಕೂ ಮಕ್ಕಳಿರಬೇಕಿತ್ತು. "ಸುಲೋಚ್ನಾ..ನ್ಯಾನಾ.." ಎನ್ನುತ್ತಲೇ ಇರುತ್ತಿದ್ದ. ಚಿಕ್ಕಪ್ಪನೆಂದರೆ ಮಕ್ಕಳಿಗೂ  ಬಲು ಪ್ರೀತಿ. ಅಪ್ಪನ ಗಂಟು ಮುಖವನ್ನು ಕಂಡು ಭಯಕ್ಕೋ, ತಮ್ಮನ್ನು ಚಿಕ್ಕಪ್ಪ ಅಕ್ಕರೆಯಿಂದ ಕಾಣುತ್ತಾನೆ ಎಂಬ ಕಾರಣಕ್ಕೋ ಮಾಧವನ ಬೆನ್ನಿಗೆ ಅಂಟಿಕೊಂಡೇ ಇರುತ್ತಿದ್ದರು.
 "ನೀನು ಹಿಂಗೇ ಮುದ್ದು ಮಾಡು ಅವ್ರಿಗೆ.. ಏನು ಹೇಳಿದ್ರೂ ಕೇಳ್ತಿಯಲ್ಲ.. ಮಧು ಸ್ವಲ್ಪ ಕೆಲ್ಸ-ಗಿಲ್ಸ ಕಲಿಲಿ ಅವ್ರು..ದಿನಾ ಗದ್ದೆಗೆ ಕರ್ಕೊಂಡು ಹೋಗ್ಬೇಡ. ಇಡೀ ದಿನ ಆಟ, ಊಟ ಅಂತಾನೆ ಕಳೀತಾರೆ..."
"ಅಣ್ಣಾ..ಮುಂದೆ ಮದ್ವೆ ಆಗಿ ಹೋದ್ಮೇಲೆ ಹೀಗೆ ಇರೋಕೆ ಆಗತ್ತಾ..ಪಾಪ ಖುಷಿಯಾಗಿರ್ಲಿ ಬಿಡು.."
ಏನೂ ಮಾತಾಡದೆ ಒಳಗೆ  ಹೋಗುತ್ತಿದ್ದ ದೇವಪ್ಪ. ದಿನವೂ ಇದೇ ಕಥೆ ! ಚಿಕ್ಕಪ್ಪ ತನ್ನ ಪರವಾಗಿದ್ದಾನೆ ಎಂದಾಗ ಇವರಿಬ್ಬರ ಹಾರಾಟ ಇನ್ನೂ ಜಾಸ್ತಿಯಾಗುತ್ತಿತ್ತು...!!

ನೀಲಕೂಟ ಅತ್ತ ಗ್ರಾಮವೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಸುಮಾರು ಎಪ್ಪತ್ತು ಮನೆಗಳು ಇರಬಹುದಾದ ಊರು. ಭತ್ತ ಮುಖ್ಯ ಬೇಸಾಯ. ಅಂದರೆ ಮಳೆಯ ಬೆಳೆ..! ಇಡೀ ಊರಲ್ಲಿ ಐದಾರು ಮನೆಗಳಲ್ಲಿ ಮಾತ್ರ ನಾಲ್ಕು ಎಕರೆಗೂ ಜಾಸ್ತಿ ಗದ್ದೆ ಇತ್ತು. ಅಣ್ಣ ತಮ್ಮಂದಿರ ಜಮೀನು ಇನ್ನೂ ಭಾಗವಾಗದ ಕಾರಣ ದೇವಪ್ಪನ ಮನೆಯೂ ಆ ಐದಾರು ಮನೆಗಳ ಸಾಲಿನಲ್ಲಿ ಸೇರಿತ್ತು!
ಮಾಧವ ಗದ್ದೆಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದ. ದೇವಪ್ಪನಿಗೆ ಅತ್ತ ಸುಳಿಯುವ ಅವಶ್ಯಕತೆಯೇ ಇರುತ್ತಿರಲಿಲ್ಲ. 
