Monday, June 15, 2020

ಸರಕಾರಿ ಆಸ್ಪತ್ರೆಯಲ್ಲಿ ಧರ್ಮ ಸಮಾಗಮ

ಆಸ್ಪತ್ರೆ ಎಂದಾಕ್ಷಣ ರೋಗಿಗಳ ನರಳಾಟ, ದಾದಿಯರ  ಓಡಾಟ, ವೈದ್ಯರು, ಔಷಧದ ವಾಸನೆ.. ಏನೇನೆಲ್ಲ ಒಮ್ಮೆ ತಲೆಯಲ್ಲಿ ಹೀಗೆ ಸುಳಿದು ಹಾಗೆ ಮಾಯವಾಗಿ ಬಿಡುತ್ತವೆ..ಇನ್ನು ಸರ್ಕಾರಿ ಆಸ್ಪತ್ರೆ - ಮಹಿಳಾ ಮತ್ತು ಮಕ್ಕಳ ವಿಭಾಗ ಎಂದರಂತೂ ಮುಗಿದೇ ಹೋಯಿತು..ನವಜಾತ ಶಿಶುಗಳ ಅಳು, ಬಾಣಂತಿಯರು,  ಅವರನ್ನು ನೋಡಲು ಬರುವವರು, ದಿನವಿಡೀ ಈ ತಾಯಿ ಮಕ್ಕಳ ಆರೈಕೆ ಮಾಡುತ್ತಾ ಸುಸ್ತಾದ ಹಿರಿಯರು, ಬೆಳಗ್ಗೆಯಿಂದ ಕೆಲಸ ಮಾಡಿ ತಾಳ್ಮೆ ಕಳೆದುಕೊಂಡು ಅವರಿವರ ಮೇಲೆ ರೇಗಾಡುತ್ತಾ ಓಡಾಡುವ ದಾದಿಯರು... ಅಬ್ಬಬ್ಬಾ !!!
       ಕೆಲವು ತಿಂಗಳುಗಳ ಹಿಂದೆ ಒಂದು ಆಸ್ಪತ್ರೆಗೆ ಒಬ್ಬರನ್ನು ನೋಡಲು ಹೋಗಿದ್ದೆ. ನನ್ನಮ್ಮನೊಡನೆ ವಾರ್ಡ್ ಒಳಗಡೆ ಹೋದಾಗ ಆಶ್ಚರ್ಯದ ಜೊತೆ ಖುಷಿಯೂ ಆಗಿತ್ತು. ಹೊರಗಡೆ ಪ್ರಪಂಚದಲ್ಲಿ  ಧರ್ಮ, ಜಾತಿ ಎಂದು ಕಚ್ಚಾಡುವವರು ಒಮ್ಮೆ ನೋಡಲೇಬೇಕಾದಂತಹ ಸನ್ನಿವೇಶವದು.
ಒಂದು ಕೋಣೆಯಲ್ಲಿ ಮೂರು ಮಂಚ - ಎಂದರೆ ಮೂರು ತಾಯಂದಿರು. ಮೊದಲ ಹಾಸಿಗೆಯಲ್ಲಿದ್ದಾಕೆ ಕ್ರೈಸ್ತಳು, ಮಧ್ಯದಲ್ಲಿ ಮುಸಲ್ಮಾನಳು, ಮತ್ತೊಂದು ಹಾಸಿಗೆಯಲ್ಲಿದ್ದಾಕೆ ಹಿಂದೂ.
    ಅಲ್ಲಿ ಯಾವುದೇ ರೀತಿಯ ಮಡಿ - ಮೈಲಿಗೆ ಇರಲಿಲ್ಲ. ಎಲ್ಲರೂ ನಗುನಗುತ್ತಾ ಮಾತನಾಡಿಕೊಳ್ಳುತ್ತಿದ್ದರು. 
 ಮುಸಲ್ಮಾನ್ ಅಜ್ಜಿಯೊಬ್ಬಳು ಹಿಂದೂ ಆಂಟಿಯ ಬಳಿ "ಏನಮ್ಮ, ಸ್ವಲ್ಪ ಬಿಸಿನೀರು ಇದ್ರೆ ಕೊಡ್ತೀರಾ.. ಈ ನರ್ಸಮ್ಮ ಕೊಡೋದು ಮಗು ಮೈ ತೋಳ್ಸೋಕೆ ಸಾಲೋದೆ ಇಲ್ಲಾ " ಎಂದಾಗ ಈ ಆಂಟಿ ನಗುತ್ತಾ "ತಗೋಳಿ ಅಮ್ಮ ಎಷ್ಟು ಬೇಕಿದ್ರೂ ತಗೊಳ್ಳಿ" ಅಂದ್ರು. 
ಮಧ್ಯಾಹ್ನ ತಡವಾಗಿತ್ತು, ಹಿಂದೂ ಆಂಟಿ ಊಟಕ್ಕೆ ಹೋಗಲು ಪೇಚಾಡುತ್ತಿದ್ದಾಗ, ಕ್ರೈಸ್ತ ಬಾಣಂತಿಯ ಕಡೆಯವಳೊಬ್ಬಳು, "ಆಂಟಿ ನೀವು ಊಟಕ್ಕೆ ಹೋಗಿ, ನಾನು ಇಲ್ಲೇ ಇರ್ತೀನಿ. ಮಗುವಿಗೆ ಎಚ್ಚರವಾದ್ರೆ  ಮಲಗಿಸ್ತೀನಿ ಬಿಡಿ "ಎಂದಾಗ ನಿಟ್ಟುಸಿರು ಬಿಡುತ್ತ ಆಂಟಿ ಊಟಕ್ಕೆ ಹೋದರು. 

