ಬೆಂಗಳೂರಿನ ಪ್ರಭಾವಶಾಲಿ ವ್ಯಕ್ತಿಗಳು ಯಾರೆಂದು ಕೇಳಿದರೆ ಎಲ್ಲ ಬೇರೆ ಬೇರೆ ಜನರನ್ನು ಹೇಳ್ತಾರೆ. ರಾಜಕಾರಣಿಗಳು, ಚಿತ್ರ ನಟ /ನಟಿಯರು, ಪತ್ರಕರ್ತರು, ಉದ್ಯಮಿಗಳು, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
ಆದರೆ ಒಮ್ಮೆ ಆಚೆ ಬಂದು ನೋಡಿ.. ನಿಜವಾದ ಪ್ರಭಾವಶಾಲಿ ವ್ಯಕ್ತಿಗಳು ಆಟೋ ಚಾಲಕರು.
ತರಹೇವಾರಿ ಡ್ರೈವರ್ ಗಳು ಸಿಗುತ್ತಾರೆ.
"ಮೀಟರ್ ಹಾಕಲ್ಲ ಬರೋ ಹಂಗಿದ್ರೆ ಬನ್ನಿ" ಅಂತ ಕಡ್ಡಿ ತುಂಡು ಮಾಡೋ ಹಾಗೆ ಮಾತಾಡೋರು; ಕೆಲವೊಮ್ಮೆ "ಅಣ್ಣ ಮೀಟರ್ ಮೇಲೆ ಎಷ್ಟ್ ಕೊಡ್ಬೇಕು ಹೇಳಿ" ಅಂದ್ರು, ಎಷ್ಟೇ ಕೇಳಿದ್ರು "ಆಗಲ್ಲ ಹೋಗಮ್ಮ" ಅನ್ನೋರು; ಇಯರ್ ಫೋನ್ ಹಾಕ್ಕೊಂಡು ಮಾತಾಡ್ತಾ, ಸಿಗ್ನಲ್ ಕೆಂಪು ಲೈಟ್ ತೋರ್ಸ್ತಾ ಇದ್ರೂ ಜೋರಾಗಿ ಹಾರ್ನ್ ಮಾಡೋರು; ತಾವು ತಪ್ಪಾಗಿ ಗಾಡಿ ಓಡಿಸಿದ್ರು, ಪಕ್ಕದಲ್ಲಿದ್ದವನಿಗೋ, ಎದುರುಗಡೆಯ ಗಾಡಿಯವನಿಗೋ ಜೋರಾಗಿ ಬೈಯುತ್ತಾ ಹೋಗುವವರು...ಅಬ್ಬಬ್ಬಾ !
ಒಬ್ಬರೇ ಇಬ್ಬರೇ.. ಅಂದಹಾಗೆ ಇವರ್ಯಾರೂ ಬೇಕೆಂದು ಕೂಗುವವರೋ, ಗಲಾಟೆ ಮಾಡುವವರೋ ಅಲ್ಲ. ಎಲ್ಲರ ರೀತಿಯಲ್ಲೇ ಇವರದೂ ಕೆಲಸ. ಅವರ ದಿನಚರಿ, ದುಡಿಮೆ ಕೆಲವೊಮ್ಮೆ ಹಾಗೆ ಮಾಡಿಸುತ್ತದೆ. ಹಾಗಿದ್ದರೂ ಸಹ ರಾತ್ರಿ ತಡವಾದಾಗ "ಅಂಕಲ್ ಇಲ್ಲೇ ಬಿಡಿ, ಸಾಕು" ಎಂದರೂ, ಸ್ವಲ್ಪ ಜವಾಬ್ದಾರಿ, ಕಾಳಜಿಯಿಂದ ಸೇಫ್ ಆಗಿ ಕರೆದುಕೊಂಡು ಹೋದವರೂ ಇದ್ದಾರೆ.
ಆದರೆ ಇವರೆಲ್ಲರ ಮಧ್ಯೆ ಕೆಲಸವನ್ನು ಬಹಳ ಪ್ರೀತಿಸುವ ಚಾಲಕರು ಸಿಗುತ್ತಾರೆ. ಎಷ್ಟೋ ಜನರ ಆಟೋ ಹಿಂದಿನ ಸಾಲುಗಳು ಯಾವ ಮಹಾ ಕವಿಯ ರಚನೆಯೋ ಎನಿಸುವಂತಿರುತ್ತದೆ.
ಇಂದಿಗೂ ನಾನು ಒಬ್ಬ ಆಟೋ ಡ್ರೈವರ್ ಅನ್ನು ಬಹಳ ನೆನಪಿಸಿಕೊಳ್ಳುತ್ತೇನೆ. ಒಮ್ಮೆ ನಾನು ನನ್ನಪ್ಪನ ಜೊತೆ ಆತನ ಆಟೋದಲ್ಲಿ ಹೋಗಿದ್ದೆ. ಅಪ್ಪ ಹೀಗೆಯೇ ಹಾಡನ್ನು ಗುನುಗುತ್ತಿದ್ದರು. ಆತ ಒಮ್ಮೆ ತಿರುಗಿ ನೋಡಿದ.
