Monday, August 10, 2020

ಎಲ್ಲಾದರೂ ಇರು.. ಎಂತಾದರೂ ಇರು..

ಅಂದು ತಮ್ಮ ಇದ್ದಕ್ಕಿದ್ದಂತೆ ಕರೆ ಮಾಡಿದ, "ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಟಿಕೆಟ್ ಬುಕ್ ಮಾಡ್ಲಾ? " ಎಂದ. ನನಗೋ ಆಫೀಸ್ ಗಡಿಬಿಡಿ, ಈ ಟ್ರಾಫಿಕ್ಕಿನಲ್ಲಿ ಸಮಯಕ್ಕೆ ಸರಿಯಾಗಿ ಹೋಗಿ ತಲುಪುತ್ತೇನೋ ಇಲ್ಲವೋ ಎಂಬ ಅನುಮಾನ ! "ಇದು ಕೊನೆ ಪ್ರದರ್ಶನ ಮಾರಾಯ್ತಿ ! ನಮಗೆ ಆಮೇಲೆ ಸಿಗತ್ತೋ ಇಲ್ವೋ ಗೊತ್ತಿಲ್ಲ.." ಎಂದು ಕೊನೆಯಲ್ಲಿ ಬಾಂಬ್ ಬೇರೆ ಸಿಡಿಸಿದ್ದ ! ಜನವರಿ ಇಂದಲೇ ಹೋಗಬೇಕೆಂದುಕೊಂಡರೂ ಸಮಯ ಕೂಡಿಬರದೆ ಕಟ್ಟ ಕಡೆಯ ಪ್ರದರ್ಶನಕ್ಕೆ ಇದ್ದಕ್ಕಿದ್ದಂತೆ ಹೊರಟಿದ್ದೆವು! 

