Thursday, July 2, 2020

ಸ್ವಚ್ಛತೆಯ ನೆಪದಲ್ಲಿ ಪುಗಸಟ್ಟೆ ಉಪದೇಶ !!

ಊರಲ್ಲಿ ಮೊನ್ನೆ ದೊಡ್ಡ ಗಲಾಟೆ. ಯಾವುದೊ ಛತ್ರದಲ್ಲಿ ಮದುವೆ ಮುಂತಾದ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮದ ನಂತರ ಊಟದ ಬಾಳೆ, ಪ್ಲಾಸ್ಟಿಕ್ ಬಟ್ಟಲು, ಲೋಟ, ಕಾಗದ ಎಲ್ಲ ರೀತಿಯ ತ್ಯಾಜ್ಯಗಳೂ ನಮ್ಮೂರಿನ ರಸ್ತೆಯ ಪಕ್ಕದಲ್ಲಿ ವಿಲೇವಾರಿಯಾಗುತ್ತಿತ್ತು. ಇದರ ಬಗ್ಗೆ ದೂರು ಸಲ್ಲಿಸಿದ್ದರು ಊರಿನ ಹಿರಿಯರು.
 ಇನ್ನು ಸಂಜೆಯಾಯಿತೆಂದರೆ ಗುಂಪುಗೂಡಿ ಬಂದು ನಮ್ಮೂರಿನ ಕಟ್ಟೆಯ ಮೇಲೆ ಕುಳಿತು ತಮ್ತಮ್ಮ ಸುಖ-ದುಃಖಗಳನ್ನೂ ಹೇಳಿಕೊಳ್ಳುತ್ತ ಮೂರ್ನಾಲ್ಕು ಬಾಟಲಿಗಳ ಜೊತೆ ದುಂಡು ಕಟ್ಟೆಯ ಸಭೆ ನಡೆಸುವವರಿಗೂ ಪೊಲೀಸರು ಸ್ವಚ್ಛತಾ ಅಭಿಯಾನದ ಪಾಠ ಮಾಡಿದರು. 
ಹೀಗೇ ಐದುನೂರು -ಸಾವಿರ ಜನರಿರುವ ಪುಟ್ಟ ಪಟ್ಟಣವನ್ನು ಪೊಲೀಸರೊ, ಮತ್ಯಾವುದೋ ಅಧಿಕಾರಿಯೋ ತಮ್ಮ ಮಾತುಗಳಲ್ಲಿ, ಸಾಧ್ಯವಾಗದಿದ್ದಲ್ಲಿ ಅಧಿಕಾರ ಚಲಾಯಿಸಿಯಾದರೂ ಕೆಲವು ನಿಯಮಗಳನ್ನು ಪಾಲಿಸುವಂತೆ ಮಾಡುತ್ತಾರೆ. 

ಆದರೆ ಲಕ್ಷಗಟ್ಟಲೆ ಜನರಿರುವ ಮಹಾನಗರಗಳ ಪರಿಸ್ಥಿತಿ ಹಾಗಿಲ್ಲ..! ಅಧಿಕಾರಿಗಳ ಎದುರು  "ನಿಮ್ಮ ಹೈಯರ್ ಆಫೀಸರ್ ಗೊತ್ತು ನನಗೆ..", " ನನಗೂ ಕಾನೂನು ಗೊತ್ತಿದೆ ರೀ.." ಎಂದು ಧ್ವನಿ ಏರಿಸಿ ಮಾತನಾಡುವವ ಅಕ್ಷರಸ್ಥ ನಾಗರೀಕ ಎಂದಿಗೂ ತನ್ನ ತಪ್ಪನ್ನು ಒಪ್ಪಿಕೊಳ್ಳಲಾರ. ಎಷ್ಟೆಂದರೂ ಅವನ ಪ್ರತಿಷ್ಠೆಯ ಪ್ರಶ್ನೆಯಲ್ಲವೇ..!!

