Friday, July 31, 2020

ಮತ್ತೆ ಕಾಡಿದ ಮಳೆಯ ನೆನಪು - 4


ಸುಲೋಚನೆಯ ಮನಸ್ಸು ಆಲೋಚನೆಯಲ್ಲಿ ಮುಳುಗಿತ್ತು. 
ನೀಲಕೂಟ ಬಿಟ್ಟು ಬೇರೆ ಯಾವುದಾದರು ಊರನ್ನು ನೋಡಿದ್ದರೆ ಅದು ತನ್ನ ಅಜ್ಜಿಮನೆ ಮಾತ್ರ..! ವರುಷಕ್ಕೊಮ್ಮೆ ದೀಪಾವಳಿಗೆ ಮಾವ ಕರೆದಾಗ ಎಲ್ಲರೂ ಹೋಗುವುದು, ಬೀರನ ಗಾಡಿಯಲ್ಲಿಯೇ. ಒಂದು ದಿನ ಉಳಿದು, ಅಪ್ಪ ಮತ್ತು ಬೀರ ಹಿಂದಿರುಗುತ್ತಾರೆ. ನಾವೆಲ್ಲ ನಾಲ್ಕಾರು ದಿನ ಉಳಿದು ಕೇರಿಯ ಮಕ್ಕಳೊಡನೆ ಆಡಿ, ಕುಣಿದು, ಹೊಳೆ-ಬೆಟ್ಟ ಎಂದು ಸುತ್ತುತ್ತೇವೆ. ಕೊನೆಗೆ ಮಾವ ಎತ್ತಿನಗಾಡಿಯಲ್ಲಿ ನಮ್ಮನ್ನು ಊರಿಗೆ ಕಳುಹಿಸುತ್ತಾರೆ. ಮತ್ತೆ ಹೋಗೋದು ಮರುವರ್ಷವೇ !!
ಆದರೆ ಹಿಂದಿನ ದೀಪಾವಳಿಗೆ ಹೋಗಿಯೇ ಇಲ್ಲ, ಶಿವು ಚಿಕ್ಕವನು ಎಂದು. ಈ ಬಾರಿಯೂ ಏನು ಕತೆಯೋ..!!
"ಯೇ ಬೀರಾ, ಗುಂಡಿ ಹಾರಿಸ್ಬೇಡ.. ಶಿವೂ ಮೊದಲ್ನೇ ಸಲ ಗಾಡಿ ಹತ್ತಿರೋದು.. ವಾಂತಿ ಆದ್ರೆ ಕಷ್ಟ..!!"
ಯೋಚನೆಯಿಂದ ವಾಸ್ತವಕ್ಕೆ ಮರಳಿದಳು ಸುಲೋಚನಾ. ಅವಳ ಮಡಿಲ ಮೇಲಿದ್ದ ಶಿವೂ ತನ್ನ ಮುಂದಿರುವ ಚೀಲಗಳನ್ನೆಲ್ಲ ಎಳೆದಾಡಲು ಪ್ರಯತ್ನಿಸುತ್ತಿದ್ದ. 
"ಸುಮ್ನೆ ಕೂತ್ಕೋ ಶಿವೂ.." ಮೆಲ್ಲನೆ ಗದರಿದಳು. 
ಒಮ್ಮೆ ಅವಳ ಮುಖ ನೋಡಿ, ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.  
ಊರ ದಾಟಿ ಬಹಳ ಸಮಯವಾಗಿತ್ತು. ಇಷ್ಟರಲ್ಲಿಯೇ ನಯನಾ ನಾಲ್ಕು ಬಾರಿ ಕೇಳಿದ್ದಳು.. "ಪಟ್ನ ಇನ್ನೂ ಎಷ್ಟು ದೂರ?.. "
ಅಂತೂ ಬೀರ ಪಟ್ಟಣಕ್ಕೆ ಬರುತ್ತಿದ್ದಂತೆ "ಅಲ್ನೋಡು.. ಸೈಕಲ್ಲು... ಅಲ್ನೋಡು ದೊಡ್ಡ ಗಾಡಿ.." ಎನ್ನಲು ಪ್ರಾರಂಭಿಸಿದ್ದಳು. ನೀಲಕೂಟದಷ್ಟೇ ದೊಡ್ಡ ಊರಾದರೂ, ಬಸ್ಸು ಬರುತ್ತದೆ ಎಂಬ ಕಾರಣಕ್ಕೆ ಹತ್ತು ಅಂಗಡಿಗಳು ಜಾಸ್ತಿ ಇದ್ದವು. ಆ ಕಾರಣಕ್ಕಾಗಿ ಅದೊಂದು ಪಟ್ಟಣ ಎನಿಸಿಕೊಳ್ಳುತಿತ್ತು!
