Thursday, December 2, 2021

ದೊಡ್ಡವರೂ ಓದಬೇಕಾದ ಪುಸ್ತಕ - "ಮಕ್ಕಳು ಓದಿದ ಟೀಚರ್ ಡೈರಿ"

ವೈ. ಜಿ. ಭಗವತಿಯವರ ಇತ್ತೀಚಿನ ಪುಸ್ತಕ "ಮಕ್ಕಳು ಓದಿದ ಟೀಚರ್ ಡೈರಿ". 
ನಾನು ಈ ಮೊದಲು ಮಕ್ಕಳ ಕಥೆಗಳನ್ನು ಓದಿದ್ದೆನಾದರೂ ಮಕ್ಕಳ ಕಾದಂಬರಿಯೊಂದನ್ನು ಓದಿದ್ದು ಇದೇ ಮೊದಲು. ಶಾಲಿನಿ ಎಂಬ ಟೀಚರ್ ಡೈರಿಯ ಸುತ್ತಲಿನ ಕಥೆಗಳಿವು. ಶಿಕ್ಷಕಿ ಊರಲ್ಲಿ ಇರದಿದ್ದಾಗ ಅವರ ವಿದ್ಯಾರ್ಥಿನಿಯರು ಕುತೂಹಲದಿಂದ ಡೈರಿಯನ್ನು ಕದ್ದು ಓದುತ್ತಾರೆ. ಕೆಲವು ಕೌತುಕ ಘಟನೆಗಳು, ಶಿಕ್ಷಕಿಯ ಮನೆಯ ಸ್ಥಿತಿ, ಆಟ ಪಾಠಗಳಲ್ಲಿ ಅವರ ಆಸಕ್ತಿ ಮಕ್ಕಳಲ್ಲಿ ತಮ್ಮ ಟೀಚರ್ ಬಗ್ಗೆ ಹೆಮ್ಮೆ ಮೂಡಿಸುತ್ತವೆ. ಮಕ್ಕಳಿಗೆ ತಮ್ಮ ಟೀಚರ್ ಮೇಲಿದ್ದ ಅಭಿಮಾನ-ಪ್ರೀತಿ, ಪ್ರತಿ ಹಂತದಲ್ಲಿಯೂ ಕಾಣುತ್ತವೆ. ಟೀಚರಿನ ಕಥೆಯನ್ನು ಓದುತ್ತಾ ಮಕ್ಕಳಲ್ಲಿಯೂ ಬದಲಾವಣೆಯಾಗುತ್ತದೆ. ಕೊನೆಯಲ್ಲಿ ಮಕ್ಕಳ ಅನುಭವ ಕಥನಗಳೂ ತೆರೆದುಕೊಳ್ಳುತ್ತವೆ.
ಪ್ರತಿ ಹಂತವೂ ಕೊನೆಯಲ್ಲಿ ಕುತೂಹಲಕಾರಿ ಘಟ್ಟದಲ್ಲಿ ಕೊನೆಗೊಂಡು ಇನ್ಯಾವುದೋ ತಿರುವಿನಲ್ಲಿ ಪ್ರಾರಂಭವಾಗುವುದು ವಿಶೇಷ. ಕಥೆಯ ಜೊತೆಗೆ ಪುಟಗಳ ವಿನ್ಯಾಸ, ಡಾ.ಆನಂದ್ ಪಾಟೀಲರ ರೇಖಾಚಿತ್ರಗಳು,ಪುಸ್ತಕದ ಬಹುಮುಖ್ಯ ಆಕರ್ಷಣೆ..!
ನಮ್ಮ ಮಲೆನಾಡನ್ನೂ ಉತ್ತರ ಕರ್ನಾಟಕವನ್ನೂ ಈ ಕಥೆಗಳಲ್ಲಿ ಟೀಚರ್ ಮೂಲಕ ಬೆಸೆದಿದ್ದಾರೆ ಲೇಖಕರು.
ಈ ಮಕ್ಕಳ ಕಾದಂಬರಿಯನ್ನು ಓದುತ್ತಾ ನಾನು ನನ್ನ ಶಾಲಾ ದಿನಗಳನ್ನು ಒಮ್ಮೆ ಮೆಲುಕು ಹಾಕಿದೆ.

2021ನೇ ಸಾಲಿನ "ಜಿ. ಬಿ. ಹೊಂಬಳ" ರಾಜ್ಯ ಮಟ್ಟದ ಮಕ್ಕಳ ಪುಸ್ತಕ ಪುರಸ್ಕಾರ ಪಡೆದ ಕೃತಿ ಇದು.
ದೊಡ್ಡವರೂ,ಪುಟಾಣಿಗಳೂ ಓದಬೇಕಾದ ಪುಸ್ತಕವಿದು.

ಪುಸ್ತಕ : ಮಕ್ಕಳು ಓದಿದ ಟೀಚರ್ ಡೈರಿ (ಮಕ್ಕಳ ಕಾದಂಬರಿ)
ಲೇಖಕರು : ವೈ. ಜಿ. ಭಗವತಿ
ಒಟ್ಟು ಪುಟಗಳು : 114
ಬೆಲೆ : 110/-

No comments:

Post a Comment

ಕರಗುವೆ...