        ಇನ್ನು ಬಾಣಂತಿಯನ್ನು ಮಾತನಾಡಿಸಲು ಬರುವವರಾದರೂ ಅಷ್ಟೇ.. ಪಕ್ಕದ ಮಂಚದಲ್ಲಿಯೂ ಒಂದು ಮಗುವನ್ನು ನೋಡಿ ಪ್ರಶ್ನಿಸಲು ಪ್ರಾರಂಭಿಸುತ್ತಿದ್ದರು - "ಯಾವ ಮಗು?" ಆರೋಗ್ಯವಾಗಿದ್ಯಾ?" "ಎಷ್ಟು ತೂಕವಿದೆ? "
        ಬಾಣಂತಿಯರೂ ಕುಳಿತು ತಮ್ಮ ಒಂಭತ್ತು ತಿಂಗಳ ಅನುಭವ, ಕಷ್ಟ - ಸುಖಗಳನ್ನು ಮಾತನಾಡುತ್ತಿದ್ದರು.  ಆ ಬಾಣಂತಿಯರ ತಾಯಿಯಂದಿರ ಮಾತುಕತೆ ಇನ್ನೂ ಮಜವಾಗಿತ್ತು. 
"ನಿಮ್ಮಲ್ಲಿ ಬಾಣಂತಿಗೆ ಪಥ್ಯವಿದೆಯೇ?" 
"ಮಗುವಿಗೆ ಗಟ್ಟಿ ಪದಾರ್ಥವನ್ನು ಎಷ್ಟು ತಿಂಗಳ ನಂತರ ತಿನ್ನಿಸುತ್ತೀರಿ?"
   ಎಂಬ ಪ್ರಶ್ನೆಗಳೆಲ್ಲ ಅವರ ಕುತೂಹಲಗಳ ಪ್ರತೀಕವಾಗಿದ್ದವು. 
          ಮಕ್ಕಳನ್ನು ದೇವರೆನ್ನುತ್ತಾರೆ. ಬಹುಶಃ ಆ ಮೂವರು ಮಕ್ಕಳಿರಬಹುದು ಅಂತಹ ಒಂದು ಸನ್ನಿವೇಶದ ಸೃಷ್ಟಿಕರ್ತರು. ಇಲ್ಲವಾದಲ್ಲಿ ಇದು ಹೇಗೆ ಸಾಧ್ಯವಾಗುತ್ತಿತ್ತು?  
     ಕ್ರೈಸ್ತ ಮಗುವಿನ ಎದುರು ಅವರ ಕುಟುಂಬದವರೆಲ್ಲ ಕುಳಿತು ಪ್ರಾರ್ಥಿಸುತ್ತಿದ್ದುದನ್ನು  ನಾನು ಮೊದಲ ಬಾರಿ ನೋಡಿದ್ದು.  ಅದೂ ಕನ್ನಡದಲ್ಲಿ. ಅವರನ್ನು ನೋಡಲು ಬಂದವರ ಬಳಿಯೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು.  ಅವರನ್ನು ಮಾತನಾಡಿಸಿ, ನಿಮ್ಮ ಮನೆಯಲ್ಲಿಯೂ ನೀವು ಕನ್ನಡದಲ್ಲಿಯೇ ಮಾತನಾಡುತ್ತೀರಾ ಎಂದು ಕೇಳಿದ್ದೆ ನಾನು. 
        ಉತ್ತರ ಮಾತ್ರ ಬಹಳ ಸುಂದರವಾಗಿತ್ತು - "ನಾವು ಪೂರ್ತಿ ಕನ್ನಡದವರೇ ಕಣಮ್ಮಾ, ಹುಟ್ಟಿ ಬೆಳೆದಿದ್ದು ಇಲ್ಲಿಯೇ. ಮೂಲ ಊರು ಬೇರೆ ಕಡೆ ಆದ್ರೂ ಇನ್ನೂ ನೋಡಿಲ್ಲ. ನಮ್ಮ  ಭಾಷೆಯಲ್ಲಿ ಅಷ್ಟೊಂದು ಮಾತನಾಡಲ್ಲ. ಅದರಲ್ಲೂ ಮಕ್ಕಳ ಎದುರಿಗಂತೂ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಲ್ಲ. "
      ನಾವೆಲ್ಲರೂ ಒಂದೇ ಅಲ್ವಾ.. ಎಲ್ಲರೂ ಕನ್ನಡವನ್ನು ಪ್ರೀತಿಸುತ್ತೇವೆ.... 
     ಆಸ್ಪತ್ರೆಯಲ್ಲಿ ನನಗೆ ಕಂಡ ಸತ್ಯವೇನೆಂದರೆ ಇನ್ನೂ ಬಹಳಷ್ಟು ವಿಚಾರಗಳಲ್ಲಿ ನಮ್ಮೆಲ್ಲರಲ್ಲಿಯೂ ಸಾಮ್ಯತೆ ಇದೆ.  ಬಾಣಂತಿಗೆ ಕೊಡುವ ಆಹಾರ, ಮಗುವನ್ನು ಮಲಗಿಸುವ ರೀತಿ, ದೇವರು ಯಾರೇ ಆಗಿರಲಿ ಆದರೆ ತಾಯಿ -ಮಗು ಆರೋಗ್ಯವಾಗಿರಲಿ ಎಂಬ ಪ್ರಾರ್ಥನೆ  ಎಲ್ಲವೂ ಸರಿ ಸುಮಾರು ಒಂದೇ ರೀತಿಯಲ್ಲಿ ಇತ್ತು. 