'ಬೆಂಗಳೂರು' ಎಂಬ ಮಹಾನಗರಿಯಂತೂ ಬಂದವರನ್ನೆಲ್ಲ ಸ್ವಾಗತಿಸಿ, ಕೋಟಿ ಜನರ ಕನಸುಗಳನ್ನು ತನ್ನೊಡಲೊಳಗೆ ಇರಿಸಿಕೊಂಡು, ಯಾವ ಟ್ರಾಫಿಕ್ ಸಿಗ್ನಲ್ ಅನ್ನೂ ಲೆಕ್ಕಿಸದೇ ಕಾಲದೊಂದಿಗೆ ನುಗ್ಗಿ ಓಡುತ್ತಲೇ ಇದೆ.  
ಸೂಕ್ಷ್ಮವಾಗಿ ಗಮನಿಸಿದರೆ ದಿನವೂ ಓಡಾಡುವ ರಸ್ತೆಯಲ್ಲಿ, ಕ್ಯಾಂಟೀನ್ ಅಲ್ಲಿ, ಬಸ್ ಸ್ಟ್ಯಾಂಡಿನಲ್ಲಿ, ಟ್ರಾಫಿಕ್ ಅಲ್ಲಿ ಲೆಕ್ಕಕ್ಕೆ ಸಿಗದಷ್ಟು ಅನುಭವಗಳು. 
ಕೆಲವೇ ತಿಂಗಳುಗಳ ಹಿಂದೆ ನಡೆದ ಎರಡು ಪುಟ್ಟ ಘಟನೆಗಳು, ಒಂದಕ್ಕೊಂದು ಸಂಬಂಧವಿರದಿದ್ದರೂ ಎಲ್ಲವೂ ಒಂದೇ ರೀತಿ ಎನ್ನುವಂತೆ ಭಾಸವಾಗುತ್ತವೆ. 

1. ಲಲಿತಾ ಆಂಟಿಯ ಉಪದೇಶ 
ಪಕ್ಕದ ಮನೆಯ ಲಲಿತಾ ಆಂಟಿ ಬಾಗಿಲಲ್ಲಿ ನಿಂತು ಮಾತನಾಡಲು ಪ್ರಾರಂಭಿಸಿದರೆ, ಅಂದು ನಮ್ಮ ಬಸ್ ತಪ್ಪಿ ಹೋಗುವುದು ಖಂಡಿತ. ತಮ್ಮ ಮನೆಯ ತಿಂಡಿಯಿಂದ ಪ್ರಾರಂಭವಾಗಿ, ಮೋದಿಯವರ ಭಾಷಣದವರೆಗೂ ಹೋಗುತ್ತಿತ್ತು ಅವರ ಮಾತು. ಆದರೆ ನಾವು ಅವರನ್ನು ಮೆಚ್ಚಲು ಕಾರಣವಿತ್ತು. ಆಂಟಿಯ ಮನೆ ತುಂಬಾ ಕ್ಲೀನ್. ಸ್ವಚ್ಛತೆಯ ವಿಷಯದಲ್ಲಿ ಎಂದಿಗೂ ನೋ ಕಾಂಪ್ರಮೈಸ್ ಎನ್ನುತ್ತಾರೆ ಆಂಟಿ. ಹಾಗಾಗಿ ಅಪ್ಪಿ ತಪ್ಪಿ ಅವರು ನಮ್ಮ ಮನೆಗೆ ಬರುತ್ತಾರೆಂದರೆ ಎಲ್ಲವನ್ನೂ ಒಪ್ಪವಾಗಿರಿಸುತ್ತಿದ್ದೆವು. 
ಎಂದೂ ಬೇಗ ಹೊರಡದ ನಾವು ಅವತ್ತು ಮಾತ್ರ ಆರು ಗಂಟೆಗೆ ಮನೆಯಿಂದ ಹೊರಬಂದೆವು.  ಪಕ್ಕದ ಮನೆಯ ಹಿತ್ತಲಿನ ಕಾಂಪೌಂಡ್ ಒಳಗೆ ತಮ್ಮ ಮೊಮ್ಮಗನ ಡೈಪರ್, ಮತ್ತೊಂದಿಷ್ಟು ಕಸಗಳನ್ನು ಎಸೆದು ತಿರುಗಿದ ಆಂಟಿಗೆ ಎದುರು ಕಂಡಿದ್ದು ನಾವು. ಪಾಪ ಅವರ ಮುಖವೆಲ್ಲ ಹುಳ್ಳಹುಳ್ಳಗೆ.. ಇಷ್ಟು ಬೇಗ ಎದ್ದುಬಿಟ್ರೆನಮ್ಮ.. ಎನ್ನುತ್ತಾ ನಮ್ಮ ಉತ್ತರಕ್ಕೂ ಕಾಯದೆ ಮನೆಯೊಳಗೆ ನಡೆದರು. 
ಸ್ವಚ್ಛವಾಗಿರದಿದ್ದರೆ ಆ ಖಾಯಿಲೆ ಬರುತ್ತದೆ, ಸೋಮಾರಿಯಾಗುತ್ತಾರೆ ಎಂದೆಲ್ಲ ಬಿಟ್ಟಿ ಉಪದೇಶ ಕೊಡುತ್ತಿದ್ದ ಆಂಟಿ ಈಗ ನಮ್ಮನ್ನು ಮಾತನಾಡಿಸಲೂ ಬರುವುದಿಲ್ಲ...!!