"ಸಾರ್, ನಾನೂ ಚೆನ್ನಾಗಿ ಹಾಡ್ತೀನಿ ಸಾರ್ " ಎಂದ.
"ಹೌದಾ! ಹಾಡಪ್ಪ ಹಾಗಾದ್ರೆ ಕೇಳೋಣ " ಅಂದ್ರು ಅಪ್ಪ.
ಅಯ್ಯೋ ಇದೆಲ್ಲ ಯಾಕೆ ಬೇಕಪ್ಪ ಅನ್ನೋ ತರ ಅಪ್ಪನ್ನ ಒಂದ್ಸಲ ನೋಡಿದೆ.
ಅವನು ಹಾಡಲು ಪ್ರಾರಂಭಿಸಿದ. ನಮಗೆ ಆಶ್ಚರ್ಯ.. ಎಂಥ ಕಂಠ..
ಅಪ್ಪ ರೆಕಾರ್ಡ್ ಮಾಡ್ಕೊಳ್ಬೇಕು ಅನ್ನೋ ಅಷ್ಟರಲ್ಲಿ ಅವನ ಹಾಡು ಮುಗಿದೇ ಹೋಯ್ತು. ನನಗೆ ಆ ಹಾಡು ನೆನಪಿಲ್ಲ, ಆದರೆ ಒಂದು ಹುಡುಗಿಯ ಬಗ್ಗೆ ಎಂದು ಗೊತ್ತಿದೆ.
"ಬಹಳ ಚನ್ನಾಗಿ ಹಾಡ್ತಿಯಪ್ಪ" ಅಂತ ಅಂದ್ರು ನನ್ನಪ್ಪ.
"ಬಿಡಿ ಸಾರ್, ಈಗ ಬೆಳ್ಗೆ ಎದ್ದಾಗಿನಿಂದ ರಾತ್ರಿ ಡ್ಯೂಟಿ ಮುಗಿಯೋವರ್ಗು ಬರೀ ಈ ಗಾಡಿಗಳದ್ದೇ ಶಬ್ದ. ಹಾಡೋದನ್ನ ಮರೆತೇಬಿಟ್ಟಿದ್ದೆ ಸಾರ್. ನೀವು ಹಾಡಿದ್ರಲ್ಲಾ ನಂಗೂ ಹಾಡಬೇಕು ಅನ್ನಿಸ್ತು "ಅಂದ.
ನಾನು ಇವರಿಬ್ಬರ ಮಾತುಕತೆ ಕೇಳ್ತಾ ರಸ್ತೆಯಲ್ಲಿ ಹೋಗೋ ಗಾಡಿಗಳನ್ನೆಲ್ಲ ನೋಡ್ತಾ ಕುಳಿತಿದ್ದೆ.
ಆಸಾಮಿ ಇನ್ನೊಂದು ಶಾಕ್ ಕೊಟ್ಬಿಡೋದ !
"ಸಾರ್, ಇದು ನಾನೇ ಬರ್ದಿದ್ದು. ಹೆಂಗಿದೆ ಸಾರ್ " ಎಂದ.
ನಾನು ಒಂದು ಸಲ ದೊಡ್ಡ ಕಣ್ಣು ಬಿಟ್ಟು ಕನ್ನಡಿಯಲ್ಲಿ ಅವನ ಮುಖ ನೋಡಿದೆ. ಬಹಳ ಚೆನ್ನಾಗಿ ಬರೆದಿದ್ದಾನೆ, ಅವನೇ ಧಾಟಿಯಲ್ಲಿ ಹಾಡ್ತಾನೆ, ನಿಜವಾಗಿಯೂ ಆಶ್ಚರ್ಯ ಆಯ್ತು.
"ಸಾರ್ ಆಗ ಎರಡು ವರ್ಷ ಕಾಲೇಜಿಗೆ ಹೋಗಿದ್ದೆ. ಅಲ್ಲಿ ಒಂದು ಹುಡುಗಿ ಭಾಳ ಇಷ್ಟ ಆಗಿದ್ಲು ಸಾರ್. ಈ ಹಾಡನ್ನ ಅವ್ಳಿಗೆ ಅಂತಾನೆ ಬರ್ದಿದ್ದೆ. ಅವ್ಳ ಮುಂದೆ ಹಡಿದಾಗ ಭಾಳ ಖುಷಿ ಪಟ್ಟಿದ್ಲು ಸಾರ್ "ಅಂದ.
