Tuesday, July 7, 2020

ಶಾಲಾದಿನದ ಹುಳಿ-ಸಿಹಿ ನೆನಪು..!

ಬಾಲ್ಯ ಒಂದು ರೀತಿಯಲ್ಲಿ ಬಣ್ಣದ ಬದುಕು, ಕೌತುಕದ ಕಣ್ಣು..ಉತ್ಸಾಹದ ಹೆಬ್ಬಾಗಿಲು.. ಅದೆಷ್ಟೋ ನೆನಪುಗಳ ಬುತ್ತಿಯದು. ಒಮ್ಮೆ ಸಿಹಿ, ಮತ್ತೊಮ್ಮೆ ಹುಳಿ ಒಮ್ಮೊಮ್ಮೆ ಖಾರವಾಗಿದ್ದೂ ಇದೆ. ಕೆಲವು ನೆನಪುಗಳು ಕಹಿಯಾದರೂ, ಬಹಳ ದೊಡ್ಡ ಪಾಠವಾಗಿವೆ. 
ಇಂದು ಒಂದು ಹುಳಿ-ಸಿಹಿಯ ನೆನಪಿನೊಂದಿಗೆ ಬಂದಿದ್ದೇನೆ. 
ಮನೆಯಲ್ಲಿ ಹಬ್ಬ ಎಂದರೆ ಯಾವ ವಾತಾವರಣ ಇರುವುದೋ ಶಾಲೆಯಲ್ಲಿ 'ಸ್ವಾತಂತ್ರ್ಯ ದಿನ', 'ಶಿಕ್ಷಕರ ದಿನ','ಗಾಂಧಿ ಜಯಂತಿ', 'ಕನ್ನಡ ರಾಜ್ಯೋತ್ಸವ', 'ಮಕ್ಕಳ ದಿನ', 'ಗಣರಾಜ್ಯೋತ್ಸವ 'ಗಳಿಗೆ ಅದೇ ವಾತಾವರಣ ಇರುತ್ತದೆ. 
ನಮ್ಮ 'ಬಾಲಿಕೊಪ್ಪ' ಶಾಲೆಯಲ್ಲಿ ನಾಳೆ ಆಚರಣೆ ಎಂದರೆ ಇಂದು ತಯಾರಿ ಪ್ರಾರಂಭವಾಗುತ್ತದೆ. ಶಾಲೆಯ ಎಲ್ಲ ಬಾಗಿಲಿಗೂ ತೋರಣ ಕಟ್ಟುವುದು, ಮೈದಾನವನ್ನು (ನಾವು ಅಂಗಳ ಎಂದಿದ್ದೇ ಹೆಚ್ಚು.. ಯಾಕೆಂದರೆ ಶಾಲೆಗೂ ಮನೆಗೂ ವ್ಯತ್ಯಾಸವಿರಲಿಲ್ಲ..!) ಸ್ವಚ್ಛಗೊಳಿಸುವುದು, ಧ್ವಜದ ಕಟ್ಟೆಯ ಸುತ್ತ ರಂಗೋಲಿ ಬಿಡಿಸುವುದು.. ಈ ಮಧ್ಯೆ ತಂಟೆ -ತರಲೆಗಳು..
ಸೇವಾದಳದವರು ಅವರ ತಾಲೀಮಿನಲ್ಲಿ ಇರುತ್ತಿದ್ದರು. ಕೆಲವು ನೃತ್ಯ ಪ್ರದರ್ಶನ, ಸ್ತಬ್ದಚಿತ್ರ ಪ್ರದರ್ಶನಗಳ ಸಿದ್ಧತೆಯಲ್ಲಿ ಇರುತ್ತಿದ್ದರು. 
ಒಟ್ಟಿನಲ್ಲಿ ಅಂದು ಶಾಲೆಗೆ ರಜೆಯಿಲ್ಲ, ಆದರೂ ತರಗತಿಗಳಿಲ್ಲ..ಹಾಗಾಗಿ ಇಡೀ ಶಾಲೆಯೇ ಗಿಜಿಗಿಜಿ ಎನ್ನುತ್ತಿರುತ್ತಿತ್ತು. 