ಊರ ನಡುವೆ ನಾಲ್ಕಾರು ಅಂಗಡಿಗಳಿದ್ದವು. ಅವುಗಳ ಮಧ್ಯೆ ದೇವಪ್ಪನದೂ ಒಂದು ಕಿರಾಣಿ ಅಂಗಡಿ ಇತ್ತು. ಊರಲ್ಲಿ ಸಣ್ಣಕ್ಕಿಯ ದಲ್ಲಾಳಿ ಅವನೊಬ್ಬನೇ ಆದ ಕಾರಣ 'ಸಣ್ಣಕ್ಕಿ ಪಟೇಲ್ರು..' ಎಂದೇ ಎಲ್ಲರೂ ಕರೆಯುತ್ತಿದ್ದರು. 
"ಪಟೇಲ್ರೆ..ಒಂದು ಗಂಡು ಬೇಕ್ರಲಾ.. ಎಷ್ಟೆಲ್ಲಾ ಮಾಡಿಟ್ಟಿರಿ.. ನಿಮ್ಮ ನಂತ್ರ ಇದ್ಕೆಲ್ಲ ದಿಕ್ಕು ಅಂತಾ ಬೇಡ್ವೆನ್ರ? " ಎಂಬ ಮಾತನ್ನು ಕೇಳುವವರೆಗೆ ಮನೆಯಲ್ಲಿ ಕೊರತೆ ಎಂದು ಏನೂ ಇರಲಿಲ್ಲ... !
ರಾತ್ರಿ ಕೋಣೆಯಲ್ಲಿ ಅಪ್ಪನ ತಾರಕದ ಸ್ವರ, ಅಮ್ಮನ ಬಿಕ್ಕಳಿಕೆ ಎರಡೂ ಕೇಳಿತ್ತು. 
"ಕೆಲಸದವರ ಮಾತನ್ನೂ ಕೇಳುವಂತಾಯಿತಲ್ಲ" ಎಂದು ಗೊಣಗಿಕೊಂಡ ದೇವಪ್ಪ..! ಅಂಗಡಿಗೆ ಬಂದವರೆಲ್ಲ ನಾರು, ಬೇರು, ಸೊಪ್ಪು, ಕಷಾಯ, ಪಾನಕ ಹೇಳುವ ವೈದ್ಯರಾದರು. ಎಲ್ಲದರ ಪ್ರಯೋಗವೂ ನಡೆದಿತ್ತು. 
  ಇಷ್ಟೆಲ್ಲಾ ನಡೆಯುವಾಗ ಸುಲೋಚನೆಗೆ ಹದಿನಾರು ತುಂಬಿತ್ತು..! ಪಾಪ,  ಸಮಯವೆಲ್ಲಿ ಅವಳಿಗೆ? ತಿಂಗಳಲ್ಲಿ ಮೂರು ದಿನ ಹೊರಗೆ ಕೂರಬೇಕು, ಉಳಿದ ದಿನ ಅಡುಗೆ,  ಮನೆಯ ಕೆಲಸ, ಕೊಟ್ಟಿಗೆಯ ಕೆಲಸ, ಯಾರೋ ಹೇಳಿದ ಔಷಧಿಯನ್ನು ಅಮ್ಮನಿಗೆ ಮಾಡಿಕೊಡುವುದರಲ್ಲಿಯೇ ಸಮಯ ಹೋಗುತ್ತಿತ್ತು. ನಯನಳೂ ಮೊದಲಿನಂತೆ ಅಕ್ಕನೊಡನೆ ಜಗಳವಾಡುವುದನ್ನು ಬಿಟ್ಟು, ಅವಳ ಕೆಲಸಗಳಿಗೆ ನೆರವಾಗುತ್ತಿದ್ದಳು. 
ಚಿಕ್ಕಪ್ಪನೊಡನೆ ಗದ್ದೆಗೆ ಹೋಗುವುದು ಹಾಗಿರಲಿ, ಮನೆಯಿಂದಾಚೆ ಕಾಲಿಡುತ್ತಿರಲಿಲ್ಲ. ಅಮ್ಮನೊಡನೆ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಮಾತ್ರ ತಪ್ಪದೇ ಹೋಗುತ್ತಿದ್ದರು. 