       ಪ್ರಸೂತಿ ಕೋಣೆಯಿಂದ ದಾದಿ ಹೊರಬಂದು 'ಗಂಡು ಮಗು' ಎಂದಾಗ ಎಲ್ಲರೂ ಸಂಭ್ರಮಿಸುವ ಪರಿ, 'ಹೆಣ್ಣು ಮಗು' ಎಂದಾಗ 'ಅಯ್ಯೋ ಹೆಣ್ಣಾ' ಎಂಬ ಬೇಸರದ ಮಾತು, ಎಲ್ಲರ ಮೌನ - ಒಂದು ರೀತಿಯ ಸೂತಕದ ಛಾಯೆ.... ಈ ವಿಷಯದಲ್ಲಿ ಮಾತ್ರ ಅಂದಿಗೂ-ಇಂದಿಗೂ,  ಎಲ್ಲರೂ ಒಂದೇ ಎಂಬುದರಲ್ಲಿ ಎರಡು ಮಾತಿಲ್ಲ...!
      ಎರಡನೇ ದಿನ ಹೋದಾಗ, ಆಸ್ಪತ್ರೆಯಲ್ಲಿ ಜನಿಸಿದ ಒಂಭತ್ತು ಶಿಶುಗಳಲ್ಲಿ  ಎಂಟು ಗಂಡು ಮಕ್ಕಳು ಎಂದು ದಾದಿಯರು ಪಟ್ಟಿಯಲ್ಲಿ ದಾಖಲಿಸಿಕೊಳ್ಳುತ್ತ ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ಒಬ್ಬ ತಂದೆ ಮಾತ್ರ ಆಗ ತಾನೇ ಹುಟ್ಟಿದ ಶಿಶುವನ್ನು ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ. ಎಲ್ಲರಿಗೂ ಕರೆ ಮಾಡಿ ಹೆಣ್ಣು ಮಗು, ನನ್ನಾಸೆಯಂತೆ ನವರಾತ್ರಿಯಲ್ಲಿ ಪುಟ್ಟಲಕ್ಷ್ಮಿ  ಮನೆಗೆ ಬಂದಳು ಎಂದು ಸಂಭ್ರಮಿಸುತ್ತಿದ್ದ. ಅಲ್ಲಿದ್ದ ನರ್ಸ್ ಕೂಡ ಅವನ ಖುಷಿಯನ್ನು ನೋಡಿ,  "ನಿಮ್ಮ ಮಗಳು ನಿಜವಾಗಲೂ ಲಕ್ಷ್ಮಿಯೇ. ಇವತ್ತು ಹುಟ್ಟಿದ ಮಕ್ಕಳಲ್ಲಿ ಇದೊಂದೇ ಹೆಣ್ಣು ಮಗು" ಎಂದಾಗ ಅವನು ಏನು ಉತ್ತರಿಸಬೇಕೆಂದು ತೋಚದೆ ಆ ಮಗುವಿಗೆ ಒಂದು ಮುತ್ತಿಟ್ಟ. ಅವನ ಪ್ರೀತಿಯನ್ನು ಸುತ್ತಲಿದ್ದ ಎಲ್ಲರೂ ನೋಡುತ್ತಾ ನಿಂತಿದ್ದರು. 

