Sunday, July 26, 2020

ಮತ್ತೆ ಕಾಡಿದ ಮಳೆಯ ನೆನಪು - 3

ದೇವಪ್ಪ ಸಿಡಿಮಿಡಿಗೊಂಡಿದ್ದ. ರಾತ್ರಿ ಎಲ್ಲರೂ ಊಟಕ್ಕೆ ಕುಳಿತಾಗ ತುತ್ತನ್ನು ಬಾಯಿಗಿಡುವ ಬದಲು ಹೆಂಡತಿಯನ್ನು ತರಾಟೆಗೆ ತೆಗೆದುಕೊಂಡಿದ್ದ. 
"ನಿಂಗೇನು ಸ್ವಲ್ಪಾನೂ ಬುದ್ಧಿ ಇಲ್ವಾ.. ಹರಕೆ ಹೊತ್ತಿರೋಳು ನೀನು. ಈಗ ನೋಡಿದ್ರೆ ಇಡೀ ಸಂಸಾರನೇ ಕರ್ಕೊಂಡು ಹೋಗ್ಬೇಕು ಅಂತಿಯಲ್ಲ. ಅದೇನು ನಮ್ಮೂರ ದೇವಸ್ಥಾನ ಅಂದ್ಕೊಂಡ್ಯಾ? ಇಲ್ಲಿಂದ ಪಟ್ಣಕ್ಕೆ ಹೋಗೋಕೆ ಎಷ್ಟು ಹೊತ್ತು ಬೇಕು.. ಅದೂ ಎತ್ತಿನಗಾಡಿಯವ್ನು ಕಡಿಮೆ ತಗೊಳ್ತಾನಾ? ಅಲ್ಲಿ ಬಸ್ಸು ಇದ್ರೆ ಪುಣ್ಯ. ಇಲ್ಲಾ ಅಂದ್ರೆ ಮತ್ತೆ ಬಂಡಿಯವ್ನಿಗೆ ಹೇಳ್ಬೇಕು.. ನಲವತ್ತು ಮೈಲಿ ಅಂದ್ರೆ ಅವ್ನೂ ಒಪ್ತಾನೋ ಇಲ್ವೋ.. ಅಲ್ಲಿಂದ ಎರಡು ಮೈಲಿ ನಡೀಬೇಕು, ನದಿ ದಾಟಬೇಕು.ದೋಣಿಯವ್ನೇನು ನಿಮ್ಮ ಮಾವಾನಾ? ಈ ಹಬ್ಬದಲ್ಲಿ ಅವ್ರು ಹೇಳಿದ್ದೇ ಕಾಸು.. ನಾವೇ ನಾಲ್ಕು ಜನ, ಬಟ್ಟೆ, ಹರಕೆ ಸಾಮಾನು ಅಂದ್ರೆ ನಮ್ಗೆ ಒಂದು ದೋಣಿ ಬೇಕು.. 
ಅಲ್ಲಿ ಮತ್ತೆ ಮೂರು ದಿನ ಉಳಿಬೇಕು ಅಂತೀಯಾ. ದೊಡ್ಡ ಜಾತ್ರೆ ಆಗತ್ತೆ ಅಲ್ಲಿ. ಹರಕೆ ತೀರಿಸ್ಬೇಕಾ? ಅಥವಾ ಮಕ್ಕಳು ಎಲ್ಲಿ ಅಂತಾ ನೋಡ್ತಾ ಇರ್ಬೇಕಾ? 
ಇದೆಲ್ಲ ಆಗಲ್ಲ.. "
ಇಷ್ಟೆಲ್ಲಾ ಹೇಳುವ ಹೊತ್ತಿಗೆ ಅಕ್ಕ ತಂಗಿಯರಿಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡು ಅಮ್ಮನತ್ತ ನೋಡುತ್ತಿದ್ದರು. 
ಮಕ್ಕಳ ಮನಸ್ಸನ್ನು ಚೆನ್ನಾಗಿಯೇ ಅರಿತಿದ್ದಳು ಯಶೋದೆ. 
"ಹಾಗಲ್ಲ ರೀ, ಅವ್ರಾದ್ರೂ ಪಾಪ.. ಅಜ್ಜಿ ಮನೆಗೆ ಬಿಟ್ಟು ಇನ್ನೆಲ್ಲಿ ಹೋಗಿದಾರೆ? ಮೊದಲ್ನೇ ಸಲ ಆಸೆ ಪಟ್ಟು ಕೇಳ್ತಿದಾರೆ. ಬಸ್ಸು, ದೋಣಿ, ಜಾತ್ರೆ ಅದನ್ನೆಲ್ಲ ನೋಡ್ಬೇಕು ಅಂತಾ ಅವ್ರಿಗೂ ಆಸೆ ಇರಲ್ವಾ.. " ಮೃದುವಾಗಿ ಹೇಳಿದಳು. 