ಬೀರ ಗಾಡಿಯನ್ನು ಸೇಠು ಅಂಗಡಿಯ ಎದುರು ನಿಲ್ಲಿಸಿದ್ದೇ ದೊಡ್ಡ ತಪ್ಪಾಯ್ತು...!
"ಅಪ್ಪಾ, ಅಲ್ಲಿ ಶುಂಠಿ ಪೆಪ್ಪರ್ಮೆಂಟು, ಜೀರ್ಗೆ ಪೆಪ್ಪರ್ಮೆಂಟು ಎಲ್ಲ ಇದೆ. ನಡಿ, ಹೋಗೋಣ.. ನಂಗೆ ಕೊಡ್ಸು.." ಎಂದು ಒಂದೇ ಸಮನೆ ರಾಗ ಎಳೆದಳು. 
"ನಿನಗೆ ಮೊದ್ಲೇ ಹೇಳಿಲ್ವ.. ಏನೂ ಕೇಳ್ಬಾರ್ದು ಅಂತಾ.. ಹೀಗೇ ಹಠ ಮಾಡ್ತಿದ್ರೆ ನಾವಷ್ಟೇ ಹೋಗ್ತಿವಿ ನೋಡು, ನೀನು ಬೀರನ ಜೊತೆಗೆ ವಾಪಾಸ್ ಹೋಗ್ಬಿಡು.."
"ಅಪ್ಪಾ, ನೀ ಹೇಳಿದ್ದು ಜಾತ್ರೇಲಿ ಏನೂ ಕೇಳ್ಬೇಡ ಅಂತಾ.. ಇಲ್ಲಲ್ಲ.. ನಂಗೆ ಪೆಪ್ಪರ್ಮೆಂಟು ಬೇಕೇ ಬೇಕು.."
"ಲೋ ಬೀರ.. ನಿಂಗೆ ನಿಲ್ಸೋಕೆ ಬೇರೆ ಜಾಗಾನೇ ಸಿಕ್ಕಿಲ್ವೇನೋ.. ನೋಡಿಲ್ಲಿ ಹೆಂಗೆ ಹಠ ಮಾಡ್ತಾಳೆ ಅಂತ.."
"ಏನಪ್ಪೋರೆ.. ದಿನಾ ಕೇಳ್ತಯ್ತಾ.. ಒಂದಪ ಕೊಡ್ಸುಬುಡಿ.. ನಮ್ಮನೆ ಹುಡ್ರಿಗೂ ತಗ ಬತ್ತೀನಿ.." ಎನ್ನುತ್ತಾ ನಡೆದ. 
"ನೋಡಪ್ಪ.. ಬೀರನೂ ಅವ್ನ ಮಕ್ಳಿಗೆ ಕೊಡಿಸ್ತಾನೆ.."
"ಅವ್ನು ಈ ಬಾರ್ಕೋಲಲ್ಲಿ ಅವ್ನ ಮಕ್ಳು ಹಠ ಮಾಡ್ದಾಗೆಲ್ಲ ಹೊಡೀತಾನೆ...ನಿನಗೆ ಹೊಡ್ದಿದೀನಾ ನಾನು? "
"ಅಪ್ಪ ನಾ ಒಂದು ಹೇಳಿದ್ರೆ, ನೀ ಮತ್ತೊಂದು ಹೇಳ್ತೀಯಾ.."