          ಇಲ್ಲಿ ನಾನು ಹಿಂದೂ, ಮುಸಲ್ಮಾನ್, ಕ್ರೈಸ್ತ  ಎಂದು ಸ್ಪಷ್ಟಪಡಿಸಲು ಕಾರಣವಿದೆ. ಧರ್ಮಬೇಧ ನಮ್ಮಲ್ಲಿಲ್ಲ. ಕೇವಲ ಆಸ್ಪತ್ರೆಯಲ್ಲಷ್ಟೇ ಅಲ್ಲ, ಹಲವು ಊರುಗಳಲ್ಲಿ ಎಲ್ಲರೂ ಒಟ್ಟಾಗಿಯೇ ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ, ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೆ. ಆಸ್ಪತ್ರೆಯ ಒಂದು ಕೋಣೆ ಚಿಕ್ಕ ಉದಾಹರಣೆಯಷ್ಟೇ. 
      ಎಲ್ಲೋ ಒಂದು ಕಡೆ ಹೊತ್ತಿ ಉರಿಯುತ್ತಿದ್ದರೆ, ಅಲ್ಲಿಯ ಬೆಂಕಿಯನ್ನು ಆರಿಸಬೇಕೇ ಹೊರತು ಇನ್ನೊಂದು ಕಡೆ ಬೆಂಕಿ ಹಚ್ಚುವುದಲ್ಲ. 

       ಆ ಕೋಣೆಯಲ್ಲಿದ್ದ ಮೂವರು ಮಕ್ಕಳಿಗೆ ತಾವು ಯಾವ ಧರ್ಮದವರೆಂದು ಗೊತ್ತಿಲ್ಲ. ಸುತ್ತಲಿನ ಪರಿಸರ, ಮನೆಯ ಸಂಸ್ಕೃತಿ ಅವರನ್ನು ಬೆಳೆಸುತ್ತದೆ. 
    ಮನೆಯಲ್ಲಿ ಕನ್ನಡ ಮಾತನಾಡಿದರೆ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಹಿರಿಯರು ಇತರ ಧರ್ಮಗಳನ್ನು ಗೌರವಿಸಿ, ಅವರೊಡನೆ ಮಾತನಾಡಿದರೆ ಮಕ್ಕಳೂ ಅದನ್ನೇ ಪಾಲಿಸುತ್ತಾರೆ.  
      ನಿಮ್ಮ ಧರ್ಮವನ್ನು ಪ್ರೀತಿಸಿ, ಪೂಜಿಸಿ. - ಇತರ ಧರ್ಮಗಳನ್ನು ಗೌರವಿಸಿ...

No comments:

Post a Comment

ಕರಗುವೆ...