ನನಗೆ ನಗು ತಡೆಯೋಕೇ ಆಗ್ತಾ ಇರಲಿಲ್ಲ. ಇಂತಾ ಹಾಡಿನ ಹಿಂದೆ ಹೀಗೂ ಕತೆ ಇದ್ಯಲ್ಲ ಅಂತ ಯೋಚನೆ ಮಾಡ್ತಿದ್ದೆ.
ಅಪ್ಪ ಮತ್ತೆ ಕೇಳಿದ್ರು "ಅವ್ಳು ಒಪ್ಕೊಂಡ್ಲಾ ಹಾಗಾದ್ರೆ? "
"ಹೂ ಸಾರ್ ಒಪ್ಪಿದ್ಲು. ಆಮೇಲೆ ನಾನು ಕಾಲೇಜ್ ಬಿಟ್ಟು ಆಟೋ ಓಡ್ಸೋಕೆ ಹಿಡಿದಮೇಲೆ ಅವಳು ಮದ್ವೆ ಆದ್ಲು, ನನ್ನನ್ನಲ್ಲ ಬೆರೆವರನ್ನ.. "
" ಹಾಗಾದ್ರೆ ನೀನು? "
"ಸಾರ್ ನಂಗೂ ಮದ್ವೆ ಆಗಿ ಮಗ ಇದಾನೆ.
ಈ ಹಾಡನ್ನ ಒಂದ್ಸಲ ಹೇಳ್ಬೇಕಾದ್ರೆ ನನ್ ಹೆಂಡ್ತಿ ಕೇಳ್ಸ್ಕೊಂಡಬುಟ್ಲು ಸಾರ್ "
ಜಗಳ ಮಾಡ್ತಾಳೆ ಅಂದ್ಕೊಂಡಿದ್ದೆ ಸಾರ್. ಇವಳು ನೋಡಿದ್ರೆ ನನ್ ಮೇಲು ಹಿಂಗೇ ಹಾಡು ಬರ್ದು ಹಾಡಿ ಅಂತ ಜೀವ ತಿನ್ನೋಕೆ ಸ್ಟಾರ್ಟ್ ಮಾಡ್ಬುಟ್ಟವಳೇ "
"ಹಂಗಾದ್ರೆ ಹೆಂಡ್ತಿ ಮೇಲೂ ಹಾಡು ಬರೆದ್ಯಾ? "
"ಅಯ್ಯೋ.. ಟ್ರೈ ಮಾಡ್ದೆ ಸಾರ್.. ಎಲ್ಲ್ ಬತ್ತೈತೆ ? ಹೆಂಗ್ ಮಾಡಿದ್ರು ಬರ್ಯಾಕ್ ಬಂದಿಲ್ಲ ಸಾರ್. ಬೈತಾಳೆ ಅವ್ಳು ಏನ್ ಮಾಡದ್ ಹೇಳಿ ಸಾರ್... "
ಅಲ್ಲಿಗೆ ನಾವು ಇಳಿಯಬೇಕಾದ ಜಾಗ ಬಂತು. ಅವನು ಹೋದ.
ನಾನು ಹೊಟ್ಟೆ ತುಂಬಾ ನಗಾಡಿದೆ, ಅದೂ ಅವನ ಕೊನೆಯ ಮಾತುಗಳಿಗೆ.
"ಎಷ್ಟು ಚಂದ ಹಾಡ್ತಾನಾಲ್ವ ಅವ್ನು" ಅಂದ್ರು ಅಪ್ಪ. "ಹೌದಪ್ಪ ಅವನ ಕಷ್ಟನೂ ಕಾಮಿಡಿ ಮಾಡಿ ಹೇಳಿದ್ನಲ್ಲಾ, ನನಗೆ ಆಶ್ಚರ್ಯ ಆಯ್ತು. ಎಷ್ಟು ಚೆನ್ನಾಗಿ ಕತೆ ಹೇಳ್ತಾನಲ್ಲ...." ಅಂತ ನಾನೂ ಹೇಳಿದೆ.
ಅವನು ಹೇಗಿದ್ದಾನೆ ಎಂದು ನನಗೆ ನೆನಪಿಲ್ಲ. ಈ ಘಟನೆ ನಡೆದು ಎರಡು ವರ್ಷಗಳೇ ಆದವು. ಆದರೂ, ಇವತ್ತಿಗೂ ಅವನ ಮೇಲೆ ಗೌರವವಿದೆ.
ಇಂತಹ ಎಷ್ಟೋ ಪ್ರತಿಭಾನ್ವಿತ ಆಟೋ ಚಾಲಕರು ಕುಟುಂಬಕ್ಕಾಗಿ ಕನಸುಗಳನ್ನು ಬದಿಗೊತ್ತಿ, ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾರಲ್ಲ, ಅವರಿಗೆಲ್ಲ ಒಂದು ಸಲಾಂ...
No comments:
Post a Comment