"ಅಲ್ವೇ.. ಸಣ್ಣಕ್ಕಿ ತರೋಕೆ ಬಂದಾಗೆಲ್ಲ ತಂದು ಕೊಟ್ಟಿಲ್ವಾ.. ಈಗೇನು ಬೀದಿ ಬದಿ ರಂಪಾಟ ನಿಂದು.. ಸುಲೋಚ್ನ, ಶಿವು ಇಬ್ರೂ ಸುಮ್ನೆ ಇಲ್ವಾ.."
"ಅವ್ರಿಗೆಲ್ಲ ಕೊಡಿಸ್ಬೇಡ.. ನಂಗೆ ಮಾತ್ರ ಕೊಡ್ಸು.."
"ಎಷ್ಟು ಅಂತ ಹೇಳ್ತೀರಾ.. ನಾಲ್ಕು ಪೆಪ್ಪರ್ಮೆಂಟು ತರ್ಬಾರ್ದಾ.." ಮಧ್ಯ ಯಶೋದಮ್ಮ ಹೇಳಿದಳು. 
"ನೀನು ಅವರ ಪರವಾಗಿ ಇರ್ತೀಯಾ ಅಂತಾನೆ ಹಂಗೆ ಆಡೋದು ಅವ್ರು.. ದಾರೀಲಿ ಕೇಳಿದ್ದೆಲ್ಲ ಕೊಡ್ಸೋಕೆ ಆಗತ್ತಾ..ತರ್ತೀನಿ ಇರು ಮಾರಾಯ್ತಿ.."
ಗೊಣಗುತ್ತ ಹೋಗಿ ಒಂದಷ್ಟು ಪೆಪ್ಪರ್ಮೆಂಟ್ ತಂದ ದೇವಪ್ಪ. "ನೋಡು, ದಾರಿ ಮಧ್ಯ ಇನ್ನೆಲ್ಲೂ, ಏನೂ ಸಿಗಲ್ಲ. ಈಗ್ಲೇ ತಿಂದು ಖಾಲಿ ಮಾಡ್ಕೊಂಡು ಮತ್ತೆ ರಾಗ ಎಳ್ದ್ರೆ ನೋಡು..."
"ಹೂ.. ಸರಿ ಸರಿ.." ಎನ್ನುತ್ತಾ ಬಾಯಿಗಿಟ್ಟಳು. 
"ನಮ್ಮ ಅಂಗಡಿಲಿ ಯಾಕೆ ಏನೂ ಇಡಲ್ಲ ಅಂತ ಕೇಳ್ತಿದ್ಯಲ್ಲ.. ಇದಕ್ಕೆ.. ಏನಾದ್ರು ಪೆಪ್ಪರ್ಮೆಂಟ್ ಎಲ್ಲ ತಂದ್ರೆ, ಇವಳೇ ತಿಂದು ಖಾಲಿ ಮಾಡ್ತಾಳೆ ನೋಡು.."
"ನೋಡಿದ್ಯಾ ಅಕ್ಕಾ, ಅಪ್ಪಂಗೆ ನನ್ನ ಕಂಡ್ರೆ ಭಯ..!" ಪಿಸುಗುಟ್ಟಿದಳು ನಯನಾ. 
ಅರ್ಧಗಂಟೆಯೊಳಗೆ ಬಸ್ಸು ಬಂತು. ಮುದುಕಿಯೊಬ್ಬಳು ಕೋಲೂರುತ್ತಾ ಬಂದಂತೆ, ಹೆಜ್ಜೆಯ ಮೇಲೊಂದು ಹೆಜ್ಜೆಯಿಡುತ್ತ ಬರುತ್ತಿತ್ತು. ಡ್ರೈವರಪ್ಪ ಇಪ್ಪತ್ತು ಮಾರು ಹಿಂದೆಯೇ ಬ್ರೇಕ್ ಹಾಕಿದ ಕಾರಣ ಕೀಮ್ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಾ, ಇವರಿಗಿಂತ ಐದು ಮಾರು ಮುಂದೆ ಹೋಗಿ ನಿಂತಿತ್ತು..!!
ಬೀರ ಧಡಧಡನೆ ಎಲ್ಲ ಚೀಲಗಳನ್ನು ಹತ್ತಿಸಿದ. ಮಡಿ ಬಟ್ಟೆ, ತೆಂಗಿನ ಕಾಯಿ,  ದೀಪದ ಎಣ್ಣೆ ಎಲ್ಲ ತುಂಬಿದ್ದ ಹರಕೆಯ ಚೀಲ ಮಾತ್ರ ಯಶೋದಮ್ಮನ ಕೈಲಿತ್ತು. ಎಲ್ಲರೂ ಹತ್ತಿ ಕುಳಿತರು. ಅಕ್ಕ ತಂಗಿಯರು ಕಿಟಕಿಯ ಜಾಗ ನನಗೆ - ನನಗೆ ಎಂದು ಮೊದಲು ವಾದ ಮಾಡಿಕೊಂಡರೂ ನಂತರ ಅದು ಯಶೋದಮ್ಮನ ಪಾಲಾಯ್ತು..!
ನಿಧಾನವಾಗಿ ಬಸ್ಸು ಬುಸ್ ಎನ್ನುತ್ತಾ ಮುಂದೆ ಸಾಗಿತು. ಹೆಚ್ಚು ಕಡಿಮೆ ಎರಡು ತಾಸಿನ ಪ್ರಯಾಣ ! ರಸ್ತೆಯೋ.. ಆಹಾ.. ಶಿವನೇ ಮೆಚ್ಚಬೇಕು. ಶಿವಪುರಕ್ಕೆ ಹೋಗುತ್ತದೋ, ಸೀದಾ ಕೈಲಾಸಕ್ಕೆ ಕರೆದೊಯ್ಯುವ ಹಾದಿಯೋ..!!
ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಊರು ದಾಟಿ, ಕಾಡು ಪ್ರಾರಂಭವಾಗಿತ್ತು. ದಟ್ಟ ಕಾಡು..ಸೂರ್ಯ ಕಷ್ಟಪಟ್ಟು ನೆಲವ ನೋಡಬೇಕಷ್ಟೆ !
ಆ ದಟ್ಟಾರಣ್ಯದಲ್ಲಿ ಒಬ್ಬನೇ ಮನುಷ್ಯ ಸಂಚರಿಸುವುದು ಅತೀ ವಿರಳ. ಒಂದೋ ಎತ್ತಿನಗಾಡಿ ಹೋಗಬೇಕು, ಇಲ್ಲವೇ ಬಸ್ಸು! ಅಲ್ಲೊಂದು ಮಣ್ಣ ರಸ್ತೆ ಬಿಟ್ಟು ಇನ್ನೆಲ್ಲಿಯೂ ಹಾದಿ ಕಾಣುವುದೇ ಇಲ್ಲ. ಪಟ್ಟಣದಿಂದ ಶಿವಪುರಕ್ಕೆ ಹೋಗಲು ಇದೊಂದೇ ಮಾರ್ಗ. ಮಧ್ಯೆ ಮತ್ಯಾವುದೇ ಊರಿಲ್ಲ. ಮಳೆಗಾಲದಲ್ಲಂತೂ ಶಿವಪುರ ಬೇರೆಲ್ಲ ಊರುಗಳೊಡನೆ ತನ್ನ ಸಂಪರ್ಕ ಕಡಿದುಕೊಳ್ಳುತ್ತದೆ. ಕೇವಲ ಇದೊಂದೇ ಊರಿಗಾಗಿ ಬಸ್ಸು ಯಾಕೆ ಬರಬೇಕು?  ಅದರಲ್ಲೂ ಮಳೆಗಾಲದಲ್ಲಿ ಶ್ವೇತನದಿ ದಾಟುವ ಹುಂಬ ಧೈರ್ಯವನ್ನು ಪರವೂರಿನ ಯಾವೊಬ್ಬನೂ ಮಾಡುವುದಿಲ್ಲ. 
ಇನ್ನೂ ಮಧ್ಯಾಹ್ನವಾಗದಿದ್ದರೂ, ದಟ್ಟಕತ್ತಲು ಆವರಿಸಿತ್ತು. ದೇವಪ್ಪ, ಯಶೋದಮ್ಮ, ನಯನಾ ಎಲ್ಲರೂ ನಿದ್ದೆ ಮಾಡುತ್ತಿದ್ದರು. 