2.ನಿಮ್ಮಂಥ ಯುವಕರು ಮನಸ್ಸು ಮಾಡ್ಬೇಕು... 
ಗೆಳೆಯನೊಬ್ಬ ತನ್ನ ಸಾಮಾಜಿಕ ಜಾಲತಾಣದ ಗೋಡೆಯ ಮೇಲೆ ಬರೆದುಕೊಂಡಿದ್ದ. ಆಫೀಸಿನ ಕ್ಯಾಬ್ ಗಾಗಿ ಕಾಯುತ್ತ ನಿಂತಿರುವಾಗ ತನ್ನ ಎಂದಿನ ರೂಢಿಯಂತೆ ಬಬ್ಬಲ್ಗಮ್ ಒಂದನ್ನು ಬಾಯಿಗೆ ಹಾಕಿಕೊಂಡು ಅದರ ಪ್ಲಾಸ್ಟಿಕ್ ಸಿಪ್ಪೆಯನ್ನು ಅಲ್ಲೇ ಇದ್ದ ಕಸದ ಬುಟ್ಟಿಗೆ ಹಾಕಿದ. ಅದು ಬುಟ್ಟಿಯ ಪಕ್ಕದಲ್ಲಿ ಬಿದ್ದಿದ್ದನ್ನು ಅವನು ಗಮನಿಸಲಿಲ್ಲ. ಅಲ್ಲೇ ವಾಕಿಂಗ್ ಮಾಡುತ್ತಿದ್ದ ಹಿರಿಯರೊಬ್ಬರು ತಮ್ಮ ಬಾಯಲ್ಲಿದ್ದ ಪಾನ್ ಮಸಾಲವನ್ನು ರಸ್ತೆಯಲ್ಲೇ ಪಿಚಕಾಯಿಸಿ ಇವನ ಬಳಿ ಬಂದು, "ನಿಮಗೆ ಅಂತಾನೆ ಸ್ವಚ್ಛತೆ ಬಗ್ಗೆ ಇಷ್ಟು ಜಾಗೃತಿ ಮೂಡಿಸ್ತಾ ಇರೋದು. ನಿಮ್ಮಂಥ ಯುವಕರು ಮನಸ್ಸು ಮಾಡ್ಬೇಕು..ರೋಡಿನಲ್ಲಿ ಕಸ ಎಸೀತೀರಾ.. ನಮ್ಮ ಮನೆಗೇ ಬರತ್ತೆ. ನಿಮಗೆಲ್ಲ ಯಾವಾಗ ಬುದ್ಧಿ ಬರುತ್ತೋ ಏನೋ.." ಎಂದು ಧ್ವನಿ ಏರಿಸಿದರು. 
ಅವನು ಹೇಳಿದ್ದು -"ಪ್ಲಾಸ್ಟಿಕ್ ಸಿಪ್ಪೆ, ಅದೂ ಕಸದ ಬುಟ್ಟಿಗೇ ಎಸೆದಿದ್ದು.  ಸ್ವಚ್ಛತೆಯ ಪಾಠ ಮಾಡಲು ಮಹಾನುಭಾವರೊಬ್ಬರು ಪಾನ್ ಮಸಾಲಾವನ್ನು ರಸ್ತೆಯ ಮಧ್ಯ ಉಗುಳಿದರು. ಪಾಪ, ಅದು ಅವರ ಪಾಠದಲ್ಲಿರಲಿಲ್ಲವೇನೋ...!"