ಹೀಗೆ ಒಮ್ಮೆ ಹೋದಾಗ ಯಾರೋ ಹೇಳಿದರು - " ಶಿವಪುರದ ಶಿವ ಭಾಳ ಶಕ್ತಿದೇವ್ರು.. ಏನಾದ್ರು ಹೇಳ್ಕೊಂಡ್ರೆ ಖಂಡಿತಾ ಈಡೇರುತ್ತೆ.ಒಂದು ಹರಕೆ ಹೇಳ್ಕೊಬಿಡಿ..." ಅಲ್ಲೇ ಹರಕೆ ಹೇಳಿಕೊಂಡಳು ಯಶೋದಮ್ಮ. 
ಔಷಧಿ ಎಲ್ಲಾ ಆಯ್ತು.. ಇನ್ನು ಹರಕೆ ಶುರುವಾಯ್ತು.. ಎಂದು ಅಕ್ಕ ತಂಗಿ ಮುಖ ನೋಡಿಕೊಂಡರು..!
ಕಾಕತಾಳಿಯವೋ ಎಂಬಂತೆ ಮರುವರ್ಷ ಯಶೋದಮ್ಮ ಗರ್ಭಿಣಿ ! ಅಮ್ಮ ಒಂದೇ ಒಂದು ಕೆಲಸವನ್ನೂ ಮಾಡಲು ಬಿಡಲಿಲ್ಲ ಯಶೋದಮ್ಮ. ಅವಳಿಗೆ ಮಾಡಲು ಸಾಧ್ಯವಾಗುತ್ತಲೂ ಇರಲಿಲ್ಲ ! 
ಜೋರು ಮಳೆಗಾಲದ ಒಂದು ಸಂಜೆ ಯಶೋದಮ್ಮನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಆಗಿನ್ನೂ ಎಂಟು ತಿಂಗಳ ಬಸುರಿ ಅವಳು. ಅಪ್ಪ ಅಂಗಡಿಯಲ್ಲಿದ್ದಾನೆ, ಚಿಕ್ಕಪ್ಪ ಗದ್ದೆಯಿಂದ ಇನ್ನೂ ಬಂದಿಲ್ಲ. ಅಮ್ಮ ನೆಲದ ಮೇಲೆ ಒದ್ದಾಡುತ್ತಿದ್ದಾಳೆ. ಅವಳನ್ನು ನೋಡಿ ನಯನಾ ಬಿಕ್ಕುತ್ತಿದ್ದಾಳೆ. 
ಸುಲೋಚನೆ ಒಂದು ನಿಮಿಷ ಏನೂ ತೋಚದಂತೆ ನಿಂತುಬಿಟ್ಟಳು. ಊರ ಕೊನೆ ಮನೆಯ ಸೂಲಗಿತ್ತಿ ಶಾಂತಾಳನ್ನು ಕರೆತರಲು ನಯನಾಳನ್ನು ಓಡಿಸಿದಳು. 

ಧೋ ಎಂದು ಸುರಿಯುವ ಮಳೆ. ಏನೂ ಮಾಡುವಂತೆ ಇರಲಿಲ್ಲ. ಹೋಗಿ ಅಮ್ಮನ ಕೈ ಹಿಡಿದು ಕಣ್ಮುಚ್ಚಿ ಕುಳಿತಳಷ್ಟೇ..! ಧಾರಾಕಾರವಾಗಿ ನೀರು ಕೆನ್ನೆಯ ಮೇಲೆ ಇಳಿಯುತ್ತಿತ್ತು. 
ನಯನಾ ಶಾಂತಾಳನ್ನು ಕರೆದುಕೊಂಡು ಬಂದಳು. 
"ಪಟೇಲಮ್ಮ.. ಏನೂ ಆಗಲ್ಲ.. ನಾ ಬಂದೀನಿ.." ಎನ್ನುತ್ತಾ ಒಳಹೊಕ್ಕಳು. ನಯನಾ ಮತ್ತೆ ಓಡಿದಳು, ಅಪ್ಪ ಚಿಕ್ಕಪ್ಪರನ್ನು ಕರೆತರಲು..