ಅವರನ್ನೆಲ್ಲ ನೋಡಿ ಸುಲೋಚನೆ ಮುಗುಳ್ನಕ್ಕಳು. 
"ಎಲ್ಲರಿಗೂ ಒಳ್ಳೆ ತೊಟ್ಲಲ್ಲಿ ಮಲಗ್ಸಿ ತೂಗ್ತಾ ಇರೋ ಹಂಗೆ ಅನ್ನಿಸ್ತಾ ಇದ್ಯೇನೋ.. ಎಲ್ಲರೂ ಮಲಗಿಬಿಟ್ರು.. ಈ ನಯ್ನಾ ದೊಡ್ಡದಾಗಿ ಹೇಳ್ತಿದ್ಲು.. ಮೊದಲ್ನೇ ಸಲ ಬಸ್ಸಿಗೆ ಹೋಗೋದು ಮಜವಾಗಿರತ್ತೆ ಅಂತ.. ಈಗ ನೋಡಿದ್ರೆ ಬಾಯಿ ಕಳ್ಕೊಂಡು ಜೊಲ್ಲು ಹರಿಸ್ತಾ ಮಲ್ಗಿದಾಳೆ.. ಅಮ್ಮ ಹೇಳೋದು ಸುಳ್ಳಲ್ಲ.. ಕುಂಭಕರ್ಣನ ತಂಗಿನೇ ಇವ್ಳು...!"
ಅವಳ ಯೋಚನೆಯಿಂದ ಹೊರತರಲು ಬಸ್ಸು ಎಡಕ್ಕೆ ವಾಲಿತು. "ಈ ಡೈವರಪ್ಪ ಏನು ಬಸ್ಸು ಬಿಡ್ತಾನಪ್ಪ.. ಸೊಂಟ ಎಲ್ಲ ನೋವು ಬಂತು..." ಎಂದು ಗೊಣಗುತ್ತ ಹೊರಗೆ ನೋಡಿದಳು. 
ದೈತ್ಯಾಕಾರದ ಮರಗಳನ್ನೆಲ್ಲ ಹಿಂದೆ ಹಾಕಿ, ಬಸ್ಸು ಕಾಡಿನ ಮೌನವನ್ನು ಸೀಳುತ್ತ ಮುಂದೆ ಸಾಗುತ್ತಿತ್ತು. ಕೆಲವು ಮರಗಳು ಬಸ್ಸಿನ ಒಳಗೆ ಇಣುಕಿ ಎಷ್ಟು ಜನರಿದ್ದಾರೆ ಎಂದು ತಪಾಸಣೆ ಮಾಡುತ್ತಿದ್ದವು! 
ಹಿಂದೆ ಸರಿಯುವ ಮರಗಳನ್ನು ನೋಡುತ್ತಾ ಕುಳಿತಳು ಸುಲೋಚನಾ.. 
"ಅಬ್ಬಾ.. ಎಂಥ ಮರಗಳು ಇಲ್ಲಿ.. ನಮ್ಮ ಊರಲ್ಲಿರೋ ಮರಗಳಿಗಿಂತ ಭಾಳ ದೊಡ್ಡದಾಗಿವೆ.ಒಂದೊಂದು ಎಲೆಯೂ ಅಪ್ಪನ ಎರಡೂ ಅಂಗೈ ಸೇರಿಸಿದಷ್ಟು ದೊಡ್ಡ ! ಎರಡು ಜನ ಸೇರಿ ಒಂದು ಮರ ತಬ್ಬಿದರೂ, ಕೈ ಜೋಡಿಸೋಕೆ ಅಗಲ್ವೇನೋ..ರಾತ್ರಿ ಎಲ್ಲ ನೋಡಿದ್ರೆ ರಾಕ್ಷಸ ಅಂತ ಹೆದ್ರೋದೇ ಮತ್ತೆ..."