ಸ್ವಲ್ಪ ಬಿಡುವಿದೆ ಎಂದು ಸೂಪರ್ ಮಾರ್ಕೆಟ್ ಕಡೆ ಮುಖ ಮಾಡಿದ್ದೆ, ಪರಿಚಿತ ಮುಖವೊಂದು ಮುಗುಳ್ನಕ್ಕಿತು. ಆಗಾಗ ಅವನ ತಾಯಿಯೊಡನೆ ಕಾಣುವ ಪುಟ್ಟ ಪೋರ ಅಮ್ಮನ ಬಳಿ ಏನೋ ಹಠ ಹಿಡಿದಿದ್ದ, ನನ್ನ ನೋಡಿ ಸಣ್ಣ ಮುಖದಲ್ಲೂ ಮುಗುಳ್ನಕ್ಕಿದ್ದ. 
"Mommy, I want Golgappa.."
"No no...it's not healthy.. it's too spicy chinna..you can't eat that"
"Please mommy..."
"No means no" ಎನ್ನುತ್ತಾ ಅವನಮ್ಮ ಮುಂದೆ ಹೋದಳು. 
"ಪುಟ್ಟ, Don't you know ಕನ್ನಡ? " ಎಂದೆ. 
"My mother tongue is Kannada."
"ಹಾಗಾದ್ರೆ ನಿಂಗೆ ಕನ್ನಡ ಬರತ್ತೆ.."
ಅತ್ತ ಇತ್ತ ನೋಡಿ ಮೆಲ್ಲಗೆ, "ಹೊ, ಮನೇಲಿ ಅಜ್ಜಿ ಜೊತೆಗೆ ಕನ್ನಡದಲ್ಲೇ ಮಾತಾಡ್ತೀನಿ" ಎಂದ ಮುದ್ದಾಗಿ. 
"ಸ್ಕೂಲ್ ಅಲ್ಲಿ ಇಂಗ್ಲಿಷ್ ಅಲ್ಲೇ ಮಾತಾಡ್ಬೇಕು ಇಲ್ಲಾ ಅಂದ್ರೆ ಫೈನ್ ಹಾಕ್ತಾರೆ. ಅಲ್ಲಿ ಇಂಗ್ಲಿಷ್ ತಪ್ಪಬಾರದು ಅಂತಾ ಮಮ್ಮಿ ಮನೇಲಿ ಇಂಗ್ಲಿಷ್ ಮಾತಾಡೋಕೆ ಹೇಳ್ತಾಳೆ. ಕನ್ನಡ ಮಾತಾಡಿದ್ರೆ ಚಾಕಲೇಟ್ ಕೊಡಲ್ಲ ಅಂತಾಳೆ. ಅದಕ್ಕೆ ಅಜ್ಜಿ ಜೊತೆಗೆ ಮಾತ್ರ ಕನ್ನಡ ಮಾತಾಡ್ತೀನಿ..."
ಅಷ್ಟರಲ್ಲಿ "chinni, where are you? " ಎಂಬ ಧ್ವನಿ ಕೇಳಿ, "ಬೈ ಬೈ ಅಕ್ಕಾ..."ಎನ್ನುತ್ತಾ ಓಡಿದ. 
ಪಾಪ! ಅತ್ತ ಸ್ಕೂಲ್ ನಲ್ಲಿ ಫೈನ್ ಗೆ ಹೆದರಿ ಇಂಗ್ಲಿಷ್ ಮಾತನಾಡಬೇಕು. ಮನೇಲಿ ಅಮ್ಮನಿಗೆ ಹೆದರಿ ಕನ್ನಡ ಬಳಸಬಾರದು !! 
ಹೀಗೆ ಯೋಚಿಸುತ್ತ ನಿಂತಾಗಲೇ ಕ್ಯಾಬ್ ಡ್ರೈವರ್ ಬಂದಿದ್ದೇನೆ ಎಂದು ಕರೆ ಮಾಡಿದ, ಈ ವಿಷಯ ಅಲ್ಲೇ ಬಿಟ್ಟು ನಾನು ನಾಟಕಕ್ಕೆ ಹೊರಟೆ!!
ತಮ್ಮನಿಗಿಂತ ಮೊದಲು ನಾನು ಕಲಾಗ್ರಾಮಕ್ಕೆ ತಲುಪಿದ್ದೆ. ಅವನು ಬರುವವರೆಗೆ ಏನು ಮಾಡೋದು? ಸುಮ್ಮನೆ ಕಣ್ಣುಹಾಯಿಸಿದೆ. ಹಾ ! ಪುಸ್ತಕದಂಗಡಿ.. ಪುಸ್ತಕಗಳಿಗಿಂತ ಹೆಚ್ಚು ನನ್ನ ಸೆಳೆದದ್ದು ಅಲ್ಲಿ ನಿಂತ ವ್ಯಕ್ತಿ ! 
ಎತ್ತರದ ದೇಹ, ಮುಖದ ಗಾಂಭೀರ್ಯ ಒಂದು ರೀತಿಯ ಗೌರವ ಭಾವನೆ ಮೂಡಿಸಿತು. ಹತ್ತಿರ ಹೋಗಿನಿಂತು ಸುಮ್ಮನೆ ಪುಸ್ತಕಗಳ ಪುಟ ತಿರುವತೊಡಗಿದೆ. ಏಕೋ ಆ ಹಿರಿಯರೆಡೆಗೆ ಕುತೂಹಲ..ಬಿಳಿಯ ನಿಲುವಂಗಿ, ಪಂಜೆ ಧರಿಸಿದವರು ಪ್ರತಿ ಪುಸ್ತಕದ ಬಗ್ಗೆಯೂ ಹೇಳುತ್ತಿದ್ದರು.
 ಕೊನೆಗೆ ಪುಸ್ತಕ ಕೊಡುವಾಗ ಚಪ್ಪಲಿ ತೆಗೆದು ನಿಂತು, ಗ್ರಾಹಕನ ಕೈಗೆ ತಮ್ಮ ಎರಡೂ ಕೈಗಳಿಂದ ಪುಸ್ತಕ ಕೊಟ್ಟು, ಹಣ ಪಡೆದು ಕೈ ಮುಗಿದು ನಮಸ್ಕರಿಸುತ್ತಿದ್ದರು ಮತ್ತೆ ಬನ್ನಿ ಎನ್ನುತ್ತಾ.. ಹಸ್ತಲಾಘವ ಮಾಡಬಹುದಿತ್ತಲ್ಲ (ಆಗೇನು ಕೊರೊನ ಬಂದಿರಲಿಲ್ಲ ನಮ್ಮ ದೇಶಕ್ಕೆ!!) ಎಂದುಕೊಳ್ಳುತ್ತ ಮತ್ತೆ ಗಮನಿಸಿದೆ. ಹೌದು, ಪ್ರತಿಯೊಬ್ಬರಿಗೂ ಪುಸ್ತಕ ಕೊಡುವಾಗ ಹೀಗೆಯೇ ಮಾಡುತ್ತಾರೆ. ಅಲ್ಲಿ ಗ್ರಾಹಕರನ್ನು ಓಲೈಸುವ ಯಾವ ಭಾವನೆಯೂ ಇಲ್ಲ, ನಾಟಕೀಯತೆ ಇಲ್ಲ.. ನನ್ನ ಕುತೂಹಲ ಹೆಚ್ಚುತ್ತಲೇ ಹೋಯ್ತು. ಮೊದಲ ಬಾರಿ ನಾನು ಇಂತಹ ವ್ಯಕ್ತಿಯನ್ನು ನೋಡಿದ್ದು.. 