"ಇಷ್ಟು ಹೇಳಿದ್ರೂ ಅರ್ಥ ಆಗ್ತಿಲ್ವಾ ನಿಂಗೆ? ಅಲ್ಲಿ ಮೂರು ದಿನ ಉಳಿಬೇಕು. ವ್ಯವಸ್ಥೆ ಏನಿದ್ಯೋ ಏನೋ.."
"ನೋಡಿ ಎಷ್ಟು ಸಮಸ್ಯೆ ಇದೇ ಅಂತಾ. ನೀವೂ ಸ್ವಲ್ಪ ಯೋಚ್ನೆ ಮಾಡ್ರಿ.. ಬಟ್ಟೆ, ಹರಕೆ ಸಾಮಾನು ಎಲ್ಲಾ ಹಿಡ್ಕೊಂಡು, ಶಿವೂನೂ ಎತ್ಕೊಂಡು ಓಡಾಡೋಕೆ ನನ್ನಿಂದ ಆಗಲ್ಲ. ಎಷ್ಟು ತುಂಟ ಅವ್ನು. ಈಗಂತೂ ಕೈಗೆ ಸಿಗಲ್ಲ, ಓಡ್ತಾನೆ. ಪೂಜೆ ಮಾಡ್ಸೋವಾಗ ಅವನನ್ನ ನೋಡ್ಕೊಳೋಕೆ ಆಗತ್ತಾ?  ಅವನು ಜಾತ್ರೆ ಮಧ್ಯ  ಓಡ್ತಿದ್ರೆ ಹಿಡ್ಕೊಳೋಕೆ ನಮ್ಮಿಬ್ಬರಿಂದಾನೂ ಸಾಧ್ಯ ಇಲ್ಲ. ಅದೇ ಸುಲೋಚ್ನಾ ಇದ್ರೆ ಏನೂ ತೊಂದ್ರೇನೇ ಆಗಲ್ಲ. ಅವಳ ಜೊತೆಗೆ ಆರಾಮಾಗಿ ಇರ್ತಾನೆ. ನಯ್ನಾ ಚಿಕ್ಕ ಪುಟ್ಟ ಸಹಾಯ ಮಾಡ್ತಾಳೆ."
ಗಂಡನ ಕೋಪವನ್ನು ತನ್ನ ತರ್ಕಕ್ಕೆ ಬಳಸಿಕೊಂಡಳು!!
ಈಗ ಹೇಗೆ ತಾನೇ ಬೇಡವೆನ್ನಲು ಸಾಧ್ಯ !
ಮನಸ್ಸಿಲ್ಲದಿದ್ದರೂ ದೇವಪ್ಪ ಸುಲೋಚನೆಯತ್ತ ನೋಡಿ, "ಹೂ.. ಆಯ್ತಲ್ಲ.. ನಿಮ್ಮ ಬಟ್ಟೆಗಳನ್ನೂ ತುಂಬಿಕೊಳ್ಳಿ. ಮೊದ್ಲೇ ಹೇಳ್ತಿದೀನಿ. ನಾವು ಜಾತ್ರೆ ಸುತ್ತೋಕೆ ಹೋಗ್ತಿಲ್ಲ. ಹರಕೆ ತೀರ್ಸೋದು ಮಾತ್ರ. ಅಲ್ಲಿ ಅದು ಕೊಡ್ಸು, ಇದು ಕೊಡ್ಸು ಅಂತಾ ಹೇಳೋಹಾಗಿಲ್ಲ" ಎಂದ. 
ಇಷ್ಟೇ ಸಾಕಿತ್ತು ಅವರಿಬ್ಬರಿಗೆ. ಖುಷಿಯಿಂದ ಕುಣಿಯುತ್ತ ಒಳಗೋಡಿದರು. ಅಮ್ಮ ಬೆಳಿಗ್ಗೆ ನಾಲ್ಕಕ್ಕೆಲ್ಲ ಏಳಲು ಹೇಳಿದರೂ ರಾತ್ರಿಯಿಡೀ ಮಲಗಲೇ ಇಲ್ಲ. ಯಾವ ಲಂಗ ಹಾಕಿಕೊಳ್ಳಬೇಕು, ಎಷ್ಟು ಬಳೆಗಳನ್ನು ತೆಗೆದುಕೊಳ್ಳಬೇಕು, ದಾವಣಿಗೆ ಹೊಂದುವಂಥ ರಿಬ್ಬನ್ ಇಟ್ಕೊಳ್ಳಬೇಕು. ಮೂರು ದಿನ ಹೊಸದೊಂದು ಊರಲ್ಲಿ ಉಳಿಯಬೇಕು, ಜಾತ್ರೆ ಸುತ್ತಬೇಕು ಎಂದರೆ ಹೆಣ್ಣುಮಕ್ಕಳ ಸಮಸ್ಯೆ ಒಂದೇ.. ಎರಡೇ..!!