ಬೆಳಿಗ್ಗೆ ಬೇಗ ಎದ್ದ ಕಾರಣವೋ ಏನೋ, ಅವಳೂ ತೂಕಡಿಸತೊಡಗಿದಳು. 
ಎಷ್ಟೋ ಹೊತ್ತಿನ ನಂತರ ಡ್ರೈವರಪ್ಪ ಬ್ರೇಕ್ ಹಾಕಿದ ಸದ್ದಿಗೆ ಎಲ್ಲರಿಗೂ ಎಚ್ಚರವಾಯಿತು. 
"ಇಳೀರಿ, ಇಳೀರಿ.. ಇದೇ ಕೊನೆ ಸ್ಟಾಪ್... ಮುಂದೆ ಹೋಗಲ್ಲ.. ಬೇಗ ಬೇಗ ಇಳೀರಿ.." ತಾರಕದಲ್ಲಿ ಕೂಗುತ್ತಿದ್ದ. 
ಬಸ್ಸಿನಲ್ಲಿದ್ದ ಎಂಟ್ಹತ್ತು ಮಂದಿ ಗಡಿಬಿಡಿಯಿಂದ ಇಳಿದರು. 
"ಅಪ್ಪಾ, ಬಸ್ಸು ಕಾಡು ದಾಟಿದಮೇಲೆ, ನದಿ ದಾಟಬೇಕು ಅಂದ್ಯಲ್ಲ.. ಇಲ್ಲಿ ನೋಡಿದ್ರೆ ಏನೂ ಇಲ್ಲ.."
"ನದಿ ದಾಟಬೇಕು ನಯ್ನಾ.. ಇಲ್ಲಿಂದ ಎರ್ಡು ಮೈಲಿ ನಡೀಬೇಕು.. ನೋಡು, ಕಾಲ್ದಾರಿ ಕಾಣ್ತಾ ಇದ್ಯಾ, ಹೀಗೇ ಹೋಗ್ಬೇಕು.."
"ಅಪ್ಪಾ... ಹಸಿವಾಯ್ತು..."
"ಇಲ್ಲೆಲ್ಲೂ ಊಟ ಮಾಡೋ ಹಾಗಿಲ್ಲ. ನದಿಬುಡದಲ್ಲಿ ಮಾಡೋಣ.. ಬೇಗ ಬೇಗ ಹೆಜ್ಜೆ ಹಾಕಿ.." ಎಂದ ದೇವಪ್ಪ. 
"ಇದೇನಪ್ಪಾ.. ಬರೀ ಬೇವಿನಮರವೇ ಇದೆ ಇಲ್ಲಿ..."
"ಅದ್ಕೆ ಇದನ್ನ ಬೇವಿನ ಕಾಡು ಅಂತಾರೆ."
"ನಮ್ಮನೆ ಏನಾದ್ರು ಇಲ್ಲೇ ಇದ್ದಿದ್ರೆ..  ಬೇವಿನಸೊಪ್ಪು ತಂದು ಅಮ್ಮ ಪಾಯ್ಸಕ್ಕೂ ಒಗ್ಗರಣೆ ಹಾಕ್ತಿದ್ಲು..!!"
ಎಲ್ಲರೂ ನಗುತ್ತಾ ಮುಂದೆ ಸಾಗಿದರು. 
