Monday, June 15, 2020

ಮಾಯವಾದ ವೆಂಕಟೇಶ

ಅವನನ್ನು ನಾನು ಮೊದಲ ಬಾರಿ ಭೇಟಿಯಾಗಿದ್ದು ಎರಡು ಸಾವಿರದ ಹದಿನೆಂಟರ ಜುಲೈನಲ್ಲಿ.. ಇನ್ನೂ ಅಂದಿನ ದಿನ ಚೆನ್ನಾಗಿ ನೆನಪಿದೆ. 
 'ಮಾಯದ ಕೊಡಲಿ' ಎಂಬ ನಾಟಕವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ನಿರ್ದೇಶಿಸುತ್ತಿದ್ದರು ಅಪ್ಪ. 
ಅದು ಐ. ಕೆ. ಬೊಳುವಾರ್ ಅವರ ಕಿರು ನಾಟಕ ಆಧಾರಿತ ಪರಿಸರ ಸ್ನೇಹೀ ನಾಟಕ. 

ಬಹಳ ಸುಂದರವಾದ ಸಂದೇಶವುಳ್ಳ ಮಕ್ಕಳ ನಾಟಕವದು. ಅದರ ನೀತಿ ಎಲ್ಲರಿಗೂ ಅನ್ವಯಿಸುವಂತದ್ದು. "ನಿಮ್ಮ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡಬೇಡಿ, ನದಿಗಳನ್ನು ಕಲುಷಿತಗೊಳಿಸಬೇಡಿ. ಭೂಮಾತೆಯನ್ನು ಕಾಪಾಡಿ -ಆಕೆ ನಿಮ್ಮನ್ನು ಎಂದಿಗೂ ರಕ್ಷಿಸುತ್ತಾಳೆ" ಎಂಬುದು ಸಂದೇಶ. 
ಅನಿವಾರ್ಯ ಕಾರಣಗಳಿಂದ ಆ ನಾಟಕದ 'ಕತೆ ಹೇಳುವ ಅಜ್ಜಿ 'ಯ ಪಾತ್ರವನ್ನು ನಾನು ನಿರ್ವಹಿಸಬೇಕಾಗಿ ಬಂತು.  

  ಆಗ ಮೊದಲಬಾರಿ ಅವನನ್ನು ನೋಡಿದ್ದು. ಎಲ್ಲರೂ ನನಗೆ ಮೊದಲಿನಿಂದಲೂ ಪರಿಚಿತರು.
ನನ್ನ ತಮ್ಮನ ಮೂವರು ಗೆಳೆಯರು ಮಾತ್ರ ಹೊಸತಾಗಿ ಪರಿಚಯವಾದವರು.ಮೊದಲ ದಿನ ಈ ಮೂವರು ಹುಡುಗರು ಸರಿಯಾಗಿ ಮಾತನಾಡದಿದ್ದರೂ, ಒಂದು ವಾರದಲ್ಲಿ ಪ್ರೀತಿಪಾತ್ರರಾಗಿಬಿಟ್ಟರು. ಅವರ ಮುಗ್ಧತೆ, ಮಾತುಗಳು(ಚೇಷ್ಟೆಗಳು ಕೂಡ) ನನಗೆ ಬಹಳ ಇಷ್ಟವಾದವು.  

     ಅಲ್ಲಿದ್ದವರೆಲ್ಲರಿಗೂ ಹಿರಿಯಕ್ಕ ನಾನು...ಹೋದಲ್ಲಿ, ಬಂದಲ್ಲಿ, ಕುಂತಲ್ಲಿ,ನಿಂತಲ್ಲಿ, ನಿಮಿಷಕ್ಕೊಮ್ಮೆಯಾದರೂ ಅಕ್ಕಾ ಎಂದು ಯಾರಾದರೊಬ್ಬರು ಕರೆಯದೇ ಇರುತ್ತಿರಲಿಲ್ಲ. 