"ಇವರು ಚಪ್ಪಲಿ ತೆಗೆದು ಬರಿಗಾಲಲ್ಲಿ ನಿಂತು ಯಾಕೆ ಪುಸ್ತಕ ಕೊಡುತ್ತಾರೆ? ಅದೂ ಎರಡೂ ಕೈಗಳಿಂದ ಪುಸ್ತಕ ಹಸ್ತಾಂತರಿಸುವಾಗ ಸ್ವಲ್ಪ ಬೆನ್ನು ಬಾಗಿರುತ್ತದೆ. ಪ್ರೀತಿಯಿಂದಲೋ..? ಪುಸ್ತಕ ಸರಸ್ವತಿ ಎಂದಿರಬಹುದೇ? ಹಣ ಲಕ್ಷ್ಮಿ ಎಂದೇ? Customer is god ಎಂಬುದನ್ನು ಹೀಗೆ ಪಾಲಿಸುತ್ತಿರಬಹುದೇ?! ಯಾಕೆ ಹೀಗೆ ಮಾಡುತ್ತಿರಬಹುದು?.. " ನನ್ನೊಳಗೆ ಅದೆಷ್ಟು ಪ್ರಶ್ನೆಗಳು!!
ಕೊನೆಗೆ ಎರಡು ಪುಸ್ತಕಗಳನ್ನಾರಿಸಿ ದುಡ್ಡು ಕೊಡಲೆಂದು ಹೋದೆ. ಎರಡೂ ಚಪ್ಪಲಿ ತೆಗೆದುನಿಂತರು. ಕತ್ತಲಲ್ಲಿ ಕಿರುಗಣ್ಣಿನಿಂದ ಪುಸ್ತಕದ ಬೆಲೆಯೆಷ್ಟು ಎಂದು ನೋಡುತ್ತಿದ್ದರು. ಕುತೂಹಲವನ್ನು ತಡೆಯಲಾರದೇ, "ಸರ್ ನೀವು ಯಾವ ಊರಿನವರು?" ಎಂದೆ. 
"ನಾನು ಮೈಸೂರಿನವನು ಕಣಮ್ಮ. ನೀನು ಎಲ್ಲಿಯವಳು?  ನಿನ್ನ ಕನ್ನಡ ನೋಡಿದ್ರೆ ಬೆಂಗಳೂರಿನವಳಂತೂ ಅಲ್ಲಾ ಎನಿಸುತ್ತದೆ.."
ಅಯ್ಯೋ.. ಒಂದೇ ಪ್ರಶ್ನೆಗೆ ಇದನ್ನೆಲ್ಲಾ ಕಂಡುಹಿಡಿದುಬಿಟ್ರ..? 
"ಹೌದು ಸರ್, ನಾನು ಬೆಂಗಳೂರಿನವಳಲ್ಲ, ಉತ್ತರ ಕನ್ನಡದವಳು.."
"ಓಹೋ.. ಅದಕ್ಕಾಗೇ ಈ ಪುಸ್ತಕ ತಗೊಂಡಿದ್ದೋ.." ಎಂದರು ನಗುತ್ತಾ.. 
ನನಗೇನೂ ಅರ್ಥವಾಗಲಿಲ್ಲ. ಅನಂತನಾಗ್ ಅವರ 'ನನ್ನ ತಮ್ಮ ಶಂಕರ' ಪುಸ್ತಕ ತೋರಿಸುತ್ತ, "ನಿಮ್ಮೂರಿನೋರು ಅಂತಾ ತಗೊಂಡ್ಯಾ? "
"ಹಾಗೇನಿಲ್ಲ ಸರ್, ಬಹಳ ದಿನಗಳಿಂದ ಹುಡುಕ್ತಿದ್ದೆ. ಇವತ್ತು ಇಲ್ಲಿ ಸಿಗ್ತು.." 
"ಉತ್ತರ ಕನ್ನಡದಲ್ಲಿ ಎಲ್ಲಿ? ಶಿರಸಿನಾ?"
"ಓಹ್ ನಮ್ಮೂರು ಗೊತ್ತಾ ಸಾರ್ ನಿಮಗೆ? ಅಲ್ಲೇ ಶಿರಸಿ ಪಕ್ಕ.."
"ನಾನೂ ಅಲ್ಲೆಲ್ಲ ಓಡಾಡಿದಿನಿ ಕಣಮ್ಮ.. ಶಿರಸಿ, ಸಿದ್ದಾಪುರ, ಸಾಗರ, ಹುಬ್ಬಳ್ಳಿ, ಧಾರವಾಡ...."
ನಮ್ಮೂರಿನ ಪರಿಚಯವಿದ್ದವರು ಇದ್ದಾರಲ್ಲ ಎನ್ನುತ್ತಾ ಖುಷಿಯಲ್ಲಿ ಹಣ ಕೊಟ್ಟು, ಪುಸ್ತಕ ಪಡೆದು ನಗುತ್ತಾ ಹೊರಟೆ. 
"ಏನಮ್ಮ, ಊರಿಂದ ಬೆಂಗ್ಳೂರಿಗೆ ಬಂದಿದಿಯ.. ಕನ್ನಡ ಚನ್ನಾಗಿದೆ. ಕೊನೆವರೆಗೂ ಇದೇ ಕನ್ನಡ ಇರಲಿ.." ಎಂದರು ನಗುತ್ತಾ ಎರಡೂ ಕೈ ಜೋಡಿಸಿದರು. 
ನಾನೂ ನಗುತ್ತಾ ನಮಸ್ಕರಿಸಿದೆ !!
ಕೊನೆಗೂ ಕುತೂಹಲದಿಂದ ಬಲ್ಲವರಲ್ಲಿ  ವಿಚಾರಿಸಿದಾಗ, ಅವರು ಸಾಕ್ಷ್ಯಚಿತ್ರಗಳ ನಿರ್ದೇಶಕರೆಂದೂ, ಬಿಡುವಿನ ನಡುವೆ ಪುಸ್ತಕ ಮಾರಾಟ ಮಾಡುತ್ತಾರೆಂದೂ ತಿಳಿಸಿದರು. ಅವರ ಕನ್ನಡ ಪ್ರೀತಿಯದು, ಸೇವೆಯದು.  
ಕೇವಲ ನಾವು 'ಓರಾಟಗಾರರು' ಎನ್ನುತ್ತಾ, ಹೊಟ್ಟೆಯುಬ್ಬಿಸಿಕೊಂಡು ಸುತ್ತುವವರ ನಡುವೆ, ಸದ್ದೇ ಇಲ್ಲದೆ ಇಂತಹ ಸತ್ಕಾರ್ಯ ಮಾಡುವವರ ಕಂಡ ತಕ್ಷಣ ನಮಸ್ಕರಿಸಬೇಕೆನಿಸುವುದು ಸಹಜ !