ಇನ್ನು ಮನೆಗೆ ಬಂದಮೇಲೆ ಮಾರನೇ ದಿನದ ತಯಾರಿ ಕಡಿಮೆ ಇರುತ್ತಿರಲಿಲ್ಲ. ಸಮವಸ್ತ್ರವನ್ನು ಒಪ್ಪವಾಗಿರಿಸಿಕೊಂಡು, ಹುಡುಗಿಯರೆಲ್ಲ ಮಾತನಾಡಿಕೊಂಡಂತೆ ಮ್ಯಾಚಿಂಗ್ ಬಳೆಗಳನ್ನು ಹಾಕಿಕೊಂಡು ಹೋಗುವುದು. ಬೆಳಿಗ್ಗೆ ಹೊರಡುವ ಹೊತ್ತಿನಲ್ಲಿ ಹೂ ಕೊಯ್ಯಲು ಓಡುವುದು. "ಮನೆಯಲ್ಲಿ ದೇವರಿಗೆ ನಾಲ್ಕು ಹೂವು ಕೊಯ್ದಿದ್ದು ಕಂಡಿಲ್ಲ. ಈಗ ಇದ್ದ ಹೂವನ್ನೆಲ್ಲ ತೆಗೆದುಕೊಂಡು ಹೋಗುತ್ತಾಳೆ.." ಮನೆಯೊಳಗಿನಿಂದ ಕೇಳುವ ಧ್ವನಿ ಅದು. 
ನಮ್ಮ ಕಷ್ಟ ನಮಗೆ...! ಹೇಳಿದ್ದಾರಲ್ಲ ಶಾಲೆಯಲ್ಲಿ,  "ಧ್ವಜಕ್ಕೆ ಅಥವಾ ಫೋಟೋಕ್ಕೆ ಹಾಕಲು ಹೂವು ಬೇಕು. ಎಲ್ಲರೂ ಸಾಧ್ಯವಾದಷ್ಟು ತನ್ನಿ.." 
ಯಾರೂ ಹೇಳಿಕೊಳ್ಳದಿದ್ದರೂ ನಮ್ಮೊಳಗೇ (ಹುಡುಗಿಯರು) ಒಂದು ರೀತಿಯ ಸ್ಪರ್ಧೆ. ಕೊನೆಯಲ್ಲಿ  ಹೆಚ್ಚು ಹೂವು ತಂದವರು ಎಲ್ಲರತ್ತ ಗೆಲುವ ನಗೆ ಬೀರುವುದು ಬೇರೆ..!!!
ಈ ಎಲ್ಲ ದಿನಗಳ ಆಕರ್ಷಣೆ ಏನೆಂದರೆ 'ಲಿಂಬು ಪೆಪ್ಪರಮೆಂಟು'.. ! ಆಗ ಇಪ್ಪತ್ತೈದು ಪೈಸೆಗೆ ಸಿಗುತ್ತಿತ್ತು. ಧ್ವಜಾರೋಹಣ ಕಾರ್ಯಕ್ರಮವಾದ ನಂತರ ಎಲ್ಲರಿಗೂ ಹಂಚುವ ಸಿಹಿ ಅದು. ಬಿಟ್ಟ ಕಣ್ಣು, ಬಿಟ್ಟ ಬಾಯಿಯಲ್ಲಿ ಎಲ್ಲರೂ ಹಂಚುವವರ ಕೈಲಿದ್ದ ಪೆಪ್ಪರಮೆಂಟಿನ ಬಟ್ಟಲನ್ನು ನೋಡುತ್ತ ಸಾಲಿನಲ್ಲಿ ನಿಂತಿರುತ್ತಿದ್ದೆವು. ನಿದ್ದೆಯ ಮಂಪರಿನಲ್ಲಿರುವ ನಮಗೆ  ಭಾಷಣ ಮಾಡಲು ಬಂದವರು ತಾವೊಬ್ಬರೇ ಏನನ್ನೋ ಮಾತನಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿತ್ತು.