    ಅವರಲ್ಲಿ ಇವನೂ ಒಬ್ಬ. ಹೆಸರು -'ವೆಂಕಟೇಶ'. ದೊಡ್ಡ ಕಣ್ಣಿನ, ಮುದ್ದು ನಗುವಿನ, ಚಿಗುರು ಮೀಸೆಯ ಹುಡುಗ. ಅದು ಅವನ ಮೊದಲ ನಾಟಕ. ಇಷ್ಟವಿರದಿದ್ದರೂ, ತಮ್ಮನ ಒತ್ತಾಯಕ್ಕೆ ಮಣಿದು ಬಂದಿದ್ದವನು, ಬಹಳ ಬೇಗ ಆಸಕ್ತಿ ಬೆಳೆಸಿಕೊಂಡ.
ರಂಗಭೂಮಿಯೇ ಹಾಗೆ. ಒಮ್ಮೆ ಸೆಳೆತಕ್ಕೆ ಸಿಲುಕಿದರೆ ಆಚೆ ಬರಲು ಅಸಾಧ್ಯ !!

   ನಾಟಕದ ಮಾತುಗಳು, ಧ್ವನಿಯ ಏರಿಳಿತಗಳು, ರಂಗದ ಮೇಲಿನ ಹೆಜ್ಜೆ, ಪ್ರತಿಯೊಂದನ್ನು ಬಹಳ ಶ್ರದ್ಧೆಯಿಂದ ಕಲಿಯುತ್ತಿದ್ದವನು, ಒಮ್ಮೆ ನಮ್ಮ ಸಂಗೀತದ ಮಾಸ್ತರರ ಬಳಿ ಹೋಗಿ ನನಗೂ ಹೇಳಿಕೊಡಿ ಎಂದು ಹಠ ಮಾಡಿ 'ಸರಿಗಮಪದನಿಸ' ನುಡಿಸುವುದನ್ನೂ ಕಲಿತ. ನಿಧಾನವಾಗಿ ಯಕ್ಷಗಾನದ ಹೆಜ್ಜೆಗಳನ್ನು ಕಲಿಯಲು ಪ್ರಾರಂಭಿಸಿದ್ದ. 

      ಈ ಮಧ್ಯೆ ಒಬ್ಬೊಬ್ಬರಿಗೆ ಒಂದೊಂದು ನಾಮಕರಣವಾಗಿತ್ತು. 'ವೆಂಕಟೇಶ' ಎನ್ನುವಲ್ಲಿಂದ 'ಯಂಕ್ಟೇಸಾ.. ' ಎನ್ನುವವರೆಗೆ ಸಲುಗೆ ಬೆಳೆದಿತ್ತು . 

    ಇದೆಲ್ಲದರ ನಡುವೆ ಮೊದಲ ಪ್ರದರ್ಶನ ಸಿದ್ದಾಪುರದ ಪ್ರಶಾಂತಿ ಶಾಲೆಯಲ್ಲಿ ನಡೆಯಿತು. ಮಾರನೇ ದಿನ ಬೆಳಿಗ್ಗೆಯೇ ಎರಡನೇ ಪ್ರದರ್ಶನ -ಆ ಶಾಲೆಯ ಮಕ್ಕಳಿಗಾಗಿ. 

   ಈಗಾಗಲೇ ಹೇಳಿರುವಂತೆ ಅದು "ಚಿಕ್ಕವರಿಗಾಗಿ ದೊಡ್ಡವರು ಬರೆದ, ದೊಡ್ಡವರಿಗಾಗಿ ಚಿಕ್ಕವರು ಮಾಡುವ ನಾಟಕ". 

   ಎಲ್ಲ ದಿನವೂ ಸರಿಯಾಗಿಯೇ ಇದ್ದ ವೆಂಕಟೇಶ ಅಂದು ಬಹಳ ಹೆದರಿದ್ದ. ಮೊದಲ ಬಾರಿ ರಂಗದ ಮೇಲೆ ನಿಂತಾಗ ಆಗುವ ಭಯ ಸಹಜ. ಮುಖದ ಮೇಲಿನ ಬಣ್ಣ ಬೆವರಲ್ಲಿ ಕರಗಿ ಇಳಿಯತೊಡಗಿತ್ತು. ಆತನ ಅಪ್ಪ ಅಮ್ಮ ಶಿರಸಿಯಿಂದ ನಾಟಕ ನೋಡಲು ಬಂದಿದ್ದರು. ಧೈರ್ಯ ಹೇಳಿದ್ದರು ಕೂಡ. ನಾವೆಲ್ಲ ಮೊದಲ ಬಾರಿ ರಂಗದ ಮೇಲೆ ಹೋಗುವವರಿಗೆ ಧೈರ್ಯ ತುಂಬಿದೆವು. 