ಸುಲೋಚನೆಗೆ ಅಮ್ಮನ ಕೈಹಿಡಿದು ಅವಳ ಜೊತೆಯಲ್ಲೇ ಇರುವ ಆಸೆ. ಆದರೆ 'ಅದು ತಗೊಂಡ್ಬಾ, ಇದು ತಗೊಂಡ್ಬಾ..' ಎಂದು ಓಡಿಸುತ್ತಿದ್ದಳು ಶಾಂತ.  ದೇವಪ್ಪ, ಮಾಧವ, ನಯನಾ ಬರುವ ಹೊತ್ತಿಗೆ ಅಕ್ಕ ಪಕ್ಕದ ಮನೆಯವರೆಲ್ಲ ಸೇರಿದ್ದರು. ಅರ್ಧ ಗಂಟೆಯ ನಂತರ ಶಾಂತ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಹೊರಬಂದಳು. 
ದೇವಪ್ಪನ ಕೈಗೆ ಕೊಡುತ್ತ, "ಗಂಡು ಮಗು" ಎಂದಳು. ಅವನ ಖುಷಿಗೆ ಪಾರವೇ ಇರಲಿಲ್ಲ. "ಗಂಡು ಬೇಕು ಸರಿ.. ಆದ್ರೆ ಈ ವಯಸ್ನಾಗೇ ಯಸೊದಮ್ಮಂಗೆ ಬ್ಯಾಡಾಗಿತ್ತು. ಉಳಿತದ್ಯೋ ಇಲ್ಲೋ ಅಂದ್ಕಂಡೆ.." ಶಾಂತ ಹೇಳುತ್ತಿದ್ದ ಮಾತನ್ನು ಕೇಳುವ ಸ್ಥಿತಿಯಲ್ಲಿ ದೇವಪ್ಪನಿರಲಿಲ್ಲ.
ಮೊದಲ ಬಾರಿಗೆ ಸುಲೋಚನೆಯ ಕಣ್ಣಲ್ಲಿ ಅವಳಪ್ಪನೆಡೆಗೆ ತಾತ್ಸಾರದ ನೋಟವನ್ನು ಗಮನಿಸಿದ ಮಾಧವ !
ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಳು ಯಶೋದಮ್ಮ. ಬಾಳಂತಿಯ ಸಂಪೂರ್ಣ ಆರೈಕೆಯನ್ನು ಅವಳ ಮಗಳು ಮಾಡಿದಳು ! ಮಗುವಿನ ಉಚ್ಚೆ ಬಟ್ಟೆ ತೊಳೆಯುವುದರಿಂದ, ಬಾಳಂತಿಗೆ ಸ್ನಾನ ಮಾಡಿಸುವವರೆಗೆ ಪ್ರತಿ ಕೆಲಸವೂ ಸುಲೋಚನೆಯದೇ. " ನೀ ಯಾವ ಜನ್ಮದಾಗೆ ನನ್ನವ್ವ  ಆಗಿದ್ಯೇ? " ಎನ್ನುತ್ತಿದ್ದಳು ತಾಯಿ. ಪೂರ್ತಿ ಬೆಳವಣಿಗೆಯಾಗದೆ ಎಂಟೇ ತಿಂಗಳಿಗೆ ಹುಟ್ಟಿದ್ದ ಪುಟ್ಟ ಕಂದನನ್ನು ಸುಲೋಚನೆ ಅದೆಷ್ಟು ಜೋಪಾನ ಮಾಡಿದಳೆಂದರೇ ಮೂರೇ ತಿಂಗಳಲ್ಲಿ ಸುಧಾರಿಸಿದ್ದ. 
ಮಗುವಿಗೆ ಏನು ಹೆಸರಿಡುವುದು ಎಂದು ಎಲ್ಲರೂ ಚರ್ಚಿಸುವಾಗ, "ಶಿವನ ಪ್ರಸಾದ ಇವ್ನು.." ಎಂದಳು ಯಶೋದಮ್ಮ. ಶಿವಪ್ರಸಾದ ಎಂದೇ ಹೆಸರಿಟ್ಟರು. 