ಮುಖ್ಯವಾಗಿ ಅಂದು ಹೋಗುವುದೇ ಪೆಪ್ಪರಮೆಂಟಿಗಾಗಿ..!! 
ಶಾಲೆಯ ಪಕ್ಕದ ಅಂಗಡಿಯಲ್ಲೇ ಶುಂಠಿ ಪೆಪ್ಪರಮೆಂಟು,ಲಿಂಬು  ಪೆಪ್ಪರಮೆಂಟು, ಕಟ್ಟಾ-ಮೀಠಾ ಎಲ್ಲ ದೊರೆಯುತ್ತಿದ್ದುದರಿಂದ  ಬಾಯಿ ಚಪಲಕ್ಕೆ ಕೊರತೆಯೇನೂ ಆಗಿರಲಿಲ್ಲ. ದುಡ್ಡು ಎಲ್ಲಿಂದ ಬರುತ್ತಿತ್ತು ಎಂದು ಹೊಸದಾಗಿ ಹೇಳಬೇಕಿಲ್ಲ; ಎಂದೂ ಬರಿದಾಗದ ಅಪ್ಪನ ಜೇಬು ಎಂಬ ಬ್ಯಾಂಕ್ ಖಾತೆಯಿದ್ದಾಗ..! 
ಮಧ್ಯಾಹ್ನ ಊಟವಾದ ನಂತರ ಅರ್ಧ ಗಂಟೆಯ ವಿಶ್ರಾಮದ ಸಮಯದಲ್ಲಿ ನಾಲ್ಕಾರು ಗೆಳತಿಯರು ಸೇರಿ ಸಂಗೀತದ ತರಗತಿಗೆ ಹೋಗುತ್ತಿದ್ದೆವು. ಶಾಲೆಯಿಂದ ಹೊರಟು, ಗುಡ್ಡವನ್ನೇರಿ, ಚರ್ಚಿನ ದಾರಿಯಲ್ಲಿ ಒಂದು ಸುತ್ತು ಹಾಕಿ, ಎಲ್ಲೋ ಬೇಲಿ ಹಾರಿ ನಂತರ ನಮಗೆ ಸಂಗೀತ ಪಾಠ ಹೇಳುವವರ ಮನೆ ಸಿಗುತ್ತಿತ್ತು. ಎಲ್ಲರಿಗೂ ಹೇಳುವುದು - ಇದು ಶಾರ್ಟ್ ಕಟ್ ರೂಟ್ ಎಂದು ! ಸತ್ಯ ನಮಗೆ ಮಾತ್ರ ಗೊತ್ತಿತ್ತು. ಚರ್ಚಿನ ಹಿಂಬದಿಯ ನೆಲ್ಲಿಮರ ಬೇಡವೆಂದರೂ ಅದೇ ದಾರಿಯಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿತ್ತು..!

ಶಾಲೆಯಿಂದ ಹೊರಟರೆ ಅಂಗಡಿ ಇರುವುದೇ ಒಂದು ದಿಕ್ಕು, ಚರ್ಚಿನ ದಾರಿಯೇ ಒಂದು ದಿಕ್ಕು. ಆದರೂ ಒಂದು ಮಧ್ಯಾಹ್ನ ಒಂದಷ್ಟು ಪೆಪ್ಪರ್ಮೆಂಟ್ ಖರೀದಿಸಿಕೊಂಡು, ಚರ್ಚಿನ ಹಾದಿಯಲ್ಲಿ ಸಾಗಿದ್ದೆವು. 