  ನಾಟಕ "ಆಂಗಿಕಂ ಭುವನಂ ಯಸ್ಯ... "ಶ್ಲೋಕ ದೊಂದಿಗೆ ಪ್ರಾರಂಭವಾಯಿತು. ಎಲ್ಲವೂ ಸರಾಗವಾಗಿಯೇ ಸಾಗುತ್ತಿತ್ತು.
ಮಧ್ಯದಲ್ಲಿ ವೆಂಕಟೇಶ ಒಂದು ಎಡವಟ್ಟು ಮಾಡಿದ್ದ. ಅವನದು ಡಂಗುರದವನ ಪಾತ್ರ. ನಾಟಕದಲ್ಲಿ ಮೂರು ಬಾರಿ ರಂಗದ ಮೇಲೆ ಬರುತ್ತಾನೆ. ಚಿಕ್ಕ ಪಾತ್ರವಾದರೂ, ಅವನ ಪ್ರತಿ ಮಾತು ಒಂದೊಂದು ಅಂಕ (scene)ವನ್ನು ಪ್ರಾರಂಭಿಸುತ್ತದೆ. ಅವನು ಎಷ್ಟು ಭಯಭೀತನಾಗಿದ್ದನೆಂದರೆ ಎರಡನೇ ಸೀನ್ -ನ ಪ್ರಾರಂಭಕ್ಕೆ ಹೇಳಬೇಕಿದ್ದ ಮಾತನ್ನು ಮೊದಲ ಸೀನ್ -ನಲ್ಲೇ ಹೇಳುತ್ತಾ ರಂಗದ ಎಡದಿಂದ ಬಲಕ್ಕೆ ಹೋಗಿಬಿಟ್ಟ. 

ನಾವೆಲ್ಲ ಇದೇನು ಮಾಡಿಬಿಟ್ಟ ಇವನು ಎಂದು ಬಾಯಿ ಬಿಟ್ಟು ನೋಡುತ್ತಿದ್ದೆವು.ರಂಗದ ಮೇಲಿದ್ದವರಿಂಗಂತೂ
ಒಂದು ಕ್ಷಣ ಏನಾಯಿತೆಂದೇ ತಿಳಿಯಲಿಲ್ಲ. 

  ಇಡೀ ಸೀನ್ (scene) ಹಾರಿ ಹೋಗುವುದಿತ್ತು. ಅಷ್ಟರಲ್ಲಿ ಅವನಿಗೆ ತಪ್ಪಿನ ಅರಿವಾಗಿತ್ತು. ಇನ್ನೇನು ಆ ಸೀನ್ -ನ ಲೈಟ್ಸ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಮತ್ತೊಮ್ಮೆ ಡಂಗುರದ ಧ್ವನಿ ಮೊಳಗಿತು. "ಕೇಳ್ರಪ್ಪೋ ಕೇಳಿ..." ಎನ್ನುತ್ತಾ ನಮ್ಮ ಡಂಗುರದವ ಮತ್ತೊಮ್ಮೆ ಬಂದ. ತನ್ನ ತಪ್ಪನ್ನು ಸರಿಪಡಿಸಿ, ಸರಿಯಾದ ಡೈಲಾಗ್ ಹೇಳಿ ಹೋದ. ರಂಗದ ಹಿಂದೆ ಬಂದು, "ಅಕ್ಕಾ, ನಾನು ತಪ್ಪು ಮಾಡ್ಬಿಟ್ಟೆ. ನನ್ನಿಂದ ಎಲ್ಲಾ ಹಾಳಾಯ್ತು. ಇಷ್ಟೊತ್ತನಕ ಎಲ್ಲಾ ಸರಿ ಇತ್ತು, ನಾನೇ ಎಲ್ಲದನ್ನು ಹಾಳು ಮಾಡ್ಬಿಟ್ಟೆ.. ಮಾವ ಬೈತಾರೆ ಈಗ. ಏನ್ಮಾಡ್ಲಿ?  ನಾನು ಬೇಕು ಅಂತ ಮಾಡಿಲ್ಲ ಅಕ್ಕಾ " ಎಂದ. ಇನ್ನೊಂದು ಕ್ಷಣದಲ್ಲಿ ನೀರು ಕಣ್ಣಿಂದ ಕೆಳಗೆ ಜಾರುವುದಿತ್ತು. 