ಹೀಗೇ ಉಪದೇಶ ಕೊಡುವವರು ಬೀದಿಯಲ್ಲೊಬ್ಬರು ಸಿಗುತ್ತಾರೆ. ಹಿರಿಯರ ಮಾತನ್ನು ನಾವು ನಿರ್ಲಕ್ಷಿಸುತ್ತೇವೆ ಎಂದಲ್ಲ, ಅವರೇ ತಮ್ಮ ಮಾತಿನಂತೆ ನಡೆಯುವುದಿಲ್ಲ ಎಂದಾದಲ್ಲಿ ಇನ್ಯಾರು ಕೇಳುತ್ತಾರೆ? 
ಕೆಲವು ದಿನಗಳ ಹಿಂದೆ ಬಿ.ಎಂ.ಟಿ.ಸಿ. ಬಸ್ಸಿನಲ್ಲಿ ಆಂಟಿಯೊಬ್ಬರು ಬ್ಯಾಗಿನಲ್ಲಿದ್ದ ಕಾಗದ ಕಸಗಳನ್ನೆಲ್ಲ ಹೆಕ್ಕಿ ತೆಗೆಯುತ್ತಿದ್ದರು. ಪಾಪ ಅವರ ವ್ಯಾನಿಟಿ ಬ್ಯಾಗ್ ಸ್ವಚ್ಛ ಮಾಡಲು ಮನೆಯಲ್ಲಿ ಸಮಯವಿರಲಿಲ್ಲವೇನೋ..! ಕಿಟಕಿಯ ಪಕ್ಕ ಕುಳಿತ ನಮಗೆ ಕೊಟ್ಟು ಹೊರಗೆ ಎಸೆಯಿರಿ ಎಂದರು. ಏನೂ ಮಾತನಾಡದೆ ನನ್ನ ಬ್ಯಾಗಿನಲ್ಲಿ ಹಾಕಿಕೊಂಡೆ. "ಓಹ್ಹೋ ಸ್ವಚ್ಛ ಭಾರತಾನಾ.. ಈಗ ಇದೊಂದು ಜೋರಾಗಿಬಿಟ್ಟಿದೆ. ಪರವಾಗಿಲ್ಲ. ನಿಮ್ಮಂಥವರು ಮನಸು ಮಾಡಿದರೆ ಬೆಂಗಳೂರನ್ನು ಸ್ವಚ್ಛಗೊಳಿಸಬಹುದು" ಎಂದು ಹೇಳಿ ಬಸ್ ಇಳಿದುಬಿಟ್ಟರು ಆಂಟಿ. ಹಾಗಾದರೆ ನಾವು ಬೆಂಗಳೂರಲ್ಲಿ ಇರೋವ್ರ ಎಲ್ಲರ ಬ್ಯಾಗಿನಿಂದ ಕಸ ತಗೊಂಡು ನಮ್ಮ ಬ್ಯಾಗಲ್ಲಿ ಇಟ್ಕೋಳೋದ?  ಅದ್ರಿಂದ ಬೆಂಗಳೂರು ಸ್ವಚ್ಛ ಆಗತ್ತಾ ಈ ಆಂಟಿ ಪ್ರಕಾರ?  ಅಂತಾ ನಾವೂ ಮಾತನಾಡಿಕೊಂಡೆವು...!
ನಮ್ಮ ಏರಿಯಾದ ಕೆಲವು ಮನೆಗಳ ಮುಂದೆ ಬಣ್ಣ ಬಣ್ಣಗಳ ಬೋರ್ಡ್ ಇದೆ. 'ಇಲ್ಲಿ ಕಸ ಹಾಕುವಂತಿಲ್ಲ', 
'ಗಾಡಿ ನಿಲ್ಲಿಸುವಂತಿಲ್ಲ',..ಇವೆಲ್ಲ ಸರಿ. 


'ಇಲ್ಲಿ ನಿಮ್ಮ ನಾಯಿಯ ಹೊಲಸು ಮಾಡಿಸಿದರೆ ಐದುನೂರು ರೂಪಾಯಿ ಕೊಡಬೇಕಾಗುವುದು. ಎಚ್ಚರಿಕೆ!!'.. ಈ ಬೋರ್ಡ್ ನೋಡಿ ಸಣ್ಣ ಅನುಮಾನವಿತ್ತು. ಈ ಮನೆಯ ಯಜಮಾನ ನಾಯಿಯ ಮಲಕ್ಕೆ ದಂಡ ವಿಧಿಸುತ್ತಿದ್ದಾನೆಯೇ ಅಥವಾ ಶುಲ್ಕ ಪಡೆಯುತ್ತಿದ್ದಾನೆಯೇ..?!!
ಏನು ಮಾಡಿದರೂ ಲಾಭವೇ. ವಿಶೇಷ ತಳಿಯ ನಾಯಿಗಳನ್ನು ಸಾಕಿ,  ಅವುಗಳನ್ನು ವಾಕಿಂಗ್ ನೆಪದಲ್ಲಿ ಹೊರಗೆ ಕರೆತಂದು ಇನ್ನೊಬ್ಬರ ಮನೆಯ ಜಾಗದಲ್ಲಿ ಬಹಿರ್ದೆಸೆ ಮಾಡಿಸುವ ಜನರ ನಡುವೆ ಒಬ್ಬ ಹೀಗೂ ಹಣ ಮಾಡಲು ಯೋಚಿಸಿರಬಹುದು. ಹೇಳಿ ಕೇಳಿ ಮನುಷ್ಯ ಬುದ್ಧಿ ಜೀವಿಯಲ್ಲವೇ..? !!

ನನ್ನ ಮನೆ ಸ್ವಚ್ಛವಿರಬೇಕು ಎಂದು ಪಕ್ಕದ ಮನೆಗೆ ಕಸ ಎಸೆದರೆ, ಮನೆ ಸುಂದರವಾಗಿ ಕಾಣಬಹುದು..ಮನಸ್ಸಲ್ಲ..!
ಮೊದಲು ಮನಸ್ಸು ಸ್ವಚ್ಛವಾಗಬೇಕು-  ನಂತರ  ಮನೆ, ಊರು, ರಾಜ್ಯ ದೇಶ ಎಲ್ಲವೂ ಸ್ವಚ್ಛವಾಗುತ್ತದೆ. 




No comments:

Post a Comment

ಕರಗುವೆ...