ಚರ್ಚಿನ ಹಿಂಬದಿಗೆ ನಿಧಾನವಾಗಿ ಬಂದು ಶಬ್ದ ಮಾಡದೇ ನಿಂತು, ಯಾರಾದರೂ ನಮ್ಮನ್ನು ನೋಡುತ್ತಿದ್ದಾರೆಯೇ ಎಂದು ಸುತ್ತ ನೋಡಿದೆವು. ಯಾರೂ ಇಲ್ಲ ಎಂಬ ಧೈರ್ಯದಲ್ಲಿ ಒಬ್ಬಳು ನೆಲ್ಲಿಕಾಯಿಗಳು ತುಂಬಿತುಳುಕುತ್ತಿದ್ದ ಗೊಂಚಲೊಂದಕ್ಕೆ ಒಂದು ಕಲ್ಲನ್ನು ಸರಿಯಾಗಿ ಎಸೆದಳು. ಪಟಪಟನೆ ನಮ್ಮ ತಲೆ, ಭುಜ, ಬೆನ್ನಿನ ಮೇಲೆ ನೆಲ್ಲಿಕಾಯಿಗಳ ಸುರಿಮಳೆ...! ಹುಲ್ಲು ರಾಶಿಯ ಮಧ್ಯ ಹುಡುಕಿ, ಹೆಕ್ಕಿ ತೆಗೆದು ಒಂದೊಂದನ್ನು ಬಾಯಿಗೆ ಹಾಕಿ, ಉಳಿದದ್ದನ್ನು ಜೇಬಿಗಿಳಿಸತೊಡಗಿದೆವು. 
ಅಷ್ಟರಲ್ಲಿ ಗೆಳತಿ ಚೀರಿದಳು. ನೋಡಿದರೆ ಸಿಸ್ಟರ್ ಒಬ್ಬರು ಅವಳ ಕಿವಿ ಹಿಂಡುತ್ತಿದ್ದರು. 
"ಕಳ್ಳತನ ಮಾಡ್ತೀರಾ.. ಮನೇಲಿ ಹೇಳ್ಕೊಡ್ತೀನಿ ನೋಡಿ, ನಿಮ್ಮ ಶಾಲೆಗೆ ಕಂಪ್ಲೇಂಟ್ ಮಾಡ್ತೀನಿ." ಕೆಂಪು ಮುಖ ಮಾಡಿಕೊಂಡು ಹೇಳಿದರು. 
ಕಳ್ಳನ ಮುಖ ಹುಳ್ಳಹುಳ್ಳಗೆ..! ಸಿಕ್ಕಿಹಾಕಿಕೊಂಡಿದ್ದಕ್ಕೋ, ಬಾಯಲ್ಲಿ ನೆಲ್ಲಿಕಾಯಿ ಇದ್ದಿದ್ದಕ್ಕೋ.. ಒಟ್ಟಿನಲ್ಲಿ ನಮ್ಮೆಲ್ಲರ ಮುಖಗಳು ಹುಳ್ಳಗಾಗಿದ್ದವು. 
"ಸಿಸ್ಟರ್, ಪ್ಲೀಸ್ ಮನೆಗೆ, ಶಾಲೆಗೆ ಎಲ್ಲ ಹೇಳಿಕೊಡಬೇಡಿ. ಇನ್ನುಮುಂದೆ ಹೀಗೆ ಮಾಡಲ್ಲ. ಈ ದಾರೀಲಿ ಬರಲ್ಲ. ಪ್ಲೀಸ್..." ಅಂತ ಹೇಳುವಷ್ಟರಲ್ಲಿ ಎಲ್ಲರ ಕಣ್ಣು ತುಂಬಿತ್ತು. 
ಅವರಿಗೆ ಏನನ್ನಿಸಿತೋ, ನಕ್ಕರು. ನಾನು ಮುಂದೆ ಹೋಗಿ ಒಂದು ಕೈಲಿ ನೆಲ್ಲಿಕಾಯಿ ಇನ್ನೊಂದು ಕೈಲಿ ಪೆಪ್ಪರ್ಮೆಂಟು ಹಿಡಿದು ಚಿಕ್ಕ ಮುಖ ಮಾಡಿ, "ಸಿಸ್ಟರ್ ಇದನ್ನು ತೆಗೆದುಕೊಳ್ಳಿ. ಇನ್ನು ಮುಂದೆ ಹೀಗೆಲ್ಲ ಮಾಡಲ್ಲ. ಸಾರಿ.." ಎಂದೆ. 