 "ನೋಡು ಆಗಿದ್ದು ಆಗಿ ಹೋಯ್ತು. ಹೀಗಾದಾಗಲೇ ನಾವು ಕಲಿಯೋದು. ನಿಂಗೆ ಯಾರೂ ಬೈಯ್ಯೋದಿಲ್ಲ. ನೆಕ್ಸ್ಟ್ ಸೀನ್ ಚೆನ್ನಾಗಿ ಮಾಡು " ಎಂದೆಲ್ಲ ಧೈರ್ಯ ಹೇಳಿ ಕಳಿಸಿದ್ದಾಯ್ತು. 

 ಆದರೂ ಅವನಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ನಾಟಕ ಮುಗಿದ ನಂತರ ಅಪ್ಪನ ಬಳಿ ಬಂದು ಕ್ಷಮೆ ಕೇಳಿದ. ಎಷ್ಟು ಚೆನ್ನಾಗಿ ನಾಟಕ ಮುಗಿದಿತ್ತೆಂದರೆ ಏನು ತಪ್ಪಾಗಿತ್ತು ಎಂದೂ ಅಪ್ಪನಿಗೆ ನೆನಪಿರಲಿಲ್ಲ. 

" ನೋಡು, ತಪ್ಪು ಯಾರು ಮಾಡುವುದಿಲ್ಲ ಹೇಳು.. ನಾನೂ ಇದನ್ನೆಲ್ಲಾ ಮಾಡಿದ್ದೀನಿ. ಆದ್ರೆ ನೀನು ತಕ್ಷಣಕ್ಕೆ ಹಿಂತಿರುಗಿ ಬಂದು ತಪ್ಪನ್ನು ಸರಿ ಪಡಿಸಿದೆಯಲ್ಲ , ಅದು ನಿಜವಾದ ಕಲಾವಿದನ ಲಕ್ಷಣ.ಇಲ್ಲಿ ಸೇರಿದ ನೂರು -ನೂರೈವತ್ತು ಪ್ರೇಕ್ಷಕ ಪ್ರಭುಗಳಲ್ಲಿ ಎಲ್ಲರೂ ನಾಟಕವನ್ನು ಆಸ್ವಾದಿಸಿದ್ದಾರೆ. ಯಾರೂ ನಿನ್ನ ತಪ್ಪನ್ನು ಗಮನಿಸಿ ದೂರಲಿಲ್ಲ. ಇದೆಲ್ಲ ಮೊದಮೊದಲು ಸಹಜ ಬಿಡು... "ಎಂದು ತಣ್ಣಗಿನ ದನಿಯಲ್ಲಿ ಅಪ್ಪ ಹೇಳಿದಾಗ ಅವನು ಸ್ವಲ್ಪ ಸಾವರಿಸಿಕೊಂಡ. 

 " ಮಾವ, ಇನ್ಯಾವತ್ತೂ ಈ ತಪ್ಪು ಆಗಲ್ಲ. ಇನ್ನು ಎಲ್ಲಾ ನಾಟಕಕ್ಕೂ ಬರ್ತೀನಿ.ರಂಗಭೂಮಿಲಿ ಯಾವತ್ತೂ ನಿಮ್ಮ ಜೊತೆ ಇರ್ತೀನಿ. ನೋಡ್ತಾ ಇರಿ, ಇನ್ನೂ ಕಲಿತೀನಿ, ಚಪ್ಪಾಳೆ ಪಡೀತೀನಿ " ಅಂತ ಅವತ್ತು ಅವನು ಹೇಳಿದಾಗ ಆ ಕಣ್ಣುಗಳಲ್ಲಿ ಎಷ್ಟು ಹೊಳಪಿತ್ತು !!

    ಮೂರನೇ ಪ್ರದರ್ಶನ ಸಾಗರದಲ್ಲಿತ್ತು. ಎಲ್ಲಾ ಒಂದು ವಾಹನದಲ್ಲಿ ಹೋಗುತ್ತಿದ್ದೆವು. ತಾಳಗುಪ್ಪದಲ್ಲಿ ರೈಲು ಬರುವ ಸಮಯ ಎಂದು ಗೇಟ್ ಹಾಕಿದ್ದರಿಂದ ವಾಹನಗಳೆಲ್ಲ ಹನುಮಂತನ ಬಾಲದಂತೆ ಸಾಲಾಗಿ ನಿಂತಿದ್ದವು. ಅಂತೂ ರೈಲು ಬಂತು. 