ಇಬ್ಬರೂ ಸೇರಿ ಒಂದು ಚೀಲಕ್ಕೆ ತಮ್ಮ ಬಟ್ಟೆಗಳನ್ನು ತುಂಬಿಕೊಂಡರು. ಆ ಊರು ಹಾಗಿರಬಹುದು, ಹೀಗಿರಬಹುದು ಎಂಬ ಮಾತುಕತೆ ನಡೆಯುತ್ತಿರುವಾಗಲೇ, ಇವರ ಮಾತನ್ನು ಕದ್ದು ಕೇಳುವಂತೆ, ಕಿಟಕಿಯೊಳಗೆ ಸೂರ್ಯ ಇಣುಕಿದ್ದ..!
ಯಶೋದಮ್ಮ ಗಡಿಬಿಡಿಯಲ್ಲಿ ಓಡಾಡುತ್ತಿದ್ದಳು. ನಯನಾ ಹರಕೆಗೆ ಬೇಕಾದಂತಹ ಸಾಮಗ್ರಿಗಳನ್ನೆಲ್ಲ ಜೋಡಿಸಿ, ಚೀಲಕ್ಕೆ ತುಂಬಿದಳು. ಸುಲೋಚನೆ ಬುತ್ತಿ ತುಂಬುತ್ತಿದ್ದಳು. 
ಮಧ್ಯೆ ತಿನ್ನಲು ಏನೂ ಸಿಗುವುದಿಲ್ಲ. ಪಟ್ಟಣದಲ್ಲಿ ಬಸ್ಸು ಸಿಕ್ಕಿದರೆ, ನದಿ ತೀರದಲ್ಲಿ ಮಧ್ಯಾಹ್ನ ಊಟ ಮಾಡಬಹುದು. ಎತ್ತಿನಗಾಡಿಯಾದರೆ ಕಾಡ ಮಧ್ಯದಲ್ಲಿ ಊಟ ಮಾಡಬೇಕು. ಸರಿಯಾಗಿ ಬುತ್ತಿ ಕಟ್ಟಿಕೊಳ್ಳಿ ಎಂದು ದೇವಪ್ಪ ಮೊದಲೇ ಹೇಳಿದ್ದ. 
ಶಿವೂನ ಎಬ್ಬಿಸಿ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದ್ದಳು ಯಶೋದಮ್ಮ. 
"ಸುಲೋಚ್ನಾ.. ಕೆಲ್ಸ ಎಲ್ಲಾ ಮುಗ್ದ್ರೆ ಸ್ನಾನಕ್ಕೆ ಹೋಗು.. ನೀರು ಬಿಸಿ ಇದೆ.." ಎಂದು ಅಮ್ಮ ಕೂಗಿದರೆ, ಅದೇ ರಾಗದಲ್ಲಿ ಮಗನೂ "ತುಲೋನಾ.. ತಾನ ಮಾದು.. ನೀಲು ಬಿಚಿ...." ಎಂದು ಮುದ್ದಾಗಿ ತೊದಲಿದ. 
ನಗುತ್ತಾ ಹೋದಳು ಸುಲೋಚನೆ. 
ದೇವಪ್ಪ ಮಾಧವನಿಗೆ ಅಂಗಡಿಯೆಡೆಗೂ ನೋಡಿಕೊಳ್ಳಲು ತಿಳಿಸುತ್ತಿದ್ದ. 