ನಗುತ್ತಾ, ಒಂದು ಪೆಪ್ಪರಮೆಂಟ್, ಒಂದು ನೆಲ್ಲಿಕಾಯಿ ತೆಗೆದುಕೊಂಡು ನನ್ನ ಕೆನ್ನೆ ಚಿವುಟಿ, "ಉಳಿದದ್ದೆಲ್ಲ ನಿಮಗೇ. ಇಟ್ಟುಕೊಳ್ಳಿ. ಇನ್ನುಮುಂದೆ ಕೇಳಿ ತಗೋಳಿ.. ಸರೀನಾ" ಎಂದು ಮುದ್ದು ಮಾಡುತ್ತ ಹೇಳಿ ಹೊರಟುಹೋದರು. 
 ಆಮೇಲೆ ಆ ದಾರಿಯಲ್ಲಿ ಹೋಗುತ್ತಿರಲಿಲ್ಲ. ಒಮ್ಮೆ ದಾರಿಯಲ್ಲಿ ಕಂಡ ಸಿಸ್ಟರ್, "ಏನು ಪುಟ್ಟಾ , ನೆಲ್ಲಿಕಾಯಿ ತಿನ್ನೋದು ಬಿಟ್ಟುಬಿಟ್ಯ? " ಎಂದಿದ್ದರು ನಗುತ್ತಾ. 
"ಇಲ್ಲಾ ಸಿಸ್ಟರ್, ಈಗ ಆ ದಾರಿಯಲ್ಲಿ ಬರುತ್ತಿಲ್ಲ" ಎಂದೆ. 
"ನಾಳೆ ಬಾ, ತುಂಬಾ ನೆಲ್ಲಿಕಾಯಿ ಇದೆ. ತೆಗೆದುಕೊಂಡು ಹೋಗು. ನಿನ್ನ ಫ್ರೆಂಡ್ಸನ್ನೂ ಕರ್ಕೊಂಡು ಬಾ" ಎಂದು ಹೇಳಿ ನಡೆದರು. 
ಮಾರನೇ ದಿನ ಖುಷಿಯೋ ಖುಷಿ.. ಬೊಗಸೆ ತುಂಬಾ ನೆಲ್ಲಿಕಾಯಿ... ತಿಂದಿದ್ದೇ ತಿಂದಿದ್ದು..!!
ಈಗ ನೆಲ್ಲಿಕಾಯಿಯಾಗಲೀ, ಪೆಪ್ಪರ್ಮೆಂಟ್ ಆಗಲೀ ಅಂಗಡಿಯಲ್ಲಿ ಕಾಣುವುದೇ ವಿರಳ. ಕಂಡಾಗ ಬಿಡುವ ಮಾತೇ ಇಲ್ಲ. ಕಳ್ಳತನ ಮಾಡುವುದಿಲ್ಲ, ದುಡ್ಡು ಕೊಟ್ಟೇ ಖರೀದಿಸುವುದು. 
ಬಾಲ್ಯದ ಆ ಕ್ಷಣಗಳನ್ನು ಖರೀದಿಸಲು ಸಾಧ್ಯವಿಲ್ಲ, ಇವುಗಳನ್ನೆಲ್ಲ ಖರೀದಿಸಿ, ಬಾಯಿಯನ್ನು ಹುಳಿ -ಸಿಹಿ ಮಾಡಿಕೊಳ್ಳುತ್ತ, ಆ ಚಿನ್ನದ ದಿನಗಳನ್ನು ನೆನಪುಮಾಡಿಕೊಳ್ಳುವ ಪ್ರಯತ್ನವಷ್ಟೇ...!!!

No comments:

Post a Comment

ಕರಗುವೆ...