Thursday, July 16, 2020

ಮಳೆ..

(ಇವತ್ತಿನ ಮಳೆ ಇದನ್ನೆಲ್ಲಾ ಬರೆಸಿದೆ. ನನ್ನ ಮನೆಯ ಸುತ್ತ ಮುತ್ತ ಕಾಣುವುದು ಮಾತ್ರವೇ ಇದೆ ಇಲ್ಲಿ..)
ಎಂಥ ಮಳೆ ಮಾರಾಯ್ರೆ ಇದು.. 
ಅತ್ಲಾಗೆ ಕರೆಂಟು ಇರಾಕಿಲ್ಲ.. 
ಇತ್ಲಾಗೆ ನೆಟ್ವರ್ಕ್ ಬರಾಕಿಲ್ಲ.. 

ಆದ್ರೂ........ 
ಮಳೆ ಅಂದ್ರೆ ಮಳೆ..... ಗದ್ದೆಗಳೆಲ್ಲ ತುಂಬಿ ಹರೀತಾ ಇದೆ.. ಮೇಲಿನ ಗದ್ದೆಯಿಂದ ಕೆಳಗಿನ ಗದ್ದೆಗೆ ಬೀಳುವ ನೀರು ಉದ್ದದ ಜಲಪಾತದ ರೀತಿಯಲ್ಲಿ ಕಾಣ್ತಿದೆ.  ಹಳ್ಳದಲ್ಲಿ ತುಂಬಿದ ಕೆಂಪು ನೀರು ಕೊಡಲಲ್ಲಿ (ಗದ್ದೆಗಳ ಕೊನೆಯಲ್ಲಿ ನೀರು ಹರಿಯಲು ಸ್ವಲ್ಪ ಆಳಕ್ಕೆ ತೋಡಿರುವುದಕ್ಕೆ ನಮ್ಮ ಊರ ಕಡೆ ಕೊಡಲು ಎನ್ನುತ್ತೇವೆ!)  ಹರಿಯುತ್ತಾ ಮಧ್ಯೆ ಎತ್ತರಕ್ಕೆ ಸೊಕ್ಕಿನಿಂದ ಬೆಳೆದು ನಿಂತ ಅಚ್ಚ ಹಸಿರ ಹುಲ್ಲನ್ನು ತಲೆಬಾಗಿಸಿದೆ. ಹೊಳೆಯ ಸೇರುವ ಧಾವಂತದಲ್ಲಿ ತನ್ನ ವೇಗವನ್ನು ಹೆಚ್ಚಿಸಿ,  ಕಸವನ್ನೆಲ್ಲ ತನ್ನೊಳಗೆ ತುಂಬಿಕೊಳ್ಳುತ್ತ, ಬೇಸಿಗೆಯಲ್ಲಿ ಕೊಳ್ಳದ ಪಕ್ಕ ಉದುರಿದ ಮಾವಿನೆಲೆಗಳನ್ನೆಲ್ಲ ದೂಡುತ್ತಾ ಮುಂದೆ ಸಾಗುತ್ತದೆ.  ನಾವು ತಿಂದೂ,  ಮರದಲ್ಲಿ ಉಳಿದ ಹಲಸಿನ ಹಣ್ಣು, ಕೊನೆಗೆ ತೊಟ್ಟು ಕಳಚಿ ನೆಲಕ್ಕೆ ಪಚ್ಚ್ ಎಂದು ಬಿದ್ದು ರಾಡಿಯಾಗಿ ಸುತ್ತ ನಾಲ್ಕು ದಿಕ್ಕಿಗೂ ಘಮ (ಅತ್ತ ಗಳಿತ ಹಣ್ಣಿನ ಪರಿಮಳವೂ ಅಲ್ಲದ, ಇತ್ತ ಕೊಳೆತ ಹಣ್ಣಿನ ವಾಸನೆಯೂ ಅಲ್ಲದ) ತುಂಬಿಸುತ್ತದೆ. ಅಲ್ಲೆಲ್ಲೋ ನಾಲ್ಕಾರು ನಂಜುಳಗಳು ಸುತ್ತುತ್ತವೆ. ಉಂಬಳಗಳು ತಾವಿನ್ನೂ ಅಸ್ತಿತ್ವದಲ್ಲಿದ್ದೇವೆ ಎಂದು ರಕ್ತ ಹೀರುತ್ತವೆ. ಮನೆಯಲ್ಲಿರುವವರ ಸೌಖ್ಯ ವಿಚಾರಿಸಲು ಬಸವನಹುಳು, ಚೋರಟೆಗಳೆಲ್ಲ ಲಗ್ಗೆ ಇಡುತ್ತವೆ. ಹಳ್ಳದ ತುದಿಯಲ್ಲಿ ಕಪ್ಪೆಗಳ ಸಾಮ್ರಾಜ್ಯ ವಟರ್ ಗುಟರ್ ಎನ್ನುತ್ತಿರುತ್ತವೆ. ಸಂಜೆಯಾಗುವ ಮುನ್ನವೇ ಸೂರ್ಯ ಗುಡ್ ಬೈ ಹೇಳುತ್ತಾನೆ. ಬೆಳಗಿನಿಂದ ಸಣ್ಣದಾಗಿ ಹಾಡುತ್ತಿರುವ ಜೀರುಂಡೆಗಳು ತಮ್ಮ ಧ್ವನಿಯೇರಿಸುತ್ತವೆ. ಭತ್ತ ನಾಟಿ ಮಾಡುವವರು ಅಲ್ಲಲ್ಲಿ ಮೀನಿನ ಅಂಡೆ ಹಾಕಿದ್ದು, ಸಣ್ಣ ಮೀನು ಸಿಕ್ಕರೂ ರಾತ್ರಿಯ ಚಳಿಗೆ ಒಳ್ಳೆ ಊಟ ಎಂದು ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಅಲ್ಲಲ್ಲಿ ಕಾಣುವ ಕಂಬಳಿ ಕೊಪ್ಪೆ, ಬಣ್ಣ ಬಣ್ಣದ ಪ್ಲಾಸ್ಟಿಕ್ ಕೊಪ್ಪೆ, ಹರಿದ ರೈನ್ ಕೋಟು,ತೂತು ಬಿದ್ದ ಛತ್ರಿ...  ಇವೆಲ್ಲವನ್ನೂ ಮಾತಾಡಿಸಿ ಕೊಡಲಿನ ನೀರು ಹೊಳೆಗೆ ಸೇರುವಾಗ ಇಳಿಜಾರಿನಲ್ಲಿ ಧಾರೆಯಾಗುತ್ತದೆ. ಅಲ್ಲೇ ಪಕ್ಕದಲ್ಲಿದ್ದ ನೇರಳೆ ಮರದ ಮೇಲೆ ನೆಲದತ್ತ ಮುಖ ಮಾಡಿದ ಸೀತಾಳೆ ಹೂವು ಸಣ್ಣಗೆ ನಗುತ್ತದೆ. ಹೊಳೆಯಾಚೆ ಅರಳಿ ನಿಂತ ಅಣಬೆ ಮುದುಡಿ ನೆಲವನ್ನಪ್ಪುತ್ತದೆ.

ಬಚ್ಚಲ ಒಲೆ ಮಾತ್ರವೇ ಬೆಚ್ಚಗೆ !
ಆ ಜಾಗ ಎಂದಿಗೂ ನಮ್ಮನೆಯ ಬೆಕ್ಕಿಗೆ...!!

1 comment:

  1. ತಂಪಾದ ವಾತಾವರಣ ಚಂದದ ಬರಹ ಬರೆಸಿದೆ 😊

    ReplyDelete

ಕರಗುವೆ...