"ಲೇ, ಇವಳೇ.. ಎಷ್ಟು ಹೊತ್ತು ಮಾಡ್ತೀರೇ.. ಅದ್ಕೆ ಹೇಳ್ದೆ, ಈ ಅಕ್ಕ ತಂಗಿರಂತೂ ಕನ್ನಡಿ ಬಿಡೋ ಹಾಗೇ ಕಾಣ್ತಿಲ್ಲ. ನಿಮ್ಮನ್ನ ನೋಡೋಕೆ ಯಾರೂ ಬರಲ್ಲ ಅಲ್ಲಿ.. ಸಾಕು ಬನ್ನಿರೇ.. ಪಟ್ಟಣದಲ್ಲಿ ಬಸ್ಸು ತಪ್ಪಿಹೋದ್ರೆ ಮಾತ್ರ, ಶಿವಪುರಕ್ಕೆ ಹೋಗೋದು ಮಧ್ಯ ರಾತ್ರಿ ಆಗತ್ತೆ.. ಇವಳೇ.. ಕೇಳಿಸ್ತೋ ಇಲ್ವೋ.. ನನ್ನ ಪಂಚೆನೂ ಹಾಕಿದೀಯ ಚೀಲಕ್ಕೆ? "
"ನಿಮ್ಮಪ್ಪ ಆರು ತಿಂಗಳಿಗೇ ಹುಟ್ಟಿರಬೇಕು.. ಬಂದ್ವಿ ಅಂತಾ ಹೇಳು ಹೋಗು. ಅವ್ರ ಚೀಲಕ್ಕೇ ಬಟ್ಟೆ ತುಂಬುತ್ತ ಇರೋದು. ಒಂದು ಕೆಲಸ ಮಾಡ್ಕೊಳಲ್ಲ. ಅಂಗಳಕ್ಕೆ ಹೋಗಿ ನಿಂತು, ಇಡೀ ಊರಿಗೇ ಕೇಳೋ ಥರ ಕೂಗೋದು ನೋಡು.."
ಹೊರಡುವಾಗಲೂ ಇಬ್ಬರ ವಾದವನ್ನು ನೋಡುತ್ತಾ ಓಡಿದಳು ನಯನಾ. 
"ಅಂತೂ ಎಲ್ರೂ ಬಂದ್ರಾ.. ಇವತ್ತೇ ಹೊರಡ್ತೀವೋ ಇಲ್ವೋ ಅಂತಾ ಅನುಮಾನ ಆಗ್ಬಿಟ್ಟಿತ್ತು ನಂಗೆ. ಬನ್ನಿ ಬನ್ನಿ.. ಹೊತ್ತಾಯ್ತು...ಬೀರ ಆಗ್ಲೇ ಬಂದು ನಿಂತಿದಾನೆ. ನಿಮ್ಮಿಂದ್ಲೇ ತಡ ಆಗಿದ್ದು. ಹತ್ತಿ, ಹತ್ತಿ.. ಗಾಡಿ ಹತ್ತಿ.. "
ಬೀರ ತನ್ನ ದೈತ್ಯಾಕಾರದ ಎತ್ತುಗಳನ್ನು ಗಾಡಿಗೆ ಕಟ್ಟಿಕೊಂಡು ಬಂದು ನಿಂತಿದ್ದ. 
ಮೊದಲು ನಯನಾ ಹತ್ತಿಕುಳಿತಳು. ಮಾಧವ ಕೆಳಗಿನಿಂದ ಚೀಲಗಳನ್ನೆಲ್ಲ ಅವಳ ಕೈಗೆ ಕೊಟ್ಟ. 
"ಏನಪ್ಪೋರೆ, ಇನ್ನೊಂದು ಗಾಡಿ ಬೇಕಾಯ್ತದಾ? ಮೂರ್ದಿನಕ್ಕೆ ಊರ್ಬಿಟೊಗಹಂಗೆ ಚೀಲ ತಗಂಡಿರಿ..."
ಬೀರ ರಾಗ ಎಳೆದ. ದೇವಪ್ಪ ಯಶೋದಮ್ಮಳೆಡೆಗೆ ಕೋಪದಿಂದ ನೋಡಿದ. 
"ಸುಮ್ನಿರು ಬೀರಾ.. ಹರಕೆ ತೀರ್ಸಕೆ ಹೋಗದು..ಕಾಯಿ ಎಲ್ಲಾ ಇದೆ. ಜೊತೆಗೆ ಮಕ್ಳ ಬಟ್ಟೆ, ಬುತ್ತಿ.. ಎಲ್ಲಾ ಸೇರಿ ಇಷ್ಟಾಯ್ತು. ಏನು ನಿನ್ನ ಕಾಲ್ಮೇಲೆ ಇಟ್ವಾ? ಸುಮ್ನೆ ಇರೋಕಾಗೋದೇ ಇಲ್ಲ ಆಲ್ವಾ ನಿಂಗೆ? "
ಗಂಡನ ಮೇಲಿನ ಕೋಪಕ್ಕೆ ಬೀರ ಬಲಿಯಾದ..!