  ಅಚಾನಕ್ಕಾಗಿ ಈ ವೆಂಟಕೇಶ "ಹಾಂ.... ರೈಲು ಇಷ್ಟೆಲ್ಲಾ ಉದ್ದ ಇರುತ್ತಾ... ನನಗೆ ಗೊತ್ತೇ ಇರಲಿಲ್ಲ " ಎಂದು ರಾಗ ಎಳೆದ. ಎಲ್ಲರೂ ಗೊಳ್ಳೆಂದು ನಕ್ಕರು. ಇದ್ದವರೆಲ್ಲ ಅವನದೇ ತರಗತಿಯವರಾದ್ದರಿಂದ ಕಿಚಾಯಿಸಲು ಪ್ರಾರಂಭಿಸಿದರು.. "ಅದ್ಕೆ ಹೇಳೋದು ವೆಂಕ್ಟೇಶಾ, ಪುಸ್ತಕದ ಹುಳ ಆಗ್ಬಾರ್ದು ಅಂತಾ, ನೋಡು ಈ ಪುಸ್ತಕದ ಬದ್ನೇಕಾಯಿ ಸುಟ್ಟ್ಕೊಂಡು ತಿನ್ನೋಕೂ ಬರೊಲ್ಲ, ಇನ್ನೂ ರೈಲ್ ನೋಡಿಲ್ವಾ ನೀನು " ಎಂದೆಲ್ಲ ಹೇಳುತ್ತಿದ್ದರು.   ಕಾರಣ ಇಷ್ಟೇ, ಅವನು ತರಗತಿಯಲ್ಲಿ ಮುಂದಿನ ಸಾಲಿನ ಹುಡುಗ, ಯಾವ ಕ್ಲಾಸುಗಳಿಗೂ ಬಂಕ್ ಮಾಡುವವನಲ್ಲ, ಓದಿನಲ್ಲಿ ಮುಂದೆ.. 

 ಆದರೆ ಅವನು ಇವರ್ಯಾರಿಗೂ ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ದೊಡ್ಡ ಕಣ್ಣುಗಳನ್ನು ಇನ್ನೂ ಅರಳಿಸಿ, ರೈಲು ಹೋಗುವುದನ್ನೇ ನೋಡುತ್ತಿದ್ದ. ನನಗೆ ಅಂದು ಅವನ ಕಾಲೆಳೆಯಲು ಮನಸ್ಸೇ ಬರಲಿಲ್ಲ. ಪುಟ್ಟ ಮಗುವಿನ ರೀತಿಯ ಅವನ ಮುಗ್ಧತೆ ಅವತ್ತು ಏಕೋ ಬಹಳ ಇಷ್ಟವಾಯಿತು.

   ಆವತ್ತಿನ ಪ್ರದರ್ಶನದಲ್ಲಿ ಆತ ಹೇಳಿದ ಮಾತನ್ನು ಮಾಡಿ ತೋರಿಸಿದ.ಎಲ್ಲೂ ಎಡವದೇ, ಮಾತು ತಪ್ಪದೇ, ಹೆದರದೇ, ಕೊನೆಯಲ್ಲಿ ಭೇಷ್ ಎನ್ನಿಸಿಕೊಂಡ. 

    ನಾಲ್ಕು ಪ್ರದರ್ಶನಗಳಾದ ಮೇಲೆ ಎಲ್ಲರಿಗೂ ಪರೀಕ್ಷೆ ಎಂಬ ಕಾರಣಕ್ಕೆಆ ನಾಟಕವನ್ನು ನಿಲ್ಲಿಸಿದೆವು. ಅದಾದ ನಂತರವೂ ಆತ ಎಷ್ಟೋ ಬಾರಿ ನನ್ನ ಬಳಿ ಮಾತನಾಡಿದ, ಅವನ ದ್ವಿತೀಯ ಪಿ. ಯು. ಪರೀಕ್ಷೆಯ ಕೆಲವು ವಿಷಯಗಳ ಕುರಿತು ಕೇಳಿದ. ಪರೀಕ್ಷೆ ಮುಗಿಯಿತು. ಅದರ ಫಲಿತಾಂಶ ಕೂಡ ಬಂತು. 