"ಎಂಥಾ ಬೇವಿನ ಕಾಡಿದು..ವಯಸ್ಸಾದ ದಪ್ಪನೆ ಬೇವಿನಮರ.. ಅದ್ರ ಎಲೆ ಅಂತೂ ಎಷ್ಟು ಹಸಿರು.. ಇನ್ನು ಆ ಮರದ ಮಕ್ಕಳೆಲ್ಲ ಆಳೆತ್ತರಕ್ಕೆ ಹದವಾದ ಮರವಾಗಿವೆ, ಅವರ ಮಕ್ಳು ಇನ್ನೂ ಬೆಳಿತಾ ಇವೆ.  ಫಳ ಫಳನೆ ಹೊಳೆಯೋ ಚಿಗುರು ಎಲೆ ಅವ್ರದ್ದು... ನೆಲದ ಮೇಲೆ ಇನ್ನೂ ಒಂದೇ ಅಡಿ ಮೇಲೆದ್ದಿರೋ ಪುಟ್ಟ ಪುಟ್ಟ ಗಿಡಗಳು.. ಹೆಜ್ಜೆ ಹೆಜ್ಜೆಗೂ ಕಾಲಿಗೆ ಸಿಗ್ತವೆ.. ಬೇವಿನೆಲೆಯ ಘಮ ಬಿಟ್ರೆ.. ಇನ್ನೇನೂ ಇಲ್ಲ.." ಸುಲೋಚನೆ ಎಂದಿನಂತೆ ತನ್ನೊಳಗೆ ಮಾತನಾಡಿಕೊಳ್ಳುತ್ತಿದ್ದಳು. ಹೊಸದನ್ನು ನೋಡಿದ ತಕ್ಷಣ ತನ್ನನ್ನೇ ತಾನು ಮರೆತು, ಹೊಸದೇ ಆದ ಮಾತಿಗಿಳಿಯುತ್ತದೆ ಅವಳ ಮನಸ್ಸು!!
"ಇಲ್ಲಿ ಮಣ್ಣು ಎಷ್ಟು ಮೆತ್ತಗೆ ಇದೆ ನೋಡ್ರಿ.. ಈಗ ತಾನೇ ಮಳೆ ಬಂದು ಹೋಗಿರೋ ಥರಾ ಹಸಿಯಾಗಿದೆ..."
"ನದಿ ಹತ್ರಾನೇ ಇದ್ಯಲ್ಲೇ.. ಅದ್ಕೆ ಹಾಗೇ.."
"ಅಪ್ಪಾ ನದಿ ಎಷ್ಟು ದೊಡ್ಡ ಇರತ್ತೆ?  ಅಜ್ಜಿ ಮನೆ ಹೊಳೇಲೇ ನಾನು ಮುಳುಗಿ ಹೋಗ್ತೀನಿ.. ಇದು ಅದಕ್ಕಿಂತ ದೊಡ್ಡ ಇರತ್ತಾ? "
"ಅಲ್ಲೇ ಹೋಗ್ತಿದೀವಲ್ಲೇ..ನೀನೆ ನೋಡಬಹುದು..."
ಮಾತನಾಡುತ್ತ ದಾರಿ ಸಾಗಿದ್ದೇ ತಿಳಿಯಲಿಲ್ಲ. ಎಲ್ಲರೂ ನದಿಬುಡಕ್ಕೆ  ಬಂದಿದ್ದರು. 
ಹೊಟ್ಟೆ ಕಾದ ಕಾವಲಿಯಂತೆ ಚುರುಗುಡುತ್ತಿತ್ತು..!
"ಎಲ್ಲ ಕೈ ತೊಳ್ಕೊಂಡು ಬನ್ನಿ.. ನಾನು ಬುತ್ತಿ ಚೀಲ ಬಿಚ್ಚತೀನಿ" ಎಂದು ಯಶೋದಮ್ಮ ಹೇಳಿದಾಗ, ಅಕ್ಕ ತಂಗಿ ನದಿಯತ್ತ ಓಡಿದರು. 
"ಹುಷಾರು ಕಣ್ರೆ.. ಮುಂದೆ ಹೋಗ್ಬೇಡಿ.." ಹಿಂದಿನಿಂದ ದೇವಪ್ಪನ ಧ್ವನಿ ಬಂದಿತ್ತು. 
ಕೈ ತೊಳೆಯುವಾಗ ನದಿಯಲ್ಲಿ ಸಣ್ಣ ಅಲೆ ಕಂಡು, ತಲೆ ಎತ್ತಿದಳು ಸುಲೋಚನಾ. ದೋಣಿಯೊಂದು ಇವರಿದ್ದ ಕಡೆಗೇ ಬರುತ್ತಿತ್ತು. 
ಆಗ ಕಂಡವನು ಅವನು, ಎದೆಯೊಳಗೆ ಅಲೆ ಸೃಷ್ಟಿಸುವವನು...... 







No comments:

Post a Comment

ಕರಗುವೆ...