ಸುಲೋಚನಾ ಹತ್ತಿ ಕುಳಿತು, ಶಿವೂನ ಎತ್ತಿಕೊಂಡಳು. ಅವಳ ಹಿಂದೆ ಯಶೋದಮ್ಮ, ಕೊನೆಯಲ್ಲಿ ದೇವಪ್ಪ ಕಾಲು ಇಳಿಬಿಟ್ಟು ಕುಳಿತ. 
"ಅಣ್ಣಾ ನೀ ಇಲ್ಲಿದೇನು ಚಿಂತೆ ಮಾಡ್ಬೇಡ. ನಾ ಎಲ್ಲನೂ ನೋಡ್ಕೊಳ್ತೀನಿ. ಆರಾಮಾಗಿ ಹೋಗ್ಬನ್ನಿ." ಎನ್ನುವಷ್ಟರಲ್ಲಿ.. 
"ಮಾಧ್ವಾ.. ಎರ್ಡು ದಿನಕ್ಕೆ ಆಗೋ ಅಷ್ಟು ರೊಟ್ಟಿ ಮಾಡಿಟ್ಟಿದೀನಿ. ಆಚೆ ಮನೆ ಸರೋಜಕ್ಕ ನಿಂಗೆ ಅಡ್ಗೆ ಮಾಡ್ಕೊಡ್ತೀನಿ ಅಂದಿದಾಳೆ. ಮನೆ ಕಡೆ ಹುಷಾರು. ಮಧ್ಯರಾತ್ರಿವರೆಗೂ ಗದ್ದೆಲೇ ಇರ್ಬೇಡ. ಬೇಗ ಮನೆಗೆ ಬಂದ್ಬಿಡು.. ಗದ್ದೆಗೆ ಹೋಗುವಾಗ ಚಿಲ್ಕ ಹಾಕ್ಕೊಂಡು ಹೋಗು.."
"ಆಯ್ತು ಅತ್ಗೆ..."
"ನೀ ಸುಮ್ನಿರೇ.. ಮೂರ್ದಿನ ಗದ್ದೆಗೆ ಹೋಗ್ದೆ ಇದ್ರೆ ಅಲ್ಲೇನು ಕೊಳ್ತು ಹೋಗಲ್ಲ. ಅಂಗಡಿಗೆ ಹೋಗು ಮಾಧ್ವಾ.."
"ಹೂ.. ಆಯ್ತಣ್ಣ.."
"ಏನಪ್ಪೋರೆ... ಹೊರಡಲಾ.." 
"ಮುಹೂರ್ತ ಕೇಳ್ಬೇಕೆನೋ ಬೀರ, ಹೊರಡು ಹೊರಡು.."
ಮಾಧವ ಮುಂದೆ ಬಂದ. 
"ನಯನಾ, ಜಾತ್ರೇಲಿ ಹಠ ಮಾಡ್ಬೇಡ. ಅಮ್ಮನ ಜೊತೇನೆ ಇರು. ಸುಲೋಚ್ನಾ.. ಶಿವು ಜೋಪಾನ..."
"ಹೂ ಚಿಕ್ಕಪ್ಪ..."
"ಬೀರ ನಿಧಾನವಾಗಿ ಹೋಗು, ಬಸ್ಸಿಗೆ ಚೀಲನೆಲ್ಲ ಹತ್ತಿಸಿಕೊಡು..ಬಸ್ಸು ತಪ್ಪಿ ಹೋದ್ರೆ, ಅವರನ್ನೆಲ್ಲ ಬೇವಿನಕಾಡು ದಾಟಿಸಿ ಬಿಟ್ಟು ಬರೋದು ನಿನ್ನ ಜವಾಬ್ದಾರಿ.."
"ಏನಪ್ಪೋರೆ.. ನೀವಿದನ್ನ ನಂಗೆ ಹೇಳ್ಬೇಕಾ?  ಬಿಟ್ಟು ಬತ್ತಿನ್ರಾ.."
"ಹೊಯ್.. ಹೊಯ್.." ಗಾಡಿ ನಿಧಾನವಾಗಿ ಸಾಗಿತು.. 
ಕಾಣುವವರೆಗೂ ಮಾಧವ ನಿಂತು ನೋಡುತ್ತಿದ್ದ. 
ಇದೇ ಕೊನೆಯಬಾರಿಗೆ ಎಂಬಂತೆ ಸುಲೋಚನಾ ಮಾಧವನತ್ತ ಕೈ ಬೀಸಿದಳು.... 
ಗಾಡಿ ಕೊನೆಯ ಮನೆಯ ತಿರುವಿನಲ್ಲಿ ಮುಂದೆ ಸಾಗಿತು... 



No comments:

Post a Comment

ಕರಗುವೆ...