 ಒಳ್ಳೆಯ ಅಂಕಗಳನ್ನು ಗಳಿಸಿದ್ದ,ತಕ್ಷಣ ನನಗೆ ತಿಳಿಸಿದ್ದ.  
ಕೇವಲ ಎರಡೇ ದಿನ, ಒಂದು ಭೀಕರ ಸುದ್ದಿ ಹೇಳಿದ ನನ್ನ ತಮ್ಮ.. ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿಯೇ ಕಣ್ಣುಗಳು ತುಂಬಿ ಬಂದಿದ್ದವು.

"ವೆಂಕಟೇಶ ಇನ್ನಿಲ್ಲ. "

ಏನು? ಎಂದೆ. 
ನನಗೆ ಕೇಳಿಲ್ಲವೆಂದಲ್ಲ. ಹೇಳಿದ್ದು ತಪ್ಪಿರಬಹುದೇನೋ ಎಂದು. 
ಇಲ್ಲ.. ತಪ್ಪಿಲ್ಲ.. ಮತ್ತೊಮ್ಮೆ ಅದನ್ನೇ ಹೇಳಿದ. 

ಏನು ಮಾತನಾಡಲಿ ಎಂದು ತಿಳಿಯದೆ, ಒಮ್ಮೆಗೇ ಏನಾಯಿತು, ಯಾಕಾಯಿತು, ಹೇಗಾಯಿತು ಎಂದು ಪ್ರಶ್ನೆಗಳ ಮಳೆ ಸುರಿಸಿದೆ. ಯಾವುದೂ ಸರಿಯಾಗಿ ಗೊತ್ತಿರಲಿಲ್ಲ ಆಗ. ಅಷ್ಟರಲ್ಲಿ ಅಪ್ಪ ಕೂಡ ಬಂದರು. ಅವರೂ ನಂಬಲು ತಯಾರಿರಲಿಲ್ಲ. 

  ಕೊನೆಗೂ ಫೋಟೋ ಬಂತು, ಹಂಚಳ್ಳಿಯ ಹೊಳೆಯ ನೀರಿಗೆ ಇಬ್ಬರು ಹುಡುಗರು ಬಲಿಯಾಗಿದ್ದರು.ಅವರಲ್ಲಿ ಇವನೂ ಒಬ್ಬ . 

 ದೇವರೇ.. ಹೀಗಾಗಿರಲು ಸಾಧ್ಯವಿಲ್ಲ. ಇದು ಅವನ ಫೋಟೋ ಆಗಿರದಿರಲಿ ಎಂದೆಲ್ಲ ಮನಸ್ಸು ಹೇಳಿದರೂ, ಸತ್ಯ ಸುಳ್ಳಾಗಲು ಸಾಧ್ಯವೇ?  

ಒಂದು ವರುಷದ ಹಳೆಯ ನೆನಪೆಲ್ಲ ಗಾಳಿಯಲ್ಲಿ ಹಾರುವ ಹಾಳೆಗಳಂತೆ ಕಣ್ಣ ಮುಂದೆ ಹಾಯ್ದವು. 

  ತಮ್ಮನ ಬಳಿ "ನೀನು ಅವನ ದೇಹವನ್ನು ನೋಡಲು ಹೋಗುವೆಯಾ? " ಎಂದೆ. 

"ನನ್ನಲ್ಲಿ ಅಷ್ಟು ಧೈರ್ಯವಿಲ್ಲ. ಯಾವಾಗ್ಲೂ ನಗ್ತಾ ಇರೋ ವೆಂಕಟೇಶನನ್ನ ನೋಡಿದ್ದೆ. ಈಗ ಹೀಗೆ ನೋಡೋಕೆ ನನ್ನಿಂದ ಸಾಧ್ಯನೇ ಇಲ್ಲ.ಫೋಟೋದಲ್ಲೇ ದೇಹವನ್ನ ನೋಡೋಕಾಗಲ್ಲ, ಇನ್ನು ಎದುರಲ್ಲಿ ಹೇಗೆ ನೋಡ್ಲಿ? ನಾನು ಹೋಗೋದಿಲ್ಲಾ "ಎಂದ. 