ಒಂದು ರೂಪಾಯಿ ದಾನ ಮಾಡು ಎಂದರೂ ಅದರಿಂದೇನು ಪ್ರಯೋಜನ ಎನ್ನುವ ದೇವಪ್ಪ ಮಗ ಹುಟ್ಟಿದ ಖುಷಿಗೆ ಊರಿಡೀ ಸಿಹಿ ಹಂಚಿದ್ದ. 
ಬದುಕಲ್ಲಿ ಮಗನ ಆಗಮನದಿಂದ ದೇವಪ್ಪ ಬಹಳ ಬದಲಾಗಿದ್ದ. ಅಂಗಡಿಯಿಂದ ಬೇಗ ಮನೆಗೆ ಬಂದು ಮೂರು ಮಕ್ಕಳ ಜೊತೆ ಸಮಯ ಕಳೆಯುತ್ತಿದ. 
ಒಮ್ಮೆ ಇದ್ದಕ್ಕಿದ್ದಂತೆ ಮಗನ ಅರೋಗ್ಯ ಹದಗೆಟ್ಟಿದ್ದನ್ನು ಕಂಡು ಯಶೋದಮ್ಮ ಬಹಳ ಕೊರಗಿದಳು. ಊರಲ್ಲಿರುವ ಎಲ್ಲಾ ನಾಟಿವೈದ್ಯರಿಗೆ ಮಗುವನ್ನು ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಯಶೋದಮ್ಮ ಮಗು ಉಳಿಯುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದಳು. 
ಒಮ್ಮೊಮ್ಮೆ ಏನೇನೋ ಬಡಬಡಿಸುತ್ತಿದ್ದಳು. ಹೆಂಡತಿ ಎಲ್ಲಿ ಹುಚ್ಚಿಯಾಗಿಬಿಡುತ್ತಾಳೋ ಎಂಬ ಭಯ ದೇವಪ್ಪನಿಗೆ..!
"ಶಿವ ಸೂಚ್ನೆ ಕೊಡ್ತಿದಾನೆ. ನಾವಿನ್ನೂ ಹರಕೆ ತೀರಿಸಿಲ್ಲ. ಶಿವಪುರಕ್ಕೆ ಹೋಗ್ಬೇಕು .." ನಿಂತಲ್ಲಿ ಕುಂತಲ್ಲಿ,  ಇದೇ ಜಪ. 
ಕೊನೆಗೊಂದು ದಿನ ದೇವಪ್ಪ, "ಆಯ್ತು ಮಾರಾಯ್ತಿ.. ಹೋಗೋಣ..ಅದೇನು ಹರಕೆ ಕಟ್ಕೊಂಡಿದೀಯೋ  ಹೋಗಿ ತೀರಿಸಿ ಬರೋಣ" ಎಂದಿದ್ದ. 
ಅಪ್ಪನ ಮಾತನ್ನು ಕೇಳಿಸಿಕೊಂಡ ಸುಲೋಚನೆ ಆಗಲೇ ಶಿವಪುರಕ್ಕೆ ತಾನೂ ಹೋಗುವ ಬಗ್ಗೆ ಕನಸು ಕಂಡಳು.  
ಅರವತ್ತು ಮೈಲಿ ದೂರ ಪ್ರಯಾಣಿಸುವ ಆಸೆಯೋ, ದೋಣಿಯ ಪ್ರಯಾಣದ ಕುತೂಹಲವೊ, ಮುಂದಿನ ಘಟನೆಗಳ ಸೂಚನೆಯೋ... 
ಅಂದು ರಾತ್ರಿ ಎಷ್ಟೇ ಪ್ರಯತ್ನಿಸಿದರೂ ನಿದ್ರಾದೇವಿಯ ಕೃಪಾಕಟಾಕ್ಷವೇ ದೊರೆಯಲಿಲ್ಲ ಅವಳಿಗೆ..!!

No comments:

Post a Comment

ಕರಗುವೆ...