ಒಂದೇ ದಿನ ನಡೆದ ಈ ಎರಡೂ ಘಟನೆಗಳು ಬಹಳ ಸಣ್ಣದಿರಬಹುದು, ಅಷ್ಟೇ ಸೂಕ್ಷ್ಮ ಕೂಡ.. ಎರಡೂ ಎಷ್ಟು ತದ್ವಿರುದ್ಧ! 
"ಇಲ್ಲಿ ಯಾವುದೂ ಯಃಕಶ್ಚಿತವಲ್ಲ" ಎಂದೆನಿಸಿದ್ದು ಸುಳ್ಳಲ್ಲ !
ಮಗುವಿಗೆ ಇಂಗ್ಲಿಷ್ ಹೇರುತ್ತಿರುವ ಮನೆಯವರೊಂದುಕಡೆ.. ಬಿಡುವಾದಾಗ ಕನ್ನಡ ಪುಸ್ತಕಗಳನ್ನು ಮಾರಿ, ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡುವ ಹಿರಿಯ ಇನ್ನೊಂದು ಕಡೆ!! ಒಂದೇ ನಗರದ ಎರಡು ಮುಖಗಳು.. 

ಎಲ್ಲಾದರೂ ಇರು.. ಎಂತಾದರೂ ಇರು.. 
ಎಂದೆಂದಿಗೂ ನೀ ಕನ್ನಡವಾಗಿರು.... 
ಸಾಲುಗಳನ್ನು ಗುನುಗುತ್ತಾ ಮುನ್ನಡೆದೆ... 

No comments:

Post a Comment

ಕರಗುವೆ...