ಎಲ್ಲರ ಸ್ಥಿತಿಯೂ ಹಾಗೆ ಇತ್ತು. ಹಾಗಾಗಿ ನಾವ್ಯಾರೂ ಹೋಗಿಲ್ಲ. ಇವತ್ತಿಗೂ 'ವೆಂಕಟೇಶ ' ಎಂದರೆ ಆ ಮಾತುಗಳು, ನಗು, ಸಣ್ಣ ಚೇಷ್ಟೆಗಳು ನೆನಪಾಗುತ್ತವೆ, ಆ ದೇಹದ ಅವಸ್ಥೆಯಲ್ಲ. 

    ಪಿ. ಯು. ಸಿ. ಯಲ್ಲಿ ಒಳ್ಳೆಯ ಅಂಕ ಬಂದ ಖುಷಿಯಲ್ಲಿ ಆತ ನನಗೆ ಹೇಳಿದ್ದ.. 

ಮುಂದೆ ಓದಲು ಬೇರೆಡೆ ಹೋಗಬೇಕು, ಇನ್ನೂ ಚೆನ್ನಾಗಿ ಓದಬೇಕು, ನಾಟಕವನ್ನೂ ಮಾಡಬೇಕು.. ಎಷ್ಟೊಂದು ಕನಸುಗಳಿತ್ತು.. !!

ಆ ಪುಟ್ಟ ಹೃದಯದಲ್ಲಿ ಅಡಗಿದ್ದ ಕನಸುಗಳು, ಅದಮ್ಯ ಉತ್ಸಾಹ, ರಂಗಪ್ರೀತಿ ಎಲ್ಲವೂ ಆ ಮುಗ್ಧತೆಯೊಡನೆ ನೀರಲ್ಲಿ ಮುಳುಗಿ ಹೋಯಿತು.

    ಈ ಸಂದರ್ಭದಲ್ಲಿ ಎಲ್ಲರಿಗೂ ಒಂದು ಮಾತು ಹೇಳಬಯಸುತ್ತೇನೆ - ಎಚ್ಚರ !! ಈಜು ಬರದೇ ನೀರಿಗಿಳಿಯಬೇಡಿ.. ಈಜು ಬರುತ್ತದೆ ಎಂದು ನಿಮಗರಿಯದ ಜಾಗದಲ್ಲಿ ನೀರಿಗಿಳಿಯಬೇಡಿ. ಜಾಗರೂಕರಾಗಿರಿ. ಯಾರ ಬದುಕೂ ಇಷ್ಟು ದುರಂತಮಯವಾಗದಿರಲಿ. 

    'ಮಾಯದ ಕೊಡಲಿ'ಯ 'ವೆಂಕಟೇಶ' ಮಾಯವಾದ... 

ಮತ್ತೆಂದೂ ಆತ ಬರಲಾರ. ಡಂಗುರ ಬಾರಿಸಲಾರ. ಆದರೆ ಯಾವುದೇ ರೈಲನ್ನು ನೋಡಿದರೂ, ತಾಳಗುಪ್ಪ ರೈಲ್ವೆ -ಗೇಟ್ (railway -gate ) ಬಳಿ ಹೋದರೂ, ಮೊದಲು ನಮ್ಮ ವೆಂಕಟೇಶ ನೆನಪಾಗುತ್ತಾನೆ. 

  ರಕ್ತ ಸಂಬಂಧವಲ್ಲದಿದ್ದರೂ, ಅವನು ನನ್ನ ತಮ್ಮನೇ. ಪುಟ್ಟ ತಮ್ಮನೊಬ್ಬನನ್ನು ಕಳೆದುಕೊಂಡ ಭಾವ ಬಹಳ ಕಾಡುತ್ತದೆ. 

    "ಇಂದು ಅವನು ಹುಟ್ಟಿದ ದಿನ." 

ನೂರು ಕಾಲ ಬಾಳು ಎಂದು ಹಾರೈಸಲೂ ಸಾಧ್ಯವಿಲ್ಲ.
ಅವನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದಷ್ಟೇ ಹೇಳಬಹುದು...........

No comments:

Post a Comment

ಕರಗುವೆ...