Thursday, December 2, 2021

ಲಿಪ್ಸ್ಟಿಕ್

ಮಾಸ್ಕಿನ ಹಿಂದಿನ ಬಣ್ಣವು ನಾನು
ಕೆಂಪು ಕಂದು ಗುಲಾಬಿಯೂ
ಮಾಸಿದ ಕಥೆಯನು ಹೇಳುವೆ ನಾನು
ಮೌನಿ ನನ್ನೊಲವ ರೂಪಸಿಯೂ

ಒಂದಾನೊಂದು ಕಾಲದಲಿ
ನನಗದೆಷ್ಟು ಬೆಲೆಯಿತ್ತು
ಅಭಿಮಾನಿ ಬಳಗವಿತ್ತು
ತುಟಿ ಮೇಲೆ ಜಾಗವಿತ್ತು
ಎಲ್ಲೆಲ್ಲಿಯೂ ನನ್ನದೇ ಕಾರುಬಾರು
ವ್ಯಾನಿಟಿ ಬ್ಯಾಗ್, ಮೇಕ್ಅಪ್ ಕಿಟ್,
ಕನ್ನಡಿ ಎದಿರೂ, ಪರ್ಸಿನ ಬದಿಗೂ
ಬಟ್ಟೆಗೆ ಮ್ಯಾಚಿಂಗ್ ನಾನಿದ್ದೇನೆ
ಹಮ್ಮು ಇರದಿದ್ದೀತೆ..

ಬಂತೊಂದು ಹೆಮ್ಮಾರಿ
ನನ್ನ ಬಲವನಡಗಿಸಲು
ನನ್ನ ಹೊಳಪನಳಿಸಲು

ನಾ ಅನಂತ ರೂಪಗಳ ಪಡೆದೆ
ಕೆಂಪಾಗಿ, ಗುಲಾಬಿಯಾಗಿ, ನೇರಳೆಯಾಗಿ..
ಹೊಳಪಾಗಿ, ಘಮವಾಗಿ..
ಚಾಕ್ ಪೀಸ್,ಪೆನ್ಸಿಲ್, ಬ್ರಷ್ ಗಳ ರೂಪವಾಗಿ..
ಬೆವರಿಗೂ ನೀರಿಗೂ ಕರಗದಿರುವ ಬಲಶಾಲಿಯಾಗಿ...
ಆದರೂ ಸೋತೆ ನಾ..
ನನ್ನ ಮೇಲೆರಗಿದ ಮಾಸ್ಕಿನ ಎದುರು
ಸೋತು ಶರಣಾದೆ ನಾ...

-ಪಲ್ಲವಿ 

No comments:

Post a Comment

ಹೆಣ್ಣು